ದೇವರಿದ್ದಾನೆಯೆ ಇಲ್ಲವೆ, ಈ ಬದುಕಿಗೊಂದು ಆದರ್ಶವಿರಬೇಕೆ ಬೇಡವೆ ಇತ್ಯಾದಿ ವಿಷಯಗಳಲ್ಲಿ, ಆಸ್ತಿಕರಿಗೂ ನಾಸ್ತಿಕರಿಗೂ, ಆದರ್ಶವಾದಿಗಳಿಗೂ, ವಾಸ್ತವವಾದಿಗಳಿಗೂ ಮೂಲಭೂತವಾದ ಅಭಿಪ್ರಾಯ ಭೇದಗಳಿರುವುದು ಸಾಧ್ಯ. ಆದರೆ ಈ ಬದುಕು ನಶ್ವರವೆಂಬುದನ್ನು ಮಾತ್ರ ಈ ಎಲ್ಲರೂ ಸಮಾನವಾಗಿ ಒಪ್ಪುತ್ತಾರೆ. ಆದರ್ಶವಾದಿಯಾದವನು, ವಿರಾಗದ ಹಾದಿಯನ್ನು ಮೆಚ್ಚುವವನು ಹೇಳುತ್ತಾನೆ:  ಈ ಬದುಕು ಮೂರು ದಿನದ್ದು, ಕೇವಲ ನಶ್ವರ; ಆದಕಾರಣ ಅದರಲ್ಲಿ ಯಾಕೆ ಮಗ್ನನಾಗುತ್ತೀಯ ಎಂದು. ವಾಸ್ತವವಾದಿಯಾದವನು, ಭೋಗಿಯಾದವನು ಹೇಳುತ್ತಾನೆ: ಬದುಕು ಮೂರು ದಿನದ್ದು; ಕೇವಲ ನಶ್ವರ; ಆದಕಾರಣ ಇರುವ ಅಲ್ಪಕಾಲದಲ್ಲಿಯೆ ಈ ಬದುಕಿನ ಸೊಗಸನ್ನು ಸವಿಯೋಣ ಎಂದು. ಎಂದರೆ ಇವರೆಲ್ಲರೂ ಸಮಾನವಾಗಿ ಒಪ್ಪುವ ಒಂದು ತತ್ವ ಈ ಜೀವನ ನಶ್ವರ ಎಂಬುದನ್ನು ಅಥವಾ ಮೃತ್ಯುವನ್ನು. ಯಾಕೆಂದರೆ ಈ ಬದುಕು ನಶ್ವರ ಎಂಬುದು ನಮಗೆ ಅನುಭವಕ್ಕೆ ಬರುವುದು, ಲೋಕವಸ್ತುಗಳು ನೋಡ ನೋಡುತ್ತಲೇ ಮೃತಿಯನ್ನೆ ದುತ್ತವೆ ಎಂಬ ಸತ್ಯದ ಮೂಲಕ. ಈ ಮೃತ್ಯುವೆಂಬುದು ಒಂದು ಅನಿವಾರ‍್ಯ ಅವಸ್ಥೆಯಾಗಿ ಎಲ್ಲವನ್ನೂ ನುಂಗಿ ನೊಣೆಯುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಈ ಮೃತ್ಯು ಎಂಬುದು ಎಲ್ಲರಿಗೂ ಸಾಕ್ಷಾತ್ತಾಗಿ ಗೋಚರಿಸುವ ಮತ್ತು ಎಲ್ಲರೂ ಒಪ್ಪಿಕೊಳ್ಳಬೇಕಾದ ಒಂದು ತತ್ವ. ಯೋಗಿಯಾಗಲಿ, ಭೋಗಿಯಾಗಲಿ, ಆಸ್ತಿಕನಾಗಲಿ, ನಾಸ್ತಿಕನಾಗಲಿ, ಸಮಾನವಾಗಿ ಒಪ್ಪಿಕೊಳ್ಳುವುದು ಮೃತ್ಯುವಿನ ಅಸ್ತಿತ್ವವನ್ನು.

