ಅಧರದಿ ನಸುನಗೆ, ಕರದಲಿ ಕೊಳಲು,
ತನುಕಾಂತಿಗೆ ಜಗವಚ್ಚರಿಗೊಳಲು
ಬರುವೀ ಶ್ಯಾಮನ ಬಣ್ಣಕೆ ನಾಚಿ
ನವ ನೀರದವೇ ಕರಗುತಿದೆ !
ಮಯ್ಯ ಮುಚ್ಚಿರುವ ಪೀತಾಂಬರವು
ಮುಗಿಲೊಳು ಮಿರುಗುವ ಮಿಂಚಿಗು ಮಿಗಿಲು,
ಹೃದಯ ಸರೋಜದ ಶ್ರೀವನಮಾಲೆ
ಚರಣವ ಚುಂಬಿಸಿ ತೂಗುತಿದೆ !
ಅದೊ ನೋಡಾ ಪ್ರಭು ನಿಂತಿಹನಲ್ಲಿ
ಯಮುನಾ ತೀರದಿ ತಿಂಗಳ ಚೆಲ್ಲಿ !
ಕೊಳಲನ್ನೂದಲು ನಂದಕುಲೇಂದು
ಜಗಜಗವೇ ಮರುಳಾಗುತಿದೆ !
ಮನೆ ಮನೆಯೊಳಗಿನ ಗೋಪೀ ಜನಮನ
ಮನೆಯ ತೊರೆವವೊಲು ಈ ಶ್ರೀಕೃಷ್ಣನ
ಕೊಳಲಿನ ಇನಿದನಿ ಕರೆಯುತಿದೆ !

ಇದೊ ನನ್ನೆದೆಗುಡಿಯೊಳಗೂ ಬಂದನು,
ಪ್ರಾಣ-ಬುದ್ಧಿ-ಮನವೆಲ್ಲವ ಕದ್ದನು
ಕೊಳಲಿಂಚರವನು ತುಂಬಿದನು !
ನಾನೀ ವ್ಯಥೆಯನು ನಿನಗೆಂತೊರೆಯಲಿ ?
ಓವೋ ಪ್ರಿಯಸಖಿ ಯಮುನಾ ತಟದಲಿ
ಕೊಡವನು ತುಂಬಲು ನೀನೂ ಬಂದರೆ
ನಿನಗೀ ವ್ಯಥೆಯರಿವಾಗುವುದು !