ಮಡ್ಡ್ಯಾಗ್ಹುಟ್ಯಾನಂದಾನೆ ಮಡ್ಡಪ್ಪನಂತ ಕರದಾನ :

ಶಿವನೆ ನಮ್ಮಯ್ಯ ದೇವರು ಬಂದಾರ ಬನ್ನೀರೆ
ಸ್ವಾಮಿ ನಮ್ಮಯ್ಯ ದ್ಯಾವರು ಬಂದಾರ ಬನ್ನೀರೆ
ದೇವಿ ಧರ್ಮರ ಹಾಡೇನೆ ಯಾವ ಠಾಣೆದ ಮ್ಯಾಲೇನ
ಯಾವ ಜಾಗದ ಒಳಗೇನ ಬಂಕಾಪುರದ ಭೂಮ್ಯಾಗ
ಬಂಕಾಪುರದ ಭೂಮ್ಯಾಗೆ ಮುದ್ದಪ್ಪ ಮುದ್ದಗೊಂಡನ
ಮುದ್ದವ್ವ ಮುದ್ದಗೊಂಡನೆ ಅವರ ಹೊಟ್ಟಿಲಿ ಮಕ್ಕಳ
ಆದಿಯಗೊಂಡ ಅನಂತಗೊಂಡ ಸಿದ್ದಗೊಂಡನಿದ್ದಾರ
ಪದುಮಾಗೊಂಡನ ಮಡದೇನ ಸಿದ್ಧಮ್ಮ ಮನಿಯಾಗ ಉಳದಾಳ
ಆದಿಯಗೊಂಡನ ಮಡದೇನ ಸಿದ್ಧಗೊಂಡನ ಮಕ್ಕಳ
ಮೂರ ಮಂದಿ ಮಕ್ಕಳೆ ಇವರ ಹೊಟ್ಟಿಲಿ ಹುಟ್ಟಿದವರ
ಇವರ ಹೊಟ್ಟಿಲಿ ಹುಟ್ಟಿದವರ ಕಂದನ ಕುಲಗೋಳು ಆದಾವ
ಕಂದನ ಕುಲಗೋಳು ಆದಾವೆ ಪದುಮಾಗೊಂಡನ ಹೊಟ್ಟೇಲೆ
ಪದುಮಾಗೊಂಡನ ಹೊಟ್ಟಿಲಿ ಹುಟ್ಟಿದ ಮಕ್ಕಳ ನೊಡಯ್ಯ
ಅಡವ್ಯಾಗೆ ಕುರಿಯಾ ಸಿಕ್ಕವೆ ಪದುಮಾಗೊಂಡಗಂತಾರ
ಕುರಿಯಾ ಸಿಕ್ಕವಲ್ಲಪ್ಪ ಕುರುಬರಾದೇವೇಳಂದಾರ
ಮೂರು ಲೋಕದ ವಡಿಯನೆ ಮುಕ್ಕಣ್ಣ ಶಿವರಾಯನ
ಮುಕ್ಕಣ್ಣ ಶಿವರಾಯನೆ ಪದುಮಾಗೊಂಡಗಲ್ಲೇಳ
ಜಕ್ಕಪೂರದ ರಾಜನ ಮಗಳು ಪದುಮಾಗೊಂಡಗ ಕೊಟ್ಟಾರ
ಪದುಮಾಗೊಂಡಗ ಕೊಟ್ಟಾರೆ ಶಿವನೆ ನಮ್ಮನ್ನ ಇಟ್ಟಾರ
ಎರಡು ತಿಂಗಳ ಕೂಸೀನೆ ರಾಕ್ಷಸಿ ಬಂದು ಒಯ್ತಾರ
ಜಕ್ಕಪೂರದ ಅರಸನ ಮಗಳು ಶಿವಲಿಂಗಮ್ಮನಿದ್ದಾಳ
ರಕ್ಕಸಿ ಕಣ್ಣಬಿಟ್ಟಾದೆ ಜೋಪಾನ ಮಾಡ್ಯಾಳೇನಯ್ಯ
ಲಗ್ಗನ ಮಾಡಿ ಹೋಗರೆ ಪದುಮಾಗೊಂಡಗಲ್ಲೇಳ
ಶಿವಲಿಂಗಮ್ಮನಿದ್ದಾಳೆ ಪದುಮಾಗೊಂಡನಿದ್ದಾನ
ಹೊನ್ನಿನ ಸಾವಿರ ಭಾಗ್ಯೆನೆ ಭಾಗ್ಯದ ಕಾವಲು ಮಾಡ್ಯಾರ
ಭಾಗ್ಯದ ಕಾವಲು ಮಾಡ್ಯಾರೆ ಹೊತ್ತ ಮುಣಗಿದಲ್ಲಿಗೆ
ಹೊತ್ತಮುಣಗಿದಲ್ಲಿಗೆ ವಸ್ತಿ ಮಾಡುತಾರೇನ
ಸಂಬ ಕೊಟ್ಟು ಮರತಾನೇ ದೇವರು ಕೊಟ್ಟು ಮರತಾನ
ದೇವರ ಕೊಟ್ಟು ಮರತಾನೆ ಶಿವಲಿಂಗಮ್ಮ ಗರ್ಭಿಣಿ
ಒಂದು ತಿಂಗಳಾದವೆ ಎರಡ ತಿಂಗಳಾದವ
ಮೂರು ತಿಂಗಳಾದವೆ ನಾಲ್ಕು ತಿಂಗಳಾದವ
ಐದು ತಿಂಗಳಾದವೆ ಆರ ತಿಂಗಳಾದವ
ಅಡವಿ ಗಿಡದ ವಳಗೇನೆ ಪದುಮಾಗೊಂಡನಿದ್ದಾರ
ಪದುಮಾಗೊಂಡನಿದ್ದಾರೆ ದಿನಮಾನ ಆಗುತಾವೇನ
ಒಂಬತ್ತು ತಿಂಗಳಾದವೆ ಒಂಬತ್ತ ದಿನಮಾನಾದಾವ
ಕಾಡಿನೊಳಗೆ ಇದ್ದಾರೆ ಬಾಳುವಿ ಮಾಡುತ್ತಿದ್ದಾರ
ತಾಯಿತಂದಿ ಇಲ್ಲೇನೆ ಬಂದುಬಳಗ ಇಲ್ಲೇಳ
ಬಂಗು ಬಳಗ ಇಲ್ಲೇನ ಏನೇನ ಮಾಡಬೇಕಂದಾರ
ಶಿವಲಿಂಗಮ್ಮನಲ್ಲೇಳ ಆಡುವ್ಯಾಗ ಬಾಣುತಿ ಆದಾಳ
ಅಡವ್ಯಾಗ ಬಾಣುತಿ ಆದಾಳೆ ಗಂಡಸಮಗನ ಹಡದಾಳ
ಗಂಡಸಮಗನ ಹಡದಾಳೆ ದೊಡ್ಡವನಾಗುತಾನೇನ
ಎರಡು ದಿನಮಾನ ಆದಾವೆ ಮೂರದಿನಮಾನಾದವ
ನಾಲ್ಕುದಿನಮಾನಾದವೆ ಐದು ದಿನಮಾನಾದವ
ಆರು ತಿಂಗಳಾದಾವೆ ಏಳು ತಿಂಗಳಾದವ
ಹನ್ನೆರಡು ದಿನದ ವಳಗೇನೆ ತೊಟ್ಟಿಲದೊಳಗೆ ಹಾಕ್ಯಾರ
ಶಿವಲಿಂಗಮ್ಮನಲ್ಲೇಳ ಹುಟ್ಟುಗಂಬಳಿ ಮಾಡ್ಯಾಳ
ಮೂರ ಮಳದ ಕಂಬಳೆ ಹುಟ್ಟಗಂಬಳಿ ಮಾಡ್ಯಾಳ
ಹುಟ್ಟಗಂಬಳಿ ಮಾಡ್ಯಾಳೆ ಮಡ್ಡಪ್ಪನಂತ ಹೆಸರೇನ
ಮಡ್ಡಪ್ಪನಂತ ಹೆಸರೇನ ಮಗನಿಗ ಇಡುವುತಾರೇನ
ಆಡುವ್ಯಾಗ ಹುಟ್ಯಾನಂದಾರೆ ಗಿಡದಾಗ ಹುಟ್ಯಾನಂದಾರ
ಮಡ್ಯಾಗ ಹುಟ್ಯಾನಂದಾರೆ ಗಿಡದಾಗ ಹುಟ್ಯಾನಂದಾರ
ಏಸುಬಗಿ ಮಾಡಿ ಕರದಾರೆ ಕಡಿಗಿ ಮಡ್ಡಪ್ಪನಂದಾರ
ಹುಟ್ಟುಗಂಬಳಿ ಮ್ಯಾಗೇನೆ ಮಡ್ಡಪ್ಪನಾಡುತಾನೇನ
ಅಡವಿ ವಳಗ ಯಾಳೇನ ಯಾಳ್ಯಗಳಿಯುತಾರೇನ
ಯಾಳ್ಯಾಗಳಿಯುತಾರೇನ ಹೊತ್ತುಗಳಿಯುತಾರೇನ
ಗಿಡದ ನೆಳ್ಳಿಗಲ್ಲಪ್ಪ ಮಡ್ಡಪ್ಪನ ಹಾಕುತಾರೇನ
ಹುಟ್ಟುಗಂಬಳಿ ಮ್ಯಾಲೇನ ಒಂದ ವರ್ಷಿನ ಕೂಸೀನ
ಒಂದು ವರ್ಷಿನ ಕೂಸೀನ ಮಲ್ಲನ ಮಲಗುಸುತಾರೇನ
ಮಲ್ಲನ ಮಲಗುಸುತಾರೇನ ಪದುಮಾಗೊಂಡನಂದಾರ
ಪದುಮಾಗೊಂಡನಲ್ಲೇಳ ಮುಂದಿನ ಕುರಿಯ ಹೋದಾನ
ಭೂಮಿ ತಾಯಿನಲ್ಲಪ್ಪ ಹಿಂದಿನ ಕುರಿಯಾಗ ನಡದಾಳ
ಹಿಂದಿನ ಕುರಿಯಾಗ ನಡದಾಳೆ ಯಾವ ದಿಕ್ಕಿಗಿ ಹೋಗ್ಯಾರ
ಹೊತ್ತಾನೆ ಗಮನಾದವೆ ಹೊತ್ತ ಹೋಗುತಾವೇನ
ಹಿಂದಿನ ಗಮನಾದವೆ ಹೊತ್ತ ಹೋಗುತಾವೇನ