ಈ ಮೃತ್ಯುವೆಂಬುದು ಒಂದು ಇದೆಯೆಂದರೂ ಬದುಕುವ ಹಂಬಲ ಅದಮ್ಯವಾದುದು. ದಿನದಿನವೂ ಸುತ್ತಲೂ ಜನ ಸಾಯುತ್ತಿದ್ದರೂ ನಾವು ಮಾತ್ರ ಉಳಿದೇವೆಂಬಂತೆ, ಮರಣವನ್ನು ತಪ್ಪಿಸಲಾಗದಿದ್ದರೂ, ಅದನ್ನು ಕೊಂಚ ಮುಂದೆ ಹಾಕಬಹುದೇನೋ ಎಂಬಂತೆ ನಡೆದುಕೊಳ್ಳುತ್ತೇವೆ. ಮೃತ್ಯುವೆಂಬುದು ಈ ಬದುಕಿಗೆ ಕೊನೆ ಎಂದು ನಾವು ಕಂಡರೂ, ಮನುಷ್ಯನ ಮನಸ್ಸು ಇದೇ ಕೊನೆ ಅಲ್ಲವೆಂದೂ ಇದರಾಚೆಗೂ ಒಂದು ಜೀವನವಿದೆ ಎಂತಲೂ ಕಲ್ಪಿಸಿಕೊಂಡು ಸಾವಿಗಿಂತಲೂ ಜೀವನ ದೊಡ್ಡದೆಂಬುದನ್ನು ಸಾಧಿಸಲು ಪ್ರಯತ್ನಿಸಿದೆ. ಹೀಗಾಗಿ ಸಾವಿನಾಚೆ ಏನಿರಬಹುದು ಎಂಬ ಊಹಾಪೋಹಗಳು ಶುರುವಾಗಿ ಸ್ವರ್ಗ ನರಕಗಳನ್ನೂ, ಲೋಕ ಲೋಕಾಂತರಗಳನ್ನೂ, ಅಲ್ಲಿರುವ ಮರಣಾತೀತವಾದ ದೇವಾನುದೇವತೆಗಳನ್ನೂ ಮನುಷ್ಯನ ಮನಸ್ಸು ನಿರ್ಮಿಸಿ, ಈ ಮರಣದ ಭಯಂಕರತೆಯಿಂದ ಪ್ರಾಪ್ತವಾಗುವ ನಿರಾಶೆಯನ್ನು ನಿವಾರಿಸಲು ‘ಪರ’ದ ಕಲ್ಪನೆಯೊಂದನ್ನು ಕಟ್ಟಿ ನಿಲ್ಲಿಸಿದೆ.

ಮೃತ್ಯು ತತ್ವವನ್ನು ಒಂದು ಕೇಂದ್ರಬಿಂದುವನ್ನಾಗಿರಿಸಿಕೊಂಡು, ಯಾವಾಗ ಈ ಬದುಕನ್ನು ಇಹ-ಪರ ಎಂಬುದಾಗಿ ಇಬ್ಬಾಗಿಸಿಕೊಂಡೆವೋ ಮತ್ತು ಈ ಒಂದು ಭಾವನೆ ಯಾವಾಗ ಪರಂಪರಾನುಗತವಾಗಿ ಜನಮನದಲ್ಲಿ ಬೆರೆತು ಬಂದಿತೋ ಅಂದಿನಿಂದ ನಮ್ಮ ದೈನಂದಿನ ಜೀವನದಲ್ಲಿ ಒಂದು ಬಗೆಯ ದ್ವಂದ್ವಕ್ಕೆ ಅವಕಾಶವಾಯಿತು. ಇಹವೆಂಬುದು ನಶ್ವರವೆಂತಲೂ ಇದಕ್ಕಿಂತಲೂ ಶಾಶ್ವತವಾದ ಪರವೆಂಬು- ದೊಂದಿದೆಯೆಂತಲೂ, ಮನುಷ್ಯನ ಇಹದ ಬದುಕೇನಿದ್ದರೂ ಆ ‘ಪರ’ದ ಸಾಧನೆಗೆ ಮಾಡಿಕೊಳ್ಳುವ ಒಂದು ಸಿದ್ಧತೆಯೆಂತಲೂ ಭಾವನೆಗಳು ಪ್ರಚಲಿತವಾದುವು. ಪರದ ಹಂಗಿಲ್ಲದ ಇಹದ ಜೀವನವೊಂದಿದ್ದರೆ ಸಾಕೆಂಬ ನಂಬಿಕೆಯೆ ದುರ್ಬಲವಾಗುವಷ್ಟರ ಮಟ್ಟಿಗೆ ನಮ್ಮ ದೇಶದ ಶಾಸ್ತ್ರ-ಪುರಾಣ-ಆಗಮಗಳು ನಮ್ಮ ಬದುಕಿನ ಮೇಲೆ ‘ಪರ’ದ ಮಹತ್ವವನ್ನು ಸ್ಥಾಪಿಸಿಬಿಟ್ಟಿವೆ. ಕೊಂಚ ವಿಚಾರ ಮಾಡಿದರೆ ‘ಪರ’ದ ಕಲ್ಪನೆಯ ಉದ್ದೇಶ, ಅಂಥದೊಂದು ಪ್ರತ್ಯೇಕವಾದ ಸ್ಥಿತಿ ಉಂಟೆಂಬುದಕ್ಕಿಂತ, ಇಹದ ಬದುಕಿನಲ್ಲಿ ಮನುಷ್ಯ ಪರದ ಆಕರ್ಷಣೆಯಿಂದಾದರೂ ಒಳಿತಾಗಿ ನಡೆದುಕೊಳ್ಳಲಿ ಎಂಬ ನೈತಿಕ ತಂತ್ರವಾದಂತೆ ತೋರುತ್ತದೆ. ಮನುಷ್ಯನ ಇಹದ ನಡವಳಿಕೆಗೆ ಮರಣಾನಂತರ ಒದಗುವ ಸದ್ಗತಿ ದುರ್ಗತಿಗಳ ಸಂಗತಿಯನ್ನು, ಸ್ವರ್ಗದ ಆಕರ್ಷಣೆಯನ್ನು , ನರಕದ ಭಯವನ್ನೂ ಪರಿಣಾಮವಾಗಿ, ಒಡ್ಡುವ ತಂತ್ರದ ಮೂಲಕ, ಈ ಲೋಕದ ಬದುಕು ಹಸನಾಗಲಿ ಎಂಬ ಉದ್ದೇಶವನ್ನು ಇದು ಸಾಧಿಸುತ್ತದೆ.

ಆದರೆ ಸಾವಿನಾಚೆಗೆ ಏನಿದೆಯೊ, ಏನಿಲ್ಲವೋ ಅದನ್ನು ಕಂಡವರಾರು? ಕಂಡರೂ ಹಿಂದಕ್ಕೆ ಬಂದು ಹೇಳಿದವರಾರು? ಸಾವಿನೀಚೆಯ ಬದುಕಂತೂ ನಮ್ಮೆದುರಿಗಿದೆ;  ಅದು ನಮ್ಮದು. ಅದನ್ನು ಪ್ರೀತಿಸುವುದನ್ನೂ, ಯಾವ ಪರದ ಪರದಾಟವೊ ಇಲ್ಲದೆ ಪ್ರೀತಿಸುವುದನ್ನು ನಾವು ಕಲಿಯಬೇಕಾಗಿದೆ. ‘ಪರ’ದ ಹೆಸರಿನಲ್ಲಿ ಇಹದ ಬದುಕನ್ನು ತುಚ್ಛವಾಗಿ ಕಾಣುವುದಾಗಲಿ, ಗೌಣವಾಗಿ ಎಣಿಸುವುದಾಗಲಿ ಸಲ್ಲದು. ಇಹ-ಪರವೆರಡರಲ್ಲೂ ಸಲ್ಲುವಂತೆ ಬದುಕಬೇಕು ಎನ್ನುತ್ತಾರೆ ತಿಳಿದವರು; ಆದರೆ ಪರವೆಂದರೇನೆಂದು ತಿಳಿಯದ ನಾವು ಇಹವನ್ನು ಚೆನ್ನಾಗಿ ಬದುಕಿದರೆ ಸಾಕು. ಡಿ.ವಿ.ಜಿ.ಯವರು ಹೇಳಿದ ಮಾತು ‘ಸುರಧನುವಿಗೇಣಿಯಿಡ ಹೊರಟು ನಿನ್ನಂಗಳದ ಕಿರಿಹೂವ ಮರೆಯುವೆಯ, ಮಂಕುತಿಮ್ಮ’ ಎಂಬುದು ನೆನಪಿನಲ್ಲಿಡ ಬೇಕಾದದ್ದಾಗಿದೆ. ಇಲ್ಲಿನ ಸುಖ-ದುಃಖ; ಇಲ್ಲಿನ ಚೆಲುವು ಒಲವು, ಸಾವಿನಾಚೆಗೆ ಇದ್ದಿರಲಾರದು. ನಮ್ಮ ಉಪನಿಷತ್‌ಕಾರರು ಒತ್ತಿ ಹೇಳಿದ್ದೂ ಇದನ್ನೇ; ಈ ಲೋಕದ ಕರ್ತವ್ಯ ಕರ್ಮಗಳನ್ನು ಮಾಡುತ್ತಲೇ ನಾವು ನೂರು ಶರದಗಳನ್ನು ಕಾಣುವಂತಾಗಲಿ ಎಂದು. ಈ ಜೀವನಶ್ರದ್ಧೆ; ಎಲ್ಲಕ್ಕಿಂತ ದೊಡ್ಡದು; ಇರುವ ಬದುಕನ್ನು ಯಥಾವತ್ತಾಗಿ ಒಪ್ಪಿಕೊಂಡು ಬದುಕುವ ಧೈರ‍್ಯ ದೊಡ್ಡದು.

