ಯಾವುದೇ ಹಬ್ಬ ಆಚರಣೆಗಳ ಹಿನ್ನಲೆಯನ್ನು ಸೂಕ್ಮವಾಗಿ ಪರಿಶೀಲಿಸಿದರೆ ಪ್ರತಿಯೊಂದಕ್ಕೂ ಒಂದು ಪರಂಪರಾಗತವಾದ ಹಿನ್ನೆಲೆ ಇರುವುದು ಕಂಡುಬರುತ್ತದೆ. ಕಾಲಾಂತರಗಳ ಹಿಂದೆ ರೂಪುಗೊಂಡು, ಹಲವು ಸಂಸ್ಕಾರಗಳನ್ನು ಹೊಂದಿ ಬೆಳೆದು, ಉಳಿದುಬಂದಿರುವ ಆಚರಣೆಗಳು  ಸಾಮಾಜಿಕ, ಧಾರ್ಮಿಕ, ಪೌರಾಣಿಕ, ಚಾರಿತ್ರಿಕ ಮತ್ತು ವೈಚಾರಿಕ ಘಟನೆಗಳಿಂದ ಪ್ರಭಾವದ ಕುರುಹುಗಳನ್ನು ವ್ಯವಸಾಯ ಸಂಬಂಧಿಯಾದ ಆಚರಣೆಗಳಲ್ಲೂ ಗುರುತಿಸಬಹುದು. ಕೃಷಿ ಪ್ರಧಾನವಾದ ಈ ನಾಡಿನಲ್ಲಿ ಹಲವಾರು ಆಚರಣೆಗಳು ಪ್ರಚಲಿತವಿರುವುದು ಸಹಜ. ಅಂತೆಯೇ ಇಲ್ಲಿಯ ಕೃಷಿ ಸಂಬಂಧಿ ಆಚರಣೆಗಳು ಅಧ್ಯಯನ ಯೋಗ್ಯವಾಗಿವೆ.

ಜನಪದ ಜೀವನ ಧರ್ಮನಿಷ್ಠವಾದುದು. ದೈನಂದಿನ ಕೆಲಸವನ್ನು ಪ್ರಾರಂಭಿಸುವುದರಿಂದ ತೊಡಗಿ ವಿಶೇಷ ಸಂದರ್ಭಗಳವರೆಗೆ ನಮ್ಮ ದೇವರನ್ನು ಪ್ರಾರ್ಥಿಸದೆ ಯಾವುದೇ ಕೆಲಸಕಾರ್ಯಗಳಿಗೆ ತೊಡಗುವುದಿಲ್ಲ. ಬಿಡುವಿಲ್ಲದ ರೈತಾಪಿ ಕೆಲಸದ ನಡುವೆಯೇ ಬಿಡುವು ಮಾಡಿಕೊಂಡು ಹಬ್ಬ, ಹುಣ್ಣಿಮೆ, ವ್ರತ, ಪೂಜೆ, ಜಾತ್ರೆ, ಉತ್ಸವ ಮುಂತಾದವುಗಳನ್ನು ತಪ್ಪದೆ ಆಚರಿಸಿಕೊಂಡು ಬರುತ್ತಿದ್ದಾರೆ. ಅಂತಹ ಹಲವಾರು ಆಚರಣೆಗಳಲ್ಲಿ ಕೊಂತಿಪೂಜೆಯೂ ಒಂದು.

ಸಾಂಸ್ಕೃತಿಕ ಸಂಘಟನೆ ಸಾಧ್ಯವಾಗಲು, ವಿವೇಕ ಮತ್ತು ನೈತಿಕತೆಯಿಂದ ಬದುಕು ನಡೆಸಲು, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು, ದಿನನಿತ್ಯದ ಕೆಲಸಕಾರ್ಯಗಳನ್ನು ಹೊಸಹುರುಪು ಚೈತನ್ಯದಿಂದ ನಿರ್ವಹಿಸುವಂತಾಗಲು ಇಂತಹ ಆಚರಣೆಗಳು ಬಹು ಅವಶ್ಯವೆನಿಸುತ್ತವೆ.

ಕೊಂತಿಪೂಜೆ ಅರ್ಥ : ಯಾವುದೇ ಒಂದು ಹಬ್ಬ ಅಥವಾ ಆಚರಣೆ ಒಂದು ಗೊತ್ತಾದ ಚೌಕಟ್ಟಿನಲ್ಲಿ ಹೇಗೆ ಆರಂಭಗೊಂಡಿತು ಎಂದು ಹೇಳುವುದು ಕಷ್ಟಸಾಧ್ಯ. ಸಾಮಾನ್ಯವಾಗಿ ಮನುಷ್ಯ ಭಯ ನಿವಾರಣೆಗಳನ್ನು ಆಚರಿಸಲು ತೊಡಗಿರಬೇಕೆಂದು ಊಹೆ ಮಾಡಬಹುದು. ಪ್ರಕೃತಿಯ ವೈಪರೀತ್ಯಗಳಾದ ಗುಡುಗು, ಮಿಂಚು, ಮಳೆ, ಬೆಂಕಿ, ಕಾಡ್ಗಿಚ್ಚು, ಬಿರುಗಾಳಿ, ಚಂಡಮಾರುತ ಇತ್ಯದಿಗಳಿಗೆ ಆದಿಮಾನವ ಭಯಗೊಂಡು ಅವುಗಳ ಹಿಂದೆ ಯಾವುದೋ ಕಾಣದ ಶಕ್ತಿಯೊಂದು ಇರಬೇಕು ಎಂದು ನಂಬಿದ. ಆ ಶಕ್ತಿಯನ್ನು ವ್ರತ, ಪೂಜೆ, ಪ್ರಾರ್ಥನೆ, ಬಲಿ ಇತ್ಯಾದಿಗಳಿಂದ ಸಂಪ್ರೀತಗೊಳಿಸಿದರೆ ನಿರಾತಂಕವಾಗಿ ಜೀವನ ನಡೆಸಬಹುದೆಂದು ತಿಳಿದ. ನನಗೆ ಆಹಾರವನ್ನು ನೀಡುವ ಭೂಮಿ, ಹಣ್ಣುಹಂಪಲನ್ನು ಒದಗಿಸುವ ಮರಗಿಡಬಳ್ಳಿಗಳು, ತನ್ನ ನೆಲೆಗೆ ಅವಕಾಶ ಕಲ್ಪಿಸಿದ ಕಲ್ಲು, ಗುಹೆ ಮುಂತಾದವುಗಳಿಗೆ ಕೃತಜ್ಞೆಯನ್ನು ಸಲ್ಲಿಸುವ ಸಲುವಾಗಿ ಈ ರೀತಿಯ ಪೂಜೆ, ಆಚರಣೆಗಳನ್ನು ರೂಢಿಗೊಳಿಸಿಕೊಂಡಿರಬೇಕು. ಈ ಹಿನ್ನೆಲೆಯಲ್ಲಿ ಗಮನಿಸುವಾಗ ಕೊಂತಿಪೂಜೆ ಆಚರಣೆಗೂ ಇಂಥ ಯಾವುದೋ ಒಂದು ಪ್ರಬಲ ಕಾರಣವಿರಬೇಕು ಎಂದು ಅನಿಸುತ್ತದೆ.

ಕೊಂತಿಪೂಜೆಯನ್ನು ಆಚರಿಸುವುದು ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಬೆಳದಿಂಗಳ ರಾತ್ರಿಗಳಲ್ಲಿ ಸತತ ಒಂದು ತಿಂಗಳುಗಳ ಕಾಲ ಇದು ನಡೆಯುತ್ತದೆ.

ಕೆಲವು ಪ್ರದೇಶಗಳಲ್ಲಿ ಹದಿನಾರು ದಿನಗಳ ಕಾಲ ನಡೆಯುತ್ತದೆ. ಇನ್ನು ಕೆಲವು ಪ್ರದೇಶಗಳಲ್ಲಿ ದೀಪಾವಳಿಯ ಮೊದಲನೆಯ ದಿನ ಇಲ್ಲವೆ ಮೊದಲನೆಯ ಕಾರ್ತಿಕ ಸೋಮವಾರ ಕೊಂತಿಯನ್ನು ಕೂರಿಸುವ ಸಂಪ್ರದಾಯವಿದೆ. ಸಾಮಾನ್ಯವಾಗಿ ಕಾರ್ತಿಕಮಾಸದಲ್ಲಿ ಹಳ್ಳಿಗರಿಗೆ ಬಿಡುವಿನ ಸಮಯ. ‘ದೇವರ ದಯೆ’ಯಿಂದಾಗಿ ಹೊಲದಲ್ಲಿ ಬಿತ್ತಿದ್ದ ಬೆಳೆಗಳು ಸಮೃದ್ಧವಾಗಿ ಬೆಳೆದು ತಲೆದೂಗುವ ಕಾಲ ಅದು. ಎಲ್ಲ ಕಡೆಗಳಲ್ಲಿಯೂ ಹಚ್ಚ ಹಸಿರು ತುಂಬಿ ಕಂಗೊಳಿಸುತ್ತಿರುತ್ತದೆ. ಇಂತಹ ಆನಂದದಾಯಕ ಸಮಯದಲ್ಲಿ ಕೊಂತಿಯನ್ನು ಪೂಜಿಸುವುದು ಹಳ್ಳಿಯ ಸ್ತ್ರೀಯರಿಗೆ ಎಲ್ಲಿಲ್ಲದ ಸಂಭ್ರಮ.