ಹಿಂದಿನ ಮುಂದಿನ ಕುರಿಗೋಳು ಸಮಮಾಡಿ ಮುಂದಕ ಬಿಟ್ಟಾರ
ತಾಯೇಳೆ ಶಿವಲಿಂಗಮ್ಮ ಏನಂದಾಡುತಾಳೇನ
ಪುರುಷನ ಬಲ್ಲೇನಲ್ಲೇಳ ಕಂದನಾದಂತೆ ತಿಳಿದಾಳ
ಕಂದನಾದಂತ ತಿಳಿದಾಳೆ ಸುಮ್ಮನೆ ಹೋಗುತಾಳೇನ
ಪದುಮಾಗೊಂಡನಲ್ಲೇಳ ಸತಿಯಾಳ ಬಲ್ಲಿ ಅಂದಾನ
ಸತಿಯಾಳ ಬಲ್ಲಿ ಅಂದಾನೆ ಕಂದನಿರಬೇಕಂದಾನ
ಒಬ್ಬರ ಮಾತ ಒಬ್ಬರಿಗೆ ಇಬ್ಬರಿಗೆ ತಿಳಿದಿಲ್ಲಂದಾರ
ಒಬ್ಬರ ಮಾತ ಒಬ್ಬರಿಗೆ ಯಾರಿಗೆ ಗೊತ್ತನಾಗಿಲ್ಲ
ಯಾಳ್ಯಾಗೋಳು ಬಹಳಾದಾವೆ ಹೊತ್ತನೆ ಗಮನಾದವ
ಹೊತ್ತಮುಣಗುತಾವೇನೆ ಕತ್ತಲಾಗುತಾವೇನೆ
ಚಬ್ಬ ಹೊಡದು ನಿಂತಾವೆ ಇಚಿಯಾ ಕಡಿಗಿ ಮಡದೇನ
ಈಚೀಯ ಕಡಿಗಿ ಮಡದೇನೆ ಆಚಿಯ ಕಡಿಗಿ ಪುರುಷನ
ಪುರುಷನ ಬಲ್ಲಿ ನೋಡಯ್ಯ ನನ್ನ ಮಗನ ಇದ್ದಾನೆ
ಸತಿಯಾ ಬಲ್ಲಿ ಹಾನೇನ ನನ್ನ ಮಗನೆ ಇದ್ದಾನ
ರಾತರಿ ಹೊತ್ತನಾದಾವೆ ಗೊತ್ತು ಆಗಲಿಲ್ಲೇನ
ಗೊತ್ತು ಆಗಲಿಲ್ಲೇನ ಊಟಕ ಬರುವುತಾರೇನ
ಊಟಕ ಕುಂಡ್ರುತಾರೇನೆ ಏನಂದಾಡುತಾರೇನ
ಪದುಮಾಗೊಂಡಗಲ್ಲೇಳ ಶಿವಲಿಂಗಮ್ಮ ಕೇಳ್ಯಾಳ
ನನ್ನ ಮಗನ ಮಡ್ಡಪ್ಪ ಎಲ್ಲಿ ಮನಗ್ಯಾನಂದಾರ
ಎಲ್ಲಿ ಮನಗ್ಯಾನಂದಾರ ಎಲ್ಲಿ ಹೋಗ್ಯಾನಂದಾರ
ಪದುಮಾಗೊಂಡನಲ್ಲಪ್ಪ ಮಡದಿನ ಕೇಳುತಾನೇನ
ಮಡದೀನ ಕೇಳುತಾನೇನ ಮಡ್ಡಪ್ಪ ಎಲ್ಲಿ ಮಲಗ್ಯಾನ
ಮಡ್ಡಪ್ಪ ಎಲ್ಲಿ ಮನಗ್ಯಾನಂತ ಪದುಮಣ್ಣ ಕೇಳುತಾನೇನ
ನಾನು ನೋಡಿಲ್ಲಂದಾರೆ ಎಲ್ಲಿ ಉಳದಾನಂದಾರ
ಎಲ್ಲಿ ಹಾರ ಅಂದಾರೆ ನಾನೇ ನೋಡಿಲ್ಲಂದಾಳ
ನೆಳ್ಳಗ ಮನಗ್ಯಾನಂದಾರೆ ಕಂಬಳಿ ಹಾಕಿನಿ ಅಂದಾರ
ಕಂಬಳಿ ಮ್ಯಾಲ ಮನಗ್ಯಾನೆ ನಾನೇ ನೋಡಿನಿ ಅಂದಾರ
ಪದ್ಮಗೊಂಡನಲ್ಲೇಳ ನಾನು ನೋಡಿನಿ ಅಂದಾನ
ಯಾಳ್ಯಾಗೋಳು ಬಹಳಾದಾವೆ ಹೊತ್ತನೆ ಗಮನಾದವ
ಹಂತಯಾಳ್ಯಾದೊಳಗೇನೆ ಎಲ್ಲಿಗ ಹೋಗಬೇಕಂದಾರ
ಮಡದಿನ ಬಿಟ್ಟುಹೋದರ ಯಾವಾಗ ಸಿಗಬೇಕಂದಾರ
ಕುರಿಯಾ ಬಿಟ್ಟು ಹೋದರೆ ಎಲ್ಲಿಗ ಬರುತಾವಂದಾರ
ಅಂತುಹಿಂತೂನಲ್ಲೇಳ ಬೆಳಗಾನಾಗುತಾವೇನ
ಮಡ್ಡಪ್ಪ ನೋಡು ಶಿವಗೇನಿ ಎಲ್ಲಿಗ ಹೋಗುತಾನೇನ
ಒಂದು ಹರದಾರಿ ಮ್ಯಾಲೇನ ಗೌರಿ ಆಕಳ ಜಾಗೇನ
ಗೌರಿ ಆಕಳ ಜಾಗಕ ಮಡ್ಡಪ್ಪ ಹೋಗುತಾನೇನ
ಕಾಡಾಕಳ ಜಾಗಕ ಮಡ್ಡಪ್ಪ ಹೋಗುತಾನೇನ
ಕೈಯಾಗ ಕಂಬಳಿ ಹಿಡದಿದ್ದ ಹೆಗಲಿಗ ಹಾಕುತಾನೇನ
ಐದು ಆರು ವರ್ಷಿನವ ಗಿಡದಾಗ ಏರುತಾನೇನ
ಗಿಡದಾಗ ಏರುತಾನೇನ ಮ್ಯಾಲೆ ಕುಂದ್ರುತಾನೇನ
ಮೂರ ಆಕಳಲ್ಲಪ್ಪ ವಸ್ತಿ ಮಾಡುತಾವೇನ
ವಸ್ತಿ ಮಾಡುತಾವೇನ ರಾತರಿ ಮಲಗುತಾವೇನ
ಬಂಡಿಯಾ ಮ್ಯಾಲನಲ್ಲಪ್ಪ ಆಕಳ ನಿಂದ್ರುತಾವೇನ
ಬಂಡಿಯಾ ಮ್ಯಾಲನಲ್ಲಪ್ಪ ಆಕಳ ನಿಂದ್ರತಾವೇನ
ಬಂಡಿಯಾ ಮ್ಯಾಲನಲ್ಲಪ್ಪ ಡೋಣಿಯ ಇರುವುತಾವೇನ
ಡೋಣಿಯಾ ಮ್ಯಾಲನಲ್ಲಪ್ಪ ಆಕಳ ನಿಂದ್ರತಾವೇನ
ಆಕಳ ನಿಂದ್ರುತಾವೇನ ಹಾಲ ಸೋರುತಾವೇನ
ಒಂದೊಂದು ಡೋಣಿ ವಳಗೇನೆ ಒಂದು ಎರಡು ಕೊಡಗೋಳು
ಅಟ್ಟು ಡೋಣಿಗಲ್ಲಪ್ಪ ಹಾಲ ತುಂಬುತಾವೇನ
ಹಾಲ ತುಂಬುತಾವೇನ ಕಾಲ ಸೈಲನಾದವ
ಕೆಚ್ಚಲ ಸೈಲನಾದಾವೆ ಅಡವಿಗ ಹೋಗುತಾವೇನ
ಅಡವಿಗ ಹೋಗುತಾವೇನೆ ಗಿಡದಾಗ ಮಡ್ಡಪ್ಪನಿದ್ದಾರ
ಗಿಡದಾಗ ಮಡ್ಡಪ್ಪ ಇದ್ದಾರೆ ಕೆಳಗ ಇಳಿಯುತಾರೇನ
ಕೆಳಗ ಇಳಿಯುತಾರೇನ ಡೋಣಿ ನೋಡುತಾರೇನ
ಸುತ್ತ ತಿರುಗುತಾರೇನ ಡೋಣಿ ಕೂಡುತಾನೇನ
ಹಾಲ ಕುಡಿಯುತಾರೇನೆ ತಾನೆ ಗಿಡ ಏರ‍್ಯಾರ
ಗಿಡದ ಮ್ಯಾಲ ಅಲ್ಲಪ್ಪ ತಾನೇ ಕುಂದ್ರುತಾನೇನ
ಮಡ್ಡಪ್ಪ ಹಾಲ ಕುಡದಾನೆ ಗಿಡದ ಮ್ಯಾಲ ಏರ‍್ಯಾನ
ಗಿಡದ ಮ್ಯಾಲ ಏರ‍್ಯಾನೆ ಹಾಲ ಕೆಳಗ ಇದ್ದಾವ
ಸಂಜಿರಂಗದೊಳಗೇನೆ ಹೊತ್ತನೆ ಗಮುನಾದವ
ಹೊತ್ತನೆ ಗಮನಾದವೆ ಆಕಳ ಹೊರಳಿ ಬಂದಾವ
ಆಕಳ ಹೊರಳಿ ಬಂದಾವೆ ಬಂಡಿಯ ಮ್ಯಾಲ ನಿಂತಾನೆ
ಬಂಡಿಯಾ ಮ್ಯಾಲೆ ನಿಂತಾವ ಕೆಚ್ಚಲ ಬಿಗದು ಸೋರ‍್ಯಾವ
ಹಾಲ ಸೋರುತಾವೇನ ಕರಗೋಳು ಕುಡಿಯುತಾವೇನ
ಗಿಡದಾಗ ಮಡ್ಡಪ್ಪ ಇದ್ದಾನೆ ಮಡ್ಡಪ್ಪ ಮ್ಯಾಲೆ ಇದ್ದಾನ
ಮುಡ್ಡಪ್ಪಗ ನೋಡುತಾವೇನ ನಾತ ಬಿದ್ದಾವ
