ಸಂಪಾಜೆ, ಕೊಡಗು ಮತ್ತು ದಕ್ಷಿಣಕನ್ನಡ ಜಿಲ್ಲೆಗಳ ಸಂಗಮ ಸ್ಥಳ. ಸುತ್ತಲಿನ ಬೆಟ್ಟ ಗುಡ್ಡ ಮತ್ತು ಊರಲ್ಲಿ ಹರಿಯುವ ಎರಡು ಹೊಳೆಗಳಿಂದಾಗಿ ಸದಾ ತಂಪಾಗಿರುವ ಈ ಊರಿನ ಹೆಸರಿಗೆ ಕಾರಣ ಇಲ್ಲಿನ ಹವಾಮಾನವೆಂದು ಹಿರಿಯರು ಹೇಳುತ್ತಾರೆ. ಸಂಪಾಜೆ ಎರಡೂ ಜಿಲ್ಲೆಗಳಲ್ಲಿ ಹಂಚಿ ಹೋಗಿದೆ. ಮಂಗಳೂರು-ಮೈಸೂರು ರಸ್ತೆ ಊರ ಮಧ್ಯದಲ್ಲಿ ಹಾದು ಹೋಗದಿರುತ್ತಿದ್ದರೆ ಸಂಪಾಜೆ ಹೊರ ನಾಡಿಗರ ನೆನಪಲ್ಲಿ ಉಳಿಯುತ್ತಿರಲಿಲ್ಲ.

ಕೆಲವು ಊರುಗಳು ತಮ್ಮನ್ನು ಅಲ್ಲಿನ ಸಾಧಕರೊಡನೆ ಸಮೀಕರಿಸುವುದುಂಟು. ಆಗ ಊರು ಒಂದು ವ್ಯಕ್ತಿತ್ವವಾಗಿ ಮಾರ್ಪಾಡುಗೊಳ್ಳುತ್ತದೆ. ಮಂಜೇಶ್ವರ ಎಂದಾಗ ನಮಗೆ ನೆನಪಾಗುವುದು ಊರಲ್ಲ; ಗೋವಿಂದ ಪೈಗಳು! ಕುಪ್ಪಳ್ಳಿ ಎಂದಾಗ ಕುವೆಂಪು ನಮ್ಮ ಮುಂದೆ ಪ್ರತ್ಯಕ್ಷರಾಗಿ ಬಿಡುತ್ತಾರೆ. ಸುಳ್ಯದ ಹೆಸರು ಬಂದ ತಕ್ಷಣ ಕುರುಂಜಿ ವೆಂಕಟ್ರಮಣ ಗೌಡರ ಹೆಸರು ನೆನಪಾಗುತ್ತದೆ. ಸಂಪಾಜೆ ಎಂದಾಗ ಜನರು ನೆನಪಿಸಿಕೊಳ್ಳುವುದು ದೇವಿ ಪ್ರಸಾದರನ್ನು.

ಅದು ನಂಜಯ್ಯನ ಮನೆ

ದೇವಿಪ್ರಸಾದರ ತಂದೆ ನಂಜಯ್ಯನ ಮನೆ ಸಣ್ಣಯ್ಯ ಪಟೇಲರು. ನಂಜಯ್ಯ ಐತಿಹ್ಯ ಪುರುಷನಾದರೆ ಸಣ್ಣಯ್ಯ ಪಟೇಲರು ತಮ್ಮ ಸಾಧನೆಗಳಿಂದ ಕೊಡಗಿನ ಇತಿಹಾಸದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದವರು. 1834ರಲ್ಲಿ ಕೊಡಗಿನ ರಾಜ ಚಿಕ್ಕವೀರನನ್ನು ಪದಚ್ಯುತಿಗೊಳಿಸಿ ರಾಜ್ಯದ ಆಡಳಿತವನ್ನು ಈಸ್ಟ್ ಇಂಡಿಯಾ ಕಂಪೆನಿ ಕೈಗೆತ್ತಿಕೊಂಡಿತು. ದಕ್ಷಿಣ ಕೊಡಗು ಇದಕ್ಕೆ ಯಾವುದೇ ಪ್ರತಿಕ್ರಿಂುೆು ತೋರಲಿಲ್ಲ. ಉತ್ತರ ಕೊಡಗಿನಲ್ಲಿ ಸ್ವಾಮಿ ಅಪರಂಪರ, ಹುಲಿ ಕಡಿದ ನಂಜಯ್ಯ, ಕಲ್ಯಾಣ ಸ್ವಾಮಿ ಮತ್ತು ಪುಟ್ಟ ಬಸವ ಜನರನ್ನು ಬ್ರಿಟಿಷರ ವಿರುದ್ಧ ಸಂಘಟಿಸಿ ರಾಜ ಪ್ರಭುತ್ವವನ್ನು ಮರಳಿ ತರಲು ಯತ್ನಿಸಿದರು. 1834ರ ವರೆಗೆ ಕೊಡಗಿನ ಭಾಗವಾಗಿದ್ದ ಸುಳ್ಯ ಮತ್ತು ಪುತ್ತೂರುಗಳ 110 ಗ್ರಾಮಗಳನ್ನು ಬ್ರಿಟಿಷರು ಆಡಳಿತದ ಅನುಕೂಲಕ್ಕಾಗಿ ದಕ್ಷಿಣ ಕನ್ನಡಕ್ಕೆ ಸೇರಿಸಿದರು. ದಕ್ಷಿಣ ಕನ್ನಡದಲ್ಲಿ ಉತ್ಪತ್ತಿಯ ಸುಮಾರು ಶೇ. 50 ರಷ್ಟನ್ನು ಕಂದಾಯ ರೂಪದಲ್ಲಿ ಕಟ್ಟಬೇಕಿತ್ತು. ಉಪ್ಪು-ಹೊಗೆಸೊಪ್ಪುಗಳ ವ್ಯಾಪಾರ ಸರಕಾರದ ಸ್ವಾಮ್ಯಕ್ಕೊಳಪಟ್ಟು ಅವುಗಳ ಬೆಲೆ ಯದ್ವಾತದ್ವಾ ಏರಿತ್ತು. ಬ್ರಿಟಿಷ್ ಕೃಪಾ ಪೋಷಿತ ವ್ಯಾಪಾರಿಗಳು ಸಂದರ್ಭದ ದುರ್ಲಾಭ ಪಡೆದುಕೊಂಡರು. ಕಂದಾಯ ಕಟ್ಟಲಾಗದ ರೈತರು ಭೂಮಿಯನ್ನು ವ್ಯಾಪಾರಿಗಳಿಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಉದ್ಭವವಾಯಿತು.

