ವಿವಾಹ ವಿಚ್ಛೇದನ : ಗಂಡ ಬಿಟ್ಟಾಗ ಅಥವಾ ಅವನಿಂದ ವಿಚ್ಛೇದನ ಪಡೆದಾಗ ಅಥವಾ ಹೆಣ್ಣು ಗಂಡನನ್ನು ಬಿಟ್ಟಾಗ ಅಗುವಂತಹ ಕೂಡಾವಳಿ. ಇಂತಹ ಕೂಡಾವಳಿ ವಿವಾಹದಲ್ಲಿ ಪ್ರಥಮ ಗಂಡನ ಸಂಬಂಧವನ್ನು ಸಂಪೂರ್ಣವಾಗಿ ತಪ್ಪಿಸಿ ಅನಂತರ ನಡೆಯುತ್ತದೆ. ಗಂಡು ಕೂಡಾವಳಿಗೆ ಇಷ್ಟಪಟ್ಟಾಗ, ಗಂಡು-ಹೆಣ್ಣಿನ ಕಡೆಯವರು ಹಾಗೂ ಅರುವರು ಮತ್ತು ಕುಟುಂಬದ ಹಿರಿಯಮುಖ್ಯಸ್ಥರು ಗಂಡಿನ ಮನೆಯಲ್ಲಿ ಸೇರಿಕೊಳ್ಳುವರು. ಅನಂತರ ಹೆಣ್ಣಿನ ಅರವನು ನಮ್ಮ ಹೆಣ್ಣಿನೊಂದಿಗೆ ನಿಮ್ಮ ಗಂಡಿನ ಹೊಂದಾಣಿಕೆ ಸರಿ ಇಲ್ಲದ ಕಾರಣ ಅವಳನ್ನು ತವರು ಮನೆಗೆ ಕರೆದುಕೊಂಡು ಹೋಗಬಹುದೇ ಎಂದು ಕೇಳುವನು. ಪ್ರತ್ಯುತ್ತರವಾಗಿ ಗಂಡಿನ ಕಡೆಯವರು ಅದಕ್ಕೆ ಸಮ್ಮತಿಸಬೇಕು. ಹೀಗೆ ಸಂಬಂಧ ಕಡಿದುಕೊಂಡು ಹೆಣ್ಣು ಆರು ತಿಂಗಳ ಒಳಗೆ ಕೂಡಾವಳಿ ಮಾಡಿಕೊಳ್ಳುವ ಹಾಗಿಲ್ಲ. ಸಮಸ್ಯಗಳು ಕಳೆದ ನಂತರ ಮದುವೆ ಮಾಡಿಕೊಳ್ಳಬಹುದಾಗಿದೆ.

ಗಂಡನ ರಕ್ತಸಂಬಂಧವಾದ ತಮ್ಮ ಅಥವಾ ಅಣ್ಣನನ್ನೊ ಅಥವಾ ‘ಒಕ್ಕ’ (ಕುಟುಂಬ)ದ ಯಾರಾದರೊಬ್ಬರನ್ನು ವಿವಾಹವಾಗುವಂತದ್ದು ವಿಧವೆಯು ತನ್ನ ಗಂಡನ ಮನೆಯವರಲ್ಲಿ ಯಾರಾದರೊಬ್ಬರನ್ನು ಕೂಡಾವಳಿ ಮಾಡಿಕೊಳ್ಳಬಹುದಾಗಿದೆ. ಈ ವಿವಾಹ ಯಾವುದೇ ವೈಭವಾಗಿ ನಡೆಯದೇ ಅಥವಾ ಸಾಂಪ್ರದಾಯಿಕ ಪದ್ಧತಿಗಳನ್ನು ಆಚರಿಸುವುದಿಲ್ಲ. ಆದರೆ ಹೆಣ್ಣಿಗೆ ಶಾಸ್ತ್ರಸಂಬಂಧಗಳಿರದೆ, ಗಂಡಿಗೆ ಮಾತ್ರ ಇರುತ್ತದೆ.

ಕೂಡಾವಳಿ ನಡೆಯುವಾಗ ಸ್ತ್ರೀಯು ಬಿಳಿ ಸೀರೆ ರವಿಕೆ ಧರಿಸಬೇಕು. ಅಲ್ಲದೆ ಅವಳಿಗೆ ಮುಸುಕು ಹಾಕುವುದಾಗಲಿ, ಧಾರೆ ಮಂಟಪದಲ್ಲಿ ಕೂರಿಸುವ ಸಂಪ್ರದಾಯವಿಲ್ಲ. ಮರಣಗೊಂಡ ಗಂಡನ ಕೋಣೆಯಲ್ಲಿ ಅವಳನ್ನು ಅಲಂಕರಿಸಿ ಕೂರಿಸುವರು.

ಕೊಡವತಿಯರಲ್ಲೇ ಮುತ್ತೈದೆ ಆದ ಒಬ್ಬಳು ಕೂಡಾವಳಿ ಮಾಡಿಕೊಳ್ಳುವ ಹೆಣ್ಣಿನ ತಲೆಯ ಮೇಲೆ ಅಕ್ಕಿ ಕಾಳು ಚೆಲ್ಲಿ ಕೈಯಲ್ಲಿ ಹಣವಿಟ್ಟು ಬರುವುದು ಕ್ರಮ.

ಈ ವಿವಾಹದಲ್ಲಿ ‘ದುಡಿ’ ಪಾಟ್ ಅಥವಾ ವಾದ್ಯೋಪಕರಣಗಳನ್ನು ಬಳುಸುವುದಿಲ್ಲ. ಗಂಡು ಮೆರವಣಿಗೆಯಲ್ಲಿ ಹೋಗಬಹುದು, ಆದರೆ ಹೆಣ್ಣು ನಿರ್ಬಂಧಿತಳಾಗಿರುತ್ತಾಳೆ ಒಟ್ಟಾರೆ ಕೂಡಾವಳಿಯಲ್ಲಿ ಹೆಣ್ಣು ತನ್ನ ಹಕ್ಕನ್ನು ಕಡಿದುಕೊಳ್ಳುವಳು.

ಮೂರನೇ ಮಾದರಿಯ ಕೂಡಾವಳಿಯು ಬೇರೊಂದು ‘ಒಕ್ಕ’ದ ಗಂಡಿನೊಡನೆ ಆಗುವಂತದ್ದಾಗಿರುತ್ತದೆ. ಈ ವಿವಾಹದಲ್ಲಿಯೂ ಕೂಡ ಮುಹೂರ್ತ ಇರುವುದಿಲ್ಲ. ಕೂಡಾವಳಿಯಿರುವ ದಿನದಂದು ಹೆಣ್ಣನ್ನು ಅಲಂಕರಿಸಿ ‘ನೆಲಕ್ಕಿನಡುಬಾಡೆ’ ಹಾಗೂ ‘ಕನ್ನಿಕೊಂಬರ’ಗಳಲ್ಲಿ ಜ್ಯೋತಿ ಹತ್ತಿಸಿದ ನಂತರ ಹಿರಿಯರು ಆಶೀರ್ವದಿಸುವರು. ಗಂಡು ಸಾಂಪ್ರದಾಯಿಕವಾಗಿ ಹೆಣ್ಣಿನ ಮನೆಗೆ ಬಂದಾಗ ಹೆಣ್ಣಿನ ಮನೆಯ ಬೆಂಚಿನಲ್ಲಿ ಕೂರಿಸುತ್ತಾರೆ. ಎಲ್ಲಾ ಶಾಸ್ತ್ರಗಳು ಮುಗಿದ ನಂತರ ಮೆರವಣಿಗೆಯಲ್ಲಿ ಗಂಡು, ಹುಡುಗಿಯನ್ನು ಕರೆದುಕೊಂಡು ತನ್ನ ಮನೆಗೆ ಹೋಗುವನು. ಗಂಡಿನ ಮನೆಯಲ್ಲಿ ಶಾಸ್ತ್ರೋಕ್ತವಾಗಿ ವಧುವರರನ್ನು ಒಂದು ಕೋಣೆಗೆ ಸೇರಿಸುವರು.

