ಹತ್ತೊಂಬತ್ತನೆಯ ಶತಮಾನದಲ್ಲಿ ಬಂಗಾಳದಲ್ಲಿ ಹಿಂದೂ ಧರ್ಮಕ್ಕೆ ಕಷ್ಟದ ದಿನಗಳು ಬಂದಿದ್ದವು. ಕ್ರೈಸ್ತ ಮತ ಪ್ರಚಾರದಿಂದ ಆಕರ್ಷಿತರಾದ ಬಂಗಾಳಿಗಳು ಇಂಗ್ಲಿಷ್ ಭಾಷೆಯನ್ನು ಕಲಿತು ಇಂಗ್ಲಿಷರ ಬಾಹ್ಯಾಚಾರಗಳಿಗೆ ಮನಸೋತು, ಹಿಂದೂ ಧರ್ಮವನ್ನು ಟೀಕಿಸುತ್ತ, ಧಾರ್ಮಿಕ ಭಾವನೆಗಳಲ್ಲಿ ನಂಬಿಕೆ ಕಳೆದುಕೊಳ್ಳುತ್ತಿದ್ದರು. ಬಂಗಾಳದ ಧಾರ್ಮಿಕ ಜೀವನದಲ್ಲಿ ಶಾಕ್ತರೂ ವೈಷ್ಣವರೂ ತಮ್ಮ ಮೇಲ್ಮೆಗಾಗಿ ಸ್ಪರ್ಧಿಸುತ್ತಿದ್ದರು. ಕೆಲವರು ಹಿಂದೂ ಧರ್ಮದ ತಿರುಳನ್ನು ಮರೆತು ಬಾಹ್ಯಾಚಾರಗಳ ಗೊಂದಲಗಳಲ್ಲಿ ಮುಳುಗಿ ಹೋಗಿದ್ದರು. ಸಹಗಮನ ಪದ್ಧತಿ, ಬಾಲ್ಯವಿವಾಹ ಮೊದಲಾದ ಅಭ್ಯಾಸಗಳು ಹಿಂದೂ ಸಮಾಜದ ಬೇರನ್ನೇ ಸಡಿಲಗೊಳಿಸಿದ್ದವು. ಮಹಿಳೆಯರ ಸ್ಥಿತಿ ಚಿಂತಾಜನಕವಾಗಿತ್ತು. ಕಳ್ಳತನ, ಸುಲಿಗೆಗಳು ಜನರನ್ನು ಭಯಗ್ರಸ್ಥರನ್ನಾಗಿ ಮಾಡಿದ್ದವು. ಅಜ್ಞಾನ ಹಾಗೂ ಕುರುಡು ನಂಬಿಕೆಗಳು ಅಂಧಕಾರದಂತೆ ದೇಶದಲ್ಲಿ ಹಬ್ಬಿದ್ದವು. ವಿದ್ಯಾಭ್ಯಾಸ ಕೆಲವರಿಗೆ ಮಾತ್ರ ದೊರಕುತ್ತಿತ್ತು. ಮೇಲು-ಕೀಳೆಂಬ ಜಾತಿಗಳ ಅಸಹಜ ಸೃಷ್ಟಿಯಿಂದ ಸಮಾಜದ ವಿಕಾಸ ಕುಂಠಿತವಾಗಿತ್ತು. ಹಿಂದೂ ವರ್ಣ ವ್ಯವಸ್ಥೆ ಗುಣ ಮತ್ತು ಕೆಲಸಗಳಿಗೆ ಸಂಬಂಧಿಸಿ ಮೂಡಿದುದೆಂಬ ನೈಜ ದೃಷ್ಟಿ ಮಾಯವಾಗಿ, ಹುಟ್ಟಿನಿಂದ ವರ್ಣ ವ್ಯವಸ್ಥೆ ಯೆಂಬ ಸಂಕುಚಿತ ದೃಷ್ಟಿ ಮೂಡಿತ್ತು. ಇದರಿಂದ ಅಖಂಡ ಹಿಂದೂ ಸಂಘಟನೆಯ ಬುಡಕ್ಕೆ ಕೊಡಲಿ ಏಟು ಬಿದ್ದಿತ್ತು. ಮೇಲಿನ ಜಾತಿಯವರೆನ್ನೆಸಿ ಕೊಂಡವರು ಕೆಲವರನ್ನು ’ಅಸ್ಪೃಶ್ಯರು’ ಎಂದರೆ ಮುಟ್ಟಬಾರದವರು ಎಂದು ಕರೆದು ಅವರನ್ನು ದೂರ ಇಡುತ್ತಿದ್ದರು. ಈ ಅಸ್ಪೃಶ್ಯರೇ ಕ್ರೈಸ್ತ ಮತಕ್ಕೆ ಸೇರಿದಾಗ ತಾವು ಮೇಲಿನ ಜಾತಿಯವರು ಎಂದುಕೊಂಡವರು ಅವರನ್ನು ಮುಟ್ಟುತ್ತಿದ್ದರು. ಬಡತನದಲ್ಲಿ ಬೆಂದು, ನೊಂದು ಪರಿತಪಿಸುತ್ತಿದ್ದ ಕೋಟಿ ಕೋಟಿ ಭಾರತೀಯರು ಸಂಸಾರ ದುಃಖಕರ, ಜಗತ್ತೆಲ್ಲ ದುಃಖಮಯ, ಬಾಳೆಂಬುದು ಗೋಳು ಎಂಬ ವಿಕೃತ ದೃಷ್ಟಿಯನ್ನು ಬೆಳೆಸಿಕೊಂಡರು.

ಇಂತಹ ಸಮಯದಲ್ಲಿ ಸಮಾಜದ ಉದ್ಧಾರಕ್ಕಾಗಿ ಸೊಂಟ ಕಟ್ಟಿ ನಿಂತವರೆಂದರೆ ಬಂಗಾಳದ ರಾಜಾರಾಮ ಮೋಹನರಾಯ್. ಎಲ್ಲ ಮತೀಯರೂ ಸೇರಿ ಪ್ರಾರ್ಥನೆ ಹಾಗೂ ಚಿಂತನಗಳಲ್ಲಿ ಸಹಭಾಗಿಗಳಾಗಲು ಪ್ರೇರಕವಾಗುವ ಬ್ರಹ್ಮಸಭೆಯನ್ನು ಅವರು ೧೮೨೮ರಲ್ಲಿ ಸ್ಥಾಪಿಸಿದರು. ಇದೊಂದು ಹೊಸ ಮತವಲ್ಲ. ಹಿಂದು, ಕ್ರೈಸ್ತ, ಇಸ್ಲಾಂ ಮೊದಲಾದ ಧರ್ಮಗಳ ಉತ್ತಮಾಂಶಗಳ ಅನುಷ್ಠಾನವೇ ಬ್ರಹ್ಮಸಭೆಯ ಆದರ್ಶವಾಯಿತು. ಆ ಸಭೆಗೆ ಯಾರು ಬೇಕಾದರೂ ಹೋಗಬಹುದಿತ್ತು. ಒಟ್ಟಿನಲ್ಲಿ ಅದು ಒಂದು ರೀತಿಯ ಪ್ರಾರ್ಥನಾ ಸಭೆ. ಅಲ್ಲಿ ವಿಗ್ರಹಾರಾಧನೆಗೆ ಅವಕಾಶವಿರಲಿಲ್ಲ. ಅದರ ಕಾರ್ಯನಿರ್ವಹಣೆಗಾಗಿ ೧೮೩೦ ರಲ್ಲಿ ಸ್ವಂತ ಕಟ್ಟಡ ನಿರ್ಮಿತವಾಯಿತು. ಕ್ರಮೇಣ ಬ್ರಹ್ಮ ಸಭೆ, ಬ್ರಹ್ಮ ಸಮಾಜವಾಯಿತು. ಪರಮಾತ್ಮನಿಗೆ ಹುಟ್ಟಿಲ್ಲ, ಸಾವಿಲ್ಲ. ಅವನಿಗೆ ಇಂತಹವೇ ಎಂದು ಹೇಳಲು ಸಾಧ್ಯವಿಲ್ಲ. ಅವನು ಸರ್ವೇಶ್ವರ. ಅಂತಹ ಪರಮಾತ್ಮನನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಬೇಕು ಎಂಬುದು ಈ ಸಮಾಜದ ಮುಖ್ಯ ತತ್ವವಾಯಿತು.

ಬ್ರಹ್ಮಸೂತ್ರಗಳ ಅಧ್ಯಯನಕ್ಕೆ ವಿಶೇಷ ಪ್ರೋತ್ಸಾಹ ಲಭಿಸಿತು. ಗಾಯತ್ರಿ ಮಂತ್ರ ಪ್ರಾರ್ಥನೆಗಾಗಿ ಉಪಯೋಗಕ್ಕೆ ಬಂತು. ಸಂಸ್ಕೃತ, ಬಂಗಾಳಿ, ಪಾರಸಿ, ಇಂಗ್ಲಿಷ್ ಗೀತೆಗಳನ್ನು ಹಾಡಲು ಅಲ್ಲಿ ಅವಕಾಶವಿತ್ತು. ದೇವೇಂದ್ರನಾಥ ಠಾಕೂರ್ ಎಂಬುವರು ಬಂಗಾಳದಲ್ಲಿ ಬಹು ಗೌರವ ಪಡೆದಿದ್ದ ಹಿರಿಯರು. ಅವರನ್ನು ಮಹರ್ಷಿ ಎಂದು ಕರೆಯುತ್ತಿದ್ದರು. ರಾಜಾರಾಮಮೋಹನ ರಾಯರ ಬಳಿಕ ಬ್ರಹ್ಮಸಮಾಜವು ದೇವೇಂದ್ರನಾಥ ಠಾಕೂರರ ನೇತೃತ್ವದಲ್ಲಿ ಬೆಳೆಯಲಾರಂಭಿಸಿತು. ಕೇಶವ ಚಂದ್ರಸೇನರು ಇದೇ ಸಮಜವನ್ನು ಸೇರಿದುದು.

ಬಾಲ್ಯ ಮತ್ತು ಯೌವನ

ಕೇಶವಚಂದ್ರ ಸೇನರ ತಾತ ಕಮಲಸೇನರು ಮುದ್ರಣಾಲಯದಲ್ಲಿ ಎಂಟು ರೂಪಾಯಿ ವೇತನ ಪಡೆಯುವ ಕೆಲಸಗಾರರಾಗಿದ್ದು, ತಮ್ಮ ಸಾಧನೆಯ ಬಲದಿಂದ ಕಡೆಗೆ ಬಂಗಾಳದ ಬ್ಯಾಂಕಿನ ದಿವಾನರಾಗಿ ತಿಂಗಳಿಗೆ ಎರಡು ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದರು. ಅವರ ಎರಡನೆಯ ಮಗ ಪ್ಯಾರಿ ಮೋಹನ್. ಅವರ ಮಗನೇ ಕೇಶವಚಂದ್ರ ಸೇನ್. ಇವರು ೧೮೩೮ರಲ್ಲಿ ಹುಟ್ಟಿದರು.

ಪ್ಯಾರಿ ಮೋಹನರು ಬದುಕಿದ್ದುದು ಮೂವತ್ನಾಲ್ಕು ವರ್ಷಗಳು ಮಾತ್ರ. ತಂದೆಯನ್ನು ಕಳೆದುಕೊಂಡಾಗ ಕೇಶವಚಂದ್ರನಿಗೆ ಹತ್ತು ವರ್ಷ ವಯಸ್ಸು. ಬಾಲಕ ಕೇಶವಚಂದ್ರ ತಾಯಿಯ ರಕ್ಷಣೆಯಲ್ಲಿಯೇ ಬೆಳೆದ. ಅವನಿಗೆ ಉತ್ತಮ ಬಟ್ಟೆ ಮತ್ತು ಪೋಷಾಕುಗಳೆಂದರೆ ಬಹು ಪ್ರೀತಿ. ಸ್ವಭಾವದಲ್ಲಿ ಅವನು ಮೃದು ಹಾಗೂ ಕೋಮಲ. ಅವನ ಬಾಲ್ಯದ ವಿದ್ಯಾಭಾಸ ಮನೆಯಲ್ಲಿಯೇ ನಡೆಯಿತು. ಶಾಲೆಯನ್ನು ಅವನು ಸೇರಿದ್ದು ಏಳನೆಯ ವಯಸ್ಸಿನಲ್ಲಿ. ಶಾಲೆಯಲ್ಲಿ ಅವನು ಏಕಾಗ್ರತೆಯಿಂದ ಅಧ್ಯಯನ ಮಾಡತೊಡಗಿದ. ಅವನಿಗೆ ಇಂಗ್ಲಿಷ್ ಹಾಗೂ ಗಣಿತಗಳು ಪ್ರಿಯವಾದುವು. ತರಗತಿಯ ಪರೀಕ್ಷೆಗಳಲ್ಲಿ ಅವನು ಬಹುಮಾನ ಪಡೆಯುತ್ತಿದ್ದ. ಅವನು ಬೆಳೆದಂತೆ ಪ್ರಾರ್ಥನೆಯಲ್ಲಿ ಬಲವಿದೆ ಎಂಬ ನಂಬಿಕೆ ಅವನಲ್ಲಿ ಬೇರೂರಿತು. ಹಿಂದೂ ಕಾಲೇಜಿನಲ್ಲಿ ಅವನ ವಿದ್ಯಾಭಾಸ ಮುನ್ನಡೆದು, ಪದವೀಧರನಾಗದೆ  ೧೮೫೮ರಲ್ಲಿ ಕಾಲೇಜನ್ನು ತ್ಯಜಿಸಿದ. ವಿದ್ಯಾರ್ಥಿದೆಶೆಯಲ್ಲಿಯೇ ತನ್ನ ೧೮ನೆಯ ವಯಸ್ಸಿನಲ್ಲಿ ಅವನು ವಿವಾಹ ಮಾಡಿಕೊಂಡ. ಬ್ಯಾಂಕ್ ಒಂದರಲ್ಲಿ ಕೆಲಸಕ್ಕೆ ಸೇರಿದ. ಸಂಬಳ ತಿಂಗಳಿಗೆ ಇಪ್ಪತ್ತೈದು ರೂಪಾಯಿ. ಆ ಕಾಲಕ್ಕೆ ಇದು ಸಣ್ಣ ಸಂಬಳವಲ್ಲ. ಕೇಶವಚಂದ್ರ ಕೆಲವು ದಿನಗಳು ಕೆಲಸ ಮಾಡಿದ. ಆದರೆ ಸಮಾಜ ಸೇವೆ ಮಾಡಬೇಕು ಎನ್ನುವ ಉತ್ಸಾಹ, ಈ ನಿಶ್ಚಯ ಬಲವಾಗಿದ್ದವು. ಬ್ಯಾಂಕಿನ ಕೆಲಸವನ್ನು ಮಾಡಿಕೊಂಡು ಸಮಾಜ ಸೇವೆಯನ್ನು ಮಾಡುವುದು ಸಾಧ್ಯವಿಲ್ಲ ಎಂದು ತೀರ್ಮಾನಿಸಿ ಕೆಲಸವನ್ನು ಬಿಟ್ಟ.