ಇದು ಅಮರ ಸುಳ್ಯ ಸೀಮೆಯಲ್ಲಿ ರೈತರ ಸಂಘಟನೆಗೆ ಅವಕಾಶ ಕಲ್ಪಿಸಿಕೊಟ್ಟಿತು. ಕೂಜುಗೋಡಿನ ಪಟೇಲ ಮಲ್ಲಪ್ಪ ಮತ್ತು ಸೋದರ ಅಪ್ಪಯ್ಯ, ಕೆದಂಬಾಡಿ ರಾಮಗೌಡ, ಗುಡ್ಡೆಮನೆ ಅಪ್ಪಯ್ಯ ಮತ್ತು ತಮ್ಮಯ್ಯ, ಪೆರಾಜೆ ಊಕಣ್ಣ, ಮುಳ್ಯ ಸೋಮಯಾಜಿ ಮುಂತಾದವರು ರೈತರನ್ನು ಬ್ರಿಟಿಷರ ವಿರುದ್ಧ ಸಂಘಟಿಸುವುದರಲ್ಲಿ ಸಫಲರಾದರು. ಕ್ರಾಂತಿಯ ರೂಪುರೇಷೆಗಳನ್ನು ಸಿದ್ಧಪಡಿಸಿದವನು ಹುಲಿಕಡಿದ ನಂಜಯ್ಯ. ಜನರ ಬೆಂಬಲ ದೊರೆಯಬೇಕೆಂಬ ಉದ್ದೇಶದಿಂದ ಕೊಡಗಿನ ಕೊನೆಯ ರಾಜ ಚಿಕ್ಕವೀರನ ದೊಡ್ಡಪ್ಪ ಅಪ್ಪಾಜಿ ರಾಜನ ಇಬ್ಬರು ಮಕ್ಕಳು ಜೀವಂತವಿದ್ದಾರೆ ಮತ್ತು ಬಂಡಾಯದ ನೇತೃತ್ವ ಅವರದು ಎಂಬ ಸುದ್ದಿ ಹಬ್ಬಿಸಲಾಯಿತು. ಹೋರಾಟದ ವಿವಿಧ ಹಂತಗಳಲ್ಲಿ ಸ್ವಾಮಿ ಅಪರಂಪರ ಮತ್ತು ಕಲ್ಯಾಣಸ್ವಾಮಿ ಬಂದಿಸಲ್ಪಟ್ಟರು. ಆಗ ಹುಲಿಕಡಿದ ನಂಜಯ್ಯ ಪುಟ್ಟ ಬಸವನನ್ನು ಪೂಮಲೆಗೆ ಕರೆತಂದು ಮಂಗಳೂರನ್ನು ಬ್ರಿಟಿಷರಿಂದ ವಿಮುಕ್ತಿಗೊಳಿಸುವ ಂುೋಜನೆ ರೂಪಿಸಿದ. ಕ್ರಾಂತಿ ಆರಂಭದಲ್ಲಿ ಯಶಸ್ವಿಯಾದರೂ ಕೊನೆಗೆ ಬ್ರಿಟಿಷರು ಮೇಲುಗೈ ಪಡೆದು ಕ್ರಾಂತಿಯನ್ನು ಹತ್ತಿಕ್ಕಿ ಬಿಟ್ಟರು. ಒಂದು ಸ್ವಾತಂತ್ರ ್ಯ ಸಮರವನ್ನು ಕಲ್ಯಾಣ ಸ್ವಾಮಿಯ ಕಾಟಕಾಯಿ ಎಂದು ಲಘುವಾಗಿ ಕರೆದರು.

ಎನ್.ಎಸ್.ಡಿ.- ಹೃಸ್ವವನ್ನು ದೀರ್ಘಗೊಳಿಸಿದರೆ ನಂಜಯ್ಯನ ಮನೆ ಸಣ್ಣಯ್ಯ ಪಟೇಲ ದೇವಿಪ್ರಸಾದ್ ಎಂದಾಗುತ್ತದೆ. ಅವರ ರಂಗಾಸಕ್ತಿಗಾಗಿ ಆಪ್ತರು ಅವರನ್ನು ನ್ಯಾಶನಲ್ ಸ್ಕೂಲ್ ಓಫ್ ಡ್ರಾಮಾಸ್ – ಎಂದು ಕರೆಯುವುದುಂಟು. ಅವರ ಮನೆಗೆ ಆ ಹೆಸರು ಬರಲು ಕಾರಣನಾದ ನಂಜಯ್ಯ ಯಾರು ಎನ್ನುವುದು ಈಗಲೂ ನಿಗೂಢವಾಗಿದೆ. ಆತ ಅಮರ ಸುಳ್ಯ ರೈತ ಬಂಡಾಯಕ್ಕೆ ಮಾರ್ಗದರ್ಶನ ಮಾಡಿದ ಹುಲಿಕಡಿದ ನಂಜಯ್ಯ ನಿರಬಹುದೆಂಬ ಗುಮಾನಿ ಕೆಲವು ವಿದ್ವಾಂಸರದು. ಆತ ಹುಲಿಯಿಂದ ಕಚ್ಚಿಸಿಕೊಂಡು ಹುಲಿಕಡಿದ ನಂಜಯ್ಯನಾದನೋ ಅಥವಾ ಹುಲಿಯನ್ನು ಕತ್ತಿಯಿಂದ ಕಡಿದು ಓಡಿಸಿದ್ದಕ್ಕೆ ಆ ಹೆಸರು ಬಂತೋ – ಸ್ಪಷ್ಟ ಆಧಾರಗಳಿಲ್ಲ. ಸ್ವತಃ ದೇವಿಪ್ರಸಾದರಿಗೆ ತನ್ನ ಕುಟುಂಬದ ಮೂಲಪುರುಷ ಹುಲಿಕಡಿದ ನಂಜಯ್ಯನಿರಬಹುದೆಂಬ ಊಹೆಯ ಬಗ್ಗೆ ಆಸಕ್ತಿಯೇನಿಲ್ಲ. ಮೂಲದ ಶೋಧನೆಯಿಂದ ಸಾದಿಸುವುದೇನಿಲ್ಲ. ನದಿ-ಋಷಿ-ಸ್ತ್ರೀ ಮೂಲಗಳಂತೆ ವಂಶ ಮೂಲವನ್ನು ಶೋದಿಸಬಾರದು. ನಾವು ವಿಘಟನೆಗೊಳ್ಳುವ ಯಾವ ವಿಷಯದ ಬಗ್ಗೆಯೂ ನನಗೆ ಆಸಕ್ತಿ ಇಲ್ಲ” ಎನ್ನುತ್ತಾರೆ ಅವರು.

ತುಂಬ ಸಿರಿವಂತಿಕೆಯ ಹಿನ್ನೆಲೆಯ ದೇವಿಪ್ರಸಾದರ ಮನೆಯ ಬಗ್ಗೆ ಇನ್ನೊಂದು ಐತಿಹ್ಯವಿದೆ. ಅಲ್ಲೊಂದು ಕೊಪ್ಪರಿಗೆ (ನಿದಿ) ಕಾಣಸಿಕ್ಕಿತು. ಸಣ್ಣಯ್ಯ ಪಟೇಲರು ಅದನ್ನು ಸರಪಳಿಗಳಿಂದ ಕಟ್ಟಿ ಹಾಕಿದ್ದಾರೆ. ಅದು ಈಗಲೂ ಇದೆ – ಎನ್ನುವ ಮಾತು ಜನಜನಿತ ವಾಗಿದೆ. ದೇವಿಪ್ರಸಾದರ ಮನೆಯಂಗಳದಲ್ಲಿ ವೀರಭದ್ರನ ಗುಡಿಯಿದೆ. ಅಲ್ಲೆಲ್ಲೋ ನಿದಿ ಇರಬಹುದೆಂದು ಚೋರರು ಒಂದೆರಡು ಬಾರಿ ಅಂಗಳವನ್ನು ಅಗೆದಿದ್ದರು. “ಅಗೆಯುವವರೆಲ್ಲಾ ಬಂದು ಅಗೆಯಲಿ. ನಿದಿ ಸಿಕ್ಕವರು ಅರ್ಧಪಾಲು ನನಗೆ ಕೊಡಲಿ” ಎಂದು ದೇವಿಪ್ರಸಾದರು ನಿದಿ ಚೋರರಿಗೆ ಮುಕ್ತ ಆಹ್ವಾನ ನೀಡಿದ್ದಾರೆ!