ಕೊಂತಿಪೂಜೆಗೆ ಇದ್ದಿರಬಹುದಾದ ಒಂದು ಕಾರಣವನ್ನು ವಿವರಿಸುವ ಒಂದು ಕಥಾನಕ ಹೀಗಿದೆ: ಕುಂತಿ ಪಾಂಡುವಿಗೆ ಒದಗಿದ ಶಾಪದಿಂದಾಗಿ ವ್ಯಸನಗೊಂಡ ಮನಸ್ಸಿನಲ್ಲೇ ಯೋಚಿಸುತ್ತಿದ್ದಳು. ಯಶೋವಂತರಾದ ಮಕ್ಕಳನ್ನು ಪಡೆಯಬೇಕೆಂಬ ಹಂಬಲವಿಟ್ಟುಕೊಂಡಿದ್ದ ಕುಂತಿ ಚಿಂತಾಕ್ರಾಂತೆಯಾಗಿದ್ದುದ್ದನ್ನು ಕಂಡು ಪಾಂಡು ರಾಜನು ಏಕಾಂತದಲ್ಲಿ ಆಕೆಗೆ ಈ ರೀತಿಯಾಗಿ ಹೇಳಿದನು: ‘ದೇವಿ, ಚಿಂತಿಸ ಬೇಡ, ನಿನ್ನ ಪತಿವ್ರತಾಗುಣದಿಂದ ಮುನಿಶ್ರೇಷ್ಠರನ್ನು ಮೆಚ್ಚಿಸಿ ದಿಗಂತ ಯಶೋವಂತರಾದ ಪುತ್ರರನ್ನು ಪಡೆ’ ಈ ಮಾತಿಗೆ ಕುಂತಿಯು ‘ನಾನು ಕನ್ನಿಕೆಯಾಗಿ ನನ್ನ ಮಾವನ ಮನೆಯಲ್ಲಿದ್ದಾಗ ಒಮ್ಮೆ ದುರ್ವಾಸ ಮುನಿಗಳು ಬಂದಿದ್ದರು. ಅವರು ನನ್ನ ಭಕ್ತಿ, ವಿನಯ, ಸಜ್ಜನಿಕೆ, ಶುಶ್ರೂಷೆಗೂ ಮೆಚ್ಚಿ ಐದು ಮಂತಾಕ್ಷರಗಳನ್ನು ವರವಾಗಿ ನೀಡಿದ್ದರು. ಈ ಐದು ಮಂತ್ರಕ್ಕೂ ನನ್ನ ಮನಸ್ಸಿಗೆ ಬಂದ ಐವರನ್ನು ಆಹ್ವಾನ ಮಾಡಿದರೆ ಅವರ ಹೋಲಿಕೆಯ ಮಕ್ಕಳನ್ನು ಪಡೆಯುವೆ ಎಂಬುದಾಗಿ ವರವನ್ನು ಕೊಟ್ಟಿದ್ದರು. ಈಗ ನನ್ನ ಪುಣ್ಯದಿಂದ ಆ ವರಗಳನ್ನು ಸಾರ್ಥಕಗೊಳಿಸಿಕೊಳ್ಳುವ ಸಮಯವು ಒದಗಿದೆ ಎಂದಳು. ಪಾಂಡು ದಿವ್ಯಮುನಿಗಳ ವಾಕ್ಯವು ಅಮೋಘವಾದುದೆಂದೂ ಅದಕ್ಕಾಗಿ ಚಿಂತಿಸಬೇಡವೆಂದೂ ಸಮಾಧಾನ ಹೇಳಿದನು. ಕುಂತಿ ತೀರ್ಥ ಸ್ನಾನ ಮಾಡಿ ಮಡಿಯುಟ್ಟು, ಮುತ್ತಿನ ಆಭರಣತೊಟ್ಟು-ಗರ್ಭ ಶಯನದಲ್ಲಿದ್ದು ಮನೀಂದ್ರರು ಕೊಟ್ಟ ಮಂತ್ರಗಳನ್ನು ಭಕ್ತಿಯಿಂದ ಪಠಿಸಿ ಯಮನನ್ನು ಆಹ್ವಾನ ಮಾಡಿದಳು. ಯಮನು ಪ್ರತ್ಯಕ್ಷನಾಗಿ ತನ್ನ ಅಂಶಗಳನ್ನು ಕುಂತಿಯ ಗರ್ಭದಲ್ಲಿ ಅವತರಿಸಿ ಹೊರಟುಹೋದನು. ಕುಂತಿ ಗರ್ಭಗಳನ್ನು ಧರಿಸಿ ಅತ್ಯಂತ ತೇಜಸ್ವಿಯಾದ ಮಗನನ್ನು ಹಡೆದಳು. ಧರ್ಮನ ಅಂಶದಲ್ಲಿ ಹುಟ್ಟಿದವನಾದುದರಿಂದ ಮುನಿಗಳು ಇವನಿಗೆ ಧರ್ಮಸುತನೆಂದು ಹೆಸರಿಟ್ಟು ಹರಸಿದರು.

ಕುಂತಿ ಇಷ್ಟಕ್ಕೇ ತೃಪ್ತಳಾಗದೇ ಮಂತಾಕ್ಷರ ನಿಯಮದಿಂದ ವಾಯುದೇವನನ್ನು ಬರಮಾಡಿಕೊಂಡು ರಿಪುತಂತ್ರಕ್ಷಯಕರನಾದ ಸುತನನ್ನು ದಯಗೆಯ್ಯುವಂತೆ ಕೇಳಿಕೊಳ್ಳಲು, ವಾಯುದೇವನು ಆಕೆಯ ಅಭೀಷ್ಟವನ್ನು ಸಲ್ಲಿಸಿದನು. ಕಾಲಕ್ರಮದಲ್ಲಿ ಅತ್ಯಂತ ಪರಾಕ್ರಮಿಯೂ ಭಯಂಕರನೂ ಆದ ಮಗುವಿಗೆ ಅವಳು ಜನ್ಮವಿತ್ತಳು. ಮುನಿಗಳು ಆ ಮಗುವಿನ ಸ್ವರೂಪಕ್ಕೆ ಅನ್ವರ್ಥವಾಗಿ ಭೀಮನೆಂಬ ಹೆಸರಿಟ್ಟರು.

ಕುಂತಿ ಮುಂದೆ ಸರ್ವಲಕ್ಷಣ ಸಂಪನ್ನನಾಗಿ ಲೋಕೈಕವೀರನಾಗುವ, ಪರಾಕ್ರಮಿಯಾಗುವ ಮತ್ತೊಬ್ಬ ಮಗುನನ್ನು ಪಡೆಯಬೇಕೆಂಬ ಹಂಬಲದಿಂದ ದೇಹವನ್ನು ದಂಡಿಸಿ, ನೋಪಿಗಳನ್ನು ಭಯ ಭಕ್ತಿ ನಿಷ್ಠೆಗಳಿಂದ ನೆರವೇರಿಸಿ, ಒಂದು ದಿನ ಮಂತ್ರಾಕ್ಷರ ನಿಯಮದಿಂದ ಇಂದ್ರನನ್ನು ಬರಮಾಡಿಕೊಂಡು ವರವನ್ನು ಕೇಳಿಕೊಳ್ಳಲು ಆತನು ಸರ್ವಗುಣಲಕ್ಷಣಗಳನ್ನು ಸೇರಿಸಿದ ತನ್ನ ಅಂಶವನ್ನು ಕುಂತಿಯ ಗರ್ಭದಲ್ಲಿ ಅವಾಹನೆಮಾಡಿ ಹೊರಟುಹೋದನು. ಕುಂತಯು ಗರ್ಭವನ್ನು ತಾಳಿ ಕಾಲಕ್ರಮದಲ್ಲಿ ಭರತಕುಲ ತಿಲಕನಾದ ಮಗನನ್ನು ಪಡೆದಳು.[1]

