ಮಾರಿಗುಡಿಯ ಬಳಿ ಪೂಜೆ ಸಲ್ಲಿಸಿದ ನಂತರ ಕೊಂತಿಯನ್ನು ವಿಸರ್ಜಿಸಲು ಮುಂದಾಗುತ್ತಾರೆ. ವಿಶೇಷ ಸಂಭ್ರಮ ಉತ್ಸಾಹಗಳಿಂದ ಕೊಂತಿಯನ್ನು ಉತ್ಸವದಲ್ಲಿ ಮೆರವಣಿಗೆ ಮಾಡುತ್ತಾ ಊರಿನ ಪ್ರಮುಖ ಬೀದಿಗಳಲ್ಲಿ ಹಾದುಹೋಗಿ ಬೆಳೆ ತುಂಬಿದ ಹೊಲಗಳತ್ತ ಸಾಗುತ್ತಾರೆ. ಈ ಸಂದರ್ಭದಲ್ಲಿ ತಮಟೆ, ಡೋಲು, ಕೊಂಬು, ಕಹಳೆ, ಓಲಗ ಮುಂತಾದ ವಾದ್ಯ ವಿಶೇಷಗಳನ್ನು ಬಳಸುತ್ತಾರೆ. ಪಟಾಕಿಯ ಸದ್ದು ಬಾಣಬಿರುಸುಗಳು ತುಂಬಿರುತ್ತವೆ.

ನೆಲದಲ್ಲಿ ಕೊನೆಯ ದಿನದವರೆಗೂ ಕೊಂತಿಯಾಗಿ ಪೂಜೆಗೊಳ್ಳುತ್ತಿದ್ದ ಸಾಮಾನ್ಯ ಕೊಂತಿ ಅಂದು ಹಿಂದೆ ಸರಿದು ಕೊನೆಯ ದಿನದಂದು ಹೊಸದಾಗಿ ಮಾಡಿದ ಮಣ್ಣಿನ ಮೂರ್ತಿಯು ಕಂಗೊಳಿಸುತ್ತದೆ. ಆ ಮಣ್ಣಿನ ಮೂರ್ತಿಯನ್ನು ಎತ್ತರವಾದ ಮಣೆಯೊಂದರ ಮೇಲೆ ಇಲ್ಲವೆ ಕಾಲುಮಣೆಯ ಮೇಲೆ  ಕೂರಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ತೇವಟಿಗೆಯ ಮಣೆಯನ್ನು ಬಳಸಿದರೆ ಮತ್ತೆ ಕೆಲವು ಪ್ರದೇಶಗಳಲ್ಲಿ ಕೊಳಗವನ್ನು ಬಳಸುತ್ತಾರೆ. ಒಟ್ಟಿನಲ್ಲಿ ಎತ್ತರವಾದ ಸಾಧನವನ್ನು ಬಳಸಲಾಗುವುದು.

ಆ ಸಂದರ್ಭದಲ್ಲಿ ಅಟ್ಟಣಿಯಲ್ಲಿ ಭದ್ರವಾಗಿ ಹುದುಗಿಸಿಟ್ಟಿದ್ದ ಕೊಂತಿ ಕಲ್ಲನ್ನು ಆಗ ಕದಲಿಸುತ್ತಾರೆ. ಕೊಂತಿಯನ್ನು ಪೂಜಿಸಿ ಎಡೆಮಾಡಿ ಪೂಜೆ ಸಲ್ಲಿಸಿದ ನಂತರ ಆ ದಿನ ಮುಡಿಸಿದ್ದ ಹೂವು ಪತ್ರೆಯನ್ನೆಲ್ಲ ಕುಕ್ಕೆಗೆ ತುಂಬಿ ಅದರ ಜೊತೆಗೆ ಕೊಂತಿಯಾಗಿ ಪೂಜೆಗೊಳ್ಳುತ್ತಿದ್ದ ಕಲ್ಲನ್ನು ಹಾಕಿ ಒಳಗಿಟ್ಟುಕೊಳ್ಳುತ್ತಾರೆ. ಈ ಕಾರ್ಯವನ್ನು ಮಾಡುವವರು ಮುತ್ತೈದೆ ಹೆಂಗಸರು ಕೊಂತಿಕಲ್ಲನ್ನು ಕಿತ್ತ ಸ್ಥಳಕ್ಕೆ ಹಾಲುತುಪ್ಪವನ್ನು ಬಿಡಬೇಕು. ಆ ಹಾಲು ತುಪ್ಪದ ಮಣ್ಣನ್ನು ಬಳಿದುಕೊಂಡು ಒಂದು ಬಟ್ಟಲಿಗೆ ಹಾಕಿ ಕೊಳ್ಳಬೇಕು. ಆ ಮಣ್ಣನ್ನು ಪ್ರಸಾದವೆಂಬಂತೆ ಎಲ್ಲರಿಗೂ ವಿತರಣೆ ಮಾಡಲಾಗುವುದು. ಇದನ್ನು ದನಕರಗಳ ಮೇಲೂ ಎರಚುತ್ತಾರೆ. ಈ ರೀತಿ ಮಾಡುವುದರಿಂದ ದನಕರುಗಳಿಗೆ ರೋಗರುಜಿನುಗಳು ಅಂಟುವುದಿಲ್ಲವೆಂಬ ನಂಬಿಕೆಯಿದೆ. ಈ ಎಲ್ಲ ನಂಬಿಕೆಯ ಹಿನ್ನೆಲೆಯಲ್ಲಿ ಶ್ರೇಯಸ್ಸಾಗಲಿ ಎನ್ನುವ ಆಶಯವಿರುವುದು ಗೋಚರಿಸುತ್ತದೆ.

ಮುತ್ತೈದೆಯೊಬ್ಬಳು ಕಳಸ ಕನ್ನಡಿಯನ್ನು ಹಿಡಿದು ಮೆರವಣಿಗೆಯಲ್ಲಿ ಮುಂದೆ ಸಾಗುತ್ತಾಳೆ. ಕೊಂತಿಯನ್ನು ಹೊತ್ತಿರುವ ವ್ಯಕ್ತಿಯು ನಿಧಾನವಾಗಿ ಹೆಜ್ಜೆ ಹಾಕುತ್ತಾನೆ. ಅವರ ಹಿಂದೆ ಕೊಂತಿಯನ್ನು ಪೂಜಿಸಿದ ಮನೆಯವರು, ಮುತ್ತೈದೆ ಹೆಂಗಸರು, ಗಂಡಸರು, ಹುಡುಗರು, ಮಕ್ಕಳು ಎನ್ನದೆ ಎಲ್ಲರೂ ಗುಂಪಿನಲ್ಲಿ ಕೊಂತಿಯನ್ನು ವಿಸರ್ಜಿಸುವ ಹೊಲದ ಕಡೆಗೆ ಹೋಗುತ್ತಾರೆ. ಈ ಸಮಯದಲ್ಲಿ ತಮಟೆ, ಕೊಂಬು, ಕಹಳೆಗಳು, ಮಂಗಳವಾದ್ಯಗಳ ಸದ್ದು ಮೊಳಗುತ್ತವೆ. ಜನರು ಸಂತೋಷದಿಂದ ಕೇಕೆಹಾಕಿ ಕುಣಿಯುತ್ತಾರೆ.

