ವೀರರಾಜೇಂದ್ರ ಒಡೆಯ (೧೭೮೦೧೮೦೯ರವರೆಗೆ) – ತಂದೆ ಸಾಯುವಾಗ ವೀರರಾಜನು ೧೬ ವರ್ಷದ ಹುಡುಗನಾಗಿದ್ದನು. ಕೊಡಗನ್ನು ವಶ ಮಾಡಿಕೊಳ್ಳಲಿಕ್ಕೆ ಇದೇ ಸಮಯವೆಂದು ಹೈದರನು ತಿಳಿದುಕೊಂಡು, ಮುಸಲ್ಮಾನರ ಬಲವಾದ ಒಂದು ದಂಡನ್ನು ಮಡಿಕೇರಿಯಲ್ಲಿ ಇರಿಸಿ, ಮೊದಲಿನ ರಾಜನ ಕರಣೀಕನಾದ ಬ್ರಾಹ್ಮಣ ಸುಬ್ರಾಯನನ್ನು ಕೊಡಗಿಗೆ ಅಮಲ್ದಾರನಾಗಿ ನೇಮಿಸಿ, ವೀರರಾಜೇಂದ್ರ ಒಡೆಯನನ್ನೂ ಅವನ ತಮ್ಮನನ್ನೂ ಮೈಸೂರು ಸೀಮೆಯಲ್ಲಿ ಅರ್ಕಲ್‌ಗೋಡು ತಾಲೂಕ ಗೋರೂರು ಎಂಬಲ್ಲಿಗೆ ಕಳುಹಿಸಿಬಿಟ್ಟನು. ತಮ್ಮ ರಾಜನನ್ನು ಕದ್ದುಕೊಂಡು ಹೋಗಿ ಬ್ರಾಹ್ಮಣನನ್ನು ಅಮಲ್ದಾರನಾಗಿ ನೇಮಿಸಿದ್ದರಿಂದ ಕೊಡಗರು ಸನ್ ೧೭೮೨ರಲ್ಲಿ ದಂಗೆ ಎದ್ದು, ಹೈದರನು ಇಂಗ್ಲೀಷರೊಡನೆ ಇನ್ನೊಂದು ಕಡೆಯಲ್ಲಿ ಯುದ್ಧ ಮಾಡುತ್ತಿರುವುದನ್ನು ಕಂಡು, ಮಡಿಕೇರಿಯಲ್ಲಿದ್ದ ಅವನ ಸೈನ್ಯವನ್ನು ದೇಶದಿಂದ ಹೊರಕ್ಕೋಡಿಸಿ, ಕೊಡಗನ್ನು ಸ್ವತಂತ್ರ ರಾಜ್ಯವಾಗಿ ಮಾಡಿದರು. ಒಂದು ವರ್ಷದಲ್ಲಿ ಹೈದರನು ಸತ್ತು ಹೋದನು. ಆದರೆ ಅವನ ಮಗ ಟೀಪು ಸುಲ್ತಾನನು ಕೊಡಗನ್ನು ತಿರಿಗಿ ಹಿಡಿದುಕೊಳ್ಳಬೇಕೆಂದು ಪ್ರಯತ್ನಪಟ್ಟು, ಅದನ್ನು ಸನ್ ೧೭೮೪ರಲ್ಲಿ ತನ್ನ ಕೈವಶ ಮಾಡಿಕೊಂಡನು. ಆ ಮೇಲೆ ತಾನೇ ಕೊಡಗಿಗೆ ಬಂದು, ಕೊಡಗರು ತಿರಿಗಿ ತಂಟೆ ಮಾಡಿದರೆ ತಕ್ಕ ಶಿಕ್ಷೆಯನ್ನು ಮಾಡುತ್ತೇನೆಂದು ಹೆದರಿಸಿ ಹಿಂದಕ್ಕೆ ಹೋಗಲು, ಕೊಡಗರು ತಕ್ಷಣವೇ ತಿರಿಗಿ ದಂಗೆ ಎದ್ದು, ಮುಸಲ್ಮಾನರ ಸೈನ್ಯವನ್ನೆಲ್ಲಾ ಹೊಡೆ ದೋಡಿಸಿದರು. ಇದನ್ನು ಕೇಳಿದಾಗ ಟೀಪು ಸಿಟ್ಟುಗೊಂಡು, ೧೫,೦೦೦ ಸಿಪಾಯಿಯರನ್ನು ದಳವಾಯಿ ಝಿನೋಲುದ್ದೀನ್ ಕೈ ಕೆಳಗೆ ತಿರಿಗಿ ಕೊಡಗಿಗೆ ಕಳುಹಿಸಿದನು. ಆದರೆ ಈ ಸೈನ್ಯವು ೪,೦೦೦ ಕೊಡಗರೊಡನೆ ಕಾದಾಡಿ, ತಮ್ಮ ಸಾಮಾನು ಸರಂಜಾಮುಗಳನ್ನು ಬಿಟ್ಟು ಹಿಮ್ಮೆಟ್ಟಿ ಹೋಗಬೇಕಾಯಿತು. ಅನಂತರ ಟೀಪು ತಾನೇ ಮಡಿಕೇರಿಗೆ ಬಂದು, ಸ್ನೇಹಪರನಂತೆ ನಟಿಸಿಕೊಂಡು, ಕೊಡಗರನ್ನೆಲ್ಲಾ ತಲೆಕಾವೇರಿಗೆ ಬರಮಾಡಿಸಿ, ಅಲ್ಲಿ ಮೋಸದಲ್ಲಿ ಅವರನ್ನೂ ಅವರ ಹೆಂಡರು ಮಕ್ಕಳನ್ನೂ ಸೆರೆಹಿಡಿದುಕೊಂಡನು. ಸೆರೆಹಿಡಿಯಲ್ಪಟ್ಟ ಜನರ ಸಂಖ್ಯೆ ೮೫,೦೦೦ ಎಂದು ಹೇಳುತ್ತಾರೆ. ಟೀಪು ಕೊಡಗರನ್ನೆಲ್ಲ (ಹೆಂಗಸು ಮಕ್ಕಳನ್ನು ಸಹ) ದೇವಟ್ಲು ಕರಂಬಿಗೆ ಬರಮಾಡಿಸಿ ಕೊಡಗಿನವರನ್ನೆಲ್ಲ ಹಿಡಿದುಕೊಂಡು ಶ್ರೀರಂಗಪಟ್ಟಕ್ಕೆ ಕೊಂಡೊಯ್ದನು. ಇವರನ್ನೆಲ್ಲಾ ಶ್ರೀರಂಗಪಟ್ಟಣಕ್ಕೆ ವೈದು (ಒಯ್ದು), ಗಂಡಸರನ್ನೆಲ್ಲಾ ಖತ್ನಾ ಮಾಡಿ ಜಾತಿ ಕೆಡಿಸಿದರು. ಮತ್ತು ಟೀಪು ಬಳ್ಳಾರಿ ಪ್ರಾಂತ್ಯದಿಂದ ಅನೇಕ ಮುಸಲ್ಮಾನರನ್ನು ಕೊಡಗಿಗೆ ಕಳುಹಿಸಿ, ಅಲ್ಲಿ ಅವರು ವಾಸ ಮಾಡುವಂತೆಯೂ ಉಳಿದ ಕೊಡಗರನ್ನು ಕೊಲ್ಲುವಂತೆಯೂ ಏರ್ಪಾಟು ಮಾಡಿದನು.

