ರತ್ನಗಳಿಗೆ ಒಪ್ಪ ಹಾಕುವುದು.

ಕೃತ್ರಿಮ ರತ್ನಗಳಿಗೆ ಒಪ್ಪ ಹಾಕಿ ಅವನ್ನು ಬೇಕಾದ ರೀತಿಯಲ್ಲಿ ಮಿನುಗುವಂತೆ ಮಾಡುವ ಅಸಾಧಾರಣ ಸೂಕ್ಷ್ಮತೆಯೂ, ಸೌಂದರ್ಯ ಪ್ರಜ್ಞೆಯೂ ಒಂದು ಕುಶಲ ಕಲೆಗಾರಿಕೆಯೇ ಆಗಿದೆ. ಕೇರಳದಲ್ಲಿ ಇತ್ತೀಚೆಗೆ ಇದೊಂದು ವೃತ್ತಿಯಾಗಿ ಬೆಳೆದು ಬಂದಿದೆ. ತೃಶ್ಯೂರು ಸುತ್ತಮುತ್ತಲ ಪ್ರದೇಶಗಳೇ ಇದರ ಪ್ರಮುಖ ಕೇಂದ್ರ. ತಮಿಳುನಾಡಿನ ತಿರುಚಿನಾಪಳ್ಳಿಯ ರತ್ನ ವ್ಯಾಪಾರಿಗಳು ಸ್ವಿಟ್ಜರ್‌ಲ್ಯಾಂಡಿನಿಂದ ಕೃತಕ ರತ್ನಗಳನ್ನು ಆಮದು ಮಾಡಿ ತೃಶ್ಯೂರಿಗೆ ಕಳುಹಿಸುತ್ತಾರೆ. ತೃಶ್ಯೂರಿನ ಕಾರ್ಮಿಕರ ಒಪ್ಪ ಕೆಲಸದ ಬಳಿಕ ಕೃತ್ರಿಮ ರತ್ನಗಳ ರೂಪದಿಂದ ಅವು ಮತ್ತೆ ತಿರುಚಿನಾಪಳ್ಳಿಗೆ ಹೋಗುತ್ತವೆ.

ಶಿಲಾಶಿಲ್ಪಗಳು

ಕಗ್ಗಲ್ಲುಗಳಲ್ಲಿ ವಿವಿಧ ಮಾದರಿಯ ಕೆತ್ತನೆಯನ್ನು ಮಾಡುವುದರಲ್ಲಿ ಕೇರಳೀಯರ ಪ್ರಾವೀಣ್ಯವು ಪ್ರಕಟವಾಗಿದೆ. ಕ್ರಿ.ಶ. ೭-೮ನೆಯ ಶತಮಾನದಲ್ಲಿ ಆರಂಭವಾದ ಶಿಲ್ಪಕಲೆಗಳ ವೈಭವ ೧೬-೧೮ನೆಯ ಶತಮಾನದ ವರೆಗೂ ಮುಂದುವರೆಯಿತು. ದೇವಾಲಯಗಳ ನಿರ್ಮಾಣಗಳ ಮೂಲಕ ಶಿಲ್ಪಿಗಳ ಕರಕೌಶಲ್ಯ ಇಂದಿಗೂ ಸಾಕ್ಷಿಯಾಗಿ ಉಳಿದಿವೆ. ದೇವಾಲಯಗಳ ನಿರ್ಮಾಣ ಕೆಲಸ ಇಲ್ಲವಾದ ನಂತರ ಶಿಲೆ ಕಲ್ಲುಗಳಲ್ಲಿ ಕಂಬಗಳನ್ನು, ಕಡಿಯುವ ಕಲ್ಲುಗಳನ್ನು ಮೊದಲಾದ ಉಪಯೋಗೀ ವಸ್ತುಗಳನ್ನು ರಚಿಸುವುದರಲ್ಲಿ ಪ್ರಾವಿಣ್ಯವನ್ನು ತೋರ್ಪಡಿಸುವುದಿದೆ.  ದೇವಾಲಯಗಳಲ್ಲಿ ಪ್ರತಿಷ್ಠೆ ಮಾಡಲು ಬೇಕಾದ ವಿಗ್ರಹಗಳಿಗೆ ಅಗತ್ಯವಾದ ‘ಕೃಷ್ಣಶಿಲೆ’ ಎಂಬ ವಿಶಿಷ್ಟವಾದ ಕಲ್ಲು ಓಮಲ್ಲೂರ್ ಎಂಬ ಸ್ಥಳದಲ್ಲಿ ಲಭಿಸುತ್ತದೆ. ಶಿಲ್ಪರತ್ನಂ, ತಂತ್ರಸಮುಚ್ಛಯಂ ಮೊದಲಾದ ಗ್ರಂಥಗಳಲ್ಲಿ ಉಲ್ಲೇಖಿಸಿದ್ದನ್ನು ಶಿಲ್ಪಿಗಳು ಅನುಸರಿಸುತ್ತಾರೆ.

ತೆಂಗಿನ ಚಿಪ್ಪು

ಕೇರಳದ ಕಲ್ಪವೃಕ್ಷವು ಕೊಡುವ ಗೆರಟೆ ಅಥವಾ ತೆಂಗಿನ ಚಿಪ್ಪು ಸೌಂದರ್ಯ ವಸ್ತುಗಳನ್ನು ಹಾಗೂ ಉಪಯೋಗೀ ವಸ್ತುಗಳನ್ನು ತಯಾರಿಸಲು ಉಪಯೋಗವಾಗುತ್ತದೆ. ಚಹಾ ಪಾತ್ರೆಗಳು, ಕಪ್ಪುಗಳು, ಸೌಟುಗಳು, ಹೂದಾನಿಗಳು, ಅಲಂಕಾರ ವಸ್ತುಗಳು, ಹೀಗೆ ಅನೇಕ ವಸ್ತುಗಳನ್ನು ಗೆರಟೆಯಿಂದ ತಯಾರಿಸಲಾಗುತ್ತದೆ. ಸಣ್ಣಪುಟ್ಟ ಕುಸುರಿ ಕೆಲಸಗಳನ್ನು ಮಾಡುವಾಗ ಗೆರಟೆ ಒಡೆದು ಹೋಗುವ ಸಾಧ್ಯತೆಯಿರುವುದರಿಂದ ಬಹಳ ಎಚ್ಚರಿಕೆ ವಹಿಸಬೇಕಾದ ವೃತ್ತಿಯಿದು. ತಿರುವನಂತಪುರಂ ಹಾಗೂ ನೈಯಾಟ್ಟಿನ್‌ಕರ ಈ ವೃತ್ತಿಗೆ ಪ್ರಸಿದ್ಧವಾದ ಸ್ಥಳಗಳು. ಹಿತ್ತಾಳೆಗೆ ತೆಂಗಿನ ಚಿಪ್ಪುಗಳನ್ನು ಅಂಟಿಸಿ ದೀಪದ ಶೇಡೆಗಳನ್ನು, ದೀಪದ ಕಾಲುಗಳನ್ನು, ಹೂದಾನಿಗಳನ್ನು, ಹುಕ್ಕ ಮೊದಲಾದ ವಸ್ತುಗಳನ್ನು ತಯಾರಿಸಲಾಗುತ್ತದೆ. ಇದಕ್ಕೆ ಕೋಳಿಕೋಡಿನ ಕೊಯಿಲಾಂಡಿ ಪ್ರಸಿದ್ಧವಾದ ಸ್ಥಳ. ಮಧ್ಯ ಪೌರಾಸ್ತ್ಯ ರಾಜ್ಯಗಳಲ್ಲೂ ಆಫ್ರಿಕಾ ದೇಶಗಳಲ್ಲೂ ಈ ತೆರನ ವಸ್ತುಗಳಿಗೆ ಸಾಕಷ್ಟು ಬೇಡಿಕೆಯೂ ಇದೆ.

