ಬ್ರಿಟಿಶ್ ಸರಕಾರದ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾಗಲೆ ಇ. ಮಾರ್ಸ್‌ಡೆನ್ ಅವರು ‘ಕೊಡಗು ವಿವರಣೆ’ ಎಂಬ ಕೃತಿಯನ್ನು ಹೊರತಂದರು. ೧೯೦೩ರಲ್ಲಿ ಈ ಕಋತಿಯ ಎರಡನೆಯ ಮುದ್ರಣವು ಹಾಗೂ ೧೯೧೧ರಲ್ಲಿ ಇದರ ಮೂರನೆಯ ಮುದ್ರಣವು ಹೊರಬಂದಿತು. ಮೊದಲನೆಯ ಮುದ್ರಣದ ಬಗ್ಗೆ ಖಚಿತವಾದ ವಿವರಗಳಿಲ್ಲದಿದ್ದರೂ, ಕೃತಿಯೊಳಗೆ ಚರ್ಚಿಸಲಾದ ವಿಷಯಗಳನ್ನು ಅವಲೋಕಿಸಿದರೆ ಬಹುಶಃ ಈ ಕೃತಿಯ ಮೊದಲನೆಯ ಮುದ್ರಣವು ೧೯ನೆಯ ಶತಮಾನದ ಕೊನೆಯ ದಶಕದಲ್ಲಾಗಿರಬಹುದು ಎಂದು ಊಹಿಸಬಹುದು. ಕೊಡಗಿನ ಕುರಿತಂತೆ ೧೮೮೦ರ ದಶಕಗಳವರೆಗೆ ಬಂದ ಪುಸ್ತಕಗಳಲ್ಲಿ ಮಾರ್ಸ್‌ಡೆನ್ ಅವರ ಕೃತಿಯ ಬಗ್ಗೆ ಪ್ರಸ್ತಾಪಗಳಿಲ್ಲದಿರುವ ವಿಚಾರವು ನಮ್ಮ ಊಹೆಗೆ ಪುಷ್ಠಿಯನ್ನು ನೀಡುತ್ತದೆ. ಈ ಕೃತಿಯ ಎರಡನೆಯ ಮತ್ತು ಮೂರನೆಯ ಆವೃತ್ತಿಗಳನ್ನು ಮ್ಯಾಕ್ ಮಿಲನ್ ಆಂಡ್ ಕೊ. ಅವರು ಪ್ರಕಟಿಸಿದರು. ಈ ಕೃತಿಯ ಎರಡನೆಯ ಮುದ್ರಣದ ವೇಳೆಯಲ್ಲಿ ಮಾರ್ಸ್‌ಡೆನ್ ಅವರು ಸೆಂಟ್ರಲ್ ಸರ್ಕಲ್ ಮತ್ತು ಕೊಡಗು ಪಾಠಶಾಲೆಗಳಲ್ಲಿ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮಾರ್ಸ್‌ಡೆನ್ ಅವರ ರೀತಿಯಲ್ಲೇ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳಾಗಿದ್ದ ರೆವರೆಂಡ್ ಜಿ. ರಿಕ್ತರ್ ಅಥವಾ ಲೀವೀಸ್ ರೈಸ್ ಇವರು ಇಂಗ್ಲೀಷಿನಲ್ಲಿ ಪ್ರಕಟಿಸಿದ ಕೃತಿಗಳಿಗೆ ಮಾರ್ಸ್‌ಡೆನ್ ಅವರ ಕೃತಿಯನ್ನು ಹೋಲಿಸಿದರೆ ವಿವರಣೆ ಹಾಗೂ ವಿಶ್ಲೇಷಣೆಗೆ ಸಂಬಂಧಿಸಿದಂತೆ ‘ಕೊಡಗು ವಿವರಣೆ’ಯು ಮಹತ್ವದ್ದು ಎಂದೆನ್ನಿಸುವುದಿಲ್ಲ ೧೮೭೧ರಲ್ಲಿ ಹೊರಬಂದ ರಿಕ್ತರ್ ಅವರು ‘ಮ್ಯಾನ್ಯೂಯಲ್ ಆಫ್ ಕೂರ್ಗ್ ಹಾಗೂ ೧೮೭೮ರಲ್ಲಿ ಹೊರಬಂದ ಲೀವೀಸ್ ರೈಸ್ ಅವರ ‘ಮೈಸೂರು ಆಂಡ್ ಕೂರ್ಗ್ ಗೆಜೆಟಿಯರ್’ ಪುಸ್ತಕಗಳಿಂದ ಮಾರ್ಸ್‌ಡೆನ್ ಅವರು ಕೊಡಗಿನ ಭೌಗೋಳಿಕತೆ, ನದಿ, ಉತ್ಪನ್ನಗಳು, ವನ್ಯ ಜೀವಿಗಳು, ರಾಜಕೀಯ ಚರಿತ್ರೆ ಮುಂತಾದವುಗಳ ಬಗ್ಗೆ ವಿವರಣೆಗಳನ್ನು ಪಡೆದಿರುವುದನ್ನು ನಾವು ಗಮನಿಸಬಹುದು. ಆದರೂ, ಕರ್ನಾಟಕದ ಗುರುತುಗಳು ಸ್ಪಷ್ಟಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಮಾರ್ಸ್‌ಡೆನ್ನರ ಈ ಕೃತಿಯನ್ನು ಸಂಶೋಧಕರು ಬೇರೆಯ ಬಗೆಯಲ್ಲಿ ಅರ್ಥ ಮಾಡಿ ಕೊಳ್ಳುವ ಅಗತ್ಯತೆ ಇದೆ. ಇವರು ಜನಸಾಮಾನ್ಯರ ಭಾಷೆಯಾದ ಕನ್ನಡದಲ್ಲಿ ಭೌಗೋಳಿಕತೆ, ರಾಜಕೀಯ ಚರಿತ್ರೆ, ಕೃಷಿ ವಿಭಿನ್ನತೆಗಳನ್ನು ಸೇರಿಸಿದಂತೆ ಅನೇಕ ವಿಚಾರಗಳನ್ನು ಮನಮುಟ್ಟುವ ಹಾಗೆ ವಿವರಿಸಿದ್ದಾರೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಇವೆಲ್ಲದಕ್ಕಿಂತ ಹೆಚ್ಚಾಗಿ ಕೊಡಗಿನ ಜಾನಪದ ಹಾಡುಗಳನ್ನು ಕೊಡಗು ಭಾಷೆಯಲ್ಲಿ ಯಥಾವತ್ತಾಗಿ ಸಂಗ್ರಹಿಸಲು ಪ್ರಯತ್ನಿಸಿದ ಬಗೆಗಳಲ್ಲಿ ಮಾರ್ಸ್‌ಡೆನ್ ಅವರ ಪ್ರತಿಭೆ ಎದ್ದು ಕಾಣುವುದು.

