ಕೊಡಗು ಪ್ರಜಾವೇದಿಕೆ, ಮಡಿಕೇರಿ

ಕೊಡಗಿನ ಬಹುಸಂಖ್ಯಾತರ ಹಿತಾಸಕ್ತಿಗೆ ವ್ಯತಿರಿಕ್ತವಾದ ಪರ್ಯಾಯ ಆಡಳಿತ ಯಂತ್ರವೊಂದು ಈ ದಿನಗಳಲ್ಲಿ ಕೊಡಗಿನಾದ್ಯಂತ ಕಾರ್ಯ ನಿರ್ವಹಿಸತೊಡಗಿದೆ. ಮೇಲ್ತೋರಿಕೆಗೆ ಪ್ರತ್ಯೇಕ ರಾಜ್ಯವನ್ನು ಸ್ಥಾಪಿಸುವ ಉದ್ದೇಶದಿಂದ ಕೈ ಜೋಡಿಸಿರುವಂತೆ ಕಾಣಿಸುವ ಕೆಲವು ಹತಾಶ ನಿರುದ್ಯೋಗಿಗಳು ಹುಟ್ಟುಹಾಕಿದ ನ್ಯಾಯ ಸಮ್ಮತವಲ್ಲದ ಸಂಘಟನೆಗಳು ಇಂದು ಇದೇ ಜಿಲ್ಲೆಯ ನಾಗರಿಕರನ್ನು ಸುಲಿಗೆ ಮಾಡುವ ಕೆಲಸವನ್ನು ತಮ್ಮ ಹಕ್ಕು ಎಂಬಂತೆ ಚಲಾಯಿಸುತ್ತಿವೆ. ಜಿಲ್ಲೆಯ ಬೆಳೆಗಾರರನ್ನು, ಸರ್ಕಾರಿ ನೌಕರರನ್ನು, ಆಟೋ ಚಾಲಕರನ್ನು, ವಾಹನ ಮಾಲೀಕರನ್ನು ಹೀಗೆ ಅಸಂಖ್ಯ ಜನರನ್ನು ಬಲಾತ್ಕಾರ ಹಾಗೂ ಬ್ಲಾಕ್ಮೈಲ್ ತಂತ್ರಗಳ ಮೂಲಕ ಬಲಿಪಶುಗಳನ್ನಾಗಿಸಿ ತಮ್ಮ ಸುಲಿಗೆಗೆ ಸುಗಮ ದಾರಿ ಮಾಡಿಕೊಂಡಿವೆ. ಈ ತಂತ್ರಗಳ ಮುಖಾಂತರ ಹಲವಾರು ಬೈಕ್ಗಳು ಮತ್ತು ಜೀಪುಗಳು ಸೇರಿದಂತೆ ಅಂದಾಜು ಎರಡು ಕೋಟಿ ರೂಪಾಯಿಗಳನ್ನು ಸಮಾವೇಶಗಳ ಹೆಸರಿನಲ್ಲಿ ಜಮಾಯಿಸಲಾಗಿದೆ. ಸರ್ಕಾರಿ ಬಸ್ಸು ಮತ್ತು ಕಛೇರಿಗಳ ಗೋಡೆಗೆ ಬಣ್ಣದಲ್ಲಿ ಬರೆದಿರುವ ಘೋಷಣೆಗೆ ಖರ್ಚಾಗಿರುವ ಹಣ ಬಿಟ್ಟರೆ, ಉಳಿದೆಲ್ಲವೂ ಈ ತಂಡಗಳ ನೇತಾರರ ಮನೆ ಸೇರಿರುವುದು ಈಗ ಒಂದು ಇತಿಹಾಸ.

ಕೊಲೆ ಮೊಕದ್ದಮೆ ಹಾಗೂ ಕ್ರಿಮಿನಲ್ ಚಟುವಟಿಕೆಗಳಿಗಾಗಿ ನ್ಯಾಯಾಂಗ ವಿಚಾರಣೆಗಳನ್ನು ಎದುರಿಸುತ್ತಿರುವ ಕೆ.ಆರ್.ಎಂ.ಎಂ. ಎಂಬ ಇಂತಹದೊಂದು ಸಂಸ್ಥೆಯ ಸಂಚಾಲಕರೆನಿಸಿಕೊಂಡ ವ್ಯಕ್ತಿಯ ವಿಷಯದಲ್ಲಿ ಕರ್ನಾಟಕದ ಇಂದಿನ ಸರಕಾರ ತೋರುವ ಮೆದು ಧೋರಣೆ ಆತಂಕಕಾರಿ ಹಾಗೂ ಅಚ್ಚರಿಗೆ ಕಾರಣವಾಗುವ ವಿಷಯವಾಗಿದೆ. ಸರಕಾರಿ ಅದಿಕಾರಿಗಳು ಈ ವ್ಯಕ್ತಿಗೆ ಸಹಕರಿಸುತ್ತಿರುವುದು ಈತ ಆಡಳಿತಶಾಹಿಂುೊಳಕ್ಕೆ ಹೇಗೆ ಸಮರ್ಥವಾಗಿ ನುಗ್ಗಬಲ್ಲನೆಂಬುದಕ್ಕೆ ನಿದರ್ಶನ. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂರಾರು ಬಸ್ಗಳಲ್ಲಿ ಎನಾಮೆಲ್ ಪೈಂಟ್ ಬಳಸಿ ಈತ ಬರೆಸಿದ ಉದ್ದುದ್ದವಾದ ರಾಜ್ಯವಿರೋದಿ ಮತ್ತು ಅಖಂಡತಾ – ಐಕ್ಯತಾ ವಿರೋದಿ ಘೋಷಣೆಗಳನ್ನು ಈ ಅದಿಕಾರಿಗಳು, ರಾಜಕಾರಣಿಗಳು ಕಣ್ಣುಮುಚ್ಚಿ ಸಹಿಸಿಕೊಂಡಿದ್ದಾರೆ ಅಥವಾ ಪ್ರೋತ್ಸಾಹಿಸಿದ್ದಾರೆ. ಅಲ್ಲದೆ ಪತ್ರ ಚಳುವಳಿಯ ಹೆಸರಿನಲ್ಲಿ ಅಂಚೆ ಇಲಾಖೆಗೆ ಲಕ್ಷಾಂತರ ರೂಪಾಯಿ ವಂಚಿಸಿರುವುದನ್ನು ಸರ್ಕಾರಕ್ಕೆ ಸಂಬಂದಿಸಿದ ಯಾರೂ ಗಮನಿಸಿದಂತಿಲ್ಲ.

