೧. ಕೈಲಾಸದ ಹಾಡಿಕೆಗಳು

ಶಿವನೇ ನಮ್ಮಯಿ ದ್ಯಾವರು ಬಂದಾರ ಬನ್ನೀರೆ
ಸ್ವಾಮಿ ನಮ್ಮಯಿ ದ್ಯಾವರು ಬಂದಾರ ಬನ್ನೀರೆ
ಹಾಡ ಕಲಿಸಿದ ಹರ ನಿನ್ನ ಹಾಡೇನ ಓದ ಕಲಸಿದ ಗುರುವಿನ
ಓದ ಕಲಿಸಿದ ಗುರುವಿನ ಧರ್ಮುರ ಸಂಧಿಗೊಮ್ಮಿ ನೆನದೇವ
ನಮಗೊಂದು ಹಾಡಿನ ವರವ ಕೊಟ್ಟಾರ ನಿಮಗೊಂದು ಮಲ್ಲಿಗಿ ಸರವಯ್ಯ
ನಿಮಗೊಂದು ಮಲ್ಲಿಗಿ ಸರವೋ ಸಾಯಿಬಣ್ಣಾ ಸಭಾದೊಳಗೆ ಕೊಂಡಾಡೇವ
ದೇವಿಧರ್ಮುರ ಹಾಡೇನೆ ಎಲ್ಲಿಗಿ ಬರುತಾವೇನಯ್ಯ
ಸತ್ಯಧರ್ಮುರ ಹಾಡೇನೆ ಎಲ್ಲಿಗಿ ಬರುತಾವೇನಯ್ಯ
ಯಾವ ಠಾಣೆದ ಮ್ಯಾಲೇನೆ ಜತ್ತುನಾರಾಯಣಪುರುದಾಗ
ಜತ್ತುನಾರ‍್ಯಾಣಪುರದಾಗೆ ಗ್ರಾಮನೇಳು ಹುಲಿಜಂತ್ಯಾಗ
ಖೆಂಡದಂತೆ ದೇವರಿಗೆ ದಿಂಡಗದ್ದುಗಿ ಹಾಕ್ಯಾನ
ದಿಂಡಗದ್ದುಗಿ ಹಾಕ್ಯಾನ ಮಾಳಪ್ಪ ಮಂಡಿಲಿ ಶಾಯವ ಮಾಡ್ಯಾನ
ಊಟಕ ಹುಲಿಗಿಣ್ಣವ ಕೊಟ್ಟಾನ ಆಡಕ ಹುಲಿಮರಿಯೇನ
ನಂದನ ಬನದಾನ ಲಿಂಗ ಬಾ ನನ್ನ ರುದ್ದರ ಮಾಯವ್ವನ ತಮ್ಮನ
ಹಾಡಿಗ ಹಾಡ ಜೋಡಾಗಿ ಬಾ ನನ್ನ ಭವುಳೆ ನಾಗಠಾಣಿ ಸಿದ್ದನ
ಭವುಳೆನಾಗಠಾಣಿ ಸಿದ್ಧ ಬಾ ನನ್ನ ಅಕ್ಕ ಮಾಯವ್ವನ ತಮ್ಮನ
ನೀ ನನ ಸದರಿನ ಮ್ಯಾಲೇನ ನಾ ನಿನ ನೆದರಿನ ಮ್ಯಾಲೇನ
ಸದರಿಗ ಒಪ್ಪುತ ಸಲಾಮ ಕೊಟ್ಟೇನ ಹುಜುರದ ಇಳಿಯಾ ಕಳವಯ್ಯ
ಹುಜುರದ ಇಳಿಯಾ ಕಳವಲ್ಯೋ ನನ್ನ ಮದ್ದಲಿ ಹುಲಿಮನಿ ಸಿದ್ದನ
ಮದ್ದಲಿ ಹುಲಿಮನಿ ಸಿದ್ಧ ಬಾ ನನ್ನ ರುದ್ಧರ ಮಾಯವ್ವನ ತಮ್ಮನ
ನಡುವಟ್ಟ ನಾಗರಕೆರಿಯೇನ ಜಂಬುದ್ವೀಪದ ಗಡ್ಡೇನ
ಕಲ್ಲ ಕಾಯವ ಎಲ್ಲೆಲ್ಲಿ ನೋಡಿಲ್ಲ ಅಲ್ಲೆ ಶಾಹಾಪೂರ ಗರಡ್ಯಾಗ
ಗರಡಿ ನಾಗರಕೆರಿಯಾಗ ಧರ್ಮುರ ಕಲ್ಲ ಕಾಯದಾವೇಯ್ಯ
ನಡುವಟ್ಟಿ ನಾಗರಕೆರೆಯೇನ ಜಂಬುದ್ವೀಪದ ಗರಡ್ಯಾಗ
ನೀರೆ ನಿರಂಕಾರನಪ್ಪ ಅಲ್ಲಿ ಹನ್ನೆರಡು ಅಮಾಸಿ ವಳಗೇನ
ಕಾಲ ಕೆದರುತಾನೇನ ಬಸವ ಡುರುಕಿ ಹೊಡಿಯುತಾನೇನ
