ದೂರ್ವಾಸರನ್ನು ಕುಂತಿಯು ಒಂದು ವರ್ಷ ಕಾಲ ಉಪಚರಿಸಿದಳೆಂದೂ ತೃಪ್ತರಾದ ದೂರ್ವಾಸರು ತಮ್ಮ ದಿವ್ಯ ಜ್ಞಾನದೃಷ್ಟಿಯಿಂದ ಕುಂತಿಗೆ ಮುಂದೊದಗುವ ವಿಪತ್ತನ್ನರಿತು ಒಂದು ದಿವ್ಯ ಮಂತ್ರವನ್ನು ಉಪದೇಶಿಸಿದರೆಂದೂ ನಾರಣಪ್ಪ ಸ್ವಲ್ಪ ಮಾರ್ಪಡಿಸಿದ್ದಾನೆ. ಒಂದು ದಿನ ದೂರ್ವಾಸ ಮುನಿಯನ್ನು ಉಪಚರಿಸಿದಳೆಂದೂ ಸಂತುಷ್ಟನಾದ ಅವನು ಐದುಮಂತ್ರಗಳನ್ನು ಕೊಟ್ಟು ಸಂತೋಷದಿಂದ ತನ್ನ ಆಶ್ರಮಕ್ಕೆ ಹಿಂತಿರುಗಿದನೆಂದೂ ನಾರಣಪ್ಪ ಹೇಳುತ್ತಾನೆ.

ಕುಂತಿ-ಸೂರ್ಯರ ದೇಹ ಸಂಸರ್ಗಂದ ಜನನವಾಯಿತೆಂದು ನಾರಣಪ್ಪಲ್ಲಿಲ್ಲ. ಸೂರ್ಯನು ಕುಂತಿಗೆ ಹುಟ್ಟುವ ಮಗ ಮಹೋದಾರ ಸ್ವಭಾವದವನೆಂದೂ ತಾನೇ ಅಡ್ಡಬಂದರೂ ಅವನು ಕೊಡುವ ದಾನವನ್ನು ಕೊಟ್ಟೇ ಕೊಡುವನೆಂದೂ ಭವಿಷ್ಯ ನುಡಿಯುವುದು, ತನ್ನೊಡನೆ ಕೊಡಲು ಸಮ್ಮತಿಸದಿದ್ದ ಕುಂತಿಗೆ ಮೊದಲು ನಯದಿಂದ ಭಯಗೊಳ್ಳುದಂತೆ ಹೇಳಿ ಮತ್ತೆ “ಯಾರಿಂಧ ವರ ಪಡೆದು ಗರ್ವಾಂಧಳಾದಳೋ  ಆ ಋಷಿಯೇ ಉಳಿಯಲಾರನೆಂದು ತಿಳಿ. ನಿನ್ನ ಕುಲವನ್ನು ಈಗಲೇ ನನ್ನ ಕೆರಳಿದ ಕಣ್ಣುಗಳಿಂದ ದಹಿಸಿಬಿಡುವೆನು” ಎಂದೂ ಗದರಿಸುವುದು ಇಲ್ಲ. ವಚನಭಾರತ, ಪಂಪ ಭಾರತದಲ್ಲಿ ಈ ಪ್ರಸಂಗಕ್ಕೆ ಎಡೆ ದೊರೆತಿದೆ (ಕೃಷ್ಣಶಾಸ್ತ್ರಿ, ಎ. ಆರ್. ೧೯೬೧:೨೧) ಲೋಕದಲ್ಲಿ ಅಪರಾದಕ್ಕೆ ಹೆದರಿದ್ದರಿಂದ ಕುಂತಿಯು ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಅಪರಾದವನ್ನು ಮುಚ್ಚಿಕೊಳ್ಳುವುದಕ್ಕಾಗಿ ಅದರಲ್ಲಿ ಮುತ್ತುರತ್ನಗಳನ್ನು ಸೇರಿಸಿ ನದಿಯಲ್ಲಿ ತೇಲಿ ಬಿಟ್ಟಳೆನ್ನುವುದಕ್ಕೆ ಬದಲು ನಾರಣಪ್ಪನಲ್ಲಿ ಕಂದನ ತಾಯಿ ಮೇಣೆ ಕೊಲ್ಲು’ ಎಂದು ಮಗನನ್ನು ಮಡುವಿಗೆ ಹಾಕಿದಳೆಂದು ಮಾತ್ರ ಬರುತ್ತದೆ. ಈ ಪ್ರಸಂಗವು ಕೊಂತಿಪೂಜೆ ಸಂದರ್ಭದಲ್ಲಿ ಹಾಡುವ ಪದಗಳಲ್ಲಿಯೂ ಉಲ್ಲೇಖಗೊಂಡಿದೆ.

ಅಷ್ಟೇ ಅಲ್ಲ. ಗಾಂಧರಿಗೆ ನೋಪಿಯನ್ನು ಮಾಡುವಂತೆ ವೇದವ್ಯಾಸರು ಹೇಳುವ ಸಂದರ್ಭವು ‘ಐರಾವತ ನೋಪಿ’ ಕೃತಿಯಲ್ಲಿ ಹೀಗೆ ಬಂದಿದೆ:

ಧರಣಿ ಪಾಲನ ನುಡಿಗೆ ಮಾಮುನಿ
ವರನು ಮೆಚ್ಚಿದೆನೆಲೆ ನೃಪತಿ
ನ್ನರಸಿಗರು ಹಲುಬಂದನೈರಾವತದ ನೋಂಪಿಯನು
ಹರನ ಚರಣದ ಸೇವೆ ಪಾರ್ವತಿ
ಯರಸ ತೃಪ್ತಿನುದಾನದಲಿ ಭೂ
ಸುರರ ದಣಿಸುವುದೆಂದು ವೇದವ್ಯಾಸ ಮುನಿ ನುಡಿದ
(ಶಾಸ್ತ್ರೀ, ಜಿ. ಕೆ: ೧೯೭೪:೪)

ಈ ರೀತಿಯಾಗಿ ಮತ್ತೈದೆತನದ ವೃದ್ಧಿಗಾಗಿ ಗಾಂಧಾರಿಯು ತನ್ನ ಮಕ್ಕಳ ನೆರವಿನಿಂದ ಮಣ್ಣಿನಲಿ ಐರಾವತವನ್ನು ನಿರ್ಮಿಸಿ ಅದನ್ನು ಪೂಜಿಸಿ, ಮುತ್ತೈದೆಯರಿಗೆ ಬಾಗಿನ(ದಾನ, ಧರ್ಮ) ಗಳನ್ನು ಕೊಟ್ಟು ಸಿರಿತನದಿಂದ ಬೀಗಿ ಬಡತನದಲ್ಲಿದ್ದ ಕೊಂತಿಯನ್ನು ಮುದಗೊಳಿಸಲು ಕಾಮಧೇನು, ಕಲ್ಪವೃಕ್ಷಗಳನ್ನು ಭೂಮಿಗೆ ತರಿಸಿ ಕುಂತಿಯ ಐರಾವತವು ಇತ್ಯೋಪ್ಯತಿಶಯವಾಗುವಂತೆ ಮಾಡಿದನು. ಮಹಾಭಾರತದಲ್ಲಿ ಬರುವ ಈ ಕಥೆಯು ಕೊಂತಿಯ ಆಚರಣೆಯ ಹಿನ್ನೆಲೆಯಲ್ಲಿದೆ (ಅನಂತರಾಮು, ಕೆ: ೧೯೮೨:೫೮)

ಕುಂತಿಯು ಆಚರಿಸಿದ ಐರಾವತ ನೋಂಪಿಯಲ್ಲಿ ಸಂತೋಷ ಸಂಭ್ರಮದಿಂದ ಪಾಲ್ಗೋಂಡ ಜನಸಾಮಾನ್ಯರು, ಬಡವ, ಬಲ್ಲಿದ, ಭಿಕ್ಷುಕರಾದಿಯಾಗಿ ಎಲ್ಲರೂ ಪುಷ್ಕಳವಾಗಿ ಉಂಡು ತೇಗಿದರು. ಸುರಲೋಕದ ಕಾಮಧೇನು, ಕಲ್ಪವೃಕ್ಷ, ಪುರುಷಾಮೃಗ ಮುಂತಾದವುಗಳನ್ನೆಲ್ಲ ಭೂಲೋಕಕ್ಕೆ ಕುಂತಿ ತರಿಸಿಕೊಟ್ಟಳೆಂದು ಅವರೆಲ್ಲರೂ ಕುಂತಿಗೆ ನೂರ್ಕಾಲ ಬದುಕಿ ಬಾಳಲೆಂದು ಮನಃಪೂರ್ತಿಯಾಗಿ ಹಾರೈಸಿದರು. ಅಂದು ಕುಂತಿಯು ಅಚರಿಸಿದ ಈ ಹಬ್ಬ ಇಂದು ಕೊಂತಿಪೂಜೆಯಾಗಿ ಉಳಿದುಬಂದಿದೆ ಎಂದು ಹೇಳಲಾಗಿದೆ.

‘ಐರಾವತ ನೋಂಪಿ’ ಕಥೆಯ ಆಧಾರದಿಂದ ಕೊಂತಿಪೂಜೆ ಎಂದರೆ ಕೊಂತಿ ದೇವಿಯ ಆಚರಿಸಿದ ಪೂಜೆ ಎಂಬುದಾಗಿಯೂ ಅಥವಾ ಕುಂತಿಯು ಪ್ರಾರಂಭಿಸಿದ ಪೂಜೆ ಎಂದೂ ಅರ್ಥೈಸಬಹುದು. ಕಾಮಧೇನು ಕಲ್ಪವೃಕ್ಷಗಳನ್ನು ದೊರಕಿಸಿಕೊಟ್ಟಳೆಂಬ ಕಾರಣಕ್ಕಾಗಿಯೂ ರೈತಾಪಿಗಳು ಕುಂತಿಯನ್ನು ಪೂಜಿಸಲು ಪ್ರೇರಣೆ ಪಡೆದಿರಬಹುದು. ಗಾಂಧಾರಿಯ ಗರ್ವಭಂಗದ ಕಥೆಯ ಹಿನ್ನೆಲೆಯನ್ನು ಪರಿಗಣಿಸುವುದಾದರೆ ಗಾಂಧಾರಿಯ ಗರ್ವಭಂಗವೇ ಕೊಂತಿಪೂಜೆಗೆ ನಾಂದಿಯಾಯಿತೆಂದೂ ಹೇಳಬಹುದು.

