೧೮೯೭ರ ಜೂಣ್ ೨೨ನೇಯ ತಾರೀಖು.

ಇಂಗ್ಲೇಂಡಿನ ವಿಕ್ಟೋರಿಯಾ ಮಹಾರಾಣಿ ಪಟ್ಟಕ್ಕೆ ಬಂದು ಅಂದಿಗೆ ಸರಿಯಾಗಿ ೬೦ ವರ್ಷಗಳು. ಅದಕ್ಕಾಗಿ ಎಲ್ಲೆಡೆ ವಜ್ರಮಹೋತ್ಸವದ ಸಂಭ್ರಮದ. ಭಾರತದಲ್ಲೂ ಎಲ್ಲ ಹಳ್ಳಿ, ಊರುಗಳಲ್ಲಿ ವೈಭವದ ಸಮಾರಂಭಗಳು. ಅಂದು ಬಾಲಕರಿಗೆ ಮಿಠಾಯಿ ಹಂಚಿಕೆ. ಬಡವರಿಗೆ ಅನ್ನದಾನ, ಹಿರಿಯರಿಗೆ ಬಹುಮಾನ.

ನಾಗಪುರದಲ್ಲೂ ಎಲ್ಲರೂ ಸಡಗರದಿಂದ ಹೊಸ ಬಟ್ಟೆ ತೊಟ್ಟು ನಲಿಯುತ್ತಿದ್ದರು. ಬಾಲಕರು ತಂಡ ತಂಡವಾಗಿ ಶಾಲೆಗೆ ಹೋಗಿ ಮಿಠಾಯಿ ಪಡೆದು ಬಾಯಿ ಚಪ್ಪರಿಸುತ್ತಿದ್ದರು.

ಆದರೆ ಒಬ್ಬ ಚಿಕ್ಕ ಬಾಲಕ ಮಾ‌ತ್ರ ಅಂದು ಸಂತೋಷದಿಂದ ಇರಲಿಲ್ಲ. ಮಿಠಾಯಿಯನ್ನು ಮೂಲೆಗೆಸೆದು ತಾನೂ ಒಂದು ಮೂಲೆಯಲ್ಲಿ ಕುಳಿತುಬಿಟ್ಟ. ಅಷ್ಟರಲ್ಲಿ ಅವನ ಅಣ್ಣ ಬಂದು ಕೇಳಿದರು:”ಯಾಕೋ? ಸಪ್ಪಗಿದ್ದಿಯಲ್ಲ.ನಿನಗೆ ಮಿಠಾಯಿ ಸಿಗಲಿಲ್ಲವೇನೋ?”

“ಸಿಗದೇ ಏನು? ಆದರೆ ನಮ್ಮ ಬೋಸಲೆ ರಾಜ್ಯವನ್ನು ಕಸಿದುಕೊಂಡ ರಾಜರ ಸಮಾರಂಭವನ್ನು ಸಂತೋಷದಿಂದ ಆಚರಿಸುವುದಾದರೂ ಹೇಗೆ?” ಬಾಲಕ ದುಃಖದಿಂದ ಹೇಳಿದ.

ಉಳಿದವರಿಗೆ ಮಿಠಾಯಿ ಸಿಹಿಯಾಗಿತ್ತು. ಆದರೆ ಆ ಹುಡುಗನಿಗೆ ಮಾತ್ರ ಅದು ಕಹಿಯಾಗಿತ್ತು. ದಾಸ್ಯದ ಕಹಿಯನ್ನು ಆ ಮಿಠಾಯಿಯಲ್ಲಿ ಅವನು ಗುರುತಿಸಿದ್ದ. ಆಗ ಅವನ ವಯಸ್ಸು ಇನ್ನೂ ಎಂಟು ವರ್ಷ., ಅಷ್ಟೇ ಚಿಕ್ಕ ವಯಸ್ಸಿನಲ್ಲಿಯೇ ಅವನಲ್ಲಿ ಸ್ವದೇಶಾಭಿಮಾನ ಚಿಮ್ಮಿತ್ತು. ಅವನೇ ಕೇಶವ. ಮುಂದೆ ಡಾಕ್ಟರ್  ಕೇಶವ ಬಲಿರಾಮ ಹೆಡಗೆವಾರ್ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದ ಬಾಲಕ. ಆತ ” ರಾಷ್ಟ್ರೀಯ ಸ್ವಯಂ ಸೇವಕ ಸಂಘ” ಎಂಬ ದೇಶೋ ವಿಶಾಲ ಸಂಘಟನೆಯನ್ನು ಪ್ರಾರಂಭಿಸಿ, ದೇಶಕ್ಕೆ ಒಂದು ಹೊಸ ವಿಚಾರವನ್ನು ಕೊಟ್ಟರು. ಹಿಂದುಗಳಲ್ಲಿ ಸ್ವಾಭಿಮಾನವನ್ನು ಜಾಗೃತಗೊಳಿಸಿ ದೇಶಭಕ್ತಿಯನ್ನು ಮೂಡಿಸಿದರು.

ಈ ರಾಜರ ಸಮಾರಂಭವನ್ನು ಆಚರಿಸುವುದು ಹೇಗೆ?"

ಮನೆತನ

ಕೇಶವ ಹುಟ್ಟಿದ್ದು ನಾಗಪುರದಲ್ಲಿ . ೧೮೮೯ನೇ ಯ ಇಸವಿ ಏಪ್ರೀಲ್ ಒಂದರ ಯುಗಾದಿಯ ಶುಭದಿನದಂದು. ತಂದೆ ಬಲಿರಾಮ ಪಂತರು, ತಾಯಿ ರೇವತಿಬಾಯಿ, ಪೈಠಣಕರ್ ಮನೆತನದ ಹೆಣ್ಣು ಮಗಳು. ಕೇಶವ ತಂದೆ ತಾಯಿಗೆ ಐದನೆಯ ಮಗು. ಅವರಿಗೆ ಒಟ್ಟು ಆರು ಜನ ಮಕ್ಕಳು.

ಬಲಿರಾಮ ಪಂತರ ಪತ್ನಿ ರೇವತಿಬಾಯಿ ಎಲ್ಲರೊಡನೆ ಹೊಂದಿಕೊಂಡು ಹೋಗುತ್ತಿದ್ದ ಶಾಂತ ಸ್ವಭಾವದ ಸ್ತ್ರೀ. ಬಲಿರಾಮ ಪಂತರಾದರೋ ಉಗ್ರ ಸ್ವಭಾವದವರು. ಕಿತ್ತು ತಿನ್ನುವ ಬಡತನ ಬೇರೆ. ಆದರೂ ಅವರ ಸಂಸಾರದಲ್ಲಿ ಆನಂದಕ್ಕೆ ಕೊರತೆ ಇರಲಿಲ್ಲ.

ಏನಾದರೂ ಸಾಹಸದ ಕೆಲಸ ಮಾಡುವುದೆಂದರೆ ಆ ಮೂವರು ಸೋದರರಿಗೂ ಎಲ್ಲಿಲ್ಲದ ಉತ್ಸಾಹ. ಒಂದು ಸಲ ಅವರ ಮನೆಯ ಬಾವಿಯ ಪೂಜೆ ಆಗಬೇಕಾಗಿತ್ತು.  ಆದರೆ ಬಾವಿಯಲ್ಲಿ ತುಂಬ ಗಲೀಜು, ಕೆಸರು. ಅದನ್ನೆಲ್ಲ ತೆಗೆದು ನೀರನ್ನು ಸ್ವಚ್ಛಗೊಳಿಸಲು ಅವರು ನಿರ್ಧರಿಸಿದರು. ಆದರೆ  ಇದು ಹಿರಿಯರಿಗೆ ಗೊತ್ತಾದರೆ ಅವರು ಬಿಡುವುದಿಲ್ಲ. ಅದಕ್ಕಾಗಿ ಆ ರಾತ್ರಿ ಎಲ್ಲರೂ ಗಾಢ ನಿದ್ದೆಯಲ್ಲಿ ಇದ್ದಾಗ ಮೂವರು ಮೆಲ್ಲನೆ ಎದ್ದರು.  ಬಾವಿಯಲ್ಲಿದ್ದ ನೀರೆಲ್ಲ ಸೇದಿಹಾಕಿ ಗಲೀಜೆಲ್ಲ ತೆಗೆದರು. ಮರುದಿನ ನಸುಕಿನಲ್ಲಿ ನೋಡಿದವರಿಗೆ ಆಶ್ಚರ್ಯ. ಬಾವಿಯಲ್ಲಿ ನಿರ್ಮಲವಾದ ನೀರು ಪಳಪಳನೆ ಹೊಳೆಯುತ್ತಿತ್ತು.

ಬಾಲ್ಯದಲ್ಲಿ ಕಷ್ಟ ಪರಂಪರೆ

ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ನಮ್ಮ ದೆಶದಲ್ಲಿ ಪ್ಲೇಗ್, ಹಾವಳಿ ವಿಪರೀತವಾಗಿತ್ತು. ಆಗಿನ್ನೂ ರೋಗಕ್ಕೆ ತಕ್ಕುದಾದ ಔಷಧಿ ಕಂಡುಹಿಡಿದಿರಲಿಲ್ಲ. ಒಂದೆಡೆಪ್ಲೇಗಿಗಿಂತ ಭಯಂಕರವಾಗಿದ್ದ ಬ್ರೀಟಿಷ ಕಿರುಕುಳ. ಹೀಗಾಗಿ ಜನರು ಹುಳುಗಳಂತೆ ವಿಲಿವಿಲಿ ಒದ್ದಾಡಿ ಸತ್ತರು. ಒಂದು ಲಕ್ಷ ಜನಸಂಖ್ಯೆಯಿದ್ದ ನಾಗಪುರದಲ್ಲಿ ಪ್ರತಿನಿತ್ಯ ಇನ್ನೂರು-ಮುನ್ನೂರು ಜನರು ಪ್ಲೇಗಿಗೆ ಬಲಿಯಾಗುತ್ತಿದ್ದರು.

ಬಲಿರಾಮ ಪಂತರು ಪುರೋಹಿತರಾದುದರಿಂದ ಸತ್ತವರ ಅಂತ್ಯಕ್ರಿಯೆಗೆ ತಪ್ಪದೇ ಹೋಗುತ್ತಿದ್ದರು. ಎಲ್ಲರೂ ತಮ್ಮ ಮನೆ ತೊರೆದು ದೂರ ದೂರ ಗುಡಿಸಲು ಹಾಕಿಕೊಂಡರು ಅವರು ಮಾತ್ರ ಮನೆಬಿಟ್ಟು ಕದಲಿಲ್ಲ. ಈ ಪ್ಲೇಗು ನನಗೇನು ಮಾಡಿತು ಎಂಬ ತಾತ್ಸಾರ ಅವರದು. ಆದರೆ ಅವರ ಮನೆಯಲ್ಲಿಯೂ ಇಲಿಗಳೂ ಬಿದ್ದವು. ಅವರ ಹೆಂಡತಿ, ಅವರು- ಅವರ ಇಬ್ಬರಿಗೂ ಕಾಯಿಲೆ ತಗುಲಿತು. ಔಷಧಿಉಪಚಾರ ನಡೆದವು. ಆದರೆ ಒಂದು ದಿನ ಔಷಧಿ ತರಲು ಹೋದ ಸೀತಾರಾಮ ಪಂತರು ವಾಪಸಸ್ಸು ಮನೆಗೆ ಬಂದಾಗ ಅವರು ಕಂಡಿದ್ದೇನು? ತಾಯಿತಂದೆ ಇಬ್ಬರ ಶವಗಳನ್ನು! ಕೇಶವನಿಗೆ ಆಗ ಇನ್ನೂ ಹದಿಮೂರು ವರ್ಷ ವಯಸ್ಸು.

ತಂದೆ ತಾಯಿ ತೀರಿಕೊಂಡ ಬಳಿಕ ಕೇಶವನ ಕಷ್ಟ ಕೋಟಲೆಗಳು ಅಷ್ಟಿಷ್ಟಲ್ಲ. ಅಣ್ಣ ಮಹಾದೇವ ಶಾಸ್ತ್ರೀ ಪೂರಾಸ್ವೈರಾಚಾರಿಯಾದರು. ಮನೆಯಲ್ಲಿ ಸೌದೆ ಒಡೆಯುವುದು, ಅಡುಗೆ ಮಾಡುವುದು, ನೀರು ತುಂಬುವುದು ಎಲ್ಲ ಕೆಲಸಗಳೂ ಕೇಶವ ಹಾಗೂ ಅಣ್ಣ ಸೀತಾರಾಮ ಪಂತರ ಪಾಲಿಗೆ ಬಂದವು. ಕೆಲವು ಬಾರಿ ಊಟವಿಲ್ಲದೆ ಉಪವಾಸ, ಹಲವು ಬಾರಿ ಹರಕುಬಟ್ಟೆ ತೊಟ್ಟು, ಅಲೆದಾಟ, ಇಷ್ಟೂ ಸಾಲದುದಕ್ಕೆ ಕೋಪಿಷ್ಟ ಅಣ್ಣನಿಂದ ಬೈಗಳೂ, ಹೊಡೆತ, ಹೀಗಾಗಿ ಕೇಶವ ಗೆಳೆಯರ ಮನೆಯಲ್ಲಿಯೇ ಹೆಚ್ಚು ಹೊತ್ತು ಕಳೆಯತೊಡಗಿದ.