. ಕೊದಿಮಂಗಲ : ಕನ್ನಡದಲ್ಲಿ ಅತಿ ಚಿಕ್ಕವಯಸ್ಸಿನಲ್ಲಿ ಮಾಡುವ ಮದುವೆ ಎಂದರ್ಥ. ಈ ಮಂಗಲದ ವಿಶೇಷತೆ ಎಂದರೆ ಚಿಕ್ಕ ಮಕ್ಕಳಲ್ಲಿ ಒಬ್ಬೊಬ್ಬರಿಗೆ ಮಾಡುವುದಾಗಿರುತ್ತದೆ. ಹತ್ತು ವರ್ಷ ದಾಟಿರದ ಮಕ್ಕಳ ಪ್ರೀತಿಮದುವೆ ಅಂತಲೂ ಹೇಳಬಹುದಾಗಿದೆ. ಗಂಡು ಮಗುವಾದರೆ ಹೆಣ್ಣಿನ ಉಡುಪನ್ನು ತೊಡಿಸಿ ಮಾಡುವರು. ಹೆಣ್ಣು ಮಗುವಾದರೆ ಗಂಡಿನ ಉಡುಪು ಧರಿಸಿ ನೆರವೇರಿಸುವರು. ಈ ಮಾದರಿಯ ವಿವಾಹದಲ್ಲಿ ವಧುವಿಗೆ ವರನಿಲ್ಲದೆ, ವರನಿಗೆ ವಧುವಿಲ್ಲದೆ ನಡೆಯುವ ಲಗ್ನವಾಗಿರುತ್ತದೆ. ಒಬ್ಬರನ್ನು ವಿವಾಹದ ರೀತಿಯಲ್ಲಿಯೇ ವೈಭವದಿಂದ ನೆರವೇರಿಸುವರು. ಈ ಮದುವೆ ವಾರಗಟ್ಟಲೆ ನಡೆಯದೆ ಒಂದುದಿನ ಮಾತ್ರ ನಡೆಯುತ್ತದೆ. ಈ ವಿವಾಹ ಒಂದು ದಿನವಾದರೂ, ತಮ್ಮ ತಮ್ಮ ಬಂಧು ಬಳಗದವರೆಲ್ಲರನ್ನೂ ಕರೆಸುವರು. ಬಂದಂತಹವರೆಲ್ಲ ವಧು ಅಥವಾ ವರನಿಗೆ ಹಣವನ್ನೊ ಅಥವಾ ಅವರಿಗೆ ಇಷ್ಟವಾದುದ್ದನ್ನೊ ಉಡುಗೊರೆಯಾಗಿ ಕೊಡುವರು. ಕೊಡಬೇಕೆಂಬ ಕಡ್ಡಾಯವೇನಿಲ್ಲ. ಮದುವೆಯಲ್ಲಿ ಏರ್ಪಡಿಸಿದ ಊಟದ ರೀತಿಯಲ್ಲಿಯೇ ಮಾಡಲಾಗುವುದು. ಎಲ್ಲಾ ಕಾರ್ಯ ಕ್ರಮವು ಮುಗಿದ ನಂತರ ಬಾಳೆಹಣ್ಣು ಎಲೆ ಅಡಿಕೆ ನೀಡುವರು.

. ಮಕ್ಕಪರಿಜೆ : ಕನ್ನಡದಲ್ಲಿ ಮಕ್ಕಳಿಗೊಸ್ಕರವಾಗಿ ನಡೆಯುವ ವಿವಾಹ ಎಂದರ್ಥ. ಒಂದು ಕುಟುಂಬದಲ್ಲಿ ಮಕ್ಕಳಿಲ್ಲದಿದ್ದಾಗ ಆ ಕುಟುಂಬವು ಸಂತತಿ ಪಡೆಯುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡೊ ಈ ವಿವಾಹವನ್ನು ಮಾಡುತ್ತಾರೆ. ಈ ಪದ್ಧತಿಯು ಹೆಣ್ಣು-ಗಂಡನ್ನು ಸೇರಿಸಿ ಹೆಣ್ಣಿನ ಮನೆಯಲ್ಲಿ ಧಾರೆಯೆರೆಯುವರು. ಗಂಡು ಬೇರೆ ಮದುವೆಯಾಗಿದ್ದರೂ ‘ಮಕ್ಕಪರಿಜೆ’ ಪದ್ಧತಿಯಲ್ಲಿ ಆದ ಹೆಣ್ಣಿನ ಮನೆಗೂ ಬಂದು ಹೋಗುತ್ತಿರಬಹುದಾಗಿದೆ, ಹಾಗೆಯೇ ಅಲ್ಲಿಯೇ ಇರಬೇಕಾಗಿಲ್ಲ. ಈ ವಿವಾಹದ ವಿಶೇಷತೆ ಎಂದರೆ ಮಕ್ಕಳನ್ನು ಅಥವಾ ಸಂತತಿಯುನ್ನು ಪಡೆಯುವುದು ಅವನ ಕರ್ತವ್ಯವಾಗಿರುತ್ತದೆ.

ಮಕ್ಕಪರಿಜೆ ಪದ್ಧತಿಯಲ್ಲಿ ಗಂಡು, ಹೆಣ್ಣಿಗೆ ಹಾಗೂ ಆತನಿಗೆ ಹುಟ್ಟಿದ ಮಗುವನ್ನು ಪಾಲನೆ ಪೋಷಣೆ ಮಾಡಬೇಕಾಗಿಲ್ಲ. ಅಲ್ಲದೆ ಅವಳ ಆಸ್ತಿಯ ಹಕ್ಕು ಗಂಡಿಗಿರುವುದಿಲ್ಲ. ಈಗಂತೂ ಈ ಪದ್ಧತಿ ಆಗೋಚರವೆಂದೇ ಹೇಳಬಹುದು.

. ಕುಟ್ಟಪರಿಜೆ : ಗಂಡು – ಹೆಣ್ಣು ಸಮಾಜದ ಹಾಗೂ ಕುಟುಂಬಸ್ಥರ ಮಾತು ಮೀರಿ ಅಥವಾ ವಿರುದ್ಧವಾಗಿ ಸಂಬಂಧ ಇಟ್ಟುಕೊಂಡು ಜನಿಸಿದ ಮಕ್ಕಳಿಗೆ ಕೊಡವ ಹಕ್ಕನ್ನು ‘ಕುಟ್ಟಪರಿಜೆ’ ಎನ್ನಲಾಗಿದೆ. ವಿವಾಹಕ್ಕೆ ಮೊದಲು ಮಗು ಜನ್ಮ ಪಡೆದಿದ್ದರೆ ಅಷ್ಟರಲ್ಲಿ ತಾಯಿ ಅಥವಾ ತಂದೆ ಸತ್ತರೆ ತಂದೆಯ ಮನೆಯಲ್ಲಿ ಆ ಮಗುವಿಗೆ ಹಕ್ಕುಕೊಡುವರು.

. ಪ್ಯೆತಾಂಡೆ ಕಳಪೆ : ಒಬ್ಬಳು ಕೊಡವತಿ ಹತ್ತುಮಕ್ಕಳಿಗೆ ಜನ್ಮ ಕೊಟ್ಟು ಆ ಮಕ್ಕಳು ಹಾಗು ತಾಯಿ ಜೀವಂತವಾಗಿದ್ದರೆ, ಗೌರವಯುತವಾಗಿ ವಿಶೇಷ ರೀತಿಯ ಉತ್ಸವ ನಡೆಸಿ ಮುಹೂರ್ತ ನಡೆಸುವರು, ‘ಇದನ್ನೇ ಪ್ಯೆತಾಂಡೆ’ ಕಳಪೆ ಮಂಗಲ ಎನ್ನುವರು.

