ಜನರ ಜೀವನ ವಿಧಾನ ಮತ್ತು ಜೀವನ ದೃಷ್ಟಿಗೆ ಅನುಗುಣವಾಗಿ ಶತಮಾನ ಗಳಿಂದ ಬೆಳೆದು ಬಂದ ಅನೇಕ ಕಲಾರೂಪಗಳು ಕೇರಳದಲ್ಲಿವೆ. ನೃತ್ಯ, ಸಂಗೀತ, ನಾಟಕ ಮೊದಲಾದ ಕಲಾರೂಪಗಳು ಒಂದೆಡೆಯಾದರೆ ಇವೆಲ್ಲವುಗಳೂ ಮೇಳೈಸಿದ ಕಥಕಳಿ ಕೇರಳದ ಪ್ರಾತಿನಿಧಿಕ ಕಲೆಯೆನಿಸಿದೆ. ಕೂತ್ತ್, ಕೂಡಿಯಾಟಂ, ತುಳ್ಳಲ್, ತೆಯ್ಯಂ, ಕೃಷ್ಣನಾಟಂ, ರಾಮನಾಟಂ, ಅರ್ಜುನ ನೃತ್ತಂ ಮೊದಲಾದ ಅನೇಕ ಪ್ರಾದೇಶಿಕ ವಿಶಿಷ್ಟ ಕಲೆಗಳು ಕೇರಳ ದಲ್ಲಿವೆ. ಇವುಗಳಲ್ಲಿ ಕೆಲವನ್ನು ಮುಂದೆ ವಿವರವಾಗಿ ಪರಿಶೀಲಿಸಬಹುದು.

ಕೇರಳದ ನೃತ್ಯ ಕಲೆಗಳ ಆರಂಭದ ಸ್ಥಿತಿಯನ್ನು ಸೂಚಿಸುವ ಅನೇಕ ಕಲಾ ರೂಪಗಳು ಕೇರಳದಲ್ಲಿವೆ. ಇಂತಹ ಕಲೆಗಳಲ್ಲಿ ಆದಿಮ ಜನಸಂಸ್ಕೃತಿಯ ಸಂವೇದನೆಗಳನ್ನು ಕಾಣ ಬಹುದು. ಬುಡಕಟ್ಟು ಜನರ ಪ್ರಾಚೀನ ಹಾಡುಗಳಲ್ಲಿ, ನೃತ್ಯಗಳಲ್ಲಿ ಪ್ರಕೃತಿ ದೇವತೆಗಳನ್ನು ಕೀರ್ತಿಸಲಾಗಿದೆ. ಈ ಹಾಡುಗಳು ನೃತ್ಯಗಳು ವಾದ್ಯ ಪರಿಕರಗಳ ವಾದನದ ಜೊತೆಗೆ ಪ್ರಕಟಗೊಳ್ಳುತ್ತಿವೆ. ಪ್ರಾಚೀನ ಜಾನಪದ ನೃತ್ಯಗಳಲ್ಲಿ ಕೃಷಿಗೆ ಸಂಬಂಧಿಸಿದ ಅನೇಕ ಆಚಾರ ವಿಚಾರಗಳು ಪ್ರತಿಫಲಿಸುತ್ತಿವೆ. ರಾಮ, ಕೃಷ್ಣ ಮೊದಲಾದ ದೇವರುಗಳ ಕತೆಗಳೂ ಜಾನಪದ ನೃತ್ಯಗಳಿಗೆ ವಸ್ತುಗಳಾದವು.

ಯುದ್ಧಗಳು, ಸಂಘರ್ಷಗಳು ನಡೆಯುತ್ತಿದ್ದ ಕಾಲಘಟ್ಟದಲ್ಲಿ ಶಾಸ್ತ್ರೀಯವಾಗಿ ಯುದ್ಧ ಕಲೆಗಳನ್ನು ಹೇಳಿಕೊಡುವ ಗರಡಿಗಳು ಚಾಲ್ತಿಯಲ್ಲಿದ್ದವು. ಸಂಘಕ್ಕಳಿ ಮೊದಲಾದವು ಈ ಮೂಲದಿಂದ ಹುಟ್ಟಿಕೊಂಡವುಗಳು. ಗದ್ಯ ಹಾಗೂ ಪದ್ಯಾತ್ಮಕವಾದ ಹಾಡುಗಳನ್ನು ಸೇರಿಸಿ ಗಂಭೀರವೂ ಹಾಸ್ಯಮಯವೂ ಆದ ಅಂಶಗಳನ್ನು ನೃತ್ಯ ಕಲೆಗಳ ಮೂಲಕ ಪ್ರಯೋಗಿ ಸುತ್ತಿದ್ದುದೊಂದು ವಿಶೇಷ. ಯುದ್ದ ಕಲೆಗಳ ಗಾಂಭೀರ್ಯವೂ ಜಾನಪದ ಕಲೆಗಳ ಹಾಸ್ಯಾಭಿವ್ಯಕ್ತಿಯೂ ಜನರನ್ನು ರಂಜಿಸಲು ಕಲಾರೂಪಗಳಲ್ಲಿ ಒಂದುಗೂಡಿದ್ದವು.

ಹನ್ನೊಂದನೆಯ ಶತಮಾನದಲ್ಲಿ ಕುಡೈಕೂತ್ತು, ಕುಡಕೂತ್ತು ಕೆರಳದಲ್ಲಿ ಇತ್ತೆಂಬುದಕ್ಕೆ ದೇವಾಲಯದ ಕೆಲವು ಶಿಲ್ಪಗಳಲ್ಲಿ ದೃಷ್ಟಾಂತಗಳು ದೊರೆಯುತ್ತವೆ. ಇವು ಉನ್ನತ ದರ್ಜೆಯ ನೃತ್ಯಗಳಿಗೆ ನಿದರ್ಶನಗಳಾಗಿವೆ. ಹನ್ನೊಂದನೆಯ ಶತಮಾನದಲ್ಲಿ ನಿರ್ಮಿಸಿದ್ದರೆಂದು ಭಾವಿಸ ಲಾದ ತೃಕ್ಕೊಡಿತ್ತಾನಂ ದೇವಸ್ಥಾನದಲ್ಲಿ ಈ ನೃತ್ಯ ಮಾದರಿಗಳಿವೆ. ಹಾಗೆಯೇ ತಿರುವನಂತ ಪುರಂನ ತ್ರಿವಿಕ್ರಮ ಮಂಗಳ ದೇವಾಲಯದಲ್ಲಿ ಎರಡು ನೃತ್ಯ ಭಂಗಿಗಳ ಮಾದರಿಗಳನ್ನು ಪ್ರದರ್ಶಿಸುವ ನರ್ತಕಿಯೊಬ್ಬಳ ವಿಗ್ರಹವನ್ನು ಗಾಯಕರೊಡನೆ ಶಿಲ್ಪದಲ್ಲಿ ಕೆತ್ತಲಾಗಿದೆ. ಇದನ್ನು ಹನ್ನೆರಡನೆಯ ಶತಮಾನದ್ದೆಂದು ಹೇಳಲಾಗಿದೆ. ಆ ಕಾಲದಲ್ಲಿ ಕೇರಳದ ದೇವಾಲಯ ಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಭರತನಾಟ್ಯದ ಸುಂದರ ಭಂಗಿಯನ್ನು ಶಿಲೆಯಲ್ಲಿ ಮೂಡಿಸಲಾಗಿದೆ. (ನೃತ್ತ ಹಾಗೂ ನೃತ್ಯವೇ ಭರತನಾಟ್ಯದ ಮುಖ್ಯ ರೂಪ ಭೇದಗಳು. ತಾಳಲಯಾತ್ಮಕವಾದ ಚಲನೆಯೇ ನೃತ್ತ. ಅದಕ್ಕನುಗುಣವಾದ ಭಾವಾವಿಷ್ಕಾರವೇ ನೃತ್ಯ.) ಇದರಲ್ಲಿ ನಾಟ್ಯಕಲೆ ಅಂದರೆ ಅಭಿನಯವೂ ಅಂತರ್ಗತವಾಗಿದೆ. ಇದರ ಜೊತೆಗೆ ಶಾಸ್ತ್ರೀಯವಾದ ಅಭಿನಯವು ಕಲೆಯಲ್ಲಿ ವಿಕಾಸ ಪಡೆಯಿತು. ಇವುಗಳಲ್ಲೆಲ್ಲ ಕಂಠ ಸಂಗೀತವೂ ವಾದ್ಯ ಸಂಗೀತವೂ ಇದೆ. ಕುಡೈಕೂತ್ತು ಮತ್ತು ಕುಡಕೂತ್ತುಗಳು ಭರತನಾಟ್ಯದ ನೃತ್ತಾಂಶಗಳಲ್ಲಿವೆ. ಅದಕ್ಕೆ ಅನುಗುಣವಾದ ಒಂದು ಕತೆಯೋ ಸಂಗೀತವೋ ಇರುತ್ತಿರಲಿಲ್ಲ. ಸಂಸ್ಕೃತ ಸಂಸ್ಕೃತಿಯ ಜೊತೆಗೆ ಭರತನಾಟ್ಯದ ನೃತ್ಯವೂ ನಾಟ್ಯಕಲೆಯೂ ಬೆಳೆದು ಬಂತು. ಇಲ್ಲಿಗೆ ವಲಸೆ ಬಂದ ಆರ್ಯರ ಪ್ರಭಾವದಿಂದ ನಾಟಕಾಭಿನಯವನ್ನು ಮಾಡುವ ಒಂದು ಜನವರ್ಗ – ಚಾಕ್ಯಾರರು – ಸಿದ್ಧಗೊಂಡಿತು. ಅವರು ಸಂಸ್ಕೃತ ಕತೆಗಳು ಹಾಗೂ ನಾಟ್ಯ ಶಾಸ್ತ್ರ ಪ್ರಣೀತವಾದ ಅಭಿನಯ ವಿಧಾನವನ್ನು ಕರಗತ ಮಾಡಿಕೊಂಡರು. ಇವರ ಕಲಾ ಪ್ರದರ್ಶನಗಳು ದೇವಾಲಯದ ಆವರಣದಲ್ಲಿ ಮಾತ್ರವೇ ಸೀಮಿತವಾಗುಳಿದಿತ್ತು. ಇವರು ಕಲಾ ಪ್ರದರ್ಶನಗಳಲ್ಲಿ ಪುರಾಣದ ಕತೆಗಳನ್ನು ಮಾತ್ರವೇ ಆಯ್ದುಕೊಂಡರು. ಇವರ ಕಲಾ ಪ್ರದರ್ಶನಕ್ಕೆ ನಂಬ್ಯಾರರ ವಾದ್ಯ ಪರಿಕರಗಳ ನೆರವಾದವು. ಚಾಕ್ಯಾರರ ಮಹಿಳೆಯರೂ ತಾಳ, ವಾದ್ಯ ಬಾಜಿಸಲು ಸಹಕರಿಸಿದರು. ಈ ತೆರನ ಕಲಾ ಪ್ರದರ್ಶನಗಳೇ ಕೂತ್ತು, ಕೂಡಿಯಾಟಂಗಳಾಗಿ ಹೆಸರು ಪಡೆದವು. ಇವು ಕಾಲ ಕ್ರಮೇಣ ಪರಿಷ್ಕೃತಗೊಂಡು ಕಥಕಳಿ ಎಂಬ ಕಲಾರೂಪವಾಯಿತು. ಈ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ಕಲಾ ರೂಪಗಳನ್ನು ಮುಂದೆ ಗಮನಿಸಬಹುದು.