ಸಣ್ಣಯ್ಯ ಎಂಬ ಪಟೇಲರು

ದೇವಿಪ್ರಸಾದರ ತಂದೆ ಸಣ್ಣಯ್ಯ ಸಂಪಾಜೆ ಗ್ರಾಮದ ಪಟೇಲರಾಗಿದ್ದವರು. ಬ್ರಿಟಿಷರ ಯುಗದ ಪಟೇಲತನ ಈಗಿನ ಜಿಲ್ಲಾದಿಕಾರಿಯ ಸ್ಥಾನಕ್ಕೆ ಸಮಾನ! ಸಣ್ಣಯ್ಯ ಪಟೇಲರು ಅದಿಕಾರವಿರುವುದು ಜನರ ಕಲ್ಯಾಣಕ್ಕಾಗಿ ಎಂಬ ಅರಿವಿದ್ದವರು. ಸುಳ್ಯ- ಸಂಪಾಜೆ ಸೀಮೆಗಳ ಬಹುಸಂಖ್ಯಾತರಾದ ಅರೆಭಾಷಿಕ ಗೌಡ ಸಮುದಾಯ ಆಗ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಳ ಹಿಂದುಳಿದಿತ್ತು. ಅಜ್ಞಾನ, ಅನಕ್ಷರತೆ, ಮೂಢನಂಬಿಕೆ ಮತ್ತು ಪುರೋಹಿತಶಾಹಿ ಶೋಷಣೆಗಳಿಂದ ಈ ಜನಾಂಗವನ್ನು ಪಾರು ಮಾಡಲು ಸಂಘಟನೆಯೊಂದರ ಅಗತ್ಯವಿದೆಯೆಂಬುದನ್ನು ಸಣ್ಣಯ್ಯ ಪಟೇಲರು ಮನಗಂಡರು. ಗೌಡ ಸಮುದಾಯಕ್ಕಿಂತಲೂ ಹಿಂದುಳಿದ ಜನಾಂಗಗಳ ಅಬಿವೃದ್ಧಿಯತ್ತಲೂ ಅವರು ಮನಸ್ಸು ಮಾಡಿದರು. ಅದರ ಫಲವಾಗಿ ಸಂಪಾಜೆಯಲ್ಲೊಂದು ಶಾಲೆ ಸ್ಥಾಪನೆಯಾಯಿತು. ಅದು ಹಿಂದುಳಿದವರನ್ನು ಸಾಮಾಜಿಕವಾಗಿ ಮೇಲೆತ್ತುವ ಒಂದು ಪ್ರಯತ್ನವಾಗಿತ್ತು. ಸಣ್ಣಯ್ಯ ಪಟೇಲರ ಭಗೀರಥ ಯತ್ನವು ಸಂಪಾಜೆಯಲ್ಲೊಂದು ಸಹಕಾರಿ ಸಂಘವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಯಿತು. ಅದು ಎಲ್ಲರನ್ನೂ ಒಗ್ಗೂಡಿಸಿ ಪ್ರಗತಿ ಪಥದಲ್ಲಿ ಮುನ್ನಡೆಯುವ ಅಪೂರ್ವ ಪ್ರಯತ್ನವಾಗಿತ್ತು.

ಪಟೇಲನಾಗಿದ್ದು ಎಲ್ಲರೊಡನೆ ವ್ಯವಹರಿಸಿ ಅಪಾರ ಲೋಕಜ್ಞಾನ ಹೊಂದಿದ್ದ ಸಣ್ಣಯ್ಯ ಪಟೇಲರು ತನ್ನ ಜಾತಿ ಮಾತ್ರ ಉದ್ಧಾರವಾದರೆ ಸಾಕೆಂಬ ಸ್ವಾರ್ಥಿಯಾಗಿರಲು ಸಾಧ್ಯವಿರಲಿಲ್ಲ. ಅವರೊಬ್ಬರು ಐತಿಹ್ಯ ಪುರುಷರಾಗಿ ಈಗಲೂ ಜನರ ಮಧ್ಯೆ ಬದುಕಿದ್ದರೆ ಅದಕ್ಕೆ ಅವರ ಸರ್ವ ಸಮಾನತಾ ಭಾವವೇ ಕಾರಣ. ದೇವಿಪ್ರಸಾದರು ಅಪ್ಪ ಹೇಳುತ್ತಿದ್ದ ಇದೊಂದು ಮಾತನ್ನು ಆಗಾಗ ಉದ್ಧರಿಸುತ್ತಿರುತ್ತಾರೆ : “ಭಾಷೆ, ಗಡಿ, ಜಾತಿ ಇತ್ಯಾದಿಗಳು ನೀವು ಮಾಡಿಕೊಂಡಿರುವ ವ್ಯವಸ್ಥೆಗಳು. ಅಗತ್ಯ ಬಿದ್ದಾಗ ಅವುಗಳನ್ನು ಮೀರಿ ನಿಲ್ಲುವುದೇ ಮಾನವೀಯತೆ.”

ಸಣ್ಣಯ್ಯ ಪಟೇಲರು ಆ ಕಾಲದಲ್ಲಿ ಕೆಲವು ದಾಖಲೆಗಳನ್ನು ನಿರ್ಮಿಸಿದ್ದನ್ನು ಹಿರಿಯರು ನೆನಪಿಸಿಕೊಳ್ಳುವುದುಂಟು. ಸಂಪಾಜೆ ಆಸುಪಾಸಿನಲ್ಲಿ ಮೊದಲ ಕಾರು ತೆಗೆದವರು ಅವರು! ಕೊಡಗಿನ ನಾಲ್ಕು ನಾಡು ಅರಮನೆಯನ್ನು ಹೋಲುವ ಮೊದಲ ಮಹಡಿ ಮನೆ ಕಟ್ಟಿಸಿದ್ದು ಅವರ ಇನ್ನೊಂದು ದಾಖಲೆ. ಕೊಡಗು ಸಿ ರಾಜ್ಯದ ಸ್ಥಾನಮಾನ ಹೊಂದಿದ್ದಾಗ ಕೊಡಗಿನ ಚೀಫ್ ಕಮೀಶನರ್ ಆಗಿದ್ದವರು ದಯಾಸಿಂಗ್ ಬೇಡಿಯವರು. ಅವರು ಸಣ್ಣಯ್ಯ ಪಟೇಲರ ಮನೆಗೆ ಬಂದು ಆತಿಥ್ಯ ಸ್ವೀಕರಿಸುವಷ್ಟು ಆತ್ಮೀಯರಾಗಿದ್ದರು. ಕೊಡಗಿನಲ್ಲಿ ವಿನೋಬಾ ಭಾವೆಯವರಿಗೆ ಭೂದಾನ ಮಾಡಿದ ಪ್ರಥಮ ವ್ಯಕ್ತಿ, ಮತ್ತೆ ಅವರೇ, ಸಣ್ಣಯ್ಯ ಪಟೇಲರು!

ಈ ಘಟನೆಯನ್ನು ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಹೀಗೆ ವಿವರಿಸಿದ್ದಾರೆ : ‘‘1957ನೆಯ ಇಸವಿ ಸೆಪ್ಟೆಂಬರ್ ತಿಂಗಳಲ್ಲಿ ಭೂದಾನ ಯಜ್ಞದ ಜನಕ ಸಂತ ವಿನೋಬಾ ಭಾವೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೊಡಗು ಜಿಲ್ಲೆಗೆ ಕಾಲಿಡುವ ಸನ್ನಿವೇಶ. ಅವರೊಡನೆ ನಾನೂ ಒಬ್ಬ ಸರ್ವೋದಯ ಕಾರ್ಯಕರ್ತನಾಗಿ ಸುತ್ತುತ್ತಿದ್ದ ಕಾಲ… ಕೊಡಗಿಗೆ ಸರ್ವೋದಯ ನಾಯಕರು ಕಾಲಿಡುತ್ತಿದ್ದಂತೆ ವಿನೋಬಾರನ್ನು ಸ್ವಾಗತಿಸಲು ಸಂಪಾಜೆ ಸಣ್ಣಯ್ಯ ಪಟೇಲರು ನಿಂತಿದ್ದರು. ಆ ದಿನ ಕೊಡಗಿನ ಪ್ರಪ್ರಥಮ ಭೂದಾನ, ಐದು ಎಕರೆ ಉತ್ತಮ ಜಮೀನು ವಿನೋಬಾರಿಗೆ ಪಟೇಲರಿಂದ ದೊರಕಿತು. ಆ ಸಭೆಯಲ್ಲಿ ವಿನೋಬಾರವರು – ಆಂಧ್ರದ ಪೋ ಚಂಪಲ್ಲಿಯ ರಾಮರೆಡ್ಡಿ ಮೊದಲನೇ ಭೂದಾನಿಯಾದರೆ, ಪುಟ್ಟ ಜಿಲ್ಲೆ ಕೊಡಗಿನಲ್ಲಿ ಸಣ್ಣಯ್ಯ ಪಟೇಲರು ಭೂದಾನಕ್ಕೆ ನಾಂದಿ ಹಾಡಿದ್ದಾರೆ – ಎಂದು ಸಾರಿದರು.’’ (ಸಮರಸ, 2003. ಪು. 150.)