‘ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ,’ -ಎಂಬ ಒಂದು ಮಾತು ಬರುತ್ತದೆ ಅಲ್ಲಮಪ್ರಭುಗಳ ಒಂದು ವಚನದಲ್ಲಿ. ಈ ಮಾತಿನಲ್ಲಿ ಬದುಕನ್ನು ಕುರಿತ ವಾಸ್ತವಿಕ ದೃಷ್ಟಿಯ ವಿಚಾರವಿದೆ; ಅಷ್ಟೇ ಅಲ್ಲ, ಜೀವನವನ್ನು ಒಪ್ಪಿಕೊಳ್ಳಬೇಕಾದ ರೀತಿಯ ನಿರ್ದೇಶನವಿದೆ.

ಈ ಬದುಕಿನಲ್ಲಿ ನಾವು ನೂರಾರು ಕನಸು ಕಟ್ಟಬಹುದು; ಅದು ಹಾಗಿರಬೇಕು, ಹೀಗಿರಬೇಕು ಎಂದು ಊಹಿಸಬಹುದು; ಭಾವಿಸಬಹುದು; ಆಶಿಸಬಹುದು. ಆದರೆ ನಾವು ಊಹಿಸಿದ, ಆಶಿಸಿದ ರೀತಿಯಲ್ಲೇ ನಮಗೆ ಬದುಕಿನ ಸಮಯ-ಸಂದರ್ಭಗಳು ದೊರೆಯದೆ ಹೋಗಬಹುದು. ಆದುದರಿಂದ ಅಂದಂದು, ಬದುಕು ಏನೇನನ್ನು ತಂದೊಡ್ಡುತ್ತದೆಯೋ ಅದನ್ನು ಒಪ್ಪಿಕೊಳ್ಳದೆ, ಎದುರಿಸದೆ ಬೇರೆ ದಾರಿಯಿಲ್ಲ.

