ಅಮರಕ್ರಾಂತಿಯ ಹರಿಕಾರ ರೈತ ಸಂಗ್ರಾಮದ ನೆನಪಿಗೆ

ಸುಳ್ಯವನ್ನು ಪ್ರತಿಭಟನೆಯ ನೆಲವೆಂದು ಕರೆಯುವುದುಂಟು. ಹದಿನೇಳನೆಯ ಶತಮಾನದಲ್ಲಿ ಕೋಟಿ-ಚೆನ್ನಯ್ಯರೆಂಬ ಯಮಳ ವೀರರು ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಬಂಡೆದದ್ದು ಮತ್ತು 1837ರಲ್ಲಿ ಅಮರಸುಳ್ಯ ಸೀಮೆ ರೈತರು ಕಲ್ಯಾಣ ಸ್ವಾಮಿಯನ್ನು ಮುಂದಿಟ್ಟುಕೊಂಡು ಕೆದಂಬಾಡಿ ರಾಮಗೌಡನ ನೇತೃತ್ವದಲ್ಲಿ ಮತ್ತು ಹುಲಿ ಕಡಿದ ನಂಜಯ್ಯನ ನಿರ್ದೇಶನದಲ್ಲಿ ಬ್ರಿಟಿಷರನ್ನು ಮಂಗಳೂರಿನಿಂದ ಓಡಿಸಿ ಎರಡು ವಾರ ಪರ್ಯಂತ ದಕ್ಷಿಣ ಕನ್ನಡ ಜಿಲ್ಲೆಯನ್ನು ಆಳಿದ್ದು ಇದಕ್ಕೆ ಕಾರಣ. 1857ರ ಸ್ವಾತಂತ್ರ ಸಂಗ್ರಾಮಕ್ಕಿಂತ ಇಪ್ಪತ್ತು ವರ್ಷಗಳಿಗೆ ಮೊದಲೇ ನಡೆದ ಈ ರೈತ ಸಂಗ್ರಾಮ ಕೊಡಗು, ದ.ಕ. ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ವ್ಯಾಪಿಸಿ ಅನೇಕ ದೂರಗಾಮಿ ಪರಿಣಾಮಗಳನ್ನು ಉಂಟು ಮಾಡಿತ್ತು.

ರೈತರ ಸಂಗ್ರಾಮವನ್ನು ಕೊಡಗಿನಲ್ಲಿ ಬೋಪು ದಿವಾನ ಮತ್ತು ಪೊನ್ನಪ್ಪ ದಿವಾನ ಹತ್ತಿಕ್ಕಿ ಬ್ರಿಟಿಷರ ಕೃಪಾಶ್ರಯ ಗಳಿಸಿಕೊಂಡರು. ದಾಖಲೆಗಳ ಪ್ರಕಾರ ಬಹುತೇಕ ಕೊಡಗರು ಬ್ರಿಟಿಷರ ಪರವಿದ್ದುದರಿಂದ ರೈತ ಸಂಗ್ರಾಮ ಹತ್ತಿಕ್ಕಲ್ಪಟ್ಟಿತು. ರೈತ ಸಂಗ್ರಾಮದ ನೇತೃತ್ವ ವಹಿಸಿದ ಕಲ್ಯಾಣಸ್ವಾಮಿ, ಲಕ್ಷ ್ಮಪ್ಪ ಬಂಗರಸ ಮತ್ತು ಗುಡ್ಡೆಮನೆ ಅಪ್ಪಯ್ಯರನ್ನು ಸಾರ್ವಜನಿಕವಾಗಿ ತೂಗುಹಾಕಿ ಕೊಂದರು. ಕೆದಂಬಾಡಿ ರಾಮಗೌಡ ಮತ್ತು ಹುಲಿಕಡಿದ ನಂಜಯ್ಯರಿಗೆ ಜೀವಾವದಿ ಶಿಕ್ಷೆಯಾಯಿತು. ಆದರೆ ದಂಗೆಯನ್ನು ಅಡಗಿಸಲು ನೆರವಾದ ಕೊಡಗ ಕುಟುಂಬಗಳಿಗೆ ಹಣ, ಚಿನ್ನದ ಬಳೆ, ಯಥೇಚ್ಛ ಭೂಮಿ ದೊರೆಯಿತು. ಸ್ವಾತಂತ್ರಕ್ಕಾಗಿ ಬಲಿದಾನ ಗೈದವರು ಅಪರಾದಿಗಳಾಗಿ ಬಿಟ್ಟರು!

ಸಂಗ್ರಾಮದ ಪ್ರಮುಖ ನಾಯಕರಾದ ಗುಡ್ಡೆಮನೆ ಅಪ್ಪಯ್ಯ ಮತ್ತು ಕೆದಂಬಾಡಿ ರಾಮಗೌಡ ಒಕ್ಕಲಿಗ ಸಮುದಾಯದವರು. ಸಂಗ್ರಾಮವನ್ನು ಹತ್ತಿಕ್ಕಲು ನೆರವಾದ ಅಪ್ಪಾರಂಡ ಬೋಪು ಮತ್ತು ಚೆಪ್ಪುಡೀರ ಪೊನ್ನಪ್ಪ ಕೊಡವ ಸಮುದಾಯಕ್ಕೆ ಸೇರಿದವರು. ಎರಡೂ ಸಮುದಾಯ ಅಂದೇ ಕೈ ಜೋಡಿಸುತ್ತಿದ್ದರೆ ಇಂಗ್ಲಿಷರು ಕೊಡಗಿಗೆ ಕಾಲಿಡಲು ಸಾಧ್ಯವಿರಲಿಲ್ಲ. ಬ್ರಿಟಿಷರ ಸಾಮೋಪಾಯಕ್ಕೆ ಬಲಿಯಾದ ಕೊಡವರು ಒಂದು ಐತಿಹಾಸಿಕ ಅವಕಾಶವನ್ನು ಕಳಕೊಂಡು ಬ್ರಿಟಿಷರ ದಾಸ್ಯವನ್ನು ಒಪ್ಪಿಕೊಳ್ಳುವಂತಾಯಿತು. ಸ್ವಾತಂತ್ರ ್ಯ ಸಿಕ್ಕಿದ ಬಳಿಕವೂ ಗೌಡ-ಕೊಡವ ಸಮುದಾಯಗಳು ಒಂದಾಗಬಹುದಿತ್ತು. ದುರಂತಕ್ಕೆ ಅವು ಒಂದಾಗಲಿಲ್ಲ. ಜನರಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯರಿಗೆ ಸಿಕ್ಕಷ್ಟಾದರೂ ಗೌರವ ಗುಡ್ಡೆಮನೆ ಅಪ್ಪಯ್ಯ ಮತ್ತು ಕೆದಂಬಾಡಿ ರಾಮಗೌಡರಿಗೆ ಸಿಗಬೇಕಿತ್ತು. ಆದರೆ ಸಿಗಲಿಲ್ಲ. ಮಡಿಕೇರಿ ಪುರಸಭೆ ಒಂದು ಬೀದಿಗೆ ಗುಡ್ಡೆಮನೆ ಅಪ್ಪಯ್ಯನ ಹೆಸರಿರಿಸಿತು. ಕೆದಂಬಾಡಿ ರಾಮಗೌಡನಿಗೆ, ಕಲ್ಯಾಣಸ್ವಾಮಿಗೆ, ಲಕ್ಷ ್ಮಪ್ಪ ಬಂಗರಸನಿಗೆ ಆ ಭಾಗ್ಯವೂ ಇರಲಿಲ್ಲ. ಇವರ ವಂಶೀಯರೂ ತಮ್ಮ ಹಿರಿಯರ ಬಲಿ ದಾನದ ನೆನಪಿಗೆ ಸ್ಮಾರಕ ನಿರ್ಮಿಸಲು ಸರಕಾರವನ್ನು ಕೇಳಿಕೊಳ್ಳಲಿಲ್ಲ. ಕರ್ನಾಟಕದ ಇತಿಹಾಸದ ಒಂದು ಉಜ್ವಲ ಅಧ್ಯಾಯ ಸತ್ಯದ ಬೆಳಕಿಗೆ ತೆರೆದುಕೊಳ್ಳಲಿಲ್ಲ. ಬಂಟವಾಳ ಕಡೆಯ ವರ್ತಕರು ಮತ್ತು ಭೂಮಾಲಿಕರು ಪ್ರಚಾರ ಪಡಿಸುತ್ತಿದ್ದ ದರೋಡೆಯ ಕಟ್ಟುಕತೆಯನ್ನು ಇತಿಹಾಸವೆಂದು ನಂಬಿ ಇತಿಹಾಸಕಾರರೂ ಸತ್ಯಶೋಧನೆಗೆ ಹೊರಡಲಿಲ್ಲ.