*

೧೯೨೪ರಲ್ಲಿ ಪ್ರಕಟವಾದ ನಡಿಕೇರಿಯಂಡ ಚಿಣ್ಣಪ್ಪನವರ ‘ಪಟ್ಟೋಲೆ ಪಳಮೆ’ ಎಂಬ ಕೃತಿಯು ಕನ್ನಡ ಜಾನಪದ ಪರಂಪರೆಯಲ್ಲಿ ಆದ್ಯಕೃತಿಯೆಂದು ಭಾವಿಸಿದ ಹಿನ್ನೆಲೆಯಲ್ಲಿ, ೧೯೧೦ರ ದಶಕದಲ್ಲೇ ಹೊರಬಂದ ಮಾರ್ಸ್‌ಡೆನ್ನರ ಕೃತಿಯನ್ನು ಚರ್ಚಿಸುವುದು ಬಹಳ ಮುಖ್ಯವಾಗಿದೆ. ೧೯೭೪ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ‘ಪಟ್ಟೋಲೆ ಪಳಮೆ’ಯನ್ನು ಮರು ಮುದ್ರಣ ಮಾಡಿದ ಸಂದರ್ಭದಲ್ಲಿ ಜೀ.ಶಂ. ಪರಮಶಿವಯ್ಯನವರು ಮಾಡಿದ ಉಲ್ಲೇಖ ಈ ನಿಟ್ಟಿನಲ್ಲಿ ಗಮನಾರ್ಹವಾದುದು. ಅವರ ಪ್ರಕಾರ –

ಕೃತಿಯನ್ನು (ಪಟ್ಟೋಲೆ ಪಳಮೆ) ಸಮಗ್ರ ಜಾನಪದ ದೃಷ್ಟಿಯ ಹಿನ್ನೆಲೆಯಲ್ಲಿ ನೋಡಿದಾಗ ಭಾರತೀಯ ಭಾಷೆಗಳಾವುದರಲ್ಲಿಯೂ ಅವಧಿಯಲ್ಲಿ ಇಂಥ ಪ್ರಯತ್ನಗಳು ಕಾಣಬರುವುದಿಲ್ಲ ಎಂಬುದು ಗಮನಾರ್ಹಕರ್ನಾಟಕ ಜಾನಪದ ಸಂಗ್ರಹದ ಇತಿಹಾಸವನ್ನು ಬರೆಯುವಾಗ ಸಾಮಾನ್ಯವಾಗಿ ಗೀತ ಸಂಕಲನಗಳ ಸಾಲಿನಲ್ಲಿ ಗರತಿಯ ಹಾಡು’ (೧೯೩೧), ಸಮಗ್ರ ಜಾನಪದ ದೃಷ್ಟಿಯ ಗ್ರಂಥಗಳಲ್ಲಿ ಹುಟ್ಟಿದ ಹಳ್ಳಿ ಹಳ್ಳಿಯ ಹಾಡು’ (೧೯೩೪), ಇವುಗಳನ್ನು ಆದ್ಯ ಕೃತಿಗಳೆಂದು ಹೆಸರಿಸಲಾಗುತ್ತಿತ್ತು. ಕೊಡಗಿನ ಜಾನಪದಕ್ಕೆ ಸಂಬಂಧಿಸಿದಂತೆ ೧೯೨೪ರ ವೇಳೆಗೆ ಪ್ರಕಟವಾಗಿದ್ದ ಪಟ್ಟೋಲೆ ಪಳಮೆಸಂಶೋಧಕರ ಆಸಕ್ತಿಯನ್ನು ಇತ್ತೀಚೆಗೆ ಸೆಳೆದಿದೆ. (ಪಟ್ಟೋಲೆ ಪಳಮೆ, ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ, ೧೯೭೪, ಪುಟ ).