ಬಟ್ಟೆಯ ಟೋಪಿಗಳು

ಕಾಸರಗೋಡಿನ ತಳಂಗೆರೆ ಎಂಬಲ್ಲಿ ಮುಸಲ್ಮಾನರು ತಯಾರಿಸುವ ಬಟ್ಟೆಯ ಟೋಪಿಗಳಿಗೆ ಅರಬ್ ರಾಷ್ಟ್ರಗಳಲ್ಲಿ ಹಾಗೂ ಆಫ್ರಿಕಾ ದೇಶಗಳಲ್ಲಿ ವಿಶೇಷ ಬೇಡಿಕೆಯಿದೆ. ಇಲ್ಲಿ ಎರಡು ವಿಧದ ಟೋಪಿಗಳನ್ನು ತಯಾರಿಸುತ್ತಾರೆ. ಕಡಿಮೆ ಬೆಲೆಯ ಬಟ್ಟೆಗಳಲ್ಲಿ ನೂಲುಗಳಿಂದ ಹೊಲಿದು ತಯಾರಿಸುವ ಸಾಮಾನ್ಯ ಟೋಪಿ ಒಂದು. ಉತ್ತಮ ಗುಣಮಟ್ಟದ ಜರಿ ಬಟ್ಟೆಗಳಿಂದ ತಯಾರಿಸುವ ವಿಶಿಷ್ಟ ಟೋಪಿ ಇನ್ನೊಂದು.

ಬೊಂಬೆಗಳು ಹಾಗೂ ಆಟಿಕೆಗಳು

ಬೊಂಬೆಗಳು ಹಾಗೂ ಆಟಿಕೆಗಳು ನಿರ್ಮಿಸುವ ಕಲೆ ಪ್ರಾಚೀನ ಕಾಲದ ದಾರುಶಿಲ್ಪ ಕಲೆಯಷ್ಟೇ ಹಳಮೆಯಿದೆ. ದೃಷ್ಟಿ ತಾಕುವುದು. ಮೊದಲಾದವುಗಳಿಗೆ ಪ್ರತಿರೋಧ ಒಡ್ಡಲು ಮನುಷ್ಯರ ಹಾಗೂ ಪ್ರಾಣಿಗಳ ವಿಕೃತ ರೂಪಗಳನ್ನು ನಿಲ್ಲಿಸಿ ನೋಡುಗರ ಗಮನ ಸೆಳೆಯುವಂತೆ ಮಾಡುವ ಪದ್ಧತಿ ಇಂದಿನಂತೆ ಪ್ರಾಚೀನ ಕಾಲದಲ್ಲಿಯೂ ಇದ್ದಿತ್ತು. ಉತ್ಸವ ಆಚರಣೆಗಳ ಸಂದರ್ಭದಲ್ಲಿ ಮೆರವಣಿಗೆಗಳಲ್ಲಿ ವಿವಿಧ ರೀತಿಯ ಮುಖವಾಡಗಳನ್ನು ಬಳಸಲಾಗುತ್ತಿತ್ತು. ವೈವಿಧ್ಯಮಯವಾದ ಮುಖವಾಡಗಳ ರಚನೆಯನ್ನು ಕೇರಳದಲ್ಲಿ ಪ್ರಾಚೀನ ಕಾಲದಿಂದಲೇ ಮಾಡಲಾಗುತ್ತಿತ್ತು.

ಪೇಪರ್ ಪಲ್ಬುಗಳಿಂದ ತಯಾರಿಸುವ ಕಥಕಳಿಯ ಮುಖವಾಡಗಳು ಪ್ರಾಣಿ ಪಕ್ಷಿಗಳ ಮಾದರಿಗಳು, ವಿಭಿನ್ನ ಉಡುಗೆ ತೊಡುಗೆಗಳಲ್ಲಿರುವ ಜನರು ಈ ಮೊದಲಾದವುಗಳಿಗೆ ಮನೆ, ಹೋಟೆಲುಗಳ ಸ್ವಾಗತ ಕೊಠಡಿಗಳಲ್ಲಿ ಪ್ರಮುಖ ಸ್ಥಾನ ಲಭ್ಯವಾಗಿದೆ. ಆವೆಮಣ್ಣು, ಪ್ಲಾಸ್ಟರ್ ಆಫ್ ಪ್ಯಾರಿಸ್, ಸಿಮೆಂಟ್ ಮೊದಲಾದವುಗಳಿಂದ ರೂಪಿಸಿದ ಕಲಾಸೃಷ್ಟಿಗಳನ್ನು ಅಲಂಕಾರಕ್ಕಾಗಿ ಬಳಸುವುದಿದೆ.

ಆಭರಣಗಳು

ಕೇರಳೀಯರಿಗೆ ಸಂಬಂಧಿಸಿದಂತೆ ಸೌಂದರ್ಯಾವಿಷ್ಕಾರದ ಪ್ರಮುಖವಾದ ಒಂದು ಕ್ಷೇತ್ರ ಆಭರಣ. ಹಿಂದಿನ ಕಾಲದಲ್ಲಿ ಆಭರಣಗಳು ಅವುಗಳನ್ನು ಧರಿಸಿದ ವ್ಯಕ್ತಿಗಳ ಜಾತಿ ಮತಾದಿಗಳನ್ನು ಬಹಿರಂಗಪಡಿಸುತ್ತಿದ್ದವು. ಹಲವು ಕಾಲಘಟ್ಟಗಳಲ್ಲಿ ನಡೆದು ಬಂದಿರುವ ಕೊಡುಕೊಳುಗೆಯ ಪರಿಣಾಮವಾಗಿ ಇಂದಿನ ಪರಿಸ್ಥಿತಿ ಸಾಕಷ್ಟು ಬದಲಾಗಿದೆ.

