ಬಳೆಹಾಕುವ ಕ್ರಮ : ಚಪ್ಪರದ ದಿನ ಸಂಜೆ ಸ್ನಾನಮಾಡಿ ವಧು ಸೀರೆ ಧರಿಸುವಳು. ಮನೆ ಕೋಣೆ ಒಳಗೆ ಚಾಪೆ ಹಾಕಿ ಒಂದು ಕುಕ್ಕೆಯಲ್ಲಿ ಬಾಳೆಹಣ್ಣು ಮತ್ತೊಂದರಲ್ಲಿ ಅಕ್ಕಿ, ಎಲೆ, ಅಡಿಕೆ ಕುಂಕುಮ ಇನ್ನೂ ಮುಂತಾದವುಗಳನ್ನು ಇಡುವರು. ವಧು ಬಳೆ ತೊಟ್ಟುಕೊಳ್ಳುವ ಸಂದರ್ಭದಲ್ಲಿ ಭೋಜಕಾರಿಯು ಪಕ್ಕದಲ್ಲಿ ಆಸೀನಳಾಗುವಳು. ವಧು ಒಂದು ಜೊತೆ ಬಳೆಗಳನ್ನು ತೊಟ್ಟ ನಂತರ ಉಳಿದ ಬಳೆಗಳನ್ನು ಮುಟ್ಟಿ ನಮಸ್ಕರಿಸಬೇಕು. ಅನಂತರ ಇಬ್ಬರು, ಅಥವಾ ಮೂವರು ಅಥವಾ ಐವರು ಮುತ್ತೈದೆಯರು ಬಳೆ ತೊಡಿಸಿಕೊಳ್ಳುವರು. ವಧು ಕುಳಿತಿರುವ ಚಾಪೆ ಹಾಗೂ ಹಣವನ್ನು ಬಲೆ ತೊಡುವವನಿಗೆ ಕೊಡುವ ಪದ್ಧತಿ ಉಂಟು.

ಅಲಂಕಾರ : ವಧು-ವರರು ಸ್ನಾನ ಮುಗಿಸಿದ ನಂತರ ಶೃಂಗಾರಕ್ಕೆ ಅಣಿಯಾಗುವರು. ಇವರಿಬ್ಬರ ಜೊತೆಗೆ ಭೋಜಕಾರ ಹಾಗೂ ಭೋಹಕಾರಿ ಜೊತೆಗೆ ಕೆಲವರು ಸೇರಬಹುದು. ವರನು ಬಿಳಿ ಕುಪ್ಪಸ, ಸೊಂಟಕ್ಕೆ ದಟ್ಟಿ, ತಲೆಗೆ ‘ಪಾನಿಮಂಡೆತುಣಿ’ ಸೊಂಟಕ್ಕೆ ಪೀಚೆ ಕತ್ತಿ, ತೊಡಂಗ್, ಒಡಿಕತ್ತಿ, ಕೊರಳಿಗೆ ಚಿನ್ನದ ಸರ ಹಾಗೂ ಕೈಗೆ ಚಿನ್ನದ ಬಳೆ ಹವಳದ ಮಾಲೆ, ಕೈ ಬೆರಳಿಗೆ ಉಂಗುರ ಧರಿಸುವರು.

ವಧುವಿಗೆ ಕೆಂಪು ಸೀರೆ, ಮೊಳಕೈವರೆಗೆ ರವಿಕೆ ತೊಡಿಸುವರು. ಕೊರಳಿಗೆ ಬೆಲೆಬಾಳುವ ಕರಿಮಣಸರ ಪತ್ತಾಕ್, ಕಿವಿಯೋಲೆ, ಜಡೆಬಿಲ್ಲೆ, ಕುತ್ತಿಗೆಗೆ ಕೊಕ್ಕೆತಲಿ, ಕೈಗಳಿಗೆ ಗಾಜಿನ ಬಳೆಗಳು, ಹಾಗೂ ಕಡಗ ತೊಡಿಸುವರು, ಕಾಲುಗಳಿಗೆ ಕಾಲುಂಗರ, ಸರ, ಕಡಗ ಧರಿಸುವರು. ‘ಪತ್ತಾಕ್’ ಶ್ರೇಷ್ಠವಾಗಿದ್ದು, ವಧುವಿನ ತಾಯಿಯೇ ಹಾಕಬೇಕು. ಹೆಣ್ಣಿಗೆ ಕೆಂಪು ಬಣ್ಣದ ರೇಷ್ಮೆ ಮುಸಕನ್ನು ಹಾಕಲಾಗುತ್ತದೆ. ಪ್ರಾದೇಶಿಕವಾಗಿ ಭಿನ್ನತೆ ಇರಬಹುದಾಗಿದೆ. ಈ ಮೇಲೆ ಹೇಳಲಾಗಿರುವ ಎಲ್ಲವು ಮುಗಿದ ಮೇಲೆ ವಧುವರರಿಬ್ಬರೂ ವಿಭೂತಿ ಧರಿಸಿ ಅನಂತರ ವೀಳ್ಳೆದೆಲೆ ಹಾಕಿಕೊಳ್ಳುವರು ಈ ಶೃಂಗಾರ ಪದ್ಧತಿಯು ಸ್ನಾನದ ಮನೆಯಲ್ಲೇ ಆಗುತ್ತದೆ. ವಾದ್ಯ ಬಾರಿಸುವವರು ಕೂಡ ಸ್ನಾನದ ಮನೆಯಿಂದಲೇ ವಾದ್ಯ ಘೋಷಣೆ ಮಾಡುತ್ತಾ ಮದುವೆಯ ಮಂಟಪದ ಹತ್ತಿರ ಬರುವರು. ಅವರ ಹಿಂದೆ ವರನಿದ್ದು ಜೊತೆಯಲ್ಲಿ ಭೋಜ ಕಾರನಿರುತ್ತಾನೆ. ಕೈಯಲ್ಲಿ ಗೆಜ್ಜೆ ಕೋಲು ಊರಿಕೊಂಡು ಬರುವನು. ಇವನು ವರನಿಗೆ ಬಿಳಿ ಛತ್ರಿಯನ್ನು ಹಿಡಿದಿರಬೇಕು, ವರನ ಹಾಗೆ ವಧು ಪಕ್ಕದಲ್ಲಿ ಭೋಜಕರಿಯು ಜೊತೆಯಲ್ಲಿ ಬರುವಳು. ಮಡಿವಾಳ ಸ್ನಾನದ ಕೊಠಡಿಯಿಂದ ಮದುವೆ ಮಂಟಪದವರೆಗೆ ಶುಚಿಯಾದ ಬಟ್ಟೆಯನ್ನು ನೆಲಕ್ಕೆ ಹಾಸಿರುತ್ತಾನೆ. ವಧು ವರರಿಬ್ಬರು ಅದರ ಮೇಲೆ ನಡೆದುಕೊಂಡು ಬರುವರು, ಇದೇ ವೇಳೆಯಲ್ಲಿ ಹಿರಿಯರು ದುಡಿ ಹಿಡಿದು ಬಾರಿಸುತ್ತಾ ಹಾಡುತ್ತಿರುತ್ತಾರೆ. ಈ ಹಾಡನ್ನು ‘ಮಂಗಲಬಟ್ಟೆಪಾಟ್’ ಎಂದು ಕರೆಯುವರು.

