ಹೈದ್ರಾಬಾದ ಕರ್ನಾಟಕ ಭಾಗದ ಬೀದರ ಜಿಲ್ಲೆಯಲ್ಲಿ ಹಿಂದೂಸ್ಥಾನಿ ಸಂಗೀತವನ್ನು, ಆ ಮೂಲಕ ತಬಲಾ ವಾದನವನ್ನು ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರಾಗಿರುವ ಬೀದರ ಜಿಲ್ಲೆಯ ಹುಮನಾಬಾದ ಪಟ್ಟಣದ ಹೆಸರಾಂತ ತಬಲಾ ವಾದಕ ಪಂ. ಕೇಶವರಾವ್ ವಾಘಮಾರೆ ಕರ್ನಾಟಕದ ಹಿರಿಯ ತಲೆಮಾರಿನ ತಬಲಾ ವಿದ್ವಾಂಸರಲ್ಲೊಬ್ಬರಾಗಿದ್ದಾರೆ. ಎಂಭತ್ತರ ವಯೋಮಾನದ ಶ್ರೀ ಕೇಶವರಾವ್ ವಾಘಮಾರೆ ಅವರದು ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ತಬಲಾ ವಾದಕರಾಗಿ ಬಹಳ ಪ್ರಬುದ್ಧ ಹೆಸರು. ಪಂಡಿತ್ ಪರಶುರಾಮ ಖಮೀತಕರ, ಪಂಡಿತ್ ದಾಮ ಅಣ್ಣಾಮಂಗಳ ಪೇಟೇಕರ್, ಪಂಡಿತ್ ನರಹರಿ ಭಟ್ ಮುಂತಾದ ಹಿರಿಯ ತಲೆಮಾರಿನ ದಿಗ್ಗಜರಲ್ಲಿ ಶ್ರೀಯುತರು ಶಿಕ್ಷಣ ಪಡೆದಿದ್ದಾರೆ.

ದೇಶಾದ್ಯಂತ ಹಲವಾರು ಹಿಂದೂಸ್ಥಾನಿ ಸಂಗೀತ ಕಲಾವಿದರಿಗೆ ತಬಲಾ ಸಾಥ್ ನೀಡಿ ಶ್ರೀ ಕೇಶವರಾವ್ ಜನ ಪ್ರಿಯತೆ ಗಳಿಸಿಕೊಂಡಿದ್ದಾರೆ. ಪಂಡಿತ್ ನನ್ನೆ ಬಾಬು, ಪಂಡಿತ್ ಕಂಡೆ ಬುವಾ ಈಚಲಕಾರಂಜಿ, ಪಂಡಿತ್ ಬಾಬುರಾವ್ ಈಚಲ ಕಾರಂಜಿ, ಪಂಡಿತ್ ದಾಂಡೇಕರ್ ಫಂಡರಪುರ್, ಪಂಡಿತ್ ಕಾಗಲ್‌ಕರ್ ಭಾರ್ಸಿ ಮುಂತಾದ ಹಿರಿಯ ಹಿಂದೂಸ್ಥಾನಿ ಸಂಗೀತ ವಿದ್ವಾಂಸರು ಶ್ರೀ ಕೇಶವರಾವ್ ಅವರ ತಬಲಾ ಸಾಥ್ ಪಡೆದಿದ್ದಾರೆ. ಕೇಶವರಾವ್ ಅವರ ಈ ಸಂಗೀತ ಸೇವೆ ನಾಡಿನಾದ್ಯಂತ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಮತ್ತು ಮಠ ಮಂದಿರಗಳಲ್ಲಿ ನಡೆದಿದೆ.

ಶ್ರೀ ಕೇಶವರಾವ್ ಅಖಿಲ ಭಾರತೀಯ ಗಂಧರ್ವ ಮಹಾ ವಿದ್ಯಾಲಯದ ಶಾಖೆಯನ್ನು ಬೀದರ ಜಿಲ್ಲೆಯ ಹುಮ ನಾಬಾದಿನಲ್ಲಿ ತೆರೆದು, ಸುಮಾರು ಎರಡು ದಶಕಗಳಿಂದ ಈ ಶಾಖೆಯ ಮೂಲಕ ನೂರಾರು ಸಂಗೀತ ಕಲಾವಿದರು ಮತ್ತು ತಬಲಾ ವಾದಕರನ್ನು ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಶ್ರೀ ಕೇಶವರಾವ್ ಅವರು ತಮ್ಮ ಸುದೀರ್ಘ ಸಂಗೀತ ಸೇವೆಗಾಗಿ ಬಹಳಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಅವುಗಳಲ್ಲಿ ರಾಷ್ಟ್ರೋತ್ಥಾನ ಪ್ರಶಸ್ತಿ. ಪಂಚಾಕ್ಷರಿ ಗವಾಯಿಗಳ ಪುಣ್ಯ ಸ್ಮರಣೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಮತ್ತು ಹಲವಾರು ಮಠಾಧೀಶರುಗಳು ನೀಡಿರುವ ಗೌರವ ಸನ್ಮಾನಗಳು ಪ್ರಮುಖವಾದವು. ಶ್ರೀ ಕೇಶವರಾವ್ ವಾಘಮಾರೆ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೪-೦೫ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.

ಶ್ರೀ ಕೇಶವರಾವ ವಾಘಮಾರೆ ತಾವೇ ಸ್ವತಃ ತಬಲಾ ವಾದಕರಾಗಿ, ಅನೇಕ ಜನ ತಬಲಾ ನುಡಿಸುವ ಶಿಷ್ಯರನ್ನು ತಯಾರಿಸಿದ್ದಾರೆ. ಅವರ ಮಗ ಶ್ರೀ ಜನಾರ್ಧನ ಹೈದ್ರಾಬಾದ ಕರ್ನಾಟಕ ಭಾಗದ ಜನಪ್ರಿಯ ತಬಲಾ ವಾದಕರಲ್ಲೊಬ್ಬರಾಗಿದ್ದಾರೆ. ಶ್ರೀ ಕೇಶವರಾವ ಅವರು ತಬಲಾ ವಾದ್ಯ ತಯಾರಿಕೆಯಲ್ಲೂ ನಿಷ್ಣಾತರಾಗಿದ್ದಾರೆ. ಬಸವ ಕಲ್ಯಾಣ ತಾಲೂಕಿನ ಹಾರಕೂಡದ ಸಂಸ್ಥಾನ ಹಿರೇಮಠದಲ್ಲಿ ಅವರ ತಬಲಾ ವಾದನ ಅಸಂಖ್ಯಾತ ಸಂಗೀತ ಪ್ರೇಮಿಗಳ ಮನಸೂರೆಗೊಳ್ಳುತ್ತದೆ. ಮಾಣಿಕ ನಗರದ ಮಾಣಿಕ ಪ್ರಭು ಸಂಸ್ಥಾನದ ಸಂಗೀತ ದರ್ಬಾರಿನಲ್ಲಿ ಇವರು ಅನೇಕ ವರ್ಷಗಳಿಂದ ತಬಲಾ ಸೇವೆ ಮಾಡುತ್ತಿದ್ದಾರೆ. ಇವರ ಪರಿಶ್ರಮದ ಫಲವಾಗಿ ಬೀದರ ಜಿಲ್ಲೆಯಲ್ಲಿ ತಬಲಾ ವಾದನ ತುಂಬ ವ್ಯಾಪಕವಾಗಿ ಪ್ರಸಾರಗೊಂಡಿದೆ.