ಕೊಡಗು ವಿವರಣೆ

ಕೊಡಗು ಪರ್ವತಗಳಿಂದ ಕೂಡಿದ ರಮಣೀಯವಾದ ದೇಶವು. ಇದು ದಕ್ಷಿಣ ಹಿಂದುಸ್ಥಾನದಲ್ಲಿ ಪಶ್ಚಿಮ ಘಟ್ಟಗಳ ಮೇಲೆ ಪೂರ್ವ ದಿಕ್ಕಿಗೆ ವಿಸ್ತರಿಸಿಕೊಂಡಿದೆ. ಕೊಡಗು ಅಂದರೆ ಕೋಡುಗಲ್ಲುಗಳುಳ್ಳದ್ದು. ಪ್ರಸಿದ್ಧಿ ಪಟ್ಟ ಕಾವೇರೀ ನದಿಯು ಈ ದೇಶದಲ್ಲಿ ಹುಟ್ಟಿ, ಸ್ವಲ್ಪ ದೂರದವರೆಗೆ ಹರಿದು, ಮುಂದಕ್ಕೆ ಹೋಗುತ್ತದೆ. ಇದಕ್ಕೂ ಪಶ್ಚಿಮಕ್ಕೆ ೩೦ ಮೈಲಿಗಳ ದೂರದಲ್ಲಿರುವ ಸಮುದ್ರಕ್ಕೂ ಮಧ್ಯೆ ದಕ್ಷಿಣ ಕನ್ನಡ, ಮಲೆಯಾಳ ಜಿಲ್ಲೆಗಳು ಇವೆ. ಇದರ ದಕ್ಷಿಣಕ್ಕೆ ವೈನಾಡೂ, ಪೂರ್ವಕ್ಕೂ ಉತ್ತರಕ್ಕೂ ಮೈಸೂರು ಮೇರೆಗಳಾಗಿವೆ. ದಕ್ಷಿಣೋತ್ತರ ೬೦ ಮೈಲಿಗಳ ಉದ್ದವೂ, ಪೂರ್ವ ಪಶ್ವಿಮ ೪೦ ಮೈಲಿಗಳ ಅಗಲವೂ ಉಳ್ಳದ್ದಾಗಿ, ಸುಮಾರು ೧,೫೮೦ ಚದರ ಮೈಲಿಗಳ ವಿಸ್ತೀರ್ಣವುಳ್ಳದ್ದಾಗಿದೆ. ಗದ್ದೆ ಹೊಲ ಕಾಫಿ ತೋಟಗಳಲ್ಲದೆ, ಪ್ರಾಯಶಃ ದೇಶವೆಲ್ಲಾ ಗಿಡಸೀಮೆಯಾಗಿದೆ.

ಪರ್ವತಗಳು

ಇದಕ್ಕೆ ವಾಯವ್ಯದಲ್ಲಿರುವ ಪುಷ್ಪಗಿರಿ ಶಿಖರದಿಂದ ದಕ್ಷಿಣದಲ್ಲಿ ಬ್ರಹ್ಮಗಿರಿಗಳವರೆಗೆ ಪಶ್ಚಿಮ ಘಟ್ಟಗಳು ಸಾಲಾಗಿ ಹಬ್ಬಿರುತ್ತವೆ. ಈ ಘಟ್ಟಗಳ ಬೇರೆ ಬೇರೆ ಭಾಗಗಳಿಗೆ ಬೇರೆ ಬೇರೆ ಹೆಸರುಗಳುಂಟು. ಮತ್ತು ಈ ಪರ್ವತ ಶ್ರೇಣಿಯಿಂದ ಚಿಕ್ಕ ಚಿಕ್ಕ ಇತರ ಪರ್ವತ ಪಂಕ್ತಿಗಳು ಕವಲೊಡೆದು ಪೂರ್ವ ದಿಕ್ಕಿಗೆ ಹೋಗಿವೆ. ಮುಖ್ಯ ಪರ್ವತ ಶ್ರೇಣಿಯ ಉದ್ದವು ದೇಶದ ಉದ್ದದಷ್ಟೇ; ಎಂದರೆ ೬೦ ಮೈಲಿಗಳು. ಈ ಘಟ್ಟಗಳ ಮುಖ್ಯ ಭಾಗಗಳಾವವೆಂದರೆ:

೧. ಬ್ರಹ್ಮಗಿರಿ ಅಥವಾ ಮಲೆನಾಡು ಬೆಟ್ಟಗಳು : ದಕ್ಷಿಣದಲ್ಲಿವೆ. ಇವು ವೈನಾಡಿಗೂ ಕೊಡಗಿಗೂ ಮಧ್ಯೆ ಮೇರೆಯಾಗಿ ಸಮುದ್ರ ಮಟ್ಟಕ್ಕೆ ೪,೫೦೦ ಅಡಿಗಳ ಎತ್ತರವುಳ್ಳದ್ದಾಗಿವೆ. ಇವುಗಳಲ್ಲಿ ಹುಯಾಲೆಮಲೆ ಎಂಬ ಸುಂದರವಾದ ಪ್ರಸ್ಥಭೂಮಿಯಿಂದ ಮೇಲಕ್ಕೆ ಏಳುವ, ೧೦೬ ಅಡಿಗಳ ಎತ್ತರವುಳ್ಳ ದೇವಾಸಿ ಬೆಟ್ಟವು ಅತ್ಯುನ್ನತ ಶಿಖರವಾಗಿದೆ. ಅಲ್ಲಿಂದ ನೋಡಿದರೆ, ಮಲೆಯಾಳದಲ್ಲಿ ಪಾಪನಾಶಿನೀ ನದಿಯು ಹರಿಯುವ ಕಣಿವೆಯಲ್ಲಿರುವ ಪೆಮ್ಮಯ್ಯನ ದೇವಸ್ಥಾನವೂ, ಅದರಿಂದಾಚೆ ಉತ್ತರ ವೈನಾಡಿನಲ್ಲಿರುವ ಪರ್ವತಗಳೂ ಕಾಣಬರುತ್ತವೆ. ಹನುಮನ ಬೆಟ್ಟವೆಂಬುದು ಪ್ರಸಿದ್ಧಿ ಹೊಂದಿದ ಇನ್ನೊಂದು ಶಿಖರವು. ಬ್ರಹ್ಮಗಿರಿಪರ್ವತಗಳಿಂದ ಕವಲೊಡೆದು ಬಂದ ಚಿಕ್ಕ ಚಿಕ್ಕ ಬೆಟ್ಟಸಾಲುಗಳು ಕಿಗ್ಗಟ್ನಾಡು ಎಂಬ ಕೊಡಗಿನ ದಕ್ಷಿಣ ಭಾಗದಲ್ಲಿ ಎಲ್ಲಾ ಕಡೆಗಳಲ್ಲಿಯೂ ಹಬ್ಬಿಕೊಂಡು ಕಾವೇರೀ ಹೊಳೆಯವರೆಗೆ ಹೋಗಿವೆ. ಈ ಸಾಲುಗಳಲ್ಲಿ ಮುಖ್ಯವಾದುವು ಯಾವುವೆಂದರೆ ವೀರರಾಜೇಂದ್ರಪೇಟೆಯ ಸಮೀಪದಲ್ಲಿರುವ ಅಂಬಟೆಬೆಟ್ಟ, ಹಾತೂರಿಗೆ ಸಮೀಪದಲ್ಲಿರುವ ಬಿಟ್ಟಂಗಾಲದ ಬೆಟ್ಟ, ಕುಂದದ ಬೆಟ್ಟ, ಶಿದ್ಧೇಶ್ವರನ ಬೆಟ್ಟ, ಮಣಕಾಲು ಬೆಟ್ಟ, ಎಂಬಿವು. ಈ ಬೆಟ್ಟಸಾಲುಗಳು ಅನೇಕ ವಿಸ್ತಾರವಾದ ಗದ್ದೆ ಬೈಲುಗಳನ್ನು ಆವರಿಸಿಕೊಂಡಿವೆ.

೨. ಪಶ್ಚಿಮ ಘಟ್ಟಗಳಲ್ಲಿಯ ಮುಖ್ಯವಾದ ಪರ್ವತ – ಶ್ರೇಣಿಯು ವಾಯವ್ಯ ದಿಕ್ಕಿನಲ್ಲಿ ಸುಮಾರು ೩೦ ಮೈಲಿಗಳವರೆಗೆ ಪ್ರಸರಿಸಿ ಇದೆ. ಪೆರಂಬಾಡಿ ಕಣಿವೆಯು ಇದನ್ನು ಬ್ರಹ್ಮಗಿರಿ ಪರ್ವತಗಳಿಂದ ವಿಂಗಡಿಸುತ್ತದೆ. ಈ ಪರ್ವತ ಶ್ರೇಣಿಯು ಆ ಕಣಿವೆಯಿಂದ ಕಾವೇರೀ ನದಿಯು ಹುಟ್ಟುವ ಸ್ಥಳಕ್ಕೆ ಸಮೀಪದಲ್ಲಿರುವ ತೋಡಿಕಾನ ಕಣಿವೆಯವರೆಗೆ ಹಬ್ಬಿ ಇದೆ. ಇದರ ಪಶ್ಚಿಮ ಭಾಗವು ಜರುಗಾಗಿದೆ. ಇದರ ಶಿಖರಗಳಲ್ಲಿ ನಾಲ್ಕು ನಾಡಿನಲ್ಲಿರುವ ತಡಿಯಂಡಮೋಳು ಎಂಬುದು ಅತ್ಯುನ್ನತವಾಗಿದೆ. ಅದು ಸಮುದ್ರಮಟ್ಟಕ್ಕೆ ೫,೭೨೯ ಅಡಿಗಳ ಎತ್ತರವಿದ್ದು, ನೋಡಲಿಕ್ಕೆ ದೊಡ್ಡದಾಗಿಯೂ ಸುಂದರವಾಗಿಯೂ ಇದೆ. ಅದಕ್ಕೆ ಆಗ್ನೇಯ ದಿಕ್ಕಿನಲ್ಲಿ ೬ ಮೈಲಿಗಳ ದೂರಕ್ಕೆ ಸೋಮಮಲೆ ಎಂಬ ಶಿಖರವಿದೆ. ಅದು ಕಡಿಯತ್ನಾಡಿನಲ್ಲಿ ಅತ್ಯುನ್ನತವಾದುದು. ಇಲ್ಲಿ ‘ಮಲೆ ತಂಬಿರಾನ್’ ಎಂಬ ದೇವರ ಗುಡಿಯದೆ ಮತ್ತು ಅಲ್ಲಿಂದ ಕೂಡಂದೊರೆ ಕಣಿವೆಯು ಕಾಣಬರುವುದು. ತಡಿಯಂಡಮೋಳಿಗೆ ಈಶಾನ್ಯದಲ್ಲಿ ೨ ಮೈಲಿಗಳ ದೂರದಲ್ಲಿ ಪಾಡಿತೊರೆ ಕಣಿವೆಗೆ ಸಮೀಪ ಇಗ್ಗುತಪ್ಪಕುಂದು ಎನ್ನುವ ಇನ್ನೊಂದು ಉನ್ನತವಾದ ಶಿಖರವಿದೆ. ಅದರಿಂದಾಚೆಗೆ ೩ ಮೈಲಿಗಳ ದೂರದಲ್ಲಿ ಪೆರೂರು ಬೆಟ್ಟ, ಅದರಿಂದಾಚೆ ೪ ಮೈಲಿಗಳ ದೂರದಲ್ಲಿ ಶ್ರೀಮಂಗಲ ಬೆಟ್ಟ ಎಂಬ ಶಿಖರಗಳಿವೆ. ಅದರ ಪ್ರಸಿದ್ಧಿ ಪಟ್ಟ ಇನ್ನೊಂದು ಶಿಖರವು ಯಾವುದೆಂದರೆ, ತಾವು ನಾಡಿನಲ್ಲಿ ಕಾವೇರೀ ನದಿಯು ಉತ್ಪನ್ನವಾಗುವಲ್ಲಿ ಇರುವ ಬ್ರಹ್ಮಗಿರಿ ಎಂಬುದು.