ಕೂತ್ತ್

ಪುರಾಣದ ಕಥೆಗಳನ್ನು ಕಥಾಪಾತ್ರಗಳನ್ನು ಆಂಗಿಕಾದಿ ಅಭಿನಯಗಳ ಮೂಲಕ ಪ್ರದರ್ಶಿಸುವ ಏಕವ್ಯಕ್ತಿ ಕಲೆಯೇ ಚಾಕ್ಯಾರ್ ಕೂತ್ತ್. ಕಲಾ ಪ್ರದರ್ಶನದ ಆರಂಭದಿಂದ ಅಂತ್ಯದವರೆಗೆ ಹಾಸ್ಯರಸವೇ ಪ್ರಮುಖವಾಗಿರುತ್ತದೆ. ಪುರಾಣದ ಕತೆಗಳೊಂದಿಗೆ ಸಮಕಾಲೀನ ವಾದ ನೀತಿ ಪ್ರಚೋದಕವಾದ ಅನೇಕ ಸಂಗತಿಗಳನ್ನು ಕಲಾ ಪ್ರದರ್ಶನದ ಸಂದರ್ಭದಲ್ಲಿ ಅಳವಡಿಸಿಕೊಳ್ಳುವುದಿದೆ. ಕೂತ್ತ್ ಪ್ರದರ್ಶಿಸುತ್ತಿರುವ ವೇಳೆ ಪ್ರೇಕ್ಷಕರ್ಯಾರೂ ವೇದಿಕೆಗೆ ಹೋಗುವಂತಿಲ್ಲ. ಪ್ರೇಕ್ಷಕರ ನಡುವೆ ಕುಳಿತ ಗಣ್ಯ ವ್ಯಕ್ತಿಯೂ ಚಾಕ್ಯಾರರ ವ್ಯಂಗ್ಯಕ್ಕೆ ಗುರಿಯಾಗಬಹುದು. ಯಾರಾದರೂ ಅದನ್ನು ವಿರೋಧಿಸಿದರೆ  ಚಾಕ್ಯಾರನು ಕೂತ್ತ್ ಕೊನೆಗೊಳಿಸಿಬಿಡುವನು. ಕೂತ್ತಿನಲ್ಲಿ ಅನೇಕ ಪ್ರಭೇದಗಳಿವೆ. ಪ್ರಬಂಧ ಕೂತ್ತ್, ಪರಕ್ಕುಂ ಕೂತ್ತ್ ಮೊದಲಾದವುಗಳು.

ಕೂಡಿಯಾಟಂ

ಕೇರಳದ ಪರಂಪರಾಗತ ಕಲಾರೂಪವೇ ಕೂಡಿಯಾಟಂ. ಕ್ರಿ.ಶ. ೧೪ ನೇ ಶತಮಾನದ  ‘ಉಣ್ಣಿನೀಲಿ ಸಂದೇಶಂ’ ಕೃತಿಯಲ್ಲಿ ತಳಿ ಎಂಬ ಊರಿನ ದೇವಸ್ಥಾನದಲ್ಲಿ ಏರ್ಪಟ್ಟ ಕೂಡಿಯಾಟದ ಬಗೆಗಿನ ವಿವರಗಳಿವೆ. ಒಬ್ಬರಿಗಿಂತ ಹೆಚ್ಚು ಕಲಾವಿದರು ರಂಗದಲ್ಲಿ ಪ್ರತ್ಯಕ್ಷವಾಗಿ ಪ್ರದರ್ಶಿಸುವ ಕಲೆಯೇ ಕೂಡಿಯಾಟಂ. ಚಾಕ್ಯಾರರು ಪುರುಷ ವೇಷವನ್ನು ನಙ್ಯಿರರು ಸ್ತ್ರೀ ವೇಷವನ್ನು ತೊಡುತ್ತಾರೆ. ಶ್ಲೋಕಂ ಹೇಳುವುದು, ತಾಳ ಬಾರಿಸುವುದು ಇತ್ಯಾದಿಗಳು ನಂಬ್ಯಾರನ ಕೆಲಸ. ಮಿೞಾವ್ ಬಾರಿಸುವುದು ನಂಬ್ಯಾರ್. ಸಂದರ್ಭನುಸಾರ ನಡುವೆ ಕೊಂಬು ಮೊದಲಾದ ವಾದ್ಯಗಳನ್ನು ಕೂಡಿಯಾಟಂನಲ್ಲಿ ಬಳಸಲಾಗುತ್ತದೆ.

ದೀಪ ಮತ್ತು ತೆರೆ ಕೂಡಿಯಾಟಂನ ರಂಗಸಜ್ಜಿಕೆಯ ಭಾಗಗಳಾಗಿವೆ. ವಿದೂಷಕ ಮೊದಲಾದ ಪಾತ್ರಗಳು ರಂಗದಲ್ಲಿ ಬರುವುದಕ್ಕೆ ಕತೆಗಳಲ್ಲಿ ಅವಕಾಶವಿದೆ. ವಿದೂಷಕನು ಮಲಯಾಳಂ ಭಾಷಾ ಶ್ಲೋಕಗಳನ್ನು ಹೇಳಿ ವ್ಯಾಖ್ಯಾನ ಮಾಡುವನು. ಇತರ ಪಾತ್ರಗಳೆಲ್ಲ ಸಂಸ್ಕೃತ ಶ್ಲೋಕಗಳನ್ನು ಹೇಳಿ ಅದಕ್ಕೆ ವಾಚಿಕಾದಿಗಳ ಮೂಲಕ ಅಭಿನಯ ನಿರ್ವಹಿಸುವರು. ಕುಲಶೇಖರ ವರ್ಮನ ಸುಭದ್ರಾಧನಂಜಯ ಮೊದಲಾದ ನಾಟಕಗಳು ಶಕ್ತಿಭದ್ರನ ಆಶ್ಚರ್ಯ ಚೂಡಾಮಣಿ ಮೊದಲಾದವುಗಳಲ್ಲಿ ಯಾವುದಾದರೂ ಒಂದು  ಅಂಕವನ್ನು ಪ್ರದರ್ಶನಕ್ಕೆ ಆಯ್ದುಕೊಳ್ಳುತ್ತಿದ್ದರು. ತೋಲನ್ ಎಂಬುವನು ರಚಿಸಿದನೆಂದು ಹೇಳಲಾದ ‘ಆಟ’ ಪ್ರಕಾರ ಮತ್ತು ‘ಕ್ರಮದೀಪಿಕೆ’ಯನ್ನು ಹಲವು ನಾಟಕಗಳಲ್ಲಿಯೂ ಅನುಸರಿಸಲಾಗುತ್ತದೆ. ಅಭಿನಯಕ್ಕೆ ಸಂಬಂಧಿಸಿದ ವಿಚಾರಗಳೆಲ್ಲ ಈ ಕೃತಿಗಳಲ್ಲಿ ಇವೆ. ಮೂಕಾಭಿನಯಗಳ ಮೂಲಕ ರಸಭಾವಾದಿಗಳನ್ನು ಹಾಗೂ ಹಸ್ತ ಮುದ್ರೆಗಳ ಮೂಲಕ ಆಶಯ ಸಂವಹನಗಳನ್ನು ನಿರ್ವಹಿಸಲಾಗುತ್ತದೆ. ಅಂಗ ಚಲನೆಗಳಿಗೆ ಸಂಬಂಧಿಸಿದ ಅನೇಕ ನಿರ್ದೇಶನಗಳನ್ನು ಈ ಕೃತಿಯಲ್ಲಿ ಕೊಡಲಾಗಿದೆ.

