ಜನನ : ೨೦-೫-೧೯೩೦ ರಂದು ಹುಬ್ಬಳ್ಳಿಯಲ್ಲಿ

ಮನೆತನ : ಮೂಲತಃ ನೇಕಾರರ ಮನೆತನ. ತಂದೆ ರಾಮಪ್ಪ – ತಾಯಿ ದೇವಮ್ಮ ಸಂಗೀತ ಪ್ರಿಯರು. ಇವರು ಆಂಧ್ರ ಪ್ರದೇಶದ ಗದ್ವಾಲದವರು. ಹುಬ್ಬಳ್ಳಿಗೆ ವಲಸೆ ಬಂದವರು.

ಗುರುಪರಂಪರೆ : ಹುಬ್ಬಳ್ಳಿಯ ಆರ್. ಜಿ. ದೇಸಾಯಿ ಅವರಲ್ಲಿ ಶಾಸ್ತ್ರೀಯ ಸಂಗೀತ, ಠುಮ್ರಿ ಹಾಗೂ ಲಘು ಸಂಗೀತ ಕಲಿತು ಗುಲ್ಬರ್ಗಾ ವಿಶ್ವವಿದ್ಯಾಲಯ ಸಂಗೀತ ವಿಶಾರದ ಪದವಿ ಗಳಿಸಿರುತ್ತಾರೆ.

ಸಾಧನೆ : ಬಾಲ್ಯದಲ್ಲಿ ನಾಟಕ ಕ್ಷೇತ್ರಕ್ಕೆ ಪಾದಾರ್ಪಣೆ. ಶ್ರೀ ಸಿದ್ಧಾರೂಡ ಪ್ರಾಸಾದಿಕ ನಾಟ್ಯ ಸಂಘ ಹಾಗೂ ವಿದ್ಯಾರಣ್ಯ ಬಾಲ ಸಂಗೀತ ನಾಟ್ಯ ಸಂಘಗಳಲ್ಲಿ ಗಾಯಕ ನಟನಾಗಿ ಹೆಸರು ಮಾಡಿದರು. ಅನಂತರ ನಾಟಕ ಸಂಸ್ಥೆ ಬಿಟ್ಟು ಸ್ವತಂತ್ರವಾಗಿ ಕಾರ್ಯಕ್ರಮ ನೀಡಲು ಆರಂಭಿಸಿದರು. ನರಗುಂದ, ಬೆಳಗಾಂ, ರಾಣಿಬೆನ್ನೂರು, ಹುಬ್ಬಳ್ಳಿ, ಕುಂದಗೋಳ, ಕೊಳ್ಳೆಗಾಲ, ಮುಂತಾದ ಕಡೆ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

೧೯೬೬ ರಲ್ಲಿ ಧಾರವಾಡ ಆಕಾಶವಾಣಿ ನಿಲಯ ಕಲಾವಿದರಾಗಿ ನೇಮಕಗೊಂಡು ಮುಂದೆ ೧೯೬೫ ರಲ್ಲಿ ಸಂಗೀತ ನಿಯೋಜಕರಾಗಿ ಸೇವೆ ಸಲ್ಲಿಸಿರುತ್ತಾರೆ. ಕನ್ನಡ, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಅನೇಕ ರೂಪಕಗಳಿಗೆ ಸಂಗೀತ ನಿರ್ದೇಶನ ಮಾಡಿರುತ್ತಾರೆ. ಹಂಪಿಯಲ್ಲಿ ನಡೆಯುತ್ತಿದ್ದ ಪುರಂದರೋತ್ಸದಲ್ಲಿ ಕಾರ್ಯನಿರ್ವಾಹಕರಾಗಿ ಅದರ ಪ್ರಸಾರ ಕಾರ್ಯದಲ್ಲಿ ಭಾಗಿಗಳಾಗಿದ್ದರು.

ಪ್ರಶಸ್ತಿ – ಸನ್ಮಾನ : ಅನೇಕ ಮಠ ಮಂದಿರಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ. ೧೯೯೫-೯೬ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿಯೂ ಅಲ್ಲದೆ ೨೦೦೭ರ ಸಾಲಿನ ಸಂತ ಶಿಶುನಾಳ ಶರೀಫ ಪ್ರಶಸ್ತಿಯೂ ಇವರಿಗೆ ಸಂದಿದೆ.