ಕೇರಳ ಸಂಸ್ಕೃತಿಯ ಅವಿಚ್ಛಿನ್ನವಾದ ಪ್ರವಾಹದಲ್ಲಿ ಕರಕುಶಲ ಕಲೆಗಳಿಗೂ ವಿಶೇಷವಾದ ಪ್ರಾಶಸ್ತ್ಯವಿದೆ. ಶೈಲಿಯಲ್ಲಿನ ಅನನ್ಯತೆ, ರಚನಾ ಕೌಶಲ್ಯ ಹಾಗೂ ಸೌಂದರ್ಯದ ದೃಷ್ಟಿಯಿಂದ ಪ್ರತ್ಯೇಕವಾದ ಸ್ಥಾನವನ್ನು ಉಳಿಸಿಕೊಂಡಿದೆ. ಪ್ರಾಚೀನ ಕಾಲದಿಂದಲೇ ಇವು ಜನಜೀವನದೊಂದಿಗೆ ಹಾಸು ಹೊಕ್ಕಾಗಿ ಬೆರತು ಹೋಗಿವೆ. ಅವುಗಳ ಸೌಂದರ್ಯ ದೃಷ್ಟಿ ಹಾಗೂ ಜನರ ಜೀವನ ದೃಷ್ಟಿಗಳಿಗೆ ಒಂದು ರೀತಿಯ ಬೆಸುಗೆ ಎಲ್ಲಾ ಕಾಲಘಟ್ಟಗಳಲ್ಲಿ ಸಾಧ್ಯವಾಗಿದೆ. ಕಲಾವಿದರಿಗೆ ಪ್ರಾಕೃತಿಕ ಕೇರಳವು ಅನೇಕ ಕಲಾ ಸಾಮಗ್ರಿಗಳನ್ನು ಒದಗಿಸಿಕೊಟ್ಟಿದೆ. ಸಾಮಾಜಿಕ ಬದುಕಿಗೂ ಈ ಮೂಲಕ ಅನೇಕ ಕಲಾವಸ್ತುಗಳ ಕೊಡುಗೆಗಳನ್ನು ನೀಡಿವೆ. ಪರಂಪರಾಗತವಾದ ಅನೇಕ ಕರಕುಶಲ ವಸ್ತುಗಳು ತಲೆಮಾರಿನಿಂದ ತಲೆಮಾರಿಗೆ ಉಳಿದುಕೊಂಡು ಬರಲು ಆಯಾ ಕಲಾವಿದರು ತಮ್ಮ ಕುಲಕಸುಬಿನೊಡನೆ ಇರಿಸಿಕೊಂಡ ವೃತ್ತಿ ಗೌರವವೇ ಕಾರಣವಾಗಿದೆ.

ರಾಜ ಮಹಾರಾಜರುಗಳ ಅರಮನೆಗಳಲ್ಲಿ, ಜಮೀನ್ದಾರರ ಮನೆಗಳಲ್ಲಿ, ದೇವಾಲಯಗಳ ಪರಿಸರದಲ್ಲಿ, ಕಲಾವಿದರ ಕರಕೌಶಲ್ಯವು ಮೊಳೆತು, ನೆಲೆನಿಂತಿರುವುದನ್ನು ಕಾಣಬಹುದು. ಅರಮನೆಗಳ ಹಾಗೂ ದೇವಾಲಯಗಳ ಕಾಷ್ಠಶಿಲ್ಪಗಳಲ್ಲಿ, ಭಿತ್ತಿ ಚಿತ್ರಗಳಲ್ಲಿ ಸೂಕ್ಷ್ಮ ಕೆತ್ತನೆಯ ಕೆಲಸಗಳು ಕಲಾ ಸೌಂದರ್ಯವನ್ನು ಕಾಣಬಹುದು. ಅರಮನೆಗಳು ಶಿಥಿಲವಾಗಿ ದೇವಾಲಯಗಳ ಕುರಿತ ಸೇವಾ ಮನೋಭಾವ ಶ್ರದ್ಧೆೆಗಳು ಕಡಿಮೆಯಾದಂತೆ ಪರಾಕಾಷ್ಠ ಸ್ಥಿತಿಯೊಂದನ್ನು ತಲುಪಿದ ಅನೇಕ ಶಿಲ್ಪಕಲೆಗಳು ಬೆಳವಣಿಗೆಯನ್ನು ಸ್ಥಗಿತಗೊಳಿಸಿದವು. ಆದರೆ ನಂತರದ ದಿನಗಳಲ್ಲಿ ಹಲವು ತೆರನ ಗೃಹೋಪಯೋಗಿ ಸಾಧನಗಳ ಹಾಗೂ ಗೃಹಾಲಂಕರಣ ವಸ್ತುಗಳ ಅಗತ್ಯಗಳು ಹೆಚ್ಚಾದಂತೆ ಕಲಾವಿದರು ತಮ್ಮ ಕಲಾ ಸಾಮರ್ಥ್ಯದ ಮೂಲಕ ಹೊಸ ಹೊಸ ಕರಕುಶಲ ವಸ್ತುಗಳನ್ನು ಸಿದ್ಧಪಡಿಸಲು ತೊಡಗಿದರು. ಇಂತಹ ವಸ್ತುಗಳಿಗೆ ಸ್ಥಳೀಯವಾಗಿ ಮಾತ್ರವಲ್ಲ ಹೊರನಾಡುಗಳಲ್ಲೂ ಸಾಕಷ್ಟು ಬೇಡಿಕೆಗಳಿವೆ. ಅನೇಕ ಕಲಾವಿದರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಿರ್ದಿಷ್ಟ ವಸ್ತುಗಳ ತಯಾರಿಯ ಮೂಲಕ ಒಂದು ರೀತಿಯ ಕುಲಕಸುಬಿನಂತೆ ಪ್ರೀತಿ, ಗೌರವಗಳನ್ನು ಇರಿಸಿಕೊಂಡಿದ್ದಾರೆ. ಹಿಂದೆ ಇಂತಹ ಕಲಾವಿದರು ಪುರಾಣೇತಿಹಾಸಗಳಿಂದ ತಮ್ಮ ಸೃಷ್ಟಿಯ ವಸ್ತುಗಳಿಗೆ ಪ್ರಚೋದನೆ ಪಡೆದಿರಬಹುದು. ಆದರೆ ಇಂದು ಪ್ರಕೃತಿಯಿಂದ, ಜನಪದ ಬದುಕಿನಿಂದ ವಿಷಯಗಳನ್ನು ಗ್ರಹಿಸಿ ಉಪಯೋಗಿ ನೆಲೆಯಿಂದ ಅವರು ವಿವಿಧ ವಸ್ತುಗಳನ್ನು ಸಿದ್ಧಪಡಿಸುತ್ತಿದ್ದಾರೆ.