ಆದರೆ ಕೇಶವ ತುಂಬ ಸ್ವಾಭಿಮಾನಿ.ಹಸಿವು ಕಾಡಿಸುತ್ತಿದ್ರೂ ಸ್ನೇಹಿತರ ಮನೆಗೆ ಎಂದೂ ಊಟಕ್ಕೆ ಹೋದವನಲ್ಲ. ಕಿಬುಕಾಸಿಗಾಗಿ ಯಾಋ ಬಳಿಯೂ ಕೈ ಒಡ್ಡಿದವರಲ್ಲ. ವಿದ್ಯಾಭ್ಯಾಸದಲ್ಲಿಯೂ ಕೂದಲೆಳೆಯಷ್ಟೂ ಅವನಿಗೆ ಶ್ರದ್ದೇ ಕುಂದಲಿಲ್ಲ. ಶಾಲೆಯಲ್ಲಿ ಎಲ್ಲರಿಗಿಂತ ಈತನೇ ಮುಂದು. ಗಂಭೀರ ಸ್ವಭಾವದವ. ಮಿತಭಾಷಿ. ಆದರೆ ಎಲ್ಲರೊಂದಿಗೂ ಗೆಳೆತನ. ಎಲ್ಲರೂ ಅವನಿಗೆ ಬೇಕು. ಅವನೂ ಎಲ್ಲರಿಗೂ ಬೇಕು. ಉಪಾಧ್ಯಾಯರಿಗೆ ಅವನೆಂದರೆ ಅಚ್ಚುಮೆಚ್ಚು. ನಾಲ್ಕೈದು ಮೈಲಿ ಓಟ.

ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ದೇಶದ ಒಬ್ಬ ವೀರ. ಕೇಶವ ಅವರ ಸಾಹಸದ ಕತೆ ಕೇಳಿ ಸ್ಫೂರ್ತಿ ಪಡೆದ,.

ತಾಯ್ನಾಡಿನ ಧೀರ ಯೋಧ

ಬ್ರಿಟಿಷರ್ ದಬ್ಬಾಳಿಕೆಯನ್ನು ಕಿತ್ತೊಗೆಯಲು ಆಗ ಲೋಕಮಾನ್ಯ ತಿಲಕರು, ಗಾಂಧೀಜಿ ಮುಂತಾದ ದೇಶಭಕ್ತರು ಹೋರಾಟ ನಡೆಸುತ್ತಿದ್ದರು. ಕೇಶವನಿಗೆ ಇಂತಹ ಹಿರಿಯ ನಾಯಕ ಭಾಷಣ ಕೇಳುವುದೆಂದರೆ ಬಲು ಹಿಗ್ಗು.  ತಾನೂ ಅಂತಹ ಭಾಷಣಕಾರ ಆಗಬೇಕೆಂಬ ಹಂಬಲ. ಅದಕ್ಕಾಗಿ ಗೆಳೆಯರೊಂದಿಗೆ ಸೇರಿ ಚರ್ಚಾ ಮಂಡಲಿಯೊಂದನ್ನು ಸ್ಥಾಪಿಸಿದ.

೧೯೦೫ರಲ್ಲಿ ಲಾರ್ಡ ಕರ್ಜನ ಎಂಬ ಭಾರತದ ವೈಸರಾಯ್ ಬಂಗಾಳವನ್ನು ಎರಡು ಹೋಳು ಮಾಡಿದ. ಇದರಿಂದಾಗಿ ಉದ್ರಿಕ್ತಗೊಂಡ ಸಾವಿರಾರು ತರುಣರು ಸಿಡಿದೆದ್ದರು. ಬ್ರೀಟಿಷರ ವಿರುದ್ಧ ಕ್ರಾಂತಿಯ ಕಹಳೆ ಊದಿದರು. ವಿಲಾಯಿತಿ ವಸ್ತ್ರಗಳನ್ನು ಸುಟ್ಟು ಬೂದಿ ಮಾಡಿದರು. ಕೆಲವು ಆಂಗ್ಲ ಅಧಿಕಾರಿಗಳನ್ನು ಯಮಸದನಕ್ಕೆ ಅ‌ಟ್ಟಿದರು. ಆದರೆ ಬ್ರಿಟಿಷರು ಇದನ್ನೆಲ್ಲ ನೋಡಿ ಸುಮ್ಮನೆ ಕೂತಾರೆಯೇ? ತಮ್ಮ ವಿರುದ್ಧ ನಿಂತವರ ಮೇಲೆ ಲಾಠಿ ಛಾರ್ಜ ಮಾಡಿದರು. ಗುಂಡು ಹಾರಿಸಿದರು. ಸ್ವಾತಂತ್ರ ಚಳುವಳಿಗಾರರನ್ನು ಹಿಡಿದು ಸೆರೆಮನೆಗೆ ದೂಡಿದರು. ಅದೇ ಸಮಯದಲ್ಲಿ “ವಂದೇ ಮಾತರಂ” ಘೋಷಣೆ ತರುಣರ ತಾರಕ ಮಂತ್ರ ಆಗಿ ಮೊಳಗಿತು.

ಕೇಶವ ಆಗ ನಾಗಪುರದ ನೀಲ್‌ಸಿಟಿ ವಿದ್ಯಾಲಯದಲ್ಲಿ ಓದುತ್ತಿದ್ದ. ಬ್ರಿಟಿಷರಿಗೆ ‘ವಂದೇ ಮಾತರಂ’ ಕಿವಿಗೆ ಬಿತ್ತಿಂದರೆ ಎದೆಯಲ್ಲಿ ಛಳಕು. ಕಾದ ಸೀಸವನ್ನು ಕಿವಿಗೆ ಹೊಯ್ದಂತೆ. ಆದುದರಿಂದ ಶಾಲೆಗಳಲ್ಲೂ ‘ವಂದೇ ಮಾತರಂ’ ಹೇಳುವ ಹಾಗಿರಲಿಲ್ಲ. ಹೇಳಿದವರಿಗೆ ಉಗ್ರ ಶಿಕ್ಷೆ. ಅಂತ ಭೀಕರ ವಾತಾವರಣ.

೧೯೮೦ನೆಯ ಇವಿಯ ಒಂದು ದಿನ. ನೀಲ್‌ಸಿಟಿ ವಿದ್ಯಾಲಯಕ್ಕೆ ಇಲಾಖೆಯ ಇನ್‌ಸ್ಪೆಕ್ಟರರು ಭೇಟಿ ಕೊಡುವುದಿತ್ತು. ವಿದ್ಯಾರ್ಥಿಗಳೆಲ್ಲ ಸಮಯಕ್ಕೆ ಸರಿಯಾಗಿ ಬಂದು ತಂತಮ್ಮ ತರಗತಿಗಳಲ್ಲಿ ಕೂತಿದ್ದರು. ಇಡಿ ಶಾಲೆಯಲ್ಲಿ ಅಂದು ಶಾಂತ, ಗಂಭೀರ ವಾತಾವರಣ. ಗತ್ತಿನಿಂದ ಇನ್‌ಸ್ಪಕ್ಟರ್ ಶಾಲೆಯ ವೀಕ್ಷಣೆಗೆ ಮುಖ್ಯೋಪಾಧ್ಯಾಯರೊಡನೆ ಹೊರಟ. ವೀಕ್ಷಣೆ ಮಾಡಬೇಕಾಗಿದ್ದ ಮೊದಲನೇ ತರಗತಿ ಮೆಟ್ರಿಕ್ ವಿದ್ಯಾರ್ಥಿಗಳದ್ದು. ಆ ತರಗತಿಯ ಬಾಗಿಲ ಬಳಿ ಇನ್ನೂ ಹೋಗಿರಲಿಲ್ಲ. ಆಷ್ಟರಲ್ಲೇ ಒಳಗಿನಿಂದ ‘ವಂದೇ ಮಾತರಂ’ ಗರ್ಜನೆ ಸಿಡಿಲಿನಂತೆ ಕಿವಿಗೆ ಅಪ್ಪಳಿಸಿತು. ಇನ್‌ಸ್ಪೆಕ್ಟರ್ ಕನಲಿಕೆಂಡವಾದ. ಕವಿ ಮುಚ್ಚಿಕೊಂಡು ಮುಂದಿನ ತರಗತಿಗೆ ಹೆಜ್ಜೆ ಹಾಕಿದ. ಅಲ್ಲೂ ಅದೇ ರಣಮಂತ್ರದ ಗರ್ಜನೆ.

ಇನ್‌ಸ್ಪೆಕ್ಟರ್ ಕೋಪದಿಂದ ಕಿರುಚಿದ: “ಇದು ರಾಜದ್ರೋಹ! ‘ವಂದೇ ಮಾತರಂ’ ಹೇಳಿದ್ದು ಯಾರು? ಆ ದ್ರೋಹಿಗಳನ್ನು ಶಾಲೆಯಿಂದ ಹೊರಗಟ್ಟಿ, ಅವರಿಗೆಲ್ಲ ಸರಿಯಾದ ಶಾಸ್ತಿ ಮಾಡಿ ಎಂದು ಕಟ್ಟಪ್ಪಣೆ ಇತ್ತು ಹೊರನಡೆದ.

ಎಲ್ಲರ ಮನಸ್ಸಲ್ಲೂ ಒಂದೇ ಪ್ರಶ್ನೆ. ‘ವಂದೇ ಮಾತರಂ’ ಒಟ್ಟಾಗಿ ಹೇಳುವಂತೆ ಮಾಡಿದ ಆ ಕೆಚ್ಚೆದೆಯ ಕಲಿ ಯಾರಿರಬಹುದು? ಅಧ್ಯಾಪಕರು ವಿದ್ಯಾರ್ಥಿಗಳನ್ನು ಹೆದರಿಸಿದರು, ಕಾಡಿದರು, ಬೇಡಿದರು, ಪ್ರಯೋಜನವಾಗಲಿಲ್ಲ. ಯಾರೆಂದು ತಿಳಸದಿದ್ದಲ್ಲಿ ಶಾಲೆಯಿಂದ ಹೊರಗಟ್ಟುವೆವು ಎಂದರು. ವಿದ್ಯಾರ್ಥಿಗಳು ಜಗ್ಗಲಿಲ್ಲ.

ನಾಯಕನ ಹೆಸರು ಹೇಳಲಿಲ್ಲ ಎಂಬ ಕಾರಣದಿಂದ “ವಂದೇ ಮಾತರಂ” ಘೋಷಿಸಿದ ಆ ಎರಡೂ ತರಗತಿಯ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಿದರು. ಅವರೆಲ್ಲ ‘ವಂದೇ ಮಾತರಂ’ ಹಾಡುತ್ತಾ ವಿಜಯದ ವೀರಕುಮಾರರಂತೆ ಹೊರಬಿದ್ದರು!

ಕೇಶ ಮಾತ್ರ ಮತ್ತೆ ಆ ಶಾಲೆಯ ಮೆಟ್ಟಲು ಏರಲಿಲ್ಲ. ಆಗ ಅವನು ೧೯ ವರ್ಷದ ಯುವಕ. ಗರಡಿ ಸಾಧನೆ ಮಾಡಿ ಹುರಿಗಟ್ಟಿದ ಮೈ. ಎತ್ತರದ ನಿಲುವು. ಕಪ್ಪುಬಣ್ಣ. ಮುಖದ ಮೇಲೆ ಕಾಯಿಲೆಯಿಂದಾದ ಮೈಲಿಯ ಕಲೆಗಳು. ಹೊಳೆಯುವ ಕಣ್ಣುಗಳು. ‘ವಂದೇ ಮಾತರ’ ಹಾಡಿನ ಮೂಲಕ ನೀಲ್‌ಸಿಟಿ ವಿದ್ಯಾಲಯದ ಹುಡುಗರ ಹೃದಯಗುಹೆಯಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚಿಸಿದವನು ಇವನೇ.

ನೀಲ್‌ಸಿಟಿ ಹೈಸ್ಕೂಲಿನಿಂದ ಹೊರಬಿದ್ದ ಮೇಲೆ ಕೇಶ ಯವತಮಾಳದ ರಾಷ್ಟ್ರೀಯ ವಿದ್ಯಾಶಾಲೆ ಸೇರಿದ. ಆಗ ರಾಷ್ಟ್ರೀಯ ಧುರೀಣರು ಭಾರತದ ಬಾಲಕರಿಗೆ ರಾಷ್ಟ್ರೀಯ ಶಿಕ್ಷಣ ಕೊಡುವುದಕ್ಕಾಗಿ ಅಲ್ಲಲ್ಲಿ ಇಂತಹ ಶಾಲೆಗಳನ್ನು ತೆರೆದಿದ್ದರು. ಕಡಮೆ ಸಂಬಳ ಪಡೆದು ಒಳ್ಳೆಯ ಶಿಕ್ಷಣ ಕೊಡುವ ಆದರ್ಶ ಅಧ್ಯಾಪಕರು ಅಲ್ಲಿದ್ದರು. ಆದರೆ ರಾಷ್ಟ್ರೀಯತೆಯ ಪಾಠ ಕಲಿಸುವ ಇಂಥ ಶಾಲೆಗಳನ್ನು ಕಂಡು ಬ್ರಿಟಿಷ್ ಸರ್ಕಾರದ ಕಣ್ಣು ಕೆಂಪಾಯಿತು. ಸರ್ಕಾರದ ದಬ್ಬಾಳಿಕೆ, ಬೆದರಿಕೆಗಳಿಗೆ ಗುರಿಯಾಗಿ ಯವತಮಾಳದ ಶಾಲೆ ನಿಂತು ಹೋಯಿತು. ಆದರೆ ಕೇಶ ಮಾತ್ರ ಧೃತಿಗೆಡಲಿಲ್ಲ. ಪುಣೆಗೆ ಹೋಗಿ ವಿದ್ಯಾಭ್ಯಾಸ ಮುಂದುವರಿಸಿದ. ನಂತರ ಅಮರಾವತಿಗೆ ಹೋದ. ಅಲ್ಲಿಂದ ಕಲ್ಕತ್ತ ರಾಷ್ಟ್ರೀಯ ವಿದ್ಯಾಪೀಠದ ‘ಪ್ರವೇಶಿಕಾ’ ಪರೀಕ್ಷೆಯಲ್ಲಿ ಉತ್ತೀರ್ಣನಾದ.

