ಬೆಂಕಿ ಶೋಧ ಆದಾವ ಕೊಬ್ಬರಿ ಶೋಧ ಆದಾವ

ಶಿವನೆ ನಮ್ಮಯ್ಯ ದ್ಯಾವರು ಬಂದಾರ ಬನ್ನೀರೆ
ಸ್ವಾಮಿ ನಮ್ಮಯ ದ್ಯಾವರು ಬಂದಾರ ಬನ್ನೀರೆ
ಸತ್ಯ ಧರ್ಮುರ ಹಾಡೇನೆ ಯಾವಲಿ ಇರುವುತಾವೇನ
ಬಂಕಾಪುರದ ಭೂಮ್ಯಾಗೆ ಹನ್ನೆರಡು ಕೂರಿಗಿ ಹೊಲದಾಗ
ಹನ್ನೆರಡು ಕೂರಿಗಿ ಹೊಲದಾಗೆ ಪದುಮಾಗೊಂಡನಿದ್ದಾನ
ಕರಿಯಾ ಕುರಿಗೋಳು ಆದಾವೆ ಸುಟ್ಟ ಕರಿಯಾನಾದವ
ಸುಡಲಾರದ ಜಾಗನಲ್ಲೇಳ ಹಂಡಚೆಕ್ಕಿ ಹಂಡನಾದವ
ಕರಗ ಬಳಿಯಾನಾದಾವೆ ಹಂಡ ಬಿಳಿಯನಾದವ
ಹುತ್ತಿನಗಡ್ಡಿ ಬಲ್ಲೇನೆ ಪದುಮಗೊಂಡ ನೋಡ್ಯಾನ
ಬುರುವ ಕುರಿಗೋಳು ಬರುತಾವೆ ಹೋಗುವ ಕುರಿಗೋಳು ಹೋತವ
ಬಂಗಾರ ಖೋಡಿನ ಠಗರೇನ ಬಯಲಿಗ ಬರುವ ಯಾಳ್ಯಾಕ
ಸಿಂಬಿಗೋಡಿನ ಠಗರೇನ ತಳದಾಗ ಇರುವ ಯಾಳೇನ
ಹುತ್ತ ತಿರುವಿ ವಗದಾವೆ ಕುರಿಯ ವಳಗೆ ಹೋದವ
ಕುರಿಯ ವಳಗನಾದಾವೆ ಠಗರ ತಳದಾಗ ಉಳದಾವ
ತಳದಾನ ಕುರಿಗೋಳು ಅಲ್ಲಪ್ಪ ಎಲ್ಲಿಗ ಬರುತಾವೇನಯ್ಯ
ತಳದಾನ ಕುರಿಗೋಳು ಅಲ್ಲಪ್ಪ ಬೀಜನಿಲ್ಲಪ್ಪ ಬೆಳಿಯೇನ
ಬೀಜನಿಲ್ಲದ ಬೆಳಿಯೇನೆ ಒಳಗ ಒಳಗ ಬಂದಾವ
ಒಳಗ ಒಳಗ ಬಂದಾವೆ ಹಾಲಮ್ಮಿ ಆಗಿ ಹುಟ್ಯಾವ
ತಳದಾಗ ಹೆಚ್ಚುತಾವೇನೆ ಮ್ಯಾಲ ಹೆಚ್ಚುತಾವೇನ
ಪದಮಾಗೊಂಡನಲ್ಲಪ್ಪ ಕುರಿಯಾ ಬೆನ್ನ ಹಿಡದಾನ
ಕುರಿಯ ಈಯುತಾವೇನ ಮರಿಯಾ ಕುಡಿಯುತಾವೇನ
ಬದುಕಿನ ಹಿಂದ ನಡದಾನೆ ಬಾಳುವಿ ಹಿಂದ ನಡದಾನ
ಊರ ಬಿಡುವುತಾನೇನ ಕೇರಿ ಬಿಡುವುತಾನೇನ
ಹೊತ್ತ ಮುಣಗುತಾವೇನ ಕುರಿಯಾ ಹೋಗುತಾವೇನ
ಕುರಿಯ ಮುಂದನಿದ್ದಾವೆ ಪದಮಗೊಂಡ ಹಿಂದೇನ
ಹೊತ್ತ ಮುಣಗುತಾವೇನೆ ಕುರಿಯಾ ಚಪ್ಪ ಹೊಡದಾವ
ಕುರಿಯಾ ಚಪ್ಪ ಹೊಡದಾವೆ ಮರಿಯಾ ಚಪ್ಪ ಹೊಡದಾವ
ಹೊತ್ತ ಮುಣಗುತಾವೇನ ಕತ್ತಲಾಗುತಾವೇನ
ಸುಳ್ಳಿ ಹೊಡದ ನಿಂತಾವೆ ಚಪ್ಪ ಹೊಡದ ನಿಂತಾವ
ಕುರಿಯ ಮುಂದ ಮಾಡಿದ್ದ ಪದಮಾಗೊಂಡ ಮನಗಿದ್ದ
ಮಲ್ಲನಮನಗುತಾನೇನೆ ಹೊತ್ತಾರೆ ಮುಂಜಾವಿ ಎದ್ದಾನ
ಹೊತ್ತಾರೆ ಮುಂಜಾನಿ ಎದ್ದಾನ ಕುರಿಯ ಚಾಗುತಾವೇನ