ಮಹರ್ಷಿಗಳ ಶಿಷ್ಯ

ವಿದ್ಯಾರ್ಥಿ ಕೇಶವಚಂದ್ರ ಬ್ರಹ್ಮಸಮಾಜವನ್ನು ಸೇರಿದುದು ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲಿ. ವಿದ್ಯಾರ್ಥಿ ಕೇಶವಚಂದ್ರ ಸಂಘ-ಸಂಸ್ಥೆಗಳ ಕಾರ್ಯದಲ್ಲಿಯೂ ಆಸಕ್ತನಾದ. ೧೮೫೫ ರಲ್ಲಿ ಸಂಜೆಯ ಕಾಲೇಜನ್ನು ಕಲ್ಕತ್ತೆಯಲ್ಲಿ ತೆರೆದು ಇಂಗ್ಲಿಷ್ ಸಾಹಿತ್ಯ, ನೀತಿ, ಧರ್ಮ – ಈ ವಿಚಾರವಾಗಿ ಉಪನ್ಯಾಸ ಮಾಡಲು ಆರಂಭಿಸಿದ. ಷೇಕ್ಸ್ ಪಿಯರನ ಕೆಲವು ನಾಟಕಗಳನ್ನು ರಂಗಭೂಮಿಗೆ ತಂದು ಪ್ರದರ್ಶಿಸುವುದರಲ್ಲಿ ಅವನು ಯಶಸ್ವಿಯಾದ. ಷೇಕ್ಸ್ ಪಿಯರನ ’ಹ್ಯಾಮ್ಲೆಟ್’ ನಾಟಕದಲ್ಲಿ ಅವನೇ ’ಹ್ಯಾಮ್ಲೆಟ್’ ಪಾತ್ರವನ್ನು ಅಭಿನಯಿಸಿ ಜನಪ್ರಿಯನಾದ.

ಮಹರ್ಷಿ ದೇವೇಂದ್ರನಾಥ ಠಾಕೂರರ ಅಚ್ಚುಮೆಚ್ಚಿನ ಶಿಷ್ಯನಾಗುವ ಅವಕಾಶ ದೊರಕಿತು. ಕೇಶವಚಂದ್ರ ಸೇನನಿಗೆ. ಅವನಲ್ಲಿ ಮಹರ್ಷಿಗಳಿಗೆ ಅಪಾರ ಪ್ರೇಮ. ಅವನು ಮುಂದೆ ಬ್ರಹ್ಮಸಮಾಜವನ್ನು ಉಜ್ವಲವಾಗಿ ಬೆಳೆಸುವನೆಂಬ ನಂಬಿಕೆ ಅವರಲ್ಲಿ ಬೇರೂರಿತು. ಅವರು ಪ್ರತಾಪಚಂದ್ರ ಮುಜುಮದಾರರಿಗೆ ಬರೆದ ಪತ್ರದಲ್ಲಿ ಕೇಶವನನ್ನು ಕುರಿತು ಹೀಗೆ ಹೇಳಿದ್ದಾರೆ:

“ಕೆಲವರು ಕೇಶವನನ್ನು ಗೌರವಿಸುತ್ತಾರೆ. ಮತ್ತೆ ಕೆಲವರು ಟೀಕಿಸುತ್ತಾರೆ. ಮಾನಾಪಮಾನಗಳ ನಡುವೆ, ಪ್ರಶಂಸೆ-ಟೀಕೆಗಳ ನಡುವೆ ಅವನು ಸ್ಥಿರಚಿತ್ತದಿಂದ ಬ್ರಹ್ಮಸಮಾಜದ ಪ್ರಗತಿಗಾಗಿ ದುಡಿಯುತ್ತಿದ್ದಾನೆ. ಶ್ರೀಮಂತ ಭವನಗಳಲ್ಲಾಗಲಿ, ಗುಡಿಸಿಲುಗಳಲ್ಲಾಗಲಿ ಸೂರ್ಯರಶ್ಮಿಯಂತೆ ಪ್ರವೇಶಿಸಿ, ಧರ್ಮಜ್ಯೋತಿಯನ್ನು ಬೆಳಗುತ್ತಿದ್ದಾನೆ. ಧರ್ಮ ಪ್ರಸಾರದಲ್ಲಿ ನಿರತನಾಗಿ, ಸತ್ಯಕ್ಕಾಗಿ ಸರ್ವ ಸಮರ್ಪಣ ಮಾಡಿದ ಅವನು ಮೃತ್ಯುವನ್ನು ಪ್ರೀತಿಯಿಂದ ಕಾಣುತ್ತಾನೆ. ಅವನ ಶಕ್ತಿ ಮಧ್ಯಾಹ್ನದಂತೆ ಪ್ರಖರ, ಆದರೆ ಧಾರ್ಮಿಕ ಭಾವನೆಗಳಿಂದ ತುಂಬಿದ ಅವನ ಮುಖದಲ್ಲಿ ದೈವೀ ಸೌಂದರ್ಯವಿದೆ. ಅವನ ಸುಂದರ ಮುಖ ನನ್ನ ಹೃದಯದಲ್ಲಿ ಜೀವಂತವಾಗಿದೆ. ನನ್ನ ಮನಸ್ಸಿನಲ್ಲಿ ಪ್ರತಿಬಿಂಬಿತವಾಗಿರುವುದು ಅವನದೇ ವ್ಯಕ್ತಿತ್ವ. ಅವನ ಭವ್ಯ ಆಕೃತಿ, ಅವನ ತಲೆಗೂದಲು, ಅವನ ಹೊಳೆವ ಉಗುರುಗಳು-ಇವೆಲ್ಲ ಈ ಪತ್ರ ಬರೆಯುತ್ತಿರುವಾಗ ನನ್ನ ಕಣ್ಣ ಮುಂದೆ ಜೀವಂತವಾಗಿ ಬಂದು ನಿಲ್ಲುತ್ತವೆ, ನಾನು ಯಾರಿಗಾದರೂ ಪ್ರೇಮಾಶ್ರುಗಳನ್ನು ಹರಿಸಿದ್ದರೆ, ಅವನಿಗಾಗಿ! ನಮ್ಮ ಋಷಿಗಳು ಬೋಧಿಸಿದ ಜ್ಞಾನದ ಬೆಳಕಿನಲ್ಲಿ ರಾಷ್ಟ್ರವನ್ನು ನಿರ್ಮಿಸಲು ನಾವು ಯೋಚಿಸಿದ್ದೇವೆ. ಆದರೆ ಅವನ ಮನಸ್ಸು ಭಾರತದ ಏಕೇಶ್ವರವಾದವನ್ನೂ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಸಾರಗಳನ್ನೂ ಸಮನ್ವಯ ಮಾಡಲು ಯತ್ನಿಸಿದೆ.”

ಭಾರತೀಯ ಬ್ರಹ್ಮಸಮಾಜದ ಉದಯ

೧೮೫೯ರಲ್ಲಿ ದೇವೇಂದ್ರನಾಥ ಠಾಕೂರರ ಹಾಗೂ ಅವರ ಇಬ್ಬರು ಮಕ್ಕಳೊಡನೆ ಕೇಶವಚಂದ್ರ ಸೇನರು ಸಿಂಹಳಕ್ಕೆ (ಈಗಿನ ಶ್ರೀಲಂಕಾ) ಪ್ರಯಾಣ ಮಾಡಿದರು. ಹಿಂದಿರುಗಿದ ಬಳಿಕ ಧಾರ್ಮಿಕ ವಿಚಾರಗಳ ಜಿಜ್ಞಾಸೆ ಮತ್ತು ಧ್ಯಾನಕ್ಕಾಗಿ ’ಸಂಗತ್ ಸಭಾ’ ಎಂಬ ಸಂಘವನ್ನು ಅವರು ಪ್ರಾರಂಭಿಸಿದರು. ’ಇಂಡಿಯನ್ ಮಿರರ್’ ಎಂಬ ಪತ್ರಿಕೆಯನ್ನು ಅವರು ಆರಂಭಿಸಿದುದು ೧೮೬೧ರಲ್ಲಿ. ಈ ಪತ್ರಿಕೆಯಲ್ಲಿ ಬ್ರಹ್ಮಸಮಾಜಕ್ಕೆ ಸಂಬಂಧಿಸಿದ ವಿಷಯಗಳನ್ನೂ ತಮ್ಮ ವಿಚಾರಧಾರೆಯನ್ನೂ ಪ್ರಕಟಿಸತೊಡಗಿದರು.

ಕೇಶವ ಚಂದ್ರರು ಮತ್ತು ಮಹರ್ಷಿ ದೇವೇಂದ್ರನಾಥರು

ತಮ್ಮ ಸುಧಾರಣೆಯ ಕಾರ್ಯದಲ್ಲಿ ಕೇಶವಚಂದ್ರರು ಅವರಿಗೆ ತೀರ ಸಮೀಪರಾದವರಿಂದ ಸಹ ವಿರೋಧವನ್ನು ಎದುರಿಸಬೇಕಾಯಿತು. ಬ್ರಹ್ಮಸಮಾಜಕ್ಕೆ ಸೇರಿದವರಿಗೆ ತಮ್ಮ ಮನೆಯ ಹೆಂಗಸರೂ ಸಮಾಜದ ಕೆಲಸದಲ್ಲಿ ಭಾಗವಹಿಸಬೇಕೆಂದು ಆಸೆ. ಕೇಶವಚಂದ್ರರ ಮಾವನ ಮನೆಯವರಿಗೆ ಅವರು ಬ್ರಹ್ಮಸಮಾಜವನ್ನು ಸೇರಿದುದೇ ಇಷ್ಟವಿರಲಿಲ್ಲ. ಕೇಶವಚಂದ್ರರಿಗೆ ’ಆಚಾರ್ಯ’ ರೆಂಬ ಪದವಿಯನ್ನು ಕೊಟ್ಟಾಗ ಸಮಾರಂಭದಲ್ಲಿ ತಮ್ಮ ಹೆಂಡತಿ ಭಾಗವಹಿಸಬೇಕೆಂದು ಅವರ ಅಭಿಲಾಷೆ. (ಆಗ ಆಕೆಗೆ ಹದಿನೈದು-ಹದಿನಾರು ವರ್ಷ), ಆದರೆ ಅವರ ಮಾವನ ಮನೆಯವರು ಆಕೆ ಮನೆಯಿಂದ ಹೊರಕ್ಕೆ ಕಾಲಿಡದಂತೆ ತಡೆದರು. ಬಾಗಿಲು ಬಾಗಿಲಿಗೂ ಆಳುಗಳನ್ನು ನಿಲ್ಲಿಸಿದರು. ಆದರೂ ಕೇಶವಚಂದ್ರರು ಆಕೆಯನ್ನು ಕರೆದುಕೊಂಡು ಹೊರಕ್ಕೆ ಬಂದು, ಒಂದು ಪಲ್ಲಕ್ಕಿಯಲ್ಲಿ ಆಕೆಯನ್ನು ಕೂರಿಸಿಕೊಂಡು ಹೊರಟು ಹೋದರು. ಅಂದು ಸಂಜೆಯೇ ಅವರ ದೊಡ್ಡಪ್ಪನೂ ಅಣ್ಣನೂ ಅವರಿಗೆ ಕಾಗದ ಬರೆದರು. ಕೇಶವಚಂದ್ರರ ಅವಿಧೇಯತೆ, ಅಗೌರವಗಳ ನಡತೆ; ಆದುದರಿಂದ ಮತ್ತೆ ಅವರು ತಮ್ಮ ಮನೆಗೆ ಬರಕೂಡರು ಎಂದು ಬರೆದಿದ್ದರು.