ಹೀಗಿರುವಾಗ ಸನ್ ೧೭೮೮ನೇ ಡಿಸೆಂಬರ್ ಮಾಸದಲ್ಲಿ ವೀರರಾಜೇಂದ್ರನು ತನ್ನ ಕುಟುಂಬವನ್ನೂ ಲಿಂಗರಾಜ ಅಪ್ಪಾಜಿರಾಜ ಎಂಬ ತನ್ನ ಇಬ್ಬರು ಸಹೋದರರನ್ನೂ ಕರೆದುಕೊಂಡು ಪೆರಿಯಪಟ್ಟದಿಂದ ತಪ್ಪಿಸಿಕೊಂಡು ಕೊಡಗಿಗೆ ಬಂದನು. ಇವರು ಆತು ವರ್ಷ ಬಂದೀಖಾನೆಯಲ್ಲಿದ್ದರು. ಆಗಲೇ ಟೀಪು ಹಿಡುಕೊಂಡು ಹೋದ ಕೊಡಗರಲ್ಲಿ ಅನೇಕರು ತಪ್ಪಿಸಿಕೊಂಡು ಬಂದು, ತಮ್ಮ ರಾಜನಿಗೆ ನೇರವಾಗಿ ಮುಸಲ್ಮಾನರೊಡನೆ ಯುದ್ಧ ಮಾಡತೊಡಗಿದರು. ಸ್ವಲ್ಪ ಸಮಯದಲ್ಲಿ ಮುಸಲ್ಮಾನರೆಲ್ಲಾ ದೇಶವನ್ನು ಬಿಟ್ಟು ಓಡಿಹೋಗಬೇಕಾಯಿತು. ಈಚೆಗೆ ವೀರರಾಜನು ಉತ್ತರ ಕೊಡಗಿನಲ್ಲಿ ರಾಜಕಾರ್ಯದಲ್ಲಿ ಇರುತ್ತಾ ಇರುವಾಗ ಕಿಗ್ಗಟ್ನಾಡಲ್ಲಿ ಕುರ್ಚಿಯೆಂಬ ಗ್ರಾಮದಲ್ಲಿ ಬಿಟ್ಟಿದ್ದ ಇವನ ಕುಟುಂಬ ಮಕ್ಕಳನ್ನು ಕೋಟೆ ಅರಸನು ಕಳುಹಿಸಿದ ನಾಯರ ಸಿಪಾಯಿಗಳು ಕೊಂದುಹಾಕಿದರು. ಟೀಪು ಆಗಾಗ್ಗೆ ಕೊಡಗು ರಾಜನ ಮೇಲೆ ಯುದ್ಧ ಮಾಡುವುದಕ್ಕೆ ಗುಲಾಮಲಿ ಎಂಬುವನನ್ನೂ ತನ್ನ ಖಾಸಾ ಭಾವನಾದ ಬರಾನುದ್ದೀನ್ ಎಂಬುವನನ್ನೂ ಸೈನ್ಯದೊಡನೆ ಕಳುಹಿಸಲು, ವೀರರಾಜನು ಇವರನ್ನು ಸೋಲಿಸಿ ಕುಶಾಲ್ ನಗರದ ಕೋಟೆಯನ್ನು ಮುತ್ತಿ ಹಿಡಿದುಕೊಂಡನು. ಅನಂತರ ಬೆಪ್ಪುನಾಡುಕೋಟೆಯನ್ನು ಹಿಡಿದುಕೊಂಡು ನಾಶ ಮಾಡಿದನು. ಭಾಗಮಂಡಲವು ೫ ದಿವಸಗಳ ಯುದ್ಧದ ನಂತರ ಇವನ ಕೈವಶವಾಯಿತು. ಇಲ್ಲಿ ವೀರರಾಜನು ತಾನೇ ಭಾಗಮಂಡಲದ ಮೇಲೆ ಫಿರಂಗಿ ಉಡಾಯಿಸಲು ದೇವಸ್ಥಾನದ ಮೇಲ್ಮನೆಗೆ ಹಾಕಿದ ತಾಂಬ್ರದ ಹಂಚುಗಳಲ್ಲಿ ಮೂರು ಗುಂಡುತಾಗಿ ಕೆಟ್ಟು ಹೋದುದರಿಂದ ಅವುಗಳಿಗೆ ಬದಲಾಗಿ ಬೆಳ್ಳಿಯ ಹಂಚುಗಳನ್ನು ಮಾಡಿಸಿ ಹಾಕಿಸಿದನಂತೆ. ಕಡೆಗೆ ಮಡಿಕೇರಿಯ ಕೋಟೆಯೊಂದೇ ಮುಸಲ್ಮಾನರ ವಶದಲ್ಲಿತ್ತು. ಇದನ್ನೂ ವೀರರಾಜೇಂದ್ರನು ಮುತ್ತಿಗೆ ಹಾಕಿದನು. ಟೀಪುವಿಗೂ ಇಂಗ್ಲೀಷರಿಗೂ ಈ ಕಾಲದಲ್ಲಿ ಯುದ್ಧ ನಡಿಯುತ್ತಿದ್ದುದರಿಂದ ತಾನು ಇಂಗ್ಲೀಷರ ಕಡೆ ಸೇರಿದರೆ ಟೀಪುವನ್ನು ಸುಲಭವಾಗಿ ಸೋಲಿಸಿಬಿಡಬಹುದೆಂದು ಯೋಚಿಸಿ, ಇಂಗ್ಲೀಷರ ಸ್ನೇಹವನ್ನು ಬೆಳೆಸಲಿಕ್ಕೆ ೧೭೯೦ರಲ್ಲಿ ತಲಚೇರಿಗೆ ಹೋಗಿ ಬೊಂಬಾಯಿ ಗವರ್ನರ್ ಸಾಹೇಬರನ್ನು ಕಂಡುಕೊಂಡನು. ಇವನು ಹಿಂತಿರುಗಿ ಕೊಡಗಿಗೆ ಬಂದ ಮೇಲೆ ಮಡಿಕೇರಿಯ ಕೋಟೆಯನ್ನು ಉಪಾಯದಿಂದ ತನ್ನ ಕೈವಶ ಮಾಡಿಕೊಂಡನು. ಹೇಗೆಂದರೆ ಮಡಿಕೇರಿಯ ಕೋಟೆಗೆ ಮುತ್ತಿಗೆ ಹಾಕಿದ ಸಮಾಚಾರವನ್ನು ಟೀಪು ತಿಳಿದು, ಖಾದರ್‌ಖಾನ್ ಎಂಬ ದಳವಾಯಿಯನ್ನು ದೊಡ್ಡ ಸೈನ್ಯದೊಡನೆ ಕೊಡಗಿಗೆ ಕಳುಹಿಸಲು, ಖಾದರ್‌ಖಾನನು ಕುಶಾಲ್‌ನಗರದ ಸಮೀಪವಿರುವ ಮುಳ್ಳುಸೋಗೆ ಎಂಬ ಗ್ರಾಮಕ್ಕೆ ಬಂದೊಡನೆ ವೀರರಾಜನು ಅವನ ಮೇಲೆ ಬಿದ್ದು ೫೦೦ ಸಿಪಾಯಿಗಳನ್ನು ಕೊಂದನು. ಕಡೆಗೆ ತಾನು ಪೆರಿಯಪಟ್ಟದಲ್ಲಿ ಬಂದೀಖಾನೆಯಲ್ಲಿದ್ದಾಗ ತನ್ನ ತಂಗಿಯ ಮಾನವನ್ನು ರಕ್ಷಿಸಿದವನು ಇದೇ ಖಾದರ್‌ಖಾನನೆಂದು ತಿಳಿದು, ಆತನಿಗೆ ಪ್ರತ್ಯುಪಕಾರ ಮಾಡಬೇಕೆಂದು ಯೋಚಿಸಿ, ಖಾದರ್‌ಖಾನನು ಹಿಂದಕ್ಕೆ ಹೋದರೆ, ಟೀಪು ಅವನನ್ನೂ ಅವನ ಹೆಂಡರು ಮಕ್ಕಳನ್ನೂ ಕೊಲ್ಲಿಸಬಹುದು. ಆದುದರಿಂದ ಅವನು ತನ್ನ ಸಾಮಾನು ಮುಂತಾದುವನ್ನು ಮಡಿಕೇರಿಗೆ ಸಾಗಿಸುವ ಹಾಗೆ ಮಾಡಿದರೆ, ಅವನಿಗೆ ಉಪಕಾರ ಮಾಡಿದ ಹಾಗೇ ಆಗುವುದು, ತನ್ನ ಕಾರ್ಯವೂ ಕೈಗೂಡುವುದು ಎಂದು ನೆನಸಿ, ತನ್ನ ಸೈನಿಕರನ್ನೇ ಬೆನ್ನುಗಾವಲಿಗೆ ಕೊಟ್ಟು ಖಾದರ್ ಖಾನನನ್ನೂ ಅವನ ಕಡೆಯವರನ್ನೂ ಮಡಿಕೇರಿಗೆ ಕಳುಹಿಸಿದನು. ಇದರಿಂದ ವೀರರಾಜೇಂದ್ರನು ಟೀಪುವಇನ ಪಕ್ಷವನ್ನು ವಹಿಸಿಕೊಂಡಿರಬಹುದೆಂದು ಇಂಗ್ಲೀಷರು ಅನುಮಾನ ಪಡಲಿಕ್ಕೆ ಕಾರಣವಾಯಿತು. ಆದರೆ ತಾನು ಏತಕ್ಕೋಸ್ಕರ ಹೀಗೆ ಮಾಡಿದೆನೆಂದು ರಾಜನು ಹೇಳಿದ ಮೇಲೆ ಇಂಗ್ಲೀಷರು ಸುಮ್ಮನಾದರು. ಖಾದರ್ ಖಾನನ ಆಲೋಚನೆಯನ್ನು ಕೇಳಿ ಮಡಿಕೇರಿ ಕಿಲ್ಲೇದಾರ್ ಜಾಫರಾಲಿಯು ಕೋಟೆಯನ್ನೂ ಕೋಟೆಯಲ್ಲಿರುವ ಹಣ ದವಸ ಫಿರಂಗಿ ಮುಂತಾದುವನ್ನೂ ಬಿಟ್ಟು, ತನ್ನ ಜನರೊಡನೆ ಸುರಕ್ಷಿತವಾಗಿ ಮೈಸೂರಿಗೆ ಹೋಗಿ ಬಿಟ್ಟನು.

ಟೀಪು ಆಗಾಗ್ಗೆ ಕೊಡಗಿಗೆ ಬಂದು ಲೂಟಿ ಮಾಡಿದ ಹಾಗೆಯೇ ವೀರರಾಜೇಂದ್ರನು ಆಗಾಗ್ಗೆ ಮೈಸೂರು ಸೀಮೆಯನ್ನು ಹೊಕ್ಕು ಲೂಟಿ ಮಾಡಿ, ಪಶುಧನಾದಿಗಳನ್ನು ಸೂರೆ ಮಾಡಿ ತರುತ್ತಿದ್ದನ್ನು ಈ ಸಮಯದಲ್ಲಿ ಟೀಪುವಿನ ಪುಂಟು ಆಡಗಿಸಿಬೇಕೆಂದು ಇಂಗ್ಲೀಸರೂ ಮಹಾರಾಷ್ಟ್ರರೂ ನಿಜಾಮನೂ ಒಗ್ಗಟ್ಟಾದರು. ಇಂಗ್ಲೀಷರ ಒಂದು ಸೈನ್ಯವು ಕೊಡಗಿಗಾಗಿ ಬೆಂಗಳೂರಿಗೆ ಹೋಯಿತು. ವೀರರಾಜನು ಈ ಸೈನ್ಯಕ್ಕೆ ಬೇಕಾದ ಸರಬರಾಯಿ ಮಾಡಿ, ೧,೦೦೦ ಎತ್ತುಗಳನ್ನು ಕೊಟ್ಟು ತಾನೇ ಆ ಸೈನ್ಯದೊಡನೆ ಶ್ರೀರಂಗಪಟ್ಟಣವನ್ನು ಮುತ್ತಿಗೆ ಹಾಕಲಿಕ್ಕೆ ಹೋದನು. ಟೀಪು ಇದನ್ನು ಕಂಡು ವೀರರಾಜೇಂದ್ರನು ಇಂಗ್ಲೀಷರ ಪಕ್ಷವನ್ನು ಬಿಟ್ಟು ತನಗೆ ಸಹಾಯ ಮಾಡುವುದಾದರೆ, ಮೈಸೂರು ಸೀಮೆಯ ಪಶ್ಚಿಮ ದಿಕ್ಕಿನಲ್ಲಿರುವ ತಾಲೂಕುಗಳನ್ನೆಲ್ಲಾ ಅವನಿಗೆ ಬಿಟ್ಟು ಕೊಡುತ್ತೇನೆಂದು ಖಾದರ್‌ಖಾನನ ಸಂಗಡ ಹೇಳಿ ಕಳುಹಿಸಲು, ಅದಕ್ಕೆ ವೀರರಾಜೇಂದ್ರನು ‘ನೀನು ಮೊದಲು ಹೀಗೆಯೇ ಒಳ್ಳೆಯ ಮಾತುಗಳನ್ನಾಡಿ ಕೊಡಗರನ್ನು ಮೋಸಗೊಳಿಸಿ ಸೆರೆಹಿಡಿದು ಕೊಡಗು ದೇಶವನ್ನು ಹಾಳು ಮಾಡಿದೆ, ನಿನ್ನ ಹಾಗೆ ಸುಳ್ಳು ಹೇಳಲಿಕ್ಕೆ ನನ್ನಿಂದ ಆಗದು, ನನಗೆ ಒಂದೇ ನಾಲಿಗೆ, ನಿನ್ನ ಹಾಗೆ ಎರಡಿಲ್ಲಾ; ನಾನು ಇಂಗ್ಲೀಷರಿಗೆ ಸಹಾಯ ಮಾಡುವೆನಾಗಿ ಒಪ್ಪಿದ್ದೇನೆ, ಅದರಂತೆ ನಡಿಯುವೆನು’ ಎಂದು ಟೀಪುವಿಗೆ ಪ್ರತ್ಯುತ್ತರವನ್ನು ಹೇಳಿ ಕಳುಹಿಸಿದನು. ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ ಅಲ್ಲಿಂದ ೫,೦೦೦ ಮಂದಿ ಕೊಡಗರು ತಮ್ಮ ಹೆಂಡರು ಮಕ್ಕಳೊಡನೆ ತಮ್ಮ ದೇಶಕ್ಕೆ ಹಿಂತಿರುಗಿ ಓಡಿ ಬಂದರು.