 

ಕೇಶವ ಆಗಿನ ಕಾಲದಲ್ಲಿ ಅಷ್ಟು ಓದಿದ್ದೇ ದೊಡ್ಡ ಸಾಹಸ. ಮನೆಯಲ್ಲಿ ಬೆನ್ನಹತ್ತಿದ ಬಡತನ. ಇಂದು ಊಟಕ್ಕಿದ್ದರೆ ನಾಳೆಗೇನೋ ಎಂಬ ಸ್ಥಿತಿ. ಆದರೆ ಕೇಶವನ ಮನದಲ್ಲಿ ಕೊರೆಯುತ್ತಿದ್ದ ಚಿಂತೆಯೇ ಬೇರೆ. ವಿದೆಶಿಯರ ಕಾಲ್ತುಳಿತದಿಂದ ಈ ನಾಡು ಮಲಿನಗೊಂಡಿದೆ. ಇದನ್ನು ತೊಡೆದುಹಾಕಲು ಇರುವ ಒಂದೇ ಹಾದಿ ಎಂದರೆ ಶಸ್ತ್ರ ಹಿರಿದ ಕ್ರಾಂತಿ. ಆದ್ದರಿಂದ ಕ್ರಾಂತಿಕಾರಿಗಳ ಕಣಜವಾಗಿದ್ದ ಬಂಗಾಳಕ್ಕೆ ಹೋಗಬೇಕು. ಅವರ ಒಡನಾಟ ಸವಿಯಬೇಕು. ಕೇಶವನ ಮನಸ್ಸಿನ ಈ ಇಚ್ಛೆಗೆ ಅನುಗುಣವಾಗಿ ಡಾಕ್ಟರ್  ಮೂಂಜ ಮೊದಲಾದ ಹಿರಿಯರ ಸಹಾಯ ಒದಗಿಸಿದರು. ಕಲ್ಕತ್ತೆಯ ನ್ಯಾಷನಲ್ ಮೆಡಿಕಲ್ ಕಾಲೇಜಿಗೆ ಕಳಿಸಿಕೊಟ್ಟರು. ಹೀಗೆ ೧೯೧೦ರ ಮಧ್ಯಭಾಗದಲ್ಲಿ ಕೇಶವ ನಾಗಪುರದಿಂದ ಏಳುನೂರು ಮೈಲಿ ದೂರವಿರುವ ಕಲ್ಕತ್ತೆಯ ಅಪರಿಚಿತ ಹಾದಿಯಲ್ಲಿ ಹೆಜ್ಜೆ ಹಾಕಿದ.

ಕಾಲೇಜು ಸೇರಿದ ಮೇಲೆ “ಕೇಶವ” ಎಲ್ಲರಿಗೂ “ಕೇಶ್ವರಾವ್:” ಆದರು.

ಉಕ್ಕಿನ ಮನಸ್ಸಿಗೆ ಉಕ್ಕಿನ ದೇಹ

ಕಾಲೇಜಿಗೆ ಸೇರಿದೊಡನೆ ಕೇಶವರಾವ್ ಮಾಡಿದ ಮೊದಲ ಕೆಲಸ- ಇತರ ಪ್ರಾಂತಗಳಿಂದ ಬಂದ ವಿದ್ಯಾರ್ಥಿಗಳೊಡನೆ ಗಾಢವಾದ ಸಂಬಂಧ ಬೆಳೆಸಿದ್ದು. ಕಾಲೇಜಿನ ಉಳೀದ ವೇಳೆಯಲ್ಲಿ ಅವರು ಎಲ್ಲರೊಡನೆ ಹರಟೆ ಹೊಡೆದು ಹಾಸ್ಯ ಚಟಾಕಿ ಹಾರಿಸಿ ಎಲ್ಲರಿಗೂ ಅಚ್ಚುಮೆಚ್ಚಿನವರಾದರು. ಅವರ ಮಾತಿನ ಮೋಡಿಗೆ ಹೃದಯದ ಆತ್ಮೀಯತೆಗೆ ಮರುಳಾಗದವರೇ ಅಪರೂಪ.

ನಾಗಪುರದಲ್ಲಿದ್ದಂತೆಯೇ ಕಲ್ಕತ್ತೆಯಲ್ಲಿಯೂ ತಪ್ಪದೇ ಅವರ ವ್ಯಾಯಾಮ ಮುಂದುವರೆಯಿತು, ವ್ಯಾಯಾಮಕ್ಕೆ ತಕ್ಕಂತೆ ಹಾಲು ಸೇವನೆ. ಹೀಗಾಗಿ ಅವರ ಮೈಕಟ್ಟು ಗಟ್ಟಿಮುಟ್ಟಾಗಿತ್ತು.

ಅಹಂಕಾರಕ್ಕೆ ವೈದ್ಯ , ನೊಂದವರಿಗೆ ಗೆಳೆಯ

ದಬ್ಬಾಳಿಕೆ ಕಂಡಲ್ಲಿ ಸಿಡಿದೇಳುವುದು ಕೇಶವರಾಯರಿಗೆ ರಕ್ತಗತವಾದ ಗುಣ. ಒಂದುಸಲ ರಜೆಯಲ್ಲಿ ಯವತಮಾಳಕ್ಕೆ ಹೋಗಿದ್ದರು.ಸಂಜೆಯ ಸಮಯ. ಕೇಶವರಾವ್ ತಮ್ಮ ಸ್ನೇಹಿತರೊಂದಿಗೆ ಸಿವಿಲ್ ಲೈನ್ಸ್ ದಾರಿಯಲ್ಲಿತಿರುಗಾಡಲು ಹೊರಟರು. ಅಷ್ಟರಲ್ಲಿ ಎದುರಿನಿಂದ  ಆಂಗ್ಲ ಜಿಲ್ಲಾಧಿಕಾರಿ ಬರುವುದು ಕಂಡಿತು. ಆಗ ಇಂಗ್ಲೀಷರ ದರ್ಪಕ್ಕೆ ಕೊನೆ ಮೊದಲೇ ಇರಲಿಲ್ಲ. ಜಿಲ್ಲಾಧಿಕಾರಿಗಳು ಬಂದ ಕೂಡಲೇ ಜನರು ತಾವಾಗಿ ಪಕ್ಕಕ್ಕೆ ಸರಿದು ಸೆಲ್ಯೂಟ್ ಹೊಡೆಯಬೇಕು. ಕೇಶವ್ ರಾವ್ಗೆ ಇದನ್ನು ಸ್ನೇಹಿತರು ತಿಳಿಸಿದರು. ಕೇಶವರಾವ್ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಆ ಅಧಿಕಾರಿಯ ಪಕ್ಕಕ್ಕೆ ಸರಿದು ಹೋದ.ಅವನಿಗೆ ಅವಮಾನ ಆಗಿತ್ತು. ಅವನೇ ತಿರುಗಿ ನಿಂತು ಕೇಳಿದ: “ನಿಮಗೆ ಇಲ್ಲಿನ ರೀತಿ ಗೊತ್ತಿಲ್ಲವೇ?” ಕೇಶವರಾವ್ ಕೋಟಿನ ಜೇಬಿನಲ್ಲಿ ಕೈ ಇಳಿಬಿಟ್ಟು ಹೇಳಿದರು: ” ಇಲ್ಲಿ ರೀತಿ ರಿವಾಜು ಕಟ್ಟಿಕೊಂಡು ನನಗೇನಾಗಬೇಕು? ನಾನು ರಾಜಧಾನಿಯಾದ ನಾಗಪುರದವನು. ಅಲ್ಲಿ ಇಂಥ ಪದ್ಧತಿ ಇಲ್ಲ. ಪರಿಚಯ ಇಲ್ಲದೆ ನಮಸ್ಕರಿಸುವುದೂ ಸರಿಯಲ್ಲ.” ಆ ಅಧಿಕಾರಿ ಇಂಗು ತಿಂದ ಮಂಗನಂತಾದ!

ರಾಷ್ಟ್ರದ, ರಾಷ್ಟ್ರನಾಯಕರ ಅಪಮಾನವನ್ನು ಕೇಶವರಾವ ಎಂದಿಗೂ ಸಹಿಸುತ್ತಿದ್ದವರಲ್ಲ. ಒಮ್ಮೆ ಕಲ್ಕತ್ತೆಯಲ್ಲಿ ದೇಶಭಕ್ತ ಮೌಲವಿ ಲಿಯಾಕತ್ ಹುಸೇನರ ಅಧ್ಯಕ್ಷತೆಯಲ್ಲಿ ಒಂದು ಸಭೆ ಸೇರಿತ್ತು. ಒಬ್ಬ ಭಾಷಣಕಾರ ಲೋಕಮಾನ್ಯ ತಿಲಕರನ್ನು ಹೀಯಾಳಿಸಿ ಮಾತನಾಡಿದ. ಇದನ್ನು ಕೇಳುತ್ತಿದ್ದ ಕೇಶವರಾವ ಕೆಂಡದುಂಡೆಯಾದರು. ನೆಟ್ಟಗೆ ವೇದಿಕೆಯ ಮೇಲೆ ಬರಬರುತ್ತ ಭಾಷಣಕಾರನ ಕೆನ್ನೆಗೆ ಎರಡು ಬಿಗಿದರು!

ವಿಪತ್ತಿನಲ್ಲಿ ಸಿಲುಕಿರುವವರಿಗೆ ಸೇವೆ ಸಲ್ಲಿಸುವುದರೊಂದಿಗೆ ಕೇಶವರಾವಗೆ ಎಲ್ಲಿಲ್ಲದ ಕಳಕಳಿ.೧೯೧೩ರಲ್ಲಿ ಬಂಗಾಳದ ದಾಮೋದರ ನದಿಯಲ್ಲಿ ಭೀಕರ ಪ್ರವಾಹ ಬಂತು. ನದಿ ದಡದಲ್ಲಿ ವಾಶವಾಗಿದ್ದ ಜನ, ಜಾನುವಾರು, ಮನೆಮಠ ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋದವು. ಕೇಶವರಾವ ತಕ್ಷಣ ಗೆಳೆಯರನ್ನು ಕಟ್ಟಿಕೊಂಡು ನೊಂದವರಿಗೆ ಸೇವೆ ಸಲ್ಲಿಸಲು ಹೊರಟರು. ಹಸಿದವರಿಗೆ ಆಹಾರ ನೀಡಿದರು. ಜೀವನದಲ್ಲಿ ಭರವಸೆ ಕಳೆದುಕೊಂಡವರಿಗೆ ಧೈರ್ಯ ಹೇಳಿದರು. ಹೀಗೆ ಕೇಶವರಾವ್ ಅಕ್ಷರಶಃ ಹಗಲಿರುಳು ದುಡಿದರು. ಭಾಷೆ, ಪ್ರಾಂತಗಳ ಅಡ್ಡಗೋಡೆ ಅವರ ಸೇವಾಕಾರ್ಯಕ್ಕೆ ಎಂದೂ ಅಡ್ಡಿಯಾಗಲಿಲ್ಲ.

ಚಾಣಾಕ್ಷ

ಕಲ್ಕತ್ತೆಯಲ್ಲಿದ್ದಾಗ ಕ್ರಾಂತಿಕಾರರೊಂದಿಗೆ ಅವರದು ನಿಕಟ ಒಡನಾಟ. ಶಾಮಸುಂದರ ಚಕ್ರವರ್ತಿ, ಮೋತಿಲಾಲ್ ಘೋಷ್ ಮುಂತಾದ ಪ್ರಮುಖ ಕ್ರಾಂತಿಕಾರರೊಡನೆ ಅವರ ಸ್ನೇಹದ  ಬೆಸುಗೆ ಬಲವಾಗಿತ್ತು. ಆಗ ಕ್ರಾಂತಿಕಾರಿಗಳ ಪ್ರಮುಖ ಸಂಸ್ಥೆಯಾಗಿದ್ದ “ಅನುಶೀಲನ ಸಮಿತಿ”ಗೆ ಎಲ್ಲರಿಗೂ ಸುಲಭವಾಗಿ ಪ್ರವೇಶ ಶಿಗುತ್ತಿರಲಿಲ್ಲ,. ಹಲವು ವಿಧದ ಕಠೋರ ಪರೀಕ್ಷೆಗಳ ನಂತರವೇ ಅಲ್ಲಿ ಪ್ರವೇಶ. ಕೇಶವರಾಯರು ಆ ಸಂಸ್ಥೆಯ ಪ್ರಮುಖ ಸದಸ್ಯರೇ ಆದರು. ಅದು ಗುಪ್ತವಾಗಿ ಬ್ರಿಟಿಷರ ವಿರುದ್ಧ ಸಾಹಿತ್ಯ ಮುದ್ರಿಸುತ್ತಿತು. ಕೇಶವರಾಯರು ಆ ಸಾಹಿತ್ಯವನ್ನು ಎಲ್ಲ ಕಡೆ ಹಂಚುತ್ತಿದ್ದರು.

