ದೇವಿಪ್ರಸಾದರ ಜೀವನದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾದದ್ದು ಹಾಸ್ಯಬ್ರಹ್ಮ ಬೀಚಿಯವರ ಅದೊಂದು ಮಾತು.

“ನೀವು ಈಗ ಮಾಡ್ತಿರೋದೆಲ್ಲಾ ಥ್ಯಾಂಕ್ಲೆಸ್ಸು ಜಾಬು. ಏನಾದರೂ ಬರೆಯಿರಿ. ಇಷ್ಟು ಅನುಭವವಿರುವ ನಿಮಗೆ ಬರೆಯಲು ಸಾಧ್ಯವಿದೆ. ನೀವು ಬರೆದದ್ದು ಚೆನ್ನಾಗಿದ್ದರೆ ಸತ್ತ ಬಳಿಕವೂ ಜನರ ಮಧ್ಯೆ ಬದುಕಿರುತ್ತೀರಿ. ವಿದ್ಯಾವಂತರು ಸಾಂಸ್ಕೃತಿಕ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಹತ್ತು ಜನ ನಾಲ್ಕು ದಿನವಾದರೂ ನೆನಪಿಟ್ಟುಕೊಳ್ಳುವ ಕೃತಿ ರಚಿಸಿ ಬದುಕಿರುವಾಗಲೇ ಜೀವನ ಸಾರ್ಥಕತೆ ಅನುಭವಿಸಬೇಕು. ಸತ್ತ ಮೇಲೆ ನಾವು ಯಾರ ಸ್ಮೃತಿ ಪಟಲದಲ್ಲೂ ಉಳಿದಿರುವುದಿಲ್ಲ.”

ತಮ್ಮ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಾಧನೆಗಳನ್ನು ಯಾರಾದರೂ ಶ್ಲಾಘಿಸಿದರೆ ದೇವಿಪ್ರಸಾದರು ವಿನೀತರಾಗುತ್ತಾರೆ : “ಎಲ್ಲಾ ಕ್ರೆಡಿಟ್ಟು ಬೀಚಿಯವರಿಗೆ ಹೋಗಬೇಕು. ಅವರು ನಮ್ಮ ಮನೆಯಲ್ಲಿ ಹಲವಾರು ದಿನಗಳನ್ನು ಕಳೆದರು. ಅದು ಅವರ ಮಗ ನಿಧನ ಹೊಂದಿದ್ದ ಅತಿ ವಿಷಾದದ ಸಂದರ್ಭ. ಪುತ್ರ ಶೋಕಂ ನಿರಂತರಂ. ಆದರೆ ಬೀಚಿ ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದ್ದರು. ನೋವು ನುಂಗಿ ನಗುವ ಕಲೆಯನ್ನು ನಾನು ಅವರಿಂದ ಕಲಿತೆ.”

ಯಕ್ಷ ರಂಗಾಸಕ್ತ

ಸಂಪಾಜೆ ಯಕ್ಷ ಕಲಾವಿದರ ಆಡುಂಬೊಲ. ತೆಂಕುತಿಟ್ಟಿನ ಮೇರು ಕಲಾವಿದ ಬಣ್ಣದ ಮಾಲಿಂಗರು ಅಲ್ಲಿ ನೆಲೆಗೊಂಡಿದ್ದರು. ಸಮರ್ಥ ರಾಜವೇಷಧಾರಿ ಶೀನಪ್ಪ ರೈಗಳು ಸಂಪಾಜೆಯ ಸಮೀಪದ ಕಲ್ಲುಗುಂಡಿಯವರು. ಸಾಮಾಜಿಕ ರಂಗದಲ್ಲಿ ಬಲುದೊಡ್ಡ ಹೆಸರು ಪಡೆದಿದ್ದ ಕೀಲಾರು ಗೋಪಾಲಕೃಷ್ಣಯ್ಯ ಅಲ್ಲಿನವರು. ಅವರು ವರ್ಷಕ್ಕೊಮ್ಮೆ ಎಲ್ಲಾ ಮೇಳಗಳ ಪ್ರಸಿದ್ಧ ಕಲಾವಿದರನ್ನು ಕರೆಯಿಸಿ ಯಕ್ಷಗಾನ ಹಬ್ಬ ನಡೆಸುತ್ತಿದ್ದರು. ಅವರ ನಿಧನಾ ನಂತರ ಸರಕಾರೀ ಆಯುಕ್ತ ಶ್ಯಾಂ ಭಟ್ಟರು ಅದನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಶ್ಯಾಂ ಭಟ್ಟರು ಪುಸ್ತಕ ಪ್ರಕಾಶನ, ಸಾಹಿತಿ ಮತ್ತು ಕಲಾವಿದರಿಗೆ ಸನ್ಮಾನ ಮಾಡುವ ಮೂಲಕ ಕೀಲಾರು ಪ್ರತಿಷ್ಠಾನದ ಕಾರ್ಯ ವ್ಯಾಪ್ತಿ ಹೆಚ್ಚಿಸಿದ್ದಾರೆ. ಯಕ್ಷಗಾನ ಅರ್ಥಧಾರಿಯಾಗಿ ಬಹಳ ಪ್ರಸಿದ್ಧಿ ಪಡೆದ ಜಬ್ಬಾರ್ ಸಮೊ, ಭರವಸೆಯ ಯುವ ಕಲಾವಿದ ದಿವಾಕರ, ಮಡಿಕೇರಿ ಆಕಾಶವಾಣಿಯಲ್ಲಿ ತನ್ನ ಕಂಚಿನ ಕಂಠ ಮೊಳಗಿಸುತ್ತಿರುವ ಸುಬ್ರಾಯ ಸಂಪಾಜೆ, ಬಣ್ಣದ ಮಾಲಿಂಗರ ಮಗ ಬಣ್ಣದ ಸುಬ್ರಾಯ, ಹವ್ಯಾಸಿ ಕಲಾವಿದರಾದ ಕೊರಗಪ್ಪ ಮಣಿಯಾಣಿ, ಶಿವಪ್ಪ ಆಚಾರ್ಯ – ಇನ್ನೂ ಹಲವರು ಸಂಪಾಜೆ ಮತ್ತು ಆಸುಪಾಸಿನವರು. ದೇವಿಪ್ರಸಾದರು ಸ್ವತಃ ಯಕ್ಷಗಾನ ಕಲಾವಿದರಲ್ಲ. ಆದರೆ ಅದರ ಸಾಧ್ಯತೆಗಳ ಅರಿವಿರುವವರು. ಕೀಲಾರು ಪ್ರತಿಷ್ಠಾನಕ್ಕೆ ಅವರು ನೈತಿಕ ಬೆಂಬಲ ನೀಡುತ್ತಾ ಬಂದಿದ್ದಾರೆ. ಕಲಾವಿದರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ. ಬಣ್ಣದ ಮಾಲಿಂಗ, ಕೇದಗಡಿ ಗುಡ್ಡಪ್ಪ ಗೌಡ ಮತ್ತು ಕಲ್ಲುಗುಂಡಿ ಶೀನಪ್ಪ ರೈಯವರು ದೇವಿಪ್ರಸಾದರಿಂದ ಸಾಕಷ್ಟು ಉಪಕೃತರಾಗಿದ್ದಾರೆ.

