ಕೊಡಗಿನಲ್ಲಿ ಪ್ರತ್ಯೇಕತಾವಾದ

1992ರಲ್ಲಿ ಪ್ರತ್ಯೇಕತಾವಾದಿಗಳು ಕೊಡಗಿನಲ್ಲಿ ಲಿಬರೇಷನ್ ಆರ್ಮಿ ಓಫ್ ಕೂರ್ಗ್ ಎಂಬ ಸಂಘಟನೆಯೊಂದನ್ನು ರಚಿಸಿ ‘ಮೂಲ ನಿವಾಸಿಗಳಿಗೆ ಮಾತ್ರ ಕೊಡಗು – ವಲಸೆಗಾರರಿಗಲ್ಲ ’ ಎಂಬ ಘೋಷಣೆಯ ಮೂಲಕ ಬೀತಿಯ ವಾತಾವರಣವನ್ನು ಮೂಡಿಸಿ ಕೊಡಗು ಪ್ರತ್ಯೇಕ ರಾಜ್ಯವಾಗಬೇಕೆಂಬ ಚಳವಳಿ ಆರಂಬಿಸಿದರು. ಈ ಸಂಘಟನೆಯ ಪ್ರಕಾರ ಕನ್ನಡಿಗರು, ಮಲೆಯಾಳಿಗಳು ಮತ್ತು ತುಳುವರು ‘ಹೊರಗಿನವರು’. ಈ ಪ್ರತ್ಯೇಕತಾವಾದಿ ಗುಂಪಿನ ಘೋಷಣೆಯಿಂದಾಗಿ ‘ಹೊರಗಿನವರು’ ಆಗಾಗ ಹಲ್ಲೆಗೊಳಗಾಗಿ ಭಯದ ವಾತಾವರಣದಲ್ಲಿ ಬದುಕಬೇಕಾಯಿತು. 1970ರ ದಶಕದಲ್ಲಿ ಮುಂಬಯಿ ಮಹಾರಾಷ್ಟ್ರಿಗರಿಗೆ ಮಾತ್ರ ಎಂದು ಹೇಳಿ ಬಾಳಾ ಠಾಕ್ರೆ ಭಯೋತ್ಪಾದನೆಗೆ ಕಾರಣನಾಗಿದ್ದ. ಅಲ್ಲಿ ಕನ್ನಡಿಗರು ಮತ್ತು ತುಳುವರು ದುರ್ಭರ ದಿನಗಳನ್ನು ಕಳೆಯಬೇಕಾಗಿತ್ತು. ಅದೇ ಪರಿಸ್ಥಿತಿ ಕೊಡವ ಭಾಷೆಯಾಡದ ಮಂದಿಗಳಿಗೆ ಕೊಡಗಿನಲ್ಲಿ ಎದುರಾಯಿತು. ಲಿಬರೇಶನ್ ಆರ್ಮಿಯ ಭಯೋತ್ಪಾದನೆಗೆ ನೆರೆಯ ರಾಜ್ಯಗಳ ಭಯೋತ್ಪಾದಕ ಸಂಘಟನೆಗಳ ಸಹಾನುಭೂತಿ ದೊರಕಿತು. ಲಿಬರೇಶನ್ ಆರ್ಮಿಯು ಪ್ರತ್ಯೇಕ ಕೊಡಗು ರಾಜ್ಯದ ಬೇಡಿಕೆ ಮುಂದಿಟ್ಟಾಗ ತಮಿಳುನಾಡು ಕಾವೇರಿ ನದಿ ನೀರನ್ನು ಪೂರ್ತಿ ತಾನು ಬಳಸಿಕೊಳ್ಳ ಬಹುದೆಂದು ಲೆಕ್ಕಾಚಾರ ಹಾಕಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸಿತು. ಹೋರಾಟ ನಡೆಸಿ ಪ್ರತ್ಯೇಕ ರಾಜ್ಯ ಗಿಟ್ಟಿಸಿಕೊಂಡಿದ್ದ ಜಾರ್ಖಂಡಿನ ಶಿಬು ಸೊರೇನ್ ಪ್ರತ್ಯೇಕತಾವಾದಿಗಳಿಗೆ ಬೆಂಬಲ ಸಾರಿದ. ರಾಜಕೀಯ ಪಕ್ಷವೊಂದು ತನ್ನ ರಾಷ್ಟ್ರೀಯತಾವಾದವನ್ನು ಬದಿಗೊತ್ತಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸಿ ಬಿಟ್ಟಿತು. ಪ್ರತ್ಯೇಕತಾವಾದಿಗಳ ಬೇಡಿಕೆಯನ್ನು ಕೆಲವು ಪತ್ರಿಕೆಗಳು ಬೆಂಬಲಿಸಿದ್ದು, ಪ್ರಭುತ್ವವು ಪ್ರತ್ಯೇಕತಾವಾದಿಗಳ ಬಗ್ಗೆ ಮೃದು ಧೋರಣೆ ತಾಳಿದ್ದು ಪರಿಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿತು.

ಸ್ವಭಾವತಃ ಶಾಂತಿಪ್ರಿಯರಾದ ಕೊಡಗಿನ ಜನರಿಗೆ ಲಿಬರೇಶನ್ ಆರ್ಮಿಯ ನಿಜವಾದ ಉದ್ದೇಶವೇನು ಎನ್ನುವುದು ಅರ್ಥವಾದಾಗ ತೀರಾ ತಡವಾಗಿತ್ತು. ಅಲ್ಲಲ್ಲಿ ಹಲ್ಲೆ, ದೊಂಬಿ, ಆಸ್ತಿಪಾಸ್ತಿ ಹಾನಿಗಳು ಸಂಭವಿಸಿದವು. ಷಣ್ಮುಖಂ ಎಂಬ ರಾಜಕೀಯ ಕಾರ್ಯಕರ್ತನ ಕೊಲೆಯಾಯಿತು. ಲಿಬರೇಶನ್ ಆರ್ಮಿ ತನ್ನ ಹೆಸರನ್ನು ಕೊಡಗು ರಾಜ್ಯ ಮುಕ್ತಿ ಮೋರ್ಚಾ ಎಂದು ಬದಲಾಯಿಸಿಕೊಂಡಿತು. ಅದರ ಮುಂದಿನ ಬೆಳವಣಿಗೆಯನ್ನು ತಂಬಂಡ ವಿಜಯ ಪೂಣಚ್ಚ ಹೀಗೆ ದಾಖಲಿಸಿದ್ದಾರೆ : “ಕೊಡಗಿನ ಮೂಲನಿವಾಸಿಗಳ ವಕ್ತಾರ ಎಂದು ಕೊಡಗು ರಾಜ್ಯ ಮುಕ್ತಿ ಮೋರ್ಚಾವು ವಲಸೆಗಾರರ ವಿರುದ್ಧ ದಮನಕಾರಿ ಮಾರ್ಗಗಳನ್ನು, ಅವರನ್ನು ಭಯಬೀತರನ್ನಾಗಿಸುವ ಉದ್ದೇಶದಿಂದ ಮಾಡತೊಡಗಿತು. ‘ಕೊಡಗೇತರರು’ ಅವರಲ್ಲಿ ಮುಖ್ಯವಾಗಿ ಮಲೆಯಾಳಿಗಳು, ಅವರಲ್ಲೂ ‘ಮುಸ್ಲಿಮರು’, ಕನ್ನಡಿಗರು, ಕನ್ನಡ ಭಾಷೆ ಮಾತಾಡುವ ಗೌಡ, ಲಿಂಗಾಯಿತ ಮೊದಲಾದವರು ಇವರ ‘ವಲಸೆಗಾರ’ ವ್ಯಾಖ್ಯಾನದ ಕೆಳಗೆ ಬರುತ್ತಿದ್ದರು. 1956ರ ಹಿಂದೆ ಇದ್ದ ರಾಮರಾಜ್ಯವನ್ನು (?) ಮತ್ತೆ ಅನುಷ್ಠಾನಕ್ಕೆ ತರಬೇಕೆಂದು ಫ್ಯಾಸಿಸ್ಟರ ರೀತಿ ದಾದಾಗಿರಿ ಮಾಡುತ್ತಿದ್ದಾಗ ಕೊಡಗೇತರ ಮೂಲನಿವಾಸಿಗಳು ಪ್ರತಿಭಟಿಸಿದರು. ಕೊಡಗಿನ ಚರಿತ್ರೆಯಲ್ಲಿ ಪ್ರಥಮ ಬಾರಿಗೆ ಕೊಡಗು ಭಾಷೆ ಮಾತಾಡುವ ದುರ್ಬಲ ಸಮುದಾಯಗಳು ಪ್ರತ್ಯೇಕ ರಾಜ್ಯದ ಹೋರಾಟದ ವಿರುದ್ಧ ಕೊಡಗು ಮೂಲನಿವಾಸಿಗಳ ಸಂಘ ಎನ್ನುವ ಸಂಘಟನೆಯನ್ನು ರಚಿಸಿದವು. ಕೊಡಗು ಹೆಗ್ಗಡೆ ಸಮಾಜದ ಕೊಕ್ಕೆರ ಸುಬ್ಬಯ್ಯ, ಅಮ್ಮ ಕೊಡವ ಸಮಾಜದ ಎನ್.ಬಿ. ಕೃಷ್ಣ ಮತ್ತು ಐರಿ ಸಮಾಜದ ಕಾಮೆಯಂಡ ಮುತ್ತಣ್ಣ ಈ ಸಂಘಟನೆಯ ವಕ್ತಾರರಾಗಿದ್ದರು. 1996ರಲ್ಲಿ ಗೊಲ್ಲ, ಕೆಂಬಟ್ಟಿ ಮುಂತಾದ ಸಮುದಾಯಗಳು ಈ ಸಂಘವನ್ನು ಸೇರಿಕೊಂಡು – 1956ರ ಹಿಂದೆ ಇದ್ದದ್ದು ಕೊಡಗೇತರರ ಮೇಲಣ ದೌರ್ಜನ್ಯ. ಕೊಡಗಿನ ಬಲಾಢ್ಯ ಕೊಡವರನ್ನು ಬಿಟ್ಟರೆ ಉಳಿದವರಿಗೆ ಅದು ರಾಮರಾಜ್ಯವಾಗಿರಲಿಲ್ಲ. ಆದುದರಿಂದ ಪ್ರತ್ಯೇಕ ರಾಜ್ಯದಂತಹ ದಮನಕಾರಿ ಹೋರಾಟವನ್ನು ಬೆಂಬಲಿಸುವುದಿಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿದವು.” (ಸಮರಸ 2003, ಪು. 103)