ಕೂಡಿಯಾಟಂ ಹೆಚ್ಚು ಪರಿಪೂರ್ಣವಾದ ನಾಟಕ ರೂಪ. ಪ್ರಬಂಧ ಕೂತ್ತಿನಲ್ಲಿ ಹೆಚ್ಚು ವಿವರಣಾತ್ಮಕವಾದ ಕಥಾಖ್ಯಾನಗಳಿರುತ್ತವೆ. ಸುಭದ್ರಧನಂಜಯದ ಚೇಟಿ ಪ್ರವೇಶ ರಂಗವು ಇದಕ್ಕೆ ಉತ್ತಮ ಉದಾಹರಣೆ. ಚಾಕ್ಯಾರರು ಭಾಗವಹಿಸುವ ಕೂಡಿಯಾಟಂನಲ್ಲಿ ಆಂಗಿಕ, ವಾಚಿಕ, ಸಾತ್ವಿಕಾದಿ ಅಭಿನಯಗಳಿಗೆ ಸಮಾನ ಪ್ರಾಮುಖ್ಯತೆಯಿದೆ. ಒಂದು ನಾಟಕವನ್ನು ಸಂಪೂರ್ಣವಾಗಿ ಕೂಡಿಯಾಟಂನಲ್ಲಿ ಪ್ರಯೋಗಿಸಬೇಕಾದರೆ ಅನೇಕ ರಾತ್ರಿಗಳು ಬೇಕಾ ಗುತ್ತವೆ. ಕೇರಳದ ಪ್ರಾಚೀನ ದೇವಾಲಯಗಳಲ್ಲಿ ಕಲಾ ಪ್ರದರ್ಶನಕ್ಕೆಂದೇ ಕೂತ್ತಂಬಲಗಳನ್ನು ನಿರ್ಮಿಸುತ್ತಿದ್ದರು.

ದೇವಾಲಯಗಳ ಆವರಣದಲ್ಲಿ ನಿರ್ಮಿಸಿರುವ ಈ ಕೂತ್ತಂಬಲಗಳಲ್ಲಿ ಕೂತ್ತ್, ಕೂಡಿಯಾಟಂಗಳ ಪ್ರದರ್ಶನ ನಡೆಯುತ್ತಿತ್ತು. ಮಧ್ಯಕಾಲೀನ ಬಹುತೇಕ ಎಲ್ಲಾ ದೇವಾಲಯ ಗಳಲ್ಲಿಯೂ ಕೂತ್ತಂಬಲಗಳಿವೆ. ಕೇರಳದ ಕೆಲವು ದೇವಾಲಯಗಳಲ್ಲಿ ಈಗಲೂ ವಾರ್ಷಿಕ ಉತ್ಸವ, ಜಾತ್ರೆ, ಮೊದಲಾದ ಸಂದರ್ಭಗಳಲ್ಲಿ ಸಂಪ್ರದಾಯವೆಂಬಂತೆ ಕೂತ್ತ್, ಕೂಡಿಯಾಟಂಗಳ ಪ್ರದರ್ಶನ ನಡೆಯುವುದಿದೆ. ನಿಗದಿತವಾದ ದಿವಸಗಳಲ್ಲಿ ಕೂತ್ತ್ ಪ್ರದರ್ಶಿಸಿಯೇ ಜಾತ್ರೆಯನ್ನು ಆಚರಿಸಬೇಕು ಎಂಬ ವ್ಯವಸ್ಥೆಯಲ್ಲಿ ಕಿಡಙೂರಿನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಈಗಲೂ ಯಾವುದೇ ಬದಲಾವಣೆ ಆಗಿಲ್ಲ. ವೆಣ್ಣಿಮಲ ದೇವಾಲಯದಲ್ಲಿ ಅರುವತ್ತೊಂದು ದಿವಸಗಳ ಕೂತ್ತ್ ಈಗಲೂ ನಡೆಸುವುದಿದೆ. ಕಣ್ಣೂರು ಜಿಲ್ಲೆಯ ಮಾಡಾಯಿಕಾವ್ ದೇವಾಲಯದಲ್ಲಿ ವರ್ಷದಲ್ಲಿ ಮೂವತ್ತು ದಿವಸ ಕೂತ್ತ್ ಏರ್ಪಡಿಸಲಾಗುತ್ತದೆ.

ಕೂತ್ತ್ ಮತ್ತು ಕೂಡಿಯಾಟಂ ಚಾಕ್ಯಾರ್ ಎಂಬ ಜನ ಸಮುದಾಯದವರ ಕಲೆಗಳು. ಈ ಕಲೆಗಳನ್ನು ಪ್ರದರ್ಶಿಸಿ ಕೀರ್ತಿ ಪಡೆದ ಚಾಕ್ಯಾರರು ಅನೇಕರಿದ್ದಾರೆ. ಪೊದಿಯಿಲ್, ಕೊಯ್ಪ, ಮಾಣಿ, ಅಮ್ಮನ್ನೂರು, ಕುಟ್ಟಂಚೇರಿ ಮೊದಲಾದವು ಪ್ರಮುಖವಾದ ಚಾಕ್ಯಾರರ ಮನೆಗಳು. ಇವುಗಳಿಗೆ ಅನೇಕ ಉಪಶಾಖೆಗಳು ಹುಟ್ಟಿಕೊಂಡಿವೆ. ಈ ಎಲ್ಲಾ ಮನೆಗಳವರು ಇಂತಿಂಥ ಕಥಾ ವಸ್ತುಗಳನ್ನು ಮಾತ್ರ ಪ್ರದರ್ಶಿಸಬೇಕು ಎಂಬ ಒಂದು ಅಲಿಖಿತ ಒಪ್ಪಂದವೂ ಇದೆ.

ಕೂತ್ತು ಮತ್ತು ಕೂಡಿಯಾಟಂಗಳಲ್ಲಿ ಪ್ರೇಕ್ಷಕ ವರ್ಗದವರಲ್ಲಿದ್ದವನನ್ನಾಗಲಿ, ಇತರೆ ಯಾರನ್ನೇ ಆದರೂ ನಿರ್ಭಯವಾಗಿ ಟೀಕಿಸುವ ಸ್ವಾತಂತ್ರ್ಯ ಚಾಕ್ಯಾರರಿಗಿದೆ. ಆ ತೆರನ ಟೀಕೆಗಳನ್ನು ವೈಯುಕ್ತಿಯವಾಗಿಯೋ, ಸಾಮೂಹಿಕವಾಗಿಯೋ ಗಣಿಸಲೂ ಅವಕಾಶವಿದೆ. ಕೂಡಿಯಾಟಂನ ವೇಷಗಳಿಗೆ ಕೆಲವು ನಿಬಂಧನೆಗಳೂ ಇವೆ. ಆಂಗಿಕ, ವಾಚಿಕ, ಆಹಾರ್ಯ, ಸಾತ್ವಿಕ ಮೊದಲಾದ ನಾಲ್ಕು ತೆರನ ಅಭಿನಯಗಳನ್ನು ಒಳಗೊಂಡ ಕೂಡಿಯಾಟಂ ಮತ್ತು ಕೂತ್ತು ಪರಸ್ಪರ ಸಾದೃಶ್ಯವುಳ್ಳವುಗಳೇ. ಕೂಡಿಯಾಟಂನ ವೇಷಗಳು ಕಥಕಳಿಯ ಪ್ರಾಗ್ ರೂಪಗಳಂತೆ ಭಾಸವಾಗುತ್ತವೆ. ತೃಶ್ಶೂರ್, ಇರಿಂಜಾಲಕ್ಕುಡ, ಪೆರುಮನಂ ವೊದಲಾದೆಡೆ ಗಳಲ್ಲಿನ ದೇವಾಲಯಗಳಲ್ಲಿ ಕೂತ್ತು ಮತ್ತು ಕೂಡಿಯಾಟಂಗಳು ಅನೇಕ ದಿವಸಗಳ ಕಾಲ ಈಗಲೂ ನಡೆಯುತ್ತಿವೆ. ಕಥಕಳಿಗಿಂತಲೂ ಸುದೀರ್ಘವಾದ ಪರಂಪರೆಯುಳ್ಳ ಕೂಡಿಯಾಟಂಗೆ ಕಥಕಳಿಯಂತೆ ಸಮಕಾಲೀನ ದಿನಗಳಲ್ಲಿ ಪ್ರಚಾರ ಪಡೆಯಲು ಸಾಧ್ಯ ವಾಗಿಲ್ಲ. ದೇವಾಲಯಗಳು, ಕಲಾಮಂಡಲ ಮೊದಲಾದೆಡೆಗಳಲ್ಲಿ ಕೂಡಿಯಾಟಂಗೆ ಪ್ರಾಶಸ್ತ್ಯ ನೀಡಲಾಗಿದೆ. ಇತರ ಸಾಂಸ್ಕತಿಕ ಸಂಘ ಸಂಸ್ಥೆಗಳು, ವ್ಯಕ್ತಿಗಳು ಕೂಡಿಯಾಟವನ್ನು ಪರಿಷ್ಕರಿಸಿ ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ನಙ್ಯಿರ್‌ಕೂತ್ತ್