ಚಂದ್ರಶೇಖರ ದಾಮ್ಲೆಯವರ ನೇತೃತ್ವದಲ್ಲಿ ನಾವು ಯಕ್ಷಗಾನದ ಸಾಂಪ್ರದಾಯಿಕತೆಯ ಉಳಿವಿಗಾಗಿ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯನ್ನು ಸೃಷ್ಟಿಸಿದ್ದೆವು. ಶೇಣಿ ಗೋಪಾಲಕೃಷ ಭಟ್ಟರ ನಿರ್ದೇಶನದಲ್ಲಿ ಸಾಂಪ್ರದಾಯಿಕ ಯಕ್ಷಗಾನ ಹಾಡುಗಾರಿಕೆಯ ಕ್ಯಾಸೆಟ್ಟು ಹೊರತರಲು, ಬಣ್ಣದ ಮಾಲಿಂಗರನ್ನು ಸನ್ಮಾನಿಸಲು, ಯಕ್ಷಗಾನ ಹಾಸ್ಯಗಾರರ ಸಮ್ಮೇಳನ ನಡೆಸಲು ದೇವಿಪ್ರಸಾದರು ದೊಡ್ಡ ಮಟ್ಟಿನಲ್ಲಿ ನೆರವಾಗಿದ್ದಾರೆ. ದೇವಿಪ್ರಸಾದರು ಅದನ್ನು ಒಂದೆಡೆ ಉಲ್ಲೇಖಿಸಿದ್ದಾರೆ : “ತೆಂಕುತಿಟ್ಟು ಹಿತರಕ್ಷಣಾ ವೇದಿಕೆಯ ಮೂಲಕ ನಾಡಿನ ಸುಪ್ರಸಿದ್ಧ ವೇಷಧಾರಿ ಬಣ್ಣದ ಮಾಲಿಂಗ ಸಂಪಾಜೆ, ಶಿಶಿಲರನ್ನು ನನಗೆ ಹತ್ತಿರ ಆಗುವಂತೆ ಮಾಡಿದರು. ಹಾಗೆ ಅವರು ನನಗೆ ಹತ್ತಿರವಾಗದಂತೆ ಮಾಡಲು ಪ್ರಯತ್ನಿಸಿದವರೂ ಇದ್ದಾರೆ. ‘ಶಿಶಿಲರ ಬಗ್ಗೆ ಎಚ್ಚರ ಇರಿ. ಅವರೊಬ್ಬ ಕಮ್ಯುನಿಸ್ಟ್’ ಅಂದಿದ್ದರು ಒಬ್ಬರು. ಸ್ವತಃ ಧನಿಕನಲ್ಲದ ಆ ವ್ಯಕ್ತಿಗೆ ಹೇಳಿದ್ದೆ. ನಾನೊಬ್ಬ ಕ್ಯಾಪಿಟಲ್ ಇರುವ ಲೆಪ್ಟಿಸ್ಟ್. ನೀವು ಮಾತ್ರ ಕ್ಯಾಪಿಟಲ್ ಇಲ್ಲದ ಕ್ಯಾಪಿಟಲಿಸ್ಟ್. ಅನಂತರ ನಮ್ಮ ಅನ್ಯೋನ್ಯತೆಗೆ ಹುಳಿ ಹಿಂಡಲು ಯಾರೂ ಬರಲಿಲ್ಲ.” (ಹೆಜ್ಜೆ 2003, ಪುಟ 65)

ಸುಳ್ಯದ ಬಹುತೇಕ ಗೌಡರ ಆಡುಭಾಷೆ ಅರೆಗನ್ನಡ. ಅದನ್ನು ಅವರು ಜಾನಪದೀಯವಾಗಿ ಅರೆಬಾಸೆ ಎನ್ನುತ್ತಾರೆ. ಹಳಗನ್ನಡದ ಅನೇಕ ಶಬ್ದಗಳು ಅದರಲ್ಲಿವೆ. ಅದು ಯಾವ ಕಾಲದಲ್ಲಿ ಯಾವ ಚಾರಿತ್ರಿಕ ಒತ್ತಡದಿಂದ ಸೃಷ್ಟಿಯಾಯಿತೋ ಗೊತ್ತಿಲ್ಲ. ಸುಳ್ಯದಲ್ಲಿ ತಮಿಳರು ಮತ್ತು ಮಲೆಯಾಳಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. 1966ರ ಸಿರಿಮಾವೋ-ಲಾಲ್ ಬಹಾದೂರ್ ಶಾಸ್ತ್ರಿ ಒಪ್ಪಂದದನ್ವಯ ಶ್ರೀ ಲಂಕೆಯ ತಮಿಳರು ಸುಳ್ಯಕ್ಕೆ ಬಂದು ಬೀಡು ಬಿಟ್ಟು ತಮಿಳರು ಇಲ್ಲಿನ ಸಮೃದ್ಧ ರಬ್ಬರ್ ಬೆಳೆಗೆ ಕಾರಣರಾದರು. ಸುಳ್ಯವು ಕೇರಳಕ್ಕೆ ತಾಗಿಕೊಂಡಂತಿದೆ. ಗಡಿ ಪ್ರದೇಶಗಳಲ್ಲಿ ಸಾಕಷ್ಟು ಮಲೆಯಾಳಿಗಳಿದ್ದಾರೆ. ಸುಳ್ಯದ ಬಹುಸಂಖ್ಯಾತ ವ್ಯಾಪಾರಿಗಳು ಮಲೆಯಾಳ ಮಾತಾಡುವ ಮುಸಲ್ಮಾನರು. ಇವರೆಲ್ಲಾ ಲೀಲಾ ಜಾಲವಾಗಿ ಅರೆಬಾಸೆ ಮಾತಾಡುತ್ತಾರೆ. ಅನೇಕರು ಇದುವೇ ನಿಜವಾದ ಕನ್ನಡವೆಂದು ತಿಳಿದುಕೊಂಡದ್ದೂ ಇದೆ! “ನಮ್ಮದು ಹವ್ಯಕ ಕನ್ನಡವಾದರೆ ನಿಮ್ಮದು ಗೌಡ ಕನ್ನಡ”ವೆಂದು ಭಾಷಾತಜ್ಞ ಪ್ರೊ. ಮರಿಯಪ್ಪ ಭಟ್ಟರು ಒಮ್ಮೆ ಹೇಳಿದ್ದರು. ಈ ಭಾಷೆಯ ಸಾಹಿತ್ಯಿಕ ಸಾಂಸ್ಕೃತಿಕ ವಿಸ್ತರಣೆಗಾಗಿ ಕುಂದಾಪುರದ್ದನ್ನು ಕುಂದಗನ್ನಡವೆನ್ನುವಂತೆ ಇದನ್ನು ಸುಳ್ಯಗನ್ನಡವೆಂದು ಕರೆಯುವುದು ಹೆಚ್ಚು ಸೂಕ್ತ ಎಂಬ ನನ್ನ ಮಾತನ್ನು ದೇವಿಪ್ರಸಾದರು ಅನುಮೋದಿಸಿದ್ದರು.