೩. ಬೇಂಗನಾಡು ಬೆಟ್ಟಗಳ : ಮುಖ್ಯವಾದ ಸಾಲು ಕಾವೇರೀ ನದಿಯು ಹುಟ್ಟು ವಲ್ಲಿಂದ ಪೂರ್ವಕ್ಕೆ ಮಡಿಕೇರಿ ಸಾನುಭೂಮಿಯವರೆಗೆ ಹಬ್ಬಿಕೊಂಡಿದೆ. ಇದಕ್ಕೆ ಉತ್ತರದಲ್ಲಿ ಸಂಪಾಜೆ ಕಣಿವೆಯು ಮೇರೆಯಾಗಿದೆ.

೪. ಸುಬ್ರಹ್ಮಣ್ಯ ಪರ್ವತ ಶ್ರೇಣಿ : ಇದು ಮಡಿಕೇರಿಯ ಸಾನುಭೂಮಿಗೆ ಪಶ್ಚಿಮ ಮೇರೆಯಾಗಿ, ಮಡಿಕೇರಿಯ ಸಾನುಭೂಮಿಯಿಂದ ಸಂಪಾಜೆ ಕಣಿವೆಗೆ ಉತ್ತರ ಭಾಗದಲ್ಲಿ ೮ ಮೈಲಿಗಳವರೆಗೆ ವಾಯವ್ಯ ದಿಕ್ಕಿಗೆ ಹಬ್ಬಿಕೊಂಡು, ಅಲ್ಲಿಂದ ಈಶಾನ್ಯ ದಿಕ್ಕಿಗೆ ತಿರುಗಿ, ಮಂಜರಾಭಾದಿಗೂ ಕೊಡಗಿಗೂ ಮಧ್ಯೆ ಇರುವ ಬಿಸಲೆಘಟ್ಟದ ವರೆಗೆ ಹೋಗಿದೆ. ಇದರ ಉತ್ತರಾಂತ್ಯದಲ್ಲಿ ಸಮುದ್ರಮಟ್ಟಕ್ಕೆ ೫,೬೨೬ ಅಡಿಗಳ ಎತ್ತರವಿರುವ ಸುಬ್ರಹ್ಮಣ್ಯ ಅಥವಾ ಪುಷ್ಪಗಿರಿ ಶಿಖರವು ಇದೆ. ಎರಡು ಕೋಡುಗಳುಳ್ಳ ಈ ಪ್ರಸಿದ್ಧಿ ಪಟ್ಟ ಶಿಖರವು ಮಡಿಕೇರಿಯಿಂದ ನೋಡುವಾಗ ಬಸವನ ಬೆನ್ನಿನ ಮೇಲಿರುವ ಲಿಂಗದಂತೆ ಕಾಣುವುದು. ಇದರ ಬುಡದಿಂದ ೬ ಮೈಲಿಗಳ ಉದ್ದವಿರುವ ಕಾಲು ದಾರಿಯಾಗಿ ಮೇಲಕ್ಕೆ ಹತ್ತಿ ಬಂದು ನೋಡಿದರೆ, ಕೊಡಗು, ಕನ್ನಡ, ಮೈಸೂರು ದೇಶಗಳು ಚೆನ್ನಾಗಿ ಕಾಣಬರುತ್ತವೆ. ಸಂಪಾಜೆ ಕಣಿವೆಯು ಮಡಿಕೇರಿಯ ಸಾನುಭೂಮಿಯಿಂದ ಕೆಳಗೆ ದಕ್ಷಿಣ ಕನ್ನಡದ ಮೈದಾನದವರೆಗೆ ೧೫ ಮೈಲಿಗಳ ಉದ್ದಕ್ಕೆ ವಿಸ್ತರಿಸಿದೆ. ಇದಕ್ಕೆ ದಕ್ಷಿಣದಲ್ಲಿ ಬೇಂಗುನಾಡು ಪರ್ವತ ಶ್ರೇಣಿಯೂ, ಉತ್ತರದಲ್ಲಿ ನೂರೊಕ್ಕಲುಬೆಟ್ಟ ಸಾಲೂ ಇವೆ. ಮಡಿಕೇರಿಯಿಂದ ಮಂಗಳೂರಿಗೆ ಹೋಗುವ ರಾಜಮಾರ್ಗವು ಈ ಕಣಿವೆಯಲ್ಲಿಯೇ ಹೋಗಿದೆ. ಈ ಕಣಿವೆಯ ತಗ್ಗಿನಲ್ಲಿ ಕನ್ನಡ ಜಿಲ್ಲೆಗೆ ಸೇರಿದ ಸಂಪಾಜೆ ಎಂಬ ಗ್ರಾಮವಿರುವುದರಿಂದ ಇದಕ್ಕೆ ಸಂಪಾಜೆ ಕಣಿವೆ ಎಂದು ಹೆಸರಾಯಿತು.

೫. ಮಡಿಕೇರಿ ಸಾನುಭೂಮಿಯು : ಮಡಿಕೇರಿಯ ಕೋಟೆ ಇರುವಲ್ಲಿ ೮,೮೦೦ ಅಡಿಗಳ ಉನ್ನತವುಳ್ಳದ್ದಾಗಿದೆ. ಅದರ ಸರಾಸರಿ ಎತ್ತರವು ೩,೫೦೦ ಅಡಿ. ಅದು ಉತ್ತರಕ್ಕೆ ಸೋಮವಾರಪೇಟೆವರೆಗೆ ೨೬ ಮೈಲಿಗಳ ದೂರ ಹೋಗಿದೆ; ಪೂರ್ವಕ್ಕೆ ಕಾವೇರೀ ಹೊಳೆಯವರೆಗೆ ಸುಮಾರು ೨೦ ಮೈಲಿ ಇಳಿಜಾರಾಗಿ ಹೋಗಿದೆ. ಕಾವೇರೀ ಹೊಳೆಯ ಹತ್ತ(ತ್ತಿ)ರ ಅದು ೨,೭೦೦ ಅಡಿ ಎತ್ತರವುಳ್ಳದ್ದಾಗಿದೆ. ಆ ಪ್ರಸ್ಥಭೂಮಿಯಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಗುಡ್ಡಗಳೂ ಬೆಟ್ಟಸಾಲುಗಳೂ ಇವೆ. ಅದರ ಪಶ್ಚಿಮ ಮೇರೆ ಸುಬ್ರಹ್ಮಣ್ಯ ಪರ್ವತ ಶ್ರೇಣಿ, ದಕ್ಷಿಣ ಮೇರೆ ಹೊಸ್ಸೂರು ಬೆಟ್ಟಸಾಲು.

೬. ಹೊಸ್ಸೂರು ಬೆಟ್ಟಸಾಲು: ಮಡಿಕೇರಿಯ ಪ್ರಸ್ಥಭೂಮಿಯ ದಕ್ಷಿಣದಲ್ಲಿ ಪೂರ್ವಾಭಿಮುಖವಾಗಿ ಫ್ರೇಜರ್ ಪೇಟೆಯವರೆಗೆ ಡೊಂಕು ಡೊಂಕಾಗಿ ಹೋಗಿದೆ. ಇದರಲ್ಲಿ ತರಕಲಾದ ಕೆಲವು ಗುಡ್ಡಗಳುಂಟು. ಇವುಗಳಲ್ಲಿ ಮುಖ್ಯವಾದುದು ಕಲ್ಲೂರುಬೆಟ್ಟ.

೭. ನೂರೊಕ್ಕಲು ಬೆಟ್ಟಸಾಲು : ಮಡಿಕೇರಿಯ ಸಮೀಪದಿಂದ ಆಗ್ನೇಯಾಭಿಮುಖವಾಗಿ ಸಿದ್ಧಾಪುರಕ್ಕೆ ಸಮೀಪದಲ್ಲಿ ಕಾವೇರೀ ಹೊಳೆಯವರೆಗೆ ಹಬ್ಬಿಕೊಂಡಿದೆ. ಇದರ ಎತ್ತರವಾದ ನೂರೊಕ್ಕಲು ಎಂಬ ಶಿಖರದಿಂದ ಇದಕ್ಕೆ ಆ ಹೆಸರು ಬಂತು. ಈ ಶಿಖರದಲ್ಲಿ ನಿಂತು ನೋಡಿದರೆ, ಕೊಡಗು ದೇಶವೆಲ್ಲಾ ಕಾಣುವುದು.

೮. ಕೋಟೆ ಬೆಟ್ಟಸಾಲು : ಇದು ಸುಬ್ರಹ್ಮಣ್ಯ ಪರ್ವತ ಶ್ರೇಣಿಯಿಂದ ಹೊರಟು ಬರುವ ಚಿಕ್ಕದೊಂದು ಸಾಲು. ಮಡಿಕೇರಿಗೆ ೯ ಮೈಲಿಗಳ ಉತ್ತರದಲ್ಲಿರುವ ೨ ಶಿಖರಗಳುಳ್ಳ ಬೆಟ್ಟವೇ ಇದರ ಅತ್ಯುನ್ನತ ಭಾಗ. ಈ ಶಿಖರಗಳಲ್ಲಿ ಒಂದು ೫,೪೦೦ ಅಡಿಗಳ ಎತ್ತರವುಳ್ಳದ್ದು ಕೋಟೆ ಬೆಟ್ಟವೆಂತಲೂ, ಇನ್ನೊಂದು ಹಾರಂಗಲ್ ಬೆಟ್ಟವೆಂತಲೂ ಅನ್ನಿಸಿಕೊಳ್ಳುತ್ತದೆ. ಈ ಬೆಟ್ಟ ಸಾಲಿನ ತೊಪ್ಪಲು ಕಾಡುಗಳಿಂದ ಮುಚ್ಚಲ್ಪಟ್ಟಿದೆ ಮತ್ತು ತಗ್ಗುಗಳಲ್ಲೆಲ್ಲಾ ಅನೇಕ ಹೊಲ ಗದ್ದೆಗಳಿವೆ. ಕೋಟೆ ಬೆಟ್ಟದ ತುದಿಯಲ್ಲಿ ಯಾವಾಗಲೂ ನೀರಿನಿಂದ ತುಂಬಿಕೊಂಡಿರುವ ಎರಡು ಕೆರೆಗಳಿವೆ; ಇವುಗಳಲ್ಲೊಂದು ಬ್ರಾಹ್ಮಣರ ಉಪಯೋಗಕ್ಕೂ, ಇನ್ನೊಂದು ಕೊಡಗರ ಉಪಯೋಗಕ್ಕೂ ಆಗಿದೆ. ಅದರ ಶಿಖರದಲ್ಲಿ ಚಿಕ್ಕದೊಂದು ಶಿವಾಲಯವಿದೆ.

