ಹಾಲುಮತವನಂತಪ್ಪ ಹೆಸರ ಕರಿಯುತಾರೇನ

ಶಿವನೆ ನಮ್ಮಯಿ ದ್ಯಾವರು ಬಂದಾರ ಬನ್ನೀರೆ
ಸ್ವಾಮಿ ನಮ್ಮಯಿ ದ್ಯಾವರು ಬಂದಾರ ಬನ್ನೀರೆ
ಸಗರ ಗಡ್ಡ ಬಾ ಸಣ್ಣಳ್ಳಿ ಮುತ್ತು ನನ್ನ ವಾರಿದುರುಬಿನ ಹೈಯಾಳ
ಮೂಡಲ ನಡು ಬಾ ಮುತ್ತಿನ ಚಂಡು ನನ್ನ ಮುತ್ಯಾ ಮೈಲಾರಿಲಿಂಗನೆ
ದೇವಿ ಧರ್ಮುರ ಹಾಡೇನೆ ಎಲ್ಲಿಗೆ ಬರುತಾವೇನಯ್ಯ
ದೇವಿ ಧರ್ಮುರ ಹಾಡೇನ ಕೈಯಲಾಸದ ಒಳಗೇನೆ
ಕೈಯಲಾಸದ ಒಳಗೇನೆ ಮುಕ್ಕಣ್ಣ ಶಿವರಾಯನೆ
ಮುಕ್ಕಣ್ಣ ಶಿವರಾಯನೆ ಪಾರ್ವತಿ ಸಾಂಬನ ಲಗ್ಗನ
ಪಾರ್ವತಿ ಸಾಂಬನ ಲಗ್ಗನದಾಗ ಶಾಂತಮುತ್ಯಾ ಬಂದಾರ
ಕಂಬಳಿ ತೆಲಿಮ್ಯಾಲ ಹೊತ್ತಾನೆ ವಡ್ಡಿವಾಲಗ ತಂದಾನ
ವಡ್ಡಿವಾಲಗ ತಂದಾನೆ ಮುಕ್ಕಣ್ಣ ಶಿವರಾಯನ
ಮುಕ್ಕಣ್ಣ ಶಿವರಾಯನ ಲಗ್ಗನದೊಳಗ ಐಯ್ಯಾರ
ಲಗ್ಗನದೊಳಗ ಆಯ್ಯಾರೆ ಕಂಬಳಿ ಮಾಡುತಾನೇನ
ವಡ್ಡಿವಾಲಗ ಮಾಡ್ಯಾನೆ ಕಂಚಿನ ಕೈತಾಳ ಮಾಡ್ಯಾನ
ಹಗಲ ದೀವಟಗಿ ಮಾಡ್ಯಾನೆ ಸಾಲಸತ್ತಿಗಿ ಮಾಡ್ಯಾನೆ
ಸಾಲಸತ್ತಿಗಿ ಮಾಡ್ಯಾನೆ ನೂರೊಂದು ಕಳಸ ಮಾಡ್ಯಾನ
ಸಿದ್ಧರಿಗ ಶಿವನುಡಿ ಮಾಡ್ಯಾನೆ ಮಳಿಯಾ ಬೆಳಿಯಾ ಇಟ್ಟಾನ
ಸರ್ವ ಸಾಹಿತಿ ಮಾಡ್ಯಾನೆ ಕಂಬಳಿ ಆಯಾರಿ ಮಾಡ್ಯಾನ
ಕಂಬಳಿ ಆಯಾರಿ ಮಾಡ್ಯಾನ ಶಾಂತ ಮುತ್ಯಾನಿದ್ದಾನ
ಶಾಂತ ಮುತ್ಯಾನಲ್ಲೇಳ ಕುರಿಯಾ ಕಾಯಲಿ ಹೋಗ್ಯಾನ
ಮುಕ್ಕಣ್ಣ ಶಿವರಾಯನೆ ಅಡ್ಡಗಂಬಳಿ ಹೊತ್ತಾನ
ಹಾಂವಾಗಿ ಹರದಾಡುತ್ತಿದ್ದಾನೆ ಕಿಡಿಯಾಗಿ ಕಾರುತ್ತಿದ್ದಾನ
ಬೆಂಕ್ಯಾಗಿ ಉರಿಯುತ್ತಿದ್ದಾನೆ ಕಿಡಿಯಾಗಿ ಕಾರುತ್ತಿದ್ದಾನೆ
ದೇವಲೋಕದವರಿಗೆ ವಶಿಯಾನಿಲ್ಲದ ಕಂಬಳೆ
ಕಂಬಳಿ ಗಳಗಿ ಮಾಡ್ಯಾನೆ ಕಾಜಿನ ಕಂಬಿನೊಳಗೇನ
ಕಾಜಿನ ಕಂಬಿನೊಳಗೇನೆ ಗಳಿ ಮಾಡಿ ಇಟ್ಟಾನ
ಘಳಗಿ ಮಾಡಿ ಇಟ್ಟಾನೆ ವಡ್ಡಿವಾಲಗ ಇಟ್ಟಾನ
ವಡ್ಡಿ ವಾಲಗ ಇಟ್ಟಾನೆ ಶಾಂತ ಮುತ್ಯಾನಲ್ಲೇಳ
ಶಾಂತ ಮುತ್ಯಾನಲ್ಲೇಳ ಕುರಿಯಾ ಕಾಯಿತ್ತಿದ್ದಾನ
ಒಂದು ಕಲ್ಲನಾದವೆ ಎರಡು ಕಲ್ಲನಾದವ
ದುಂಧಕಾರದೊಳಗೇನ ಶಾಂತ ಮುತ್ಯಾನಿದ್ದಾನ
ವೈಯ್ಯಾ ನನ್ನ ತಮ್ಮದೇರಾ ನನಗ ಬ್ಯಾಸರ ಆದಾವ
ನನಗೆ ಬ್ಯಾಸರಾದವೆ ಭಾಗ್ಯ ಕಾಯಲಿಬೇಕಯ್ಯ
ಬ್ರಹ್ಮಗ ಹೇಳುತಾನೇನ ಕುರಿಯಾ ಕಾಯುತಾನೇನ
ಬ್ರಹ್ಮ ಬಿಟ್ಟ ಕುರಿಯೇನ ವಿಷ್ಣು ಕಾಯುತಾನೇನ
ವಿಷ್ಣು ಬಿಟ್ಟ ಕುರಿಯೇನ ರುದ್ದರ ಕಾಯುತಾನೇನ
ರುದ್ದರ ಕಾಯ್ದ ಕುರಿಗೋಳು ಮಹೇಶ ಕಾಯಿತಾನೇನ
ಮಹೇಶ ಬೆಟ್ಟಕುರಿಗೋಳು ಮಹದೇವ ಕಾಯುತಾನೇನ
ಐದು ಮಂದಿನಲ್ಲೇಳ ಬ್ಯಾಸರ ಬಂದು ಕುಂತಾರ
ಹ್ಯಾಂಗ ಮಾಡಬೇಕಂದಾನ ಮಹಾದೇವ ಎಲ್ಲಿಗ ಹೋಗಬೇಕಂದಾನ
ಪಾರ್ವತಿಗ ಹೇಳುತಾನೇನ ನನ್ನಿಂದ ಆಗಲದು ಅಂದಾನ
ಪಾರ್ವತಿ ಹೇಳಿದರಲ್ಲೇಲೆ ಭಾಗ್ಯ ಕಾಯ್ದೆನಂದಾಳ
ಭಾಗ್ಯ ಕಾಯಿದೇನಂದಾಳೆ ಬದುಕ ಕಾಯಿದೇನಂದಾಳ
ಮರಿಯಾ ಉಣಸೇನಂದಾಳೆ ಕುರಿಯಾ ನೋಡೇನಂದಾಳ
ಟೊಂಕಿಗ ಸೆರಗ ಸುತ್ತ್ಯಾಳೆ ಏರಿಸಿ ಕಚ್ಚಿ ಹಾಕ್ಯಾಳ
ಲ್ಯಾವಿ ದಂಡಕೋಲ ಹಿಡದಾಳೆ ಭಾಗ್ಯ ಎಬಸುತಾಳೇನ
ಗಣಪತಿ ಎಂಬ ಮಗನಿಗೆ ಮನಿಯಾಗ ಬಿಡುವುತಾರೇನ
ಷಣ್ಮುಖನೆಂಬ ಮಗನಿಗೆ ಮಗ್ಗಲದೊಳಗೆ ಎತ್ಯಾಳ