ಧಾರೆ : ‘ಮಂಗಲಬಟ್ಟೆಪಾಟ್’ ಅನ್ನು ನಾಲ್ಕು ಜನ ದುಡಿ ಹಿಡಿದುಕೊಂಡು ಹಾಡುತ್ತಾ ಮದುವೆ ಮಂಟಪಕ್ಕೆ ವಧುವರರನ್ನು ಕರೆತರುತ್ತಾರೆ. ಧಾರೆಗೆ ಸಿದ್ಧಪಡಿಸಿದ ಸ್ಥಳದಲ್ಲಿ ಉತ್ತರ ದಕ್ಷಿಣಕ್ಕೆ ಅಭಿಮುಖವಾಗಿ ಎರಡು ಚಾಪೆ ಹಾಸಿ ಅದರ ಮೇಲೆ ಶಭ್ರವಾದ ವಸ್ತ್ರವನ್ನು ಹಾಸುವರು. ಇದರ ಮಧ್ಯ ಮೂರು ಕಾಲಿನ ಮಣೆ ಇಟ್ಟು ಒಂದೊಂದು ತಟ್ಟೆಯಲ್ಲಿ ಚಿಕ್ಕ ರೇಷ್ಮೆಚೀಲ, ಅಕ್ಕಿ ಇಡಲಾಗಿರುತ್ತದೆ. ಧಾರೆಗೆ ಕುಳಿತುಕೊಳ್ಳುವ ಮೊದಲು ಗಂಡು ಹೆಣ್ಣು ಮಂಟಪವನ್ನು ಮೂರು ಸುತ್ತು ಸುತ್ತಿ, ಅಲ್ಲಿ ಇಟ್ಟಿರುವ ಮೂರು ಕಾಲಿನ ಮಣೆಗೆ ನಮಸ್ಕರಿಸಿದ ನಂತರ ಬಲಗಾಲನ್ನು ಮುಂದೆ ಇಟ್ಟು ಅದರ ಮೇಲೆ ಕುಳಿತುಕೊಳ್ಳುವುದು ವಾಡಿಕೆ. ಆಗ ಸೊಟಕ್ಕೆ ಕೆಂಪು ವಸ್ತ್ರವನ್ನು ಧರಿಸುತ್ತಾರೆ.

ಧಾರೆಗೆ ಸಿದ್ಧವಾದ ಮೇಲೆ ವಿವಾಹಕ್ಕೆ ಆಗಮಿಸಿದವರು ಹೆಣ್ಣು ಗಂಡಿಬ್ಬರಿಗೂ ಅಕ್ಕಿ ಕಾಲಿನಿಂದ ತಯಾರಿಸಿದ ಅಕ್ಷತೆ ಹಾಕಿ ಹಾಲು ಹಾಕುವರು. ಅನಂತರ ಮದುವೆಗೆ ಬಂದವರು ಖುಷಿಯಿಂದ ಮುಯ್ಯಿ ಮಾಡುವಾಗ ಕೆಲವು ನಿಯಮಾವಳಿಗಳಿವೆ. ವಧುವರರ ಪಕ್ಕದಲ್ಲಿ ಪಾತ್ರೆ ಇಟ್ಟಿದ್ದು, ಅದರಲ್ಲಿ ಅರಿಷಿಣ ಮಿಶ್ರಣ ಮಾಡಿದ ಅಕ್ಕಿ ಇರುತ್ತದೆ. ಅದನ್ನು ತೆಗೆದು ಸ್ವಲ್ಪ ಸ್ವಲ್ಪವನ್ನು ವಧುವರರ ಮೇಲೆ ಮೂರುಬಾರಿ ಹಾಕುವರು. ರಕ್ತ ಸಂಬಂಧಿಗಳಾದರೆ ಅವರಿಬ್ಬರ ಮೊಣಕಾಲು, ಹೆಗಲು ಮುಟ್ಟಿ, ಅನಂತರ ತಲೆಯ ಮೇಲೆ ಅಕ್ಕಿ ಹಾಕಿ ಗಿಂಡಿಯಲ್ಲಿರುವ ಹಾಲನ್ನು ಅವರಿಬ್ಬರಿಗೂ ಕುಡಿಸುವರು.

ಕೊಡಗಿನ ಗ್ರಾಮ ಪ್ರದೇಶಗಳಲ್ಲಿ ಇಂದಿಗೂ ಕೆಲವು ಸಂಪ್ರದಾಯಗಳು ಕಣ್ಮರೆಯಾಗಿಲ್ಲ. ಮದುವೆಗೆ ಬಂದವರ ಅಥವಾ ಹೊರಗಡೆಯವರಿಂದ ದೃಷ್ಟಿ ಆಗಬಾರದೆಂದು ವಧುವಿನ ಅತ್ತಿಗೆ ವಧುವಿನ ಉಗುರು ಕತ್ತರಿಸಿ ಒಂದು ಚಿಕ್ಕಹಾಲಿನ ಪಾತ್ರೆಗೆ ಹಾಕಿ ಅದನ್ನು ಹಾಲು ಬರುವ ಮರದ ಬುಡಕ್ಕೆ ಚೆಲ್ಲುವಳು. ಇದನ್ನು ಕೊಡವ ಭಾಷೆಯಲ್ಲಿ ‘ಕೊರಂಗೂಡಿ ಮುರಿಪ’ ಎಂದು ಕರೆಯುತ್ತಾರೆ.

ಎಲ್ಲಾ ಕೆಲಸ ಕಾರ್ಯಗಳು ಮುಗಿದನಂತರ ವಧು ವರರನ್ನು ಭೋಜಕಾರಿ ಹಾಗೂ ಭೋಜಕಾರನು ಮದುವೆ ಮಂಟಪದಿಂದ ಕರೆದುಕೊಂಡು ಮನೆಯ ಕೊಠಡಿ ಒಳಗೆ ಬರುವರು. ಗ್ರಾಮದ ಪೂಜಾರಿಯು ತಂದ ಪ್ರಸಾದ ಮತ್ತು ತೀರ್ಥವನ್ನು ಅವರಿಬ್ಬರು ಸ್ವೀಕರಿಸಿದ ನಂತರವೇ ಬ್ರಾಹ್ಮಣರಿಗೆ ಕಾಣಿಕೆ ಕೊಡುವರು. ಎಲ್ಲವೂ ಬೆಳಗ್ಗಿನಿಂದ ಮಧ್ಯಾಹ್ನದ ಒಳಗೆ ಮುಕ್ತಾಯವಾಗುತ್ತದೆ.