ನಾಗಪುರ ಬಿಟ್ಟ ಬಳಿಕ ಕೇಶವರಾಯರ ಬೆನ್ನ ಹಿಂದೆ ಸದಾ ಗೂಢಾಚಾರರ ಕಾಟ. ಆದರೆ ಕೇಶವರಾಯರು ಮೈಯೆಲ್ಲ ಕಣ್ಣಾಗಿರುತ್ತಿದ್ದರು. ಒಂದು ಸಲ ಕೇತಕರ್ ಎಂಬ ಒಬ್ಬ ಸಿಐಡಿ(ಗುಪ್ತ ಪೋಲಿಸ ಅಧಿಕಾರಿ) ಯು ವಿದ್ಯಾರ್ಥಿಯ ಸೋಗು ಹಾಕಿಕೊಂಡು ಅವರ ಕೋಣೆಯಲ್ಲಿಯೇ ಬಂದು ನಿಂತ. ಎಲ್ಲರೊಡನೆ ಪರಮ ಸ್ನೇಹಿತನಂತೆ ನಟಿಸಿದ. ಆದರೆ ಕೇಶವರಾವ್ ಗೆ ಅವನ ಮೇಲೆ ಮೊದಲ ದಿನದಿಂದಲೇ ಗುಮಾನಿಬಂದಿತು. ಅವನು ಸಿ.ಐ.ಡಿ. ಎಂಬುವುದನ್ನು ಎಲ್ಲರಿಗೂ ತಿಳಿಸಿ, ಎಚ್ಚರಿಕೆಯಿಂದಿರಲು ತಿಳಿಸಿದರು. ಆದರೆ ಬೇರೆಯವರಿಗೆ ಮಾತ್ರ ಅವನ ಮಾತಿನಲ್ಲಿ ನಂಬಿಕೆ ಬರಲಿಲ್ಲ.

ಒಂದು ದಿನ, ೧೯೧೦ರ ಜೂನ್ನಲ್ಲಿ ಸ್ವಾತಂತ್ಯ್ರವೀರ ಸಾವರಕರ ತಮ್ಮ ನಾರಾಯಣರಾವ್ ಸಾವರಕರ‍್ರಿಗೆ ಜೈಲಿನಿಂದ ಬಿಡುಗಡೆಯಾಯಿತು. ಅವರು ವೈದ್ಯಕೀಯ ಶಿಕ್ಷಣಕ್ಕೆ ಕಲ್ಕತ್ತೆಗೆ ಬರುವವರಿದ್ದರು. ಒಂದು ದಿನ ಕೇತಕರ ಹೊರಗೆ ಹೋದ ಸಮಯ ನೋಡಿ ಕೇಶವರಾಯರು ಅವನ ಪೆಟ್ಟಿಗೆಯ ಬೀಗ  ತೆರೆದರು. ಅದರಲ್ಲೊಂದು ಸರಕಾರದ ಗುಪ್ತ ಕಾಗದ. ನಾ.ರಾ.ಸಾ. ಅಲ್ಲಿಗೆ ಬರುತ್ತಿದ್ದಾರೆ. ಅವರ ಕಡೆಗೆ ಲಕ್ಷ್ಯವಿರಲಿ: ಎಂಬ ಸುದ್ಧಿ. ಕೇಶವರಾಯರು ಅದನ್ನು ಗೆಳೆಯರಿಗೆ ತೋರಿಸಿದರು. ನಂತರ ಮೊದಲಿದ್ದಲ್ಲಿಯೇ ಅದನ್ನಿಟ್ಟರು. ಕೇಶವರಾಯರ ಚಾಣಕ್ಷ ಬುದ್ಧಿ ನೋಡಿ ಗೆಳೆಯರಿಗೆ ಅಚ್ಚರಿ.

ಇಷ್ಟೆಲ್ಲ ಚಟುವಟಿಕೆಗಳಲ್ಲಿ ತೊಡಗಿದ್ದರೂ ಅವರ ವಿದ್ಯಾಭ್ಯಾಸಕ್ಕೇನೂ ಕುಂದುಬರಲಿಲ್ಲ. ಪರೀಕ್ಷೆಯಲ್ಲಿ ಅವರಿಗೆ ಯಾವಾಗಲೂ ಉತ್ತಮ ಅಂಕಗಳು. ೧೯೧೪ರಲ್ಲಿ ಕೇಶವರಾವ್ ಕೊನೆಯ ಪರೀಕ್ಷೆಯಲ್ಲಿ ಪಾಸಾಗಿ ಎಲ್.ಎಂ.ಎಸ್. ಪದವಿ ಪಡೆದರು. ಆಗಲೇ ಬ್ಯಾಂಕಾಕ್ ನಿಂದ ಅವರಿಗೆ ದೊಡ್ಡ ನೌಕರಿಗೆ ಕರೆ ಬಂದಿತು. ಆದರೆ ಅವರು ಅದಕ್ಕೆ ಬೆನ್ನು ತಿರುಗಿಸಿದರು. ಏಕೆಂದರೆ ಆ ವೇಳೆಗಾಗಲೇ ಅವರು ತಮ್ಮ ಬಾಳನ್ನು ದೇಶಕ್ಕಾಗಿ ಮುಡುಪಾಗಿಡಬೇಕೆಂದು ತೀರ್ಮಾನಿಸಿದರು.

 

"ನೀವು ನಿಜಕ್ಕೂ ಅದ್ಭುತ ಸಂಘಟನೆಯನ್ನು ಕಟ್ಟಿರುವಿರಿ.

ನಾಗಪುರಕ್ಕೆ ವಾಪಸ್ಸು ಬಂದಾಗ ಅವರ ಮನೆಯ ಸ್ಥಿತಿ ತೀರಾ ಹದಗೆಟ್ಟಿತ್ತು. ಡಾಕ್ಟರ್ ಕೇಶವರಾವ್ ವೈದ್ಯವೃತ್ತಿ ಆರಂಭಿಸಿ ಅಣ್ಣಂದಿರಿಗೆ ನೆರವಾಗುತ್ತಾರೆಂದು ಎಲ್ಲರ ಆಶೆ.  ವೈದ್ಯರಿಗೆ ಈಗಿನಂತೆ ಆಗಲೂ ಸಮಾಜದಲ್ಲಿ ಗೌರವ, ಹಣ ಸಂಪಾದನೆ ಇತ್ತು, ಆದರೆ ಕೇಶವರಾವ ಅದರ ಗೊಡವೆಗೇ ಹೋಗಲಿಲ್ಲ. ಮದುವೆ ಮಾಡಿಕೊಳ್ಳಲು ಹಲವರು ಒತ್ತಾಯಿಸಿದರು. ಆದರದಕ್ಕೆ ಒಗ್ಗೋಡಲಿಲ್ಲ. ಮದುವೆಯಾಗದೆಯೇ ದೇಶಕಾರ್ಯ ಮಾಡುವ ಆಶೆ ನನ್ನದು. ಈ ಕಾರ್ಯಮಾಡುವಾಗ ಯಾವ ಕ್ಷಣದಲ್ಲಾದರೂ ನನ್ನ ಮೇಲೆ ವಿಪತ್ತು ಬರಬಹುದು. ಇದನ್ನು ತಿಳಿದ ಮೇಲೆಯೂ ಒಂದು ಹೆಣ್ಣಿನ ಬಾಳನ್ನೇಕೆ ಹಾಳೂ ಮಾಡಲಿ? ಎಂದು ಅವರು ತಮ್ಮ ಚಿಕ್ಕಪ್ಪನಿಗೆ  ಪತ್ರ ಬರೆದು ತಿಳಿಸಿದರು.

ಕ್ರಾಂತಿಕಾರಿ

ನಾಗಪುರಕ್ಕೆ ಬಂದ ನಂತರ ಹಲವು ವಿಧ ರಾಜಕೀಯ ಸಮಾಜಿಕ ಕಾರ್ಯಗಳಲ್ಲಿ ಅವರು ತೊಡಗಿದರು.

ಹೆಡಗೆವಾರರ ಸ್ನೇಹಿತರು ಬಾಪೂಜಿ, ಕಾವರೆ, ಅವರ ನಾಯಕತ್ವದಲ್ಲಿ ೧೯೦೮ರಿಂದಲೂ ಮಧ್ಯ ಪ್ರಾಂತ್ಯದಲ್ಲಿ ಕ್ರಾಂತಿಕಾರ್ಯ ನಡೆದಿತ್ತು. ಈಗ ಡಾಕ್ಟರ್   ಹೆಡಗೇವಾರರೂ ಅವರ ಜೊತೆಗೆ ಸೇರಿದರು. ನಾಗಪುರದ ಅನೇಕ ಪ್ರಮುಖರನ್ನು ಭೇಟಿಯಾದರು. ಹೋದೆಡೆಯಲ್ಲೆಲ್ಲ ನಾಡಿಗೆ ಬಂದೆರಗಿದ ಘೋರ ದಾಸ್ಯದ ಕುರಿತು ಜನರಮನಮುಟ್ಟುವಂತೆ ಭಾಷಣ, ಗುಟ್ಟಾಗಿ ಜನರಿಂದ ಹಣ ಸಂಗ್ರಹ, ಈ ಹಣದಿಂದ ಪಿಸ್ತೂಲ್ ಹಾಗೂ ಮದ್ದು ಗುಂಡುಗಳನ್ನು ಕ್ರಾಂತಿಕಾರರಿಗೆ ಸರಬರಾಜು ಮಾಡತೊಡಗಿದರು.

ನಾಗಪುರದ ಹತ್ತಿರ ಕಾಮಾಠಿ ಎಂಬುವುದು ಒಂದು ಊರು. ಅಲ್ಲಿ ಒಂದು ಸೈನ್ಯದ ಠಾಣೆ. ಹೆಡಗೆವಾರರು ಅಲ್ಲಿ ಕೆಲವರೊಂದಿಗೆ ಸಂಪರ್ಕ ಬೆಳೆಸಿಕೊಂಡರು. ಗುಟ್ಟಾಗಿ ಶಸ್ತ್ರಗಳನ್ನು ಕೈಗೊಳ್ಳಲು ತೊಡಗಿದರು. ಒಂದು ಸಲವಂತೂ ಕೆಲವು ಕ್ರಾಂತಿಕಾರಿಗಳು ತಾವೇ ಸೈನಿಕ ಉಡುಪನ್ನು ಧರಿಸಿದರು.  ಸೈನಿಕ ಠಾಣೆಗೆಂದು ಬಂದಿದ್ದ ಮದ್ದುಗುಂಡುಗಳ ಕೆಲವು ಪೆಟ್ಟಿಗೆಗಳನ್ನು ಎಲ್ಲರೆದುರಲ್ಲೇ  ರೈಲಿನಿಂದ ಇಳಿಸಿಕೊಂಡು ಮಾಯವಾದರು. ತನಿಖೆಯಾದರೆ ಇದರ ಪತ್ತೆಯಾಗಬಾರದೆಂದು ಹೆಡಗೇವಾರರು ಸೈನಿಕರ ವಸ್ತ್ರಗಳನ್ನೆಲ್ಲ ಸುಟ್ಟು ಬೂದಿಯನ್ನು ಹಳ್ಳದಲ್ಲಿ ತೇಲಿ ಬಿಟ್ಟರು.

ಆದರೆ ದೇಶದಾದ್ಯಂತ ಕ್ರಾಂತಿಕಾರಿಗಳ ಚಟುಟಿಕೆಗಳನ್ನು ಆಂಗ್ಲ ಸರಕಾರ ಪತ್ತೆ ಹಚ್ಚಿ ನಿರ್ಧಯವಾಗಿ ಅವರನ್ನು ಸದೆಬಡಿಯತೊಡಗಿತು. ಈ ದಮನ ಚಕ್ರದಿಂದ ನಿರಾಶೇಯ ಕತ್ತಲೆಯು ಕ್ರಾಂತಿಕಾರಿಗಳ ಮನಸ್ಸನ್ನು ಮುಸುಕಿತು.  ಕೆಲವರಂತೂ ದೇಶದ ಕಾರ್ಯಕ್ಕೆ ಕೊನೆಯ ನಮಸ್ಕಾರ ಹೇಳಿದರು. ಕ್ರಾಂತಿಕಾರಿಗಳಲ್ಲಿದ್ದ ಶಿಸ್ತು ಸಡಿಲವಾಯಿತು.  ಸ್ವಾರ್ಥ ಹೆಡೆ ಎತ್ತಿತ್ತು. ವಿಶ್ವಾಸ ನಂದಿಹೋಯಿತು.