ಸಂಗತ್ ಸಭೆಯ ಪ್ರಭಾವ ಅಸಾಧಾರಣವಾಯಿತು. ಉಚ್ಚ ವಿದ್ಯಾಭ್ಯಾಸ ಪಡೆದಿದ್ದ ಅಥವಾ ಪಡೆಯುತ್ತಿದ್ದ ಯುವಕರು ಸಭೆ ಸೇರುತ್ತಿದ್ದರು. ಹಿರಿಯ ಅಥವಾ ಬಂಧುಗಳ ಕೋಪ, ಗಾಳಿ-ಮಳೆ, ಯಾವ ಅಡ್ದಿಯನ್ನೂ ಲಕ್ಷಿಸದೆ ಸಭೆಗೆ ಬರುತ್ತಿದ್ದರು. ಜೀವನದ ಅರ್ಥ, ಮನುಷ್ಯ ಹೇಗೆ ಬದುಕಬೇಕು, ಭಗವಂತನ ಸ್ವರೂಪವೇನು, ಸಮಾಜಕ್ಕೆ ವ್ಯಕ್ತಿಯ ಕರ್ತವ್ಯವೇನು-ಇಂತಹ ಪ್ರಶ್ನೆಗಳನ್ನು ಗಂಭೀರವಾಗಿ ಶ್ರದ್ಧೆಯಿಂದ ಗಂಟೆಗಟ್ಟಲೆ ಚರ್ಚಿಸುತ್ತಿದ್ದರು. ರಾತ್ರಿ ಎಷ್ಟೋ ಹೊತ್ತಾದ ನಂತರ ಮನೆಯತ್ತ ಹೊರಟ ಈ ಯುವಕರು ಸಣ್ಣ ಸಣ್ಣ ಗುಂಪುಗಳಾಗಿ, ಬೀದಿ ದೀಪಗಳ ಕೆಳಗೆ ನಿಂತು ಚರ್ಚೆಯನ್ನು ಮುಂದುವರಿಸುತ್ತಿದ್ದರು. ಎಷ್ಟೋ ಬಾರಿ ಸೂರ್ಯ ಹುಟ್ಟಿದ ಮೇಲೆ ಅವರಿಗೆ ಮನೆಯ ನೆನಪಾಗುತ್ತಿದ್ದುದು!

’ಆಚಾರ್ಯ’ ಪದವಿಯನ್ನು ಪಡೆದ ಕೇಶವಚಂದ್ರರು ಬ್ರಹ್ಮಸಮಾಜದ ಸುಧಾರಣೆಯ ಕೆಲಸಗಳನ್ನು ಚುರುಕುಗೊಳಿಸಿದರು. ಜನಿವಾರದ ಪರಿತ್ಯಾಗ, ಬೇರೆ ಬೇರೆ ಜಾತಿಯವರ ಮದುವೆ ಬ್ರಹ್ಮಸಮಾಜಕ್ಕೆ ಸೇರಿದವರು ಕಡ್ಡಾಯವಾಗಿ ಆಚರಿಸಬೇಕೆಂದು ಅವರು ನಿಯಮ ಮಾಡಿದರು. ಇದು ಅನೇಕರಿಗೆ ಸರಿ ಬೀಳಲಿಲ್ಲ. ಯೇಸುಕ್ರೈಸ್ತನಿಂದ ಅವರಿಗಿದ್ದ ಅಪರಿಮಿತ ಭಕ್ತಿಯೂ ಕ್ರಿಸ್ತನನ್ನು ಕುರಿತು ಬ್ರಹ್ಮಸಮಾಜದ ಸಭೆಯಲ್ಲಿ ಭಾಷಣ ಮಾಡುವುದೂ ಹಲವರಿಗೆ ಅಪ್ರಿಯವಾಯಿತು. ’ಭಾರತೀಯ ತರುಣರಿಗೆ ಮನವಿ’ ಎಂಬ ಲೇಖನದಲ್ಲಿ ತಮ್ಮ ಸುಧಾರಣೆಯ ಮುಖ್ಯಾಂಶಗಳನ್ನು ಸಾರಿದರು. ಆ ಲೇಖನದಲ್ಲಿ ಹೀಗೆ ಹೇಳಿದರು:

’ಹಿಂದೂ ಧರ್ಮದ ಪ್ರಗತಿಗೆ ಧಕ್ಕೆ ತರುವ ಆಚಾರವೆಂದರೆ ಮೂರ್ತಿ ಪೂಜೆ. ಇದು ಮಹಾಪಾಪ ಹಾಗೂ ಅಸಹ್ಯಕರ. ಜಾತಿ ಪದ್ಧತಿ ಮತ್ತೊಂದು ಭಯಂಕರ ಶತ್ರು. ಆ ರಾಕ್ಷಸನನ್ನು ಸಂಹರಿಸಿ, ರಾಷ್ಟ್ರೀಯ ಹಾಗೂ ಧಾರ್ಮಿಕ ಭ್ರಾತೃತ್ವವನ್ನು ಬೆಳೆಸಬೇಕು. ಒಬ್ಬ ಗಂಡನಿಗೆ ಹಲವರು ಹೆಂಡತಿಯರಿರುವುದು, ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡುವುದು, ವಿಧವೆಯರು ಮತ್ತೆ ಮದುವೆ ಮಾಡಿಕೊಳ್ಳಬಾರದು ಎಂದು ವಿಧಿಸುವುದು-ಈ ಪದ್ಧತಿಗಳನ್ನು ತೆಗೆದು ಹಾಕಬೇಕು.’

ತೀವ್ರ ಸುಧಾರಣೆಗಾಗಿ ಯತ್ನಿಸುತ್ತಿದ್ದ ಕೇಶವಚಂದ್ರ ಸೇನರ ಧೋರಣೆ ಮಹರ್ಷಿ ದೇವೇಂದ್ರನಾಥ ಠಾಕೂರರಿಗೆ ನುಂಗಲಾರದ ತುತ್ತಾಯಿತು. ವಿಧವಾ ವಿವಾಹ ಮತ್ತು ಅಂತರ್ಜಾತೀಯ ವಿವಾಹ ಅವರಿಗೆ ಸರಿಕಾಣಲಿಲ್ಲ. ಅಭಿಪ್ರಾಯ ಭೇದದಿಂದ ಅವರು ಕೇಶವಚಂದ್ರ ಸೇನರಿಂದ ಬೇರೆಯಾದರು. ತಮ್ಮ ಸಮಾಜಕ್ಕೆ ’ಆದಿ ಬ್ರಹ್ಮಸಮಾಜ’ ಎಂದು ಹೆಸರಿಟ್ಟರು.

೧೮೬೫ರಲ್ಲಿ ಕೇಶವಚಂದ್ರ ಸೇನರೂ ಅವರ ಅನುಯಾಯಿಗಳೂ ಆದಿ ಬ್ರಹ್ಮಸಮಾಜದಿಂದ ಬೇರೆಯಾದರು. ೧೮೬೬ರ ಮೇ ತಿಂಗಳಲ್ಲಿ ಕೇಶವಚಂದ್ರರು ’ಯೇಸುಕ್ರಿಸ್ತ, ಯೂರೋಪ್ ಮತ್ತು ಏಷ್ಯ’ ಎಂಬ ವಿಷಯವಾಗಿ ಉಪನ್ಯಾಸವಿತ್ತರು. ಅದೇ ವರ್ಷ, ನವೆಂಬರ್ ತಿಂಗಳಲ್ಲಿ ’ಭಾರತೀಯ ಬ್ರಹ್ಮಸಮಾಜ’ ವೆಂಬ ಸಮಾಜ ಕೇಶವಚಂದ್ರರ ನೇತೃತ್ವದಲ್ಲಿ ಉದಯವಾಯಿತು. ಅವರ ಅನುಯಾಯಿಗಳು ಅವರನ್ನು ಹೊಸ ಸಮಾಜದ ಗುರುವೆಂದು ಗೌರವಿಸಲು ಇಚ್ಛಿಸಿದಾಗ, ಅವರು ಒಪ್ಪದೆ, ’ಭಗವಂತನೇ ಗುರು, ತಾನು ಕೇವಲ ಕಾರ್ಯದರ್ಶಿ’ ಎಂದು ಹೇಳಿದರು. ತಾವು ’ಭಾರತೀಯ ಬ್ರಹ್ಮಸಮಾಜ’ದ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಕ್ರೈಸ್ತರ ಧರ್ಮಗ್ರಂಥ ಬೈಬಲ್, ಮುಸ್ಲಿಮರ ಧರ್ಮಗ್ರಂಥ ಖುರಾನ್, ಪಾರಸಿಗಳ ಧರ್ಮಗ್ರಂಥ ಜೆಂಡ ಅವೆಸ್ತ, ಬೌದ್ಧ ಗ್ರಂಥಗಳು ಮತ್ತು ಹಿಂದು ತಾತ್ವಿಕ ಗ್ರಂಥಗಳಿಂದ ಆಯ್ದ ಮುಖ್ಯ ಭಾಗಗಳನ್ನು ಸಂಕಲಿಸಿ, ಸಿದ್ಧಗೊಳಿಸಿದ ’ಶ್ಲೋಕ ಸಂಗ್ರಹ’ ಎಂಬ ಕೃತಿ ಬ್ರಹ್ಮಸಮಾಜದ ಧರ್ಮಶಾಸ್ತ್ರವಾಯಿತು. ಕೇಶವಚಂದ್ರರು ತಮ್ಮ ಸಮಾಜದ ತತ್ವವನ್ನು ಹೀಗೆ ವಿವರಿಸಿದರು;

“ವಿಶಾಲ ವಿಶ್ವವೇ ಭಗವಂತನ ದೇಗುಲ; ಜ್ಞಾನವೇ ಪವಿತ್ರ ಯಾತ್ರಾಸ್ಥಳ; ಸತ್ಯವೇ ಅವಿನಶ್ವರ ಧರ್ಮ ಶಾಸ್ತ್ರ; ನಂಬಿಕೆಯೇ ಎಲ್ಲ ಧರ್ಮಗಳ ಮೂಲ; ಪ್ರೇಮವೇ ನಿಜವಾದ ಧಾರ್ಮಿಕ ಸಂಸ್ಕೃತಿ; ಅಹಂಕಾರವನ್ನು ನಿರ್ಮೂಲ ಮಾಡುವುದೇ ನಿಜವಾದ ಸನ್ಯಾಸ”.

ಕ್ರಮೇಣ ಭಾರತೀಯ ಬ್ರಹ್ಮಸಮಾಜದ ಪ್ರಾರ್ಥನೆಗಳಲ್ಲಿ ವೈಷ್ಣವ ಸಂಪ್ರದಾಯದ ಭಕ್ತಿಯೂ ಸೇರಿಹೋಯಿತು. ತಾಳ, ಮದ್ದಲೆ, ಏಕತಾರ್ ಮೊದಲಾದ ಸಂಗೀತ ಪರಿಕರಗಳೊಡನೆ ಸಂಕೀರ್ತನ, ಪ್ರಾರ್ಥನೆಯ ಸಮಯದಲ್ಲಿ ಆರಂಭವಾಯಿತು. ೧೯೬೮ರ ಜನವರಿ ೨೪ರಂದು ಭಾರತೀಯ ಬ್ರಹ್ಮಸಮಾಜದ ಮಂದಿರದ ಶಂಕುಸ್ಥಾಪನಾ ಸಮಾರಂಭವು ನೆರವೇರಿತು. ಅಂದೇ ಕಲ್ಕತ್ತೆಯ ಪುರಸಭಾಭವನದಲ್ಲಿ ಕೇಶವಚಂದ್ರಸೇನರು ’ಆತ್ಮೋದ್ಧಾರಕ ಧರ್ಮ’ ಎಂಬ ವಿಚಾರವಾಗಿ ಭಾಷಣ ಮಾಡಿದರು. ಅನಂತರ ಕೇಶವಚಂದ್ರರು ಉಪನ್ಯಾಸ ಮಾಡಲು ಮುಂಬಯಿ ಮೊದಲಾದ ಪ್ರದೇಶಗಳಲ್ಲಿ ಸಂಚರಿಸಿದರು. ಬ್ರಹ್ಮಮಂದಿರದ ಪ್ರಾರಂಭೋತ್ಸವ ನಡೆದುದು ೧೮೬೯ರ ಆಗಸ್ಟ್ ತಿಂಗಳಲ್ಲಿ.

ಕೇಶವಚಂದ್ರರು ಬ್ರಹ್ಮಮಂದಿರದಲ್ಲಿ ಜನರು ಹೇಗೆ ನಡೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಲು ಹಲವಾರು ನಿಯಮಗಳನ್ನು ಮಾಡಿದರು. ಅವುಗಳಲ್ಲಿ ಕೆಲವು ಇವು; ಅದ್ವಿತೀಯನಾದ, ಸಕಲ ಕಲ್ಯಾಣ ಗುಣಗಳಿಂದ ಪರಿಪೂರ್ಣನಾದ, ಸಕಲ ಕಲ್ಯಾಣ ಗುಣಗಳಿಂದ ಪರಿಪೂರ್ಣನಾದ, ಅನಂತವಾದ ಸೃಷ್ಟಿಕರ್ತನಾದ, ಎಲ್ಲ ಕಡೆ ಇರುವ, ಸರ್ವಶಕ್ತನಾದ, ಸರ್ವಜ್ಞನಾದ, ಕಾರುಣ್ಯ ಮೂರ್ತಿಯಾದ, ಪರಮಪಾವನನಾದ ಭಗವಂತನನ್ನು ಆರಧಿಸಬೇಕು. ವಿಗ್ರಹ ಪೂಜೆ ಮಾಡಬಾರದು. ಪ್ರಾಣಿಗಳನ್ನು ಬಲಿ ಕೊಡಕೂಡದು. ಯಾವ ಜಾತಿಯವರಾಗಲಿ ಇನ್ನೊಂದು ಜಾತಿಯವರ ಧರ್ಮಗ್ರಂಥಗಳು, ವಿಗ್ರಹಗಳು, ಧರ್ಮದ ಚಿಹ್ನೆಗಳು ಇವನ್ನು ತಿರಸ್ಕರಿಸಕೂಡದು; ಇನ್ನೊಂದು ಜಾತಿಯನ್ನು ಅವಹೇಳನ ಮಾಡಕೂಡದು; ಜಾತಿ ವ್ಯತ್ಯಾಸವಿಲ್ಲದೆ, ಮೇಲಿನವರು ಕೀಳಾದವರು ಎಂಬ ಭಾವನೆಗೆ ಅವಕಾಶ ಕೊಡದೆ ಹೆಂಗಸರೂ ಗಂಡಸರೂ ಇಲ್ಲಿ ದೇವರ ಸೇವೆಯನ್ನು ನಡೆಸಬೇಕು.