ನಡುವಟ್ಟಿ ನಾಗರಕೆರಿಯ ವಳಗ ಜಂಬುದ್ವೀಪದ ಗಡ್ಡೇನ
ಕೆಂಪು ಮಡ್ಡಿ ಕೆಳಗೇನ ಸೈದಾಪೂರ ಊರೇನ
ಸೈದಾಪೂರ ಊರಾಗೆ ಮಾಳಿಂಗರಾಯನಿದ್ದಾರ
ಸಿದ್ದಪ್ಪ ಶಿವಗೇನಿ ಅಲ್ಲಪ್ಪ ಹೊಸದಾಗಿ ಹಾಡುವ ಕವಿಗೋಳ
ಮಹಾದೇವ ಮಾಳಪ್ಪ ಇವರ ಹಿಂದ ಸಂಗಡಿಗರೇನ
ನೀರೇ ನಿರಂಕಾರದೊಳಗೆ ಭೂಮಿನಾರ ಇಲ್ಲಯ್ಯಾ
ನೀರೆ ನೀರಂಕಾರದೊಳಗೆ ಭೂಮಿನಾರ ಇಲ್ಲಯ್ಯ
ಆಕಾಶನಿಲ್ಲೇಳಂದಾರ ಭೂಮಿನಿಲ್ಲೇಳಂದಾರ
ನೀರೆ ನೀರಂಕಾರದೊಳಗೆ ಗಾಳಿ ಮೊದಲ ಇಲ್ಲೇನ
ನೀರೆ ನೀರಂಕಾರದೊಳಗೆ ತೆರಿಗೋಳು ಮೊದಲ ಇಲ್ಲೇನ
ತೆರಿಗೋಳು ಮೊದಲ ಇಲ್ಲೇನಪ್ಪಲಿ ನೀರ ಮ್ಯಾಲೊಂದು ಗುಳ್ಳೇನ
ನೀರ ಮ್ಯಾಲೆ ಗುಳ್ಳೆನಪ್ಪಲ್ಲಿ ಚಂಡ ಮೊದಲು ಆದವ
ಚಂಡ ಮೊದಲ ಆದವಪ್ಪಲ್ಲಿ ದಂಡ ಹಿಂದ ಆದವ
ಚಂಡಿಗ ಕೂಡ್ಯಾವ ಮುನ್ನೂರದ ಅರವತತು ನರಗೋಳು
ಚಂಡ ಮೊದಲ ದೇಹ ತಯ್ಯಾರ ಕಾಲ ತಯ್ಯಾರ ಆದವ
ಹರನೇ ತಯ್ಯಾರಾದವಪ್ಪಲಿ ಗುರುನೇ ತಯ್ಯಾರಾದವ
ನಾದ ಶೋಧ ತಯ್ಯಾರಾದವಪ್ಪಲಿ ಶೋಧ ತಯ್ಯಾರಾದವ
ನಾದ ಶೋಧ ತಯ್ಯಾರಾದವು ಹರನೇ ಗುರುವ ತಯ್ಯಾರ
ಅಷ್ಟವರ್ಣದ ಜ್ಯೋತಿರ್ಲಿಂಗ ಭೂಮಿ ತಯ್ಯಾರಾದವ
ಜ್ಯೋತಿರ್ಲಿಂಗ ತಯ್ಯಾರಾದರ ಧ್ಯೇಯ ಬೆಳೆಯುತಾವೇನ
ಗುರುವ ಶೋಧ ಮಾಡ್ಯಾನಪ್ಪಲ್ಲಿ ಹರನೇ ನೋಡುತಾನೇನ
ಹರನೇ ನೋಡುತಾನೇನಪ್ಪಲ್ಲಿ ನಾದ ಕೇಳುತಾನೇನ
ನಾದ ಕೇಳುತಾನೇನಪ್ಪಲ್ಲಿ ಶೋದ ನೋಡುತಾನೇನ
ಮಾತ ಸುರವನಾದವಪ್ಪಲ್ಲಿ ಮಂತರ ಸುರುವನಾದವ
ಮಂತರ ಸುರುವನಾದವಪ್ಪಲ್ಲಿ ಬಾವನ್ನ ತಯ್ಯಾರಾದವ
ಗುರುವ ತಯ್ಯಾರಾದವಪ್ಪಲ್ಲಿ ಐವತ್ತೆರಡು ಅಕ್ಷರ
ಐವತ್ತೆರಡು ಅಕ್ಷರದಿಂದ ಮಾತು ಮಂತರ ನಡದಾವ
ಮಾತು ಮಂತರ ನಡದಾವಪ್ಪಲ್ಲಿ ವಿದ್ಯಾಬುದ್ಧಿ ನಡದಾವ
ಅನಂತ ಯುಗದ ಒಳಗೇನಪ್ಪಲಿ ಅಖಂಡೇಶ್ವರನಿದ್ದಾನ
ಅಖಂಡೇಶ್ವರ ತಯ್ಯಾರಾದರ ಮಾತು ಮಂತರ ತಯ್ಯಾರ