ಈ ಎಲ್ಲ ಚಳುವಳೀ- ಚಟುವಟಿಕೆಗಳಿಂದ ಕೇಶವರಾಯರು ಸಿಹಿ-ಕಹಿ ಎರಡೂ ಅನುಭವ ಉಂಡರು. ಅವರು ಸಮಾಜದ ಸ್ಥಿತಿಯ ಬಗ್ಗೆ ಆಳವಾಗಿ ಚಿಂತಿಸತೊಡಗಿದರು.  ಕಟ್ಟು ನಿಟ್ಟಾದ ತರಬೇತಿ, ಸಂಸ್ಕಾರಗಳಿಲ್ಲದೇ ದೇಶಭಕ್ತಿಯ ಭಾವನೆ ಜನರ ಮನಸ್ಸಿನಲ್ಲಿ ಸ್ಥಿರವಾಗಿ ಉಳಿಯದು. ಇದು ಅವರ ವಿಚಾರ ಆಗಿತ್ತು.

ಅನಂತರ ಹಡೆಗೆವಾರರು ಹಲವು ಬಗೆಯಲ್ಲಿ ಜನ ಜಾಗೃತಿಯ ಕಾರ್ಯಗಳಲ್ಲಿ ತಲ್ಲೀನರಾದರು.ನಾಗಪುರದಲ್ಲಿ ತಿಲಕರ ವರ್ಚಸ್ಸಿನಿಂದ ಸ್ಥಾಪನೆಗೊಂಡ “ರಾಷ್ಟ್ರ ಸೇವಾ ಮಂಡಲ”ದ ಮೂಲಕ ರಾಜಕೀಯ ಚಟುವಟಿಕೆಗಳು ನಡೆಯುತ್ತಿದ್ದವು. ಹೆಡಗೆವಾರರೂ ಅದರಲ್ಲಿದ್ದರು. ಅಲ್ಲಿದ್ದ ಎಲ್ಲೆ ಪೈಕಿ ಅವರೇ ಕಿರಿಯರು.

ಹೆಡಗೆವಾರರು ತರುಣರನ್ನು ಹುರಿದುಂಬಿಸುವ ಸಲುವಾಗಿ ಒಂದು ರಾಷ್ಟ್ರೀಯ ಉತ್ಸವ ಮಂಡಲವನ್ನು ರಚಿಸಿದರು.  ಇದರ ಆಶ್ರಯದಲ್ಲಿ ಅವರು ನಡೆಸುತ್ತಿದ್ದುದು- ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ, ಗಣೇಶೋತ್ಸವ, ಶಸ್ತ್ರ ಪೂಜೆ, ಸಂಕ್ರಾಂತಿ ಮುಂತಾದ ಕಾರ್ಯಕ್ರಮಗಳು ಇಂತಹ ಉತ್ಸವಗಳಲ್ಲಿ ಅವರ ಭಾಷಣ ಕೇಳಿ ತರುಣರು ರೋಮಾಂಚನಗೊಳ್ಳುತ್ತಿದ್ದರು.

‘ಇದು ಯಾವ ನ್ಯಾಯ?

೧೯೧೯ನೇಯ ಇಸವಿ. ಲಿಖಾಫತ್ ಮತ್ತು ಅಸಹಕಾರ ಚಳುವಳಿಗಳಿಂದಾಗಿ ದೇಶದ ಪರಿಸ್ಥಿತಿ ದಿನದಿಂದ ದಿನಕ್ಕೆ ಕಾವೇರುತ್ತಿತ್ತು. ಅದೇ ವರ್ಷ ಅಮೃತಸರದಲ್ಲಿ ಕಾಂಗ್ರೆಸ್ ಅಧಿವೇಶನ. ಕೇಶವ ಬಲಿರಾಮ ಹೆಡಗೆವಾರ ಅವರು ಅಧಿವೇಶನಕ್ಕೆ ಹೋಗಿಬಂದರು. ಅದೇ ವರ್ಷ ಜುಲೈ ತಿಂಗಳಲ್ಲಿ ಕಾಂಗ್ರೆಸ್ ಅಧಿವೇಶನಕ್ಕಾಗಿ ಒಂದೂವರೆ ಸಾವಿರ ಸ್ವಯಂ ಸೇವಕರ ತಂಡವನ್ನು ಕಟ್ಟುವ ಕಾರ್ಯ ಪ್ರಾರಂಭ ಆಯಿತು.  ಇದಕ್ಕಾಗಿ ಹೆಡಗೇವಾರರು ಎಡೆಬಿಡದ ದುಡಿಮೆ. ನಾಗಪುರದಲ್ಲಿ ನಡೆದ ಆ ಕಾಂಗ್ರೆಸ ಅಧಿವೇಶನದಲ್ಲಿ ಅವರು ಮತ್ತು ಅವರ ಸ್ನೇಹಿತರು ಘೊಷಿಸಿದ್ದು, ಸಂಪೂರ್ಣ ಸ್ವಾತಂತ್ಯ್ರವೇ ನಮ್ಮ ಗುರಿ ಎಂದರು.

ಇತ್ತ ಅಸಹಕಾರ ಅಂದೋಲನದ ಕಾವು ಏರುತ್ತಾ ಹೋಯಿತು “ಒಂದು ವರ್ಷದಲ್ಲಿ ಸ್ವರಾಜ್ಯ ಎಂಬ ಘೊಷಣೆಯಿಂದ ಹುರುಪು ತಾಳಿ ಚಳುವಳಿಯಲ್ಲಿ ದುಮುಕಿದವರು ನೂರಾರು ಮಂದಿ. ಕೇಶವರಾಯರೂ ಅಂದೋಲನದ ಪ್ರಚಾರಕ್ಕಾಗಿ ಮಧ್ಯಪ್ರಾಂತದ ಹಳ್ಳಿಹಳ್ಳಿಗಳಲ್ಲಿ ಬಿರುಗಾಳಿ ಸಂಚಾರ ಕೈಗೊಂಡರು. ಗುಡುಗಿನಂಥ ಭಾಷಣ ಮಾಢಿದರು. ಬ್ರೀಟಿಷ ಸರಕಾರ ಇದನ್ನು ಸಹಿಸಲಿಲ್ಲ. ಹಡಗೆವಾರರು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಬಾರದು, ಭಾಷಣ ಮಾಡಕೂಡದು. ಐದು ಜನರಿಗಿಂತ ಹೆಚ್ಚಿನ ಗುಂಪಿನಲ್ಲಿ ಸಹ ಮಾತನಾಡಬಾರದು ಎಂದು ಸರಕಾರ ನಿಷೇದ ಹೇರಿತು. ಹೆಡಗೆವಾರರು ಅದನ್ನು ಸುತಾರಂ ಲೆಕ್ಕಿಸಲಿಲ್ಲ. ಅವರು ಮಾಡಿದ ಭಾಷಣಗಳನ್ನು ಅಕ್ಷೇಪಾರ್ಹ ಎಂದು ಸರಕಾರ ಅವರ  ಮೇಲೆ ರಾಜದ್ರೋಹದ ಅಪಾದನೆ ಹೇರಿತು. ನ್ಯಾಲಯದಲ್ಲಿ ಹೆಡಗೆವಾರರು ತಮ್ಮ ಪರವಾಗಿ ತಾವೇ ವಾದಿಸಿದರು.

“ಹಿಂದೂಸ್ಥಾನವು ಈ ದೇಶಧ ಜನಗಳದೇ ಆಗಿದೆ. ಇಲ್ಲಿನ ಜನರನ್ನು ಕಾಲ ಕೆಳಗೆ ತುಳಿದು ಅವರ ಮೇಲೆ ದಬ್ಬಾಳಿಕೆಯ ರಾಜ್ಯ ಮಾಡುವ ಅಧಿಕಾರವನ್ನು ಆಂಗ್ಲರಿಗೆ ಕೊಟ್ಟವರಾರು? ನಾವೂ ಹಿಂದೂಸ್ಥಾನದ ಒಡೆಯರು” ಎಂದು ಆಂಗ್ಲರು ಹೇಳುವುದು ನ್ಯಾಯ ನೀತಿ ಹಾಗೂ ಧರ್ಮದ ಕಗ್ಗೊಲೆಯಲ್ಲವೇ?”

ಅವರ ಉಗ್ರವಾದ ಈ ವಾದ ಕೇಳಿ ನ್ಯಾಯಾಧೀಶರು “ನಿಮ್ಮ ಮುಂಚಿನ ಭಾಷಣಕ್ಕಿಂತ ಈಗಿನ ಸಮರ್ಥನೆಯೇ ಹೆಚ್ಚು ರಾಜದ್ರೋಹತ್ಮಕ ಆಗಿದೆ:” ಎಂದರು! ಹೆಡಗೆವಾರರಿಗೆ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಲಾಯ್ತು.

ಸೆರೆಮನೆಯಿಂದ ಹೊರಬಂದಾಗ ಹೆಡಗೆವಾರರಿಗೆ ದೊರಕಿದುದು, ಭಾರೀ ಸ್ವಾಗತ. ಹಲವೆಡೆ ಅವರನ್ನು ಜನರು ಸನ್ಮಾನಿಸಿದರು. ತಾಯಂದಿರು ಆರತಿ ಬೆಳಗಿದರು. ಖಾದಿ ಬಟ್ಟೆನ್ನು ಉಡುಗೊರೆಯಾಗಿ ಕೊಟ್ಟರು.

ಒಂದು ನಿರ್ಧಾರ

ಸಂಪೂರ್ಣ ಸ್ವಾತಂತ್ಯ್ರ ಸಿಗಬೇಕೆಂಬ ಪ್ರಚಾರ ಆಗ ಬಿರುಸಾಗಿತ್ತು . ಹೆಡಗೇವಾರರು ತಮ್ಮ ಸ್ನೇಹಿತರೊಂದಿಗೆ ಕೂಡಿ ಒಂದು ಪತ್ರಿಕೆ ಹೊರತಂದರು.ಅದರ ಹೆಸರೇ “ಸ್ವಾತಂತ್ಯ್ರ”, ಸಂಪೂರ್ಣ ಸ್ವಾತಂತ್ಯ್ರಕ್ಕಾಗಿ ಅದರಲ್ಲಿ ಖಾರವಾದ ಬರಹಗಳು. ಪತ್ರಿಕೆ ನಷ್ಟದಿಂದ ಕುಂಟುತ್ತಿದ್ದಾಗ ಹೆಡೆಗೇವಾರರು ತಾವೇ ಅದರ ಸಂಪಾದಕರಾದರು.

ಆದರೆ ಆ ವೇಳೆಗೆ ಅಸಹಕಾರ ಅಂದೋಲನ ತಣ್ಣಗಾಗಿತ್ತು. ಜನಜೀವನದಲ್ಲಿ ಅಶಿಸ್ತು ತಲೆದೊರಿತ್ತು. ಬ್ರೀಟಿಷರ ಕುತಂತ್ರದಿಂದಾಗಿ ಹಿಂದೂ-ಮುಸಲ್ಮಾನರಲ್ಲಿ ಒಡಕು, ಹಗೆತನ ಉಂಟಾಗಿತ್ತು.

ಡಾಕ್ಟರ್ ಹೆಡಗೆವಾರರು ಇದನ್ನೆಲ್ಲ ಗಮನಿಸಿ ಒಂದು ಮುಖ್ಯ ನಿಷ್ಕರ್ಷೆಗೆ ಬಂದರು. ಬ್ರೀಟಿಷರ ದಾಸ್ಯದ ನೊಗವನ್ನು ಕಿತ್ತೆಸೆಯಬೇಕಾದರೆ  ಹಿಂದುಗಳನ್ನೆ ಮುಖ್ಯವಾಗಿ ನೆಚ್ಚಿಕೊಳ್ಳಬೇಕು. ಅದಕ್ಕಾಗಿ ಹಿಂದೂಗಳಲ್ಲಿ ದೇಶಭಕ್ತಿ, ಶಿಸ್ತು, ಪರಾಕ್ರಮಗಳನ್ನು ನಿರ್ಮಿಸಬೇಕು. ಆಗಲೇ ಇಲ್ಲಿ ಮುಸ್ಲಿಮರು ಸಹ ತಾವು ಪ್ರತ್ಯೇಕ ಎನ್ನುವ ಭಾವನೆಯನ್ನು ತೊರೆದು ಹಿಂದೂಗಳೊಂದಿಗೆ ಭುಜಕ್ಕೆ ಭುಜಕೊಟ್ಟು ನಿಂತರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ

ಅದಕ್ಕಾಗಿ ಅವರು ಹೆಚ್ಚು ಹೆಚ್ಚು ಹಿಂದೂ ತರುಣರೊಡನೆ ಸಂಪರ್ಕ ಬೆಳೆಸಿರು. ನಂತರ ೧೯೨೫ರ ವಿಜಯದಶಮಿಯಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸಿದರು.