ಈ ಬದುಕು ಒಂದು ಕೊಟ್ಟ ಕುದುರೆಯಂತೆ, ಅದನ್ನು ಹತ್ತಿ ಪಳಗಿಸಿ ಸವಾರಿ ಮಾಡುವುದನ್ನು ಕಲಿಯಬೇಕಾಗಿದೆ. ನಾವು ಯಾವ ಯಾವ ಹೊತ್ತಿನಲ್ಲಿ ಯಾವ ಸಂದರ್ಭಗಳನ್ನು ಎದುರಿಸಬೇಕಾಗುಬಹುದೆಂಬುದು ನಮಗೆ ತಿಳಿಯದ ಸಂಗತಿ; ಆದರೆ ಬಂದ ಪ್ರಸಂಗಗಳನ್ನು ಹಿಡಿದು ಪಳಗಿಸಿ ಅದರ ಮೇಲೆ ಪ್ರಭುತ್ವವನ್ನು ಸ್ಥಾಪಿಸುವುದನ್ನು ನಾವು ಕಲಿಯಬೇಕಾಗಿದೆ. ಹೀಗೆ ಬದುಕು ತಂದುಕೊಟ್ಟು ಏರು ಎಂದ ಕುದುರೆಯನ್ನು, ಅದು ಚೆನ್ನಾಗಿಲ್ಲವೆಂದೋ, ಇದು ನನಗೆ ಬೇಡ ಎಂತಲೋ ಹೇಳಿ, ಕೊಟ್ಟ ಕುದುರೆಯನ್ನೇರಲರಿಯದೆ ಮತ್ತೊಂದನ್ನು ಬಯಸಿ, ಕುದುರೆ ಸವಾರಿಗೆ ಬಳಸುವ ತಡಿ-ಲಗಾಮು ಮೊದಲಾದ ಸಾಮಗ್ರಿಗಳನ್ನು ಹೊತ್ತು, ನಾವೇ ಕುದುರೆಯಾಗಿ ಅಲೆಯುವುದು ಧೀರತೆಯ ಲಕ್ಷಣವಲ್ಲ. ಈ ಬದುಕು ಏನನ್ನು ತರುತ್ತದೋ ಏನನ್ನು ಒಡ್ಡುತ್ತದೋ ಎಲ್ಲಿಗೆ ಒಯ್ದು ಮುಟ್ಟಿಸುತ್ತದೋ ಅದನ್ನು ಧೈರ್ಯವಾಗಿ ಒಪ್ಪಿಕೊಳ್ಳಬೇಕು. ಆದಕಾರಣವೇ ಅಲ್ಲಮಪ್ರಭುಗಳು ಹೇಳಿದ್ದು: ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದ ಬಯಸುವವರು ವೀರರೂ ಅಲ್ಲ, ಧೀರರೂ ಅಲ್ಲ ಎಂದು.

ಕೆಲವರಿಗೆ ವರ್ತಮಾನದ ಬದುಕು, ಬೇಡವಾದ ಕುದುರೆಯಂತೆ ತೋರುತ್ತದೆ; ಏಕೆಂದರೆ ಅವರು ಆಶಿಸಿದ್ದೇ ಒಂದು, ಅವರು ಪಡೆದದ್ದೇ ಒಂದು. ಇಂಥವರಿಗೆ ವರ್ತಮಾನದ ಪರಿಸ್ಥಿತಿಯಿಂದ ಪಾರಾಗಲು ಎರಡೇ ದಾರಿ: ಒಂದು, ಗತಕಾಲದ ಸ್ಮರಣೆಗಳಲ್ಲಿ ಮುಳುಗಿ ಅದನ್ನೇ ಹೊಗಳುತ್ತಾ, ವರ್ತಮಾನ ಕಾಲ ಕೆಟ್ಟು ಹೋಗಿದೆಯೆಂದು ಹೇಳುತ್ತಾ ಕಾಲ ಕಳೆಯುವುದು. ಎರಡನೆಯದು ಭವಿಷ್ಯದ ಸುಂದರ  ಸ್ವಪ್ನಗಳನ್ನು ಕಾಣುತ್ತ. ಅದು ನನಸಾಗುವುದನ್ನು ಕಾಯುವುದು.