ಕೊಡಗನ್ನು ಕರ್ನಾಟಕದಲ್ಲಿ ಉಳಿಸಬೇಕೆಂಬ ಹೋರಾಟದ ನೇತೃತ್ವ ವಹಿಸಿದ್ದ ದೇವಿಪ್ರಸಾದರು ಕೊಡಗಿನ ಇತಿಹಾಸದ ಆಳ ಅಧ್ಯಯನ ನಡೆಸಿದರು. 1837ರ ರೈತ ಸಂಗ್ರಾಮದ ದಾಖಲೆಗಳನ್ನು ಮದರಾಸು ಪತ್ರಗಾರದಿಂದ ತರಿಸಿಕೊಂಡರು. ನಡಿಕೇರಿಯಂಡ ಚಿಣ್ಣಪ್ಪನವರ ಪಟ್ಟೋಳೆ ಪಳಮೆ ಕೃತಿಯಲ್ಲಿ ಬ್ರಿಟಿಷರ ಪರ ನಿಂತು ರೈತ ಸಂಗ್ರಾಮವನ್ನು ಬಗ್ಗುಬಡಿದು ಬ್ರಿಟಿಷರಿಂದ ಪ್ರಶಸ್ತಿ ಪುರಸ್ಕಾರ ಪಡೆದವರ ವಿವರಗಳಿದ್ದವು. ರೈತ ಸಂಗ್ರಾಮದ ನಾಯಕರನ್ನು ದರೋಡೆಕೋರರೆಂದು ಕಳಂಕಿತರನ್ನಾಗಿ ಮಾಡಿದ ಬ್ರಿಟಿಷ್ ವಸಾಹತುಶಾಹಿಯ ಹುನ್ನಾರ ಸ್ಪಷ್ಟವಾಗಿ ಅರ್ಥವಾಗಲು ಮದರಾಸು ಪತ್ರಗಾರದ ದಾಖಲೆಗಳು ನೆರವಾದವು.

1998 ಭಾರತದ ಸುವರ್ಣ ಸ್ವಾತಂತ್ರೊತ್ಸವ ವರ್ಷ. ಇದು 1837ರ ಬಲಿದಾನಿಗಳ ಬಗ್ಗೆ ಜಾಗೃತಿ ಮೂಡಿಸಲು ಸಕಾಲವೆಂದು ಮನಗಂಡ ದೇವಿಪ್ರಸಾದರ ಪ್ರಯತ್ನದ ಫಲವಾಗಿ ಅಮರಕ್ರಾಂತಿ ಉತ್ಸವ ಸಮಿತಿಯ ಜನನವಾಯಿತು. ದೇವಿಪ್ರಸಾದ್, ಕುಕ್ಕೇಟಿ ಮಾಧವ, ಪ್ರಭಾಕರ ಶಿಶಿಲ, ಎಂ.ಬಿ. ಸದಾಶಿವ, ಜನಾರ್ದನ ಕಣಕ್ಕೂರು, ಜೀವನರಾಂ, ಜವರೇಗೌಡ, ಶಿವಣ್ಣ ನೆಲಮನೆ, ಶೈಲಿ ಪ್ರಭಾಕರ್, ಹರಿಣಿ ಸದಾಶಿವ – ಮುಂತಾದವರು ವಿವಿಧ ಉಪಸಮಿತಿಗಳಲ್ಲಿ ದುಡಿದು ಕಾರ್ಯ ಯೋಜನೆಯೊಂದನ್ನು ರೂಪಿಸಿದರು. ಕೋಡಿ ಕುಶಾಲಪ್ಪ ಗೌಡ, ಟಿ.ಜಿ. ಮುಡೂರು, ತುದಿಯಡ್ಕ ವಿಷ್ಣವಯ್ಯ ಮೊದಲಾದವರು ಹಿರಿಯ ಸಲಹಾಗಾರರಾಗಿದ್ದರು. ಆದರೆ ಕೇವಲ ಗೋಷ್ಠಿ ಮತ್ತು ವಿಚಾರ ಸಂಕಿರಣಗಳಿಂದ 1837ರ ಸಂಗ್ರಾಮದ ನೈಜತೆ  ಜನರನ್ನು ಮುಟ್ಟಲು ಸಾಧ್ಯವಿರಲಿಲ್ಲ. ಅದಕ್ಕಾಗಿ ಪಾದಯಾತ್ರೆ, ಬೀದಿನಾಟಕ ಹಮ್ಮಿಕೊಳ್ಳಬೇಕಿತ್ತು. 1837ರ ರೈತ ಸಂಗ್ರಾಮದ ಧುರೀಣರು ಮಾರ್ಚ್ 30ರಂದು ಬೆಳ್ಳಾರೆಯನ್ನು ವಶಪಡಿಸಿ, ಪುತ್ತೂರು, ನಂದಾವರ, ಅರ್ಕುಳಕ್ಕಾಗಿ ಎಪ್ರಿಲ್ 5ರಂದು ಮಂಗಳೂರಿಗೆ ತಲುಪಿ ಬಾವುಟ ಗುಡ್ಡೆಯಲ್ಲಿ ಕೊಡಗಿನ ಅರಸರ ಧ್ವಜ ಹಾರಿಸಿದ್ದರು. ನಾವೂ ಹಾಗೆ ಮಾಡಬೇಕಿತ್ತು. ಪ್ರದರ್ಶನಕ್ಕಾಗಿ ಅಮರಕ್ರಾಂತಿ ವೀರರು ಎಂಬ ಬೀದಿ ನಾಟಕವನ್ನು ಮತ್ತು ಒಂದು ಲಾವಣಿಯನ್ನು ರಚಿಸಬೇಕಾಯಿತು. ಜೀವನರಾಂ ಅದನ್ನು ಒಂದು ಕಲಾಕೃತಿಯಾಗಿ ಪ್ರದರ್ಶನಕ್ಕೆ ಒಂದೇ ದಿನದಲ್ಲಿ ಸಿದ್ಧಗೊಳಿಸಿ ಬಿಟ್ಟರು. ಅದರೊಂದಿಗೆ ಜೀವನರಾಂ, ಗೀತಾ ಮುಳ್ಯ, ಪದ್ಮಾ ಕೊಡಗು, ಕಣಕ್ಕೂರು, ಅಜಯ, ಆರತಿ, ಸಂಜೀವ ಕುದ್ಪಾಜೆ ಮುಂತಾದವರು ದೊಡ್ಡ ಬೀದಿ ಕಲಾವಿದರಾಗಿ ಬಿಟ್ಟರು.