ದೇವಿಪ್ರಸಾದರು ಯಾವತ್ತೂ ಯೋಚಿಸದೆ ಯಾವುದಕ್ಕೂ ಕೈ ಹಾಕುವವರಲ್ಲ. ಅವರ ಅಧ್ಯಯನಗಳ ಪ್ರಕಾರ ಕೊಡಗು ರಾಜ್ಯ ಮುಕ್ತಿ ಮೋರ್ಚಾದ ಪ್ರತ್ಯೇಕತಾವಾದಿಗಳು ಕೊಡವ ಭಾಷೆಯನ್ನಾಡುವ 18 ಸಮುದಾಯಗಳ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲ್ತುದಿ ಯಲ್ಲಿದ್ದ ಭೂಮಾಲಿಕ ವರ್ಗಕ್ಕೆ ಸೇರಿದ್ದ ಕೊಡವ ಜಾತಿಯವರಲ್ಲಿ ಕೆಲವರಾಗಿದ್ದರು. ಅವರು ಹಿಂದೆ ಕೊಡಗನ್ನು ಆಳುತ್ತಿದ್ದ ಹಾಲೇರಿ ರಾಜರುಗಳಿಂದ ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆದವರು. 1834ರ ಬಳಿಕ ಕೊಡಗನ್ನು ಬ್ರಿಟಿಷರು ಆಳಿದರು. ಆಗಲೂ ಅತ್ಯಂತ ಹೆಚ್ಚು ಪ್ರಯೋಜನ ಪಡಕೊಂಡವರು ಅವರೇ. ಅವರಲ್ಲಿ ಕೆಲವೇ ಮಂದಿ ಹಿರಿಯರ ಮಾತಿಗೆ ಸೊಪ್ಪು ಹಾಕದೆ ಕೊಡಗನ್ನು ಕರ್ನಾಟಕದಿಂದ ಪ್ರತ್ಯೇಕಿಸಲು ಹೊರಟಿದ್ದರು. ಕೊಡಗು ಪ್ರತ್ಯೇಕ ರಾಜ್ಯವಾದರೆ ಅದರ ಸಂಪೂರ್ಣ ಪ್ರಯೋಜನ ಇದೊಂದೇ ಸಮುದಾಯಕ್ಕೆ ದಕ್ಕಿ ಬಿಡುವ ಅಪಾಯವಿತ್ತು. ಕೊಡವ ಆಡಳಿತ ಭಾಷೆಯಾದರೆ ಕನ್ನಡ, ಅರೆಭಾಷೆ, ತುಳು, ಮಲೆಯಾಳ ಮತ್ತು ಬುಡಕಟ್ಟು ಭಾಷಾ ವೈವಿಧ್ಯ ನಶಿಸಿ ಹೋಗುವ ಬೀತಿಯಿತ್ತು. ಊಳಿಗಮಾನ್ಯ ವ್ಯವಸ್ಥೆ ಜಾರಿಗೆ ಬಂದು ಪ್ರಜಾಸತ್ತಾತ್ಮಕ ಮೌಲ್ಯಗಳಾದ ಸಮಾನತೆ, ಸಹಿಷ್ಣುತೆ ಮತ್ತು ಜಾತ್ಯತೀತತೆ ನಿರ್ನಾಮವಾಗುವ ಭಯಾನಕ ವಾಸ್ತವತೆಗೆ ಕೊಡವೇತರರು ಮೂಕ ಸಾಕ್ಷಿಯಾಗಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕಕ್ಕೆ ಕಾವೇರಿಯ ಮೇಲಿನ ಹಕ್ಕೇ ಹೋಗಿ ಬಿಡುತ್ತಿತ್ತು.

ದೇವಿ ಪ್ರಸಾದರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿತ್ತು. ಅವರಿಗೆ “ಹುಟ್ಟುವಾಗ ನಮ್ಮ ಜಾತಿಯನ್ನು ಆರಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಬ್ರಾಹ್ಮಿನ್ ಬೈ ಮಿಸ್ಟೇಕ್” ಎಂದು ಬೀಚಿಯವರು ಹೇಳುತ್ತಿದ್ದುದು ನೆನಪಾಗುತ್ತಿತ್ತು. ದೇವಿಪ್ರಸಾದರು ಕೊಡವ ಜಾತಿಗೆ ಸೇರಿದವರಲ್ಲ. ಅವರು ಹುಟ್ಟಿದ ಸಂಪಾಜೆಯಲ್ಲಿ ದ.ಕ.ದ ಸಂಸ್ಕೃತಿಯಿದ್ದರೂ ಅದು ಕೊಡಗಿನ ಭಾಗವಾಗಿ ಹೋಗಿತ್ತು. ಪ್ರತ್ಯೇಕತಾವಾದಿಗಳ ಪ್ರಕಾರ ದೇವಿಪ್ರಸಾದರು ಹೊರಗಿನವರು. ಕೊಡಗು ಪ್ರತ್ಯೇಕ ರಾಜ್ಯವಾದರೆ ವಲಸೆಗಾರ ದೇವಿಪ್ರಸಾದರು ಬೇರೆಲ್ಲಿಗಾದರೂ ತನ್ನ ಸಂಸಾರ ಸಮೇತ ವಲಸೆ ಹೋಗಬೇಕಾಗುತ್ತದೆ!