೯. ಏಳು ಸಾವಿರ ಸೀಮೆ ಬೆಟ್ಟಗಳು : ಇವು ಪಶ್ಚಿಮ ಘಟ್ಟಗಳಲ್ಲಿಯ ಬೆಟ್ಟ ಸಾಲುಗಳಿಗೆ ಹೊಂದಿಕೆಯಾಗಿರದೆ ಕೊಡಗಿನ ಉತ್ತರ ಮೇರೆಯಿಂದ ದಕ್ಷಿಣಾಭಿಮುಖವಾಗಿ ಹೊರಟು ಬಂದು, ಕಾವೇರೀ ಹೊಳೆಗೆ ಮುಟ್ಟಿ ಇವೆ. ಇವುಗಳಲ್ಲಿ ಪ್ರಾಯಶ: ಕೊಡಗಿನ ಎಲ್ಲಾ ಕಡೆಗಳಿಂದಲೂ ನೋಡಬಹುದಾದ ೪,೪೯೦ ಅಡಿಗಳ ಎತ್ತರವುಳ್ಳ ಸುಂದರವಾದ ಮಾಲಂಬಿಬೆಟ್ಟವೂ ಕಣಗಾಲ ಬೆಟ್ಟವೂ ಇವೆ.

01_22_KV-KUH

ಕೊಡಗು – ಬೆಟ್ಟ, ನದಿ, ತಾಲೂಕು ಮತ್ತು ರಸ್ತೆಗಳು

 

ಕೊಡಗು - ಬೆಟ್ಟ, ನದಿ, ತಾಲೂಕು ಮತ್ತು ರಸ್ತೆಗಳು

ಕೊಡಗು – ಬೆಟ್ಟ, ನದಿ, ತಾಲೂಕು ಮತ್ತು ರಸ್ತೆಗಳು

 ನದಿಗಳು

ಕೊಡಗು ದೇಶದ ನದಿಗಳು ವಿಶೇಷವಾಗಿ ಆಳವಾಗಿಯೂ ಅಗಲವಾಗಿಯೂ ಇಲ್ಲದಿದ್ದರೂ, ಸದಾಕಾಲದಲ್ಲಿಯೂ ಬೇಕಾದಷ್ಟು ನೀರಿನಿಂದ ಕೂಡಿರುತ್ತವೆ. ಇವುಗಳು ಎತ್ತರವಾದ ಪರ್ವತಗಳಲ್ಲಿ ಹುಟ್ಟಿ, ಕಲ್ಲುಗಳೊಳಗೆ ಬಹು ವೇಗವಾಗಿ ಹರಿದು ಹೋಗುವುದರಿಂದ ದೋಣಿ ಮೊದಲಾದುವುಗಳನ್ನು ನಡಿಸಲಿಕ್ಕಾಗುವುದಿಲ್ಲಾ ಮತ್ತು ದಡಗಳು ಎತ್ತರವಾಗಿರುವುದರಿಂದಲೂ ತೀರದಲ್ಲಿರುವ ಭೂಮಿಯು ವಿಷಮವಾಗಿರುವುದರಿಂದಲೂ ಈ ನೀರು ವ್ಯವಸಾಯಕ್ಕೆ ಉಪಯೋಗಿಸಿಕೊಳ್ಳಲಿಕ್ಕೆ ಆಗುವುದಿಲ್ಲಾ, ಚಿಕ್ಕ ಚಿಕ್ಕ ಹಳ್ಳಗಳ ನೀರನ್ನು ಮಾತ್ರ ಗದ್ದೆಗಳಿಗೆ ಉಪಯೋಗಿಸಿಕೊಳ್ಳುತ್ತಾರೆ. ಚಿಕ್ಕ ಹೊಳೆಗಳ ನೀರು ಹೆಚ್ಚು ಕಡಿಮೆ ಒಂದೇ ತರವಾಗಿರುತ್ತದೆ. ಜೂನ್ ತಿಂಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗುತ್ತಲೇ ಇವುಗಳು ನೀರಿನಿಂದ ತುಂಬಿ ಬಹು ವೇಗವಾಗಿ ಅಕ್ಟೋಬರು ತಿಂಗಳಿನವರೆಗೆ ಹರಿಯುತ್ತಿದ್ದು ಅಲ್ಲಿಂದಾಚೆಗೆ ಬೇಸಗೆಯಲ್ಲಿ ಮೊದಲಿದ್ದಂತೆಯೇ ಸಣ್ಣವಾಗುತ್ತಾ ಬರುತ್ತವೆ.

ಕೊಡಗು ದೇಶವು ಪಶ್ಚಿಮ ಘಟ್ಟಗಳಿಂದ ಪೂರ್ವಕ್ಕೆ ಇಳಿಜಾರಾಗಿರುವುದರಿಂದ ಈ ನದಿಗಳೆಲ್ಲಾ ಪ್ರಾಯಶಃ ಪೂರ್ವ ದಿಕ್ಕಿಗೆ ಹರಿಯುತ್ತವೆ. ಬರಪೊಳೆ, ನೊಜೆಕಲ್ಲು ಕುಮಾರಧಾರಿ ಎಂಬ ಮೂರು ಹೊಳೆಗಳು ಘಟ್ಟಗಳಲ್ಲಿ ಹುಟ್ಟಿ ಕಣಿವೆಗಳ ಮಾರ್ಗವಾಗಿ ಪಶ್ಚಿಮಕ್ಕೆ ಹರಿದು ಹಿಂದು ಸಾಗರಕ್ಕೆ ಕೂಡುತ್ತವೆ.

ಬರಪೊಳೆ ಕಿಗ್ಗಟ್ನಾಡು ತಾಲೂಕಿನಲ್ಲಿ ಬ್ರಹ್ಮಗಿರಿಗಳಲ್ಲಿ ಹುಟ್ಟಿ, ಆಳವಾದ ಕಣಿವೆಯಲ್ಲಿ ಪಶ್ಚಿಮಾಭಿಮುಖವಾಗಿ ಸ್ವಲ್ಪ ದೂರ ಹರಿದು, ಮಲೆಯಾಳ ಸರಹದ್ದಿನಲ್ಲಿ ಎತ್ತರವಾದ ಒಂದು ಬೆಟ್ಟದಿಂದ ಕೆಳಕ್ಕೆ ದುಮುಕಿ, ಅಲ್ಲಿಂದ ಉತ್ತರ ಮಲೆಯಾಳದಲ್ಲಿ ಹರಿದು, ಚರಕಲ್ ಎಂಬ ಪಟ್ಟಕ್ಕೆ ಸಮೀಪದಲ್ಲಿ ಸಮುದ್ರಕ್ಕೆ ಸಂಗಮವಾಗುತ್ತದೆ.

ನೊಜೆಕಲ್ಲು ಹೊಳೆ ಸಂಪಾಜೆ ಕಣಿವೆಯಲ್ಲಿ ಇಳಿದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿದು ಕಾಸರಗೋಡು ಎಂಬ ಪಟ್ಟಣದ ಸಮೀಪದಲ್ಲಿ ಸಮುದ್ರಕ್ಕೆ ಕೂಡುತ್ತದೆ. ಅಲ್ಲಿ ಅದಕ್ಕೆ ಬಸವನೀ ಹೊಳೆ ಎನ್ನುತ್ತಾರೆ.

ಕುಮಾರಧಾರಿ ನದಿಯು ಸುಬ್ರಹ್ಮಣ್ಯ ಘಟ್ಟಗಳಲ್ಲಿ ಹುಟ್ಟಿ ಸ್ವಲ್ಪ ದೂರದವರೆಗೆ ಮಂಜರಾಬಾದಿಗೂ ಕೊಡಗಿಗೂ ನಡುವೆ ಕೊಡಗಿನ ಉತ್ತರ ಮೇರೆಯಾಗಿ ಹರಿದು, ಅಲ್ಲಿಂದ ಬಿಸಲೆಘಾಟಿಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಇಳಿದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ದೊಡ್ಡದಾದ ನೇತ್ರಾವತಿ ಎಂಬ ನದಿಯನ್ನು ಉಪ್ಪಿನಂಗಡಿ ಎಂಬ ಊರಿನಲ್ಲಿ ಕೂಡಿಕೊಂಡು, ಇನ್ನೂ ಸ್ವಲ್ಪ ದೂರ ಪ್ರವಹಿಸಿ, ಮಂಗಳೂರು ಪಟ್ಟದ ಹತ್ತಿರ ಸಮುದ್ರಕ್ಕೆ ಕೂಡುತ್ತದೆ. ಇದರ ಉದ್ದವು ೧೦೦ ಮೈಲಿಗಳು.

ಪೂರ್ವ ದಿಕ್ಕಿಗೆ ಹರಿಯುವ ನದಿಗಳು : ಕಾವೇರಿಯೂ, ಇದರ ಉಪನದಿಗಳಾದ ಹಾರಂಗಿ, ಹೇಮಾವತಿ, ಲಕ್ಷ್ಮಣ ತೀರ್ಥ.

ಕಾವೇರೀ ನದಿ – ಇದು ದಕ್ಷಿಣ ಹಿಂದುಸ್ಥಾನದಲ್ಲೆಲ್ಲಾ ಅತಿ ಪ್ರಸಿದ್ಧವಾದುದು. ಇದು ಕೊಡಗಿನಲ್ಲಿ ಹುಟ್ಟಿ, ಪೂರ್ವಾಭಿಮುಖವಾಗಿ ಮೈಸೂರು ಸಂಸ್ಥಾನದಲ್ಲಿ ಹರಿದು, ಸೇಲಮ್ ಕೊಯಮ್ಮುತ್ತೂರ ಜಿಲ್ಲೆಗಳಿಗೆ ಮಧ್ಯೆ ಮೇರೆಯಾಗಿ ಹೋಗಿ, ತಿರುಚಿನಾಪಳ್ಳಿ ತಂಜಾವೂರು ಜಿಲ್ಲೆಗಳಲ್ಲಿ ಹರಿದು, ಸಮುದ್ರಕ್ಕೆ ಕೂಡುತ್ತದೆ. ಇದರ ಉದ್ದ ೪೦೦ ಮೈಲಿ. ತಂಜಾವೂರು ಜಿಲ್ಲೆಯಲ್ಲಿ ಈ ನದಿಗೆ ಅಲ್ಲಲ್ಲಿ ಅಣೆಕಟ್ಟುಗಳನ್ನು ಕಟ್ಟಿ, ಉಭಯ ತೀರಗಳಲ್ಲಿಯೂ ಕಾಲಿ

[ಲು]ವೆಗಳ ಮೂಲಕವಾಗಿ ನೀರನ್ನು ತೆಗೆಗುಕೊಂಡು ಹೋಗಿ, ಗದ್ದೆ ಮೊದಲಾದ ವ್ಯವಸಾಯಗಳಿಗೆ ಉಪಯೋಗ ಪಡಿಸಿಕೊಳ್ಳೋಣದರಿಂದ, ಈ ಜಿಲ್ಲೆಯು ದಕ್ಷಿಣ ಹಿಂದುಸ್ಥಾನದ ‘ಉದ್ಯಾನ’ ವೆಂದು ಎನ್ನಿಸಿಕೊಳ್ಳುತ್ತದೆ. ಕಾವೇರಿಯು ಪಶ್ಚಿಮ ಘಟ್ಟಗಳ ಅಂಚಿನಲ್ಲಿರುವ ಬ್ರಹ್ಮಗಿರಿಯಲ್ಲಿ ಉದ್ಭವಿಸುತ್ತದೆ. ಅಲ್ಲಿ ಸಮೀಪದಲ್ಲಿಯೇ ಕನಿಕೆ ಹೊಳೆಯೂ ಹುಟ್ಟಿ, ಸ್ವಲ್ಪ ದೂರ ಹರಿದು, ಬ್ರಹ್ಮಗಿರಿಯ ತಗ್ಗಿನಲ್ಲಿ ಭಾಗಮಂಡಲವೆಂಬ ಗ್ರಾಮದಲ್ಲಿ ಕಾವೇರಿಗೆ ಕೂಡುತ್ತದೆ.