ಕುರಿಯ ಮುಂದ ನಡದಾವೆ ಪದುಮಣ್ಣ ಹಿಂದ ನಡದಾನ
ಹೊಟ್ಟಿಗನ್ನ ಇಲ್ಲೇ ಬಾಯಿಗ ನೀರ ಇಲ್ಲೇಳ
ಮೂರ ದಿನಮಾನ ಅಲ್ಲೇಳ ಕುರಿಯಾಗ ಇರುವುತಾನೇನ
ಕುರಿಯಾಗ ಇರುವುತಾನೇನ ಹ್ಯಾಂಗ ಮಾಡಬೇಕಂದಾನ
ಅನ್ನ ಮರ್ತ ಬಿಟ್ಟಾನ ನೀರ ಮರ್ತ ಬಿಟ್ಟಾನ
ತಾಯಿನ ಮರ್ತ ಬಿಟ್ಟಾನೆ ತಂದಿನ ಮರ್ತ ಬಿಟ್ಟಾನ
ಹೆಂಡರ ಮರ್ತಬಿಟ್ಟಾನೆ ಮಕ್ಕಳ ಮರ್ತಬಿಟ್ಟಾನ
ಬದುಕು ನೆನವುತಾನೇನ ಬಾಳುವಿ ನೆನವುತಾನೇನ
ಮೂರು ದಿವಸ ದಿನಮಾನ ಕುರಿಯ ಹಿಂದ ತಿರಗ್ಯಾನ
ಮುಕ್ಕಣ್ಣ ಶಿವರಾಯನೆ ಅರುವ ಸದ್ಯಾಣಾದವ
ಮೂರ ದಿವಸನಾದರ ಬಾಯಿಗ ನೀರ ಇಲ್ಲೇನ
ಬಾಯಿಗ ನೀರ ಇಲ್ಲೇಳ ಹೊಟ್ಟಿಗ ಅನ್ನ ಇಲ್ಲೇಳ
ಕುರಿಯಾ ಹಿಂದ ನಡದಾನ ಬಾಳುವೆ ಮುಂದ ನಡದಾನ
ಮುಕ್ಕಣ್ಣ ಶಿವರಾಯನ ಕೈಲಾಸ ಇಟ್ಟು ಇಳದಾನ
ಕೈಲಾಸ ಬಿಟ್ಟು ಇಳದಾನ ಪದುಮಾಗೊಂಡನ ಮುಂದೇನ
ಪದುಮಾಗೊಂಡನ ಮುಂದೇನ ಶಂಕರ ಬರುವುತಾರೇನ
ಪದುಮಾಗೊಂಡನಂದರ ಕಣ್ಣಿಲಿ ನೋಡುತಾನೇನ
ಗಟ್ಟಿ ಪಾದ ಹಿಡದಾನೆ ಮಂಡಿಲಿ ಹಸ್ತ ಇಟ್ಟಾನ
ಪದುಮಾಗೊಂಡನಲ್ಲಪ್ಪ ಎದ್ದನಿಂದ್ರುತಾನೇನ
ಬಾರೋ ಬಾರೋ ನನ್ನಪ್ಪ ಹೊಟ್ಟಿ ಹಸುವನಾದವ
ಮೂರ ದಿವಸನಾದವ ಬಾಯಿಗ ನೀರ ಇಲ್ಲಪ್ಪ
ಮುಕ್ಕಣ್ಣ ಶಿವರಾಯನ ಪದುಮಾಗೊಂಡಗ ಹೇಳ್ಯಾನ
ಅನ್ನ ಯಾವಲಿ ಅಂದಾನೆ ನೀರ ಯಾವಲಿ ಅಂದಾನ
ಬುತ್ತಿ ಯಾವಲಿ ಅಂದಾನೆ ಮಕ್ಕಳು ಯಾವಲಿ ಅಂದಾನ
ಅಂಗಳ ಯಾವಲಿ ಅಂದಾನೆ ಮನಿಯಾ ಯಾವಲಿ ಅಂದಾನ
ಇಲ್ಲದ ಬುತ್ತಿ ಮಾರಾಯ ಎಲ್ಲಿಂದ ತರಬೇಕಂದಾನ
ಹಗಲು ನಡದಾವಂದಾನೆ ರಾತರಿ ನಡದಾವಂದಾನ
ಇಂದಿಗ ಮೂರ ದಿನಮನೆ ಮನಿಯಾ ಮುಗಿಸಿ ಬಂದೇನ
ಎಲ್ಲಿಗ ಹೋಗಬೇಕಂದಾರ ಯಾವಕಡಿ ಹೋಗಬೇಕಂದಾರ
ಹೊಟ್ಟಿ ಹೊಟ್ಟಿ ಬಡಕೊಂಡ ಬಾಯಿ ಬಾಯಿ ಬಡಕೊಂಡ
ಹೊಟ್ಟಿ ಹೊಸನಾದವೆ ಬಾಯಿಗ ನೀರ ಇಲ್ಲೇಳ
ಮದುಮಾಗೊಂಡನಲ್ಲಪ್ಪ ಊರಿಗೆ ಹೋಗತಿನಿ ಅಂದಾನ
ಯಾವ ದಿಕ್ಕಿಗ ಹೊಂಟಿದೆ ಯಾವ ಊರಿಗೆ ಹೋಗುತಿದೆ
ಊರ ಯಾವಲಿ ಅಂದಾನೆ ಮನಿಯಾ ಯಾವಲಿ ಅಂದಾನ