ಕೊಂತಿಪೂಜೆ ಆಚರಣೆ: ಕೊಂತಿಪೂಜೆಯನ್ನು ಪ್ರತಿವರ್ಷವೂ ದೀಪಾವಳಿಯ ಸಂದರ್ಭದಲ್ಲಿ ಆಚರಿಸುವುದು ಪದ್ಧತಿ. ದೀಪಾವಳಿ ಕತ್ತಲನ್ನು ಕಳೆಯುವ ಹೊಸ ಬದುಕಿಗೆ ನಾಂಧಿಯಾಗುವ ಸಂಕೇತವುಳ್ಳದ್ದು. ಅಂಧಕಾರವನ್ನು ಕಿತ್ತೊಗೆದು ಹೊಸ ಬದುಕನ್ನು ಹಸನು ಮಾಡುವುದೇ ಇದರ ಗುರಿ. ಇಂತಹ ಶುಭ ಸಂದರ್ಭದಲ್ಲಿ ನಡೆಯುವ ಕೊಂತಿಪುಜೆಯು ಸಹಜವಾಗಿಯೇ ಈ ಪ್ರದೇಶದ ರೈತಾಪಿಗಳ ಜೀವನದಲ್ಲಿ ಮಹತ್ತ್ವದ ಸ್ಥಾನವನ್ನು ಪಡೆದಿದೆ.

ಕಾರ್ತಿಕಮಾಸದಲ್ಲಿ ಕೊಂತಿಪೂಜೆಯನ್ನು ಪೂಜಿಸುತ್ತಾರೆ. ಕೊಂತಿಯನ್ನು ಪ್ರತಿವರ್ಷವೂ ಮಾಮೂಲಿಯಾಗಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಕುಳಿಯನ್ನು ಮಾಡುತ್ತಾರೆ. ಆ ಕುಳಿಯಲ್ಲಿ ಕಲ್ಲುಗಳನ್ನು ಒಂದರ ಮೇಲೊಂದರಂತೆ ಒತ್ತುತ್ತಾರೆ. ಅನಂತರ ಲಗೋರಿ ಆಟ(ಲಗ್ಗೆ) ಪ್ರಾರಂಭಿಸುತ್ತಾರೆ. ಕುಂತಿಯನ್ನು ಪೂಜಿಸಲು ನಿರ್ದಿಷ್ಟವಾಗಿ ಮೂರು ಇಲ್ಲವೆ ಐದು ದಿನಗಳಿರುವಂತೆಯೇ ಲಗೋರಿ ಆಟವನ್ನು ಪ್ರಾರಂಭಿಸುತ್ತಾರೆ. ವಾಸ್ತವವಾಗಿ ಈ ಲಗೋರಿ ಆಟದ ಪ್ರಾರಂಭವೇ ಕೊಂತಿಪೂಜೆಗೆ ನಾಂದಿ ಎನ್ನಬಹುದು. ಲಗೋರಿ ಆಟದ ಸಾಮಾನ್ಯ ಲಗ್ಗೆಗೂ, ಕೊಂತಿ ಲಗ್ಗೆಗೂ ವ್ಯತ್ಯಾಸವಿದೆ. ಈ ಕುಳಿಯಲ್ಲಿಯೇ ಕೊಂತಿಯನ್ನು ಪೂಜಿಸುತ್ತಾರೆ.

ಲಗ್ಗೆ ಆಟವು ಮೊದಲಿಗೆ ಎಲ್ಲ ಪ್ರದೇಶಗಳಲ್ಲಿಯೂ ಇದ್ದಿರಬೇಕು. ಕ್ರಮೇಣ ಆಚರಣೆಯಿಂದ ಕೈಬಿಟ್ಟು ಹೋಗಿರಬಹುದು. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಈ ಆಟ ಹುಡುಗರಲ್ಲಿ ಕಂಡು ಬರುತ್ತದೆಯಾದರೂ ನಿರ್ದಿಷ್ಟವಾಗಿ ಕುಂತಿಪೂಜೆ ಸಂದರ್ಭದಲ್ಲಿಯೇ ನಡೆಯುತ್ತದೆ ಎನ್ನಲಾಗುವುದಿಲ್ಲ. ಇದಕ್ಕೆ ನಾಗರಿಕತೆಯ ಪ್ರಭಾವ ತೀಕ್ಷ್ಣವಾದಂತೆಲ್ಲಾ ನಮ್ಮ ಸಾಮಾಜಿಕ ಬದುಕಿನಲ್ಲಿಯೂ ವ್ಯತ್ಯಾಸಗಳಾಗುವುದು ಸಹಜ. ಆದರೂ ವರ್ಷಕ್ಕೆ ಒಂದುಬಾರಿ ಮಾತ್ರ ನಡೆಯುವ ಕೊಂತಿಪೂಜೆಯಲ್ಲಿ ಬದಲಾವಣೆಯ ಅಂಶಗಳು ಕಡಿಮೆ ಎಂದೇ ಹೇಳಬಹುದು.

ಕೊಂತಿಯಾಗಿ ಪೂಜೆಗೊಳ್ಳುವ ಕಲ್ಲಿನ ಆಕಾರಗಳು : ಕೊಂತಿಪೂಜೆ ಸಂದರ್ಭದಲ್ಲಿ ‘ಕೊಂತಿ’ ಎಂದು ಭಾವಿಸಿ ಪೂಜಿಸಲಾಗುವ ಕೊಂತಿಕಲ್ಲುಗಳ ಆಕಾರಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವ್ಯತ್ಯಾಸವಾಗಿರುವುದು ಕಂಡುಬರುತ್ತದೆ. ಚಪ್ಪಟೆಯಾಗಿರುವ ತ್ರಿಕೋನಾಕಾರದ ಕಲ್ಲನ್ನು ಹೋಲುವ ನುಣುಪಾವಾಗಿರುವ ಕಪ್ಪು ಕಲ್ಲು ಅತ್ಯಂತ ಪ್ರಾಚೀನ ಕಾಲದವಾಗಿದ್ದು ಅವು ನೂತನ ಶಿಲಾಯುಗಕ್ಕೆ ಸೇರಿದವೆಂದು ಸಂಶೋಧಿಸಲಾಗಿದೆ.

ಮನೆಯಲ್ಲಿ ಕಾರ ಅರೆಯುವ ಗುಂಡುಕಲ್ಲನ್ನು ಕೊಂತಿ ಎಂಬುದಾಗಿ ಭಾವಿಸಿ ಬಳಸುವುದೇ ಹೆಚ್ಚು. ಇದು ಎಲ್ಲಾ ಕಡೆಗಳಲ್ಲಿಯೂ ರೂಢಿಯಲ್ಲಿದೆ. (ಕಾರ ಅರೆಯಲು ಬಳಸುವ ಗುಂಡುಕಲ್ಲನ್ನೇ ಕೊಂತಿಯಾಗಿ ಭಾವಿಸಲಾಗುತ್ತದೆ). ಇದೇ ಕಲ್ಲನ್ನು ಮದುವೆ ಸಂದರ್ಭದಲ್ಲಿ ಗಂಡುಹೆಣ್ಣುಗಳ ಪಕ್ಕದಲ್ಲಿ ಇಟ್ಟು ಮಗುವನ್ನಾಗಿಯೂ ಕಲ್ಪಿಸಿಕೊಳ್ಳುವುದು ಇವತ್ತಿಗೂ ರೂಢಿಯಲ್ಲಿದೆ.

ಕೆಲವು ಪ್ರದೇಶಗಳಲ್ಲಿ ಕಾರ ಅರೆಯುವ ಕಲ್ಲಿನಷ್ಟೆ ಉದ್ದದ ಕಲ್ಲಿನ ಅರ್ಧ ಭಾಗ ಮಾತ್ರ ಸಣ್ಣದಾಗಿದ್ದು ಉಳಿದರ್ಧ ಭಾಗ ಸ್ವಲ್ಪ ದಪ್ಪವಾಗಿರುತ್ತದೆ. ಅದನ್ನು ಕೊಂತಿಯಾಗಿ ಪೂಜಿಸುವ ಸಂದರ್ಭಕ್ಕಾಗಿಯೇ ಕೆತ್ತಿಸಿರುತ್ತಾರೆ. ಇದು ಇತ್ತೀಚಿನ ಬೆಳವಣಿಗೆ. ಮೇಲೆ ತಿಳಿಸಿದ ಮೂರು ಬಗೆಯ ಕಲ್ಲುಗಳು ಕೊಂತಿಯಾಗಿ ಬಳಸದೆ ಇರುವ ಸಂದರ್ಭದಲ್ಲಿ ವಿವಿದ ಉದ್ಧೇಶಗಳಿಗೆ ಬಳಕೆಯಾಗುತ್ತವೆ. ಇವುಗಳನ್ನು ಕೊಂತಿಯಾಗಿ ಬಳಸುವ ಸಂದರ್ಭದಲ್ಲಿ ಮಾತ್ರ ವಿಶೇಷ ಪರಿಕರಗಳನ್ನು ಬಳಸಿ ಮುಖ್ಯವನ್ನು ತಿದ್ದಲಾಗುತ್ತದೆ. ಮೇಲ್ನೋಟಕ್ಕೆ ಇವುಗಳಿಗೆ ಮುಖ ಎಂಬುದಿರುವುದಿಲ್ಲ. ಮಾಮೂಲಿಯಾದ ಸಾದಾ ಮೇಲ್ಮೈ ಇರುತ್ತದೆ. ಇವೇ ನಿಜವಾಗಿಯೂ ಹೆಚ್ಚು ಪ್ರಾಚೀನ ಕಾಲದಿಂದಲೂ ಬಳಕೆಯಾಗುತ್ತಿರುವ ಕಲ್ಲುಗಳಾಗಿವೆ. ಕೆಲವು ಕಡೆಗಳಲ್ಲಿ ಮುಖವನ್ನು ಸಹ ರೂಪಿಸದೆ ಕಲ್ಲಿಗೆ ಎಣ್ಣೆಯನ್ನು ಹಚ್ಚಿ ಹೂವನ್ನು ಮುಡಿಸುವುದು ಕಂಡುಬರುತ್ತದೆ. ಶ್ರೀರಂಗಪಟ್ಟಣ ತಾಲ್ಲೋಕಿನ ಹುಲಿಕೆರೆ, ಬೆಳಗೊಳ ಬಸ್ತಿಪುರ ಮುಂತಾದ ಪ್ರದೇಶಗಳಲ್ಲಿ ಈ ರೀತಿಯ ಕ್ರಮವಿರುವುದು ತಿಳಿಯುತ್ತದೆ.[1] (ಬಸವೇಗೌಡ : ಒಕ್ಕಲಿಗರು ೬೦ ವರ್ಷ : ಹುಲಿಕೆರೆ : ೧೯೯೨)