ತಲೆಕಾವೇರಿಯಲ್ಲಿಯೂ ಭಾಗಮಂಡಲದಲ್ಲಿಯೂ ಪರಿಶುದ್ಧವೆನ್ನಿಸಿಕೊಳ್ಳುವ ಹಿಂದೂ ದೇವಸ್ಥಾನಗಳಿವೆ. ಈ ದೇವಸ್ಥಾನಗಳಿಗೆ ಪ್ರತಿ ವರ್ಷದಲ್ಲಿಯೂ ನೆರೆಯೂರುಗಳಿಂದ ಸಾವಿರಾರು ಮಂದಿ ಯಾತ್ರಿಕರು ಬರುತ್ತಾರೆ. ಬೇಸಗೆಯಲ್ಲಿ ಕಾವೇರಿಯು ಶಾಂತವಾಗಿಯೂ ಮಂದವಾಗಿಯೂ ಹರಿಯುತ್ತದೆ. ಆದರೆ ಮಳೆಗಾಲದಲ್ಲಿ ಕಲಕಾದ ನೀರಿನಿಂದ ತುಂಬಿ ಅಗಲವಾಗಿ, ಬಹುವೇಗವಾಗಿಯೂ ಭಯಂಕರವಾಗಿಯೂ ಓಡುತ್ತಾ, ತೀರದಿಂದ ಕುಸಿದು ಬೀಳುವ ಮರ-ಗಿಡಗಳನ್ನು ಕೊಚ್ಚಿಕೊಂಡು ಹೋಗುತ್ತಾ ಅನೇಕ ಸಲ ಅಜುಬಾಜು ಇರುವ ಭೂಮಿಯನ್ನು ಮುಚ್ಚಿಕೊಳ್ಳುತ್ತದೆ. ಕಾವೇರಿಯು ಭಾಗಮಂಡಲದಿಂದ ಆಗ್ನೇಯಾಭಿಮುಖವಾಗಿ ಪಾಡಿನಾಲ್ಕುನಾಡಿನಲ್ಲಿ ಹರಿಯುತ್ತದೆ. ಅಲ್ಲಿ ಅದಕ್ಕೆ ತಡಿಯಂಡಮೋಳು ಶಿಖರದಿಂದ ಇಳಿದು ಬರುವ ಕಕ್ಕಬೆ ಹೊಳೆಯು ಕೂಡುತ್ತದೆ. ಅಲ್ಲಿಂದ ಮಡಿಕೇರಿ ಎಡೆನಾಲ್ಕು ನಾಡು ತಾಲೂಕುಗಳಿಗೆ ಮಧ್ಯೆ ಸಿದ್ದಾಪುರದವರೆಗೆ ಪೂರ್ವ ದಿಕ್ಕಿಗೆ ಹರಿದು, ಆ ಮೇಲೆ ಉತ್ತರಾಭಿಮುಖವಾಗಿ ಕೊಡಗು ಜಿಲ್ಲೆಯ ಪೂರ್ವ ಮೇರೆಯಾಗಿ ಮೈಸೂರನ್ನೂ ನಂಜರಾಯಪಟ್ಟ ತಾಲೂಕನ್ನೂ ವಿಂಗಡಿಸಿ ೨೫ ಮೈಲಿಗಳ ದೂರಕ್ಕೆ ಹೋಗುತ್ತದೆ. ಫ್ರೇಜರ್ ಪೇಟೆಗೆ ಸಮೀಪದಲ್ಲಿ ಹಾರಂಗಿ ಹೊಳೆಯು ಇದಕ್ಕೆ ಸಂಗಮವಾಗುತ್ತದೆ. ಹೇಮಾವತಿ, ಲಕ್ಷ್ಮಣತೀರ್ಥಗಳೆಂಬ ಹೊಳೆಗಳು ಕೊಡಗು ಜಿಲ್ಲೆಯ ಹೊರಗೆ ಮೈಸೂರು ಸೀಮೆಯಲ್ಲಿ ಕಾವೇರೀ ಹೊಳೆಗೆ ಕೂಡುತ್ತವೆ.

ಹಾರಂಗಿ ನದಿ – ಮಡಿಕೇರಿಯ ಸಾನುಭೂಮಿಯಿಂದ ಇಳಿದು ಬರುವ ಮುತ್ತಾರೆಮುಟ್ಟು ಹೊಳೆಯೂ, ನೂರೊಕ್ಕಲು ಬೆಟ್ಟಗಳಿಂದ ಬರುವ ಚಿಕ್ಕ ಹೊಳೆಯೂ ಕೂಡಿ ಹಾರಂಗಿ ಅಥವಾ ಸುವರ್ಣವತಿ ಎಂಬ ಹೊಳೆಯು ಆಗುತ್ತದೆ. ಸುವರ್ಣವತಿಗೆ ಸೋಮವಾರಪೇಟೆಯಿಂದ ಬರುವ ಕಕ್ಕೆಹೊಳೆಯೂ, ಕೋಟೆ ಬೆಟ್ಟದಿಂದ ಬರುವ ಹಟ್ಟಿ ಹೊಳೆಯೂ ಸಂಗಮವಾಗುತ್ತವೆ. ಉತ್ತರ ಕೊಡಗಿನಲ್ಲಿ ಬೀಳುವ ಮಳೆಯ ನೀರೆಲ್ಲಾ ಈ ಹೊಳೆಗಳ ಮೂಲಕ ಕಾವೇರಿಗೆ ಸೇರುತ್ತದೆ. ಹಾರಂಗಿಹೊಳೆಯೂ ಮಡಿಕೇರಿ ತಾಲೂಕಿಗೆ ಉತ್ತರದಲ್ಲಿ ಹರಿದು, ಈ ತಾಲೂಕನ್ನು ನಂಜರಾಯಪಟ್ಟ ತಾಲೂಕಿನಿಂದ ಪ್ರತ್ಯೇಕಿಸಿ, ಅನಂತರ ನಂಜರಾಯಪಟ್ಟ ತಾಲೂಕಿನಲ್ಲಿ ಹರಿದು, ಕಾವೇರಿಯನ್ನು ಸೇರುತ್ತದೆ.

ಹೇಮಾವತಿಯು ಮೈಸೂರು ದೇಶದಲ್ಲಿ ಹುಟ್ಟಿ, ಕೊಡಗು ಸೀಮೆಯ ಉತ್ತರ ಮೇರೆಯಾಗಿ ಹರಿದು ಏಳು ಸಾವಿರ ಸೀಮೆ ತಾಲೂಕನ್ನು ಮಂಜರಾಬಾದ ತಾಲೂಕಿನಿಂದ ವಿಂಗಡಿಸುತ್ತದೆ. ಇದು ಕೊಡಗಿನಲ್ಲಿ ಹರಿಯದೆ ಇರುವುದರಿಂದ, ಕೊಡಗಿನ ನದಿಗಳಲ್ಲೊಂದಲ್ಲದಿದ್ದರೂ, ಕೊಡಗಿನ ಉತ್ತರ ಮೇರೆಯಾಗಿದೆ.

ಲಕ್ಷ್ಮಣತೀರ್ಥವು ಕಿಗ್ಗಟ್ನಾಡು ತಾಲೂಕಿನಲ್ಲಿ ಮುಖ್ಯವಾದ ನದಿಯಾಗಿದೆ. ಇದು ದೇವಾಸಿಬೆಟ್ಟದಲ್ಲಿರುವ ಮುನಿಕಾಡಿನಲ್ಲಿ ಹುಟ್ಟಿ, ಸ್ವಲ್ಪ ದೂರದಲ್ಲಿ ಇರ್ಪು ಎಂಬ ಸ್ಥಳದಲ್ಲಿ ಎತ್ತರವಾದ ಕಲ್ಲು ಕೆಳಗೆ ದುಮುಕಿ, ವಾಯವ್ಯ ಮುಖವಾಗಿ ಹರಿದು, ರಾಮತೀರ್ಥವೆಂಬ ಹೊಳೆಯನ್ನು ಕೂಡಿಕೊಂಡು, ಮೈಸೂರು ಸೀಮೆಯಲ್ಲಿ ಕಾವೇರೀ ಹೊಳೆಯನ್ನು ಸೇರುತ್ತದೆ. ಇರ್ಪಿನಲ್ಲಿ ಆಗುವ ಜಾತ್ರೆಗೆ ಸಾವಿರಾರು ಮಂದಿ ಕೂಡುತ್ತಾರೆ.