ಕರಕುಶಲ ವಸ್ತುಗಳನ್ನು ನಿರ್ಮಾಣ ಮಾಡುವ ನೂರಾರು ಸಂಘ-ಸಂಸ್ಥೆಗಳು ಕೇರಳದಲ್ಲಿವೆ. ಹಾಗೆಯೇ ಸಾವಿರಾರು ಜನರಿಗೆ ಉದ್ಯೋಗಾವಕಾಶವನ್ನು ಅವು ನೀಡಿವೆ. ಈ ಹಿನ್ನೆಲೆಯಲ್ಲಿ ನೋಡಿದರೆ ಅತ್ಯಂತ ಹೆಚ್ಚು ಅವಕಾಶಗಳನ್ನು ನೀಡಿದ ವಿಭಾಗವೆಂದರೆ ದಂತ, ಕೋಡು ಮೊದಲಾದವುಗಳ ಮೇಲಿರುವ ಕೆತ್ತನೆ ಕೆಲಸಗಳು. ಬಿದಿರು, ಓಲೆಗರಿಗಳ ನೆಯ್ಗೆ, ಬೆತ್ತದ ಆಸನ ವಸ್ತುಗಳು, ವಿವಿಧ ಗೃಹಾಲಂಕಾರ ವಸ್ತುಗಳು ಮೊದಲಾದವುಗಳಲ್ಲಿ ಕರಕೌಶಲ್ಯಗಳ ಕುಸುರಿ ಕೆಲಸಗಳನ್ನು ಕಾಣಬಹುದು. ಹಾಗೆಯೇ ತೆಂಗಿನ ಚಿಪ್ಪು, ಮರ ಮೊದಲಾದವುಗಳ ಮೇಲೂ, ರೇಷ್ಮೆ, ಚಿನ್ನ, ಕಂಚು ವೊದಲಾದವುಗಳಲ್ಲಿ ತಯಾರಿಸುವ ವಿವಿಧ ವಿನ್ಯಾಸಗಳಲ್ಲಿ ಕೇರಳೀಯರ ಕರಕೌಶಲ್ಯಗಳಿವೆ. ಅತ್ಯಂತ ಹೆಚ್ಚು ಕೇಂದ್ರಗಳು ಹಾಲುಕಂಚಿನಲ್ಲಿ ವಿವಿಧ ವಿನ್ಯಾಸಗಳನ್ನು ತಯಾರಿಸುವ ಕೆಲಸಗಳಲ್ಲಿ ನಿರತವಾಗಿರುವುದನ್ನು ಕಾಣಬಹುದು. ನೆಯ್ಗೆ, ಬಿದಿರು ಕೆಲಸಗಳು, ಅನುಕ್ರಮವಾಗಿ ಎರಡನೆಯ ಹಾಗೂ ಮೂರನೆಯ ಸ್ಥಾನವನ್ನು ಪಡೆದಿವೆ. ತೃಶ್ಶೂರ್ ಜಿಲ್ಲೆಯಲ್ಲಿ ಗುಡಿ ಕೈಗಾರಿಕೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ. ಪಾಲಕ್ಕಾಡ್ ಜಿಲ್ಲೆ ಎರಡನೆಯ ಸ್ಥಾನದಲ್ಲಿದೆ. ಗುಡಿ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಸಂಬಂಧಿಸಿದಂತೆ ಗಮನಾರ್ಹವಾದ ಸಂಗತಿ ಯೊಂದಿದೆ. ಅವರಲ್ಲಿ ಹೆಚ್ಚಿನವರೂ ತಮ್ಮ ವೃತ್ತಿಯನ್ನು ಪರಂಪರೆಯಿಂದ  ಕುಲ ಕಸುಬನ್ನಾಗಿ ಉಳಿಸಿಕೊಂಡು ಬಂದವರಾಗಿದ್ದಾರೆ. ಚೆಂಬೊಟ್ಟಿ (ಹಿತ್ತಾಳೆ ಕೆಲಸಗಾರ, ಕಂಚುಗಾರ), ತಟ್ಟಾನ್  (ಅಕ್ಕಸಾಲಿಗ), ಕನ್ನಾನ್ ತಚ್ಚನ್  (ಬಡಗಿ), ಕೊಲ್ಲನ್ ಅಥವಾ ಕರುವಾನ್ (ಕಮ್ಮಾರ) ಮೊದಲಾದ ಜಾತಿವಾಚಕ ಪದಗಳು ಈ ವಸ್ತುಸ್ಥಿತಿಯನ್ನು ಸೂಚಿಸುತ್ತದೆ. ಕರ್ನಾಟಕದ ಸದಂರ್ಭದಲ್ಲೂ ಇಂತಹ ಜಾತಿವಾಚಕ ಪದಗಳು ವೃತ್ತಿಯ ಕಾರಣದಿಂದ ಉಳಿದುಕೊಂಡು ಬಂದಿವೆ. ಕೇರಳದ ಸಂದರ್ಭದಲ್ಲಿ ಇಂದು ವೃತ್ತಿ ಹಾಗೂ ಜಾತಿಗಿರುವ ಸಂಬಂಧಗಳು ಶಿಥಿಲಗೊಂಡಿವೆಯೆಂದೇ ಹೇಳಬಹುದು. ಜೀವನೋಪಾಯಕ್ಕಾಗಿ ಆತ್ಮಸಂತೋಷಕ್ಕಾಗಿ ಯಾವ ಕೆಲಸವನ್ನಾದರೂ ಮಾಡಬಹುದು  ಎಂಬ ವಾಸ್ತವ ಇಂದಿದೆ.

ಇತಿಹಾಸದ ದಾಖಲೆಗಳ ಪ್ರಕಾರ ಕ್ರಿ.ಶ. ೮ನೆಯ ಶತಮಾನದಿಂದಲೇ ಕೇರಳೀಯರು  ಕೆತ್ತನೆ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಪ್ರಾಚೀನ ಕಾಲದಿಂದಲೂ ಕೇರಳದ ಕಲಾವಿದರು ಮತೀಯವಾದ ಹಾಗೂ ಮತೇತರವಾದ ಅಗತ್ಯಗಳಿಗಾಗಿ ದೇವತೆಗಳ ವಿಗ್ರಹ ಗಳನ್ನು ದೀಪಗಳನ್ನು ಕಂಚಿನಿಂದ ತಯಾರಿಸುತ್ತಿದ್ದರು. ಇವತ್ತಿಗೂ ಕೂಡಾ ಗೃಹೋಪಯೋಗಿ ಪಾತ್ರೆಗಳು, ದೀಪಗಳು ಹಾಗೂ ವಿಗ್ರಹಗಳನ್ನು ಕಂಚಿನಿಂದ ತಯಾರಿಸಿರುವುದನ್ನು ಕಾಣಬಹುದು. ದೊಡ್ಡ ಉರುಳಿ, ಗಿಂಡಿ, ಲೋಟ ಮೊದಲಾದ ಪಾತ್ರೆಗಳು, ಸೌಟುಗಳು ಇತ್ಯಾದಿ ಗೃಹೋಪಯೋಗಿ ವಸ್ತುಗಳನ್ನು ಕಂಚಿನಿಂದ ತಯಾರಿಸುತ್ತಿದ್ದರು.

ಗುರುವಾಯೂರು ದೇವಸ್ಥಾನದ ಒಂದು ಕೊಪ್ಪರಿಗೆಯು ಆರು ಅಡಿ ನಾಲ್ಕೂವರೆ ಇಂಚು ವ್ಯಾಸ. ಒಂದು ಅಡಿ ಒಂಭತ್ತು ಇಂಚು ಆಳವೂ ಇದೆ. ಪದ್ಮನಾಭಸ್ವಾಮಿ ದೇವಸ್ಥಾನದ ಒಂದು ಕೊಪ್ಪರಿಗೆಗೆ ಆರಡಿ ಒಂದೂವರೆ ಇಂಚು ವ್ಯಾಸ ಹಾಗೂ ಎರಡಡಿ ಆರು ಇಂಚು ಆಳವೂ ಇದೆ. ದೊಡ್ಡ ಪ್ರಮಾಣದ ಅಡುಗೆ ತಯಾರಿಯ ಸಂದರ್ಭದಲ್ಲಿ  ಈ ತೆರನ ಕೊಪ್ಪರಿಗೆಗಳನ್ನು ಉಪಯೋಗಿಸುತ್ತಿದ್ದರು.