ಕುಂತಿ ಹೀಗೆ ಯಶವಂತನೂ, ಒಬ್ಬ ಶಕ್ತಿಶಾಲಿಯೂ, ಒಬ್ಬ ಕೀರ್ತಿವಂತನೂ ಆದ ಮಕ್ಕಳನ್ನು ಪಡೆಯುವುದಕ್ಕಾಗಿ ವ್ರತ, ಪೂಜೆ, ಉಪವಾಸ ಇತ್ಯಾದಿಗಳನ್ನು ಮಾಡಿದಳೋ ಅದೇ ರೀತಿಯಲ್ಲಿ ರೈತಾಪಿಗಳು ಕೂಡ ಯಶೋವಂತ ಮಕ್ಕಳನ್ನು ಹೊಂದುವ ಆಕಾಂಕ್ಷೆಯಿಂದ ಆದರ್ಶ ಸತಿಯೂ, ಆದರ್ಶ ತಾಯಿಯೂ ಆದ ಕುಂತಿದೇವಿಯನ್ನು ಪೂಜಿಸಿ ಮಕ್ಕಳನ್ನು ಕರುಣಿಸುವಂತೆ ಬೇಡಿಕೊಳ್ಳುತ್ತಾರೆ. ಈ ಬೇಡಿಕೆ ಸಲ್ಲಿಸಲು ಮುಖ್ಯ ಕಾರಣ ಕುಂತಿಯು ಮೂರು ಮಕ್ಕಳನ್ನು ಪಡೆದ ನಂತರ ಪಾಂಡುವಿನ ಮಾತಿನಂತೆ ತನ್ನ ಸವತಿಯಾದ ಮಾದ್ರಿಗೂ ಮಕ್ಕಳು ಪಡೆಯುವಂತೆ ಮಂತ್ರೋಪದೇಶವನ್ನು ಹೇಳಿಕೊಟ್ಟು ನೆರವು ನೀಡಿರುತ್ತಾಳೆ. ಅದೇ ರೀತಿಯಲ್ಲಿ ಮಕ್ಕಳಾಗದ ತಮಗೂ ಮಕ್ಕಳನ್ನು ಕರುಣಿಸುತ್ತಾಳೆ ಎಂದು ಈ ಜನರ ನಂಬಿಕೆ (ಈ ಪ್ರಸಂಗ ವಚನಭಾರತದಲ್ಲಿಯೂ ಪ್ರಸ್ತಾಪಗೊಂಡಿದೆ). ಒಂದು ರೀತಿಯಲ್ಲಿ ಇದು ಸಾದೃಶ್ಯದ ಮೇಲಿನ ಪ್ರತಿಮಾ ವಿಧಾನವೆನ್ನುವುದನ್ನು ಗಮನಿಸಬಹುದು. ಇಲ್ಲಿ (Metaphor) ಕ್ರಿಯೆ ಮುಖ್ಯವಾಗುತ್ತದೆ. ಕುಂತಿ ಕೂಡ ಹಲವು ಫಲಪುಷ್ಪಗಳಿಂದ ನೇಮನಿಷ್ಠೆಯಿಂದ ಪೂಜೆಮಾಡಿ ಮಕ್ಕಳನ್ನು ಪಡೆದ ಕ್ರಿಯೆಗೆ ಸಾಧೃಶ್ಯವೆನ್ನುವಂತೆ ಈ ಭೂಪ್ರದೇಶದ ರೈತಾಪಿಗಳು ಕಾರ್ತಿಕಮಾಸದ ಒಂದು ತಿಂಗಳುಗಳ ಕಾಲ ಕೊಂತಿ ಪೂಜೆಯನ್ನು ಆಚರಿಸುವುದನ್ನು ಗಮನಿಸಬಹುದು. ಕುಂತಿಯು ಈ ಕಾರಣಕ್ಕಾಗಿಯೇ ‘ಪ್ರಜನನದೇವತೆ’ಯಾಗುತ್ತಾಳೆ. ಗಂಡಸರು, ಹೆಂಗಸರೆಂಬ ಭೇದಭಾವವಿಲ್ಲದೆ ಎಲ್ಲರೂ ಕುಂತಿಯನ್ನು ಪೂಜಿಸುವುದು, ಅವಳು ಮಕ್ಕಳನ್ನು ಕರುಣಿಸುವ ದೇವತೆ ಆಗಿರುವುದರಿಂದ.

ಈ ಎಲ್ಲ ನಂಬಿಕೆಗಳ ಹಿನ್ನಲೆಯಿಂದ ಕೊಂತಿ ಒಬ್ಬಳು ‘ಪ್ರಜನನ ದೇವತೆ’ (Fertility god)ಯಾಗಿರುವುದು ಸ್ಪಷ್ಟ. ಅಷ್ಟೇ ಅಲ್ಲ; ಕೊಂತಿಪುಜೆ ಆಚರಣೆ ಹಿನ್ನಲೆಯಲ್ಲೂ ಅದರ ಅರ್ಥವ್ಯಾಪ್ತಿ ವಿಸ್ತರಿಸುವುದನ್ನು ಗಮನಿಸಬಹುದು: ಮೈಸೂರು ಜಿಲ್ಲೆಯ ಹುಣಸೂರು, ಹೆಗ್ಗಡದೇವನಕೋಟೆ ಮತ್ತು ಮಂಡ್ಯಜಿಲ್ಲೆಯ ಕೆಲವು ವಿಸರ್ಜಿಸಿದ ನಂತರ ನಡೆಯುವ ಕ್ರಿಯೆಯು ಮುಖ್ಯವೆನಿಸುತ್ತದೆ. ವಿಸರ್ಜನೆಯ ಸಂದರ್ಭದಲ್ಲಿ ಕೊಂತಿಯ ಮಣ್ಣಿನ ಮೂರ್ತಿಯನ್ನು ಊರಿನವರೆಲ್ಲ  ಹಂಚಿಕೊಂಡು ತಮ್ಮ ತಮ್ಮ ಹೊಲಗದ್ಧೆಗಳಲ್ಲಿ ಚೆಲ್ಲುವ ಕ್ರಿಯೆಯು ನಡೆಯುತ್ತದೆ. ಈ ರೀತಿ ಮಾಡುವುದರಿಂದ ಭೂಮಿಯು ಫಲವತ್ತಾಗುತ್ತದೆ; ಬೆಳೆಯು ಸಮೃದ್ಧವಾಗುತ್ತದೆ; ಬೆಳೆಗೆ ಮತ್ತು ಹಳ್ಳಿಗರಿಗೆ ಯಾವುದೇ ವಿಧವಾದ ರೋಗರುಜಿನಗಳು ಬರುವುದಿಲ್ಲ ಎನ್ನುವ ನಂಬಿಕೆ ಪ್ರಬಲವಾಗಿದೆ. ಈ ಕಾರಣದಿಂದಾಗಿ ಕುಂತಿಯನ್ನು ಪ್ರಜನನದೇವತೆ ಎಂಬುದಾಗಿ ಕರೆಯುವುದು ಅರ್ಥಪೂರ್ಣ ಎನಿಸುತ್ತದೆ. ಉತ್ತರ ಕರ್ನಾಟಕದ ಪುರುಷ ದೇವತೆ ಜೋಕುಮಾರ ಹೇಗೆ ಪ್ರಜನನದೇವತೆಯೋ ಅಂತೆಯೇ ಈ ಭೂಭಾಗದಲ್ಲಿ ಕೊಂತಿ ಪ್ರಜನನದೇವತೆಯಾಗಿದ್ದಾಳೆ:

ಸಂತಾನವಿಲ್ಲದ ಮನೆತನಗಳಲ್ಲಿ ಸಂತಾನಪ್ರಾಪ್ತಿಗಾಗಿ ಕೊಂತಿಯನ್ನು ಪೂಜಿಸುವುದು ಸಂಪ್ರದಾಯ. ಕಾಕತಾಳೀಯವೆಂಬಂತೆ ಮುಂದೊಂದು ದಿನ ಈ ಮನೆತನದವರಿಗೆ ಸಂತಾನಪ್ರಾಪ್ತಿಯಾದರೆ ಅವರಿಗೆ ಕೊಂತಿಪೂಜೆಯಲ್ಲಿ ಇನ್ನಷ್ಟು ನಂಬಿಕೆ ಬಲವಾಗುತ್ತದೆ. ಕೊಂತಿಪೂಜೆ ಮಾಡುವುದರಿಂದ ಮಕ್ಕಳಾಗುವದೆಂದು ಸಂತಾನಾಭಿಲಾಷಿಗಳು ನಂಬುವುದರಿಂದ ಪ್ರತಿವರ್ಷವೂ ಕೊಂತಿಪೂಜೆ ಆಚರಣೆ ಉಳಿದು ಬಂದಿದೆ. ಸ್ತ್ರೀಯರ ಸಂತಾನಾಭಿಲಾಷೆಯಿಂದ ಆರಂಭವಾದ ಕೊಂತಿಪೂಜೆಯು ಕ್ರಮೇಣ ಒಂದು ಸಾಮಾಜಿಕ ಸಂಪ್ರದಾಯವಾಗಿ ಬೆಳೆದು ಉಳಿದುಕೊಂಡು ಬಂದಿದೆ.

ಕುಂತಿ ತನ್ನ ಪುತ್ರರೊಡನೆ ವನವಾಸದ ಕಹಿಯನ್ನು ಅನುಭವಿಸಿದ ದಾರುಣ ಚಿತ್ರಗಳು ಜನಪದ ಸಾಹಿತ್ಯದಲ್ಲಿ ಹೇರಳವಾಗಿ ಲಭ್ಯವಾಗುತ್ತದೆ.[2]ಕನ್ನಡ ಜನಪದ ಮಹಾಭಾರತದಂತೆಯೇ ಮಲಯಾಳಂ ಜನಪದ ಮಹಾಭಾರತದಲ್ಲೂ ಕುಂತಿ ದೇವಿಯ ಪಾತ್ರವೇ ಜನರ ಮನಸ್ಸನ್ನು ಸೊರೆಗೊಂಡಂತೆ ಕಾಣುತ್ತದೆ. ಕನ್ನಡದ ಕೊಂತ್ಯಮ್ಮ ಅಥವಾ ಕುಂತಿದೇವಿ ಮಳೆಯಾಳಂನಲ್ಲಿ ಕುಂಚದೇವಿ ಆಗಿದ್ದಾಳೆ (ರಾಮಚಂದ್ರಗೌಡ, ಹಿ. ಶಿ: ೧೯೮೨: ೧೨೫)

ಕೊಂತಿಪೂಜೆ ಹಿನ್ನಲೆ:

ಐತಿಹ್ಯದ ಹಿನ್ನಲೆ: ಕನ್ನಡ ಜನಪದ ಕಾವ್ಯಗಳಲ್ಲಿ ಪೌರಾಣಿಕ ವಿಷಯಗಳನ್ನೊಳಗೊಂಡ ರಚನೆಗಳು ಅಪಾರ ಸಂಖ್ಯೆಯಲ್ಲಿ ದೊರೆಯುವುದಿಲ್ಲ. ಆದರೆ ರಾಮಾಯಣ ಮಹಾಭಾರತಗಳಿಗೆ ಸಂಭಂಧಿಸಿದಂತೆ ನಾಡಿನ ಎಲ್ಲ ಕಡೆಗಳಲ್ಲಿಯೂ ಐತಿಹ್ಯ, ಸ್ಥಳನಾಮಗಳು ದೊರೆಯುತ್ತವೆ. ಪಾಂಡವರ ಗವಿ, ಭೀಮನಹೆಜ್ಜೆ, ಕುಂತಿಬೆಟ್ಟ, ಒನಕೆಬೆಟ್ಟ, ಕುಂತಿಕೊಳ ಮುಂತಾದ ವೈವಿಧ್ಯಮಯ ಐತಿಹ್ಯಗಳನ್ನೊಳಗೊಂಡ ಬೆಟ್ಟವೊಂದರ ಮೇಲೆ ಕೊಂತಿಸೆರಗು ಎನ್ನುವುದು ಜನಪದ ನಂಬಿಕೆ. ದಾವಣಗೆರೆ ಸಮೀಪದ ಬೆಟ್ಟದಲ್ಲಿ ತಟ್ಟೆಯೋಪಾದಿಯಲ್ಲಿ ದೊಡ್ಡ ದೊಡ್ಡ ಕುಳಿ ಬಿದ್ದಿವೆ. ಅದು ಭೀಮನು ಊಟ ಮಾಡಿದ ನೆಲೆ-ಇವು ಐತಿಹ್ಯಗಳು. ಪಾಂಡವ ಪುರದ ಬೆಟ್ಟದಲ್ಲಿ ಪಾಂಡವರು ವಾಸವಾಗಿದ್ದರು. ಆ ಕಾರಣಕ್ಕಾಗಿಯೇ ಪಾಂಡವಪುರ ಎಂಬ ಹೆಸರು ಬಂದಿವೆ ಎನ್ನುವ ಪ್ರತೀತಿ ಇದೆ. ಬೀಮನಗುಂಡು, ಭೀಮನ ಕಂಡಿಬೆಟ್ಟ, ಭೀಮನ ಹೆಜ್ಜೆಯಬೆಟ್ಟ, ಗಾಣದಕಲ್ಲು (ದಾಸೇಗೌಡ, ಜಿ.ವಿ: ೧೯೭೮: ೫೫, ೫೮) ಮುಂತಾದ ಐತಿಹ್ಯಗಳೂ ಅಲ್ಲಿ ದೊರೆಯುತ್ತವೆ.

ಅಷ್ಟೇ ಅಲ್ಲದೆ ‘ಧರ್ಮರ ಪದ’ ಎಂದು ಜನಪ್ರಿಯವಾಗಿರುವ ಸುದೀರ್ಘ ವರ್ಣಾನಾತ್ಮಕ ಗೀತೆಗಳು ಪಾಂಡವರ ವನವಾಸದ ದಾರುಣತೆಯನ್ನು ತಲಸ್ಪರ್ಶಿಯಾಗಿ ಚಿತ್ರಿಸುತ್ತವೆ. ಈ ಪ್ರಸಂಗವೂ ಹೃದ್ಯವಾಗಿದೆ:

ಹೊತ್ತಿನಂತೆ ಎದ್ದು ಸತ್ಯವಂತರ ನೆನೆದೇವು
ಮಾವಿನ ಹಣ್ಣ ಮಡಿಲಲ್ಲಿ-ಧರುಮರು
ಅವರ್ಹತೋಗೋ ರಥವ ನೆನೆದೇವು!
ಅವರ ನೆನೆದೇವು ಅವರೈದು ಮಂದಿಯ
ಅವರೈವರಲ್ಲಿ ಹಿರಿಯೋರ-ಧರುಮರ
ಅವರೊಂದುಗಳಿಗೆ ನೆನೆದೇವು!  
(ಪರಮಶಿವಯ್ಯ, ಜೀ. ಶಂ. ೧೯೭೯: ೨೯೧)

ಪಾಂಡವರು ರಾಜ್ಯ, ಅರಮನೆ ಮುಂತಾದವುಗಳನ್ನು ಕಳೆದುಕೊಂಡು ಊರುಕೇರಿಗಳನ್ನು ಕಳೆದುಕೊಂಡು ಕಷ್ಟಕ್ಕೆ ಸಿಲುಕಿ, ಕಾಡುಮೇಡುಗಳನ್ನು ಅಲೆಯಬೇಕಾಯಿತು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುವಾಗ ‘ಎಂತೋರಿಗೆಂತ ವನವಾಸ’ ಎಂದು ಜನ ಮರುಗಿದರು. ಅವರ ಸ್ಥಿತಿಗೆ ಮರುಗಿದ ಜನರ ಅನುತಾಪ ಅನುಕಂಪೆಯನ್ನು ಜನಪದ ಕವಿಗಳು ಮನಮುಟ್ಟುವಂತೆ ಚಿತ್ರಿಸಿದ್ದಾರೆ.

ನಮ್ಮದು ಸಂಪ್ರದಾಯಗಳ ನಾಡು ನಮ್ಮಲ್ಲಿ ಆಚರಣೆಯಲ್ಲಿರುವ ಅನೇಕ ಜನಪದ ಸಂಪ್ರದಾಯಗಳಲ್ಲಿ ತನಗೇ ವಿಶಿಷ್ಟವೂ ಸಂಕೀರ್ಣವೂ ಆದ ಸ್ವರೂಪವನ್ನು ಹೊಂದಿರುವ ಆಚರಣೆಗಳಲ್ಲಿ ಕೊಂತಿಪೂಜೆಯೂ ಒಂದು ಎಂದು ಹೇಳಬಹುದು. ಪೌರಾಣಿಕ, ಧಾರ್ಮಿಕ, ಸಾಮಾಜಿಕ ಅಂಶಗಳನ್ನೊಳಗೊಂಡು ಉಳಿದು ಬಂದಿರುವ ಈ ವ್ಯವಸಾಯ ಸಂಪ್ರದಾಯ ವೈಶಿಷ್ಟ್ಯಪೂರ್ಣವಾದುದು. ಪುರಾಣದ ವ್ಯಕ್ತಿಯಾದ ಕುಂತಿಯನ್ನು ಸಾತ್ತ್ವಿಕ ದೇವತೆಯಾಗಿ ಕಲ್ಪಿಸಿಕೊಂಡದ್ದಲ್ಲದೆ ತನ್ನ ಮನೆಯ ಮಗಳೆಂದು ಕಲ್ಪಿಸಿಕೊಂಡು ಭಯ, ಭಕ್ತಿ, ಶ್ರದ್ಧೆ ಗೌರವಗಳಿಂದ ಆಕೆಯನ್ನು ಪೂಜಿಸುವುದರಿಂದ ಇದೊಂದು ಧಾರ್ಮಿಕ ಸಂಪ್ರದಾಯವಾಗಿ ನಮ್ಮ ಗಮನ ಸೆಳೆಯುತ್ತದೆ.

ಇಷ್ಟಾದರೂ, ಕೊಂತಿಪೂಜೆಯು ಮಹಾಭಾರತದ ಕುಂತಿದೇವಿಗೆ ಸಂಬಂಧಪಟ್ಟ ಒಂದು ಆಚರಣೆ. ಕುಂತಿಯ ಮಕ್ಕಳಾದ ಪಂಡವರು ಬೇಸಾಯದ ಮೂಲ ಪುರುಷರು ಎಂದು ಹೇಳಲಾಗಿದೆ. ರೈತರು ಈ ನಂಬಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕಾಡಿನಲ್ಲಿ ವನವಾಸ ಮಾಡಿದ ಪಾಂಡವರು ರೈತರ ಬದುಕನ್ನೇ ಬದುಕಿದವರು. (ಪರಮಶಿವಯ್ಯಾ. ಜೀ. ಶಂ: ೧೯೭೫:೧೧೦) ಅಷ್ಟೇ ಅಲ್ಲದೆ ಕೊಂತಿ ರಾಜಕನ್ಯೆ, ಗಾಂಧಾರಿಯಂತೆ ನೂರು ಜನ ಅಪ್ರಯೋಜಕ ಮಕ್ಕಳನ್ನು ಪಡೆಯದೆ ಧೀರೋದಾತ್ತರೂ ದೈವಪ್ರಿಯರೂ ಲೋಕವಿಖ್ಯಾತರೂ ಆದಂತಹ ಪಂಚಪಾಂಡವರನ್ನು ಹೆತ್ತಂಥ ಶ್ರೇಷ್ಠತಾಯಿ. ಅನೇಕ ಕಷ್ಟಗಳಿಗೆ ತುತ್ತಾದರೂ ಮಕ್ಕಳಿಂದ ರಕ್ಷಿಸಲ್ಪಟ್ಟವಳು. ವನವಾಸವೇ ಮೊದಲಾದ ಕಷ್ಟಕೋಟಲೆಗಳು ಬಂದರೂ ತನ್ನ ಮಕ್ಕಳ ಧೈರ್ಯಸ್ಥೈರ್ಯ ಗಳಿಂದ ಅವನ್ನೆಲ್ಲ ಗೆದ್ದವಳು. ಅವಳ ಪುತ್ರರು ಜಯಶೀಲರಾಗಿ ಮಹಾಪುರುಷರೆನಿಸಿಕೊಂಡವರು. ಕೊಂತಿ ಪಡೆದದ್ದು ಸತ್ಸಂತಾನ. ಆದ್ದರಿಂದಲೇ ಅವಳಿಗೂ ಲೋಕದಲ್ಲಿ ಬೆಲೆ, ಗೌರವ ಸಿಕ್ಕಿದ್ದು. ಕೊಂತಿ ಆದರ್ಶಸತಿ, ಆದರ್ಶತಾಯಿ. ಮಿಗಿಲಾಗಿ ಸತ್ಸಂತಾನ ಪಡೆದ ಆದರ್ಶ ನಾರೀಮಣಿ. ಅವಳಂತೆಯೇ ತಮಗೂ ಸತ್ಸಂತಾನ, ಸತ್ಕೀರ್ತಿ ಲಭ್ಯವಾಗಲೆಂಬ ಅಭಿಲಾಷೆಯಿಂದ ನಮ್ಮ ಹಳ್ಳಿಯ ಮುಗ್ಧ ಸ್ತ್ರೀಯರು ತಮ್ಮ ಇಷ್ಟದೇವತೆಯೆಂಬ ಭಾವಿಸಿ ಸಾಂಪ್ರದಾಯಿಕವಾಗಿ ಪೂಜಿಸುತ್ತಾ ಬಂದಿದ್ದಾರೆ (ಲಿಂಗಯ್ಯ.ಡಿ: ೧೯೭೬:೨). ಇಂದಿಗೂ ಜನಪದ ಜೀವನದಲ್ಲಿ ಕುಂತಿ ಹಾಗೂ ಪಾಂಡವರ ಸ್ಮರಣೆ ಚಿರಂತರವಾಗಿ ಉಳಿದಿದೆ. ಹೆಂಗಸರು ಅವರನ್ನು ನೆನೆದು ಹಾಡುತ್ತಾರೆ. ಕುಂತಿ ತನ್ನ ಮಕ್ಕಳಿಗಾಗಿ ಎಷ್ಟು ಕಷ್ಟಪಟ್ಟಳು ಎಂಬುದನ್ನು ಅವರು ಬಣ್ಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕೊಂತಿಪೂಜೆ ಹುಟ್ಟಿಕೊಂಡಿದೆ.