ವಾಯುಗುಣ

ಕೊಡಗು ದೇಶದ ವಾಯುಗುಣವು ಕೊಡಗರಿಗೂ ವಿಲಾಯತಿಯವರಿಗೂ ಬಹಳ ಹಿತಕರವಾಗಿರುವುದಲ್ಲದೆ, ಪ್ರಾಯಶಃ ಎಲ್ಲರಿಗೂ ಆರೋಗ್ಯಕರವಾಗಿದೆ. ಸಂವತ್ಸರವು ಮಾರ್ಚಿಯಿಂದ ಮೇವರೆಗೆ ಬೇಸಿಗೆ ಕಾಲ, ಜೂನೆ ಮೊದಲ್ಗೊಂಡು ನವಂಬರ್ ವರೆಗೆ ಮಳೆಗಾಲ, ಡಿಸೆಂಬರ್ ಹಿಡಿದು ಫೆಬ್ರವರಿವರೆಗೆ ಚಳಿಗಾಲ, ಹೀಗೆ ಮೂರು ಭಾಗವಾಗಿ ತೋರುವುದು. ಮಾರ್ಚಿ ಮಾಸ ಅಂತ್ಯದಲ್ಲಿ ನೈಋತ್ಯ ದಿಕ್ಕಿನಿಂದ ಮೋಡಗಳು ಬಂದು ಕೂಡಲಿಕ್ಕೆ ಪ್ರಾರಂಭವಾಗುತ್ತದೆ. ಮತ್ತು ತಂಪಾದ ಸಮುದ್ರದ ಗಾಳಿಯು ಕ್ರಮಕ್ರಮವಾಗಿ ಘಟ್ಟಗಳ ಮೇಲೆ ಬೀಸಲು ಆರಂಭಿಸುತ್ತದೆ. ಏಪ್ರಿಲ್ ಮೇ ಮಾಸಗಳಲ್ಲಿ ಬಿಸಲಿನ ಕಾವು ಹೆಚ್ಚುತ್ತಾ ಬಂದು, ಆಕಾಶದ ಪಶ್ಚಿಮ ಭಾಗದಲ್ಲಿ ಬಲವಾದ ಮೇಘರಾಶಿಗಳು ಪ್ರಸರಿಸಿ, ಆಗಾಗ್ಗೆ ಗುಡುಗೂ ಮಿಂಚೂ ಮಳೆಯೂ ಉಂಟಾಗಿ ಮುಂಗಾರು ಸಮೀಪಿಸಿತು ಎಂಬುದನ್ನು ಸೂಚಿಸುತ್ತದೆ. ಮೇ ಮಾಸದ ಅಂತ್ಯದಲ್ಲಿ ಮೋಡಗಳು ದಟ್ಟವಾಗಿಯೂ ಹೆಚ್ಚು ಕಪ್ಪು ಬಣ್ಣವುಳ್ಳವುಗಳಾಗಿಯೂ ಇರುತ್ತವೆ. ಜೂನ್ ಮಾಸದ ಆದಿಭಾಗದಲ್ಲಿ ಮುಂಗಾರು ಪ್ರಾರಂಭಿಸಿ ಮಳೆ ಸುರಿಯ ತೊಡಗುವುದು. ಗಾಳಿಯು ಬಹಳ ಬಿರುಸಾಗಿಯೇ ಬೀಸುವುದು. ಜುಲಾಯಿ ಆಗೊಸ್ತು ಮಾಸಗಳಲ್ಲಿ ವರ್ಷಿಸುವ ಮಳೆಯು ಅತ್ಯಂತ ಕಠಿಣವಾಗಿದೆ; ಆಗ ಕೆಲವು ವಾರಗಳವರೆಗೆ ಸೂರ್ಯನು ಕಾಣುವುದೇ ಇಲ್ಲ ಹೊಳೆಗಳೆಲ್ಲ ಪೂರ್ಣ ಪ್ರವಾಹದೊಡನೆ ರೌದ್ರದಿಂದ ಮೊರೆಯುತ್ತಾ ಬೈಲುಸೀಮೆಗೆ ಹರಿದು ಹೋಗುವುವು. ಗದ್ದೆಗಳೆಲ್ಲಾ ನೀರು ತುಂಬಿಕೊಂಡು ಕೆರೆಗಳಂತೆ ಕಾಣುವುವು. ರಾಜಮಾರ್ಗಗಳಲ್ಲಿ ಅಲ್ಲದೇ ಇತರ ಕಡೆ ಪ್ರಯಾಣ ಮಾಡುವುದು ಕಷ್ಟ ಸಾಧ್ಯವು; ಯಾತಕ್ಕೆಂದರೆ ತಗ್ಗುಗಳಲ್ಲೆಲ್ಲಾ ದಾಟಲಿಕ್ಕೆ ಅಶಕ್ಯವಾದ ತೊರೆಗಳು ತುಂಬಿರುವುವು. ಅನೇಕ ಗ್ರಾಮಗಳಲ್ಲಿ ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲಾರದೆ ತಮ್ಮ ತಮ್ಮ ಗ್ರಾಮಗಳಲ್ಲಿಯೇ ಇರುವರು. ಬೆಟ್ಟಸೀಮೆಗಳಲ್ಲೆಲ್ಲಾ ಹೀಗೆಯೇ ಇರುವುದು. ನಂಜರಾಯಪಟ್ಟ ಏಳು ಸಾವಿರ ಸೀಮೆಗಳಲ್ಲಿ ಮಾತ್ರ ಮಳೆಯು ಇಷ್ಟು ಇಲ್ಲ, ಅಗೊಸ್ತು ಮಾಸದ ಅಂತ್ಯದಲ್ಲಿ ಮಳೆಯು ದಿನೇ ದಿನೇ ಕಡಿಮೆಯಾಗುತ್ತಾ ಬಂದು, ಕಡೆಗೆ ಕೆಲವು ದಿವಸಗಳವರೆಗೆ ಪೂರಾ ನಿಮತು ಹೋಗಿ ಬಿಸಲು ಬರುವುದು. ಸಪ್ಪಂಬರ್ ಮಾಸದಲ್ಲಿ ಒಂದೆರಡು ದಿನ ಮಳೆ ಬರುವುದು, ಒಂದೆರಡು ದಿನ ಬಿಸಲು ಕಾಯುವುದು. ಅಕ್ಟೋಬರ್ ಮಾಸದಲ್ಲಿ ಮುಂಗಾರು ಮಳೆ ಅಖೈರಾಗಿ ಈಶಾನ್ಯ ದಿಕ್ಕಿನಿಂದ ಗಾಳಿ ಬಲವಾಗಿ ಬೀಸುತ್ತಾ ಆಕಾಶವನ್ನು ನಿರ್ಮೇಘವಾಗಿ ಮಾಡುವುದು. ನವಂಬರ್ ಮಾಸದಲ್ಲಿಯೂ ಡಿಸೆಂಬರ್ ಮಾಸದ ಆದಿಭಾಗದಲ್ಲಿಯೂ ಈ ಗಾಳಿಯು ಪೂರ್ವ ದಿಕ್ಕಿನಿಂದ ಮಳೆಯನ್ನು ಹೊಡಕೊಂಡು ಬರುವುದುಂಟು. ಆದರೆ ಈ ಗಾಳಿಯಲ್ಲಿ ಬರುವ ಮೇಘಗಳು ಬಂಗಾಳ ಕೊಲ್ಲಿಯಿಂದ ಬರುತ್ತಾ ಉದ್ದಕ್ಕೂ ಮಳೆ ಸುರಿಸುತ್ತಲೇ ಇದ್ದು ಇಲ್ಲಿಗೆ ಬರುವಾಗ ವಿರಳವಾಗುವುವು. ಈ ಮಳೆಗೆ ಹಿಂಗಾರು ಮಳೆ ಎನ್ನುತ್ತಾರೆ. ಮುಂಗಾರು ಮಳೆಯು ಕೊಡಗಿನಲ್ಲಿ ಎಷ್ಟು ಬಲವಾಗಿ ಹೊಡಿಯುತ್ತದೋ ಅಷ್ಟೇ ಬಲವಾಗಿ ಹಿಂಗಾರು ಮಳೆಯು ಪೂರ್ವ ಸಮುದ್ರದ ತೀರದಲ್ಲಿ ಹೊಡಿಯುವುದು. ಡಿಸೆಂಬರ್ ಜನವರಿ ಮಾಸಗಳಲ್ಲಿ ಬೆಳಿಗ್ಗೆ ಪ್ರಾಯಶಃ ಯಾವಾಗಲೂ ಮಂಜು ಸುರಿಯುವುದು. ಆದರೆ ಆಕಾಶವು ನಿರ್ಮಲವಾಗಿದ್ದು, ಗಾಳಿಯು ಬಹು ಶೀತವಾಗಿಯೂ ಶುದ್ಧವಾಗಿಯೂ ಆರೋಗ್ಯಕರವಾಗಿಯೂ ಇರುವುದರಿಂದ ಈ ಕಾಲವು ಬಹಳ ರಮಣೀಯವಾಗಿ ತೋರುವುದು.

ಉತ್ಪನ್ನಗಳು

ಅಕ್ಕಿ, ಯಾಲ, ಕಾಫಿ, ಸಿಂಕೋನಾ ಇವುಗಳೇ ಮುಖ್ಯವಾದ ಉತ್ಪನ್ನಗಳು. ನಂಜರಾಯಪಟ್ಟದ ತಗ್ಗಾದ ಮೈದಾನುಗಳಲ್ಲಿ ರಾಗಿ, ಅವರೆ, ತೊಗರಿ, ಹುರುಳಿ ಮುಂತಾದ ಕೆಲವು ಖುಷ್ಕಿ ಪೈರುಗಳು ಸಹ ಬೆಳೆಯುತ್ತವೆ.

ಬತ್ತ : ಇದು ಕೊಡಗಿನ ಮುಖ್ಯ ಉತ್ಪನ್ನವಾಗಿರುತ್ತದೆ. ಈ ದೇಶದ ಖರ್ಚಿಗೂ ಮಲೆಯಾಳಕ್ಕೆ ರಫ್ತು ಮಾಡುವುದಕ್ಕೂ ಬೇಕಾದಷ್ಟು ಬತ್ತವು ದೇಶದ ಎಲ್ಲಾ ಕಡೆಯಲ್ಲಿಯೂ ಇರುವ ತಗ್ಗುಭೂಮಿಗಳಲ್ಲಿ ಬೆಳೆಯುತ್ತದೆ. ದಕ್ಷಿಣ ಕೊಡಗಿನಲ್‌ಲಿ ಮುಖ್ಯವಾಗಿ ವೀರರಾಜೇಂದ್ರಪೇಟೆ ಕಿಗ್ಗಟ್ನಾಡು ಇವುಗಳ ಸುತ್ತಮುತ್ತ ಬಹಳ ಅಗಲವೂ ಅನೇಕ ಮೈಲಿಗಳ ಉದ್ದವೂ ಉಳ್ಳ ಗದ್ದೆಗಳಿರುತ್ತವೆ. ಆದರೆ ಇವುಗಳ ಮಣ್ಣು ಘಟ್ಟಸರಹದ್ದಿನಲ್ಲಿ ಮೆಟ್ಲು ಮೆಟ್ಲಾಗಿಯೂ ಇಕ್ಕಟ್ಟಾಗಿಯೂ ಇರುವ ಸಣ್ಣ ಗದ್ದೆಗಳ ಮಣ್ಣಿನಷ್ಟು ಒಳ್ಳೆಯದಲ್ಲ, ತಗ್ಗುಭೂಮಿಯಲ್ಲಿರುವ ಗದ್ದೆಗಳಿಗೆ ವೈಲುಗದ್ದೆಗಳೆಂತಲೂ, ಗುಡ್ಡಗಳ ಓರೆಗಳಲ್ಲಿರುವ ಗದ್ದೆಗಳಿಗೆ ಮಕ್ಕಿಗದ್ದೆಗಳೆಂತಲೂ ಹೆಸರು, ದೊಡ್ಡ ಬತ್ತ, ಹಸನಾದ ಸಣ್ಣ ಬತ್ತ ಕೇಸರಿ, ಕಳಮೆ ಮುಂತಾದ ವಿವಿಧ ಜಾತಿಯ ಬತ್ತವು ಕೊಡಗು ದೇಶದ ಎಲ್ಲಾ ಕಡೆಗಳಲ್ಲಿಯೂ ಬೆಳೆಯುತ್ತದೆ. ಗದ್ದೆಯ ಮಣ್ಣ ರಸವತ್ತಾದ್ದರಿಂದ ವ್ಯವಸಾಯಕ್ಕೆ ತಕ್ಕ ಪ್ರತಿಫಲವನ್ನು ಇತರ ಭೂಮಿಗಳಿಗಿಂತ ಹೆಚ್ಚಾಗಿ ಪಡೆಯಬಹುದು. ಒಂದು ಸೇರು ಬತ್ತ ಬಿತ್ತಿದರೆ, ೫೦ ರಿಂದ ೧೦೦ ಸೇರುಗಳವರೆಗೂ ಬೆಳೆಯುತ್ತದೆ. ಬೇಸಗೆಯಲ್ಲೆಲ್ಲಾ ಕೂಡಿಸಿದ ದನವಿನ ಗೊಬ್ಬರ ಒಣಗಿದ ಎಲೆ ಮುಂತಾದವುಗಳನ್ನು ಹೆಂಗಸರು ದೊಡ್ಡ ಕುಕ್ಕೆಗಳಲ್ಲಿ ಗದ್ದೆಗಳಿಗೆ ತೆಗೆದುಕೊಂಡು ಹೋಗಿ ಸಣ್ಣ ಸಣ್ಣ ಗುಪ್ಪೆಗಳಾಗಿ ಇಡುತ್ತಾರೆ. ಅಲ್ಲಿ ಅವುಗಳನ್ನು ಸುಟ್ಟು ಬೂದಿಯನ್ನು ಗದ್ದೆಯಲ್ಲೆಲ್ಲಾ ಚೆಲ್ಲುತ್ತಾರೆ. ಏಪ್ರಿಲ್ ಮೇ ತಿಂಗಳಲ್ಲಿ ಒಂದೆರಡು ಮಳೆ ಹೊಡೆದ ಒಡನೆಯೇ ಉಳುವುದಕ್ಕೆ ಪ್ರಾರಂಭವಾಗುವುದು. ಮೇ ತಿಂಗಳ ಅಂತ್ಯದೊಳಗಾಗಿ ಆಗೆಗದ್ದೆಗಳಲ್ಲಿ ಬೀಜವನ್ನು ಬಿತ್ತುತ್ತಾರೆ. ಜುಲೈ ಅಗೊಸ್ತು ತಿಂಗಳ ಮಳೆಗಾಲದಲ್ಲಿ ನಾಟಿಯ ಕೆಲಸವು ನಡಿಯುತ್ತದೆ. ನವಂಬರ್ ಡಿಸೆಂಬರ್ ಮಾಸಗಳಲ್ಲಿ ಬತ್ತವು ಹಣ್ಣಾದ ಕೂಡಲೇ ಹುತ್ತರಿ ಹಬ್ಬವು ಆಗುವುದು. ಅನಂತರ ಬತ್ತದ ಪೈರನ್ನು ಕಟಾವು ಮಾಡಿ ಜನವರಿ ಫೆಬ್ರುವರಿ ಮಾಸಗಳಲ್ಲಿ ಅರಿಗಳನ್ನು ಗದ್ದೆಗಳಿಂದ ಕಣಕ್ಕೆ ಸಾಗಿಸಿ ಅಲ್ಲಿ ಒಕ್ಕಲು ಹಾಕುತ್ತಾರೆ.