ಗಿಡದ ಸುತ್ತ ಹರದಾವೆ ಹಾಲ ನೋಡುತಾವೇನ
ಹಾಲ ನೋಡುತಾವೇನ ಹೆಜ್ಜೆ ನೋಡುತಾವೇನ
ಹಾಲ ಕುಡುದಾನಂದಾವೆ ಮ್ಯಾಕ ಹೋಗ್ಯಾನಂದಾವ
ಮಾನುವ ಖೂನ ಸಿಕ್ಕಾದೆ ಮನುಷ್ಯನ ಖೂನ ಸಿಕ್ಕಾದ
ನಾತ ಹಿಡಿಯುತಾವೇನ ಎದ್ದು ನೋಡುತಾವೇನ
ಸುತ್ತ ಮಾಡಿ ನೋಡ್ಯಾವೆ ನಡವ ಬಾಲ ವಗದಾವ
ನಡುವ ಬಾಲ ವಗದಾವೆ ಕತ್ತಲ ಬೀಳುತಾವೇನ
ಕತ್ತಲ ಬಹಳ ಬಿದ್ದಾವೆ ಪದುಮಾಗೊಂಡನಂದಾನ
ತಾವೇ ಮಾತನಾಡ್ಯಾರೆ ನಿದ್ದಿಯ ಮಾಡುತಾರೇನ
ಹೊತ್ತರೆ ಮುಂಜಾನಿ ಎದ್ದಾರ ಸುತ್ತಮುತ್ತನೋಡ್ಯಾವ
ಸುತ್ತ ಮುತ್ತ ನೋಡ್ಯಾವ ಗಿಡದಾಗ ಮೋತಿ ಎತ್ಯಾವ
ಗಿಡದಾಗ ಮೋತಿ ಎತ್ಯಾವೆ ಮಡ್ಡಪ್ಪ ಕಣ್ಣಿಲಿ ಕಂಡಾನ
ಮಡ್ಡಪ್ಪ ಕಣ್ಣಿಲಿ ಕಂಡಾನೆ ತಾಯಿ ನನ್ನಗ ಇಲ್ಲೇನ
ತಾಯಿ ನನ್ನಗ ಇಲ್ಲವ್ವ ತಂದಿ ನನ್ನಗ ಇಲವ್ವ
ನೀವೇ ತಾಯಿನಂದಾರ ನೀವೇ ತಂದಿನಂದಾರ
ಮೂಕ ಪ್ರಾಣಿ ಅಲ್ಲೇಳ ಕಿವಿಯ ಕೊಟ್ಟು ಕೇಳ್ಯಾವ
ಕಿವಿಯ ಕೊಟ್ಟು ಕೇಳ್ಯಾವೆ ತಲಿಯ ಹಾಕುತಾವೇನ
ನಮ್ಮ ಬಲ್ಲಿನಿದ್ದಾರೆ ನಮ್ಮನ್ನ ಕಾಯಿದಾನಂದಾವ
ನಾವೇ ಕೆಳಗ ಮನಗೇವ ಗಿಡದಾಗ ಅವನ ಇದ್ದಾನ
ಗಿಡದಾಗ ತಾನೇ ಇದ್ದಾನ ಕೆಳಗ ನಾವೇ ಇದ್ದೇವ
ಒಳ್ಳೆದು ಒಳ್ಳೆದು ಅಂದಾನೆ ಯಾಳೆನ ಗಮನಾದವ
ಒಂದು ದಿನಮಾನ ಹೋದವೆ ಎರಡು ದಿನಮಾನ ಹೋದಾವ
ಎರಡು ದಿನಮಾನ ಹೋದವೆ ಐದ ದಿನಮಾನ ಹೋದವೆ
ಐದು ದಿನಮಾನ ಹೋದವ ಎಂಟ ದಿನಮಾನ ಹೋದವೆ
ಒಂದು ವರ್ಷನಾದವೆ ಎರಡ ವರ್ಷನಾದವ
ತೆಳಿಯಾಕ ಇಳಿಯುತಿದ್ದನೆ ಹಾಲ ಕುಡಿಯುತಿದ್ದಾನ
ಕಾಡಿನ ಆಕಳಲ್ಲಪ್ಪ ಮಡ್ಡಪ್ಪಗ ನೋಡುತಾವೇನ
ಮಡ್ಡಪ್ಪಗ ನೋಡುತಾವೇನ ಮಗನ ಮಾಡಿ ಸಲುವ್ಯಾವ
ಮಗನ ಮಾಡಿ ಸಲುವ್ಯಾವ ತಂದಿನ ಮಾಡಿ ಸಲುವ್ಯಾವ
ಮಾನುವ ಸುಳುವ ಇಲ್ಲೇನ ಮನುಷ್ಯನ ಸುಳುವ ಇಲ್ಲೇನ
ತಾಯಿ ಬರಲಿಲ್ಲಂದಾರ ತಂದು ನಮ್ಮಗಿಲ್ಲವ್ವ
ಮಡ್ಡಪ್ಪ ಬರುವುತಾನೇನ ಹಾಲ ಕುಡಿಯುತಾನೇನ
ಹಾಲ ಕುಡಿಯುತಾನೇನ ಡೋಣಿ ಕಟ್ಟುತಾನೇನ
ಇಪ್ಪತ್ತು ಕೊಡಗೋಳು ಅಲ್ಲಪ್ಪ ಹಾಲಿ ಡೋಣಿ ಕಟ್ಯಾವ
ಹತ್ತ ಕೊಡದನಲ್ಲಪ್ಪ ಹಾಲಿನ ಡೋಣಿ ಇಟ್ಟಾರ
ಐದು ವರ್ಷನಾದಾವ ಆರವರ್ಷನಾದವ
ಏಳ ವರ್ಷನಾದವ ಹತ್ತ ವರ್ಷನಾದವ
ಗಿಡದ ಮ್ಯಾಲ ಮಡ್ಡಪ್ಪ ಮಂಚ ಹಾಕುತಾನೇನ
ಮಂಚ ಹಾಕುತಾನೇನ ಮೂರ ಮಳದ ಕಂಬಳೆ
ಮೂರ ಮಳದ ಕಂಬಳೆ ಮಡ್ಡಪ್ಪನ ಬಲ್ಲಿ ಇತ್ತಯ್ಯ
ಮಡ್ಡಪ್ಪನ ಬಲ್ಲೇನ ಕಂಬಳಿ ಇರುವುತಾವೇನಯ್ಯ
ಕೆಳಗ ಬಂದ ಯಾಳ್ಯಾಕ ಹಾಲಿನ ಜಳಕ ಮಾಡ್ಯಾನ
ಹಾಲಿನ ಜಳಕ ಮಾಡ್ಯಾನ ಹಾಲ ಕುಡಿಯುತ್ತಿದ್ದನ
ಉಂಡೇನಂದರಿಲ್ಲಪ್ಪ ತೊಟ್ಟೇನಂದರಿಲ್ಲಯ್ಯ
ತೊಟ್ಟೇನಂದರ ಇಲ್ಲಪ್ಪ ಮುಟ್ಟೇನಂದರ ಇಲ್ಲಯ್ಯ
ತಾಯಿ ತಂದಿ ಕಟ್ಟೀದ ಟೊಂಕಿಗೊಂದೆ ಉಡದಾರ
ತಾಯಿ ಕೊಟ್ಟಿದಲ್ಲಪ್ಪ ಮೂರೆ ಮಳದ ಕಂಬಳೆ
ಮೂರೇ ಮಳದ ಕಂಬಳೆ ಮಡ್ಡಪ್ಪನ ಬಲ್ಲಿ ಉಳದಾದ
ಜೀವಾಳಕಡ್ಡಿ ತಂದಾನ ಊದ ಕೊಳವಲ ಮಾಡ್ಯಾನ
ಊದ ಕೊಳವಲ ಮಾಡ್ಯಾನೆ ಗಿಡದ ಮ್ಯಾಲ ಕುಂತಾನ
ಗಿಡದ ಮ್ಯಾಲೆ ಕುಂತಾನ ಎರಡ ಕೊಳವಲ ಮಾಡ್ಯಾನ
ಒಂದ ಕೊಳವಲ ಊದಿದರ ಆರ ಹರದಾರಿ ಮ್ಯಾಲೇನ
ಆರು ಹರದಾರಿ ಮ್ಯಾಲೆನ ಓಡಿಬರುವುತಾವೇನ
ಓಡಿ ಬರುವುತಾವೇನ ಕಾವಲ ಮಾಡುತಾವೇನ
ಕಾವಲ ಮಾಡುತಾವೇನ ಮಡ್ಡಪ್ಪ ನೋಡುತಾನೇನ
ಸುಖಕ ಕೊಳಲ ಊದಿದರ ಗಿಡದ ಬಲ್ಲ ಮನಗ್ಯಾವ
ಹತ್ತ ವರ್ಷನಾದವೆ ಹನ್ನೆರಡು ವರ್ಷನಾದವ
ಕಪ್ಪಿಲೆ ಕರಿಚಲುವನ ಒಪ್ಪಿಲೆ ಬಹಳ ಹಿರಯನ
ಮೂರ ಮಳದ ಕಂಬಳೆ ಮೈಮ್ಯಾಲ ಹಾಕುತಾನೇನ
ಮೂರ ಮಳದ ಕಂಬಳೆ ಹುಟ್ಟಗಂಬಳಿನಾದವ
ಹನ್ನೆರಡು ವರ್ಷನಾದವೆ ಹದಿನೈದು ವರ್ಷನಾದವ
ಇಪ್ಪತ್ತು ವರ್ಷನಾದವ ಇಪ್ಪತ್ತೈದು ವರ್ಷನಾದವ
ಅದೇ ಊರ ವಳಗೇನ ವಂಟಿಗಾಣಿಗೇರನ
ಗಾಣಿಗೇರ ಮಲ್ಲಪ್ಪ ಹೆಚ್ಚಿನ ಬಡತನಿದ್ದಾವ
ಹೆಚ್ಚಿನ ಬಡತಾನಿದ್ದಾವೆ ಕೈಯಾಗ ಗುದ್ದಲಿ ಹಿಡದಾನ
ಕೈಯಾಗ ಗುದ್ದಲಿ ಹಿಡದಿದ್ದ ಚರಗಿ ನೀರ ಹಿಡದಿದ್ದ