ಇಂಗ್ಲೆಂಡ್ ಪ್ರವಾಸ

೧೮೭೦ರ ಜನವರಿ ತಿಂಗಳಲ್ಲಿ ’ಇಂಗ್ಲೆಂಡ್ ಮತ್ತು ಇಂಡಿಯಾ’ ಎಂಬ ವಿಷಯವಾಗಿ ಕೇಶವಚಂದ್ರರು ಉಪನ್ಯಾಸ ಮಾಡಿದರು. ೧೮೭೦ರ ಫೆಬ್ರವರಿ ತಿಂಗಳಲ್ಲಿ ಅವರು ಕಲ್ಕತ್ತೆಯಿಂದ ಹಡಗಿನಲ್ಲಿ ಹೊರಟು ಇಂಗ್ಲೆಂಡಿಗೆ ಪ್ರಯಾಣ ಮಾಡಿದರು. ಅವರ ಪ್ರಯಾಣದ ಉದ್ದೇಶ ಕ್ರೈಸ್ತರು ಹೇಗೆ ಇಂಗ್ಲೆಂಡಿನಲ್ಲಿ ಬದುಕುತ್ತಾರೆ ಎಂಬುದನ್ನು ಪ್ರತ್ಯಕ್ಷವಾಗಿ ನೋಡಿ ತಿಳಿದುಕೊಳ್ಳುವುದು. ಅಲ್ಲಿ ಸಂಚರಿಸುತ್ತಿದ್ದಾಗ ರಾಮಮೋಹನರಾಯರ ಸಮಾಧಿಗೆ ಗೌರವವನ್ನು ಸಲ್ಲಿಸಿದರು.

ಕೇಶವಚಂದ್ರರು ಇಂಗ್ಲೆಂಡಿನಲ್ಲಿ ಸುಮಾರು ಹದನಾಲ್ಕು  ಮುಖ್ಯ ಪಟ್ಟಣಗಳಲ್ಲಿಯೂ ಸ್ಕಾಟ್‌ಲೆಂಡಿನಲ್ಲಿಯೂ ಉಪನ್ಯಾಸಗಳನ್ನಿತ್ತರು. ಇಂಗ್ಲೆಂಡಿನ ಹಲವರು ಗಣ್ಯ ಮಹನೀಯರನ್ನು  ಸಂದರ್ಶಿಸುವ ಅವಕಾಶ ಅವರಿಗೆ ದೊರಕಿತು. ಭಾರತಕ್ಕೆ ಹಿಂದಿರುಗಿದಾಗ ಅವರು,’ಇಂಗ್ಲೆಂಡಿನ ಸೇವಾಧರ್ಮ, ವ್ಯವಹಾರಿಕ ಕಾರ್ಯಶ್ರದ್ಧೆ ಹಾಗೂ ನೈತಿಕ ನಿಷ್ಠೆಯನ್ನು ಭಾರತವು ಕಲಿಯಬೇಕು. ಭಾರತದ ಧಾರ್ಮಿಕ ಶ್ರದ್ಧೆ ಹಾಗೂ ಪ್ರಾರ್ಥನಾ ರೀತಿಯನ್ನು ಇಂಗ್ಲೆಂಡ್ ಕಲಿಯಬೇಕು’ ಎಂದು ಘೋಷಿಸಿದರು.

ಸಮಾಜ ಸೇವೆ

ಇಂಗ್ಲೆಂಡಿನಿಂದ ಹಿಂದಿರುಗಿದೊಡನೆ ಅವರು ಆರಂಭಿಸಿದುದು ’ಭಾರತೀಯ ಸುಧಾರಣಾ ಸಂಘ’. ಕಡಿಮೆ ಬೆಲೆಯ ಪುಸ್ತಕಗಳ ಪ್ರಕಟಣೆ, ಸೇವಾಯೋಜನೆ, ಮಹಿಳಾ ವಿದ್ಯಾಭ್ಯಾಸ, ವಿದ್ಯಾಪ್ರಗತಿ – ಈ ಸಂಘದ ಉದ್ದೇಶಗಳು. ಇಂಗ್ಲೆಂಡಿನಲ್ಲಿ ವೃತ್ತಪತ್ರಿಕೆಗಳಿದ್ದ ಪ್ರಾಶಸ್ತ್ಯವನ್ನು ತಿಳಿದ ಕೇಶವಚಂದ್ರರು ’ಸುಲಭ ಸಮಾಚಾರ್’ ಎಂಬ ಬಂಗಾಳಿ ವಾರಪತ್ರಿಕೆಯನ್ನು ಆರಂಭಿಸಿದರು. ಆ ಪತ್ರಿಕೆಗೆ ಕೇವಲ ಒಂದೇ ಪೈಸೆ ಬೆಲೆ. ಅದು ಬಹು ಜನಪ್ರಿಯವಾಯಿತು. ಇದುವರೆಗೆ ಅವರು ನಡೆಸುತ್ತಿದ್ದ ’ಇಂಡಿಯನ್ ಮಿರರ್’ ಪತ್ರಿಕೆ  ದಿನಪತ್ರಿಕೆಯಾಯಿತು. ಇಂಗ್ಲಿಷಿನಲ್ಲಿ ’‘ಸಂಡೇ ಮಿರರ್’’ ಎಂಬ ಪತ್ರಕೆಯನ್ನು ಅವರು ಆರಂಭಿಸಿದರು. ಮಹಿಳೆಯರ ಅಭಿವೃದ್ಧಿಗಾಗಿ ’ಭಾಮ ಹಿತೈಷಿಣೀ ಸಭಾ’ ಎಂಬ ಸಂಸ್ಥೆ ಆರಂಭವಾಗಿ, ಮಹಿಳಾ ವಿದ್ಯಾಭ್ಯಾಸಕ್ಕಾಗಿ ಶಾಲೆಯೂ ಆರಂಭವಾಯಿತು. ಇದಲ್ಲದೆ ಮಹಿಳೆಯರಿಗೆ ಚಿಕ್ಕಪುಟ್ಟ ಕೈಗಾರಿಕೆಗಳಲ್ಲಿ ಶಿಕ್ಷಣ ನೀಡುವ ಶಾಲೆಯನ್ನೂ ಅವರು ಆರಂಭಿಸಿದರು. ಅವರ ನೇತೃತ್ವದಲ್ಲಿ ವಿಧವಾ ವಿವಾಹಗಳೂ ಅಂತರ್ಜಾತೀಯ ವಿವಾಹಗಳೂ ನಡೆದವು. ಬಾಲ್ಯ ವಿವಾಹವನ್ನು ಖಂಡಿಸಿ, ಮದುವೆಯಾಗುವಾಗ ಕಡೆಯಪಕ್ಷ ವಧುವಿಗೆ ೧೪ ವರ್ಷವೂ ವರನಿ‌ಗೆ ೧೮ ವರ್ಷವೂ ಆಗಿರಬೇಕೆಂದರು. ಬ್ರಹ್ಮಸಮಾಜದ ನಿಯಮಗಳ ಪ್ರಕಾರ ಮದುವೆ ನಡೆದರೂ ಮದುವೆ ಕಾನೂನಿಗೆ ಅನುಗುಣವಾಗಿ ನಡೆದಂತೆ ಸರ್ಕಾರ ಅದನ್ನು ಒಪ್ಪುತ್ತದೆ ಎಂದು ೧೮೭೨ರಲ್ಲಿ ಸರ್ಕಾರದ ಒಪ್ಪಿಗೆ ದೊರಕಿತು. ಈ ಕಾಯಿದೆಯಂತೆ ವಿಧವಾ ವಿವಾಹ ಹಾಗೂ ಅಂತರ್ಜಾತೀಯ ವಿವಾಹಗಳಿಗೆ ಮಾನ್ಯತೆ ದೊರಕಿತು. ಇದೇ ಸಮಯದಲ್ಲಿ ’ಭಾರತ ಆಶ್ರಮ’ ಎಂಬ ಗುರುಕುಲವನ್ನು ಅವರು ತೆರೆದು  ಸಾಧಕರಾದ ಬ್ರಹ್ಮಸಮಾಜದವರು ಒಂದು  ಕಡೆ ನೆಲೆಸಲು ಅನುಕೂಲವಾಗುವಂತೆ ಮಾಡಿದರು. ಸುಮಾರು ಇಪ್ಪತ್ತೈದು ಸಂಸಾರಗಳು ಈ ಆಶ್ರಮದ ಆಶ್ರಯದಲ್ಲಿ ವಾಸಿಸಿದವು. ಈ ಸಂಸಾರದ ಮಕ್ಕಳಿಗಾಗಿ ತೆರೆದ ಶಾಲೆ ಕೇಶವಚಂದ್ರರ ಸಹೋದರ ಕೃಷ್ಣ ಬಿಹಾರಿ ಸೇನರ ನೇತೃತ್ವದಲ್ಲಿ ಬೆಳೆದು ಕಡೆಗೆ ಆಲ್ಬರ್ಟ್ ಕಾಲೇಜಾಗಿ ಪರಿವರ್ತಿತವಾಯಿತು.

ಸಂಕೇರ್ತದಲ್ಲಿ ಕೇಶವಚಂದ್ರ ಸೇನ್

ಬ್ರಹ್ಮಮಂದಿರದಲ್ಲಿ ಮಹಿಳೆಯರು ಒಂದು ಪರದೆಯ ಹಿಂದೆ ಕುಳತಿರುವ ಪದ್ಧತಿ ಇತ್ತು. ಆ ಪದ್ಧತಿ ಕ್ರಮೇಣ ತಪ್ಪಿಹೋಯಿತು. ದಿನಗಳು ಉರುಳಿದಂತೆ ಕೇಶವಚಂದ್ರರು ಹೆಚ್ಚು ನಿಯಮವಂತ ಜೀವನ ನಡೆಸಲು ಆರಂಭಿಸಿದರು. ಯೋಗ, ಭಕ್ತಿ, ಜ್ಞಾನ, ಸೇವೆಗಳೇ ಜೀವನದ ಮೌಲ್ಯವೆಂದು ಅವರು ಸಾರಿದರು.

ಶ್ರೀ ರಾಮಕೃಷ್ಣ ಪರಮಹಂಸರ ಸಾನ್ನಿಧ್ಯ

ಶ್ರೀ ರಾಮಕೃಷ್ಣ ಪರಮಹಂಸರು ನಮ್ಮ ದೇಶದ ಮಹಾಪುರುಷರಲ್ಲಿ ಒಬ್ಬರು. ಅವರು ಕಲ್ಕತ್ತೆಗೆ ಸಮೀಪದಲ್ಲಿದ್ದ ದಕ್ಷಿಣೇಶ್ವರದಲ್ಲಿ ಭವತಾರಿಣಿಯ ಪೂಜಾರಿಯಾಗಿ ಅಲ್ಲಿಯೇ ವಾಸಿಸುತ್ತಿದ್ದರು. ಅವರು ಅನೇಕ  ಸಾಧನೆಗಳ ಮೂಲಕ ಬ್ರಹ್ಮ ಸಾಕ್ಷಾತ್ಕಾರ  ಮಾಡಿಕೊಂಡ ದೇವಮಾನವರಾಗಿದ್ದರು. ಅವರ ಸಂದರ್ಶನದಿಂದ ಹಾಗೂ ಅವರ ಸಂದೇಶಗಳನ್ನು ಕೇಳಿ ಅನೇಕರು ಜೀವನದಲ್ಲಿ ಹೊಸ ಬೆಳಕನ್ನು ಕಂಡುಕೊಂಡರು. ಅವರು ಜ್ಞಾನ, ಕರ್ಮ,ಭಕ್ತಿ ಈ ಪಂಥಗಳನ್ನು ಅರಿತು ಸರ್ವಧರ್ಮ ಸಮನ್ವಯಾಚಾರ್ಯರೆಂದು ಖ್ಯಾತರಾಗಿದ್ದರು. ಅವರ ಸಾನ್ನಿಧ್ಯ ಹಾಗೂ ಪ್ರಭಾವಗಳಿಂದ ಕೇಶವಚಂದ್ರರ ಹೃದಯ ಮತ್ತಷ್ಟು ವಿಶಾಲವಾಯಿತು.

ಒಂದು ದಿನ ಪರಮಹಂಸರ ಶಿಷ್ಯರೊಬ್ಬರು, ಕೇಶವಚಂದ್ರರು ದುರ್ಗಾಪೂಜೆಯ ತತ್ವವನ್ನು ವಿವರಿಸುವ ರೀತಿಯನ್ನು ಪರಮಹಂಸರಿಗೆ ಈ ರೀತಿಯಾಗಿ ತಿಳಿಸಿದರು.

“ತಾಯಿ ದುರ್ಗೆಯನ್ನು ಹೃದಯ  ಮಂದಿರಕ್ಕೆ ಆಹ್ವಾನಿಸಿದರೆ ಅಲ್ಲಿಗೆ ಲಕ್ಷ್ಮೀ, ಸರಸ್ವತಿ, ಕಾರ್ತಿಕೇಯ ಮತ್ತು ಗಣೇಶರು ಆಗಮಿಸುತ್ತಾರೆ. ಲಕ್ಷ್ಮಿ ಎಂದರೆ ಸಂಪತ್ತು, ಸರಸ್ವತಿ ಎಂದರೆ ಜ್ಞಾನ, ಕಾರ್ತಿಕೇಯ ಎಂದರೆ ಶಕ್ತಿ, ಗಣೇಶ ಎಂದರೆ ವಿಜಯ”. ಈ ಮಾತುಗಳನ್ನು ಕೇಳಿದ ಪರಮಹಂಸರು, ಬ್ರಹ್ಮಮಂದಿರದಲ್ಲಿ ನಡೆಯುತ್ತಿದ್ದ ಪ್ರಾರ್ಥನಾ ರೀತಿಯನ್ನು ಕೇಳಿ ತಿಳಿದುಕೊಂಡರು.

೧೮೮೨ರ ಅಕ್ಟೋಬರ್ ೨೭ ರಂದು ಬ್ರಹ್ಮಸಮಾಜದ ಭಕ್ತರು ಕೇಶವಚಂದ್ರರೊಡನೆ ಒಂದು ಯಂತ್ರಚಾಲಿತ ನೌಕೆಯಲ್ಲಿ ಕುಳಿತು ದಕ್ಷಿಣೇಶ್ವರದ ಕಡೆಗೆ ಬಂದರು. ಶ್ರೀರಾಮಕೃಷ್ಣರನ್ನು ಆಹ್ವಾನಿಸಲು ಕೆಲವು ಭಕ್ತರು ದಕ್ಷಿಣೇಶ್ವರಕ್ಕೆ ಬಂದರು. ಸತ್ಸಂಗದಲ್ಲಿರಲು ಒಪ್ಪಿ ಪರಮಹಂಸರು ದೋಣಿಯಲ್ಲಿ ಕುಳಿತು, ಯಂತ್ರಚಾಲಿತ ನೌಕೆಯನ್ನು ಸೇರಿದಾಗ ಕೇಶವಚಂದ್ರರು ಗೌರವಪೂರ್ವಕವಾಗಿ ಅವರನ್ನು ಸ್ವಾಗತಿಸಿದರು ಪರಮಹಂಸರು ಅಂತರ್ಮುಖಿಗಳಾಗಿ ಆಧ್ಯಾತ್ಮದ  ವಿಚಾರವಾಗಿ ಮಾತನಾಡಲಾರಂಭಿಸಿದರು.  ಆಗ ಭಕ್ತರೊಬ್ಬರು, “ಸ್ವಾಮಿ, ತಮ್ಮ ಭಾವಚಿತ್ರವನ್ನು ಮಹಾತ್ಮರಾದ ಪವಹಾರಿಬಾಬ ತಮ್ಮ ಕೊಠಡಿಯಲ್ಲಿಟ್ಟುಕೊಂಡಿದ್ದಾರೆ” ಎಂದರು.

ಪರಮಹಂಸರು, (ತಮ್ಮ ದೇಹವನ್ನು ತೋರುತ್ತ) “ಇದರಲ್ಲಿ ಏನಿದೆ? ಕೇವಲ ದಿಂಬಿನ ಹೊದಿಕೆ! ಭಕ್ತನ ಹೃದಯವೇ ಭಗವಂತನ ಮಂದಿರ” ಎಂದು ನುಡಿದರು.

ಪರಮಹಂಸರು ಹಲವು ವಿಚಾರಗಳನ್ನು ಮಾತನಾಡುತ್ತ, ಕಡೆಗೆ ಆದಿಶಕ್ತಿಯ ವಿಚಾರವಾಗಿಯೂ ಸಾಧನೆಯ ವಿಚಾರವಾಗಿಯೂ ಮಾತನಾಡಿದರು:

“ಆದಿಶಕ್ತಿ ಲೀಲೆಯಲ್ಲಿ ತೊಡಗೆದ್ದಾಳೆ. ಅವಳೇ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣ. ಆ ಶಕ್ತಿಯನ್ನೇ ಕಾಳಿ ಎಂದು ಕರಿಯುವುದು. ಕಾಳಿಯೇ ಬ್ರಹ್ಮ, ಬ್ರಹ್ಮನೇ ಕಾಳಿ. ಕ್ರಿಯೆಯಲ್ಲಿ ತೊಡಗದಿರುವ  ಆ ಶಕ್ತಿಯನ್ನು ಬ್ರಹ್ಮವೆಂದು ಕರೆಯುವುದು. ಕ್ರಿಯಾಶೀಲವಾದ ಆ ಶಕ್ತಿಯನ್ನು ಕಾಳಿಯೆಂದು ಕರೆಯುವುದು…”

ಕೇಶವಚಂದ್ರ : ಸ್ವಾಮಿ, ಎಷ್ಟು ರೀತಿಯಲ್ಲಿ ಆ ಆದಿಶಕ್ತಿಯಾದ ಕಾಳಿ ಈ ಲೋಕದಲ್ಲಿ ವ್ಯವಹರಿಸುತ್ತಾಳೆ?
ಪರಮಹಂಸರು : ಮಹಾಕಾಳಿ, ನಿತ್ಯಕಾಳಿ, ಸ್ಮಶಾನಕಾಳಿ, ರಕ್ಷಾಕಾಳಿ, ಶ್ಯಾಮಕಾಳಿ-ಹೀಗೆ ಹಲವು ರೀತಿಯಲ್ಲಿ ಅವಳು ಲೀಲೆಯಲ್ಲಿ ತೊಡಗಿರುತ್ತಾಳೆ.

ಕಡೆಗೆ ಬೋಧನೆಯ ವಿಚಾರವಾಗಿ ಮಾತನಾಡುತ್ತ ಪರಮಹಂಸರು ಹೀಗೆ ನುಡಿದರು:

“ಇತರರಿಗೆ ಬೋಧಿಸುವುದು ತುಂಬ ಕಷ್ಟ. ಭಗವಂತನ ಸಾಕ್ಷಾತ್ಕಾರವಾದರೆ ಗುರುವಾಗಲು ಯೋಗ್ಯನಾಗುತ್ತಾನೆ. ನಾರದ, ಶುಕದೇವ ಹಾಗೂ ಋಷಿಗಳು ಭಗವಂತನ ಆದೇಶ ಪಡೆದು ಬೋಧಿಸಿದರು. ಭಗವಂತನ ಆದೇಶವಿಲ್ಲದೆ ಮಾತನಾಡಿದರೆ ಯಾರು ಕೇಳುತ್ತಾರೆ?”

ನೌಕೆಯ ಪ್ರಯಾಣ ಮುಗಿದ ಬಳಿಕ, ಕೇಶವಚಂದ್ರರು ಶ್ರೀ ರಾಮಕೃಷ್ಣ ಪರಮಹಂಸರಿಗೆ ಭಕ್ತಿಯಿಂದ ಪ್ರಣಾಮ ಮಾಡಿ ಅವರನ್ನು ಬೀಳ್ಕೊಟ್ಟರು.

ಒಂದು ದಿನ ಕೇಶವಚಂದ್ರರು ಪರಮಹಂಸರ ಬಳಿಗೆ ಹೋದಾಗ, ಪರಮಹಂಸರು, “ಒಂದು  ಎಲೆಯೂ ಭಗವಂತನ ಇಚ್ಛೆ ಇಲ್ಲದೆ ಚಲಿಸುವುದಿಲ್ಲ” ಎಂದು ಹೇಳಿದರು.

ಒಂದು ದಿನ ಭಕ್ತರೊಬ್ಬರು ಕೇಶವಚಂದ್ರರ ಸಾಧನೆಯನ್ನು ಕುರಿತು ಮಾತನಾಡಿದಾಗ, ಪರಮಹಂಸರು, “ಕೇಶವಚಂದ್ರ ಸೇನರು ಜಗತ್ತಿನ ಸುಖವನ್ನು ಅನುಭವಿಸುತ್ತ, ಯೋಗಾಭ್ಯಾಸವನ್ನು ಮಾಡುತ್ತಿದ್ದಾರೆ” ಎಂದರು.

ಮತ್ತೊಂದು ದಿನ ಪರಮಹಂಸರು, ಕೇಶವಚಂದ್ರ ಸೇನರಿಗೆ ತಾವು ಹೇಳಿದ ಮಾತುಗಳನ್ನು ಜ್ಞಾಪಿಸಿಕೊಂಡು ಹೀಗೆ ಹೇಳದರು:

ನಾನು ನಾಯಕ, ನಾನು  ಈ  ಸಂಘವನ್ನು ಸ್ಥಾಪಿಸಿದೆ, ನಾನು ಜನರ ಗುರು – ಹೀಗೆ ಹೇಳುವುದು ಅಪಕ್ವವಾದ ಅಹಂಕಾ‌ರ. ಧರ್ಮವನ್ನು ಉಪದೇಶಿಸುವುದು ತುಂಬ ಕಷ್ಟದ ಕಾರ್ಯ. ಭಗವಂತನ ಆದೇಶವಿಲ್ಲದೆ ಈ ಕಾರ್ಯ ಕಷ್ಟಕರ.

ಕಾಯಿಲೆಯಲ್ಲಿ ಸಂತೈಕೆ

೧೮೮೩ರ ನವೆಂಬರ್ ತಿಂಗಳಲ್ಲಿ ಕೇಶವಚಂದ್ರರಿಗೆ ಕಾಯಿಲೆ ಎಂಬ ಸುದ್ದಿಯನ್ನು ಕೇಳಿದ ಪರಮಹಂಸರು ಅವರನ್ನು ಸಂದರ್ಶಿಸಲು ಅವರ ಮನೆಗೆ ಹೋದರು. ಸ್ವಲ್ಪ ಹೊತ್ತಾದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿ ಸಣ್ಣಗಾಗಿದ್ದ ಕೇಶವಚಂದ್ರರು ಮೆಲ್ಲಗೆ ಗೋಡೆಯನ್ನು ಹಿಡಿ‌‌ದುಕೊಂಡು ಬಂದು ಪರಮಹಂಸರಿಗೆ ಪ್ರಣಾಮ ಮಾಡಿ, ಅವರ ಬಳಿ ಕುಳಿತುಕೊಂಡರು, ಕೇಶವಚಂದ್ರನ್ನು ಸಂತೈಸುತ್ತ ಹಲವು ವಿಚಾರವಾಗಿ ಪರಮಹಂಸರು ಮಾತನಾಡಿದರು.

ಪರಮಹಂಸರು : ಯಾರು ಸುಖವನ್ನು ಬಲ್ಲರೋ ಅವರು ದುಃಖವನ್ನು ಬಲ್ಲವರಾಗಿರುತ್ತಾರೆ. ಇದು ನಿಮಗೆ ಅರ್ಥವಾಗುವುಲ್ಲವೇ?

ಕೇಶವಚಂದ್ರರು: ಹೌದು ಸ್ವಾಮಿ, ಅರ್ಥವಾಗುತ್ತದೆ.

ಪರಮಹಂಸರು : ನನ್ನ ತಾಯಿ! ಯಾರು ನನ್ನ ತಾಯಿ! ಅವಳು ಜಗನ್ಮಾತೆ. ಅವಳೇ ಈ ವಿಶ್ವವನ್ನು ಸೃಷ್ಟಿಸುವುದು. ಮಕ್ಕಳನ್ನು ರಕ್ಷಿಸುತ್ತ ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಅನುಗ್ರಹಿಸುವವಳು ಅವಳೇ! ನಿಜವಾದ ಮಗ ಅವಳಿಂದ ದೂರವಿರಲಾರ! ಮಕ್ಕಳು ಉಣ್ಣುತ್ತಾರೆ, ಪಾನೀಯವನ್ನು ಕುಡಿಯುತ್ತಾರೆ, ಸಂತೋಷವಾಗಿರುತ್ತಾರೆ, ಇವೆಲ್ಲವೂ ತಾಯಿಗೆ ಗೊತ್ತು. ತಾಯಿಯ ಸಾನ್ನಿಧ್ಯದಲ್ಲಿರುವ ಮಕ್ಕಳು ಜಗತ್ತಿನ ವಿಷಯವಾಗಿ ಯೋಚಿಸುವುದೇ ಇಲ್ಲ.

ಆ ಸಮಯಕ್ಕೆ ಕೇಶವಚಂದ್ರರ ತಾಯಿ ಬಂದು ಪರಮಹಂಸರಿಗೆ ನಮಸ್ಕರಿಸಿ, ತಮ್ಮ ಮಗನ ಆರೋಗ್ಯ ಉತ್ತಮವಾಗುವಂತೆ ಆಶೀರ್ವದಿಸಬೇಕೆಂದು ಕೇಳಿಕೊಂಡರು.