ಯಾಲ[ಏಲಕ್ಕಿ] : ಅನೇಕ ಕೊಡಗರಿಗೆ ಮುಖ್ಯವಾದ ಕೃಷಿಗಳಲ್ಲಿ ಬತ್ತಕ್ಕೆ ಎರಡನೆಯದು ಯಾಲ. ಪೂರ್ವದಲ್ಲಿ ಯಾಲಕ್ಕಿಯ ತೋಟವು ಒಂದು ಚಿನ್ನದ ಗಣಿಯಷ್ಟು ಬೆಲೆಯುಳ್ಳದ್ದೆಂದು ಎಣಿಸಲ್ಪಟ್ಟಿತ್ತು ಆದರೆ ಈಗ ಯಾಲದ ಕ್ರಯ ಕಡಿಮೆಯಾದ್ದರಿಂದ ಮೊದಲಿನಷ್ಟು ಲಾಭಕರವಲ್ಲವಾದರೂ, ಮುಖ್ಯವಾದ ಪದಾರ್ಥವೇ ಸರಿ. ಕೊಡಗು ರಾಜರ ಕಾಲದಲ್ಲಿ ಯಾಲವು ಯಾವಾಗಲೂ ಸರಕಾರದ ಹಕ್ಕು ಬಾಧ್ಯತೆಗೆ ಒಳಪಟ್ಟು ಇದ್ದುದರಿಂದ ಅದನ್ನು ಬೆಳೆಸಿದ ರೈತನು ತನ್ನ ಪೈರನ್ನು ಮಣ ಒಂದಕ್ಕೆ ೧೨, ೨೦ ರೂಪಾಯಿ ಮೇರೆಗೆ ಸರಕಾರಕ್ಕೆ ಮಾರಬೇಕಾಗಿತ್ತು ಈಗ ಯಾಲದ ಮಲೆಗಳು ರೈತರಿಗೆ ಸಾಗುವಳಿಗೆ ಕೊಡಲ್ಪಟ್ಟಿವೆ. ಯಾಲದ ಗಿಡವು ಘಟ್ಟಗಳ ಮೇಲ್ಭಾಗದಲ್ಲಿ ಸಮುದ್ರ ಮಟ್ಟಕ್ಕಿಂತ ೩,೦೦೦ ರಿಂದ ೫,೦೦೦ ಅಡಿಗಳ ಎತ್ತರದಲ್ಲಿ ಸರ್ವದಾ ತನುವಾಗಿರುವ ಮಲೆಗಳಲ್ಲಿ ತನ್ನಿಂದ ತಾನೇ ಹುಟ್ಟುತ್ತದೆ. ಸಮುದ್ರದ ಗಾಳಿಯು ಆಟ(ತ)ಂಕವಿಲ್ಲದೆ ಬೀಸುವ ಪರ್ವತ ಶಿಖರಗಳಲ್ಲಾಗಲೀ, ಬಿಸಲಿನಿಂದ ಸಂಪೂರ್ಣವಾಗಿ ಅದನ್ನು ಮರೆ ಮಾಡದೆ ಬೇಕಾದಷ್ಟು ನೆರಳು ಇರುವ ಕಾಡುಗಳಿಂದ ತುಂಬಿದ ಭೂಮಿಯಲ್ಲಾಗಲೀ ಇರುವ ತೇಮ[ವ]ವಾದ ಮಣ್ಣು ಅದಕ್ಕೆ ಅವಶ್ಯಕವಾಗಿರುತ್ತದೆ. ಗುಡ್ಡಗಳು ಪಶ್ಚಿಮೋತ್ತರ ಕಡೆಗೆ ಇಳಿಜಾರಾಗಿರುವ ಪ್ರದೇಶಗಳೇ ಈ ಬೆಳೆಗೆ ಮುಖ್ಯ ಸ್ಥಳವು.

ಫೆಬ್ರವರಿ ಅಥವಾ ಮಾರ್ಚಿ ತಿಂಗಳಲ್ಲಿ ಯಾಲದ ಮಲೆಯ ಮಧ್ಯೆ ಒಂದೊಂದು ದೊಡ್ಡ ಮರವನ್ನು ಕಡಿದು ಕೆಡವುತ್ತಾರೆ. ಇದು ಬೀಳುವ ಭರಕ್ಕೆ ಸುತ್ತಲಿರುವ ಚಿಕ್ಕ ಮರಗಳು ಬೀಳುವುದಲ್ಲದೇ ಸ್ವಲ್ಪ ದೂರದವರೆಗೆ ಎಡ ಬಲಕ್ಕೆ ನೆಲವೆಲ್ಲಾ ಅದರುತ್ತದೆ. ಈ ಯಾಲದಮಲೆಗೆ ಅಗತೆಯಾಗಲೀ ಇತರ ವ್ಯವಸಾಯವಾಗಲೀ ಅಷ್ಟು ಅವಶ್ಯಕವಲ್ಲ, ಮರವನ್ನು ಕಡಿದ ಲಾಗಾಯಿತು ಮೂರು ತಿಂಗಳೊಳಗಾಗಿ ಮರದ ಸುತ್ತಲೂ ಯಾಲದ ಎಳೆಯ ಸಸಿಗಳು ಹುಟ್ಟಿ, ಒಂದು ವರ್ಷದೊಳಗೆ ಒಂದು ಅಡಿ ಎತ್ತರವಾಗಿ, ಮೂರನೆಯ ವರ್ಷದ ಅಂತ್ಯದೊಳಗೆ ೪ ಅಡಿ ಎತ್ತರ ಬೆಳೆಯುತ್ತವೆ. ಸುತ್ತಲೂ ಇರುವ ಭೂಮಿಯ ಕಳೆಯನ್ನು ವರ್ಷಕ್ಕೆ ಒಂದಾವರ್ತಿ ಕೀಳಬೇಕು. ಮೂರನೆಯ ವರ್ಷದ ಏಪ್ರಿಲ್ ಮಾಸದಲ್ಲಿ ಒಂದೆರಡು ಮಳೆ ಬಿದ್ದ ಒಡನೆಯೇ ಈ ಗಿಡಗಳಲ್ಲಿ ಹೂ ಬಿಡುತ್ತದೆ. ಸಪ್ಪಂಬರ್ ಅಥವಾ ಒ(ಅ)ಕ್ಟೋಬರ್ ಮಾಸದಲ್ಲಿ ಕಾಯಾಗಿ ಸಿಪ್ಪೆ ಬಲಿಯುತ್ತದೆ. ಮೊದಲನೆಯ ಫಲವು ಅಷ್ಟು ಭಾರಿಯಲ್ಲ, ಪೂರಾ ಫಸಲು ನಾಲ್ಕನೆಯ ವರ್ಷದಲ್ಲಿ ಸಿಕ್ಕುವುದು. ಈ ಗಿಡಗಳು ಏಳು ವರ್ಷಗಳವರೆಗೂ ಫಸಲು ಕೊಡುತ್ತವೆ. ಪೈರನ್ನು ಕಟಾವು ಮಾಡುವ ಕಾಲದಲ್ಲಿ ಕಾಡುಗಳು ಜಿಗಣೆಗಳಿಂದಲೂ ವಿಷದ ಹಾವುಗಳಿಂದಲೂ ತುಂಬಿ ಇರುವುದರಿಂದ, ಮುಖ್ಯವಾಗಿ ಉತ್ತರ ಪಶ್ವಿಮ ಮಲೆಗಳ ಸರಹದ್ದಿನ ಮಲೆಗಳಲ್ಲಿರುವ ಫಸಲನ್ನು ಮೊದಲು ಕಟಾವು ಮಾಡುವುದು ಬಹಳ ಕಷ್ಟವಾದ ಕೆಲಸ. ಯಾಲಕ್ಕಿಯು ಏಷ್ಯದ ಎಲ್ಲಾ ನಿವಾಸಿಗಳಿಗೂ ಬೇಕಾದ ಪದಾರ್ಥವಾಗಿದೆ. ಅದರ ಬೆಲೆಯು ಆ(ಏ)ಸ್ಯ ಖಂಡದ ಮಧ್ಯಭಾಗದಲ್ಲಿ ಇರುವ ತುರಕಿಸ್ಥಾನದಲ್ಲಿ ಕೊಡಗಿನ ಕ್ರಯದ ೨೦ ರಷ್ಟು ಹೆಚ್ಚಾಗಿದೆ. ಯಾಲದ ಗಿಡವು ಪಶ್ಚಿಮ ಘಟ್ಟಗಳಲ್ಲಿ ಅಲ್ಲದೆ ಇನ್ನೆಲ್ಲಿಯೂ ಬೆಳೆಯುವಂತೆ ತೋರುವುದಿಲ್ಲ. ಆದ್ದರಿಂದಲೇ ಯಾಲಕ್ಕಿ ಯಾವಾಗಲೂ ಹೆಚ್ಚು ಬೆಲೆ. ಮೇಲೆ ವಿವರಿಸಿದಂತೆ ಪೂರ್ವಿಕರು ಯಾಲಕ್ಕಿಯನ್ನು ಕೃಷಿ ಮಾಡುತ್ತಿದ್ದ ಕ್ರಮವು ಮೌಢ್ಯವುಳ್ಳದ್ದೂ ಅಪೂರ್ಣವಾದುದೂ ಆಗಿತ್ತು ಈಚೆಗೆ ಕೊಡಗಿನಲ್ಲಿಯೂ ಮೈಸೂರು ಸೀಮೆಯಲ್ಲಿಯೂ ಒಬ್ಬಬ್ಬರು ಯುರೋಪಿಯನ್‌ರು ಪಾತಿಗಳನ್ನು ಮಾಡಿ ಅವುಗಳಲ್ಲಿ ಗೊಬ್ಬರ ಹಾಕಿ ಬೆಳೆಸಿದ ಸಸಿಗಳನ್ನು ಕಿತ್ತು ಪ್ರತ್ಯೇಕ ಜಾಗದಲ್ಲಿ ನೆಟ್ಟು, ನೀರು ಹಾಯಿಸಿ ತಕ್ಕ ಕೃಷಿ ಮಾಡಿ, ಒಳ್ಳೆಯ ಬೆಳೆ ಬೆಳೆಸಿ, ಹೆಚ್ಚು ಲಾಭವನ್ನು ಪಡೆಯುತ್ತಿದ್ದಾರೆ.