ಆದರೆ ಸುಳ್ಯದಿಂದ ಮಂಗಳೂರಿಗೆ ನಡಕೊಂಡು ಹೋಗಲು ತಂಡವೊಂದನ್ನು ಸಿದ್ಧಪಡಿಸುವುದು ಸುಲಭದ ಮಾತಾಗಿರಲಿಲ್ಲ. ಅದರ ಬಗ್ಗೆ ದೇವಿಪ್ರಸಾದ್ ಹೀಗೆ ಬರೆದಿದ್ದರು : “ಸುಳ್ಯದಿಂದ ಮಂಗಳೂರಿಗೆ ಕಾಲ್ನಡಿಗೆ ಜಾಥಾ ಅಂದ ತಕ್ಷಣ ಬಹಳಷ್ಟು ಜನ ನಮ್ಮಿಂದ ದೂರ ಹೋದರು. ಡಾ. ಶಿಶಿಲರ ಈ ಸಲಹೆಯನ್ನು ಕಾರ್ಯಗತಗೊಳಿಸುವುದು ಅಷ್ಟು ಸುಲಭ ಇರಲಿಲ್ಲ. ಎಪ್ರಿಲ್ ತಿಂಗಳಲ್ಲಿ ಸುಡುಬಿಸಿಲು. ಶಾಲಾ ಮಕ್ಕಳಿಗೆ ರಜೆ. ಅಧ್ಯಾಪಕರಿಗೆ ಮೌಲ್ಯಮಾಪನ. ಏನೇನೋ ತೊಡಕು ತೊಂದರೆಗಳು. ಒಟ್ಟಿನಲ್ಲಿ ಮುಂದಿನ ಭವಿಷ್ಯ ಕರಾಳವಾಗಿ ನಮ್ಮ ಮುಂದೆ ನಿಂತಿತ್ತು…. ಕಾಲ್ನಡಿಗೆ ಜಾಥಾ ಸೋತು ನೆಲಕಚ್ಚುವ ಸ್ಥಿತಿಯಲ್ಲಿದ್ದಾಗ ಶಿಶಿಲರು ಅದನ್ನೊಂದು ಪಂಥಾಹ್ವಾನವನ್ನಾಗಿ ಸ್ವೀಕರಿಸಿದರು. ಕೊನೆ ಹಂತದಲ್ಲಿ ದೊರೆತ ಅವರ ಅರ್ಧಾಂಗಿ ಶ್ರೀಮತಿ ಶೈಲಿ ಪ್ರಭಾಕರರ ನೆರವು ಮರೆಯುವಂತದ್ದಲ್ಲ. ಅವರು ರೋಟರಿ ಅಧ್ಯಾಪಕಿಯಾಗಿದ್ದು ಜಾಥದಲ್ಲಿ ನಮ್ಮೊಂದಿಗೆ ಸ್ಕೌಟು ಮತ್ತು ಗೈಡ್ಸ್ ಸದಸ್ಯರು ನಡೆಯಲು ಪ್ರೇರಣೆ ನೀಡಿದರು. ಶಿಶಿಲರ ಇಡೀ ಸಂಸಾರ ಅಂದರೆ ಶಿಶಿಲರು, ಅವರ ಪತ್ನಿ ಶೈಲಿ, ಮಗ ಪೃಥ್ವಿಸಾಗರ್ ಮತ್ತು ಮಗಳು ಪ್ರತೀಕ್ಷಾ ಏಳು ದಿನ ಕಾಲ್ನಡಿಗೆ ಜಾಥಾದಲ್ಲಿ ಸುಳ್ಯದಿಂದ ಮಂಗಳೂರುವರೆಗೂ ನಡೆದರು.” (ಹೆಜ್ಜೆ 2003, ಪುಟ 68)

ಕಾಲ್ನಡಿಗೆ ಜಾಥಾ ಒಂದು ಅಭೂತಪೂರ್ವ ಐತಿಹಾಸಿಕ ಘಟನೆಯಾಯಿತು. ಬೆಳ್ಳಾರೆಯಲ್ಲಿ ಜಯಸೂರ್ಯ ರೈ, ರಾಜೀವಿ ರೈ, ವಸಂತ ಕುಮಾರ್ ಮತ್ತು ಜೇಸೀ ಬಳಗ, ಪುರಂದರ ರೈ ನೇತೃತ್ವದ ಕುಂಬ್ರ ಜೇಸೀ ಬಳಗ, ಪುತ್ತೂರಲ್ಲಿ ಬೋಳಂತಕೋಡಿ ಈಶ್ವರ ಭಟ್ ಮತ್ತು ಜೇಸಿ ಬಳಗ, ಮಾಣಿಯಲ್ಲಿ ಲೋಕೇಶ ಪೆರ್ಗಡೆಯವರ ನೇತೃತ್ವದ ಜೇಸಿ ಬಳಗ, ನಂದಾವರದಲ್ಲಿ ಎ.ಸಿ. ಪೂಂಜ, ಬಿ.ಸಿ. ರೋಡಲ್ಲಿ ಪದ್ಮರಾಜ ಕರ್ಕೇರ, ಫರಂಗಿ ಪೇಟೆಯಲ್ಲಿ ಕೃಷ್ಣಕುಮಾರ್ ಪೂಂಜ ಮತ್ತು ಮಂಜು, ಮಂಗಳೂರಲ್ಲಿ ಒಕ್ಕಲಿಗರ ಸಂಘದ ಪದಾದಿಕಾರಿಗಳು, ಪ್ರಾಚಾರ್ಯ ಪ್ರಶಾಂತ್ ಮಾಡ್ತಾ, ನಾದಾ ಶೆಟ್ಟಿ – ಮುಂತಾದವರು ನೀಡಿದ ಸಹಕಾರದಿಂದ ಜಾಥಾ ಯಶಸ್ವಿಯಾಯಿತು. ಎಪ್ರಿಲ್ 5ರಂದು ಸಂತ ಎಲೋಶಿಯಸ್ ಕಾಲೇಜು ಆವರಣದಲ್ಲಿ ದೇವಿಪ್ರಸಾದರು ಕೊಡಗು ರಾಜನ ಧ್ವಜಾರೋಹಣ ಮಾಡಿದರು. ಅಂದಿನ ಸಮಾರಂಭದಲ್ಲಿ ವೀರಪ್ಪ ಮೊಯ್ಲಿ, ಬ್ಲೇಸಿಯಸ್ ಡಿಸೋಜಾ, ಬಿ.ಎ. ಮೊಯ್ದಿನ್, ಅಮ್ಮೆಂಬಳ ಬಾಳಪ್ಪ, ಸಂಜೀವನಾಥ ಐಕಳ, ಅಭಯಚಂದ್ರ, ಕುಂಬಳೆ ಸುಂದರರಾವ್, ಯೋಗೀಶ ಭಟ್ – ಮುಂತಾದವರು ಪಾಲ್ಗೊಂಡಿದ್ದರು. 1837ರ ಹೋರಾಟಗಾರರಿಗೆ ಸ್ಮಾರಕ ನಿರ್ಮಾಣ, ಒಂದು ಅಧ್ಯಯನ ಪೀಠ ರಚನೆ ಮತ್ತು ಪ್ರತಿವರ್ಷ ಅಬ್ಬಕ್ಕ ರಾಣಿ ಉತ್ಸವದ ಮಾದರಿಯಲ್ಲಿ ಅಮರಕ್ರಾಂತಿ ಉತ್ಸವ ನಡೆಸುವ ಭರವಸೆಗಳು ಧಾರಾಳವಾಗಿ ದೊರೆತವು. ಆದರೇನು ಮಾಡುವುದು? ನಮ್ಮನ್ನು ಆಳುವವರು ವರ್ತಮಾನದ ಬಗ್ಗೆ ಮಾತ್ರ ಯೋಚಿಸುವವರು. ನಮ್ಮ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿ ಹೋದವು.