ಕೇಟಾಮೆ: ಮದುವೆ ಆದಾಗ ಅವರ ರಕ್ತಸಂಬಂಧಿಕರು ಹಾಗೂ ನೆಂಟರಿಷ್ಟರು ಮದುವೆ ಆಗುವಂತಹ ಮನೆಗೆ ತಮ್ಮ ತಮ್ಮ ಮನೆಗಳಿಂದ ಆಹಾರ ಆಹಾರ ಸಾಮಗ್ರಿಗಳನ್ನು ಸಂಪೂರ್ಣವಾಗಿ ಒದಗಿಸುವುದಕ್ಕೆ ‘ಕೇಟಾಮೆ’ ಎನ್ನುತ್ತಾರೆ. ಅನೇಕ ವರ್ಷಗಳ ಹಿಂದೆ ತಪ್ಪದೇ ನಡೆಯುತ್ತಿತ್ತು. ಇತ್ತೀಚೆಗೆ ಹೆಚ್ಚಾಗಿ ಈ ಪದ್ಧತಿ ಕಂಡುಬರುತ್ತಿಲ್ಲವೆನ್ನಬಹುದು.

ಬಾಳೆಬಿರುದು : ವಿವಾಹದ ಮನೆಗೆ ‘ಕೇಟಾಮೆ’ ತಂದು ಕೊಟ್ಟವರಿಗೂ ಸೋದರತ್ತೆ ಮಾವನಿಗೂ ‘ಬಾಳೆಬಿರುದು’ ಕೊಡುವುದು ಸಂಪ್ರದಾಯ. ಸುಮಾರು ಮೂರು ಅಡಿ ಉದ್ದವಿರುವ ಬಾಳೆಕಂಬಗಳನ್ನು ಕತ್ತರಿಸಿ ಸಾಲಾಗಿ ಗೂಟಗಳಿಗೆ ಚುಚ್ಚಿ ನಿಲ್ಲಿಸಿರಲಾಗುತ್ತದೆ. ಅವುಗಳ ಮೇಲೆ ಬಾಳೆನಾರು ಹಾಗೂ ಅದರದೇ ಆದ ‘ಹೂ’ ನಿಂದ ಶೃಂಗರಿಸಲಾಗಿರುತ್ತದೆ. ನೆಂಟರು, ರಕ್ತ ಸಂಬಂಧಿಗಳು, ಹಾಗೂ ಸಹಾಯಕ ಕುಟುಂಬದವರು ವಾದ್ಯ ಸಮೇತದೊಂದಿಗೆ ಚುಚ್ಚಲಾಗಿರುವ ಬಾಳೆಕಂಬದ ಹತ್ತಿರ ಬರುವರು. ಆ ಕಂಬಗಳ ಹತ್ತಿರ ಹಾಸಿರುವ ಚಾಪೆ ಮೇಲೆ ಬಿಂದಿಗೆಯಲ್ಲಿ ನೀರು, ವೀಳ್ಳೆದೆಲೆ ಇಟ್ಟಿರುತ್ತಾರೆ. ಅಲ್ಲಿ ಬಂದವರು ಕೈಕಾಲು ತೊಳೆದು ಚಾಪೆ ಮೇಲೆ ಕುಳಿತುಕೊಳ್ಳುತ್ತಾರೆ. ಅರುವರು ಎಲೆ ಅಡಿಕೆಗಳನ್ನು ನೆಂಟರಿಷ್ಟರಿಗೆ ಕೊಡುವರು. ಅವುಗಳನ್ನು ಬಂಧುಗಳು ಸ್ವೀಕರಿಸಿ ಹಣ ಇಟ್ಟು ವಾಪಸು ಅರುವರಿಗೆ ಕೊಡುವರು. ಅರುವನು ಅದನ್ನು ತೆಗೆದುಕೊಂಡು ಮೂರು ಬಾಳೆಕಂಬಗಳನ್ನು ತೋರಿಸಿ, ಚುಚ್ಚಲಾಗಿದ್ದ ಬಾಳೆಕಂಬಗಳನ್ನು ಒಡಿ ಕತ್ತಿಯಿಂದ ಕರಿಸುವಂತೆ ಹೇಳುವನು. ಯಾರಾದರೊಬ್ಬ ಹಿರಿಯ ತನ್ನ ತಲೆ ಮೇಲಿನ ರುಮಾಲನ್ನು ತೆಗೆದಿರಿಸಿ ನೆಡಲಾಗಿದ್ದ ಬಾಳೆ ಕಂಬಗಳನ್ನು ಮೂರು ಪ್ರದಕ್ಷಿಣೆ ಬಂದು, ಕೊಡವ ಭಾಷೆಯಲ್ಲಿ ‘ಬಾಳೆಬೇಂಗುಲುವಾ’ (ಎಂದರೆ ಬಾಳೆಕತ್ತರಿಸಬಹುದೇ?) ಎಂದು ಹೇಳಿ ಬಾಳೆಕಂಬಗಳನ್ನು ಒಂದೊಂದೇ ಸಾರಿ ಕತ್ತರಿಸುತ್ತಾನೆ. ಇದನ್ನು ‘ಬಾಳೆಬಿರುದು’ಎನ್ನುತ್ತಾರೆ. ನಂತರ ವಾದ್ಯ ಮೊಳಗುವುದರೊಂದಿಗೆ ನೆಂಟರನ್ನು ಮದುವೆ ಮನೆಗೆ ಕರೆದೊಯ್ಯುತ್ತಾರೆ. ಧಾರೆ, ಮುಗಿದ ನಂತರ ಊಟೋಪಚಾರ ಕಾರ್ಯಕ್ರಮ ನಡೆಯುತ್ತದೆ. ಇನ್ನೂ ಮುಂತಾದ ಆಚರಣೆಗಳಾದ ಪೋಳಿಯ, ದಿಬ್ಬಣ, ದಂಪತಿಗಳ ಧಾರೆ, ಊರಿನ ದಾರಿ ತಡೆಯುವುದು, ವಧುವಿನ ಕೈಯಿಂದ ನೀರು, ತರಿಸುವುದು, ಆಟ ಆಡಿಸುವುದು, ಹೆಸರು ಹೇಳಿಸುವುದು, ತಮಾಷೆಯಾಗಿ ಕೊಡುವುದು, ತಗೆದುಕೊಳ್ಳುವುದು (ವಸ್ತುಗಳನ್ನು) ಮುಂತಾದ ಅಂಶಗಳು ಅಡಕವಾಗಿವೆ.