ಆದರೆ ಜೀ.ಶಂ.ಪ. ಅವರ ಈ ಮೇಲಿನ ಅಭಿಪ್ರಾಯಗಳನ್ನು ಒಪ್ಪುವುದು ಕಷ್ಟ. ೧೮೬೯ರಲ್ಲಿ ಗ್ರೆಯಿಟರ್ ಎಂಬ ಬ್ರಿಟಿಶ್ ಆಡಳಿತಗಾರನ ‘ಕೊಡಗು ದೇಶದ ವರ್ಣನೆ’ ಎನ್ನುವ ಕನ್ನಡ ಪುಸ್ತಕದಲ್ಲಿ ‘ರಾಣಿ ಪಾಟ್’ ಮತ್ತು ‘ಪುತ್ತರಿ ಪಾಟ್’ ಎಂಬ ಕೊಡಗು ಭಾಷೆಯ ಗೀತೆಗಳಿವೆ. ‘ಪಾಟ್’ ಎಂದರೆ ‘ಹಾಡು’ ಎಂದರ್ಥ. ೧೮೫೮ರಲ್ಲಿ ಭಾರತದ ರಾಜ್ಯಭಾರವನ್ನು ವಹಿಸಿಕೊಂಡಿದ್ದ ವಿಕ್ಟೋರಿಯಾ ರಾಣಿಯನ್ನು ಕೊಂಡಾಡುವುದನ್ನು ‘ರಾಣಿರ ಪಾಟ್’ ನಲ್ಲಿ ನೋಡಬಹುದು. ಮೇಲ್ನೋಟಕ್ಕೆ ಇಂದು ವಿಕ್ಟೋರಿಯಾಳಿಗೆ ಸಂಬಂಧಿಸಿದ್ದು ಎಂಬಂತೆ ಗೋಚರಿಸಿದರೂ ಭಾಷೆಯ ದೃಷ್ಟಿಯಿಂದ ಈ ಕೃತಿ ಮಹತ್ವದ್ದಾಗುತ್ತದೆ. ಕೊಯ್ಯಲು ಸಮಯದಲ್ಲಿ ಕೊಡಗಿನ ರೈತರು ಹಾಡುವ ‘ಹುತ್ತರಿ ಹಾಡು’ ನಿಜವಾದ ಅರ್ಥದಲ್ಲಿ ನಾಡಗೀತೆಯೇ ಆಗಿದೆ. ೧೮೭೨ರಲ್ಲಿ ‘ಇಂಡಿಯನ್ ಆಂಟಿಕ್ವೆವರಿ’ಯಲ್ಲಿ ಗೋವರ್ ಎಂಬ ವಿದ್ವಾಂಸರು ಕನ್ನಡ-ಬಡಗ-ಕೊಡಗು ಭಾಷೆಗಳಲ್ಲಿ ಆಯಾಯ ಭಾಷೆಗಳಿಗೆ ಸಂಬಂಧಿಸಿದ ಜನಪದ ಗೀತೆಗಳನ್ನು ಸಂಗ್ರಹಿಸಿದರು. ಈ ಎಲ್ಲಾ ಸಂಗ್ರಹಗಳ ಹಿನ್ನೆಲೆಯಲ್ಲಿ ನಾವು ಮಾರ್ಸ್‌ಡೆನ್ನರ ಜನಪದ ಗೀತೆಗಳ ಸಂಗ್ರಹಗಳನ್ನು ಅಧ್ಯಯನ ಮಾಡಬೇಕಾಗಿದೆ. ಇದರೊಂದಿಗೆ ಅವರ ಗದ್ಯಭಾಗಗಳನ್ನು ವಿಮರ್ಶಿಸುವ ಅಗತ್ಯವಿದೆ.