ಅದಕ್ಕೆ ವೇದಿಕೆ ಒದಗಿಸಿದ್ದು ಯಕ್ಷಗಾನ ಕೊಳ್ತಿಗೆ ನಾರಾಯಣ. ಮಳೆಗಾಲದ ಆರು ತಿಂಗಳುಗಳಲ್ಲಿ ಯಕ್ಷಗಾನ ಕಲಾವಿದರಿಗೆ ಯಾವ ಆದಾಯವೂ ಇರುವುದಿಲ್ಲ. ಎಲ್ಲಾದರೂ ಸಹಾಯಾರ್ಥ ಪ್ರದರ್ಶನ ನಡೆಸಿ ಜೀವನೋಪಾಯ ಕಂಡುಕೊಳ್ಳಬೇಕು. ಅದೊಂದು ಮಳೆಗಾಲ ಕೊಳ್ತಿಗೆ ನಾರಾಯಣ ಒಂದು ಪ್ರದರ್ಶನ ಏರ್ಪಡಿಸಿದರು. ಪ್ರಸಂಗ ಕೃಷ್ಣಾರ್ಜುನ ಕಾಳಗ. ಸ್ಥಳ ಪರಿವಾರಕಾನದ ಕುರುಂಜಿ ಅಮರಶ್ರೀ ಭವನ. ಪ್ರದರ್ಶನದ ಪದ್ಯ ಹೊರತಾಗಿ ಸಂಭಾಷಣೆ ಪೂರ್ತಿ ಅರೆಭಾಷೆಯಲ್ಲೇ. ಸುಳ್ಯದ ಮಟ್ಟಿಗೆ ಅದು ಹೊಸ ದಾಖಲೆ. ಭಾಷೆಯ ಮೇಲಿನ ಅಬಿಮಾನದಿಂದ ಅರೆಭಾಷಿಕರು ಹೌಸ್ಫುಲ್ ದಾಖಲೆ ಮಾಡಿ ಬಿಡುತ್ತಾರೆಂದು ನಾರಾಯಣ ಭಾವಿಸಿದ್ದರು. ಅಂದು ಮೈಕು ಪ್ರಚಾರಕ್ಕೆ ಹಣವಿಲ್ಲದೆ ನನ್ನಿಂದಲೇ ತೆಗೆದುಕೊಂಡ ಕೊಳ್ತಿಗೆ – ಗೇಟ್ ಕಲೆಕ್ಷನ್ನಿಂದ ಕೊಟ್ಟು ಬಿಡ್ತೇನೆ ಮೇಸ್ಟ್ರೇ ಎಂದಿದ್ದರು.

ಅರೆಭಾಷೆ ಬಲ್ಲ ಯಕ್ಷಗಾನ ಕಲಾವಿದರು ಸಿಗದೆ ಕೊಳ್ತಿಗೆ ಪರದಾಡಿದರು. ಕೊಳ್ತಿಗೆಯ ಅರ್ಜುನ, ಉಬರಡ್ಕ ಉಮೇಶ ಶೆಟ್ಟರ ಕೃಷ್ಣ, ನನ್ನ ಬಲರಾಮ, ಸುಧಾಕರರ ಬೀಮ, ರೆಂಜಾಳ ರಾಮಕೃಷ್ಣರ ಮಕರಂದ, ತೊಡಿಕಾನ ಬಾಬು ಮತ್ತು ವಿಶ್ವನಾಥರ ಸುಭದ್ರೆ ಮತ್ತು ರುಕ್ಮಿಣಿ. ಪ್ರದರ್ಶನವೇನೋ ಚೆನ್ನಾಗಿಂುೆುೀ ಬಂತು. ಬಂದಿದ್ದ ಕಲಾರಸಿಕರ ಸಂಖ್ಯೆ ಕೇವಲ ಎಪ್ಪತ್ತೈದು! ಯಕ್ಷಗಾನಕ್ಕೆ ಮುನ್ನ ತುದಿಯಡ್ಕ ವಿಷ್ಣಯ್ಯ – ಭಾಷೆ ಯಾವುದಾದರೇನು ರೂಪ ಕೆಡದಿದ್ದರಾಯಿತು ಎಂದರು. ಸಭಾಧ್ಯಕ್ಷ ದೇವಿಪ್ರಸಾದರು ಅರೆಭಾಷೆಯನ್ನು ಸುಳ್ಯಗನ್ನಡವಾಗಿ ವಿಸ್ತರಿಸಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚು ಬಳಸಿ ಭಾಷೆಯನ್ನು ಉಳಿಸಬೇಕು ಅಂದರು. ಅಂದು ದೇವಿಪ್ರಸಾದರ ಸಹಾಯವಲ್ಲದಿರುತ್ತಿದ್ದರೆ ಹಾಲ್ ಬಾಡಿಗೆ ಕೊಡಲಿಕ್ಕೂ ಕೊಳ್ತಿಗೆಯವರಿಗೆ ಸಾಧ್ಯವಿರಲಿಲ್ಲ.

1981ರಲ್ಲಿ ಸುಳ್ಯದಲ್ಲಿ ಅಬಿನಯ ನಾಟಕ ಸಂಘಟನೆ ಹುಟ್ಟಿಕೊಂಡು ಆರ್. ನಾಗೇಶರ ನಿರ್ದೇಶನದಲ್ಲಿ ಶಿವರಾಮ ಕಾರಂತರ ಚೋಮನ ದುಡಿಯನ್ನು ನಾಟಕವಾಗಿಸಿ ಪ್ರಂುೋಗಿಸಿ ಯಶಸ್ಸನ್ನು ಕಂಡಿತು. ಅದಾದ ಬಳಿಕ ಮಾಲತಿ ರಾವ್ ಲಂಕೇಶರ ತೆರೆಗಳು ನಾಟಕವನ್ನು ನಿರ್ದೇಶಿಸದರು. ಅದನ್ನು ಯಕ್ಷ ರೂಪದಲ್ಲಿ ಪ್ರದರ್ಶಿಸುವುದು ಅವರ ಇಚ್ಛೆಯಾಗಿತ್ತು. ಪದ ರಚಿಸುವ ಮತ್ತು ಮಾಲತಿ ರಾವ್, ಬಿಳಿಮಲೆ, ಕೆ.ವಿ. ಶರ್ಮ, ತುಕಾರಾಮ ಏನೆಕಲ್ಲು, ಕುಮಾರಸ್ವಾಮಿ, ಏ.ಕೆ. ಹಿಮಕರ, ದೇವರಾಜ – ಮುಂತಾದ ನಟ ಭಯಂಕರರಿಗೆ ನಾಟ್ಯ ಕಲಿಸುವ ಜವಾಬ್ದಾರಿ ನನ್ನ ಮೇಲೆ ಬಿತ್ತು. ಆಗೆಲ್ಲಾ ದೇವಿಪ್ರಸಾದರು ರಿಹರ್ಸಲ್ ನೋಡಲು ಬರುತ್ತಿದ್ದರು. ಸಲಹೆ ಸೂಚನೆ ನೀಡುತ್ತಿದ್ದರು. ಅದರ ಯಶಸ್ಸು ರಂಗಭೂಮಿಯಲ್ಲಿ ಕೆಲವು ಆವಿಷ್ಕಾರಗಳನ್ನು ಮಾಡಲು ಪ್ರೇರೇಪಿಸಿದ್ದನ್ನು ಅವರು ಪ್ರಾಂಜ್ವಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ.