ಭೋಜನ : ಮದುವೆ ಎಂದ ಮೇಲೆ ಊಟದ ಸಂಭ್ರಮ. ಅಲ್ಲಿ ಬಡವ, ಶ್ರೀಮಂತ ಎಂಬ ತಾರತಮ್ಯವಿರುವುದಿಲ್ಲ. ಮದುವೆಗೆ ಬಂದ ಬಂಧು-ಬಳಗದವರು, ನೆಂಟರು ಹಾಗೂ ದೂರದ ಊರುಗಳಿಂದ ಬಂದವರು ಮೊದಲು ಕುಳಿತು ಊಟ ಮಾಡುವುದು ಕ್ರಮ. ಅನಂತರ ಆದೇ ಊರಿನವರು, ಮನೆಯವರು ಮತ್ತು ಇತರರು ಊಟ ಮಾಡುವರು. ಎಲೆಗೆ ಊಟ ಬಡಿಸಿದ ತಕ್ಷಣವೇ ಊಟ ಮಾಡುವುದಿಲ್ಲ. ಅವರಲ್ಲಿ ಒಬ್ಬ ಹಿರಿಯ ವ್ಯಕ್ತಿ ಕೊಡವ ಭಾಷೆಯಲ್ಲಿ ‘ಉಂಗನಾ’ (ಊಟಮಾಡೋಣ ) ಎನ್ನುವನು. ಅದಕ್ಕೆ ಎಲ್ಲರೂ ಸಮ್ಮತಿಸಿದ ನಂತರವೇ ಊಟ ಮಾಡುವರು.

ಇವರ ವಿವಾಹಗಳಲ್ಲಿ ಮಾಂಸದ ಊಟ ಕಡ್ಡಾಯ. ಇಲ್ಲದಿದ್ದರೆ ‘ಗುರು’ ವಿಗೆ ಮತ್ತು ತಮಗೆ ಸಮಾಜದಲ್ಲಿ ಗೌರವ ಕಡಿಮೆ ಎಂಬ ಭಾವನೆ ಇದೆ. ಸಾಂಪ್ರದಾಯಿಕವಾಗಿ ಉಡುಪು ಧರಿಸಿದ ಪುರುಷರ ಜೊತೆಯಲ್ಲಿ ಮಕ್ಕಳು ಹಾಗೂ ಇತರರು ಕುಳಿತು ಊಟ ಮಾಡುವ ಪರಿಪಾಠವಿಲ್ಲ. ಊಟ ಮುಗಿದ ಕೂಡಲೆ ಏಳುವಹಾಗಿಲ್ಲ. ಇನ್ನೊಬ್ಬ ಹಿರಿಯವ್ಯಕ್ತಿ ಊಟಮಾಡುವ ಸಾಕಾಯಿತಾ ಎಂದು ಕೇಳಿದ ನಂತರದಲ್ಲೆ ಎಲ್ಲರೂ ಏಳುವರು. ಇಂದು ಇವರಲ್ಲೇ ಅನೇಕ ಸಾಂಪ್ರದಾಯಿಕ ಅಂಶಗಳು ದಿನ ದಿನಕ್ಕೆ ಕ್ಷೀಣಿಸುತ್ತಿವೆ. ಅಲ್ಲದೆ ವಧು-ವರರು ಮತ್ತು ಅವರ ಆಪ್ತ-ಸ್ನೇಹಿತ ನಿರ್ಧರಿಸಲಾದ ಕೋಣೆಯಲ್ಲಿಯೇ ಊಟ ಮಾಡುವರು.

ಪೋಳಿಯ : ಧಾರೆ ಮುಹೂರ್ತ ಮತ್ತು ಊಟಮುಗಿದ ನಂತರ ಈ ಪದ್ಧತಿ ಆರಂಭವಾಗುತ್ತದೆ. ಒಣಗಿದ ಬೆತ್ತದಿಂದ ಮಾಡಿದ ಒಂದು ‘ಕುಕ್ಕೆ’ ಇದರ ಮೇಲ್ಭಾಗ ತೆರೆದುಕೊಂಡಿರುತ್ತದೆ. ಇದನ್ನೆ ಕೊಡವ ಭಾಷೆಯಲ್ಲಿ ಪೋಳಿಯ ಎನ್ನುವರು. ಆ ಕುಕ್ಕೆ ಒಳಗೆ ಮೂರು ಅಥವಾ ಐದು ಸೇರು ಅಕ್ಕಿ ತೆಂಗಿನ ಕಾಯಿ (೩ ಅಥವಾ ೫ ) ಒಂದು ಕವಳಿಗೆ ಎಲೆ, ಅಡಿಕೆ ಒಂದು ಪಾತ್ರೆಯಲ್ಲಿ ಹಾಲು, ಹುರಿಗಾಳು, ಹೀಗೆ ಎಲ್ಲವನ್ನು ತುಂಬಿಸುವರು. ಮದುವೆ ಹೊರಡುವಾಗ ಆ ಪೋಳಿಯವನ್ನು ವರನ ಮನೆಯವರು ವಧುವಿನ ಮನೆಗೆ ತೆಗೆದುಕೊಡು ಹೋಗುವರು. ಅದರೊಳಗಿರುವ ಹಾಲನ್ನು ವಧುವಿಗೆ ಕೊಡುವುದು ಪದ್ಧತಿ.