ಪರಮಹಂಸರು : ನಾನು ಏನು ಮಾಡಲಿ? ಭಗವಂತನೊಬ್ಬನೆ- ಎಲ್ಲರನ್ನು ಆಶೀರ್ವದಿಸುವವನು. ಅವರವರ ಕರ್ಮಫಲವನ್ನು ಅವರವರು ಅನುಭವಿಸಬೇಕು.

ಸ್ವಲ್ಪ ಹೊತ್ತು ಮಾತನಾಡಿ, ಕೇಶವಚಂದ್ರರು ತುಂಬ ಕೆಮ್ಮುತ್ತ ಬಳಲುತ್ತಿರುವುದನ್ನು ಕಂಡು, ಅವರನ್ನು ವಿಶ್ರಾಂತಿಗಾಗಿ ಕಳುಹಿಸಿ, ಪರಮಹಂಸರು ದಕ್ಷಿಣೇಶ್ವರಕ್ಕೆ ಹಿಂದುರುಗಿದರು. ಇದೇ ಪರಮಹಂಸರ ಮತ್ತು ಕೇಶವಚಂದ್ರಸೇನರ ಕಡೆಯ ಸಂದರ್ಶನ.

ಪರಮಹಂಸರ ಕೇಶವಚಂದ್ರ ಸೇನರು ಕಾಲವಾದ ಬಳಿಕ, ಆಗಾಗ ಅವರನ್ನು ಜ್ಞಾಪಿಸಿಕೊಳ್ಳುತ್ತಿದ್ದರು.

ಮಗಳ ಮದುವೆ

ಕೇಶವಚಂದ್ರರು ಕಲ್ಕತ್ತೆಗೆ ಸುಮಾರು ಹನ್ನೆರಡು ಮೈಲಿದೂರದಲ್ಲಿದ್ದ ದೊಡ್ಡ ಭವನವನ್ನೂ ಅದರ ಸುತ್ತಲಿದ್ದ ತೋಟವನ್ನೂ ಕೊಂಡುಕೊಂಡು ಅದಕ್ಕೆ ’ಲಿಲಿ ಕಾಟೇಜ್’ ಎಂದು ಹೆಸರಿಟ್ಟು ಅಲ್ಲಿ ವಾಸಿಸತೊಡಗಿದರು. ಕ್ರಮೇಣ ಅವರ ಅನುಯಾಯಿಗಳು ಆ ತೋಟದಲ್ಲಿ ಬಂದು ನೆಲೆಸಿದರು. ಅದೊಂದು ಬ್ರಹ್ಮಸಮಾಜದ ಪುಟ್ಟ ಬಡಾವಣೆಯಾಯಿತು. ಲಿಲಿ ಕಾಟೇಜಿನಲ್ಲಿ ಬೆಳಿಗ್ಗೆ ಮತ್ತು ಸಂಜೆ ಪ್ರಾರ್ಥನಿಗಾಗಿ ಹಲವರು ಬರುತ್ತಿದ್ದರು.

೧೮೭೮ರಲ್ಲಿ ಕೇಶವಚಂದ್ರರು ತುಂಬ ಆಕ್ಷೇಪಣೆಗೆ ಗುರಿಯಾಗಲು ಕಾರಣವಾದ ಒಂದು ಸಂಗತಿ ನಡೆಯಿತು.

ಆ ವರ್ಷದ ಫೆಬ್ರವರಿ ತಿಂಗಳಲ್ಲಿ ಅವರು ಮಗಳಿಗೆ ಮದುವೆ ಮಾಡಿದರು. ವರ ಕೂಚ್ ಬಿಹಾರಿನ ರಾಜಕುಮಾರ. ಹುಡಿಗಿಗೆ ಇನ್ನೂ ಹದಿಮೂರು ವರ್ಷ ಹತ್ತು ತಿಂಗಳು ವಯಸ್ಸು. ರಾಜಕುಮಾರನಿಗೆ ಕೇವಲ ಹದಿನಾರು ವರ್ಷ ವಯಸ್ಸು. ಬ್ರಹ್ಮಸಮಾಜದ ವಿವಾಹದ ನಿಯಮವನ್ನು ಉಲ್ಲಂಘಿಸಿದ ಕೇಶವಚಂದ್ರರನ್ನು ಅನೇಕರು ಟೀಕಿಸಿದರು. ಅವರ ಟೀಕೆಗೆ ಐದು ಪ್ರಮುಖ ಕಾರಣಗಳಿದ್ದವು. ೧) ಮದುವೆ ಬ್ರಹ್ಮಸಮಾಜದ ರೀತಿಯಲ್ಲಿ ನಡೆಯದೆ, ಹಿಂದೂ ಸಂಪ್ರದಾಯದಂತೆ ನಡೆದುದು. ೨) ಕನ್ಯೆಗೆ ಹದಿನಾಲ್ಕು ವರ್ಷ ತುಂಬದೆ, ಹದಿನಾರು ವರ್ಷದ ವರನೊಡನೆ ವಿವಾಹವಾದುದು. ೩) ಮದುವೆ ಹಿಂದೂ ಸಂಪ್ರದಾಯದಂತೆ ಮೂರ್ತಿಪೂಜೆ ಮೊದಲಾದ ಬ್ರಹ್ಮಸಮಾಜದ ತತ್ವಕ್ಕೆ ವಿರುದ್ಧವಾ‌‌ದ ರೀತಿಯಲ್ಲಿ ನಡೆದುದು. ೪) ರಾಜಕುಮಾರ ಬ್ರಹ್ಮಸಮಾಜಕ್ಕೆ ಸೇರದಿದ್ದುದು. ೫)ಕೂಚ್‌ಬಿಹಾರಿನ ರಾಜರಲ್ಲಿ ಬಹುಪತ್ನೀತ್ವ ಪದ್ಧತಿ ಇದ್ದುದು. ವರನ ಕಡೆಯವರು ಕೇಶವಚಂದ್ರರಿಗೆ ಕೊಟ್ಟಿದ್ದ ಭರವಸೆಗಳನ್ನು ಮುರಿದರು ಎಂದು ಕಾಣುತ್ತದೆ; ಕೇಶವಚಂದ್ರರಿಗೂ ಇದರಿಂದ ಮನಸ್ಸಿಗೆ ತುಂಬ ನೋವಾಯಿತು. ತಮ್ಮ ಮೇಲೆ ಬಂದ ಟೀಕೆಗಳಿಗೆಲ್ಲ ಕೇಶವಚಂದ್ರರು, ’ಭಗವಂತನ ಆದೇಶದಂತೆ ನಡೆದಿದ್ದೇನೆ’ಎಂಬ ಒಂದೇ ಉತ್ತರವನ್ನು ಹೇಳಿದರು. ಈ ಉತ್ತರ ಅನೇಕರಿಗೆ ತೃಪ್ತಿಯನ್ನುಂಟು ಮಾಡಲಿಲ್ಲ. ಕಡೆಗೆ ಅತೃಪ್ತರು ೧೮೭೮ರ ಮೇ ತಿಂಗಳ ೧೫ರಂದು ’ಸಾಧಾರಣ ಬ್ರಹ್ಮಸಮಾಜ’ ವೆಂಬ ಶಾಖೆಯನ್ನು ಆರಂಭಿಸಿದರು.

ಕೊನೆಯ ದಿನಗಳು

’ಭಾರತೀಯ ಬ್ರಹ್ಮಸಮಾಜದಲ್ಲಿ ಮೂಡಿದ ಒಡಕು ಕೇಶವಚಂದ್ರರ ಆರೋಗ್ಯದ ಮೇಲೆ ಭಯಂಕರ ಪರಿಣಾಮವನ್ನುಂಟು ಮಾಡಿತು. ೧೮೮೦ರಲ್ಲಿ ಅವರು ’ನವವಿಧಾನ’ವೆಂಬ ತತ್ವವನ್ನು ಬೋಧಿಸುತ್ತ, ತಾವು ದೇವರ ಪ್ರವಾದಿ ಎಂದು ಸಾರಿದರು. ವೈದ್ಯರ ಹಿತವಚನದಂತೆ, ಅವರು ವಿಶ್ರಾಂತಿಗಾಗಿ ೧೮೮೩ರ ಏಪ್ರಿಲ್ ತಿಂಗಳಲ್ಲಿ ಸಿಮ್ಲಾಕ್ಕೆ ಹೋಗಬೇಕಾಯಿತು. ಸ್ವಲ್ಪ ಚೇತರಿಸಿಕೊಂಡು ಅವರು ಅಕ್ಟೋಬರ್ ತಿಂಗಳಲ್ಲಿ ಹಿಂದುರುಗಿದರು. ಅವರ ಆರೋಗ್ಯ ಸಂಪೂರ್ಣವಾಗಿ ಸುಧಾರಿಸಲಿಲ್ಲ. ಇದೇ ಸಮಯದಲ್ಲಿ ಅವರು ’ಯೂರೋಪಿಗೆ ಏಷ್ಯಾದ ಸಂದೇಶ’ ಎಂಬ ಉಪನ್ಯಾಸ ಮಾಡಿದರು. ಆ ಉಪನ್ಯಾಸದ ಸಾರ ಹೀಗಿದೆ:

ವಿಜ್ಞಾನದಲ್ಲಿ ಬೇರೆ ಬೇರೆ ಜಾತಿಗಳಿಲ್ಲ, ಶತ್ರುತ್ವವಿಲ್ಲ. ವಿಜ್ಞಾನಶಾಸ್ತ್ರ ಪೌರ್ವಾತ್ಯರಿಗೆ ಮತ್ತು ಪಾಶ್ಚಾತ್ಯರಿಗೆ – ಎಲ್ಲರಿಗೂ ಒಂದೇ. ಪೌರ್ವಾತ್ಯ ದೇಶಗಳಿಗೊಂದು, ಪಾಶ್ಚಿಮಾತ್ಯ ದೇಶಗಳಿಗೊಂದು – ಈ ರೀತಿಯಾಗಿ ಎರಡು ಖಗೋಳ ಶಾಸ್ತ್ರವಿರುವುದು ಸಾಧ್ಯವೇ? ಅದಕ್ಕೆ ಜಾತಿ, ವರ್ಣ ಮತ್ತು ರಾಷ್ಟ್ರಗಳೆಂಬ ಭೇದವಿಲ್ಲ.

ಹಾಗೆಯೇ ಜಗತ್ತಿನ ಎಲ್ಲ ಮಹಾಪುರುಷರನ್ನು ಎಲ್ಲರೂ ಗೌರವಿಸಬೇಕು, ಅವರಲ್ಲಿ ಪೂರ್ವ – ಪಶ್ಚಿಮ ಎಂಬ ವ್ಯತ್ಯಾಸವಿಲ್ಲ ಎಂದು ಅವರು ಹೇಳುತ್ತಿದ್ದರು.

ಯೇಸುಕ್ರಿಸ್ತನಲ್ಲಿ ಕೇಶವಚಂದ್ರರಿಗಿದ್ದ ಅಪಾರ ಗೌರವ ಹಾಗೂ ಪ್ರೇಮ ಈ ಉಪನ್ಯಾಸದಲ್ಲಿ ಚೆನ್ನಾಗಿ ವ್ಯಕ್ತವಾಗುತ್ತದೆ.

೧೮೮೪ರ ಜನವರಿ ತಿಂಗಳಲ್ಲಿ ಲಿಲಿ ಕಾಟೇಜಿನ ಸಮೀಪದಲ್ಲಿ ಕೇಶವಚಂದ್ರರು ನವದೇವಾಲಯವನ್ನು ನಿರ್ಮಿಸಿ, ಅದರ ಪ್ರಾರಂಭೋತ್ಸವದ ಸಮಯದಲ್ಲಿ ಹೀಗೆ ಹೇಳಿದರು:

“ಓ ತಾಯಿ, ನಿನ್ನ ದೇಗುಲಕ್ಕೆ ಬಂದಿದ್ದೇನೆ. ಈ ಸ್ಥಳ ನಿನ್ನದು ತಾಯಿ, ಇದರ ಸಾಮ್ರಾಜ್ಞಿ ನೀನು. ಇದು ನಿನ್ನ ದೇವಾಲಯ. ನಮಃ ಸಚ್ಚಿದಾನಂದ ಹರಿ! ಓ ಜಗನ್ಮಾತೆ, ನಿನ್ನ ಸಂದರ್ಶನಕ್ಕೆ ಬರುವ ಭಕ್ತರಿಗೆ ನನ್ನ ಮನೆಯಲ್ಲಿ ಸ್ಥಳವಿರಲಿಲ್ಲ. ಆದುದರಿಂದ ಈ ಮಂದಿರ ನಿರ್ಮಿತವಾಗಿದೆ. ನಿನ್ನ ಅಭಲಾಷೆಯಂತೆಯೇ ಈ ದೇವಾಲಯ! ಈ ಸ್ಥಳವೇ ಬೃಂದಾವನ, ಕಾಶಿ, ಮೆಕ್ಕ, ಜೆರೂಸಲೇಮ್. ನಿನ್ನ ಭಕ್ತರನ್ನು ಅನುಗ್ರಹಿಸು. ಓ ನನ್ನ ಸೋದರರೆ, ಭಕ್ತಿಯ ಪುಷ್ಪಗಳಿಂದ ಮಾತೆಯನ್ನು ಅರ್ಚಿಸಿ, ಪ್ರೀತಿಯ ಕುಸುಮಗಳನ್ನು ಅರ್ಪಿಸುವ ದೀನದಲಿತರೂ ತಾಯಿಗೆ ಪ್ರಿಯರು. ಅನಂತ ಪ್ರೇಮ ಸ್ವರೂಪಿಣಿಯಾದ ಮಾತೆ ಪಾಪ , ದೌರ್ಬಲ್ಯ, ದುಃಖ ಹಾಗೂ ಕಷ್ಟ ಕ್ಲೇಶಗಳನ್ನು ನಿವಾರಿಸುತ್ತಾಳೆ. ನನ್ನ ತಾಯಿಯೇ ನನ್ನ ಆರೋಗ್ಯ, ನನ್ನ ಸೌಭಾಗ್ಯ. ನನ್ನ ಶಾಂತಿ, ನನ್ನ ಜೀವನ, ನನ್ನ ಅಮೃತಧಾಮ. ನನ್ನ ರೋಗವನ್ನು ಮರೆತು ಮಾತೆಯ ಸಾನ್ನಿಧ್ಯದಲ್ಲಿ ಆನಂದವಾಗಿದ್ದೇನೆ.”