ಕೊಂತಿಯನ್ನು ವಿಸರ್ಜಿಸುವುದು ಸೂರ್ಯ ಉದಯವಾಗುವ ದಿಕ್ಕಿನೆಡೆಗೆ ಇರುವ ಹೊಲದಲ್ಲಿ ಎಂಬುದು ಸಾಮಾನ್ಯ ತಿಳವಳಿಕೆ. ಕೊಂತಿಪೂಜೆ ನಡೆಯುವ ಪ್ರದೇಶಗಳಲ್ಲೆಲ್ಲ ಈ ನಂಬಿಕೆ ಪ್ರಚಲಿತವಾಗಿದ್ದರೂ  ಬೇರೆ ಬೇರೆ ಕಾರಣಗಳಿಂದಾಗಿ ಈ ನಿಯಮವನ್ನು ನಿರ್ದಿಷ್ಟವಾಗಿ ಪಾಲಿಸುವುದಿಲ್ಲ. ಪೂರ್ವದಿಕ್ಕಿನಲ್ಲಿ ಹೊಲಗಳಲ್ಲಿವಾಗ, ಹೊಲಗಳಿದ್ದೂ ಅವರೆ, ಹೆಚ್ಚುಳ್ಳು ಹೊಲಗಳಿಲ್ಲದಾಗ ಬೇರೆ ದಿಕ್ಕಿನಲ್ಲಿ ಕೊಂತಿಯನ್ನು ವಿಸರ್ಜಿಸುತ್ತಾರೆ. ಸಾಮಾನ್ಯವಾಗಿ ಕೊಂತಿಯನ್ನು ಅವರೆ ಹುಚ್ಚೆಳ್ಳು ಬೆಳಸು ತುಂಬಿರುವ ಹೊಲದಲ್ಲಿ ವಿಸರ್ಜಿಸುವುದು ರೂಢಿ. ಈ ಬೆಳೆಗಳು ಇಲ್ಲದ ಪ್ರದೇಶಗಳಲ್ಲಿ ಹುರುಳಿ, ಅರ್ಕ, ನವಣಿ, ರಾಗಿ, ಮುಂತಾದ ಬೆಳೆಗಳಿರುವ ಹೊಲಗಳಲ್ಲಿಯೂ ವಿಸರ್ಜಿಸುತ್ತಾರೆ. ಕೊಂತಿಗೆ ಹುಚ್ಚೆಳ್ಳು ಹೂ ಅಂದರೆ ಪ್ರೀತಿ ಎಂದು ರೈತಾಪಿಗಳ ನಂಬಿಕೆ. ಇದಕ್ಕೆ ರೈತಾಪಿಗಳು ಒಂದು ಕಾರಣವನ್ನು ಕೊಡುತ್ತಾರೆ. ಅವರೆ ಹೂವು ಕೊಂತಿಗೆ ಹೆಚ್ಚು ಪ್ರಿಯವಾದುದು. ಅವರೆ ಬೆಳೆ ಇರುವ ಸ್ಥಳ ಪಾಂಡವರಿರುವ ಸ್ಥಳವೆಂದೇ ಭಾವನೆ. ‘ಅವರೆ’ ಧಾನ್ಯವನ್ನು ಪಾಂಡವರು ದಯಪಾಲಿಸಿದರೆಂದೂ ನಂಬಿಕೆ. ‘ಅವರೆ’ ಎಂಬ ಪದಕ್ಕೆ ‘ಇದ್ದಾರೆ’ ಎನ್ನುವ ವಿಶಾಲ ಅರ್ಥವಿರುವುದನ್ನು ಗಮನಿಸಿದರೆ ಅವರೆ ಬೆಳೆಯು ಇರುವ ಸ್ಥಳವೆಂದರೆ ಪಾಂಡವರಿರುವ ಸ್ಥಳವೆಂದೇ ಭಾವನೆ. ಪಾಂಡವರಿರುವ ಸ್ಥಳದಲ್ಲಿಯೆ ಅವರ ತಾಯಿಯಾದ ಕೊಂತಿ ಇರುವುದಾಗಿಯೂ ನಂಬಿಕೊಂಡಿದ್ದಾರೆ. ಈ ರೀತಿಯಾಗಿ ಹಲವು ಕಾರಣಗಳಿಂದಾಗಿ ಅವರೆ ಬೆಳೆ ಇರುವ ಹೊಲದಲ್ಲಿಯೇ ಕೊಂತಿಯನ್ನು ವಿಸರ್ಜಿಸಲು ಹೆಚ್ಚು ಪ್ರಾಶಸ್ತ್ಯವನ್ನು ಕೊಡಲಾಗುವುದು. ಈ ಸಾಮಾಜಿಕ ತಿಳುವಳಿಕೆಯ ಹಿನ್ನೆಲೆಯಲ್ಲಿಯೇ ಜನಪದರು ಈ ಹಾಡನ್ನು ಕಟ್ಟಿ ಹಾಡಿರಬಹುದು.

ಸತ್ಯವುಳ್ಳ ಧರುಮಾರು ಸತ್ತೇರಿ ಎನ್ನದೀರಿ
ಸತ್ತೇರಿ ಭೂಮಿ ಬೆಳೆಯದು | ಪಾಂಡವರು
ಬಿತ್ತಿ ಹೋಗ್ಯಾವರೆ ಅವರೀಯ|

ಇದು ಕೊಂತಿಯನ್ನು ಅವರೆ ಹೊಲದಲ್ಲಿ ವಿಸರ್ಜಿಸುವುದಕ್ಕೆ ಮುಖ್ಯ ಕಾರಣವಾಗಿದೆ. ಹೊಲಗಳಲ್ಲಿ ಬೆಳೆಯು ಹುಲುಸಾಗಿ ಬೆಳೆದು ನಿಂತ ಸ್ಥಳದಲ್ಲಿ ಕೊಂತಿಯನ್ನು ಕೂರಿಸುವುದು ಪದ್ಧತಿ. ಕೆಲವು ಕಡೆಗಳಲ್ಲಿ ಪಾಂಡುವಿನ ಮಣ್ಣಿನ ಮೂರ್ತಿಯ ಪಕ್ಕದಲ್ಲಿಯೇ ಕೊಂತಿಯ ಮಣ್ಣಿನ ಮೂರ್ತಿಯನ್ನು ಒತ್ತೊತ್ತಿಗೆ ಇಟ್ಟು ಪೂಜೆ ಮಾಡಿ ಬರುವುದು ಕ್ರಮ. ಕೊಂತಿಯನ್ನು ಹೊಲದಲ್ಲಿ ಇಟ್ಟು ಮತ್ತೊಮ್ಮೆ ಪೂಜೆ ಮಾಡುತ್ತಾರೆ.[1]