ಹನಿಹನಿ ಕೂಡಿ ಹಳ್ಳವಾಗುವಂತೆ ಹೃದಯ ಹೃದಯ ಬೆರೆತು ಸಂಘದ ಶಕ್ತಿ ಬೆಳೆಯಿತು. ಬಡವ- ಬಲ್ಲಿದ, ಬ್ರಾಹ್ಮಣ -ಹೊಲೆಯ ಎನ್ನುವ ಭೇಧವಿಲ್ಲದೆ ಎಲ್ಲರೂ ಸಂಘದ ಶಾಖೆಗೆ ಬರತೊಡಗಿದರು. ಅವರೆಲ್ಲರೊಡನೆ ಹೆಗಡೆವಾರರದು ಗಾಢವಾದ ಸ್ನೇಹ ಸಂಬಂಧ. ಅವರ ಇಪ್ಪತ್ತನಾಲ್ಕು ತಾಸೂ ಸಂಘ ಕಾರ್ಯದಲ್ಲೇ ಕಳೆಯುತ್ತಿತ್ತು. ಆದರೆ ಅವರ ಬಡತನವಂತೂ ಹೆಳತೀರದು. ಅಣ್ಣನ ಪೌರೋಹಿತ್ಯದ ಪುಡಿಕಾಸುಗಳಿಂದ ಸಂಸಾರ ತೂಗಿಸುವುದು ಹೇಗೆ ಸಾಧ್ಯ? ಹೆಡಗೆವಾರರಿಗೆ ಎಲ್ಲರೂ ಸ್ನೇಹಿತರೇ. ಎಲ್ಲರೂ ಬೇಕಾದವರೇ. ಬಂದವರಿಗೆ ಅವರು ಏನಾದರೂ ಅತಿಥ್ಯ ನೀಡದೆ ಕಳೀಸುತ್ತಿರಲಿಲ್ಲ.

ಹೆಡಗೆವಾರರು ಕೆಲವು ಶ್ರೀಮಂತರ ಗೆಳೇಯರು ಅವರ ಅರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಪ್ರತಿ ತಿಂಗಳು ಅವರಿಗೆ ಹಣ  ಕೊಡಿಸಿಕೊಡುವ ಯೋಜನೆ ಹಾಕಿದರು. ಆದರೆ ಕೇಶವರಾಯರು ಇದನ್ನು ಒಪ್ಪಲಿಲ್ಲ. “ನನ್ನ ಸ್ವಂತಕ್ಕಾಗಿ ಸಮಾಜದ ಹಣ ಖರ್ಚು ಮಾಡುವುದು ಬೇಡ ಎಂದು  ಹೇಳಿಬಿಟ್ಟರು.

ಹೆಡಗೆವಾರರನ್ನು ಕ್ರಮೇಣ ಎಲ್ಲರೂ ಪ್ರೀತಿಯಿಂದ ‘ಡಾಕ್ಟರ್’ಜೀ ಎಂದೇ ಕರೆಯತೊಡಗಿದರು. ಅವರು ಹೋದ ಕಡೆ ಆನಂದ, ಉತ್ಸಾಹ ಉಕ್ಕುತಿತ್ತು.

ಅವರದು ನಿರಾಡಂಬರ ಶೈಲಿಯ ಕೆಲಸ. ಜನರಿಗೆ ದೇಶದ ವಿಷಯ ತಿಳಿಯ ಹೇಳಲು ಹಳ್ಳಿ ಹಳ್ಳೀಗೆ ನಡೆದುಕೊಂಡೇ ಹೋಗುವರು. ದೊಡ್ಡ ಶ್ರೀಮಂತರನ್ನು ಕಾಣುವರು. ಚಿಕ್ಕ ಪುಟ್ಟ ಗ್ರಾಮಗಳಿಗೆ ತೆರಳಿ ಅನಕ್ಷರಸ್ಥ ಬಡರೈತರನ್ನು ಕಾಣುವರು.

ಶಿಸ್ತಿನ ಮೂರ್ತಿ

ಉಳಿದವರಿಗೆ ಶಿಸ್ತಿನ  ಪಾಠ ಹೇಳುತ್ತಿದ್ದ ಡಾಕ್ಟರ್ ಜೀ ತಾವು ಸ್ವತಃ ಶಿಸ್ತನ್ನು ಪಾಲಿಸುತ್ತಿದ್ದರು.

ಒಮ್ಮೆ ಅಡಗಾಂವಿಗೆ ಆತ್ಮೀಯ ಮಿತ್ರರ ಮನೆಯ ಮುಂಜಿ ಮಹೂರ್ತಕ್ಕೆ ಅವರು ಹೋಗಿದ್ದರು. ನಾಲ್ಕು ದಿನ ಆನಂದವಾಗಿ ಅಲ್ಲಿಯೇ ಉಳಿಯುವಂತೆ ಮಿತ್ರರ ಒತ್ತಾಯ. ಆದರೆ ಮರುದಿನ ಬಾನುವಾರ. ನಾಗಪುರದಲ್ಲಿ ಪ್ರತಿ ಬಾನುವಾರ ಬೆಳಿಗ್ಗೆ ಸಂಘದ ಪರೇಡ ಇರುತ್ತಿತ್ತು.  ಆ ಕಾರ್ಯಕ್ರಮಕ್ಕೆ ಡಾಕ್ಟರ್ ಜೀ ಎಂದೂ ತಪ್ಪಿದವರಲ್ಲ. ತಡವಾದರೂ ಅಂದು ರಾತ್ರಿಯೇ ಅಲ್ಲಿಂದ ಜೊತೆಗಾರರೊಡನೆ ಹೊರಟರು.

ಬಸ್ ಗಳಾವೂವು ಆ ಹೊತ್ತಿನಲ್ಲಿ ಇರಲಿಲ್ಲ. ಅಡೆಗಾಂವಿನಿಂದ ನಾಗಪುರಕ್ಕೆ ೩೨ ಮೈಲಿ ದೂರ. ಕತ್ತಲಲ್ಲಿ  ನಡೆದು ನಡೆದು ೯-೧೦ ಮೈಲಿ ದೂರವಿರುವ ದೊಡ್ಡ ರಸೆತೆಗೆ ಬಂದು ಮುಟ್ಟಿದರು. ಮಧ್ಯರಾತ್ರಿ ಆಗ. ಆದರೆ ಡಾಕ್ಟರ್  ಜೀ ಕೆಸರು, ಮುಳ್ಳು ತುಂಬಿದ ರಸ್ತೆಯಲ್ಲಿ ವೇಗವಾಗಿ ನಡೆಯುತ್ತಲೇ ಇದ್ದರು. ಅಷ್ಟರಲ್ಲಿ ನಾಗಪುರಕ್ಕೆ ತಡವಾಗಿ ಹೋಗುತ್ತಿದ್ದ ಬಸ್ಸೊಂದು ಬಂತು ಬೆಳಗಿನ ಜಾವ ನಾಗಪುರ ತಲುಪಿ, ಮೊದಲೇ ನಿಶ್ಚಯಿಸಿದಂತೆ  ಪೆರೇಡಿನಲ್ಲಿ ಹಾಜರಾದರು. ಡಾಕ್ಟರ್ ಜೀ ಬರಲಾರರೆಂದು ಊಹಿಸಿದ್ದ ಸ್ವಯಂ ಸೇವಕರಿಗೆಲ್ಲ ಇದರಿಂದ ಅಚ್ಚರಿಯಾಯಿತು. ಒಂದು ದೊಡ್ಡ ಶಿಸ್ತಿನ ಪಾಠವೂ ಅವರಿಗೆ ಸಿಕ್ಕಿತು.

ಸಂಘದ ಬೆಳಕು ಹರಡಿತು

ಸಂಘದ ಕಾರ್ಯ ನಾಗಪುರ ಹಾಗೂ ಹತ್ತಿರದ ಜಿಲ್ಲೆಗಳಲ್ಲಿ ಬೆಳೆಯುತ್ತಿತ್ತು. ಈಗ ಇತರೆ ರಾಜ್ಯಗಳಲ್ಲಿಯೂ ಹಬ್ಬ ತೊಡಗಿತು. ಡಾಕ್ಟರ್ ಜೀ, ಸ್ವತಃ ಅಲ್ಲಿಗೆಲ್ಲ ಹೋಗಿ ಯುವಕರಿಗೆ ಸ್ಫೂರ್ತಿ ನೀಡಿದರು. ಕಾಶಿ, ಪಂಜಾಬ್, ಕರ್ನಾಟಕಗಳೀಗೆ ಸ್ವತಃ ಹೋಗಿ ಸಂಘ ಕಾರ್ಯದ ಸಸಿ ನೆಟ್ಟರು. ಉನ್ನತ ವ್ಯಾಸಂಗ ಮಾಡಬಯಸುವ ನಾಗಪುರದ ಸ್ವಯಂ ಸೇವಕರಿಗೆ ಅವರು ಹೇಳುತ್ತಿದ್ದರು :”ನೀವು ಬೇರೆ ಪ್ರಾಂತಕ್ಕೆ ಹೋಗಿ ಓದು ಮುಂದುವರೆಸಿ,  ಓದುತ್ತಾ ಅಲ್ಲಿ ಸಂಘ ಕಾರ್ಯ ಪ್ರಾರಂಭಿಸಿ,” ಡಾಕ್ಟರ್ ಜೀ ಅವರ ಈ ಯೋಜನೆ ತುಂಬ ಫಲ ಕೊಟ್ಟಿತು. ಕಾಶಿ, ಲಕ್ನೋ, ಮುಂತಾದ ದೂರದ ಊರುಗಳಿಗೆ ಸ್ವಯಂ ಸೇವಕರು ವ್ಯಾಸಂಗ ಮಾಡಲು ತೆರಳಿದರು. ಕ್ರಮೇಣ ಅಲ್ಲೆಲ್ಲ ಸಂಘದ ಶಾಖೆಯನ್ನು ಪ್ರಾರಂಭಿಸಿದರು. ಹೀಗೆ ಸಹಸ್ರ ಬಾಹುಗಳಾಗಿ ಸಂಘ ಕಾರ್ಯ ವ್ಯಾಪಿಸತೊಡಗಿತು.

೧೯೩೦ರ ಏಪ್ರೀಲನಲ್ಲಿ ಮಹಾತ್ಮ ಗಾಂಧಿ ಬ್ರೀಟಿಷ್ ಸರಕಾರದ ವಿರುದ್ಧ “ಸತ್ಯಾಗ್ರಹ” ಚಳುವಳಿ ಹೂಡಿದರು. ದೇಶದ ಮೂಲೆ ಮೂಲೆಗಳಲ್ಲಿ ಅದರ ಪ್ರತಿಧ್ವನಿ ಎದ್ದಿತು. ಡಾಕ್ಟರ್ ಜೀ ಯವರು  ಸತ್ಯಾಗ್ರಹದ ಅಂದೋಲನದಲ್ಲಿ ಭಾಗವಹಿಸಬೇಕೆಂದು ನಿಶ್ಚಯಿಸಿದರು. ಕಾರಾಗೃಹದಲ್ಲಿ ಹಲವು ಊರುಗಳಿಂದ ಬಂದಿರುವ ತರುಣರ ಸಹವಾಸ ಸಿಗುತ್ತದೆ.  ಸಂಘದ ವಿಚಾರವನ್ನು ಅವರ ಮೂಲಕ ಹರಡಲು ಅನುಕೂಲವೂ ಆಗುತ್ತದೆ ಎಂಬ ದೃಷ್ಟಿಯೂ ಡಾಕ್ಟರ್ ಜೀಯವರಿಗಿತ್ತು. ಅವರು ಇತರೆ ಸತ್ಯಾಗ್ರಹಿಗಳೊಂದಿಗೆ, ಸರಕಾರವು ಕಾದಿರಿಸಿದ್ದ ಕಾಡಿಗೆ ಹೋಗಿ ಕಾನೂನು ಭಂಗ ಮಾಡಿದರು. ಅವರೆಲ್ಲರನ್ನೂ ಬಂಧಿಸಲಾಯ್ತು. ಡಾಕ್ಟರ್ ಜೀ ಯವರಿಗೆ ೯ ತಿಂಗಳು ಕಾರಾವಾಸ ಶಿಕ್ಷೆ, ಡಾಕ್ಟರ್ ಜೀ ಈ ಬಾರಿ ಹೋಗಿದ್ದುದು ಅಕೋಲಾಸೆರೆಮನೆಗೆ.

ಗಾಂಧೀಜಿ ಮೆಚ್ಚಿದರು

೧೯೩೪ರಲ್ಲಿ ನಡೆದ ಘಟನೆ: ವಾರ್ಧಾದಲ್ಲಿ ೧೫೦೦ ಸ್ವಯಂ ಸೇವಕರ  ಒಂದು ಶಿಬಿರ ಏರ್ಪಟ್ಟಿತ್ತು. ಶಿಬಿರದ ಎದುರು ಭಾಗದಲ್ಲಿಯೇ ಸೇವಾಗ್ರಾಮದ ಆಶ್ರಮ. ಆಗ ಗಾಂಧಿಝಿ ಅಲ್ಲಿ ವಿಶ್ರಾಂತಿಗಾಗಿ ತಂಗಿದ್ದರು. ಪ್ರತಿ ದಿನ ಬೆಳಿಗ್ಗೆ, ಸಂಜೆ ಮೈದಾನದಲ್ಲಿ ನಡೆಯುವ ಸಂಘದ ಚಟುವಟಿಕೆಗಳನ್ನು ಕಂಡು, ಅವರಿಗೆ ಶಿಬಿರವನ್ನು ನೋಡಬೇಕೆಂಬ ಆಸಕ್ತಿ ಕೆರಳಿತ್ತು. ಜಿಲ್ಲಾ ಸಂಘ ಚಾಲಕ ಅಪ್ಪಾಜಿ ಜೋಶಿಯವರಿಗೆ ಈ ವಿಷಯ ತಿಳಿಯಿತು. ಅವರು ಗಾಂಧಿಜಿಯವರನ್ನು ಶಿಬಿರಕ್ಕೆ ಸ್ವಾಗತಿಸಿದರು.