ಈಡ ಬಾಗಲ ತೆರದಾಳೆ ಭಾಗ್ಯ ಬಯಲಿಗ ಬಿಟ್ಟಾಳ
ಭಾಗ್ಯ ಬಯಲಿಗ ಬಿಟ್ಟಾಳ ಸೀಮಿಗ ಹೋಗುತಾವೇನ
ಭೂಮಿ ತಿರುಗುತಾಳೇನ ಕಾಡ ತಿರಗೂತಾಳೇನ
ಷಣ್ಮುಖನೆಂಬ ಮಗನಿಗೆ ಮಗ್ಗಲದೊಳಗೆ ಎತ್ಯಾಳ
ಏಳು ಸೀಮಿ ತಿರುಗ್ಯಾಳೆ ಬ್ಯಾಸರಾಗುತಾಳೇನ
ಐದು ಮಂದಿ ಕಾಯಿದಾರೆ ಬ್ಯಾಸರಾಗಿ ಬಿಟ್ಟಾರ
ನಾನೇ ಕುರಿಯಾ ಕಾಯಿದೇನೆ ನಾನು ಯಾರಿಗ ಹಚ್ಚಲೆ
ನನ್ನ ಕುರಿಗೋಳು ಅಲ್ಲೇಳ ಯಾರು ಕಾಯಿದಾರಂದಾಳ
ಯಾರ ಕಾಯಿದಾರಂದಾಳೆ ಎಲ್ಲಿಗ ಹೋಗಲಿ ಅಂದಾಳ
ಯಾರ ಬರಲಿಲ್ಲ ಅಂದಾಳೆ ಕುರಿಯಾ ಕಾಯಲಿಕೆ ಹೋಗ್ಯಾಳೆ
ಸ್ವರ್ಗದ ಬಾಗಲ ತಗದಾಳೆ ಮರ್ತ್ಯಾಕ ಇಳಸುತಾಳೇನ
ಮರ್ತ್ಯಕ ಇಳಸೂತಾಳೇನೆ ಬಂಕಾಪುರದ ಭೂಮ್ಯಾಗ
ಬಂಕಾಪುರದ ಭೂಮ್ಯಾಗ ಕುರಿಯಾ ಇಳಸೂತಾಳೇನೆ
ಷಣ್ಮುಖನೆಂಬ ಮಗನಿಗೆ ಮಗ್ಗಲದೊಳಗೆ ಎತ್ಯಾಳೆ
ಎಷ್ಟು ಆದಾವಂದಾಳ ಎಲ್ಲಿಗ ಹೋಗಲಿ ಅಂದಾಳ
ಎಲ್ಲಿಗ ಹೋಗಲಿ ಅಂದಾಳೆ ಮೂರ ಕಣ್ಣಿನ ಹುತ್ತೇನ
ಮೂರ ಕಣ್ಣಿನ ಹುತ್ತೇನ ಬಿಚ್ಚಿ ನೋಡುತಾಳೇನ
ಮೂರ ಕಣ್ಣಿನ ಹುತ್ತಿನೊಳಗೆ ಕುರಿಯಾ ಹೊಗಸುತಾಳೇನ
ಕುರಿಯಾ ಹೊಸೂತಾಳೇನ ಹುತ್ತ ಮುಚ್ಚುತಾಳೇನ
ಎರಡು ಫಂಡಕನಲ್ಲೇಳ ಕೂಡಿಸಿ ಬಿಡುವುತಾಳೇನ
ಮುತ್ತಲ ಮರವಂದು ಮಾಡ್ಯಾಳೆ ಹುತ್ತಿನ ಗಡ್ಡಿಗ ಊರ‍್ಯಾಳ
ಮುತ್ತಿನಂತ ಮರವೇನ ಹುತ್ತಿಗ ಬೆಳೆಯುತಾವೇನ
ಷಣ್ಮುಖನೆಂಬ ಮಗನಿಗೆ ಕೆಳಗ ಇಳಿಸೂತಾಳೇನ
ಕೈಕಾಲ ಮಾರಿ ತೊಳದಾಳೆ ಸೀತಾಳೆ ಶಿವಮಜ್ಜಲ
ಸೀತಾಳೆ ಶಿವಮಜ್ಜನೆ ನೀರಿಲೆ ಮಕಮಜ್ಜನ
ಹಾಕಿದ ಕಚ್ಚಿ ಬಿಚ್ಚಾಳೆ ಟೊಂಕಿನ ಸೆರಗ ಬಿಚ್ಯಾಳೆ
ಮುತ್ತಿನ ಸೆರಗ ಹೊಚ್ಯಾಲೆ ಭೂಮಿಯ ಮ್ಯಾಲೆ ಕುಂತಾಳ
ಎದಿಮ್ಯಾಲ ಕೈಯ ವಗದಾಳೆ ಮಲಿಯಾ ತೊಳಿಯುತಾಳೇನ
ಎಡಿಕಿನ ಮಲಿ ಮ್ಯಾಲೆನ ಬಲಗೈ ತಿರುವುತಾಳೇನ
ಎಡಗೈಯಲ್ಲಿನಲ್ಲೇಳ ಮಣ್ಣ ಹಿಡಿಯುತಾಳೇನ
ಬಲಗೈಲಿ ಹಾಲ ಹಿಂಡ್ಯಾಳೆ ಎಡಗೈವಳ ಮಣ್ಣೇನ
ಎಡಗೈ ವಳಗ ಮಣ್ಣೀನ ಮುದ್ದಿ ಮಾಡುತಾಳೇನ
ಎಡಗೈ ವೈಯುತಾಳೇನ ಬಲಕಿನ ಮಲಿಯಾ ತಿರುವ್ಯಾಳ
ಬಲಗೈಯ ಮಣ್ಣ ಹಿಡದಾಳೆ ಬಲಕಿನ ಹಾಲ ಹಿಂಡ್ಯಾಳ
ಎಡಗೈಯ್ಲಿ ಮಲಿಯಾ ಹಿಡದಾಳೆ ಮಣ್ಣಿನ ಮ್ಯಾಲ ಹಿಂಡ್ಯಾಳ
ಎಡಕೊಂದು ಗೊಂಬಿ ಮಾಡ್ಯಾಳೆ ಬಲಕೊಂದು ಗೊಂಬಿ ಮಾಡ್ಯಾಳ
ಹಾಲಿನಿಂದನಲ್ಲೇಳೆ ಎರಡು ಗೊಂಬಿನಾದವ
ಎರಡು ಗೊಂಬಿ ಮಾಡ್ಯಾಳೆ ಷಣ್ಮುಖನೆಂಬ ಮಗನಿಗೆ
ಷಣ್ಮುಖನೆಂಬ ಮಗನಿಗೆ ಹಾಲ ಕುಡುಸೂತಾಳೇನ
ಅಲ್ಲಿಗ ಬಂದ ಮಾತೇನ ಇಲ್ಲಿಗ ನಡಿದಾವೇನಯ್ಯಾ
ಅಲ್ಲಿಗ ನಡೆದ ಮಾತೇನ ಇಲ್ಲಿಗ ನಡದಾವೇನಯ್ಯಾ
ಷಣ್ಮುಖ ಕುಡದ ಹಾಲೇನೆ ಮುಕ್ಕಣ್ಣ ಶಿವರಾಯನ
ಮುಕ್ಕಣ್ಣ ಶಿವರಾಯನೆ ಕೈಯಲಾಸದಿಂದೇನ
ಕೈಯಲಾಸ ಬಿಟ್ಟಾನೆ ಪಾರ್ವತಿಗೆ ಹುಡಕುತ ಹೊಂಟಾನ
ಸ್ವರ್ಗದ ಬಾಕಲ ತೆರದಾನೆ ಬಂಕಾಪೂರದ ಭೂಮ್ಯಾಗ
ಬಂಕಾಪೂರದ ಭೂಮ್ಯಾಗ ಮಹಾದೇವ ಇಳಿಯುತಾನೇನ
ಹೆಂತ ಹುಚ್ಚ ಇದ್ದಿಗೆ ನಾಡ ತಿರುಗಿ ಬಂದೇನ
ನಾಡ ತಿರುಗಿ ಬಂದೇನೆ ಕಡ ತಿರುಗಿ ಬಂದೇನ
ಮಾರಿಯ ಸಣ್ಣಗಾದವೇ ಮಕವ ಸಣ್ಣಗಾದವ
ಕಾಲಧೂಳನಾದವೆ ಕೈಯಧೂಳನಾದವ