ಟೀಪು ಶ್ರೀರಂಗಪಟ್ಟಣವು ಇಂಗ್ಲೀಷರ ಕೈವಶವಾಗಬಹುದೆಂದು ಹೆದರಿ, ಅವರೊಡನೆ ರಾಜಿ ಮಾಡಿದನು. ಇಂಗ್ಲೀಷರು ಕೊಡಗು ರಾಜನಿಗೆ ಧೈರ್ಯವನ್ನು ಹೇಳಿ, ಅವನು ತಮಗೆ ವರ್ಷ ಒಂದಕ್ಕೆ ೨೪,೦೦೦ರೂ ಪೊಗದಿ ಕೊಡುವ ಹಾಗೂ, ಅವನಿಗೆ ಬೇರೆಯವರಿಂದ ತೊಂದರೆ ಬಾರದಂತೆ ತಾವು ನೋಡಿಕೊಳ್ಳುವ ಹಾಗೂ ರಾಜನು ತಮ್ಮ ರಾಜ್ಯವನ್ನು ಸ್ವತಂತ್ರವಾಗಿ ಆಳಿಕೊಳ್ಳುವ ಹಾಗೂ (ಗೆ) ಏರ್ಪಾಟು ಮಾಡಿದರು. ಟೀಪು ತನಗೆ ಇಷ್ಟು ದಿವಸ ತೊಂದರೆ ಕೊಟ್ಟ ವೀರರಾಜೇಂದ್ರನನ್ನು ಹೇಗಾದರೂ ಮಾಡಿ ಕೊಲ್ಲಿಸಬೇಕೆಂದು ಆಲೋಚಿಸಿ, ಅರಸನ ನೆಂಟರಲ್ಲಿ ಒಬ್ಬನಾದ ಲಿಂಗರಾಜನನ್ನು ತನ್ನಂತೆ ಮಾಡಿಕೊಂಡು, ಶಿಕಾರಿಗೆ ಹೋದ ರಾಜನನ್ನು ಅವನ ಮೂಲಕ ಕಾಡಿನಲ್ಲಿ ಮೋಸದಿಂದ ಗುಂಡು ಹೊಡೆದು ಕೊಲ್ಲಿಸಲಿಕ್ಕೆ ಪ್ರಯತ್ನ ಮಾಡಿದನು. ಆದರೆ ಆ ಪ್ರಯತ್ನವು ಸಫಲವಾಗಲಿಲ್ಲ. ಟೀಪು ರಾಜನನ್ನು ಹೊಡಿಯಲಿಕ್ಕೆ ತಿರುಗಿ ತನ್ನ ಸೈನಿಕರಲ್ಲಿ ಗಟ್ಟಿಗರಾದ ಇಬ್ಬರು ಶಿಸ್ತುಗಾರರನ್ನು ಲಿಂಗರಾಜನಲ್ಲಿಗೆ ಕಳುಹಿಸಿದನು. ರಾಜನು ಶಿವರಾತ್ರೀ ಹಬ್ಬದಲ್ಲಿ ನಾಲ್ಕುನಾಡು ಅರಮನೆಯಿಂದ ಮಡಿಕೇರಿಗೆ ಬರುವ ದಾರಿಯಲ್ಲಿ ಇವರು ಹೊಂಚುಕೊಂಡಿದ್ದರು. ಆದರೆ ರಾಜನು ಈ ಸಂಗತಿಯನ್ನು ಹೇಗೋ ತಿಳಿದು ಲಿಂಗರಾಜನನ್ನೂ ಅವನ ಹೆಂಡರು ಮಕ್ಕಳನ್ನೂ ಅದೇ ರಾತ್ರಿ ತಲೆ ಹೊಡಿಸಿ, ಶಿಸ್ತುಗಾರರನ್ನು ಸೆರೆಹಿಡಿಸಿ, ವೀರರಾಜಪೇಟೆಯಲ್ಲಿ ಕೈದಿಯಲ್ಲಿಟ್ಟು, ಅವರು ಅಲ್ಲಿಂದ ತಪ್ಪಿಸಿಕೊಂಡು ಹೋಗದಂತೆ ಅವರ ಒಂದೊಂದು ಕಾಲನ್ನು ಕಡಿಸಿಹಾಕಿಸಿದನು.

ಇಂಗ್ಲೀಷರೊಡನೆ ಮಾಡಿದ ರಾಜಿಯನ್ನು ಸ್ವಲ್ಪ ಕಾಲದಲ್ಲಿ ಟೀಪು ತಾನಾಗಿ ರದ್ದು ಮಾಡಿಕೊಳ್ಳಲು, ಇಂಗ್ಲೀಷರು ಅವನೊಡನೆ ಯುದ್ಧಕ್ಕೆ ಹೋದರು. ಆಗಲೂ ವೀರರಾಜೇಂದ್ರನು ಇಂಗ್ಲೀಷರಿಗೆ ಸಹಾಯ ಮಾಡಿ ಅವರಿಗೆ ಬೇಕಾಗುವಷ್ಟು ದವಸ ಧಾನ್ಯಗಳನ್ನೂ ಎತ್ತುಗಳನ್ನೂ ಆಳುಗಳನ್ನೂ ಕೊಟ್ಟನು. ಸನ್ ೧೭೯೯ರಲ್ಲಿ ಇಂಗ್ಲೀಷರು ಟೀಪುವನ್ನು ಕೊಂದು ಶ್ರೀರಂಗಪಟ್ಟಣವನ್ನು ಹಿಡಿದು, ಮೈಸೂರು ಸಂಸ್ಥಾನವನ್ನು ಪೂರ್ವದ ಹಿಂದು ರಾಜರಿಗೆ ಬಿಟ್ಟುಕೊಟ್ಟರು ಮತ್ತು ವೀರರಾಜೇಂದ್ರನು ತಮಗೆ ಸಹಾಯ ಮಾಡಿದಕ್ಕಾಗಿ ಅವನು ಕೊಡತಕ್ಕ ೨೪,೦೦೦ ರೂ.ಗಳಿಗೆ ಬದಲಾಗಿ ವರ್ಷ ಒಂದರ ಒಂದು ಆನೆಯನ್ನು ಮಾತ್ರ ಕೊಟ್ಟರೆ ಸಾಕೆಂದು ಹೇಳಿದರು.

ವೀರರಾಜೇಂದ್ರನ ಮೊದಲನೆಯ ಹೆಂಡತಿಯಲ್ಲಿ ಪುತ್ರ ಸಂತಾನವಿಲ್ಲದೆ ಇದ್ದುದರಿಂದ ೧೭೯೬ರಲ್ಲಿ ಮಹಾದೇವಮ್ಮ ಎಂಬವಳನ್ನು ಮದುವೆ ಮಾಡಿಕೊಂಡನು. ಇವಳಲ್ಲಿಯೂ ಗಂಡು ಮಕ್ಕಳಾಗಲಿಲ್ಲ. ಗಂಡು ಮಕ್ಕಳಿಲ್ಲದೆ ಸತ್ತರೆ ರಾಜ್ಯವನ್ನು ದಾಯಾದಿಗಳು ಕಿತ್ತುಕೊಳ್ಳುವರು, ಅಥವಾ ಒಂದು ವೇಳೆ ವಿಷವನ್ನು ಹಾಕಿ ತನ್ನನ್ನೇ ಕೊಲ್ಲುವರು ಎಂತ ಮೊದಲೇ ಸಂಶಯ ಪಡುತ್ತಿದ್ದನು. ೧೮೦೭ರಲ್ಲಿ ಇವನ ಮೋಹದ ರಾಣಿಯು ತೀರಿಹೋದಳು. ಅನಂತರ ಈತನಿಗೆ ಬಹಳ ವ್ಯಸನ ಪ್ರಾಪ್ತಿಯಾಯಿತು. ಅಂದಿನಿಂದ ಇವನ ನಡತೆಯು ಬೇರೆಯಾಯಿತು. ತಾನು ಅನೇಕ ಜನರನ್ನು ಕೊಲ್ಲಿಸಿದುದಕ್ಕಾಗಿ ಅನೇಕರು ತನ್ನನ್ನು ದ್ವೇಷಿಸುತ್ತಾರೆಂತಲೂ, ತನ್ನ ವಿಶ್ವಾಸಕ್ಕೆ ಪಾತ್ರರಾದವರು ಯಾರೂ ಇಲ್ಲವೆಂತಲೂ ನೆನಸಿ, ತನ್ನ ಪ್ರಜೆಗಳಲ್ಲಿ ನೂರಾರು ಜನರನ್ನು ಕೊಲ್ಲಿಸಿದನು. ಇವನ ಕ್ರೂರತ್ವವನ್ನು ಸಹಿಸಲಾರದೆ ಕೆಲವು ಜನರು ಇವನನ್ನೇ ಕೊಲ್ಲಿಸಲಿಕ್ಕೆ ಮಸಲತ್ತು ಮಾಡಿದರು. ಇಂಥಾ ದಿವಸ, ಇಂತಿಷ್ಟು ಹೊತ್ತಿಗೆ ಅರಸನನ್ನು ಕೊಲ್ಲಬೇಕೆಂದು ನಿಶ್ಚಯವಾಯಿತು. ಅರಸನ ಅಂಗರಕ್ಷೆಯಲ್ಲಿದ್ದ ಸಿದ್ದಿಯರು ವಿನಹ ಇತರ ಊಳಿಗದವರೂ ಅರಮನೆಯ ಉದ್ಯೋಗಸ್ಥರೂ ಕಾವಲುಗಾರರೂ ಕೋಟೆಯ ಬಾಗಲು ಪಹರೆಯವರೂ ಅರಮನೆ ಬಾಗಲು ಕಾಯುವ ಕೊಡಗರೂ ಎಲ್ಲಾ ಒಗ್ಗಟ್ಟಾಗಿಯೇ ಇದ್ದರು. ಇವರು ಗೊತ್ತು ಮಾಡಿದ್ದ ಹೊತ್ತಿಗೆ ಸ್ವಲ್ಪ ಸಮಯಕ್ಕೆ ಮುಂಚಿತವಾಗಿ ಈ ಸಂಗತಿಯು ಹೇಗೋ ಅರಸನಿಗೆ ತಿಳಿಯಿತು. ಆದರೆ ಅರಸನು ಎದೆಗುಂದದೆ ಕೆಲವು ಬಟ್ಟೆಗಳನ್ನು ಗಂಟುಕಟ್ಟಿ ತನ್ನ ಹಾಸಿಗೆಯಲ್ಲಿಟ್ಟು ಅದರ ಮೇಲೆ ಕಂಬಳಿಯನ್ನು ಹೊದಿಸಿ ತಾನು ಎಲ್ಲಿಯೋ ಔತು