ಒಂದು ಹನಿ ಮಸಿ ಕೋಟಿ ಜನಕ್ಕೆ ಬಿಸಿ

ಕಾಲ್ನಡಿಗೆ ಜಾಥಾ ಪುತ್ತೂರು ತಲುಪಿದಂದು ಕನ್ನಡ ಸಂಘದ ಅಧ್ಯಕ್ಷ ಬೋಳಂತ ಕೋಡಿ ಈಶ್ವರ ಭಟ್ಟರು “1837ರ ಹೋರಾಟದ ವಿವರಗಳನ್ನು ಗ್ರಂಥ ರೂಪದಲ್ಲಿ ಪ್ರಕಟಿಸಬೇಕು. ಆಗ ಮಾತ್ರ ಸತ್ಯ ಜನರಿಗೆ ತಿಳಿಯಲು ಸಾಧ್ಯ” ಎಂದಿದ್ದರು. ಈಗಾಗಲೇ ಮದರಾಸು ಪತ್ರಾಗಾರದಿಂದ ತರಿಸಿದ್ದ ಮಾಹಿತಿಗಳನ್ನು ಮತ್ತು ವರದಿಗಳನ್ನು ಹಾಗೂ ತಾವು ಕಲೆಹಾಕಿದ್ದ ಮಾಹಿತಿಗಳನ್ನು ಸೇರಿಸಿ ದೇವಿಪ್ರಸಾದರು ಅಮರ ಸುಳ್ಯದ ಸ್ವಾತಂತ್ರ ಸಮರ ಎಂಬ ಕೃತಿಂಯೊಂದನ್ನು ರಚಿಸಿದರು. ಅದನ್ನು ಬೋಳಂತಕೋಡಿಯವರ ನೇತೃತ್ವದ ಪುತ್ತೂರು ಕರ್ನಾಟಕ ಸಂಘ ಪ್ರಕಟಿಸಿತು. 1999ರ ಜೂನ್ 15ರಂದು ಪುತ್ತೂರಲ್ಲಿ ಜರಗಿದ ನಿರಂಜನರ ಎಪ್ಪತ್ತೈದನೇ ವರ್ಷದ ಜಯಂತಿ ಕಾರ್ಯಕ್ರಮದಲ್ಲಿ ಈ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಸ್ವಾಮಿ ಅಪರಂಪರ ಮತ್ತು ಕಲ್ಯಾಣ ಸ್ವಾಮಿ ಕಾದಂಬರಿಗಳ ಮೂಲಕ 1834ರಿಂದ 1837ರ ವರೆಗಿನ ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಪ್ರತಿಭಟನೆಗಳನ್ನು ಸಾಹಿತ್ಯಿಕವಾಗಿ ಚಿತ್ರಿಸಿದ ನಿರಂಜನರಿಗೆ ಅದು ಯುಕ್ತವಾದ ಶ್ರದ್ಧಾಂಜಲಿಯಾಗಿತ್ತು. ಆ ಕೃತಿಯಲ್ಲಿ ‘ಅಮರಕ್ರಾಂತಿ ವೀರರು’ ಬೀದಿ ನಾಟಕದೊಡನೆ ಲಾವಣಿಯನ್ನೂ ಸೇರಿಸಲಾಗಿತ್ತು. ನಾಟಕ ಮತ್ತು ಲಾವಣಿ ಕೆಲವು ಸ್ಪರ್ಧೆಗಳಲ್ಲಿ ಬಳಕೆಯಾಗಿ ವಿದ್ಯಾರ್ಥಿ ವಲಯಗಳಲ್ಲಿ ಜನಪ್ರಿಯವಾಗಿ ಬಿಟ್ಟಿತು.

ದೇವಿಪ್ರಸಾದರ ಅಮರಸುಳ್ಯದ ಸ್ವಾತಂತ್ರ ್ಯ ಸಮರ ಕೃತಿಗೆ ತುಂಬಾ ಮೆಚ್ಚುಗೆ ವ್ಯಕ್ತವಾಯಿತು. “ಈ ಐತಿಹಾಸಿಕ ಮಹತ್ವವುಳ್ಳ ಸ್ವಾತಂತ್ರ ್ಯ ಸಮರೇತಿಹಾಸ, ವಿವಿಧ ಸಂಶೋಧನಾ ಲೇಖನಗಳಿಂದ, ಹಿಂದಿನ ದಾಖಲೆಗಳಿಂದ ಸಾರಾಂಶ ರೂಪದಲ್ಲಿ ಹೀಗೆ ಪ್ರಕಟವಾಗುತ್ತಿರುವುದು ಇದೇ ಪ್ರಥಮ. ಇಂತಹ ಸಾಹಸ ಕಾರ್ಯಕ್ಕೆ ಆಸಕ್ತಿ ವಹಿಸಿದ ಶ್ರೀ ದೇವಿಪ್ರಸಾದರೇ ಮೊದಲಾದ ದೇಶಾಬಿಮಾನಿಗಳ ಈ ಸತ್ಕಾರ್ಯ ಪ್ರಶಂಸನೀಯ” ಎಂದು ಸ್ವಾತಂತ್ರಯೋಧ ಕವಿ ಕಿಂಞಣ್ಣ ರೈ ಯವರು ಪ್ರತಿಕ್ರಿಯಿಸಿದರು.

“ಸಂಪಾಜೆಯ ಗಣ್ಯ ಜನಪ್ರಿಯ ನಾಯಕರೂ, ಸ್ವತಃ ಕಲಾವಿದರೂ, ದೂರ ದೃಷ್ಟಿಕೋನದ ವಿಚಾರಶೀಲರೂ ಆದ ದೇವಿಪ್ರಸಾದರು ಬ್ರಿಟಿಷ್ ಚರಿತ್ರಕಾರರು ಭಾರತದ ಚರಿತ್ರೆಯನ್ನು ಹೇಗೆ ತಮಗೆ ಅನುಕೂಲವಾಗುವಂತೆ ಬರೆದು ಭಾರತೀಯರಿಗೆ ಅನ್ಯಾಯವುಂಟು ಮಾಡಿದರು ಎಂಬಂಶವನ್ನು ಚಿತ್ತ ಬಿತ್ತಿಯಲ್ಲಿ ಬಿಂಬಿಸುವಂತೆ ಕೆತ್ತಿದ್ದಾರೆ. ರೋಮಾಂಚಕ ಸ್ವಾತಂತ್ಯ್ರ ಹೋರಾಟದ ಇತಿಹಾಸವನ್ನು ತಮ್ಮ ಪುಸ್ತಕದಲ್ಲಿ ದೇವಿಪ್ರಸಾದರು ದಾಖಲೆಗಳು, ಬ್ರಿಟಿಷ್ ಅದಿಕಾರಿಗಳ ವರದಿಗಳು, ದಂಗೆಯ ಹಿನ್ನೆಲೆಯ ದೃಡೀಕೃತ ಅಂಕಿ ಅಂಶಗಳು, ವಿವಿಧ ಪರಿಶಿಷ್ಟಗಳು ಮುಂತಾದ ವಾಸ್ತವ ವೈಶಿಷ್ಟ ್ಯಗಳೊಂದಿಗೆ ವಿವರಿಸಿರುವುದು ನಿಜಕ್ಕೂ ಆಕರ್ಷಣೀಯವಾಗಿದೆ” ಎಂದು ಪ್ರೊ. ವಿ.ಎಸ್. ರಾಮಕೃಷ್ಣರು ಕೊಡಗು ಸಮಾಚಾರದಲ್ಲಿ ವಿಮರ್ಶಿಸಿದರು.