ದಣಕಿ ಬಹಳನಾದವೆ ಬ್ಯಾಸರ ಬಹಳನಾದವೆ
ಪಾರ್ವತಿ ಹೇಳುತಾಳೇನ ಮಹಾದೇವ ಕೇಳುತಾನೇನ
ಮಹಾದೇವ ಹೇಳುತಾನೇನ ಪಾರ್ವತಿ ಕೇಳುತಾನೇನ
ಬಾರೋ ಬಾರೋ ಮಹಾದೇವ ನಂದೊಂದು ಮಾತ ಕೇಳಯ್ಯ
ಉಪ್ಪ ಉಂಡಿದ ಖಾಯದ ಹಾಲ ಮಣ್ಣಿಗ ಸುರುವಲಿಬಾರದ
ಮಣ್ಣ ಮುಟಗಿ ಮಾಡೀನೆ ಗೊಂಬಿ ಮಾಡೀನಿ ಅಂದಾಳ
ಎಡಕಿನ ಮಲಿಯ ಹಾಲಿಗ ಒಂದು ಗೊಂಬಿ ಮಾಡೀನೆ
ಬಲಕಿನ ಮಲಿಯ ಹಾಲಿಗ ಎರಡು ಗೊಂಬಿಮಾಡೀನೆ
ಮಣ್ಣಿಗ ಹಾಲ ಹಿಂಡಿನೆ ಎರಡು ಗೊಂಬಿಮಾಡೀನೆ
ಎರಡು ಗೊಂಬಿ ಮಾಡೀನೆ ಮುಕ್ಕಣ್ಣ ಶಿವರಾಯನ
ಮುಕ್ಕಣ ಶಿವರಾಯಗ ಮಂತರ ಮಾಡಬೇಕಂದಾಳೆ
ಮಂತರ ಮಾಡಬೇಕಂದಾಳೆ ಜೀವನ ಕೊಡಬೇಕಂದಾಳ
ಹುಚ್ಚ ಪಾರ್ವತಿ – ಅಂದಾನೆ ಇಲ್ಲದೊಂದು ಮಾಡೀದೆ
ಇಲ್ಲದೊಂದು ಮಾಡೀದೆ ಇಲ್ಲದ ಹಠಗೋಳು ಮಾಡೀದೆ
ಒಳ್ಳೆದು ಒಳ್ಳೆದು ಅಂದಾನೆ ಮಣ್ಣಿನ ಖಾಯ ಅಂದಾನ
ಮಣ್ಣಿನ ಖಾಯನಲ್ಲೇಳೆ ತಯ್ಯಾರ ಮಾಡಬೇಕಂದಾಳೆ
ಜೀವನ ತುಂಬುತಾನೇನ ಮಂತರ ಮಾಡುತಾನೇನ
ಎರಡುಗೊಂಬಿನಲ್ಲೇಳೆ ಜೀವನ ತುಂಬುತ್ತಾನೇನ
ಪಾರ್ವತಿ ಕೇಳುತಾಳೇನೆ ಮಹಾದೇವ ಹೇಳುತಾನೇನ
ಬಾರೋ ಬಾರೋ ಮಹಾದೇವ ಹೆಸರ ಏನಂತ ಕರದಾನ
ಏನಂತ ಇಡುವಲಿ ಬೇಕಯ್ಯ ಏನೇನು ಕರಿಯಲಿ ಬೇಕಯ್ಯ
ಹಾಲುಮತವನಂತಪ್ಪ ಹೆಸರ ಕರಿಯುತಾರೇನ
ಹಾಲ ತಾಯಿಗಂದಾನೆ ಮತವ ಶಿವರಾಯಿಗಂದಾನ
ಮತವನಂದರ ಮಂತರ ಹಾಲನಂದರ ಮಣ್ಣೀನ
ತಾಯಿ ಮಲಿಯ ಹಾಲೇನೆ ತಂದಿಯ ಮಂತರಾದವ
ಹಾಲುಮತವನಲ್ಲೇಳ ಹೆಸರ ಇಡುವುತಾರೇನ
ಬಾರೋ ಬಾರೋ ಶಿವರಾಯ ನಂದೊಂದು ಮಾತ ಕೇಳಯ್ಯ
ಇವರ ಹೆಸರಲ್ಲೇಳ ಏನೇನು ಇಡಬೇಕಂದಾಳ
ಮುದ್ದವ್ವ ಮುದಗೊಂಡನೆ ಹೆಸರ ಕರಿಬೇಕಂದಾಳ
ಬಲಕಿನ ಗೊಂಬಿನಲ್ಲೇಳ ಮುದ್ದಗೊಂಡನಾದನ
ಎಡಕಿನ ಗೊಂಬಿನಲ್ಲೇಳ ಮುದ್ದವ್ವಳಾಗಿ ಹುಟ್ಯಾಳ
ಜೋಡೆರಡು ಗೊಂಬೇನ ಮುದ್ದವ್ವ ಮುದ್ದಗೊಂಡನ
ಮುದ್ದವ್ವ ಮುದಗೊಂಡನೆ ಜೋಡಿಲಿ ನಿಂದ್ರುಸುತಾರೇನ
ಜೋಡಿಲಿ ನಿಂದ್ರುಸುತಾರೇನ ಏನಂದಾಡುತಾರೇನ
ಮುದ್ದವ್ವ ಮುದ್ದಗೊಂಡನೆಂದು ಹೆಸರ ಕೂಗೂತಾರೇನ
ಮುದ್ದಗೊಂಡಗಲ್ಲೇಳ ಏನಂದೇಳುತಾರೇನ
ಗಂಡ ಅನ್ನಲ್ಲಿ ಬೇಕಪ್ಪ ಹೆಣ್ಣು ಅನ್ನಲಿ ಬೇಕಪ್ಪ
ಹೆಣ್ಣು ಗೊಂಬಿನಲ್ಲೇಳ ಹೆಣ್ಣುನಂತ ಕೂಗ್ಯಾನ
ಗಂಡು ಗೊಂಬಿನಲ್ಲೇಳ ಗಂಡುನಂತ ಕೂಗ್ಯಾನ
ಹೆಣ್ಣು ಗಂಡುನಾದವ ಗಂಡ ಹೆಂಡತಿ ಆದಾವ
ಗಂಡ ಹೆಂಡತಿ ಆದಾರ ಮರ್ತ್ಯಲೋಕದೊಳಗೇನ
ಮರ್ತ್ಯಲೋಕದೊಳಗೇನ ಕೀರ್ತಿ ಮಾಡುತಾರೇನ
ಮುಕ್ಕಣ್ಣ ಶಿವರಾಯನ ಏನಂದಾಡುತಾನೇನ
ಏನಂದಾಡುತಾರೇನ ಮುದ್ದವ್ವ ಮುದ್ದಗೊಂಡಗ
ಮುದ್ದವ್ವ ಮುದಗೊಂಡಗ ನಾಲ್ಕು ಮಂದಿ ಮಕ್ಕಳ
ನಾಲ್ಕು ಮಂದಿ ಮಕ್ಕಳೆ ಆದಿಯಗೊಂಡ ಹುಟ್ಯಾನ
ಆದಿಯಗೊಂಡ ಹುಟ್ಯಾನೆ ಅನಂತಗೊಂಡ ಹುಟ್ಯಾನ
ಸಿದ್ದಗೊಂಡ ಹುಟ್ಯಾನೆ ಪದಮಗೊಂಡ ಹುಟ್ಯಾನ
ಇವರು ನಾಲ್ಕು ಮುಂದೇನೆ ಪದುಮಗೊಂಡನಂದಾರ
ಮುದ್ದವ್ವ ಮುದಗೊಂಡನೆ ಹೊಟ್ಟಿಲಿ ನಾಲ್ಕು ಮಂದಿ ಮಕ್ಕಳ
ಇಲ್ಲಿಗಿ ಇದುವಂದು ಸಂದೇನ ಹಾಡಿದರ ಪದ ಮುಂದೇನ
ಕಳವಿಟ್ಟರ ಕವಿತ ಕಟ್ಯಾರ ಹೊನ್ನ ಜಗ್ಗುನಿ ಗೌಡರೋ
ದೇವರ ಬಂದಾರ ಬನ್ನೀರೆ !