ಅನಂತ ಯುಗದ ಒಳಗೇನಪ್ಪಲ್ಲಿ ಅಖಂಡೇಶ್ವರನಿದ್ದಾನ
ಅಖಂಡೇಶ್ವರನಿದ್ದಾನಪ್ಪಲ್ಲಿ ಪಿಂಡಾಂಡ ತಯ್ಯಾರಾದವ
ನೀರ ಒಳಗ ಇರುವ ಬೀಜ ಇದ್ದು ಇಲ್ಲದಂಗ ಎದ್ದಾವ
ಇದ್ದು ಇಲ್ಲದಂಗ ಎದ್ದಾವಪ್ಪಲ್ಲಿ ಅಖಂಡೇಶ್ವರ ಬಂದಾನ
ಅನಂತ ಯುಗದ ಒಳಗೇನಪ್ಪಲ್ಲಿ ಅಖಂಡೇಶ್ವರನಿದ್ದಾರ
ನೀರೇ ನಿರಂಕಾರದೊಳಗೇನ ನಿರ್ಭಯ ವಸ್ತುನಾದವ
ನಿರ್ಭಯ ವಸ್ತುನಾದವಪ್ಪಲ್ಲಿ ಮಾತು ಮಂತರ ಬಂದಾವ
ಎರಡು ಯುಗದ ಒಳಗೇನಪ್ಪಲ್ಲಿ ಯಾರು ಇಲ್ಲೇಳಂದಾರ
ಎರಡು ಯುಗದ ಒಳಗೇನಪ್ಪಲ್ಲಿ ನೀರೆ ನೀರಂಕಾರೇನ
ನಿರ್ಭಯ ವಸ್ತುವಿನ ಒಳಗೇನಪ್ಪಲ್ಲಿ ಅಖಂಡೇಶ್ವರನಾದನ
ಅಖಂಡೇಶ್ವರ ಹಿಂದಕ ಆದನ ನಿರ್ಬೈಲ ವಸ್ತು ಬಂದಾವ
ಬಾವನ್ನ ವಿದ್ಯಾ ಬಂದಾವಪ್ಪಲ್ಲಿ ಅಕ್ಷರ ಪುಟ್ಯಾವೇನಯ್ಯ
ಐವತ್ತೆರಡು ಅಕ್ಷರದಿಂದ ಕೋಟ್ಯಾನುಕೋಟಿ ಬೆಳೆದಾವ
ನಾಮ ಸುರವನಾದವಪ್ಪಲ್ಲಿ ನೇಮ ಸುರುವನಾದವ
ಮಾತು ಮಂತರ ಸುರುವನಾದವ ಖಾನ ಖೂನ ನಡದಾವ
ಖಾನ ಕೂನ ನಡದಾವಪ್ಪಲಿ ಓಂ ಎಂಬ ಅಕ್ಷರ ನಡದಾವ
ಓಂ ಎಂಬ ಅಕ್ಷರ ನಡದಾವಪ್ಪಲ್ಲಿ ಬಿಜಾಂಕುರ ನಡದಾವ
ನಿರ್ಬೈಲ ವಸ್ತು ನಡದಾವಪ್ಪಲಿ ಮನಸಿಗ ತಿಳಿಯತಾದೇನ
ಎರಡು ಯುಗವ ದಾಟೀವಪ್ಪಲ್ಲಿ ಇಲ್ಲಿಗಿ ನಿಂತಿವಿ ಅಂದಾರ
ಎಡಕಿನ ಫಕಡಿ ಒಳಗೇನಪ್ಪಲ್ಲಿ ಎಲವ ತೆಗಿಯುತಾನೇನ
ಎಡಕಿನ ಫಕಡಿ ಒಳಗೇನಪ್ಪಲ್ಲಿ ಮೂರ ಗಣಕಿ ಎಲವೇನ
ಮೂರ ಗಣಕಿ ಎಲವೇನಪ್ಪಲ್ಲಿ ಕಡಿಯಾಕ ತಗದು ಇಟ್ಟಾರ
ಕಡಿಯಾಕ ತಗದು ಇಟ್ಟಾನಪ್ಪಲ್ಲಿ ನೀರೆ ನಿರಂಕಾರದೊಳಗ
ನಿರ್ಬೈಲ ವಸ್ತುನಲ್ಲೇಳಪ್ಪ ಮಾತು ಮಂತರ ನಡದಾವ
ಮಾತು ಮಂತರ ನಡದಾವಪ್ಪಲ್ಲಿ ಮಂತರ ಶಕ್ತಿ ನಡದಾವ
ಮಂತರ ಶಕ್ತಿ ನಡುದಾವಪ್ಪಲ್ಲಿ ಆದಿಯ ಶಕ್ತಿ ಪಡದಾವ
ಮಂತರ ಶಕ್ತಿ ನಡದಾವಪ್ಪಲ್ಲಿ ಆದಿಯ ಶಕ್ತಿ ಪುಟದಾಳ
ಆದಿಯ ಶಕ್ತಿ ಪುಟದಾಳಪ್ಪಲ್ಲಿ ನಾರಿನಾಗಿ ನಿಂತಾಳ