ಮದುವೆ ದಿಬ್ಬಣ : ಧಾರೆ ಹಾಗೂ ಊಟದ ಕಾರ್ಯಕ್ರಮದ ನಂತರ ಗಂಡಿನ ಮನೆಯಿಂದ ಹೆಣ್ಣಿನ ಮನೆಗೆ ಹೋಗುವುದು ಕ್ರಮ. ದಿಬ್ಬಣ ಹೊರಟಾಗ ಗ್ರಾಮದಲ್ಲಿ ವಾಸವಾಗಿರುವ ಕುಟುಂಬದಿಂದ ಒಂದು ಹೆಣ್ಣು, ಗಂಡು ಭಾಗಿಗಳಾಗುವರು. ವರನನ್ನು ಕೋಣೆಯಿಂದ ಬೋಜಕಾರನು ಕೈಹಿಡಿದು ಕರೆದುಕೊಂಡು ಬರುವನು. ವರನು ಅಲ್ಲಿರುವ ‘ನೆಲಕ್ಕಿ ನಡುಬಾಡೆಯ’ ಹತ್ತಿರವಿರುವ ದೀಪಕ್ಕೆ ಅಕ್ಕಿ ಹಾಕಿ, ನಮಸ್ಕಾರ ಮಾಡಿ, ಅನಂತರ ಅಲ್ಲಿರುವ ಹಿರಿಯರ ಪಾದಗಳಿಗೆ ನಮಸ್ಕಾರ ಮಾಡುವನು. ಕೈಮಡಕ್ಕೆ ಹೋಗಿ ಅಕ್ಷತೆ ಹಾಕಿ ಮೂಲ ಪುರುಷರ ‘ವಿಗ್ರಹ’ ಅಥವಾ ‘ಫೋಟೊ’ವಿಗೆ ನಮಸ್ಕರಿಸುವನು. ಆಗ ತಾಳ ಮತ್ತು ದುಡಿಯನ್ನು ಹಿರಿಯರು ಬಾರಿಸುತ್ತಾರೆ. ದಿಬ್ಬಣಕ್ಕೆ ಅಣಿಯಾಗುತ್ತಿದ್ದಂತೆ ಆ ಮನೆಯ ಯಜಮಾನರು ಅವನ ಜೊತೆಯಲ್ಲಿ ಹೋಗುವವರಿಗೆ ಕೆಲವು ಹಿತನುಡಿಗಳನ್ನು ಹೇಳಿ ಅದರಂತೆ ನಡೆದು ಕೊಳ್ಳಬೇಕೆಂದು ಹೇಳಿ ಆಶೀರ್ವದಿಸುವನು.

ದಿಬ್ಬಣ ಹೋಗುವಾಗ ಹಾಡು ಹೇಳಿಕೊಂಡು ದುಡಿ ಮತ್ತು ತಾಳವನ್ನು ಬಡಿಯುತ್ತಿರುತ್ತಾರೆ. ಅವರು ಸಾಂಪ್ರದಾಯಿಕವಾದ ‘ಕಪ್ಪು’ ಉಡುಗೆಯನ್ನು ಧರಿಸಿರುವರು. ಹೀಗೆ ಮೆರವಣಿಗೆಯು ದಾರಿಯಲ್ಲಿ ಹೋಗುವಾಗ ಬ್ರಾಹ್ಮಣ ಸಿಕ್ಕಿ ತೀರ್ಥ ಪ್ರಸಾದವನ್ನು ಕೊಟ್ಟರೆ ‘ವರ’ ಸ್ವೀಕರಿಸಿ ಕಾಣಿಕೆಯಾಗಿ ಹಣವನ್ನು ಕೊಡುವನು, ಅಲ್ಲದೆ ಯಾರಾದರೂ ವರನಿಗೆ ಹಾಲು ಕುಡಿಯಲು ಕೊಟ್ಟರೆ ಸ್ವೀಕರಿಸಿ, ಆ ಪಾತ್ರೆಗೆ ವರ ಹಣ ಹಾಕುವನು. ಹೀಗೆ ಸಾಗುವಾಗ ಎದುರು-ಬದಿರು ಮತ್ತೊಂದು ಮದುವೆ ದಿಬ್ಬಣ ಎದುರಾಗಬಾರದು. ಆಕಸ್ಮಿಕವಾಗಿ ಬೇರೆ ಮದುವೆ ದಿಬ್ಬಣ ಬರುತ್ತಿದೆ ಎಂದು ಯಾರಾದರೂ ತಿಳಿದುಕೊಂಡು ವರನಿಗೆ ತಿಳಸದೆ ಬೇರೆ ದಾರಿಯಲ್ಲಿ ಕರೆದುಕೊಂಡು ಹೋಗುವುದು ಪದ್ಧತಿ.

ವಧುವಿನ ಮನೆ ಹತ್ತಿರ ಸಮೀಪಿಸುತ್ತಿದ್ದಂತೆಯೇ ಕೊಂಬುಕೊಟ್ಟವಾಲಗ, ದುಡಿ ಬಾರಿಸುವಿಕೆ ಮತ್ತು ಹಾಡುಗಳು ತ್ವರಿತಗತಿಯಲ್ಲಿ ಅವುಗಳ ನಾದಸ್ವರ ಹೆಚ್ಚಾಗುತ್ತದೆ. ಈ ಮೊದಲೆ ಹೆಣ್ಣಿನ ಮನೆಯವರು ಬಾಳೆಕಂಬಗಳನ್ನು (ಬಾಳೆಬಿರುದು) ನೆಟ್ಟಿರುವ ಸ್ಥಳದಲ್ಲಿ ಮದುವೆ ದಿಬ್ಬಣ ನಿಲ್ಲಬೇಕು. ಈ ಬಾಳೆಬಿರುದಿನ ಪಕ್ಕದಲ್ಲಿ ವರನಕಡೆಯವರು ಇರುವರು. ವರನ ಕಡೆ ಮೂರು ಮಂದಿ ಹಿರಿಯರು ವಧುವಿನ ಮನೆಗೆ ಬಂದು ನಾವು ಬಂದಿರುವೆವು ಎಂದು ವಿಷಯವನ್ನು ಮುಟ್ಟಿಸುವರು. ಇದನ್ನು ಕೊಡವ ಭಾಷೆಯಲ್ಲಿ ‘ಕೊರುಅರುಪುವಕ್’ ಎಂದು ಕರೆಯುವರು. ಆಗ ವಧುವಿನ ಕಡೆಯವರು ದುಡಿ, ತಾಳ, ಮತ್ತು ವಾದ್ಯ ಬಾರಿಸುತ್ತಾ ವರನಿರುವಲ್ಲಿಗೆ ಬರುವರು. ವಧುವಿನ ತಂದೆ ವರನ ಹತ್ತಿರ ಸಂಭಾಷಣೆಯಲ್ಲಿ ತೊಡಗಿ, ಆನಂತರ ಹಿರಿಯರಿಗೆ ನಮಸ್ಕರಿಸುವನು. ಆನಂತರ ದಿಬ್ಬಣವು ವಧುವಿನ ಮನೆಯ ಮುಂದೆ ಬರುವುದು. ಅಲ್ಲಿ ವರನ ಹಾಗೂ ಬೋಜಕಾರನ ಪಾದಗಳನ್ನು ವಧುವಿನ ಕಡೆಯ ಕನ್ನೆಯು ತೊಳೆಯುವಳು. ಆನಂತರ ಮಡಿ ಬಟ್ಟೆ ಮೇಲೆ ವರ ಮನೆ ಒಳಗೆ ಬರುವಾಗ ಅಕ್ಷತೆ ಹಾಕಿ ಬರಮಾಡಿಕೊಳ್ಳುವರು. ವರ ನಡುಮನೆಯಲ್ಲಿರುವ ‘ನೆಲ್ಲಕ್ಕಿಬಾಡೆ’ ಗೆ ನಮಸ್ಕರಿಸಿ ಕುಳಿತುಕೊಳ್ಳುವನು. ಇತರರು ಪಕ್ಕದಲ್ಲಿ ಕುಳಿತುಕೊಳ್ಳುವರು.