ಹಾವಿನ ಹೆಡೆಯಂತಿರುವ ನಾಗಹೆಡೆತಾಳಿ ನಾಯರ್ ಸ್ತ್ರೀಯರ ವಿಶಿಷ್ಟ ಆಭರಣವಾಗಿತ್ತು. ಅಡ್ಡಿಯಲ್ (ಅಡ್ಡಿಕೆ), ಯಂತ್ರಂ, ಪುಲಿನಖಂ (ಹುಲಿಯುಗುರು), ಅವಿಲ್‌ಮಾಲ (ಅವಲಕ್ಕಿ ಸರ) ಮೊದಲಾದವು ಅಂದು ಅವರ ಪ್ರಮುಖ ಆಭರಣಗಳಾಗಿದ್ದವು. ಕೈಯ ಕಡಗಗಳು, ಮೂಗಿನ ಮೂಗುತಿ, ಕಿವಿಯ ‘ತೋಡಯಂ’ ಇವುಗಳಲ್ಲಿ ಗಮನಾರ್ಹವಾಗಿವೆ. ನಂಬೂದಿರಿ ಸ್ತ್ರೀಯರು ಕಂಠಾಭರಣವಾಗಿ ಪುಟ್ಟ ವಿಶಿಷ್ಟ ತಾಳಿಯನ್ನು ಧರಿಸುತ್ತಿದ್ದರು. ಕಾಸಿನ ಸರ, ಒಡ್ಯಾಣ ಮೊದಲಾದವುಗಳು ತಮಿಳು ಬ್ರಾಹ್ಮಣ ಸ್ತ್ರೀಯರ ಪ್ರತ್ಯೇಕತೆಗಳಾಗಿದ್ದವು. ಕಿವಿಯ ಹಲವು ಸ್ಥಳಗಳಲ್ಲಿ ಚುಚ್ಚಿ ‘ಮೇಕ್ಕಾಮೋದಿರಂ’ ಎಂಬ ಹೆಸರಿನ ಗಟ್ಟಿ ಹಿತ್ತಾಳೆಯ ಬಳೆಗಳು ಅಂದಿನ ಕ್ರಿಶ್ಚಿಯನ್ ಮಹಿಳೆಯರ ಪ್ರಮುಖ ಕರ್ಣಾಭರಣಗಳಾಗಿದ್ದವು. ಒಟ್ಯಾಳ ಪದಕಂ, ಕೊಂಬ್, ತಳ ಮೊದಲಾದ ಅಂದಿನ ಕ್ರಿಶ್ಚಿಯನ್ ಸ್ತ್ರೀಯರ ವಿಶಿಷ್ಟ ಆಭರಣ ಗಳಾಗಿದ್ದವು. ಪದಕ, ತಳ, ಬಳೆ, ಚಿನ್ನದ ಸರ, ಮುತ್ತಿನ ಮಾಲೆ ಮೊದಲಾದವುಗಳನ್ನು ಧರಿಸುತ್ತಿದ್ದರಾದರೂ ಮುಸಲ್ಮಾನ ಸ್ತ್ರೀಯರಿಗೆ ರತ್ನಾಭರಣಗಳಲ್ಲಿ ಅಂತಹ ಮೋಹ ವೇನಿರಲಿಲ್ಲ.

ಆಭರಣಗಳನ್ನು ಕುರಿತಂತೆ ಕೇರಳದ ಸ್ತ್ರೀಯರ ಮೋಹಕ್ಕೆ ಇಂದಿಗೂ ಕೂಡಾ ವಿಶೇಷ ವ್ಯತ್ಯಾಸ ಬಂದಿಲ್ಲ ಎಂಬುದನ್ನು ಗಮನಿಸಬಹುದು. ಶಿಕ್ಷಣದ ಅಧಿಕ್ಯವಾದ ಕಾರಣದಿಂದ ಆಭರಣಗಳ ಸಂಖ್ಯೆಯ ಪ್ರಮಾಣವೂ ಕಡಿಮೆಯಾಗುತ್ತಿದೆ ಎಂಬೊಂದು ಸಾಮಾನ್ಯ ಅಭಿಪ್ರಾಯ ಸರಿಯೆಂದು ತೋರುತ್ತದೆ. ಕೇರಳದ ಚಿನ್ನ ವ್ಯಾಪಾರಿಗಳು ಹಳೆಯ ಮಾದರಿ ಗಳನ್ನು ಪುನರ್ ರಚಿಸಿ ಹೊಸ ಹೊಸ ಮಾದರಿಗಳನ್ನು ಪ್ರಚಾರಕ್ಕೆ ತರುತ್ತಿದ್ದಾರೆ. ಚಿನ್ನದ ಬೆಲೆ ಹೆಚ್ಚುತ್ತಿರುವುದರಿಂದ ಚಿನ್ನದ ಲೇಪ ಮಾಡಿದ ಆಭರಣಗಳ ಬಳಕೆ ಹೆಚ್ಚು ಹೆಚ್ಚು ಪ್ರಚಾರಕ್ಕೆ ಬರುತ್ತಿದೆ. ಜೊತೆಗೆ ಚಿನ್ನಾಭರಣಗಳ ಬಳಕೆಯೂ ಹೆಚ್ಚುತ್ತಲೇ ಇದೆ. ಕೇರಳದ ನಗರಗಳಲ್ಲಿ ಚಿನ್ನಾಭರಣಗಳ ಮಾರಾಟ ಮಳಿಗೆಗಳು ನಗರದ ಸೌಂದರ್ಯವನ್ನು ಹೆಚ್ಚಿಸಿವೆ. ದೇಶದಲ್ಲಿ ಹಾಗೂ ಅರಬ್ ರಾಷ್ಟ್ರಗಳಲ್ಲಿ ಕೇರಳ ಮೂಲದ ಚಿನ್ನಾಭರಣ ವ್ಯಾಪಾರಿಗಳದೇ ಸಿಂಹಪಾಲು.

ಹುರಿಹಗ್ಗ ವಸ್ತುಗಳು

ಹುರಿಹಗ್ಗ ಹಾಗೂ ಅದರಿಂದ ತಯಾರಿಸುವ ಅನೇಕ ವಸ್ತುಗಳು ಕೇರಳೀಯರ ಕರಕೌಶಲ್ಯದ ಪ್ರಮುಖ ಮಾದರಿಗಳೆನಿಸಿವೆ. ಕಬ್ಬಿಣದ ಸಂಕಲೆಗಳ ಆವಿರ್ಭಾವಕ್ಕೂ ಪೂರ್ವದಲ್ಲಿ ಹಡುಗುಗಳಲ್ಲಿ ಹುರಿಹಗ್ಗಗಳನ್ನು ಬಳಸುತ್ತಿದ್ದರು. ನೆಲಹಾಸು, ಚಾಪೆ, ಕಾರ್ಪೆಟ್, ಹಾಸಿಗೆ, ಕುಷನ್, ಟೋಪಿ, ಹೀಗೆ ಹತ್ತು ಹಲವು ಉಪಯೋಗೀ ವಸ್ತುಗಳನ್ನು ಹುರಿಹಗ್ಗಗಳಿಂದ ತಯಾರಿಸುತ್ತಿದ್ದರು. ಕೇರಳದ ಪ್ರಮುಖ ಹುರಿಹಗ್ಗ ನಿರ್ಮಾಣ ಕೇಂದ್ರ ಗಳು ಆಲಪ್ಪುೞದಲ್ಲಿವೆ. ಭಾರತದ ಪ್ರಮುಖ ರಫ್ತು ಸರಕುಗಳಲ್ಲಿ ಇದೂ ಒಂದು.