ಕೃತಿಯ ಉದ್ದೇಶವನ್ನು ಪೂಜಾರಿ ಮೊಣ್ಣಪ್ಪನವರು ಹೀಗೆ ಪ್ರಸ್ತುತ ಪಡಿಸಿದ್ದಾರೆ : “ದೇವಿಪ್ರಸಾದರು ಈ ಕೃತಿ ರಚನೆಗೆ ಹೊರಟದ್ದೇಕೆ? ಈ ಪ್ರಶ್ನೆಗೆ ಅವರ ಕೃತಿಯಲ್ಲೇ ಸಮಾಧಾನವಿದೆ. ಬ್ರಿಟಿಷರು ಅಮರಸುಳ್ಯದ ಸ್ವಾತಂತ್ಯ್ರ ಹೋರಾಟಗಾರರನ್ನು ದರೋಡೆ ಕೋರರೆಂಬಂತೆ ಚಿತ್ರಿಸಿ ಹುತಾತ್ಮರನ್ನು ಅವಹೇಳನ ಮಾಡಿದ್ದು ಅವರಿಗೆ ಸಹಿಸಲಸಾಧ್ಯವಾದ ನೋವಾಗಿತ್ತು. ಈಗಿನ ಕೆಲವು ಅರೆಬರೆ ಶಿಕ್ಷಿತರೂ ಕೂಡಾ ಕಲ್ಯಾಣಪ್ಪ ಮತ್ತವನ ಕಡೆಯವರನ್ನು ದರೋಡೆಕೋರರೆಂದೇ ಚಿತ್ರಿಸುತ್ತಿರುವ ಐತಿಹಾಸಿಕ ಅಪಚಾರವನ್ನು ಸರಿಪಡಿಸಲೆಂದೇ ಇತಿಹಾಸದಲ್ಲಿ ಎಲ್ಲೋ ಕಳೆದುಹೋಗಿದ್ದ ಸುಳ್ಯ ದಂಗೆಯ ಬಗ್ಗೆ ಬ್ರಿಟಿಷರಿಂದಲೇ ರಚಿತವಾದ ಕಡತ ಮತ್ತು ವರದಿಗಳನ್ನು ಹೊರಗೆಳೆದು, ಅಮರಸುಳ್ಯ ದಂಗೆಯ ಹುತಾತ್ಮರಿಗೆ ಅಷ್ಟರ ಮಟ್ಟಿನ ನ್ಯಾಯ ಒದಗಿಸಿದರು. ಇನ್ನದನ್ನು ಮುಂದುವರಿಸಿ ಮಡಿಕೇರಿ, ಬೆಳ್ಳಾರೆ, ಮಂಗಳೂರುಗಳಲ್ಲಿ ಸ್ಮಾರಕ ನಿರ್ಮಿಸುವುದು ನಾಡಿನ ಎಲ್ಲಾ ಜನರ ಕರ್ತವ್ಯವಾಗಿದೆ.’’

ಆದರೆ ಕೊಡಗಿನಲ್ಲಿ ಆ ಕೃತಿ ತೀವ್ರ ಸಂಚಲನವನ್ನುಂಟು ಮಾಡಿತು. ಪಟ್ಟೋಳೆ ಪಳಮೆಯಲ್ಲಿದ್ದ, ಬ್ರಿಟಿಷ್ ಪರ ನಿಂತು ರೈತ ಬಂಡಾಯವನ್ನು ಬಗ್ಗುಬಡಿದ ಕೊಡವರ ಹೆಸರುಗಳನ್ನು ಯಥಾವತ್ತಾಗಿ ದೇವಿಪ್ರಸಾದರು ತಮ್ಮ ಕೃತಿಯಲ್ಲಿ ಪ್ರಕಟಿಸಿದ್ದರು! ಅದು ಉಂಟುಮಾಡಿದ ಸಂಚಲನದ ಬಗ್ಗೆ ಟಿ.ಕೆ. ತ್ಯಾಗರಾಜ್ ಲಂಕೇಶ್ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟಿಸಿದರು : “ಮೂರು ದಾರಿಗಳು ಚಿತ್ರದ ನಿರ್ಮಾಪಕರಾದ ದೇವಿಪ್ರಸಾದ್ ಸದಬಿರುಚಿಯ ವ್ಯಕ್ತಿ. ರಂಗಭೂಮಿ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡವರು. ಕೊಡಗಿನ ಸಂಪಾಜೆಯಲ್ಲಿ ನೆಲೆಸಿರುವ ಅವರು ರಚಿಸಿರುವ ಅಮರಸುಳ್ಯದ ಸ್ವಾತಂತ್ಯ್ರ  ಸಮರ ಎಂಬ ಕೃತಿಯು ಕೊಡವರ ಕೋಪವನ್ನು ಎದುರಿಸುತ್ತಿದೆ. ಸ್ವಾತಂತ್ಯ್ರ ಸಂಗ್ರಾಮದಲ್ಲಿ ಭಾಗವಹಿಸಿದ್ದ ಅಪ್ಪಯ್ಯ ಗೌಡರನ್ನು 1837ರಲ್ಲಿ ಗಲ್ಲಿಗೆ ಏರಿಸಿದ್ದರೂ ಈವರೆಗೆ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಿಲ್ಲ ಎಂದು ದೇವಿಪ್ರಸಾದ್ ಬರೆದಿರುವುದು, ದಾಖಲೆಯೊಂದನ್ನು ಆಧರಿಸಿ ಬ್ರಿಟಿಷರಿಗೆ ಸಹಾಯ ಮಾಡಿದ ಮೂವತ್ತನಾಲ್ಕು ಮಂದಿಯ ಹೆಸರನ್ನು (ಮೂವತ್ತೆರಡು ಮಂದಿ ಕೊಡವರೇ) ಉಲ್ಲೇಖಿಸಿರುವುದು ಕೆಲವರ ಒದ್ದಾಟಕ್ಕೆ ಕಾರಣವಾಗಿದೆ. ಮೂವತ್ತೆರಡು ಮಂದಿ ಕೊಡವರ ಮನೆ ಹೆಸರನ್ನೂ ಕೊಟ್ಟಿರುವುದು ಕೊಡವರ ಕೋಪಕ್ಕೆ ಮುಖ್ಯ ಕಾರಣ. ಬ್ರಿಟಿಷರಿಗೆ ಸಹಾಯ ಮಾಡಿದವರ ಹೆಸರನ್ನು ದಾಖಲೆ ಸಹಿತ ಬರೆದಾಗ ಕೋಪಿಸಿಕೊಳ್ಳುವ ಅಗತ್ಯವಾದರೂ ಏನು?’’ ಕೊಡವರ ಬೈಬಲ್ಲು ಎಂದು ಪರಿಗಣಿತವಾಗಿದ್ದ ಪಟ್ಟೋಳೆ ಪಳಮೆಯಲ್ಲೇ ಈ ಹೆಸರಿರುವುದನ್ನು ನೋಡಿದ ಬಳಿಕ ದೇವಿಪ್ರಸಾದರ ಕೃತಿಯನ್ನು ಬಹಿಷ್ಕರಿಸಬೇಕು ಎಂಬ ಕೂಗು ಅಡಗಿತು. ಏಕೆಂದರೆ ಪ್ರತಿಭಟನಾಕಾರರು ಅದಕ್ಕೂ ಮುನ್ನ ಪಟ್ಟೋಳೆ ಪಳಮೆಯನ್ನು ಬಹಿಷ್ಕರಿಸಬೇಕಾಗುತ್ತಿತ್ತು! ಬ್ರಿಟಿಷರ ಪರವಾಗಿ ನಿಂತದ್ದು ತಾವಲ್ಲ; ತಮ್ಮ ಹಿರಿಯರು. ಅದಕ್ಕೆ ಆಗಿನ ಸಮಯ ಸಂದರ್ಭಗಳು ಕಾರಣವಾಗಿರಬಹುದು ಎಂಬ ಸರಳ ಸತ್ಯದ ಅರಿವಾಗಿ ಆ ಕುಟುಂಬ ಗಳು ಪ್ರತಿಭಟನೆ ನಿಲ್ಲಿಸಿದವು. ದೇವಿಪ್ರಸಾದರ ಕೃತಿ ದ್ವಿತೀಯ ಮುದ್ರಣವನ್ನು ಕಂಡಿತು!