ಪದುಮಾಗೊಂಡನಲ್ಲೇಳ ಹುಚ್ಚ ಹಿಡಿದ ನಿಂತಾನ
ಮುಕ್ಕಣ್ಣ ಶಿವರಾಯನ ಏನಂದಾಡುತಿದ್ದಾನ
ಮುಕ್ಕಣ್ಣ ಶಿವರಾಯನ ಗುಡಿಯ ವಳಗೆ ಅಂದಾನ
ಹುಸಿಯ ಹಾಲನಿದ್ದಾವೆ ಬಿಸಿಯಾ ಗಿಣ್ಣ ಮಾಡಾರೆ
ಬೆಂಕಿ ಬೇಕೇಳಂದಾನ ಖೊಬ್ಬರಿ ಬೇಕೇಳಂದಾನ
ಖೊಬ್ಬರಿ ಎಲ್ಲಿಂದ ತರಬೇಕ ಬೆಂಕಿ ಎಲ್ಲಿಂದ ತರಬೇಕ
ಪದುಮಾಗೊಂಡನಲ್ಲೇಳ ಮಾದೇವನ ಕೇಳುತಾನೇನ
ಮಾದೇವ ಹೇಳತಿದ್ದನೆ ಪದುಮಗೊಂಡ ಕೇಳ್ಯಾನ
ಗುಡ್ಡಕ ಹೋಗಲಿ ಬೇಕಪ್ಪ ಗುಂಡಿನ ಮ್ಯಾಲ ಕೊಡಯ್ಯ
ಗುಂಡಿನ ಮ್ಯಾಲ ಕುಂತರ ಬೆಂಕಿ ಶೋಧ ತಿಳದಾವೆ
ಬೆಂಕಿ ಶೋಧ ತಿಳಿದಾವ ಖೊಬ್ಬರಿ ಶೋಧ ತಿಳಿದಾವ
ಬೆಂಕಿ ಶೋಧ ತಿಳಿದಾವ ಖೊಬ್ಬರಿ ಶೋಧ ತಿಳದಾವ
ಒಳ್ಳೆದು ಒಳ್ಳೆದು ಅಂದಾನೆ ನಾನು ಬರುವರಿಗ ಅಂದಾನ
ನಾನು ಬರುವರಿಗಲ್ಲೇಳ ಬದುಕ ಯಾರ ಕಾಯಿದಾರ
ಬದುಕ ಯಾರು ಕಾಯಿದಾರೆ ಬಾಳುವೆ ಯಾರು ಕಾಯಿದಾರ
ನೀನು ಬರುವರಿಗಲ್ಲಪ್ಪ ನಾನೇ ಕಾಯಿತೀನಿ ಅಂದಾನ
ನಾನೇ ಕಾಯತೀನಿ ಅಂದಾನೆ ನಾನೆ ಇರತೀನಿ ಅಂದಾನ
ಕೈಯ್ಯಾಗ ಬಡಗಿ ಹಿಡದಾನ ಮಾಹಾದೇವ ಕಡಿಗಿ ನಿಂತಾನ
ಮಹಾದೇವ ಕಡಿಗಿ ನಿಂತಾನ ಕುರಿಯ ಕಾಯತಿದ್ದಾನ
ಗುಡ್ಡಕ ಹೋಗುತಾನೇನ ಗುಂಡಿನ ಮ್ಯಾಲೆ ಕುಂತಾನ
ದೊಡ್ಡ ಬಂಡಿ ವಳಗೇನ ಡಬ್ಬುಣ ಪಿಂಡ ಹೊಗಿಯೇನ
ಡಬ್ಬುಣ ಪಿಂಡ ಹೊಗಿಯೇನ ಹೊಗಿಯಾ ಕಾಣುತಾವೇನ
ಹೊಗಿಯ ಕಾಣುತಾವೇನ ಗುಂಡ ಇಳಿಯುತಾನೇನ
ಗುಂಡ ಇಳಿಯುತಾನೇನ ಮ್ಯಾಲನಾಸಿ ಬಂದಾನ
ಏಳ ಗಜದ ಕಲ್ಲೇನ ಈಡ ಬಾಗಲ ಇದ್ದಾವ
ಈಡ ಬಾಗಲಿದ್ದಾರ ಬಟ್ಟಲಿ ಹೋಳಮಾಡ್ಯಾನ
ಬಟ್ಟಲಿ ಹೋಳ ಮಾಡ್ಯಾನೆ ಒಳಗ ಹೆಣ್ಣಮಗಳೇನ
ಹೆಣ್ಣುಮಗಳ ಮೌವ್ವದಗೊಂಬಿ ಬಯಲಿಗ ಬರುವುತಾಳೇನ
ಯಾವ ದೇಶದ ಅರಸರ ಎಲ್ಲಿಂದ ಬಂದಿದಿ ಅಂದಾಳ
ನಮ್ಮ ತಆಯಿ ಬಂದಾರ ನಿನ್ನಗ ನುಂಗ್ಯಾಳಂದಾಳ
ಹೊತ್ತನಾಗ್ಯಾವಂದಾಳೆ ಯಾಳ್ಯಾನಾದವಂದಾಳ
ಯಾರ ಬರಲೇಳು ಅಂದಿದ್ದ ತಾಯಿ ಬರಲೇಳು ಅಂದಿದ್ದ
ನನಗೆ ಬೆಂಕಿ ಕೊಡಬೇಕ ಕೊಬ್ಬರಿ ಕೊಡಬೇಕಂದಾನ
ಬೆಂಕಿ ಕೊಬ್ಬರಿ ಕೊಟ್ಟರ ನಿನಗೂ ಪುಣ್ಯಬಂದಾವ