ನಾರಿನಾಗಿ ನಿಂತಾಳಪ್ಪಲ್ಲಿ ಹೆಣ್ಣ ಗೊಂಬಿನಾದಳ
ಹೆಣ್ಣ ಮಗಳ ಮವ್ವದ ಗೊಂಬಿ ನಾರಿನಾಗಿ ನಿಂತಾಳ
ನಾರಿನಾಗಿ ನಿಂತಾಳಪ್ಪಲ್ಲಿ ಖಾನ ಖೂನ ನಡದಾವ
ಕಾಮ ಕ್ರೋಧ ನಡದಾವಪ್ಪಲ್ಲಿ ಮೋಹ ಮಶ್ಚರ ನಡದಾವ
ನಾರಿನಾಗಿ ನಿಂತಾಳಪ್ಪಲ್ಲಿ ಮಡದೀಯನಾಗಿ ಬಂದಾಳ
ಮಡದಿಯನಾಗಿ ಕುಂದ್ರತಾಳೇನ ಎಡಕ ಕುಂದ್ರುತಾಳೇನ
ಖಾನ ಖೂನ ನಡದಾವಪ್ಪಲ್ಲಿ ಮೋಹ ಮಶ್ವರ ನಡದಾವ
ಮೋಹ ಮಶ್ವರ ನಡದಾವಪ್ಪಲ್ಲಿ ಬೀಜನಾಗಿ ನಿಂದ್ರತಾವೇನ
ಬೀಜದ ಮ್ಯಾಲೆ ಅಂಕುರ ಪುಟದ ಬೀಳುತಾವೇನ
ಪುಟದ ಬೀಳುತಾವೇನಪ್ಪಲ್ಲಿ ಆದಿಯ ಶಕ್ತಿ ಒಳಗೇನ
ಆದಿಯ ಶಕ್ತಿ ಅಲ್ಲೇನಪ್ಪಲ್ಲಿ ಗರ್ಭಿಣಿ ಆಗುತಾಳೇನ
ಗರ್ಭಿಣಿ ಆಗುತಾಳೇನಪ್ಪಲ್ಲಿ ಒಂದಕ ಎರಡು ನಡದಾವ
ಒಂದಕ್ಕ ಎರಡು ನಡದಾವಪ್ಪ ರಕ್ಕಸರು ಹುಟ್ಟುತಾರೇನ
ರಕ್ಕಸರು ಹುಟ್ಟುವ ಯಾಳೇನಪ್ಪಲ್ಲಿ ಮೂರ ಯುಗಗೋಳು ಆದವ
ನೀರೆ ನಿರಂಕಾರದೊಳಗ ನಿರ್ಭಯ ವಸ್ತುನಿದ್ದಾವ
ಅನಂತ ಯುಗದ ವಳಗೇನಪಲ್ಲಿ ಅಖಂಡೇಶ್ವರನಿದ್ದಾನ
ನಿರ್ಭೈಲ ವಸ್ತುದೊಳಗೇನಪ್ಪಲ್ಲಿ ಆದಿಯ ಶಕ್ತಿ ಪುಟದಾಳ
ಆದಿಯ ಶಕ್ತಿ ಪುಟದಾಳಪ್ಪಲ್ಲಿ ರಕ್ಕಸರು ಹುಟ್ಟತಾರೇನ
ಮಡಿದಯಾಗಿ ಕುಂತಾಳಪ್ಪಲ್ಲಿ ಎಡಕ ಕುಂದ್ರುತಾಳೇನ
ಅನಂತ ಯುಗದೊಳಗು ಕುಂತಾಳಪ್ಪಲ್ಲಿ ಎರಡು ಯುಗಗೊಳು ನಡದಾವ
ಎರಡು ಯುಗದ ಒಳಗೇನಪ್ಪಲ್ಲಿ ಮಡದಿ ಎಡಕೆ ಬಂದಾಳ
ರಕ್ಕಸರು ಹುಟ್ಟುವ ಯಾಳೇನಪ್ಪಲ್ಲಿ ಮೂರ ಯುಗಗೋಳುನಾದವ
ಅಂಧಃಕಾರದೊಳಗೇನಪ್ಪಲ್ಲಿ ರಕ್ಕಸರು ಹುಟ್ಟುತಾರೇನ
ಭೂಮಿಯ ಇಲ್ಲೇಳಂದಾನೋ ಅಲ್ಲಿ ಆಕಾಶ ಇಲ್ಲೇಳಂದಾನ
ಆಕಾಶದೊಳಗೇನಪ್ಪಲ್ಲಿ ಧುಂದಕಾರ ಬಂದಾವ
ಧುಂದಕಾರದೊಳಗೇನಪ್ಪಲ್ಲಿ ಭೂಮ್ಯಾಗ ಇಳಿಯುತಾವೇನ
ನೀರಿನೊಳಗೆ ನಿರ್ಮಲ ಬೀಜ ಇದ್ದು ಇಲ್ಲದ್ಹಂಗ ಇದ್ದಾವ
ಅಂಧಃಕಾರದೊಳಗೇನಪ್ಪಲ್ಲಿ ಗಾಳಿ ಬರುವುತಾವೇನ