ತೂಗುದೀಪ, ಕಾಲುದೀಪ, ಗೋಡೆದೀಪ, ಕೈದೀಪ ಹೀಗೆ ಪ್ರಮುಖವಾದ ನಾಲ್ಕು ವಿಧವಾದ ದೀಪಗಳನ್ನು ಕೇರಳದಲ್ಲಿ ಕಾಣಬಹುದು. ‘ಚಙಲವಟ್ಟ’ (ಸರಪಳಿದೀಪ) ಎಂಬ ಹೆಸರಿನ ಗಿಳಿಯಾಕೃತಿಯನ್ನು ಹೋಲುವ ಒಂದು ತೆರನ ದೀಪವನ್ನು ಕೇರಳದ ದೇವಾಲಯ ಗಳಲ್ಲಿ ಕಾಣಬಹುದು. ಅರ್ಚನದೀಪ, ಆರತಿದೀಪ, ದೀಪಸ್ಥಂಭ ಮೊದಲಾದವನ್ನು ದೇವಾಲಯಗಳಲ್ಲಿ ವಿವಿಧ ಕಾರ್ಯಕ್ರಮಗಳ ಸಂದರ್ಭದಲ್ಲಿ ಬಳಸಲಾಗುತ್ತದೆ. ನವಿಲಿನ ರೂಪದಲ್ಲಿ ವಿವಿಧ ಪ್ರಾಣಿಗಳ, ಹೂಗಳ ಆಕಾರವನ್ನು ಬತ್ತಿ ಇಡುವ ಜಾಗದಿಂದ ಮೇಲ್ಭಾಗದಲ್ಲಿ ಮಾಡಿರುವುದೂ ಇದೆ. ಜ್ಯೋತಿ ಬೆಳಗುವುದಷ್ಟೇ ಅಲ್ಲದೆ ಅಲಂಕಾರಿಕ ವಸ್ತುವಾಗಿಯೂ ದೀಪವನ್ನು ನಿರ್ಮಿಸುತ್ತಿದ್ದರು. ನವಿಲು ದೀಪ, ಹಂಸದೀಪ, ವಿಮಾನ ದೀಪ, ಮೊದಲಾದವು ಇವುಗಳಲ್ಲಿ ಪ್ರಮುಖವಾದವುಗಳು. ಎಲ್ಲಾ ಮತಾಚರಣೆಗಳ ಹಾಗೂ ಸಾಮಾಜಿಕ ಸಂದರ್ಭಗಳಲ್ಲಿ ದೀಪಕ್ಕೆ ಇಂದಿಗೂ ಪ್ರಾಮುಖ್ಯವಿದೆ. ಕಥಕಳಿಯಂತಹ ದೇವಸ್ಥಾನದ ಕಲಾ ಪ್ರಕಾರಗಳಲ್ಲೂ ಉಪೋಗಿಸುವ ದೀಪಗಳಿಗೆ ದೈವಿಕ ಪರಿವೇಶ ಕೂಡ ಸೇರಿಕೊಂಡಿದೆ. ಹೊಸತಾಗಿ ಆರಂಭಿಸುವ ಎಲ್ಲಾ ಕೆಲಸಗಳಿಗೆ ನಾಂದಿ ಹಾಡುವುದು ದೀಪ ಹಚ್ಚುವುದರ ಮೂಲಕವೇ ಆಗಿದೆ. ಹಿಂದೂಗಳ ವಿವಾಹ ಮಂಟಪದಲ್ಲಿ ಬತ್ತ ತುಂಬಿದ ಪರೆಯಲ್ಲಿ ಕಾಲು ದೀಪವನ್ನು ಉರಿಸಿಡುವುದು ಸಂಪ್ರದಾಯ. ಹಳ್ಳಿ ಹಳ್ಳಿಗಳಿಗೂ ವಿದ್ಯುತ್ ದೀಪಗಳು ಬಂದಿದ್ದರೂ ಕೇರಳೀಯರು ಮನೆಗಳ ಮುಂದೆ ತೆಂಗಿನೆಣ್ಣೆಯಲ್ಲಿ ದೀಪ ಉರಿಸುವ ಸಂಪ್ರದಾಯವನ್ನು ಉಳಿಸಿಕೊಂಡಿದ್ದಾರೆ. ಈ ಕಾರಣದಿಂದ ಕೇರಳೀಯರಿಗೆ ಎಣ್ಣೆ ದೀಪಗಳು ಬದುಕಿನ ಭಾಗವಾಗಿದೆ.

ಕುಂಕುಮ ಕರಂಡಕಗಳು, ಕಳಶ ಗಿಂಡಿಗಳು, ಹೂದಾನಿಗಳು ಮೊದಲಾದ ಅನೇಕ ಅಲಂಕಾರ ವಸ್ತುಗಳನ್ನು ಕಂಚಿನಿಂದ ತಯಾರಿಸುತ್ತಾರೆ. ದೇವ ದೇವಿಯರ ವಿಗ್ರಹಗಳನ್ನು, ವ್ಯಕ್ತಿಗಳ ಪ್ರತಿಮೆಗಳನ್ನು ಅಗತ್ಯಗಳಿಗೆ ಅನುಗುಣವಾಗಿ ಕಂಚಿನಿಂದ ನಿರ್ಮಿಸುವುದಿದೆ. ಸಾಮಾನ್ಯವಾಗಿ ಪಂಚಲೋಹಗಳಿಂದ ಈ ತೆರನ ವಿಗ್ರಹಗಳನ್ನು ತಯಾರಿಸಲಾಗುತ್ತದೆ. ತಂತ್ರ ಸಮುಚ್ಛಯಂ, ಶಿಲ್ಪರತ್ನಂ ಮೊದಲಾದ ಗ್ರಂಥಗಳಲ್ಲಿ ಉಕ್ತವಾದ ರೀತಿಯಲ್ಲಿಯೇ ಈಗಲೂ ವಿಗ್ರಹಗಳನ್ನು ನಿರ್ಮಿಸಲಾಗುತ್ತದೆ. ತೃಶ್ಶೂರಿನ ಕುರ್‌ಕಂಚೇರಿಯಲ್ಲಿರುವ ಶ್ರೀನಾರಾಯಣಗುರುವಿನ ಪೂರ್ಣಕಾಯ ಪ್ರತಿಮೆಯು ಇತ್ತೀಚಿಗೆ ನಿರ್ಮಾಣವಾದ ಪಂಚಲೋಹ ಪ್ರತಿಮೆಗಳಲ್ಲಿ ಗಮನಾರ್ಹವಾಗಿದೆ.

ಪಾಲಕ್ಕಾಡ್, ಇರಿಂಜಾಲಕುಡ, ತೃಶ್ಶೂರ್, ಪೞಯನ್ನೂರ್, ಮಾನ್ನಾರ್, ಕೋಝಿ ಕೋಡ್, ಚಿಟ್ಟೂರ್, ಮೂವಾಟ್ಟಿಪುೞ ಇವು ಕೇರಳದ ಕಂಚು ವ್ಯವಸಾಯ ಕೇಂದ್ರಗಳಲ್ಲಿ ಹೆಸರಿಸಲೇಬೇಕಾದವುಗಳು. ಇತ್ತೀಚಿನ ದಿನಗಳಲ್ಲಿ ಮುಸಲ್ಮಾನರು ಕ್ರಿಶ್ಚಿಯನರು ಈ ವೃತ್ತಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಈಗಲೂ ಕಂಚುಗಾರರ ಒಂದು ವಿಭಾಗವಾದ ಮೂಶಾರಿಗಳೇ ಈ ಕ್ಷೇತ್ರದಲ್ಲಿ ಇಂದಿಗೂ ಪರಿಣತಿ ಪಡೆದ ಕುಸುರಿ ಕೆಲಸಗಾರರೆನಿಸಿದ್ದಾರೆ.