ಸಣ್ಣಯ್ಯ ಪಟೇಲರು ಕೊಡಗಿನಲ್ಲಿ ಭೂದಾನ ಮಾಡಿದ ಪ್ರಥಮ ವ್ಯಕ್ತಿ ಮಾತ್ರವಲ್ಲ ಏಕೈಕ ವ್ಯಕ್ತಿ ಇರಬೇಕೆಂದು ಅಪ್ಪಣ್ಣ ದಾಖಲಿಸಿದ್ದಾರೆ. ಸಣ್ಣಯ್ಯ ಪಟೇಲರು ಸಮಾಜ ಸೇವೆಗಾಗಿ ರಾಜ್ಯ ಪ್ರಶಸ್ತಿ ಪಡೆದವರು. ಅವರಿಂದ ತಾನು ಎರಡು ಪಾಠಗಳನ್ನು ಕಲಿತುಕೊಂಡದ್ದಾಗಿ ದೇವಿಪ್ರಸಾದರು ಹೇಳುತ್ತಿರುತ್ತಾರೆ.

ಪಾಠ ಒಂದು : ಕೇವಲ ನಿನಗಾಗಿ ಮಾತ್ರ ಬದುಕಬೇಡ.

ಪಾಠ ಎರಡು : ಎಂತಹ ಸಂದರ್ಭದಲ್ಲೂ ಮನುಷ್ಯತ್ವ ಬಿಡಬೇಡ.

ಸಣ್ಣಯ್ಯ ಪಟೇಲರು ಕಟ್ಟಿಸಿದ ನಂಜಯ್ಯನ ಮನೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಒಳಭಾಗದಲ್ಲಿ ಮತ್ತು ಎಡಭಾಗದಲ್ಲಿ ದೇವಿಪ್ರಸಾದರು ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾರೆ. ಅವರ ಮನೆ ಒಂದು ಐತಿಹಾಸಿಕ ಸ್ಮಾರಕದಂತಿದೆ. ಅದರ ದಿವಾನಖಾನೆ, ಬೋದಿಗೆ ಕಂಬಗಳು, ಪತ್ತಾಯ, ಅಟ್ಟ, ನೆಲಮಾಳಿಗೆ – ನಮ್ಮನ್ನು ಅಜ್ಞಾತಲೋಕಕ್ಕೆ ಒಯ್ಯುತ್ತವೆ. ಅವರ ಅಬಿರುಚಿಯನ್ನು ಸಾರುವ ಶಿಲ್ಪಗಳು, ಐತಿಹಾಸಿಕ ವಸ್ತುಗಳು, ಸುಂದರ ವರ್ಣಚಿತ್ರಗಳು ಒಪ್ಪವಾಗಿ ಜೋಡಿಸಿಡಲ್ಪಟ್ಟಿವೆ. ಆ ಮನೆಯನ್ನು ನೋಡುವಾಗೆಲ್ಲಾ ನನಗೆ ದಕ್ಷಿಣ ಫ್ರಾನ್ಸಿನಲ್ಲಿ ನಾನು ನೋಡಿದ್ದ, ಪೆಜೆನಾಸ್ ಪಟ್ಟಣ ನೆನಪಿಗೆ ಬರುತ್ತದೆ. ಅದು ಖ್ಯಾತ ನಾಟಕಕಾರ ಮೋಲಿಯೇರ್ ಬಾಳಿ ಬದುಕಿ, ಬಣ್ಣ ಹಚ್ಚಿ ಕುಣಿದ ಪಟ್ಟಣ. ಅಲ್ಲಿನ ಮನೆಗಳ ಹೊರಸ್ವರೂಪವನ್ನು ಬದಲಾಯಿಸಲು ಪುರಸಭೆ ಬಿಡುತ್ತಿಲ್ಲ. ಅಲ್ಲಿ ಹೊಸಮನೆಗಳನ್ನು ಕಟ್ಟಿಕೊಳ್ಳಲು ಅನುಮತಿಯಿಲ್ಲ. ಕಟ್ಟಡಗಳಿಗೆ ಯಾವ ಬಣ್ಣ ಬಳಿಯಬೇಕೆಂಬುದನ್ನು ಪುರಸಭೆ ನಿರ್ಧರಿಸುತ್ತದೆ. ಹಾಗಾಗಿ ಇಡೀ ಪಟ್ಟಣಕ್ಕೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಬಂದು ಬಿಟ್ಟಿದೆ. ಅದು ಇತಿಹಾಸವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ಬಗೆ. ದೇವಿಪ್ರಸಾದರ ಆಸಕ್ತಿಯ ಕ್ಷೇತ್ರಗಳೂ ಅವೇ ಇತಿಹಾಸ ಮತ್ತು ಸಂಸ್ಕೃತಿ.

ಸಾರೋಟಿನ ಸಾಹುಕಾರ

ಸಂಪಾಜೆ ಸಣ್ಣಯ್ಯ ಪಟೇಲ ಮತ್ತು ಪೂವಮ್ಮ ದಂಪತಿಯರಿಗೆ ಮಗನಾಗಿ 1942ರ ಎಪ್ರಿಲ್ 27ರಂದು ದೇವಿಪ್ರಸಾದ್ ಜನಿಸಿದಾಗ ದೇಶದಲ್ಲಿ ಬ್ರಿಟಿಷರ ವಿರುದ್ಧ ಭಾರತ ಬಿಟ್ಟು ತೊಲಗಿ ಚಳವಳಿ ಬೀಜ ರೂಪದಲ್ಲಿತ್ತು. ಈ ಮೊದಲಿನವು ಹೆಣ್ಣು ಮಕ್ಕಳಾಗಿದ್ದುದರಿಂದ ಗಂಡೊಂದು ಬೇಕೆಂದು ಕಟೀಲು ಮಾತೆಗೆ ಹರಿಕೆ ಹೇಳಿದ ಕಾರಣ ಹುಟ್ಟಿದ್ದಕ್ಕೆ ದೇವಿಪ್ರಸಾದ್ ಎಂದು ಹೆಸರಿಟ್ಟದ್ದು! ಹಾಗಂತ ತನ್ನ ಹೆಸರಿನ ಮೂಲವನ್ನು ಅವರು ಬಹಿರಂಗಪಡಿಸುತ್ತಾರೆ. ದೇವಿಪ್ರಸಾದರ ಸಹಧರ್ಮಿಣಿ ಇಂದಿರಾ. ಈ ದಂಪತಿಗೆ ಸಹನಾ, ಪ್ರಜ್ಞಾ ಎಂಬೆರಡು ಹೆಣ್ಮಕ್ಕಳಾದ ಬಳಿಕ ಜನಿಸಿದ ದೇವಿ ಚರಣ ಕಟೀಲು ಮಾತೆಗೆ ಹರಿಕೆ ಹೇಳಿದ್ದರಿಂದಲೇ ಜನಿಸಿದವ ಎಂದು ದೇವಿಪ್ರಸಾದರು ಹೇಳುತ್ತಿರುತ್ತಾರೆ. ದೇವಿಚರಣನನ್ನು ನೋಡಿದರೆ ದೇವಿಪ್ರಸಾದರು ಯವ್ವನದ ದಿನಗಳಲ್ಲಿ ಹೇಗಿದ್ದಿರಬಹುದು ಎಂದು ಧಾರಾಳ ಊಹಿಸಬಹುದು. ತಂದೆಗೆ ತಕ್ಕ ಮಗ!