ಪ್ರಜಾವೇದಿಕೆಯ ಉದಯ

ಪ್ರತ್ಯೇಕತಾವಾದಿಗಳ ವಿರುದ್ಧ ಮೊದಲ ಪ್ರಬಲ ಪ್ರತಿಭಟನೆ ಆರಂಭವಾದದ್ದು ದೇವಿಪ್ರಸಾದರ ಸಂಪಾಜೆಯ ಕೊಡಗು ಕನ್ನಡಿಗರು ಸಂಘಟನೆಯ ನೇತೃತ್ವದಲ್ಲಿ. ಕೊಡಗು ಮೂಲನಿವಾಸಿಗಳ ಸಂಘಟನೆ, ಕೊಕ್ಕರ ಸುಬ್ಬಯ್ಯ, ಕಾಮೆಯಂಡ ಮುತ್ತಣ್ಣ, ಎನ್.ಬಿ. ಕೃಷ್ಣ, ಕೆ.ಟಿ. ಸುಬ್ಬಯ್ಯ, ಅ.ಸು. ಬೋಪಣ್ಣ ಮುಂತಾದ ಮುಖಂಡರು ತಮ್ಮ ಸಮುದಾಯಗಳನ್ನು ಜತೆಗೂಡಿಸಿ ಪ್ರತ್ಯೇಕತಾವಾದಿಗಳ ವಿರುದ್ಧ ಪ್ರಬಲವಾದ ಜನಾಬಿಪ್ರಾಯವನ್ನು ರೂಪಿಸುವಲ್ಲಿ ಸಫಲರಾದರು. ಅದರ ಪರಿಣಾಮವಾಗಿ ಕೊಡಗು ಪ್ರಜಾವೇದಿಕೆ ರೂಪುಗೊಂಡಿತು. ಅದರ ಮುಂಚೂಣಿಯಲ್ಲಿ ದೇವಿಪ್ರಸಾದ್, ವಿಜಯೇಂದ್ರ ವಿದ್ಯಾಧರ, ತಂಬಂಡ ವಿಜಯ, ಈಶ್ವರ ಚಂದ್ರ, ಕೆ.ಟಿ. ಪೂವಯ್ಯ, ಎ.ಆರ್. ಫಾಲಾಕ್ಷ, ಬಾಲಕೃಷ್ಣ ಕಾಜೂರು, ಡಿ.ಸಿ. ಜಯರಾಮ, ಗೋಪಾಲ ಚೌಡ್ಲು, ವಿ.ಪಿ. ಶಶಿಧರ್, ವಿ.ಎಸ್. ರಾಮಕೃಷ್ಣ, ಬಿ.ಇ. ಶೇಷಾದ್ರಿ, ಜಿ.ಎಚ್. ಹನೀಫ್ ಮುಂತಾದವರಿದ್ದರು.

ಕೊಡಗು ಪ್ರಜಾವೇದಿಕೆಯು ಎಲ್ಲಾ ಜಾತಿಧರ್ಮಗಳ ಜನರ ಪ್ರಾತಿನಿದಿಕ ಸಂಘಟನೆಯಾದರೂ ಪ್ರತ್ಯೇಕತಾವಾದಿಗಳು ಅದನ್ನು ಗೌಡರ ಸಂಘಟನೆಯೆಂಂದು ಅಪಪ್ರಚಾರ ಮಾಡಿದರು. 1837ರ ಅಮರ ಸುಳ್ಯದ ಸ್ವಾತಂತ್ರ  ಸಮರವನ್ನು ಕೂಡಾ ಬ್ರಿಟಿಷರು ಗೌಡರ ಮೇಲ್ಬೀಳುವಿಕೆ ಎಂದು ಕರೆದಿದ್ದರು! ಪ್ರತ್ಯೇಕತಾವಾದಿಗಳ ಒಡೆದು ಆಳುವ ಸಾಮೋಪಾಯಕ್ಕೆ ಉತ್ತರವಾಗಿ ಬ್ರಿಟಿಷರು ಕೊಡಗು ಬಿಟ್ಟು ಹೋಗುವಾಗ ಕಣ್ಣೀರು ಸುರಿಸಿದ ಜನರು ಈಗ ಪ್ರತ್ಯೇಕ ರಾಜ್ಯ ಕೇಳುತ್ತಿದ್ದಾರೆ ಎಂದು 1999ರ ಮಡಿಕೇರಿ ರ್ಯಾಲಿಯಲ್ಲಿ ಹೇಳಿದರು. ಅವರು ಸಂಪಾಜೆಯಲ್ಲಿ ಪ್ರತ್ಯೇಕತಾವಾದಿಗಳ ವಿರುದ್ಧ ಹೋರಾಟ ಸಂಘಟಿಸಿದಾಗ ಪ್ರತ್ಯೇಕತಾ ಪರ ಶಕ್ತಿಗಳು ಅವರ ವಿರುದ್ಧ ಅನಗತ್ಯ ಕೇಸು ದಾಖಲಿಸಿ ಅವರಿಗೆ ಮಾನಸಿಕ ಹಿಂಸೆ ನೀಡಿದ್ದರು. ಆ ದಿನಗಳಲ್ಲಿ ದೇವಿಪ್ರಸಾದರ ಜೀವಕ್ಕೆ ಅಪಾಯವಿತ್ತು. ಅಂತಹ ದಿನಗಳಲ್ಲಿ ಕನ್ನಡಪರ ಶಕ್ತಿಗಳಾದ ಎಂ. ಚಿದಾನಂದ ಮೂರ್ತಿ, ಎಲ್.ಎಸ್. ಶೇಷಗಿರಿ ರಾವ್, ಗೊ.ರು. ಚೆನ್ನಬಸಪ್ಪ – ಮುಂತಾದವರು ಕೊಡಗು ಪ್ರಜಾವೇದಿಕೆಯ ಪರ ನಿಂತರು. ಅಖಂಡ ಕರ್ನಾಟಕವನ್ನು ತಮ್ಮ ವೈಯಕ್ತಿಕ ಹಿತಕ್ಕಾಗಿ ಒಡೆಯ ಹೊರಟ ಪ್ರತ್ಯೇಕತಾವಾದಿಗಳನ್ನು ಎಲ್ಲಾ ವೇದಿಕೆಗಳಿಂದ ವಿರೋದಿಸಿದರು.