ನಂಬ್ಯಾರ್ ಸಮುದಾಯದ ಸ್ತ್ರೀಯರು (ನಙ್ಯಿರರು) ನಡೆಸಿಕೊಡುವ ಕಲೆಯಾದ್ದರಿಂದ ಇದಕ್ಕೆ ನಙ್ಯಿರ್‌ಕೂತ್ತ್ ಎಂಬ ಹೆಸರು ಬಂದಿದೆ. ಕೂಡಿಯಾಟಂಗಳಲ್ಲಿ ಸ್ತ್ರೀ ವೇಷಗಳನ್ನು ಧರಿಸುವ ಹಾಗೂ ಹಿನ್ನೆಲೆ ಸಂಗೀತವನ್ನು ನೀಡುವುದು ನಙ್ಯಿರ್ ಸ್ತ್ರೀಯರ ಕೆಲಸ. ಅವರೇ ಪ್ರತ್ಯೇಕವಾಗಿ ನಡೆಸಿಕೊಡುವ ಕಲಾರೂಪವೇ ನಙ್ಯಿರ್‌ಕೂತ್ತ್. ಪ್ರಾಚೀನ ಕಾಲದಿಂದಲೇ ಹಾಡು, ಕುಣಿತಗಳು ಕೇರಳದ ದೇವಾಲಯಗಳಲ್ಲಿ ನಡೆಯುತ್ತಿದ್ದುವು. ಇವುಗಳ ಅವಶಿಷ್ಟ್ಯಗಳಲ್ಲಿ ನಙ್ಯ್ಯಿರ್‌ಕೂತ್ತ್ ಕೂಡಾ ಒಂದು. ದೇವಾಲಯಗಳಲ್ಲಿ ಮಾತ್ರ ನಡೆಯುವ ನೃತ್ಯ ಆರಾಧನ ಕಲೆಯಿದು. ನಙ್ಯಿರ್‌ಕೂತ್ತಿನಲ್ಲಿ ಶ್ರೀಕೃಷ್ಣ ಚರಿತೆಗೆ ಸಂಬಂಧಿಸಿದ ಕತೆಯಿರುತ್ತದೆ. ‘ಸುಭದ್ರಾಧನಂಜಯಂ’ ನಾಟಕ (ಕುಲಶೇಖರ ಪೆರುಮಾಳ್)ದ ಎರಡನೆಯ ಅಂಕದ ನಾಯಕಿಯಾದ ಸುಭದ್ರೆಯ ಸೇವಕಿಯ ವೇಷಧರಿಸಿ (ಚೇಟಿ) ನಙ್ಯಿರ್‌ಕೂತ್ತಿನಲ್ಲಿ ಪಾತ್ರ ನಿರ್ವಹಿಸಲಾಗುತ್ತದೆ. ಹನ್ನೆರಡು ದಿವಸಗಳ ಕಾಲ ಈ ಕಥಾ ಭಾಗವನ್ನು ಅಭಿನಯಿಸ ಲಾಗುತ್ತದೆ. ದೇವಾಲಯಗಳ ‘ಕೂತ್ತಂಬಲ’ಗಳಲ್ಲಿ ಇದನ್ನು ಪ್ರದರ್ಶಿಸಲಾಗುತ್ತದೆ. ಇರಿಂಜಾಲಕುಡದ ಕೂಡಲ್‌ಮಾಣಿಕ್ಯ ದೇವಾಲಯ, ತೃಶ್ಯೂರಿನ ವಡಕ್ಕುನ್ನಾಥನ್ ದೇವಾಲಯ ಮೊದಲಾದಡೆಗಳಲ್ಲಿ ಒಂದು ಆರಾಧನ ಕಲೆಯಾಗಿಯೇ ನಙ್ಯಿಕೂತ್ತ್ ಏರ್ಪಡುತ್ತದೆ.

ಕಥಕಳಿ

ಕೇರಳದ ನೃತ್ಯ ಕಲೆಗಳಲ್ಲಿ ಅತ್ಯಂತ ಪ್ರಮುಖವಾದುದು ಕಥಕಳಿ. ಇದರ ಉಗಮಕ್ಕೆ ಚಾಕ್ಯಾರರ ಕಲಾ ರೂಪಗಳೇ ಮೂಲ ಕಾರಣ. ಕಥಕಳಿಯ ಇಂದಿನ ಸ್ವರೂಪವನ್ನು ಪಡೆಯುವಲ್ಲಿ ಇನ್ನಿತರ ಅನೇಕ ಕಾರಣಗಳೂ ಇವೆ. ೧೨ನೆಯ ಶತಮಾನದ ಜಯದೇವನ ಗೀತಗೋವಿಂದದ ರಂಗ ಪ್ರಯೋಗವೇ ಕಥಕಳಿಯ ಹುಟ್ಟಿಗೆ ಕಾರಣವೆಂದು ಹೇಳುವವರೂ ಇದ್ದಾರೆ. ‘ಮಂಜುತರ ಕುಂಜತಲಾ ಕೇಳೀಸದನೇ……’ ಎಂದು ಆರಂಭವಾಗುವ ಗೀತಗೋವಿಂದದ ಶ್ಲೋಕವನ್ನು ಕಥಕಳಿಯ ಆರಂಭದಲ್ಲಿ ಹಾಡುವುದು ಈ ವಾದಕ್ಕೆ ಪುಷ್ಠಿ ನೀಡುವ ಅಂಶಗಳಲ್ಲೊಂದು.

ಚಾಕ್ಯಾರರ ಕಲೆಗಳು ಹೆಚ್ಚು ಸಂಕೀರ್ಣವಾಗಿದ್ದು ಅವು ಜನಸಾಮಾನ್ಯರಿಗೆ ಅರ್ಥವಾಗು ತ್ತಿರಲಿಲ್ಲ. ಇದನ್ನು ಗಮನಿಸಿದ ಕೋಳಿಕೋಡಿನ ಮಾನವೇದ ರಾಜನು (೧೬೫೫-೫೮) ಕೃಷ್ಣನಾಟಂ ಎಂಬ ನೃತ್ಯ ನಾಟಕಕ್ಕೆ ರೂಪುಕೊಟ್ಟನು. ಆತ ಗೀತಗೋವಿಂದ ಕಾವ್ಯವನ್ನು ಆಧಾರವಾಗಿರಿಸಿ ಕೃಷ್ಣಕತೆಯನ್ನು ಎಂಟು ವಿಭಾಗಗಳಲ್ಲಿ ಹೇಳುವ ‘ಕೃಷ್ಣಗೀತೆ’ ಎಂಬ ಸಂಸ್ಕೃತ ಕಾವ್ಯವನ್ನು ರಚಿಸಿದ. ಇದುವೇ ಕೃಷ್ಣನಾಟದಲ್ಲಿ ಬಳಸುವ ಪ್ರಸಂಗ ಕೃತಿ. ಈ ನೃತ್ಯ ನಾಟಕವು ಹೆಚ್ಚು ಜನರನ್ನು ಆಕರ್ಷಿಸಿತು. ನೃತ್ಯ, ಗೀತೆ ಹಾಗೂ ವಾದ್ಯ ಎಂಬೀ ಮೂರನ್ನು ಸಮನ್ವಯೀಕರಿಸಿ ಕೃಷ್ಣನಾಟವು ಕಥಕಳಿಗೆ ಮೊದಲೇ ಜನ ಸಾಮಾನ್ಯರ ಹೃದಯವನ್ನು ಗೆದ್ದಿತ್ತು. ಆ ನಂತರ ಬಂದ ಕಥಕಳಿಗೂ ಇದರ ಜೊತೆಗೆ ಹೆಚ್ಚಿನ ಸಾದೃಶ್ಯವಿದೆ. ಕಥಕಳಿಯಲ್ಲಿ ವಾಚಿಕವು ಹಿಮ್ಮೇಳದವರ ಹಾಡಿನ ಮೂಲಕ ಪ್ರಕಟವಾಗುತ್ತಿರುತ್ತದೆ. ಪ್ರೇಕ್ಷಕರು ಹಾಡನ್ನು ಕೇಳಿಸಿಕೊಂಡು ರಂಗದೃಶ್ಯಗಳನ್ನು ತಿಳಿದುಕೊಳ್ಳುತ್ತಾರೆ.

ಉತ್ತರ ಕೇರಳದಲ್ಲಿ ರೂಪು ಪಡೆದ ಕೃಷ್ಣನಾಟವನ್ನು ದಕ್ಷಿಣ ಕೇರಳದಲ್ಲೂ ಪ್ರದರ್ಶಿಸಲು ಕೊಟ್ಟಾರಕ್ಕರ ಮಹಾರಾಜನು ಕೇಳಿಕೊಂಡನು. ಕೃಷ್ಣನಾಟವನ್ನು ಆಸ್ವಾದಿಸುವವರು ದಕ್ಷಿಣದಲ್ಲಿ ಇಲ್ಲ ಎಂದು ಸಾಮೂದಿರಿಪಾಡನು ಆ ಕೋರಿಕೆಯನ್ನು ತಿರಸ್ಕರಿಸಿದನು. ಇದರಿಂದ ಅವಮಾನಿತವಾದ ಕೊಟ್ಟಾರಕ್ಕರ ಮಹಾರಾಜನು ಕೃಷ್ಣನಾಟಂಗೆ ಬದಲಾಗಿ ರಾಮನಾಟಂ ಎಂಬ ಕಲಾ ರೂಪವನ್ನು ಚಾಲ್ತಿಗೆ ತಂದ. ರಾಮಾಯಣದ ಕತೆ, ನೃತ್ಯ, ಗೀತೆ, ನಾಟ್ಯಗಳ ಸಮನ್ವಯೀ ಕಲೆಯಾದ ರಾಮನಾಟಂ ಮುಂದೆ ಕಥಕಳಿಯಾಗಿ ಪರಿಷ್ಕಾರ ರೂಪ ಪಡೆಯಿತು. ರಾಮನಾಟ ಕಾವ್ಯವು ರಚನೆಯಾದುದು ಮಲಯಾಳಂನಲ್ಲಿ. ಕೃಷ್ಣ ಗೀತೆಯಂತೆ ಸಂಸ್ಕೃತದಲ್ಲಲ್ಲ.

