ಹೈದ್ರಾಬಾದ್‌ ಕರ್ನಾಟಕ ಭಾಗದ ಬೀದರ ಜಿಲ್ಲೆಯಲ್ಲಿ ಹಿಂದೂಸ್ಥಾನಿ ಸಂಗೀತವನ್ನು ವ್ಯಾಪಕವಾಗಿ ಪ್ರಸಾರ ಮಾಡಿ, ತಬಲಾ ವಾದನದಲ್ಲಿ ಅಪಾರ ಸಾಧನೆಗೈದು ಹೆಸರಾಂತ ತಬಲಾ ವಾದಕರಾಗಿ ಹೆಸರು ಸಂಪಾದಿಸಿರುವ ಬೀದರ ಜಿಲ್ಲೆಯ ಭಾಲ್ಕಿ ಪಟ್ಟಣದ ಖ್ಯಾತ ತಬಲಾ ವಾದಕ ಪಂ. ಕೇಶವರಾವ್‌ ಸೂರ್ಯವಂಶಿ ಕನ್ನಡ ನಾಡಿನ ಜನಪ್ರಿಯ ತಬಲಾ ವಾದಕರಲ್ಲೊಬ್ಬರು. ದಿನಾಂಕ ೫೦೫-೩೭ ರಂದು ಕೀರ್ತನಕಾರರ ಹಾಗೂ ಭಜನ್‌ ಗಾಯಕರ ಮನೆತನದಲ್ಲಿ ಜನಿಸಿದ ಕೇಶವರಾವ ಸೂರ್ಯವಂಶಿ ಉತ್ತಮ ತಬಲಾ ವಾದಕರು. ತಂದೆ ಸೂಭಾನರಾವ್‌ ಸೂರ್ಯವಂಶಿಯವರು ಭಜನ್‌ ಹಾಗೂ ಕೀರ್ತನಕಾರರಾದ ಇವರಿಗೆ ಮಾತ್ರ ಲಯ ವಾದ್ಯಗಳ ಕಡೆಗೆ ಒಲವು ಮೂಡಿತು. ಹಾಗಾಗಿ ಇವರು ಪಂ. ಶಾಂತಾರಾಮ ಚಿತ್ರಿ ಗುರೂಜಿ ವಿಜಾಪುರಕರ್ ಲಾತೂರ ಇವರುಗಳಲ್ಲಿ ತಬಲಾ ವಾದನದಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದು ಮುಂದೆ ಪುಣೆಯ ಪಂ. ಜಯವಂತರಾವ್‌ ಮಿರಜ್‌ಕರ್ ಅವರಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.

೧೯೬೨ರಲ್ಲಿ ಪುಣೆಯಲ್ಲಿ ಸವಾಯ್‌ ಗಂಧರ್ವರ ಪುಣ್ಯ ತಿಥಿಯಂದು, ಇವರು ನೀಡಿದ ತಬಲಾ ವಾದನ ಇವರ ಮೊದಲ ಕಾರ್ಯಕ್ರಮ. ಅನಂತರ ಲಾತೂರಿನ ಸಂಗೀತ ಸಮ್ಮೇಳನ, ಬೆಂಗಳೂರು, ಬೀದರ್ ಮೊದಲಾದ ಊರುಗಳಲ್ಲಿ ನರಸಿಂಹಲು ವಡಿವಾಟಿಯವರ ಕ್ಲಾರಿಯೊನೆಟ್‌, ನನ್ನೆಬಾಬು ಕುವರ್ ಇವರ ಹಾರ್ಮೋನಿಯಂ ವಾದನಕ್ಕೇ ಅಲ್ಲದೆ ಅನೇಕ ಸಂಗೀತ ಬೈಠಕ್‌, ದರಬಾರ್ ಗಳಲ್ಲಿ ತಮ್ಮ ಪ್ರತಿಭೆಯನ್ನು ಬೆಳಗಿಸಿದ್ದಾರೆ.

ಪ್ರಸ್ತುತ ಭಾಲ್ಕಿಯ ಶಾರದಾ ಸಂಗೀತ ಕಲಾ ಮಂಡಳಿಯ ಅಧ್ಯಕ್ಷರಾಗಿ, ಬೀದರ್ ಜಿಲ್ಲಾ ಸಂಗೀತ ಕಲಾಗಾರ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾಗಿ ಹಾಗೂ ಸದ್ಗುರು ಸಂಗೀತ ವಿದ್ಯಾಲಯದ ಸಂಚಾಲಕರೂ ಆಗಿದ್ದಾರೆ.

ಇವರು ತಬಲಾ ವಾದಕರಾದರೂ ವಂಶಪಾರಂಪಾರ್ಯವಾಗಿ ಬಂದಿರುವ ಕೀರ್ತನ ಮತ್ತು ಭಜನ್‌ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದು ಅದರಲ್ಲೂ ಸಾಕಷ್ಟು ಪರಿಣತಿಯನ್ನು ಹೊಂದಿದ್ದಾರೆ.

ಹೀಗೆ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೇವೆ ಸಲ್ಲಿಸಿರುವ ಶ್ರೀ ಕೇಶವರಾವ ಸೂರ್ಯವಂಶಿಯವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಶ್ರೀ ಕೇಶವರಾವ್‌ ಸೂರ್ಯವಂಶಿಯವರ ಪ್ರಯತ್ನದ ಫಲವಾಗಿ ಬೀದರ ಜಿಲ್ಲೆ ಹಾಗೂ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಹಿಂದುಸ್ಥಾನಿ ಸಂಗೀತ ಜನಪ್ರಿಯತೆ ಗಳಿಸಿದೆ. ಅವರ ವಿಶೇಷ ಆಸಕ್ತಿಯಿಂದಾಗಿ ಭಾಲ್ಕಿಯ ಹಿರೇಮಠ, ಕುಂಟೆಗಾಂವದ ಶ್ರೀ ಹನುಮಾನ ಸಂಗೀತ ದರ್ಬಾರ, ಭಾಲ್ಕಿ ದೇವಿ ನಗರದ ನವರಾತ್ರಾ ಸಂಗೀತ ದರ್ಬಾರಗಳು ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ಸಫಲವಾಗಿವೆ.