ದೇವಿಪ್ರಸಾದರು ವಿರೋಧಕ್ಕಾಗಿ ವಿರೋಧ ಮಾಡುವ ಸ್ವಭಾವದವರಲ್ಲ. ಅವರು ಪ್ರತ್ಯೇಕತಾವಾದಿಗಳ ಎಲ್ಲಾ ಆಪಾದನೆಗಳನ್ನು ಸಾಕ್ಷ್ಯ್ಯಧಾರ ಸಹಿತ ತಳ್ಳಿ ಹಾಕಿದರು. ಕೊಡಗು ಎಲ್ಲರಿಗೂ ಸೇರಿದ್ದು ಎಂಬ ವಾದಕ್ಕೆ ಸಮರ್ಥನೆಯಾಗಿ ಅವರು ರಿಕ್ತರನ ಗಜೆಟಿಯರಿನಲ್ಲಿದ್ದ ಉಲ್ಲೇಖಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಗೊಳಿಸಿದರು. ಅದರ ಕೆಲವು ಸಾಲುಗಳು ಹೀಗಿವೆ : “ಕೊಡಗಿನ ರಾಜರು ಲಿಂಗಾಯಿತರಾಗಿದ್ದುದರಿಂದ ಅವರು ದೇಶದ ಸಂಬಂಧ ವನ್ನು ಹೊಂದಿದವರಾಗಿದ್ದರು. ಕೊಡಗರು ಅವರದ್ದೇ ಆದ ವರಟು ಸ್ವರೂಪದ ದೈವಗಳನ್ನೂ, ಪೂರ್ವಜರನ್ನೂ ಪೂಜಿಸುತ್ತಿದ್ದು ಅವರು ಶಿವಾಚಾರಿಗಳೊಂದಿಗೆ ಬೆರೆಯುತ್ತಿರಲಿಲ್ಲ. ಕೊಡಗಿನ ಈಶಾನ್ಯ ಭಾಗದಲ್ಲಿರುವ ಜನರು ಮೈಸೂರಿನವರೊಡನೆ ಹೋಲಿಕೆಯಲ್ಲಿ ಒಂದಾಗಿ ಕಾಣುತ್ತಾರೆ ಮತ್ತು ರಾಜನ ಪ್ರಭಾವ ಸಹಜವಾಗಿ ಅವರಲ್ಲಿ ಅತ್ಯದಿಕವಾಗಿದೆ. ಅಲ್ಲದೆ ಪಾಡಿನಾಲ್ಕು ನಾಡಿನಲ್ಲಿ ಮಲೆಯಾಳಿ ಮೂಲವು ವಿಶೇಷವಾಗಿ ಕಾಣಿಸುತ್ತದೆ. ಹಾಗೆ ತಾವು ನಾಡು, ಬೇಂಗು ನಾಡು ಹಾಗೂ ಸೂರ್ಲಬಿ ಮುತ್ತು ನಾಡುಗಳಲ್ಲಿ ತುಳುಗೌಡರ ಮತ್ತು ಬಂಟರ ಪ್ರಭಾವ ಅನುಭವಕ್ಕೆ ಬರುತ್ತದೆ. ಕೊಡಗರು ಮಿಶ್ರ ಜನಾಂಗ ಎನ್ನುವುದಕ್ಕೆ ಇನ್ನೂ ಹೆಚ್ಚಿನ ಆಧಾರ ಬೇಕೆನ್ನುವುದಾದರೆ, ಅವರ ಮುಖ ಲಕ್ಷಣದ ವ್ಯತ್ಯಾಸ ಕಾಕೇಸಿಯನ್ ಮತ್ತು ಮಂಗೋಲಿಯನರ ನಡುವೆ ಇರುವಷ್ಟು ಹಾಗೂ ಮೈಬಣ್ಣದ ವ್ಯತ್ಯಾಸ ಬೆಳ್ಳಗೆ ಅಥವಾ ಕಪ್ಪಗೆ. ಕೊಡಗರ ಮನೆತನದ ಹೆಸರುಗಳು ಮೈಸೂರು ತಮಿಳು, ಮಲೆಯಾಳಿ ಅಥವಾ ತುಳು ಮೂಲಗಳನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ಕೊಡಗು ಜನಾಂಗಕ್ಕೆ ಅಪರಿಚಿತರನ್ನು ಆಹ್ವಾನಿಸಿ ಸೇರಿಸಿಕೊಳ್ಳುವುದನ್ನು ಈಗಿನ ತಲೆಮಾರಿನ ಜನರು ನೆನಪಿಸಿಕೊಳ್ಳುತ್ತಾರೆ.” (ಕೊಡಗಿನಲ್ಲಿ ಭಾಷಾ ಸಾಂಸ್ಕೃತಿಕ ಸಾಮರಸ್ಯ 2003, ಪುಟ 21.)

ಕೊಡಗಿನಲ್ಲಿ ಕೊಡವರು ಎಂದಿಗೂ ಬಹುಸಂಖ್ಯಾತರಾಗಿರಲಿಲ್ಲವೆನ್ನುವುದನ್ನು ಅಂಕಿಅಂಶಗಳ ಮೂಲಕ ದೇವಿಪ್ರಸಾದ್ ತೋರಿಸಿಕೊಟ್ಟರು. ಡಬ್ಲುಡಬ್ಲು. ಹಂಟರ್ನ ಇಂಪಿರಿಯಲ್ ಗಜೆಟಿಯರ್ ಓಫ್ ಇಂಡಿಯಾದ ಪ್ರಕಾರ 1881ರ ಜನಗಣತಿಯಲ್ಲಿ ಕೊಡಗಿನ ಒಟ್ಟು ಜನಸಂಖ್ಯೆಯಲ್ಲಿ ಕೊಡವರ ಪ್ರಮಾಣ ಶೇ. 15.2 ಮಾತ್ರ. 1981ರ ಜನಗಣಿಯಲ್ಲಿ ಕೊಡವರ ಪ್ರಮಾಣ ಶೇ. 7.7. ಮಲೆಯಾಳಿಗಳ ಪ್ರಮಾಣ, ಶೇ. 22.6 ಮತ್ತು ಕನ್ನಡಿಗರ ಪ್ರಮಾಣ ಶೇ. 35.8. ಉಳಿದವರು ತುಳು, ತಮಿಳು, ಉರ್ದು, ತೆಲುಗು, ಕೊಂಕಣಿ ಮಾತಾಡುವವರು. 1991ರ ಜನಗಣತಿಯ ಪ್ರಕಾರ ಕನ್ನಡಿಗರ ಪ್ರಮಾಣ ಶೇ. 37.8, ಮಲೆಯಾಳಿಗಳಿದ್ದು ಶೇ. 23.3 ಮತ್ತು ಕೊಡವರದು ಶೇ. 16.3. ಕನ್ನಡದೊಂದಿಗೆ ಅರೆಭಾಷೆ, ಹವ್ಯಕ ಮತ್ತು ಕುರುಬ ಕನ್ನಡದ ಸೇರ್ಪಡೆಯಾಗಿದೆ. ಕೊಡವ ಭಾಷೆ ಆಡುವವರಲ್ಲಿ ಭೂ ಮಾಲಿಕ ಕೊಡವರಲ್ಲದೆ ಇತರ 17 ಸಮುದಾಯಗಳಿಗೆ ಸೇರಿದವರಿದ್ದಾರೆ. ಈ ಅಂಕಿ-ಅಂಶಗಳನ್ನು 1995ರಲ್ಲಿ ಪ್ರಕಟವಾದ ‘ಕೊಡಗಿನಲ್ಲಿ ಜಾತೀಯತೆ’ ಕೃತಿಯಲ್ಲಿ ಪ್ರಕಟಿಸಿ ಕೊಡಗು ಕೊಡವರದ್ದು ಎಂಬ ಭ್ರಮೆಯನ್ನು ಕಳಚುವಲ್ಲಿ ದೇವಿಪ್ರಸಾದರು ಸಫಲರಾದರು (ನೋಡಿ : ಅನುಬಂಧ 1 ಮತ್ತು 2).

ಕೊಡಗಿನಲ್ಲಿ ಕೊಡವರ ಪ್ರಮಾಣ ಕೇವಲ ಶೇ. 16 ರಷ್ಟಿದ್ದು ಉಳಿದ ಶೇ. 84ರಷ್ಟು ಜನರು ಅನ್ಯ ಭಾಷಿಕರು. ಇದಕ್ಕೆ ದೇವಿಪ್ರಸಾದರು ಕಾರಣ ಕೊಡುತ್ತಾರೆ. “ಕೊಡಗರು ದಟ್ಟವಾಗಿರುವ ದಕ್ಷಿಣ ಕೊಡಗಿನಲ್ಲಿ ನಾಗರಿಕತೆಯ ಪ್ರವೇಶವಾದದ್ದು ಹೆಚ್ಚೆಂದರೆ 250 ವರ್ಷಗಳ ಹಿಂದೆ. ಇಂದಿನ ಕೊಡವ ಭಾಷೆ ಹುಟ್ಟಿಕೊಂಡದ್ದು ಮಲೆಯಾಳದ ಪ್ರಭಾವದಿಂದ. ಕೊಡವರ ಬಹುತೇಕ ದೈವಗಳು ವೈನಾಡು ಪ್ರದೇಶದಿಂದ ಬಂದವು. ಆಗಿನ್ನೂ ಕೊಡಗು ಒಂದೇ ಆಡಳಿತ ಘಟಕವಾಗಿ ರೂಪುಗೊಂಡಿರಲಿಲ್ಲ. ಗಡಿಗಳೇ ಇರದಿದ್ದ ಕಾಲದಲ್ಲಿ ನಡೆದ ಸಹಜ ವಲಸೆ ಪ್ರಕ್ರಿಯೆಯಲ್ಲಿ ಕೊಡಗಿನಲ್ಲಿ ಬಂದು ನೆಲಸಿದವರು ಹೊರಗಿನವರು ಆಗುವುದು ಹೇಗೆ? ಇಂದಿನ ಭಾಗಮಂಡಲ ಪ್ರದೇಶ ಕೂಡಾ ಮಲೆಯಾಳಿ ಅರಸರ ಕೈಯಲ್ಲಿತ್ತು. ಅಲ್ಲಿ ಸುಮಾರು ಹದಿಮೂರನೆ ಶತಮಾನದಲ್ಲೇ ಗೌಡರು ಬಂದು ನೆಲೆಸಿದ್ದರು. ಅವರನ್ನು ವಲಸಿಗರೆನ್ನುವುದು ಸರಿಯೇ? ಇನ್ನು ಸೋಮವಾರ ಪೇಟೆ – ಶನಿವಾರ ಸಂತೆಗಳಲ್ಲಿ ಕ್ರಿ.ಪೂ. ಯುಗದ ಪಳೆಯುಳಿಕೆಗಳಿವೆ. ಅಲ್ಲಿರುವ ಲಿಂಗಾಯತ – ಗೌಡ ಸಮುದಾಯ ದವರು ಹೇಗೆ ಹೊರಗಿನವರಾಗುತ್ತಾರೆ? ಹಿಂದೆ ಟಿಪ್ಪುವಿನ ಕಾಲದಲ್ಲಿ ಮುಸ್ಲಿಮರಾದ ಕೊಡವರು 1892ರಲ್ಲಿ ಶ್ರೀ ರಂಗ ಪಟ್ಟಣದಿಂದ ವಾಪಾಸು ಬಂದಾಗ ಅವರನ್ನು ಕೊಡವ ಜಾತಿಗೆ ಸೇರಿಸುವ ಮಾನವೀಯತೆಯನ್ನು ತೋರುತ್ತಿದ್ದರೆ ಕೊಡಗಿನಲ್ಲಿ ಹಿಂದೂ-ಮುಸ್ಲಿಂ ಕೋಮು ಗಲಭೆಗಳು ಸಂಭವಿಸುತ್ತಿರಲಿಲ್ಲ. ಹೀಗಿದ್ದೂ ಕೊಡವ ಭಾಷೆಯನ್ನಾಡದ ಕೊಡಗಿನವರನ್ನು ವಲಸೆಗಾರರು ಎಂದು ಕರೆಯುವುದಾದರೆ ತಮ್ಮ ಆಸ್ತಿ ಪಾಸ್ತಿಗಳನ್ನು ಮಾರಾಟ ಮಾಡಿ ಮೈಸೂರು, ಬೆಂಗಳೂರುಗಳಲ್ಲಿ ನೆಲೆಸಿದ ಕೊಡವರನ್ನು ಏನೆಂದು ಕರೆಯಬೇಕು?” ಕೊಡಗು ಪ್ರಜಾವೇದಿಕೆಯ ಈ ಪ್ರಶ್ನೆಗಳಿಗೆ ಪ್ರತ್ಯೇಕತಾವಾದಿಗಳಲ್ಲಿ ಉತ್ತರವೇ ಇರಲಿಲ್ಲ.