ಒಳ್ಳೆದು ಒಳ್ಳೇದಂದಾಳೆ ಹೊರಳಿ ಓಡಿ ಹೋದಾಳ
ಹೊರಳಿ ಗವಿಯಕ ಹೋದಾ ಬೆಂಕಿ ತರುವುತಾಳೇನ
ವಜ್ರ ವೈಡೂರ ಹಾಕೇನೆ ಮುತ್ತು ಮಾಣಿಕ ಹಾಕ್ಯಾರ
ಮುತ್ತು ಮಾಣಿಕ ಹಾಕ್ಯಾರ ಮಾಲಿಗ ಮುತ್ತ ಸುರವ್ಯಾರ
ಮಾಲಿಗಿ ಮುತ್ತ ಸುರುವ್ಯಾರ ತೊಂಟೆಂಬುದು ರಾಕ್ಷಸ
ರಾಕ್ಷಸ ಬರುವ ಯಾಳ್ಯಾಕೆ ಬೆಂಕಿ ಅಡ್ಡ ತಂದಾಳ
ಬೆಂಕಿ ಕೊಡುವುತಾಳೇನ ಕೊಬ್ಬರಿ ಕೊಡುವುತಾಳೇನ
ಕೊಬ್ಬರಿ ಕೊಟ್ಟ ಯಾಳ್ಯಾಕೆ ಏನಂದಾಡತಾರೇನ
ಬೆಂಕಿ ಕೊಟ್ಟ ಯಾಳ್ಯಾಕ ಏನಂದಾಡತಾರೇನ
ಬೆಂಕಿ ವೈತೀನಿ ಅಂದಾನೆ ಖೊಬ್ಬರಿ ವೈತೀನಿ ಅಂದಾನೆ
ಬಾರೋ ಬಾರೋ ಮಾರಾಯ ನೀಯೇನ ಮಾಡತೀದಿ ಅಂದಾಳ
ನಮ್ಮ ಕುರಿಯ ವಳಗೇನ ಹಸಿಯ ಹಾಲನಿದ್ದಾವ
ಹಸಿಯ ಹಾಲ ಇದ್ದಾವ ಬಿಸಿಯ ಗಿಣ್ಣ ಮಾಡೇವ
ಬಿಸಿಯ ಗಿಣ್ಣ ಮಾಡೇವ ಊಟ ನಾವು ಮಾಡೇವ
ಹೆಣಮಗಳ ಮೌವದ ಗೊಂಬಿ ನುಡದಾಳೆ ಮಾತಾಡ್ಯಾಳ
ನೀವ ಊಟ ಮಾಡಿದರ ಖೊಬ್ಬರಿ ವಳಗ ಅಂದಾಳ
ಖೊಬ್ಬರಿ ವಳಗನಲ್ಲಪ್ಪ ನೀರ ಹಾಕಲಿ ಬಾರದ
ನೀರ ಹಾಕಲಿ ಬಾರದ ಉಳದ ಪರಸದಲ್ಲೇಳ
ಉಳದ ಪರಸದಲ್ಲಪ್ಪ ನನ್ನಗ ತರಬೇಕಂದಾಳ
ಒಳ್ಳೆದು ಒಳ್ಳೆದು ಅಂದಾನೆ ಪದುಮಗೊಂಡ ಹಿಡದಾನ
ಬೆಂಕಿ ಕೈಯಾಗ ಹಿಡದಾನೆ ಖೊಬ್ಬರಿ ಕೈಯಾಗ ಹಿಡದಾನ
ಗುಂಡ ಹಿಡಿಯುತಾನೇನ ಗುಡ್ಡ ಇಳಿಯುತಾನೇನ
ಬಯಲಿಗ ಬರುವುತಾನೇನ ಕುರಿಯ ಬಲ್ಲಿಗ ಬಂದಾನ
ಕುರಿಯ ಬಲ್ಲಿಗ ಬಂದಾನೆ ಬೆಂಕಿ ಇಳಿಯುತಾನೇನ
ಬೆಂಕಿ ತರುವುತಾನೇನ ಖೊಬ್ಬರಿ ಕೈಯಾಗ ತಂದಾನ
ಮೂರ ಕಣ್ಣಿನ ಮುಕ್ಕಣ್ಣ ಏನಂದಾಡುತಾನೇನ
ಏನಂದಾಡುತಾನೇನ ಏನಂದೇಳುತ್ತಿದ್ದನೆ
ಮುಕ್ಕಣ್ಣ ಶಿವರಾಯನ ಚಂದರಗಿಂಡಿಯ ಹಿಡಿಯಪ್ಪ
ಚಂದರಗಿಂಡಿಯ ಹಿಡಿಯಪ್ಪ ಪದುಮಾಗೊಂಡ ಹಿಡದಾನ
ಕೈಯಾಗ ಖೊಬ್ಬರಿ ಹಿಡದಾನ ತೆಳಗೆ ಕೊಡುತಾನೇನ
ಎರಡು ತೊಡಿಯ ನಡುವೇನ ಕೊಬ್ಬರಿ ಇಡುವುತಾನೇನ
ಖೊಬ್ಬರಿ ಇಡುವುತಾನೇನ ಬಲಗೈಲಿ ಕಾಲ ಹಿಡಿದಾನ
ಎಡಗೈ ಕೆಚ್ಚಲದೊಳಗೇನ ಕೈಯ ಹಾಕುತಾನೇನ
ಎರಡು ಕೈಯಲಿಂದೇನ ಹಾಲ ಹಿಂಡುತಾನೇನ