ಹಿಂದೆ ಪಾಂಡವಪುರದಲ್ಲಿ ಪಾಂಡವರು ವಾಸವಾಗಿದ್ದುದರಿಂದ ಆ ಸ್ಥಳಕ್ಕೆ ಈ ಹೆಸರು ಬಂದಿದೆ ಎಂದು ಪ್ರತೀತಿ. ಭೀಮನ ಸಾಹಸಗಳಲ್ಲಿ ಒಂದಾದ ಬಕಾಸುರನ ವಧೆಯಾಗುವದು ಈ ಸ್ಥಳ ಪುರಾಣದಿಂದ ತಿಳಿದುಬರುತ್ತದೆ. ಈ ಕಾರಣಕ್ಕಾಗಿಯೇ ಕರ್ನಾಟಕದ ಸಾಂಸ್ಕೃತಿಕ, ಐತಿಹಾಸಿಕ ಪರಂಪರೆಗೆ ಪಾಂಡವಪುರ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದೆ. ಈ ಪ್ರದೇಶವು ಗುಡ್ಡಗಾಡಿನಿಂದ ಕೂಡಿದ್ದು ರಾಮಾಯಣ, ಮಹಾಭಾರತ ಕಾಲದ ದಂಡಕಾರಣ್ಯವನ್ನು ನೆನಪಿಗೆ ತರುತ್ತದೆ.

ಸಾಮಾನ್ಯವಾಗಿ ಯಾವುದೇ ಗ್ರಾಮದ ಮುಂದಿರುವ ಗುಡಿಗಳ ಪ್ರಾಕಾರ, ಮನೆಯ ಗೋಡೆ, ಹೊಲಗದ್ದೆಗಳ ಬದುಗಳಲ್ಲಿರುವ ಶಾಸನ, ವೀರಗಲ್ಲುಗಳು, ಮಾಸ್ತಿಕಲ್ಲುಗಳು ಸ್ಥಳದ ಮಹಿಮೆಯನ್ನು ಸಾರುತ್ತವೆ. ಪ್ರತಿಯೊಂದು ಬೆಟ್ಟ ಗುಡ್ಡವೂ ತನ್ನ ಪೌರಾಣಿಕ ಹಿನ್ನಲೆಯನ್ನು ಒದಗಿಸುತ್ತದೆ.

ಅಂತೆಯೇ ಕುಂತಿ ಸಂಬಂಧವಾದ ಮೌಖಿಕ ಸಾಹಿತ್ಯದಲ್ಲಿ ಅನೇಕಾನೇಕ ಐತಿಹಾಸಿಕ ಹಾಗೂ ಪೌರಾಣಿಕ ಸ್ಥಳಗಳ ಪ್ರಸ್ತಾಪ ಬರುತ್ತವೆ. ಪ್ರಕೃತ ಸಾಂಸ್ಕೃತಿಕ ಅಧ್ಯಯನಕ್ಕೆ ಇವು ಅಗತ್ಯವಾದ ಪೂರಕ ಸಾಮಗ್ರಿಯನ್ನು ಒದಗಿಸುತ್ತವೆ. ಪಾಂಡವಪುರಕ್ಕೆ ಈ ಹೆಸರು ಬಂದದ್ದು ೧೭೪೭ರಲ್ಲಿ. ಅದಕ್ಕೆ ಮುಂಚೆ ಕ್ರಿ.ಶ.೧೭೨೮ರಲ್ಲಿ ‘ಪ್ರೆಂಚ್ ರಾಕ್ಸ್’ ಎಂಬುದಾಗಿ ಕರೆಯಲಾಗುತ್ತಿತ್ತಂತೆ. ಇಲ್ಲಿಯ ಬೆಟ್ಟಗುಡ್ಡಗಳಲ್ಲಿ ಪ್ರೆಂಚ್ ರ ಸೈನ್ಯ ಎಂಬುದಾಗಿತ್ತು ಎಂದು ಹೇಳುತ್ತಾರೆ. ಈ ಹೆಸರಿನ ಹಿನ್ನೆಲೆಯಲ್ಲಿ ಸ್ಥಳೀಯ ಪುರಾಣವೊಂದು ಇರುವುದು ತಿಳಿದುಬರುತ್ತದೆ.

ಹಿರೋಡೆಯ ಪೂರ್ವದಿಕ್ಕಿಗೆ ಸುಮಾರು ಒಂದೂವರೆ ಮೈಲಿಗಳಷ್ಟು ದೂರದಲ್ಲಿ ಒಂದು ಬೆಟ್ಟವಿದೆ. ಇದಕ್ಕೆ ಹಿರೋಡೆ ಬೆಟ್ಟವೆಂದು ಹೆಸರು. ಈ ಬೆಟ್ಟದ ಪೂರ್ವಭಾಗದ ಬೆಟ್ಟವನ್ನು ಭೀಮನಬೆಟ್ಟವೆಂದೂ (ಇದನ್ನು ಒನಕೆ ಬೆಟ್ಟವೆಂದೂ ಕರೆಯುತ್ತಾರೆ. ಭೀಮನಬೆಟ್ಟದಲ್ಲಿ ಸುಮಾರು ಐದಾರು ಅಡಿ ಸುತ್ತಳತೆಯುಳ್ಳ ಮತ್ತು ಹತ್ತು-ಹನ್ನೊಂದು ಅಡಿ ಉದ್ದವಿರುವ ಒನಕೆ ಅಕೃತಿಯ ಕಲ್ಲು ಕಂಬವೊಂದನ್ನು ನಿಲ್ಲಿಸಲಾಗಿದೆ. ಅದಕ್ಕಾಗಿ ಇದನ್ನು ‘ಒನಕೆಬೆಟ್ಟ’ ವೆಂದೂ ಕರೆಯುತ್ತಾರೆ. ವನವಾಸದ ಸಂದರ್ಭದಲ್ಲಿ ಭಿಕ್ಷೆ ಬೇಡಿತಂದ ಭತ್ತವನ್ನು ಭೀಮ ಆ ಒನಕೆಯಿಂದ ಕುಟ್ಟುತ್ತಿದ್ದನಂತೆ. ಆ ಕಾರಣದಿಂದಾಗಿಯೂ ಈ ಬೆಟ್ಟಕ್ಕೆ ‘ಒನಕೆಬೆಟ್ಟ’ವೆಂದೂ ಹೆಸರು ಬಂದಿದೆ ಎಂದು ಹೇಳುತ್ತಾರೆ. ಬೆಟ್ಟದ ಪಕ್ಕದಲ್ಲಿ ಒಂದು ದೊಡ್ಡ ಗುಹೆ ಇದೆ. ಅದನ್ನು ತಪೋವನ ವೆಂದು ಕರೆಯುವರು.

ಕುಂತಿಬೆಟ್ಟ ಕುರಿತು ನಿರೂಪಿಸುವ ರಚನೆಗಳಲ್ಲಿ ಕುಂತಿ ಹಾಗೂ ಪಾಂಡುವರ ಬಗೆಗೆ ಹಲವಾರು ಅಂಶಗಳು ನಿರೂಪಿತವಾಗಿವೆ. ಅವು ಪ್ರಕೃತ ಅಧ್ಯಯನಕ್ಕೆ ಸಹಕಾರಿಯಾಗಿವೆ. ಬೆಟ್ಟದ ಮೇಲೊಂದು ಕೊಳವಿದೆ. ಕುಂತಿಯು ಆ ಕೊಳದಲ್ಲಿ ಸ್ನಾನ ಮಾಡುತ್ತಿದ್ದುದರಿಂದ ಇದಕ್ಕೆ ಕೊಂತಿಕೊಳವೆಂದು ಹೆಸರು ಬಂದಿತೆಂದು ಹೇಳುತ್ತಾರೆ. ಈ ಕೊಳವು ಸುಮಾರು ಆರು ಅಡಿ ಅಗಲ ಮತ್ತು ನಾಲ್ಕು ಅಡಿ ಆಳವಾಗಿದ್ದು ಚೌಕಾಕಾರವಾಗಿದೆ. ಕೊಳದ ಒಂದು ಭಾಗವು ಬಂಡೆಯಿಂದ ಮುಚ್ಚಿದೆ. ಇದಕ್ಕೆ ಕಾರಣ ಕುಂತಿಯು ಒಮ್ಮೆ ಸ್ನಾನಮಾಡುತ್ತಿದ್ದಾಗ ಭಿಕ್ಷುಕನೊಬ್ಬ ಭಿಕ್ಷೆಯನ್ನು ಕೇಳಲು ಬಂದನಂತೆ. ಆಗ ಕುಂತಿಯು ತನ್ನ ಮಾನರಕ್ಷಣೆಗಾಗಿ ಪಕ್ಕದಲ್ಲಿಯೇ ಇದ್ದ ದೊಡ್ಡ ಬಂಡೆಯನ್ನು ಮರೆಮಾಡಿಕೊಂಡಳಂತೆ. ಅಂದಿನಿಂದ ಆ ಬಂಡೆಯು ಹಾಗೆಯೇ ಇದೆ ಎನ್ನುವುದು ಪ್ರತೀತಿ.