ಕೊಡಗು ಹಿಂದೆ ಜಾತ್ಯತೀತವಾಗಿತ್ತು. ಮುಂದೆಯೂ ಹಾಗಿರಬೇಕು ಎನ್ನುವುದನ್ನು ದೇವಿಪ್ರಸಾದರ ಈ ಮಾತುಗಳು ಬಿಂಬಿಸುತ್ತವೆ : “1773ರ ಹಿಂದಿನ ಕೊಡಗು ಮಲೆನಾಡಿಗೆ ಹೊಂದಿಕೊಂಡಿದ್ದು ಕನ್ನಡ ಪ್ರದೇಶಕ್ಕೆ ಸೇರಿದ್ದಾಗಿತ್ತು. ಅನಂತರ ಕೋಟೆಯಂಗಡಿ ಅರಸನಿಂದ ಪಡೆದದ್ದು ಮಲೆಯಾಳಿ ಪ್ರದೇಶ. ಉತ್ತರದ ಕಡೆಯಿಂದ ಕನ್ನಡ ಸಂಸ್ಕೃತಿ, ದಕ್ಷಿಣದ ಕಡೆಯಿಂದ ಮಲೆಯಾಳ ಸಂಸ್ಕೃತಿ, ಪೂರ್ವದಿಂದ ಬಯಲು ಸೀಮೆ, ಪಶ್ಚಿಮದಿಂದ ಕರಾವಳಿ. ಮೂರು ಮೂಲ ಬಣ್ಣಗಳು ಸರಿಸಮ ಸೇರಿ ಕಿತ್ತಳೆ, ಹಸಿರು, ನೇರಳೆ, ಗುಲಾಬಿಗಳಂತಹ ಆಕರ್ಷಕ ಮಿಶ್ರ ಬಣ್ಣಗಳು ಹೇಗೆ ಹುಟ್ಟಿಕೊಳ್ಳುತ್ತವೆಂುೋ ಹಾಗೆ ಕೊಡಗಿನಲ್ಲಿ ಹಲವು ಸಂಸ್ಕೃತಿಗಳು ಸಮ್ಮಿಲನವಾಗಿವೆ. ಮೂಲನಿವಾಸಿ ದ್ರಾವಿಡರ ಕಪ್ಪು, ಆರ್ಯರ ಬಿಳಿ, ಬ್ರಿಟಿಷರ ಕೆಂಪು-ಹೀಗೆ ಎಲ್ಲಾ ರೀತಿಯಿಂದ ಕೊಡಗು ವರ್ಣರಂಜಿತ ವಾಗಿದೆ.” (ಕೊಡಗಿನಲ್ಲಿ ಭಾಷಾ ಸಾಮರಸ್ಯ 2003, ಪು. 4)

ಪ್ರತ್ಯೇಕತಾವಾದಿಗಳಿಗೆ ಸರಕಾರದ ಆಯಕಟ್ಟಿನಲ್ಲಿರುವ ಕೆಲವು ರಾಜಕಾರಣಿಗಳು ಮತ್ತು ಅದಿಕಾರಿಗಳು ಗುಪ್ತವಾಗಿ ಸಹಾಯ ಮಾಡದಿರುತ್ತಿದ್ದರೆ ಅವರು ಕೊಡಗಿನ ಶಾಂತಿ ಕದಡಲು ಸಾಧ್ಯವಿರಲಿಲ್ಲ. ಕೊಡಗಿನಲ್ಲಿ ಕೊಡವ ಭಾಷೆಯನ್ನಾಡುವ 18 ಸಮುದಾಯ ಗಳಿವೆ. ಕೊಡಗಿನ ಬಹುತೇಕ ಅರೆಭಾಷಿಕರು, ತುಳುವರು ಮತ್ತು ಮಲೆಯಾಳಿಗಳು ಕೊಡವ ಭಾಷೆಯನ್ನು ಚೆನ್ನಾಗಿ ಆಡಬಲ್ಲವರು. ಆದರೆ ಸರಕಾರ ದೂರದರ್ಶಿತ್ವದ ಕೊರತೆಯಿಂದ ಕೇವಲ ಭೂಮಾಲಿಕ ಕೊಡವ ಜಾತಿಯವರನ್ನು ಮಾತ್ರ ಕೊಡಗು ಸಾಹಿತ್ಯ ಅಕಾಡೆಮಿಯ ಸದಸ್ಯರನ್ನಾಗಿ ನೇಮಿಸಿತು. ಎರಡನೆ ಬಾರಿಗೂ ಅದೇ ತಪ್ಪನ್ನು ಸರಕಾರ ಕಾಣದ ಕೈಗಳ ಹಿತ ಕಾಪಾಡಲು ಮಾಡಿಬಿಟ್ಟಿತ್ತು. ಸಮಸ್ತ ಕೊಡಗರ ಸಾಂಸ್ಕೃತಿಕ ಪ್ರತಿನಿಧಿಯಾಗಬೇಕಿದ್ದ ಸಂಘಟನೆಯೊಂದು ಒಂದೇ ಜಾತಿಯ ಜನರ ಸೊತ್ತಾಯಿತು. ಕೆಲವು ಹೆಗ್ಗಣಗಳು ಬಿಲ ತೋಡಿದವು. ಸರಕಾರದ ಅನುದಾನದಲ್ಲಿ ಕಲೆ ಸಂಸ್ಕೃತಿ ಉಳಿಸುವ ಸಾಹಿತ್ಯ ಬೆಳೆಸುವ ಕೆಲಸಗಳಾಗಲಿಲ್ಲ. ಕೊಡಗು ಪ್ರಜಾವೇದಿಕೆ ಈ ವಿಷಯವನ್ನು ಸರಕಾರದ ಗಮನಕ್ಕೆ ತಂದ ಮೇಲೆ ಪರಿಸ್ಥಿತಿ ಬದಲಾಯಿತು. ಕೊಡವ ಜಾತಿಗೆ ಸೇರದ ಕೊಡಗರೂ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಲು ಸಾಧ್ಯವಾಯಿತು.