ಜೊತೆಯಲ್ಲಿ ತಂದಿದ್ದ ಪೋಳಿಯವನ್ನು ವಧುವಿನ ಕಡೆಯ ಅರುವನು ಹೆಣ್ಣು ತಲೆಯಿಂದ ಇಳಿಸಿ ‘ನೆಲಕ್ಕಿನಡುಬಾಡೆ’ಯಲ್ಲಿ ಇಡುವಳು. ಅನಂತರ ವಧುವಿನ ಕಡೆಯಿಂದ ಕುಕ್ಕೆ ತೆಗೆದು ಬಾಳೆಹಣ್ಣು, ಒಂದು ತೆಂಗಿನಕಾಯಿ, ಮತ್ತು ಹುರಿಗಾಳುಗಳನ್ನು ವರನ ಕಡೆಯವರಿಗೆ ಕೊಡುವರು. ವರನ ಕಡೆಯವರು ಅವುಗಳನ್ನು ತೆಗೆದುಕೊಂದು ‘ಪೀಚೆ’ ಕತ್ತಿಯಿಂದ ತೆಂಗಿನ ಕಾಯಿಯನ್ನು ವಡೆಯುವರು. ಅನಂತರ ಊಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಕಾಣಬಹುದಾಗಿದೆ. ಆದರೆ ನಾಗರಿಕತೆಗೆ ಪ್ರತೀಕವಾಗಿರುವ ಕೊಡವರಲ್ಲಿ ಇತ್ತೀಚೆಗೆ ಅವರಲ್ಲಿರುವ ಜನಪದೀಯ ಅಂಶಗಳು ಮಾಯವಾಗುತ್ತಿವೆ ಎನ್ನಬಹುದು.

ವಧುವರರ ಮುಹೂರ್ತ : ಕೊಡವರ ಪ್ರತಿಯೊಂದು ಮನೆಯಲ್ಲಿ ‘ನೆಲಕ್ಕಿನಡುಬಾಡೆ’ ಇರುತ್ತದೆ. ಎಡಬದಿಯಲ್ಲಿ ವಧು ಹಾಗೂ ಬಲಗಡೆಯಲ್ಲಿ ವರನನ್ನು ಮೂರು ಕಾಲಿನ ಮಣೆ ಹಾಕಿ ಕೂರಿಸಿ, ಸಾಂಪ್ರದಾಯಿಕ ರೀತಿಯ ಶಾಸ್ತ್ರವನ್ನು ಮಾಡುವರು ಅದಕ್ಕೆ ‘ದಂಪತಿಗಳ ಮುಹೂರ್ತ’ ಎನ್ನುವರು. ವರನ ಮನೆಯವರು ಪೋಳಿಯದ ಒಳಗೆ ಇಟ್ಟಿರುವ ಹಾಲನ್ನು ಮುಹೂರ್ತ ನಡೆಯುವಾಗ ವಧುವಿಗೆ ಕೊಡುವರು. ಆ ಸಂದರ್ಭದಲ್ಲಿ ಎರಡೂ ಕಡೆಯವರಲ್ಲಿ ಹಣ ಅಥವಾ ಇನ್ನಿತರ ರೂಪದಲ್ಲಿ ಬಹುಮಾನ ಕೊಡುವ-ತೆಗೆದುಕೊಳ್ಳುವ ಕೆಲಸ ನಡೆಯುತ್ತದೆ. ಅಲ್ಲದೆ ಎರಡು ಕಡೆಯ ಹಿರಿಯರು ‘ದುಡಿ’ ವಾದ್ಯವನ್ನು ಬಾರಿಸುತ್ತಾ ಹಾಡನ್ನು ಹೇಳುವರು.

ವರನ ಕಡೆಯ ಹಿರಿಯವ್ಯಕ್ತಿ ಅಥವಾ ಯಜಮಾನ ಸ್ವಲ್ಪ ಅಕ್ಕಿ ಐದು ಹಣವನ್ನು ಕೊಡವ ಭಾಷೆಯಲ್ಲಿ ಪಲಯ ಪಣವೆಂದು ಸಂಬೋದಿಸಿ ‘ತಳಿಯಕ್ಕಿ ಬೊಳಕಿ’ಗೆ ಹಾಕುವನು. ಬೋಜಕಾರನು ವರನ ಕೈಹಿಡಿದು ಮುಹೂರ್ತದಿಂದ ಏಳಿಸುವನು. ಅನಂತರ ವರ ವಧುವಿನ ತಲೆಯ ಮೇಲೆ ಅಕ್ಕಿ ಅಕ್ಷತೆ ಹಾಕಿ ಹಾಲನ್ನು ಕುಡಿಯಲು ಕೊಡುವನು. ಆಮೇಲೆ ಚಿನ್ನ ಮತ್ತು ಬೆಳ್ಳಿ ನಾಣ್ಯವನ್ನು ಚಿಕ್ಕ ಚೀಲಕ್ಕೆ ಹಾಕಿ ಕೊಡುವನು. ವಧು ಸ್ವೀಕರಿಸಿದ ಮೇಲೆ, ವಧುವಿನ ಕೈ ಹಿಡಿದು ಏಳಿಸುವನು. ವಧುವಿನ ಬೋಜಕಾರಿಯು ವರ ಕೊಟ್ಟ ಚೀಲವನ್ನು ಅವಳ ಬಲ ಸೊಂಟಕ್ಕೆ ಸಿಕ್ಕಿಸುವಳು. ಅನಂತರ ‘ಸಂಬಂಧ ಅಡುಕುವ’ ನಡೆಯುತ್ತದೆ. (ವರನ ಮನೆಯವರು ಸಾಂಪ್ರದಾಯಿಕ ರೀತಿಯಾದ ಅಧಿಕಾರವನ್ನು ವಹಿಸಿ ಕೊಡುವುದಾಗಿರುತ್ತದೆ. )