ಹುಣಸೂರು, ಹೆಗ್ಗಡದೇವನಕೋಟೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕೊಂತಿ ಪೂಜೆಗಾಗಿಯೇ ಕೊಂತಿಕಲ್ಲನ್ನು ಕಡೆಸಿರುತ್ತಾರೆ. ಇವುಗಳು ಕೊಂತಿಯಾಗಿ ಮಾತ್ರ ಪೂಜೆಗೊಳ್ಳುತ್ತವೆ. ಯಾವುದೇ ಸಂದರ್ಭದಲ್ಲಿ ಬೇರೆ ಪರಿಕರಗಳಾಗಿ ಬಳಕೆಯಾಗುವುದಿಲ್ಲ. ಕಾರ ಅರೆಯುವ ಗುಂಡುಕಲ್ಲಿನಲ್ಲಿ ಮೇಲ್ಭಾಗದ ಅರ್ಧ ಮಾತ್ರ ಸ್ವಲ್ಪ ದಪ್ಪನಾಗಿರುತ್ತದೆ. ಆ ಭಾಗದಲ್ಲಿ ಮುಖವನ್ನು ಕಡೆಸಿರುತ್ತಾರೆ. ಕಣ್ಣು, ಮೂಗು, ಬಾಯಿ, ಹುಬ್ಬು ಮುಂತಾದವುಗಳಿರುವಂತೆ ಉಳಿಯಿಂದ ಕಡೆದಿರುತ್ತಾರೆ. ಮೇಲಿನ ಅರ್ಧ ಭಾಗಕ್ಕೆ ಮಾತ್ರ ಮುಖವನ್ನು ಕೆತ್ತಿಸಿರುವುದು ರೂಢಿಯಲ್ಲಿದೆ ಈ ರೀತಿಯಾಗಿ ಕಲ್ಲಿನಲ್ಲಿಯೇ ಮುಖವನ್ನು ಕೆತ್ತಿಸಿರುವುದು ರೂಢಿಯಲ್ಲಿದೆ ಈ ರೀತಿಯಾಗಿ ಕಲ್ಲಿನಲ್ಲಿಯೇ ಮುಖವನ್ನು ಕಡೆಸುವಿಕೆಯು ತೀರ ಇತ್ತೀಚಿನ ಬೆಳವಣಿಗೆಯಾಗಿದೆ. ಈ ರೀತಿಯಾಗಿ ಕಲ್ಲಿನಲ್ಲಿಯೇ ಮುಖವನ್ನು ಕೆತ್ತಿಸಿರುವುದರಿಂದ ಯಾವ ಅಲಂಕಾರವನ್ನೂ ಮಾಡುವಂತಿಲ್ಲ. ಮಾಮೂಲಿ ಗುಂಡುಕಲ್ಲಿನಲ್ಲಿ ಪೂಜಿಸುವ ಪ್ರದೇಶಗಳಲ್ಲಿ ಪ್ರತಿದಿನವೂ ಕೊಂತಿಗೆ ಅವರಿಕೆಗಿಡದ ಹೂವಿನಿಂದ ಕಣ್ಣು, ಮೂಗು, ಬಾಯಿ, ತುಟಿ, ಹುಬ್ಬು ಮುಂತಾದ ಅಂಗಗಳನ್ನು ಹೂವಿನಿಂದಲೇ ರೂಪಿಸಿರುತ್ತಾರೆ.

ಹುಣುಸೂರು ತಾಲೂಕಿನ ಗೌರೀಪುರ, ಹುಂಡಿಮಾಳ, ಮಡವನಕೋಡಿ, ದರ್ಗ ಹಾಗೂ ಕೋಟೆತಲೂಕು, ಹಳೇಊರು, ಚಾಮರಾಜನಗರ ತಾಲೂಕು ಕಾಲನಹುಂಡಿ, ಶಿವಪುರ ಮುಂತಾದ ಕಡೆಗಳಲ್ಲಿ ಕಾರ ಅರೆಯುವ ಕಲ್ಲನ್ನು ಬಳಸದೆ ಬೆಳ್ಳಿಯ ಮೂರ್ತಿಯನ್ನು ಮಡಿಸಿರುವುದು ಕಂಡುಬರುತ್ತದೆ. ಪೂಜೆಗೊಳ್ಳುವಷ್ಟು ದಿನವೂ ಈ ಮೂರ್ತಿಯನ್ನು ತಂದು ಇಟ್ಟು ಪೂಜೆ ಮುಗಿದನಂತೆರ ಮನೆಗೆ ಒಯ್ಯುತ್ತಾರೆ. ಪ್ರತಿರಾತ್ರಿಯೂ ಇದೇ ಕ್ರಮ ಅನುಸರಿಸುತ್ತಾರೆ. ಕೊನೆದಿನ ಮಾತ್ರ ಮಣ್ಣಿನ ಕೊಂತಿಮೂರ್ತಿಯನ್ನು ತಿದ್ದಿ ಹೊಲದಲ್ಲಿ ವಿಸರ್ಜಿಸುತ್ತಾರೆ.

ಕೊಂತಿಪೂಜೆಯ ಪ್ರಾರಂಭದ ಕ್ರಮಗಳು : ಮೊದಲೇ ನಿಶ್ಚಯಿಸಿದಂತೆ ಕೊಂತಿಯನ್ನು ಒಂದು ಗೊತ್ತಾದ ದಿನ ಎಂದರೆ, ಸಾಮಾನ್ಯವಾಗಿ, ಕಾರ್ತಿಕ ಮಾಸದ ಸೋಮವಾರ ಕೂರಿಸಲಾಗುವುದು. ಕೊಂತಿಯನ್ನು ಕೂರಿಸುವ ಸ್ಥಳವನ್ನು ಚೊಕ್ಕಟವಾಗಿ ಗುಡಿಸಿ ಸಗಣಿಯಿಂದ ಸಾರಿಸುತ್ತಾರೆ. ಅಲಂಕಾರಕ್ಕಾಗಿ ರಂಗೋಲಿಯನ್ನು ಬಿಡುತ್ತಾರೆ.

ಐದು ಇಲ್ಲವೆ ಮೂರುದಿನ ಮುಂಚಿತವಾಗಿ ಲಗ್ಗೆ ಆಟಕ್ಕಾಗಿ ನಿರ್ದಿಷ್ಟ ಸ್ಥಳದಲ್ಲಿ ತೆಗೆದ ಕುಳಿಯನ್ನು ಪೂಜೆಮಾಡುತ್ತಾರೆ. ಆ ಕುಳಿಗೆ ಚಿನ್ನ ತೊಳೆದ ನೀರು, ಹಾಲು, ತುಪ್ಪ, ನಾಲ್ಕಣೆ ಪಾವಲಿ, ಎಕ್ಕದ ಎಲೆ-ಇಷ್ಟನ್ನೂ ಹಾಸುತ್ತಾರೆ. ಎಕ್ಕದ ಎಲೆಯನ್ನು ಕೊಂತಿಯನ್ನು ಎಷ್ಟು ದಿನಗಳವರೆಗೆ ಪೂಜಿಸುತ್ತಾರೊ ಅಷ್ಟು ದಿನಗಳ ಲೆಕ್ಕಕ್ಕಾಗಿ ಇಟ್ಟುಕೊಂಡಿರುವುದಾಗಿಯೂ ಹೇಳುತ್ತಾರೆ. ಆದರೆ ಅದರ ಅರ್ಧ ಅಷ್ಟೇ ಆಗಿರುವುದಿಲ್ಲ. ಎಕ್ಕದ ಎಲೆಯನ್ನು ಹಾಕದೆಯೂ ಕೊಂತಿಯನ್ನು ಪೂಜಿಸುವ ಕ್ರಮ ಉಂಟು. ಎಕ್ಕದ ಎಲೆಯನ್ನು ಕೊಂತಿಪೂಜಿಸುವ ಕುಳಿಯಲ್ಲಿ ಹಾಸುವುದನ್ನು ಕುರಿತು ಪ್ರಚಲಿತವಾಗಿರುವ ಕಥೆ ಈ ರೀತಿ ಇದೆ. ಒಂದು ಊರಿನಲ್ಲಿ ಒಬ್ಬ ಹಾಲು ಮತದ ವ್ಯಕ್ತಿ ತನ್ನ ಮತದ ಎಲ್ಲರೂ ಧರಿಸಿದ್ದಂತೆ ತಾನೂ ಲಿಂಗಧಾರಣೆ ಮಾಡಿಕೊಂಡನಂತೆ. ಲಿಂಗಧಾರಣೆಯಾದ ಮೇಲೆ ಆ ಲಿಂಗಕ್ಕೆ ಅಪಚಾರವಾಗದಂತೆ ಬದುಕಬೇಕೆಂಬುದಷ್ಟೇ ಅವನಿಗೆ ತಿಳಿದಿದ್ದು. ಸಾಧ್ಯವಿದ್ದಮಟ್ಟಿಗೆ ಅದನ್ನು ಪಾಲಿಸಿಕೊಂಡು ಬರುತ್ತಿದ್ದ. ಒಮ್ಮೆ ಅವನು ಕುರಿಕಾಯಲು ಕಾಡಿಗೆ ಹೊರಟ ಮಾರ್ಗ ಮಧ್ಯದಲ್ಲಿ ನೀರು ಕಡೆ ಹೋಗುವಂತಾಯಿತು. ಮೈಮೇಲೆ ಶಿವಲಿಂಗವನ್ನು ಧರಿಸಿ ಈ ಮೈಲಿಗೆಯ ಕಾರ್ಯವನ್ನು ಮಾಡಿದರೆ ಶಿವ ಮೆಚ್ಚಿಯಾನೆ ಎಂಬ ಸಂದೇಹ ಕಾಡಿತು. ಶಿವಲಿಂಗಕ್ಕೆ ಅಪಚಾರ ಮಾಡಬಾರದು ಎಂದು ಕೊಂಡು ಅದನ್ನು ತೆಗೆದು ಹತ್ತಿರವೇ ಇದ್ದ ಎಕ್ಕದ ಗಿಡಕ್ಕೆ ನೇತುಹಾಕಿ ಪೊದೆಗಳ ಮರೆಗೆ ಹೋಗಿ ಕುಳಿತ. ತನ್ನ ಕೆಲಸ ಮುಗಿದ ಮೇಲೆ ಬಂದು ನೋಡಿದ. ಗಿಡದ ಮೇಲೆ ನೇತುಹಾಕಿದ್ದ ಶಿವಲಿಂಗ ಕಾಣಲಿಲ್ಲ. ಗಾಳಿಗೇನಾದರೂ ಬಿದ್ದು ಹೋಗಿರಬೇಕು ಎಂದು ಗಿಡದ ಕೆಳಗೆ, ಅಕ್ಕ-ಪಕ್ಕದಲ್ಲಿ ಹುಡುಕಿದ, ಎಲ್ಲಿಯೂ, ಕಾಣಿಸಲಿಲ್ಲ. ಅಂದಿನಿಂದ ಅವನು ಗಿಡದ ಬಳಿಗೆ ಹೋಗಿ ತನ್ನ ಶಿವಲಿಂಗವನ್ನು ಹುಡುಕತೊಡಗಿದ. ಆದರೆ ಗಿಡ ತಾನು ಬಿಡುವ ಕಾಯನ್ನು ಅಂದಿನಿಂದ ಕರಡಿಗೆಯಾಕಾರದಲ್ಲೇ ಬಿಡತೊಡಗಿತು (ಕ್ಯಾತನಹಳ್ಳಿ ರಾಮಣ್ಣ: : ೧೯೮೫ :೧೪)