ಇವರೆಲ್ಲರೂ ಕೊಟ್ಟ ಕುದುರೆಯನೇರಲರಿಯದವರು. ಹಳೆಯದೆಲ್ಲಾ ಹೊನ್ನು-ಎನ್ನುತ್ತಾ ಕೂರುವುದು ಮತ್ತೊಂದು ಜಾತಿ. ಮತ್ತೆ ಕೆಲವರು ಮಹತ್ವಾಕಾಂಕ್ಷಿಗಳು; ಅವರಿಗೆ ಸದ್ಯದ ಸಂದರ್ಭ ಸನ್ನಿವೇಶಗಳನ್ನು ಅದು ಇದ್ದಂತೆ ಒಪ್ಪಿಕೊಳ್ಳುವುದಕ್ಕಿಂತ ನಾಳೆ ನಾವೇನಾಗಬೇಕು ಎನ್ನುವ ಕಡೆ ವಿಶೇಷ ಆಸಕ್ತಿ. ಅದಕ್ಕಾಗಿ ಕಂಡಕಂಡವರಿಗೆ ಕೈತೋರಿಸುತ್ತಾ ತಮ್ಮ ಅಂಗೈ ಮೇಲಿನ ಗೆರೆಗಳು ಯಾವ ಫಲ ಕೊಟ್ಟಾವೆಂಬುದನ್ನು ಊಹಿಸುತ್ತಾ, ಜಾತಕ-ಪ್ರಶ್ನೆ ಇತ್ಯಾದಿಗಳಲ್ಲಿ ನಾಳಿನ ಬಾಗಿಲನ್ನು ಬಡಿಯುತ್ತಾ ಅದಕ್ಕನುಸಾರವಾಗಿ ತಮ್ಮ ಬದುಕನ್ನು  ಹೊಂದಿಸುತ್ತಾ ದಾರಿಯ ಕಾಯುವ ಜನ. ಆಕಸ್ಮಾತಾಗಿ ತಾವಂದುಕೊಂಡದ್ದು ಫಲಿಸಿತೋ ಸಂತೋಷ. ಫಲಿಸಲಿಲ್ಲವೊ ಆಘಾತ. ಇವತ್ತು ತಾನು ಏನಾಗಿದ್ದೇನೆಂಬ, ಏನಾಗಬೇಕೆಂಬ ಕಡೆ ಗಮನವಿಲ್ಲದ ಇವರು, ನಾಳೆ ನಾನೇನಾಗಬೇಕೆಂಬ ಹಂಬಲದಲ್ಲಿ ತಳಮಳಿಸುವ ಇವರು, ವರ್ತಮಾನದಲ್ಲಂತೂ ಬದುಕುತ್ತಿಲ್ಲ. ಇವರು ‘ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು’ ಬಯಸುವ ಜನ. ಹಾಗೆಂದ ಮಾತ್ರಕ್ಕೆ ನಾಳೆ ಬರುವುದೆಲ್ಲಾ ತಮ್ಮ ಕರ್ಮಫಲವೆಂಬ ವಾದದಲ್ಲಿ ಪ್ರವೃತ್ತವಾಗಬೇಕೆಂದಾಗಲಿ, ಬದುಕಿಗೆ ಪುರುಷಕಾರ ಪ್ರಧಾನವಾದ ಮಹತ್ವಾಕಾಂಕ್ಷೆಗಳಿರಲೇಬಾರದೆಂದಾಗಲಿ ಅರ್ಥವಲ್ಲ. ಆದರೆ ಮೊದಲು ಮನುಷ್ಯ ತನ್ನ ಅಂದಂದಿನ ಬದುಕನ್ನು ಯಥಾವತ್ತಾಗಿ ಒಪ್ಪಿಕೊಳ್ಳುವುದನ್ನು ಕಲಿಯಬೇಕು ಎಂದು ಅರ್ಥ. ತನ್ನ ಪಾಲಿಗೆ ಬದುಕು ತಂದದ್ದನ್ನು ಅದಿದ್ದಂತೆ ಒಪ್ಪಿಕೊಂಡು ಅದನ್ನು ಎದುರಿಸುವುದರಲ್ಲಿ , ತನಗೆ ಪ್ರಾಪ್ತವಾದದ್ದನ್ನು ಯಾವ ಗೊಣಗುಗಳು ಇಲ್ಲದೆ ಸಮರ್ಪಕವಾಗಿ ನಿರ್ವಹಿಸುವುದರಲ್ಲಿ ಕುಶಲಿಯಾಗಬೇಕು. ‘ನಾಳೆ ಬಪ್ಪುದು ನಮಗಿಂದೇ ಬರಲಿ, ಇಂದು ಬಪ್ಪುದು ನಮಗೀಗಲೇ ಬರಲಿ, ಇದಕಾರಂಜುವರು. ಇದಕಾರಳುಕುವರು’ ಎಂದು ಹೇಳಿದ ಬಸವಣ್ಣನವರ ವಚನವೂ ಇದನ್ನೇ ಸಮರ್ಥಿಸುತ್ತದೆ. ಈ ಜೀವನ ಪ್ರೀತಿ, ಈ ಜೀವನ ಶ್ರದ್ಧೆ ನಮ್ಮ ಬದುಕಿಗೆ ಅತ್ಯಗತ್ಯವಾದದ್ದು.

ಚದುರಿದ ಚಿಂತನೆಗಳು : ೨೦೦೦