[ಅವಿತು]ಕೊಂಡನು. ಸರಿಯಾದ ಹೊತ್ತಿಗೆ ಕೊಡಗರೆಲ್ಲರೂ ಒಳಗೆ ಪ್ರವೇಶಿಸಿ, ರಾಜನು ನಿದ್ದೆ ಹೋಗಿರಬಹುದೆಂದು ತಿಳಿದುಕೊಂಡು ಕಂಬಳಿಯ ಅಡಿಯಲ್ಲಿರುವ ಬಟ್ಟೆಗಂಟನ್ನು ಚೂರುಚೂರಾಗಿ ಕತ್ತರಿಸಿದರು. ಕೂಡಲೇ, ‘ರಾಜನು ತಪ್ಪಿಸಿಕೊಂಡಿದ್ದಾನೆ, ಮೋಸವಾಯಿತಲ್ಲಾ’! ಎಂದು ಅಂದುಕೊಂಡು ಗಾಬರಿಯಾದರು. ಅಷ್ಟರೊಳಗೆ ವೀರರಾಜನು ಹೊರಗೆ ಓಡಿ ಹೋಗಿ, ಸಿದ್ದಿಯರನ್ನೆಲ್ಲಾ ಕರಿಸಿ, ಕೋಟೆಯ ಬಾಗಲುಗಳನ್ನೆಲ್ಲಾ ಭದ್ರಪಡಿಸಿ, ಒಳಗೆ ಕೂಡಿದ್ದ ೩೦೦ ಜನ ಕೊಡಗರನ್ನು ತಲೆ ಹೊಡಿಯಲಿಕ್ಕೆ ಅಜ್ಞಾಪಿಸಿ, ತಾನೂ ಒಂದು ಕಿಟಕಿಯ ಹಿಂದೆ ಕೂತುಕೊಂಡು, ಗಾಬರಿಪಟ್ಟ ಕೊಡಗರ ಮೇಲೆ ಗುಂಡು ಹಾರಿಸಿ, ೨೫ ಜನರನ್ನು ಕೊಂದನು. ಉಳಕಿಯವರನ್ನೆಲ್ಲಾ [ಉಳಿದವರನ್ನೆಲ್ಲಾ] ಸಿದ್ದಿಯರು ತಲೆ ಕಡಿದು ಹಾಕಿದರು. ದೊಡ್ಡ ಮಳೆಗೆ ನೀರು ಹೇಗೆ ಹರಿಯುತ್ತದೋ ಹಾಗೆ ಆ ದಿನ ಆ ಕೊಡಗರ ರಕ್ತವು ರಾಜಾಂಗಣದಲ್ಲಿ ಹರಿದು ಹೋಯಿತು. ಈ ಸಂಗತಿ ನಡೆದುದು ೧೮೦೭ರಲ್ಲಿ ಆ ಮೇಲೆ ರಾಜನು ಹುಚ್ಚುಹುಚ್ಚಾಗಿ ತನ್ನ ಸಹೋದರರಾದ ಅಪ್ಪಾಜಿಯನ್ನೂ ಲಿಂಗರಾಜನನ್ನೂ ಕೊಲ್ಲಲ್ಲಿಕ್ಕೆ ಆಳುಗಳನ್ನು ಕಳುಹಿಸಿದನು. ಸ್ವಲ್ಪ ಸಮಯದಲ್ಲಿ ಅವರನ್ನು ಕೊಲ್ಲಬಾರದೆಂದು ತಿರಿಗಿ ಹೇಳಿ ಕಳುಹಿಸಿದನು. ಆದರೆ ಮೊದಲು ಹೋದ ಆಳುಗಳು ಅಪ್ಪಾಜಿಯ ತಲೆಯನ್ನು ಕಡಿದು ಹಾಕಿದರು. ಲಿಂಗರಾಜನು ಮಾತ್ರ ತಪ್ಪಿಸಿಕೊಂಡು ಪ್ರಾಣ ಸಹಿತ ಉಳಿದನು. ಕೆಲವು ದಿವಸಗಳ ನಂತರ ವೀರರಾಜೇಂದ್ರನು ಕಾಲವಾದನು. ವೀರರಾಜೇಂದ್ರನಿಗೆ ನಾಲ್ಕು ಮಂದಿ ಹೆಣ್ಣು ಮಕ್ಕಳು ಮಾತ್ರ ಇದ್ದರು. ಇವರಲ್ಲಿ ಹಿರಿಯಳಾದ ದೇವಮ್ಮಾಜಿಯನ್ನು ಮಲ್ಲಪ್ಪನೆಂಬ ಕೊಡಗನಿಗೆ ಕೊಟ್ಟು ಮದುವೆ ಮಾಡಿದ್ದನು.