ಹುತ್ತಿನಗಡ್ಡಿ ಸೀಳ್ಯಾವೆ ಕುರಿಯ ಬಯಲಿಗ ಬಂದಾವ :

ಶಿವನೆ ನಮ್ಮಯ್ಯ ದ್ಯಾವರು ಬಂದಾರ ಬನ್ನೀರೆ
ಸ್ವಾಮಿ ನಮ್ಮಯ ದ್ಯಾವರು ಬಂದಾರ ಬನ್ನೀರೆ
ದೇವಿ ಧರ್ಮುರ ಹಾಡೇನ ಸತ್ಯಧರ್ಮುರ ಹಾಡೇನ
ಸತ್ಯ ಧರ್ಮುರ ಹಾಡೇನ ಬಂಕಾಪೂರ ಮ್ಯಾಲೇನ
ದೇವಿ ಧರ್ಮುರ ಹಾಡೇನೆ ಬಂಕಾಪೂರದ ಮ್ಯಾಲೇನೆ
ಬಂಕಾಪುರದ ಒಳಗೇನೆ ಮುದ್ದವ್ವ ಮುದಗೊಂಡನ
ಮುದ್ದವ್ವ ಮುದಗೊಂಡನೆ ಹೊಸ್ತಲ ಮ್ಯಾಲಕೆ ಬಂದಾನ
ಆದಿಯಗೊಂಡನಿದ್ದಾನೆ ಅನಂತಗೊಂಡನಿದ್ದಾನ
ಸಿದ್ದಗೊಂಡನಿದ್ದಾನ ಪದಮಗೊಂಡನಿದ್ದಾನ
ನಾಲ್ಕು ಮಂದಿನಲ್ಲಪ್ಪ ಲಗ್ಗನ ಮಾಡುತಾರೇನ
ಲಗ್ಗನ ಮಾಡುತಾರೇನ ಮೂರುತ ಮಾಡುತಾರೇನ
ಆದಿಗೊಂಡಗಲ್ಲೇಳೆ ಅರವತ್ತು ಮಂದಿ ಮಕ್ಕಳು
ಅನಂತಗೊಂಡಗಲ್ಲೇಳೆ ಮೂವತ್ತು ಮಂದಿ ಮಕ್ಕಳು
ಸಿದ್ದಗೊಂಡಗಲ್ಲೇಳೆ ಇಪ್ಪತ್ತು ಮಂದಿ ಮಕ್ಕಳು
ಪದಮಗೊಂಡಗಲ್ಲಪ್ಪ ನಾಲ್ಕು ಮಂದಿ ಮಕ್ಕಳು
ನಾಲ್ಕು ಮಂದಿ ಮಕ್ಕಳು ಏನಂದಾಡುತ್ತಿದ್ದಾರ
ಆದಿಯಗೊಂಡ ಅನಂತಗೊಂಡ ಸಿದ್ದಗೊಂಡ ಮೂವರ
ಸಿದ್ದಗೊಂಡ ಮೂವರೆ ಹೆಂಡರ ಮಾತ ಕೇಳ್ಯಾರ
ನಾಲ್ಕು ಮಂದಿನಲ್ಲೇಳೆ ಲಗ್ಗನಾಗ್ಯಾವಂದಾರ
ಲಗ್ಗನಾಗ್ಯಾವಂದಾರೆ ಪಾಲಾ ಕೊಡಬೇಕಂದಾರ
ಯಾರದವರಿಗಲ್ಲಪ್ಪ ಪಾಲು ಕೊಡಬೇಕಂದಾರ
ಆದಿಯಗೊಂಡ ಮಡದೇನ ಅನಂತಗೊಂಡಗ ಹೇಳ್ಯಾಳ
ಅನಂತಗೊಂಡನ ಮಡದೇನ ಸಿದ್ದಗೊಂಡಗ ಹೇಳ್ಯಾಳ
ಪದಮಾಗೊಂಡನಲ್ಲೇಳೆ ತಿರುಗ್ಯಾಡಿ ಬರತಾನಂದಾಳ
ಮೇವ ತರದಿಲ್ಲಂದಾಳೆ ನೀರ ತರದಿಲ್ಲಂದಾಳ
ಊರಗ ಹೋದನಂದಾಳೆ ಮನಿಗಿ ಬರತನಂದಾಳ
ತಾಯೇಳೆ ಮುದ್ದವ್ವನ ಅಡಗಿ ಮಾಡುತಾಳೇನ
ಅಡಗಿ ಮಾಡುತಾಳೇನ ಬೇಡಿದ ಉಣಸುತಾನಂದಾರ
ಬೇಡಿದ ಉಣತಾನಲ್ಲಪ್ಪ ತೊಲಿಯಾ ತುಂಡನಾದನ
ತೊಲಿಯಾ ತುಂಡನಿದ್ದಾನೆ ಸುಮ್ಮನೆ ತಿರುಗೂತಾನೇನ
ಹ್ಯಾಂಗ ಮಾಡಬೇಕಂದಾನೆ ಎಂತು ಮಾಡಬೇಕಂದಾನ
ಮೂರು ಮಂದಿ ಮಕ್ಕಳೆ ಏನಂದಾಡುತಾರೇನ
ಮುದ್ದಪ್ಪ ಮುದ್ದಗೊಂಡನ ಏನೆಂದು ಹೇಳುತಾರೇನ
ಬಾರೋ ಬಾರೋ ಏಯವ್ವ ಪದಮಗೊಂಡಗಲ್ಲೇಳ
ಪದಮಗೊಂಡಗಲ್ಲೇಳ ಬ್ಯಾರಿ ಕೊಡತೀವಿ ಅಂದಾರ
ಬ್ಯಾರಿ ಕೊಡತೀವಿ ಅಂದಾರ ಪಾಲ ಕೊಡತೀವಿ ಅಂದಾರ
ಪಾಲ ಇಡತೀವಿ ಅಂದಾರೆ ಕಡಿಯಾಕ ಆಕೀವಿ ಅಂದಾರ
ತಾಯೇಳ ಮುದ್ದವ್ವನ ಒಳ್ಳೆದು ಒಳ್ಳೇದಂದಾಳ
ಬಾರೋ ಬಾರೋ ಏಯಪ್ಪ ಸಣ್ಣತಮ್ಮನಿದ್ದಾನ
ಒಂದು ತಿಳಿದಿಲ್ಲ ಅಂದಾಳ ಒಂದು ಬರುದಿಲ್ಲಂದಾಳ
ಹಿಂದು ಗೊತ್ತಿಲ್ಲಂದಾಳೆ ಮುಂದು ಗೊತ್ತಿಲ್ಲಂದಾಳ
ಬಾರೋ ಬಾರೋ ನನ್ನಪ್ಪ ಸಣ್ಣವನಿದ್ದಿ ಅಂದಾಳ
ಸಂಜಿಯ ಮಾಡಿ ಕರದೇನ ಪದುಮಗೊಂಡಗ ಹೇಳ್ಯಾಳ
ಸಂಜಿಯ ಮಾಡಿ ಬಂದಾನ ಮಗನಿಗ ಹೇಳುತಾಳೇನ
ಮೂರು ಮಂದಿ ಮಕ್ಕಳೆ ಒಕ್ಕಲುತನ ಮಾಡ್ಯಾರ
ಅಡವಿಯ ಮಾಡ್ಯಾರಂದಾಳೆ ಗಳಿಯಾ ಹೊಡದಾರಂದಾಳ
ಮೇವ ತಂದಿಲ್ಲಂದಾಳೆ ನೀರ ತಂದಿಲ್ಲಂದಾಳೆ
ತಾಯಿ ಮಾತನಲ್ಲೇಳೆ ಪದುಮಗೊಂಡ ಕೇಳ್ಯಾನ
ಒಳ್ಳೆದು ಒಳ್ಳೆದು ಅಂದಾನೆ ನಾಳಿಗ ಮುಂಜಾನಿ ಹೋದೇವ
ನಾಳಿಗ ಮುಂಜಾನಿ ತಾಯೆವ್ವ ಮೇವಿಗ ಹೋಗತೀನಿ ಅಂದಾನ