ಕಥಕಳಿಯಲ್ಲಿ ಸಂಭಾಷಣೆಗಳಿಲ್ಲ. ಗಾಯಕರ ಆಲಾಪನೆಯನ್ನು ಅನುಸರಿಸಿ ಹಸ್ತ ಮುದ್ರೆಗಳಿಗೆ ಪ್ರಾಮುಖ್ಯ ನೀಡಿ ಆಂಗಿಕಾಭಿನಯ ಹಾಗೂ ಮುಖಾಭಿನಯದ ಮೂಲಕ ಕತೆಯನ್ನು ಸಂವಹನಗೊಳಿಸಲಾಗುತ್ತದೆ. ನಟರ ಆಹಾರ್ಯಾಭಿಯಕ್ಕೂ ಪ್ರಾಧಾನ್ಯವಿದೆ. ಹಸುರು, ಕತ್ತಿ, ತಾಡಿ, ಮಿನುಕ್ಕು ಎಂಬಿತ್ಯಾದಿ ಹಲವು ತೆರನ ವೇಷಗಳು ಕಥಕಳಿಯಲ್ಲಿವೆ. ಇಂದ್ರಾದಿ ದೇವತೆಗಳು, ಪಾಂಡವರು, ಶ್ರೀ ಕೃಷ್ಣ ಮೊದಲಾದ ಸಾತ್ವಿಕ ಭಾವದ ಧೀರೋದಾತ್ತ ಕಥಾ ಪಾತ್ರಗಳಿಗೆ ಹಸುರು (ಪಚ್ಚೆ) ವೇಷ. ರಾವಣ, ಕಂಸ, ಶಿಶುಪಾಲ, ಮೊದಲಾದ ದುಷ್ಟ ಕಥಾಪಾತ್ರಗಳಿಗೆ ಕತ್ತಿ ವೇಷ. ದುಶ್ಯಾಸನ, ಬಕಾಸುರ ಮೊದಲಾದವರಿಗೆ ತಾಡಿ ವೇಷ. ಆಧ್ಯಾತ್ಮಿಕ ಭಾವವಿರುವ ಪಾತ್ರಗಳಿಗೆ ಮಿನುಕ್ಕು ವೇಷ. ರಾಕ್ಷಸೀ ಸ್ತ್ರೀ ಪಾತ್ರಗಳನ್ನು ಹೊರತುಪಡಿಸಿ ಸ್ತ್ರೀ ಕಥಾ ಪಾತ್ರಗಳಿಗೆ, ಋಷಿ ಮುನಿಗಳಿಗೂ ಮಿನುಕ್ಕು ವೇಷ.

ಅರಸು ಮನೆತನಗಳವರು, ಊರಿನ ಪ್ರಮುಖ ಕಥಕಳಿ ಪ್ರೇಮಿಗಳು, ಕಲಾವಿದರು ಕಥಕಳಿಯ ಅಭಿವೃದ್ದಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಧರ್ಮರಾಜನ ಕಾಲದಲ್ಲಿ (೧೭೫೮-೯೮) ಆಲಪ್ಪುೞ ಜಿಲ್ಲೆಯ ಕಥಕಳಿಯ ಏಳಿಗೆಗಾಗಿ ಕಲಾವಿದರನ್ನು ಸೃಷ್ಟಿಸಿದ ಕೀರ್ತಿ ಮಾತ್ತೂರು ಕಳಿಯೋಗಂಗೆ ಸಲ್ಲುತ್ತದೆ. ತಗಳಿಯ ಕಥಕಳಿಯೋಗಂ, ಕುರಿಚ್ಚಿ ಕಥಕಳಿ ಯೋಗಂ, ಕೀರಿಕ್ಕಾಡ್ ತೋಪ್ಪಿಲ್ ಕಥಕಳಿಯೋಗಂ, ಪರಶ್ಶಿನ ಕಡವ್ ಮುತ್ತಪ್ಪನ್ ಕಥಕಳಿಯೋಗಂ, ಕೋಟ್ಟಯ್ಕಲ್ ಪಿ.ಎಸ್.ವಿ. ನಾಟ್ಯ ಸಂಘ ಮೊದಲಾದವು ಕಥಕಳಿಯ ಬೆಳವಣಿಗೆಯಲ್ಲಿ ಅನನ್ಯ ಕೊಡುಗೆ ನೀಡಿದ ಸಂಸ್ಥೆಗಳು.

ನೃತ್ಯ, ಸಂಗೀತ ಮತ್ತು ಅಭಿನಯಗಳ ಸಂಗಮವಾದ ಕಥಕಳಿಗೂ ಕರ್ನಾಟಕದ ಯಕ್ಷಗಾನಕ್ಕೂ ಅನೇಕ ಸಾದೃಶ್ಯಾಂಶಗಳಿವೆ. ಯಕ್ಷಗಾನದಲ್ಲಿ ಸಂಭಾಷಣೆಯಿದೆ. ಆದರೆ ಕಥಕಳಿಯಲ್ಲಿ ಆಂಗಿಕ ಅಭಿನಯ ಹಾಗೂ ಭಾವಾಭಿನಯದ ಮೂಲಕ ಕತೆಯನ್ನು ನಿರೂಪಿಸ ಲಾಗುತ್ತದೆ. ಯುದ್ಧದ ಭೀಕರ ದೃಶ್ಯವನ್ನಾಗಲೀ, ಪ್ರೇಮ ವಾತ್ಸಲ್ಯಗಳ ಮಧುರ ಭಾವಗಳ ನ್ನಾಗಲಿ ವಿರಹ ದುಃಖಗಳ ಕರುಣ ಸನ್ನಿವೇಶಗಳನ್ನಾಗಲಿ ಮೂಕಾಭಿನಯ ಹಾಗೂ ಆಂಗಿಕ ಚಲನೆಗಳಿಗಿರುವ ಹಸ್ತ ಮುದ್ರೆಗಳ ಮೂಲಕ ಸಮರ್ಥವಾಗಿ ಪ್ರಕಟಿಸಲಾಗುತ್ತದೆ. ಸಂದರ್ಭಕ್ಕೆ ಅನುಗುಣವಾದ ವೇಷಭೂಷಣಗಳು ಇದಕ್ಕೆ ಪೂರಕವಾಗಿರುತ್ತದೆ. ಹಾಗಾಗಿ ಕಥಕಳಿ ಭಾಷೆಯ ಬಂಧವನ್ನು ಮೀರಿ ಸಕಲ ಮಾನವ ಕೋಟಿಗೆ ರಸಾನುಭವ ನೀಡುವ ಕಲೆಯೆನಿಸಿದೆ.

ಕಥಕಳಿಯಲ್ಲಿ ವೇಷಭೂಷಣಗಳು ಅದ್ದೂರಿಯಾಗಿರುತ್ತವೆ. ರಂಗಸಜ್ಜಿಕೆ ಸರಳವಾಗಿ ರುತ್ತದೆ. ಒಂದು ಚಪ್ಪರ ಹಾಕಿ ಸರಳವಾಗಿ ರಂಗ ಸ್ಥಳವನ್ನು ಅಲಂಕರಿಸುತ್ತಾರೆ. ಮಧ್ಯದಲ್ಲಿ ಒಂದು ದೊಡ್ಡ ಕಾಲುದೀಪ. ಅದರಲ್ಲಿ ತೆಂಗಿನೆಣ್ಣೆ ಹಾಕಿ ಉರಿಸುತ್ತಾರೆ. ದೀಪದ ಬೆಳಕಿನ ಹಿಂದೆ ಕಲಾವಿದರು ಅಭಿನಯಿಸುತ್ತಾರೆ. ಮುಮ್ಮೇಳದ ಕಲಾವಿದರು ಹಿಂಭಾಗದಲ್ಲಿ ಭಾಗವತರು ಚೆಂಡೆ ಹಾಗೂ ಮದ್ದಳೆ ಬಾರಿಸುವವರು ನಿಲ್ಲುತ್ತಾರೆ. ಹಿನ್ನೆಲೆಯಲ್ಲಿ ಯಾವುದೇ ಪರದೆ ಇರುವುದಿಲ್ಲ. ದೃಶ್ಯ ಬದಲಾವಣೆಗೆ ತೆರೆಯೊಂದನ್ನು ಎರಡು ತುದಿಯಲ್ಲಿ ಇಬ್ಬರು ಹಿಡಿದು ನಿಲ್ಲುತ್ತಾರೆ. ಪಾತ್ರಗಳು ನಿರ್ಗಮಿಸಿದ ಅಥವಾ ಆಗಮಿಸಿದ ಮೇಲೆ ತೆರೆ ಸರಿಸುತ್ತಾರೆ. ಸಾಮಾನ್ಯವಾಗಿ ಪಾತ್ರಗಳು ಪ್ರವೇಶಿಸುವ ಮೊದಲು ತೆರೆಯ ಹಿಂಭಾಗ ಕುಣಿದು ಭಾವಗಳನ್ನು ಪ್ರಕಟಿಸಿ ಮತ್ತೆ ರಂಗಪ್ರವೇಶ ಮಾಡುತ್ತವೆ. ಇದನ್ನು ‘ತೆರೆಪುರಪ್ಪಾಡು’ ಎಂದು ಕರೆಯಲಾಗುತ್ತದೆ.