ಕೊಂತಿಯನ್ನು ಮಾರಿಗುಡಿಯಿಂದ ಹೊತ್ತುಕೊಂಡು ಹೋಗುವ ಸಂದರ್ಭದಲ್ಲಿ ಮೊಸರನ್ನದ ಬುತ್ತಿಯನ್ನು ಮೀಸಲಾಗಿ ಅರ್ಪಿಸುವುದು ವಿಧಿ. ಹುಣಸೂರು ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಡಲ, ಪಾಂಡವಪುರ, ಕೆ.ಆರ್. ನಗರ, ಹೆಗ್ಗಡೆದೇವನ ಕೋಟೆ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಮೊಸರನ್ನದ ಬುತ್ತಿಯನ್ನು ಕೊಂತಿಯ ಜೊತೆಯಲ್ಲಿಯೇ ಕಟ್ಟಿ ಕಳುಹಿಸುತ್ತಾರೆ. ಕೆಲವು ಪ್ರದೇಶಗಳಲ್ಲಿ ಮುತ್ತೈದೆಯೊಬ್ಬಳು ತರುತ್ತಾಳೆ. ಸಾಮಾನ್ಯವಾಗಿ ಮೀಸಲು ಬುತ್ತಿಯನ್ನು ಹೊಲದಲ್ಲಿ ಕೊಂತಿಗೆ ಎಡೆ ಮಾಡಿದ ನಂತರ ನೈವೇದ್ಯ ಅರ್ಪಿಸುತ್ತಾಳೆ. ನಂತರ ಕೊಂತಿಯನ್ನು ಆ ಸ್ಥಳದಲ್ಲಿಯೇ ವಿಸರ್ಜಿಸುತ್ತಾರೆ. ಕೊಂತಿಯ ಹೆಗಲಿಗೆ ಮೀಸಲು ಬುತ್ತಿಯನ್ನು ಅರ್ಪಿಸುವುದು ರೈತಾಪಿಗಳ ಸಾಮಾಜಿಕ ನಡವಳಿಕೆಯೇ ಆಗಿದೆ. ಮೇಲೆ ಪ್ರಸ್ತಾಪಿಸಿದ ಪ್ರದೇಶಗಳಲ್ಲಿ ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಮೊದಲಬಾರಿಗೆ ಹೋಗುವಾಗ ಮೊಸರನ್ನದ ಬುತ್ತಿಯನ್ನು ಕಟ್ಟಿ ಕಳುಹಿಸುತ್ತಾರೆ. ಗಂಡನ ಮನೆಗೆ ಮೊದಲ ಬಾರಿ ಹೋದ ಸಂದರ್ಭದಲ್ಲಿ ಅವಳು ಗಂಡನ ಮನೆಯಲ್ಲಿ ಊಟ ಮಾಡುವುದಿಲ್ಲ. ಒಂದು ವೇಳೆ ಊಟ ಮಾಡಿದರೆ ತಂದೆಯ ಮನೆಯವರಿಗೆ ಬಡತನ ಬರುತ್ತದೆ ಎಂಬ ನಂಬಿಕೆ ಪ್ರಚಲಿತವಾಗಿದೆ. ಇದು ಅವರ ಸಾಮಾಜಿಕ ತಿಳುವಳಿಕೆಯಾಗಿದೆ. ಈ ನಂಬಿಕೆಯ ಹಿನ್ನೆಲೆಯಲ್ಲಿ ಮೊಸರನ್ನದ ಮೀಸಲು ಬುತ್ತಿಯನ್ನು ಕೊಂತಿಯ ಜೊತೆಯಲ್ಲಿಯೇ ತಂದು ಕೊಂತಿಗೆ ಅರ್ಪಿಸುತ್ತಾರೆ. ಎಲ್ಲರಿಗೂ ಪ್ರಸಾದ ವಿನಿಯೋಗ ನಡೆದ ಮೇಲೆ ಕೊಂತಿಯನ್ನು ಹೊಲದಲ್ಲಿ ವಿಸರ್ಜಿಸಿ ಮನೆಗೆ ತರಬಹುದಾದ ಒಡವೆ, ವಸ್ತುಗಳನ್ನು; ಬಟ್ಟೆಬರೆಗಳನ್ನು ತೆಗೆದುಕೊಂಡು ವಾದ್ಯಗಳ ಸಮೇತ ವಾಪಸ್ಸು ಮನೆಗೆ ಬರುತ್ತಾರೆ. ಕೊಂತಿಯನ್ನು ಹೊಲದಲ್ಲಿ ವಿಸರ್ಜಿಸಿದ ನಂತರ ಆಕೆಯನ್ನು ಮನಸ್ಸಿನಲ್ಲಿ ಮತ್ತೆ ಮತ್ತೆ ನೆನೆಯಬಾರದು ಎಂಬ ನಂಬಿಕೆ ಕೆಲವು ಪ್ರದೇಶಗಳಲ್ಲಿ ಪ್ರಚಲಿತವಾಗಿದೆ.

ಜೋಡಿಕಲ್ಲುಗಳನ್ನು ವಿಸರ್ಜಿಸುವ ಕ್ರಮ : ಕೊಂತಿ ಎಂಬುದಾಗಿ ಪರಿಭಾವಿಸಿ ಜೋಡಿಕಲ್ಲುಗಳನ್ನು ಪೂಜಿಸುವ ವಿಧಾನದಲ್ಲಿ ವೈವಿಧ್ಯತೆ ಇರುವಂತೆಯೇ ಕೊಂತಿಯನ್ನು ವಿಸರ್ಜಿಸುವ ಕ್ರಮದಲ್ಲಿಯೂ ವೈವಿಧ್ಯತೆ ಕಂಡುಬರುತ್ತದೆ. ಕೊಂತಿಪೂಜೆಯು ಪ್ರಾರಂಭವಾದ ದಿನದಿಂದ ಕೊಂತಿಯನ್ನು ವಿಸರ್ಜಿಸುವ ದಿನದವರೆಗೂ ‘ಕುಂತಿ’ ಮತ್ತು ‘ಮಾದ್ರಿ’ ಎಂಬ ಕಲ್ಪನೆಯ ಹಿನ್ನೆಲೆಯಲ್ಲಿ ತ್ರಿಕೋನಾಕಾರದ ಜೋಡಿಕಲ್ಲುಗಳನ್ನು ಪೂಜಿಸುವುದು ಪದ್ಧತಿ. ಕೊನೆಯ ದಿನದಂದು ಕೊಂತಿಯ ಮಣ್ಣಿನ ಮೂರ್ತಿಯನ್ನು ನಿರ್ಮಿಸಿ ಅದಕ್ಕೆ ಶೃಂಗಾರ ಮಾಡಿ ಕೊಳಗದ ಮೇಲೆ ಕೊಂತಿಯನ್ನು ಕೂರಿಸಿ ‘ಸೋಗಲು ಹುಯ್ಯುವ ಶಾಸ್ತ್ರ’ವನ್ನು ಮಾಡುತ್ತಾರೆ. ಅವರು ತರುವ ಬೊಗಸೆಯಷ್ಟು ಧಾನ್ಯಗಳನ್ನು[2]ತಂದು ಕೊಳಗವನ್ನು ತುಂಬುತ್ತಾರೆ. ಕೊನೆಯ ದಿನದಂದು ನಿರ್ಮಿಸಿಟ್ಟ ಮಣ್ಣಿನ ಮೂರ್ತಿಯನ್ನು ಧಾನ್ಯ ತುಂಬಿದ ಕೊಳಗದ ಮೇಲೆ ಕೂರಿಸುತ್ತಾರೆ. ಹೆಂಗಸರು ಸಾಮಾನ್ಯವಾಗಿ ಬಳಸುವ ಎಲ್ಲಾ ಒಡವೆ, ವಸ್ತು, ಬಟ್ಟೆ ಬರೆಗಳನ್ನು ಬಳಸುತ್ತಾರೆ. ಕೊಳಗಕ್ಕೂ ಮೂರ್ತಿಗೂ ಸೇರಿಸಿ ಸೀರೆಯನ್ನು ಉಡಿಸುತ್ತಾರೆ. ಪೂಜೆ ಜರುಗಿದ ಮೇಲೆ ತಮಟೆವಾದ್ಯಗಳ ಸಮೇತ ಹೊಲಕ್ಕೆ ಕೊಂತಿಯನ್ನು ತೆಗೆದುಕೊಂಡು ಹೋಗುತ್ತಾರೆ. ಅವರೆ, ಹುಚ್ಚೆಳ್ಳು ಬೆಳೆಯು ಹುಲುಸಾಗಿ ಬೆಳೆದಿರುವ ಹೊಲದಲ್ಲಿ ವಿಸರ್ಜಿಸುತ್ತಾರೆ.[3]