ಒಳ್ಳೆದು ಒಳ್ಳೆದು ಅಂದಾನೆ ನಾಳಿಗ ಮುಂಜಾನಿ ಹೋದೇವ
ನಾಳಿಗ ಮುಂಜಾನಿ ತಾಯೆವ್ವ ಮೇವಿಗ ಹೋಗತೀನಿ ಅಂದಾನ
ಒಳ್ಳೆದು ಒಳ್ಳೆದು ಅಂದಾರ ಸಂಜಿಯಮಾಡಿ ಕುಂತಾರ
ಉಂಡಾರ ಬಾಳುಟ್ಟಾರೆ ಬಾಯಲಿ ಸೀತಾಳ ಉಗಳ್ಯಾರ
ಬಾಯಲಿ ಸೀತಾಳ ಉಗಳ್ಯಾರೆ ಮಲ್ಲನ ಮನಗೂತಾರೇನ
ಹೊತ್ತರೆ ಮುಂಜಾನಿ ಎದ್ದಾರೆ ಅನಂತಗೊಂಡ ಕುಂತಾರ
ಅನಂತಗೊಂಡನಿದ್ದಾನ ಸಿದ್ದಗೊಂಡನಿದ್ದಾನ
ಪದಮಗೊಂಡ ಎದ್ದಾನೆ ಜಾಮ ಜಳಕವ ಮಾಡ್ಯಾನ
ಜಾಮ ಜಳಕವ ಮಾಡ್ಯಾನೆ ಸಣ್ಣನೆ ಸರದುಟ್ಟಾನ
ಸಣ್ಣನೆ ಸರದುಟ್ಟಾನೆ ಬಣ್ಣನೆ ಬಿಗದುಟ್ಟಾನ
ಉಂಡಾನೆ ಬಾಳುಟ್ಟಾನೆ ಬಾಯಿಲಿ ಸೀತಾಳ ಉಗಳ್ಯಾನ
ಬಾಯಿಲಿ ಸೀತಾಳ ಉಗಳ್ಯಾನೆ ಕುರುಪಿ ಕೈಯಲಿ ಹಿಡಿದಾನ
ಕುರುಪಿ ಕೈಯಾಗ ಹಿಡದಾನೆ ಐದ ಹಗ್ಗ ಹಿಡದಾನ
ಐದಾರು ಹಗ್ಗ ಹಿಡಿದಾನೆ ಎಲ್ಲಿಗ ಹೋಗುತಾನೇನ
ತಳದ ಮಾನ್ಯದ ಹೊಲದಾಗ ಎರಡು ಕೂರಿಗಿ ಹೊಲದಾಗ
ಎರಡು ಕೂರಿಗಿ ಹೊಲ್ದಾಗ ನಡುವ ಕುಂದ್ರುತಾನೇನ
ಹಗ್ಗ ಇಡುವುತಾನೇನ ಕುರುಪಿ ಇಡುವುತಾನೇನ
ಕುರುಪಿ ಇಡುವುತಾನೇನ ಪದಮಾಗೊಂಡ ಕುಂತಾನ
ಯಾತಳ ಶಕ್ತಿ ಇದ್ದಾವೆ ಭೂತಾಳ ಶಕ್ತಿ ಇದ್ದಾವ
ಯಾತಳ ಕರಿಯುತಾನೇನ ಭೂತಳಿ ಕರಿಯುತಾನೇನ
ಯಾತಳಿ ಭೂತಾಳಿ  ವಶಗೋಳು ಪದುಮಗೊಂಡಗ ಇದ್ದಾವ
ಮದಮಗೊಂಡನಲ್ಲೇಳ ಸುಮ್ಮನೆ ಕುಂದ್ರುತಾನೇನ
ಮೇವ ಮಾಡುತಾನೇನ ಕುಂಪಿ ಹಾಕುತಾನೇನ
ಹಗ್ಗ ಹಾಕುತಾನೇನ ಹೊರಿಯಾ ಕಟ್ಟುತಾನೇನ
ಹೊರಿಯಾ ಕಟ್ಟರಿ ಅಂದಾನ ಮೇವ ತಯ್ಯಾರಿ ಅಂದಾನ
ಮೇವಿನ ಹೊರಿಯಾ ಕಟ್ಯಾರೆ ಎಲ್ಲಿಗೆ ಬರುತಾರೇನಯ್ಯ
ಪದುಮಗೊಂಡನಲ್ಲೇಳ ನಡುವ ತೆಲಿಯ ಕೊಟ್ಟಾನ
ಯಾತಾಳ ಭೂತಾಳಲ್ಲೇಳೆ ಮೆವ್ವ ಹೊತಗೊಂಡು ಬಂದಾವ
ಮನಿಗಿ ಬರುವುತಾನೇನೆ ಬಾಗಲ ಹಿಡಿಯಲ್ಲಂದಾನ
ಬಾಗಲ ಹಿಡಿಯವಲ್ಲದೆ ಹೊರಿಯ ಕೆಡವುತಾವೇನ
ಹೊರಿಯಾ ಬಿಚ್ಚುತಾರೇನೆ ಮೇವ ಹಾಕುತಾರೇನ
ಅಟ್ಟ ತುಂಬುತಾರೇನ ಪಡಸಾಲಿಗಿ ತುಂಬುತಾರೇನ
ಬಾಗಲ ತುಂಬುತಾವೇನೆ ಝಳಜೀಯ ತುಂಬುತಾವೇನ
ಆದಿಯಗೊಂಡನಲ್ಲೇಳೆ ಅನಂತಗೊಂಡನಲ್ಲೇಳ
ಸಿದ್ಧಗೊಂಡ ಮೂವರೆ ಆವಾಗ ಎತ್ತ ಹೊಡಕೊಂಡ
ಆರು ಎತ್ತು ಹೊಡಕೊಂಡ ಮನಿಗಿ ಬರುವುತಾರೇನ
ಎಟ್ಟು ಮೇವ ಮೈದಾರೆ ಮೇವ ಸರಿಯವಲ್ಲವೆ
ತಂದೇಳ ಮುದ್ದಗೌಡನೆ ತಾಯೇಳೆ ಮುದ್ದವ್ವನ
ತಾಯೇಳೆ ಮುದ್ದವನೆ ಏನಂದಾಡುತಾಳೇನೆ
ತಮ್ಮ ಮೇವ ತಂದಾನೆ ಎಷ್ಟು ಐಶ್ವರಿ ಮಾಡ್ಯಾನ
ಆದಿಗೊಂಡನ ಮಡದೇನೆ ಸಿದ್ಧಗೊಂಡನ ಮಡದೇನ
ಅನಂತಗೊಂಡನ ಮಡದೇನೆ ಸಿದ್ಧಗೊಂಡನ ಮಡದೇನ
ಅನಂತಗೊಂಡನ ಮಡದೇನೆ ಏನಂದಾಡುತಾಳೇನೆ
ಕುಂತ ಮಾಡುತಾರೇನೆ ಬೇಡಿದು ಮಾಡೇವಂದಾರ
ಬೇಡಿದು ಉಂಡರಲ್ಲೇಳ ಕುತ್ತ ಬಡಸೇವಂದಾರ
ಒಂದಿನ ತಂದರಲ್ಲೇಳ ನಾವೇ ದುಡದೇವಂದಾರ
ನಾವೇ ದುಡಿದೇವಂದಾರೆ ಬ್ಯಾರಿ ಕುಡಬೇಕಂದಾರ
ಬ್ಯಾರಿ ಕುಡಬೇಕಂದಾರೆ ಮನದಾನ ಮಾತನಾಡ್ಯಾರ
ಸಿದ್ಧಗೊಂಡ ಪದುಮಗೊಂಡ ಒಳ್ಳೆದು ಒಳ್ಳೆದು ಅಂದಾರ
ಎಷ್ಟು ದಿವಸನಿದ್ದರೆ ಸಾಲ ಕೊಡತೀನಿ ಅಂದಾರ