. ಒಕ್ಕಪರಿಜೆ ಮಂಗಲ : ಒಂದು ಕುಟುಂಬದಲ್ಲಿ (ಒಕ್ಕ) ಗಂಡುಮಕ್ಕಳು ಜನಿಸದೆ, ಅಥವಾ ಹುಟ್ಟಿದರೂ ಮರಣಕ್ಕೆ ತುತ್ತಾಗಿ ಇನ್ನೂ ಹೆಣ್ಣುಮಗು ಮಾತ್ರ ಬದುಕಿದ್ದರೆ, ಅವಳೊಂದಿಗೆ ನಡೆಯುವ ವಿವಾಹಕ್ಕೆ ‘ಒಕ್ಕಪರಿಜೆ’ ಮಂಗಲ ಎನ್ನುವರು. ಈ ರೀತಿಯ ಮಂಗಲ ಚಾಲ್ತಿಯಲ್ಲಿತ್ತು. ಇಂದು ಕಣ್ಮರೆಯಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ ಒಂದು ‘ಒಕ್ಕದ’ ಉಳಿವಿಗಾಗಿ ಆ ‘ಒಕ್ಕದ’ ಹೆಣ್ಣನ್ನು ಮದುವೆ ಮಾಡಿ ಗಂಡನನ್ನು ಹೆಣ್ಣಿನ ಮನೆಯಲ್ಲಿಯೇ ಉಳಿಸಿಕೊಳ್ಳುವುದಾಗಿದೆ. ಹೀಗೆ ಜನಿಸಿದ ಮಕ್ಕಳು ತಾಯಿ ಒಕ್ಕದ ಹೆಸರಿಂದಲೇ ಕರೆಯುವರು. ಅವಳಿಗೆ ಜನಿಸಿದ ಮಕ್ಕಳಿಗೆ ತಕ್ಕ ತಂದೆಯ ಆಸ್ತಿ ಪಾಸ್ತಿಗಳನ್ನು ಕೇಳುವ ಹಕ್ಕಿಲ್ಲ.

. ಕೆಮಿಕುತ್ತಿ ಮಂಗಲ : ಕೊಡಗಿನಲ್ಲಿಯೇ ವಾಸಿಸುವ ಇನ್ನಿತರ ಜನಾಂಗಗಳಲ್ಲಿ ಈ ಮಂಗಲ ಕಂಡು ಬಂದಿಲ್ಲ, ಆದರೆ ಇವರಲ್ಲಿದೆ. ಕೆಮಿಕುತ್ತಿ ಮಂಗಲ ಎಂದರೆ ‘ಕಿವಿಚುಚ್ಚುವ’ ವಿವಾಹ ಎಂದರ್ಥ. ಇದು ಗಂಡಸರಿಗೆ ಮಾತ್ರ ಅನ್ವಯಿಸುತ್ತದೆ. ಇದು ಸಾಮಾನ್ಯವಾಗಿ ಚಿಕ್ಕವಯಸ್ಸಿನಲ್ಲಿಯೇ ನಡೆಯುವಂತಹದ್ದಾಗಿದೆ. ಕಿವಿ ಚುಚ್ಚದ ಹುಡುಗನಿಗೆ ಹೆಣ್ಣು ಕೊಡುವುದಿಲ್ಲ. ಹಾಗೆಯೇ ಕಿವಿಚುಚ್ಚದೆ ಸತ್ತರೆ ಆ ಸತ್ತ ಹೆಣಕ್ಕೆ ಕಿವಿ ಚುಚ್ಚಿ ನಂತರ ವಿವಾಹ ಮಾಡುವರು.

ಇವರು ತಮ್ಮ ಸಂಬಂಧಿಕರಿಗೆ, ಅಕ್ಕಪಕ್ಕದವರಿಗೆ, ಗ್ರಾಮಸ್ಥರಿಗೆ ಸಹಾಯಕ ಕುಟುಂಬದವರಿಗೆ ಕಿವಿ ಚುಚ್ಚುವ ದಿನ ಬರಬೇಕೆಂದು ಆಹ್ವಾನಿಸುವರು. ಅಂದು ಆ ಹುಡಗನಿಗೆ ಅಲಂಕರಿಸಿ, ಹೆಗಲ ಮೇಲೆ ಎರಡು ಕೆಂಪು ವಸ್ತ್ರಗಳನ್ನು ಹೊದಿಸುವರು. ಅಕ್ಕ ಸಾಲಿಗ ಬಂದು ಶಾಸ್ತ್ರೋಕ್ತವಾಗಿ ಕಿವಿಚುಚ್ಚುವನು. ಆನಂತರ ಕಡಕನ್ನು (ಓಲೆ) ಹಾಕಲಾಗುಹುದು. ಅಕ್ಕಸಾಲಿಗನಿಗೆ ಎರಡು ಕೆಂಪು ವಸ್ತ್ರ, ಅಕ್ಕಿ, ಹಣ್ಣು, ತೆಂಗಿನಕಾಯಿ, ಹಣವನ್ನು ಕೊಟ್ಟು ಗೌರವದಿಂದ ಕಾಣುವರು. ಈ ಸಮಾರಂಭದ ಕೊನೆಗೆ ಊಟೋಪಚಾರ ಮುಗಿಯುತ್ತದೆ. ಇಂದು ಈ ಪದ್ದತಿ ವಿರಳ.

ವಿವಾಹಪದ್ದತಿಯಲ್ಲಿಯೇ ಇನೋಂದು ಬಗೆಯ ವಿವಾಹವೇ ನರಿಮಂಗಲವಾಗಿರುತ್ತದೆ. ಈ ರೀತಿಯ ವಿವಾಹ ಕೊಡಗಿನಲ್ಲಿಯೇ ವಾಸಿಸುತ್ತಿರುವಂತಹ ಬೇರೆ ಜನಾಂಗಗಳಲ್ಲಿ ಇಂದಿಗೂ ಆಸ್ತಿತ್ವದಲ್ಲಿ ಇಲ್ಲ.

. ನರಿಮಂಗಲ : ಭೂಪ್ರದೇಶವೆಂದಮೇಲೆ ಅದು ತನ್ನದೇ ಆದ ಭೌಗೋಳಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕತಿಕ, ಆರ್ಥಿಕ ಮುಂತಾದ ಅಂಶಗಳಿಂದ ಪ್ರಭಾವಿತಗೊಂಡಿರುತ್ತದೆ. ಹೀಗಿರುವಾಗ ಪ್ರಾದೇಶಿಕವಾಗಿ ಒಂದೊಂದು ಜನಾಂಗವು ತನ್ನದೇ ಆದ ವಿಶಿಷ್ಟ ರೀತಿಯ ಆಚರಣೆ, ಸಂಪ್ರದಾಯ, ಭಾಷೆ, ವಾದ್ಯ, ಕಲೆ, ಸಂಗೀತ, ಒಗಟು, ಗಾದೆ, ಲಾವಣೆ, ವೇಷಭೂಷಣ, ಊಟೋಪಚಾರ, ಸಾಹಿತ್ಯವನ್ನು ಒಳಗೊಂಡಿಗುವುದರಲ್ಲಿ ಸಂಶಯವೇ ಇಲ್ಲ. ಒಟ್ಟಿನಲ್ಲಿ ಬಹುಭಾಷಿಕ ಸಂಸ್ಕೃತಿಯನ್ನು ನಾವು ಒಂದು ಸಮಾಜದಲ್ಲಿ ಕಾಣಬಹುದು. ಆದರೂ ಎಲ್ಲರೂ ಒಂದೇ ರೀತಿಯ ಆಚರಣೆಗೆ ಒಳಪಟ್ಟಿರುವುದಿಲ್ಲ.