ಲಿಂಗರಾಜ (೧೮೦೯೧೮೨೦ರವರೆಗೆ) – ವೀರರಾಜನು ಸತ್ತನಂತರ ಕೊಡಗಿಗೆ ಕ್ಷೇಮವಾಗಬಹುದೆಂದು ಅನೇಕ ಜನರು ತಿಳಿದುಕೊಂಡಿದ್ದರು. ತನ್ನ ತರುವಾಯ ತನ್ನ ಮಗಳು ಪಟ್ಟಕ್ಕೆ ಬರಬೇಕೆಂತಲೂ, ತನ್ನ ಅಳಿಯನೂ ಈಸ್ಟ್ ಇಂಡಿಯಅ ಕಂಪೆನಿಯವರು ನೇಮಿಸಬಹುದಾದ ಸರದಾರನೂ ಕೂಡಿ ರಾಜ್ಯ ಕಾರ್ಯವನ್ನು ನಿರ್ವಹಿಸಬೇಕೆಂತಲೂ, ಸೋದೆರಾಜನು ಮುಖ್ಯ ದಿವಾನನಾಗಿರಬೇಕೆಂತಲೂ ನಿಶ್ಚಯಿಸಿ, ಅದರಂತೆ ಮರಣಶಾಸನವನ್ನು ಬರೆದು ರಾಜವೈದ್ಯನಾದ ಡಾಕ್ಟರ್ ಇಂಗ್ಲ್‌ಡ್ಯುಯವರ ಕೈಗೆ ಕೊಟ್ಟಿದ್ದನು. ವೀರರಾಜನು ಸತ್ತನಂತರ ಅಲ್ಲಿ ಕೂಡಿದ್ದ ಮುಖ್ಯಸ್ಥರು ದೇವಮ್ಮಾಜಿಯನ್ನು ರಾಣಿಯೆಂದು ಭಾವಿಸಿದರು. ಸೋದೆರಾಜನು ದಿವಾನ್‌ಗಿರಿ ಕೆಲಸವನ್ನು ನಡಿಸುತ್ತಾ ಬಂದನು. ಜನರೆಲ್ಲರು ಸುಖವಾಗಿ ಇದ್ದರು. ಆದರೆ ಕೆಲವು ದಿವಸಗಳಲ್ಲಿ ವೀರರಾಜನ ತಮ್ಮನಾದ ಲಿಂಗರಾಜನು ಕಂಪೆಯನಿಯವರ ಕಡೆಯ ಒಬ್ಬ ಸರದಾರನನ್ನು ಆಗಾಗ್ಗೆ ಕಂಡುಕೊಂಡು, ತಾನು ಒಳ್ಳೆಯ ಗುಣವುಳ್ಳ ಸಾಧು ಪುರುಷನಂತೆ ನಟಿಸಿ, ತನಗೆ ರಾಜ್ಯ ಸಿಕ್ಕದೇ ಹೋದರೂ ನಷ್ಟವಿಲ್ಲ, ತನ್ನ ಅಣ್ಣನು ರಾಜ್ಯವನ್ನು ಯಾರಿಗೆ ಬೇಕಾದರೂ ಕೊಡಬಹುದು. ಗವರ್ನರ್ ಜನರಲ್ ಸಾಹೇಬರವರು ಈ ವಿಷಯದಲ್ಲಿ ಯಾವ ಏರ್ಪಾಟು ಮಾಡುತ್ತಾರೆಯೋ ಅದಕ್ಕೆ ಒಳಪಡುತ್ತೇನೆ, ತನ್ನ ಪೆನ್‌ಶನ್ ಮಾತ್ರ ಸ್ವಲ್ಪ ಹೆಚ್ಚಿಸಿದರೆ ಸಾಕು ಎಂಬ ವಿನಯೋಕ್ತಿಗಳಿಂದ ಅವರನ್ನೂ ಡಾಕ್ಟರ್ ಇಂಗ್ಲ್‌ಡ್ಯು ಸಾಹೇಬರನ್ನೂ ವಂಚಿಸಿದನು. ಇವರು ಇವನು ಸಾಧುಪುರುಷನೆಂತಲೂ ಒಳ್ಳೆಯವನೆಂತಲೂ ಗವರ್ನರ್ ಜನರಲ್ ಸಾಹೇಬರವರಿಗೆ ಬರೆದರು. ಲಿಂಗರಾಜನು ಪ್ರತಿ ದಿವಸವೂ ಅರಮನೆಗೆ ಹೋಗುತ್ತಾ ಬರುತ್ತಾ ಇದ್ದು, ಕೊಡಗರಲ್ಲಿ ಮುಖಂಡರಾದವರನ್ನು ಉಪಾಯಾಂತರದಿಂದ ತನ್ನಂತೆ ಮಾಡಿಕೊಳ್ಳುತ್ತಾ ಬಂದನು. ಒಂದಾನೊಂದು ದಿವಸ ಅರಮನೆಯಲ್ಲಿ ಇಂಗ್ಲ್‌ಡ್ಯು ಸಾಹೇಬರ ಪರೋಕ್ಷದಲ್ಲಿ ಒಂದು ದೊಡ್ಡ ಸಭೆ ಸೇರಿತು. ಆಗ್ಗೆ ಕೆಲವರು ಸೋದೆರಾಜನಿಗೆ ಬದಲಾಗಿ ಲಿಂಗರಾಜನೇ ದಿವಾನ್‌ಗಿರಿ ಕೆಲಸ ನಡಿಸಬೇಕೆಂದು ಹೇಳಿದರು. ಆದರೆ ಇವರ ಮಾತು ನಡಿಯಲಿಲ್ಲ. ಆಗ ಲಿಂಗರಾಜನು ವ್ಯಸನ ಪಟ್ಟು, ಕುದುರೆಯನ್ನು ಹತ್ತಿ ಹಾಲೇರಿಯಲ್ಲಿರುವ ತನ್ನ ಮನೆಗೆ ಹೋಗುತ್ತಾ, ದಾರಿಯಲ್ಲಿ ಮಕ್ಕಳಂತೆ ಗಟ್ಟಿಯಾಗಿ ಅಳುತ್ತಾ ಹೋಗುವುದನ್ನು ದಿವಾನರಲ್ಲಿ ಒಬ್ಬನಾದ ಚೌರೀರ ಅಪ್ಪಣ್ಣನು ಕಂಡು ‘ಅಯ್ಯಾ, ಲಿಂಗರಾಜಾ, ಏಕೆ ಆಳುತ್ತೀಯೆ?’ ಎಂದು ಕೇಳಲು, ಲಿಂಗರಾಜನು ‘ನನ್ನ ಪ್ರಯತ್ನವೆಲ್ಲ ನಿಷ್ಪಲವಾಯಿತು. ನನ್ನನ್ನು ಸೋದೆರಾಜನ ಬದಲಿಗೆ ನೇಮಿಸಲಿಕ್ಕೆ ಕೊಡಗರು ಒಪ್ಪಲಿಲ್ಲ’ ಎಂದು ಹೇಳಿದನು. ಆಗ ಅಪ್ಪಣ್ಣನು ‘ಇದಕ್ಕೆ ಏಕೆ ಇಷ್ಟು ಚಿಂತೆ? ನನ್ನೊಡನೆ ಬಾ, ಕೂಡಲೇ ನಿನ್ನನ್ನು ಸಿಂಹಾಸನದ ಮೇಲೆ ಕೂಡ್ರಿಸುವೆನು’ ಎಂದು ಧೈರ್ಯವನ್ನು ಹೇಳಿ, ಲಿಂಗರಾಜನ ಕುದುರೆಯ ಲಗಾಮನ್ನು ಹಿಡಿದು ಅರಮನೆಗೆ ಕರೆದುಕೊಂಡು ಹೋಗಿ, ಅಲ್ಲಿ ಕೂತಿದ್ದ ಜನರ ಮುಂದೆ ಅವನ ವಿಷಯವಾಗಿ ಕೆಲವು ಒಳ್ಳೆಯ ಮಾತುಗಳನ್ನು ಹೇಳಲು, ಜನರು ಸೋದೆರಾಜನಿಗೆ ಬದಲಾಗಿ ಲಿಂಗರಾಜನೇ ಕೆಲಸ ಮಾಡಬಹುದೆಂದು ಒಪ್ಪಿಕೊಂಡರು. ಈ ವರ್ತಮಾನವು ಡಾಕ್ಟರ್ ಇಂಗ್ಲ್‌ಡ್ಯು ಸಾಹೇಬರಿಗೆ ಯಾರೂ ತಿಳಿಸಲಿಲ್ಲ. ಒಂದು ದಿನ ದೇವಮ್ಮಾಜಿಯ ಇಂಗ್ಲ್‌ಡ್ಯು ಸಾಹೇಬರನ್ನು ಕರೆಯ ಕಳುಹಿಸಿ, ಸೋದೆರಾಜನ ಕೆಲಸವು ತನಗೆ ತೃಪ್ತಿಕರವಾಗಲಿಲ್ಲ, ತನ್ನ ಚಿಕ್ಕಪ್ಪ ಲಿಂಗರಾಜನೇ ತನ್ನ ಪೋಷಣಾಕರ್ತನಾಗಿದ್ದು ರಾಜ್ಯ ಕಾರ್ಯವನ್ನು ನಿರ್ವಹಿಸುವುದು ಒಳ್ಳೆಯದು ಎಂದು ಹೇಳಿದಳು. ಇದನ್ನು ಕೇಳಿ ಇಂಗ್ಲ್‌ಡ್ಯು ಸಾಹೇಬರಿಗೆ ಬಹಳ ಆಶ್ಚರ್ಯವಾಯಿತು. ಕೂಡಲೆ ಸೋದೆರಾಜನು ಇವರ ಹತ್ತಿರಕ್ಕೆ ಬಂದು, ತಾನು ಇಲ್ಲಿ ಇರುವುದು ಸರಿಯಲ್ಲ, ಬೇಗನೆ ಹೋಗುವುದು ಒಳ್ಳೆಯದು, ಆದ್ದರಿಂದ ಹೋಗಲಇಕ್ಕೆ ಅಪ್ಪಣೆಯಾಗಬೇಕೆಂದು ಕೇಳಿಕೊಂಡನು. ಆ ಸಮಯದಲ್ಲಿಯೇ ಲಿಂಗರಾಜನು ತಾನು ರಾಜ್ಯ ಕಾರ್ಯವನ್ನು ವಹಿಸಿಕೊಂಡಿದ್ದೇನೆಂದು ಇವರಿಗೆ ತಿಳಿಸಿದನು. ಆಗ ಇಂಗ್ಲ್‌ಡ್ಯು ಸಾಹೇಬರಿಗೆ ಲಿಂಗರಾಜನ ಮೋಸವೆಲ್ಲಾ ಗೊತ್ತಾಯಿತು. ಅವರು ಈ ಸಂಗತಿಯನ್ನು ಗವರ್ನರ್ ಜನರಲ್ ಸಾಹೇಬರವರಿಗೆ ತಿಳಿಸಿದರು. ಆದರೆ ಲಿಂಗರಾಜನು ಒಳ್ಳೆಯವನೇ ಆಗಿರಬಹುದು, ಬೇರೆಯವರಿಗಿಂತ ಚೆನ್ನಾಗಿ ದೇವಮ್ಮಾಜಿಯನ್ನು ನೋಡಿಕೊಂಡು ರಾಜ್ಯವನ್ನು ಸಹ ಚೆನ್ನಾಗಿ ಆಳಬಹುದು ಎಂತ ಗವರ್ನರ್ ಜನರಲ್ ಸಾಹೇಬರವರು ಅಭಿಪ್ರಾಯ ಪಟ್ಟು, ಲಿಂಗರಾಜನೇ ರಾಜ್ಯವಾಳುವಂತೆ ಹುಕುಮ್ ಮಾಡಿದರು.

ಲಿಂಗರಾಜನು ಕೆಲವು ದಿವಸಗಳ ಮೇಲೆ ದೇವಮ್ಮಾಜಿಯಿಂದ ಗವರ್ನರ್ ಜನರಲ್ ಸಾಹೇಬರವರಿಗೆ ಒಂದು ಅರ್ಜಿಯನ್ನು ಬರಿಸಿದನು. ಈ ಅರ್ಜಿಯಲ್ಲಿ ತನಗೆ ಪಟ್ಟ ಬೇಡವೆಂತಲೂ, ರಾಜ್ಯವನ್ನು ತನ್ನ ಪ್ರೀತಿಗೆ ಪಾತ್ರನಾದ ಲಿಂಗರಾಜನಿಗೆ ಕೊಡಬೇಕೆಂತಲೂ ನಮೂದಿಸಿತ್ತು. ಗವರ್ನರ್ ಜನರಲ್ ಸಾಹೇಬರವರು ಈ ಅರ್ಜಿಯನ್ನು ನೋಡಿ, ದೇವಮ್ಮಾಜಿಯ ಚಿಕ್ಕ ಮಗು ಪ್ರಾಯಪ್ರಬುದ್ಧೆಯಾದ ಮೇಲೆ ಈ ವಿಷಯವನ್ನು ಇತ್ಯರ್ಥ ಮಾಡಬಹುದೆಂದು ಹುಕುಮ್ ಕೊಟ್ಟರು. ೧೮೧೧ನೆಯ ಇಸವಿಯಲ್ಲಿ ಲಿಂಗರಾಜನು ತಾನೇ ಅರಸನಾದೆನೆಂದು ಇಂಗ್ಲೀಷ್ ಸರಕಾರಕ್ಕೆ ತಿಳಿಸಿದನು. ಇಂಗ್ಲೀಷ್ ಸರಕಾರದವರು ಇದಕ್ಕೆ ಏನೂ ಆಕ್ಷೇಪಣೆ ಮಾಡಲಿಲ್ಲ ಲಿಂಗರಾಜನ ಆಳಿಕೆಯು ಬಹಳ ಕ್ರೂರತರದ್ದಾಗಿತ್ತು. ಏನಾದರೂ ಮಾಡಿ ಕೊಡಗರನ್ನು ತನ್ನ ಕೈವಶಮಾಡಿಕೊಂಡಿರಬೇಕೆಂಬುದೇ ಇವನ ಮುಖ್ಯ ಉದ್ದೇಶವಾಗಿತ್ತು. ಇವನ ಅಳಿಕೆಯ ಮೊದಲನೆಯ ವರ್ಷದಲ್ಲಿ ಅಪ್ಪಣ್ಣ ದಿವಾನನು ಇವನನ್ನು ಸ್ವೇಚ್ಫೆಯಾಗಿ ಪ್ರವರ್ತಿಸಲಿಕ್ಕೆ ಬಿಡಲಿಲ್ಲ. ಆದರೆ ಕಾಲ ಕ್ರಮೇಣ ಈ ದಿವಾನನನ್ನೇ ತನ್ನ ಮುಂದೆ ಹಿಡತರಿಸಿ, ಅವನ ಮೇಲೆ ರಾಜದ್ರೋಹದ ತಪ್ಪನ್ನು ಸ್ಥಾಪಿಸಿ- ‘ನೀನು ಏನು ತಪ್ಪು ಮಾಡಿರುತ್ತೀ?’ ಎಂದು ಕೇಳಲು, ಅದಕ್ಕೆ ಅಪ್ಪಣ್ಣ ದಿವಾನನು ‘ನಾನು ಮಾಡಿದ ತಪ್ಪು ಒಂದೇ, ಯಾವುದೆಂದರೆ, ನಿನ್ನಂಥಾ ಮೂರ್ಖನನ್ನು ರಾಜನನ್ನಾಗಿ ಮಾಡಿದ್ದೇ’ ಎಂದೆನ್ನಲು, ರಾಜನು ಸಿಟ್ಟುಗೊಂಡು, ಅಪ್ಪಣ್ಣನನ್ನೂ ಅವನ ಕಡೆಯವರನ್ನೂ ಕಾಡಿಗೆ ಸಾಗಿಸಿ, ಅಲ್ಲಿ ಮರಕ್ಕೆ ಬಿಗಿಸಿ, ಮೊಳೆಗಳನ್ನು ಹೊಡಿಸಿ ಕೊಲ್ಲಿಸಿದನಲ್ಲದೆ ಆಗಲೇ ಅವನ ನೆಂಟರ ತಲೆಗಳನ್ನು ಕಡಿಸಿದನು. ಅನಂತರ ಹನ್ನೊಂದು ವರ್ಷಗಳವರೆಗೆ ನಿರಂಕುಶವಾಗಿ ರಾಜ್ಯವನ್ನಾಳುತ್ತ ಬಂದನು. ಪ್ರಜೆಗಳು ನೆರೆರಾಜ್ಯಗಳಿಗೆ ಹೋಗದಂತೆ ದಾರಿಯಲ್ಲೆಲ್ಲಾ ಪಹರೆ ಇಡಿಸಿದನು. ಈತನ ಆಳಿಕೆಯು ಹೇಗಿದೆ ಎಂದು ನೋಡಲಿಕ್ಕೆ ಇಂಗ್ಲೀಷ್ ಸರದಾರರು ಕೊಡಗಿಗೆ ಬಂದರೆ, ಇಲ್ಲಿಯ ಜನರು ರಾಜನಿಗೆ ಹೆದರಿ, ಅವರಿಗೆ ಏನೊಂದು ಸಮಾಚಾರವನ್ನು ಹೇಳುತ್ತಿರಲಿಲ್ಲ. ವೀರರಾಜೇಂದ್ರನು ಕೊನೆಗೆ ಕ್ರೂರತ್ವವನ್ನು ಕಾಣಿಸಿದರೂ, ಮೊದಲು ಒಳ್ಳೆಯವನೇ ಆಗಿದ್ದನು. ಲಿಂಗರಾಜನಾದರೋ ಸ್ವಭಾವತಃ ಕೆಟ್ಟವನು, ಜನರನ್ನು ತನ್ನ ಕೈಯಲ್ಲೇ ಕೊಲ್ಲುತ್ತಿದ್ದನು. ಕೆಲವರನ್ನು ತಪ್ಪು ಮಾಡಿದುದಕ್ಕಾಗಿಯೂ, ಕೆಲವರನ್ನು ಸುಮ್ಮನೆ ಅವರ ಆಸ್ತಿಯನ್ನೆಲ್ಲಾ ಕಿತ್ತುಕೊಳ್ಳಬೇಕಾಗಿಯೂ, ಕುಂದಿನಮೊಟ್ಟೆಯಿಂದ ಹಳ್ಳಕ್ಕೆ ದೊಬ್ಬಿಸಿ ಕೊಲ್ಲಿಸುತ್ತಿದ್ದನು. ೧೮೨೦ರಲ್ಲಿ ಇವನು ಕಾಲವಾದನು. ಈತನ ಹೆಂಡತಿಯು ಯುವರಾಜನಿಂದ ತನಗೇನಾದರೂ ಕೇಡು ಬರುವುದೆಂದು ಯೋಚಿಸಿ, ವಜ್ರದ ಪುಡಿಯನ್ನು ತಿಂದು ಆಗಲೇ ಸತ್ತಳು. ವೀರರಾಜೇಂದ್ರನನ್ನು ಸಮಾಧಿ ಮಾಡಿದ ಗದ್ದಿಗೆಯಲ್ಲಿ ಇವರನ್ನೂ ಸಮಾಧಿ ಮಾಡಿದರು.