ಮುದ್ದವ್ವ ಹೇಳುತಾಳೇನೆ ಪಾಲ ಕೊಡಬೇಕಂದಾರ
ನಾಲ್ಕು ಮಂದಿ ಕೂಡ್ಯಾರೆ ಏನೇನು ಮಾತನಾಡ್ಯಾರ
ಹನ್ನೆರಡು ಕೂರಗಿ ಹೊಲವೇನೆ ಆದಿಯಗೊಂಡಗಲ್ಲೇಳ
ಹನ್ನೆರಡು ಕೂರಗಿ ಹೊಲವೇನೆ ಅನಂತಗೊಂಡಗಲ್ಲೇಳ
ಆದಿಗೊಂಡಗ ಎರಡೆತ್ತ ಅನಂತಗೊಂಡ ಎರಡೆತ್ತ
ಸಿದ್ಧಗೊಂಡನಲ್ಲೇಳ ಒಳ್ಳೆ ನಂಬಾರ ಹಿಡದಾನ
ಪದುಮಗೊಂಡನಲ್ಲೇಳ ನೀಯೇನ ಮಾಡಿಲ್ಲಂದಾರೆ
ಹನ್ನೆರಡು ಕೂರಿಗಿ ಬೀಳೇನ ಪಾಳಬಿದ್ದಾವಂದಾರ
ಬೀಳಿನ ಹೊಲಗೊಳು ನಿಮಗೇನ ಚೊಲುವ ಹೊಲಗೋಳು ನಮಗೇನ
ಹರಕ ಸೋಲ ಕೊಟ್ಟಾರೆ ಮುರಕ ಜತ್ತಿಗಿ ಕೊಟ್ಟಾರ
ಕುಂಟ ಎತ್ತ ಕೊಟ್ಟಾರೆ ಕುರುಡ ಎತ್ತ ಕೊಟ್ಟಾರ
ಹನ್ನೆರಡು ಕೂರಿಗಿ ಬೀಳೇನ ನಿನಗೆ ಇರಬೇಕಂದಾರ
ಒಳ್ಳೆಯ ಎತಗೋಳು ಆರ ಎತ್ತ ಮೂರೇ ಮಂದಿ ಹಿಡದಾರ
ಮೂರು ನಂಬರ ಹಿಡದಾರೆ ಸಂಸಾರ ಮಾಡತ್ತಿದ್ದಾರ
ಹೊತ್ತಾರೆ ಮುಂಜಾನಿ ಎದ್ದಾರ ಪದುಮಾಗೊಂಡ ಕೇಳ್ಯಾನ
ತಾಯೇಳ ಮುದ್ದವ್ವನೆ ಜಳಕ ಮಾಡಲಿಬೇಕಯ್ಯ
ಜಳಕ ಮಡಲಿಬೇಕಪ್ಪ ಊಟ ಮಾಡಲಿಬೇಕಯ್ಯ
ಕುಂಟ ಎತ್ತ ಕುರುಡ ಎತ್ತ ಮುಂದ ಮಾಡಲಿಬೇಕಯ್ಯ
ಹರಕ ಸೋಲ ಮುರುಕ ಜತ್ತಿಗಿ ಹೆಗಲಿಗ ಹಾಕಲಿಬೇಕಯ್ಯ
ಗಳಿಯ ಹೊಡಲಿಬೇಕಪ್ಪ ನಿನ್ನ ಪಾಲಿಗಿ ಬಂದಾವ
ಮುಂದ ನಡಿಯಲಿಬೇಕಪ್ಪ ಬುತ್ತಿ ತರತೀನಿ ಅಂದಾಳ
ಒಳ್ಳೆದು ಒಳ್ಳೆದು ಅಂದಾನೆ ಚಾಮಜಳಕವ ಮಾಡ್ಯಾನ
ಸಣ್ಣನ ಸರದುಟ್ಟಾನೆ ಬಣ್ಣನೆ ಬಿಗಿದುಟ್ಟಾನ
ಉಂಡಾನೆ ಬಾಳುಟ್ಟಾನೆ ಬಾಯಿಲಿ ಸೀತಾಳ ಉಗಳ್ಯಾನ
ಕುಂಟ ಎತ್ತ ಕುರುಡ ಎತ್ತ ಮುಂದ ಮಾಡಲಿಬೇಕಯ್ಯ
ಹರಕ ಸೋಲ ಮುರುಕ ಜತ್ತಿಗಿ  ಹೆಗಲಿಗ ಹಾಕಲಿಬೇಕಯ್ಯ
ಗಳಿಯ ಹೊಡಲಿಬೇಕಪ್ಪ ನಿನ್ನ ಪಾಲಿಗಿ ಬಂದಾವ
ಮುಂದ ನಡೆಯಲಿಬೇಕಪ್ಪ ಬುತ್ತಿ ತರತೀನಿ ಅಂದಾಳ
ಒಳ್ಳೆದು ಒಳ್ಳೆದು ಅಂದಾನೆ ಚಾಮಜಳಕವ ಮಾಡ್ಯಾನ
ಸಣ್ಣನ ಸರದುಟ್ಟಾನೆ ಬಣ್ಣನೆ ಬಿಗಿದುಟ್ಟಾನ
ಉಂಡಾನೆ ಬಾಳುಟ್ಟಾನೆ ಬಾಯಿಲಿ ಸೀತಾಳ ಉಗಳ್ಯಾನ
ಕುಂಟ ಎತ್ತ ಕುರುಡ ಎತ್ತ ಕುಣಕಿ ಬಿಚ್ಚುತಾನೇನ
ಹರಕ ಸೋಲ ಮುರಕ ಜಂತಿಗಿ ಹೆಗಲಿಗೆ ಹಾಕುತಾನೇನ
ಹೊನ್ನಹೊಸ್ತುಲ ದಾಟ್ಯಾನೆ ರಾಯಿ ಮಾರಗ ಹಿಡಿದಾನ
ಹೊಲಕ ಹೋಗುತಾನೇನ ಗಳಿಯಾ ಹೊಡುತಾನೇನ
ಗಳಿಯಾ ಹೊಡುತಾನೇನ ಮೇಳಿ ಕೈಯಾಗ ಹಿಡದಾನ
ಯಾತಾಳಿ ಕರಿಯುತಾನೇನ ಭೂತಾಳಿ ಕರಿಯುತಾನೇನ
ಮೇಳಗಿ ಗಂಟಿಬಿದ್ದಾವೆ ನರಕ ಗಂಟಬಿದ್ದಾವ
ಗಿಡಿಗೋಳು ಕಿತ್ತಿ ಬಿದ್ದಾವೆ ಎಳ್ಳಿ ಕಿತ್ತಿ ಬಿದ್ದಾವ
ಎಳ್ಳಿ ಕಿತ್ತಿ ಬಿದ್ದಾವೆ ನೇಗಲ ಎಳಿಯುತಾವೇನ
ನೇಗಲ ಎಳಿಯುತಾನೇನ ಎಳ್ಳಿ ಹೊಳ್ಳಿ ಬಿದ್ದಾವ
ಊಟದ ಯಾಳಿ ಆದವೆ ತಾಯೇಳೆ ಮುದ್ದವ್ವನ
ತಾಯೇಳ ಮುದ್ದವನೆ ಹುರದ ಹೂರಣ ಗಡಬೇನ
ಕರದ ಕರಚಿ ಕಾಯೇನೆ ಬಿದರ ಬುಟ್ಟಿ ತುಂಬ್ಯಾಳ
ಬಿಂದಿಗಿ ನೀರ ತಂದಾಳ ಬಿದರ ಬುಟ್ಟಿ ಹೊತ್ತಾಳ
ಬಿದರ ಬುಟ್ಟಿ ಹೊತ್ತಾಳೆ ಬಿಂದಗಿ ನೀರ ತಂದಾಳ
ಬಿಂದಿಗಿ ನೀರ ತಂದಾಳೆ ಹೊಲಕ ಬರುವುತಾಳೇನ
ಬುತ್ತಿ ಇಳುವುದರೊಳಗೇನ ಪದುಮಾ ಮುಂದಕ ಆಗುತಾನೇನ