ಚರಗಿ ನೀರ ಹಿಡದಿದ್ದ ಭರ್ತಿ ಬಾರದೊಳಗೇನ
ಬಾರಾಕ ಬರಬೇಕಂದಾನೆ ಮುಂಜಾಳಿ ತಯ್ಯಾರಾದನ
ಮುಂಜಾಳಿ ತಯ್ಯಾರಾದನೆ ಬಾರಾಕ ಬರಬೇಕಂದಾನ
ಗುದ್ದಲಿ ಹೆಗಲಿಗ ಹಾಕ್ಯಾನ ಚರಗಿ ಕೈಯಾಗ ಹಿಡದಾನ
ಉಂಡೇನಂದರ ಇಲ್ಲಪ್ಪ ಉಟೇನಂದರ ಇಲ್ಲಪ್ಪ
ಗಾಣಿಗೇರ ಮಲ್ಲಪ್ಪ ಹ್ಯಾಂಗ ಮಾಡಬೇಕಂದಾನ
ನನಗೂ ಇರಲುಕಲ್ಲಪ್ಪ ಒಂದೇ ಎದಕರೆ ಹೊಲವೇನ
ಒಂದೇ ಎಕರೆ ಹೊಲದಾಗ ನಟ್ಟು ಕಡಿಬೇಕಂದಾನ
ನಟ್ಟು ಕಡಿಬೇಕಂದಾನೆ ಕರಕಿ ಕಡಿಬೇಕಂದಾನ
ಕೂಲಿ ಯಾರು ಕರದಿಲ್ಲ ಹೊಟ್ಟಿಗೆ ರೊಟ್ಟಿ ಇಲ್ಲೇನ
ಹೊಲಕ ಹೋಗಬೇಕಂದಾನೆ ಗುದ್ದಲಿ ಹೆಗಲಿಗ ಇಟ್ಟಾರ
ಕೈಯಾಗ ಚರಗಿ ಹಿಡದಾನ ಊರದಾಟಿ ನಡದಾನ
ಊರದಾಟಿ ಬಂದಾನೆ ಅಡವಿಗ ಹೋಗುತಾನೇನ
ಏಳೆಂಟು ಗಿಡಗೋಳು ನೋಡ್ಯಾನ ಹತ್ತೆಂಟು ಗಿಡಗೋಳು ನೋಡ್ಯಾನ
ಗಿಡವ ನೋಡುತಾನೇನ ಮ್ಯಾಕ ನೋಡುತಾನೇನ
ಸಂಜಿ ಒಳಗನಲ್ಲಪ್ಪ ಕತ್ತಲಿ ಬಿದ್ದಂಗಾದವ
ಹೊತ್ತ ಹೋಗಿದಂಗೇನ ಏನೇನು ಮಾಡುತಾನೇನ
ಅಡ್ಡ ಕಟಗಿ ಇಟ್ಟಿದ ಅಟ್ಟ ಮಾಡುತಾನೇನ
ಕಂಗಳಿ ಹೊಚ್ಚುತಾನೇನ ಮಡ್ಡಪ್ಪ ಕುಂದ್ರತಾನೇನ
ಮಡ್ಡಪ್ಪ ಕುಂದ್ರುತಾನೇನ ಗಾಣಿಗೇರ ಮಲ್ಲಪ್ಪ
ಗಾಣಿಗೇರ ಮಲ್ಲಪ್ಪ ಕೈಯ ಮುಗಿಯುತಾನೇನ
ಕೈಯ ಮುಗಿಯುತಾನೇನ ಮಡ್ಡಪ್ಪಗ ಹೇಳುತಾನೇನ
ನನ್ನ ನೋಡಿದರಲ್ಲಪ್ಪ ಅಂಜಿ ಹೋಗುತಾನಂದಾನ
ಇವನೇ ಮ್ಯಾಲಕ ನೋಡ್ಯಾನ ನಮಸ್ಕಾರ ಕೊಟ್ಟಾನ
ಗಿಡದಾಗ ನೋಡುತಾನೇನ ಎರಡ ಕೈಲೆನಪ್ಪಯ್ಯ
ಎರಡ ಕೈಲೆ ನಮ್ಮಯ್ಯ ಜೋಡಿಲಿ ನಮಸ್ಕಾರೇನ
ಗಿಡದಾಗಿದ್ದ ಮಡ್ಡಪ್ಪನೆ ತಾಯೇನು ಹೇಳುತಾನೇನ
ತನ್ನ ಬುಡಕನಲ್ಲಪ್ಪ ಒಂಟಿಗೈಲೆ ತೋರ‍್ಯಾನ
ಒಂಟಿಗೈಲೆ ತೋರಿದ್ದ ಹಾಲಿನ ಡೋಣಿ ಇದ್ದಾವ
ಗಾಣಿಗೇರ ಮಲ್ಲಪ್ಪ ಹಾಲ ಹವುಜಿಗೆ ಬಂದಾನ
ಹಾಲ ಹವುಜಿಗೆ ಬಂದರೆ ಒಂದು ಚರಗಿ ತುಂಬ್ಯಾನ
ಒಂದು ಚರಗಿ ತುಂಬ್ಯಾನೆ ಮಲ್ಲಪ್ಪ ಕುಡಿಯುತಾನೇನ
ಎರಡ ಚರಗಿ ಕುಡದಾನೆ ಮೂರ ಚರಗಿ ಕುಡದಾನ
ಹೊಟ್ಟಿ ತುಂಬುತಾವೇನ ಐದ ಚರಗಿ ಕುಡದಾನ
ಹೊಟ್ಟಿಗ ಅನ್ನ ಇಲ್ಲೇನ ಬಾಯಿಗ ನೀರ ಇಲ್ಲೇನ
ಹೆಚ್ಚಿನ ಬಡತಾನಲ್ಲಪ್ಪ ದೇವರು ಕೊಟ್ಟಾನಂದಾನ
ಮಾನುವುನಂತೆ ತಿಳಿಯಲೆ ಮನುಷ್ಯನಂತೆ ತಿಳಿಯಲೆ
ನನ್ನ ಹೊಟ್ಟಿಗಲ್ಲಪ ಅನ್ನ ಕುಡತೀನಿ ಅಂದಾರ
ಒಂದ ಚರಗಿ ಹಾಲೇನೆ ತುಂಬಿ ಕೈಯಾಗ ಹಿಡದಾನ
ತುಂಬಿ ಕೈಯಾಗ ಹಿಡದಾನೆ ಗುದ್ದಲಿ ಹೆಗಲಿಗ ಇಟ್ಯಾನೆ
ಗುದ್ದಲಿ ಹೆಗಲಿಗ ಇಟ್ಟಾನೆ ರಾಯಿಮಾರಾಗ ಹಿಡದಾನ
ಹೊಲಕ ಹೋಗುತಾನೇನ ಚರಗಿ ಇಳಿಯುತಾನೇನ
ಚರಗಿ ಇಳಿಯುತಾನೇನ ಗುದ್ದಲಿ ಕೈಯಾಗ ಹಿಡದಾನ
ಗುದ್ದಲಿ ಕೈಯಾಗ ಹಿಡದಾನೆ ನಟ್ಟ ಕಡಿಯುತಾನೇನ
ಬಂದ ನಟ್ಟು ಕಡದಾರೆ ಬ್ರಹ್ಮಗ ಆರುವ ತಟ್ಟೇನ
ಎರಡ ಬಾರಿಗಲ್ಲೇಳ ನಿಂತಬಿಡುವುತಿದ್ದಾನ
ಒಂಬತ್ತ ಮಾರ ಕಡದಾನೆ ಹೊಟ್ಟಿತುಂಬ ಕುಡದಾನೆ
ಹೊಟ್ಟಿತುಂಬ ಕುಡದಾನೆ ಸಾಂಬ ನನಗೆ ಕೊಟ್ಟಾನ
ಚರಗಿ ಹಾಲ ಕುಡದಾನೆ ತಾನೇ ತಯ್ಯಾರಾದನ
ಹೊಟ್ಟೆ ತುಂಬ ಕುಡದೀನೆ ಅಲ್ಲಿಗೆ ಹೋಗಬೇಕಂದಾನ
ಮತ್ತ ನಮಸಗಾರೇನೆ ನಾನೇ ಕುಡಬೇಕಂದಾನ
ಹೆಂಡರ ಮಕ್ಕಳು ಅಲ್ಲೇಳ ಉಪವಾಸ ಕುಂತರ ಅಂದಾನ
ಹೆಗಲಿಗ ಗುದ್ದಲಿ ಇಟ್ಟಾನೆ ಕೈಯಾಗ ಚರಗಿ ಹಿಡದಾನ
ರಾಯಿಮಾರಗ ಹಿಡದಾನೆ ಮುಡ್ಡಪ್ಪನ ಬಲ್ಲಿಗ ಬಂದಾನ
ಎರಡು ಕೈಯ ಜೋಡಿಸಿ ನಮಸಗಾರ ಕೊಟ್ಟಾನ
ಗಿಡದಾಗಿದ್ದ ಮಡ್ಡಪ್ಪ ಒಂದ ಕೈಯಲಿಂದೇನೆ
ಒಂದ ಕೈಯಲಿಂದೇನ ಕೆಳಗ ತೋರುತಾನೇನ
ತೋರಿದಲ್ಲಿನಲ್ಲಪ್ಪ ಮಲ್ಲಪ್ಪ ಬರುವುತಾನೇನ
ಮಲ್ಲಪ್ಪ ಬರುವುತಾನೇನೆ ಚರಗಿ ತುಂಬುತಾನೇನ
ಚರಗಿ ತುಂಬುತಾನೇನೆ ರಾಯಿಮಾರಗ ಹಿಡದಾನ
ಸುಖದ ಕೊಳವಲ ಊದ್ಯಾನೆ ದುಃಖದ ಕೊಳವಲ ಬಿಟ್ಟಾನೆ
ದುಃಖದ ಕೊಳವಲ ಊದ್ಯಾನೆ ಸುಖದ ಕೊಳವಲ ಊದ್ಯಾನ
ಸುಖದ ಕೊಳವಲ ಬಿಟ್ಟಾನ ಅಡವಿನೊಳಗ ಇದ್ದಾರ
ಅಡವಿಯ ಒಳಗಿನ ಕಾಡಾಕಳ ಅಲ್ಲಿಗ ಬುರುವುತಾವೇನ
ಡೋಣಿಗ ಬರುವುತಾವೇನೆ ಹೆಜ್ಜಿ ಇಡುವುತಾವೇನ
ರಾಯಿಮಾರಗ ಹಿಡದಾನ ಹೆಜ್ಜಿ ಮೇಲೆ ಹೋದವ
