ವೇ.ಬ್ರ. ಶ್ರೀ ಕೊಣನೂರು ಶ್ರೀಕಂಠಶಾಸ್ತ್ರಿಗಳು ಮುಲಕನಾಡು ಸ್ಮಾರ್ತಬ್ರಾಹ್ಮಣರ ಸಂಪ್ರದಾಯಸ್ಥ ಮಧ್ಯಮವರ್ಗದ ಕುಟುಂಬಕ್ಕೆಕ ಸೇರಿದವರು. ಇವರು ಆಗಿನ ಪ್ರಸಿದ್ಧ ಆಸ್ಥಾನ ವೈಣಿಕ ವಿದ್ವಾನ್‌ ವೀಣೆ ಶಾಮಣ್ಣನವರ ಬಳಿ ಸುಮಾರು ೧೬ ವರ್ಷಗಳ ಕಾಲ ಸಂಗೀತ, ವೀಣೆ ಅಭ್ಯಾಸ ಮಾಡಿದ್ದರು. ಜೊತೆಗೆ ಸಂಸ್ಕೃತ ಸಾಹಿತ್ಯಾಧ್ಯಯನ ಮಾಡಿ ಸಂಗೀತ ಸಾಹಿತ್ಯಗಳಡರಲ್ಲೂ ಪ್ರಾವೀಣ್ಯರಾಗಿದ್ದರು. ಇವರಿಗೆ ಪಿಟೀಲು ವಾದನದಲ್ಲೂ ಪರಿಶ್ರಮವಿತ್ತು. ಇವರ ಹರಿಕಥಾ ವಿದ್ವಾಂಸರಾಗಿದ್ದು ಶ್ರೀಮನ್‌ ಮಹಾರಾಜಶ್ರೀ ಕೃಷ್ಣರಾಜಒಡೆಯರ್ ರವರ ಮೆಚ್ಚುಗೆ ಗಳಿಸಿ ‘ಕೀರ್ತನ ಕೇಸರಿ’ ಎಂಬ ಬಹಿರುದನ್ನೂ ಖಿಲ್ಲತ್ತು ಜೋಡಿ ಶಾಲುಗಳೊಂದಿಗೆ ಪಡೆದಿದ್ದರು. ಕಾಶೀ ಮಹಾರಾಜರು, ಬರೋಡ ಮಹಾರಾಜರ ಸಮ್ಮುಖದಲ್ಲಿ ಹರಿಕಥೆಯನ್ನು ಮಾಡಿ ಅವರುಗಳಿಂದಲೂ ಸನ್ಮಾನಿತರಾಗಿದ್ದರು.

ಶ್ರೀಕಂಠಶಾಸ್ತ್ರಿಗಳು ಪರಮ ಸಾತ್ವಿಕರು ಹಾಗೂ ಶ್ರೀ ರಾಮನ ಪರಮ ಭಕ್ತರು. ಪ್ರತಿವರ್ಷವೂ ತಮ್ಮ ಮನೆಯಲ್ಲಿ ರಾಮೋತ್ಸವವನ್ನು ಏರ್ಪಡಿಸುತ್ತಿದ್ದರು. ಸಂಗೀತ, ಸಾಹಿತ್ಯಗಳೆರಡರಲ್ಲೂ  ಪಾಂಡಿತ್ಯಗಳಿಸಿದ್ದ ಶಾಸ್ತ್ರಿಗಳು ನಿರರ್ಗಳ ವಾಕ್ಪಟುತ್ವ, ಅದ್ಭುತ್ವ ಗ್ರಹಣ ಶಕ್ತಿ, ದೈವದತ್ತವಾದ ಶಾರೀರ ಸಂಪತ್ತಿನಿಂದ ಕಥಾ ಕಾಲಕ್ಷೇಪವನ್ನು ಮಾಡುತ್ತಾ ದೇಶಸಂಚಾರ ಮಾಡಿ ಎಲ್ಲಡೆಯಲ್ಲೂ ಜನಮನಸೆಳೆದು ಕಲಾದೀವಿಗೆಯನ್ನು ಬೆಳಗಿಸಿ ಖ್ಯಾತಿ ಗಳಿಸಿದವರು. ಇವರಿಗೆ ತಕ್ಕ ಪತ್ನಿ ಶಾರದಮ್ಮನವರು ಇವರಿಗೆ ೫ ಜನ ಮಕ್ಕಳು.

ಕೊಣನೂರು ಸೀತಾರಾಮಶಾಸ್ತ್ರಿಗಳು ಶ್ರೀಕಂಠಶಾಸ್ತ್ರಿಗಳ ವರಪುತ್ರನಾಗಿ ರಾಕ್ಷಸ ನಾಮ ಸಂವತ್ಸರದ ವೈಶಾಖಮಾಸ ಚತುರ್ದಶೀ ಶುಕ್ರವಾರದಂದು ಅಂದರೆ ಕ್ರಿ.ಶ. ೨೨.೫.೧೯೧೬ರಲ್ಲಿ ಕೊಣನೂರಿನಲ್ಲಿ ಜನಿಸಿದರು.