ಕೊಡಗನ್ನು ಪ್ರತ್ಯೇಕ ರಾಜ್ಯವನ್ನಾಗಿಸಬೇಕೆನ್ನುವ ಕೆ.ಆರ್.ಎಂ.ಎಂ. ಎಂಬ ಸಂಘಟನೆ ಏಕವ್ಯಕ್ತಿ ಕೇಂದ್ರಿತವಾಗಿದ್ದು ಅಸಾಂವಿಧಾನಿಕವಾಗಿ ರಚನೆಗೊಂಡಿದೆ. ಇದು ಕರ್ನಾಟಕ ರಾಜ್ಯ ವಿರೋದಿ ಘೋಷಣೆಗಳನ್ನು ಕೂಗುತ್ತಾ ದೇಶ ದ್ರೋಹಿ ಹಾಗೂ ಸಮಾಜ ದ್ರೋಹಿ ಚಟುವಟಿಕೆಗಳಲ್ಲಿ ತೊಡಗಿದೆ. ಇಲ್ಲಿಯ ತನಕ ಈ ಸಂಸ್ಥೆ (?) ಯಾವುದೇ ಲೆಕ್ಕಪತ್ರಗಳನ್ನು ತೋರಿಸದೆ, ಆದಾಯ ತೆರಿಗೆ ಸಲ್ಲಿಸದೆ ಇಡೀ ನಾಡಿಗೇ ಮೋಸ ಮಾಡುತ್ತಿದೆ.

ತನ್ನ ಅವಿಭಾಜ್ಯ ಅಂಗವಾದ ಕೊಡಗನ್ನು ಈ ಶೋಷಕರ ಕೈಯಿಂದ ಮುಕ್ತಿಗೊಳಿಸಲು, ಎಲ್ಲಾ ಅಕ್ರಮ ಹಾಗೂ ಹಗರಣಗಳ ಬಗ್ಗೆ ಕರ್ನಾಟಕ ಸರಕಾರ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹ ಪಡಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಸರ್ಕಾರ ಈ ದೇಶದ್ರೋಹಿ ಶಕ್ತಿಗಳನ್ನು ನಿಗ್ರಹಿಸಲು ವಿಫಲವಾದಲ್ಲಿ ಬಹುಸಂಖ್ಯಾತ ಕೊಡಗಿನ ಜನರ ಬೆಂಬಲದಿಂದ ಪ್ರತ್ಯೇಕತಾ ಪರ ಸಂಘಟನೆಗಳ ವಿರುದ್ಧ ಜನಾಂದೋಲನವನ್ನು ರೂಪಿಸಲಿದ್ದೇವೆ. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಬಿವೃದ್ಧಿ ಪ್ರಾದಿಕಾರ, ವಿವಿಧ ಕನ್ನಡ ಮತ್ತು ಸಾಂಸ್ಕೃತಿಕ ಸಂಘಟನೆಗಳು, ರಾಜಕೀಯ ಪಕ್ಷಗಳು, ನಾಡಿನ ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು, ಪತ್ರಕರ್ತರು ಮತ್ತು ಸಮಸ್ತ ಕನ್ನಡಿಗರ ಸಹಕಾರ ಹಾಗೂ ಬೆಂಬಲವನ್ನು ಈ ಮೂಲಕ ಅತ್ಯಂತ ಪ್ರೀತಿಯಿಂದ ನಿರೀಕ್ಷಿಸುತ್ತೇವೆ.

ದೇವಿಪ್ರಸಾದ್,
ವಿದ್ಯಾಧರ,
ಅ.ಸು. ಬೋಪಣ್ಣ,
ಸಂಚಾಲಕರು,
ಬೆಂಗಳೂರು
20-11-1997