ಕೊಳದ ಪಕ್ಕದಲ್ಲಿ ಬಂಡೆಯ ಮೇಲೆ ಸೀರೆಯಾಕಾರದ ಗುರುತು ಕಾಣಿಸುತ್ತದೆ. ಕುಂತಿಯು ಸೀರೆಯನ್ನು ಒಣಹಾಕಿದ್ದಳಂತೆ. ಪಕ್ಕದ ಬಂಡೆಯ ಮೇಲೆ ಎರಡು ದೊಡ್ಡ ಪ್ರಮಾಣದ ಪಾದಗಳಿವೆ. ಇವನ್ನು ‘ಭೀಮನಪಾದ’ಗಳೆಂದು ಕರೆಯುವರು. ಕೊಳದ ಪಕ್ಕದಲ್ಲಿ ಒಳಲೆಯಾಕಾರದಲ್ಲಿ ಬಂಡೆ ಕೊರೆದಂತಿದೆ. ಇದನ್ನು ‘ಭೀಮನ ಒಳಲೆ’ ಎಂದು ಕರೆಯುವರು. ಪ್ರತಿವರ್ಷವೂ ಕಾರ್ತಿಕಮಾಸದಲ್ಲಿ ಈ ಪ್ರದೇಶದ ಸುತ್ತು ಮುತ್ತಲಿನ ರೈತಾಪಿಗಳು ಕುಂತಿ ಮತ್ತು ಪಾಂಡವರ ನೆನಪಿಗಾಗಿ ಕುಂತಿಬೆಟ್ಟಕ್ಕೆ ಬಂದು ಪೂಜೆಯನ್ನು ಸಲ್ಲಿಸುತ್ತಾರೆ. ಇದು ಕುಂತಿಯನ್ನು ಸ್ಮರಣೆ ಮಾಡುವುದರ ಮೂಲಕ ಅವರ ನೆನಪನ್ನು ಉಳಿಸಿಕೊಳ್ಳುವುದೇ ಆಗಿದೆ.

ಪಾಂಡವಪುರದಲ್ಲಿ ಪಾಂಡವರು ನೆಲೆಸಿದ್ದರೇಂಬುವುದಕ್ಕೆ ಹಲವು ಕತೆಗಳು ದೊರೆಯುತ್ತವೆ. ಪಾಂಡವಪುರದಿಂದ ನಾಲ್ಕೈದು ಫರ್ಲಾಂಗು ದೂರದಲ್ಲಿ ‘ಹಾರೋಹಳ್ಳಿ’ ಎಂಬ ಒಂದು ಪುಟ್ಟ ಗ್ರಾಮವಿದೆ. ಈ ಊರಿನ ಬಗ್ಗೆ ಪ್ರಚಲಿತವಾಗಿರುವ ಸ್ಥಳಪುರಾಣದ ಪ್ರಕಾರ ಹಾರೋಹಳ್ಳಿಗೆ ಪೂರ್ವದಲ್ಲಿ ಹರುವರಹಳ್ಳಿ ಎಂಬುದಿದ್ದು, ಅಲ್ಲಿ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದರು. ಮಹಾಭಾರತದಲ್ಲಿ ಬರುವ ‘ಏಕಚಕ್ರನಗರ’ ಇದೇ ಎಂದು ಇಲ್ಲಿಯ ಜನರ ನಂಬುಗೆ ಪಾಂಡವರು ಅರಗಿನ ಮನೆಯಲ್ಲಿದ್ದು ಬೆಂಕಿಬಿದ್ದ ತರುವಾಯ ಅಲ್ಲಿಂದ ತಪ್ಪಿಸಿಕೊಂಡು ಬಂದಾಗ ಈ ಊರಿನ ಬ್ರಾಹ್ಮಣರ ಮನೆಯೊಂದರಲ್ಲಿ ವಾಸವಾಗಿದ್ದರಂತೆ. ಹಿರೋಡೆ ಬೆಟ್ಟದಲ್ಲಿ ಬಕಾಸುರನೆಂಬ ರಾಕ್ಷಸ ವಾಸವಾಗಿದ್ದನಂತೆ. ಆತನಿಗೆ ಪ್ರತಿದಿನವೂ ಊರಿನಿಂದ ‘ಹಿರಿಯ ಎಡೆ’ ಯನ್ನು ಕಳುಹಿಸಿಕೊಡುತ್ತಿದ್ದರಂತೆ. ಅದು ಕ್ರಮೇಣ ‘ಹಿರೋಡೆ’ ಎಂದಾಗಿದೆ. ಅದೇ ರೀತಿಯಲ್ಲಿ ಪ್ರತಿನಿತ್ಯ ಸಂಜೆ ಬಕನಿಗೆ ಬೆಟ್ಟದ ಪಕ್ಕದಲ್ಲಿರುವ ಮತ್ತೊಂದು ಗ್ರಾಮದಿಂದ ‘ಚಿಕ್ಕ ಎಡೆ’ಯನ್ನು ತಲುಪಿಸುತ್ತಿದ್ದುದಾಗಿಯೂ ಹೇಳುತ್ತಾರೆ. ಇದು ಕ್ರಮೇಣ ‘ಚಿಕ್ಕಾಡೆ’ ಎಂದು ಹೆಸರಾಯಿತು. ಈಗಲೂ ಕಾರ್ತಿಕಮಾಸದಲ್ಲಿ ಈ ಎರಡೂ ಊರಿನ ಜನರು ಕುಂತೀ ಬೆಟ್ಟಕ್ಕೆ ಹೋಗಿ ‘ಎಡೆ’ ಇಟ್ಟು ಬರುವದು ಪದ್ಧತಿ.

ಪ್ರತಿದಿನವೂ ಬಕಾಸುರನಿಗೆ ಒಂದು ಬಂಡಿ ಅನ್ನ, ಅದಕ್ಕೆ ಬೇಕಾಗುವಷ್ಟು ವ್ಯಂಜನಗಳು, ಒಂದು ಜೊತೆ ಎತ್ತುಗಳು ಮತ್ತು ಒಬ್ಬ ಮನುಷ್ಯನನ್ನು ಆಹಾರಕ್ಕಾಗಿ ಕೊಡಬೇಕಾಗಿತ್ತು. ಪ್ರತಿದಿನವೂ ಸರದಿಯ ಮೇಲೆ ಒಬ್ಬೊಬ್ಬರ ಮನೆಯವರು ಕ್ರಮವಾಗಿ ಈ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಒಂದು ದಿನ ಇದ್ದಕ್ಕಿದ್ದಂತೆ ಪಾಂಡವರು ವಾಸವಾಗಿದ್ದ ಬ್ರಾಹ್ಮಣರ ಮನೆಯ ಯಜಮಾನ ಗಟ್ಟಿಯಾಗಿ ಅಳುತ್ತಿದ್ದುದನ್ನು ಕೇಳಿ ಕುಂತಿಯು ಆ ಅಳುವಿಗೆ ಕಾರಣವನ್ನು ವಿಚಾರಿಸಿದಳು. ಯಜಮಾನನು ‘ನಾಳೆ ರಾಕ್ಷಸನಿಗೆ ಊಟ ಕಳುಹಿಸುವ ಸರದಿ ನಮ್ಮದು, ನನಗೆ ಒಬ್ಬನೇ ಮಗ. ನಾಳೆಯೇ ಆತನ ಮದುವೆ. ನಾನೇ ರಾಕ್ಷಸನಿಗೆ ಬಲಿಯಾಗೋಣವೆಂದರೆ ಆತನಿಗೆ ಯುವಕರೇ ಆಗಬೇಕು. ಮಗನನ್ನು ಕಳುಹಿಸೋಣ ಎಂದರೆ ವಂಶದ ಕುಡಿಯನ್ನೇ ಕಡಿದಂತಾಗುತ್ತದೆ. ‘ಯಮನ ಬಾಧೆ ಮಗನ ಮದುವೆ’ ಎಂಬಂತಾಗಿದೆ ನನ್ನ ಬಾಳು” ಎಂದು ಗೋಳಾಡಿದ.

ಕುಂತಿಯು ಬ್ರಾಹ್ಮಣನನ್ನು ಸಂತೈಸಿ ತನಗೆ ಐದು ಜನ ಮಕ್ಕಳಿರುವುದಾಗಿಯೂ, ಅವರಲ್ಲಿ ಒಬ್ಬನು ಹೊಟ್ಟೆಬಾಕನೆಂದೂ, ಅವನನ್ನು ಸಾಕಲು ತನಗೆ ಸಾಧ್ಯವಾಗುತ್ತಿಲ್ಲವೆಂದೂ, ರಾಕ್ಷಸನ ಊಟಕ್ಕೆ ಅವನನ್ನು ಕಳುಹಿಸುವುದಾಗಿಯೂ ಹೇಳಿ ಬ್ರಾಹ್ಮಣನನ್ನು ಸಮಾಧಾನ ಮಾಡಿದಳು. ನಂತರ ಕುಂತಿಯು ಮಕ್ಕಳಿಗೆ ನಡೆದ ವಿಷಯವನ್ನು ತಿಳಿಸಿದಳು. ಅನ್ನ ತುಂಬಿದ ಬಂಡಿಯನ್ನು ಹೊಡೆದುಕೊಂಡು ಹೋಗುವಂತೆ ಭೀಮನಿಗೆ ತಾಕೀತು ಮಾಡಿದಳು. ತಾಯಿಯ ಮಾತಿಗೆ ಭೀಮನು ಒಪ್ಪಿದನು.

