Categories
ಜಾನಪದ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಕೊಟ್ರೇಶ ಚನ್ನಬಸಪ್ಪ ಕೊಟ್ರಪ್ಪನವರ

ನಟ, ವಾದ್ಯಗಾರ, ಸಂಘಟಕರಾಗಿ ಜನಪದ ಹಾಗೂ ವೃತ್ತಿರಂಗಭೂಮಿಯಲ್ಲಿ ವಿಶಿಷ್ಟ ಸಾಧನೆಗೈದವರು ಕೊಟ್ರಪ್ಪ ಚನ್ನಬಸಪ್ಪ ಕೊಟ್ರಪ್ಪನವರ ಬಹುದಶಕಗಳ ಬಹುಮುಖಿ ಸಾಧನೆಯ ಕಲಾವಿದರು.

ಹಾವೇರಿ ಜಿಲ್ಲೆಯ ಸಾಂಸ್ಕೃತಿಕ ಕೊಡುಗೆ ಕೊಟ್ರಪ್ಪ, ಶಿಗ್ಗಾಂವ ತಾಲ್ಲೂಕಿನ ಹಿರೇಮಣಕಟ್ಟಿಯ ಬೆಳಗಲಿ ಹುಟ್ಟೂರು. ಬಾಲ್ಯದಿಂದಲೂ ಹಾಡು-ನಟನೆಯೆಂದರೆ ಪಂಚಪ್ರಾಣ. ಓದಿದ್ದು ೭ನೇ ತರಗತಿಯವರೆಗೆ ಮಾತ್ರ ಮುಂದಿನದ್ದೆಲ್ಲಾ ಕಲಾಶಿಕ್ಷಣ ಮತ್ತು ಕಲಾಸೇವೆಯೇ. ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ನಿರಂತರ ನಟನೆ ಜೊತೆಗೆ ಸಂಗೀತಗಾರನಾಗಿಯೂ ಸಾರ್ಥಕ ಸೇವೆ. ನಾಟಕದ ಹಾಡುಗಳಿಗೆ ಸಂಗೀತ ಸಂಯೋಜಿಸುವಲ್ಲಿಯೂ ಎತ್ತಿದಕೈ. ಕೆ.ಬಿ.ಆರ್‌. ಡ್ರಾಮಾ ಕಂಪನಿ, ಗುಡಿಗೇರಿಯ ಶ್ರೀ ಸಂಗಮೇಶ್ವರ ನಾಟ್ಯ ಸಂಘದಲ್ಲಿ ದಶಕಗಳ ಕಾಲ ತರಹೇವಾರಿ ಪಾತ್ರಗಳಲ್ಲಿ ನಟನೆ-ಸಂಗೀತವಾದ್ಯಗಾರನಾಗಿ ಸೇವೆ. ಕಲಾಶ್ರೀ ಡ್ರಾಮಾ ಸೀನರಿ ಸಂಸ್ಥೆ ಸ್ಥಾಪಿಸಿ ನಾಲ್ಕು ದಶಕಗಳಿಂದಲೂ ರಂಗಪರಿಕರಗಳನ್ನು ಉಚಿತವಾಗಿ ಒದಗಿಸಿದ ಹಿರಿಮೆ. ಕ್ಯಾಶಿಯೋ ವಾದನ ನುಡಿಸುವಿಕೆಗೆ ಅಪಾರ ಮೆಚ್ಚುಗೆ. ರಾಜ್ಯ ಮಾತ್ರವಲ್ಲದೆ, ಹೊರರಾಜ್ಯಗಳಲ್ಲೂ ಕಲಾಪ್ರೌಢಿಮೆ ಮೆರೆದ ಖುಷಿ, ಧರ್ಮ ಎಲ್ಲಿದೆ, ಸೂಳೆ ಸವಾಲು ಮುಂತಾದ ನಾಟಕಗಳು, ರಂಗಗೀತೆಗಳು, ಭಾವ-ಭಕ್ತಿಗೀತೆಗಳ ರಚಿಸಿ ಸಂಗೀತ ಸಂಯೋಜಿಸಿದ ಕೊಟ್ರಪ್ಪ ಅವರ ಕಲಾಸೇವೆಗೆ ಹಲವು ಪ್ರಶಸ್ತಿಗಳು ಸಂದಿದ್ದು ನಿತ್ಯ ನೂತನವಾಗಿ ಮುಂದುವರೆದಿದೆ.