ಇತರೇ ಕುಶಲ ವಸ್ತುಗಳು

ಡಮಾಸ್ಕಸ್‌ನಲ್ಲಿ ರೂಪು ಪಡೆದ ವಿಶೇಷವಾದ ಒಂದು ಲೋಹದ ಕುಶಲ ವಸ್ತುವಿದೆ. ಕಬ್ಬಿಣ, ಉಕ್ಕು, ಕಂಚು ಮೊದಲಾದ ಲೋಹಗಳಲ್ಲಿ ಚಿನ್ನ ಅಥವಾ ಬೆಳ್ಳಿಯಿಂದ ನಿರ್ಮಿಸಿದ ಮಾದರಿಗಳಂತೆಯೇ ಆಕೃತಿಗಳನ್ನು ನಿರ್ಮಿಸಲಾಗುತ್ತದೆ. ಕಾಪ್ಟ್‌ಗಿರಿ ಎಂಬ ಹೆಸರಿನಿಂದ ಪ್ರಚಲಿತದಲ್ಲಿರುವ ಈ ಕರಕೌಶಲ್ಯ ವೃತ್ತಿಯಲ್ಲಿ ತೊಡಗಿಸಿಕೊಂಡ ಕೆಲವರು ಇಂದಿಗೂ ತಿರುವನಂತಪುಂನಲ್ಲಿದ್ದಾರೆ. ಮಾರ್ತಾಂಡವರ್ಮನ ಕಾಲಕ್ಕೂ ಮೊದಲೇ ಈ ವಿದ್ಯೆ ತಿರುವಾಂಕೂರಿನಲ್ಲಿ ಪ್ರಚಾರದಲ್ಲಿತ್ತು ಎಂಬುದಕ್ಕೆ ಆ ಕಾಲದ ಆಯುಧಗಳಲ್ಲಿನ ಅಲಂಕಾರಗಳು ಸಾಕ್ಷ್ಯ ವಹಿಸುತ್ತವೆ. ಹಲವು ರೀತಿಯ ನಿತ್ಯೋಪಯೋಗದ ವಸ್ತುಗಳನ್ನು  ನಿರ್ಮಿಸಲು ಕಾಪ್ಟ್‌ಗಿರಿಯು ಪ್ರಯೋಜನಪ್ರದವಾಗಿದೆ. ದೇವ ದೇವತೆಗಳ ವಿಗ್ರಹಗಳು, ಹಳ್ಳಿಯ ಪ್ರಾಕೃತಿಕ ದೃಶ್ಯಗಳು, ಚಿತ್ರದ ಚೌಕಟ್ಟುಗಳು, ಸಿಗರೇಟ್ ಪೆಟ್ಟಿಗೆಗಳು, ಆಷ್ ಟ್ರೇಗಳು ಮೊದಲಾದವುಗಳೆಲ್ಲ ಇವುಗಳಲ್ಲಿ ಸೇರಿವೆ. ಅನಂತಶಯನ, ವೇಣುಗೋಪಾಲ, ವೀಣಾಪಾಣಿಯಾದ ಸರಸ್ವತಿ ಮೊದಲಾದ ವಿಗ್ರಹಗಳನ್ನು ಬೆಳ್ಳಿ ಸರಿಗೆಯಿಂದ ತಯಾರಿಸುವ ತಿರುವನಂತಪುರಂನ ಕಾಪ್ಟ್‌ಗಿರಿ ಕೆಲಸಗಾರರ ಕೌಶಲ್ಯ ಗಮನ ಸೆಳೆಯುತ್ತದೆ.

ಕೇರಳದ ಇನ್ನೊಂದು ಲೋಹ ಕೆಲಸವೆಂದರೆ ಕೊಲ್ಲಂನ ಬೆಳ್ಳಿ ಚಮಚ. ಕೊಲ್ಲಂನ ಕೆಲವು ಚಿನ್ನದ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಿ ಹೊರ ದೇಶಗಳಿಗೆ ರಫ್ತು ಮಾಡುವ ಬೆಳ್ಳಿಯ ಚಮಚಗಳಿಗೆ  ವಿಶೇಷ ಪ್ರಸಿದ್ದಿಯಿದೆ. ವಿಶೇಷವಾದ ಬೆಳ್ಳಿಯ ನಾಣ್ಯಗಳ ಕೆತ್ತನೆಯ ಹಿಡಿಕೆಯಿರುವ ವಿಶಿಷ್ಟ ಚಮಚಗಳಿವು.

ಪಯ್ಯನ್ನೂರು ಪವಿತ್ರಮೋದಿರಂ ಎಂಬ ಚಿನ್ನದುಂಗರವು ಪ್ರಸಿದ್ಧವಾಗಿದೆ. ಇದನ್ನು ನಿರ್ದಿಷ್ಟವಾದ ಅಕ್ಕಸಾಲಿಗ ಸಮುದಾಯವೊಂದು ತಯಾರು ಮಾಡಿಕೊಡುತ್ತದೆ. ಇದನ್ನು ಧರಿಸಿಕೊಂಡುವವರಿಗೆ ವಿಶಿಷ್ಟ ಸೌಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಉಂಗುರವನ್ನು ಸಿದ್ಧ ಮಾಡಿದ ಬಳಿಕ ಅಲ್ಲಿನ ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ ನಂತರವೇ ಧರಿಸಿಕೊಳ್ಳುವುದು ಸಂಪ್ರದಾಯ.

ಕೇರಳದ ಪ್ರದರ್ಶನ ಕಲೆಗಳಲ್ಲಿ ಬಳಸುವ ಅನೇಕ ಸಾಧನ ಸಲಕರಣೆಗಳು, ವೇಷಭೂಷಣ ಗಳು ಮೊದಲಾದವುಗಳಲ್ಲಿ ಕೌಶಲ ಪೂರ್ಣವಾದ ಕಲಾತ್ಮಕತೆಯನ್ನು ಗುರುತಿಸಬಹುದು. ಸಂಗೀತೋಪಕರಣಗಳ ನಿರ್ಮಾಣವೂ ಇವುಗಳಲ್ಲಿ ಒಂದು. ಬಾರಿಸುವ, ಊದುವ ಎಷ್ಟೋ ವಾದ್ಯ ಪರಿಕರಗಳು ಕೇರಳದ ದೇವಸ್ಥಾನಗಳ ಆಚರಣೆ ಹಾಗೂ ಪ್ರದರ್ಶನ ಕಲೆಗಳ ಸಂದರ್ಭಗಳಲ್ಲಿ ಕಾಣಬಹುದಾಗಿದೆ. ಚೆಂಡೆ, ಮೃದಂಗ, ಡಕ್ಕೆ, ತಮಟೆ, ಮೊದಲಾದ ವಾದನ ಪರಿಕರಗಳನ್ನು ಕೇರಳದಲ್ಲಿಯೇ ನಿರ್ಮಿಸುತ್ತಾರೆ. ಹಾರ್ಮೋನಿಯಂ, ವೀಣೆ, ಕೊಳಲು ಮೊದಲಾದವುಗಳನ್ನು ಅಗತ್ಯಕ್ಕೆ ಅನುಗುಣವಾಗಿ ಅಲ್ಲಿಲ್ಲಿ ತಯಾರಿಸುತ್ತಾರೆ. ಕಥಕಳಿ, ಓಟನ್‌ತುಳ್ಳಲ್, ಕೃಷ್ಣನಾಟಂ, ಉತ್ಸವ ಆಚರಣೆಗಳ ಸಂದರ್ಭಗಳಲ್ಲಿ ಆನೆಗಳನ್ನು ಶೃಂಗರಿಸಲು ಬೇಕಾದ ಅಲಂಕಾರ ಸಾಮಗ್ರಿಗಳನ್ನು ಕಲಾತ್ಮಕವಾಗಿ ತಯಾರಿಸುವ ಕಲಾವಿದರೂ ಕೇರಳದಲ್ಲಿ ಸಾಕಷ್ಟಿದ್ದಾರೆ. ಕಥಕಳಿಯ ವೇಷಭೂಷಣಗಳ ನಿರ್ಮಾಣಕ್ಕೆ ಅಲಪ್ಪುೞ ಜಿಲ್ಲೆಯ ಕೆಲವು ಸ್ಥಳಗಳು ಹಾಗೂ ಚೆರುತುರುತ್ತಿಯ ಕೇರಳ ಕಲಾಮಂಡಲ ಪ್ರಸಿದ್ದವಾಗಿದೆ. ಉತ್ತರ ಕೇರಳದಲ್ಲಿ ಪ್ರಚಲಿತವಿರುವ ತೆಯ್ಯಂಗಳಿಗೆ ಬೇಕಾದ ವೇಷಭೂಷಣ ಗಳನ್ನು ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿ ತಯಾರಿಸಲಾಗುತ್ತದೆ. ತಲಚೇರಿ ಸರ್ಕಸ್‌ಗಳ ತವರುಮನೆಯೆಂದೇ ಪ್ರಸಿದ್ಧವಾಗಿದೆ. ಅಲ್ಲಿ ಸರ್ಕಸ್‌ಗಳಿಗೆ ಬೇಕಾದ ಎಲ್ಲಾ ತೆರನ ವಸ್ತುಗಳನ್ನು ತಯಾರಿಸುತ್ತಾರೆ. ಇವುಗಳಲ್ಲಿ ಬಿದಿರಿನ ಕಡ್ಡಿಗಳನ್ನು ಬಳಸಿ ತಯಾರಿಸುವ ಬಣ್ಣದ ಕೊಡೆಗಳ ಆಕರ್ಷಣೆ ವಿಶಿಷ್ಟವಾಗಿದೆ.