*

ಭೌಗೋಳಿಕತೆ, ನದಿ, ಉತ್ಪನ್ನ, ಮರಗಳು, ಕಾಡುಮೃಗಗಳು ಮುಂತಾದವುಗಳ ಬಗ್ಗೆ ಮಾರ್ಸ್‌ಡೆನ್ನರು ಕನ್ನಡದಲ್ಲಿ ೧೯ನೆಯ ಶತಮಾನದ ಅಂತ್ಯದಲ್ಲೇ ವಿವರಿಸಲು ಯತ್ನಿಸಿರುವುದು ಚರಿತ್ರೆಯ ದೃಷ್ಟಿಯಿಂದ ಮುಖ್ಯವಾದ ಘಟ್ಟವಾಗಿದೆ. ಇನ್ನೂ ನಿಖರವಾಗಿ ಹೇಳುವುದಾದರೆ ಮಾರ್ಸ್‌ಡೆನ್ ಅವರು ಕೊಡಗಿನ ಚರಿತ್ರೆಗೆ ಸಂಬಂಧಿಸಿದಂತೆ ಮೊದಲಬಾರಿಗೆ ಈ ರೀತಿಯ ಗಂಭೀರ ಪ್ರಯತ್ನವನ್ನು ಮಾಡಿರುವುದು ಕಂಡು ಬರುತ್ತದೆ. ಇದರೊಂದಿಗೆ ವಾಣಿಜ್ಯ ಬೆಳೆಗಳಾದ ಕಾಫಿ ಅಥವಾ ಯಾಲಕ್ಕಿಯನ್ನು ಬೆಳೆಸುವ ಬಗೆಗಳು, ಅವುಗಳ ಬೀಜ, ಗಿಡ, ವ್ಯಾಪಾರ ವಿನಿಮಯ, ಸಾರಿಗೆ ಇತ್ಯಾದಿ ಅಂಶಗಳ ಬಗ್ಗೆ ಕನ್ನಡದಲ್ಲಿ ವಿಶ್ಲೇಷಿಸಿರುವುದು ಗಮನಾರ್ಹವಾಗಿದೆ. ಅನಕ್ಷರಸ್ಥರೇ ಹೆಚ್ಚಾಗಿದ್ದ ಆ ಕಾಲದಲ್ಲಿ ಇಂಗ್ಲೀಷ್ ಬಲ್ಲವರು ಬೆರಳೆಣಿಕೆಯ ಸಂಖ್ಯೆಯಲ್ಲಿದ್ದರು. ಇವರನ್ನು ಬಿಟ್ಟರೆ ಅಕ್ಷರಾಭ್ಯಾಸವನ್ನು ಪಡೆದವರೆಂದರೆ ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಬಲ್ಲ ವರ್ಗವೇ ಆಗಿತ್ತು. ಹೀಗಾಗಿ ಕನ್ನಡದಲ್ಲೇ ಇಂಥ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಹೇಳಲು ಪ್ರಯತ್ನಿಸಿದ ಯತ್ನವು ಉಲ್ಲೇಖಾರ್ಹವಾಗಿದೆ.

ಮಾರ್ಸ್‌ಡೆನ್ ಅವರು ಜನಪದೀಯ ಅಂಶಗಳನ್ನು ತನ್ನ ಕೃತಿಯಲ್ಲಿ ದಾಖಲಿಸಿರುವುದು ಕನ್ನಡ ಮತ್ತು ಕೊಡವ ಭಾಷೆಯ ಬೆಳೆವಣಿಗೆಗೆ ಬಹಳ ದೊಡ್ಡ ಕೊಡುಗೆ ಎಂದೆನ್ನಬಹುದು. ‘ಹುಲಿ-ಮದುವೆ-ಹಾಡು’ ಅನ್ನು ೧೦೨ ಸಾಲುಗಳಲ್ಲಿ-