ಆರನ್ಮುಳ ಕನ್ನಡಿ

ಕೇರಳದ ಕಂಚಿನ ಕರಕುಶಲ ವಸ್ತುಗಳನ್ನು ಕುರಿತು ಹೇಳುವಾಗ ಆರನ್ಮುಳ ಕನ್ನಡಿಯನ್ನು ಕುರಿತು ಪ್ರತ್ಯೇಕವಾಗಿ ಹೇಳಲೇಬೇಕು. ಪಾದರಸವನ್ನು ಹಚ್ಚಿದ ಆಧುನಿಕ ಕನ್ನಡಿಗಳು ಇಲ್ಲಿ ಪ್ರಚಾರಕ್ಕೆ ಬರುವುದರ ಮೊದಲೆ ತಮಿಳುನಾಡಿನಿಂದ ವಲಸೆ ಬಂದ ಕಂಚುಗಾರರ ಕುಟುಂಬವೊಂದು ಯಾದೃಚ್ಛಿಕವಾಗಿ ಕಂಡುಕೊಂಡ ವೃತ್ತಿರಹಸ್ಯವೊಂದನ್ನು ಆಧರಿಸಿ ವಿಕಾಸಗೊಳಿಸಿದ ಒಂದು ಕಲಾಕೌಶಲವೇ ಮುಂದೆ ಆರನ್ಮುಳ ಲೋಹ ಕನ್ನಡಿ ಎಂದು ಪ್ರಸಿದ್ಧವಾಯಿತು. ತಮಿಳು ನಾಡಿನಿಂದ ಆರನ್ಮುಳ ಗ್ರಾಮಕ್ಕೆ ಬಂದು ನೆಲೆಸಿದ ಕಂಚುಗಾರರ ಕುಟುಂಬದ ವ್ಯಕ್ತಿಯೊಬ್ಬ ಆರನ್ಮುಳ ದೇವಸ್ಥಾನದ ಶ್ರೀಕೃಷ್ಣ ವಿಗ್ರಹದ ಪ್ರತಿರೂಪವೊಂದನ್ನು ಕಂಚಿನಲ್ಲಿ ತಯಾರಿಸಲು ಆರಂಭಿಸಿದ. ಸುತ್ತು ನಿಂತ ಮಹಿಳೆಯರು ಭಕ್ತಿ ಪರವಶರಾಗಿ ಅವರು ತೊಟ್ಟುಕೊಂಡಿದ್ದ ಬೆಳ್ಳಿಯ ಆಭರಣಗಳೆಲ್ಲವನ್ನು ಕಳಚಿ ಉರಿಯುತ್ತಿರುವ ಕುಲುಮೆಗೆ ಎಸೆದರು. ಕೆಲಸ ಮುಗಿದ ಮೇಲೆ ಅವರಿಗೆ ಆಶ್ಚರ್ಯ ಕಾದಿತ್ತು. ಪ್ರೇಕ್ಷಕರ ಮುಖವನ್ನು ಪ್ರತಿಬಿಂಬಿಸುವುದಕ್ಕೆ ತಕ್ಕುದಾದ ಒಂದು ಲೋಹ ಕನ್ನಡಿಯು ಅವರಿಗೆ ದೊರೆಯಿತು. ಇದು ಆರನ್ಮುಳ ಕನ್ನಡಿಯ ಹುಟ್ಟಿನ ಕುರಿತು ಇರುವ ದಂತಕತೆ. ಕಂಚು ಮತ್ತು ತವರವನ್ನು ೧೦:೫.೫ರ ಅನುಪಾತದಲ್ಲಿ ಬೆರೆಸಿ ೬x೬ ಇಂಚು ಅಳತೆಯ  ಅಂಡಾಕಾರದಲ್ಲಿರುವ ಭಾರವಾದ ಈ ಲೋಹದ ಕನ್ನಡಿಗೆ ಬಾಲದಂತೆ ಒಂದು ಹಿಡಿಕೆಯೂ ಇರುತ್ತದೆ. ಉಪಯೋಗದ ದೃಷ್ಟಿಯಿಂದ ನೋಡಿದರೆ ಸಾಮಾನ್ಯ ಕನ್ನಡಿಗಿಂತ ಇದೇನೂ ಕಡಿಮೆಯದ್ದಲ್ಲ. ಆರನ್ಮುಳ ಕನ್ನಡಿಯನ್ನು ನೋಡುತ್ತಿರುವ ದೇವತಾಸ್ತ್ರೀಯನ್ನು ಪದ್ಮನಾಭಸ್ವಾಮಿ ದೇವಾಲಯದ ೧೮ನೇ ಶತಮಾನದ ಒಂದು ಭಿತ್ತಿಚಿತ್ರದಲ್ಲಿ ಕಾಣ ಬಹುದು. ಅರನ್ಮುಳ ಕನ್ನಡಿಯ ನಿರ್ಮಾಣ ರಹಸ್ಯ ಬಹು ಸಮಯಗಳ ಕಾಲ ಗುತ್ತಿಗೆಯಾಗಿ ಕಂಚುಗಾರರ ಕುಟುಂಬವೊಂದರಲ್ಲಿ ಉಳಿದುಕೊಂಡು ಬಂದಿತ್ತು. ಆದರೆ ಇಂದು ಅದರಲ್ಲಿ ಗುಟ್ಟೇನೂ ಉಳಿದಿಲ್ಲ. ತಿರುವನಂತಪುರಂನ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ಅದನ್ನು ತಯಾರಿಸಲಾಗುತ್ತದೆ. ಲೋಹ ಕನ್ನಡಿ ನಿರ್ಮಾಣಕ್ಕೆ ತರಬೇತಿ ನೀಡುವ ಸಂಸ್ಥೆಯೊಂದು ಸರಕಾರದ ಸ್ವಾಮ್ಯದಲ್ಲಿ ಆರನ್ಮುಳದಲ್ಲಿ ಕಾರ್ಯ ಪ್ರವೃತ್ತವಾಗಿದೆ.