ಗಾಳಿದೇವ ಹುಟ್ಯಾನಪ್ಪಲ್ಲಿ ಥೆರಿಗೋಳು ಸುರುವನಾದವ
ನೀರಿನ ಥೆರಿಗೋಳು ಆದವಪ್ಪಲ್ಲಿ ಗಾಳಿ ಮೊದಲ ಬಂದಾವ
ಗಾಳಿ ಬಂದ ಮ್ಯಾಲೇನಪ್ಪಲ್ಲಿ ನಿರ್ಮೂಲ ಬೀಜನಾದವ
ಅಂಡಾಂಡ ಪಿಂಡಾಂಡಲ್ಲೇನಪ್ಪಲಿ ಅಂಡ ಇಪ್ಪತೊಂದೇನ
ಪಿಂಡಾಂಡ ಇಪ್ಪತ್ತೊಂದು ಲಕ್ಷೇನಪ್ಪ ಅಂಡ ಇಪ್ಪತ್ತೊಂದೇನ
ನೀರವಳಗೆ ಇರುವದಪ್ಪಲ್ಲಿ ನೀರಿನೊಳಗನಿದ್ದಾವ
ನೀರಿನೊಳಗೆನಲ್ಲೇಳ ನಿರ್ಮೂಲ ಬೀಜನಿದ್ದಾವ
ಮುಂದಿನ ಇಪ್ಪತ್ತೊಂದು ಲಕ್ಷ ವರ್ಷ ತಯ್ಯಾರಾಗುತಾವೇನ
ಜಲಜ ಇಪ್ಪತ್ತೊಂದು ಲಕ್ಷ ವರ್ಷ ತಯ್ಯಾರಾಗುತಾವೇನ
ನೀರಿನೊಳಗೆ ನಿರ್ಮೂಲ ಬೀಜ ಇದ್ದು ಇಲ್ಲದಂಗ ಇದ್ದಾವ
ಸಂಖದೊಳನಲ್ಲಪ್ಪ ಬಸವಣ್ಣ ಹುಟ್ಟುತಾನೇನ
ಬಸವಣ್ಣ ಹುಟ್ಟುತಾನೇನ ಹೆಪ್ಪ ಕೊಡುವುತಾನೇನ
ಜೀವನಕ ಮರಣ ಇಲ್ಲೇನ ಸಂಕದವಳಗ ನಡದಾನ
ಸಂಕದವಳಗ ಹೋಗಿ ಕುಂತಪ್ಪ ಬಸವಣ್ಣನಾಗಿ ಕುಂತಾನ
ಕೌಡಿವಳಗನೆಲ್ಲಪ್ಪ ಎಲ್ಲಮ್ಮ ಬರುವುತಾಳೇನ
ಎಲ್ಲಮ್ಮ ತಾಯಿ ಇಲ್ಲೇನ ದಂಡಿ ಇಲ್ಲೇನಂದಾರ
ತಾಯಿ ಎಲ್ಲಮ್ಮ ಕೊಳ್ಳಗ ಕೌಡಿ ಹಾಕುತಾರೇನ
ಧುಂದಕಾರದೊಳಗೇನ ಧುನಿಯಾ ಹಿಡಿಯುತಾಳೇನ
ಸೂರ್ಯ ಬರುವುತಾನೇನ ಚಂದರ ಬರುವುತಾನೇನ
ಸೂರ್ಯ ಹುಟ್ಟುತಾನೇನ ಹಗಲೆ ಆಗುತಾವೇನ
ಸೂರ್ಯ ಹುಟ್ಟುತಾನೇನ ಹಗಲೇ ಆಗುತಾವೇನ
ಚಂದರ ಬರುವುತಾವೇನ ರಾತರಿ ಆಗುತಾವೇನ
ಮೂರ ಯುಗದ ಒಳಗೇನ ಕತ್ತಲ ಹೋಗುತಾವೇನ
ನಾಲ್ಕ-ಯುಗದ ಒಳಗೇನ ಸೂರ್ಯ ಚಂದರ ಬಂದರ
ಹಗಲ ಹುಟ್ಟುತಾವೇನ ರಾತರಿ ಹುಟ್ಟುತಾವೇನ
ಎಲ್ಲಮ್ಮ ಹುಟ್ಟುತಾಳೇನ ಕೌಡಿವಳಗೆ ಬಂದಾಳ
ಏಳ ಗೆರಿಯಾನಿದ್ದಾವ ಏಳು ಮಾರನಾದವ
ಮಂಗಳವಾರನಾದವ ಬುದುವಾರ ಹುಟ್ಟುತಾವೇನ
ಬೆಸ್ತವಾರನಾದವ ಶುಕ್ಕರವಾರನಾದವ
ಶನಿವಾರ ಆಗುತಾವೇನ ಐತಾರ ಆಗುತಾವೇನ
ಸೋಮವಾರ ಹುಟ್ಟುತಾವೇನ ಏಳವಾರನಾದವ
ಏಳವಾರನಾದವ ಶಾಸ ಘಳಗಿನಾದವ