ಸಮುದ್ರದಿಂದ ದೊರೆಯುವ ಶಂಖ, ಚಿಪ್ಪುಗಳನ್ನು ಬಳಸಿ ವಿವಿಧ ಅಲಂಕರಣ ಸಾಮಗ್ರಿ ಗಳನ್ನು, ಪೇಪರ್ ವೈಟ್, ಆಷ್ ಟ್ರೇ, ಪಿನ್ ಕುಷನ್, ಕಿವಿಯ ಆಭರಣ ಮೊದಲಾದವು ಗಳನ್ನು ತಯಾರಿಸುವ ಜನರು ತಿರುವನಂತಪುಂನ ಕರಾವಳಿ ಪ್ರದೇಶದಲ್ಲಿದ್ದಾರೆ. ಬಳೆಗಳು, ಸರಗಳು, ಕೈ ಚೀಲಗಳು ಮೊದಲಾದವುಗಳನ್ನು ಚಿಪ್ಪುಗಳಲ್ಲಿ ತಯಾರಿಸುವ ಮೂಲಕ ಕಾಸರಗೋಡಿನ ಅನೇಕರು ಜೀವನ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಮೇಜಿನ ಮೇಲಿನ ಬಟ್ಟೆಗಳಲ್ಲಿ, ತಲೆದಿಂಬಿನ ಹೊದಿಕೆಗಳಲ್ಲಿ, ಸೀರೆಗಳಲ್ಲಿ, ಕರವಸ್ತ್ರ ಮೊದಲಾದವುಗಳಲ್ಲಿ ವಿವಿಧ ರೀತಿಯ ಚಿತ್ರಗಳನ್ನು ಬಿಡಿಸುವವರು ಕೇರಳದಲ್ಲಿ ಇದ್ದಾರೆ. ಬಟ್ಟೆಗಳ ಮೇಲಿನ ವಿನ್ಯಾಸಗಳಿಗೆ ಕೇರಳದಲ್ಲಿ ಮಾತ್ರವಲ್ಲ ಇತರೆಡೆಗಳಲ್ಲಿಯೂ ವಿಶೇಷ ಬೇಡಿಕೆಯಿದೆ.

ಇತ್ತೀಚಿನ ದಿನಗಳಲ್ಲಿ  ಕೇರಳದ ಕರಕುಶಲ ಕಲಾವಿದರು ವಿಭಿನ್ನ ರೀತಿಯ ವಿನೂತನ ಕಲಾ ವಸ್ತುಗಳನ್ನು ಸೃಷ್ಟಿಸುತ್ತಿದ್ದಾರೆ. ಅವುಗಳಲ್ಲಿ ಹೆಸರಿಸಲೇಬೇಕಾದ ಕಲಾರೂಪವೊಂದಿದೆ. ಕಡುಕಪ್ಪು ಬಣ್ಣದ ಬಟ್ಟೆಯಲ್ಲಿ ಬೈಹುಲ್ಲಿನ ತುಂಡುಗಳನ್ನು ಅಂಟಿಸಿ ಪ್ರಕೃತಿ ಚಿತ್ರಗಳನ್ನು, ವ್ಯಕ್ತಿಗಳ ಭಾವಚಿತ್ರಗಳನ್ನು ಮಾಡುವುದು ಇಲ್ಲಿನ ಕಲಾವಿದರಿಗೆ ಸಾಧ್ಯವಾಗಿದೆ. ಪ್ರಕೃತಿದತ್ತ ವಾಗಿ ದೊರೆಯುವ ಮರದ ತೊಗಟೆಗಳನ್ನು ಬಳಸಿ ಚಿತ್ರಿಸುವುದೂ ಇದೆ. ನಾಗರಬೆತ್ತವು ಪ್ರಕೃತಿದತ್ತವಾದರೂ ಅವುಗಳ ಬೆಲೆ ಬಹಳ ಅಧಿಕ. ಆ ಕಾರಣಕ್ಕಾಗಿ ಪ್ಲಾಸ್ಟಿಕ್‌ನ ಬೆತ್ತಗಳು ಬಳಕೆಗೆ ಬಂದಿವೆ. ಪ್ಲಾಸ್ಟಿಕ್ ಬೆತ್ತಗಳಿಂದ ವಿವಿಧ ವಸ್ತುಗಳನ್ನು ನಿರ್ಮಿಸಿ ಜನ ಉಪಯೋಗಿಸತೊಡಗಿದ್ದಾರೆ. ಪ್ರಕೃತಿದತ್ತವಾದ ವಸ್ತುಗಳಿಂದ ತಯಾರಿಸುತ್ತಿದ್ದ ಬಹುತೇಕ ಎಲ್ಲಾ ಕಲಾ ಕೌಶಲ್ಯಗಳು ಇಂದು ಪ್ಲಾಸ್ಟಿಕ್‌ನ ಮೂಲಕ ಪೂರೈಕೆಯಾಗುತ್ತಿವೆ.