ಪ್ರಜಾಪರಿಪಾಲನೆಯ ವಿಷಯದಲ್ಲಿ ಕೆಟ್ಟವನಾಗಿದ್ದರೂ ಲಿಂಗರಾಜನು ಮಾಡಿದ ಮುಲ್ಕಿ ಏರ್ಪಾಡು ಬಹಳ ಚೆನ್ನಾಗಿತ್ತು. ಜಮೀನೆಲ್ಲಾ ಸರಿಯಾಗಿ ಅಳತೆ ಮಾಡಿಸಿ, ಮಣ್ಣಿಗೆ ತಕ್ಕ ಕಂದಾಯವನ್ನು ಹಾಕಿ, ಯಾವ ಯಾವ ಜಮೀನು ಯಾರ ಯಾರ ಅನುಭವ ಅಥವಾ ಸ್ವಾಧೀನದಲ್ಲಿದೆ, ಆಯಾ ಜಮೀನುಗಳ ಚಕ್ಕುಬಂದಿ ಯಾವುದು, ವಿಸ್ತಾರವೆಷ್ಟು ಕಂದಾಯವೆಷ್ಟು ಎಂಬುದನ್ನೆಲ್ಲಾ ಕ್ರಮವಾಗಿ ಒಂದು ಪುಸ್ತಕದಲ್ಲಿ ಬರೆಸಿದನು. ಈ ದಾಖಲೆಗೆ ‘ಶಿಸ್ತು’ ಎಂದು ಹೆಸರು. ಲಿಂಗರಾಜನ ಶಿಸ್ತು ಈಗಲೂ ಜಾರಿಯಲ್ಲಿದೆ. ಕಂದಾಯ ಮಾತ್ರ ರೂಪಾಯಿ ಒಂದಕ್ಕೆ ಒಂದಾಣೆ ಮೇರೆ ಹೆಚ್ಚಿದೆ.