ಈ ಕಾರಣದಿಂದಾಗಿ ಹಳ್ಳಿಗಳಲ್ಲಿ ಎಕ್ಕದ ಗಿಡವನ್ನು ಪೂಜಿಸುವುದು ರೂಢಿಯಲ್ಲಿದೆ. ದವಸಧಾನ್ಯಗಳನ್ನು ವ್ಯಾಪಾರಕ್ಕೆ ಕೊಂಡೊಯ್ಯುವ ಸಂದರ್ಭದಲ್ಲಿ ಎಕ್ಕದ ಹೂವನ್ನು ಮುಡಿಸುವುದು ಪದ್ಧತಿ. ಇವು ಶುಭ ಎನ್ನುವ ಕಾರಣದಿಂದಾಗಿಯೇ ಈ ಕ್ರಿಯೆಯನ್ನು ಮಾಡುತ್ತಿರಲು ಸಾಧ್ಯ. ಆದ್ದರಿಂದ ಎಕ್ಕದ ಗಿಡದ ಎಲೆಗಳು ಶುಭಪ್ರದವಾದವು ಎನ್ನುವ ನಂಬಿಕೆಯಿಂದಾಗಿ ಕೊಂತಿಯನ್ನು ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ತಳಭಾಗಕ್ಕೆ ಎಕ್ಕದ ಎಲೆಯನ್ನು ಹಾಕುವ ಕ್ರಿಯೆಯು ಅರ್ಥಪೂರ್ಣ ಎನಿಸಿದೆ.

ಎಕ್ಕವು ಸೂರ್ಯನಿಗೆ ಇಷ್ಟವಾದುದು. ಕುಂತಿ ಮತ್ತು ಸೂರ್ಯನಿಗೆ ಸಂಬಂಧವಿರುವ ಕಾರಣ ಕುಂತಿಗೂ ಎಕ್ಕವು ಇಷ್ಟವೆಂದು ರೈತಾಪಿಗಳು ತಿಳಿದು ಈ ಕ್ರಮವನ್ನು ಅನುಸರಿಸುತ್ತಿರಬೇಕು. ಅಷ್ಟೇ ಅಲ್ಲದೆ ಮತ್ತೊಂದು ಅಭಿಪ್ರಾಯವೂ ಉಂಟು. ಎಕ್ಕದೆಲೆ ಯಮನಿಗೆ ಮತ್ತು ಶನಿಗೆ ಸಂಭಂಧಿಸಿದುದು. ಯಮ ಮತ್ತು ಶನಿಯನ್ನು ಮೆಟ್ಟಿನಿಂತ ಕೊಂಡಿಯನ್ನು ಪೂಜಿಸುವುದು ಒಂದರ್ಥದಲ್ಲಿ ದುಷ್ಟಶಕ್ತಿಯನ್ನು ಮೆಟ್ಟಿನಿಂತ ಸಾತ್ತ್ವಿಕಶಕ್ತಿಯನ್ನು ಗೌರವಿಸುವ ಕ್ರಮವಾಗಿಯೂ ಕಾಣುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಎಕ್ಕದ ಎಲೆಯನ್ನು ಹಾಸುವ ಕ್ರಮವು ಪ್ರಚಲಿತದಲ್ಲಿದೆ.

ಮೈಸೂರು ಮತ್ತು ಮಂಡ್ಯಜಿಲ್ಲೆಗಳಲ್ಲಿನ ಕೆಲವು ಗ್ರಾಮಗಳಲ್ಲಿ ಎಕ್ಕದ ಎಲೆಯನ್ನು ಹಾಸುವ ಕ್ರಮವಿರುವಂತೆಯೇ ಎಕ್ಕದ ಎಲೆಯನ್ನು ಹಾಸದೆಯೂ ಕೊಂತಿಯನ್ನು ಪೂಜಿಸುವ ಕ್ರಮವು ಕೆಲವಡೆ ಪ್ರಚಲಿತವುಂಟು. ಸಾಮಾನ್ಯವಾಗಿ ಕೊಂತಿಯನ್ನು ನೆಲದಿಂದ ಸ್ವಲ್ಪ ಎತ್ತರದಲ್ಲಿ ಇರಿಸುವುದು ಎಲ್ಲ ಕಡೆಗಳಲ್ಲಿಯೂ ಕಂಡುಬರುತ್ತದೆ. ಕೆಲವು ಕಡೆಗಳಲ್ಲಿ ನೆಲದಮಟ್ಟದಲ್ಲಿಯೇ ಕೊಂತಿಯನ್ನು ನಿಲ್ಲುಸುವುದು ಇದೆ. ಈ ರೀತಿಯಾಗಿ ಕೊಂತಿ ಕಲ್ಲನ್ನು ನೆಟ್ಟು ಪೂಜಿಸಲು ಮೂರು ಅಂಗುಲ ಎತ್ತರದ ಚಚ್ಚೌಕಾಕಾರದ ಇಲ್ಲವೆ ವೃತ್ತಾಕಾರದ ಮಣ್ಣಿನ ಅಟ್ಟಣಿಯನ್ನು ನಿರ್ಮಿಸುತ್ತಾರೆ. ಸುಮಾರು ಒಂದುವರೆ ಅಡಿ ಚದುರ ಅಳತೆಯಲ್ಲಿ ಈ ಅಟ್ಟಣಿಯನ್ನು ನಿರ್ಮಿಸುತ್ತಾರೆ. ಇದಾದ ಮೇಲೆ ಸುಮಾರು ನಾಲ್ಕೈದು ಅಂಗುಲ ಒಳಕ್ಕಾದಂತೆ ಇಂಥದೇ ಮತ್ತೊಂದು ಅಟ್ಟಣಿಯನ್ನು ಅದರ ಮೇಲೆ ಸೇರಿಸುತ್ತಾರೆ. ಈ ಎರಡನೆಯ ಅಟ್ಟಣಿಯ ಮೇಲೆ ಅದಕ್ಕಿಂತ ಚಿಕ್ಕದಾದ ಮೂರನೆಯ ಅಟ್ಟಣಿಯೊಂದು ರಚನೆಯಾಗುತ್ತದೆ. ಈ ಮೂರನೆಯ ಅಟ್ಟಣಿಯ ನಡುವೆ ಕೊಂತಿಯಾಗಿ ಪೂಜೆಗೊಳ್ಳುವ ಕಲ್ಲನ್ನು ಹೊಳೆ ನಿಲ್ಲಿಸುತ್ತಾರೆ. ಕೊಂತಿಕಲ್ಲಿನ ಎತ್ತರ ಹಾಗೂ ಪೂಜೆಗೊಳ್ಳುವ ಮೇಲುಭಾಗ ಇವು ಗುಳಿಯ ಆಳವನ್ನು ನಿರ್ಧರಿಸುತ್ತವೆ. ಕೆಲವು ಕಡೆಗಳಲ್ಲಿ ಮೂರು ಅಟ್ಟಣಿ ಇರುವ ಪ್ರದೇಶಗಳಲ್ಲಿ ಅದಕ್ಕೆ ರೈತಾಪಿಗಳು ಕೊಡುವ ಕಾರಣ ಕುಂತಿಗೆ ಮೂರು ಜನ ಮಕ್ಕಳು: ಧರ್ಮರಾಯ, ಭೀಮ, ಅರ್ಜುನ,  ನಕುಲ, ಸಹ ದೇವರು ಮಾದ್ರಿಯ ಮಕ್ಕಳು ಎಂದು ಭಾವಿಸುತ್ತಾರೆ. ಐದು ಅಟ್ಟಣಿಗಳನ್ನು ಮಾಡಿ ಕುಂತಿಯನ್ನು ಪೂಜಿಸುವ ಪ್ರದೇಶಗಳಲ್ಲಿ ಕುಂತಿಗೆ ಐದು ಮಕ್ಕಳು ಎಂಬುದಾಗಿ ನಂಬಿಕೆ ಇದೆ.

ಜಗಲಿಯ ನಡುಮಧ್ಯದ ಭಾಗದಲ್ಲಿ ಅಥವಾ ಬೀದಿಯ ಬದಿಯ ಬಯಲಿನಲ್ಲಿ ಇಲ್ಲವೆ, ಗೋಡೆಯ ಆಸರೆಯಿಲ್ಲದೆ ಸ್ವತಂತ್ರವಾಗಿ ನಿಲ್ಲುವ ‘ಕೊಂತಿಗುಡಿ’ ಕ್ರಮವನ್ನು ಕಾಣಬಹುದು. ಇದು ಕೊಂತಿಯನ್ನು ಪ್ರತಿಷ್ಟಾಪಿಸುವ ಕ್ರಮಗಳಲ್ಲೊಂದಾಗಿದೆ. ಗೋಡೆಯ ಒತ್ತಿಗೆ ಮೂರು ಅಟ್ಟಣಿಗಳನ್ನು ಸೇರಿಸಿ ಕೊಂತಿಗುಡಿಯನ್ನು ಕಟ್ಟುವುದು ಇನ್ನೊಂದು ವಿಧಾನ. ಜಗಲಿಯ ಮೇಲಾಗಲಿ, ಬೀದಿಯ ಬದಿಯಲ್ಲಾಗಲಿ ಗೋಡೆಯ ಆಸರೆ ಇರುತ್ತದೆ. ಇದನ್ನು ‘ಕೊಂತಿಹಂತ’ ಎನ್ನುತ್ತಾರೆ. ಗೋಡೆಯ ಒತ್ತಿಗೆ ಕೊಂತಿ ಹಂತವನ್ನು ನಿರ್ಮಿಸುವ ಪ್ರದೇಶಗಳಲ್ಲೆಲ್ಲ ಕೊಂತಿಕಲ್ಲನ್ನು ಹೂಳಿ ನಿಲ್ಲಿಸುವ ಪರಿಪಾಠವಿಲ್ಲ. ಇಲ್ಲೆಲ್ಲ ಮೂರು ಮೂಲೆಯ ಆಕಾರದ ನೈಸರ್ಗಿಕ ನುಣುಪನ್ನು ಪಡೆದ ಕಲ್ಲುಗಳನ್ನು ಬಳಸುತ್ತಾರೆ.