ಪ್ರಾಚೀನಕಾಲದಿಂದಲೂ ನಮ್ಮಲ್ಲಿ ರೂಢಿಯಲ್ಲಿರುವಂತಹ ಪದ್ಧತಿ, ಸಂಪ್ರದಾಯ, ಮತ್ತು ಆಚರಣೆಗಳು ಆಯಾಯ ಪ್ರದೇಶಗಳ ಸಂಪ್ರದಾಯಗಳನ್ನು ಕ್ರಮಬದ್ಧ ರೀತಿಯಲ್ಲಿ ರೂಪಿಸುತ್ತವೆ. ಈಗ ಆದಿ ಮಾನವನ ಕಾಲವಲ್ಲ. ಆದರೆ ಆಧುನಿಕ ಮನುಷ್ಯನ ಮೂಲವನ್ನು ಹುಡುಕುತ್ತಾ ಹೋದಾಗ ಕೊನೆಯಲ್ಲಿ ಕಾಣಸಿಕ್ಕುವವನು ಆದಿಮಾನವ. ಆದುದರಿಂದ ವ್ಯೆಜ್ಞಾನಿಕ ನಾಗರಿಕತೆಯ ಪಥದಲ್ಲಿ ಚಲಿಸುತ್ತಿದ್ದರೂ, ತಾಯಿ ಬೇರುಗಳನ್ನು ಪ್ರಾಚೀನಕಾಲದಿಂದ ನೋಡಬೇಕಾಗುವುದು.

ಕೊಡಗಿನಲ್ಲಿ ಅನೇಕ ಜನವರ್ಗಗಳ ಜನಪದರು ವಾಸಿಸುತ್ತಿದ್ದಾರೆ. ಆದರೆ ಯಾರಲ್ಲಿಯೂ ಈ ನರಿಮಂಗಲ ವಿವಾಹ ಪದ್ದತಿ ಕಂಡು ಬಂದಿಲ್ಲ. ಇದೊಂದು ವಿಶಿಷ್ಟ ಆಚರಣೆ ಆಗಿರುತ್ತದೆ. ನರಿಮಂಗಲವೆಂದರೇನು? ಇದು ಯಾವಾಗಿನಿಂದ ಆರಂಭವಾಯಿತು? ಕೊಡವರದೆ ಅಥವಾ ಅಕ್ಕಪಕ್ಕದ ರಾಜ್ಯಗಳಾದ ಕೇರಳ, ತಮಿಳುನಾಡಿನಿಂದ ಬಂದಿದ್ದೆ? ಅಥವಾ ಇವತ್ತಿನದೇ? ಹೀಗೆ ನೂರಾರು ಆಲೋಚನೆಗಳು ಕಣ್ಣ ಮುಂದೆ ಬರುತ್ತವೆ. ಇದರ ಬಗ್ಗೆ ಕುತೂಹಲದಿಂದ ಕ್ಷೇತ್ರ ಕಾರ್ಯ ಮಾಡಿದಾಗ ನರಿಮಂಗಲದ ತಾತ್ವಿಕ ಗುಹ್ಯವೇನೆಂದು ಅರಿತುಕೊಂಡೆ.

ಕೊಡವರ ಬಗ್ಗೆ ಚರಿತ್ರೆಯೇ ಇದೆ. ನಮ್ಮ ಮಹಾಕಾವ್ಯಗಳಾದ ‘ರಾಮಾಯಣ’ ಮತ್ತು ‘ಮಹಾಭಾರತ’ದಲ್ಲಿಯೂ ಹಾಗು ಪುರಾಣಗಳಲ್ಲಿ ಇವರ ಕುರಿತು ಉಲ್ಲೇಖಿಸಲಾಗಿದೆ. ಆದುದರಿಂದ ಕೊಡವರು ನೆನ್ನೆ ಮೊನ್ನೆಯವರಲ್ಲ. ಇವರ ಹಿಂದೆ ಗತಕಾಲದ ಆಧಾರಗಳು ಇರುವುದರಿಂದ ಶತಶತಮಾನಗಳಿಂದ ಇವರು ಕೊಡಗಿನಲ್ಲಿಯೇ ವಾಸಿಸಿಕೊಂಡು ಬಂದವರಾಗಿದ್ದಾರೆ. ಹೀಗಿರುವುದರಿಂದ ಇವರು ಕೊಡಗಿನ ಮೂಲವಾಸಿಗಳಾಗಿದ್ದು, ಧ್ಯೆರ್ಯ, ಸಾಹಸ ಮತ್ತು ವೀರತ್ವಕ್ಕೆ ಹೆಸರುವಾಸಿಯಾಗಿದ್ದಾರೆ.

ಕೊಡಗು ಪರ್ವತ ಶಿಖರ, ಬೆಟ್ಟ-ಗುಡ್ಡ, ಗಿರಿ-ಕಂದರಗಳಿಗೆ ಹೆಸರುವಾಸಿಯಾಗಿದೆ. ಆದುದರಿಂದ ಇಲ್ಲಿ ಕ್ರೂರ ಪ್ರಾಣಿಗಳಾದ ಸಿಂಹ, ಹುಲಿ, ಆನೆ, ಚಿರತೆ, ಕರಡಿ ಮತ್ತು ಜಲಚರ ಪ್ರಾಣಿಗಳು ಜೀವಿಸುತ್ತವೆ. ಕಾಡು ಹತ್ತಿರವಿರುವುದರಿಂದ ಮನುಷ್ಯಪ್ರಾಣಿ ಜೀವಿಸುವುದು ಕಷ್ಟ. ಏಕೆಂದರೆ ಊರು, ಕೇರಿ, ನಾಡುಗಳೂ ಈ ಕಾಡಿಗೆ ಹತ್ತಿರವಾಗಿಯೇ ಇವೆ. ಇದರಿಂದ ತೊಟ, ಗದ್ದೆ, ಕೆಲಸ ಮಾಡಲು ಒಂದು ಸ್ಥಳದಿಂದ ಮತ್ತೊಂದು ಊರಿಗೆ ಹೋಗಿಬರಲು ಕಷ್ಟಕರವಾಗುತ್ತಿತ್ತು. ಭಯ ಬೆನ್ನ ಹಿಂದೆಯೇ ಕಟ್ಟಿಕೊಂಡಂತೆ ಜನರಿಗೆ ಭಾಸವಾಗುತ್ತಿತ್ತು. ಇದರಿಂದ ಈ ಪೂರ್ವಿಕರು ತಮ್ಮೊಳಗೆ ಪರಿಹಾರವನ್ನು ಕಂಡುಕೊಳ್ಳಲು ಮುಂದಾದರು, ಅದರ ಪರಿಣಾಮವೇ ‘ನರಿಮಂಗಲ’ ಎನ್ನಬಹುದಾಗಿದೆ.

ನರಿಮಂಗಲ ತನ್ನದೇ ಶೈಲಿ ಮತ್ತು ಮೌಲ್ಯವನ್ನು ಹೊಂದಿದೆ. ಸಾಮಾನ್ಯವಾಗಿ ನರಿಮಂಗಲವು ಕೊಡವರ ಹಿಂದೆಯೇ ಬಂದುದ್ದಾಗಿದೆ. ಈ ಪದ್ಧತಿಯನ್ನು ಇವರಲ್ಲದೆ ಇತರ ಯಾವ ಸಮುದಾಯದವರೂ ಸ್ವೀಕರಿಸಿ ಅನುಕರಣೆ ಮಾಡಿರುವುದಿಲ್ಲ. ಮೂಲತಃ ಪೂರ್ವಿಕರು ಆಚರಿಸಿಕೊಂಡು ಬಂದಿರುವುದರಿಂದ ಇವರೇ ಇದಕ್ಕೆ ಮೂಲ ಕಾರಣರು ಎಂಬುದು ಸತ್ಯ.

ನರಿಮಂಗಲದ ಆಚರಣೆಗೆ ತಾತ್ವಿಕ ನೆಲೆ ಇದೆ. ಇದನ್ನು ಅಕ್ಕ-ಪಕ್ಕದ ಕೇರಳ, ತಮಿಳು ನಾಡಿನಿಂದಾಗಲಿ ಅಥವಾ ಅರಬ್ ರಾಷ್ಟ್ರಗಳಿಂದಾಗಲಿ ಕೊಡಗಿಗೆ ಬಂದಿರುವುದಿಲ್ಲವೆಂದು ಸ್ಪಷ್ಟೀಕರಿಸಬಹುದಾಗಿದೆ. ಈ ಆಚರಣೆ ಕೊಡಗಿನಾದ್ಯಂತ ಅಸ್ತಿತ್ವದಲ್ಲಿದೆ.