ಕೊಂತಿಯಾಗಿ ಪೂಜೆಗೊಳ್ಳುತ್ತಿದ್ದ ಜೋಡಿಕಲ್ಲುಗಳನ್ನು ಸಗಣಿಯಿಂದ ಸಾರಿಸಿದ ಒಂದು ಬಿದರಿನ ಕುಕ್ಕೆಯಲ್ಲಿ ಹೂಗಳ ಸಮೇತ ಇಟ್ಟುಕೊಂಡು ಆ ಜೋಡಿಕಲ್ಲುಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಮಣ್ಣಿನ ಮೂರ್ತಿಯನ್ನು ಹೊಲದಲ್ಲಿ ವಿಸರ್ಜಿಸಿದಾಗ ಅದರ ಸುತ್ತ ಹೂಗಳನ್ನು ಅಲ್ಲಿಯೇ ಚೆಲ್ಲಿ ಈ ಜೋಡಿಕಲ್ಲುಗಳನ್ನು ಮತ್ತೆ ಮನೆಗೆ ವಾಪಸ್ಸು ತರುತ್ತಾರೆ. ಧಾನ್ಯಗಳಿಂದ ತುಂಬಿದ್ದ ಕೊಳಗವನ್ನು ಮತ್ತೆ ಮನೆಗೆ ತರುತ್ತಾರೆ. ಆ ಧಾನ್ಯಗಳನ್ನು ಕೊಂತಿಯನ್ನು ಕೂರಿಸಿದ್ದ ಮನೆಯ ಒಡತಿಯೇ ಇಟ್ಟುಕೊಳ್ಳುತ್ತಾಳೆ. ಇಲ್ಲವೆ ಯಾರಿಗಾದರೂ ದಾನವಾಗಿಯೂ ಕೊಡಬಹುದು.

ಹುಣಸೂರು ತಾಲೂಕಿನ ಗೌರೀಪುರ, ಹುಂಡಿಮಾಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರತಿದಿನವೂ ಬೆಳ್ಳಿ ಕೊಂತಿ ಮೂರ್ತಿಯನ್ನಿಟ್ಟು, ಪ್ರತಿದಿನ ಪೂಜೆಯು ಮುಗಿದ ನಂತರ ಮನೆಗೆ ಒಯ್ಯುವ ಕ್ರಮವು ಕಂಡುಬರುತ್ತದೆ. ಕೊನೆಯ ದಿನದಂದು ಮಣ್ಣಿನ ಕೊಂತಿ ಮೂರ್ತಿಯನ್ನು ನಿರ್ಮಿಸಿ ಹೊಲದಲ್ಲಿ ವಿಸರ್ಜಿಸುವುದು ಕಂಡು ಬರುತ್ತದೆ. ಹೆಗ್ಗಡೆದೇವನ ಕೋಟೆ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಕೊನೆಯ ದಿನದ ಪೂಜೆಯು ಮುಗಿದ ಮೇಲೆ ಕೊಂತಿಯಾಗಿ ಪೂಜೆಗೊಂಡ ಕಾರ ಅರೆಯುವ ಗುಂಡುಕಲ್ಲನ್ನು ಹೊಲಕ್ಕೆ ವಿಸರ್ಜಿಸುವುದಿಲ್ಲ. ಬದಲಿಗೆ ನೀರಿಗೆ ವಿಸರ್ಜಿಸುವುದು ತಿಳಿದುಬರುತ್ತದೆ. ನೀರಿನಲ್ಲಿ ವಿಸರ್ಜಿಸುವ ಕಡೆಗಳಲ್ಲಿ ಕೊಂತಿಯ ಕಲ್ಲನ್ನು ಹಗ್ಗವನ್ನು ಕಟ್ಟಿ, ಬಾವಿಗೆ ಮುಳುಗಿಸಿ ನಂತರ ನೀರು ಹಾಕಿ ತೊಳೆದು ನಂತರ ಒಂದು ಕುಕ್ಕೆಯಲ್ಲಿಟ್ಟು ಅಟ್ಟದ ಮೇಲೆ ಇಡುವುದು ಪದ್ಧತಿ. ಕೆಲವು ಪ್ರದೇಶಗಳಲ್ಲಿ ಕೊನೆಯ ದಿನದ ಪೂಜೆಗಾಗಿ ಮುಖವನ್ನು ಕಡೆದಿರುವ ಕೊಂತಿಕಲ್ಲುಗಳನ್ನು ಬಳಸುತ್ತಾರೆ. ಹೀಗೆ ಕೊಂತಿಪೂಜೆ ಆಚರಣೆ ವಿವಿಧ ಪ್ರದೇಶಗಳಲ್ಲಿ ಅಲ್ಲಲ್ಲಿನ ಭೌಗೋಳಿಕ ಹಾಗೂ ಸಾಮಾಜಿಕ ಪರಿಸ್ಥಿತಿಗನುಗುಣವಾಗಿ ವಿವಿಧ ರೀತಿಯಲ್ಲಿ ಜರುಗುವುದು ಗಮನಾರ್ಹವಾಗಿದೆ.