ಕತ್ಲೆ ಕೊಂತಿ’ :ಕೊಂತಿಯನ್ನು ಪ್ರತಿಷ್ಠಾಪಿಸಿದ ದಿನದಂದು ಯಾವುದೇ ಪೂಜೆ, ದೀಪ ಇತ್ಯಾದಿಗಳು ಜರಗುವುದಿಲ್ಲ. ಮೊದಲದಿನದಂದು ಕೇವಲ ಲಗ್ಗೆಯ ಆಟ ಪ್ರಚಲಿತವಿರುವ ಕಡೆಗಳಲ್ಲಿ ಆ ಗುಂಡಿಯಲ್ಲಿ ಕೊಂತಿಯನ್ನು ಪ್ರತಿಷ್ಠಾಪಿಸುತ್ತಾರೆ. ಲಗ್ಗೆಯ ಆಟ ಪ್ರಚಲಿತವಿಲ್ಲದ ಕಡೆಗಳಲ್ಲಿ ಮೊದಲೇ ನಿರ್ಧರಿಸಿದ ಸ್ಥಳದಲ್ಲಿ ಕೊಂತಿಯ ಕಲ್ಲನ್ನು ತಂದು ನೆಡುತ್ತಾರೆ. ಮೊದಲ ದಿನದಂದು ದೀಪ, ಹಚ್ಚಿರುವ ಪರಿಪಾಠವಿರುವುದಿಲ್ಲ. ಇದನ್ನು ‘ಕತ್ಲೆಕೊಂತಿ’ (ಕತ್ತಲೆಕುಂತಿ) ಎಂಬುದಾಗಿ ಕರೆಯುತ್ತಾರೆ. ಪ್ರತಿಷ್ಟಾಪಿಸಿದ ದಿನದಂದು ಕುಂತಿಯು ಕತ್ತಲೆಯಲ್ಲಿಯೇ ಉಳಿಯಬೇಕಾಗುತ್ತದೆ. ರೈತಾಪಿಗಳು ಆ ದಿನವನ್ನು ಕೊಂತಿಯು ಮೈನೆರೆದ ದಿನವೆಂಬುದಾಗಿಯೂ ಕಲ್ಪಿಸಿಕೊಂಡಿದ್ದಾರೆ. ಈ ಪದ್ಧತಿ ಪ್ರಚಲಿತವಿರುವ ಪ್ರದೇಶಗಳಲ್ಲಿ ಕೊಂತಿಪುಜೆಯ ಪ್ರಾರಂಭದ ದಿನವನ್ನು ‘ಕತ್ಲೆ ಕೊಂತಿದಿನ’ ಎಂದು ಸಂಬೋಧಿಸುವುದು ರೂಢಿಯಲ್ಲಿದೆ. ಕೊಂತಿಯನ್ನು ಪ್ರತಿಷ್ಠಾಪಿಸಿದ ದಿನವನ್ನು ಕತ್ಲೆ ಕೊಂತಿದಿನವೆಂದು ಕರೆದು ಕೊಂಡಿರುವುದು ನಮ್ಮ ಸಾಮಾಜಿಕ ತಿಳಿವಳಿಕೆಯ ಹಿನ್ನೆಲೆಯಲ್ಲಿ ಅರ್ಥಪೂರ್ಣವಾಗಿದೆ. ಈ ಪದ್ಧತಿಯು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಕಂಡುಬರುತ್ತದೆ. ಹುಲಿಕೆರೆ ಗ್ರಾಮದ ನಂಜಮ್ಮ ಅವರು ಕೊಂತಿ ಪೂಜೆಯ ಪ್ರಾರಂಭದ ದಿನವನ್ನು ಕುಂತಿಯು ಮೈನೆರೆದ ದಿನವೆಂಬುದಾಗಿ ಭಾವಿಸ ಬೇಕಾಗುತ್ತದೆ ಎಂದಿದ್ದಾರೆ. ಅಲ್ಲದೆ ಆ ದಿನದಂದು ಕತ್ತಲೆಯಲ್ಲಿ ಉಳಿಯುವ ಕೊಂತಿಯು ಮೈಲಿಗೆಯನ್ನು ಸಂಕೇತಿಸುತ್ತಾಳೆ. ಕೊಂತಿ ಮೈನೆರೆದಿರುವ ಕಾರಣ ಅವಳಿಗೆ ಯಾವುದೇ ವಿಧವಾದ ಅಲಂಕಾರ ಸಾಮಗ್ರಿಯನ್ನು ಪೂಜೆಯ ಸಾಮಗ್ರಿಯನ್ನು ಮೊದಲ ದಿನದಂದು ಬಳಸುವುದಿಲ್ಲ ಎಂದು ಹೇಳುತ್ತಾರೆ.

ಮಾರನೆ ದಿನದಂದು ಕೊಂತಿಗುಡಿಯನ್ನು ಸಗಣಿಯಿಂದ ಸಾರಿಸುವುದು, ಕೊಂತಿ ಕಲ್ಲಿಗೆ ಎಣ್ಣೆಯನ್ನು ಹಚ್ಚುವುದು, ಹೂವು, ಗಂಧ, ಪೂಜಾ ಸಾಮಗ್ರಿಗಳನ್ನು ಬಳಸಿ ಅಲಂಕರಿಸುವುದು-ಮುಖ್ಯಕ್ರಿಯೆಗಳು. ಕುಂತಿಯನ್ನು ಮೈನೆರೆದ ಮಗಳಂತೆ ಪರಿಗಣಿಸಿ ಪ್ರಸ್ತಕ್ಕೆ ಅವಳನ್ನು ಅಣಿಗೊಳಿಸುವ ಹೆಣ್ಣಾಗಿಯೂ ಕಲ್ಪಿಸಲಾಗಿದೆ. ಪ್ರಸ್ತಕ್ಕೆ ಸಿದ್ಧವಾಗುವ ಹೆಣ್ಣಿಗೆ ಆರೈಕೆ ಮಾಡಲು ಬಳಸುವ ವಸ್ತುಗಳನ್ನೇ ಕೊಂತಿಗೂ ಪೂಜೆಯ ಸಂದರ್ಭದಲ್ಲಿ  ಬಳಸುವುದು ಗಮನಾರ್ಹ. ಇದು ನಮ್ಮ ಜನಪದ ಬದುಕಿಗೂ-ಕುಂತಿಯ ಬದುಕಿಗೂ ನಡುವೆ ಇರುವ ನಿಕಟತೆಯನ್ನು ತಿಳಿಸುತ್ತದೆ.[2]

ಕೊಂತಿಯನ್ನು ಪೂಜಿಸುವದೆಂದರೆ ರೈತಾಪಿಗಳಿಗೆ ತಮ್ಮ ಮಕ್ಕಳ ‘ಒಸಗೆಶಾಸ್ತ್ರ’ ಎಂದೇ ಭಾವನೆ. ಈ ಕಾರಣದಿಂದಾಗಿಯೇ ಕೊನೆಯ ದಿನದ ಪೂಜೆಗೆ ‘ಕೊಂತಿ ಒಸಗೆ’ ಎಂಬುದಾಗಿ ಕರೆಯುತ್ತಾರೆ. ಹದಿನಾರು ದಿವಸಗಳ ಪೂಜೆ ಪ್ರಚಲಿತವಿರುವ ಪ್ರದೇಶಗಳಲ್ಲಿ ಈ ಅರ್ಥದಲ್ಲಿಯೇ ಇದು ಬಳಕೆಯಾಗುತ್ತಿದೆ. ಕೊಂತಿಪೂಜೆಯು ಈ ರೀತಿಯಾಗಿಯೇ ಪ್ರಾರಂಭವಾಗಬೇಕು. ಹೀಗೆಯೇ ಮುಕ್ತಾಯವಾಗಬೇಕು ಎಂಬುದಕ್ಕೆ ನಮ್ಮ ಸಮಾಜದ ಸಾಮಾಜಿಕ ಸಂಪ್ರದಾಯವೊಂದು ಹಿನ್ನೆಲೆಯಾಗಿರುವುದನ್ನು ನೋಡಬಹುದು.

ನಮ್ಮ ಬದುಕಿನ ಸಂದರ್ಭದ ಸಂಪ್ರದಾಯಗಳು ಅದರಲ್ಲಿ ಪ್ರತಿಫಲಿತವಾಘಿರುತ್ತದೆ. ಅವುಗಳಲ್ಲಿ ಒಂದು ಆಶಯವಾದರೂ ಇರುತ್ತದೆ. ಕೊಂತಿಪೂಜೆಯಲ್ಲಿ ನಮ್ಮ ಬದುಕಿನ ಸಂದರ್ಭದ ಹಲವಾರು ಅಂಶಗಳು ಹೆಣೆದುಕೊಂಡಿರುವುದು ತಿಳಿದು ಬರುತ್ತದೆ. ಇದನ್ನು ರೈತಾಪಿಗಳು ಶುಭಕಾರ್ಯವೆಂಬಂತೆ ಆಚರಿಸುವುದು ವಿಶೇಷ.