ನರಿಮಂಗಲದ ಅರ್ಥ : ಕನ್ನಡದಲ್ಲಿ ‘ಹುಲಿ’ ಕೊಡವ ಭಾಷೆಯಲ್ಲಿ ‘ನರಿ’ ಮದುವೆ ಎಂದರೆ ‘ಮಂಗಲ’ ಇದಕ್ಕೆ ‘ಪುಲಿಮಂಗಲ’, ‘ನರಿಮಂಗಲ’, ಮತ್ತು ‘ಹುಲಿಮಂಗಲ’ವೆಂತಲೂ ಕರೆಯುವುದು ರೂಢಿಯಲ್ಲಿದೆ. ಕೊಡವ ಏಕಾಂಗಿಯಾಗಿ ಹುಲಿಯನ್ನು ಬೇಟೆಯಾಡಿದರೆ ಇದರೊಂದಿಗೆ ಅವನಿಗೆ ಅಂದೇ ಅಥವಾ ಮಾರನೆಯ ದಿವಸ ಮದುವೆ ಮಾಡುವುದಕ್ಕೆ ‘ನರಿಮಂಗಲ’ವೆಂದು ಕರೆಯುವರು. ಈ ರೀತಿಯ ವಿವಾಹ ಕೊಡಗಿನಲ್ಲಿಯೇ ಅನೇಕ ದಶಕಗಳಿಂದಲೂ ವಾಸವಾಗಿರುವ ಗೌಡ, ಅರೆಭಾಷೆ ಗೌಡ, ಲಿಂಗಾಯಿತ, ಮಲೆಯಾಳಿ, ತಮಿಳು, ಕೆಂಬಟ್ಟಿ, ಕಾಪಾಳ, ಯರವ, ಪರಿಶಿಷ್ಟ ಜಾತಿ ಮತ್ತು ವರ್ಗದವರಲ್ಲಿಯೂ ಇದು ಕಂಡುಬಂದಿಲ್ಲ.

ನಮಗೆ ಎದುರಾಗುವ ಪ್ರಶ್ನೆ ಎಂದರೆ ಹುಲಿಬೇಟೆ ಎಂದು ಆಗುತ್ತದೆ ಎಂಬುದು. ಇವರ ನಾಡು, ಕೇರಿ ಅಥವಾ ಊರುಗಳು ಅರಣ್ಯಕ್ಕೆ ಹತ್ತಿರವಿರುವುದರಿಂದ ಕ್ರೂರಮೃಗಗಳು ತೋಟ, ಗದ್ದೆ ನಾಶಮಾಡುವುದರ ಜೊತೆಗೆ ಮನುಷ್ಯರನ್ನು ಕೊಲ್ಲುತ್ತಿದ್ದವು. ಇದರಿಂದ ಬಿಡುಗಡೆ ಹೊಂದಲು ಊರಿನವರೆಲ್ಲ ಸೇರಿ ಎಷ್ಟು ಜನ ಬೇಟೆಗೆ ಹೋಗಬೇಕು ಎಂಬ ತೀರ್ಮಾನ ತೆಗೆದುಕೊಳ್ಳುವರು. ಬೇಟೆಯಲ್ಲಿ ನಿಪುಣ ಹಾಗೂ ಧೈರ್ಯಶಾಲಿಯಾದವರು ಹೋಗುವುದೆಂದು ನಿರ್ಧಾರ ತೆಗೆದುಕೊಂಡು ಅಷ್ಟುಮಂದಿ ಬೇಟೆಗೆ ಹೋಗುವರು. ಒಬ್ಬನೇ ಹೋಗುವ ಧೈ‌‌‌‌ರ್ಯವಿದ್ದರೆ ಬೇಟೆಗೆ ಹೋಗಬಹುದು. ಕೊಡವರು ಅರಣ್ಯಕ್ಕೆ ಬೇಟೆಗೆ ಹೋಗುವಾಗ ತಮ್ಮ ಜೊತೆಯಲ್ಲಿ ಬೇಟೆ ತರಬೇತಿ ಹೊಂದಿದ ನಾಯಿ ಮತ್ತು ಕೋವಿ ಜೊತೆಯಲ್ಲಿ ಇರುತ್ತವೆ. ಇವುಗಳ ಸಹಾಯದಿಂದ ಹುಲಿಯನ್ನು ಬೇಟೆಯಾಡುತ್ತಾರೆ. ಬೇಟೆಗೆ ಹೋದವರೆಲ್ಲಾ ಹುಲಿ ಹೊಡೆಯಲು ಆಗುವುದಿಲ್ಲ. ಬೇಟೆಗೆ ಹೋದವರಲ್ಲಿ ಯಾರ ಕೋವಿಗೆ ಹುಲಿ ಬಲಿಯಾಗುತ್ತದೆಯೋ ಅಂತಹ ವ್ಯಕ್ತಿಯೊಂದಿಗೆ ಮಾತ್ರ ‘ಹುಲಿವಿವಾಹ’ ನಡೆಯುತ್ತದೆ.

ಹುಲಿಯನ್ನು ಬೇಟೆಯಾಡಿದ ನಂತರ ಸಾಧ್ಯವಾದರೆ ಕಾಡಿನಿಂದ ನಾಡಿಗೆ ಗಾಡಿಯ ಮೂಲಕವೋ, ಅಥವಾ ತಲೆ ಮೇಲೆ ಹೊತ್ತು ತರುತ್ತಾರೆ ಸಾಧ್ಯವಿಲ್ಲದಿದ್ದರೆ ‘ಹುಲಿಯ’ ಬಾಲವನ್ನೋ ಅಥವಾ ಅದರ ಚರ್ಮವನ್ನೋ ಕತ್ತರಿಸಿ ತಂದು ಅದರ ಜೊತೆಯಲ್ಲಿ ‘ಹುಲಿ ವಿವಾಹ ಮಾಡುತ್ತಾರೆ.

ಈ ಹಿಂದೆ ಇವರ ಹಲವಾರು ರೀತಿಯ ವಿವಾಹದ ಬಗ್ಗೆ ಗಮನಹರಿಸಲಾಗಿದೆ. ‘ಪುಲಿಮಂಗಲವು’ ಇವೆಲ್ಲವುಗಳಿಗಿಂತ ಭಿನ್ನ, ಯಾಕೆಂದರೆ ಚಿಕ್ಕ ವಯಸ್ಸಿನವರೇ ಇರಲಿ ದೊಡ್ಡವರೇ ಆದರೂ ಏಕಮಾದರಿಯ ವಿವಾಹ ಆಚರಣೆಯನ್ನೇ ಆಚರಿಸಲಾಗುವುದು.

ಕ್ಷೌರಿಕನಿಂದ ಕ್ಷೌರಮಾಡಿಸುವುದು : ವಧುವಿಗೂ-ವರನಿಗೂ ವಿವಾಹ ಗೊತ್ತುಪಡಿಸಿದ ಮೇಲೆ ವರನಿಗೆ ಒಂದು ವಾರವಿದ್ದಂತೆ ಕ್ಷೌರ ಮಾಡಿಸುವ ಪದ್ಧತಿ ಕನ್ನಿಮಂಗಲದಲ್ಲಿ ಇಲ್ಲ. ಆದರೆ ಕನ್ನಿಮಂಗಲದಲ್ಲಿ ಮುಹೂರ್ತ ದಿನದಂದು ಪದ್ಧತಿಯಂತೆ ಕ್ಷೌರ ಮಾಡಿಸಬೇಕಾಗುತ್ತದೆ ಇಲ್ಲಿ ಕನ್ನಿಮಂಗಲ ಪದ್ಧತಿಯನ್ನು ಅನುಸರಿಸುವರು. ‘ನರಿಮಂಗಲ’ ಇದಕ್ಕಿಂತ ಭಿನ್ನ. ಏಕೆಂದರೆ ಹುಲಿ ಬೇಟೆಯಾಡಿದ ವ್ಯಕ್ತಿ ಕಾಡಿನಿಂದ ತನ್ನ ಮನೆಗೆ ಬರುತ್ತಾನೆ. ಅವನ ಮನೆಯವರು ಕ್ಷೌರಿಕನನ್ನು ಕರೆಯಿಸಿ ಅವನಿಂದ ಆ ವ್ಯಕ್ತಿಗೆ ಕ್ಷೌರ ಮಾಡಿಸುತ್ತಾರೆ.