ಬಾಳೋ ಕೇಳಿ ಚಂಜಾದಿ
ಪಾಡುವ ಮೋಳಿ ಕೇಳಿ
ಪೊಮ್ಮಾಲೆ ಕೊಡವ್ಲ್
ಕೇಳಿ ಪೋನ್ತನಾಡೋನೊ

ಎಂದಿತ್ಯಾದಿಯಾಗಿ ವಿವರಿಸಿದ್ದನ್ನು ನಾವು ಗಮನಿಸಬಹುದು. ಇಲ್ಲಿ ಬಹಳ ಮುಖ್ಯವಾದ ವಿಚಾರವೇನೆಂದರೆ ಮಾರ್ಸ್‌ಡೆನ್ ಅವರು ಪ್ರಾಣಿಪಕ್ಷಿಗಳನ್ನು ಕೊಡಗು ಭಾಷೆಯಲ್ಲಿ ವಿವರಿಸುವ ಸಂದರ್ಭದಲ್ಲಿ “ಹುಲಿ ಮದುವೆ ಹಾಡನ್ನು” ದಾಖಲಿಸುತ್ತಾರೆಯೇ ವಿನಹ, ಖಂಡಿತವಾಗಿಯೂ ಇತ್ತೀಚಿನ ದಶಕಗಳಲ್ಲಿ ಸಾರ್ವತ್ರಿಕವಾಗಿ ಕಾಣಿಸಿಕೊಂಡ ಹಾಗೆ ‘ಸಂಸ್ಕೃತಿ’ಯನ್ನು ನಿರ್ವಚಿಸುವ ಸಂದರ್ಭದಲ್ಲಲ್ಲ ಎಂಬುದನ್ನು ಗಮನಿಸಬಹುದಾಗಿದೆ. ೨೪೦ ಸಾಲುಗಳಲ್ಲಿ ಕೊಡಗು ಭಾಷೆಯಲ್ಲಿ ದಾಖಲಿಸಿದ ‘ಹುತ್ತರಿ ಹಾಡು’ವಿನಲ್ಲಿ ಕೂಡ ಇದೇ ರೀತಿಯ ಪ್ರಸ್ತಾಪ ಬರುತ್ತದೆ. ಹುತ್ತರಿಯನ್ನು ಕೊಯ್ಯಲಿನ ಸಂದರ್ಭದಲ್ಲಿ ಹಾಡುವುದನ್ನು ಸಹಜವಾಗಿ ಮತ್ತು ಸೌಂದರ್ಯ ಪ್ರಜ್ಞೆಯಿಂದ ಮಾರ್ಸ್‌ಡೆನ್ ದಾಖಲಿಸಿದ್ದಾರೆ. ಈ ಬಗೆಯ ಹಾಡುಗಳನ್ನು ಇತ್ತೀಚಿನ ಕೆಲವು ವಿದ್ವಾಂಸರು ಯಾವುದೋ ಒಂದು ಜಾತಿಯೊಂದಿಗೆ ಸಮೀಕರಿಸುವ ಧಾಟಿಗಿಂತ ಬಹುಬಗೆಯಲ್ಲಿ ಭಿನ್ನತೆಯನ್ನು, ವೈಶಿಷ್ಟ್ಯಗಳನ್ನು ಮಾರ್ಸ್‌ಡೆನ್ ಅವರ ಸಂಗ್ರಹವು ಹೊಂದಿರುವುದನ್ನು ಗುರುತಿಸಬಹುದು. ಕೊಡಗಿನ ನಾಡಿನ ಬಗ್ಗೆ ಮತ್ತು ಅದರ ಭೌಗೋಳಿಕತೆಯನ್ನು ವಿವರಿಸುವ ಸಂದರ್ಭದಲ್ಲಿ “ನಾಡ್‌ಕ್‌ಟ್ಟ್ ಪಾಟ್” ಅನ್ನು ೯೬ ಸಾಲುಗಳಲ್ಲಿ ಮಾರ್ಸ್‌ಡೆನ್ ಅವರು ದಾಖಲಿಸಿದ್ದಾರೆ. ಇವರ ಕೃತಿಯು ಹೊರಬಂದ ಸುಮಾರು ೨೫ ವರ್ಷಗಳ ನಂತರ ನಡಿಕೇರಿಯಂಡ ಚಿಣ್ಣಪ್ಪನವರು ಮ್ಯಾರ್ಸ್‌ಡೆನ್ ಅವರ ಹಾದಿಯನ್ನು ತುಳಿದದ್ದನ್ನು ನೋಡಬಹುದು. ಈ ಹಿನ್ನೆಲೆಯಲ್ಲಿ ಕನ್ನಡ ಕೊಡವ ಭಾಷೆಯಲ್ಲಿ ಜಾನಪದ ಗೀತೆಗಳ ಸಂಗ್ರಹ ಕಾರ್ಯವು ೧೯ನೆಯ ಶತಮಾನದ ಅಂತ್ಯದಲ್ಲೇ ಆರಂಭವಾಗಿದ್ದವು ಎಂದು ನಿಸ್ಸಂದೇಹವಾಗಿ ಹೇಳಬಹುದು. ಮಾರ್ಸ್‌ಡೆನ್ ಅವರ ‘ಕೊಡಗು ವಿವರಣೆ’ ಯು ಚರಿತ್ರೆ, ಸಾಹಿತ್ಯ ಹಾಗೂ ವಿಶೇಷವಾಗಿ ಜಾನಪದ ಅಧ್ಯಯನಕ್ಕೆ ಸಂಬಂಧಿಸಿದಂತೆ ಮೂಲ ಆಕರವಾಗಿ ಕುತೂಹಲ ಹುಟ್ಟಿಸುವ ಕೃತಿಯಾಗಿರುವುದು ಈ ಕಾರಣಕ್ಕಾಗಿಯೇ ಎಂದು ನಾವು ವಿಶ್ಲೇಷಿಸಬಹುದು.