ಕೊಂತಿಯ ಅಲಂಕಾರ : ಕಾರ ಅರೆಯುವ ಗುಂಡುಕಲ್ಲನ್ನು ನೆಟ್ಟಮೇಲೆ ಅದು ಪೂಜೆಗೊಳ್ಳುವಷ್ಟು ಆ ಕಲ್ಲು ಕೊಂತಿಯಾಗಿಯೇ ಪೂಜೆಗೊಳ್ಳುತ್ತದೆ. ಮುಖವಿರುವಂತೆ ಕೆತ್ತಿರುವ ಕಲ್ಲುಗಳು ಇತ್ತೀಜಿನ ಬೆಳವಣಿಗೆಯಾಗಿವೆ. ಆದರೂ ಅವುಗಳು ಅಪರೂಪವಾಗಿವೆ. ಇವತ್ತಿಗೂ ಎಲ್ಲ ಕಡೆಗಳಲ್ಲಿಯೂ  ಸಾಮಾನ್ಯವಾಗಿ ಕಾರ ಅರೆ ಪ್ರತಿಷ್ಟಾಪಿಸಿದ ಮೊದಲನೆಯ ದಿನದಂದು ಮಾತ್ರ ಯಾವ ವಿಧವಾದ ಅಲಂಕಾರವನ್ನು ಕೊಂತಿಕಲ್ಲಿಗೆ ಮಾಡುವುದಿಲ್ಲ. ಮೊದಲ ದಿನದಂದು ಕತ್ತಲೆಯಲ್ಲಿದ್ದ ಕೊಂತಿಯು ಮರುದಿನ ಬೆಳಕನ್ನು ಕಾಣುತ್ತಾಳೆ. ಮಾರನೆಯ ದಿನ ಸಾಯಂಕಾಲದ ಹೊತ್ತಿಗೆ ಹೆಣ್ಣುಮಕ್ಕಳೆಲ್ಲ ಗುಂಪು ಸೇರುತ್ತಾರೆ. ಹಿರಿಕಿರಿಯರೆನ್ನದೆ ಎಲ್ಲರೂ ಈ ಪೂಜೆಗೆ ಸೇರಿಕೊಳ್ಳುತ್ತಾರೆ. ಮುತ್ತೈದೆ ಹೆಂಗಸರ ಸಂಖ್ಯೆ ದೊಡ್ಡದಾಗಿರುತ್ತದೆ. ಮುತ್ತೈದೆಯರು ಕೊಂತಿ ಪ್ರತಿಷ್ಟಾಪಿಸಿರುವ ಸ್ಥಳವನ್ನು ಸಗಣಿಯಿಂದ ಸಾರಿಸಿ ಸ್ವಚ್ಛಗೊಳಿಸುತ್ತಾರೆ. ಅಲಂಕಾರಕ್ಕಾಗಿ ರಂಗೋಲಿಯನ್ನು ಬಿಡುತ್ತಾರೆ.

ನಂತರ ಕೊಂತಿ ಕಲ್ಲಿಗೆ ತಲೆಯಿಂದ ಪೂರ್ತಿಯಾಗಿ ಎಣ್ಣೆಯನ್ನು ಹಚ್ಚುತ್ತಾರೆ. ಕಲ್ಲಿನ ಮೇಲೆ ಮೂಗು, ಬಾಯಿ, ಹುಬ್ಬು ಕಣ್ಣು ಮುಂತಾದವುಗಳನ್ನು ಹೂವಿನಿಂದ ರೂಪಿಸಿದ ಮೇಲೆ ಬಗೆಬಗೆಯ ಹೂವನ್ನು ತಂದು ಸುತ್ತಲೂ ಸುರಿಯುತ್ತಾರೆ.[3]ಕತ್ತಲಾಗುತ್ತಿದ್ದಂತೆ ಕೊಂತಿಯ ಗುಡಿಗೆ ದೀಪಗಳನ್ನು ತರುತ್ತಾರೆ. ಕೊಂತಿಯ ಹಂತದ ಸುತ್ತ ಹೂವನ್ನು ಸುಂದರವಾಗಿ ಜೋಡಿಸಲಾಗುತ್ತದೆ. ಇಂತಹ ಪೂಜೆಯ ಸಂದರ್ಭ ಹುಚ್ಚೆಳ್ಳು ಹೂವು, ಅಣ್ಣಿಹೂವು ಕಣಗಲಿ ಹೂ, ಸ್ಫಟಿಕ, ಎಳ್ಳು ಹೂ ಮುಂತಾದವುಗಳನ್ನು ಬಳಸಲಾಗುವುದು. ಸಾಮಾನ್ಯವಾಗಿ ಪೂಜೆಯ ಹೊತ್ತಿಗೆ ದೊರೆಯುವ ಹೂವುಗಳನ್ನು ಹೇರಳವಾಗಿ ಬಳಸುತ್ತಾರೆ.

ಕೊಂತಿಪೂಜೆ ಪ್ರಜಲಿತವಿರುವ ಎಲ್ಲ ಕಡೆಗಳಲ್ಲಿಯೂ ಗುಂಡುಕಲ್ಲನ್ನು ಕೊಂತಿಯಾಗಿ ಬಳಸುವುದು ಸರಿಯಷ್ಟೆ. ಗುಂಡ್ಲುಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೋಡಿಕಲ್ಲುಗಳನ್ನು ಪೂಜಿಸುವ ಪದ್ಧತಿ ರೂಢಿಯಲ್ಲಿದೆ. ಪೂಜೆಯ ಸಂದರ್ಭದಲ್ಲಿ ಎರಡು ಕಲ್ಲುಗಳನ್ನು ಅದರಲ್ಲಿ ಒಂದು ‘ದೊಡ್ಡ ಕಲ್ಲು’ ಮತ್ತೊಂದು ‘ಚಿಕ್ಕಕಲ್ಲ’ನ್ನು ಬಳಸುತ್ತಾರೆ. ದೊಢ್ಢಕಲ್ಲನ್ನು ‘ಕುಂತಿದೇವಿ’ ಎಂದೂ, ಚಿಕ್ಕಕಲ್ಲನ್ನು ‘ಮಾದ್ರಿ’ ಎಂದೂ ಕರೆಯುತ್ತಾರೆ. ಋಷಿಗಳು ಕರುಣಿಸಿದ ಐದು ವರಗಳಲ್ಲಿ ಮೂರನ್ನು ತಾನೂ ಇನ್ನೆರಡನ್ನು ತನ್ನ ಸವತಿ ಮಾದ್ರಿಯೂ ಬಳಸುವಂತೆ ಮಾಡಿ ಪಾಂಡುರಾಜನಿಗೆ ಐವರು ಪುತ್ರರಾಗಲು ಕುಂತಿ ಕಾರಣಳಾಗುತ್ತಾಳೆ.[4] ಇಲ್ಲಿ ಕುಂತಿ ಮತ್ತು ಮಾದ್ರಿಯರಿಬ್ಬರೂ ತಮ್ಮ ತಮ್ಮ ವ್ಯಕ್ತಿತ್ವದಿಂದಾಗಿ ದೊಡ್ಡವರಾದುದರಿಂದ ರೈತಾಪಿಗಳು ಅವರನ್ನು ಉನ್ನತ ಸ್ತರದಲ್ಲಿಟ್ಟು ಪೂಜಿಸುತ್ತಾರೆ ಎಂದು ಹೇಳಬಹುದು. ಈ ಹಿನ್ನೆಲೆಯಲ್ಲಿಯೇ ಜೋಡಿಕಲ್ಲನ್ನು ಪೂಜಿಸುವ ಪದ್ಧತಿ ರೂಢಿಗೆ ಬಂದಿರಬೇಕು.

ಕೊಂತಿಪೂಜೆಯ ಕಾಲ ಮತ್ತು ಪೂಜೆಗೊಳ್ಳುವ ಅವಧಿ : ಕೊಂತಿಪೂಜೆಯು ಮಂಡ್ಯಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಪ್ರಚಲಿತದಲ್ಲಿದೆ. ಅಂತೆಯೇ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕಿನ ಗ್ರಾಮಗಳಲ್ಲಿಯೂ ಪ್ರಚಲಿತ ಇರುವುದು ಕಂಡುಬರುತ್ತದೆ. ಮೇಲೆ ತಿಳಿಸಿದ ಎಲ್ಲ ಪ್ರದೇಶಗಳಲ್ಲಿ ಕೊಂತಿಪೂಜೆ ನಡೆಯುವುದಾದರೂ ಒಂದೇ ರೀತಿಯಲ್ಲಿ ನಡೆಯುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವು ಸಣ್ಣಪುಟ್ಟ ವ್ಯತ್ಯಾಸಗಳೊಡನೆ ನಡೆಯುತ್ತದೆ. ಆದರೆ ಆಚರಣೆ ನಡೆಯುವುದು ಎಲ್ಲ ಪ್ರದೇಶಗಳಲ್ಲಿಯೂ ಸಾಮಾನ್ಯವಾಗಿ ಕಾರ್ತಿಕಮಾಸದಲ್ಲಿ ಎನ್ನುವುದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇದು ಸುಗ್ಗಿಯ ಪ್ರಾರಂಭದ ದಿನ. ಆಗ ತಾನೆ ಫಸಲು ಸೊಂಪಾಗಿ ಬೆಳೆದು ತಲೆದೂಗುವ ಸಂಭ್ರಮದ ಕಾಲ. ಇಂತಹ ಸಂದರ್ಭದಲ್ಲಿ ರೈತಾಪಿಗಳಿಗೆ ಎಲ್ಲಿಲ್ಲದ ಸಡಗರ, ಸಂಬ್ರಮ, ಹೀಗೆ ಫಲ ಸಮೃದ್ಧಿ ತುಂಬಿರುವ ಕಾಲದಲ್ಲಿ ಸಂಭ್ರಮ ಉತ್ಸಾಹಗಳಿಂದ ತಮ್ಮ ಸಂತೃಪ್ತಿಯನ್ನು ಸೂಚಿಸುವ ಹಿನ್ನೆಲೆಯಲ್ಲಿ ಬರುವ ಕೊಂತಿಪೂಜೆ ಆಚರಣೆಯು ವಿಶಿಷ್ಟವೆನಿಸುತ್ತದೆ.