ಅದಾಗಿ ಕೆಲವರ್ಷಗಳ ಬಳಿಕ ಕನ್ಯಾಕುಮಾರಿಯಿಂದ ಮುಂಬಯಿಯವರೆಗೆ ಪರಿಸರವಾದಿಗಳು ಪಶ್ಚಿಮಘಟ್ಟ ಉಳಿಸಿ ಚಳವಳಿ ನಡೆಸಿದರು. ಈ ಸಂಬಂಧ ಒಂದು ಪಾದಯಾತ್ರೆ ನಡೆಯಿತು. ಪಾದಯಾತ್ರಾ ತಂಡ ಕೊಡಗಿನಿಂದ ದ.ಕ.ಕ್ಕೆ ಸಂಪಾಜೆ ಮಾರ್ಗವಾಗಿ ಪ್ರವೇಶಿಸಿ ಕಲ್ಲುಗುಂಡಿಯಲ್ಲಿ ಆ ರಾತ್ರಿ ತಂಗಿತು. ಅದನ್ನು ಎದುರುಗೊಂಡವರಲ್ಲಿ ವೀರೇಂದ್ರ ಹೆಗ್ಗಡೆ ಮತ್ತು ದೇವಿಪ್ರಸಾದರು ಪ್ರಮುಖರು. ಅಂದು ಪಂಚವಟಿ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಶೂರ್ಪನಖಿಯ ಪಾತ್ರ ವಹಿಸಿ ನಾನು ರಕ್ಕಸರು ಅರಣ್ಯದ ಆದಿವಾಸಿಗಳೆಂದೂ, ಋಷಿಮುನಿಗಳು ಮತ್ತು ರಾಮ ಲಕ್ಷ ್ಮಣರು ದ್ರಾವಿಡ ಸಂಸ್ಕೃತಿಯನ್ನು ಮತ್ತು ಅರಣ್ಯಗಳನ್ನು ನಾಶಮಾಡಲು ಬಂದ ಆರ್ಯರೆಂದೂ ರಂಗದಲ್ಲಿ ಹೇಳಿದೆ. ಶೂರ್ಪನಖಿಯ ಪಾತ್ರಕ್ಕೆ ನಾನು ನೀಡಿದ ಆಯಾಮವನ್ನು ಮೆಚ್ಚಿಕೊಂಡ ದೇವಿಪ್ರಸಾದರು ಈ ಸಾಂಪ್ರದಾಯಿಕ ಕಲೆಯನ್ನು ಜನಪರ ಚಳವಳಿಗಳಲ್ಲಿ ಧಾರಾಳ ಬಳಸಬಹುದು ಎಂದರು. ಸುಳ್ಯ ತಾಲೂಕಲ್ಲಿ ಸಾಕ್ಷರತಾ ಆಂದೋಲನ ಕಾಲದಲ್ಲಿ ದಾಮ್ಲೆಯವರು ಮತ್ತು ನಾನು ಸುಳ್ಯದ ಹಳ್ಳಿ ಹಳ್ಳಿಗಳಲ್ಲಿ ಗೆಜ್ಜೆ ಕಟ್ಟಿ ಕುಣಿದು ಅನಕ್ಷರಸ್ಥರನ್ನು ಅಕ್ಷರದತ್ತ ಆಕರ್ಷಿಸುವ ಕೆಲಸ ಮಾಡಿದಾಗ ಸಂಪೂರ್ಣ ಸಹಕಾರ ನೀಡಿದರು.

ಯಕ್ಷಗಾನ ನೃತ್ಯ ಗುರು ಕರ್ಗಲ್ಲು ವಿಶ್ವೇಶ್ವರ ಭಟ್ಟರು ಅರೆಭಾಷೆಯಲ್ಲಿ ಯಕ್ಷಗಾನ ಕ್ಯಾಸೆಟ್ಟು ಹೊರತರುವ ಸಾಹಸ ಮಾಡಿದರು. ಅದು ಬಿಡುಗಡೆಗೊಂಡದ್ದು ದೇವಿಪ್ರಸಾದರ ನಂಜಯ್ಯನ ಮನೆಯಲ್ಲಿ ಅವರಿಂದಲೇ. ಅಂದು ನಾನು ಮತ್ತು ನಿತ್ಯಾನಂದ ಮುಂಡೋಡಿ ಮುಖ್ಯ ಅತಿಥಿಗಳಾಗಿದ್ದೆವು. ಅರೆಭಾಷೆಯನ್ನು ಸುಳ್ಯಗನ್ನಡವಾಗಿಸುವ ಅಥವಾ ಅದನ್ನು ಅರೆಭಾಷೆಯಾಗಿಂುೆುೀ ಇರಗೊಟ್ಟು ಅದನ್ನಾಡುವ ಮಂದಿಗಳಿಗೆ ಭಾಷಾ ಅಲ್ಪಸಂಖ್ಯಾತರ ಮೀಸಲಾತಿಗೆ ಯತ್ನಿಸುವ ಬಗ್ಗೆ ನಾವು ತುಂಬಾ ಚರ್ಚಿಸಿದೆವು. ಗೌಡ ಯುವ ಸಂಘ ಸ್ಥಾಪಿಸಿ ಯುವಕರಿಗೆ ಶಿಕ್ಷಣ, ಸಾಹಿತ್ಯ, ಕಲೆಗಳಲ್ಲಿ ಆಸಕ್ತಿ ಮೂಡಿಸಲು ಯತ್ನಿಸುತ್ತಿದ್ದ ನಿತ್ಯಾನಂದ ಮುಂಡೋಡಿಗೆ ಈ ಪ್ರಸ್ತಾಪ ತುಂಬಾ ಇಷ್ಟವಾಯಿತು.

ಯಕ್ಷಗಾನ ಗೋಷ್ಠಿಗಳು ಮತ್ತು ಪ್ರದರ್ಶನಗಳು ಎಲ್ಲೇ ನಡೆದರೂ ದೇವಿಪ್ರಸಾದರಿಗೆ ಆಮಂತ್ರಣವಿರುತ್ತಿತ್ತು. ನನ್ನನ್ನು ಅಂತಹ ಸಮಾರಂಭಗಳಿಗೆ ದೂರದ ಊರುಗಳ ಜನರು ಕರೆದಾಗ, ನನಗೂ ದೇವಿಪ್ರಸಾದರಿಗೂ ಒಟ್ಟಿಗೇ ಅವಕಾಶ ನೀಡಿ ಎನ್ನುತ್ತಿದ್ದೆ. ಇದರಿಂದ ನನಗೆ ಎರಡು ಲಾಭಗಳಾಗುತ್ತಿದ್ದವು. ನಾನು ದೇವಿಪ್ರಸಾದರ ವಾಹನದಲ್ಲಿ ನಿರಾಯಾಸವಾಗಿ ಹೋಗಿ ಬರಬಹುದಿತ್ತು ಮತ್ತು ಅವರೊಡನೆ ಮುಕ್ತವಾಗಿ ಅನೇಕ ವಿಷಯಗಳ ಬಗ್ಗೆ ಚರ್ಚಿಸಲು ಸಾಧ್ಯವಾಗುತ್ತಿತ್ತು. ಕಲೆ ಮತ್ತು ಸಾಹಿತ್ಯಿಕ ವ್ಯಸನ ನಮ್ಮನ್ನು ತುಂಬಾ ಹತ್ತಿರ ಮಾಡಿ ಬಿಟ್ಟಿತು.