‘ಕೊಡಗು ವಿವರಣೆ’ಯು ಹಲವಾರು ಆಯಾಮಗಳಿಂದ ವಿವಿಧ ಬಗೆಯ ಸಂಶೋಧನೆಗಳಿಗೆ ಮೂಲ ಆಕರವಾಗುವ ಎಲ್ಲಾ ಸಾಧ್ಯತೆಗಳನ್ನು ಪಡೆದಿದ್ದರೂ, ಕೃತಿಯ ಲೇಖಕರಿಗೆ ಆ ಕಾಲದ ಅನೇಕ ಪೂರ್ವಗ್ರಹಗಳನ್ನು ಮೀರಲಾಗಲಿಲ್ಲ ಎಂಬುದು ಕೃತಿಯ ಅನೇಕ ಕಡೆ ಸ್ಪಷ್ಟವಾಗಿದೆ. ಆ ಕಾಲದ ಬಹುತೇಕ ಯುರೋಪಿಯನ್ ವಿದ್ವಾಂಸರು ತೀವ್ರವಾಗಿ ಪ್ರಭಾವಕ್ಕೆ ಒಳಗಾದ ‘ಓರಿಯಂಟಲಿಸ್ಟ್’ ಸಿದ್ಧಾಂತದ ಪ್ರಭಾವವು ಮಾರ್ಸ್‌ಡೆನ್ ಅವರ ಬರಹಗಳಲ್ಲಿ ಕಾಣುತ್ತದೆ. ಹೀಗಾಗಿ ಕೊಡಗು ರಾಜರು ಅವರ ದೃಷ್ಟಿಯಲ್ಲಿ ಕ್ರೂರಿಗಳಾಗಿಯೇ ಚಿತ್ರಿತರಾಗಿದ್ದಾರೆ ಮತ್ತು ಇಂಗ್ಲೀಷ್ ಆಡಳಿತವು ಸಾಮಾನ್ಯ ಜನರಿಗೆ ಒಂದು ವರದಾನ ಎಂಬಂತೆ ವಿವರಿಸಲ್ಪಟ್ಟಿದೆ. ಕೊಡಗಿನ ಬುಡಕಟ್ಟುಗಳಾದ ಎರವರನ್ನು ಮತ್ತು ಕುರುಬರನ್ನು ‘ಕಾಡು ಜನರು’ ಎಂದು ಬರೆದ ಮಾರ್ಸ್‌ಡೆನ್ ಅವರು ಕೊಡಗಿನ ಸಮಾಜವನ್ನು ವಿಶ್ಲೇಷಿಸುತ್ತಾ

ಪೂರ್ವಕಾಲದಲ್ಲಿ ಕೊಡಗಿನಲ್ಲಿ ದೇಶಾಧಿಪತಿಗಳಾಗಿ ತಮ್ಮ ಜಮ್ಮದ ಭೂಮಿಗಳನ್ನು ಸಾಗು ಮಾಡಿ ಅನುಭವಿಸಿಕೊಂಡು ಬಂದ ಕೊಡಗರೂ ಇವರ ಚಾಕರರಾದ ಕೀಳು ಜಾತಿಯವರೂ, ಎರಡು ಬಗೆಯ ಜನರು ಮಾತ್ರ ಇದ್ದರೆಂದು ಹೇಳುತ್ತಾರೆ. ಕಾಲದಲ್ಲಿ ಆಳುಗಳಿಗೆ ಯಾವ ಸ್ವತಂತ್ರವೂ ಇರಲಿಲ್ಲ. ಆದರೆ ಈಗ ಇಂಗ್ಲೀಷರ ರಾಜ್ಯಭಾರದಲ್ಲಿ ಇತರ ಪ್ರಜೆಗಳ ಹಾಗೆಯೇ ಇವರೂ ಸ್ವತಂತ್ರಿಗಳಾಗಿರುತ್ತಾರೆ