ಹೊಳ್ಳಿ ಬರತೀನಿ ಅಂದಾನೆ ತಾಯಿಗ ಧನಿಯಾ ಕೊಟ್ಟಾನ
ಒಳ್ಳೆದು ಒಳ್ಳೆದು ಅಂದಾಳೆ ಸುಮ್ಮನೆ ಕುಂದ್ರುತಾರೇನ
ಬಿದರ ಬುಟ್ಟಿ ಇಳುವ್ಯಾಳೆ ಬಿಂದಗಿ ನೀರ ಇಳುವ್ಯಾಳೆ
ಆದಿಯಗೊಂಡ ನೋಡ್ಯಾನೆ ಅನಂತಗೊಂಡ ನೋಡ್ಯಾನ
ಸಿದ್ಧಗೊಂಡ ನೋಡ್ಯಾನೆ ಮೂರು ಮಂದಿ ಕೂಡ್ಯಾರ
ಪದುಮಾ ಗಳಿಯಾ ಬಿಡುವುದುರೊಳಗೆ ಊಟಮಾಡತೀವಿ ಅಂದಾರ
ಊಟ ಮಾಡತೀವಿ ಅಂದಾರೆ ಮೂರು ಮಂದಿ ಬಂದಾರ
ತಾಯಿನಲ್ಲಿ ಇದ್ದಾಳೆ ಬಿಂದಿಗಿ ನೀರ ಹಿಡದಾರ
ಕೈಕಾಲ ಮಾರಿ ತೊಳೆದಾರೆ ಬಿದರ ಪುಟ್ಟಿಗ ಕುಂತರ
ಮೂರು ಮಂದಿ ಮಕ್ಕಳೆ ಊಟ ಮಾಡುತಾರೇನ
ತಾಯೇಳ ಮುದ್ದವನೆ ಏನಂದಾಡಲಿಲ್ಲೇನ
ಪದಮಗೊಂಡ ಮಗನೇನ ಮೂರು ಮಂದಿ ಮಕ್ಕಳ
ಯಾರಿಗೆ ಅನಬೇಕೆಂದಾಳೆ ಯಾರಿಗ ಆಡಬೇಕೆಂದಾಳ
ಯಾರಿಗ ಅನುವಲಿಲ್ಲೇನ ಸುಮ್ಮನ ಕುಂದ್ರುತಾಳೇನ
ಉಂಡಾರೆ ಬಾಳುಟ್ಟಾರೆ ಬಾಯಿಲಿ ಸೀತಾಳ ಮುಗದಾರ
ಹೆಗಲಿಗ ಬಾರಕೋಲ ಹಾಕ್ಯಾರ ತಮತಮ ಗಳಿಯಾಕ ಹೊಂಟಾರ
ತಮತಮ ಗಳಿಯಾಕ ಹೋದಾರೆ ಗಳಿಯ ಹೊಡಿಯುತಿದ್ದಾರ
ಪದಮಾಗೊಂಡನಲ್ಲೇಳ ತಿರುಗಿ ಬರುವುತಾನೇನ
ಢೋಣುಕ ಬರುವುತಾನೇನ ಹಿಂದಕ ತಿರುಗೂತಾನೇನಕ
ಬುತ್ತಿ ಸವನಿಗ ಬಂದಿದ ಹೆಗಲಿಗ ಬಾರಕೋಲ ಹಾಕಿದ್ದ
ಬುತ್ತಿಯ ಬಲ್ಲಿ ನಿಂತಾನೆ ಆದಿಯಗೊಂಡನ ಕರದಾಯ
ಅನಂತಗೊಂಡನ ಕರದಾನೆ ಸಿದ್ಧಗೊಂಡನ ಕರದಾನ
ಬರಿಯಾ ನನ್ನ ಅನ್ನದೇರೆ ಊಟ ಮಾಡಲಿ ಅಂದಾನ
ಹಡದ ತಾಯಿನಲ್ಲೇಳ ಸುಮ್ಮನೆ ಕುಂದ್ರುತಾಳೇನ
ಮೂರ ಮಂದಿ ಅಣ್ಣದೇರ ಹೆಗಲಿಗ ಬಾರಕೋಲ ಹಾಕ್ಯಾರ
ಹೆಗಲಿಗ ಬಾರಕೋಲ ಹಕ್ಯಾರೆ ಪದುಮಾಗೊಂಡನ ಬಲ್ಲಿಗ
ಪದುಮಾಗೊಂಡಾನ ಬಲ್ಲ್ಯಾಕ ಊಟಕ ಬರುವುತಾರೇನ
ಬಿಂದಗಿ ತುಂಬಿದಂಗಿದ್ದಾವ ಬುಟ್ಟಿ ತುಂಬಿದಂಗಿದ್ದಾವ
ಮರಿ ತೊಳಿಯುತಾರೇನೆ ಮಕವ ತೊಳಿಯುತಾರೇನ
ಪದುಮಾಗೊಂಡನಂದರ ಮಾರಿ ತೊಳಕೊಂಡು ನಿಂತಾರ
ಮಾರಿ ತೊಳಿಯುತಾರೇನ ಬುಟ್ಟಿ ಬಲ್ಲಿಗ ಬಂದಾರ
ಮ್ಯಾಲಿನ ಪಾವಡ ತಗದಾರೆ ತುಂಬಿದ ಪುಟ್ಟನಿದ್ದಾವ
ಹುರದ ಹೂರಣಗಡಬೇನ ಕರದ ಕರಚಿಕಾಯೇನ
ತುಂಬಿದ ಪುಟ್ಟ ಬುತ್ತೇನ ಹಂಗೆ ಇರುವುತಾವೇನ
ಮೂರು ಮಂದಿ ಅಣ್ಣ ತಮ್ಮರು ತಾಯಿ ಮ್ಯಾಲೆ ಅಂದಾರ
ನಮ್ಮ ತಾಯಿನಂದಾರೆ ಎಲ್ಲಿ ಬಿಚ್ಚಿ ಇಟ್ಟಾಳ
ಮನದಾಗ ಮಾತನಾಡ್ಯಾರೆ ಉಂಡ ಹೋಗುತಾರೇನ
ಉಂಡ ಹೋಗುತಾರೇನ ನಾಲ್ಕು ಮಂದಿ ಊಟೇನ
ನಾಲ್ಕು ಮಂದಿ ಊಟೇನ ತಮ ತಮ ಗಳಿಯಾಕ ಹೋದಾರ
ತಮತಮ ಗಳಿಯಾಕ ನಡದಾರೆ ತಮತಮ ಹೊಲದಾಗ ನಡದಾರ
ಪದುಮಗೊಂಡನಲ್ಲೇಳ ಹೊರಳಿ ಗಳಿಯಾ ತಿರುವ್ಯಾನ
ಹೊರಳಿ ಗಳಿಯಾ ತಿರುವ್ಯಾನೆ ಬುತ್ತಿಯ ಬಲ್ಲಿ ಬಂದಾನ
ಬರಿಯೊ ನನ್ನ ಅಣ್ಣದೇರಾ ಊಟ ಮಾಡಮಿ ಅಂದಾನ
ನಿನ್ನೆ  ಹಂಗೆ ಆದಾವ ಇಂದೆ ನೋಡಬೇಕಂದಾರ
ತಾಯಿ ಮನಸ ನೋಡೇವ ತಮ್ಮನ ಮನಸ ನೋಡೇವ
ನಮ್ಮ ತಾಯಿನಲ್ಲೇಳ ಎಲ್ಲಿ ತಗದ ಇಟ್ಟಾಳ
ಕುಂತ ತಾಯಿನಲ್ಲೇ ಎದ್ದ ಹೋಗಿಲ್ಲಂದಾರ
ಮೂರು ಮಂದಿ ಅಣ್ಣ ತಮ್ಮರ ಓಡಿ ಬರುವುತಾರೇನ