ಜಗವೆ ನಾಟಕ ರಂಗ

ನಾಟಕ ದೇವಿಪ್ರಸಾದರ ಅಬಿವ್ಯಕ್ತಿಯ ಪ್ರಮುಖ ಮಾಧ್ಯಮ. ರಂಗಭೂಮಿಯಲ್ಲಿ ಅವರು ನಾಟಕಕಾರ, ನಿರ್ದೇಶಕ, ನಟ ಮತ್ತು ಪ್ರೋತ್ಸಾಹಕನಾಗಿ ಕಾಣಿಸಿಕೊಂಡವರು. 1980ರಲ್ಲಿ ನಮ್ಮ ಅಬಿನಯ ತಂಡವು ರಾ. ನಾಗೇಶರ ನಿರ್ದೇಶನದಲ್ಲಿ ಚೋಮ ನಾಟಕವನ್ನು ನಿರ್ದೇಶಿಸುತ್ತಿದ್ದಾಗ ದೇವಿಪ್ರಸಾದರು ಆಗಾಗ ಭೇಟಿ ಕೊಟ್ಟು ಸಲಹೆ ಸೂಚನೆ ನೀಡುತ್ತಿದ್ದರು. ಸಂಪಾಜೆಯಲ್ಲಿ ರಂಗಭೂಮಿ ಚಟುವಟಿಕೆಗಳಿಗೆ ಭದ್ರವಾದ ಅಡಿಪಾಯ ಹಾಕಿ ಕೊಟ್ಟವರು ಅವರು. ಸಂಪಾಜೆ ಪದವಿಪೂರ್ವ ಕಾಲೇಜಿನ ಪ್ರಾಂಗಣದಲ್ಲಿ ನಿರ್ಮಿಸಿದ ನಿಸರ್ಗ ಬಯಲು ರಂಗಮಂದಿರ ಈ ಸೀಮೆಯ ರಂಗಚಟುವಟಿಕೆಗಳ ಅಬಿವೃದ್ಧಿಗೆ ದೇವಿಪ್ರಸಾದರ ಬಹುದೊಡ್ಡ ಕೊಡುಗೆ. ನೆಲವನ್ನು ಸಮತಟ್ಟಾಗಿ ಆಳಕ್ಕೆ ಅಗೆದು ಮೂರು ಹಂತಗಳಲ್ಲಿ ನಿರ್ಮಿಸಿದ ಅರ್ಧಚಂದ್ರಾಕೃತಿಯ ಪ್ರೇಕ್ಷಕಾಂಗಣ, ಯಾವ ಮೂಲೆಯಿಂದ ವೀಕ್ಷಿಸಿದರೂ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುವ ವೇದಿಕೆ, ರಂಗದ ಮುಂಭಾಗದ ಪ್ರಕೃತಿ ರಮಣೀಯತೆ – ರಂಗಮಂದಿರಕ್ಕೆ ವಿಶೇಷ ಮಹತ್ವ ತಂದುಕೊಟ್ಟಿವೆ.

ಸಂಪಾಜೆಯ ಬಯಲು ರಂಗಮಂದಿರದ ವೈಶಿಷ್ಟದ ಬಗ್ಗೆ ರಂಗತಜ್ಞ ಅಯ್ಕೆಯ ಬೊಳುವಾರು ಮತ್ತು ಮೋಹನ ಸೋನಾ ಹೀಗೆ ಬರೆಯುತ್ತಾರೆ : “ಪ್ರೇಕ್ಷಕರ ದೃಷ್ಟಿ ಪಥ ಮತ್ತು ದೃಷ್ಟಿ ಕಿರಣಗಳ ಸಂಗಮ ಕ್ಷೇತ್ರ ಪೂರ್ಣ ರಂಗವನ್ನು ಒಂದು ಕಣ್ಣಿನ ರೂಪದಲ್ಲಿ ಕೇಂದ್ರೀಕರಿಸುತ್ತದೆ. ಒಂದು ವಸ್ತುವಿನಿಂದ ಹೊರಟು ಬರುವ ಎಲ್ಲಾ ಬೆಳಕಿನ ಕಿರಣಗಳು ದೃಶ್ಯ ಪರದೆಯ ಮೇಲೆ ಮೂಡುತ್ತವೆ. ಪ್ರೇಕ್ಷಕಾಂಗಣದಿಂದ ಹೊರಟ ಎಲ್ಲಾ ಪ್ರೇಕ್ಷಕರ ದೃಷ್ಟಿ ಪಥಗಳು ಏಕ ಕೇಂದ್ರದತ್ತ ಸೆಳೆಯಲ್ಪಡುತ್ತವೆ. ವೇದಿಕೆ ತನ್ನ ಮೇಲಿರುವ ಯಾವತ್ತೂ ನಟರನ್ನು ಕಿಂಚಿತ್ ಚಲನೆಯಿಂದಾಗಿ ಅದ್ಭುತ ದೃಶ್ಯ ಪರಿಣಾಮವನ್ನು ಸೃಷ್ಟಿಸಲು ಸಮರ್ಥವಾಗುತ್ತದೆ. ಪ್ರೇಕ್ಷಕರಿಗೆ ತಾವು ಕುಳಿತಲ್ಲೇ ನಟರ ಚಲನೆಯ ವಿರುದ್ಧ ದಿಸೆಯಲ್ಲಿ ಸಾಗಿದಂತಾಗುತ್ತದೆ. ರಂಗ ಕ್ಷಿತಿಜ ಇನ್ನೊಂದು ಸೆಳೆತ ನೀಡುತ್ತದೆ. ಪ್ರೇಕ್ಷಕರನ್ನು ಮೂರು ವರ್ಗಗಳನ್ನಾಗಿ ನಿರ್ಮಿಸುವ ಈ ಪಾತಳಿ ಮೇಲ್ನೋಟ, ಸಮನೋಟ, ಕೆಳನೋಟಗಳನ್ನು ಅನಾಯಾಸವಾಗಿ ಕಟೆದು ಎಡ-ಬಲ, ಮೇಲೆ-ಕೆಳಗೆ, ಎದುರು ಸಾನಿಧ್ಯ ಘನ ಪರಿಣಾಮಗಳನ್ನು ತೋರಿಸುತ್ತದೆ.” (ಸಮರಸ 2003, ಪು. 138)

1990ರ ಎಪ್ರಿಲ್ 10ರಂದು ಆಗಿನ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಐ.ಎಂ. ವಿಠಲಮೂರ್ತಿಯವರು ನಿಸರ್ಗ ಬಯಲು ರಂಗಮಂದಿರವನ್ನು ಉದ್ಘಾಟಿಸಿದರು. ಎಪ್ರಿಲ್ 10ರಿಂದ 27ರ ವರೆಗಿನ ಹಿರಿಯರ ಮತ್ತು ಕಿರಿಯರ ರಂಗ ಶಿಬಿರಗಳನ್ನು ನಾಟಕ ತಜ್ಞ ಬಿ.ವಿ. ಕಾರಂತರು ಉದ್ಘಾಟಿಸಿದರು. ನಾಟಕಕಾರ ಚಂದ್ರಶೇಖರ ಕಂಬಾರ ಅಧ್ಯಕ್ಷತೆ ವಹಿಸಿ ದೇವೀಪ್ರಸಾದರ ರಂಗ ಕೊಡುಗೆಯನ್ನು ಶ್ಲಾಘಿಸಿದರು. ಅಂದು ಕರ್ನಾಟಕ ನೃತ್ಯ ಅಕಾಡೆಮಿ ಅಧ್ಯಕ್ಷೆ ಮಾಯಾರಾವ್ರ ಬಳಗ ಭಾರತೀಯ ನೃತ್ಯಗಳ ಸ್ಥೂಲ ಪರಿಚಯವನ್ನು ರಂಗಾಸಕ್ತರಿಗೆ ನೀಡಿತು. ಸಂಪಾಜೆಯ ರಂಗ ಚಟುವಟಿಕೆಗಳಿಗೆ ಅದೊಂದು ಅದ್ಭುತ ಆರಂಭವಾಗಿತ್ತು.