ಬೆಳ್ಳಾರೆಯಲ್ಲೊಂದು ಸ್ಮಾರಕಕ್ಕಾಗಿ

1837ರ ರೈತ ಹೋರಾಟಗಾರರನ್ನು ಸರಕಾರ ಗೌರವಿಸುವುದಿಲ್ಲ ಎನ್ನುವುದು ಸ್ಪಷ್ಟವಾದ ಮೇಲೆ ಅಮರಕ್ರಾಂತಿ ಉತ್ಸವ ಸಮಿತಿ 2004ರಲ್ಲಿ ಬೆಳ್ಳಾರೆಯಲ್ಲೊಂದು ಕಾರ್ಯಕ್ರಮ ನಡೆಸಿತು. ಬೆಳ್ಳಾರೆಯು 1834ರ ವರೆಗೆ ಅಮರ, ಸುಳ್ಯ, ಬೆಳ್ಳಾರೆ, ಪಂಜ ಮಾಗಣೆಗಳ ರಾಜಧಾನಿಯಾಗಿತ್ತು. ಬ್ರಿಟಿಷರು ಅಲ್ಲೊಂದು ತಾಲೂಕು ಕಛೇರಿಯನ್ನು ಸ್ಥಾಪಿಸಿದ್ದರು. 1608ರಲ್ಲಿ ಇಕ್ಕೇರಿ ವೆಂಕಟಪ್ಪ ನಾಯಕ ಬೆಳ್ಳಾರೆ ಗುಡೆಯಲ್ಲಿ ಕಟ್ಟಿಸಿದ ಮಣ್ಣಿನ ಕೋಟೆಯ ಅವಶೇಷಗಳು ಈಗಲೂ ಇವೆ. 1837ರ ರೈತ ಕ್ರಾಂತಿ ಆರಂಭವಾದದ್ದು ಬೆಳ್ಳಾರೆ ಕಛೇರಿಯನ್ನು ವಶಪಡಿಸಿಕೊಳ್ಳುವುದರ ಮೂಲಕ. ಸುಳ್ಯದ ರಾಜಧಾನಿಯಾಗಿದ್ದ ಬೆಳ್ಳಾರೆಯಲ್ಲಿ ಐತಿಹಾಸಿಕ ಸ್ಮಾರಕವೊಂದು ರಚನೆಯಾಗಬೇಕೆಂಬ ಉದ್ದೇಶದಿಂದ ಕೋಟೆ ವಸಂತಕುಮಾರ್, ರಾಜೀವಿ ರೈ, ದಯಾಕರ ಆಳ್ವ, ಸುನಿಲ್ ರೈ, ಶ್ರೀರಾಮ ಪಾಟಾಜೆ, ಪನ್ನೆ ಪ್ರದೀಪ್, ಮಾಧವ ಗೌಡ, ಆರ್.ಕೆ. ಬೆಳ್ಳಾರೆ, ವಿಶ್ವನಾಥ ರೈ, ಗಂಗಾಧರ ರೈ, ಚಂದ್ರಹಾಸ ರೈ – ಮುಂತಾದವರನ್ನು ಒಳಗೊಳಿಸಿ ಬೆಳ್ಳಾರೆ ಕೋಟೆ ಸ್ಮಾರಕ ಸಮಿತಿಯನ್ನು ರೂಪಿಸಲಾಯಿತು. ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮಾನಾಥ ರೈಯವರನ್ನು ಕರೆಸಿ ಸುಳ್ಯಕ್ಕೆ ಕೇಂದ್ರವಾಗಿದ್ದ ಬೆಳ್ಳಾರೆಯ ಇತಿಹಾಸವನ್ನು ತಿಳಿಸಿ ಅಲ್ಲೊಂದು ಸ್ಮಾರಕ ನಿರ್ಮಿಸಿ 1837ರ ಹುತಾತ್ಮರಿಗೆ ಗೌರವ ಸಲ್ಲಿಸಲು ಸರಕಾರ ನೆರವಾಗಬೇಕೆಂದು ವಿನಂತಿಸಲಾಯಿತು.

ಈ ನಡುವೆ ಅಮರಕ್ರಾಂತಿ ಮತ್ತು ಕೊಡಗಿನ ಪ್ರತ್ಯೇಕತಾವಾದದ ನಡುವಣ ಸಂಬಂಧವನ್ನು ಸರಕಾರಕ್ಕೆ ತಿಳಿಸಲು ಕೊಡಗು ಪ್ರಜಾವೇದಿಕೆ ನಿರ್ಣಯಿಸಿತು. ದೇವಿಪ್ರಸಾದರು ಕೊಡಗಿನ ಮುಖಂಡರುಗಳೊಡನೆ ನನ್ನನ್ನೂ ಸೇರಿಸಿ ಮುಖ್ಯಮಂತ್ರಿ ಜೆ.ಎಚ್. ಪಟೇಲರಲ್ಲಿಗೆ ಕರೆದೊಯ್ದರು. ಕನ್ನಡ ಶಕ್ತಿ ಕೇಂದ್ರದ ಡಾ. ಎಂ. ಚಿದಾನಂದ ಮೂರ್ತಿಯವರು ಮುಖ್ಯಮಂತ್ರಿಯವರನ್ನು ಕಂಡು ನಮ್ಮ ಭೇಟಿಯ ಸಮಯವನ್ನು ನಿಗದಿ ಮಾಡಿದ್ದರು. ಪಟೇಲರು ನಮಗಿತ್ತ ಅವದಿ ಹತ್ತು ನಿಮಿಷ ಮಾತ್ರ. ನಮ್ಮ ಅಹವಾಲನ್ನು ಮನ್ನಿಸಿದ ಬಳಿಕ ಅವರು 19ನೆ ಶತಮಾನದ ಆದಿಯಲ್ಲಿ ಕರ್ನಾಟಕದಲ್ಲಿ ನಡೆದ ವಿವಿಧ ಬಂಡಾಯಗಳ ಬಗ್ಗೆ ನಮಗೆ ವಿವರಿಸತೊಡಗಿದರು. ಅರ್ಧಗಂಟೆ ಉರುಳಿತು! ಕೊನೆಯಲ್ಲಿ ಅವರು – “ಕೊಡಗು ಕರ್ನಾಟಕದ ಅವಿಭಾಜ್ಯ ಅಂಗ. ಅದನ್ನು ಎಂದಿಗೂ ಪ್ರತ್ಯೇಕವಾಗಲು ಬಿಡುವುದಿಲ್ಲ. ಬೆಳ್ಳಾರೆ ಮತ್ತು ಮಡಿಕೇರಿಗಳಲ್ಲಿ ಬಂಡಾಯಗಾರರ ಸ್ಮಾರಕ ನಿರ್ಮಿಸ ಬೇಕಾದದ್ದು ಸರಿ. ಅದನ್ನು ಬೇಗನೆ ಮಾಡೋಣ. ಮಂಗಳೂರು ವಿ.ವಿ.ಯಲ್ಲಿ ಪೀಠ ಸ್ಥಾಪನೆಗೆ ಯಾರಾದರೂ ದಾನಿಗಳು ಸಿಕ್ಕರೆ ನೋಡಿ. ಅದು ವಿ.ವಿ.ಯ ಸಿಂಡಿಕೇಟ್, ಸೆನೆಟ್ಟಿಗೆ ಸಂಬಂದಿಸಿದ ವಿಷಯ” ಎಂದರು.