ದೀಪಾವಳಿಯ ಸಂದರ್ಭದಲ್ಲಿ ನಡೆಯುವ ಕೊಂತಿಪೂಜೆಯು ಕತ್ತಲೆಯನ್ನು ಕಳೆಯುವ ಹೊಸ ಬದುಕನ್ನು ದಯಪಾಲಿಸುವ ಹಿನ್ನಲೆಯಲ್ಲಿಯೂ ಮುಖ್ಯವೆನಿಸುತ್ತದೆ. ದೀಪಾವಳಿಯ ಹಬ್ಬದ ನಂತರ ಕಾರ್ತಿಕಮಾಸದ ಒಂದು ತಿಂಗಳು ಶುಭ ಸಂಕೇತದಿಂದ ಕೂಡಿರುವಂಥದ್ದು. ಈ ಸಂದರ್ಭದಲ್ಲಿ ಒಂದು ತಿಂಗಳು ಕಾಲ ಆಚರಣೆಗೊಳ್ಳುವ ಕೊಂತಿಪೂಜೆ ಆಚರಣೆಯು ಉತ್ತಮ ಸಾಮಾಜಿಕ ಸಂಪ್ರದಾಯದ ಹಿನ್ನೆಲೆಯನ್ನು ಪಡೆದಿರುವಂತಹದ್ದು. ದೀಪಾವಳಿ ಹುಟ್ಟಿದ ಮೇಲೆ ಒಂದು ತಿಂಗಳ ಕಾಲ ಕೊಂತಿಪೂಜೆ ಆಚರಣೆಯ ಅವಧಿ ಎಂಬುದು ಸಾಮಾನ್ಯ ಅಭಿಪ್ರಯ. ಏಕೆಂದರೆ, ದೀಪಾವಳಿ ಆದ ನಂತರದ ಒಂದು ತಿಂಗಳು ಈಶ್ವರನಿಗೆ ಪ್ರಿಯವಾದ ತಿಂಗಳು. ಈ ತಿಂಗಳು ಪೂರ್ತಿ ಶುಭಪ್ರದವೆಂಬ ನಂಬಿಕೆ ವ್ಯಪಕವಾಗಿದೆ. ಕೊಂತಿ ಮುಟ್ಟಿದ ವಸ್ತುಗಳೆಲ್ಲ ಶುಭಕರ, ಸಮೃದ್ಧಕರ; ಕೊಂತಿ ಇರುವಲ್ಲಿ ಶಾಂತಿ, ಸಮಾಧಾನ ಅವಳನ್ನು ಆರಾಧಿಸುವುದರಿಂದ ದೇಶಕ್ಕೆ ಸುಭಿಕ್ಷೆ. ಇದು ಶುಭಕಾಲದಲ್ಲಿಯೇ ಆಗಲಿ ಎಂಬ ನಿಷ್ಠೇ ದಿನಗಳು ನಡೆಯಬೇಕೆಂಬ ಕಡ್ಡಾಯವಿಲ್ಲ. ತಮ್ಮ ಅನುಕುಲಕ್ಕನುಸಾರವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ‘ತಿಂಗಳುಪೂರ್ತಿ’ ಅಥವಾ ತಿಂಗಳುಗೆ ಮೂರು ದಿನ ಕಡಿಮೆಯಾಗಿ ಆಚರಿಸುತ್ತಾರೆ.

ದೀಪಾವಳಿಯ ದಿನದಂದು ಅಥವಾ ದೀಪಾವಳಿ ಕಳೆದ ಮೇಲೆ ಈ ಆಚರಣೆಯನ್ನು ಆರಂಭ ಮಾಡುವುದು ರೂಢಿ ಎಂಬ ಅಂಶವನ್ನು ಬಿಟ್ಟರೆ ಪೂಜಿಸುವಷ್ಟು ದಿನವೂ ವಿಧಿಕ್ರಿಯೆಗಳು ನಡೆಯಬೇಕೆಂಬ ಕಡ್ಡಾಯ ವಿಧಿಯನ್ನು ಪಾಲಿಸುವುದಿಲ್ಲ. ಈ ಆಚರಣೆಯಲ್ಲಿ ಎಲ್ಲಿಯೂ ಏಕಸ್ವರೂಪದ ಉಪಾಸನಾಕ್ರಮ ಕಂಡುಬರುವುದಿಲ್ಲ. ಈ ರೀತಿಯ ವ್ಯತ್ಯಾಸಗಳು ಆ ಪ್ರದೇಶದ ಸಾಮಾಜಿಕ ಪರಿಸ್ಥಿತಿಯನ್ನು ಅವಲಂಬಿಸಿ ಅದಕ್ಕನುಗುಣವಾಗಿದೆ. ಸಾಮಾನ್ಯವಾಗಿ ಸೋಮವಾರವೇ ಪೂಜಿಸುವುದು ರೂಢಿಯಲ್ಲಿದ್ದರೂ ಕೆಲವೊಮ್ಮೆ ಭಾನುವಾರ ಮಂಗಳವಾರ, ಶುಕ್ರವಾರಗಳಲ್ಲಿಯೂ ಕೊಂತಿಪೂಜೆಯನ್ನು ಪ್ರಾರಂಭಿಸುವುದಾಗಿಯೂ ತಿಳಿದುಬರುತ್ತದೆ. ಕೊಂತಿಪೂಜೆಯನ್ನು ಆರಂಭ ಮಾಡುವುದರಲ್ಲಿ ಇರುವಂತೆಯೇ ವಿಸರ್ಜಿಸುವುದರಲ್ಲಿಯೂ ಇಂತಹ ದಿನವೇ ವಿಸರ್ಜಿಸಬೇಕೆಂಬ ನಿಯಮವಿರುವುದಿಲ್ಲ. ತಂತಮ್ಮ ಅನುಕೂಲತೆಗಳಿಗನುಗುಣವಾಗಿ ನಡೆದುಕೊಳ್ಳುತ್ತಾರೆ. ಇದು ಜನಪದ ಸಂಪ್ರದಾಗಳ ಜಾಯಮಾಕ್ಕನುಸಾರ ವಾಗಿಯೇ ಇದೆ. ಮಂಡ್ಯಜಿಲ್ಲೆಯ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲ್ಲೋಕುಗಳಲ್ಲಿ ಹದಿನಾರು ದಿವಸಗಳ ಪೂಜೆಯು ಆಚರಣೆಯಲ್ಲಿರುವುದು ತಿಳಿದುಬರುತ್ತದೆ. ಈ ಅವಧಿಯಲ್ಲಿ ಎರಡು ಸೋಮವಾರಗಳು ಬರುತ್ತವೆ. ಈ ಸಂದರ್ಭದಲ್ಲಿ ಮಾಮೂಲಿಯಾಗಿ ಸೋಮವಾರದಂದೇ ಕೊಂತಿಯನ್ನು ಪೂಜಿಸಿ ಮತ್ತೊಂದು ಸೋಮವಾರದಂದು ಹೊಲದಲ್ಲಿ ವಿಸರ್ಜಿಸುತ್ತಾರೆ.

ಒಟ್ಟಿನಲ್ಲಿ ಕೊಂತಿಪೂಜೆಯು ಆಚರಣೆಗೊಳ್ಳುವುದು ಕನಿಷ್ಟ ಮೂರು ದಿವಸಗಳಿಂದ ಗರಿಷ್ಠ ನಲವತ್ತೈದು ದಿನಗಳವರೆಗೆ, ಅನುಕ್ರಮವಾಗಿ ಪೂಜಿಸಿ ವಿಸರ್ಜಿಸುತ್ತಾರೆ. ಪೂಜಿಸುವ ದಿನಗಳ ಸಂಖ್ಯೆ ಹೀಗಿವೆ; ಮೂರು, ಆರು, ಏಳು, ಎಂಟು, ಒಂಭತ್ತು,ಹನ್ನೆರಡು, ಹದಿನೈದು, ಹದಿನಾರು, ಇಪ್ಪತ್ತು, ಮೂವತ್ತು ಮತ್ತು ನಲವತ್ತೈದು. ತಿಂಗಳಿಗೆ ಮೂರುದಿನ ಕಡಿಮೆ ಮತ್ತು ತಿಂಗಳ ಮೇಲೆ ಮೂರು ದಿನ ಎಂಬುದಾಗಿಯೂ ಲೆಕ್ಕ ಹಾಕುವುದುಂಟು. ಉಕ್ಕದೆಲೆ ಹಾಕುವ ಪ್ರದೇಶಗಳಲ್ಲಿ ಎಲೆಗಳ ಲೆಕ್ಕದಂತೆ ಐದು, ಒಂಭತ್ತು, ಹದಿನಾರು ದಿನಗಳು ಪೂಜೆ ನಡೆಯುವುದು ಇದೆ. ಇದಕ್ಕೆ ರೈತಾಪಿಗಳ ಸ್ಥಳೀಯ ಬದುಕು ಮತ್ತು ಅವರ ಅನುಕೂಲ, ಅನಾನುಕೂಲಗಳು ಕಾರಣವಾಗಿವೆ ಎನ್ನಬಹುದು. ಕೆಲವು ಪ್ರದೇಶಗಳಲ್ಲಿ ಈಗ ಮೇಲೆ ತಿಳಿಸಿದ ರೀತಿ-ನೀತಿಗಳು ಇರುವುದಾದರೂ ಎಲ್ಲದನ್ನೂ ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ. ದೀಪಾವಳಿಯ ದಿನ ಕೊಂತಿಯನ್ನು ಪ್ರತಿಷ್ಠಾಪಿಸಿ ಕಾರ್ತಿಕಮಾಸ ಕಳೆದ ಮೇಲೆ ಸುಬ್ರಹ್ಮಣ್ಯ ಷಷ್ಠಿಯಂದು ಕೊಂತಿಯನ್ನು ವಿಸರ್ಜಿಸುತ್ತಾರೆ. ಎಲ್ಲ ಕಡೆಗಳಲ್ಲಿಯೂ ಸಾಮಾನ್ಯವಾಗಿ ಕಡೆಯ ಕಾರ್ತಿಕ ಸೋಮವಾರವನ್ನು ಕೊಂತಿಯನ್ನು ವಿಸರ್ಜಿಸಲು ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವು ಕಡೆಗಳಲ್ಲಿ ಅಮವಾಸ್ಯೆಯ ದಿನದಂದು ಕೊಂತಿಯನ್ನು ವಿಸರ್ಜಿಸುವುದು ರೂಢಿಯಲ್ಲಿದೆ. ಒಟ್ಟಿನಲ್ಲಿ ಇದು ಜನರ ಅನುಕೂಲ ಅನಾನುಕೂಲವನ್ನವಲಂಭಿಸಿದೆ.