ಕೇಶವ ಚಂದ್ರರು ಮತ್ತು ರಾಮಕೃಷ್ಣ ಪರಮಹಂಸರು

ಇದೇ ಕೇಶವಚಂದ್ರರು ಸಾರ್ವಜನಿಕ ಸಭೆಯಲ್ಲಿ ಮಾಡಿದ ಕೊನೆಯ ಪ್ರಾರ್ಥನೆ. ಇದಾದ ಕೆಲವು ದಿನಗಳಲ್ಲಿ ಅವರ ರೋಗ ಉಲ್ಬಣವಾಯಿತು. ಸೊಂಟದಲ್ಲಿ ತುಂಬಾ ನೋವು ಕಾಣಿಸಿತು. ಬಹುಮೂತ್ರ ರೋಗದಿಂದ ಅವರು ತುಂಬ ಬಳಲಿದ್ದರು. ದೇಹದ ಬಾಧೇಯನ್ನು ತಾಳಲಾರದೆ, ’ಬಾಬಾ’ ’ಮಾ’ – ಎಂದು ಪರಬ್ರಹ್ಮನನ್ನೂ ಮಾತೆಯನ್ನೂ ಕರೆಯುತ್ತಿದ್ದರು. ಮಲಗೆದಲ್ಲಿಯೇ ನೋವಿನಿಂದ ಹೊರಳಾಡುತ್ತ, ಕೊನೆಯ ಎರಡು – ಮೂರು ದಿನಗಳು ಅವರು ಪ್ರಜ್ಞಾಶೂನ್ಯರಾದರು. ಅವರ ಬಳಿ, ಅವರಿಗೆ ಪ್ರಿಯವಾದ ಸಂಕೀರ್ತನೆಗಳನ್ನು ಹಾಡಿದಾಗ ತಾದಾತ್ಮ್ಯದಿಂದ ಕೇಳಿದರು. ೧೮೮೪ರ ಜನವರಿ ೮ನೇ ದಿನಾಂಕ ಅವರು ತಮ್ಮ ಭೌತಿಕ ಶರೀರವನ್ನು ತ್ಯಜಿಸಿದರು.

ಕೇಶವಚಂದ್ರರಿಗೆ ಸಾಯುವಾಗ ೪೬ ವರ್ಷ ವಯಸ್ಸು.

ಪುಣ್ಯ ಸ್ಮರಣೆ

ಕೇಶವಚಂದ್ರ ಸೇನರ ಪಾರ್ಥಿವ ಶರೀರವನ್ನು ಅವರ ಶಿಷ್ಯರು ಸ್ನಾನ ಮಾಡಿಸಿ, ಬಿಳಿಯ ರೇಷ್ಮೆ ವಸ್ತ್ರಗಳಿಂದಲೂ ಪುಷ್ಪಗಳಿಂದಲೂ ಅಲಂಕರಿಸಿ, ನವದೇವಾಲಯದ ಮುಂದಿರಿಸಿದರು. ಜಾತಿಭೇದವಿಲ್ಲದೆ ಸಹಸ್ರಾರು ಜನರು ಈ ಪುಣ್ಯಪುರುಷನಿಗೆ ಅಂತಿಮ ಗೌರವವನ್ನು ಸಲ್ಲಿಸಲು ಲಿಲಿ ಕಾಟೇಜಿನ ಬಳಿ ಇದ್ದ ನವದೇವಾಲಯಕ್ಕೆ ಬಂದರು. ಅವರ ಅಂತಿಮ ಯಾತ್ರೆಯಲ್ಲಿ ಅಸಂಖ್ಯಾತ ಜನರು ಭಾಗವಹಿಸಿದರು. ಕೇಶವಚಂದ್ರರ ಹಿರಿಯ ಮಗ ಚಿತೆಗೆ ಅಗ್ನಿಸ್ಪರ್ಶ ಮಾಡಿದನು. ಸತ್ಯ, ಜ್ಞಾನ, ಆನಂದಗಳೇ ಸ್ವರೂಪವಾದ ಉದ್ಧಾರಕನಿಗೆ ಜಯವಾಗಲಿ” ಎಂಬ ಘೋಷ ಅವರ ಅನುಯಾಯಿಗಳಿಂದ ಹೊರಹೊಮ್ಮಿ ದಿಕ್ಕು ದಿಕ್ಕುಗಳಲ್ಲಿ ಪ್ರತಿಧ್ವನಿಸಿತು.

ಅವರ ಚಿತಾಭಸ್ಮವನ್ನು ತಂದು ಲಿಲಿ ಕಾಟೇಜಿನ ಸಮೀಪದಲ್ಲಿದ್ದ ನವದೇವಾಲಯದ ಮುಂದೆ ಸ್ಥಾಪಿಸಿ, ಅಲ್ಲಿ ಅಮೃತಶಿಲೆಯ ವೇದಿಕೆಯನ್ನು ಅವರ ಭಕ್ತರು ನಿರ್ಮಿಸಿದರು. ನವವಿಧಾನದ ಸಂಕೇತಗಳಾದ ಶಿಲುಬೆ, ಬಾಲಚಂದ್ರ, ತ್ರಿಶೂಲ ಮತ್ತು ವೈದಿಕ ಓಂಕಾರ ಸಂಕೇತಗಳನ್ನು ಅಮೃತಶಿಲೆಯಲ್ಲಿ ಕೊರೆದುದು ಇಂದಿಗೂ ರಾರಾಜಿಸುತ್ತಿವೆ.

ಹಿರಿಯ ವ್ಯಕ್ತಿ

ಕೇಶವಚಂದ್ರ ಸೇನರದು ಆಕರ್ಷಕ ವ್ಯಕ್ತಿತ್ವ. ಅವರ ವಿಶಾಲವಾದ ವೃಕ್ಷಸ್ಥಳ, ಅಗಲವಾದ ಹಣೆ, ಆರು ಅಡಿ ಎತ್ತರದ ಆಜಾನುಬಾಹು ದೇಹ, ಗೌರವರ್ಣ – ಇವೆಲ್ಲ ಎಂಥವರಲ್ಲಾದರೂ ಗೌರವವನ್ನು ಮೂಡಿಸವಂತಿದ್ದವು. ಅವರ ಸರಳ ಜೀವನ, ಕೋಮಲ ಸ್ವಭಾವ ಜನರನ್ನು ಆಕರ್ಷಿಸುತ್ತಿದ್ದವು. ಇತರರಲ್ಲಿ ಹಿರಿಮೆಯನ್ನು ಕಂಡಾಗ ಗೌರವಿಸುವುದು ಅವರ ಸಹಜವಾದ ಗುಣವಾಗಿತ್ತು. ತಮಗೆ ಸರಿ‌‌‌‌ಯೆಂದು ತೋರಿದ  ಅಭಿಪ್ರಾಯಗಳನ್ನು ಬಿಟ್ಟು ಕೊಡಲು ಅವರು ಎಂದೂ ಸಿದ್ಧರಾಗಿರಲಿಲ್ಲಿ. ಈ ಪ್ರವೃತ್ತಿಯೇ ಅವರನ್ನು ಮಹರ್ಷಿ ದೇವೇಂದ್ರನಾಥ ಠಾಕೂರರಿಂದ ಬೇರ್ಪಡಿಸಲು ಕಾರಣವಾಯಿತು. ಅವರಿಗೆ ದೊಡ್ಡ ಅಧಿಕಾರಿಯಾಗಬೇಕೆಂಬ ಹಂಬಲವಿರಲಿಲ್ಲ. ಕಲ್ಕತ್ತೆಯ ಮುನಿಸಿಪಲ್ ಕಮೀಷನರ್ ಆಗಬೇಕೆಂದು ಸರ್ ರಿಚರ್ಡ ಟೆಂಪಲ್ ಕೇಳಿದಾಗ, ಕೇಶವಚಂದ್ರ ಸೇನರು ಒಪ್ಪಲಿಲ್ಲ. ೧೮೭೭ರಲ್ಲಿ ಅವರಿಗೆ ಪದಕ ಪ್ರಶಸ್ತಿ ನೀಡಲು ಯತ್ನಿಸಿದಾಗ ಅವರು ಅದನ್ನು ಸ್ವೀಕರಿಸಲಿಲ್ಲ. ಅವರಿಗೆ ಇಂಗ್ಲಿಷ್ ಭಾಷೆಯ ಮೇಲೆ ವಿಶೇಷವಾದ ಪ್ರಭುತ್ವವಿತ್ತು. ಅವರ ವಾಗ್ಘರಿವನ್ನು ಕಂಡು ಇಂಗ್ಲಿಷರೂ ಆಶ್ಚರ್ಯಪಡುತ್ತಿದ್ದರು. ಅರ ಉದ್ಧಾರದ ಆಸಕ್ತಿ, ಸೇವಾ ಮನೋಧರ್ಮ, ಕ್ರಿಯಾಶೀಲತೆ, ಧ್ಯಾನಮಗ್ನ ಮನಸ್ಸು, ಮಹಿಳೆಯರ ಉದ್ಧಾರದಲ್ಲಿ ನಿಷ್ಠೆ ಸಮಾಜ ಸುಧಾರಣೆ – ಇವೆಲ್ಲ ಅವರನ್ನು ಮಹಾಪುರುಷರ ವಿರಳ ಪಂಕ್ತಿಗೆ ಸೇರಿಸಿದ ಮಹಾಗುಣಗಳು.

೧೮೭೭ರಲ್ಲಿ ಅವರು ಮಾಡಿದ ಒಂದು ಉಪನ್ಯಾಸದಲ್ಲಿ ವಿಕಾಸ ಹೊಂದಿದ ವ್ಯಕ್ತಿಯ ಸ್ಥಿತಿಯನ್ನು ವರ್ಣಿಸಿದ್ದಾರೆ:

“ದೈವೀಶಕ್ತಿಯನ್ನು ಎಲ್ಲ ಪ್ರಾಣಿತಗಳಲ್ಲಿ, ವಸ್ತುಗಳಲ್ಲಿ ಕಾಣುವಂತಾದಾಗ, ಮಾನವನ ಭಾಷೆಯೂ ಪರಿವರ್ತಿತವಾಗುತ್ತದೆ. ಆಗ ಭಾಷೆ ನೀರಸವಾಗದೆ, ಕಾವ್ಯಮಯವಾಗುತ್ತದೆ. ಸತ್ವಯುತವಾಗುತ್ತದೆ. ಅಂತಹ ವ್ಯಕ್ತಿಗೆ ಸಮಸ್ತ ಪೃಥ್ವಿಯೂ ಸ್ಫೂರ್ತಿದಾಯಕ. ಆಗ ವಿಶ್ವವೇ ಆತನ ದಿವ್ಯನಂದನ ಮ ಪುಷ್ಪಗಳು ದಿವ್ಯ ಸುಗಂಧಯುತವಾಗಿ ಬಿರಿಯುತ್ತವೆ. ಸಮಸ್ತ ಸೃಷ್ಟಿಯೂ ನವಸೌಂದರ್ಯದಿಂದ ರಾರಾಜಿಸುತ್ತವೆ. ಜಡದಲ್ಲಿಯೂ ಅವನು ಜೀವ ಸ್ಪಂದನವನ್ನು ಸಂದರ್ಶಿಸುತ್ತಾನೆ. ಮೂಕವಾದದ್ದು ಅವನೊಡನೆ ಮಾತನಾಡುತ್ತದೆ, ಸೂರ್ಯ – ಚಂದ್ರ – ನಕ್ಷತ್ರಗಳೆಲ್ಲ ಅವನ ಬಂಧುಗಳಾಗುತ್ತಾರೆ. ನೀಲ ಆಕಾಶ, ಮಳೆಯಾಗಿ ಸುರಿವ ಮೋಡ, ಅರಣ್ಯ ಶ್ರೇಣಿಗಳು, ಪ್ರಾಣಿಗಳು, ಜಲಚರಗಳು, ಗಾಳಿಯಲ್ಲಿ ಹಾರುವ ಪಕ್ಷಿಗಳು, ಗಿರಿಕಾನನಗಳಲ್ಲಿ ಹರಿದೋಡುವ ತೊರೆಗಳು, ಬೆಟ್ಟ ಗುಡ್ಡಗಳು – ಇವೆಲ್ಲ ಅವನೊಡನೆ ಮಾತಾಡುತ್ತವೆ, ಸಮಸ್ತ ಪ್ರಕೃತಿಯೂ ಜೀವಶಕ್ತಿಯಿಂದ ತುಂಬಿ ಸ್ಪಂದಿಸುವುದು ಅವನಿಗೆ ಕಾಣುತ್ತದೆ.”