ಅದು ಯಾವುದೂ ಕಾರ್ಯರೂಪ ತಾಳಲಿಲ್ಲ. ಆದರೆ ಕಾಲ ಎಲ್ಲಿ ನಿಲ್ಲುತ್ತದೆ? ದೇವಿಪ್ರಸಾದರಿಗೆ ಅರುವತ್ತು ತುಂಬಿತು. ಬಿ.ಎ. ಗಣಪತಿ, ತಿರುಮಲ, ಡಿ.ಎಸ್. ಬಾಲಕೃಷ್ಣ, ಮಹಮ್ಮದ್ ಕುಂಞಿ, ಮೋಹನ್, ಕೇಶವ ಚೌಟಾಜೆ, ಉಮೇಶ ಎಂ.ಪಿ., ಕೆ.ಆರ್. ಗಂಗಾಧರ್, ಗೂನಡ್ಕ ಮಹಮ್ಮದ್ ಕುಂಞಿ, ಮೊದಿನ್ ಕುಂಞಿ, ಜಬ್ಬಾರ ಸಮೋ, ಗೀತಾ ಮೋಹನ್ ಮುಂತಾದವರ ನೇತೃತ್ವದಲ್ಲಿ ದೇವಿಪ್ರಸಾದ ಅಬಿನಂದನ ಸಮಿತಿಂುೊಂದು ರೂಪುಗೊಂಡಿತು. ದೇವಿಪ್ರಸಾದರ ಜೀವನ ಮತ್ತು ಸಾಧನೆಗಳ ಬಗ್ಗೆ ಸಮರಸವೆಂಬ ಅಬಿನಂದನಾ ಕೃತಿಂುೊಂದು ಹೊರಗೆ ಬಂತು. ಅಂದು ದೇವಿಪ್ರಸಾದರನ್ನು ಅಬಿನಂದಿಸಿ ದವರೆಲ್ಲ ಕರ್ನಾಟಕದ ಅಖಂಡತೆಯ ಹರಿಕಾರ ಎಂದು ಶ್ಲಾಘಿಸಿದರು.

ಆ ಬಳಿಕ ಅಬಿನಂದನ ಸಮಿತಿ ಮತ್ತು ಸಂಪಾಜೆ ಗ್ರಾಮ ಪಂಚಾಯತ್ ಪ್ರತಿವರ್ಷ ದೇವಿಪ್ರಸಾದರ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸ್ಸು ಮಾಡುತ್ತಿವೆ. ಇನ್ನೂ ನ್ಯಾಯ ಸಂದಿಲ್ಲ! “ನಾನು ಪ್ರಶಸ್ತಿಗಾಗಿ ಕೆಲಸ ಮಾಡಿದ್ದಲ್ಲ. ಆದರೆ ರಾಜ್ಯದ ಅಖಂಡತೆಗಾಗಿ ದುಡಿಯುವವರನ್ನು ರಾಜ್ಯೋತ್ಸವದಂದೂ ಗೌರವಿಸದಿದ್ದರೆ ವಿಚ್ಛಿದ್ರಕಾರಿ ಶಕ್ತಿಗಳಿಗೆ ಬೆಳೆತು ಬೇರು ಬಿಡಲು ಅವಕಾಶವಾಗುತ್ತದೆ” ಎಂದು ದೇವಿಪ್ರಸಾದ್ ಹೇಳುವಾಗ ಅದರಲ್ಲಿ ತಪ್ಪಿಲ್ಲ ಎನಿಸುತ್ತದೆ.

ಆದರೆ ದೇವಿಪ್ರಸಾದರಲ್ಲೊಂದು ನೋವಿದೆ. ಸುಳ್ಯದ ಜನರು 1837ರ ಅಮರಕ್ರಾಂತಿಯ ನೆನಪನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಸ್ವಾತಂತ್ಯ್ರ  ಸ್ಮಾರಕಗಳನ್ನು ನಿರ್ಮಿಸುತ್ತಾರೆ; ಅಮರಕ್ರಾಂತಿ ಉತ್ಸವವನ್ನು ಪ್ರತಿವರ್ಷ ಒಂದೊಂದು ಊರ ಜನರು ಅರ್ಥಪೂರ್ಣವಾಗಿ ಆಚರಿಸುತ್ತಾರೆ ಮತ್ತು ಅಮರಕ್ರಾಂತಿಯು ಸ್ಥಳೀಯ ಇತಿಹಾಸದ ರೂಪದಲ್ಲಿ ಮಂಗಳೂರು ವಿ.ವಿ.ಯ ಬಿ.ಎ. ತರಗತಿಯ ವಿದ್ಯಾರ್ಥಿಗಳ ಸಿಲೆಬಸ್ಸಲ್ಲಿ ಸೇರ್ಪಡೆಯಾಗುತ್ತದೆಂದು ಅವರು ಭಾವಿಸಿದ್ದರು. ಅಮರಕ್ರಾಂತಿ ಉತ್ಸವ ಸಮಿತಿ ದೇವಿಪ್ರಸಾದರದ್ದು ಮಾತ್ರ ಎಂದು ಜನರು ಅಂದುಕೊಂಡಿದ್ದಾರೆ. ದೇವರು, ಜಾತಿ, ಆರ್ಕೆಸ್ಟ್ರಾ, ಧರ್ಮ, ಮದುವೆಗಳಿಗೆ ಮುಗಿ ಬೀಳುವ ಜನರು ನಮ್ಮ ಇತಿಹಾಸದ ಬಗ್ಗೆ ಯಾಕಿಷ್ಟು ಅಸಡ್ಡೆ ತೋರುತ್ತಾರೆಂದು ನನಗೆ ತಿಳಿಯುತ್ತಿಲ್ಲ ಎಂದು ಸ್ಥಾಯಿಯಾದ ವಿಷಾದ ಭಾವದಲ್ಲಿ ಅವರು ಹೇಳುತ್ತಿರುತ್ತಾರೆ. ಅಮರ ಸುಳ್ಯದ 1837ರ ಸಂಗ್ರಾಮದಲ್ಲಿ ಪಾಲ್ಗೊಂಡ ಕುಟುಂಬಗಳ ಈಗಿನ ಕಿರಿಯರು ತಮ್ಮ ಹಿರಿಯರ ನೆನಪನ್ನು ಉಳಿಸಲು ಏನನ್ನೂ ಮಾಡದಿರುವುದು ಅವರನ್ನು ದಿಗ್ಭ್ರಾಂತಿಗೊಳಿಸಿದೆ.