ದೇವಿಪ್ರಸಾದರದು ಸುಂದರ ರೂಪ ಮತ್ತು ಭವ್ಯ ನಿಲುವು. ಅವರು ಮೈಸೂರಲ್ಲಿ ಓದುತ್ತಿದ್ದಾಗ ಅನೇಕ ಮಲ್ಲಿಗೆಗಳ ಹೃದಯಗಳಿಗೆ ಲಗ್ಗೆ ಹಾಕಿದ್ದರೆ ಅದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಸಂಪಾಜೆಯ ಅವರ ನಂಜಯ್ಯನ ಮನೆ ಅದು ಒಂದು ಕಾಲದಲ್ಲಿ ಊರವರ ಪಾಲಿಗೆ ನ್ಯಾಯ ದೇಗುಲ.

ದೇವಿಪ್ರಸಾದರ ಸೋದರಳಿಯ ಎಂ.ಬಿ. ಸದಾಶಿವ ಆ ದಿನಗಳನ್ನು ನೆನೆದುಕೊಳ್ಳುತ್ತಾರೆ : “ನನ್ನ ಮಾವ ದೇವಿಪ್ರಸಾದರು ಬಾಲ್ಯದ ದಿನಗಳಿಂದಲೇ ನನ್ನ ಜೀವನಕ್ಕೆ ಸ್ಫೂರ್ತಿಯಾದವರು. ಹತ್ತರ ಹರೆಯದಲ್ಲಿದ್ದಾಗ ತಾಯಿಯ ತವರಿನ ಉಪ್ಪರಿಗೆಯ ಕೋಣೆಯಲ್ಲಿ ಸಾಲಾಗಿ ಜೋಡಿಸಿ ನೇತಾಡಿಸಿದ್ದ ಅವರ ಡಜನುಗಟ್ಟಲೆ ಟೈ, ಕೋಟುಗಳನ್ನು ಸ್ಪರ್ಶಿಸಿ ದಿಗ್ಭ್ರಮೆಗೊಳ್ಳುತ್ತಿದ್ದುದು; ಅವರ ಕಾಲೇಜಿನ ದಿನಗಳ ವೈಭವದಲ್ಲಿ ಮಹಾರಾಜಾ ಕಾಲೇಜಿನ ಯುವರಾಜನಂತೆ ಮೆರೆಯಲು ಅವರಿಗಿದ್ದ ಒಂದು ‘ಸಾರೋಟು’ ಅದನ್ನು ತಳ್ಳಲೆಂದೇ ಅವರು ಸ್ನೇಹಿತರನ್ನು ಸದಾ ಜತೆಗಿರಿಸಿಕೊಳ್ಳುತ್ತಿದ್ದ ರಂಗಿನ ಕತೆಗಳು. ಅವರು ನನ್ನ ಪಾಲಿನ ಹೀರೋ ಆಗಿ ಮನದಲ್ಲಿ ಆರಾಧ್ಯರಾಗಿ ಪ್ರತಿಷ್ಠಾಪಿಸಲ್ಪಟ್ಟರು. ಆಗಿನ ಹೀರೋಗಳಾಗಿದ್ದ ಕಲ್ಯಾಣಕುಮಾರ್, ರಾಜಕುಮಾರ್, ರಾಜೇಂದ್ರಕುಮಾರ್, ರಾಜ್ಕುಮಾರ್, ಶಮ್ಮಿ ಕಪೂರ್ಗಳಿಗಿಂತ ಸುಂದರಾಂಗ ನನ್ನ ಮಾವ. ಅವರನ್ನು ನನ್ನ ಫ್ಯಾಂಟಸಿಯಲ್ಲೂ, ವಾಸ್ತವಿಕವಾಗಿಯೂ ಹೀರೋ ಎಂದೇ ಭಾವಿಸಿದವನು. ಅದು ಇಂದಿಗೂ ಬದಲಾಗಿಲ್ಲ!” (ಸಮರಸ 2001. ಪುಟ. 17).

ದೇವಿಪ್ರಸಾದರು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪಡೆದದ್ದು ಮುಂಬಯಿಯಲ್ಲಿ. ಅಲ್ಲಿ ಅವರಿಗೆ ಬಾಲಿವುಡ್ನ ಪರಿಚಯವಾಯಿತು. ಅವರ ಮುಂದೆ ಮೂರು ಆಯ್ಕೆಗಳಿದ್ದವು : ಒಂದು – ಬಾಲಿವುಡ್ ಪ್ರವೇಶಿಸಿ ನಟನಾಗುವುದು. ಎರಡು – ಮುಂಬಯಿಯಲ್ಲಿ ಪತ್ರಿಕೋದ್ಯಮಿಯಾಗುವುದು. ಮೂರು – ಸಂಪಾಜೆಗೆ ಮರಳಿ ಅಪ್ಪನ ಹೆಜ್ಜೆ ಜಾಡಿನಲ್ಲಿ ಮುನ್ನಡೆಯುವುದು. ಅವರ ಸ್ಫುರದ್ರೂಪಕ್ಕೆ ಅವರು ಸಿನಿಮಾ ನಟರಾಗಲು ಸುಲಭವಾಗಿ ಸಾಧ್ಯವಿತ್ತು. ಆಗುತ್ತಿದ್ದರೆ ಬಹುಶಃ ಅವರು ದೇವಾನಂದ್, ರಾಜಕಪೂರ್ ಸಾಲಲ್ಲಿ ನಿಲ್ಲುತ್ತಿದ್ದರು. ಅವರಿಗೆ ಸಿನಿಮಾ ನಿರ್ಮಾಣ ಮಾಡುವ ಆರ್ಥಿಕ ತಾಕತ್ತೂ ಇತ್ತು. ಅವರ ಇಂಗ್ಲಿಷ್ ಭಾಷಾ ಪ್ರಭುತ್ವ ಮತ್ತು ಚಿಂತನಾ ಕ್ರಮದಿಂದ ಅವರು ಒಳ್ಳೆಯ ಪತ್ರಕರ್ತರಾಗುವ ಸಾಧ್ಯತೆಯಿತ್ತು. ಅದಾಗುತ್ತಿದ್ದರೆ ಅವರು ಎಂ.ವಿ. ಕಾಮತ್, ಕುಲ್ದೀಪ್ ನಯ್ಯರ್, ಖುಷ್ವಂತ ಸಿಂಗ್ರ ಸಾಲಲ್ಲಿ ನಿಲ್ಲುತ್ತಿದ್ದರು. ಆದರೆ ಅವರು ಮೂರನೇ ಹಾದಿಯನ್ನು ಅನಿವಾರ್ಯವಾಗಿ ಆಯ್ಕೆಯ ಮಾಡಬೇಕಾಯಿತು. ಅದುವೇ ಅವರು ‘ಮೂರು ದಾರಿಗಳು’ ಸಿನಿಮಾ ನಿರ್ಮಿಸಲು ಕಾರಣವಾಗಿರಬೇಕು!