ಹಾಲ ಹಿಂಡುತಾನೇನ ಮೂರ ಕುರಿಗೋಳು ಹಿಂಡ್ಯಾನ
ಮೂರು ಕುರಿಗೋಳು ಅಲ್ಲಪ್ಪ ಮುಕ್ಕಣ್ಣ ಶಿವರಾಯ ಹಿಂಡ್ಯಾನ
ತಾನೇ ಕಾಯಿದ ಕುರಿಗೋಳು ಖುನಾಹಿಡದ ಹಿಂಡ್ಯಾನ
ಬಾರೋ ಬಾರೋ ಪದಮಣ್ಣ ನೀನು ಹಿಂಡಲಿ ಬೇಕಯ್ಯ
ಪದುಮಗೊಂಡನ ಕೈಯಾಗೆ ಖೊಬ್ಬರಿ ಕೊಡುವುತಾನೇನ
ಖೊಬ್ಬರಿ ಕೊಡುವುತಾನೇನ ಮುಕ್ಕಣ್ಣ ಶಿವರಾಯನ
ಮುಕ್ಕಣ್ಣ ಶಿವರಾಯನ ಪದುಮಗ ಹೇಳುತಾನೇನ
ಹಂಡಬಂಡ ಕುರಿಯೇನ ಯಾವಲಿ ಆದ ನೋಡಪ್ಪ
ಯಾವಲಿ ಆದ ನೋಡಪ್ಪ ಕಣ್ಣ ಮುಸುಕ ಕುರಿಯೇನ
ಪದುಮಗೊಂಡನಲ್ಲೇಳ ನಾಯೇನ ಬಲ್ಲೇನಂದಾನ
ಕಡಿಗಿ ನಿಂತಾದಂದಾನ ಮಹಾದೇವ ಓಡಿ ಹೋದನ
ಮಹಾದೇವ ಹೋಗಿ ಹಿಡಿದಾನ ಕಳ್ಳ ಬಂದ ಕುರಿಯೇನ
ಕಳ್ಳ ಬಂದ ಕುರಿಯೇನ ತೆಕ್ಕಿಲಿ ಹೋಗಿ ಹಿಡದಾನ
ಪದುಮಾಗೊಂಡನಲ್ಲೇಳ ಬಲಗೈ ಖೊಬ್ಬರಿ ಹಿಡದಾನ
ಎಡಗೈ ಕಾಲಹಿಡಿದಾನೆ ತೆಳಗ ಕುಂದ್ರತಾನೇನ
ಮಳಕಾಲಗೊಳಗನಲ್ಲಪ್ಪ ಖೊಬ್ಬರಿ ಹಿಡಿಯುತಾನೇನ
ಬಲಗೈ ಕಾಲ ಹಿಡಿದಿದ್ದ ಎಡಗೈ ಕಾಲ ಹಿಡಿದಿದ್ದ
ಎಡಗೈ ಕಾಲ ಬಿಟ್ಟಿದ್ದ ಕೆಚ್ಚಲದೊಳಗೆ ಕೈಯ ಹಾಕಿದ್ದ
ಕೆಚ್ಚಲದೊಳಗೆ ಕೈಯ ಹಾಕಿ ಎರಡು ಕೈಲಿ ಹಿಂಡ್ಯಾನ
ಐದ ಕುರಿಗೋಳು ಅಲ್ಲಪ್ಪ ಇಬ್ಬರು ಹಿಂಡುತಾರೇನ
ಮುಕ್ಕಣ್ಣ ಶಿವರಾಯನ ಪದುಮಾಗ ಹೇಳುತಾನೇನ
ಕುರಿಯಾ ಖೂನ ಮಾಡ್ಯಾನೆ ಮರಿಯಾ ಖೂನ ಮಾಡ್ಯಾನ
ಹಾಲ ಹಿಂಡದು ಹೇಳ್ಯಾನ ಹರವಿ ತುಂಬದು ಹೇಳ್ಯಾನ
ಮುಕ್ಕಣ್ಣ ಶಿವರಾಯನ ಬಯಲಿಗ ಬರುವುತಾನೇನ
ಬಾರೋ ಬಾರೋ ಪದುಮಣ್ಣ ಬೆಂಕಿಯ ಮ್ಯಾಲ ಇಡಬೇಕ
ಖೊಬ್ಬರಿ ತರುವುತಾನೇನ ಬೆಂಕಿಯ ಮ್ಯಾಲೆ ಇಟ್ಟಾರ
ಬೆಂಕಿಯ ಮ್ಯಾಲೆ ಇಟ್ಟಾನ ಹಸಿಯ ಹಾಲ ಹೋದವ
ಹಸಿಯ ಹಾಲ ಹೋದಾವೆ ಬಿಸಿಯ ಗಿಣ್ಣನಾದವೆ
ಬಿಸಿಯ ಗಿಣ್ಣನಾದವ ಮುಕ್ಕಣ್ಣ ಶಿವರಾಯನ
ಬಾರೋ ಬಾರೋ ಶಿವರಾಯ ಊಟ ಮಾಡೇಳು ಅಂದಾನ
ಮುಕ್ಕಣ್ಣ ಶಿವರಾಯನೆ ನುಡದಾನೆ ಮಾತಾಡ್ಯಾನ
ಬಾರೋ ಬಾರೋ ಏಯಪ್ಪ ನನ್ನಗ ಹಸುವನಿಲ್ಲಯ್ಯ
ಬಾರೋ ಬಾರೋ ಪದುಮಣ್ಣ ನನಗೆ ಹಸುವನಾಗಿಲ್ಲ