ಅಮರಕ್ರಾಂತಿ ಜಂಗಲ್ ಪಾರ್ಕ್

70ರ ಗಡಿಗೆ ಹತ್ತಿರವಾಗುತ್ತಿದ್ದರೂ ದೇವಿಪ್ರಸಾದರ ಆವಿಷ್ಕಾರಿಕ ಮನಸ್ಸು ಸುಮ್ಮನಿರುವುದಿಲ್ಲ. ಅವರ ಮನೆಗೆ ಹೋಗುವ ಹಾದಿಯ ಇಕ್ಕೆಲಗಳಲ್ಲಿ ಸಮೃದ್ಧ ಅಡಿಕೆ ಬೆಳೆಯುವ ವಿಶಾಲ ತೋಟವಿತ್ತು. ಹಳದಿ ರೋಗ ಬಂದು ತೋಟ ಸಂಪೂರ್ಣವಾಗಿ ನಿರ್ನಾಮವಾಗಿದೆ. ಆದರೂ ಅಮರಕ್ರಾಂತಿಯನ್ನು ಇಂದಿನ ಪೀಳಿಗೆಗೆ ನೆನಪಿಸುವ ಉದ್ದೇಶದಿಂದ ಅವರು ಅಮರಕ್ರಾಂತಿ ಜಂಗಲ್ಪಾರ್ಕ್ ಅನ್ನು ನಿರ್ಮಿಸಿದ್ದಾರೆ. ಇದಕ್ಕೆ ಮಾರ್ಗದರ್ಶನ ಸುಳ್ಯದ ಪ್ರವಾಸೋದ್ಯಮಿ ಆರ್.ಕೆ. ಭಟ್ಟರದ್ದು. ಅಲ್ಲೊಂದು ಈಜು ಕೊಳವಿದೆ. ನಂಜಯ್ಯರ ಮನೆಯೆಂಬ ಮ್ಯೂಸಿಯಂ ತಲೆ ಎತ್ತಿದೆ. ನೆಟ್ವಾಕ್, ರಿವರ್ ಕ್ರಾಸಿಂಗ್, ಟಾರ್ಜನ್ ಸ್ವಿಂಗ್, ಬರ್ಮಾ ಬ್ರಿಜ್, ಜಂಗಲ್ ವಾಕ್ನಂತಹ ಸಾಹಸ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ಮನರಂಜನೆಗಾಗಿ ವಿಶೇಷ ವ್ಯವಸ್ಥೆಗಳಿವೆ. ಮಕ್ಕಳಿಗೆ ಮನರಂಜನೆ, ಯುವಕ-ಯುವತಿಯರಿಗೆ ಸಾಹಸ ಕ್ರೀಡೆಗಳು, ವಯಸ್ಕರಿಗೆ ಆರೋಗ್ಯ ಸುಧಾರಣೆಯ ತಂತ್ರಗಳು ಮತ್ತು ಜಿಜ್ಞಾಸುಗಳಿಗೆ ಸಮೃದ್ಧ ಗ್ರಂಥಾಲಯ – ಜಂಗಲ್ ಪಾರ್ಕಿನ ಪ್ರಮುಖ ಆಕರ್ಷಣೆಗಳು. 1837ರ ಅಮರಕ್ರಾಂತಿಯನ್ನು ನೆನಪಿಸಲೆಂದು ಇಲ್ಲಿನ ಎಲ್ಲಾ ರಸ್ತೆಗಳಿಗೆ ಹೋರಾಟಗಾರರ ಹೆಸರು ಇರಿಸಲಾಗಿದೆ. ಕಲ್ಯಾಣಸ್ವಾಮಿಯ ಹೆಸರಲ್ಲಿ ಒಂದು ಜಲಪಾತವನ್ನು ಸೃಷ್ಟಿಸಲಾಗಿದೆ. ಅಮರಕ್ರಾಂತಿ ಗ್ರಂಥಾಲಯದಲ್ಲಿನ ಕೊಡಗು – ದ.ಕ. ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂದಿಸಿದ ಕೃತಿಗಳು, 1837ರ ಹೋರಾಟಕ್ಕೆ ಸಂಬಂದಿಸಿದ ಸಂಶೋಧನಾ ಕೃತಿಗಳು, ನಾಟಕ, ಕತೆ, ಕಾದಂಬರಿಗಳು, ದ.ಕ. ಮತ್ತು ಕೊಡಗಿನ ಲೇಖಕರ ಉತ್ಕೃಷ್ಟ ಕೃತಿಗಳು, ಮಕ್ಕಳ ಸಾಹಿತ್ಯ ಮೂಲಿಕೆಗಳು, ವಿಶ್ವಕೋಶ ಮತ್ತು ಜ್ಞಾನಕೋಶಗಳು – ಜಿಜ್ಞಾಸುಗಳ ಜ್ಞಾನದಾಹವನ್ನು ಹಿಂಗಿಸುವ ಪ್ರಯತ್ನ ಮಾಡುತ್ತಿವೆ.

ದೇವಿಪ್ರಸಾದರದು ಸಂತೃಪ್ತ ಎನ್ನಲಾಗದಿದ್ದರೂ ಸಾರ್ಥಕ ಬದುಕು. ಅವರ ಸಹಧರ್ಮಿಣಿ ಇಂದಿರಾ ಪತಿಯ ಮಹತ್ವಾಕಾಂಕ್ಷೆಗೆ ಅಡ್ಡ ಬಂದವರಲ್ಲ. ಮಗ ದೇವಿಚರಣ್ ಮತ್ತು ಸೊಸೆ ಟೀನಾ ದೇವಿಪ್ರಸಾದರ ಎರಡು ಹಸ್ತಗಳಾಗಿ ಅವರ ಉದ್ದೇಶಗಳನ್ನು ಈಡೇರಿಸುವಲ್ಲಿ ಸಹಕಾರಿಗಳಾಗಿದ್ದಾರೆ. ತುಂಬು ಚಟುವಟಿಕೆಯ ಮೊಮ್ಮಗ ಮೌರ್ಯ ಅಮರಕ್ರಾಂತಿ ಜಂಗಲ್ ಪಾರ್ಕಿನಲ್ಲಿರುವ ಮಕ್ಕಳ ಮನರಂಜನಾ ಸೌಲಭ್ಯಗಳಿಗೆ ತನ್ನಿಂದಾದ ನ್ಯಾಯ ಒದಗಿಸುತ್ತಿದ್ದಾನೆ.

ದೇವಿಪ್ರಸಾದರ ಹಾಗೆ ಕಲೆ, ಇತಿಹಾಸ ಮತ್ತು ಸಂಸ್ಕೃತಿ ಉಳಿಸಲು ಪ್ರಾಮಾಣಿಕ ಪ್ರಯತ್ನ ಪಡುವ ಮಂದಿಗಳು ಪ್ರತಿ ಊರಲ್ಲೂ ಇದ್ದರೆ ಭಾರತ ನಿಜಕ್ಕೂ ವಿಶ್ವದ ‘ಸೂಪರ್ ಪವರ್’ ಆಗಲಿದೆ.