ಸುಖದ ಕೊಳವಲ ಊದ್ಯಾನೆ ದುಃಖದ ಕೊಳವಲ ಬಿಟ್ಟಾನ
ಸುಖದ ಕೊಳವಲ ಊದ್ಯಾನೆ ಹೊರಳಿ ಬರುವುತಾವೇನೆ
ಹೊರಳಿ ಬರುವುತಾವೇನೆ ಮಡ್ಡಪ್ಪ ಕೆಳಗೆ ಇಳದಾನ
ಮಡ್ಡಪ್ಪ ಕೆಳಗೆ ಇಳದಾನ ಮೈಯ ನೆಕ್ಕೂತಾವೇನ
ಮೈಯ ನೆಕ್ಕೂತಾವೇನೆ ಜ್ವಾಕಿ ಮಾಡುತಾವೇನ
ಮೈಯ ನೆಕ್ಕೂತಾವೇನೆ ಜ್ವಾಕಿ ಮಾಡುತಾವೇನ
ಜಳಕ ಮಾಡುವ ಬಟ್ಟೇನ ಮಡಿಯ ಬಲ್ಲಿ ಇಲ್ಲೇನ
ಮಡಿಯಾಬಲ್ಲಿ ಇಲ್ಲಪ್ಪ ಆಕಳ ಮೈಯ ನೆಕ್ಕ್ಯಾವ
ಆಕಳ ಮೈಯ ನೆಕ್ಕಿದರ ಮಡ್ಡಪ್ಪನ ಮೈಯ ನಮ್ಮಯ್ಯ
ಮಡ್ಡಪ್ಪನ ಮೈಯ ನಮ್ಮಯ್ಯ ಸಾಬನ ಹಚ್ಚಿ ತೊಳದಂತ
ಸಾಬನ ಹಚ್ಚಿ ತೊಳದಂತೆ ಹಾಲ ಕುಡದ ಹೋಗ್ಯಾನ
ಹಾಲ ಕುಡಿಯುತಾನೇನ ಮೇಲ ಏರುತಾನೇನ
ಸುತ್ತ ಕೊಡುತಾವೇನ ಸುತ್ತ ಮನಗೂತಾವೇನ
ಒಂದರ ಬಾಲ ಒಂದಕ್ಕೆ ಕತ್ತರಿ ಹಾಕುತಾವೇನ
ಕತ್ತರಿ ವಳಗ ಹಾಕೇವ ಮಾರಿ ತಿರುವಿ ಮನಗ್ಯಾವ
ಗಾಣಿಗೇರ ಮಲ್ಲಪ್ಪನ ಮನಿಗಿ ಬರುವುತಾನೇನ
ಮನಿಗ ಬರುವುತಾನೇನ ಮಡದೀನ ಕರಿಯುತಾನೇನ
ಮಡದೀನ ಕರಿಯುತಾನೇನ ತಾಯೇನ ಹೇಳುತಾನೇನ
ಒಂದೇ ಗಂಡಸ ಮಗನೇನ ಒಂದೇ ಹೆಣ್ಣ ಮಗಳೇನ
ಹೆಣ್ಣಮಗಳಿಗಲ್ಲೇಳ ಹಾಲ ಕುಡಸರಿ ಅಂದಾನ
ಗಂಡಸ ಮಗನಿಗಲ್ಲಯ್ಯ ಹಾಲ ಕುಡಸರಿ ಅಂದಾನ
ನಾನು ಕಡದೀನಿ ಅಂದಾನೆ ನನ್ನ ಪಾಲ ಇಲ್ಲಯ್ಯ
ನೀವೇ ಮೂರಮಂದಿಯಾ ಸರಿಯಾ ಮಾಡಿ ಕುಡಿಯರೆ
ಒಳ್ಳೆದು ಒಳ್ಳೆದು ಅಂದಾರೆ ಚರಗಿ ಹಾಲಿನೊಳಗೇನ
ರೊಟ್ಟಿ ಊಣ್ಣುವುತಾರೇನ ಒಂದು ಚರಗಿ ಹಾಲೇನ
ಒಂದೇ ಚರಗಿ ಹಾಲೇನ ಸರಿಯಾ ಮಾಡಿ ಕುಡದಾರ
ಹೊತ್ತನೆ ಭರಮಂಡ್ಯಾವೆ ಹೊತ್ತನೆ ಗಮನಾದವ
ಉಂಡೇನಂದರಿಲ್ಲಪ್ಪ ಉಗಳೇನಂದರ ಇಲ್ಲಪ್ಪ
ಹಾಲಿನ ಮ್ಯಾಲ ಮಾರಾಯ ಮಲ್ಲನಮಲಗುತಾರೇನ
ಗಾಣಗೇರ ಮಲ್ಲಪ್ಪನೆ ಹೊತ್ತಾರೆ ಮುಂಜಾನಿ ಎದ್ದಾನ
ಜಾಮಜಳಕ ಮಾಡ್ಯಾನೆ ಚಿಂದಿ ಉಡುವುತಾನೇನ
ಚಿಂದಿ ಉಡುವುತಾನೇನ ಚಿಂದಿನ ಸುತ್ತುತಾನೇನ
ಚರಗಿ ಬಿಡುವುತಾನೇನ ಬಿಂದಗಿ ಹಿಡಿಯುತಾನೇನ
ಬಿಂದಗಿ ಕೈಯ್ಯಾಗ ಹಿಡದಿದ್ದ ಗುದ್ದಲಿ ಹೆಗಲಿಗೆ ಹಾಕಿದ್ದ
ಚಂದನ ಚವುಡಿಲಿ ಹಾಯ್ದಿದ್ದ ರಾಯರ ಓಣಿಲಿ ಹಾಯ್ದಿದ್ದ
ರಾಯಿಮಾರಗ ಹಿಡದಿದ್ದ ಇಳದಲ್ಲೆ ಇಳಿಗಾಳೇನ
ಅಲ್ಲ್ಯಾನ ಇಲ್ಲ್ಯಾನೇನ ಎಲ್ಲಿಗ ಬರುವುತಾನೇನ
ಗಾಣಿಗೇರ ಮಾಲ್ಲಪ್ಪನ ಗಿಡದ ಬಲ್ಲಿ ಬಂದಾನ
ಗಿಡದ ಬಲ್ಲಿ ಬಂದಾನ ಮ್ಯಾಕ ನೋಡುತಾನೇನ
ಮ್ಯಾಲಕುಂತ ಮಡ್ಡಪ್ಪಗ ಕೈಯ ಮುಗದಾನೇನಯ್ಯ
ಕೈಯ ಮುಗದ ಯಾಳ್ಯಾಕ ಮಡ್ಡಪ್ಪ ಕೈಯ ಮಾಡ್ಯಾನ
ಗಿಡದ ಕೆಳಗನಲ್ಲೇಳ ಮಡ್ಡಪ್ಪ ಹೇಳುತಾನೇನ
ಮಡ್ಡಪ್ಪ ಹೇಳುತಾನೇನ ಬಿಂದಿಗಿ ಚರಗಿ ತಂದಾನ
ಬಿಂದಗಿ ಚರಗಿ ತಂದಾನೆ ಚರಗಿಲಿ ಹಾಲ ಕುಡದಾನ
ಚರಗಿಲಿ ಹಾಲ ಕುಡದಾನ ಬಿಂದಗಿ ತುಂಬುತಾನೇನ
ಕೈಯಾಗ ಚರಗಿ ತುಂಬಿದ ಹೊಲಕ ಹೋಗುತಾನೇನ
ಚರಗಿ ಇಳುವುತಾನೇನ ಗುದ್ದಲಿ ಕೈಯಾಗ ಹಿಡದಿದ್ದ
ಗುದ್ದಲಿ ಕೈಯಾಗ ಹಿಡದಿದ್ದ ಚಿಂದಿ ಮ್ಯಾಗ ಏರಸಿದ್ದ
ಚಿಂದಿ ಏರಸುತಾನೇನ ಗುದ್ದಲಿ ಹಿಡಿಯುತಾನೇನ
ಆರ ಮಾರ ಕಡದಿದ್ದ ಒಂಬತ್ತ ಮಾರ ಕಡದಿದ್ದ
ಒಂಬತ್ತ ಮಾರ ಕಡದಿದ್ದ ಚರಗಿ ಹಾಲ ಕುಡದಿದ್ದ
ಚರಗಿ ಹಲ ಕುಡದಿದ್ದ ದಮ್ಮ ಬಂದ ಬಿಟ್ಟದ್ದ
ಗುದ್ದಲಿ ಹೆಗಲಿಗ ಹಾಕಿದ್ದ ಕೈಯಾಗ ಚರಗಿ ಹಿಡಿದಿದ್ದ
ಕೈಯಾಗ ಚರಗಿ ಹಿಡದಿದ್ದ ರಾಯಮಾರಗ ಹಿಡದಿದ್ದ
ರಾಯಿಮಾರಗ ಹಿಡದಿದ್ದ ಗಿಡದಾಗ ನೋಡುತಾನೇನ
ಗಿಡದಾಗ ನೋಡುತಾನೇನ ನಮಸಗಾರ ಕೊಟ್ಟಿದ್ದ
ಮ್ಯಾಲ ಇದ್ದ ಮಡ್ಡಪ್ಪ ಕೆಳಗೆ ಕೈಯ್ಯವ ಮಾಡ್ಯಾನ
ಚರಗಿ ಕೈಯ್ಯಾಗ ಹಿಡದಾನೆ ಹಾಲಿನ ಬಲ್ಲ್ಯಾಕ ಬಂದಾನ
ಚರಗಿ ಹಾಲುಕುಡಿದಾನೆ ಚರಗಿ ತುಂಬುತಾನೇನ
ಬಿಂದಗಿ ಹೆಗಲಿಗ ಹಾಕಿದ್ದ ಚರಗಿ ಕೈಯಾಗ ಹಿಡದಿದ್ದ
ಬಿಂದಿಗಿ ಮಂಡಿ ಮ್ಯಾಲೆನ ಗುದ್ದಲಿ ಹೆಗಲ ಮ್ಯಾಲೇನ
ಗುದ್ದಲಿ ಹೆಗಲ ಮ್ಯಾಲೆನ ಚರಗಿ ಕೈಯ್ಯಾಗ ಹಿಡದಾನ
ರಾಯಿಮಾರಗ ಹಿಡದಾನೆ ರವ್ವಣಿ ಮಾಡುತಾನೇನ
ಅಲ್ಲ್ಯಾನ ಇಲ್ಲ್ಯಾನೇನ ಬಣ್ಣದ ಅಗಸೀಲಿ ಹಾಯ್ದನ