ಅನ್ನವನ್ನು ತುಂಬಿದ ಬಂಡಿಯನ್ನು ಹೊಡೆದುಕೊಂಡು ಹೋದ ಭೀಮನು ರಾಕ್ಷಸನನ್ನು ಕೊಂದು ಎರಡು ಭಾಗಮಾಡಿ ಪಕ್ಕದ ಗ್ರಾಮವಾದ ಹಿರೇಮರಳಿಯ ಕೋಟೆಬಾಗಿಲಿಗೆ ಕಟ್ಟಿದ್ದನಂತೆ. ಹಿಗೆ ಭೀಮನು ರಾಕ್ಷಸನ ದೇಹವನ್ನು ಸಿಗಿದು ಕಟ್ಟಿದನೆಂದು ಹೇಳುವ ಕೋಟೆಯು ಬಹಳ ಕಾಲದವರೆವಿಗೂ ಇದ್ದು ಇತ್ತೀಚಿಗಷ್ಟೆ ಶಿಥಿಲವಾಗಿ ನಾಶವಾಗಿದೆ ಎಂದು ಹೇಳುತ್ತಾರೆ. ಆದರೂ ಈ ಭಾಗದಲ್ಲಿರುವ ಜಮೀನಿಗೆ ಈಗಲೂ ‘ಕೋಟೆ ಹಿಂದಿನ ಗದ್ದೆ’ಯೆಂದು ಕರೆಯುವುದುಂಟು. ಇದು ನಮ್ಮ ಐತಿಹಾಸಿಕ, ಪೌರಾಣಿಕ ವ್ಯಕ್ತಿಗಳ ಸ್ಮರಣೆ ಮಾಡುವುದಕ್ಕೊಂದು ನೆಪವಾಗಿದೆ ಅಷ್ಟೆ. ಬಕಾಸುರನ ವಧೆಯ ನಂತರ ಪಾಂಡವರು ಈ ಬೆಟ್ಟದಲ್ಲಿ ನಿರಾತಂಕವಾಗಿ ವಾಸವಾಗಿದ್ದರೆನ್ನುವುದು ಈ ಭಾಗದ ಜನರ ನಂಬಿಕೆಯಗಿದೆ.[3]

ಪಾಂಡವರು ಈ ಪ್ರದೇಶದಲ್ಲಿ ನೆಲಸಿದ್ದ ಕಾರಣದಿಂದಾಗಿ ಮೈಸೂರು ಮತ್ತು ಮಂಡ್ಯಜಿಲ್ಲೆಯ ರೈತಾಪಿಗಳು ಕಾರ್ತಿಕಮಾಸದಲ್ಲಿ ವಿಶೇಷ ರೀತಿಯಲ್ಲಿ ಕೊಂತಿಪೂಜೆಯನ್ನು ಆಚರಿಸುವುದು ರೂಢಿಗೆ ಬಂದಿತು. ಅದರಲ್ಲೂ ಹಾರುವಹಳ್ಳಿ ಗ್ರಾಮದಲ್ಲಿ ಕೊಂತಿಪೂಜೆಯನ್ನು ಬಹು ಆಕರ್ಷಕ ರೀತಿಯಲ್ಲಿ ಇಂದಿಗೂ ಆಚರಿಸುವುದನ್ನು ನೋಡಬಹುದು.

ಗ್ರಾಮದ ಕುಂಬಾರರು ಐರಾವತನ ವಿಗ್ರಹವನ್ನು ಜೇಡಿಮಣ್ಣಿನಿಂದ ನಿರ್ಮಿಸುವರು. ಗ್ರಾಮಸ್ಥರು ಸೈನಿಕರಂತೆ ವೇಷಧರಿಸಿ ಬಿಲ್ಲುಬಾಣ ಹಿಡಿದು ಐರಾವತವನ್ನು ತರಲು ಕುಂಬಾರನ ಮನೆಗೆ ಹೋಗುವರು. ಇವರಲ್ಲಿ ಇಬ್ಬರು ಮಾತ್ರ ಭೀಮಾರ್ಜುನನಂತೆ ವೇಷ ಧರಿಸಿರುತ್ತಾರೆ. ಆ ಕುಂಬಾರನ ಮನೆಯಲ್ಲಿಯೂ ಕೆಲವರು ದೇವತೆಗಳಂತೆ ವೇಷಧರಿಸಿರುತ್ತಾರೆ. ಏರಡೂ ಗುಂಪುಗಳ ವೇಷಧಾರಿಗಳ ಮಧ್ಯೆ ಹೋರಾಟ ನಡೆದು ಕೊನೆಗೆ ಭೀಮಾರ್ಜುನರ ಕಡೆಯವರೇ ಗೆಲ್ಲುವರು. ಸೋತ ದೇವೇಂದ್ರ ಅರ್ಜುನನ ಜೊತೆ ತಮ್ಮ ಸ್ಯೆನ್ಯ ಸಮೇತ ಐರಾವತವನ್ನು ಮೆರವಣಿಗೆಯಲ್ಲಿ ಕರೆತಂದು ಕುಂತಿಗೆ ಪೂಜೆ ಮಾಡಲು ಕೊಡುವರು. ಅನಂತರ ಐರಾವತವನ್ನು ಪ್ರತಿಷ್ಟಾಪಿಸಿ ಕೆಲವು ದಿನಗಳ ಕಾಲ ಜೊತೆ ಮಾಡಲಾಗುವುದು. ಒಂದು ಶುಭದಿನದಂದು ವಿಗ್ರಹಕ್ಕೆ ಪೂಜೆ ಸಲ್ಲಿಸಿ ಊರನ್ನೆಲ್ಲ ಅಲಂಕರಿಸಿ ವಿಗ್ರಹವನ್ನು ಮೆರವಣಿಗೆ ಮಾಡಿ ವಿಸರ್ಜಿಸಲಾಗುವುದು. ಈ ಪದ್ಧತಿಯು ಕೊಂತಿಪೂಜೆ ಸಂದಂರ್ಭದಲ್ಲಿ ನಡೆಯುವುದರಿಂದ ಇದು ಕೊಂತಿಪೂಜೆಗೆ ನಾಂದಿಯಾಗಿದೆ ಎನ್ನಬಹುದು.

ಐರಾವತನ ಪೂಜೆಗೆ ಹಿನ್ನೆಲೆ ಎಂದು ಹೇಳಲಾಗಿರುವ ಒಂದು ಪ್ರಸಂಗ ಹೀಗಿದೆ: “ಅಸೂಯೆಯೇ ಗರ್ವವಾಗಿ ಗಾಂಧಾರಿ ಮೆರೆಯತೊಡಗಿದಳು. ತಾನು ಮೆರೆಯುವುದು ಎಲ್ಲರಿಗಿಂತ ಕುಂತಿಗೇ ತಟ್ಟಬೇಕು. ಕುಂತಿಯನ್ನು ಹಿಂಸೆಯಲ್ಲಿಯೂ ಮನೋವೇದನೆಯಲ್ಲಿಯೂ ಮುಳುಗಿಸಬೇಕು ಎಂಬ ರಾಕ್ಷಸ ಬಯಕೆ ಅವಳದು. ಅದಕ್ಕಾಗಿ ಒಂದು ‘ನೋಪಿಹಬ್ಬ’ ಮಾಡಿದಳು. ಕಡಲೆಹಿಟ್ಟಿನಲ್ಲಿ ಆನೆಮಾಡಿ ಅದರೊಳಕ್ಕೆ ಜೇನುತುಪ್ಪ ತುಂಬಿ, ಊರುಕೇರಿಯನ್ನೆಲ್ಲ ಕರೆದಳು. ಬಡವಿ ಭಿಕ್ಷುಕಿ ಎನ್ನದೆ, ಮುದುಕಿರು, ಮೋಟೀರು ಎನ್ನದೆ ಎಲ್ಲರನ್ನು ಆಹ್ವಾನಿಸಿದಳು. ಕುಂತಿಗೆ ಮಾತ್ರ ಆಹ್ವಾನ ಹೋಗಲಿಲ್ಲ” (ಕ್ಯಾತನಹಳ್ಳಿ ರಾಮಣ್ಣ: ೧೯೮೫: ೫) ಹಾರುವಳ್ಳಿಯಲ್ಲಿ ಇಂದಿಗೂ ನಡೆಯುವ ಐರಾವತನ ಪೂಜೆಗೆ ಮೇಲಿನ ಪ್ರಸಂಗ ಸಮರ್ಥನೆ ಒದಗಿಸುತ್ತದೆ. ಈ ಹಿನ್ನೆಲೆಯಲ್ಲಿಯೂ ಕೊಂತಿಪೂಜೆ ಆಚರಣೆ ಪ್ರಚರಕ್ಕೆ ಬರಲು ಕಾರಣವಾಗಿರಬೇಕು.

ಸಾಹಿತ್ಯದ ಹಿನ್ನೆಲೆ: ಮಹಾಭಾರತದ ಕತೆಗಳಿಗೆ ಸಂಬಂಧಿಸಿದಂತೆ ದಕ್ಷಿಣ ಕರ್ನಾಟಕದಲ್ಲಿ ಅನೇಕ ಉತ್ಕೃಷ್ಟವಾದ ಜನಪದ ಕಾವ್ಯಗಳು ದೊರೆಯುತ್ತವೆ. ಕುಂತಿ ತನ್ನ ಮಕ್ಕಳೊಡನೆ ವನವಾಸದ ಕಹಿಯನ್ನು ಅನುಭವಿಸಿದ ದಾರುಣ ಚಿತ್ರಗಳು ಜನಪದ ಮಹಾಭಾರತ, ಧರ್ಮರ ಪದ ಮುಂತಾದವುಗಳಲ್ಲಿ ಲಭ್ಯವಾಗುತ್ತದೆ.