ದೇವಿಪ್ರಸಾದರು ಸಂಪಾಜೆಯಂತಹ ಹಳ್ಳಿಯಲ್ಲಿದ್ದು ದೇಶ ವಿದೇಶಗಳನ್ನು ಸುತ್ತಿದವರು. ಮದುವೆಯಾದ ಹೊಸತರಲ್ಲಿ ಅವರು ಪತ್ನಿ ಸಹಿತರಾಗಿ ಉತ್ತರ ಭಾರತ ಸಂಚರಿಸಿ ಜೀವನವನ್ನು ಅನುಭವಿಸಿದವರು. ದೇವಿಪ್ರಸಾದರ ಮಡದಿ ಇಂದಿರಾ ಪತಿಯ ಮನಸ್ಸನ್ನು ಅರಿತು ನಡೆಯುವ ಸತಿ. ಜಯಪುರದ ಅಂಬರ್ ಪ್ಯಾಲೇಸಿನಲ್ಲಿ ಆನೆ ಮೇಲೆ ಕೂತು ತೆಗೆಸಿದ ಅವರಿಬ್ಬರ ಚಿತ್ರ ರಾಜ-ರಾಣಿಯರ ಜಂಬೂ ಸವಾರಿಯನ್ನು ನೆನಪಿಸುವಂತಿದೆ. ಕಾಶ್ಮೀರದ ಸುಪ್ರಸಿದ್ಧ ದಾಲ್ ಲೇಕ್ನಲ್ಲಿ ಈ ಜೋಡಿ ಹೊಡೆಯಿಸಿಕೊಂಡ ಫೋಟೋ 1960ರ ದಶಕದ ಹಿಂದಿ ಚಲನಚಿತ್ರಗಳ ನಾಯಕ-ನಾಯಕಿಯರನ್ನು ನೆನಪಿಸುತ್ತದೆ. ಸಂಪಾಜೆಗೆ ಆನಂದ್ ಔರ್ ಆನಂದ್ ಚಿತ್ರದ ಶೂಟಿಂಗಿಗೆ ಬಂದಿದ್ದ ಹಿಂದಿಯ ಹಿರಿಯ ನಟ ದೇವಾನಂದ್ – “ನೀವು ಹೀರೋ ಆಗಲು ನನಗಿಂತಲೂ ಅರ್ಹರು” ಎಂದಿದ್ದರು. ಅದರಲ್ಲಿ ಉತ್ಪ್ರೇಕ್ಷೆಯೇನಿರಲಿಲ್ಲ. ಇವರು ಧರ್ಮಸ್ಥಳದಲ್ಲಿ ಬಿಳಿ ಪಂಚೆ ಮತ್ತು ಶಲ್ಯಗಳಲ್ಲಿ ಕಾಣಿಸಿಕೊಂಡರೆ ಕಾಲಿಗೆ ಬೀಳುವ ಮಂದಿಗೆ ಕೊರತೆಯೇನಿಲ್ಲ! ಸ್ವತಃ ವೀರೇಂದ್ರ ಹೆಗ್ಗಡೆಯವರೇ ಅದನ್ನು ಒಪ್ಪಿಕೊಳ್ಳುತ್ತಾರೆ.

ಬಹುಮುಖೀ ಸಂಸ್ಕೃತಿ

ದೇವಿಪ್ರಸಾದರು ಸಂಸ್ಕೃತಿಯ ಬಹುತ್ವವನ್ನು ಒಪ್ಪಿಕೊಂಡು ಗೌರವಿಸುವವರು. ಅವರ ಮನೆಯಲ್ಲೊಂದು ದೇವರ ಕೋಣೆಯಿದೆ. ಅದರಲ್ಲಿರುವುದು ದುರ್ಗಾಪರಮೇಶ್ವರಿ ಮತ್ತು ಗಣಪತಿಯ ಮೂರ್ತಿಗಳು. ಮನೆಯೊಳಗೆ ದೈವಗಳ ನೆಲೆಯಿಲ್ಲ. ಆದರೆ ಜಾಗದಲ್ಲಿ ದೈವಗಳ ಗುಡಿಗಳಲ್ಲಿ ಚಾವಡಿಗಳೂ ಇವೆ. ಮನೆಯ ದಕ್ಷಿಣ ಭಾಗದಲ್ಲಿರುವ ಗುಡಿಯ ವೀರಭದ್ರ ಮನೆತನದ ದೇವರು. ಮಡಿಕೇರಿಯಿಂದ ವರ್ಷಕ್ಕೊಮ್ಮೆ ಲಿಂಗಾಯಿತ ಜಂಗಮನೊಬ್ಬ ಬಂದು ವೀರಭದ್ರನಿಗೆ ಕಾಲಾವದಿ ಪೂಜೆ ಸಲ್ಲಿಸುತ್ತಾನೆ.

ಅವರ ಜಾಗದಲ್ಲಿರುವ ದೈವಗಳ ಬಗ್ಗೆ ಡಾ|| ಕಣಿಯೂರು ಹೀಗೆ ಬರೆದಿದ್ದಾರೆ : “ಮನೆಯ ನೈಋತ್ಯ ಭಾಗದಲ್ಲಿ ಕೇದಗೆ ಬನವಿದೆ. ಇಲ್ಲಿ ನಾಗ ಚಾವಡಿ ಇದೆ. ಜೊತೆಗೆ ದೊಡ್ಡ ಚಾವಡಿಯೂ ಇದ್ದು ಇದರಲ್ಲಿ ಕುಪ್ಪೆ ಪಂಜುರ್ಲಿ, ಮಲರಾಯ, ಕುಂಡ ಮಲ್ಲ (ಭೂತಾಳ ಪಾಂಡ್ಯನ ಇತಿಹಾಸದಲ್ಲಿ ಬರುವ ಭೂತ) ದೈವಗಳು ಆರಾಧನೆಗೊಳ್ಳುತ್ತವೆ. ಅಲ್ಲಿಯೇ ಸನಿಹದಲ್ಲಿ ಹಿತ್ಲು ಚಾವಡಿಯೆಂದು ಕರೆಸಿಕೊಳ್ಳುವ ಸಣ್ಣ ಚಾವಡಿ ಇದೆ. ಇದರಲ್ಲಿ ಬೀರ್ನಾಳ ಪಂಜುರ್ಲಿಯ ಆರಾಧನೆ ನಡೆಯುತ್ತದೆ. ಮನೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ, ಮನೆಯ ಈಶಾನ್ಯ ಭಾಗದಲ್ಲಿ ತೋಟದ ಮಧ್ಯೆ ದೊಡ್ಡ ಚಾವಡಿ ಇದ್ದು, ಉಳ್ಳಾಕುಲು, ಪುರುಷ ಭೂತಗಳು ಆರಾಧನೆಗೊಳ್ಳುತ್ತಿದ್ದವು. ಇದೇ ಸ್ಥಳದಲ್ಲಿ ಸಣ್ಣ ಚಾವಡಿ ಇದ್ದು ಇದರಲ್ಲಿ ಗುಳಿಗ, ಪಾಷಾಣ ಮೂರ್ತಿ, ಕೊರಗ, ಪೊಟ್ಟ, ಕೂಜಿಗಳು ಹೀಗೆ ನೂರೊಂದು ಭೂತಗಳು ಪುರಸ್ಕಾರಗೊಳ್ಳುತ್ತವೆ. ಸಂಪಾಜೆ ಬೈಲಿಗೆ ಕೇಂದ್ರವಾಗಿಯೂ ಈ ಮನೆ ತನ್ನ ಛಾಪನ್ನೊತ್ತಿದೆ. ಮನೆಯ ಯಜಮಾನರ ಮುಂದಾಳುತ್ವದಲ್ಲಿ ಊರ ದೈವಗಳು ಆರಾಧನೆಗೊಳ್ಳುತ್ತವೆ. ಆರಾಧನೆಗೊಳ್ಳುವ ದೈವಗಳಲ್ಲಿ ಬೆರ್ಮೆರೆ ದೈವ, ಬಚ್ಚ ನಾಯ್ಕ, ಕರಿಯಣ್ಣ ನಾಯ್ಕ, ಅಡಿಮಂತಾಯ, ಶಿರಾಡಿ ಭೂತ, ರಾಜನ್ದೈವಗಳು ಮುಖ್ಯವಾದವುಗಳು.” (ಸಮರಸ 2003, ಪು. 22)