ರಾಯರ ಓಣಿಲಿ ಹಾಯ್ದನೆ ರಡ್ಡೇರ ಮನಿಯ ಮುಂದೇನ
ರಡ್ಡೇರ ಮನಿಯ ಮುಂದೇನ ತನ್ನ ಮನಿಗೆ ಬಂದಾನ
ತನ್ನ ಮನಿಗೆ ಬಂದಾನೆ ಹಾಲಿನ ಬಿಂದಗಿ ಇಳುವ್ಯಾನೆ
ಹಾಲಿನ ಬಿಂದಗಿ ಇಳುವ್ಯಾನೆ ಚರಗಿ ಕೊಡುವುತಾನೇನ
ಇಬ್ಬರು ಮಕ್ಕಳು ಒಂದು ತಾಯಿ ತೆಪೇಲಿ ಹಾಲ ಕುಡದಾರ
ಹಾಲಿನ ವ್ಯಾಪರ ಇಟ್ಟಾರೆ ಊರನ ಮಂದಿ ಬರತಾರ
ಗಾಣಗ್ಯಾರ ಮನಿಯಾಗ ಹಾಲಿನ ಯಾಪಾರ ಮಾಡ್ಯಾರ
ಹಾಲಿನ ವ್ಯಾಪಾರ ಮಾಡ್ಯಾರೆ ಮಸರಿನ ವ್ಯಾಪಾರ ಮಾಡ್ಯಾರ
ದಿನ್ನ ಒಂದ ಕಾಲದಲ್ಲಿ ಕೊಡಗೋಳು ಹಾಲ ತಂದಾರ
ಮುಂಜಾಳಿ ತುಮಕೊಂಡು ಬಂದಾರೆ ಮಧ್ಯಾಹ್ನ ತುಮಕೊಂಡು ಬಂದಾರ
ಸಂಜಿಗ ತುಮಕೊಂಡು ಬಂದಾರೆ ಮೂರ ಸರತಿ ತಂದಾರೆ
ಮೂರ ಸರತಿ ತಂದಾರೆ ಹಾಲಿನ ವ್ಯಾಪಾರ ಇಟ್ಟಾರ
ಹಾಲಿನ ವ್ಯಾಪಾರ ಇಟ್ಟಾರ ಮನಿಯಾ ಬಿಚ್ಚಿ ಕಟ್ಟಸ್ಯಾರ
ಮನಿಯಾ ಬಿಚ್ಚಿ ಕಟ್ಟಸ್ಯಾರೆ ಭೂಮಿ ಖರೀದಿ ಮಾಡ್ಯಾರ
ಭೂಮಿ ಖರೀದಿ ಮಾಡ್ಯಾರೆ ತಾವೇ ತರುವುದಾತಾರೇನ
ಎಂಟ ಎತ್ತಿಂದಲ್ಲಪ್ಪ ಒಕ್ಕಲುತನ ನಡದಾವ
ಗಾಣಿಗೇರ ಮಲ್ಲಪ್ಪನ ಮಡದೀನ ಕೇಳುತಾನೇನ
ಇಂದಿಗ ಮೂರ ವರ್ಷೇನ ಹಾಲ ಮಾರಿವಿ ಅಂದಾನ
ಅನ್ನಕ ಗತಿಯ ಇಲ್ಲಪ್ಪ ನೀರಿಗ ಯಾಳ್ಯಾ ಇಲ್ಲೇನ
ಅವನ ಪುಣ್ಯದಲಿಂದೇನ ಹಾಲ ಮಾರಿವಿ ಅಂದಾನ
ಹಾಲ ಮಾರಿವಿ ಅಂದಾನೆ ವ್ಯಾಪಾರ ಮಾಡೀವಿ ಅಂದಾನ
ಭೂಮಿ ಗಳಸೇವಂದಾರೆ ಒಕ್ಕಲತನ ಮಾಡೇವ
ಒಕ್ಕಲತನ ಮಾಡೇವ ಅಂಗಡಿ ನಾವೇ ಮಾಡೇವ
ನಂದು ಮಾತುನಲ್ಲಯ್ಯ ನೀವೆ ಕೇಳಲಿ ಬೇಕಯ್ಯ
ಮಡದಿಯ ಈರಮ್ಮನ ಮಾತ ಕೇಳುತಾನೇನ
ನಾನು ಹೇಳಿದ ಮಾತೇನೆ ನೀನೇ ಕೇಳಲಿಬೇಕಯ್ಯ
ಒಳ್ಳೆದು ಒಳ್ಳೆದು ಅಂದಾನೆ ಮಾತ ಕೇಳತಾನೇನ
ನೀನು ಆಡಿದ ಮಾತಿಗೆ ನಾನು ಒಪ್ಪಿನಿ ಅಂದಾನ
ಮಡದಿಗ ಹೇಳುತಾನೇನ ನೀನು ಮಾಡಿದ ಮಾತಿಗ
ನೀನು ಮಾಡಿದ ಮಾತಿಗ ನಾನೇ ಹೋಗತೀನಿ ಅಂದಾನ
ಒಳ್ಳೆದು ಒಳ್ಳೆದು ಅಂದಾನೆ ಗಾಣಿಗೇರ ಮಲ್ಲಪ್ಪನ
ಗಾಣಿಗೇರ ಮಲ್ಲಪ್ಪ ಕೊಡವಂದು ಕೈಯಾಗ ಹಿಡದಾನ
ಕೊಡವ ಕೈಯಾಗ ಹಿಡದಾನೆ ಚರಗಿ ಕೈಯಾಗ ಹಿಡದಾನ
ಚರಗಿ ಕೈಯಾಗ ಹಿಡದಾನೆ ಹೊರಳಿ ಬರುವುತಾನೇನ
ಹೊರಳಿ ಬರುವುತಾನೇನ ಗಿಡದಾಗ ನೋಡುತಾನೇನ
ಬಾರೋ ಬಾರೋ ಏಯಪ್ಪ ಎರಡು ಕೈಯಲಿಂದೇನ
ಎರಡು ಕೈಯಲಿಂದೇನ ಕೈ ಜೋಡಸುತಾನೇನ
ನಿನ್ನ ಕೈಯಲಿಂದಪ್ಪ ಅನ್ನ ಕಂಡೀವಿ ಅಂದಾರ
ನಿನ್ನ ಪುಣ್ಯದಲಿಂದೇನ ರೊಕ್ಕ ಗಳಿಸೀವಿ ಅಂದಾರ
ರೊಕ್ಕಗಳಿಸೀವಿ ಅಂದಾರೆ ಭೂಮಿ ಗಳಸೀವಿ ಅಂದಾರ
ಎಂಟು ಎತ್ತಿಂದಲ್ಲಪ್ಪ ಒಕ್ಕಲುತನ ನಡದಾವ
ಊಟ ತುಂಬನಲ್ಲಪ್ಪ ಸಾವುಕಾರಂತ ಕರದಾರ
ಗಾಣಗೇರ ಮಲ್ಲಪ್ಪನ ಹಿಂತ ಮಾತನಾಡ್ಯಾನ
ಬಾರೋ ಬಾರೋ ಏಯಪ್ಪ ನನ್ನ ಮಾತ ಕೇಳಲ್ಲ
ನಿನಗ ಬಟ್ಟಿ ತಂದೇನ ತೊಡುವ ಅಂಗಿ ತಂದೇನ
ಉಡುವ ಧೋತುರ ತಂದೇನ ತೊಡುವ ಅಂಗಿ ತಂದೇನ
ತೊಡುವ ಅಂಗಿ ತಂದೇನ ತಲಿಮ್ಯಾಲ ರುಂಬಾಲ ತಂದೇನ
ಮೈಗೆ ಅರಿಶಿಣ ಹಚ್ಚೇನ ಕೈಗಿ ಕಂಕಣ ಕಟ್ಟೇನ
ಬಾರೋ ಬಾರೋ ಏಯಪ್ಪ ಲಗ್ಗನ ಮಾಡತೀವಿ ಅಂದಾರ
ಲಗ್ಗನ ಮಾಡತೀವಿ ಅಂದಾರ ಮೂರತ ಮಾಡತೀವಿ ಅಂದಾರ
ಗಿಡದ ಒಳಗನಲ್ಲಪ್ಪ ಮಡ್ಡಪ್ಪ ಮೂರುತಿ ಆದಾನ
ಮಡ್ಡಪ್ಪ ಮಾತನಾಡ್ಯಾನೆ ಏನಂದಾಡುತಾನೇನ
ನನ್ನ ಮಾತನಲ್ಲಪ್ಪ ನೀನೇ ಕೇಳಲಿಬೇಕಯ್ಯ
ನನಗೂ ಲಗ್ಗನ ಮಾಡಿದರ ನನ್ನ ಮಾತ ಕೇಳಯ್ಯ
ನನ್ನ ಮಾತ ಕೇಳಪ್ಪ ಕನ್ಯಾ ಯಾರ ಕುಡತಾರ
ಲಗ್ಗನ ಯಾರು ಮಾಡ್ಯಾರೆ ಹೆಣ್ಣು ಯಾರು ಕೊಡತಾರ
ಹೆಣ್ಣು ಯಾರು ಕೊಡತಾರೆ ಬಟ್ಟಿ ಯಾರು ತಂದಾರು
ಗಾಣಗೇರ ಮಲ್ಲಪ್ಪನೆ ನುಡದಾನೆ ಮಾತಾಡ್ಯಾನ
ಬಾರೋ ಬಾರೋ ಏಯಪ್ಪ ಹೊಟ್ಟಿಲಿ ಹುಟ್ಟಿದ ಮಗಳೇನ
ಹೊಟ್ಟಿಲಿ ಹುಟ್ಟಿದ ಮಗಳೇನ ಗಂಗಮ್ಮಗ ಕೊಡತೀನಿ ಅಂದಾನ
ನನ್ನ ಹೊಟ್ಟಿಲಿ ಹುಟ್ಟಿದ ಮಗಳ ಗಂಗಮ್ಮನ ಕೊಟ್ಟೇನ
ಒಳ್ಳೇದು ಒಳ್ಳೇದು ಅಂದಾನೆ ತಾನೆನು ಹೇಳುತಾನೇನ
ನೀನ ಬಟ್ಟಿ ತಂದರೆ ನಾನೇ ಖೂನ ಕೊಟ್ಟೇನ
ನಾನೂ ಖೂನ ಕೊಟ್ಟೇನ ನೀನು ಖೂನ ಕೊಡಬೇಕ