ಅದೇ ಸಮಯದಲ್ಲಿ ‘ವರ’ ಪದ್ದತಿಯಂತೆ ಬಿಳಿ ಕುಪ್ಪಸ ತೊಟ್ಟು, ತಲೆಗೆ ಕೆಂಪು ರೇಷ್ಮೆ ವಸ್ತ್ರವನ್ನು ಕಟ್ಟಿಕೊಂಡಿರಬೇಕು. ಕನ್ನಿಮಂಗಲದ ಭೊಜನಕಾರನಾಗಿ ‘ಭಾವಮ್ಯೆದುನ’ ಪಕ್ಕದಲ್ಲಿರುತ್ತಾನೆ. ಆದರೆ ಇಲ್ಲಿ ಆತ್ಮೀಯ ಸ್ನೇಹಿತ ಅಥವಾ ಬೇಟೆಯಲ್ಲಿ ಬಾಗಿಯಾದ ವ್ಯಕ್ತಿ ಆ ಸಂದರ್ಭದಲ್ಲಿ ಜೊತೆಯಾಗಿರುತ್ತಾನೆ. (Totally best person in the society ) ವಧುವಿನ ಬದಲಿಗೆ ಬೇಟೆಯಾಡಿ ತಂದ ಹುಲಿ ಚರ್ಮ, ಬಾಲ, ಅಥವಾ ಅದಕ್ಕೆ ಸಂಬಂಧಪಟ್ಟ ಯಾವುದಾದರು ಒಂದು ಭಾಗ ಸಂಕೇತವಾಗಿರುತ್ತದೆ.

ಕ್ಷೌರ ಮಾಡಿಸಿಕೊಂಡ ನಂತರ, ಅರಿಸಿನವನ್ನು ಮ್ಯೆಗೆಲ್ಲಾ ತಿಕ್ಕಿ ಬಿಸಿನೀರಿನಿಂದ ಸ್ನಾನ ಮಾಡಿಸಲಾಗುತ್ತದೆ. ಆಮೇಲೆ ‘ಕನ್ನಿಕೊಂಬರೆ’ಯಲ್ಲಿ ಜ್ಯೋತಿ ಉರಿಯುತ್ತದೆ. ಆ ದೀಪಕ್ಕೆ ಅಕ್ಷತೆಯನ್ನು ಹಾಕಿ ಹಣ್ಣು, ಕಾಯಿ ಇಟ್ಟು ಪೂಜೆ ಮಾಡುವನು.

ವರನು ಅವನ ಮನೆಯ ನಡುಮನೆಗೆ ಬಂದು ಅಲ್ಲಿ ಇಟ್ಟಿರುವ ‘ನೆಲ್ಲಕ್ಕಿ ನಡುಬಾಡೆಗೆ’ ಅಕ್ಷತೆ ಹಾಕಿ ಕೈಮುಗಿಯುವನು. ಅನಂತರ ‘ತಕ್ಕ’ ಹಿರಿಯರಿಗೆ, ಪಾದಮುಟ್ಟಿ ನಮಸ್ಕರಿಸುವನು. ಈ ಸಮಾರಂಭದಲ್ಲಿ ಕುಟುಂಬದ ಸದಸ್ಯರು, ರಕ್ತಸಂಬಂಧಿಗಳು, ಮುತ್ತ್ಯೆದೆಯರು, ಆ ಊರಿನ ಜನರು ಕೂಡ ಹಾಜರಿರುತ್ತಾರೆ. ಕ್ಷೌರ ಮಾಡುವ ಸ್ಥಳದಲ್ಲಿ ಚಾಪೆಯನ್ನು ಹಾಸಿ ಅದರ ಮೇಲೆ ಮೂರು ಕಾಲುಳ್ಳ ಮಣೆಯನ್ನು ಇಟ್ಟು ಅದರ ಮೇಲೆ ವರನನ್ನು ಕೂರಿಸಲಾಗುವುದು. ವರನ ಪಕ್ಕದಲ್ಲಿ ಒಂದು ಕಂಚಿನ ಪಾತ್ರೆಯನ್ನು ಇಟ್ಟು, ಅದರೊಳಗಡೆ ಹಾಲು, ಚಿನ್ನದ ಚೂರು ಹಾಕಿರಲಾಗಿರುತ್ತದೆ. ಕಾರಣವೇನೆಂದರೆ ನೀರಿನ ಬದಲು ಕ್ಷೌರಿಕ ವರನಿಗೆ ಹಾಲನ್ನು ಬಳಸಬೇಕು, ವರನ ಇನ್ನೊಂದು ಬದಿಯಲ್ಲಿ ಒಂದು ಚಿಪ್ಪು ಬಾಳೆಹಣ್ಣು, ತೆಂಗಿನಕಾಯಿ, ಎಲೆ, ಅಡಿಕೆ, ಮತ್ತು ಕುಕ್ಕೆಯಲ್ಲಿ ಒಂದು ಸೇರು ಅಕ್ಕಿಯನ್ನು ಇಟ್ಟಿರಲಾಗಿರುತ್ತದೆ.

ಕ್ಷೌರ ಮಾಡಿದ ನೀರು, ಕೂದಲನ್ನು ಶೇಖರಿಸಿ ಒಂದು ಪಾತ್ರೆಯಲ್ಲಿ ಇಡುವರು. ಕೂದಲನ್ನು ನೆಲಕ್ಕೆ ಹಾಕಬಾರದೆಂಬುದು ಅವರ ನಂಬಿಕೆ. ಹಾಲು ಮತ್ತು ಕೂದಲನ್ನು ಆಲದ ಮರದ ಬುಡಕ್ಕೆ ಹಾಕುವರು. ಹಾಲಿನ ಪಾತ್ರೆ ಒಳಗೆ ಇರುವ ಚಿನ್ನದ ವಸ್ತುವನ್ನು ವರನು ತೆಗೆದುಕೊಳ್ಳುವನು. ವರ ಕ್ಷೌರಮಾಡಿಸಿಕೊಂಡ ನಂತರ ಅಲ್ಲೆ ಇದ್ದು ಇರ್ವರು ಅಥವಾ ಮೂವರು ಕ್ಷೌರ ಮಾಡಿಸಿಕೊಳ್ಳಬೇಕು. ಅದು ಇವರಲ್ಲಿ ಇರುವ ಪದ್ದತಿ. ಕ್ಷೌರದ ಸಂದರ್ಭದಲ್ಲಿ ಬಳಸಲಾದ ಚಾಪೆ, ಕುಕ್ಕೆಯಲ್ಲಿಟ್ಟಿದ್ದ ವಸ್ತುಗಳ (ಅದು ‘ಒರ್ ಹಣ’) ನ್ನು ಕ್ಷೌರಿಕನಿಗೆ ಗೌರವಯುತವಾಗಿ ಕೊಡಲಾಗುತ್ತದೆ.