ಎಂದು ಬರೆದಿದ್ದಾರೆ. ಇವರ ಈ ವಿಶ್ಲೇಷಣೆಯು ಮೇಲ್ನೋಟಕ್ಕೇ ಪೂರ್ವಗ್ರಹ ಪೀಡಿತವಾದದ್ದು ಮಾತ್ರವಲ್ಲದೆ, ಆಚಾರಿತ್ರಿಕವಾದದ್ದು ಎಂಬುದು ಸಾಬೀತಾಗುತ್ತದೆ. ಇವರು ಕೊಡಗಿನಲ್ಲಿ ಜಮ್ಮ ಭೂಮಿಯನ್ನು ಉಳುಮೆ ಮಾಡುವ ‘ಕೊಡಗರು’ ಮತ್ತು ಅವರು ಚಾಕರಿ ಮಾಡುವ ‘ಕೀಳು ಜಾತಿಯವರು’ ಎಂಬ ಎರಡು ಪಂಗಡಗಳಿದ್ದವು ಎಂದು ಬರೆದಿದ್ದಾರೆ. ಆದರೆ, ವಸ್ತು ಸ್ಥಿತಿಯಲ್ಲಿ ಕೊಡಗು ಭಾಷೆಯನ್ನು ಮಾತನಾಡುವ ಸುಮಾರು ೧೭ ಜಾತಿಗಳು ‘ಕೊಡಗರು’ ಎಂದೆನ್ನಿಸಿಕೊಂಡಿದ್ದರೂ, ಆ ೧೭ ಜಾತಿಗಳ ನಡುವೆಯೇ ಜಾತಿ ಶ್ರೇಣೀಕರಣವಿತ್ತು. ಕೊಡಗು ಭಾಷೆಯನ್ನು ಮಾತಾಡುತ್ತಿದ್ದ ದಲಿತರು ಕೊಡಗು ಭಾಷೆ ಮಾತಾಡುತ್ತಿದ್ದ ಭೂ ಒಡೆಯರಿಗೆ ಬಿಟ್ಟಿ ಚಾಕ್ರಿಯನ್ನು ಮಾಡಬೇಕಾಗಿತ್ತು. ಇದೇ ರೀತಿಯಲ್ಲಿ ಕನ್ನಡ, ಕುಡಿಯ, ಯರವ ಮುಂತಾದ ಭಾಷೆಗಳನ್ನು ಮಾತಾಡುವ ಕೊಡಗಿನ ಜನರು ‘ದುಡಿಯುವ ಜಾತಿಗಳಿಗೆ’ ಸೇರಿದವರಾಗಿದ್ದರು. ಇವರೂ ಕೂಡ ಕೊಡಗು ಭಾಷಿಕರನ್ನೊಳಗೊಂಡಂತೆ ಎಲ್ಲಾ ಭೂ ಒಡೆಯರಿಗೆ ಮುಖ್ಯವಾಗಿ ಕೊಡಗು ಮತ್ತು ಕನ್ನಡ ಭಾಷೆ ಮಾತಾಡುವ ಭೂ ಒಡೆಯರಿಗೆ ‘ಬಿಓ’ ದುಡಿಯಬೇಕಾಗಿತ್ತು. ‘ಜಮ್ಮ’ Sಮಿಯನ್ನು ಹೊಂದಿದ ಪ್ರಬಲ ಜಾತಿಗಳ ಭೂ ಒಡೆಯರು ‘ಅರಮನೆ ಚಾಕ್ರಿ’ ಅಥವಾ ‘ಹಿಟ್ಟಿ ಬಿಟ್ಟ ಚಾಕ್ರಿ’ ಯನ್ನು ರಾಜನಿಗೆ/ಸರಕಾರಕ್ಕೆ ಮಾಡಬೇಕಾಗಿತ್ತು (೧೯೩೦ರವರೆಗೆ ‘ಹಿಟ್ಟಿ ಬಿಟ್ಟಿ ಚಾಕ್ರಿ’ ಪದ್ಧತಿಯಿತ್ತು). ಕೊಡಗಿನಲ್ಲೇ ಅಧಿಕಾರಸ್ಥರಾಗಿಯೇ ಶತಮಾನಗಳಿಂದಲೇ ಇದ್ದ ಲಿಂಗಾಯತ ಜಂಗಮರು, ಬ್ರಾಹ್ಮಣರು ಮೊದಲಾದ ಪಂಗಡಗಳ ಭೂ ಒಡೆಯರು ಜಮ್ಮ ಭೂಮಿ ಒಡೆಯರಷ್ಟೆ ಅಥವಾ ಅವರಿಗಿಂತಲೂ ಪ್ರಬಲರಾಗಿದ್ದದ್ದನ್ನು ಚರಿತ್ರೆಯಲ್ಲಿ ನಾವು ಅವಲೋಕಿಸಬಹುದು. ಹೀಗಿದ್ದರೂ, ಮಾರ್ಸ್‌ಡೆನ್ ಜಮ್ಮ ಭೂಮಿ ಇಲ್ಲದಿರುವವರೆಲ್ಲಾ ‘ಕೀಳುಜಾತಿಯರು’ ಎಂಬ ರೀತಿಯಲ್ಲಿ ವಿಶ್ಲೇಷಿಸಲು ಪ್ರಯತ್ನಿಸಿದ ಬಗೆಗಳು ಅವರ ಬರವಣಿಗೆಯ ಒಂದು ಮಿತಿಯಾಗಿದೆ. ೧೮೫೫ರಲ್ಲಿ ಮೋಗ್ಲಿಂಗ್ ಪ್ರಕಟಿಸಿದ ‘ಕೂರ್ಗ್ ಮೆಮ್ವಾ’ ಅಥವಾ ೧೮೭೧ರಲ್ಲಿ ಪ್ರಕಟವಾದ ರಿಕ್ತರನ ‘ಮ್ಯಾನ್ಯುಯಲ್ ಆಫ್ ಕೂರ್ಗ್’ ಮುಂತಾದ ಆ ಕಾಲದ ಪುಸ್ತಕಗಳು ಕೊಡಗಿನ ಸಮಾಜದ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರುವುದನ್ನು ಮಾರ್ಸ್‌ಡೆನ್ ಅವರು ಸರಿಯಾಗಿ ಗಮನಿಸದೆ ಇದ್ದದ್ದನ್ನು ಅವರ ಬರವಣಿಗೆಗಳಲ್ಲಿ ಗಮನಿಸಬಹುದು. ಈ ಕೃತಿಯನ್ನು ‘ಕೊಡಗು ಪಾಠಶಾಲೆಗಳ ಉಪಯೋಗಕ್ಕಾಗಿ’ ರಚಿಸಿರುವುದರಿಂದ ಬಹಳ ಸಂಕೀರ್ಣವಾದ ವಿಚಾರಗಳ ಚರ್ಚೆಗಳನ್ನು ಕೈಗೆತ್ತಿಕೊಳ್ಳದೆ, ಸಮಾಜ ಮುಂತಾದ ವಿಚಾರಗಳಿಗೆ ಸಂಬಂಧಿಸಿದ ವಿವರಗಳನ್ನು ಸಾಮಾನ್ಯೀಕರಿಸಿದ ಸಾಧ್ಯತೆಗಳನ್ನು ನಾವು ತಳ್ಳಿ ಹಾಕುವಂತಿಲ್ಲ. ಸಮಾಜದ ಬಗೆಗಿನ ಅವರ ವಿವರಣೆಗಳು ಒಂದು ಮಿತಿಯಾದರೂ, ಉಳಿದ ಕಡೆಗಳಲ್ಲಿ ಅವರು ಬಹಳ ಪ್ರಭಾವಶಾಲಿಯಾಗಿ ವಿಚಾರಗಳನ್ನು ಹೊರ ತಂದಿರುವುದು ಈ ಕೃತಿಯ ಮಹತ್ವಕ್ಕೆ ಪೂರಕವಾಗಿದೆ. ಮಾರ್ಸ್‌ಡೆನ್ನರ ಈ ಕೃತಿಯು ಕನ್ನಡ-ಕೊಡಗು ಭಾಷೆಗಳ, ಜಾನಪದ, ಚರಿತ್ರೆ ಮುಂತಾದ ಅಧ್ಯಯನಗಳನ್ನು ಮಾಡಲು ಈ ಎಲ್ಲಾ ಕಾರಣಗಳಿಂದಾಗಿ ಒಂದು ಮೂಲ ಆಕರವಾಗುವ ಅಂಶಗಳನ್ನು ಹೊಂದಿದೆ. ಹಾಗೆಯೇ ಕರ್ನಾಟಕದ ಚರಿತ್ರೆ ಬರವಣಿಗೆಯ ದೃಷ್ಟಿಯಿಂದಲೂ ಇಂಥ ಕೃತಿಗಳ ಮರುಮುದ್ರಣವು ಸಮಯಯೋಚಿತವಾಗಿದೆ.