ಹಾಲುಕೊಳ ಮತ್ತು ನೀರುಕೊಳದ ಪ್ರಸ್ತಾಪ :  ಜೋಡಿಕಲ್ಲುಗಳನ್ನಿಟ್ಟು ಪೂಜಿಸುವ ಕಡೆಗಳಲ್ಲಿ ವೈವಿಧ್ಯತೆ ಇರುವುದು ಕೊನೆಯ ದಿನದ ಕಾರ್ಯಕ್ರಮದಲ್ಲಿ ಮಾತ್ರ. ಹೆಗ್ಗಡೆದೇವನ ಕೋಟೆ ಮತ್ತು ಗುಂಡ್ಲುಪೇಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೂರು ಹಂತಗಳನ್ನು ಹಾಕಿ ಕೊಂತಿಯನ್ನು ಪೂಜಿಸುವ ಕ್ರಮವಿರುವಂತೆಯೇ ಐದು ಹಂತಗಳನ್ನು ಹಾಕಿ ಪೂಜಿಸುವ ಕ್ರಮವೂ ಉಂಟು. ಮೂರು ಹಂತಗಳನ್ನು ಹಾಕಿ ಕೊಂತಿಯನ್ನು ಪೂಜಿಸುವ ಕಡೆಗಳಲ್ಲಿ ಕೊಂತಿಗೆ ಮೂರು ಮಕ್ಕಳೆಂದೂ ಐದು ಹಂತಗಳನ್ನು ಹಾಕಿ ಕೊಂತಿಯನ್ನು ಪೂಜಿಸುವ ಕಡೆಗಳಲ್ಲಿ ಐದು ಜನ ಕೊಂತಿಗೆ ಮಕ್ಕಳೆಂದೂ ಹೇಳುವುದು ವಾಡಿಕೆ. ಈ ಪ್ರದೇಶಗಳಲ್ಲಿ ಕೊಂತಿಯನ್ನು ಪೂಜಿಸುವ ಸ್ಥಳದಲ್ಲಿ ಎರಡು ಇಲ್ಲವೆ ಮೂರು ಅಂಗುಲದಷ್ಟು ಕಟ್ಟೆಯನ್ನು ಕಟ್ಟಿ ಹಾಲುಕೊಳ ಮತ್ತು ನೀರುಕೊಳವನ್ನು ನಿರ್ಮಿಸುತ್ತಾರೆ. ಅದರಲ್ಲಿ ಕೊಂತಿ ಹಂತದ ಬಲಭಾಗದ ಕೊಳಕ್ಕೆ ಹಾಲನ್ನೂ, ಎಡಭಾಗದ ಕೊಳಕ್ಕೆ ನೀರನ್ನು ತುಂಬುತ್ತಾರೆ. ಕೊನೆಯ ದಿನದಂದು ಹೆಂಗಸರು ತೊಡುವ ಬಟ್ಟೆಬರೆ, ಆಭರಣಗಳನ್ನು ತೊಡಿಸಿ ಕೊಂತಿಯನ್ನು ಸಿಂಗರಿಸಿ ಪೂಜೆಯ ಆಚರಣೆಗಳೆಲ್ಲ ಮುಗಿದ ಮೇಲೆ ವಿಸರ್ಜಿಸಲಾಗುವುದು. ವಿಸರ್ಜಿಸುವುದಕ್ಕೆ ಮೊದಲು ಎರಡು ಕೊಳಗಳನ್ನೂ ಒಂದು ಮಾಡುತ್ತಾರೆ. ಈ ಕೆಲಸವನ್ನು ಕುಂಬಾರರು ಮಾಡುತ್ತಾರೆ. ಈ ಕೊಳಗಳ ಕಲ್ಪನೆ ಹೆಗ್ಗಡದೇವನ ಕೋಟೆ ತಾಲೂಕಿನ ಹಳೆ ಊರು ಗ್ರಾಮದ್ದು: ಪಾಂಡುರಾಜನಿಗೆ ಇಬ್ಬರು ಹೆಂಡತಿಯರು : ಕುಂತಿದೇವಿ ಮತ್ತು ಮಾದ್ರಿದೇವಿ. ಪಾಂಡುವು ಮರಣ ಹೊಂದಿದಾಗ ಮಾದ್ರಿಯ ಎದೆಗೊರಗಿ ಪ್ರಾಣಬಿಟ್ಟ. ಇದು ಕತೆ. ಒಟ್ಟಿಗೆ ಮರಣಹೊಂದಿದ ಅವರ ಸಂಬಂಧವನ್ನು ಕಳೆಯುವುದಕ್ಕಾಗಿ ಒಂದು ಕಟ್ಟೆ ಮಣ್ಣು ಕಟ್ಟಿ ಹಾಲುಕೊಳ ಮತ್ತು ನೀರು ಕೊಳಗಳನ್ನು ಒಂದು ಮಾಡುತ್ತಾರೆ. ಆಗ ನೀರು ಮತ್ತು ಹಾಲು ಒಂದಾಗಿ ಬೆಳೆಯುತ್ತವೆ. ಇದು ಗಂಡ ಹೆಂಡತಿಯರ ಸಂಬಂಧವನ್ನು ಕಳೆಯುವ ಕ್ರಮ. ಹಾಲು ನೀರಿನಿಂದ ಬೆರೆತ ಮಣ್ಣನ್ನು  ಒಯ್ದು ಹೊಲಕ್ಕೆ ಚೆಲ್ಲುವುದು ಸಂಪ್ರದಾಯ. ಹಾಲು ಕೊಳ ಮತ್ತು ನೀರು ಕೊಳಗಳಿರುವ ಪ್ರದೇಶಗಳಲ್ಲಿ ಕೊಂತಿಯನ್ನು ಪ್ರತಿಷ್ಠಾಪಿಸಿರುವ ಜಗಲಿಯ ಬಲಗಡೆ ಹಾಲುಕೊಳವನ್ನು ಎಡಭಾಗದಲ್ಲಿ ನೀರಿನ ಕೊಳವನ್ನು ನಿರ್ಮಿಸಿ ಹಾಲು ಮತ್ತು ನೀರನ್ನು ನಿಗದಿಯಾಗಿ ಕೊಳಗಳಿಗೆ ತುಂಬಿರುತ್ತಾರೆ. ಈ ಪದ್ಧತಿಯು ಜೋಡಿಕಲ್ಲುಗಳನ್ನು ಪೂಜಿಸುವ ಕೋಟೆ ತಾಲೂಕಿನ ಹಳೇ ಊರು ಗ್ರಾಮದಲ್ಲಿ ಮಾತ್ರ ಪ್ರಚಲಿತವಿದೆ.

ಕೆಲವು ಪ್ರದೇಶಗಳಲ್ಲಿ ಕೊಂತಿಯನ್ನು ವಿಸರ್ಜಿಸುವ ಸ್ಥಳದ ವಿಷಯದಲ್ಲಿಯೂ ಭಿನ್ನತೆ ಕಂಡುಬರುತ್ತದೆ. ಹೊಲಕ್ಕೆ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡದೆ ನೀರಿನಲ್ಲಿ ವಿಸರ್ಜಿಸುವ ಕ್ರಮವಿದೆ. ಹತ್ತಿರದಲ್ಲಿ ಎಲ್ಲಾದರೂ ಹೊಳೆ, ಕೆರೆಗಳಿಲ್ಲದೆ ಹೋದರೆ ಬಾವಿಯಲ್ಲಿಯೇ ವಿಸರ್ಜಿಸುವುದುಂಟು. ಕೊಂತಿಗೆ ಅಲಂಕರಿಸಿದ ಹೂವುಗಳನ್ನು ಬಾವಿಗೆ ಹಾಕುತ್ತಾರೆ. ಕೊಂತಿಯಾಗಿ ಅಷ್ಟು ದಿನ ಪೂಜೆಗೊಳ್ಳುತ್ತಿದ್ದ ಕಲ್ಲಿಗೆ ಬಾವಿಯಿಂದ ನೀರು ಸೇದು ಹಾಕಿ ನಂತರ ಅದನ್ನು ಮನೆಗೆ ತರುತ್ತಾರೆ.

ಕೊಂತಿಯಾಗಿ ಪೂಜೆಗೈದ ಕಾರ ಅರೆಯುವ ಗುಂಡುಕಲ್ಲನ್ನು ಪೂಜೆ ಮಾಡುವುದರ ಜೊತೆಗೆ ನೀರು ತುಂಬಿದ ಕೊಡದ ಮೇಲೆ ಬೆಳ್ಳಿ ಇಲ್ಲವೆ ಹಿತ್ತಾಳೆಯಿಂದ ಮಾಡಿದ ಕೊಂತಿಯ ಮೂರ್ತಿಯ ಜೊತೆಗೆ ಕೊಡಕ್ಕೂ ಸೇರಿದಂತೆ ಸೀರೆಯನ್ನು ಉಡಿಸುತ್ತಾರೆ. ಗುಂಡಿ ಓಲೆ, ಮೂಗುಬೊಟ್ಟು, ಡಾಬು, ಕೊರಳಿಗೆ ಮಾಂಗಲ್ಯ ಮುಂತಾದ ಆಭರಣಗಳಿಂದ ಅಲಂಕರಿಸುತ್ತಾರೆ. ಕೊಂತಿಯ ತಲೆಗೂದಲಿಗೆ ಚೌಲದಿಂದ ಜಡೆಹಾಕಿ ಸೊಗಸನ್ನು ಉಂಟುಮಾಡುತ್ತಾರೆ. ಈ ಚಿತ್ರವು ಎಲ್ಲಮ್ಮನನ್ನು ನೆನಪಿಗೆ ತರುತ್ತದೆ.