ವೀರರಾಜ (೧೮೨೦೧೮೩೪ರವರೆಗೆ) – ಇವನು ಕೊಡಗಿನ ಕಡೆಯ ಅರಸನು, ಎಲ್ಲಾ ವಿಷಯಗಳಲ್ಲಿಯೂ ಕಡೆಯವನೇ. ತಂದೆ ಸಾಯುವಾಗ ಇವನಿಗೆ ೨೦ ವರ್ಷ ಪ್ರಾಯ. ಪಟ್ಟಕ್ಕೆ ಬಂದ ಕೂಡಲೆ ತನಗೆ ಮೊದಲು ಪ್ರತಿಕೂಲರಾಗಿದ್ದ ನೆಂಟರನ್ನೂ ಇತರರನ್ನೂ ಕೊಲ್ಲಿಸಿದನು. ಇವನ ಬಂಧುಗಳಲ್ಲಿ ಒಬ್ಬನಾದ ಚನ್ನವೀರನು ಇವನ ಹಿಂಸೆಯನ್ನು ತಡೆಯಲಾರದೆ ಮೈಸೂರಿಗೆ ಓಡಿಹೋಗಿ ಇಂಗ್ಲೀಷರ ಮರೆಹೊಕ್ಕರೂ, ಆತನು ತಪ್ಪುಗಾರನು, ಶಿಕ್ಷೆಯನ್ನು ತಪ್ಪಿಸಿಕೊಳ್ಳಲಿಕ್ಕೆ ಓಡಿಹೋಗಿದ್ದಾನೆ. ಆದ್ದರಿಂದ ಬಿಟ್ಟುಕೊಡಬೇಕೆಂದು ಕಂಪೆನಿಯ ಸರಕಾರಕ್ಕೆ ತಿಳಿಸಿ, ಅವನನ್ನು ಹಿಂದಕ್ಕೆ ಹಿಡತರಿಸಿ, ಅವನನ್ನೂ ಅವನ ಮನೆಯ ಎಲ್ಲಾ ಜನರನ್ನೂ (ಒಟ್ಟು ೨೨ ಮಂದಿ) ಒಂದೇ ದಿನ ಮೂರ್ನಾಡಿನಲ್ಲಿ ಕೊಲ್ಲಿಸಿದನು ಮತ್ತು ಅವನಿಗೆ ಏನಾಯಿತೆಂದು ಇಂಗ್ಲೀಷರು ಕೇಳಿದಾಗ, ಜ್ವರದಿಂದ ಸತ್ತನು ಎಂದು ಸುಳ್ಳು ಹೇಳಿದನು. ಈ ರಾಜನ ದುರ್ಗುಣವು ಕ್ರೂರತ್ವ ಒಂದೇ ಅಲ್ಲ, ಇವನು ಬಹಳ ಕಾಮಾತುರನೂ ಆಗಿದ್ದು, ತನ್ನ ಮಲತಾಯಿಗಳನ್ನು ಮದುವೆ ಮಾಡಿಕೊಂದನು. ತನಗೆ ಇಷ್ಟ ಬಂದ ಯಾವ ಹೆಂಗಸನ್ನೇ ಆಗಲಿ ತನ್ನ ಹತ್ತಿರಕ್ಕೆ ಬರಮಾಡಿಕೊಳ್ಳುವನು. ಇವನಿಗೆ ಮಡಿಕೇರಿಯಲ್ಲಿ ೧೦೦ ಕ್ಕಿಂತ ಹೆಚ್ಚು ಮಂದಿ ಹೆಂಡರಿದ್ದರು. ಮಗುವು ತನ್ನ ಆಟದ ಬೊಂಬೆಗಳನ್ನು ಹೇಗೆ ಕಾಡುತ್ತದೋ ಹಾಗೆ ಪ್ರಜೆಗಳನ್ನು ಕಾಡುತ್ತಿದ್ದನು. ಕಂಪೆನೀ ಸರಕಾರಕ್ಕೆ ತನ್ನ ನಡತೆಯನ್ನು ಕುರಿತು ಏನೂ ತಿಳಿಯಬಾರದೆಂದು, ಈ ದೇಶದವರು ಬೇರೆ ಊರಿಗೆ ಹೋಗದಂತೆ ಮಾರ್ಗಗಳಲ್ಲೆಲ್ಲಾ ಕಾವಲಿಟ್ಟನು. ಇದರ ದೆಸೆಯಿಂದ ಪರವೂರಿನ ಜನರು ಇಲ್ಲಿಗೆ ಬರುತ್ತಿರಲಿಲ್ಲ. ರಾಜನು ಎಷ್ಟು ಗುಟ್ಟು ಮಾಡಿದರೂ, ಕಂಪೆನಿಯವರು ಇವನ ಸಂಗತಿಗಳನ್ನು ಹೇಗೋ ಕೇಳಿ, ಇದರ ನಿಜತ್ವವನ್ನು ತಿಳಿಯುವುದಕ್ಕೋಸ್ಕರ ಒಬ್ಬ ಇಂಗ್ಲೀಷ್ ಸರದಾರನನ್ನು ಕೊಡಗಿಗೆ ಕಳುಹಿಸಿದರು. ಆದರೆ ಜನರು ರಾಜನಿಗೆ ಹೆದರಿ, ಯಾವ ಸಮಾಚಾರವನ್ನೂ ಅವನಿಗೆ ಹೇಳಲಿಲ್ಲ, ದೊಡ್ಡ ವೀರರಾಜೇಂದ್ರ ಒಡೆಯನ ಮಗಳು ದೇವಮ್ಮಾಜಿಗೆ ಏನಾಯಿತು? ಇದ್ದಾಳೋ ಇಲ್ಲಾವೋ? ಎಂಬ ಸಮಾಚಾರವನ್ನು ಸಹ ಗೊತ್ತು ಮಾಡಲಿಕ್ಕೆ ಕೂಡದೆ ಆ ಸರದಾದರನು ಹಿಂದಕ್ಕೆ ಹೋಗಬೇಕಾಯಿತು. ಕೆಲವು ದಿವಸಗಳ ಮೇಲೆ ರಾಜನ ಭಾವನಾದ ಚೆನ್ನಬಸಪ್ಪನು ತನ್ನ ಹೆಂಡತಿಯೊಡನೆ, ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೋಸ್ಕರ, ಮೈಸೂರು ರೆಸಿಡೆಂಟ್ ಸಾಹೇಬರವರ ಹತ್ತಿರಕ್ಕೆ ಓಡಿ ಹೋಗಿ, ನಡೆದ ಸಂಗತಿಗಳನ್ನೆಲ್ಲಾ ಅರಿಕೆ ಮಾಡಿದನು. ರಾಜನು ಇವರನ್ನು ಹಿಂದಕ್ಕೆ ಕಳುಹಿಸಿಕೊಡಬೇಕೆಂದು ಹೇಳಿ ಕಳುಹಿಸಲು, ಇವರಿಗೂ ಚೆನ್ನವೀರನ ಗತಿಯಾಗಬಹುದೆಂದು ರೆಸಿಡೆಂಟರು ನೆನಸಿ, ಕಳುಹಿಸಿಕೊಡಲಿಲ್ಲ, ಇದಕ್ಕಾಗಿ ರಾಜನು ಬಹಳ ಸಿಟ್ಟುಗೊಂಡನು. ಓಡಿಹೋದ ಚೆನ್ನಬಸಪ್ಪನ ಸಹೋದರನಾದ ಮುದ್ದಯ್ಯನು ರಾಜನಿಗೆ ಖಾಸಾ ಮುನಿಷಿಯೂ ಸ್ನೇಹಿತನೂ ಆಗಿದ್ದರೂ, ರಾಜನು ತಾನೇ ಅವನನ್ನು ಹೊಡೆದು ಕುಂಟುಬಸವನಿಂದ ಕೊಲ್ಲಿಸಿದನು. ಆ ಕುಂಟಬಸವನು ಪ್ರಥಮತಃ ಲಿಂಗರಾಜನ ನಾಯಿಗಳನ್ನು ಸಾಕುವ ಚಾಕರಿಯಲ್ಲಿದ್ದನು. ಕಡೆಗೆ ಸಿಪಾಯಿಯಾಗಿ, ಅನಂತರ ಜಮೇದಾರನಾಗಿ, ಆ ಮೇಲೆ ದಳವಾಯಿಯಾಗಿ, ಕಡೆಗೆ ದಿವಾನ್ ಕೆಲಸಕ್ಕೆ ಬಂದನು. ಇವನು ಬಹಳ ದುರ್ನಡತೆಯವನ್ನಾದ್ದರಿಂದ ದುವೃತ್ತಿಯಿಂದಲೇ ಲಿಂಗರಾಜನಿಗೂ ಅನಂತರ ವೀರರಾಜನಿಗೂ ಎಣೆಯಾಗಿದ್ದನು. ಮುದ್ದಯ್ಯನಿಗೂ ಕುಂಟಬಸವನಿಗೂ ಅಗುತ್ತಿರಲಿಲ್ಲ. ಮುದ್ದಯ್ಯನ ಮರಣದಿಂದ ಕುಂಟಬಸವನಿಗೆ ಕ್ಷೇಮವಾಯಿತು. ಚೆನ್ನಬಸಪ್ಪನ ಸಂಗತಿಯು ಮುದ್ದಯ್ಯನಿಗೆ ಏನೂ ಗೊತ್ತಿರಲಿಲ್ಲ, ಮುದ್ದಯ್ಯನು ನಿರಪರಾಧಿ ಎಂದು ಬಹಳ ಜನರು ತಿಳಿದಿದ್ದರು. ವೀರರಾಜನು ಸಹ ಇದನ್ನು ತಿಳಿದು ಕಡೆಗೆ ಬಹಳ ವ್ಯಸನ ಪಟ್ಟನು. ಇದರಿಂದ ಕೆಲವು ದಿನ ರಾಜನಿಗೆ ನಿದ್ರೆ ಬಾರದೆ ಸ್ವಪ್ನಗಳಲ್ಲಿ ಮುದ್ದಯ್ಯನನ್ನು ಕಂಡು ಭಯಪಟ್ಟು, ಹುಚ್ಚುಹುಚ್ಚಾಗಿ ಅಡತೊಡಗಿದನು. ರಾಜನ ಭಯವನ್ನು ಪರಿಹರಿಸಲಿಕ್ಕೆ ಬಂದ ಒಬ್ಬ ಮಂತ್ರವಾದಿಯು ಒಂದು ಹೊಸ ಗೋಡೆಯ ಮೇಲೆ ಮುದ್ದಯ್ಯನ ಚಿತ್ರವನ್ನು ಬರಿಸಿ, ರಾಜನು ಅದನ್ನು ಯಾವಾಗಲೂ ನೋಡಿದರೆ, ರಾಜನಿಗೆ ನಿದ್ರೆ ಬರುವುದೆಂದು ಹೇಳಿದನು. ರಾಜನು ಹಾಗೆಯೇ ಮಾಡಿಸಿ, ಆ ಚಿತ್ರವನ್ನು ನೋಡಿನೋಡಿದಾಗೆಲ್ಲಾ ‘ಮುದ್ದಯ್ಯನು ರಾಜದ್ರೋಹಿ, ಅವನನ್ನು ನಾನೇ ಕೊಲ್ಲಿಸಿದೆನು’ ಎಂದು ಹೇಳುತ್ತಾ ಹೋದ ಹಾಗೆ ಆತನ ಮನಸ್ಸು ಶಾಂತವಾಗುತ್ತಾ ಬಂತು. ಕುಂಟಬಸವನ ದುರಾಲೋಚನೆಯಿಂದ ರಾಜನು ಅನೇಕರನ್ನು ಕೊಲ್ಲಿಸುತ್ತಾ ಬಂದನು. ತನ್ನ ಕ್ರೂರ ಕೃತ್ಯಗಳು ಇಂಗ್ಲೀಷರಿಗೆ ತಿಳಿಯಬಹುದೆಂಬ ಭಯದಿಂದ ಇಂಗ್ಲೀಷರ ಮೇಲೆ ಪುಂಡು ಮಾಡಲಿಕ್ಕೆ ಸಿಕ್ ಜನರ ಸ್ನೇಹವನ್ನು ಸಂಪಾದಿಸಲಿಕ್ಕೆ ಪ್ರಯತ್ನ ಮಾಡಿದನು. ಸಿಕ್‌ರ ಅರಸನಾದ ರಣಜಿತ್ ಸಿಂಗ್ ಇಂಗ್ಲೀಷರಿಗೆ ಶತ್ರುವಾಗಿದ್ದನು. ಕೊಡಗುರಾಜನು ಅವನಲ್ಲಿಗೆ ರಾಯಭಾರಿಗಳನ್ನು ಕಳುಹಿಸಿದನು. ದೊಡ್ಡ ವೀರರಾಜೇಂದ್ರನ ಮಕ್ಕಳು ದೇವಮ್ಮಾಜಿಯೂ ಮಹಾದೇವಮ್ಮಾಜಿಯೂ ಅಪ್ಪುಕಳ[ಅಪ್ಪಂಗಳ]ದಲ್ಲಿದ್ದರು. ಅವರನ್ನು ಮಡಿಕೇರಿಗೆ ಕರೆತರಿಸಿ ಕೈದಿಯಲ್ಲಿಟ್ಟು, ಅವರು ನಗನಾಣ್ಯಗಳನ್ನು ಎಲ್ಲಿ ಹೂಳಿಟ್ಟಿದ್ದಾರೆಂಬ ಸಂಗತಿಯನ್ನು ತಿಳಿದು, ಕಡೆಗೆ ಅವರನ್ನು ದಿವಾನ ಕುಂಟಬಸವನಿಂದ ಬಹಳ ಕ್ರೂರತರದಲ್ಲಿ ಹಿಂಸಿಸಿ ಕೊಲ್ಲಿಸಿದನು. ಅನಂತರ ದೊಡ್ಡ ವೀರರಾಜೇಂದ್ರನ ಮೊಮ್ಮಕ್ಕಳೆಲ್ಲರನ್ನು ನಾಲ್ಕುನಾಡು ಅರಮನೆಯಲ್ಲಿ ಸೆರೆಹಿಡಿಸಿ, ಅವನಿಂದಲೇ ಕೊಲ್ಲಿಸಿದನು. ಈ ವರ್ತಮಾನವು ರೆಸಿಡೆಂಟ್ ಸಾಹೇಬರವರಿಗೆ ಮುಟ್ಟಲು, ಇದನ್ನು ವಿಚಾರಿಸಲಿಕ್ಕೆ ಒಬ್ಬ ಇಂಗ್ಲೀಷ ಸರದಾರನನ್ನು ಕೊಡಗಿಗೆ ಕಳುಹಿಸೋಣಾಯಿತು. ರಾಜನು ಆ ಸರದಾರನ ಕಡೆಯವರನ್ನೆಲ್ಲಾ ಸೆರೆಹಿಡಿದು ಅವನೊಂದಿಗೆ ಮಾತನಾಡಲಿಕ್ಕೆ ಒಪ್ಪದೆ, ಇಂಗ್ಲೀಷರೊಡನೆ ಯುದ್ಧ ಮಾಡುವೆನೆಂದು ಹೇಳಿ ಕಳುಹಿಸಿದನು.