ಕೊಡಗು ಇಂದು ಕರ್ನಾಟಕದ ಭಾಗವಾಗಿ ಉಳಿದಿದ್ದರೆ ಅದಕ್ಕೆ ಪ್ರಜಾವೇದಿಕೆ ಕಾರಣವಾಗಿದೆ. ತಂಬಂಡ ವಿಜಯ ಇದನ್ನು ಸಮರ್ಥಿಸಿಕೊಳ್ಳುವುದು ಹೀಗೆ : “ಕೊಡಗು ಪ್ರಜಾವೇದಿಕೆಗೆ ದೇವಿಪ್ರಸಾದ್ ಅವರಂಥ ನಾಯಕರು 1997ರ ಸಂಕ್ರಮಣ ಕಾಲದಲ್ಲಿ ದೊರಕದಿರುತ್ತಿದ್ದರೆ ವೇದಿಕೆ ಕೂಡಾ ಕೊಡಗು ರಾಜ್ಯ ಮುಕ್ತಿ ಮೋರ್ಚಾದ ಇನ್ನೊಂದು ಮುಖವಾಗುತ್ತಿತ್ತು. ಜೀವನದ ಅನುಭವ, ದೂರದರ್ಶಿತ್ವ, ಜಾತ್ಯತೀತ ಮನೋಭಾವ ಮತ್ತು ಅವೆಲ್ಲವುಗಳಿಗಿಂತ ಹೆಚ್ಚಾಗಿ ಸಂಘಟನೆಯಲ್ಲಿ ಪ್ರಜಾಸತ್ತಾತ್ಮಕ ಅಂಶಗಳನ್ನು ಅಳವಡಿಸಿಕೊಂಡ ಗುಣಗಳು ಪ್ರಜಾವೇದಿಕೆಯನ್ನು ಉಳಿಸಿದವು. ಹಾಗಲ್ಲದಿದ್ದರೆ ಕೊಡಗು ರಾಜ್ಯ ಮುಕ್ತಿ ಮೋರ್ಚಾದ ರೀತಿಯಲ್ಲಿ ಏಕವ್ಯಕ್ತಿ ಕೇಂದ್ರಿತವಾಗಿ ಕುಸಿದು ಬೀಳುತ್ತಿತ್ತು.” (ಸಮರಸ 2003, ಪು. 108)

ಪ್ರಜಾವೇದಿಕೆಯ ಅಧ್ಯಕ್ಷರಾಗಿ ಕೊಡಗಿನ ಉಳಿವಿಗಾಗಿ ದೇವಿಪ್ರಸಾದರು ಹೋರಾಟ ನಡೆಸುವಾಗ ಅವರಿಗೆ ಜೀವ ಬೆದರಿಕೆ ಒಡ್ಡಿದ್ದಲ್ಲದೆ ಅವರ ವಿರುದ್ಧ ಕಾರಣಗಳೇ ಇಲ್ಲದೆ ಪೊಲೀಸು ಕೇಸು ದಾಖಲಿಸಲಾಯಿತು. ಜಾತ್ಯತೀತವಾಗಿದ್ದ ಪ್ರಜಾವೇದಿಕೆಯನ್ನು ಗೌಡರುಗಳ ಸಂಘಟನೆ ಎಂದು ಅಪಪ್ರಚಾರ ಮಾಡಲಾಯಿತು. 1837ರ ರೈತ ಕ್ರಾಂತಿಯನ್ನು ರಿಕ್ತರ್ ಗೌಡರ ಮೇಲ್ಬೀಳುವಿಕೆ ಎಂದು ಕರೆದಿದ್ದ! ಕೊನೆಯ ಪ್ರಯತ್ನವಾಗಿ ಪ್ರತ್ಯೇಕತಾವಾದಿಗಳು ದೇವಿಪ್ರಸಾದರನ್ನು ಭೇಟಿಯಾಗಿ – ಕೊಡಗಿನ ಬಹುಸಂಖ್ಯಾತರು ಗೌಡರು. ಕೊಡಗು ರಾಜ್ಯವಾದರೆ ನಿಮ್ಮನ್ನೇ ಮೊದಲ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದರು. ಯಾವ ಆಮಿಷಕ್ಕೂ ದೇವಿಪ್ರಸಾದರು ಜಗ್ಗಲಿಲ್ಲ.

ದೇವಿಪ್ರಸಾದರ ಬಗ್ಗೆ ತಂಬಂಡ ವಿಜಯರ ಅಬಿಪ್ರಾಯ ಹೀಗಿದೆ : “ಸಾಹಿತಿಯಾಗಿ, ಕಲಾವಿದರಾಗಿ, ನಾಟಕಕಾರರಾಗಿ ಹಾಗೂ ಜನಪರ ಸಂಘಟನೆಗಳಲ್ಲಿ ತೊಡಗಿಕೊಂಡ ಕಾರ್ಯಕರ್ತರಾಗಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡ ದೇವಿಪ್ರಸಾದ್ ಅವರನ್ನು ಸೀಮಿತ ದೃಷ್ಟಿಯಲ್ಲಿ, ಸೀಮಿತ ಅವದಿಯಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಒಂದು ವಿಚಾರವಂತೂ ಸ್ಪಷ್ಟ. ಶತಮಾನಗಳಿಂದ ಕೊಡಗಿನಲ್ಲಿ ಕಂಡುಬಂದ ಬಲಾಢ್ಯ ಜಾತಿಗಳ ಅಟ್ಟಹಾಸಕ್ಕೆ, ದೌರ್ಜನ್ಯಕ್ಕೆ ಒಂದು ವಿರಾಮವೇನಾದರೂ ಈಗ ಬಂದಿದ್ದರೆ ಅದಕ್ಕೆ ದೇವಿಪ್ರಸಾದರಂತಹ ಮಾನವೀಯ ಕಾಳಜಿಯ ವ್ಯಕ್ತಿಗಳ ಪ್ರತಿಭಟನೆ ಮುಖ್ಯ ಕಾರಣ ಎಂದು ಹೇಳಲು ನನಗೆ ಸಂಕೋಚವಿಲ್ಲ. ಅವರು ಮನಸ್ಸು ಮಾಡಿದ್ದರೆ, ಅಂತಹ ಶಕ್ತಿಗಳ ಜೊತೆಗೆ ರಾಜಿ ಮಾಡಿಕೊಂಡು ರಾಜಕೀಯವಾಗಿ ಬಹಳ ಪ್ರಭಾವಿಯಾದ ಸ್ಥಾನಗಳನ್ನು ಪಡೆಯಬಹುದಿತ್ತು. ಅಂತಹ ರಾಜಿ ರಹಿತವಾದ ಸಾರ್ವಜನಿಕ ಜೀವನವನ್ನು ಮಾಡಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದಕ್ಕೆ ಕೆಚ್ಚೆದೆ ಬೇಕು; ಹಟ ಬೇಕು. ತಾತ್ಕಾಲಿಕ ಆಸೆ ಆಮಿಷಗಳಿಗೆ ಬಲಿಯಾಗದೆ ತಾನು ಹೇಳಿದ ರೀತಿ ಬದುಕುವಂತಿರಬೇಕು. ಈ ಕಾರಣಕ್ಕಾಗಿಯೇ ದೇವಿಪ್ರಸಾದ್ ಅವರು ನನಗೆ ಇಷ್ಟವಾದ ಹಿರಿಯ ಗೆಳೆಯರಾಗಿರುವುದು, ಸಂಶೋಧಕ ಮಿತ್ರರಾಗಿರುವುದು ಹಾಗೆಂುೆುೀ ಸಂಘಟನೆಯ ವಿಚಾರದಲ್ಲಿ ಸಮಾನ ಮನಸ್ಕರಾಗಿರುವುದು”. (ಸಮರಸ 2003, ಪುಟ 109).