ಅಲಂಕಾರ : ಕ್ಷೌರಮಾಡಿಸಿಕೊಂಡ ವರನನ್ನು ಅತನ ಸ್ನಾನದ ಮನೆಗೆ ಕರೆದುಕೊಂಡು ಹೋಗುವರು. ಪ್ರಾರಂಭದಲ್ಲಿ ಅವನ ಕೈ ಕಾಲು, ಬೆನ್ನು, ಮುಖಕ್ಕೆ ಅರಿಸಿನ ತಿಕ್ಕಿದ ನಂತರ ತಂದೆ ತಾಯಿ ಶಾಸ್ತ್ರೋಕ್ತವಾಗಿ ಮೂರು ಚಂಬು ಬಿಸಿನೀರನ್ನು ತಲೆ ಮೇಲೆ ಮುತ್ತೈದೆಯರು ಹಾಕುವರು. ಮದುವೆ ಗಂಡಿಗೆ ಬಿಳಿಯ ಕುಪ್ಪಸ ಸೊಂಟಕ್ಕೆ ರೇಷ್ಮೆಯ ಕೆಂಪು ದಟ್ಟಿ, ತಲೆಗೆ ‘ಪಾನಿಮಂಡೆತುಣಿ’ ಸುತ್ತಲಾಗುವುದು. ಹಾಗೆಯೆ ಸೊಂಟಕ್ಕೆ ಪೀಚೆಕತ್ತಿ, ತೊಡಂಗ್, ಓಡಿಕತ್ತಿ, ಕುತ್ತಿಗೆಗೆ ಚಿನ್ನದ ಸರ ಹಾಗೂ ವಜ್ರ, ಹವಳದ ಮಾಲೆ ಹಾಕುವರು. ಕೈಗೆ ಚಿನ್ನದ (ಕಟ್ಟಿಬಳೆ) ಬಳೆಗಳು ಬೆರಳಿಗೆ ಉಂಗುರವನ್ನು ಜೊತೆಗೆ ಇನ್ನು ಮುಂತಾದ ಆಭರಣಗಳನ್ನು ತೊಡಿಸುವರು. ವರನು ಕನ್ನಿಮಂಗಲದ ಬಿಳಿ ಉಡುಪನ್ನು ಧರಿಸುತ್ತಾನೆ. ಈ ಎಲ್ಲಾ ಅಲಂಕಾರವು ಸ್ನಾನದ ಮನೆಯಲ್ಲಿಯೇ ನಡೆಯುತ್ತದೆ. ಅಲ್ಲಿಂದಲೇ ಮೆರವಣಿಗೆ, ವಾದ್ಯಸಮೇತ ಪ್ರಾರಂಭವಾಗುತ್ತದೆ.

ಚಪ್ಪರ : ಕೊಡವ ಪದ್ಧತಿಯ ಪ್ರಕಾರ ವಿವಾಹದ ಹಿಂದಿನ ಚಪ್ಪರದ ದಿನವನ್ನು ‘ಕರಿಕ್‌ಮುರಿಪ’ ಎಂಥಲೂ, ಅದೇ ಕನ್ನಡದಲ್ಲಿ ‘ವಿವಾಹದ ಹಿಂದಿನ ದಿನದ ಚಪ್ಪರವೆಂದರ್ಥ’. ಆದರೆ ‘ನರಿಮಂಗಲ’ದ ಆಚರಣೆಯಲ್ಲಿ ಬೇಟೆಯಾಡಿದ ದಿವಸದಂದೇ ಅಥವಾ ಮರುದಿನ ಚಪ್ಪರವನ್ನು ಹಾಕುವರು. ಅಂದರೆ ಚಪ್ಪರವನ್ನು ಹಾಕುವವರ‍್ಯಾರು? ಆ ಊರಿನ, ನಾಡಿನ ಮತ್ತು ಕೇರಿಯ ಜನರೆಲ್ಲರೂ ಒಟ್ಟಿಗೆ ಕೂಡಿ ಹಾಕುವರು. ಸಂಪ್ರದಾಯದಂತೆ ಹತ್ತಿ ಮರದ ಅಥವಾ ಹಾಲು ಬರುವ ಏಳುಕಂಬಗಳನ್ನು ತಮದು ಐದು ಕಡೆಗೂ ನಿಲ್ಲಿಸುವರು. ಆ ಚಪ್ಪರದ ಒಳಗೆ ಗಂಡು ಮತ್ತು ಹುಲಿ ಹಿಡಿಸುವಷ್ಟು ದೊಡ್ಡ ಮಂಟಪನ್ನು ಸಹ ಕಟ್ಟುವರು. ಚಪ್ಪರದ ಮೇಲಿನ ಭಾಗಕ್ಕೆ ಸೊಪ್ಪಿನಿಂದ ಮುಚ್ಚಿ ಕಂಬಕ್ಕೆ ಮಾವಿನ ಸೊಪ್ಪು ಹಾಗೂ ಹೂವನ್ನು ಸೇರಿಸಿ ಕಟ್ಟುವರು.

ಚಪ್ಪರದ ಆರಂಭದ ಬಾಗಿಲಿಗೆ ಬಾಳೆಕಂಬಗಳನ್ನು ಕಟ್ಟಿ ತೋರಣಗಳನ್ನು ಮಾಡಿ ಉದ್ದಕ್ಕೆ ಹಾಕುವರು. ಚಪ್ಪರ ಹಾಗೂ ಮಂಟಪಕ್ಕೆ ಬಿಳಿಯ ಬಟ್ಟೆಯನ್ನು ಮೇಲಕ್ಕೆ ಕಟ್ಟುವರು. ಚಪ್ಪರವು ನೋಡಲು ತುಂಬಾ ಆಕರ್ಷಣೀಯವಾಗಿರುತ್ತದೆ.

ಮೆರವಣಿಗೆ : ಶೃಂಗಾರ ಮಾಡಿಕೊಂಡು ಹುಲಿ ಕೊಂದ ವೀರನು ಸಾಂಪ್ರದಾಯಿಕ ಬಿಳಿ ಉಡುಪನ್ನು ಧರಿಸಿದ್ದು, ಅವನು ಕೈಯಲ್ಲಿ ಕೋವಿ ಹಿಡಿದು ಭಾರಿ ಗಂಭೀರತೆಯ ಹೆಜ್ಜೆಯನ್ನು ಹಾಕುತ್ತಿರುತ್ತಾನೆ. ಆಕೋವಿಯ ತುದಿಗೆ ಕೆಂಪು ಬಟ್ಟೆಯನ್ನು ಕಟ್ಟಿರುತ್ತಾನೆ. ಇದಕ್ಕೆ ‘ಓಜ’ ಕಟ್ಟುವುದೆಂದರ್ಥ. ಈ ಮೆರವಣಿಗೆಯಲ್ಲಿ ಅನೇಕ ಕೊಡವರು, ಕೊಡವತಿಯರು, ಇತರರು, ವಯಸ್ಕರು, ಹಿರಿಯರು, ಮಕ್ಕಳು, ಹುಡಗು-ಹುಡುಗಿಯರು ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಇವರಲ್ಲಿ ಕೆಲವರು ಸಾಂಪ್ರದಾಯಿಕ ಕೊಡವ ಉಡುಪು ಧರಿಸಿದ್ದರೆ, ಮತ್ತೆ ಕೆಲವರು ಸಾಮಾನ್ಯ ಉಡುಗೆಯಲ್ಲಿಯೇ ಇರುತ್ತಾರೆ. ವರನು ಕೈಯಲ್ಲಿ ಕೋವಿ ಹಿಡಿದುಕೊಂಡು ಗತ್ತಿನಿಂದ ಹೆಜ್ಜೆ ಹಾಕುತ್ತಿರುತ್ತಾನೆ. ಕೋವಿಯನ್ನು ಬಳಸದೆ ಬೇರೆ ಮತ್ತಿತರ ಆಯುಧಗಳಿಂದ ಹುಲಿಯನ್ನು ಬೇಟೆಯಾಡಿದ್ದರೆ ತಲೆಗೆ ಕೆಂಪು ಬಟ್ಟೆಯನ್ನು ಕಟ್ಟಿರಲಾಗುತ್ತದೆ.