ಮರದ ಕೆತ್ತನೆ ಕೆಲಸಗಳು

ಹದಿನೆಂಟನೆಯ ಶತಮಾನದಲ್ಲಿ ದೇವಾಲಯ ನಿರ್ಮಾಣದ ಕೆಲಸ ಕಾರ್ಯಗಳು ಬಹುತೇಕ ನಿಂತು ಹೋಗಿರುವುದರಿಂದ ಮರದ ಕೆತ್ತನೆ ಕೆಲಸಗಳಲ್ಲಿ ತೊಡಗಿಸಿಕೊಂಡ ಕೆಲಸಗಾರರು ಬೇರೆ ದಾರಿ ಹುಡುಕಬೇಕಾಯಿತು. ಕೇರಳೀಯರ ಕರಕೌಶಲ್ಯವನ್ನು ಪ್ರಕಟಿಸಲು ದೇವಾಲಯಗಳು ಉತ್ತಮ ವೇದಿಕೆಯಾಗಿದ್ದವು. ತರುವಾಯದ ದಿನಗಳಲ್ಲಿ ಮರದ ಕೆತ್ತನೆ ಕೆಲಸಗಳು ಮನೆಯ ಸ್ವಾಗತ ಕೊಠಡಿಯ ಅಲಂಕರಣ ಸಾಮಗ್ರಿಗಳಲ್ಲಿ, ಆಟದ ಗೊಂಬೆ ಗಳಲ್ಲಿ, ಕಥಕಳಿಯ ಮುಖವಾಡಗಳಲ್ಲಿ ಹೀಗೆ ಹಂಚಿಹೋದವು. ಪ್ರಾಣಿಗಳ, ಕಥಕಳಿ ಕಥಾಪಾತ್ರಗಳ ರೂಪಗಳನ್ನು ಸುಂದರವಾಗಿ ರಚಿಸುವ ತೃಶ್ಯೂರ್ ಹಾಗೂ ತಿರುವನಂತಪುರಂನ ಕೈ ಕೆಲಸಗಾರರದು ಅನನ್ಯ ಸಾಧನೆ.

ಭಾರತದಲ್ಲಿ ಎಂದಲ್ಲ ದೇಶ ವಿದೇಶಗಳಲ್ಲೂ ಕಥಕಳಿ ಪಾತ್ರಗಳು ಕೇರಳದ ಮುಖಮುದ್ರೆ  ಎಂಬಂತೆ ಅಂಗೀಕರಿಸಲಾಗಿದೆ. ವಿದೇಶಗಳಲ್ಲಿ ಪ್ರಚಾರ ಪಡೆದ ಇನ್ನೊಂದು ಕಲಾವಸ್ತುಗಳೆಂದರೆ ಮರದಲ್ಲಿ ಕೆತ್ತಿದ ಆನೆಯ ವಿಗ್ರಹಗಳು. ಆನೆ, ಜಿಂಕೆ, ಕಡವೆ ಮೊದಲಾದ ಪ್ರಾಣಿಗಳ ರೂಪಗಳನ್ನು ವೃತ್ತಾಕಾರದ ಮೇಜುಗಳ ಕಾಲುಗಳಲ್ಲಿಯೂ, ಪೇಪರ್‌ವೈಟ್ ಮೊದಲಾದ ಉಪಯೋಗಿ ವಸ್ತುಗಳಲ್ಲಿ ಕೆತ್ತುವುದೂ ಇದೆ. ಹಲವು ರೀತಿಯ ಪ್ರಾಣಿ ಪಕ್ಷಿಗಳ ತಲೆಗಳನ್ನು ಟೀಪಾಯಿಯಂತಹ ಉಪಯೋಗೀ ವಸ್ತುಗಳಲ್ಲಿ ಕೆತ್ತುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಮರದ ಕೆತ್ತನೆಗಳಿಗೆ ಸಂಬಂಧಿಸಿದಂತೆ ಕೇರಳಕ್ಕೆ ವಿಶೇಷವಾದ ಸ್ಥಾನವಿದೆ.

ಪರಂಪರೆಯತ್ತ ನೋಡಿದರೆ ಕಂಚುಗಾರರ ಒಂದು ಉಪ ವಿಭಾಗವಾದ ವಿಶ್ವಕರ್ಮರು ಅಥವಾ ಆಚಾರಿಗಳು ಈ ತೆರನ ಮರದ ಕೆತ್ತನೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ವೃತ್ತಿ ವಿಭಜನೆ, ಜಾತಿ ವ್ಯವಸ್ಥೆ ಇವುಗಳಲ್ಲಿ ಪರಸ್ಪರ ಸಂಬಂಧ ಇಲ್ಲವಾದರೂ ಸಾಮಾನ್ಯವಾಗಿ ಹೇಳುವುದಾದರೆ ಕಥಕಳಿ ರೂಪ ನಿರ್ಮಾಣವು ಹಿಂದೂಗಳ ಹಾಗೂ ಕ್ರಿಸ್ತನ ರೂಪ ನಿರ್ಮಾಣವು ಕ್ರಿಶ್ಚಿಯನರ ಗುತ್ತಿಗೆಯಾಗಿಯೇ ಉಳಿದಿದೆ.

ದಂತ ಹಾಗೂ ಕೊಂಬಿನ ಕರಕುಶಲ ವಸ್ತುಗಳು

ದಂತ ಹಾಗೂ ಕೋಣದ ಕೊಂಬಿನಲ್ಲಿ ತಯಾರಿಸುವ ವಿವಿಧ ಕೈ ಕೆಲಸಗಳಿಗೆ ಕೇರಳದಲ್ಲಿ ವಿಶೇಷ ಪ್ರಾಧಾನ್ಯವಿದೆ. ತೃಶ್ಯೂರ್ ಹಾಗೂ ತಿರುವನಂತಪುರಂಗಳೇ ಈ ಕೆಲಸಗಳ ಮುಖ್ಯ ಕೇಂದ್ರ ಸ್ಥಾನ. ಈ ಕಲೆಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ಸಂರಕ್ಷಣೆಯನ್ನು ಕೊಟ್ಟ ಸ್ವಾತಿ ತಿರುನಾಳ್‌ರ ಕಾಲದಿಂದಲೇ ತಿರುವನಂತಪುರನ ದಂತದ ಕೆತ್ತನೆಗಳು ಪ್ರಖ್ಯಾತವಾಗಿವೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ನಗರಕ್ಕೆ ಇಂದಿಗೂ ಪ್ರಥಮ ಸ್ಥಾನವಿದೆ. ಆಟ್ಟಿಂಗಲ್, ಚೇರ್ತಲ, ಕೋಟ್ಟಯಂ, ಕೊಚ್ಚಿನ್ ಮೊದಲಾದೆಡೆಗಳಲ್ಲೂ ಈ ಕೈಗಾರಿಕೆಗಳಲ್ಲಿ ತೊಡಗಿಸಿ ಕೊಂಡ ಜನರಿದ್ದಾರೆ.