ಕಾಪಿ[ಕಾಫಿ] : ಕಾಪಿಯು ವಿಶಾಲವಾದ ತೋಟಗಳುಳ್ಳ ದಕ್ಷಿಣ ಅಮೇರಿಕ, ಸಿಂಹಳ ದ್ವೀಪ, ಪಶ್ಚಿಮ ಘಟ್ಟಗಳು, ಮೈಸೂರು, ಕೊಡಗು, ಮಲೆಯಾಳ, ತಿರುವಾಂಕೂರು ಮೊದಲಾದ ಅನೇಕ ದೇಶಗಳಲ್ಲಿ ಬೆಳೆಯುವುದು. ಕೊಡಗಿನಲ್ಲಿ ರಾಜರ ಕಾಲದಲ್ಲಿ ನಾಲ್ಕು ನಾಡಿನಲ್ಲಿ ಸ್ವಲ್ಪ ಮಟ್ಟಿಗೆ ಬೆಳೆಸುತ್ತಿದ್ದರು. ಈಚೆಗೆ ಈ ದೇಶದಲ್ಲಿ ಈ ಪೈರನ್ನು ಎಲ್ಲೆಲ್ಲಿಯೂ ಬೆಳೆಸುವಂತೆ ರೈತರಿಗೆ ಪ್ರೋತ್ಸಾಹ ಕೊಟ್ಟವರು ಕೊಡಗಿನ ಮೊದಲನೆಯ ಬ್ರಿಟಿಷ್ ಕಮೀಷನರಾದ ಕ್ಯಾಪ್ಟನ್ ಲಿಹಾರ್ಡಿ ಸಾಹೇಬರು. ೧೮೫೪ನೇ ಇಸವಿಯಲ್ಲಿ ಮಡಿಕೇರಿಯ ಸಮೀಪ ತೋಟವನ್ನು ಮಾಡಿದ ಮೆ. ಫೌಲರ್ ಎಂಬವರೇ ಮೊದಲನೆಯ ಯುರೋಪಿಯನ್ ಪ್ಲಾಂಟರು. ಈಗ ಗಮರ್ನ್‌ಮೆಂಟಿಗೆ ಹೆಚ್ಚು ಉತ್ಪತ್ತಿಯನ್ನು ಕೊಡುವಂಥ ಬೆಲೆಯುಳ್ಳ ಕಾಪೀ ತೋಟಗಳು ಎಲ್ಲೆಲ್ಲಿಯೂ ಬಹಳವಾಗಿ ಇವೆ ಮತ್ತು ಪ್ರಾಯಶಃ ಕೊಡಗರೆಲ್ಲರೂ ತಮ್ಮ ತಮ್ಮ ಶಕ್ತ್ಯಾನುಸಾರವಾಗಿ ಕಾಪಿ ತೋಟಗಳನ್ನು ಮಾಡಿಕೊಂಡಿರುತ್ತಾರೆ. ಪೂರ್ವಕಾಲದಲ್ಲಿ ಒತ್ತಾಗಿ ಮರಗಳುಳ್ಳ ಕಾಡುಗಳಲ್ಲಿ ದೊಡ್ಡ ಮರಗಳ ಕೆಳಗೆ ಕಾಫಿ ಸಸಿಗಳನ್ನು ನೆಟ್ಟು, ಸುತ್ತಲಿನ ಕಚ್ರಾ (ಕಚಡಾ) ಮಾತ್ರ ತೆಗಿಯುತ್ತಿದ್ದರು. ಅಗೈ ಖ(ಕ)ಸಿ ಮಾಡುವುದಾಗಲೀ ಅಗತೆ ಮಾಡುವುದಾಗಲೀ ಗೊಬ್ಬರ ಹಾಕುವುದಾಗಲೀ ಇರಲಿಲ್ಲ ಗಿಡಗಳು ೧೫ ಅಡಿಗಳವರೆಗೂ ಬೆಳೆಯುತ್ತಿದ್ದವು ಮತ್ತು ಫಸಲು ಕಮ್ಮಿಯಾದರೂ ಕಡಿಮೆ ಖರ್ಚಿನಲ್ಲಿ ವ್ಯವಸಾಯ ಮಾಡುತ್ತಾ ಇದ್ದುದರಿಂದ ಹೆಚ್ಚಾಗಿ ಲಾಭ ಸಿಕ್ಕುತ್ತಿತ್ತು ಈಗ ಒಳ್ಳೆಯ ತೋಟಗಳೆಲ್ಲಾ ಯುರೋಪಿಯನ್ ರೀತಿಯಲ್ಲಿ ವ್ಯವಸಾಯ ಮಾಡಲ್ಪಡುತ್ತವೆ. ಗಿಡಗಳಿಗೆ ಅಗತ್ಯವಾದ ನೆರಳನ್ನು ಕೊಡುವುದಕ್ಕೆ ಬೇಕಾದಷ್ಟು ಮರಗಳನ್ನು ಬಿಟ್ಟು, ದೊಡ್ಡ ದೊಡ್ಡ ಮರಗಳನ್ನು ಕಡಿದು ಹಾಕುತ್ತಾರೆ. ಅಥವಾ ಮರಗಳನ್ನೆಲ್ಲಾ ಪೂರ್ತಿಯಾಗಿ ಕಡಿದುಹಾಕಿ, ಅಲ್ಲಲ್ಲಿ ಹೊಸ ಮರಗಳನ್ನು ನೆಡುತ್ತಾರೆ. ಯಾವ ಉಪಾಯದಿಂದಲಾದರೂ ಗಿಡಗಳಿಗೆ ಹೆಚ್ಚು ಬೆಳಕು ಇರುವಂತೆ ಮಾಡಿ, ಕಳೆ ಕಿತ್ತು ಅಗತೆ ಮಾಡುತ್ತಾರೆ. ಉತ್ತಮವಾದ ಗಿಡಗಳಿಂದ ಉಂಟಾದ ಬೀಜಗಳಿಂದಲೇ ಸಸಿಗಳನ್ನು ಒಗ್ಗು ಹಾಕುತ್ತಾರೆ. ಈ ಬೀಜಗಳು ಪಾತಿಯಲ್ಲಿ ಹಾಕಿದ ೫-೬ ವಾರಗಳಲ್ಲಿ ಮೊಳೆತು ಸಸಿಗಳಾಗುತ್ತವೆ. ಈ ಸಸಿಗಳನ್ನು ಮಳೆಗಾಲದಲ್ಲಿ ಕಿತ್ತು ನೆಡುತ್ತಾರೆ. ಕಾಡು ಕಡಿದ ತೋಟಗಳಲ್ಲಿ ೧೮ ಅಂಗುಲಗಳ ಚದರವುಳ್ಳ ಗುಂಡಿಗಳನ್ನು ಒಂದರಿಂದ ಮತ್ತೊಂದಕ್ಕೆ ೫ ಅಥವಾ ೬ ಅಡಿಗಳ ದೂರದಲ್ಲಿ ತೆಗೆದು, ಜೂನ್ ತಿಂಗಳಲ್ಲಿ ಮಳೆಯಾರಂಭಿಸಿದ ಕೂಡಲೆ ಪಾತಿಯಿಂದ ಸಸಿಗಳನ್ನು ಕಿತ್ತು, ಪ್ರತಿಯೊಂದು ಗುಂಡಿಯಲ್ಲಿಯೂ ಒಂದೊಂದು ಸಸಿಯನ್ನು ನೆಡುತ್ತಾರೆ. ಈ ಸಸಿಗಳು ಬೆಳಯುವ ಕಾಲದಲ್ಲಿ ತೋಟದಲ್ಲೆಲ್ಲಾ ಚೆನ್ನಾಗಿ ಕಳೆ ಕಿತ್ತು ಗೊಬ್ಬರ ಹಾಕುತ್ತಾರೆ. ಮೂರನೆಯ ವರ್ಷದಲ್ಲಿ ಅವು ಫಲ ಹಿಡಿದು ಒಂದು ಸಣ್ಣ ಫಸಲು ಕೊಡುತ್ತವೆ. ಮಾರ್ಚ್ ಏಪ್ರಿಲ್ ಮಾಸಗಳಲ್ಲಿ ಒಂದೆರಡು ಮಳೆ ಹೊಡೆದನಂತರ ಗಿಡಗಳು ಹೂ ಬಿಡುತ್ತವೆ. ಒಂದೆರಡು ವಾರಗಳಲ್ಲಿ ಸಣ್ಣ ಹೀಚುಗಳನ್ನು ಕಾಣಬಹುದು. ಇವುಗಳು ಕ್ರಮೇಣ ದೊಡ್ಡವಾಗಿ ೬ ರಿಂದ ೮ ತಿಂಗಳೊಳಗೆ ಕೆಂಪಾಗಿ ಪಕ್ವವಾಗುತ್ತವೆ. ಆಗ ಅವುಗಳನ್ನು ಕೊಯಿದು ‘ಪಲ್ಪರ್’ ಎಂಬ ಯಂತ್ರದಲ್ಲಿ ಹಾಕುತ್ತಾರೆ. ಈ ಯಂತ್ರದಿಂದ ಬೀಜವೂ ಅದರ ಮೇಲಿನ ಸಿಪ್ಪೆಯೂ ಪ್ರತ್ಯೇಕಿಸಲ್ಪಡುತ್ತವೆ. ಈ ಬೀಜಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ ದೊಡ್ಡ ಚೀಲಗಳಲ್ಲಿ ತುಂಬಿ ಗಾಡಿಗಳ ಮೇಲೆ ತಲಚೇರಿ, ಮಂಗಳೂರು, ಕೆಲವು ವೇಳೆ ಹುಣಸೂರು, ಬೆಂಗಳೂರುಗಳಲ್ಲಿ ಏಜೆಂಟರ ಕಾರಖಾನೆಗಳಿಗೆ ಕಳುಹಿಸುತ್ತಾರೆ. ಅಲ್ಲಿ ಕಾಫಿಯನ್ನು ಮಾರುವುದಕ್ಕೋಸ್ಕರ ರೇಝು ಮಾಡುತ್ತಾರೆ. ಈ ಯಂತ್ರದ ಮೂಲಕ ಸಿಪ್ಪೆ ತೆಗೆದ (ಪಾರ್ಚುಮೆಂಟ್ ಮಾಡಿದ) ಬೀಜಗಳಣ್ನು ಅವುಗಳ ದಪ್ಪದ ಮೇರೆ ಮೂರು ತರಗಳಾಗಿ ವಿಂಗಡಿಸುತ್ತಾರೆ. ಅನಂತರ ಈ ಬೀಜಗಳನ್ನು ಚೀಲಗಳಲ್ಲಿ ತುಂಬಿ ಹಡಗುಗಳ ಮೂಲಕ ಯುರೋಪಿಗೆ ಕಳುಹಿಸುತ್ತಾರೆ. ಅಲ್ಲಿ ಅವುಗಳನ್ನು ವರ್ತಕರು ಮಾರುತ್ತಾರೆ. ಮೇಲೆ ಹೇಳಿದ ಕ್ರಮದಲ್ಲಿ ಕಾಪಿಯನ್ನು ತಯಾರು ಮಾಡುವ ಖರ್ಚಿಗೂ ತೊಂದರೆಗೂ ಒಳಪಡುವುದಕ್ಕೆ ಇಷ್ಟವಿಲ್ಲದ ಕೆಲವು ರೈತರು ಕಾಪಿಯನ್ನು ಕೊಯಿದು ಬಿಸಲಿನಲ್ಲಿ ಒಣಗಿಸಿ ಅದನ್ನು ಕೊಂಡುಕೊಳ್ಳಲಿಕ್ಕೆ ಬರುವ ವರ್ತಕರಿಗೆ ಉಂಡೆಯಾಗಿಯಾಗಲಿ ಕುಟ್ಟಿಯಾಗಲಿ ಮಾರುತ್ತಾರೆ. ಇದಕ್ಕೆ ‘ನೇಟಿವ್ ಕಾಪಿ’ ಎಂದು ಹೆಸರು. ಪಾರ್ಚುಮೆಂಟ್ ಕಾಪಿಯ ಕ್ರಯದಷ್ಟು ಹೆಚ್ಚು ಬೆಲೆ ನೇಟಿವ್ ಕಾಫಿಗೆ ಸಿಕ್ಕುವುದಿಲ್ಲ. ಕಾಪಿಗೂ ಬತ್ತಕ್ಕೂ ಇತರ ಕೃಷಿಗೂ ಮನುಷ್ಯರಂತೆಯೇ ಆಹಾರವು ಬೇಕು ಮತ್ತು ಈ ಆಹಾರವು ಗೊಬ್ಬರದ ಮೂಲಕ ಅವುಗಳಿಗೆ ಸಿಕ್ಕುವುದು ಎಂಬುದನ್ನು ಅವಶ್ಯವಾಗಿ ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಗೊಬ್ಬರ ಹಾಕದೆ ಇರುವ ಭೂಮಿಯ ಸಾರವು ಬೇಗನೆ ಕಡಿಮೆಯಾಗುವುದು. ಕಾಪಿಗೆ ದನವಿನ ಗೊಬ್ಬರ, ಸುಣ್ಣ, ಮೀನುಗೊಬ್ಬರ, ಬೂದಿ ಮೊದಲಾದುವು ಬಹಳ ಉಪಯುಕ್ತವಾದುವೆಂದು ಹೇಳುತ್ತಾರೆ. ಯುರೋಪ್, ಅಮೇರಿಕ, ಆಸ್ಟ್ರೇಲಿಯ ದೇಶಗಳಲ್ಲಿ ಕಾಪಿಯನ್ನು ಹೆಚ್ಚಾಗಿ ಕುಡಿಯುತ್ತಾರೆ. ಸಾಧಾರಣವಾಗಿ ಪ್ರತಿಯೊಬ್ಬ ಯುರೋಪಿಯನು ಈ ದೇಶದಲ್ಲಿ ಪ್ರತಿನಿತ್ಯವೂ ಕಾಪಿಯನ್ನು ಕುಡಿಯುತ್ತಾನೆ. ಮತ್ತು ಅನೇಕ ಹಿಂದುಗಳೂ ಮುಸಲ್ಮಾನರೂ ಕಾಪಿ ಕುಡಿಯುತ್ತಾರೆ. ಅದು ರುಚಿಕರವೂ ಪುಷ್ಟಿಕರವೂ ಆದ ಪಾನವೆಂತಲೂ ಜ್ವರಕ್ಕೆ ಆಸ್ಪದ ಕೊಡುವುದಿಲ್ಲವೆಂತಲೂ ಹೇಳುತ್ತಾರೆ. ಕಾಪಿಯ ಒಳ್ಳೆಯ ಪಾನಕವನ್ನು ಮಾಡಬೇಕಾದರೆ, ಬೀಜವನ್ನು ಕಮ್ಮಗೆ ಹುರಿದು ಪುಡಿ ಮಾಡಬೇಕು. ಈ ಪುಡಿಯನ್ನು ಆಗಾಗ್ಗೆ ಮಾಡಿಕೊಳ್ಳಬಏಕು. ಬಹುಕಾಲ ಇಟ್ಟರೆ, ವಾಸನೆ ಕೆಡುತ್ತದೆ. ಎರಡು ಚಿಕ್ಕ ಸೌಟುಗಳಷ್ಟು ಪುಡಿಯನ್ನು ಕಾಪಿ ಪಾನಕ ಮಾಡುವ ಪಾತ್ರೆಗೆ ಹಾಕಿ ಅರ್ಧ ಬಟ್ಲು ಕುದಿಯುವ ನೀರನ್ನು ಅದರ ಮೇಲೆ ಹೊಯ್ಯಬೇಕು. ಐದು ಮಿನಿಟುಗಳನಂತರ ಈ ಪಾನಕವನ್ನು ಒಂದು ಬಟ್ಲಲ್ಲಿ ಶೋಧಿಸಬೇಕು. ಆಗ ಅದು ಕೊಂಚ ಕಪ್ಪು ಮಿಶ್ರವಾದ ಕೆಂಪು ಬಣ್ಣದಿಂದ ಕೂಡಿರುತ್ತದೆ. ಈ ರೀತಿ ತಯಾರಾದ ಅರ್ಧ ಬಟ್ಲು ಕಾಪಿಯ ಪಾನಕಕ್ಕೆ ಮತ್ತರ್ಧಬಟ್ಲು ಎಮ್ಮೆಯ ಅಥವಾ ಹಸುವಿನ ಹಾಲನ್ನೂ ಒಂದು ಸಣ್ಣ ಸೌಟಿನಷ್ಟು ಸಕ್ಕರೆಯನ್ನೂ ಬೆರಸಬೇಕು. ಕಾಪಿಯನ್ನು ಪುಡಿ ಮಾಡುವ ಕಬ್ಬಿಣದ ಚಿಕ್ಕ ಒರಳಿನಲ್ಲಿ ಮತ್ತಾವ ಪದಾರ್ಥವನ್ನೂ ಪುಡಿ ಮಾಡದಂತೆ ಹೆಚ್ಚು ಜಾಗರೂಕತೆಯಿಂದಿರಬೇಕು. ಇಲ್ಲವಾದರೆ ಕಾಪಿಯ ರುಚಿಯು ಕೆಟ್ಟು ಹೋಗುವುದು. ಕೆಲವರು ಈ ಒರಳಿನಲ್ಲಿ ಮೆಣಸಿನಕಾಯನ್ನು ಪುಡಿ ಮಾಡುತ್ತಾರೆ. ಅದರಿಂದ ಇವರು ಮಾಡುವ ಕಾಪಿಯು ಚೆನ್ನಾಗಿರುವುದಿಲ್ಲ.