ಸಾಮಾನ್ಯವಾಗಿ ರಾತ್ರಿ ಒಂಭತ್ತು ಗಂಟೆಗೆ ಆರಂಭವಾಗಿ ಬೆಳಗಿನ ಜಾವದವರೆಗೂ ಕಥಕಳಿ ನಡೆಯುತ್ತದೆ. ಆರಂಭದಲ್ಲಿ ರಂಗದಲ್ಲಿ ದೀಪ ಉರಿಸಿದ ನಂತರ ಭಾಗವತರು ಚೆಂಡೆ ಹಾಗೂ ಮದ್ದಳೆ ಬಾರಿಸುವವರು ರಂಗಪ್ರವೇಶ ಮಾಡಿ ಮಂಗಳಗೀತೆಗಳನ್ನು ಹಾಡುತ್ತಾರೆ. ಬಳಿಕ ಚೆಂಡೆ ಮತ್ತು ಮದ್ದಳೆಯವರು ತಮ್ಮ ಕೈಚಳಕ ಪ್ರದರ್ಶನ ಮಾಡುತ್ತಾರೆ. ಇದನ್ನು ‘ಕೇಳಿಕೊಟ್ಟು’ ಎಂದು ಕರೆಯಲಾಗುತ್ತದೆ. ಯಕ್ಷಗಾನದ ತೆಂಕುತಿಟ್ಟಿನ ಸಂದರ್ಭ ದಲ್ಲಿಯೂ ‘ತರೆಪುರಪ್ಪಾಡ್’ ಕೇಳಿಕೊಟ್ಟು ಬಾರಿಸುವುದು ಮೊದಲಾದ ಸಂಪ್ರದಾಯವಿದೆ. ಬಳಿಕ ಒಂದು ತಾಸುಗಳ ವರೆಗೆ ಹಾಡು ಹಾಗೂ ಚೆಂಡೆ ಮದ್ದಳೆಗಳ ವಾದನ ನಡೆಯುತ್ತದೆ. ಇದನ್ನು ತೋಡಯಂ ಎಂದು ಕರೆಯಲಾಗುತ್ತದೆ. ಆ ಬಳಿಕ ಕೆಲವು ಸಾತ್ವಿಕ ಪಾತ್ರಗಳೂ ಸ್ತ್ರೀ ಪಾತ್ರಗಳೂ ರಂಗಕ್ಕೆ ಬಂದು ಪೂಜಾ ವಿಧಿಗಳನ್ನು ಪೂರೈಸಿ ಕುಣಿದು ತಮ್ಮ ನೃತ್ಯ ಕೌಶಲ್ಯವನ್ನು ಪ್ರದರ್ಶಿಸುತ್ತಾರೆ. ಆಮೇಲೆ ಕಥಾರಂಭವಾಗುತ್ತದೆ. ಮೊದಲು ಕಥಾ ಪ್ರಸಂಗದ ಪೀಠಿಕೆಯಾಗಿ ಕೆಲವು ಹಾಡುಗಳನ್ನು ಹಾಡಿ ಪಾತ್ರಗಳ ಪ್ರವೇಶಕ್ಕೆ ಅನುವು ಮಾಡಿಕೊಡುತ್ತಾರೆ. ಬಳಿಕ ಅಭಿನಯದ ಮೂಲಕ ಕಲಾವಿದರು ಕತೆಯ ದೃಶ್ಯಗಳನ್ನು ಪ್ರದರ್ಶಿಸುತ್ತಾರೆ.

೧೯೩೦ರಲ್ಲಿ ಸ್ಥಾಪಿತವಾದ ಕೇರಳ ಕಲಾಮಂಡಲವು ಮಹಾಕವಿ ವಳ್ಳತ್ತೊಳರ ನೇತೃತ್ವ ದಲ್ಲಿ ಕಥಕಳಿ ಮೊದಲಾದ ಕೇರಳದ ಕಲಾರೂಪಗಳಿಗೆ ಹಿಂದಿಲ್ಲದ ಪ್ರೋತ್ಸಾಹ ನೀಡಿತು. ಈ ಮೂಲಕ ನಂಬೂದಿರಿ ಬ್ರಾಹ್ಮಣರ ಹಾಗೂ ಕ್ಷತ್ರಿಯ ಜನಾಂಗದವರ ಹಿಡಿತದಲ್ಲಿದ್ದ ಕಥಕಳಿಗೆ ಬಿಡುಗಡೆ ದೊರೆತುದೊಂದು ಗಮನಾರ್ಹ ಸಂಗತಿ. ಕೇರಳದ ಪ್ರಗತಿಪರವಾದ ಸಾಮಾಜಿಕ ಚಟುವಟಿಕೆಗಳೂ ಕಥಕಳಿಯನ್ನು ಪ್ರಭಾವಿಸಿವೆ. ಎಲ್ಲಾ ಜಾತಿ, ಜನವರ್ಗಗಳ ವರಿಗೂ ತಲುಪಲು ಕಥಕಳಿಗೆ ಇದರಿಂದ ಸಾಧ್ಯವಾಯಿತು. ಕಥಕಳಿ ಪ್ರದರ್ಶನದ ಸಮಯ ವನ್ನು ಮೂರೋ, ನಾಲ್ಕೋ ಗಂಟೆಗಳಿಗೆ ಸೀಮಿತಗೊಳಿಸಿದುದು, ರಂಗಸಜ್ಜಿಕೆಯಲ್ಲಿ ಆಧುನಿಕೆಯನ್ನು ಅಳವಡಿಸಿದುದು, ಸ್ತ್ರೀಯರೂ ಕಥಕಳಿಯನ್ನು ಅಭ್ಯಾಸ ಮಾಡಿ ಭಾಗವಹಿಸು ವಂತಾದುದು, ಹೊಸ ಅಲಂಕಾರ ವಸ್ತುಗಳನ್ನು ಬಳಸುವುದು, ‘ಮಗ್ದಲದ ಮರಿಯಳು’ ಮೊದಲಾದಂತಹ ಕತೆಗಳನ್ನು ಪ್ರದರ್ಶಿಸುವುದರ ಮೂಲಕ ಭಾರತೀಯೇತರ ಕಥಾ ಭಾಗಗಳನ್ನು ಸ್ವೀಕರಿಸಿದುದು ಈ ಎಲ್ಲಾ ಕಾರಣಗಳಿಂದಾಗಿ ಕಥಕಳಿ ಎಲ್ಲಾ ವರ್ಗದ ಜನರನ್ನು ತನ್ನೆಡೆಗೆ ಸೆಳೆದಿದೆ.

ಮೋಹಿನಿಯಾಟಂ

ಕೇರಳದ ನೃತ್ಯ ಕಲೆಗಳಲ್ಲಿ ಮೋಹಿನಿಯಾಟಕ್ಕೆ ವಿಶಿಷ್ಟ ಪ್ರಾಶಸ್ತ್ಯವಿದೆ. ಆದರೆ ಅಧ್ಯಯನಾಸಕ್ತರ ಅವಗಣನೆಗೆ ಒಳಗಾದ ಕಲೆಯಿದು. ಕೈಕೊಟ್ಟಿಕಳಿ, ಭರತನಾಟ್ಯ, ಕಥಕಳಿ ಮೊದಲಾದವುಗಳೊಡನೆ ಹಲವು ಅಂಶಗಳಲ್ಲಿ ಈ ಕಲೆಗೆ ಸಾದೃಶ್ಯಗಳಿವೆ. ಚಿಕ್ಕ ಕುಪ್ಪಸ, ರೇಷ್ಮೆ ಜರಿಯುಳ್ಳ ಬಿಳಿಯ ಸೀರೆ ನಾಗಹೆಡೆಯನ್ನು ನೆನಪಿಸುವ ಮುಂದಲೆ ಇವು ಮೋಹಿನಿ ಯಾಟದ ನೃತ್ಯಗಾತಿಯ ಸಾಮಾನ್ಯ ವೇಷಭೂಷಣ.

ಪ್ರಾಚೀನ ಕೇರಳದ ಹಾಗೂ ದಕ್ಷಿಣ ಭಾರತದ ದೇವಾಲಯಗಳಲ್ಲಿ ಪ್ರಚಲಿತದಲ್ಲಿದ್ದ ದಾಸಿಯರಾಟದಿಂದ ದೇವದಾಸಿಯರು ರೂಪಿಸಿಕೊಂಡ ನೃತ್ಯ ಪ್ರಕಾರವಿದು ಎಂಬುದು ಬಹುತೇಕ ವಿದ್ವಾಂಸರ ಅಭಿಪ್ರಾಯ. ಕೇರಳದ ದೇವಾಲಯಗಳಲ್ಲಿ ಕಾಣುವ ಶಿಲ್ಪಗಳು, ಪ್ರತಿಮೆಗಳು ಹಾಗೂ ೧೪ನೆಯ ಶತಮಾನದಲ್ಲಿ ರಚನೆಯಾದ  ‘ಶಿವ ವಿಲಾಸಂ’ ಎಂಬ ಕೃತಿಯು ನೃತ್ಯಕಲೆಯಲ್ಲಿ ದೇವದಾಸಿಯರಿಗಿದ್ದ ನೈಪುಣ್ಯವನ್ನು ತಿಳಿಸುತ್ತದೆ. ದೇವದಾಸಿಯರ ನಿಶಾನೃತ್ಯವನ್ನು ಕಂಡ ದೇವತೆಗಳು ಸಂತುಷ್ಟರಾಗಿ ದೇವಾಲಯಗಳ ಗೋಡೆಗಳಲ್ಲಿ ಸ್ಥಿತಗೊಂಡರೆಂದು ಶಿವವಿಲಾಸದಲ್ಲಿ ವರ್ಣಿಸಲಾಗಿದೆ. ದೇವದಾಸಿಯರ ಪ್ರಮುಖ ವೃತ್ತಿ ನೃತ್ಯ, ಹಾಡು ಹಾಗೂ ನಾಟಕಗಳನ್ನಭಿನಯಿಸುವುದು. ಆದರೂ ಹಿಂದಿನ ಕಾಲದಲ್ಲಿ ದೇವದಾಸಿಯರು ದೇವಾಲಯಗಳಿಗೆ ಬರುವ ಭಕ್ತರ ಕಾಮನೆಗಳನ್ನು ಈಡೇರಿಸುವ ಹಾಗೂ ಇಂದ್ರಿಯ ಭೋಗಗಳನ್ನು ಉತ್ತೇಜಿಸುವ ಚಟುವಟಿಕೆಗಳಲ್ಲಿ ತೊಡಗಿದ್ದರೆಂದು ತಿಳಿದು ಬರುತ್ತದೆ.