ಸಂಪಾಜೆ ಪಂಚಲಿಂಗೇಶ್ವರ ದೇವಾಲಯದ ಮೊಕ್ತೇಸರಿಕೆ ಆನುವಂಶೀಯವಾಗಿ ದೇವಿಪ್ರಸಾದರಿಗೆ ಬಂದಿದೆ. 1947ರಲ್ಲಿ ಅಂದಿನ ಮೊಕ್ತೇಸರ ಸಣ್ಣಯ್ಯ ಪಟೇಲರು ದೇವಸ್ಥಾನದ ಜೀರ್ಣೊದ್ಧಾರ ಮಾಡಿ ಬ್ರಹ್ಮಕಲಶವಾಗಿತ್ತು. 2006ರಲ್ಲಿ ದೇವಿಪ್ರಸಾದರು ಮತ್ತೆ ಆ ದೇಗುಲದ ಜೀರ್ಣೊದ್ಧಾರವಾಗುವಂತೆ ನೋಡಿಕೊಂಡು ಬ್ರಹ್ಮಕಲಶೋತ್ಸವಕ್ಕೆ ಕಾರಣರಾದರು. ಅವರೀಗ ಸಂಪಾಜೆ ಪಂಚಲಿಂಗೇಶ್ವರ ಕೃಪಾಪೋಷಿತ ಮಕ್ಕಳ ಯಕ್ಷಗಾನ ತಂಡವನ್ನು ಸಿದ್ಧಗೊಳಿಸಿ ಕಾಲಮಿತಿ ಪ್ರದರ್ಶನಗಳ ಮೂಲಕ ಕೊಡಗಿನಲ್ಲಿ ಯಕ್ಷಗಾನಕ್ಕೆ ಜನಮನ್ನಣೆ ದೊರಕಿಸುವ ಸಿದ್ಧತೆಯಲ್ಲಿದ್ದಾರೆ.

ದೇವಿಪ್ರಸಾದರದು ಸಹಕಾರ ರಂಗದಲ್ಲಿ ದೊಡ್ಡ ಹೆಸರು. ಅವರ ತಂದೆ ಸಣ್ಣಯ್ಯ ಪಟೇಲರು ಸಂಪಾಜೆಯಲ್ಲಿ ಮಲ್ಲೇಶ್ವರ ಸಹಕಾರ ಸಂಘ ಸ್ಥಾಪಿಸಿ ಈ ಭಾಗದ ರೈತರ ಭಾಗ್ಯದ ಬಾಗಿಲುಗಳನ್ನು ತೆರೆಯುವಂತೆ ಮಾಡಿದರು. ದೇವಿಪ್ರಸಾದರು ಅದರ ಅಧ್ಯಕ್ಷರಾಗಿ ಶ್ಲಾಘನೀಯ ಕೆಲಸಗಳನ್ನು ಮಾಡಿದರು. ಪೆರಾಜೆಯಲ್ಲಿ ಕೋಮಾ ಸ್ಟೇಜಿನಲ್ಲಿದ್ದ ಜೈ ಹಿಂದ್ ಸಹಕಾರಿ ಮಾರಾಟ ಸಂಘಕ್ಕೆ ಪುನರ್ಜನ್ಮ ನೀಡಿದರು. ಸಂಪಾಜೆ ಪಯಸ್ವಿನಿ ಸಹಕಾರ ಸಂಘದ ಅಧ್ಯಕ್ಷರಾಗಿ ಅದನ್ನು ಮುನ್ನಡೆಸಿದರು. ಮಡಿಕೇರಿ ಸಹಕಾರಿ ಭೂ ಅಬಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ಅದರ ಶ್ರೇಯೋಭಿವೃದ್ಧಿಗೆ ಕಾರಣರಾದರು. ರಾಜ್ಯ ಭೂ ಅಬಿವೃದ್ಧಿ ಬ್ಯಾಂಕಿನ ನಿರ್ದೇಶಕರಾಗಿ ರಾಜ್ಯಮಟ್ಟದ ಖ್ಯಾತಿ ಪಡೆದರು. ಈ ನಡುವೆ 1968ರಲ್ಲಿ ಪೆರಾಜೆಯಲ್ಲಿ ಮುಚ್ಚುಗಡೆಯಾಗಲಿದ್ದ ಅಂಚೆ ಕಛೇರಿಗೆ ಕಾಯಕಲ್ಪ ನೀಡಿ ಅದನ್ನು ಬದುಕಿಸಿದರು. ಕೊಡಗು-ದ.ಕ. ಜಿಲ್ಲಾ ಗೌಡ ಸಮಾಜದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು. ಸುಳ್ಯದ ಅಮರಶಿಲ್ಪಿ ಎಂಬ ಖ್ಯಾತಿಗೆ ಪಾತ್ರರಾಗಿರುವ ಡಾ|| ಕುರುಂಜಿ ವೆಂಕಟ್ರಮಣ ಗೌಡರ ಷಷಬ್ದ ಸಮಿತಿ ಅಧ್ಯಕ್ಷರಾಗಿ ಕಾರ್ಯಕ್ರಮವನ್ನು ನ ಭೂತೋ ನ ಭವಿಷ್ಯತಿ ಎಂಬಂತೆ ನಡೆಸಿಕೊಟ್ಟು ಶಿಕ್ಷಣ ಪ್ರೇಮಿಗಳ ಮೆಚ್ಚುಗೆ ಗಳಿಸಿದರು.

ದೇವಿಪ್ರಸಾದರು ಲಯನ್ಸ್ ಸೇವಾ ಸಂಸ್ಥೆಯಲ್ಲಿ ಅನೇಕ ಪದವಿಗಳನ್ನು ಅಲಂಕರಿಸಿ ರಾಜ್ಯದಾದ್ಯಂತ ಪರಿಚಿತರಾಗಿದ್ದಾರೆ. ಲಯನ್ಸ್ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಪಾಲ್ಗೊಂಡಿದ್ದಾರೆ. ಅವರ ಹೆಣ್ಮಕ್ಕಳಲ್ಲಿ ಹಿರಿಯಾಕೆ ಅಮೇರಿಕೆಯಲ್ಲಿದ್ದರೆ ಕಿರಿಯವಳಿರುವುದು ಆಸ್ಟ್ರೇಲಿಯಾದಲ್ಲಿ. ದೇವಿಪ್ರಸಾದರು ಇವೆರಡು ದೇಶಗಳಲ್ಲಿ ಪತ್ನಿಯೊಡನೆ ವ್ಯಾಪಕ ಪ್ರವಾಸ ನಡೆಸಿದ್ದಾರೆ. ಲಯನ್ಸ್, ರೋಟರಿ, ಜೇಸೀಸ್ನಂತಹ ಸಂಸ್ಥೆಗಳಲ್ಲಿರುವವರು ಜಾತಿವಾದಿಗಳಾಗಲು ಸಾಧ್ಯವಿಲ್ಲ ಎಂದು ತಮ್ಮ ಲಯನ್ಸ್ ನಂಟಿಗೆ ಕಾರಣ ಕೊಡುವ ದೇವಿಪ್ರಸಾದರು ಸಂಪಾಜೆಯಂತ ಪುಟ್ಟ ಊರಲ್ಲಿ ಲಯನ್ಸ ಕ್ಲಬ್ಬೊಂದನ್ನು ಸ್ಥಾಪಿಸಲು ಕಾರಣರಾಗಿದ್ದಾರೆ.