ಶಾಸ ಘಳಗಿನಾದವ ವಾರ ತಿಥಿ ಹುಟ್ಟುತಾವೇನ
ಹುಣ್ಣಿ ಆಗುತಾವೇನ ಅಮಾಸಿ ಆಗುತಾವೇನ
ಐದ ಯುಗದ ವಳಗೇನ ವಾರ ತಿಥಿಯ ಮಥಿಯೇನ
ವಾರ ತಿಥಿಮಥಿಯೇನ ಅಮಾಸಿ ಹುಣ್ಣಿ ಹುಟ್ಯಾವ
ನೀರಿನೊಳಗೆ ನಿರ್ಮೂಲ ಬೀಜ ಯಾರಿಗೆ ಗೊತ್ತು ಇಲ್ಲೇನ
ಜಲಜ ಇಪ್ಪತ್ತೊಂದೇನ ಲಕ್ಷ ಹುಟ್ಟುತಾವೇನ
ಇಪ್ಪತ್ತೊಂದು ಲಕ್ಷಕ ಹೊಟ್ಟಿನರ ಆದಾವ
ಹೊಟ್ಟಿನರನಲ್ಲೇಳ ನೀರೆ ನಿರ್ಮೂಲ ಆದಾವ
ಹೊಟ್ಟಿವಳಗನಲ್ಲಪ್ಪ ಇಪ್ಪತ್ತೊಂದು ಲಕ್ಷೇನ
ಇಪ್ಪತ್ತೊಂದು ಲಕ್ಷಕ ಆರ ಯುಗನೆ ಆದಾವ
ಇಪ್ಪತ್ತೊಂದು ಲಕ್ಷಕ ಹುಟ್ಟಿದ ಇಪ್ಪತ್ತೊಂದು ಲಕ್ಷೇನ
ಹುಟ್ಟಿದ ಇಪ್ಪತ್ತೊಂದು ಲಕ್ಷ ಅಂಡ ಮೈಯುತಾದೇನ
ಮೂರ ಇಪ್ಪತ್ತಮೂರ ಲಕ್ಷೇನ ಅರವತ್ತಮೂರು ಲಕ್ಷೇನ
ಅರವತ್ತಮೂರ ಲಕ್ಷೇನ ತಯ್ಯಾರಾಗುತಾವೇನ
ಹಾಲ ಕುಡಿವ ಪಿಂಡಿಂದ ಇಪ್ಪತ್ತೊಂದು ಲಕ್ಷೇನ
ಇಪ್ಪತ್ತೊಂದು ಪಿಂಡಪ್ಪ ಏನೇನು ಆಹಾರನಾದವ
ಇಪ್ಪತ್ತೊಂದು ಲಕ್ಷಕ ಏನೇನು ಆಹಾರ ಬೇಕಯ್ಯ
ಅರವತ್ತುಮೂರ ಲಕ್ಷೇನ ಪಿಂಡಿನ ಜನ್ಮ ಹೊಂದ್ಯಾದ
ಪಿಂಡ ಜಲ್ಮಕಲ್ಲೇಳ ಇರುವುದು ಮೂರ ಆಹಾರೇನ
ಎಂಬತ್ತನಾಲ್ಕು ವರ್ಷೇನ ಚೌದ ತಯ್ಯಾರಾದವ
ಬ್ರಹ್ಮ ಹುಟ್ಟುತಾನೇನೆ ವಿಷ್ಣು ಬರುವುತಾನೇನ
ರುದ್ದರ ಬರುವುತಾನೇನ ಮಹೇಶ್ವರ ಬರುವುತಾನೇನ
ದಕ್ಷ ಬ್ರಹ್ಮ ಬಂದಾನೆ ಮಹಾದೇವ ಬರುವುತಾನೇ
ಐದು ಮಂದಿನಲ್ಲೇಳ ತಯ್ಯಾರಾಗುತಾರೇನ
ಧುಂದಕಾರನದೊಳಗೇನ ಧುನಿಯಾ ಹಿಡಿಯುತಾರೇನ
ಶಾಂತಮತ್ಯಾನಲ್ಲೇಳ ತಯ್ಯಾರಾಗುತಾರೇನ
ಐದು ಮಂದಿ ರಕ್ಕಸಗೇರಿಗ ಮುರಿಯಾ ಮಾಡುತಾನೇನ
ಐದು ಮಂದಿಗಲ್ಲೇಳ ಐದು ಕುರಿಯಾ ಮಾಡ್ಯಾನ
ಐದು ಕುರಿಗೋಳು ಮಾಡ್ಯಾನೆ ಒಬ್ಬ ರಕ್ಕಸರಿಗ ಮುರದಾನ
ಒಬ್ಬ ರಕ್ಕಸ ಮುರದಾನ ಠಗರ ಮಾಡುತಾನೇನ
ಐದ ಕುರಿಯಾ ಒಂದ ಠಗರ ತಯ್ಯಾರ ಮಾಡುತಾನೇನ