ವಿಜಯ್ ಪೂಣಚ್ಚತಂಬಂಡ

 

—-
ಎರಡನೆಯ ಮುದ್ರಣದಲ್ಲಿ ಹೊರಬಂದ ‘ಕೊಡಗು ವಿವರಣೆಯು’ ಪುಟಗಳು ಪೂರ್ಣ ಪ್ರಮಾಣದಲ್ಲಿ ನಮ್ಮಲ್ಲಿ ಇಲ್ಲದಿರುವುದರಿಂದಾಗಿ, ಮೂರನೆಯ ಮುದ್ರಣದಲ್ಲಿ ಹೊರಬಂದ ಪುಟಗಳನ್ನು ಆ ಭಾಗಗಳ ಮುಂದುವರಿಕೆಗಾಗಿ ಪ್ರಕಟಿಸಲಾಗಿದೆ. ಎರಡನೆಯ ಮುದ್ರಣದಿಂದ ಹೊರಬಂ ಪುಟಗಳು ಪುಟ ಸಂಖ್ಯೆ ೫೬ಕ್ಕೆ ಕೊನೆಗೊಳ್ಳುತ್ತವೆ. ಎರಡನೆಯ ಮತ್ತು ಮೂರನೆಯ ಮುದ್ರಣದಲ್ಲಿ ಹೊರಬಂದ ‘ಕೊಡಗು ವಿವರಣೆ’ ಕೃತಿಗಳ ನಡುವೆ ವಿಶೇಷವಾದ ವ್ಯತ್ಯಾಸಗಳಿಲ್ಲದಿರುವ ಹಿನ್ನೆಲೆಯಲ್ಲಿ ಪುಟ ಸಂಖ್ಯೆ ೫೬ರ ಮುಂದುವರಿದ ಭಾಗವನ್ನು ಮೂರನೆಯ ಮುದ್ರಣದಿಂದ ಪಡೆದುಕೊಳ್ಳಲಾಗಿದೆ. ಈ ಕೃತಿಯ ಅನೇಕ ಕಡೆಗಳಲ್ಲಿ ಸ್ಕ್ವೇರ್ ಬ್ರಾಕೆಟ್‌ಗಳ ಒಳಗೆ ಇತ್ತೀಚಿಗೆ ಚಾಲ್ತಿಯಲ್ಲಿರುವ ಕನ್ನಡ ಪದಗಳನ್ನು ಕೊಡಲಾಗಿದೆ. ಓದುಗರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಹೀಗೆ ಮಾಡಲಾಗಿದೆಯೆಂದು ತಮ್ಮ ಗಮನಕ್ಕೆ ತರುತ್ತಿದ್ದೇನೆ. ಬಹುತೇಕ ಕಡೆಗಳಲ್ಲಿ ನೂರು ವರ್ಷಗಳ ಹಿಂದೆ ಚಾಲ್ತಿಯಲ್ಲಿದ್ದ ಭಾಷೆಯನ್ನೇ ಉಳಿಸಿಕೊಳ್ಳಲಾಗಿದೆ.