ವಧು-ವರರ ‘ಆರುವ’ರು ಸಂಬಂಧದ ನಂತರ, ವಧುವಿನ ‘ಅರುವ’ನು ಮಾತನ್ನು ಆರಂಭಿಸುವನು. ನಮ್ಮ ಮನೆಯ ಹೆಣ್ಣನ್ನು ನಿಮ್ಮ ಮನೆಯಲ್ಲಿ ಬಾಳಿ ಬದುಕಲು ಕಳುಹಿಸುತ್ತಿದ್ದೇವೆ ನೀವು ಮನೆ ಮಗಳಂತೆ ಕಂಡುಕೊಂಡು ಅವಳಿಗೆ ತಮ್ಮಲ್ಲಿರುವ ಎಲ್ಲಾ ಸಾಮಗ್ರಿಗಳನ್ನು ಬಳಸಲು ತಮ್ಮ ಪೂರ್ಣ ಸಮ್ಮತಿ ಕೊಡಬೇಕೆಂದು ಕೇಳಿಕೊಳ್ಳುವನು ಅದಕ್ಕೆ ವರನ ಕಡೆಯ ‘ಅರುವನು’ ಸಮ್ಮತಿಸಿ ಪ್ರತಿಯಾಗಿ ಹೀಗೆ ಹೇಳುವನು. ವಧುವನ್ನು ನಮ್ಮ ಮಗಳೆಂದು ಭಾವಿಸಿ, ಆಕೆ ಕುಟುಂಬದವರಾದ ಮಾವ, ಅತ್ತೆ, ಭಾವ, ಮೈದುನ, ನಾದಿನಿ, ಗಂಡ ಎಲ್ಲರ ಜೊತೆಯಲ್ಲಿ ಹೊಂದಿಕೊಂಡು ಹೋಗಬೇಕೆಂದು ಹೇಳುವನು. ಇದನ್ನು ವಧುವಿನ ‘ಅರುವ’ನು ಒಪ್ಪಿಕೊಳ್ಳುವನು. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಎರಡು ಕಡೆಯವರು ಹಿರಿಯರ ಸಮ್ಮುಖದಲ್ಲಿ ಹಣವನ್ನು ಕೊಡುವ-ತೆಗೆದುಕೊಳ್ಳುವ ಕ್ರಿಯೆ ಏರ್ಪಡುವುದು.

ದಾರಿ ತಡೆಯುವಿಕೆ : ವಧುವಿನ ಸೋದರಮಾವನ ಮಗ ಅಥವಾ ಸೋದರ ಅತ್ತೆಯ ಮಗನಿಗೆ ಸಿಗಬೇಕಾದ ಹೆಣ್ಣನ್ನು ವರ ಕರೆದುಕೊಂಡು ಹೋಗುವುದರಿಂದ ಈ ದಾರಿ ತಡೆಯುವಿಕೆ ಏರ್ಪಡುತ್ತದೆ. ವಧುವರರೂ ‘ನೆಲಕ್ಕಿಬಾಡೆ’ಗೆ ನಮಸ್ಕರಿಸಿ ವರ ಕರೆದುಕೊಂಡು ಹೋಗುವಾಗ ಈ ಪದ್ಧತಿ ನಡೆಯುತ್ತದೆ. ಸೋದರತ್ತೆಮಗ ಈ ರೀತಿಯಾಗಿ ಮಾತನಾಡುವನು. ನೀವು ನನ್ನ ಸೋದರತ್ತೆಯ ಮಗಳನ್ನು ಮದುವೆ ಆಗುತ್ತಿರುವಿರಿ ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಹಾಗೆಯೇ ಚೆನ್ನಾಗಿ ನೋಡಿಕೊಳ್ಳದಿದ್ದರೆ ಏನು ಮಾಡುವುದು? ಎಂದು ದಾರಿ ತಡೆಯುವನು, ಪ್ರತ್ಯುತ್ತರವಾಗಿ ವರನು ನಾನು ಚೆನ್ನಾಗಿ ನೋಡಿಕೊಳ್ಳುವೆನೆಂದು ಭಾಷೆ ಕೊಟ್ಟು, ತನಗೆ ಸಾಧ್ಯವಾದಷ್ಟು ಪ್ರಮಾಣದಲ್ಲಿ ಚಿನ್ನವನ್ನು ಕೊಡುವನು. ಆ ಚಿನ್ನದ ನಾಣ್ಯ ಅಥವಾ ಚಿನ್ನ ಮತ್ತು ಇನ್ನೊಂದು ಚಿನ್ನದ ನಾಣ್ಯವನ್ನು (ಚಿನ್ನವನ್ನು) ಒಟ್ಟಿಗೆ ಸೇರಿಸಿ ವಧುವಿನ ಸೀರೆಯ ಅಂಚಿಗೆ ಕಟ್ಟುವರು. ಅನಂತರ ವರ-ವಧುವನ್ನು ಕರೆದುಕೊಂಡು ಹೊಸಲು ದಾಟುವಾಗ ಕೆಲಸಮಾಡುವವನು ತನ್ನ ವಸ್ತ್ರವನ್ನು ಹಾಸಿ ವಧುವನ್ನು ತಡೆ ಹಿಡಿಯುತ್ತಾನೆ. ಅದಕ್ಕೆ ವರ ತನ್ನ ಸಾಮಥ್ಯವಿದ್ದಷ್ಟು ಹಣವನ್ನು ತೆತ್ತು ಕರೆದುಕೊಂಡು ಹೋಗುವುದು ಕ್ರಮ.

ವರ-ವಧುವಿನ ಮನೆಯಿಂದ ಆಕೆಯನ್ನು ಕರೆದೊಯ್ಯುವಾಗ ಅವಳ ಸಂಬಂಧಿಕರು ಹೊರಡುವರು. ಹೊರಡುವ ಮುನ್ನ ಕೈಮಡಕ್ಕೆ ಹೋಗಿ, ಅಲ್ಲಿರುವ ದೀಪಕ್ಕೆ ನಮಸ್ಕರಿಸಿ, ಸಾಂಪ್ರದಾಯಿಕವಾಗಿ ‘ಬಾಳೆಬಿದಿರುನ’ ಆಚರಣೆಯನ್ನು ಮಾಡಿದನಂತರ ತಂದೆತಾಯಿ ಹಾಗೂ ಹಿರಿಯರು ವಧು-ವರರಿಗೆ ಆಶೀರ್ವದಿಸಿ ಕಳುಹಿಸಿ ಕೊಡುವರು. ಅನಂತರ ಹೆಣ್ಣಿನ ಕಡೆಯವರು ತಮ್ಮ ದುಡಿ, ತಾಳ ವಾದ್ಯಗಳ ಸಮೇತ ತಮ್ಮ ಮನೆಗೆ ಹಿಂತಿರುಗುವರು.