ಕಳಮೆೞುತ್ತು

‘ಕಳಮೆೞುತ್ತು’ (ಕಳ ಬರೆಯುವುದು) ಕೇರಳದ ವಿಶಿಷ್ಟ ಸಾಂಪ್ರದಾಯಿಕ ಕಲೆ ಗಳಲ್ಲೊಂದು. ಧಾರ್ಮಿಕ ಹಿನ್ನೆಲೆಯುಳ್ಳ ಈ ಕಲೆ ನಾಗಾರಾಧನೆ ಹಾಗೂ ಭದ್ರಕಾಳಿ ಆರಾಧನೆಗೆ ಸಂಬಂಧಿಸಿದೆ. ಬಣ್ಣದ ಪುಡಿಗಳನ್ನು ಬಳಸಿ ನೆಲದ ಮೇಲೆ ಬರೆಯುವ ವಿವಿಧ ಚಿತ್ರಗಳನ್ನು ‘ಕಳಂ’ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಬಿಳಿಯ ಅಕ್ಕಿಪುಡಿ, ಇದ್ದಿಲು, ಅರಿಶಿನ, ಬಾಗೆ ಎಲೆಯ ಪುಡಿ ಮತ್ತು ಸುಣ್ಣದ ಪುಡಿಗಳನ್ನು ಬಣ್ಣಗಳಿಗಾಗಿ ಬಳಸಲಾಗುತ್ತದೆ. ಹೂವಿನ ಎಸಳುಗಳಿಂದಲೂ ಕಳ ಬರೆಯುವುದಿದೆ. ಇದಕ್ಕೆ ಪೂಕಳಂ ಎಂದು ಹೆಸರು. ಸಾಂಕೇತಿಕವೂ ಅಲಂಕೃತವೂ ಆದ ಪದ್ಮ, ಸ್ವಸ್ತಿಕ, ಚಕ್ರ ಮೊದಲಾದವುಗಳನ್ನು ಆರಾಧನೆಯ ಸಂದರ್ಭದಲ್ಲಿ ಬರೆದ ಬಳಿಕವೇ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ. ದುರ್ಗೆ, ಕಾಳಿ, ಶಾಸ್ತಾವ್, ವೇಟೆಕೊರಮಗನ್, ನಾಗ ಮೊದಲಾದವುಗಳ ಆರಾಧನೆಯ ಸಂದರ್ಭದಲ್ಲಿ ಕಳ ಬರೆದು ಶುದ್ದೀಕರಿಸುವ ಕ್ರಿಯೆ ಪ್ರಮುಖವಾದುದು. ಕಳಂ ಬರೆಯುವ ಸಂದರ್ಭದಲ್ಲಿ ಆಯಾ ದೇವತೆಗಳಿಗೆ ಸಂಬಂಧಿಸಿದ ಹಾಡುಗಳನ್ನು ಹಾಡುವುದೂ ಇದೆ.

ಸಾಮಾನ್ಯವಾಗಿ ಬ್ರಾಹ್ಮಣ ಮಹಿಳೆಯರು ಕಳ ಬರೆಯುವಲ್ಲಿ ನಿಷ್ಣಾತರಾಗಿದ್ದಾರೆ. ದಿನನಿತ್ಯ ರಂಗೋಲಿ ಬರೆಯುವಂತೆ ಬಿಳಿಯ ಪುಡಿಗಳನ್ನು ಬಳಸಿ ಕಳ ಬರೆಯುತ್ತಾರೆ. ನೆಲದ ಮೇಲೆ ಚುಕ್ಕೆಯಿರಿಸಿ ಅವುಗಳನ್ನು ರೇಖೆಗಳಿಂದ ಜೋಡಿಸಿ ಕಲಾತ್ಮಕವಾದ ವಿವಿಧ ಮಾದರಿಗಳನ್ನು ಬರೆಯುತ್ತಾರೆ. ದಿನನಿತ್ಯ ಬರೆಯುವ ಕಳಂ ಕಲಾತ್ಮಕವಾಗಿ ಮಾತ್ರ ಮುಖ್ಯವಾಗುತ್ತದೆ. ಅದರ ಧಾರ್ಮಿಕ ಸಂದರ್ಭದಲ್ಲಿ ಬರೆಯುವ ಕಳಂಗಳಿಗೆ ಧಾರ್ಮಿಕ ಮಹತ್ವವಿದೆ. ವಣ್ಣಾನರು ಮತ್ತು ಕುರುಪ್ಪರು ಕಳಂ ಬರೆಯುವ ಪ್ರಮುಖರು. ಇವರು ಇದನ್ನು ಕುಲವೃತ್ತಿಯಾಗಿಯೇ ಮುಂದುವರಿಸಿಕೊಂಡು ಬಂದಿರುತ್ತಾರೆ. ನೆಲದ ಮೇಲೆ ಬರೆಯುವ ಚಿತ್ರಗಳಲ್ಲಿ ಸರ್ಪಕಳಂ ಮತ್ತು ದೇವಿಕಳಂ ಮುಖ್ಯವಾಗಿದೆ. ಅನೇಕ ಹೆಡೆಗಳುಳ್ಳ ವಿವಿಧ ಶೈಲಿಯ ಸರ್ಪಗಳನ್ನು ಬಿಡಿಸುವ ಸಂಪ್ರದಾಯವು ನಾಗಾರಾಧನೆಗೆ ಸಂಬಂಧಿಸಿದೆ. ಕೇವಲ ಧಾರ್ಮಿಕ ಕಾರಣಗಳಿಗಾಗಿಯಷ್ಟೇ ಅಲ್ಲ, ಪುನರುಜ್ಜೀವನ ಕಲೆಯಾಗಿಯೂ ಕಳಮೆೞುತ್ತುಗೆ ಪ್ರಾಧಾನ್ಯವಿದೆ.

ಚಿತ್ರಕಲೆ

ಕೇರಳದ ಚಿತ್ರಕಲಾ ಪರಂಪರೆಗೆ ಅಜಂತಾ ಕಾಲಘಟ್ಟಕ್ಕಿಂತಲೂ ಪ್ರಾಚೀನತೆಯಿದೆ. ಕನ್ಯಾಕುಮಾರಿಯ ಹಾಗೂ ತಿರುವನಂತಪುರಂನಲ್ಲಿರುವ ಭಿತ್ತಿಚಿತ್ರಗಳನ್ನು ಕೇರಳದ ಚಿತ್ರಕಲೆಯ ಮೊದಲ ಮಾದರಿಗಳೆಂದು ಹೇಳಲಾಗುತ್ತದೆ. ಇವುಗಳಿಗೆ ಪಾಂಡ್ಯ ಶೈಲಿಯ ಪ್ರಭಾವವಿದೆಯೆಂಬುದು ತಜ್ಞರ ಅಭಿಪ್ರಾಯ. ಏಟ್ಟುಮಾನೂರು ಶಿವದೇವಾಲಯದಲ್ಲಿನ ಗೋಪುರದ ಭಿತ್ತಿಯಲ್ಲಿ ದುಷ್ಟ ರಾಕ್ಷಸನನ್ನು ತುಳಿದು ಕೊಂದು ನೃತ್ಯವಾಡುವ ನಟರಾಜನ ಚಿತ್ರವಿದೆ. ದ್ರಾವಿಡ ಚಿತ್ರಕಲೆಯ ಏಕಮಾತ್ರ ಪ್ರಾಚೀನ ಮಾದರಿ ಎಂದು ಇದನ್ನು ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಕಾಲ ಹದಿನಾರನೆಯ ಶತಮಾನ ಎಂದು ತಿಳಿಯ ಲಾಗಿದೆ.