ಬಂಗಾಳಿಯಲ್ಲಿ ರಚಿಸಿದ ’ಆತ್ಮವೇದ’ವೆಂಬ ತಮ್ಮ ಜೀವನ ಚರಿತ್ರೆಯಲ್ಲಿ ಅವರ ಜೀವನದೃಷ್ಟಿಯನ್ನು ಕಾಣಬಹುದು:

“ಈ ಜಗತ್ತು ಭಗವಂತನ ಗರ್ಭಗುಡಿ. ಇಲ್ಲಿ ಬದುಕುವಾಗ ಧರ್ಮಶ್ರದ್ಧೆ ಹಾಗೂ ದೈವೀಜ್ಞಾನವನ್ನು ಸಂಪಾದಿಸಬೇಕು. ಗುರುವೆಂಬ ಹೆಮ್ಮೆ ನನಗಿಲ್ಲ, ನಾನು ಸದಾ ವಿದ್ಯಾರ್ಥಿ. ಇನ್ನೂ ಕಲಿಯುತ್ತಿದ್ದೇನೆ, ನಾನು ಎಂದೆಂದಿಗೂ ಶಿಷ್ಯ. ಸಿಖ್ ಧರ್ಮದ ಪ್ರಮುಖ ತತ್ವವಾದ ಶಿಷ್ಯತ್ವ ನನ್ನ ರಕ್ತದಲ್ಲಿ ಹರಿಯುತ್ತಿದೆ. ಈ ಭಾವನೆ ನನಗೆ ಶಕ್ತಿದಾನ ಮಾಡಿದೆ. ಪ್ರಾತಃಕಾಲ ಮತ್ತು ಸಂಧ್ಯಾಕಾಲಗಳು ನನ್ನ ಗುರುಗಳಾಗಿವೆ. ಧರ್ಮಗ್ರಂಥಗಳಿಂದ ಪಾಠ ಕಲಿತಿದ್ದೇನೆ, ಸುಖ – ಕಷ್ಟಗಳಿಂದ ಪಾಠ ಕಲಿತಿದ್ದೇನೆ.ಪ್ರತಿ ಪ್ರಾಣಿಯೂ ನನ್ನ ಗುರು, ಮಾನವ ಸೋದರರು ನನ್ನ ಗುರುಗಳು.”

ಈ ವಿಚಾರಲಹರಿ ಹಾಗೂ ಅನುಭೂತಿ,  ಕೇಶವಚಂದ್ರ ಸೇನರ ಸಾಧನೆಯ ಮಹತ್ವವನ್ನು ತಿಳಿಸುವ ನಿದರ್ಶನಗಳು.

ಬ್ರಹ್ಮಸಾಕ್ಷಾತ್ಕಾರ ಮತ್ತು ಲೋಕದ ಸೇವೆ – ಇವು ಜೀವನದ ಆದರ್ಶವೆಂದು ಸಾರಿದವರು ಕೇಶವಚಂದ್ರ ಸೇನರು. ಬಡತನದಲ್ಲಿ ಬೆಂದು, ನೊಂದು ಪರಿತಪಿಸುವ  ಕೋಟಿಕೋಟಿ ಭಾರತಿಯರ ಉದ್ಧಾರಕ್ಕೆ ವೈಜ್ಞಾನಿಕ ದೃಷ್ಟಿ ಅವಶ್ಯಕವೆಂದು ಅವರು ಒತ್ತಿ ಹೇಳಿದರು. ಬ್ರಹ್ಮ ತೇಜಸ್ಸಿನೊಡನೆ ಪ್ರಚಂಡ ಕ್ರಿಯಾಶಕ್ತಿಯ ಸಂಗಮವಾಗಬೇಕೆಂದುಅವರು ಒತ್ತಿ ಹೇಳಿದರು ಜಗತ್ತಿನ ಎಲ್ಲ ಧರ್ಮಗಳ ಸಾರವನ್ನು ಅರಿಯಲು ಸತತಾಭ್ಯಾಸದಲ್ಲಿ ತೊಡಗಿದರು. ಈ ಮಹತ್ತರವಾದ ಅವರ ಸಾಧನೆಯಲ್ಲಿ ವಿಶ್ವಧರ್ಮದ ಸ್ಥಾಪನೆಯ ಪ್ರಥಮ ಹಂತಗಳು ಗೋಚರವಾಗುತ್ತವೆ. ಅವರು ನಾಲ್ಕು ಭಾವನೆಗಳನ್ನು ಘೋಷಿಸಿ , ಅಲ್ಲಿಯೇ ನಿಂತವರಲ್ಲ. ಅವರು ಸದಾ ಜಾಗೃತರಾಗಿ  ವಿಕಾಸಶೀಲರಾಗಿ ಮುಂದುವರಿಯಲು ಸತತವಾಗಿ ಯತ್ನಿಸಿದವರು. ಭಗವಂತನನ್ನು ಜೀವನದಲ್ಲಿ ಸುಪ್ರಕಟಗೊಳಿಸುವುದೇ ಮಾನವ ಜೀವನದ ಉದ್ದೇಶವೆಂಬುದನ್ನು ಅವರು ವ್ಯಕ್ತಪಡಿಸಿದರು.

ಕುರುಡು ನಂಬಿಕೆ ಹಾಗೂ ಕುರುಡು ಆಚಾರಗಳಿಗೆ ಬಲಿಯಾದ, ಬಲಿಯಾಗುತ್ತಿರುವ ಜನರ ಉದ್ಧಾರದೊಡನೆ ತಮ್ಮ ಆತ್ಮವಿಕಾಸಕ್ಕಾಗಿ ಅವರು ಪ್ರಯತ್ನಿಸಿದರು. ಸಮಾಜದಲ್ಲಿ ಮೇಲು – ಕೀಳು ಜಾತಿಗಳೆಂದು ವರ್ಗೀಕೃತವಾದಾಗಲೆ ಅದರ ವಿಕಾಸಕ್ಕೆ ಅಡ್ಡಿಯಾಯಿತು. ಇದನ್ನು ತಿಳಿದ ಅವರು ಅಂಗರ್ಜಾತೀಯ ವಿವಾಹವನ್ನು ಜಾರಿಗೆ ತಂದರು. ಬಾಲ್ಯವಿವಾಹ ಸಲ್ಲದೆಂಬ ವೈಚಾರಿಕತೆ ಅವರಲ್ಲಿದ್ದರೂ ತಮ್ಮ ನಿಯಮಕ್ಕೆ ತಾವು ಅಂಟಿಕೊಳ್ಳದೆ, ಮಗಳ ವಿವಾಹವನ್ನು ಮಾಡಿದುದು ಅವರ ವ್ಯಕ್ತಿತ್ವಕ್ಕೆ ಧಕ್ಕೆಯನ್ನು ತಂದಿತು. ತಮ್ಮ ತಪ್ಪನ್ನು ಮುಚ್ಚಲು ತಮ್ಮ ಕಾರ್ಯಕ್ಕೆ ಭಗವಂತನ ಆದೇಶವೇ ಕಾರಣವೆಂದರು. ಇಷ್ಟೇ ಅಲ್ಲದೆ ತಾವು ಭಗವಂತನ ಪ್ರವಾದಿ ಎಂದು ಕರೆದುಕೊಳ್ಳಲು ಅವರು ಹಿಂದೆಮುಂದೆ ನೋಡಲಿಲ್ಲ. ಇಂತಹ  ಕೆಲವು ದೋಷಗಳು ಅವರಲ್ಲಿ ಗೋಚರಿಸಿದರೂ ಅವರ ಇತರ ಗುಣಗಳ ಮುಂದೆ ಈ ದೋಷಗಳು ಕಣ್ಮರೆಯಾಗುತ್ತವೆ.

ಜೀವನದಲ್ಲಿ ಸುಲಭವಾಗಿ ಬಂದೊದಗುತ್ತಿದ್ದ ಅಧಿಕಾರ, ಹಣ ಸಂಗ್ರಹಗಳನ್ನು ಬಿಟ್ಟು ಆಧ್ಯಾತ್ಮಿಕ ಅನುಸಂಧಾನ ಹಾಗೂ ವೈಚಾರಿಕತೆಗಳನ್ನೇ ತಮ್ಮ ಜೀವನದ ಗುರಿಯಾಗಿಟ್ಟುಕೊಂಡ ಅವರ ಆದರ್ಶ ಅದ್ವಿತೀಯ. ಕೇವಲ ಬೌದ್ಧಿಕವಾಗಿ ಬದುಕದೆ, ಕ್ರಿಯಾಶೀಲವಾಗಿಯೂ ಬದುಕಿದ ಅವರು ಸಮಾಜ ಸುಧಾರಕರಿಗೆ ಹೊಸ ಹೊಸ ಮಾರ್ಗಗಳನ್ನು ತೋರಿದರು. ಪತ್ರಿಕೆಗಳ ಪ್ರಕಟಣೆ, ಶಾಲೆಗಳ ನಿರ್ಮಾಣ, ಮಂದಿರ ಸ್ಥಾಪನೆ, ಕೈಗಾರಿಕೆಯ ಶಿಕ್ಷಣ ತರಗತಿಗಳು – ಇತ್ಯಾದಿ ಹಲವು ರಚನಾತ್ಮಕ ಕಾರ್ಯಗಳಲ್ಲಿ ಅವರು ಮಗ್ನರಾದರು.

ಇನ್ನೂ ಎಳೆಯ ವಯಸ್ಸಿನಲ್ಲೇ ಕೇಶವಚಂದ್ರ ಸೇನರು ಸಮಾಜದ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡರು. ಹದಿನೇಳನೆಯ ವರ್ಷದಲ್ಲಿ ಸಂಜೆ ತರಗತಿಗಳನ್ನು ನಡೆಸಲು ಪ್ರರಂಭಿಸಿದ ಸೇವಾಕಾಂಕ್ಷಿ ಇವರು. ಬ್ಯಾಂಕಿನಲ್ಲಿ ತಮಗಿದ್ದ ಕೆಲಸವನ್ನೂ ಬಿಟ್ಟು ಬಿಟ್ಟರು.

ಕೇಶವಚಂದ್ರ ಸೇನರು ಭಾರತದಲ್ಲಿ ಹುಟ್ಟಿದರು, ಹಿಂದೂ ಧರ್ಮವನ್ನು ಅಭ್ಯಾಸ ಮಾಡಿದರು, ಭಾರತೀಯ ಸಂಸ್ಕೃತಿಯನ್ನು ತಿಳಿದುಕೊಂಡರು. ಇದರೊಂದಿಗೆ ಬೇರೆ ದೇಶಗಳ ಧರ್ಮಗಳನ್ನೂ ಸಂಸ್ಕೃತಿಗಳನ್ನೂ ಅಭ್ಯಾಸ ಮಾಡಿದರು. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಶ್ರೇಷ್ಠವಾದದ್ದನ್ನು ಭಾರತೀಯ ಸಂಸ್ಕೃತಿಯೊಂದಿಗೆ ಸಂಗಮಗೊಳಿಸುವ ಪ್ರಯತ್ನವನ್ನು ಮಾಡಿದರು. ಅವರು ಧಾರ್ಮಿಕ ಜೀವಿಗಳು. ಆದರೆ ಸಮಾಜದಿಂದ ದೂರ ನಿಲ್ಲಲಿಲ್ಲ. ಸಮಾಜದಲ್ಲಿ ತಮಗೆ ಕಂಡುಬಂದ  ದೋಷಗಳನ್ನು ತಿದ್ದಲು ಕ್ರಿಯಾಶಾಲಿಗಳಾಗಿ ಕೆಲಸ ಮಾಡಿದರು. ಹೀಗೆ ಚಿಂತನೆಯೊಂದಿಗೆ ಕ್ರಿಯೆಯನ್ನೂ ಬೆಳೆಸಿಕೊಂಡವರು ಅವರು. ಅವರ ಅಭಿಪ್ರಾಯಗಳಿಗೆ ಎಷ್ಟೋ ಜನ ಪ್ರತಿಭಟಿಸಿದರು, ಅವರ ಕೆಲಸಕ್ಕೆ ವಿರೋಧ ಬಂದಿತು. ಏಕಾಕಿಯಾದರೂ ತಮ್ಮ ಕೆಲಸವನ್ನು ಅವರು ಮುಂದುವರಿಸಿದರು. ಅಜ್ಞಾನ, ದಬ್ಬಾಳಿಕೆ, ಅಕ್ರಮಗಳ ವಿರುದ್ಧ ಹೋರಾಡಿದರು. ವಿದ್ಯಾಭ್ಯಾಸ, ಮಹಳೆಯರ ಉದ್ಧಾರ, ಬಾಲ್ಯವಿವಾಹ ವಿರೋಧ, ವಿಧವೆಯರ ವಿವಾಹ ಮೊದಲಾದ ಸಮಾಸುಧಾರಣೆಯ ಕೆಲಸಗಳಲ್ಲಿ ಮಗ್ನರಾದರು.

ಕೇವಲ ನಲವತ್ತಾರು ವರ್ಷಗಳ ಕಾಲ ಬದುಕಿದ್ದ ಕೇಶವಚಂದ್ರ ಸೇನರು ಎಷ್ಟೊಂದು ಸುಧಾರಣೆಯನ್ನು ಸಾಧಿಸಿದರು ಎಂಬುದನ್ನು ನೆನೆದಾಗ ವಿಸ್ಮಯವಾಗುತ್ತದೆ.