ಪ್ರತ್ಯೇಕ ವ್ಯವಸ್ಥೆಯಿಲ್ಲದೆ ಕೊಂತಿಯನ್ನು ವಿಸರ್ಜಿಸುವ ಕ್ರಮ : ಗುಂಡ್ಲುಪೇಟೆ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ಕೊಂತಿಪೂಜೆಯ ಸಂದರ್ಭಗಳಲ್ಲಿ ವಿಸರ್ಜಿಸುವ ಸಮಯದಲ್ಲಿ ಮಣ್ಣಿನ ಕೊಂತಿಯ ಮೂರ್ತಿಯನ್ನು ನಿರ್ಮಿಸಿರುವುದಿಲ್ಲ. ಬೆಳ್ಳಿಯ ಅಥವಾ ಹಿತ್ತಾಳೆಯಿಂದ ಮಾಡಿದ ಮೂರ್ತಿಯನ್ನು ಪೂಜೆಯ ಸಂದರ್ಭದಲ್ಲಿ ಬಳಸುವುದಿಲ್ಲ. ಅಷ್ಟು ದಿನವೂ ಪೂಜೆ ಮಾಡಿದ ಜೋಡಿ ಕಲ್ಲನ್ನು ಇಲ್ಲವೆ ಒಂದು ಕಲ್ಲಿದ್ದ ಪ್ರದೇಶಗಳಲ್ಲಿ ಒಂದೇ ಕಲ್ಲನ್ನು ಹೂಗಳೊಂದಿಗೆ ಪೂಜಿಸಿ ಬಿದರಿನ ಕುಕ್ಕೆಯಲ್ಲಿ ಇಟ್ಟುಕೊಂಡು ಹೋಗುತ್ತಾರೆ. ಕೊಂತಿಯನ್ನು ವಿಸರ್ಜಿಸುವಾಗ ಹೂವುಗಳನ್ನು ಕಲ್ಲಿನ ಜೊತೆ ತುಂಬಿಕೊಂಡು ಹೋಗಿ ಹೊಲದ ಮಧ್ಯದಲ್ಲಿಟ್ಟು ಪೂಜೆ ಸಲ್ಲಿಸಿ ಬಂದು ಬಿಡುತ್ತಾರೆ. ಮಾರನೆಯ ದಿನ ಯಾರಾದರೂ ಹೋಗಿ ಹೂವುಗಳನ್ನು ಹೊಲದಲ್ಲಿ ಚೆ;ಲ್ಲಿ ಕಲ್ಲುಗಳನ್ನು ಕುಕ್ಕೆಗೆ ಹಾಕಿಕೊಂಡು ಮನೆಗೆ ಬರುತ್ತಾರೆ. ಟಿ. ನರಸೀಪುರ ತಾಲೂಕು ಯಾಜೇನಹಳ್ಳಿ ಗ್ರಾಮದಲ್ಲಿ ಕೊಂತಿಯನ್ನು ವಿಸರ್ಜಿಸುವ ಕ್ರಮದ ವೈವಿಧ್ಯತೆಯನ್ನು  ಇಲ್ಲಿ ಗಮನಿಸಬಹುದು :

ಕೊಂತಿಯನ್ನು ವಿಸರ್ಜಿಸುವ ದಿನಕ್ಕೆ ಸರಿಯಾಗಿ ಊರಿನ ಕುಂಬಾರನ ಮನೆಯಲ್ಲಿ ಎರಡೂವರೆ ಅಡಿ ಎತ್ತರದ ಮಣ್ಣಿನ ಮೂರ್ತಿಯನ್ನು ಮಾಡಿ, ಅದಕ್ಕೆ ಅಗತ್ಯವಾದ ಬಣ್ಣವನ್ನು ಲೇಪಿಸುತ್ತಾರೆ. ಆ ಕೊಂತಿಯನ್ನು ಉತ್ಸವಕ್ಕೆ ತಂದು ಮನೆಯ ಬಳಿಯಲ್ಲಿ ಪೂಜಿಸಿ ನಂತರ ಎತ್ತಿಗಾಡಿಯಲ್ಲಿಟ್ಟು ಅದರ ಪಕ್ಕದಲ್ಲಿಯೇ ಗುಂಡುಕಲ್ಲನ್ನು ಇಡುತ್ತಾರೆ. ಈ ಉತ್ಸವ ಬಹಳ ಸಮಯದವರೆಗೆ ನಡೆಯುತ್ತದೆ. ಉತ್ಸವದ ಮುಂದುಗಡೆಗೆ  ಪಂಚಪಾಂಡವರ ವೇಷಧರಿಸಿ ಐವರು ಪ್ರದರ್ಶನ ನೀಡುತ್ತಾರೆ. ಈ ವೇಷಗಳೊಡನೆ ಕತ್ತಿ ವರಸೆ, ಬೆಂಕಿವರಸೆ, ಪಾಳ್ಳೆಗಾರನ ವೇಷ, ತಮಟೆಗಳ ಬಡಿತ, ಕೋಲಾಟ – ಇವೆಲ್ಲ ಪ್ರದರ್ಶನಗೊಳ್ಳುತ್ತವೆ. ಹೀಗೆ ಸಂಭ್ರಮ, ಉತ್ಸಾಹಗಳೊಡನೆ ಕೊಂತಿಯನ್ನು ಉತ್ಸವದಲ್ಲಿ ವಿಸರ್ಜಿಸುವ ಸ್ಥಳಕ್ಕೆ ಕೊಂಡೊಯ್ಯುತ್ತಾರೆ. (ನವೆಂಬರ್ ತಿಂಗಳಲ್ಲಿ ರಾಗಿ ಬೆಳೆಯನ್ನು ಕೊಯ್ದಿರುತ್ತಾರೆ) ಅವರೆ ಸಾಲಿನಲ್ಲಿ ಕೊಂತಿಯನ್ನು ಇಟ್ಟು[4]ಪೂಜೆ ಮಾಡಿ ಅಡ್ಡಬೀಳುತ್ತಾರೆ. ಆ ಸಂದರ್ಭದಲ್ಲಿ ಕೊಂತಿಯ ಪದಗಳನ್ನು ಹಾಡಲಾಗುವುದು. ಎಲ್ಲರೂ ತಂತಮ್ಮ ಮನೆಗೆ ಹೋದಾಗ ಒಬ್ಬನು ಆ ಕೊಂತಿಯ ಕಲ್ಲನ್ನು ಕದಿಯಲು ಬರುತ್ತಾನೆ. ಸುತ್ತಮುತ್ತ ಯಾರೂ ಇಲ್ಲ ಎಂದು ಖಾತರಿ ಮಾಡಿಕೊಂಡು ಅಲ್ಲಿಗೆ ಬಂದು ಆ ಕೊಂತಿಯ ಕಲ್ಲನ್ನು ಕದ್ದುಕೊಂಡು ಓಡುತ್ತಾನೆ. ಅದನ್ನು ಬಚ್ಚಿಟ್ಟುಕೊಂಡು ಹೋಗಿ ಊರಲ್ಲಿ  ಗುಟ್ಟಾಗಿ ಇಡುತ್ತಾನೆ. ಅವನಿಗಲ್ಲದೆ ಇದು ಬೇರೆ ಯಾರಿಗೂ ತಿಳಿದಿರುವುದಿಲ್ಲ. ಮರುವರ್ಷ ಕೊಂತಿಪೂಜೆ ಸಂದರ್ಭ ಸಮೀಪಿಸುತ್ತಿದ್ದಂತೆ ಆತ ತಾನು ಕೊಂತಿಯನ್ನು ಕದ್ದಿರುವುದರ ಸುಳುಹು ಕೊಡುತ್ತಾನೆ. ಆದರೆ ಅದನ್ನು ಅವಿಸಿಟ್ಟಿರುವ ಜಾಗವನ್ನು ತಿಳಿಸುವುದಿಲ್ಲ. ಆಗ ಅತ್ತೆಯಾದವಳು ಅವನನ್ನು ಮನೆಗೆ ಬರಮಾಡಿಕೊಂಡು ಒಳ್ಳೆಯ ಅಡುಗೆ ಮಾಡಿ ಊಟ ಬಡಿಸಿದ ನಂತರ ಅವನು ಬಾಯಿ ಬಿಡುತ್ತಾನೆ. ಆಗ ಕೊಂತಿಯಾಗಿ ಪೂಜಿಸುವ ಗುಂಡುಕಲ್ಲನ್ನು ತಂದು ಮತ್ತೇ ಪೂಜೆ ಮಾಡಲು ಆರಂಭಿಸುತ್ತಾರೆ.[5] (ನಾಗೇಗೌಡ : ಎಲ್. ೧೯೯೫ : ೫೩೫)