ಮರುದಿನ ಆರು ಗಂಟೆಗೆ ಸರಿಯಾಗಿ ಮಹಾತ್ಮ ಗಾಂಧಿ ಶಿಬಿರಕ್ಕೆ ಆಗಮಿಸಿದರು. ಸ್ವಯಂ ಸೇವಕರು ಸಾಲು ಸಾಲಾಗಿ ಶಿಸ್ತಿನಿಂದ ನಿಂತಿದ್ದರು. ಧ್ವಜಾರೋಹಣ ಆಯಿತು. ಎಲ್ಲರೊಡನೆ ಗಾಂಧೀಜಿ ಸಹ ಧ್ವಜ ಪ್ರಣಾಮ ಮಾಡಿದರು. ನಂತರ ಶಿಬಿರದ ವ್ಯವಸ್ಥೆಗಳನ್ನು ಕಣ್ಣಿಟ್ಟು ನೋಡುತ್ತಾ ಬಂದರು. ಅಲ್ಲಿ ಎಲ್ಲರೂ ಒಟ್ಟಾಗಿ  ಊಟ ಮಾಡುತ್ತಿದ್ದರು. ಒಟ್ಟಾಗಿ ವಾಸಿಸುತ್ತಿದ್ದರು. ಇದನ್ನು ನೋಡಿ ಗಾಂಧಿಜಿವರಿಗೆ ತುಂಬಾ ಆಶ್ಚರ್ಯವಾಯಿತು. ಆದರೂ ಮನದಲ್ಲಿ ಸಂದೇಹ. ಅನೇಕರನ್ನು “ನೀನು ಯಾವ ಜಾತಿ?” ಎಂದು ವಿಚಾರಿಸಿದರು. ಎಲ್ಲರದೂ ಒಂದೇ ಉತ್ತರ, “ನಾನು ಹಿಂದೂ.” ಶಿಬಿರದಲ್ಲಿ ಬ್ರಾಹ್ಮಣ, ಮರಾಠಾ, ಹೊಲೆ, ಚಿಪ್ಪಿಗ, ಕ್ಷೌರ ಎಲ್ಲಾ ಜಾತಿಯವರೂ ಇದ್ದರು. ಇಷ್ಟಾದರೂ ಅವರ ನಡುವೆ ಜಾತಿಯ ಅಡ್ಡಗೋಡೆಗಳು ಇಲ್ಲ. ಮೇಲು ಕೀಳು ಭಾವನೆಯ ನೆರಳೂ ಇರಲಿಲ್ಲ. ಗಾಂಧೀಜಿ ತುಂಬಾ ಆನಂದ ಪಟ್ಟರು. ಮರುದಿನ ಡಾಕ್ಟರ್ ಜೀಯವರ ಭೇಟಿಯಾದಾಗ ಅವರು ಹೇಳಿದರು. “ಡಾಕ್ಟರ್  ಸಾಹೇಬ ನೀವು ನಿಜಕ್ಕೂ ಅದ್ಘತ ಸಂಘಟನೆಯನ್ನು ಕಟ್ಟಿರುವಿರಿ. ನಾನು ಮಾಡಬೇಕೆಂದಿದ್ದ ಕೆಲಸವನ್ನು ನೀವು ನಿಶ್ಯಬ್ದವಾಗಿ ಮಾಡುತ್ತಿದ್ದೀರಿ!” ಮುಂದೆ ಗಾಂಧೀಜಿ ೧೯೪೭ರಲ್ಲಿ ಭಾಷಣ ಮಾಡಿದಾಗ ತಮ್ಮ ವಾರ್ಧಾ ಶಿಬಿರದ ಅನುಭವವನ್ನು ಜ್ಞಾಪಿಸಿಕೊಂಡು ಹೇಳಿದರು. “ನಿಮ,ಮಲ್ಲಿ ಸರಳತೆ ಇದೆ. ಅಸ್ಪ್ರಶ್ಯತೆಯ ಲವಲೇಶವೂ ಇಲ್ಲ. ತ್ಯಾಗ, ಸೇವೆಗಳ ಭಾವನೆಯಿಂದ ಸ್ಪೂರ್ತಿ ಪಡೆದ ಇಂತಹ ಘಟನೆ ಬೆಳೆದೇ ಬೆಳೆಯುತ್ತಿತ್ತು.

ಹಿರಿಯರೆಲ್ಲರಿಗೆ ಮೆಚ್ಚಿಗೆ

ನಾಡಿನ ಹಿರಿಯ ನಾಯಕರಿಗೆಲ್ಲ ಸಂಘ ಕಾರ್ಯದ ಅವಶ್ಯಕತೆ ತಿಳಿಸಬೇಕು. ಸಾಧ್ಯವಾದಷ್ಟು ಅವರನ್ನು ಸಂಘ ಕಾರ್ಯದಲ್ಲಿ ತೊಡಗಿಸಬೇಕು. ಇದು ಡಾಕ್ಟರ್ ಜೀಯವರ ಮನದಲ್ಲಿದ್ದ ತೀವ್ರ ಅಭಿಲಾಷೆ.  ೧೯೨೮ರ ಕೊನೆಯಲ್ಲಿ ಸುಭಾಷಚಂದ್ರ ಭೋಸರನ್ನು ಕಲ್ಕತ್ತದಲ್ಲಿ ಕಂಡರು. ಹೆಡಗೆವಾರರು ವಿಚಾರ ಮಂಡಿಸುತ್ತಿದ್ದ ಧಾಟಿ, ಅವರ ಅಳವಾದ ಚಿಂತನೆ, ಸುಭಾಷರ ಸೂಕ್ಷ್ಮ ಮನಸ್ಸಿಗೆ ನಾಟಿತು.

ಪಂಡಿತ ಮದನಮೋಹನ ಮಾಲವೀಯವರು ನಮ್ಮ ನಾಡಿನ ಹಹಿರಿಯ ದೇಶಭಕ್ತರು. ಒಂದು ಸಲ ಅವರನ್ನು ಡಾಕ್ಟರ್ ಜೀ ಮೋಹಿತೆ ವಾಡಾ ಶಾಖೆಗೆ ಕರೆದುಕೊಂಡು ಬಂದರು. ಮುರುಕು ಕಟ್ಟಡ, ಪಾಳುಬಿದ್ದ ಕೋಟೆಗೋಡೆ, ಇದರ ನಡುವೆ ಸಂಘದ ಶಾಖೆ. ಇದನ್ನ ಕಂಡ ಮಾಲವೀಯರಿಗೆ ಸಂಘದ ಅರ್ಥಿಕಸ್ಥಿತಿ ಚೆನ್ನಾಗಿಲ್ಲವೆಂದು ಗೋಚರಕ್ಕೆ ಬಂದಿತು. ಉತ್ತಮ ದೇಶಕಾರ್ಯಗಳಿಗಾಗಿ ಹಣ ಸಂಗ್ರಹಿಸುವುದರಲ್ಲಿ ಅವರದು ಎತ್ತಿದ ಕೈ. ಅವರು ಡಾಕ್ಟರ್ ಜೀಯವರಿಗೆ ಹೇಳಿದರು. “ಜನರು ನನ್ನನ್ನು ರಾಜ ಭಿಕ್ಷಕುಕನೆಂದು ಕರೆಯುತ್ತಾರೆ.  ನಿಮಗೆ ಒಪ್ಪಿಗೆ ಇದ್ದರೆ ಸಂಘಕ್ಕೂ ಒಂದಿಷ್ಟು ನಿಧಿ ಕೊಡಿಸಿ ಕೊಡುವೆ”.

 

ಹಣದ ಅಗತ್ಯವಿಲ್ಲ, ತಮ್ಮ ಆಶೀರ್ವಾದ ಇದ್ದರೆ ಸಾಕು".

“ಪಂಡಿತಜೀ, ನನಗೆ ಹಣದ ಅಗತ್ಯವೇನೂ ಇಲ್ಲ. ತಮ್ಮಂತಹವರ ಅಶಿರ್ವಾದ ಇದ್ದರೆ ಸಾಕು”.

ಡಾಕ್ಟರ್ ಜೀಯವರ ಈ ಉತ್ತರ ಮಾಲವೀಯರಿಗೆ ತೀರ ಆಶ್ಚರ್ಯವನ್ನುಂಟು ಮಾಡಿತು. ಮಾಲವೀಯರು, “ಎಲ್ಲಾ ಸಂಸ್ಥೆಗಳಲ್ಲಿ  ಮೊದಲ ಹಣದ ಕಡೆಗೆ, ಅನಂತರ ಮನುಷ್ಯರ ಕಡೆಗೆ ಗಮನ ಕೊಡುತ್ತಾರೆ. ಆಧರೆ ನಿಮ್ಮ ರೀತಿಯೇ ಬೇರೆ,. ನಿಮ್ಮಲ್ಲಿ ಹೃದಯಕ್ಕೆ ಮೊದಲು ಸ್ಥಾನ. ನಾನು ಹೋದಲ್ಲೆಲ್ಲ ನಿಮ್ಮ ಈ ಹೆಚ್ಚುಗಾರಿಕೆಯನ್ನು ಸಾರಿ ಹೇಳುವೆ” ಎಂದರು.

ಉರುಳಿದ ವಿರೋಧ

ಸಂಘದ ಶಕ್ತಿ ಬೆಳೆದಂತೆ ವಿರೋಧವೂ ಬೆಳೆಯಿತು. ಮಧ್ಯಪ್ರಾಂತ ಸರಕಾರವು, ಸರಕಾರಿ ನೌಕರರು ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಬಾರದೆಂದು ಆಜ್ಞೆ ಹೊರಡಿಸಿತು. ೧೯೩೩ರಲ್ಲಿ ಸ್ಥಳೀಯ ಒಳಾಡಳಿತ ಸಂಸ್ಥೆಗಳು ಸಹ ತಮ್ಮನೌಕರರು ಸಂಘದಲ್ಲಿ ಭಾಗವಹಿಸಬಾರದೆಂದು ಆಜ್ಞೆ ಹೊರಡಿಸಬೇಕೆಂದು ಸರಕಾರ ಸೂಚಿಸಿತು. ಈ ಸಂದರ್ಭದಲ್ಲಿ ಡಾಕ್ಟರ್ ಜೀ ಸಂಘದ ನೀತಿಯನ್ನು ಎಲ್ಲರ ಮನಸ್ಸಿಗೂ ಒಪ್ಪುವಂತೆ ಮಂಡಿಸಿದರು.  “ಸಂಘವು ರಾಜಕೀಯದಿಂದ ದೂರವಾಗಿದೆ.  ನಮ್ಮ ಸಂಘಟನೆ ಯಾರ ವಿರುದ್ಧವೂ ಇಲ್ಲ. ಅದು ಯಾರನ್ನೂ ದ್ವೇಷಿಸದೇ ಹಿಂದು ಸಮಾಜವನ್ನು ಸಂಘಟಿಸಿ ಸಮರ್ಥವಾಗಿ ಮಾಡಲು ಯತ್ನಿಸುತ್ತಿದೆ . ನಾವು ಭಗವಂತನನ್ನು ಸ್ಮರಿಸಿ ಈ ಕಾರ್ಯದಲ್ಲಿ ತೊಡಗಿದ್ದೇವೆ.

ಪುಣೆಯ “ಕೇಸರಿ” ಪತ್ರಿಕೆ ಹಾಗೂ ನಾಗಪುರದ ಎಲ್ಲ ಪತ್ರಿಕೆಗಳು ಡಾಕ್ಟರ್ ಜೀಯವರ ವಿಚಾರವನ್ನು ಬೆಂಬಲಿಸಿ ಲೇಖನಗಳನ್ನು ಬರೆದವು. ಎಲ್ಲ ಪಕ್ಷ ಪಂಗಡಗಳ ಜನರೂ ಸರಕಾರದ ನೀತಿಯನ್ನೂ ವಿರೋಧಿಸಿದರು. ಅಲ್ಲಲ್ಲಿ ಸಭೆಗಳಾದವು. ನಾಗಪುರದ ವಿಧಾನ ಪರಿಷತ್ತನಲ್ಲಿ ಸರಕಾರಿ ಪ್ರಕಟಣೇ ಕುರಿತು ಬಿಸಿ ಬಿಸಿ ಚರ್ಚೆ ನಡೆಯಿತು. ಮುಸ್ಲಿಂ, ಪಾರ್ಸಿ, ಕ್ರೈಸ್ತ, ಸದಸ್ಯರೆಲ್ಲರೂ ಸರಕಾರವನ್ನೂ ತರಾಟೆಗೆ ತಗೆದುಕೊಂಡರು. ಕೊನೆಗೆ ಮತದಾನ ನಡೆದು ಸರಕಾರದ ಪ್ರಕಟಣೆಯವಿರುದ್ಧ ನಿರ್ಣಯ ಅಂಗೀಕಾರ ಆಯಿತು. ತತ್ಫಲವಾಗಿ ಸರಕಾರ ಉರುಳಿಬಿತ್ತು.