ವರನ ಮನೆಗೆ ವಧು ಹೋಗುವಾಗ ಬಿಳಿ ಮುಸುಕು ಧರಿಸಿದ್ದರೆ, ಮನೆ ಸಮೀಪಿಸುತ್ತಿದ್ದಂತೆ ಅದನ್ನು ತೆಗೆದು ಕೆಂಪು ವಸ್ತ್ರವ್ನ್ನು ಹಾಕಿಕೊಳ್ಳಬೇಕು. ದಾರಿಯಲ್ಲಿ ವಧು-ವರರು ಹೋಗುವಾಗ ಕೆರೆ-ಕಟ್ಟೆ, ಹಳ್ಳ-ಕೊಳ್ಳ, ತೊರೆ-ತೀಡು, ಬಾವಿ-ನದಿಯನ್ನು ದಾಟುವಹಾಗಿಲ್ಲ. ಹಾಗೇನಾದರೂ ದಾಟುವಾಗ ಸೋದರಮಾವಂದಿರ ಸಹಾಯವನ್ನು ಪಡೆಯಬಹುದು. ವಧು-ವರರ ಸಮೇತ ಬಂದ ಮೆರವಣಿಗೆಯು ಬಾಳೆಬಿರುದು ಹತ್ತಿರ ನಿಲ್ಲಬೇಕು. ಆಗ ವಧುವಿನ ಗೌರವಯುತವಾಗಿ ಬಾಳೆ ಕಂಬಗಳನ್ನು ತೆಗೆದುಕೊಂಡು ಕತ್ತರಿಸಲಾಗುತ್ತದೆ. ವರನ ಮನೆಯ ಬಾಗಿಲಿನ ಮುಂದೆ ಕನ್ಯೆಯರು ದೀಪ, ಆರತಿ, ಮಾಡುವರು. ಕಾಲು ತೊಳೆದನಂತರ ಮಡಿವಾಳ ಮಡಿ ಮಾಡಿದ ಬಟ್ಟೆಯನ್ನು ಹಾಸಿ ಒಳಹೋಗಲು ಅನುಕೂಲ ಮಾಡುವನು. ಈ ಎಲ್ಲಾ ಆಚರಣೆಗೂ ವಧುವಿನ ಕಡೆಯವರೇ ಹಣವನ್ನು ಕಾಣಿಕೆ ಆಗಿ ಹಾಕಬೇಕು. ವಧು-ವರರು ವರನ ಮನೆ ಒಳಗೆ ಹೋಗುವಾಗ ಅಕ್ಷತೆಹಾಕಿ ಮುತ್ತೈದೆಯರು ಸ್ವಾಗತಿಸುವರು. ಅನಂತರ ಒಳಗಿರುವ ‘ದೇವರ ಕೋಣೆ’ (ಕನ್ನಿಕೊಂಬರೆ), ‘ನೆಲ್ಲಕ್ಕಿನಡುಬಾಡೆ’ ದೀಪಗಳಿಗೆ ವರನು ಅಕ್ಷತೆ ಹಾಕಿ ಅನಂತರ ಹಿರಿಯರ ಪಾದಗಳಿಗೆ ನಮಸ್ಕರಿಸುವನು. ಸ್ವಲ್ಪ ಹೊತ್ತು ಕಳೆದ ನಂತರ ವಧು ವರನ ಹಾಗೆ ಮಾಡುವಳು. ಆಮೇಲೆ ವರನ ತಾಯಿ ಸೊಸೆ ತನ್ನ ಮಗಳಂತೆ ಭಾವಿಸಿ ಊಟಕ್ಕೆ ಅನ್ನ ಮತ್ತು ಹಾಲು ಸೇರಿಸಿ ಕೊಡುವಳು. ಅಲ್ಲಿ ಸೇರಿ ಕೊಂಡಿದ್ದವರೆಲ್ಲರಿಗೂ ಆಹಾರ ಪದಾರ್ಥಗಳನ್ನು ಕೊಡಲಾಗುತ್ತದೆ.

. ಕೂಡಾವಳಿ : ಕೊಡವರ ವಿವಾಹಗಳಲ್ಲಿ ವಿಶೇಷತೆ ಅಂದರೆ ಕನ್ನಿಮಂಗಲ ಮಾತ್ರ ಸಾಂಪ್ರದಾಯಿಕವಾಗಿದ್ದು, ಇನ್ನುಳಿದಂತಹ ಹಲವು ಶಾಸ್ತ್ರೋಕ್ತ ಪದ್ಧತಿಯನ್ನು ಒಳಗೊಂಡಿರುವುದಿಲ್ಲ. ಕೆಲವು ಕಾರಣಗಳಿಂದಾಗಿ ಬೇರೆ ಬೇರೆ ಮಾದರಿಯ ವಿವಾಹಗಳಿವೆ. ಹಳೆಯ ಕಾಲದ ಪದ್ಧತಿಯಂತೆ ಅಂತಹ ವಿವಾಹವನ್ನು ಕೂಡಾವಳಿ ಎನ್ನುವರು. ಪುರುಷರು ತಮ್ಮ ಜೀವಿತ ಅವಧಿಯಲ್ಲಿ ಮನಸಿದ್ದರೆ ಶಾಸ್ತ್ರೋಕ್ತವಾಗಿ ‘ಏಳು’ ಬಾರಿ ಮದುವೆ ಮಾಡಿಕೊಳ್ಳುವ ಅವಕಾಶವಿದೆ. ಆದರೆ ಸ್ತ್ರೀಗೆ ಇಂತಹ ಅವಕಾಶ ಕಡಿಮೆ. ಕೂಡಾವಳಿಯಲ್ಲಿ ಮೂರು ರೀತಿಗಳಿವೆ. ಅವುಗಳೆಂದರೆ

೧. ವಿವಾಹ ವಿಚ್ಛೇದನ : ಗಂಡಿನಿಂದ ವಿಚ್ಛೇದನಗೊಂಡ ಆತನ ಪತ್ನಿ ಬೇರೊಬ್ಬನೊಡನೆ ವಿವಾಹವಾಗಬಹುದು.

೨. ಗಂಡ ಮರಣ ಹೊಂದಿದ ನಂತರ ತನ್ನ ಗಂಡನ ಸಹೋದರನನ್ನೊ ಅಥವಾ ‘ಒಕ್ಕ’ದ ಯಾರಾದರೊಬ್ಬರನ್ನು ವಿವಾಹ ಆಗಬಹುದು.

೩. ವಿಧವೆ ವಿವಾಹ : ವಿಧವೆಯು ಬೇರೆ ‘ಕುಟುಂಬದ’ (ಒಕ್ಕ) ಪುರುಷನೊಡನೆ ವಿವಾಹ ಆಗಬಹುದು.