ಕುರಿಯಾ ಕಾಯುತಾನೇನ ಮರಿಯಾ ಕಾಯುತಾನೇನ
ಉಣ್ಣಿ ತಗಿಯುತಾನೇನ ಕಂಬಳಿ ಮಾಡುತಾನೇನ
ಕಂಬಳಿ ಮಾಡುವದಕೇನೇನ ಸಾಮನ ಬೇಕನಾದವ
ಡುಳ್ಳಸೂರ ದೈತ್ಯನ ಶಿರವ ಹೊಡಿಯುತಾನೇನ
ಶಿರವ ಕಡಿಯಾಕ ಮಾಡಿದ ದುಂಡು ಕಡಿಯಾಕ ಮಾಡಿದ
ಕಾಲ ಕಡಿಯಾಕ ಮಾಡಿದ್ದ ತೋಳ ಕಡಿಯಾಕ ಮಾಡಿದ್ದ
ಚಂಡು ಕಡಿಯಾಕ ಮಾಡಿದ ಮಾಯಿ ಮುರ್ತುಪ ಆದಾನ
ಡುಳ್ಳಸೂರನ ಚಂಡೇನೆ ಮಾಯಿ ಮರ್ತುಪ ಆದಾವ
ಎರಡು ಕೈ ತಗದಿದ್ದ ಸಾಮನ ಮಾಡುತಾನೇನ
ಹೊಟ್ಟಿಯ ಸೀಳುತಾನೇನ ಡೊಕ್ಕಿಯ ಮಾಡುತಾನೇನ
ಕಾಳಜ ತಗಿಯುತಾನೇನ ತಾಳ ಮಾಡುತಾನೇನ
ಗುಂಡಗಿ ತಗಿಯುತಾನೇನ ಊದ ಶಂಕ ಮಾಡ್ಯಾನ
ಕಂಬಳಿ ನೈಯುವದಕಲ್ಲೇಳ ಕತ್ತರಿ ತಯ್ಯಾರ ಮಾಡ್ಯಾನ
ಕತ್ತರಿ ತಯ್ಯಾರ ಮಾಡಿದ್ದ ಉಣ್ಣೆ ಕತ್ತರಿಸುತಾನೇನ
ಭೆಂವ್ ತಯ್ಯಾರ ಮಾಡಿದ್ದ ಬೆಸಗಿ ತಯ್ಯಾರ ಮಾಡಿದ್ದ
ಸುಖದ ಕೊಳವಲ ಮಾಡಿದ್ದ ದುಃಖದ ಕೊಳವಲ ಮಾಡಿದ್ದ
ವಡ್ಡಿವಾಲಗಲ್ಲೇಳ ತಯ್ಯಾರ ಮಾಡುತಾನೇನ
ಕಾಲ ತಗಿಯುತಾನೇನ ಹುಂಕಿ ಮಾಡುತಾನೇನ
ನಾಕ ನಗಮೂರಿ ಮಾಡ್ಯಾನೆ ಐದ ನಗಮೂರಿ ಮಾಡ್ಯಾನ
ನಾಕ ಗುಂಜಿ ಹೊಡದಾನ ಐದ ಗುಂಜಿ ಹೊಡದಾನ
ಎಂಟ ಗುಂಜಿ ಹೊಡದಾನ ಹನ್ನೆರಡು ಗುಂಜಿ ಹೊಡದಾನ
ಹದನಾರ ಗುಂಜಿ ಹೊಡದಾನೆ ಹಗ್ಗ ತಯ್ಯಾರ ಮಾಡ್ಯಾನ
ಹಗ್ಗ ತಯ್ಯಾರ ಮಾಡ್ಯಾನ ಹುಂಕಿ ತಯ್ಯಾರ ಮಾಡ್ಯಾನ
ಡುಳ್ಳಸೂರ ಧೈತನೆ ತಯ್ಯಾರ ಮಾಡುತಾನೇನ
ಸರಿಯಾ ಮಾಡುತಾನೇನ ಕಂಬಳಿಗ ಹಚ್ಚುತಾನೇನ
ಕಂಬಳೆಪ್ಪ ಕಂಬಳ್ಯೋ ಏಸು ಶೀಲಿನ ಕಂಬಳ್ಯೋ
ಡುಳ್ಳಸೂರನ ಶೀಲೇನ ಎಲ್ಲಿಗ ಬರುವುತಾನೇನ
ಜೀವಕ ಮರಣ ಇಲ್ಲೇನ ಜೀವನ ಕಡಿಯಾಕಾದವ
ಜೀವನ ಕಡಿಯಾಕಾದವ ಮರ್ತ್ಯಲೋಕದೊಳಗೇನ
ಮರ್ತ್ಯಲೋಕದೊಳಗೇನೆ ಏಡಿಯ ವಳಗ ಸೇರ‍್ಯಾವ
ಏಡಿಯ ವಳಗ ಸೇರ‍್ಯಾನ ಚಂಡ ಅದಕ ಇಲ್ಲೇನ
ರುಂಡ ಅದಕ ಇಲ್ಲೇನ ಅಡ್ಡ ಹೋಗುತಾವೇನ