ಕೊಂತಿಪೂಜೆ ಕೇವಲ ಹದಿನಾರು ದಿನಗಳ ಅವಧಿಯಲ್ಲಿ ನಡೆಯುವ ಪ್ರದೇಶಗಳಲ್ಲಿ ಪೂಜೆಯ ಕೊನೆಯ ದಿನ ರಾತ್ರಿ ಕೊಂತಿಯನ್ನು ವಿಸರ್ಜಿಸುತ್ತಾರೆ. ಅದಕ್ಕಾಗಿಯೇ ಮಣ್ಣಿನಲ್ಲಿ ಕೊಂತಿ ಮತ್ತು ಪಾಂಡುವಿನ ವಿಗ್ರಹವನ್ನು ಮಾಡಿ ಇಬ್ಬರು ವಯಸ್ಸಿನ ಹುಡುಗರಿಗೆ ಗಂಡು-ಹೆಣ್ಣು ವೇಷವನ್ನು ಹಾಕಿ ಅವರಿಂದಲೇ ವಿಗ್ರಹವನ್ನು ಹೊರಿಸಿ ಕೊಂಡು ಮೆರವಣಿಗೆಯೊಂದಿಗೆ ಊರ ಹೊರಗಿರುವ ರಾಗಿ, ನವಣೆ, ಹುಚ್ಚೆಳ್ಳು, ಅವರೆ ಬೆಳೆ ಇರುವ ಹೊಲಕ್ಕೆ ಬರುವರು. ಹೊಲದಲ್ಲಿ ಎರಡು ವಿಗ್ರಹಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ಈ ಕೊನೆಯ ದಿನದ ಪೂಜೆಯನ್ನು ಕೊಂತಿ ಒಸಗೆ ಎಂದು ಕರೆಯುವರು. ಒಸಗೆ ಶಾಸ್ತ್ರವನ್ನು ಮಾಡಿ ಮನೆಗೆ ತೆರಳುವರು. (ಹಾ.ಮಾ.ನಾ. : ೧೯೯೨:೩೯೪). ಈ ಪದ್ಧತಿಯು ಹದಿನಾರು ದಿವಸಗಳ ಪೂಜೆಯು ಪ್ರಚಲಿತವಿರುವ ಕೆಲವು ಪ್ರದೇಶಗಳಲ್ಲಿ ಮಾತ್ರವೇ ಕಂಡು ಬರುತ್ತದೆ.

ಹೆಗ್ಗಡೆದೇವನ ಕೋಟೆ ತಾಲೂಕಿನ ಕೊಳಗಾಲ, ಗುಜ್ಜಪ್ಪನಹುಂಡಿ, ಯರಹಳ್ಳಿ, ಚೆನ್ನೇಗೌಡ ದೊಡ್ಡಿ, ನೆಮ್ಮನಹಳ್ಳಿ, ಕಾಟವಾಳು, ಹಂಪಾಪುರ, ಬೊಮ್ಮರಗಳ್ಳಿ, ದಡದಹಳ್ಳಿ, ಹಂಚಿಪುರ, ಬಂಕವಾಡಿ, ಈರಹಳ್ಳಿ, ಸರಗೂರು ಮುಂತಾದ ಗ್ರಾಮಗಳಲ್ಲಿ ಕಡೆಯ ದಿನದ ಪೂಜೆಗಾಗಿ ಮತ್ತು ಕೊಂತಿಯ ವಿಸರ್ಜನೆಗಾಗಿ ಮಣ್ಣಿನ ಮೂರ್ತಿಯನ್ನು ತಿದ್ದುವ ಪರಿಪಾಠ ಉಂಟು. ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿರುವಂತೆಯೇ ಅವರೆ, ಹುಚ್ಚೆಳ್ಳು, ರಾಗಿ, ನವಣೆ, ಹುರುಳಿ, ಅರ್ಕ ಮುಂತಾದ ಬೆಳೆಗಳು ಇರುವ ಹೊಲದಲ್ಲೇ ಕೊಂತಿಯನ್ನು ವಿಸರ್ಜಿಸುತ್ತಾರೆ. ವಿಸರ್ಜಿಸಿದ ನಂತರ ಕೊಂತಿಯ ಕೊಂತಿಯ ಮಣ್ಣಿನ ಮೂರ್ತಿಯನ್ನು ಹಂಚಿಕೊಳ್ಳುವ ಪದ್ಧತಿ ಇಲ್ಲಿಯೂ ರೂಢಿಯಲ್ಲಿದೆ. ಇದೊಂದು ಉತ್ತಮ ಸಾಂಪ್ರದಾಯವಾಗಿ ಕಾಣುತ್ತದೆ. ವಿಸರ್ಜಿಸಿದ ಕೊಂತಿಮೂರ್ತಿಯ ಮಣ್ಣನ್ನು ಸ್ವಲ್ಪ ಸ್ವಲ್ಪವಾಗಿ ಮುರಿದು ಪ್ರತಿಯೊಬ್ಬರೂ ತಂತಮ್ಮ ಹೊಲಮನೆಗಳಿಗೆ ಒಯ್ದು ತಂತಮ್ಮ ಜಮೀನಿಗೆ ಹಾಕುವುದು ಕಂಡುಬರುತ್ತದೆ. ಈ ಮೇಲಿನ ಅಂಶಗಳಿಂದ ಕೊಂತಿಯು ಫಲವತ್ತತೆಯ ದೇವತೆಯಾಗಿರುವುದು ತಿಳಿದು ಬರುತ್ತದೆ. ಈ ಆಚರಣೆಯ ಮುಕ್ತಾಯ ಕೂಡ ಕುತೂಹಲಕಾರಿಯಾಗಿದೆ. :

ಬಾಳೆಯ ತೋಟದಲ್ಲಿ ಬಾಲನಾಡುತ ಬಂದ
ಬಾಲೇ ಸ್ತ್ರೀ ಶಿವನ ಪಾದಕ್ಕೆ ಎತ್ತಿದಳಾರತಿಯ
ಶ್ರೀ ದ್ರೌಪದಿ ಬೆಳಗಿದಳಾರತಿಯ

ಈ ಗೀತೆಯು ಕೊಂತಿ ಪೂಜೆ ನಡೆಯುವ ಎಲ್ಲ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮುಕ್ತಾಯದ ಹಾಡಾಗಿ ಬಳಕೆಯಲ್ಲಿದೆ. ಮನೆಯ ಬಳಿಯಲ್ಲಿ ಪ್ರಾರಂಭದ ಕೊಂತಿ ಪೂಜೆಯು ಬಾಳಿಗೆ ಸಂಕೇತವೋ ಎನ್ನುವಂತೆ ಹೊಲದ ಬಯಲಿನಲ್ಲಿ ಮುಕ್ತಾಯವಾಗುವುದು ಸಾಂಕೇತಿಕವಾಗಿದೆ. (ಹಾ.ಮಾ.ನಾ. :೧೯೭೨:೩೯೪)