ಕರ್ನಾಟಕ ಅಖಂಡತೆಗೆ ಹೋರಾಟ

  • 1974ರ ನವೆಂಬರ್ ರಾಜ್ಯೋತ್ಸವಕ್ಕೆ ಬೀಚಿ ಬಂದಿದ್ದಾಗ ಕೊಡವರಿಗೆ ಇದು ಬ್ಲಾಕ್ ಡೇ. ಜನರಲ್ ಕಾರ್ಯಪ್ಪ ಇದರ ಪ್ರಮುಖ ರೂವಾರಿ ಎಂದು ಗೊತ್ತಾಯಿತು.
  • 1991ರಲ್ಲಿ ಮಾತಾಂಡ ಮೊಣ್ಣಪ್ಪ ಕೊಡಗು ಏಕೀಕರಣ ರಂಗ ಸ್ಥಾಪಿಸಿ ಸಂಪಾಜೆಗೆ ಬಂದು ನನ್ನ ಸಹಕಾರ ಕೇಳಿದಾಗ ಪ್ರತ್ಯೇಕ ರಾಜ್ಯದ ಬೇಡಿಕೆ ಪ್ರಥಮ ಕೇಳಿ ಬಂತು. ಏಕೀಕರಣದ ಹೆಸರಿನ ಸಂಸ್ಥೆ ಕರ್ನಾಟಕದ ವಿಕೇಂದ್ರಿಕರಣಕ್ಕೆ ಹೊರಟದ್ದು ಸರಿಯಲ್ಲವೆಂದು ಹೇಳಿದೆ.
  • 1993ರಲ್ಲಿ Liberation warriers of Kodagu ಲಿವಾಕ್ ಎಂಬ ಹೆಸರಲ್ಲಿ ಎಲ್.ಟಿ.ಟಿ.ಇ. ಮಾದರಿಯ ಬದಲಾವಣೆ ಮಾಡಿಕೊಂಡಿತು.
  • 1994ರಲ್ಲಿ ಕೊಡಗು ರಾಜ್ಯ ಮುಕ್ತಿ ಮೋರ್ಚಾ ಎಂಬುದಾಗಿ ಮತ್ತೆ ಹೆಸರು ಬದಲಿಸಿಕೊಂಡು K.R.M.M. ಪ್ರಸಿದ್ಧಿ ಪಡೆಯಲು ಆಗ ಮಂತ್ರಿಯಾಗಿದ್ದ ಎಂ.ಸಿ. ನಾಣಯ್ಯ ಪ್ರೋತ್ಸಾಹ ಕಾರಣ.
  • 1995ರಲ್ಲಿ ಕೊಡಗು ಕನ್ನಡಿಗ ಎಂಬ ಸಂಘಟನೆ ಮೂಲಕ ವಿರೋಧ ಪ್ರಕಟ ಮಾಡಿದೆ. ಸಮಾನ ಮನಸ್ಕರ ಬೆಂಬಲ ಸಿಕ್ಕಿತು.
  • 1977ರ ನವೆಂಬರ 22ರಂದು ಕೊಡಗಿನಲ್ಲಿ ಇದುವರೆಗೆ ಎಂದೂ ಕಾಣದ ಜನಸಮೂಹದೆದುರು ನನ್ನನ್ನು ಬೆಂಗಳೂರಲ್ಲಿ ಪತ್ರಿಕಾಗೋಷ್ಠಿ ಕರೆದ ಹೇಡಿ ಎಂದು ಬಯ್ಯಲಾಯಿತು. ಬೆಂಗಳೂರು Press Clubನಲ್ಲೂ ಪತ್ರಕರ್ತರು ನಮ್ಮನ್ನು ಜನಬೆಂಬಲ ಇಲ್ಲದವರೆಂದು ಹೀಯಾಳಿಸಿದ್ದರು.
  • 1998ರ ನವೆಂಬರ 23ರಂದು ಸೋಮವಾರ ಪೇಟೆ ಸಮಾವೇಶದಲ್ಲಿ ನಮ್ಮ ಬಲ ಪ್ರದರ್ಶನ ಅಚ್ಚರಿ ತಂದಿತು. ಮಡಿಕೇರಿ ಸಮಾವೇಶದ ಬಳಿಕ ಪ್ರಜಾವೇದಿಕೆ ಮುನ್ನಡೆ ಸಾದಿಸಿತು.
  • 2000ದ ನವೆಂಬರಲ್ಲಿ ಸಾವಿರಾರು ಜನರು ಬಾಡಿಗೆ ರೈಲು ಮೂಲಕ ದೆಹಲಿ ಚಲೋ ಮಾಡಿದಾಗ ದಾರಿಯಲ್ಲಿ ತೊಂದರೆಯಾಗದಿರಲು ನನ್ನಲ್ಲಿ ಸಂಧಾನಕ್ಕೆ ನಾಚಪ್ಪ ಗೆಳೆಯರೊಂದಿಗೆ ಸಂಪಾಜೆಗೆ ಬರಬೇಕಾಯಿತು.
  • 28.12.2000ದಂದು ಜಸ್ಟೀಸ್ ಎಂ. ವೆಂಕಟಾಚಲಯ್ಯರ ಕಮಿಶನ್ಗೆ ಹೋಗಿ ಮನವಿಯೊಂದಿಗೆ ಸಮರ್ಪಕ ಆಧಾರಗಳನ್ನು ಕೊಟ್ಟು ಮನವರಿಕೆ ಮಾಡಿದರ ಪ್ರತಿಫಲವಾಗಿ 2002ರಲ್ಲಿ ನಮ್ಮ ಪರವಾದ ತೀರ್ಪು ಸಿಕ್ಕಿತು. ಇದು ಪ್ರಚಾರವಾಗದಂತೆ ಗೌಪ್ಯವಾಗಿರಿಸುವಲ್ಲಿ ಕೂರ್ಗ್ ನ್ಯಾಶನಲ್ ಕೌನ್ಸಿಲ್ ಯಶಸ್ವಿಯಾಗಿದೆ.

– ಎನ್.ಎಸ್. ದೇವಿಪ್ರಸಾದ್ ಸಂಪಾಜೆ

ಸಾಮರಸ್ಯದ ಕನಸು

ಕೊಡಗಿನಲ್ಲಿ ಕೊಡವರು ಮತ್ತು ಗೌಡರು ಎಂಬ ಸ್ಪಷ್ಟ ವಿಭಜನೆ ಬ್ರಿಟಿಷರ ಕಾಲದಿಂದ ಬಂದದ್ದು ಈಗಲೂ ಉಳಕೊಂಡಿದೆ. ಅದನ್ನು ದೇವಿಪ್ರಸಾದರು ಇಷ್ಟಪಡುವುದಿಲ್ಲ. ಅವರದು ಸಮನ್ವಯ ದೃಷ್ಟಿಕೋನ. 2001ರ ಸೆಪ್ಟೆಂಬರ 15ರಂದು ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಅಮರಕ್ರಾಂತಿ ಉತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಸಂಪಾಜೆಯಲ್ಲಿ ಕೊಡಗಿನಲ್ಲಿ ಭಾಷಾ ಸಾಂಸ್ಕೃತಿಕ ಸಾಮರಸ್ಯವೆಂಬ ವಿಚಾರಗೋಷ್ಠಿ ನಡೆಯಿತು. ಕನ್ನಡ, ತುಳು, ಮಲೆಯಾಳ, ಹವೀಕ, ಅರೆ ಭಾಷೆಗಳಿಂದ ಕೊಡವ ಭಾಷೆ ಪಡಕೊಂಡದ್ದೇನು ಎಂಬ ಬಗ್ಗೆ ಕೋಡೀರ ಲೋಕೇಶ, ಪ್ರಭಾಕರ ಶಿಶಿಲ, ಪೂವಪ್ಪ ಕಣಿಯೂರು, ವಿದ್ಯಾಧರ ಬಡ್ಡಡ್ಕ, ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಶ್ರೀಧರ ಆರಾಧ್ಯ, ದೇವಿಪ್ರಸಾದ್, ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಸಂಶೋಧನಾತ್ಮಕ ಪ್ರಬಂಧ ಮಂಡಿಸಿದರು.