ಈ ನಿಸರ್ಗ ರಂಗ ಸಂಭ್ರಮ ಕಾರ್ಯಕ್ರಮದ ಫಲಸ್ವರೂಪವಾಗಿ ಅಯ್ಕೆ ಬೊಳುವಾರು, ಮೋಹನ ಸೋನಾ, ಮೂರ್ತಿ ದೇರಾಜೆ, ಗೋಪಾಡ್ಕರ್, ಶಂಕರ ಪ್ರಸಾದ್, ಸುರೇಶ ಶೆಟ್ಟಿಗಾರ್, ಫೋನ್ ಶೀನಪ್ಪ, ಕುಮಾರಸ್ವಾಮಿ – ಮುಂತಾದವರನ್ನು ಒಳಗೊಂಡ ಜಿಲ್ಲಾಮಟ್ಟದ ನಿರತ ನಿರಂತ ಗ್ರಾಮೀಣ ಕಲಾವಿದರ ಸಂಘಟನೆ ಹುಟ್ಟಿಕೊಂಡಿತು. ಜಿಲ್ಲಾ ಮಟ್ಟದಲ್ಲಿ ರಂಗಭೂಮಿಗೆ ಹೊಸ ಆಯಾಮವನ್ನು ತಂದು ಕೊಡುವುದು ಇದರ ಉದ್ದೇಶವಾಗಿತ್ತು. ನಿಸರ್ಗ ರಂಗ ಮಂಚದಲ್ಲಿ ಪುಟ್ಟಿ ಕಾಡಿಗೆ ಹೋದದ್ದು, ಜೂಲಿಯಸ್ ಸೀಸರ್, ಹನ್ನೊಂದು ಹಂಸಗಳು ಮತ್ತು ಕತ್ತಲೆ ದಾರಿ ದೂರ ನಾಟಕಗಳು ಪ್ರದರ್ಶನಗೊಂಡವು. ದೇವಿಪ್ರಸಾದರ ಶ್ರಮದಿಂದಾಗಿ ಸಂಪಾಜೆ, ಸುಳ್ಯ ಸೀಮೆಗಳ ರಂಗಭೂಮಿ ಚಟುವಟಿಕೆಗಳಿಗೆ ಹೊಸ ಉತ್ತೇಜನ ದೊರೆಯಿತು.

ದೇವಿಪ್ರಸಾದರು ನೀನಾಸಂ ತಿರುಗಾಟದ ಎಲ್ಲಾ ಪ್ರದರ್ಶನಗಳಿಗೆ ಸಂಪಾಜೆಯಲ್ಲಿ ವೇದಿಕೆ ಒದಗಿಸಿದ್ದಾರೆ. ಇಕ್ಬಾಲ್ ಅಹಮದ್ ಮತ್ತು ಬಾಸುಮ ನಿರ್ದೇಶನದ ‘ಮೂರು ಕಾಸಿನ ಸಂಗೀತ’ ನಾಟಕ ಪ್ರದರ್ಶನ ಆರ್ಥಿಕವಾಗಿ ಸೋತಾಗ ನಷ್ಟವನ್ನು ತುಂಬಿ ಕಲಾವಿದರನ್ನು ಪ್ರೋತ್ಸಾಹಿಸಿದ್ದಾರೆ. ‘ಚಿಣ್ಣ ಬಣ್ಣ’ ತಂಡದ ಮಕ್ಕಳ ನಾಟಕಕ್ಕೆ ಸುಳ್ಯದಾದ್ಯಂತ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಮಣಿಪುರದ ನಾಟಕ ತಂಡದವರನ್ನು ಸಂಪಾಜೆಗೆ ಕರೆಸಿ ‘ಚಕ್ರವ್ಯೆಹ’ ನಾಟಕವನ್ನು ರಂಗಮಂಟಪವೇರಿಸಿ ಕಲೆ, ನಾಟಕ, ಸಂಗೀತಗಳಿಗೆ ಭಾಷೆ ತಡೆಗೋಡೆಯಾಗುವುದಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ದೇವಿಪ್ರಸಾದರು ರಚಿಸಿದ ‘ಶಿರಾಡಿ ಭೂತ’ ನಾಟಕ ರಾಜ್ಯದಾದ್ಯಂತ ಕುತೂಹಲವನ್ನು ಸೃಷ್ಟಿಸಿತ್ತು. ಅದರ ಹಾಡುಗಳ ಧ್ವನಿಮುದ್ರಣಕ್ಕೆ ಈಗಲೂ ಬೇಡಿಕೆಯಿದೆ. ನಾಟಕ ವಿಮರ್ಶಕ ಡಾ. ನಾ.ದಾ. ಶೆಟ್ಟಿ ಈ ನಾಟಕದ ಬಗ್ಗೆ ಹೀಗೆ ಬರೆದಿದ್ದಾರೆ : “ಶಿರಾಡಿ ಭೂತ ಹಾಗೂ ಬಚ್ಚ ನಾಯಕನ ಪಾಡ್ದನಗಳನ್ನು ಬಳಸಿಕೊಂಡು ಅದರ ಮೂಲಕ ಗೌಡ ಜನಾಂಗದಲ್ಲಿ ಬೆಳೆದು ಬಂದ ಭೂತಾರಾಧನಾ ನಂಬಿಕೆಯ ಹಿನ್ನೆಲೆಯನ್ನು ತಿಳಿಯ ಹೇಳುವ ಪ್ರಯತ್ನ ಇಲ್ಲಿದೆ. ಪಾಡ್ದನದ ಒಳಗೆ ಹುದುಗಿರುವ ಅದೆಷ್ಟೋ ಕತೆಗಳು ಮನುಷ್ಯ ಮನಸ್ಸುಗಳಲ್ಲಿ ದೃಶ್ಯರೂಪವಾಗಿ ಅರಳದೆ ನಶಿಸುವಂತಹ ಸಂದರ್ಭಗಳೇ ಹೆಚ್ಚು. ಅಂತಹುದರಲ್ಲಿ ಪಾಡ್ದನದ ಮೂಲಕ ಒಂದು ಜನಾಂಗದ ಪೂರ್ವಕತೆಯನ್ನು ದೃಶ್ಯೀಕರಿಸುವ ಯತ್ನ ಇಂತಹ ಅನೇಕ ಪ್ರದರ್ಶನಗಳು ದೃಶ್ಯರೂಪಕ್ಕೆ ಅಳವಡುವಂತಾಗಲು ನಾಂದಿಯಾಗಬಹುದು. ದೇವಿಪ್ರಸಾದ್ ರಚಿಸಿದ ಈ ನಾಟಕವನ್ನು ಇಕಬಾಲ್ ಅಹಮದ್ ಸಮರ್ಥವಾಗಿ ನಿರ್ದೇಶಿಸಿದ್ದಾರೆ.” (ಸಮರಸ 2003, ಪು. 134). ಶಿರಾಡಿ ಭೂತ ನಾಟಕದಿಂದಾಗಿ ಬಂಟೋಡಿ ವೇಣುಗೋಪಾಲ, ಜಬ್ಬಾರ ಸಮೊ, ಬಾಸುಮ ಕೊಡಗು – ಮುಂತಾದವರು ನಟರಾಗಿ ಹೊಸ ಎತ್ತರಕ್ಕೆ ಏರಿದರು. ಈ ನಾಟಕ ದೂರದರ್ಶನದಲ್ಲೂ ಪ್ರಸಾರವಾಗಿ ದೇವಿಪ್ರಸಾದರಿಗೆ ನಾಟಕಕಾರನ ಪಟ್ಟವನ್ನು ಗಟ್ಟಿಗೊಳಿಸಿತು.