ಭಿತ್ತಿಚಿತ್ರಗಳಿಗೆ ಸಂಬಂಧಿಸಿದಂತೆ ಕೇರಳದ ಎಲ್ಲಾ ದೇವಾಲಯಗಳು ಸಂಪತ್ಸಮೃದ್ಧ ವಾಗಿವೆ. ಪುರಾಣದ ಕಥಾಸನ್ನಿವೇಶಗಳನ್ನು, ಕಥಾ ಪಾತ್ರಗಳನ್ನು ಅನೇಕ ದೇವಾಲಯಗಳ ಗೋಡೆಗಳಲ್ಲಿ ಕಾಣಬಹುದು. ವೈಕಂನ ಮಹಾದೇವ ದೇವಾಲಯದಲ್ಲಿ ಸುಮಾರು ಇಪ್ಪತ್ತು ಚಿತ್ರಗಳಿವೆ. ಉದಯಪುರಂನ ಸುಬ್ರಹ್ಮಣ್ಯ ದೇವಾಲಯದ ಗಣಪತಿಯ ಚಿತ್ರವೂ ಸುಪ್ರಸಿದ್ಧವಾಗಿದೆ. ಗಣಪತಿ, ಸುಬ್ರಹ್ಮಣ್ಯರೊಡನಿರುವ  ಪಾರ್ವತೀ ಪರಮೇಶ್ವರರು, ನಟರಾಜ, ಅಶ್ವಾರೋಹಿಯಾದ ಶಾಸ್ತಾವ್, ಸಂತಾನಗೋಪಾಲ, ವಿಷ್ಣು ಮೊದಲಾದ ಚಿತ್ರಗಳೂ ಇವೆ. ತಿರುವನಂತಪುರಂನ ಶಿವದೇವಾಲಯದಲ್ಲಿರುವ ರಾಮಾಯಣದ ಯುದ್ಧ ದೃಶ್ಯಗಳು ಗಮನಾರ್ಹವಾಗಿವೆ. ತೃಶ್ಯೂರಿನ ವಡಕುನ್ನಾಥನ್ ದೇವಾಲಯದಲ್ಲಿರುವ ಶಂಕರನಾರಾಯಣ ದೇವಾಲಯದ ಗೋಡೆಯ ಚಿತ್ರಗಳಲ್ಲಿ ಕುರುಕ್ಷೇತ್ರದ ದೃಶ್ಯಗಳು, ಶಿವ, ದಕ್ಷಿಣಾಮೂರ್ತಿ, ಗಣಪತಿ ಮೊದಲಾದ ದೇವತೆಗಳು  ಮೊದಲಾದವು ಮುಖ್ಯವಾದವು ಗಳು. ಕೇರಳದ ಚಿತ್ರಕಲೆ ಅತ್ಯಂತ ಸಜೀವವಾಗಿದ್ದ ೧೭ ಹಾಗೂ ೧೮ನೆಯ ಶತಮಾನಗಳ ಅವಧಿಯಲ್ಲಿ ಇವುಗಳನ್ನು ಚಿತ್ರಿಸಲಾಗಿದೆ.

ತಲಶ್ಯೇರಿ ತಾಲೂಕಿನ ಕಣ್ಣವತ್ತಿನ ಸಮೀಪವಿರುವ ತೊಡಿಕಳಂ ದೇವಸ್ಥಾನದಲ್ಲಿ ರುಕ್ಮಿಣಿ ಸ್ವಯಂವರ, ರಾವಣವಧೆ ವೊದಲಾದ ಪೌರಾಣಿಕ ದೃಶ್ಯಗಳನ್ನು ಕಾಣಬಹುದು. ತಿರುಮುಳಿ ಕುಳಂನ ಲಕ್ಷ್ಮಣ ದೇವಸ್ಥಾನದಲ್ಲಿ ಆರನ್ಮುಳದ ವಿಷ್ಣುದೇವಸ್ಥಾನದ ಗೋಡೆಗಳಲ್ಲಿ ಅನೇಕ ಚಿತ್ರಗಳಿವೆ. ಅರಮನೆಗಳಲ್ಲಿ ಹಿಂದೂ ಮತಕ್ಕೆ ಸಂಬಂಧಿಸಿದ ಅನೇಕ ಭಿತ್ತಿಚಿತ್ರಗಳಿವೆ.

ಪದ್ಮನಾಭಪುರ ಅರಮನೆಯಲ್ಲಿ ಅನಂತಶಯನ, ಲಕ್ಷ್ಮೀನಾರಾಯಣ, ಅರ್ಧನಾರೀಶ್ವರ, ಗೋಪೀಕೃಷ್ಣ, ನಟರಾಜ ಮೊದಲಾದ ಅನೇಕ ಸುಂದರ ಚಿತ್ರಗಳಿವೆ. ಮಟ್ಟಾಂಚೇರಿ ಅರಮನೆಯ ಗೋಡೆಗಳಲ್ಲಿ ರಾಮಾಯಣ ದೃಶ್ಯಗಳನ್ನು ಚಿತ್ರಿಸಲಾಗಿದೆ. ಅಲ್ಲದೆ ಕುಮಾರಸಂಭವದ ಚಿತ್ರಗಳೂ ಆ ಅರಮನೆಯ ಗೋಡೆಗಳಲ್ಲಿವೆ. ಕೃಷ್ಣಪುರಂ ಅರಮನೆ ಯಲ್ಲಿನ ಹದಿನಾಲ್ಕು ಅಡಿ ಉದ್ದ ಹಾಗೂ ಹನ್ನೊಂದು ಅಡಿ ಅಗಲವಿರುವ ಗಜೇಂದ್ರ ಮೋಕ್ಷದ ಚಿತ್ರ ಅದ್ಭುತ ಕಲಾ ಸೃಷ್ಟಿಗಳಲ್ಲಿ ಒಂದೆಂದು ವಿದ್ವಾಂಸರ ಅಭಿಪ್ರಾಯ.

ಕೇರಳದ ಇಗರ್ಜಿಗಳ ಗೋಡೆಗಳಲ್ಲಿಯೂ ಅನೇಕ ಮನೋಹರ ಚಿತ್ರಗಳನ್ನು ಕಾಣಬಹುದು. ಯೇಸುವಿನ ಚಿತ್ರವನ್ನು ಹಾಗೂ ಬೈಬಲ್‌ನ ವಿವಿಧ ದೃಶ್ಯಗಳನ್ನು ಅನೇಕ ಇಗರ್ಜಿಗಳಲ್ಲಿ ಚಿತ್ರಿಸಲಾಗಿದೆ. ಸ್ಥಳೀಯ ಕಲಾವಿದರು ಚಿತ್ರಿಸಿದ ಈ ತೆರನ ಅನೇಕ ಚಿತ್ರಗಳಲ್ಲಿ ಕೇರಳದ ಸಾಂಸ್ಕೃತಿಕ ಹಿನ್ನೆಲೆಯನ್ನು ಗುರುತಿಸಬಹುದು.