ಕಂಪೆನಿ ಸರಕಾರದವರು ಯುದ್ಧಕ್ಕೆ ಪ್ರಯತ್ನಿಸಿ ಸನ್ ೧೮೩೪ರಲ್ಲಿ ನಾಲ್ಕು ಕಡೆಯಿಂದಲೂ ಕೊಡಗಿಗೆ ದಂಡನ್ನು ಕಳುಹಿಸಿದರು. ಸದರಿ ಸನ್ ಏಪ್ರಿಲ್ ೬ ರಲ್ಲಿ ಕರ್ನಲ್ ಫ್ರೇಜರ್ ಸಾಹೇಬರು ದಂಡನ್ನು ತೆಗೆದುಕೊಂಡು ಕುಶಾಲ್ ನಗರದ ಕಡೆಯಿಂದ ಬಂದು, ಮಡಿಕೇರಿಯನ್ನು ಹಿಡಿದುಕೊಂಡರು ಮತ್ತು ‘ಕೊಡಗನ್ನು ಇಂಗ್ಲೀಷರು ಹಿಡುಕೊಂಡರು, ದಿವಾನರೂ ಸುಬೇದಾರರೂ ಮುಂತಾದ ಎಲ್ಲಾ ಉದ್ಯೋಗಸ್ಥರು ಇಂಗ್ಲೀಷರ ಕೈಕೆಳಗೆ ಮೊದಲಿನಂತೆಯೇ ತಮ್ಮ ತಮ್ಮ ಕೆಲಸಗಳನ್ನು ನಡಿಸಿಕೊಂಡು ಬರಬಹುದು. ಇನ್ನು ಮುಂದೆ ರಾಜ್ಯಭಾರದ ವಿಷಯದಲ್ಲಿ ಯಾವ ಯಾವ ಏರ್ಪಾಟುಗಳನ್ನು ಮಾಡಬೇಕೋ ಆ ಏರ್ಪಾಟುಗಳನ್ನೆಲ್ಲಾ ಮಾಡುತ್ತೇವೆ’ ಎಂದು ಸಾರಿಸಿದರು. ಆಗ ವೀರರಾಜನು ನಾಲ್ಕುನಾಡು ಅರಮನೆಯಲ್ಲಿದ್ದನು. ಮಡಿಕೇರಿ ಇಂಗ್ಲೀಷರ ಕೈವಶವಾಯಿತು. ತಾನು ಇಂಗ್ಲೀಷರ ಮರೆ ಹೊಕ್ಕರೆ ತನ್ನ ಪ್ರಾಣ ಉಳಿಯುವುದು. ತನ್ನನ್ನು ಮರ್ಯಾದೆಯಿಂದ ನಡಿಸುವವರು ಎಂಬ ಸಮಾಚಾರವನ್ನು ಕೇಳಿ ಮಡಿಕೇರಿಗೆ ಬಂದನು ಮತ್ತು ಮಡಿಕೇರಿಗೆ ಬರುವ ಮೊದಲೇ ತಾನು ನಡಿಸಿದ ಕ್ರೂರಕೃತ್ಯಗಳನ್ನೆಲ್ಲಾ ದಿವಾನ ಕುಂಟಬಸವನು ಇಂಗ್ಲೀಷರಿಗೆ ಏನಾದರೂ ಹೇಳುವನೋ ಎಂಬ ಅನುಮಾನದಿಂದ ಅವನನ್ನು ಒಂದು ಕಾಡಿನಲ್ಲಿ ಕೊಲ್ಲಿಸಿದನು.

ರಾಜನು ಬಂದ ಮೇಲೆ ಕರ್ನೆಲ್ ಫ್ರೇಜರ್ ಸಾಹೇಬರು ಮಡಿಕೇರಿಯ ಅರಮನೆಯಲ್ಲಿ[1] ದಿವಾನರೂ ಇತರ ಉದ್ಯೋಗಸ್ಥರೂ ‘ತಕ್ಕ’ ರೂ ಮೊದಲಾದ ದೊಡ್ಡ ಮನುಷ್ಯರನ್ನು ಕೂಡಿಸಿ ಸಭೆ ಮಾಡಿ, ಇನ್ನು ಮುಂದಕ್ಕೆ ರಾಜ್ಯಭಾರದ ವಿಷಯದಲ್ಲಿ ಯಾವ ಏರ್ಪಾಟು ಮಾಡಬೇಕೆಂದು ಕೇಳಿದಾಗ, ಕೊಡಗನ್ನು ಇಂಗ್ಲೀಷ್ ಸರಕಾರಕ್ಕೆ ಸೇರಿಸಿ, ಇಂಗ್ಲೀಷರೇ ಆಳಬೇಕೆಂದು ಎಲ್ಲರೂ ಹೇಳಿದರು. ಆಗ ಕರ್ನೆಲ್ ಫ್ರೇಜರ್ ಸಾಹೇಬರು ಸಾರಿಸಿದ್ದೇನೆಂದರೆ – ‘ಕೊಡಗನ್ನು ಇಂಗ್ಲೀಷ್ ಸರಕಾರಕ್ಕೆ ಸೇರಿಸಬೇಕೆಂದು ಕೊಡಗು ದೇಶದ ನಿವಾಸಿಗಳೆಲ್ಲರೂ ಐಕಮತ್ಯವಾಗಿ ಕೇಳಿಕೊಳ್ಳುವುದರಿಂದ ಇದುವರೆಗೆ ವೀರರಾಜನಿಂದ ಆಳಲ್ಪಟ್ಟ ಈ ದೇಶವನ್ನು ಬ್ರಿಟಿಷ್ ಸರಕಾರಕ್ಕೆ ಸೇರಿಸುವಂತೆ ಗವರ್ನರ್ ಜನರಲ್ ಸಾಹೇಬರವರು ಹುಕುಮ್ ಮಾಡಿರುತ್ತಾರೆ. ನಾವು ಈ ದೇಶದ ನಿವಾಸಿಗಳಿಗೆ ತಿರಿಗಿ ರಾಜನ ಆಳಿಕೆಗೆ ಬಿಟ್ಟು ಕೊಡುವುದಿಲ್ಲ. ಅವರು ತಮ್ಮ ದೇಶ ಸಂಬಂಧವಾದ ಮತ್ತು ಮತ ಸಂಬಂಧವಾದ ಕಟ್ಟುಕಟ್ಟಳೆಗಳನ್ನು ಪೂರ್ವದಂತೆ ನಡಿಸಿಕೊಂಡು ಬರಬಹುದು. ಪ್ರಜೆಗಳ ಸುಖ ಸಂಪತ್ತುಗಳನ್ನು ಹೆಚ್ಚಿಸುವುದೇ ಬ್ರಿಟಿಷ್ ಸರಕಾರದ ಮುಖ್ಯವಾದ ಉದ್ದೇಶವಾಗಿದೆ’ ಕೊಡಗಿನ ಜನರು ಫ್ರೇಜರ್ ಸಾಹೇಬರ ವಿಷಯದಲ್ಲಿ ಬಹಳ ಸಂತೋಷ ಪಟ್ಟಿದ್ದರಿಂದ ಅವರ ಜ್ಞಾಪಕಾರ್ಥವಾಗಿ ಕುಶಾಲ್‌ನಗರವನ್ನು ‘ಫ್ರೇಜರ್ ಪೇಟೆ’ ಎಂಬ ಹೆಸರಿನಿಂದ ಕರೆಯುತ್ತಾರೆ.

ರಾಜನು ಕೊಡಗಿನಿಂದ ಬೆಂಗಳೂರಿಗೆ ಹೋಗಿ, ಅಲ್ಲಿಂದ ಕಾಶಿಗೆ ಹೋಗಿ, ಅಲ್ಲಿ ಕೆಲವು ವರ್ಷ ಇದ್ದು, ಅನಂತರ ೧೮೫೨ನೆಯ ವರ್ಷದಲ್ಲಿ ಇಂಗ್ಲಂಡಿಗೆ ಹೋದನು. ಅಲ್ಲಿ ಆತನಿಗೆ ದೇವಾಜ್ಞೆ ಆಯಿತು.

ಕೊಡಗನ್ನು ಇಂಗ್ಲೀಷ್ ಸರಕಾರಕ್ಕೆ ಸೇರಿಸಿದುದು ಕೊಡಗು ದೇಶದ ನಿವಾಸಿಗಳ ಇಷ್ಟವಿದ್ದಂತೆಯೇ ಆಯಿತು. ಅಂದಿನಿಂದ ಕೊಡಗಿನಲ್ಲಿ ಯಾವುದೊಂದು ಯುದ್ಧವೂ ಆಗಲಿಲ್ಲ ಸನ್ ೧೮೩೭ನೆಯ ಇಸವಿಯಲ್ಲಿ ಮಾತ್ರ ಅಮರಸುಳ್ಯದಲ್ಲಿ ಒಂದು ಕಾಟಕಾಯಿ ನಡೆಯಿತು. ಆದರೆ ಕೊಡಗು ದಿವಾನರು ಅದನ್ನು ಸುಲಭದಲ್ಲಿ ಅಣಗಿಸಿಬಿಟ್ಟರು.

೧೮೫೭ನೆಯ ವರ್ಷದಲ್ಲಿ ಹಿಂದುಸ್ಥಾನದಲ್ಲಿ ದೊಡ್ಡ ದಂಗೆಯಾದಾಗ ಇಲ್ಲಿಯ ಜನರು ಇಂಗ್ಲೀಷ್ ಸರಕಾರಕ್ಕೆ ಬಹಳ ವಿಧೇಯರಾಗಿ ನಡೆದುಕೊಂಡದ್ದರಿಂದ ೧೮೬೧ನೆಯ ಇಸವಿ ಫೆಬ್ರುವರಿ ಮಾಹೆ ೨೬ನೆಯ ತಾರೀಕಿನಲ್ಲಿ ಕೊಟ್ಟ ಇಸ್ತಿಹಾರ್ ಏನೆಂದರೆ.

‘ಕೊಡಗು ವೀರರ ಚಿಕ್ಕ ಜನಾಂಗವು ತೋರಿಸಿದ ಘನತೆ ರಾಜಭಕ್ತಿ ಪರಾಕ್ರಮಗಳಿಗಾಗಿಯೂ, ಅವರು ಮೊದಲು ಬ್ರಿಟಿಷ್ ಸರಕಾರಕ್ಕೆ ಮಾಡಿದ ಸಹಾಯಕ್ಕಾಗಿಯೂ, ಅಲ್ಲಿನ ಶೌರ್ಯವುಳ್ಳ ನಿವಾಸಿಗಳಿಗೆ ‘ಆರ್ಮ್ಸ್ ಆಕ್ಟು’ ಎಂಬ ಕಾನೂನು ಲಗಾವಾಗುವುದಿಲ್ಲ ಎಂದು ಫಾಯಷ್ ಮಾಡಲಿಕ್ಕೆ ಸಂತೋಷ ಪಡುತ್ತೇವೆ’.

ಈ ಇಸ್ತಿಹಾರ್ ಪ್ರಕಾರ ಕೊಡಗಿನಲ್ಲಿ ಜಮ್ಮದ ಭೂಮಿಯುಳ್ಳವರು ಸರಕಾರದ ಲೈಸನ್ಸ್ ವಿನಹ ಕತ್ತಿ ಕೋವಿಗಳನ್ನು ಇಟ್ಟುಕೊಳ್ಳಬಹುದು.

 


[1] ಈ ಅರಮನೆಯು ಈಗ ಹೈಸ್ಕೂಲ್ ಇದ್ದಲ್ಲಿ ಇತ್ತು.