ಪದುಮಾಗೊಂಡನಲ್ಲಪ್ಪ ಏನಂದಾಡುತಾನೇನ
ನನಗ ಯಾಕಬೇಕಪ್ಪ ನನಗ ಹಸುವನಿಲ್ಲಯ್ಯ
ನನಗೆ ಹಸುವನಿಲ್ಲಪ್ಪ ಹ್ಯಾಂಗ ಮಾಡಲಿ ನೋಡಯ್ಯ
ಮಾದೇವ ಒಲ್ಲೇನಂದಾರೆ ಮುಂದಕ ಹೋಗತೀನಿ ಅಂದಾನ
ನೀನು ಉಂಡರಲ್ಲಪ್ಪ ನಾನು ಉಣತಿನಿ ಅಂದಾನ
ಇಬ್ಬರು ಕೂಡಿ ಕುಂತಾರೆ ಖೊಬ್ಬರಿ ಮುಂದ ಇಟ್ಟಾರ
ಖೊಬ್ಬರಿ ಮುಂದ ಕುಂತಾರೆ ಕೈಯಾಗ ಹಿಡಿಯತಾರೇನ
ಕೈಯಾಗ ಹಿಡಿಯುತಾರೇನ ಊಟ ಮಾಡುತಾರೇನ
ಪದುಮಗೊಂಡ ಮಾದೇವ ಊಟ ಮಾಡುತಾರೇನ
ಖೊಬ್ಬರಿ ವಳಗ ಮಾರಾಯ ಒಂದೇ ತುತ್ತ ಉಳದಾವ
ಒಂದೇ ತುತ್ತ ಉಳದಾವೆ ನೀರ ಕುಡಿಯುತಾರೇನ
ಸೀತಾಳ ಶಿವಮಜ್ಜಲ ನೀರ ಕುಡಿಯುತಾರೇನ
ಬೆಂಕಿ ನೋಡತಾರೇನ ಖೊಬ್ಬರಿ ಕೈಯಾಗ ಹಿಡದಾರ
ಕೊಟ್ಟು ಬರತೀನಿ ಅಂದಾನೆ ಕುರಿಯಾ ಕಾಯಬೇಕಂದಾನ
ಮಹಾದೇವ ಹೇಳುತಾನೇನ ನಾನು ಕಾಯಿತೀನಿ ಅಂದಾನ
ನೀನು ಹೋಗಿ ಬರುತನಕ ಕುರಿಯ ಕಾಯಿತೀನಿ ಅಂದಾನ
ಕೈಯಾಗ ಖೊಬ್ಬರಿ ಹಿಡದಾನ ಗುಡ್ಡಕ ಹೋಗುತಾನೇನ
ಗುಡ್ಡಕ ಹೋಗುತಾನೇನ ಗವಿಯ ಮುಂದ ನಿಂತಾನ
ಗವಿಯ ಮುಂದ ನಿಂತಾನ ನಾರಿಗ ಕರಿಯುತಾನೇನ
ಹೆಣ್ಣು ಮಗಳ ಮೌವ್ವದ ಗೊಂಬಿ ಓಡಿ ಬರುವುತಾಳೇನ
ಓಡಿ ಬಂದ ಯಾಳ್ಯಾಕ ಖೊಬ್ಬರಿ ಕೊಡುವುತಾನೇನ
ಖೊಬ್ಬರಿ ಕೈಯಾಗ ಹಿಡಿದಾಳ ಕೈಯಾಗ ಹಿಡಿಯುತಾಳೇನ
ಒಂದೇ ತುತ್ತ ಪರಸಾದ ತಾನೆ ಊಟ ಮಾಡ್ಯಾಳೆ
ಊಟ ಮಾಡುತಾಳೇನ ಹ್ಯಾಂಗ ಮಾಡಬೇಕಂದಾಳ
ಹಿಂತ ಪಾಂಚಾಮೃತೇನ ಎಲ್ಲಿ ಸಿಗಬೇಕಂದಾಳ
ಎಲ್ಲಿ ಸಿಗಬೇಕಂದಾಳೆ ನಮ್ಮಗೆಲ್ಲಿ ದೊರತಾವಂದಾಳ
ಹಿಂತ ಪಾಂಚಾಮೃತೇನ ಎಲ್ಲಿ ಸಿಗಬೇಕಂದಾಳ
ಎಲ್ಲಿ ಸಿಗಬೇಕಂದಾಳೆ ನಮ್ಮಗೆಲ್ಲಿ ದೊರತಾವಂದಾಳ
ಹಿಂತ ಪಂಚಾಮೃತ ಇವನಿಗೆ ಬಿಡಬಾರದಂದಾಳ
ಇವನಿಗೆ ಬಿಡಬಾರದಂದಾಳೆ ಬೆನ್ನು ಹತ್ತುತಾಳೇನ
ಪದುಮಾಗೊಂಡ ಮುಂದೇನ ಶಿವಲಿಂಗಮ್ಮ ಹಿಂದೇನ
ಶಿವಲಿಂಗಮ್ಮ ಹಿಂದೇನ ಪದುಮಗೊಂಡ ಮುಂದೇನ
ಗುಡ್ಡ ಇಳಿಯುತಾರೇನ ಕೊಳ್ಳ ಇಳಿಯುತಾರೇನ
ಕೊಳ್ಳ ಇಳಿಯುತಾರೇನ ಗುಡ್ಡ ಇಳಿಯುತಾರೇನ