ಬರಿಯಾ ನನ್ನ ಅಣ್ಣದೇರಾ ಸೀತಾಳ ಶಿವಮಜ್ಜನ
ಸೀತಾಳ ಶಿವಮಜ್ಜನ ನೀರಿಲೆ ಮಕ ಮಜ್ಜನ
ಪದಮಗೊಂಡನಂದಾರೆ ಕೈಕಾಲ ಮಾರಿ ತೊಳದಾರ
ಕೈಕಲ ಮಾರಿ ತೊಳದಾರ ಬಿದರ ಬುಟ್ಟಿಗೆ ಕುಂತಾರ
ನಾಲ್ಕು ಮಂದಿ ಅಣ್ಣ ತಮ್ಮದರು ಉಂಡಾರೆ ಬಾಳುಟ್ಟಾರ
ಉಂಡಾರೆ ಬಾಳುಟ್ಟಾರೆ ಬಾಯಿಲಿ ಸೀತಾಳ ಉಗಳ್ಯಾರ
ಬಾರೋ ಬಾರೋ ತಮ್ಮಯ್ಯಾ ನಮನಮ್ಮ ಹೊಲಕ ಹೋದೇವ
ಹೆಂತ ನೇಗಲಂದಾರ ಎಂಟು ಎತ್ತಿನ ನೇಗಲ
ಎಂಟ ಎತ್ತಿನ ನೇಗಲೆ ಕುರುಡ ಕುಂಟ ಎಳದಾವ
ಹಿಂತ ಮಾತನಾಡ್ಯಾರ ತಮ್ಮ ತಮ್ಮ ಹೊಲಕ ಹೋಗ್ಯಾರ
ಮೂರ ದಿನಮಾನಲ್ಲೇಳ ಹಿಂಗೆ ಆದಾವೇನಯ್ಯ
ಬ್ಯಾಡೋ ಬ್ಯಾಡೋ ಏ ತಮ್ಮ ತಮ್ಮನ ಭಕ್ತಿ ಅಂದಾರ
ತಮ್ಮನ ಭಕ್ತಿ ಹೆಂತದ ತಾಯಿ ಭಕ್ತಿ ಹೆಂತದ
ತುಂಬಿದ ಬಿಂದಗಿ ಇದ್ದಾವ ತುಂಬಿದ ಪುಟ್ಟನಿದ್ದಾವ
ನಾವೇ ಹೋಗಬಾರದಂದಾರ ತಮ್ಮ ಮನಸಿಗ ತಿಳದಾರ
ತಮ್ಮ ಮನಸಿಗ ತಿಳದಾರ ಊಟ ಮಾಡೀವಿ ಅಂದಾರ
ನಾವೇ ಊಟ ಮಾಡೇವ ಪದುಮಗೊಂಡಾನ ಹೇಳ್ಯಾರ
ಪದುಮಾಗೊಂಡಗಲ್ಲಪ್ಪ ನೀನೆ ಊಟ ಮಾಡಯ್ಯ
ನೀನೇ ಊಟ ಮಾಡಪ್ಪ ಅಣ್ಣದೇರು ಹೇಳುತಾರೇನ
ಒಳ್ಳೆದು ಒಳ್ಳೆದು ಅಂದಾನ ಪದುಮಗೊಂಡನಿದ್ದಾನ
ಕೈಕಾಲುಮಾರಿ ತೊಳದಾರ ಬಿದರ ಪುಟ್ಟಿಗೆ ಕುಂತಾರ
ಹುರದ ಊರಣಗಡಬೇನ ಕರದ ಕರಚಿಕಾಯೇನ
ಉಂಡಾರೆ ಬಾಳುಟ್ಟಾರೆ ಬಾಯಿಲಿ ಸೀತಾಳ ಉಗಳ್ಯಾರ
ಹೆಗಲಿಗ ಬಾರಕೋಲ ಹಾಕ್ಯಾನ ಗಳಿಯದ ಬಲ್ಲೇಕ ಬಂದಾನ
ತಾಯೇಳ ಮುದ್ದವ್ವನೆ ಏನಂದು ಮಾತನಾಡ್ಯಾಳ
ಬಾರೋ ಬಾರೋ ಏಯಪ್ಪ ನನ್ನೊಂದು ಮಾತ ಕೇಳಯ್ಯಾ
ಪದುಮಾಗೊಂಡನಂದಾರೆ ಒಳ್ಳೆದು ಒಳ್ಳೇದಂದಾರ
ಹುತ್ತಿನಗಡ್ಡಿಗಲ್ಲಪ್ಪ ನೇಗಲ ಹಾಕಲಿ  ಬ್ಯಾಡಯ್ಯ
ಇದುವಂದು ಹುತ್ತಿನ ಗಡ್ಡೇನೆ ಹಂಗೆ ಉಳಿಯಲಿ ಅಂದಾಳ
ಒಳ್ಳೆದು ಒಳ್ಳೆದು ಅಂದಾನೆ ಸುಮ್ಮನಾಗುತಾನೇನ
ಒಳ್ಳೆದು ಒಳ್ಳೆದು ಅಂದಾನ ನೇಗಲ ಹೊಡಿಯುತಾನೇನ
ಒಂದು ಸಾರಿನಲ್ಲಪ್ಪ ಒಂದೇ ದಂಡಿಗ ಬಿದ್ದಾವ
ಹೋಗಿ ಹೊರಳಿ ಬಂದಾನ ತಿರುಗಿ ನೇಗಲ ಹಚ್ಯಾನ
ತಿರುಗಿ ನೇಗಲ ಹಚ್ಯಾನ ಹುತ್ತಿನ ನಡುವ ಬಿದ್ದಾವ
ನಟ್ಟ ನಡುವ ಬಿದ್ದಾವ ಎರಡು ಹೋಳನಾದವ
ಸೀಳಿ ಬೀಳುತಾವೇನೆ ಹುತ್ತಿನ ಗಡ್ಡಿ ಎರಡೇನ
ಹುತ್ತಿನ ಗಡ್ಡಿ ಸೀಳೆಯ್ಯ ಎರಡ ಹೋಲನಾದವ
ಎರಡ ಹೋಳನಾದವೆ ಕುರಿಯ ಬಯಲಿಗ ಬಂದಾವ
ಕುರಿಯ ಬಯಲಿಗ ಬಂದಾವ ಪದಮಣ್ಣ ನೋಡತಾನೇನ
ಹ್ಯಾಂಗ ಮಾಡಬೇಕೆಂದಾನೆ ಏನು ಆವೇಳು ಅಂದಾನ
ಚಗಳ ತರುವುತಾನೇನ ಸದಿಯಾ ತರುವುತಾನೇನ
ಸದಿಯಾ ಹಾಕುತಾನೇನ ಬೆಂಕಿ ಹಾಕುತಾನೇನ
ಸುಟ್ಟ ಕುರಿಗೋಳು ಅಲ್ಲೇಳ ಕರಿಯಾನಾಗುತಾವೇನ
ಸುಡಲಾರದ ಕುರಿಗೋಳು ಅಲ್ಲಪ್ಪ ಬಿಳಿಯನಾಗುತಾವೇನ
ಹೊಗಿಯ ಹತ್ತುತಾವೇನ ಕಂದನಾಗುತಾವೇನ
ಕೆಂಪ ಹುತ್ತಿನ ಗಡ್ಡಿಗೆ ಕೆಂಪ ಕುರಿಗೋಳು ಆದಾವ
ಹನ್ನೆರಡು ಕೂರಿಗಿ ಹೊಲದಾಗ ತುಂಬಿ ತುಳುಕುತಾವೇನ
ಇಲ್ಲಿಗಿ ಇದು ಒಂದು ಸಂದೇನ ಹಾಡಿದರ ಪದ ಮುಂದೇನ
ಕಳಸವಿಟ್ಟಾರ ಕವಿತ ಕಟ್ಯಾರ ಹೊನ್ನ ಜಗ್ಗುನಿ ಗೌಡರೊ
ದೇವರ ಬಂದಾರ ಬನ್ನೀರೆ !