ಕೊಂತಿಪೂಜೆಯು ಪ್ರಚಲಿತವಿರುವ ಪ್ರದೇಶ, ಸಮಾಜ ಮತ್ತು ಧರ್ಮ : ಕೊಂತಿ ಪೂಜೆಯ ಪ್ರಧಾನವಾಗಿ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕಂಡು ಬರುತ್ತದೆ. ಶಿವಮೊಗ್ಗ, ಬೆಂಗಳೂರು, ತುಮಕೂರು ಜಿಲ್ಲೆಗಳಲ್ಲಿಯೂ ಇದನ್ನು ಆಚರಿಸುವದು ಕಂಡು ಬಂದಿದೆ (ಕ್ಯಾತನಹಳ್ಳಿ ರಾಮಣ್ಣ : ೧೯೮೫ :೪೨). ಹಾಗೆಯೇ ಉತ್ತರಕರ್ನಾಟಕದಲ್ಲಿ  ನಡೆಯುವ ‘ಹಟ್ಟಿಹಬ್ಬಿ’ ಅಥವಾ ‘ಹಟ್ಯಮ್ಮನ’ ಹಬ್ಬದಲ್ಲಿ ಕೊಂತಿಗಿಂತ ಕೊಂತಿಯ ಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ಇಲ್ಲಿ ಹಟ್ಯಮ್ಮನೆಂದರೆ ಕೊಂತಿಯೇ ಆಗಿದ್ದಾಳೆ. ಹಿಂಗಾರು ಮಳೆಯು ಪ್ರಾರಂಭವಾಗಿ ಬಿತ್ತು ಕೆಲಸ ಎಲ್ಲ ಮುಗಿದ ಸಮಯದಲ್ಲಿ ಬರುವ ದೊಡ್ಡ ಸಂಪ್ರದಾಯ ಅದು.

ಕೊಂತಿಪೂಜೆಯನ್ನು ಆಚರಿಸುವ ರೈತಾಪಿ ಸಮಾಜಗಳಲ್ಲಿ ಮುಖ್ಯವಾದುದೆಂದರೆ ಆದಿ ಕರ್ನಾಟಕರು, ಗೊಲ್ಲರು, ಕುರುಬರು, ಕುಂಚಟಿಗರು, ನಾಮಧಾರಿ ಗೌಡರು, ಲಿಂಗಾಯತರು, ಗಂಗಡಿಕಾರರು, ನಾಯಕರು, ಉಪ್ಪಾರರು, ಉಪ್ಪಾಲಿಗಶೆಟ್ಟರು, ಕುಂಬಾರರು, ಅಗಸರು. ಈ ಎಲ್ಲ ಜನರಲ್ಲಿ ಕೊಂತಿಪೂಜೆಯು ಆಚರಣೆಯಲ್ಲಿ ಉಳಿದುಕೊಂಡು ಬಂದಿರುವುದು ಕಂಡು ಬರುತ್ತದೆ.

ಒಕ್ಕಲುತನವನ್ನೇ ಮೂಲ ಕಸಬನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಈ ಜನರು ಪ್ರಧಾನವಾಗಿ ಮಂಡ್ಯ ಮತ್ತು ಮೈಸೂರು ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇಲ್ಲಿಯ ಬೇಸಾಯಕ್ಕೂ ಕೊಮತಿಪೂಜೆಗೂ ಅವಿನಾಭಾವ ಸಂಬಂಧವಿರುವುದು ಸ್ಪಷ್ಟ. ಒಕ್ಕಲಿಗರು ಪ್ರತಿದಿನವೂ ಸಗಣಿಯ ಪಾಂಡವರನ್ನು ಮಾಡಿ ಅವರನ್ನು ಊರಿಗೆ ಬರಮಾಡಿಕೊಳ್ಳುವರು. ತಮ್ಮ ಹಟ್ಟಿಯಲ್ಲಿಯೂ ಪಾಂಡವರಿದ್ದಾರೆ ಎನ್ನುವುದು ಅವರ ದೃಢವಾದ ನಂಬಿಕೆ :

ಹಾಸುಗಲ್ಲಿನ ಮೇಲೆ ಹಾದುಹೋದವರ‍್ಯಾರ
ಪಾದ ಮೂಡ್ಯಾವ ಪರಿಪರಿ೧ ಪಾಂಡವರು
ಹಾದು ಹೋಗ್ಯಾರ ಜಳಕಕ
(ಗದ್ದಗೀಮಠ, ಬಿ.ಎಸ್. ೧೯೬೩ :೧೧೬)

ಪಾಂಡವರ ಬಗೆಗೆ ಅಪಾರ ಒಲವು ಉಳ್ಳವರು ಈ ಜನ. ವ್ಯವಸಾಯವೇ ಪ್ರಧಾನವಾಗಿರುವ ಈ ಸಮಾಜದಲ್ಲಿ ಪಾಂಡವರನ್ನು ಹಲವು ರೀತಿಯಲ್ಲಿ ಸ್ಥಿರೀಕರಿಸಿದ್ದಾರೆ.

ಒಟ್ಟಿನಲ್ಲಿ ರೈತಾಪಿ ಸಮಾಜದಲ್ಲಿ ಈ ಕೊಂತಿಪೂಜೆ ವ್ಯಾಪಕವಾಗಿ ಉಳಿದು ಬಂದಿದೆ.

 

[1]ಪೂಜಾಸಾಮಗ್ರಿಯಜೊತೆಯಲ್ಲಿಉತ್ರಾಣಿಕಡ್ಡಿಮತ್ತುಕೊಂತಿಜೀವನವನ್ನುಬಳಸುತ್ತಾರೆ.

[2]ಈಸಂದರ್ಭದಲ್ಲಿಭತ್ತ, ರಾಗಿ, ಅರ್ಕ, ನವಣಿ, ಮುಂತಾದಧಾನ್ಯಗಳನ್ನುಸಾಮಾನ್ಯವಾಗಿಬಳಸುತ್ತಾರೆ.

[3]ಇಂತಹದೇಬೆಳಸುಇರಬೇಕೆಂಬಕಡ್ಡಾಯನಿಯಮವಿರುವುದಿಲ್ಲ. ಅವರೆ, ಹುಚ್ಚೆಳ್ಳು, ಹುರುಳಿ, ನವಣಿ, ಅರ್ಕಮುಂತಾದಯಾವುದಾದರೊಂದುಬೆಳೆಇದ್ದರೂಸರಿ, ಆಹೊಲದಲ್ಲಿಯೇಕೊಂತಿಯನ್ನುವಿಸರ್ಜಿಸುತ್ತಾರೆ.

[4]ಮೆರವಣಿಗೆಯಲ್ಲಿಬಂದಮುತ್ತೈದೆಯರುಒಬ್ಬೊಬ್ಬರಾಗಿಬಂದುಭಕ್ತಿಯಿಂದತಾವುತಂದತಿಂಡಿಪದಾರ್ಥಗಳನ್ನುಎಡೆಮಾಡಿಕೊಂತಿಗೆಅರ್ಪಿಸಿ, ಕಾಯೊಡೆದುಕರ್ಪೂರ, ಗಂಧದಕಡ್ಡಿಹಚ್ಚುತ್ತಾರೆ.)

[5]ಕೊಂತಿಪೂಜೆಯಸಂದರ್ಭದಲ್ಲಿಕೊಂತಿಗಲ್ಲದೆಮತ್ತೊಬ್ಬರಿಗೆಪ್ರವೇಶವಿರುವುದಿಲ್ಲ. ಹಾಡುಗಳಲ್ಲಿಮತ್ತುಆಚರಣೆಎರಡರಲ್ಲಿಯೂಇದುಕಂಡುಬರುತ್ತದೆ.