ದೇವಿಪ್ರಸಾದರಿಗೆ ನಾಟಕ ರಚಿಸಿ ರಂಗವೇರಿಸಲು ಮೂಲ ಸ್ಫೂರ್ತಿ ದೊರಕಿದ್ದು ಚಲನಚಿತ್ರದಿಂದ. ಯಶವಂತ ಚಿತ್ತಾಲರ ‘ಮೂರು ದಾರಿಗಳು’ ಕಾದಂಬರಿಯನ್ನು ದೇವಿಪ್ರಸಾದರು ಚಲನಚಿತ್ರವಾಗಿ ಮಾರ್ಪಡಿಸಿದರು. ಗಿರೀಶ್ ಕಾಸರವಳ್ಳಿ ದಿಗ್ದರ್ಶಿಸಿದ ಈ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ದೊರೆಯಿತು. ರಾಜ್ಯ ಸರಕಾರ ಐದು ಪ್ರಶಸ್ತಿಗಳನ್ನು ನೀಡಿತು. ಪ್ರಶಸ್ತಿ ವಿಜೇತ ಸಿನಿಮಾಗಳು ಟಾಕೀಸುಗಳಲ್ಲಿ ಪ್ರದರ್ಶನಗೊಳ್ಳುವುದು ತೀರಾ ಕಡಿಮೆ. ಪ್ರದರ್ಶನಗೊಂಡರೂ ಜನರನ್ನು ಅವು ಆಕರ್ಷಿಸುವುದಿಲ್ಲ. ಆರ್ಥಿಕವಾಗಿ ಕೈ ಸುಟ್ಟುಕೊಂಡ ದೇವಿ ಪ್ರಸಾದರಿಗೆ ಸಿನಿಮಾ ನಿರ್ಮಾಣದಿಂದ ಆದ ಲಾಭವೆಂದರೆ ಕಾಸರವಳ್ಳಿ ಕುಟುಂಬದ ಸ್ನೇಹ ಮತ್ತು ಒಡನಾಟ ಮಾತ್ರ!

ರಂಗತಜ್ಞ ಸದಾನಂದ ಸುವರ್ಣರ ‘ಗುಡ್ಡದ ಭೂತ’ ಟಿ.ವಿ. ಧಾರಾವಾಹಿಯಲ್ಲಿ ನಟಿಸಿ ಸುಳ್ಯದಲ್ಲೊಂದು ಸಂಚಲನಕ್ಕೆ ಕಾರಣರಾದ ದೇವಿಪ್ರಸಾದರು ‘ಅಪಹರಣ’ ಟೆಲಿಪಿಲಂ ನಿರ್ಮಿಸಿದ್ದು ಇನ್ನೊಂದು ಸಾಹಸ ಗಾಥೆ. ಅದರ ಮೂಲಕತೆ, ನಿರ್ಮಾಣ ಮತ್ತು ನಿರ್ದೇಶನ ದೇವಿಪ್ರಸಾದರದು. ಚಿತ್ರಕತೆ ಮತ್ತು ಸಂಭಾಷಣೆ ನಾನು ರಚಿಸಿದ್ದು. ಛಾಯಾಗ್ರಹಣ ಆರ್.ಕೆ. ಭಟ್. ದ.ಕ.ದ ರಂಗಭೂಮಿಯ ನಟರನ್ನು ಬಳಸಿ, ನಂಜಯ್ಯನ ಮನೆಯಲ್ಲಿ ಒಳಾಂಗಣ, ಸಂಪಾಜೆ ಸುತ್ತಮುತ್ತ ಹೊರಾಂಗಣ ಚಿತ್ರೀಕರಣ ನಡೆಸಿ ಲೋ ಬಜೆಟ್ಟಿನಲ್ಲಿ ನಿರ್ಮಿಸಿದ ಅರ್ಧಗಂಟೆಯ ಈ ಟೆಲಿಚಿತ್ರವನ್ನು ಯಾವ ಟಿ.ವಿ.ಯವರೂ ಬಿತ್ತರಿಸಲಿಲ್ಲ. ಒಂದೇ ವೀಡಿಂುೋ ಕ್ಯಾಮರಾದ ಬಳಕೆಯಿಂದಾಗಿ ಚಿತ್ರದ ಒಟ್ಟು ಪರಿಣಾಮ ಮಿತಿಗೊಳಪಟ್ಟಿತ್ತು. ಇನ್ನೂ 11 ಎಪಿಸೋಡ್ ಸೇರಿಸಿ ಅದನ್ನೊಂದು ಧಾರಾವಾಹಿ ಮಾಡುತ್ತಿದ್ದರೆ ಪ್ರದರ್ಶನಕ್ಕೆ ಅವಕಾಶ ಸಿಗುತ್ತಿತ್ತೇನೋ? ಚಿತ್ರ ಡಬ್ಬದಲ್ಲೇ ಉಳಿದರೂ ದೇವಿಪ್ರಸಾದರು ನನಗೆ ಮತ್ತು ಛಾಯಾಗ್ರಾಹಕರಿಗೆ ಗೌರವ ಧನ ನೀಡಲು ಬಂದರು. ನಾವು ನಯವಾಗಿಯೇ ನಿರಾಕರಿಸಿದೆವು.

ನಾಟಕ-ಸಿನಿಮಾಗಳಲ್ಲಿ ನಷ್ಟ ಅನುಭವಿಸಿದರೂ ದೇವಿಪ್ರಸಾದರದು ತೆಪ್ಪಗಿರುವ ಜೀವವಲ್ಲ. ಅದಕ್ಕಾಗಿ ಲೇಖಕ ಜೋಯಪ್ಪನವರು ಅವರನ್ನು ಸೋಲರಿಯದ ಸಾಧಕ ಎಂದು ಕರೆದು ಅದಕ್ಕೆ ಕಾರಣವನ್ನು ಹೀಗೆ ತೋರಿಸಿದ್ದಾರೆ : “ಎಲ್ಲರೂ ಬದುಕಿನ ಬೇಸಾಯ ಮಾಡಿದವರೇ. ಆದರೆ ಆ ಬೇಸಾಯಕ್ಕಾಗಿ ಗಟ್ಟಿ ಕಾಳನ್ನು ಆಯ್ದುಕೊಂಡವರು ಎಷ್ಟು ಮಂದಿ? ಹುಟ್ಟಿದ್ದಕ್ಕೆ ಹೇಗಾದರೂ ಬದುಕು ಸವೆಸುವ, ಅರ್ಥವಿಲ್ಲದ ಬಾಳನ್ನು ವ್ಯರ್ಥಗೊಳಿಸುವ ಉದ್ದೇಶರಹಿತರ ಸಂಖ್ಯೆಯೇ ಹೆಚ್ಚು. ನಾವು ಯಾಕಾಗಿ ಬದುಕಿದ್ದೇವೆ ಎಂದು ಎಂದಿಗೂ ಸ್ವವಿಮರ್ಶೆ ಮಾಡಿಕೊಳ್ಳದ ಮಂದಿಗಳ ಮಧ್ಯೆ ಬದುಕೆಂದರೆ ಇದು ಎಂದು ತೋರಿಸಿಕೊಟ್ಟ ದೇವಿಪ್ರಸಾದರು ಸಾರ್ಥಕ ಬದುಕು” (ಸಮರಸ 2003, ಪುಟ 152)