ಕಂಬಳೆಪ್ಪ ಕಂಬಳ್ಯೋ ಕಂಬಳಿ ನೈಯ್ಯುತಾನೇನ
ಏಸು ಸೀಳಿನ ಕಂಬಳೇ ತಾನೆ ನೈಯುತಾನೇನ
ಕಂಬಲೆಪ್ಪ ಕಂಬಳೇ ಏಳು ಸೀಳಿನ ಕಂಬಳ್ಯೋ
ಏಳು ಸೀಳಿನ ಕಂಬಳ್ಯೋ ಕಂಬಳೆಪ್ಪ ಕಂಬಳ್ಯೋ
ಕಂಬಳಪ್ಪ ಕಂಬಳ್ಯೊ ಭೆಂಕಿ ವರ್ಣದ ಕಂಬಳ್ಯೊ
ಒಂದ ಎಳಿಯಾ ಇಟ್ಟಾನ ಶಾಂತಮುತ್ಯಾನಾದನ
ಶಾಂತಮುತಾನ ಕಂಬಳೇ ಮುತ್ತಿನ ಎಳಿಯಾ ಇಟ್ಟಾನ
ಮುತ್ತಿಯ ಎಳಿಯಾನಲ್ಲಪ್ಪ ಕಂಬಳವಳಗ ಇಟ್ಟಾನ
ಮುತ್ತಿನ ಎಳಿಯಾನಲ್ಲಪ್ಪ ಕಂಬಳಿವಳಗ ಇಟ್ಟಾನ
ಕಂಬಳಿವಳಗ ಇಟ್ಟಾನೆ ಬಿಳಿಯಾ ಎಳಿಯಾ ಇಟ್ಟಾನ
ಬಿಳಿಯಾ ಎಳಿಯಾನಲ್ಲೇಳ ಹೆಸರ ಇಡುವುತಾನೇನ
ಕಂಬಳಿ ನೈದನಲ್ಲಪ್ಪ ಶಾಂತಮುತ್ಯಾನಂದಾರ
ಶಾಂತಮುತ್ಯಾನ ಹೆಸರೇನ ಕಂಬಳಿ ವಳಗ ಇಟ್ಟಾನ
ಹಾಂವಾಗಿ ಹರಿಯುವದು ಕಂಬಳೆ ಉರಿಯಾಗಿ ಮೆರಿಯುವ ಕಂಬಳೆ
ಉರಿಯಾಗಿ ಮೆರೆಯುವ ಕಂಬಳೆ ತೇಳಾಗಿ ಚಿಂಬುಬ ಕಂಬಳೆ
ಉರಿಯಾಗಿ ಮೆರೆಯುವ ಕಂಬಳೆ ತೇಳಾಗಿ ಚಿಂಬುವ ಕಂಬಳೆ
ಕಂಬಳೆಪ್ಪ ಕಂಬಳೆ ಯಾರಿಗ ವಸಿಯಾನಿಲ್ಲಯ್ಯಾ
ಏಳು ಸೀಳಿನ ಕಂಬಳೆ ಗಳಗಿ ಹಾಕುತಾನೇನ
ಗಳಗಿ ಹಾಕುತಾನೇನ ವಡ್ಡಿವಾಲಗ ತಂದಾನ
ವಡ್ಡಿವಾಲಗ ತಂದಾನೆ ಕಂಚಿನ ಕೈತಾಳಾದವ
ಕಂಚಿನ ಕೈತಾಳಾದವ ಸಾಲ ಸತ್ತಿಗಿ ಆದಾವ
ಸಾಲಸತ್ತಿಗಿ ಆದಾವೆ ಹೊರುವ ಪಲ್ಲಕಿ ಆದಾವ
ಮುಕ್ಕಣ್ಣ ಶಿವರಾಯಗೆ ಪಾರ್ವತಿನ ಕೊಡುವುತಾನೇನ
ದಕ್ಷಬ್ರಹ್ಮನ ಮಗಳೇನ ಪಾರ್ವತಿನ ಕೊಡುವುತಾನೇನ
ಶಾಂತಮುತ್ಯಾನಲ್ಲಪ್ಪ ವಡ್ಡಿವಾಲಗ ತಂದಾನ
ಮೂರ ಲೋಕದ ವಡಿಯಾನೆ ಮುಕ್ಕಣ್ಣ ಶಿವರಾಯಗ
ಮುಕ್ಕಣ್ಣ ಶಿವರಾಯಗ ಕಂಬಳಿ ಆಯ್ಯಾರ ಮಾಡ್ಯಾನ
ಕಂಬಳಿ ಆಯ್ಯಾರಿ ಮಾಡ್ಯಾನ ಹವಳ ಮುತ್ತಿನ ಪಲ್ಲಕೆ
ಸಡಗರ ಆಳಿನ ಸಂಗಟ ವಡ್ಡಿವಾಲಗ ತಂದಾನ
ಇಲ್ಲಿಗೆ ಇದು ಒಂದು ಸಂದೇನ ಹಾಡಿದರ ಪದ ಮುಂದೇನ
ಕಳಸವಿಟ್ಟರ ಕವಿತ ಕಟ್ಟ್ಯಾರ ಹೊನ್ನ ಜಗ್ಗೂನಿ ಗೌಡರೋ
ದೇವರ ಬಂದಾರ ಬನ್ನೀರೆ