ಬಯಲಿಗೆ ಹೋಗುವ ಯಾಳ್ಯಾದಾಗ ರಕ್ಕಸ ಬರುವುತಾವೇನ
ರಾಕ್ಷೇಸ ಬಂದಾದ ಗುಡ್ಡ ಏರಿ ನಿಂತಾದ
ಗುಡ್ಡ ಏರಿ ನಿಂತಾದ ಬಾಯಿ ತೆರಿಯುತಾದೇನ
ಏಳುಕೊಳ್ಳ ದಾಟ್ಯಾರ ಏಳ ನೆಲಿಯ ದಾಟ್ಯಾರ
ಕೊಳ್ಳ ಕೆದರುತಾದೇನ ಬಂಡಿ ಒಗಿಯುತಾದೇನ
ಬಾಯಿ ತೆರದಾದಲ್ಲಪ್ಪ ಕೈಯ ಎತ್ತಿ ಹಿಡದಾದ
ಕೈಯ ಎತ್ತಿ ಹಿಡದಾದ ಓಡಿ ಹೋಗುತಾದೇನ
ಮೂರ ನಂಬರ ಬಟ್ಟೇನ ಎತ್ತಿ ಹಾಕುತಾದೇನ
ಪದುಮಗೊಂಡ ಮುಂದೇನ ಶಿವಲಿಂಗಮ್ಮ ಹಿಂದೇನ
ಹಿಂದ ಮುಂದನಾಗ್ಯಾರ ಕುರಿಯ ಬಲ್ಲಿ ಓಡ್ಯಾರ
ಕುರಿಯ ಬಲ್ಲಿನಲ್ಲಪ್ಪ ರಾಕ್ಷಸ ಓಡಿ ಬಂದಾದ
ಕಣ್ಣು ಮುಚ್ಚುತಾದೇನ ಬಾಯಿ ಕಿರಿಯತಾದೇನ
ನಡುವ ಕುರಿಯಾಗ ಹೋಗ್ಯಾನ ಮರಿಯಾ ಹಿಂಗಾಲ ಹಿಡದಾನ
ಮರಿಯ ಹಿಂಗಾಲ ಹಿಡದಾನೆ ಜಾಡಿಸಿ ವಗಿಯುತಾನೇನ
ಜಾಡಿಸಿ ವಗಿಯುತಾನೇನ ರಾಕ್ಷಸ ಬಾಯಿ ಮ್ಯಾಲೇನ
ರಾಕ್ಷಸ ಬಾಯಿ ಮ್ಯಾಲೇನ ಮರಿಯ ಬೀಳುತಾದೇನ
ನನಗ ದೊರತಾರಂದಾದೆ ನನ್ನಗ ಸಿಕ್ಕಾರಂದಾದ
ನನ್ನಗ ಸಿಕ್ಕಾರಂದಾದೆ ಮರಿಯಾ ನುಂಗುತಾದೇನ
ಬಾಯಿ ತೆರದ ಬಂದಾನೆ ಕಣ್ಣ ಮುಚ್ಚಿ ಬಂದಾನ
ಮರಿಯಾ ತಿನ್ನುತಾದೇನ ಪದುಮಾಗೊಂಡ ನೋಡ್ಯಾನ
ನನಗ ಹೆಣ್ಣ ಕೊಟ್ಟೇನ ನಿನಗ ಮರಿಯ ಬಿಟ್ಟೇನ
ಮಾನ ಕೊಟ್ಟೇನಂದಾನ ಮರಿಯಾದಿ ಕೊಟ್ಟೇನಂದಾನ
ನಿನ್ನ ಹೊಟ್ಟೆ ವಳಗೇನ ಹಸಿದು ತಿಂದ ಮ್ಯಾಲೇನ
ಹಸಿದ ತಿಂದರಲ್ಲೇಳ ಬಿಸಿದಾಗಲಿ ಅಂದಾನ
ಆಶೀರ್ವಾದ ಮಾಡ್ಯಾನ ತ್ವಾಳನಾಗಿ ಕುಂತಾನ
ಹಗಲು ಬರಬೇಕಂದಾನ ರಾತುರಿ ಬರಬೇಕಂದಾನ
ವಚನ ಕೊಡುವುತಾನೇನ ತ್ವಾಲನಾಗಿ ಹೋದವೆ
ತ್ವಾಳನಾಗಿ ಹೋದಾಗ ಪದುಮಾಗೊಂಡ ಹೇಳ್ಯಾನ
ಮುಕ್ಕಣ್ಣ ಶಿವರಾಯನ ಏನಂದಾಡುತಿದ್ದಾನ
ಹೆಣ್ಣ ಮಗಳು ವೌವ್ವದ ಗೊಂಬಿಗ ಕರಕೊಂಡು ಬಂದಿದಿ ಅಂದಾನ
ಕರಕೊಂಡು ಬಂದಿದಿ ಅಲ್ಲಪ್ಪ ಹ್ಯಾಂಗ ಮಾಡಬೇಕಂದಾನ
ಶಿವಲಿಂಗಮ್ಮನಲ್ಲೇಳ ಪದುಮಾಗೊಂಡಗಂದರ
ಪದುಮಾಗೊಂಡಗಲ್ಲೇಳ ಲಗ್ಗನ ಮಾಡಬೇಕಂದಾರ
ಹಿಂತ ಮಾತನಲ್ಲಪ್ಪ ಮಾಹಾದೇವ ಹೇಳುತಾನೇನ
ಮಹಾದೇವಗ ಹುಡುಕುತಲ್ಲೇಳ ಪಾರ್ವತಿ ಬರುವುತಾಳೇನ