ಈ ದೇವಾಲಯದ ಕಲೆಯನ್ನು ಪುನರ್ ಪರಿಷ್ಕರಿಸಿ ಉಳಿಸಿಕೊಳ್ಳಲು ಸ್ವಾತಿತಿರುನಾಳ್ ಮಹಾರಾಜನು ಶ್ರಮಿಸಿದ್ದನಾದರೂ ಆತ ಯಶಸ್ವಿಯಾಗಲಿಲ್ಲ. ಇಂದಿನ ಮೋಹಿನಿಯಾಟ ಗಳಲ್ಲಿ ಕಾಣುವ ವೇಷಭೂಷಣಗಳು ಸ್ವಾತಿತಿರುನಾಳ್ ಪರಿಷ್ಕರಿಸಿದವುಗಳೇ ಆಗಿವೆ. ಸ್ವಾತಿತಿರುನಾಳ್ ಹಾಗೂ ಆತನ ಸ್ನೇಹಿತ ಇರಯಿಮ್ಮನ್ ತಂಬಿ ಇವರು ಮೋಹಿನಿ ಯಾಟಕ್ಕಾಗಿ ಹಾಡುಗಳನ್ನು ರಚಿಸಿದ್ದಾರೆ. ಇತ್ತೀಚಿನ ದಶಕಗಳಲ್ಲಿ ಕೇರಳ ಕಲಾಮಂಡಲದಲ್ಲಿ ಈ ಕಲೆಯನ್ನು ಕಲಿಯಲು ಅವಕಾಶ ಮಾಡಿಕೊಡಲಾಗಿದೆ.

ಓಟನ್‌ತುಳ್ಳಲ್

ಸುಂದರವಾದ ವೇಷಭೂಷಣಗಳನ್ನು ಧರಿಸಿ ಮದ್ದಳೆ, ತಾಳಗಳನ್ನು ಉಪಯೋಗಿಸಿ ಹಾಡುಗಾರ ಹಾಡನ್ನು ಅನುಕರಿಸುತ್ತಾ ಪ್ರಯೋಗಿಸುವ ಏಕಾಂಗ ನೃತ್ಯವೇ ಓಟನ್‌ತುಳ್ಳಲ್. ೧೮ನೆಯ ಶತಮಾನದಲ್ಲಿ ಅಂಬಲಪುೞ ಶ್ರೀಕೃಷ್ಣ ದೇವಾಲಯದ ನಾಟಕ ಶಾಲೆಯಲ್ಲಿ ನಡೆದ ಒಂದು ಘಟನೆಯ ಕಾರಣದಿಂದ ಓಟನ್‌ತುಳ್ಳಲ್ ಎಂಬ ಕಲಾ ಪ್ರಕಾರ ಹುಟ್ಟಿ ಕೊಂಡಿತು ಎಂದು ನಂಬಲಾಗಿದೆ. ಚಾಕ್ಯಾರ್ ಕೂತ್ತು ನಡೆಯುವ ಸಂದರ್ಭದಲ್ಲಿ ಮಿಳಾವ್* ಬಾರಿಸುತ್ತಿದ್ದ ಕುಂಜನ್ ನಂಬ್ಯಾರನು ಲಯ ತಪ್ಪಿಸಿದ್ದರಿಂದ  ಚಾಕ್ಯಾರ್ ಪ್ರೇಕ್ಷಕರ ಸಮ್ಮುಖದಲ್ಲಿಯೇ ನಂಬ್ಯಾರನನ್ನು ವ್ಯಂಗ್ಯ ಮಾಡಿದನಂತೆ. ಇದರಿಂದ ಅವಮಾನಿತನಾದ ನಂಬ್ಯಾರ್ ಒಂದೇ ದಿನದಲ್ಲಿ ಹೊಸತೊಂದು ಕಲಾರೂಪವನ್ನು ಹುಟ್ಟು ಹಾಕಿ ಪ್ರದರ್ಶಿಸಿದನಂತೆ. ಹಿಂದಿನ ದಿನ ಅವಮಾನಿಸಿದ ಚಾಕ್ಯಾರರ ಕೂತ್ತ್ ಪ್ರದರ್ಶನಕ್ಕೆ ಪ್ರೇಕ್ಷಕರೇ ಇಲ್ಲದಂತಾಗಿ ಎಲ್ಲರೂ ನಂಬ್ಯಾರರ ಕಲಾ ಪ್ರದರ್ಶನವನ್ನು ನೋಡಹೋದರೆಂಬುದು ಐತಿಹ್ಯ. ಹೀಗೆ ಮೊದಲ ತುಳ್ಳಲ್ ಪ್ರಯೋಗ ನಡೆಯಿತು. ಹೊಸ ತೆರನ ಈ ಕಲಾರೂಪ ಅನೇಕ ಸಹೃದಯರನ್ನು ಆಕರ್ಷಿಸಿತು.

ತುಳ್ಳಲ್‌ನ ಹುಟ್ಟಿನ ಬಗೆಗಿನ ಈ ಐತಿಹ್ಯದ ಬಗೆಗೆ ಎಲ್ಲಾ ವಿದ್ವಾಂಸರಲ್ಲಿ ಸಹಮತವಿಲ್ಲ. ಕೂತ್ತು, ಕೂಡಿಯಾಟಂಗಳು ದೇವಸ್ಥಾನದ ಕೂತ್ತಂಬಲಗಳಲ್ಲಿ ನಡೆಯುತ್ತಿದ್ದುದಷ್ಟೆ. ಇವುಗಳನ್ನು ನೋಡಲು ಮೇಲು ವರ್ಗದವರಿಗೆ ಮಾತ್ರ ಅವಕಾಶವಿತ್ತು. ಅವಕಾಶವಿಲ್ಲದ ಬ್ರಾಹ್ಮಣೇತರ ಜನರು ರೂಪಿಸಿಕೊಂಡ ಕಲಾ ರೂಪವೇ ಓಟನ್‌ತುಳ್ಳಲ್ ಎಂಬುದು ಉಳ್ಳೂರು ಎಸ್. ಪರಮೇಶ್ವರ ಅಯ್ಯರ್ ಕೇರಳ ಸಾಹಿತ್ಯ ಚರಿತ್ರೆಯಲ್ಲಿ ಹೇಳಿದ್ದಾರೆ. ತಗಳಿಯ ಶಾಸ್ತಾ ದೇವಾಲಯಗಳಲ್ಲಿ ವರ್ಷಂಪ್ರತಿ ನಡೆಯುವ ಪರಯನ್ ತುಳ್ಳಲ್, ಶೀತಂಗನ್ ತುಳ್ಳಲ್ ಅನಕ್ಷರಸ್ಥರಾದ ಅನೇಕ ಜನ ಸಾಮಾನ್ಯರನ್ನು ಆಕರ್ಷಿಸಿದೆ. ಈ ತುಳ್ಳಲ್‌ಗಳನ್ನು ಪರಿಷ್ಕರಿಸಿ ಕುಂಜನ್ ನಂಬ್ಯಾರನು ಓಟನ್‌ತುಳ್ಳಲ್ ಕಲಾ ಪ್ರಕಾರವನ್ನು ಸೃಷ್ಟಿಸಿದ. ಪೌರಾಣಿಕ ಕಥಾ ಸನ್ನಿವೇಶಗಳ ನಡುವೆ ಸಮಕಾಲೀನ ಸಾಮಾಜಿಕ ವಿಮರ್ಶೆಯನ್ನು ತುಳ್ಳಲ್‌ಗಳಲ್ಲಿ ಸೇರಿಸಿ ಪ್ರದರ್ಶಿಸಲಾಗುತ್ತದೆ.