ಸಾಹಿತಿಯಾಗಿ, ಜಾನಪದ ತಜ್ಞನಾಗಿ ಕರಾವಳಿ ಕರ್ನಾಟಕದಲ್ಲಿ ಅಗ್ರಸ್ಥಾನ ಪಡೆದಿರುವ ಪ್ರೊ. ಅಮೃತ ಸೋಮೇಶ್ವರರು ದೇವಿಪ್ರಸಾದರ ಬಗ್ಗೆ ಹೀಗಂದಿದ್ದಾರೆ : “ಇತಿಹಾಸ, ಸಂಸ್ಕೃತಿ, ಪರಂಪರೆ, ಸಾಮಾಜಿಕ ಜಾಗೃತಿ ಮೊದಲಾದ ವಿಚಾರಗಳಲ್ಲಿ ಸಕ್ರಿಯವಾಗಿಯೂ, ಆಳವಾದ ಕಾಳಜಿಯಿಂದ ತೊಡಗಿಸಿಕೊಳ್ಳುವವರು ಬಹಳ ವಿರಳ. ಅದಕ್ಕೆ ತೀವ್ರವಾದ ಆಸಕ್ತಿ, ಅಧ್ಯಯನ, ಪರಿಶ್ರಮ, ನಾಡು ನುಡಿಗಳ ಗಾಢ ಪ್ರೇಮ, ಜನಸಂಪರ್ಕ, ಸಂಘಟನಾ ಸಾಮರ್ಥ್ಯ, ಸಂವಹನ ಶಕ್ತಿ ಬೇಕಾಗುತ್ತದೆ. ಅಲ್ಪತೃಪ್ತರಿಗೂ, ಸುಲಭ ಜೀವಿಗಳಿಗೂ, ಐಷಾರಾಮ ಪ್ರಿಯರಿಗೂ ಅದು ದಕ್ಕುವ ದಾರಿಯಲ್ಲ. ಅಂತಹ ದುರ್ಗಮ ಪಥವನ್ನು ಆರಿಸಿಕೊಂಡ ದೇವಿಪ್ರಸಾದರದು ಚೇತೋಹಾರಿ ಪ್ರತಿಭೆಯ, ಬಹುಮುಖ ಕ್ರಿಯಾಶೀಲತೆಯ ವರ್ಣಮಯ ವ್ಯಕ್ತಿತ್ವ. ಅವರ ಆಸಕ್ತಿಯ ಮತ್ತು ವ್ಯವಸಾಯದ ಕ್ಷೇತ್ರಗಳು ಹಲವು. ಸಾಹಿತ್ಯ, ಇತಿಹಾಸ, ಕಲೆ, ಸಂಸ್ಕೃತಿ, ರಾಜಕಾರಣ, ಶಿಕ್ಷಣ, ಸಹಕಾರ, ನಾಟಕ, ಚಲನಚಿತ್ರ, ಪತ್ರಿಕೋದ್ಯಮ, ಸಮಾಜ ಜಾಗೃತಿ, ಸಂಘಟನೆ ಇತ್ಯಾದಿ. ಆದರ್ಶ ಕನಸುಗಳನ್ನು ಹೊತ್ತ ಅವರ ಉತ್ಸಾಹಪೂರ್ಣ ಮನಸ್ಸು ಉನ್ನತ ಮೌಲ್ಯಗಳಿಗಾಗಿ ತುಡಿಯುತ್ತಿರುತ್ತದೆ. ಸದಾ ಸಂಘಜೀವಿಯಾದ ಅವರಿಗೆ ನಮ್ಮ ಸಂಸ್ಕೃತಿ ಪರಂಪರೆಯ ಸತ್ಫಲಗಳನ್ನು ಸಮಾಜಕ್ಕೆ ಒದಗಿಸುವ ಹಂಬಲ. ಅದಕ್ಕಾಗಿ ಎಷ್ಟು ಪಾಡು ಪಡಲಿಕ್ಕೂ, ಎಂಥ ತ್ಯಾಗಕ್ಕೂ ಸಿದ್ಧ. ಕಾಯಕದ ಮುಂದೆ ಶರೀರದ ಆರೋಗ್ಯವೂ ಅವರಿಗೆ ಗೌಣ.” (ಸಮರಸ 2003, ಪು. 144)

ಪ್ರಸಿದ್ಧ ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಷಿಯವರ ಪ್ರಕಾರ “ಮಿತ್ರರಾದ ದೇವಿಪ್ರಸಾದರ ಸಾಂಸ್ಕೃತಿಕ ಸ್ಪಂದನ ಶೀಲತೆ ಅಸಾಧಾರಣವಾದುದು. ಹತ್ತಾರು ಕನಸುಗಳನ್ನು ಹೊತ್ತು, ತನ್ನದೇ ರೀತಿಯಿಂದ ಅವುಗಳ ಸಾಕಾರಕ್ಕೆ ಹೆಣಗಾಡುತ್ತ, ಕೆಲಸ ಮಾಡುತ್ತ, ಮಾಡಿಸುತ್ತಾ ಇರುವ ದೇವಿಪ್ರಸಾದ್ ಓರ್ವ ಪ್ರೇರಕ ವ್ಯಕ್ತಿ. ಬೇರೆಯವರು ಮಾಡುತ್ತಿರುವ ಕೆಲಸಗಳನ್ನು ಪ್ರೀತಿಯಿಂದ ಗಮನಿಸುತ್ತ, ಅದಕ್ಕೆ ತನ್ನಿಂದಾಗುವ ಪ್ರೋತ್ಸಾಹ, ಮೆಚ್ಚುಗೆ, ಭಾಗವಹಿಸುವಿಕೆಗಳನ್ನು ನೀಡುವ ಶ್ಲಾಘ್ಯ ವ್ಯಕ್ತಿತ್ವವುಳ್ಳ ಸಹಜ ಸ್ನೇಹಶೀಲರು.” (ಸಮರಸ 2003, ಪು. 148)

“ಒಂದು ಕಲೆಗೆ ನೆಲೆ ಬೆಲೆ ಕೊಟ್ಟಾಗ ಕಲಾವಿದನಿಗೆ ಗೌರವದ ಜೊತೆಗೆ ಕಲೆಯ ಅಸ್ತಿತ್ವದ ಗಟ್ಟಿತನ ಸ್ಥಿರವಾಗುತ್ತದೆ. ಅಂತಹ ಕಲೆಗಳಾದ ನಾಟಕ, ಯಕ್ಷಗಾನ, ನೃತ್ಯ ಪ್ರಕಾರಗಳನ್ನು ಸಂಪಾಜೆಯಂತಹ ಗ್ರಾಮೀಣ ಪ್ರದೇಶಕ್ಕೆ ಪರಿಚಯಿಸಿದ್ದು ದೇವಿ ಪ್ರಸಾದರ ಹೆಚ್ಚುಗಾರಿಕೆಯಾಗಿದೆ. ಅವರು ಬಹುಶ್ರುತರು ಮತ್ತು ಮಹು ಕೃತರು” ಎಂದು ಎ. ಐತಪ್ಪನವರು ಸರಿಯಾಗಿಂುೆುೀ ಗುರುತಿಸಿದ್ದಾರೆ. (ಸಮರಸ 2003, ಪುಟ 163)