ಶಿಷ್ಟಮೂಲದಲ್ಲಿ ಕುಂತಿಯು ಪಾಂಡುವನ್ನು ಸ್ವಯಂವರಿಸಿದಳೆಂದು ಬಂದರೆ ಜನಪದ ಮೂಲದಲ್ಲಿ ಗಾಂಗೇಯ ಇವಳ ಕುಲ, ರೂಪ, ಲಕ್ಷಣ, ಶೀಲಗಳನ್ನು ಮೆಚ್ಚಿ ಕುಂತಿಭೋಜನನ್ನು ಕರೆಸಿ ಭೂಸುರರ ಮತದಿಂದ ಕುಂತಿಗೂ ಪಾಂಡುವಿಗೂ ಅಗ್ನಿಸಾಕ್ಷಿಯಾಗಿ ವಿವಾಹವನ್ನು ನೆರವೇರಿಸಿದ. ಭೀಷ್ಮ ಮದ್ರೇಶನಿಗೆ ಕನ್ಯಾಶುಲ್ಕವನ್ನು ಕೊಟ್ಟು ಮಾದ್ರಿಯನ್ನು ಪಾಂಡುವಿಗೆ ತಂದುಕೊಂಡನೆಂಬ ವಿವರವೂ ಇಲ್ಲ. ಮದ್ರೇಶ್ವರನನುಜೆ ಮಾದ್ರಿಯನು ಪಾಂಡುವಿಗರಸಿಯನು ಮಾಡಿದನು ವೈವಾಹಿಕ ಮುಹೂರ್ತದಲ್ಲಿ’ ಎಂದಷ್ಟೇ ಹೇಳುತ್ತಾನೆ (ಸುಬ್ರಹ್ಮಣ್ಯಂ: ೧೯೭೫:೩೮೨). ಜನಪದ ವಕ್ತೃಗಳು ಹೇಳುವಂತೆ ಕುಂತಿಯು ಕುಂತಿಭೋಜನ ಸಾಕುಮಗಳು ಎನ್ನುವದು ಸ್ಪಷ್ಟ. ಈ ಮಾತಿಗೆ ಮೇಲಿನ ವಿವರಗಳು ಪೂರಕವಾಗುತ್ತವೆ.

ಮೂಲಭಾರತದಲ್ಲಿ ಪಾಂಡುವು ವಿವಾಹದ ನಂತರ ದಿಗ್ವಿಜಯಕ್ಕೆ ಹೊರಟು ದುಷ್ಟ ರಾಜರನ್ನು ಸೋಲಿಸಿ ಭೂಮಂಡಲದ ರಾಜಾಧಿರಾಜರಿಗೆಲ್ಲಾ ಭೀತಿ ಹುಟ್ಟಿಸಿ ಎಲ್ಲರಿಂದಲೂ ಯಥೇಚ್ಚವಾಗಿ ಕಪ್ಪಕಾಣಿಕೆಗಳನ್ನು ಸಂಗ್ರಹಿಸಿಕೊಂಡು ಹಿಂತಿರುಗಿದ ವಿವರಗಳಿವೆ. ಆದರೆ ನಾರಣಪ್ಪನಲ್ಲಿ ದಿಗ್ವಿಜಯವೆಂದು ಹೆಸರಿಸದೆ ಎರಡು ಪದ್ಯಗಳಲ್ಲಿ ಪಾಂಡುರಾಜನ ಪರಾಕ್ರಮ, ವೈಭವವನ್ನು ವರ್ಣಿಸಲಾಗಿದೆ.

ಬೇಟೆಗಾರರು ಬೇಟೆಗೆ ಹೋಗಲು ಸಕಲ ಸಿದ್ಧತೆಗಳನ್ನು ಮಾಡಿ ಕರೆಯುತ್ತಾರೆ. ಪಾಂಡುವು ಸಜ್ಜಾಗಿ ತಾನೊಬ್ಬನೇ ಬೇತೆಗೆ ಹೊರಡುತ್ತಾನೆ. ದಿಗ್ವಿಜಯಾನಂತರ ಬೇಸರ ಕಳೆಯಲೆಂದು ಬೇಟೆಗೆ ಹೋದನೆಂದಾಗಲಿ, ಕುಂತಿ ಮಾದ್ರಿಯರೊಡನೆ ಎರಡು ಹೆಣ್ಣಾನೆಗಳೊಡನೆ ಸಂಚರಿಸುವ ಐರಾವತದಂತೆ ಹಿಮವತ್ಪರ್ವತದ ತಪ್ಪಲಿನಲ್ಲಿ ವಿವರಿಸುತ್ತಿದ್ದನೆಂದಾಗಲಿ ಅಲ್ಲ. ಧೃತರಾಷ್ಟ್ರ ಪ್ರತಿದಿನ ರಾಜಭೋಗವಸ್ತುಗಳನ್ನು ಸೇವಕರ ಮೂಲಕ ಕಾಡಿಗೆ ಕಳುಹಿಸಿಕೊಡುತ್ತಿದ್ದನೆಂಬ ಸಂಗತಿಯೂ ಇಲ್ಲ. ಮೃಗ ಮಿಥುನ ರೂಪದಲ್ಲಿ ರಮಿಸುತ್ತಿದ್ದ ಋಷಿದಂಪತಿಗಳಿಗೆ ಪಾಂಡುರಾಜನು ಒಂದೇ ಬಾಣದಿಂದ ಕೀಲಿಸಿದ. ಆಗ ಆ ಮುನಿಯು ‘ಎಲವೋ ರಾಜಬ್ರುವನೆ, ನನ್ನಯ ಲಲನೆಯೊಡನಿರೆಕೊಂದೆ, ನಿನ್ನಯ ಲಲನೆಯನು ನೀ ಕೂಡಿದಾಗಲೆ ಮರಣ ನಿನಗಹುದು ಹಲವು ಮಾತೇಕೆ’ ಎಂದು ಪ್ರಾಣಬಿಟ್ಟನು. ಪಾಂಡುವು ಕೊಂದ ಮುನಿ ಕಿಂದಮನೆಂದಾಗಲಿ, ಐದು ಬಾಣಗಳನ್ನು ಪ್ರಯೋಗಿಸಿದನೆಂದಾಗಲಿ ಇಲ್ಲ. ಅಗಸ್ತ್ಯನೂ ಅಭಿಚಾರ ಮಂತ್ರಪ್ರಯೋಗದಿಂದ ಸತ್ರಯಾಗವನ್ನು ಕೈಗೊಂಡಿದ್ದಾಗ ಅರಣ್ಯದಲ್ಲಿದ್ದ ಮೃಗಗಳನ್ನೆಲ್ಲ ಬೇಟೆಯಾಡಿದ ನಿದರ್ಶನವನ್ನು ಹೇಳಿ ತಾನು ಆ ಮೃಗವನ್ನು ಮೋಸದಿಂದ ಕೊಂದದ್ದು ಕ್ಷತ್ರಿಯನಾದ ತನಗೆ ಸರಿಯೆಂದೇ ಪಾಂಡುವು ಋಷಿಯೊಡನೆ ಚರ್ಚಿಸುವುದು. ಆಗ ಕಿಂದಮ ಋಷಿಯು ಮೃಗವನ್ನು ಕೊಲ್ಲುವುದು ಪಾಪವಲ್ಲ; ತನ್ನನ್ನು ಮೃಗವೆಂದು ಭ್ರಮಿಸಿ ಕೊಂದದ್ದು ಪಾಪವಲ್ಲ. ಆದರೆ ಭೋಗ ಸಮಯದಲ್ಲಿ ಕೊಂದದ್ದು ಮಾತ್ರ ಮಹಾದೋಷ ಎನ್ನುವುದು ಮುಖ್ಯವಾದ ವಿಚಾರವಾಗುತ್ತದೆ. ಪಾಂಡುವು ಈ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತದೆ.

 

[1]ಎರಗಿಯುಮಾಮ್ಮದಿವ್ಯಮುನಿಗಾರ್ತುಪವಾಸಮುನಿರ್ದುಮೊರ್ಮೆಕೊ೧ಯ್ದಕೆಯಪೂಗಳಿಂಶಿವವವರ್ಚಿಸಿಯುಂಬಿಡದೊರ್ಮ್ತೆನೋಂತುವೋದವರಪೇಳ್ದಿನೋಂಪಿಗಳನೊರ್ಮೆಪಲರ್ಮೆಯುಮಿಂತುತಮ್ಮದು|| ಯ್ಮವಿನಮಿರ್ವರುಂನೆಮದದೇವವರ್ಗಾದುದೊಪುತ್ರದೊಹಳಂ|| (ಸಂ. ಪುಟ್ಟಪ್ಪ. ಕೆ.ವಿ. : ೧೯೭೭:೩೩)

[2]ಮಹಾಭಾರತದಕತೆಗಳಿಗೆಸಂಬಂಧಿಸಿದಂತೆದಕ್ಷಿಣಕರ್ನಾಟಕದಲ್ಲಿಅನೇಕಉತ್ಕೃಷ್ಟಜನಪದಕಾವ್ಯಗಳುಲಭ್ಯವಾಗುತ್ತವೆ.)

[3]ಈಬಗೆಗೆಮಾಹಿತಿನೀಡಿದವರು : ರಾಮೇಗೌಡ : ಒಕ್ಕಲಿಗರು, ೭೦ವರ್ಷ, ಹಾರುವಹಳ್ಳಿ : ೧೯೯೩