ಆರಾಧನಾ ಕಲೆಗಳು

ತೆಯ್ಯಂ

ಕೇರಳದಲ್ಲಿ ಧಾರ್ಮಿಕ ಆಚರಣೆಯ ಭಾಗವಾಗಿರುವ ಅನೇಕ ನೃತ್ಯ ಕಲೆಗಳಿವೆ. ಉತ್ತರ ಕೇರಳದ ಮಲಬಾರು ಪ್ರದೇಶದಲ್ಲಿ ವಿಶೇಷವಾಗಿ ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಒಂದು ಆರಾಧನ ಸಂಪ್ರದಾಯ ತೆಯ್ಯಟಂ ಅಥವಾ ತೆಯ್ಯಂ. ಇದು ದಕ್ಷಿಣ ಕನ್ನಡದಲ್ಲಿ ಪ್ರಚಲಿತದಲ್ಲಿರುವ ‘ದೆಯ್ಯ’ ಆರಾಧನೆಯನ್ನು ಹೋಲುವ ಕಲಾ ರೂಪವಿದು. ಅನುಕ್ರಮವಾಗಿ ಮಲಯಾಳಂ ಮತ್ತು ತುಳು ಭಾಷೆಯ ‘ತೆಯ್ಯಂ’ ಮತ್ತು ‘ದೆಯ್ಯ’ ಎಂಬೀ ಪದಗಳಿಗೆ ಕನ್ನಡದಲ್ಲಿ ದೈವ ಎಂದೇ ಅರ್ಥ. ತೆಯ್ಯಟಂಗೆ ದೈವಾಟಂ, ತಿರಯಾಟಂ ಎಂಬೀ ಹೆಸರುಗಳೂ ಇವೆ. ತುಳುನಾಡಿನ ‘ದೆಯ್ಯ’ಗಳಲ್ಲಿನ  ‘ಪಾರ್ತನ’ ಇದ್ದರೆ ತೆಯ್ಯಂನಲ್ಲಿ ‘ತೋಟ್ಟಂ’ ಇದೆ. ವೀರರ ಆರಾಧನೆಯ ಪ್ರತೀಕವಾಗಿ ತೆಯ್ಯಟಂ ರೂಪು ಪಡೆದಿದೆ. ಯಕ್ಷಗಾನ ಗಂಧರ್ವರು, ದೇವ ದೇವತೆಗಳು, ನಾಗರು, ತೀರಿಕೊಂಡ ಹಿರಿಯರು, ಊರಿನ ಏಳ್ಗೆಗಾಗಿ ಹೋರಾಡಿ ಮಡಿದ ವೀರರು ಮೊದಲಾದವರನ್ನು ಸಂಕೇತಿ ಸುವಂತೆ ವೇಷಧರಿಸಿ ಆರಾಧಿಸುವ ವಿಶಿಷ್ಟವಾದ ಗ್ರಾಮೀಣ ಕಲೆಯಿದು. ತೆಯ್ಯಟದಲ್ಲಿ ಆರಾಧನ ಮೂರ್ತಿಯ ವಿವಿಧ ಪ್ರವೃತ್ತಿಗಳನ್ನು ತಾಳಬದ್ಧವಾಗಿ ಕುಣಿದು ನರ್ತಿಸಲಾಗುತ್ತದೆ. ದೈವಗಳು ದೋಷ ಹಾಗೂ ಅವುಗಳ ಪರಿಹಾರಾರ್ಥವಾಗಿ ಪೂಜೆಗಳನ್ನು ಬಯಸುವ ರೀತಿಯಲ್ಲಿ ಇಲ್ಲಿ ಅವುಗಳ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ. ದೈವಗಳ ವೇಷವನ್ನು ಧರಿಸಿದ ವ್ಯಕ್ತಿ ನಂಬಿ ಬಂದ ಭಕ್ತರಿಗೆ ಅಭಯವನ್ನಿತ್ತು ಕಾಪಾಡುವ  ಭರವಸೆಯನ್ನು ಕೊಡುತ್ತಾನೆ. ಧಾರಾಳವಾಗಿ ಅಲಂಕಾರ ವಸ್ತುಗಳನ್ನು, ವಿವಿಧ ಬಣ್ಣಗಳ ಬಟ್ಟೆ ಹೂಗಳಿಂದ ಹಾಗೂ ಎಳೆಯ ತೆಂಗಿನ ಗರಿಗಳಿಂದ ಅದ್ಧೂರಿಯಾಗಿ ವೇಷವನ್ನು ಧರಿಸಲಾಗುತ್ತದೆ. ಇದರ ಜೊತೆಗೆ ತಾಳ ವಾದ್ಯಗಳು, ಚೆಂಡೆಗಳ ಬಡಿತ ಇತ್ಯಾದಿಗಳಿಂದಾಗಿ ತೆಯ್ಯಟಂಗೆ ವಿಶಿಷ್ಟ ಧಾರ್ಮಿಕ ಕಳೆ ಲಭ್ಯವಾಗುತ್ತದೆ. ದಕ್ಷಿಣ ಭಾರತದಲ್ಲಿಯೇ ವಿಶಿಷ್ಟ ಧಾರ್ಮಿಕ ಕಲೆ ಎಂಬ ಹೆಗ್ಗಳಿಕೆ ತೆಯ್ಯಟಂಗೆ ಇದೆ.

ಆರಾಧನೆಗೊಳ್ಳುವ ಮೂರ್ತಿಯ ವೇಷಗಳನ್ನು ತೊಟ್ಟುಕೊಂಡ ಕಲಾವಿದ ಕುಣಿಯುವನು. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ದೈವಗಳು ಏಕಕಾಲಕ್ಕೆ ಆರಾಧನೆಗೊಳ್ಳುವುದೂ ಇದೆ. ಅಂತಹ ಸಂದರ್ಭಗಳಲ್ಲಿ ಒಬ್ಬರಿಂದ ಹೆಚ್ಚು ಮಂದಿ ಕಲಾವಿದರು ವೇಷ ತೊಟ್ಟು ಕುಣಿಯುವರು. ತೆಯ್ಯಟಂನಲ್ಲಿ ವೇಷ ತೊಡುವವರು ಪುರುಷರು ಮಾತ್ರ. ಮಹಿಳೆಯರು ಚೆಂಡೆ ಬಾರಿಸಲು ‘ತೋಟ್ಟಂ’ ಹೇಳಲು ಹಾಗೂ ವೇಷಭೂಷಣಗಳ ಸಿದ್ಧತೆಯಲ್ಲಿ ನೆರವಾಗು ವರು. ಭಕ್ತರ ಸಮೂಹದ ನಡುವೆ  ‘ತೆಯ್ಯಂ’  ವೇಷಧಾರಿ ನೃತ್ತವಾಡುವನು. ಎಡಕಾಲನ್ನೋ, ಬಲಕಾಲನ್ನೋ ಬದಲಿಸುತ್ತಾ ಎತ್ತಿ ನೃತ್ತವಾಡುವನು. ವಾದ್ಯಗಳ ಉಚ್ಚ ಸ್ವರಗಳನ್ನನುಸರಿಸಿ ತ್ವರಿತ ಗತಿಯಲ್ಲಿ ಕುಣಿದು ನರ್ತಿಸಿ ಪ್ರೇಕ್ಷಕರಲ್ಲಿ ಲಹರಿಯೆಬ್ಬಿಸುವನು. ತೆಯ್ಯಟದ ವೇಷಭೂಷಣಗಳಲ್ಲಿ ಅತ್ಯಂತ ಪ್ರಮುಖವಾದುದು ‘ಮುಡಿ’. ಕೆಲವು ದೈವಗಳ ಮುಡಿ ಐದು ಅಡಿಗಳಷ್ಟು ಎತ್ತರವಿರುತ್ತದೆ. ಬಿದಿರಿನ ಸಲಿಕೆಯನ್ನು ಕಟ್ಟಿ ತೆಂಗಿನ ಎಳೆಯ ಗರಿಗಳನ್ನು ನೆಯ್ದು ಹೂಗಳು ಹಾಗೂ ಬಣ್ಣದ ಬಟ್ಟೆಗಳಿಂದ ಅಲಂಕರಿಸಿ ಮುಡಿಯನ್ನು ತಯಾರಿಸ ಲಾಗುತ್ತದೆ. ಮೆರವಣಿಗೆ ಹೋಗಬೇಕಾದ ಸಂದರ್ಭದಲ್ಲಿ ಮುಖ್ಯ ವೇಷಧಾರಿಯ ಜೊತೆಗೆ ಪ್ರೇಕ್ಷಕರೂ ಸೇರಿಕೊಳ್ಳುತ್ತಾರೆ. ಸೊಂಟಕ್ಕೆ ಬಿಳಿ ಮುಂಡನ್ನು ಸುತ್ತಿಕೊಂಡು ಬರಿಮೈಯಲ್ಲಿ ಪುರುಷರು ಖಡ್ಗ ಹಿಡಿದುಕೊಳ್ಳುವರು. ಬಿಳಿ ಸೀರೆಯನ್ನುಟ್ಟು ತಾಳ ಬಡಿಯುತ್ತಾ ಮಹಿಳೆ ಯರೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಿದೆ. ತಲೆಯಲ್ಲಿ ಕಲಶ ಹೊತ್ತುಕೊಂಡು ಭಕ್ತರು ಮೆರವಣಿಗೆಯನ್ನು ಹಿಂಬಾಲಿಸುವುದಿದೆ.

ಉತ್ತರ ಕೇರಳದ ಎಲ್ಲಾ ಭಗವತಿ ದೇವಸ್ಥಾನಗಳಲ್ಲಿ ನಡೆಸುವ ವಾರ್ಷಿಕೋತ್ಸವವೇ ತೆಯ್ಯಟಂ. ಸಾಮಾನ್ಯವಾಗಿ ಒಂದು ದಿನದಿಂದ ಹದಿನೇಳು ದಿನಗಳವರೆಗೂ ತೆಯ್ಯಟಂ ನಿರಂತರ ನಡೆಯುವುದಿದೆ. ದೇವಸ್ಥಾನಗಳ ಆಚರಣೆಗಳಲ್ಲಿ ವಣ್ಣಾನ್, ಚಿಂಗತ್ತಾನ್, ಮಲಯನ್, ತೆಯ್ಯಂ ವೇಷ ಧರಿಸುವರು. ವಾರ್ಷಿಕೋತ್ಸವವಲ್ಲದೆ ಹರಕೆಯ ರೂಪ ದಲ್ಲಿಯೂ ತೆಯ್ಯಟಂ ನಡೆಯುವುದಿದೆ. ಕಾಸರಗೋಡಿನ ಸಮೀಪದ ಕುಂಬಳೆಯ  ‘ಆಲಿಚಾಮುಂಡಿ’ ಎಂಬ ದೈವದ ವೇಷಧಾರಿ ಮುಸಲ್ಮಾನರ ಟರ್ಕಿ ಟೋಪಿಯನ್ನು ಧರಿಸುವನು. ಇದು ತೆಯ್ಯಟದ ಮೇಲೆ ಮುಸಲ್ಮಾನರ ಪ್ರಭಾವವನ್ನು ಸೂಚಿಸುತ್ತದೆ. ಕಣ್ಣಪುರ ‘ಆರ್ಯಪೂಂಕನ್ನಿ’ಯಲ್ಲೂ ಇದನ್ನು ಕಾಣಬಹುದು.