ವಿಷ್ಣು ಬರುವುತಾನೇನ ಬ್ರಹ್ಮ ಬರುವುತಾನೇನ
ರುದ್ದರ ಬರುವುತಾನೇನ ಮಹೇಶ್ವರ ಬಂದಾನ
ಐದ ಮಂದಿನಾದರ ಪಾರ್ವತಿ ಬರುವುತಾಳೇನ
ಪಾರ್ವತಿ ಬರುವುತಾಳೇನ ಕಳಸ ಹಿಡಿಯುತಾಳೇನ
ನಾಲ್ಕು ಮೂಲಿಗಳಲ್ಲೇಳ ನಾಲ್ಕು ಮಗಿಯ ಇಟ್ಟಾರ
ನಾಲ್ಕು ಮಗಿಯ ಇದ್ದರ ಸುರಗಿ ಸುತ್ತಬೇಕಂದಾರ
ಸುರಗಿ ಸುತ್ತ ಬೇಕಂದಾರ ನೂಲ ಸಿಗಲು ಇಲ್ಲೇನ
ನೂಲ ಸಿಗಲಿಲ್ಲೇಳ ಅಳ್ಳಿ ದೊರಕಲಿಲ್ಲೇನ
ಅಳ್ಳಿ ದೊರಕಲಿಲ್ಲೇನ ಕುರಿಯ ಉಣ್ಣೆ ತಂದಾರ
ಕುರಿಯ ಉಣ್ಣೆ ತಂದಾರೆ ಮರಿಯ ಉಣ್ಣೆತಂದಾರ
ಬಿರಕಿ ಮಾಡುತಾರೇನ ನೂಲ ಮಾಡುತಾರೇನ
ನೂಲ ಮಾಡುತಾರೇನ ಸುರಗಿ ಸುತ್ತುತಾರೇನ
ಶಿವಲಿಂಗಮ್ಮನ ಲಗ್ಗನಕ ಉಣ್ಣೆ ಕಂಕಣಾದವ
ಉಣ್ಣಿ ಕಂಕಣಾದವೆ ಸುರಗಿ ಸುತ್ತುತಾರೇನ
ಕೈಯಾಗ ಉಣ್ಣೆ ಕಟ್ಯಾನೆ ಮುಂಗೈಗೆ ಸುರಗಿ ಕಟ್ಯಾನ
ಸುರಗಿ ಉಣ್ಣೆ ಕಟ್ಯಾನೆ ಮುಂಗೈಗ ಸುರಗಿ ಕಟ್ಯಾನ
ಸುರಗಿ ಸುತ್ತುತಾರೇನ ಕೈಗೆ ಕಟ್ಟುತಾರೇನ
ಕೈಗಕಟ್ಟುತಾರೇನ ತಾಯಿ ಮಕ್ಕಳು ಮಿನದಾರ
ಐದು ಮಂದಿ ಕೂಡ್ಯಾರ ಲಗ್ಗನ ಮಾಡುತಾರೇನ
ಲಗ್ಗನ ಮಾಡುತಾರೇನ ಉಣ್ಣಿ ಕಂಕಣದಾರ
ಪದುಮಾವತಿಯನಲ್ಲೇಳ ಪದುಮಗೊಂಡನಂದರ
ಶಿವಲಿಂಗಮ್ಮಗಲ್ಲೇಳ ಕಾಲುಂಗರ ಇಡುವುತಾರೇನ
ಕಾಲ ಪಿಲ್ಯಾನಿಟ್ಟಾರೆ ಕೈಗಿ ಬಳಿಯಾನಿಟ್ಟಾರ
ತಾಳಿ ಕಟ್ಟುತಾರೇನ ಮುತ್ತ ಇಡುವುತಾರೇನ
ಮದುಮಗಳ ಆಗುತಾಳೆನ ಪದುಮಾಗೊಂಡನ ಸಂಗಟ
ಲಗ್ಗನಾಗುತಾಳೇನ ಮುಕ್ಕಣ್ಣ ಶಿವರಾಯನ
ಜತಿಯಾನಾದಿರಿ ಅಂದಾನ ಜೋಡನಾದಿಸಿ ಅಂದಾನ
ಹೋಗಿ ಬರತೀವಿ ಅಂದಾರೆ ಬೇಗ ಬರತೀವಿ ಅಂದಾರ
ಶಿವಲಿಂಗಮ್ಮನಂದರ ಪದುಮಾಗೊಂಡನಂದಾರ
ಹಿಂದ ಮುಂದನಾಗ್ಯಾರೆ ಕುರಿಯಾ ಕಾಯುತಿದ್ದರ
ಹೊತ್ತು ಮುಣಗಿದಲ್ಲಿಗ ವಸ್ತಿ ಮಾಡುತಾರೇನ
ಯಾಳ್ಯಾ ಗಳಿಯುತಾರೇನ ಹೊತ್ತು ಗಳಿಯುತಾರೇನ
ಇಲ್ಲಿಗ ಇದು ಒಂದು ಸಂದೇನ ಹಾಡಿದರ ಪದ ಮುಂದೇನ
ಕಳಸವಿಟ್ಟರ ಕವಿತ ಕಟ್ಯಾರ ಹೊನ್ನಜಗ್ಗುನಿ ಗೌಡರೊ
ದೇವರ ಬಂದಾರ ಬನ್ನೀರೆ !