ಕೇರಳದ ದಂತ ಶಿಲ್ಪಗಳಿಗೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆಯಿದೆ. ಜನರ ಬೇಡಿಕೆ ಹಾಗೂ ಅಭಿರುಚಿಗಳಿಗೆ ಅನುಗುಣವಾಗಿ ದಂತ ಶಿಲ್ಪಿಗಳು ವಿಭಿನ್ನ ವಿನ್ಯಾಸದ ದಂತದ ವಸ್ತುಗಳನ್ನು ಸೃಷ್ಟಿಸುವಲ್ಲಿ ಹೆಚ್ಚಿನ ಮುತುವರ್ಜಿಯನ್ನು ನಿರಂತರ ವಹಿಸಿದ್ದಾರೆ. ಪುರಾಣೇತಿಹಾಸಗಳಲ್ಲಿನ ರೂಪಗಳು, ಪ್ರಾಣಿ ಪಕ್ಷಿಗಳು, ಸಿಗರೇಟ್ ಕಂಟೈನರ್‌ಗಳು, ನಶ್ಯದ ಬುರುಡೆಗಳು, ಕುಂಕುಮ ಮೊದಲಾದವುಗಳನ್ನು ಹಾಕಿಡುವ ಕರಂಡಕಗಳು ಹೀಗೆ ಹಲವು ತೆರನ ವಸ್ತುಗಳನ್ನು ದಂತದಿಂದ ತಯಾರಿಸಲಾಗುತ್ತದೆ. ತಿರುವನಂತಪುರಂನ ಶಿಲ್ಪಿಗಳು ರೂಪು ಕೊಟ್ಟಿರುವ ಅನಂತಶಯನವು ದಂತಶಿಲ್ಪಗಳ ಪರಾಕಾಷ್ಠೆಗೊಂದು ನಿದರ್ಶನ. ಶಿವ ಪಾರ್ವತಿಯರು, ರಾಧಾಕೃಷ್ಣರು, ಮಹಾಲಕ್ಷ್ಮಿ, ಸರಸ್ವತಿ ಮೊದಲಾದವುಗಳು ದಂತಶಿಲ್ಪಿಗಳನ್ನು ಆಕರ್ಷಿಸಿದ ಸಂಗತಿಗಳಾಗಿವೆ. ಪ್ರಿಯಂ ವದೆಯ ನಿರ್ದೇಶಾನುಸಾರ ಕಮಲದ ಎಲೆಯಲ್ಲಿ ಉಗುರಿನಿಂದ ಪ್ರೇಮ ಪತ್ರವನ್ನು ಬರೆಯು ತ್ತಿರುವ ಶಕುಂತಳೆಯನ್ನು ದಂತದಲ್ಲಿ ಕೆತ್ತುವುದು ಕೇರಳದ ಕಲಾವಿದರಿಗೆ ಸಾಧ್ಯವಾಗಿದೆ. ಗೀತೋಪದೇಶ ದಂತಶಿಲ್ಪಿಗಳಿಗೆ ಪ್ರಿಯವಾದ ಮತ್ತೊಂದು ವಿಷಯ. ಪ್ರವಾಸಿಗರನ್ನು ಆಕರ್ಷಿಸುವ ದಂತಶಿಲ್ಪಗಳಲ್ಲಿ ಕೇರಳದ ದೋಣಿಯಾಟದ ಮಾದರಿಗಳೂ ಸೇರಿವೆ. ಕೇರಳದ ಕಲಾವಸ್ತುಗಳಿಗೆ ವಾಣಿಜ್ಯೋದ್ಯಮದಲ್ಲಿ ಉನ್ನತ ಸ್ಥಾನವನ್ನು ಕಲ್ಪಿಸಿಕೊಟ್ಟ ತಿರುವನಂತ ಪುರಂನ ಶ್ರೀಮೂಲಂ ಪುಷ್ಠ್ಯಬ್ದಿ ಪೂರ್ತಿ ಸ್ಮಾರಕ ಕೇಂದ್ರ ೧೯೧೭ ರಿಂದ ದಂತ ಶಿಲ್ಪಿಗಳಿಗೆ ಉದ್ಯೋಗ ಅವಕಾಶಗಳನ್ನು ಒದಗಿಸಿಕೊಟ್ಟಿದೆ. ಅಲ್ಲದೆ ತಮ್ಮ ಸೃಷ್ಟಿಗಳಿಗೆ ಜಾಗತಿಕ ಮಟ್ಟದಲ್ಲಿ ಪ್ರಚಾರವನ್ನು, ಬೇಡಿಕೆಯನ್ನು ಒದಗಿಸಿದೆ. ಹಾಗೂ ದಂತಶಿಲ್ಪಿಗಳಿಗೆ ವೃತ್ತಿ ಗೌರವವನ್ನು ತಂದುಕೊಟ್ಟಿದೆ. ಪರಂಪರಾಗತವಾಗಿ  ವಿಶ್ವಕರ್ಮರು ಹಾಗೂ ಆಚಾರಿಗಳು  ಈ ವೃತ್ತಿಯನ್ನು ನಡೆಸಿಕೊಂಡು ಬಂದಿದ್ದರು. ಆದರೆ ಇಂದು ಅನ್ಯ ಜಾತಿಯ ಜನರೂ ಕೂಡಾ ದಂತ ಶಿಲ್ಪಗಳಲ್ಲಿ ತೊಡಗಿಸಿ ಕೊಂಡಿರುವುದನ್ನು ಕಾಣಬಹುದು.

ದಂತಕ್ಕಿಂತಲೂ ತುಂಬಾ ಅಗ್ಗವಾಗಿ ದೊರೆಯುವ ಕಾಡುಕೋಣನ ಕೋಡುಗಳಿಂದಲೂ ಉಪಯುಕ್ತ ಸಾಮಗ್ರಿಗಳನ್ನು ನಿರ್ಮಿಸುವಲ್ಲಿ ಕೇರಳದ ಕಲಾವಿದರು ಸಿದ್ಧಹಸ್ತರು. ಹೂದಾನಿಗಳು, ಪೇಪರ್ ವೈಟ್‌ಗಳು, ಮೇಜಿನ ಮೇಲೆ ಇಡಬಹುದಾದ ವಿವಿಧ ಅಲಂಕಾರ ವಸ್ತುಗಳು, ನಶ್ಯದ ಬುರುಡೆಗಳೂ, ಏಷ್ ಟ್ರೇಗಳು, ಪ್ರಾಣಿ ಪಕ್ಷಿಗಳ ಮಾದರಿಗಳು ಹೀಗೆ ಶಿಲ್ಪಿಗಳ ಕಲ್ಪನೆಗಳೊಡನೆ ಕೈಚಳಕವೂ ಸೇರಿ ಕೋಣನ ಕೊಂಬುಗಳಿಗೆ ಕೊಡುವ ರೂಪಗಳಿಗೆ ಲೆಕ್ಕವಿಲ್ಲ. ದಾರು ದಂತಗಳಲ್ಲಿ ಮಾಡಬಹುದಾದ ಸೂಕ್ಷ್ಮ ಕುಸುರಿ ಕೆಲಸಗಳಿಗೆ ಕೊಂಬಿನಲ್ಲಿ ಆಸ್ಪದವಿಲ್ಲದಿರಬಹುದು. ಆದರೆ ಅಗ್ಗದ ಬೆಲೆಯ ವಸ್ತುಗಳು ಎನ್ನುವುದೇ ಇವುಗಳ ವೈಶಿಷ್ಟ್ಯ.

ಮುಂಡ ಓಲೆಗಳ ನೆಯ್ಗೆ

ಕೇದಗೆಯ ಹಾಗೂ ಕೇದಗೆ ಜಾತಿಯ ಮುಂಡಗೆಯ ಓಲೆಗಳಲ್ಲಿ ಹೆಣೆಯುವ ಚಾಪೆ ಮೊದಲಾದ ವಸ್ತುಗಳಿಗೆ ಕೇರಳದ ಪರಂಪರಾಗತ ಕೈಗಾರಿಕೆಗಳಲ್ಲಿ ಪ್ರಮುಖ ಸ್ಥಾನವಿದೆ. ಕೊಲ್ಲಂ ಜಿಲ್ಲೆಯ ತಳ್‌ವಾ ಎಂಬ ಸ್ಥಳ ಇದಕ್ಕೆ ಪ್ರಖ್ಯಾತವೆನಿಸಿದೆ. ತಳ್‌ವಾದ ಜೊತೆಗಿನ ಸಂಬಂಧದ ಕಾರಣದಿಂದ ಈ ತೆರನ ಚಾಪೆಗಳನ್ನು ತಳ್‌ಚಾಪೆ (ತಳ್‌ಪ್ಪಾಯಿ)ಗಳು ಎಂದು ಕರೆಯಲಾಗುತ್ತದೆ. ನೀರ ಬದಿಗಳಲ್ಲಿ ಹುಲುಸಾಗಿ ಬೆಳೆಯುವ ಮುಂಡಗೆ, ಕೇದಗೆ ಗಿಡಗಳಿಂದ ಓಲೆಗಳನ್ನು ಸಂಗ್ರಹಿಸಿ ಬಣ್ಣ ಹಾಕಿ, ಒಣಗಿಸಿ ಚಾಪೆಯನ್ನು ಹೆಣೆಯುತ್ತಾರೆ. ಕಂಬಳಿ, ಹಾಸಿಗೆ, ಇತ್ಯಾದಿಗಳ ಬಳಕೆ ಇಲ್ಲದ ದಿನಗಳಲ್ಲಿ ನಿದ್ರಿಸಲು ಅತಿಥಿ ಅಭ್ಯಾಗತರಿಗೆ ಕುಳಿತುಕೊಳ್ಳಲು ಈ ತೆರನ ಚಾಪೆಗಳನ್ನು ಕೇರಳದಾದ್ಯಂತ ಬಳಸುತ್ತಿದ್ದರು. ಈಗಲೂ ಮಧ್ಯಮ ವರ್ಗದ ಹಾಗೂ ಬಡವರ ಮನೆಗಳಲ್ಲಿ ಚಾಪೆಯ ಬಳಕೆ ಸಾಮಾನ್ಯವಾಗಿ ಇದೆ.