ಕೊಂತಿಯನ್ನು ಪೂಜಿಸುವ ಕ್ರಮ: ಕಾರ ಅರೆಯುವ ಗುಂಡುಕಲ್ಲನ್ನೇ ಕೊಂತಿ ಎಂದು ಭಾವಿಸಿ ನೆಟ್ಟಮೇಲೆ ಪ್ರತಿದಿನ ಸಂಜೆಯ ಸಮಯದಲ್ಲಿ ಪೂಜೆ ನಡೆಯುತ್ತದೆ. ಕೊಂತಿಗೆ ಪ್ರತಿದಿನವೂ ತಪ್ಪದೆ ಹೂವನ್ನು ತರುತ್ತಾರೆ. ದೀಪವನ್ನು ತಂದು ಕೊಂತಿಗುಡಿಯನ್ನು ಅಲಂಕರಿಸುತ್ತಾರೆ. ಹೆಂಗಸರು ಹಾಡು ಹೇಳುವುದು, ಚಿಕ್ಕ ಹುಡುಗರು ಕೋಲಾಟ ಆಡುವುದು, ಸಣ್ಣಪುಟ್ಟ ಹುಡುಗರು ವಿವಿಧ ವೇಷಗಳನ್ನು ಹಾಕಿ ಪ್ರದರ್ಶಿಸುವುದು- ಪ್ರತಿದಿನವೂ ಜರಗುತ್ತವೆ. ಸಮರಾತ್ರಿಯ ಹೊತ್ತಿಗೆ ಎಲ್ಲ ಕಾರ್ಯಕ್ರಮಗಳನ್ನು ನಿಲ್ಲಿಸಿ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗುತ್ತಾರೆ. ಮತ್ತೆ ಮರುದಿನ ಸಾಯಂಕಾಲ ಸೇರುತ್ತಾರೆ. ಹೀಗೆ ಕೊಂತಿಯನ್ನು ವಿಸರ್ಜಿಸುವ ದಿನದವರೆಗೂ ನಿರಂತರವಾಗಿ ಪೂಜೆ ನಡೆಯುತ್ತದೆ.

ಈ ರೀತಿಯಾಗಿ ಮುಖವಿಲ್ಲದ ಕಲ್ಲನ್ನು ಕೊಂತಿ ಎಂದು ಭಾವಿಸಿ ಪೂಜಿಸಿದ ಮೇಲೆ ವಿಸರ್ಜಿಸುವ ದಿನದಂದು ಮಣ್ಣಿನಿಂದ ಮಾಡಿದ ಹೆಣ್ಣುಗೊಂಬೆಯನ್ನು ಹೊಲದಲ್ಲಿ ವಿಸರ್ಜಿಸುತ್ತಾರೆ. ಈ ಮಣ್ಣಿನ ಮೂರ್ತಿಯನ್ನು ಊರಿನ ಕುಂಬಾರ ಇಲ್ಲವೆ ವಿಶ್ವಕರ್ಮ ರೂಪಿಸುತ್ತಾರೆ ಕೊಂತಿಯು ಪ್ರತಿಷ್ಠಾಪನೆಯಾದ ದಿನದಿಂದ ಪೂಜೆ ನಡೆಯುತ್ತಿದ್ದ ಸ್ಥಳವು ಕೊಂತಿಯ ತವರುಮನೆಯೆಂದೂ; ಕೊನೆಯ ದಿನದಂದು ಪೂಜೆಮಾಡಿ ಹೊಲದಲ್ಲಿ ಮಣ್ಣಿನಮೂರ್ತಿಯನ್ನು ವಿಸರ್ಜಿಸುವ ಸ್ಥಳವನ್ನು ಗಂಡನ ಮನೆಯೆಂದೂ ಕಲ್ಪಿಸಿಕೊಳ್ಳುವುದು ಸಾಮಾನ್ಯ ಈ ಸ್ಥಳದಲ್ಲಿಯೇ ಗಂಡ, ಮಕ್ಕಳು ಇರುವುದಾಗಿಯೂ ನಂಬಿರುತ್ತಾರೆ. ಈ ಕಾರಣದಿಂದಾಗಿ ಅವರೆ, ಹುಚ್ಚೆಳ್ಳು ತುಂಬಿದ ಹೊಲದಲ್ಲಿ ಕೊಂತಿಯನ್ನು ವಿಸರ್ಜಿಸುವುದು ರೂಢಿಯಾಗಿದೆ. ಕೊಂತಿಯ ಮಣ್ಣಿನ ಮೂರ್ತಿಗೆ ಸೂಕ್ತವಾದ ಬಣ್ಣಗಳಿಂದ ಇಲ್ಲವೆ ಅರಿಷಿಣ ಕುಂಕುಮಗಳಿಂದ, ಹೆಂಗಸರು ಬಳಸುವ ಆಭರಣ, ವೇಷಭೂಷಣಗಳಿಂದ ಅಲಂಕರಿಸುತ್ತಾರೆ. ಕೊಂತಿಯ ಮೂರ್ತಿಯನ್ನು ತಿದ್ದಿರುವ ಕುಂಬಾರರ ಮನೆಗೆ ಮುತ್ತೈದೆ ಹೆಂಗಸರು ಕಳಸ, ಕನ್ನಡಿ, ತಮಟೆ, ವಾದ್ಯಗಳ ಸಹಿತ ಹೋಗಿ ಕೊಂತಿಯನ್ನು ಶಾಸ್ತ್ರೋಕ್ತವಾಗಿ ತೆಗೆದುಕೊಂಡು ಬಂದು ಅದುವರೆಗೂ ಪೂಜಿಸುತ್ತಿದ್ದ ಸ್ಥಳದಲ್ಲಿ ಪ್ರತಿಷ್ಠಾಪಿಸುತ್ತಾರೆ. ಎತ್ತರವಾದ ಪೀಠವನ್ನು ಇಟ್ಟು ಕೊಂತಿಯನ್ನು ಮುತ್ತೈದೆಯಂತೆ ಅಲಂಕರಿಸುವುದು ವಿಶೇಷ ಮನೆಯ ಹೆಂಗಸರ ಜೊತೆಗೆ ಊರಿನ ವರ್ಷದ ಅವಧಿಯಲ್ಲಿ ಹರಸಿಕೊಂಡ ಹರಕೆಯನ್ನು ಮಾಡುತ್ತಾರೆ. ತಾವು ಕಳೆದ ವರ್ಷದ ಅವಧಿಯಲ್ಲಿ  ಹರಸಿಕೊಂಡು ಹರಕೆಯನ್ನು ಕೊಂತಿಗೆ ಒಪ್ಪಿಸುತ್ತಾರೆ. ನಂತರ ಅಲ್ಲಿಂದ ಊರಿನ ಮಾರಿಗುಡಿಗೆ ಕೊಂತಿಯನ್ನು ಒಯ್ಯುತ್ತಾರೆ. ಊರಿನ ಬೇರೆ ಬೇರೆ ಬೀದಿಗಳಲ್ಲಿ ಪೂಜಿಸಿದ್ದ ಕೊಂತಿಗಳನ್ನು ಅಂದು ಮಾರಿಗುಡಿಗೆ ತರುವುದು ಪದ್ಧತಿ. ಅಲ್ಲಿ ಎಡೆಮಾಡುವುದು, ಮೀಸಲುಬುತ್ತಿಯನ್ನು ಅರ್ಪಿಸುವುದು, ಮನೆಯಲ್ಲಿ ಮಾಡಿದ್ದ ಪ್ರತಿಯೊಂದು ಬಗೆಯ ಆಹಾರ ಪದಾರ್ಥವನ್ನು ಎಡೆಗೆ ಇಡುವುದು ನಡೆಯುತ್ತದೆ. ಅಲ್ಲಿಯೂ ಮತ್ತೊಮ್ಮೆ ಮುತ್ತೈದೆ ಹೆಂಗಸರು ಸೋಬಲು ಅಕ್ಕಿಶಾಸ್ತ್ರವನ್ನು ಕೊಂತಿಯ ತಲೆಯ ಮೇಲೆ ಹಾಕಿ ಶುಭವನ್ನು ಕೋರುವುದು ಮಾಡುತ್ತಾರೆ. ಅಲ್ಲಿ ಸೇರಿದ್ದ ಜನರಿಗೆಲ್ಲ ಪ್ರಸಾದ ವಿನಿಯೋಗ ನಡೆಯುತ್ತದೆ. ಈ ಶುಭ ಸಂದರ್ಭದಲ್ಲಿ ಮುತ್ತೈದೆ ಹೆಂಗಸರಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ವಿಧವೆಯರು ಸೂತಕವಾದವರು ಭಾಗವಹಿಸಬಾರದೆಂಬ ನಿಷೇಧವಿರುವುದಿಲ್ಲ.

 

[1]ಕಾರಅರೆಯುವಗುಂಡುಕಲ್ಲೇ‘ಕಲೊಂತಿ’. ಅದಕ್ಕೇಬೇರೆಯಾವುದೇರೀತಿಯಅಲಂಕಾರಇತ್ಯಾದಿಗಳಿರುವುದಿಲ್ಲಹರಳೆಣ್ಣೆಮಾತ್ರಹಚ್ಚುವುದುಂಟು. ಹುಚ್ಚೆಳ್ಳುಹೂಹಾಕಿಅಲಂಕರಿಸುವರು. ಕೊನೆಯದಿನಮಾತ್ರಮಣ್ಣಿನಲ್ಲಿಕೊಂತಿಯನ್ನುರೂಪಿಸುತ್ತಾರೆ.)

[2]ಸಾಮಾನ್ಯವಾಗಿರೈತಾಪಿಗಳುತಮ್ಮಮಕ್ಕಳಿಗೂಈಕಾರ್ತಿಕಮಾಸದಲ್ಲಿಯೇಪ್ರಸ್ತದಕಾರ್ಯವನ್ನುಮಾಡುತ್ತಾರೆ. ಈತಿಂಗಳುಹೆಚ್ಚುಸಂವೋಹಕಶಕ್ತಿಯನ್ನುಹೊಂದಿರುವಕಾರಣಈರೀತಿಯಶಾಸ್ತ್ರಗಳನ್ನುನಡೆಸಲುರೈತಾಪಿಗಳುಮುಂದಾಗುತ್ತಾರೆಎಂದುಕಾಣುತ್ತದೆ.)

[3]ಹೊಲದಬಯಲಿನಲ್ಲಿರುವಆವರಿಕೆಹೂವುತಂದುಅದರಿಂದಕಣ್ಣು, ಮೂಗು, ಬಾಯಿ, ಹುಬ್ಬುಇತ್ಯಾದಿಗಳನ್ನುಗುಂಡುಕಲ್ಲಿನಮೇಲೆರೂಪಿಸುತ್ತಾರೆ.

[4]ತನ್ನಿಂದಲೇಮಾದ್ರಿಯುತಾಯಿಆದಳುಎಂಬಅಸೂಯೆಯಭಣಾವಕುಂತಿಯನ್ನುಕಾಡದೆಹೋದುದುಕುಂತಿಯದೊಡ್ಡಗುಣ. ಮಾದ್ರಿಯದುಅದಕ್ಕೆಸರಿಸಾಟಿಯಾದವ್ಯಕ್ತಿತ್ವವೇಆಗಿದೆ.