೧೮ನೆಯ ಶತಮಾನದ ಉತ್ತರಾರ್ಧ ಹಾಗೂ ೧೯ನೆಯ ಶತಮಾನದ ಪೂರ್ವಾರ್ಧದಲ್ಲಿ ಕೇರಳದ ಚಿತ್ರಕಲೆಗೆ ಹೇಳಿಕೊಳ್ಳುವಂತಹ ಪ್ರೋತ್ಸಾಹ ಇದ್ದಿರಲಿಲ್ಲ. ಬಳಿಕ ಸ್ವಾತಿತಿರುನಾಳ್ (೧೮೨೦-೪೭) ಮಹಾರಾಜನ ಪ್ರೋತ್ಸಾಹ ಕಾರಣದಿಂದ ಮತ್ತೆ ಚಿತ್ರಕಲೆಗೆ ಹೊಸ ಚೈತನ್ಯ ಲಭಿಸಿತು. ಈ ಕಾಲಘಟ್ಟದಲ್ಲಿ ಪಾಶ್ಚಾತ್ಯರ ಪ್ರಭಾವದ ಚಿತ್ರಗಳಿಗೆ ಹಿಂದಿಲ್ಲದ ಪ್ರೋತ್ಸಾಹ ಲಭ್ಯವಾಯಿತು. ಹೊರನಾಡುಗಳಿಂದ ಚಿತ್ರ ಕಲಾವಿದರನ್ನು ಸ್ವಾತಿತಿರುನಾಳ್ ತನ್ನ ಆಸ್ಥಾನಕ್ಕೆ ಬರಮಾಡಿಕೊಂಡನು. ಸ್ವಾತಿತಿರುನಾಳನ ಆಸ್ಥಾನ ಕಲಾವಿದರಲ್ಲೊಬ್ಬನಾದ ಮದುರೈಯ ಅಳಗಿರಿನಾಯ್ಡು ಕಿಳಿಮಾನೂರು ರಾಜಕುಟುಂಬದ ಕಲಾವಿದನಾದ ರಾಜರಾಜವರ್ಮನಿಗೆ ಚಿತ್ರಕಲೆಯ ಗುರುವಾಗಿದ್ದನು. ಯುವ ತಲೆಮಾರುಗಳನ್ನು ಚಿತ್ರ ಕಲಾವಿದರನ್ನಾಗಿಸುವ ನಿಟ್ಟಿನಲ್ಲಿ ತರಬೇತಿ ನೀಡಲು ರಾಜರಾಜವರ್ಮನಿಗೆ ಸ್ವಾತಿತಿರುನಾಳ್ ಮಹಾರಾಜನು ಎಲ್ಲಾ ರೀತಿಯ ಅನುಕೂಲಗಳನ್ನು ಒದಗಿಸಿದ್ದನು. ಹೀಗೆ ತರಬೇತಿ ಪಡೆದವರಲ್ಲಿ ಸಹೋದರಿಯ ಮಕ್ಕಳಿಬ್ಬರು ಪ್ರಸಿದ್ಧರಾಗಿದ್ದರು. ಅವರೆಂದರೆ ವಿಶ್ವವಿಖ್ಯಾತರಾದ ರಾಜಾರವಿವರ್ಮ ಮತ್ತು ಅವನ ಸಹೋದರನಾದ ಸಿ. ರಾಜಾರಾಜವರ್ಮ. ಈ ಸಹೋದರರಿಗೆ ಯುರೋಪಿನ ತೈಲಚಿತ್ರಗಳ ರಚನೆಗಳಿಗೆ ಇಲ್ಲಿ ತರಬೆೇತಿ ದೊರೆತಿತ್ತು. ತೈಲ ವರ್ಣ ಚಿತ್ರಗಳಿಗಾಗಿಯೇ ರಾಜಾರವಿವರ್ಮ ಪ್ರಖ್ಯಾತವಾದುದು. ಪೌರಾಣಿಕ ದೃಶ್ಯಗಳನ್ನು ಚಿತ್ರಿಸುವಲ್ಲಿ ರಾಜಾರವಿವರ್ಮನಿಗೆ ವಿಶೇಷ ಆಸಕ್ತಿ, ಅವನ ಸಹೋದರನಿ ಗಾದರೋ ಪ್ರಕೃತಿ ಹಾಗೂ ಮನುಷ್ಯರ ಚಿತ್ರಗಳ ಕಡೆಗೆ ಹೆಚ್ಚಿನ ಆಕರ್ಷಣೆ. ರಾಜಾರವಿವರ್ಮನು ರಚಿಸಿದ ಚಿತ್ರಗಳು ಕೇರಳದಲ್ಲಷ್ಟೇ ಅಲ್ಲ ಭಾರತದ ಬಹುತೇಕ ಚಿತ್ರ ಪ್ರದರ್ಶನಾಲಯಗಳಲ್ಲಿಯೂ ಕಾಣಬಹುದು. ಮಹಿಳೆಯರ ಹಾಗೂ ಮಕ್ಕಳ ಚಿತ್ರವನ್ನು ರಚಿಸುವಲ್ಲಿ ಹೆಸರುವಾಸಿಯಾದ ಮಂಗಳಾಬಾಯಿ ತಂಬುರಾಟ್ಟಿ ರಾಜಾರವಿವರ್ಮನ ಸಹೋದರಿ. ಇವರ ಚಿತ್ರ ರಚನೆಯ ಮಾದರಿಯನ್ನು ಅನುಕರಿಸುವ ಕಲಾವಿದರು ಕೇರಳದಲ್ಲಿ ಇದ್ದರೂ ಸಹ ಈ ಪರಂಪರೆಯ ಸಮರ್ಥ ಪ್ರತಿನಿಧಿಗಳಾಗಲಿಲ್ಲ. ನಂತರದ ದಿನಗಳಲ್ಲಿ ಕೇರಳದಲ್ಲಿ ಪ್ರಸಿದ್ಧರಾದ ಇಬ್ಬರು ಚಿತ್ರಕಲಾವಿದರೆಂದರೆ ಕೆ. ಮಾಧವ ಮೇನೋನ್ ಹಾಗೂ ಕೆ.ಸಿ. ಎಸ್. ಪಣಿಕ್ಕರ್. ಪ್ರಾಣಿ ಪಕ್ಷಿಗಳ ಚಿತ್ರಗಳನ್ನು ರಚಿಸುವಲ್ಲಿ ಇವರು ಸಮರ್ಥರು. ಪರಂಪರಾಗತವಲ್ಲದ ವಿನೂತನ ಶೈಲಿಯ ರಚನೆಗಳನ್ನು ಮಾಡಿದ್ದರಿಂದ ಗಮನಾರ್ಹರೆನಿಸಿದವರಿವರು.

ಕೇರಳದ  ಚಿತ್ರಕಲೆಗೆ ಪಾಶ್ಚಾತ್ಯರ ಪ್ರೇರಣೆ, ಪ್ರಭಾವ ಇದ್ದರೂ ಸಹ  ದೇಸೀಯವಾದ ಸಾಂಸ್ಕೃತಿಕ ಪರಿವೇಷದ ಮೂಲಕವೇ ಅವು ರೂಪು ಪಡೆದಿವೆ. ಬೇರೆ ಬೇರೆ ಕಾಲಘಟ್ಟದಲ್ಲಿ ಆಡಳಿತಾತ್ಮಕವಾಗಿ ಪ್ರಭಾವಿಸಿದ ವಿದೇಶೀಯರು, ವ್ಯಾಪಾರ ವ್ಯವಹಾರಗಳ ಕಾರಣಗಳಿಗಾಗಿ ಕೇರಳಕ್ಕೆ ಬಂದವರು ಇಲ್ಲಿನ ಚಿತ್ರಕಲೆಯನ್ನು ಪ್ರೋತ್ಸಾಹಿಸಿದರು.