ಒಳ್ಳೇದು ಒಳ್ಳೇದು ಅಂದಾನೆ ಗಾಣಿಗೇರ ಮಲ್ಲಪ್ಪನ
ಉಡುವ ಧೋತರ ತಂದಾನೆ ತೊಡುವ ಅಂಗಿ ತಂದಾನ
ಕೈಗಿ ಕಂಕಣ ತಂದಾನೆ ತೆಲಿಮ್ಯಾಲ ಪಟಗ ತಂದಾನೆ
ಹಂತ ಯಾಳ್ಯಾದೊಳಗೇನೆ ಯಾರು ಬರುವುತಾರೇನ
ಹಡಪದ ನಾಗಪ್ಪಣ್ಣನ ಕರಕೊಂಡು ಬರುವುತಾನೇನ
ನಬ್ಬನೆ ನವರಾತರೆ ಸಬ್ಬನೆ ಸರಹೊತ್ತೇನ
ಹಡಪದ ನಾಗಪಣ್ಣಗ ಚಾಜ ಕೊಡಬೇಕಾದರ
ಚಾಜ ಕೊಡುವುತಾರೇನೆ ಒಳ್ಳೆದು ಒಳ್ಳೆದು ಅಂದಾರ
ನಬ್ಬನೆ ನವರಾತರೆ ಸಬ್ಬನೆ ಸರಹೊತ್ತೇನ
ಗಾಣಗೇರ ಮಲ್ಲಪ್ಪನ ಮಗಳೆ ತಾಯಿ ಬಂದಾರ
ಮಗಳ ತಾಯಿ ಬಂದಾರ ಗಂಡನ ಕರಕೊಂಡು ಬಂದಾರ
ಊರ ಒಳಗನಲ್ಲಪ್ಪ ಗೌಡನ ಕರಕೊಂಡು ಬಂದಾರ
ಗೌಡಗ ಸುದ್ದಿ ಹೇಳ್ಯಾರ ಕರಮಣಿ ಕಟ್ಟುತಾರೇನ
ಗಿಡದ ಬುಡುಕನಲ್ಲಪ್ಪ ಲಗ್ಗನಾಗುತಾವೇನ
ನೀನೇ ಹೆಣ್ಣ ಕೊಟ್ಟಿದೆ ನೀನೆ ಬಟ್ಟಿ ತಂದಿದೆ
ನನ್ನಬಲ್ಲಿ ಇದ್ದದ್ದು ಮೂರೇ ಮಳ ಕಂಬಳೆ
ಮೂರ ಮಳ ಕಂಬಳೆ ಹೆಗಲಿಗ ಇರಬೇಕಂದಾನ
ಮರ್ತ್ಯಲೋಕದೊಳಗೇನ ಗಾಣಿಗ ಹೋಗಲಿಬೇಕಯ್ಯ
ಗಾಣಿಗ ಹೋಗಲಿಬೇಕಪ್ಪ ಗೌಳಿಗಿ ಹೋಗಲಿಬೇಕಯ್ಯ
ಗೌಳಿಗಿ ನಾದರಲ್ಲಪ್ಪ ನೀನೆ ಆಗಲಿಬೇಕಯ್ಯ
ಹತ್ತು ಎಮ್ಮಿ ಕಟ್ಟಿದರ ಒಂದು ಆಕಳ ಕಟ್ಟಯ್ಯ
ಆಕಳ ಹಾಲಿನಿಂದೇನೆ ನೀನೇ ಸೌಕರ ಆಗಿದೆ
ಆಕಳ ಪುಣ್ಯದಲಿಂದೇನೆ ನೀನೆ ಮಾಡಿದಿ ಅಂದಾರ
ಎರಡು ಎಮ್ಮಿ ಇದ್ದರೆ ಒಂದೇ ಆಕಳ ಕಟ್ಟಯ್ಯ
ಎರಡ ಎಮ್ಮಿ ಇದ್ದರೆ ಒಂದು ಆಕಳ ತರಬೇಕ
ಎಂಟು ಎಮ್ಮಿನಿದ್ದರ ಒಂದೇ ಆಕಳ ಇರಬೇಕ
ಹತ್ತು ಕುಣಿಕಿ ಬಿಚ್ಚಾಗ ಎಮ್ಮಿ ಬಯಲಿಗ ಬಿಡಬೇಡ
ನಾನು ಕೊಟ್ಟ ಮೂರ ಮಳದ ಕಂಬಳಿ ಹೆಗಲಿಗೆ ಇರಬೇಕ
ಕಂಬಳಿ ಹೆಗಲಿಗ ಇರಬೇಕ ಬಡಗಿ ಕೈಯಾಗ ಇರಬೇಕ
ಒಳ್ಳೆದು ಒಳ್ಳೆದು ಅಂದಾನೆ ಗಾಣಿಗೇರ ಮಲ್ಲಪ್ಪನ
ರಾತ್ರಿ ಮಗಳ ಕೊಟ್ಟಾನೆ ರಾತರಿ ಲಗ್ಗನ ಮಾಡ್ಯಾನ
ಮಗಳ ಖೂನ ಮಡ್ಡಪ್ಪಗ ಕಂಬಳಿ
ಕಂಬಳಿ ಯಾರಿಗ ಕೊಟ್ಟಾನ ಗೌಳಿಗ್ಯಾನ ಹೆಗಲಿಗೆ
ಗೌಳಿಗೇನ ಹೆಗಲಿಗೆ ಮೂರ ಮಳದ ಕಂಬಳೆ
ಮೂರ ಮಳದಿ ಕಂಗಳೆ ಶಿವಲಿಂಗಮ್ಮ ನೂತಾಳ
ಶಿವಲಿಂಗಮ್ಮ ನೂತಾಳೆ ಪದಮಾಗೊಂಡ ನೈದಾನ
ಪದುಮಾಗೊಂಡ ನೈದಾರ ಮಡ್ಡಪ್ಪನ ಕಂಬಳೆ
ಮಡ್ಡಪ್ಪನ ಹುಟ್ಟುಗಂಬಳಿ ಗೌಳಿಗೇನ ಮೈಮೇಲ
ಗೌಳಿಗೇನ ಮೈಮ್ಯಾಲ ಕಂಬಳಿ ಹೋಗುತಾವೇನ
ಕಂಬಳಿ ಹೋಗುತಾವೇನ ಗೌಳಗೇರ ಮಗನೇನ
ಮಲ್ಲಪ್ಪನ ಮಗಳೇನ ಮಡ್ಡಪ್ಪ ಲಗ್ಗನಾದನ
ಮಡ್ಡಪ್ಪನ ಲಗ್ಗನಾದವೆ ಕಂದ ಕಣ್ಣ ತೆರದಾವ
ಮಡ್ಡಪ್ಪ ಲಗ್ನನಾದರ ಗಂಗಮ್ಮ ಶರಣೆ ಇದ್ದಾಳ
ಗಂಗಮ್ಮನ ಹೊಟ್ಟೇಲಿ ಯಾರ ಹುಟ್ಟುತಾರೇನ
ಗಂಗಮ್ಮನ ಹೊಟ್ಟೇಲಿ ಅಡವೆಪ್ಪ ಹುಟ್ಟುತಾನೇನ
ಅಡವೆಪ್ಪ ಹುಟ್ಟುತಾನೇನ ಮಡಪ್ಪನ ಹೊಟ್ಟೀಲಿ
ದೇವಿಧರ್ಮರ ಹಾಡೇನೆ ಇಲ್ಲಿಗ ಬರುವುತಾವೇನ
ಇಲ್ಲಿಗ ಬರುತಾವೇನ ಶಿವಲಿಂಗಮ್ಮ ನೋಡಯ್ಯ
ನನ್ನ ಮಗನ ಮ್ಯಾಲೇನ ಖೂನ ಹಿಡಿತಿನಂದಾಳ
ಖೂನ ಹಿಡಿತಿನಂದಾಳೆ ಯಾವಲಿ ಹೋಗ್ಯಾನಂದಾಳ
ಹಾಂಗ ಹೀಂಗ ಹೋಗದರೊಳಗ ಗೌಳಗೇರ ಮೈಮೇಲ
ಗೌಳಗೇರ ಮೈಮೇಲ ಹೆಗಲ ಮ್ಯಾಲೆ ಕಂಬಳೆ
ಹೆಗಲ ಮ್ಯಾಲಿನ ಕಂಬಳಯ್ಯಾ ಯಾರು ನೋಡುತಾರೇನ
ಪದುಮಗೊಂಡ ನೊಯಿದಾ ಕಂಬಳಿ ಶಿವಲಿಂಗಮ್ಮ ನೂಲ ಮಾಡ್ಯಾಳ
ಮಡದಿ ಪುರುಷ ಕೂಡ್ಯಾರಯ್ಯ ಕಂಬಳಿಗುರುತ ಹಿಡದಾರ
ಹೆಗಲ ಮ್ಯಾಲ ಕಂಬಳೆ ಖೂನ ಹಿಡಿಯುತಾಳೇನ
ಪದುಮಗೊಂಡ ಬಂದಾನೆ ಕಂಬಳಿ ಖೂನ ಹಿಡದಾನ
ಕಂಬಳಿ ಖೂನ ಹಿಡದಾನೆ ಹ್ಯಾಂಗ ಬಂದಾದಂದಾನ
ಇದ್ದ ಮೂರ ಮಳದಾಗ ಕಂಬಳಿ ಇಲ್ಲಿಗ ಬಂದಾದ
ಬಾರೋ ಬಾರೋ ಗೌಳಿಗ್ಯಾ ಕಂಬಳಿ ಹ್ಯಾಂಗ ಬಂದಾವ
ಯಾರ ಕೊಟ್ಟ ಕಂಬಳಿ ಇದು ಎಲ್ಲಿಂದ ತಂದ ಕಂಬಳೆ
ಇದೇ ಕಂಬಳಿ ಅಲ್ಲಪ್ಪ ಯಾರ ಕೊಟ್ಟಾರ ಹೇಳಪ್ಪ
ಯಾರು ಕೊಟ್ಟಾರ ಹೇಳಪ್ಪ ಗೌಳಗ್ಯಾನ ಕೇಳ್ಯಾನ
ಒಳ್ಳೆದು ಒಳ್ಳೆದಂದಾನ ಗೌಳಿಗ್ಯಾ ಖರೇಯಾ ಹೇಳತಿನಿ ಅಂದಾನ
ಗೌಳಿಗ ಬರುವುತಾನೇನ ಕಂಬಳಿ ಖೂನ ಹೇಳ್ಯಾನ
ಕಂಬಳಿ ಖೂನಾ ಮಾರಾಯಾ ಹ್ಯಾಂಗ ಬಂದಾದಂದಾನ
ಕಾಡಿನಲ್ಲಿ ಹೋಗೀನೆ ನಾನು ಗಿಡದ ಬಲ್ಲಿ ನೋಡೇನೆ