ತರಕಾರಿ ಇತ್ಯಾದಿ

ತರಕಾರಿ ಇತ್ಯಾದಿ

ಸಿಂಕೋನಾ :ಯಾವ ಮರದ ತೊಗಟೆಯಿಂದ ಕ್ವಿನೈನ್ ಎಂಬ ಔಷಧವನ್ನು ತಯಾರು ಮಾಡುತ್ತಾರೆಯೋ ಆ ಮರಕ್ಕೆ ಸಿಂಕೋನಾ ಎಂದು ಹೆಸರು. ಅದನ್ನು ಆದಿಯಲ್ಲಿ ದಕ್ಷಿಣ ಅಮೇರಿಕದಿಂದ ತಂದರು. ಅದು ಕೊಡಗಿನಲ್ಲಿ ಅತಿ ಸುಲಭವಾಗಿ ಬೆಳೆಯುವ ಒಂದು ಉದ್ದವಾದ ಮರ. ಅದನ್ನು ಕೆಲವು ಕಾಪಿ ತೋಟಗಳಲ್ಲಿ ನೆರಳಿಗಾಗಿ ಬೆಳೆಸಿದ್ದಾರೆ. ಪೂರ್ವಕಾಲದಲ್ಲಿ ಅದನ್ನು ಬೆಳೆಸುವುದು ಬಹಳ ಆದಾಯಕರವಾಗಿತ್ತು. ಆದರೆ ಕೋಟ್ಯಾನುಕೋಟಿ ಮರಗಳನ್ನು, ಮುಖ್ಯವಾಗಿ ಸಿಂಹಳ ದ್ವೀಪದಲ್ಲಿ, ಬೆಳೆಸಿದ್ದರಿಂದ ಬೆಲೆಯು ಬಹಳ ಕಡಿಮೆಯಾಗಿ ಅದರ ಕೃಷಿಯು ನಿಂತುಹೋಗಿದೆ. ಕ್ವಿನೈನ್ ಎಂಬ ಬಿಳಿಯ ಪುಡಿಯು ಜ್ವರಕ್ಕೆ ಇದುವರೆಗೆ ತಿಳಿದುಬಂದ ಔಷಧಗಳಲ್ಲೆಲ್ಲಾ ಅತ್ಯಂತ ಉಪಯುಕ್ತವಾಗಿದೆ. ಅದನ್ನು ಸ್ವಲ್ಪ ಸ್ವಲ್ಪವಾಗಿ ತೆಗೆದುಕೊಂಡರೆ, ಹಸಿವು ಉಂಟಾಗುವುದಲ್ಲದೇ ಶರೀರದಲ್ಲಿ ಶಕ್ತಿಯೂ ಹೆಚ್ಚುವುದು.