ನಾಟಕಕಾರನಾಗಿ, ನಿರ್ದೇಶಕನಾಗಿ, ಚಲನಚಿತ್ರ ನಿರ್ಮಾಪಕನಾಗಿ, ಸಂಶೋಧಕ ನಾಗಿ, ಹೋರಾಟಗಾರನಾಗಿ, ಶಿಕ್ಷಣ ಮತ್ತು ಯಕ್ಷಗಾನ ಪ್ರೇಮಿಯಾಗಿ ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುವ ದೇವಿಪ್ರಸಾದರು ಶಿರಾಡಿ ಭೂತ (1995) ಮತ್ತು ಹೆಂಗಿತ್ತ್ ಹೇಂಗಾತ್ (1999) ಎಂಬೆರಡು ನಾಟಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕೃತಿ ಅಮರ ಸುಳ್ಯದ ಸ್ವಾತಂತ್ರ್ತ್ಯ ಸಮರ (1999) ಸಂಶೋಧನಾ ಕ್ಷೇತ್ರಕ್ಕೊಂದು ಅಮೂಲ್ಯ ಕೊಡುಗೆ. ಅವರ ಸಂಪಾದಿತ ಕೃತಿ ಕೊಡಗಿನಲ್ಲಿ ಭಾಷಾ ಸಾಂಸ್ಕೃತಿಕ ಸಾಮರಸ್ಯ (2003) ಕೊಡಗನ್ನು ಜಾತಿವಾದಿಗಳಿಂದ ರಕ್ಷಿಸಿ ಕರ್ನಾಟಕದಲ್ಲೇ ಉಳಿಸಿಕೊಳ್ಳಬೇಕು ಎಂಬ ಅವರ ಕಾಳಜಿಗೆ ಸಾಕ್ಷಿ. 1995ರಲ್ಲಿ ಅವರು ಹೊರತಂದ ಕೊಡಗಿನಲ್ಲಿ ಜಾತೀಯತೆ ಎಂಬ ಕೃತಿ ಕೊಡಗಿನಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳಾದ ಸಮಾನತೆ ಮತ್ತು ಜಾತ್ಯತೀತತೆ ಭದ್ರವಾಗಿ ನೆಲೆಗೊಳ್ಳಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿತ್ತು.

ದೇವಿಪ್ರಸಾದರು ಪುಸ್ತಕ ಪ್ರೇಮಿ. ಅವರ ಗ್ರಂಥ ಭಂಡಾರದಲ್ಲಿ ಅಮರ ಸುಳ್ಯ ಮಾಗಣೆಗಳ ರೈತರು 1837ರಲ್ಲಿ ಬ್ರಿಟಿಷರ ವಿರುದ್ಧ ಬಂಡೆದ್ದುದರ ಬಗೆಗಿನ ಅಮೂಲ್ಯ ಕಾಗದ ಪತ್ರಗಳ, ವರದಿಗಳ ಮತ್ತು ಸಂಶೋಧನಾತ್ಮಕ ಕೃತಿಗಳ ಸಂಗ್ರಹವಿದೆ. ಸುಳ್ಯದ ಸಾಹಿತಿಗಳ ಉತ್ಕೃಷ್ಟ ಕೃತಿಗಳನ್ನು ಅವರು ಸಂಗ್ರಹಿಸಿಟ್ಟಿದ್ದಾರೆ. ಅವರ ಎರಡು ಕೃತಿಗಳನ್ನು ವಿಮರ್ಶಿಸುತ್ತಾ ಪ್ರೊ. ಪೂಜಾರಿ ಮೊಣ್ಣಪ್ಪ ಹೀಗೆ ಅಬಿಪ್ರಾಯ ಪಟ್ಟಿದ್ದಾರೆ. “ಇದನ್ನು ಗಮನಿಸಿದರೆ ಸಂಪಾಜೆ ದೇವಿಪ್ರಸಾದರದು ಜಾತ್ಯತೀತ, ಪಕ್ಷಾತೀತ, ಭಾಷಾತೀತ ಮತ್ತು ಸರ್ವ ಸಮಾನತೆಯನ್ನು ಬಯಸಿ ಪ್ರಜಾಸತ್ತೆಯ ಮೌಲ್ಯಗಳಿಗೆ ಗೌರವ ನೀಡುವ ಬಹುದೊಡ್ಡ ಮನಸ್ಸು ಎನ್ನುವುದು ವೇದ್ಯವಾಗುತ್ತದೆ. ಇಂಥವರೆ ಭಾರತದ ಪ್ರಜಾಸತ್ತೆಯ ಆಧಾರ ಸ್ತಂಭಗಳು. ಅದಕ್ಕಾಗಿ ದೇವಿಪ್ರಸಾದರನ್ನು ನಾಡು ಗೌರವಿಸಬೇಕಾಗುತ್ತದೆ.” (ಸಮರಸ 2003, ಪುಟ 116.)

ಹೆಣ್ಣಿನ ನೋವನ್ನು ಹೆತ್ತವ್ವ ಬಲ್ಲಳು! ಸ್ವತಃ ಬರಹಗಾರರಾದ ದೇವಿಪ್ರಸಾದರಿಗೆ ಕನ್ನಡದ ಬರಹಗಾರರು ತಮ್ಮ ಕೃತಿ ಮಾರಾಟಕ್ಕೆ ಪಡಬೇಕಾದ ಸಂಕಷ್ಟಗಳ ಅರಿವಿದೆ. ಆದುದರಿಂದ ಅವರು ಒಳ್ಳೆಯ ಕೃತಿಗಳನ್ನು ಕೊಂಡು ಓದುತ್ತಾರೆ. ಡಾ|| ಚಂದ್ರಶೇಖರ ದಾಮ್ಲೆ ಈ ಬಗ್ಗೆ ಹೀಗೆ ಬರೆಯುತ್ತಾರೆ : “ಸಾಮಾನ್ಯವಾಗಿ ಶ್ರೀಮಂತರು ಸಾಹಿತಿಗಳ ಗೆಳೆತನವನ್ನು ಸಂಪಾದಿಸುವುದು ತೀರಾ ವಿರಳ. ಏಕೆಂದರೆ ಅವರವರಿಗೆ ಮಾತಾಡಲು ವಿಷಯವೇ ಇರುವುದಿಲ್ಲ. ಒಂದು ಪೆಗ್ ರಮ್ಮಿಗೆ ಹಾಕುವ ದುಡ್ಡಿಗಿಂತಲೂ ಕಮ್ಮಿ ನೀಡಿ ಒಂದು ಪುಸ್ತಕ ಖರೀದಿಸುವ ದೊಡ್ಡ ಮನಸ್ಸು ಕೂಡಾ ಅನೇಕ ಸಿರಿವಂತರಿಗಿರುವುದಿಲ್ಲ. ಅವರು ಟಿ.ವಿ. ಹಾಕಿ ಮೈ ಮನಸ್ಸು ಕೆಡಿಸುವ ಮನರಂಜನೆಯಲ್ಲಿ ಮುಳುಗಿರುತ್ತಾರಷ್ಟೆ ಹೊರತು ನಮ್ಮ ಜಾನಪದ ಕಲೆಯ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಹೀಗಿರುತ್ತ, ಸಾಹಿತ್ಯ ಕಲಾರಾಧಕನಾಗಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಸಿರಿವಂತರಲ್ಲೊಬ್ಬರು ನಮ್ಮ ದೇವಿಪ್ರಸಾದರು. ಹಾಗಾಗಿ ಸಂಪಾಜೆಯ ಅವರ ಮನೆಯ ಗೋಡೆ, ಕಂಬ, ಕವಾಟುಗಳಿಗೆ ಸಾಹಿತಿ ಕಲಾವಿದರ ಪರಿಚಯವಿರುವಷ್ಟು ಇತರ ಸಿರಿವಂತರದ್ದಿರಲಾರದು.” (ಸಮರಸ 2003, ಪು. 123)