ಸರಳ ಸ್ನೇಹಮಯ ವ್ಯಕ್ತಿತ್ವ

ಡಾಕ್ಟರ್ ಜೀ ಇಷ್ಟು ಜನಪ್ರೀಯ ವ್ಯಕ್ತಿಯಾಗಿದ್ದರೂ ತಾವು ದೊಡ್ಡವರು ಎಂಬುವುದನ್ನು ಎಂದೂ ತೋರಿಸಿಕೊಳ್ಳಲಿಲ್ಲ. ಪ್ರಸಿದ್ಧಿ ಅವರಿಗೆ ಬೇಡವಾಗಿತ್ತು.

ಡಾಕ್ಟರ್ ಜೀಯವರದು ಸರಳು ಜೀವನ. ಕಾಲಲ್ಲಿ ಚಪ್ಪಲಿ, ಸದಾ ಧೋತರ, ಮೈಗೊಂದು ಅಗಿ, ಕಾಲರಿನ ಕೋಟು, ತಲೆಗೆ ಎತ್ತರವಾದ ಕರಿ ಟೋಪಿ,.ಇದೇ ನಿತ್ಯದ ಉಡುಪು.

ಡಾಕ್ಟರ್ ಜೀ ನಾಗಪುರದಲ್ಲಿದ್ದಾಗ ಅವರಮನೆಗೆ ಬರೆ ಊರಿನ ಅನೇಕ ಪರಿಚಿತರು ಬಂದು ಹೋಗುತ್ತಿದ್ದರು. ಬಂದವರನ್ನೆಲ್ಲ ಆದರಿಂದ ಸ್ವಾಗತಿಸಿ, ಯೋಗಕ್ಷೇಮ ವಿಚಾರಿಸುವುದು ಅವರ ಸ್ವಭಾವ. ಹಾಗೆ ಬಂದವರು ಬೇರೆಲ್ಲೂ ಇಳಿದುಕೊಂಡಿಲ್ಲವೆಂದು ಕಂಡು ಬಂದರೆ ತಮ್ಮ ಮನೆಯಲ್ಲಿಯೇ ಉಳಿಸಿಕೊಳ್ಳುತ್ತಿದ್ದರು.  ಬಂದವರನ್ನು ಜೊತೆಯಲ್ಲಿ ಕೂರಿಸಿಕೊಂಡುಇದ್ದ ರೊಟ್ಟಿ ಚಟ್ನಿಯನ್ನೇ ಸಂತೋಷದಿಂದ ಹಂಚಿಕೊಳ್ಳುವುದೇ ಆವರ ಜಾಯಮಾನ.

ಒಮ್ಮೊಮ್ಮೆ ಮಾಡಿದ ಅಡುಗೆ ಕಡಿಮೆಯಿದ್ದರೆ, “ನಾನು ಇದೀಗ ಊಟ ಮಾಡಿದೆ. ನೀವು ಊಟಕ್ಕೆಳಿ” ಎನ್ನುತ್ತಿದ್ದರು.

ಬಡತನದ ಭೀಕರ ನೆರಳು ಅವರ ಮುಖದ ಮೇಲೆ ಎಂದೂ ಸುಳಿಯಲಿಲ್ಲ.

ಕೋಪ ಡಾಕ್ಟರ್  ಹೆಡಗೆವಾರರ ಮನೆತನಕ್ಕೆ ಅಂಟಿ ಬಂದ ಬಳುವಳಿ. ಅವರ ತಂದೆ ಅತಿಕೋಪದ ಸ್ವಭಾವದವರು. ಅಣ್ಣನಿಗಂತೂ ಕೆಂಡದಂಥ ಕೋಪ. ಡಾಕ್ಟರ್ ಜೀಯವರು ಏನೋ ಕಮ್ಮಿ ಇರಲಿಲ್ಲ. ಆದರೆ ಸಂಘವನ್ನು ಪ್ರಾರಂಭಿಸಿದ ಬಳಿಕ ಅವರ ಸ್ವಭಾವದಲ್ಲಿ ಭಾರೀ ಬದಲಾವಣೆ ಕಾಣಿಸಿತು. ಸೌಮ್ಯ ಸ್ವಭಾವದವರಾದರು.  ಎಲ್ಲರಿಗೂ ಹಿತಗಾಗುವಂತೆ ಸಿಹಿಯಾಗಿ ನಯವಾಗಿ ಮಾತು ಆಡಿದರು. ಸಂಘಟನೆಗಾಗಿ ತಮ್ಮಸ್ವಭಾವವನ್ನೇ ಅವರು ಬದಲಾಯಿಸಿಕೊಂಡರು.

ದೇಹ ತೇಯ್ದರು

೧೯೩೯ರ ಹೊತ್ತಿಗೆ ಸಂಘದ ಶಾಖೆಗಳು ಎಲ್ಲ ರಾಜ್ಯಗಳಲ್ಲಿಯೂ ಪ್ರಾರಂಭ ಆಗಿದ್ದವು.

ಡಾಕ್ಟರ್ ಹೆಡೆಗೆವಾರ ಸಂಘದ ಆಸೇತು ಹಿಮಾಚಲ ಕಾರ್ಯವಿಸ್ತಾರಕ್ಕಾಗಿ ಹಗಲು ರಾತ್ರಿಯೆನ್ನದೇ ದುಡಿದರು.ಬಿಸಿಲು ಮಳೆ ಲೆಕ್ಕಿಸದೇ ತಿರುಗಾಡಿದರು.  ಉಪವಾ- ಉಪವಾಸ ಎರಡನ್ನೂ ಸಹಿಸಿದರು. ಅನೇಕ ಸಂಕಟಗಳನೊಡನೆ ಸೆಣಸಿದರು. ಹದಿನೈದು ವರ್ಷಗಳ ಕಾಲ ಸಂಘಕ್ಕೆ ಭದ್ರ ಅಡಿಪಾಯ ಹಾಕುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಈ ನಿರಂತರ ಕಾರ್ಯ ಚಟುವಟಿಕೆಗಳಿಂದ ವಜ್ರದಂಥ ಅವರ ದೇಹವೂ ಬಳಲಿತು. ಅವರ ಆರೋಗ್ಯ ಕೆಡುತ್ತಾ ಬಂತು. ಬೆನ್ನಿನಲ್ಲಿ ಉಂಟಾದ ಹಳೆಯ ನೋವಿನಿಂದಾ  ಆಗಾಗ ತೀವ್ರ ಬಾಧೆ. ಇದಕ್ಕಿದ್ದಂತೆಯೇ ಏರುತಿದ್ದ ಜ್ವರ. ೧೯೪೦ರ ಜನೆವರಿಯಲ್ಲ ಬಿಸಿ ಚಿಲುಮೆಯ ಚಕಿತ್ಸೆಗಾಗಿ ಅವರು ಬಿಹಾಋದ ರಾಜಗೀರಗೆ ಹೋದರು.

ಅಲ್ಲಿಂದ ವಾಪಸಾಗುವ  ಹೊತ್ತಿಗೆ ನಾಗಪುರದ ಶಿಕ್ಷಣ ವರ್ಗ  ಪ್ರಾರಂಭವಾಗಿತ್ತು .ಆ ವರ್ಷ ಶಿಬಿರಕ್ಕೆ ಎಲ್ಲಾ ರಾಜ್ಯಗಳಿಂದಲೂ ಸ್ವಯಂ ಸೇವಕರು ಆಗಮಿಸಿದ್ದರು. ಅವರನ್ನೆಲ್ಲ ಹತ್ತಿರದಿಂದ ಕಂಡು, ಹೆಗಲ ಮೇಲೆಕೈ ಹಾಕಿ ಮಾತನಾಡಿಸಬೇಕೆಂದು ಡಾಕ್ಟರ್ ಜೀಯವರ ಉತ್ಕಟ ಇಚ್ಛೆ. ಆದರ ಸುಡುವ ಜ್ವರದಿಂದ ಹಾಸಿಗೆ ಬಿಟ್ಟು ಕದಲುವುದೂ ಅವರಿಗೆ ಅಸಾಧ್ಯವಾಗಿತ್ತು. ಆದರೂ ಶಿಬಿರದ ಕೊನೆಯ ದಿನ ಸ್ವಯಂಸೇವಕರನ್ನು ಉದ್ದೇಶಿಸಿ ನಾಲ್ಕು ಮಾತು ಹೇಳಿದರು.  “ಇಂದು ನಾನು ಭಾರತದ  ಪುಟ್ಟ ಪ್ರತಿಮೆಯನ್ನೇ ಕಾಣುತ್ತಿದ್ದೇನೆ” ಎಂದು ಸಂತಸ ಪಟ್ಟರು.

ಬರಬರುತ್ತಾ ಅವರ ಕಾಯಿಲೆ ಜೋರು ಆಯಿತು. ತಮಗಿನ್ನು ಕೆಲವು ಗಳಿಗೆ ಮಾತ್ರ ಉಳದಿವೆ ಎಂಬವುದು ಅವರಿಗೆ ಮನದಟ್ಟಾಯಿತು. ಗುರೂಜಿಯವರನ್ನು ಹತ್ತಿರ ಕರೆದರು. ಎಲ್ಲರೆದುರಲ್ಲಿ “ಇನ್ನು ಮೇಲೆ ಸಂಘದ ಎಲ್ಲಾ ಕಾರ್ಯವೂ   ನಿಮ್ಮ ಹೆಗಲ ಮೇಲೆ ಇದೆ. ಇದನ್ನು ನೆನಪಿಡಿ” ಎಂದರು.

೧೯೪೦ರ ಜೂನ್ ೨೧ರ ಬೆಳಿಗ್ಗೆ ತಮ್ಮ ೫೧ನೇ ವಯಸ್ಸಿನಲ್ಲಿ ಡಾಕ್ಟರ್  ಹೆಡಗೆವಾರರು ತಮ್ಮ ಕೊನೆಯುಸಿರು ಎಳೆದರು. ನಾಗಪುರದ ಅವರ ಅಂತಿಮ ಯಾತ್ರೆಯಲ್ಲಿ ಎಲ್ಲ ಪಕ್ಷದವರೂ ಸೇರಿದ್ದರು. ಅವರ ಅಂತಿಮ ಸಂಸ್ಕಾರ ನಡೆದ ರೇಶಂಬಾಗನಲ್ಲಿ ಇಂದು ಅವರ ಭವ್ಯ ಸ್ಮಾರಕವೂ ಬಂದವರಿಗೆಲ್ಲ ಸ್ಫೂರ್ತಿಯನ್ನು ಎರೆಯುತ್ತಾ ನಿಂತಿದೆ.

ನಾಡನ್ನು ಬೆಳಗಿದ ಜ್ಯೋತಿ

ಹೆಡಗೆವಾರರು ಸಂನ್ಯಾಸಿಯ ಬಟ್ಟೆಗಳನ್ನೇನೂ ಧರಿಸಲಿಲ್ಲ. ಸಮಾಜದ ದಿನನಿತ್ಯದ ವ್ಯವಹಾರಗಳಿಂದಲೂ ದೂರ ಸರಿಯಲಿಲ್ಲ. ಆದರೆ ಅವರ ಅಂತರಂಗವು ತನ್ನನ್ನು ತನ್ನ ಮನೆಯನ್ನು ಮರೆತು ಇಡೀ ರಾಷ್ಟ್ರದಷ್ಟು ವಿಶಾಲಗೊಂಡಿತ್ತು. ತಾವು ಸಂಕಲ್ಪ ತೊಟ್ಟು ಕಾರ್ಯಸಾಧಿಸುವುದಕ್ಕಾಗಿ ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿದರು.

ಅವರು ಬದುಕಿದ್ದುದುದು ಕೇವಲ ೫೧ ವರ್ಷಗಳು. ಆದರೆ ಆ ಮಹಾಜೀವ ಹರಡಿದ ಕಂಪು ನೂರಾರು ವರ್ಷ ಉಳಿಯುವಂತಹದು. ಅವರ ವಿಚಾರದಿಂದ ನಡೆನುಡಿಗಳಿಂದ ಪ್ರಭಾವಿತರಾದವರು ಅಗಣಿತ, ಊದುಕಡ್ಡಿ,ತಾನು ಬೂದಿಯಾದರೂ ಸುತ್ತ ಮುತ್ತ ಸುವಾಸನೆಯನ್ನು ಬೀರುತ್ತದೆ.  ಡಾಕ್ಟರ್  ಹೆಡಗೆವಾರರು ತಮ್ಮ ಬೆವರು ಸುರಿಸಿ, ನೆತ್ತರು ನೀರಾಗಿಸಿ ಈ ಹಿಂದು ಸಮಾಜದಲ್ಲಿ ಗುಣವಂತರನ್ನು ಚಾರಿತ್ಯ್ರವಂತರನ್ನು ಬೆಳೆಸಿದರು. ೭೨ ವರ್ಷಗಳ ಹಿಂದೆ ಅವರು  ಹಚ್ಚಿದ ಸಂಘದ ಸಣ್ಣದೊಂದು ಜ್ಯೋತಿ ಇಂದು ಲಕ್ಷಾಂತರ ಜ್ಯೋತಿಗಳಾಗಿ, ಭಾರತದ ಸಾವಿರಾರು ನಗರ, ಗ್ರಾಮಹಳ್ಳಿ ಕೊಂಪೆಗಳಲ್ಲಿ ಬೆಳಗುತ್ತಿವೆ.  ದಿನಗಳೆಂದತೆಲ್ಲ ಇನ್ನೂ ಹೆಚ್ಚು ಹೆಚ್ಚಾಗಿ ಬೆಳಗಲಿವೆ.