ತಲೆದಿಂಬಿನ ಹೊದಿಕೆಗಳು, ಕುಷನ್‌ಗಳು, ಹಲವು ತರದ ಚೀಲಗಳು, ಟೋಪಿಗಳು, ಬುಟ್ಟಿಗಳು, ಹೂದಾನಿಗಳು, ಗೋಡೆ ಹಾಗೂ ಮೇಜಿನ ಮೇಲಿರಿಸುವ ಅಲಂಕಾರ ವಸ್ತುಗಳು ಇತ್ಯಾದಿಗಳನ್ನು ಕೇದಗೆ ಗರಿಗಳಿಂದ ಕೇರಳೀಯರು ನಿರ್ಮಿಸುತ್ತಾರೆ. ಕೆಲವು ನಿರ್ದಿಷ್ಟ ಜಾತಿಗಳವರು ಈ ವೃತ್ತಿಯನ್ನು ಪರಂಪರಾಗತವಾಗಿ ಉಳಿಸಿಕೊಂಡು ಬಂದಿದ್ದಾರೆ. ಆದರೂ ಈ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರು ಹೆಚ್ಚಾಗಿ ಮಹಿಳೆಯರು.

ಬಿದಿರಿನ ಕುಶಲ ವಸ್ತುಗಳು

ಬಿದಿರಿನಲ್ಲಿ ಸುಲಲಿತವಾದ ಅನೇಕ ಕುಶಲ ವಸ್ತುಗಳನ್ನು ಕೇರಳದಲ್ಲಿ ತಯಾರಿಸ ಲಾಗುತ್ತದೆ. ಕೃಷಿ ಕೆಲಸಗಳಿಗೆ ಸಂಬಂಧಿಸಿದ ಬುಟ್ಟಿ, ಮೊರ, ಗೆರಸೆ, ಮೊದಲಾದ ಅನೇಕ ಉಪಯೋಗೀ ವಸ್ತುಗಳನ್ನು ಬಿದಿರಿನಿಂದ ಮಾಡಲಾಗುತ್ತದೆ. ಕೇರಳದಲ್ಲಿ ಬಹುತೇಕ ಎಲ್ಲಾ ಪ್ರದೇಶಗಳಲ್ಲೂ ಈ ಕೆಲಸಗಳನ್ನು ನಿರ್ವಹಿಸುತ್ತಾರೆ. ಪಾರಂಪರಿಕವಾಗಿ ನೋಡಿದರೆ ದಲಿತ ಜನರ ಕುಲವೃತ್ತಿಯಾಗಿ ಇದು ಪ್ರಚಲಿತವಾಗಿದೆ. ಆದರೆ ತೃಶ್ಯೂರು ಎರ್ನಾಕುಳಂ ಜಿಲ್ಲೆಗಳಲ್ಲಿ ಕ್ರಿಶ್ಚಿಯನರು ಬೆಟ್ಟ ಪ್ರದೇಶಗಳಲ್ಲಿ ಗಿರಿಜನರೂ ಈ ವೃತ್ತಿಯಲ್ಲಿ ತೊಡಗಿಸಿ ಕೊಂಡಿರುವುದನ್ನು ಕಾಣಬಹುದು. ಗಿರಿಜನರ ಪ್ರಮುಖವಾದ ಉಪಜೀವನ ಮಾರ್ಗವೇ ಬಿದಿರ ಕುಶಲ ವಸ್ತುಗಳ ತಯಾರಿಯಲ್ಲಿದೆ. ಆಲುವಾಯಿ, ಕಲ್ಲರ ಮೊದಲಾದ ಪ್ರದೇಶ ಗಳಲ್ಲಿನ ಬಿದಿರ ವಸ್ತುಗಳಲ್ಲಿ ಪ್ರಕಟಿಸುವ ಸೌಂದರ್ಯಪ್ರಜ್ಞೆ ಗಮನಾರ್ಹವೆನಿಸಿದೆ. ಹಲವು ಬಣ್ಣಗಳನ್ನು ಬಳಿದ ಬಿದಿರ ಸಲಾಕೆಗಳನ್ನು ನೆಯ್ದು ತಯಾರಿಸುವ ಮೆಟ್ಟುಕುಕ್ಕೆಗಳು, ಕೊಡೆಗಳು ದೀಪದ ಶೇಡೋಗಳು ಅತ್ಯಾಕರ್ಷಕವಾಗಿವೆ.

ತಾಳೆಗರಿಗಳು

ಕರ್ನಾಟಕದಲ್ಲಿಯಂತೆ ಕಾಗದದ ತಯಾರಿಗೂ ಪೂರ್ವದಲ್ಲಿ ಬರವಣಿಗೆಗಾಗಿ ಕೇರಳೀಯರು ಉಪಯೋಗಿಸಿದ ಪ್ರಮುಖ ಸಾಧನ ತಾಳೆಗರಿ. ಕಾಗದದಲ್ಲಿ ಮುದ್ರಿಸಿದ ರಾಮಾಯಣಾದಿ ಗ್ರಂಥಗಳಿಗಿಂತಲೂ ಹೆಚ್ಚಾಗಿ ತಾಳೆಗರಿಗಳಲ್ಲಿ ಬರೆದ ಗ್ರಂಥಗಳನ್ನೇ ಬರೆದು ಸಂರಕ್ಷಿಲುವುದು ಇದು ಪವಿತ್ರ ಕೆಲಸ ಎಂಬ ನಂಬಿಕೆ ಕೇರಳೀಯರಲ್ಲಿತ್ತು. ತಾಳೆಯೋಲೆಯ ಗ್ರಂಥಗಳು ಕೇರಳ ಸಂಸ್ಕೃತಿಯ ಪ್ರಮುಖ ಮುಖವಾಣಿಗಳೆನಿಸಿವೆ. ನೆಯಾಟ್ಟಿನ್‌ಕರ ಮತ್ತು ತಿರುವನಂತಪುರಂನ ನಡುವಿನ ಪ್ರದೇಶಗಳಲ್ಲಿ ತಾಳೆಯ ಮರಗಳು ಹೇರಳವಾಗಿವೆ. ಈ ಕಾರಣದಿಂದ ಈ ಪ್ರದೇಶವು ತಾಳೆಗರಿಯ ಕರಕುಶಲಗಾರರನ್ನು ಸಹಜವಾಗಿಯೇ ಆಕರ್ಷಿಸಿವೆ. ಬೊಂಬೆ, ಟೋಪಿ, ಕೊಡೆ ಮೊದಲಾದವುಗಳು ತಾಳೆಗರಿ ಗಳಿಂದ ಮಾಡುತ್ತಿದ್ದ ಪ್ರಮುಖ ವಸ್ತುಗಳು.