ಗಿಡದ ಬಲ್ಲಿ ನೋಡೀನೆ ನಾನು ವಾಸ ಅವನು ಮಾಡ್ಯಾನ
ಅಡವಿ ಗಿಡದಾಗ ಇದ್ದಾವ ಕಾಡ ಆಕಳಂದಾನ
ಕಾಡ ಆಕಳ ಬಲ್ಲೇನ ಮಡ್ಡಪ್ಪ ಇರುವುತಾನೇನ
ಮಡ್ಡಪ್ಪ ಇರುವುತಾನೇನ ದೊಡ್ಡವನಾಗುತಾನೇನ
ವಾಸ ಗಿಡದಾಗ ಮಾಡಿದನಯ್ಯ ವಯಸ್ಸನಾಗುತಾವೇನ
ನಾನು ಬರವದಿಂದೇನ ಮಡ್ಡಪ್ಪ ಹೇಳುತಾನೇನ
ಮೊದಲೆ ಗಾಣಿಗ್ಯಾ ಇದ್ದಿನಿ ನಾನು ಅನ್ನ ಇಲ್ಲದೆ ಕುಂತಿನಿ
ಹಾಲ ನಮಗ ಕೊಟ್ಟಿದನಯ್ಯ ಹಾಲದಿಂದ ಬದುಕೇವ
ನಾನು ತಂದನಲ್ಲಪ್ಪ ವ್ಯಾಪಾರ ಮಾಡೇನಂದಾನ
ವ್ಯಾಪಾರಿ ಮಾಡೇನಂದಾನ ಭೂಮಿಕೊಂಡೇನಂದಾನ
ದೌಳತನ ಬಂದಾದಲ್ಲಿ ಸೌಕಾರ ಮಾಡ್ಯಾನಂದಾನ
ಉಪಗಾರ ಆದವಂದೇನ ಹೊಟ್ಟಿಲಿ ಹುಟ್ಟಿದಮಗಳೇನ
ಮಡಪ್ಪನ ಕೇಳಿನಲ್ಲೋ ನಾನು ಮಗಳ ಕುಡತೀನಿ ಅಂದೇನ
ಮಗಳ ಕುಡತೀನಿ ಅಂದೇನೆ ಮರ್ಯಾದಿ ತರತೀನಿ ಅಂದೇನ
ಹೊಟ್ಟಿಲಿ ಹುಟ್ಟಿದ ಮಗಳೇನ ಗಂಗಮ್ಮನ ಕೊಟ್ಟೇನಂದಾನ
ಗಂಗಮ್ಮನ ಕೊಟ್ಟೇನಂದಾನ ಲಗ್ಗನ ಮಾಡಿದಂದಾನ
ಹೊಟ್ಟಿಲಿ ಹುಟ್ಟಿದ ಮಗಳ ಕೊಟ್ಟೆ ಮರ್ಯಾದಿ ನಾನೆ ತಂದೀನೆ
ನನಗ ಮರ್ಯಾದಿ ಮಾಡಿದಿ ನೀನು ನನಗ ಮಗಳ ಕೊಟ್ಟೀದೆ
ನಿನ್ನ ಖೂನ ಕೊಟ್ಟೀದೆ ಮಲ್ಲಪ್ಪ ನನ್ನ ಖೂನ ಕೊಡತೀನ
ಹುಟ್ಟಗಂಬಳಿ ಕೊಟ್ಟಾನ ನನಗ ಒಂದಾ ಆಕಳ ಕೊಟ್ಟಾನ
ಹಾಸಿ ಹೊರುವುದು ಕಂಬಳಿಯಲ್ಲಿ ಹೆಗಲಿಗ ಇರುವದು ಕಂಬಳೆ
ಹೆಗಲಿಗ ಇರುವದು ಕಂಬಳೆ ಮಡಪ್ಪ ನನಗೆ ಕೊಟ್ಟಾನ
ಮಡಪ್ಪ ನನಗೆ ಕೊಟ್ಟಾನೆಂದು ಅವನೇ ಹೇಳುತಾನೇನ
ಮಡಪ್ಪ ನನಗೆ ಕಂಬಳಿ ಕೊಟ್ಟಾನ ಮಲ್ಲಪ್ಪ ಹೇಳುತಾನೇನ
ಗೌಳಗ್ಯಾನಾಗಿನಂದಾನ ಹೆಗಲಿಗ ಕಂಬಳಿ ಬಂದಾದಂದಾನ
ಕಂಬಳಿ ನನಗೆ ಬಂದಾದ ಒಂದಾ ಆಕಳ ನನಗೆ ಕೊಟ್ಟಾನ
ನಾನು ಎರಡಾ ಕೊಟ್ಟೀನಿ ಅವನಿಗಿ ನನಗ ಎರಡು ತೋರಸ್ಯಾನ
ಪದಮಾಗೊಂಡನಲ್ಲೇಳ ಮಗನೀಗ ಹುಡುಕುತಾನೇನ
ಕಾಡಿನಲ್ಲಿ ವಾಸ ಮಾಡಿ ಮಗನ ಹಡದಾನೇನಯ್ಯ
ಮಡ್ಡಪ್ಪನೆಂಬ ತಂದೇನ ಆಡುವೆಪ್ಪನೆಂಬ ಮಗನೇನ
ಪದುಮಗೊಂಡ ಶಿವಲಿಂಗಮ್ಮ ಇಬ್ಬರು ಬುರುವುತಾರೇನ
ಇಬ್ಬರು ಬರುವುತಾರೇನಯ್ಯ ಕಂಬಳಿ ಕೇಳುತಾರೇನ
ಕಂಬಳಿ ಗುರುತ ಹೇಳಿದನಯ್ಯ ಮಗನ ಪಡದೀನಿ ಅಂದಾರ
ನನ್ನ ಖೂನ ಅವರ ಬಲ್ಲಿ ಅವರ ಖೂನ ನನ್ನ ಬಲ್ಲಿ
ತಂದಿ ನಾನೇ ಅಂದಾನೋ ಅಲ್ಲಿ ಪದುಮಾಗೊಂಡ ಹೇಳ್ಯಾನ
ತಾಯಿ ನಾನೇ ಅಂದಾಳೋ ಅಲ್ಲಿ ಶಿವಲಿಂಗಮ್ಮ ಹೇಳ್ಯಾಳ
ಕಾಡಿನಲ್ಲೆ ಕಳದಿದಿಯಪ್ಪ ಮಡಪ್ಪನಂತ ಹೇಳ್ಯಾಳ
ಕಾಡಿನಲ್ಲೆ ಕಳದಿದಿಯಪ್ಪ ಮಡಪ್ಪನಂತ ಹೇಳ್ಯಾರ
ಮಡಪ್ಪನಂತ ಹೇಳ್ಯಾರವರು ನನ್ನ ಮಗನೇಳು ಅಂದಾರ
ತಾಯಿ ಮಕ್ಕಳು ಕೂಡಿದರಯ್ಯ ತಂದಿ ಮಕ್ಕಳು ಕೂಡ್ಯಾರ
ತಂದಿ ಮಕ್ಕಳು ಕೂಡ್ಯಾರವರು ಪದುಮಗೊಂಡ ಹೇಳ್ಯಾನ
ಉಣ್ಣಿ ಕಂಕಣದವರಿಗಪ್ಪ ಹಿರಿಯಾ ಮಗನಂದಾರ
ಹತ್ತಿ ಕಂಕಣದವರಿಗಪ್ಪ ಸಣ್ಣ ಮಗನ ನೀನಯ್ಯ
ನೀನೇ ದೊಡ್ಡ ತಮ್ಮನೆ ಅವರೇ ಸಣ್ಣ ತಮ್ಮದೇರಾ
ಶಿವಲಿಂಗಮ್ಮನ ಮಕ್ಕಳಿಗಯ್ಯ ಹತ್ತಿ ಕಂಕಣದವರಿಗೆ
ಹತ್ತಿಕಂಕಣದವರಿಗಯ್ಯ ನೀವೇ ತಮ್ಮದೇರು ಅಂದಾಳ
ಮಡಪ್ಪ ಪಾಲ ಕೊಟ್ಟಾನೆ ಅಣ್ಣದೇರು ಪಾಲ ಕೊಟ್ಟಾನ
ಶಿವಲಿಂಗಮ್ಮನ ಮಕ್ಕಳಿಗಯ್ಯ ಇಬ್ಬರಿಗ ಪಾಲ ಕೊಟ್ಟಾರ
ಸಿದ್ಧಮ್ಮನ ಮಕ್ಕಳಿಗಲ್ಲೊ ಅವರು ಕುರಿಯಾ ಹಂಚಿ ಕೊಟ್ಟಾರ
ತಾಯಿದೇರಿಗ ಹಿಡಿದೇವೆ ತಂದಿನ ಬಿಟ್ಟು ಬಂದೀವೆ
ಸಿದ್ಧಮ್ಮನ ಗಂಡ ಪದುಮಾಗೊಂಡ ಶಿವಲಿಂಗಮ್ಮನ ಗಂಡ ಪದುಮಾಗೊಂಡ
ಇಬರ ಇಬ್ಬರಿಗಲ್ಲೇಳಯ್ಯ ಪದುಮಾಗೊಂಡನಿದ್ದಾನೆ
ತಂದಿ ಹಿಡದು ಬಂದಾರೆ ನಾವೇ ಗೊಂಡಗುರುಬರೆ
ಕಾಡಿನಲ್ಲಿ ಇದ್ದರ ನಾವ ಕಾಡಕುರಬರಾದೇವೆ
ಕಾಡ ಕುರುಬರು ನಾವೇನಾದೇವು ಅಡವೀಯ ಕುರುಬರು ನಾವೇನ
ಗೊಂಡಗುರಬರು ನಾವೇನಯ್ಯ ಪದುಮಾಗೊಂಡನ ಮಕ್ಕಳೆ
ಗೊಂಡಗೋಳಾ ಪದಗೋಳಯ್ಯ ಇಲ್ಲಿಗ ಮುಗದಾವೇನಯ್ಯ
ಇಲ್ಲಿಗ ಇದು ಒಂದು ಸಂದೇನ ಹಾಡಿದರ ಪದ ಮುಂದೇನ
ಕಳಸವಿಟ್ಟರ ಕವಿತ ಕಟ್ಟ್ಯಾರ ಹೊನ್ನ ಜಗ್ಗೂನಿ ಗೌಡರೋ
ದೇವರ ಬಂದಾರ ಬನ್ನೀರೆ.