ತಮ್ಮ ಪ್ರಬಂಧದಲ್ಲಿ ಬಾಚರಣಿಯಂಡ ಅಪ್ಪಣ್ಣನವರು ಕೊಡಗಿನಲ್ಲಿ ಸಾಮರಸ್ಯದ ಅನಿವಾರ್ಯತೆಯನ್ನು ವಿವರಿಸಿದ್ದು ಹೀಗೆ : “ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದಗಳು ಹೊರಗಿನ ಸಂಪರ್ಕ ಮತ್ತು ಪ್ರಭಾವಕ್ಕೆ ಒಳಗಾಗದೆ ಪರಿಪಕ್ವತೆ ಪಡೆಯಲು ಸಾಧ್ಯವಿಲ್ಲ. ಕೊಡವ ಭಾಷೆ ದ್ರಾವಿಡ ಭಾಷಾ ಗುಂಪಿಗೆ ಸೇರಿದ ಸ್ವತಂತ್ರ ಭಾಷೆಯಾದರೂ ಇದರಲ್ಲಿ ಶೇಕಡಾ ಎಪ್ಪತ್ತರಷ್ಟು ಕನ್ನಡ, ಮಲಯಾಳ, ತುಳು, ತಮಿಳು ಪದಗಳಿವೆ. ಭಾಷೆಗೆ ಅಷ್ಟೊಂದು ಪದಗಳು ಸೇರಿರುವಾಗ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದಗಳಲ್ಲೂ ಒಂದೊಂದು ಸಂಬಂಧ ಇರಲೇಬೇಕು. ಕೊಡಗಿನ ಮೂರು ತಾಲೂಕುಗಳ ಪೈಕಿ ಮಡಿಕೇರಿ ತಾಲೂಕಿಗೂ ದಕ್ಷಿಣ ಕನ್ನಡದ ಸುಳ್ಯ ತಾಲೂಕಿಗೂ ಪುರಾಣ ಕಾಲದಿಂದಲೂ ನೆಂಟಸ್ತಿಕೆ ಇದೆ. ಆಡಳಿತದ ಸೌಕರ್ಯಕ್ಕಾಗಿ ಭೌಗೋಳಿಕ ಎಲ್ಲೆ ನಿರ್ಮಿಸಿಕೊಂಡ ಮಾತ್ರಕ್ಕೇ ಸಾಂಸ್ಕೃತಿಕವಾಗಿ ಮತ್ತು ಭಾವನಾತ್ಮಕವಾಗಿ ಬೇರೆಯಾಗಲು ಸಾಧ್ಯವೇ ಇಲ್ಲ. ಅದು ಹಾಲಿನಲ್ಲಿ ನೀರು ಬೆರೆತಂತೆ ಬೆರೆತು ಹೋಗಿದೆ.” (ಕೊಡಗಿನಲ್ಲಿ ಭಾಷಾ ಸಾಂಸ್ಕೃತಿಕ ಸಾಮರಸ್ಯ 2003, ಪುಟ 57)

ತಮ್ಮ ಸಮನ್ವಯ ದೃಷ್ಟಿಯನ್ನು ಈ ಮಾತುಗಳಲ್ಲಿ ದೇವಿಪ್ರಸಾದರು ಅಬಿವ್ಯಕ್ತಿಸಿದ್ದಾರೆ : “ಕೊಡವ ಭಾಷೆಯನ್ನು ಹದಿನೆಂಟು ಜಾತಿಯವರು ಮಾತಾಡುತ್ತಾರೆ. ಈ ಜಾತಿಗಳು ಕುಲ ಕಸುಬನ್ನು ಅವಲಂಬಿಸಿರುವ ಕಾರಣ ಇವರೊಳಗೆ ಮೇಲು ಕೀಳು ಭಾವನೆ ಅತಿಯಾಗಿ ಕಂಡುಬರುತ್ತದೆ. ಇವರೊಳಗೆ ಅಂತರ್ಜಾತಿ ವಿವಾಹದ ಸಾಧ್ಯತೆಗಳೇ ಇಲ್ಲ. ಬ್ರಿಟಿಷರ ಆಳ್ವಿಕೆಯ ದಿನಗಳಲ್ಲಿ ಕೊಡವರು ಅನೇಕ ವಕ್ಕಲಿಗರ ಕುಟುಂಬಗಳನ್ನು ಸೇರಿಸಿ ಕೊಂಡಿರುವುದು ತಿಳಿದು ಬರುತ್ತದೆ. ಕೊಡವ ಸಂಸ್ಕೃತಿಯನ್ನು ವಿಸ್ತರಿಸಲು ಇಂದಿನ ಕಾಲದಲ್ಲಿ ಈ ವಿಧಾನ ಅಸಂಭವವೆನ್ನಿಸುತ್ತದೆ. ಕೊಡಗಿನ ಚಾವು ಪಾಟಿನಲ್ಲಿ ಹಿರಿಯರು ಕಿರಿಯರಿಗೆ ಹೇಳುವ ಬುದ್ಧಿ ಮಾತಿನ ಕನ್ನಡಾನುವಾದ ಹೀಗಿದೆ :

“ಚೆನ್ನಾಗಿ ಬದುಕಿರಿ ಮಕ್ಕಳೆ | ಅನ್ಯಾಯ ಮಾಡಬೇಡಿ ಮಕ್ಕಳೆ
ಆಗದ್ದು ಮಾಡಬೇಡಿ ಮಕ್ಕಳೆ | ಬೇಡದ್ದು ಮಾಡಬೇಡಿ ಮಕ್ಕಳೆ
ನಿಮ್ಮೆದುರಾಳಿನ ಮಕ್ಕಳೆ | ಹಗ್ಗ ವಿಲ್ದೆ ಕಟ್ಟಿರಿ ಮಕ್ಕಳೆ
ಕೋಲಿಲ್ದೆ ಹೊಡೆಯುತ ಮಕ್ಕಳೆ | ನಯವಾಗಿ ತಡೆಯಿರಿ ಮಕ್ಕಳೆ”

ಇದನ್ನು ಪಾಲಿಸುವ ಮೂಲಕ ಪ್ರೀತಿಯಿಂದ ತಮ್ಮ ಸುತ್ತಮುತ್ತಲಿನವರನ್ನು ಕೊಡಗಿನಾದ್ಯಂತ ಕೊಡವ ಸಂಸ್ಕೃತಿಗೆ ಆಕರ್ಷಿಸಲು ಸಾಧ್ಯವಿಲ್ಲವೆ?” (ಕೊಡಗಿನಲ್ಲಿ ಭಾಷಾ ಸಾಂಸ್ಕೃತಿಕ ಸಾಮರಸ್ಯ 2003, ಪುಟ 11)

ದೇವಿಪ್ರಸಾದರು ಕೊಡಗನ್ನು ಕರ್ನಾಟಕದಲ್ಲಿ ಉಳಿಸಿದ ದೀರ. ಅದಕ್ಕಾಗಿ ಅವರು ತಮ್ಮ ಪ್ರಾಣವನ್ನೇ ಪಣವಾಗಿಟ್ಟಿದ್ದರು. 2003ರಲ್ಲಿ ದೇವಿಪ್ರಸಾದರಿಗೆ 60 ತುಂಬಿದ ಪ್ರಯುಕ್ತ ಅಬಿಮಾನಿಗಳು ಷಷ್ವಬ್ದ ಸಮಾರಂಭ ಏರ್ಪಡಿಸಿದರು. ಅಂದು ಆದಿ ಚುಂಚನಗಿರಿಯ ಶ್ರೀಗಳು “ಅಖಂಡ ಕರ್ನಾಟಕಕ್ಕಾಗಿ ಈಗಲೂ ಹೋರಾಡುವವರಿದ್ದಾರೆ ಎನ್ನುವುದೇ ಆಶ್ಚರ್ಯದ ಸಂಗತಿ. ದೇವಿಪ್ರಸಾದರಿಗೆ ರಾಜ್ಯಪ್ರಶಸ್ತಿ ಸಿಗಲೇಬೇಕು” ಎಂದರು.

ಅದು ನಿಜ. ಆದರೆ ದೇವಿಪ್ರಸಾದರಿಗೆ ರಾಜ್ಯಪ್ರಶಸ್ತಿ ಮಾತ್ರ ಇನ್ನೂ ಸಿಕ್ಕಿಲ್ಲ!