ಹುಲ್ಲು ಚಾಪೆಗಳು

ಪಾಲಕ್ಕಾಡ್ ಜಿಲ್ಲೆಯ ಚಿಟ್ಟೂರು ತಾಲೂಕು ಹಾಗೂ ತೃಶ್ಯೂರು ಜಿಲ್ಲೆಯ ತಲಪ್ಪಿಳ್ಳಿ ತಾಲೂಕಿನಲ್ಲಿ ಹಿಂದಿನಿಂದಲೇ ಪ್ರಚಾರದಲ್ಲಿದ್ದ ಒಂದು ಕರಕುಶಲ ವೃತ್ತಿ. ಈ ಪ್ರದೇಶಗಳ ನದಿಯ ತೀರಗಳಲ್ಲಿನ ಜವುಗು ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುವ ಒಂದು ತೆರನ ಹುಲ್ಲಿನಿಂದ ಈ ಚಾಪೆಗಳನ್ನು ತಯಾರಿಸುತ್ತಾರೆ. ಪರಂಪರಾಗತವಾಗಿ ಕೊರಗ ಅಥವಾ ಕುರವ ಜನಾಂಗದವರು ಈ ವೃತ್ತಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಕೆಲವು ಪ್ರದೇಶಗಳಲ್ಲಿ ಮುಸಲ್ಮಾನರೂ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುವುದನ್ನು ಕಾಣ ಬಹುದು. ವಿಭಿನ್ನ ವರ್ಣಗಳಲ್ಲಿ ವಿಭಿನ್ನ ಗಾತ್ರಗಳಲ್ಲಿ ತಯಾರಿಸುವ ಚಿಟ್ಟೂರಿನ ಹುಲ್ಲು ಚಾಪೆಗಳಿಗೆ ಸಾಕಷ್ಟು ಬೇಡಿಕೆಯಿದೆ. ಮಂಚದ ಮೇಲೆ, ನೆಲದ ಮೇಲೆ, ಮೇಜಿನ ಮೇಲೆ ಹಾಸಲು ಹಾಗೂ ಆಹಾರ ಸಾಮಗ್ರಿಗಳನ್ನು ಒಣಗಿಸಲು, ವಿಶೇಷ ಸಂದರ್ಭಗಳಲ್ಲಿ ಅತಿಥಿಗಳಿಗೆ ಕುಳಿತುಕೊಳ್ಳಲು ಹೀಗೆ ಹಲವು ರೀತಿಯಲ್ಲಿ ಈ ಚಾಪೆ ಬಳಕೆಯಾಗುತ್ತಿವೆ. ಕೈಚೀಲಗಳು, ಗೋಡೆಯ ಅಲಂಕರಣ ಸಾಮಗ್ರಿಗಳು ಮೊದಲಾದವುಗಳನ್ನು ತಯಾರಿಸಲು ಈ ಹುಲ್ಲನ್ನು ಬಳಸಲಾಗುತ್ತಿದೆ.

ಬೆತ್ತದ ಕೆಲಸ

ಕೇರಳದ ಅರಣ್ಯ ಪ್ರದೇಶಗಳಲ್ಲಿ ಹಾಗೂ ಹಳ್ಳಿಗಳಲ್ಲೂ ಸಮೃದ್ಧವಾಗಿ ಬೆಳೆಯುವ ಚೂರಲ್  (ಬೆತ್ತ) ಗಿಡದ ಕಾಂಡದಿಂದ ಕುರ್ಚಿ, ಟಿಪಾಯಿ, ಮಂಚ, ತೊಟ್ಟಿಲು ಮೊದಲಾದ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುತ್ತಾರೆ. ಕೇರಳದಾದ್ಯಂತ ಚೂರಲ್ ಬೆತ್ತದ ಕೆಲಸಗಾರರನ್ನು ಕಾಣಬಹುದಾದರೂ ಆಲಪ್ಪುೞ, ತಿರುವನಂತಪುರಂ, ಕೋಟ್ಟಯಂ ಈ ಕೈಕೆಲಸದ ಪ್ರಮುಖ ಕೇಂದ್ರಗಳಾಗಿವೆ. ಪರಯ ಜನಾಂಗದ ಗುತ್ತಿಗೆಯಲ್ಲಿ ಈ ವೃತ್ತಿಯಿತ್ತು. ಈಗ ಎಲ್ಲಾ ಸಮುದಾಯದವರನ್ನು ಆಕರ್ಷಿಸಿದೆ.

ಕಸೂತಿ

ಮಹಿಳೆಯರೇ ಪ್ರಮುಖವಾಗಿ ಇದರಲ್ಲಿ ತೊಡಗಿಸಿಕೊಂಡಿರುತ್ತಾರೆ. ರಾಜ್ಯದ ದಕ್ಷಿಣದ ಗಡಿ ಪ್ರದೇಶದ ಪಾರಶ್ಯಾಲ ಅತ್ಯಂತ ಪ್ರಸಿದ್ಧವಾಗಿದೆ. ಕ್ರಿ.ಶ. ಆರಂಭದಲ್ಲಿಯೇ ಸಿರಿಯನ್ ವಲಸೆಗಾರರು ಈ ಕೌಶಲ್ಯಗಳನ್ನು ಇಲ್ಲಿ ಪ್ರಚಾರ ಮಾಡಿದರು. ೧೯ನೆಯ ಶತಮಾನದ ಲಂಡನಿನ ಮಿಷನ್ ಸೊಸೈಟಿಯವರು ಇದಕ್ಕೆ ಗಮನಾರ್ಹವಾದ ಪ್ರೋತ್ಸಾಹ ನೀಡಿದರು. ಆರ್ಥಿಕವಾಗಿ ಇದು ಅಂತಹ ಲಾಭಕರವಾದ ಉದ್ಯಮವಲ್ಲದಿದ್ದರೂ ಅನೇಕ ಮಹಿಳೆಯರಿಗೆ ಬಿಡುವಿನ ವೇಳೆಯನ್ನು ಕಳೆಯಲು ಇವು  ದಾರಿ ತೋರಿಸಿದವು. ಕಾನ್ವೆಂಟ್‌ಗಳು ಕಸೂತಿ ಹೆಣಿಗೆಯ ಕೇಂದ್ರಗಳಾದವು. ಚಂಗನಾಶ್ಯೇರಿಯ ಇಗರ್ಜಿಯ ರಕ್ಷಾಧಿಕಾರದಲ್ಲಿ ಕ್ರೈಸ್ತಮತ ಸಂಬಂಧವಾದ ಹುದ್ದೆಯ ಸಮವಸ್ತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸುವ ಕೈಗಾರಿಕೆಯಾಗಿ ಬೆಳೆದು ಬಂದಿದೆ. ಇದರಲ್ಲಿ ತೊಡಗಿಸಿಕೊಂಡವರೂ ಪುರುಷರೇ ಎಂಬು ದೊಂದು ವಿಶಿಷ್ಟತೆಯೂ ಇದಕ್ಕಿದೆ.