ಇದರಿಂದ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರೂ ಆ ಕೆಂಪು ಬಟ್ಟೆಯ ಕೋವಿಯ ತುದಿಯಲ್ಲಿ ಕಾಣಿಸುವುದರಿಂದ ಆ ವ್ಯಕ್ತಿಯೇ ಹುಲಿ ಸಾಯಿಸಿದವನೆಂದು ಜನರು ಪತ್ತೆ ಹಚ್ಚುವರು. ಮೆರವಣಿಗೆಯು ಸಾಗುವಾಗ ಕೊಡವ ಹಿರಿಯರು ನಾಲ್ಕು ಮಂದಿ ‘ದುಡಿ’ ಹಿಡಿದು ಮುಂದೆ ಮುಂದೆ ಸಾಗುತ್ತಿದ್ದರೆ ಇನ್ನು ನಾಲ್ಕು ಜನ ‘ಮಂಗಲಪಟ್ ‘ ನ್ನು ಹಾಡುತ್ತಾ ಸಾಗುವರು. ಹೀಗೆ ಮೆರವಣಿಗೆಯಲ್ಲಿ ಆ ಊರಿನ, ಕೇರಿ, ನಾಡಿನ ಇತರ ಜನಾಂಗದವರೂ ಪಾಲ್ಗೊಳ್ಳಬಹುದು. ಸಾರ್ವಜನಿಕರೂ ಕೂಡ ಭಾರಿ ಸಂತೋಷದಿಂದ ಮೆರವಣಿಗೆಯಲ್ಲಿ ಪಾಲ್ಗೊಳ್ಳವರು ಹೀಗೆ ಮೆರವಣಿಗೆಯು ದಾಗುತ್ತಾ ಚಪ್ಪರವಿರುವಲ್ಲಿಗೆ ಬರುತ್ತದೆ.

ಧಾರೆ : ಕೊಡಗಿನಾದ್ಯಂತ ಊರು, ಕೇರಿ ಮತ್ತು ನಾಡುಗಳಿದ್ದು ತಮ್ಮದೇ ಆದ ಮೈದಾನಗಳನ್ನು ಹೊಂದಿವೆ. ಇವುಗಳನ್ನು ‘ಊರ್ ಮಂದ್’ ಮತ್ತು ‘ನಾಡ್ ಮಂದ್’ ಎಂದು ಕರೆಯುವರು. ಪ್ರಾದೇಶಿಕತೆಗನುಗುಣವಾಗಿ ದೈವಗಳಿದ್ದು, ಅಲ್ಲಿ ಜಾತ್ರೆ ಉತ್ಸವ ಮತ್ತು ಹಬ್ಬವನ್ನು ಆಚರಿಸಲಾಗುತ್ತದೆ. ಒಬ್ಬ ಕೊಡವ ಹುಲಿಯನ್ನು ಕೊಂದರೆ ‘ಊರ್ ಮಂದ್’ನಲ್ಲೂ, ಚಿರತೆ ಮತ್ತು ಕಿರುಬವನ್ನು ಕೊಂದರೆ ‘ನಾಡ್‌ಮಂದ್”ನಲ್ಲಿ ವಿವಾಹ ಮಾಡುವ ಆಚರಣೆ ಇವರಲ್ಲಿದೆ. ಈ ಮೊದಲೇ ತಿಳಿಸಿದ ಹಾಗೆ ಹುಲಿಯನ್ನು ಕೊಂದ ವ್ಯಕ್ತಿ ಕೋವಿ ಹಿಡಿದುಕೊಂಡು ನಡೆಯುತ್ತಿದ್ದರೆ, ಅವನ ಅಕ್ಕಪಕ್ಕ ಸಾಂಪ್ರದಾಯಿಕ ಉಡುಪನ್ನು ಧರಿಸಿದ್ದ ಕೊಡವರು ಮೆರವಣಿಗೆಯಲ್ಲಿ ಬರುತ್ತಿರುತ್ತಾರೆ. ಆಗ ವಾದ್ಯೋಪಕರಣಗಳ ನಾದ ಹಾಗೂ ದುಡಿ ‘ಕೊಟ್ಟ ಪಾಟ್’ ಕೇಳುತ್ತಿರುತ್ತದೆ. ಹೀಗೆ ಮರವಣಿಗೆ ನಡೆಯುತ್ತಾ, ಮೊದಲೆ ಚಪ್ಪರ ಹಾಕಲಾಗಿದ್ದ ‘ಊರ್ ಮಂದ್’ ಹತ್ತಿರ ಹೋಗುವುದು ಪದ್ಧತಿ.

ಚಪ್ಪರದೊಳಗೆ ಹುಲಿಕೊಂದ ವ್ಯಕ್ತಿಯನ್ನು ಕರೆದು ಎಡಗಡೆ ಕುಳಿತುಕೊಂಡು ಕೈಯಲ್ಲಿ ಕೋವಿಯನ್ನು ಹಿಡಿದುಕೊಂಡಿರುತ್ತಾನೆ. ಬಲಗಡೆ ಸತ್ತಿರುವ ಹುಲಿ, ಚರ್ಮ, ಅಥವಾ ಕತ್ತರಿಸಿ ತಂದ ಬಾಲವನ್ನು ಇಟ್ಟು ಅದಕ್ಕೆ ಬೂಮಲೆ ಹಾಕಿ ಶೃಂಗಾರ ಮಾಡಿರಲಾಗಿತ್ತದೆ. ಊರಿನ ಹಿರಿಯರು, ‘ತಕ್ಕ’ ಹೀಗೆ ಅನೇಕರು ಪಕ್ಕದಲ್ಲಿಯೇ ಇರಿಸಿದ ತಟ್ಟೆಯಲ್ಲಿ ಅರಿಸಿನ ಮಿಶ್ರಿತ ಅಕ್ಕಿಯ ಅಕ್ಷತೆಯನ್ನು ವರನ ತಲೆಯ ಮೇಲೆ ಹಾಕಿ ಆಶೀರ್ವಾದ ಮಾಡುತ್ತಾರೆ. ಇದನ್ನೆ ‘ನರಿಮಂಗಲ’ ಎಂದು ಕೊಡವರು ಕರೆಯುವರು.

‘ನರಿಮಂಗಲ’ದಲ್ಲಿ ಪ್ರಧಾನವಾಗಿ ‘ದುಡಿ’ ವಾದ್ಯವನ್ನು ಬಳಸುವರು. ಇವುಗಳನ್ನು ಬಡಿಯುವವರು ಕೊಡವರು ಕೊಂಬುಕೊಟ್ಟವಾಲಗವು ಇರುತ್ತದೆ. ಕೊಂಬು-ಕಹಳೆ, ದೋಣು, ಮೋರಿ, ವಾಲಗ, ತಮಟೆ, ಚಿಣಿ-ಮಿಣಿ, ಪರೆಯನ್ನು ಕೂಡ ಬಳಸಲಾಗುತ್ತದೆ. ಕೊಂಬುಕೊಟ್ಟವಾಲಗವನ್ನು ಬಾರಿಸುವವರು ಮಾತ್ರ ದಲಿತರಾಗಿರುತ್ತಾರೆ

ಕೊಡವರು, ಐರಿಯವರು, ಹೆಗ್ಗಡೆಯವರು, ಆರೇಭಾಷೆಗೌಡರು, ಒಕ್ಕಲಿಗರು, ತುಳು, ತಮಿಳು, ಹಾಗೂ ಇತರ ಜನಾಂಗದವರು ಕೂಡ ಕುಣಿತದಲ್ಲಿ ಭಾಗವಹಿಸಬಹುದಾಗಿದೆ.

ಕೊಡವ ಸ್ತ್ರೀ- ಪುರುಷರು, ವೃದ್ಧರು, ಹಿರಿಯರು, ಮಕ್ಕಳು, ಇತರರೂ ಕೂಡ ಭಾಗವಹಿಸಬಹುದಾಗಿದೆ.