ಸೀತಾರಾಮಶಾಸ್ತ್ರಿಯವರು ತಮ್ಮ ಐದನೇ ವಯಸ್ಸಿನಲ್ಲಿ ಶಾಲೆಗೆ ಸೇರಿ ಲೌಕಿಕ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ ಹೈಯರ್ ಸೆಕೆಂಡರಿ ಮೂರನೇ ತರಗತಿಯವರೆಗೆ ವ್ಯಾಸಂಗ ಮಾಡಿದರು.

ಪ್ರತಿನಿತ್ಯ ತಮ್ಮ ಮನೆಯಲ್ಲಿ ನಡೆಯುತ್ತಿದ್ದ ಸಂಗೀತ, ಹರಿಕಥೆ ಪಾಠಗಳನ್ನು ಕೇಳುತ್ತಾ, ಇವುಗಳಿಂದ ಗಾಢವಾಗಿ ಪ್ರಭಾವಿತರಾಗಿ ಲೌಕಿಕ ವಿದ್ಯೆಯಲ್ಲಿ ಆಸಕ್ತಿ ಕಳೆದುಕೊಂಡು ತಮ್ಮ ತಂದೆಯಂತೆಯೇ ಕೀರ್ತನಕಾರರಗಬೇಕೆಂದುಕೊಂಡು ಲೌಕಿಕ ವಿದ್ಯೆಯನ್ನು ಅಲ್ಲಿಗೆ ಮುಗಿಸಿ ಕೀರ್ತನ ಕಲೆಯ ಬಗ್ಗೆ ಹೆಚ್ಚು ಆಸಕ್ತಿ ತಳೆದರು. ಇವರ ಹಿರಿಯಣ್ಣ ಕೋಣನೂರು ರಾಮಕೃಷ್ಣಶಾಸ್ತ್ರಿಯವರಿಗೆ ತಮ್ಮ ತಂದೆ ಹರಿಕಥಾ ಭಾಗಗಳನ್ನು ಬೋಧಿಸುತ್ತಿದ್ದಾಗ, ತಾವು ಏಕಾಗ್ರಚಿತ್ತದಿಂದ ಅದನ್ನು ಗ್ರಹಿಸಿ ಏಕಾಂತದಲ್ಲಿ ಅದನ್ನು ಅನುಕರಣೆ ಮಾಡುತ್ತಿದ್ದರು. ಶ್ರೀಕಂಠಶಾಸ್ತ್ರಿಯವರು ಸೀತಾರಾಮಶಾಸ್ತ್ರಿಯವರ ಶ್ರದ್ಧಾಸಕ್ತಿ ಕಂಡು ಅಪಾರ ಸಂತೋಷಗೊಂಡರು.

ಗಣೇಶೋತ್ಸವ ಸಂದರ್ಭದಲ್ಲಿ ಮೈಸೂರಿನ ಕಶೀಪತಿ ಲಾಯದಲ್ಲಿ ಶ್ರೀಕಂಠಶಾಸ್ತ್ರಿಯವರ ಕಾರ್ಯಕ್ರಮವನ್ನು ಏರ್ಪಡಿಸಲು ಅಲ್ಲಿನ ಕಾರ್ಯಕರ್ತರು ಶಾಸ್ತ್ರಿಗಳ ಮನೆಗೆ ಬಂದಾಗ ಆ ದಿನ ಶಾಸ್ತ್ರಿಗಳು ಬೇರೆಡೆ ಕಾರ್ಯಕ್ರಮಕ್ಕೆ ಒಪ್ಪಿಕೊಂಡಿದ್ದು ಕಾರ್ಯಕರ್ತರು ನಿರಾಶರಾಗಿ ಹಿಂದಿರುಗುತ್ತಿದ್ದಾಗ ಅಲ್ಲಿಯೇ ಇದ್ದ ಬಾಲಕ ಸೀತಾರಾಮಶಾಸ್ತ್ರಿ ತನಗೆ ಅವಕಾಶಾ ಮಾಡಿಕೊಟ್ಟರೆ ತಾನೇ ಅಂದಿನ ಹರಿಕಥೆಯನ್ನು ಮಾಡುತ್ತೇನೆಂದು ಹೇಳಿದರು. ಹುಡುಗನ ಧೈರ್ಯ, ಹುಮ್ಮಸ್ಸನ್ನು ಗಮನಿಸಿದ ಕಾರ್ಯಕರ್ತರು ಹುಡುಗನಿಗೆ ಒಂದು ಅವಕಾಶ ಮಾಡಿಕೊಟ್ಟು ನೋಡೋಣವೆಂದುಕೊಂಡು ಅವನ ಕಾರ್ಯಕ್ರಮವನ್ನೇ ಏರ್ಪಡಿಸಿದರು. ಅಂದಿನ ಕಾರ್ಯಕ್ರಮ ಅಮೋಘವಾಗಿ ನಡೆದು ಸಭಿಕರು ಹುಡುಗನ ವಾಚಾಳತ್ವ, ಧೈರ್ಯ ಮತ್ತು ತಂದೆಯಂತೆಯೇ ಪ್ರತಿಯೊಂದು ಭಾಗವನ್ನು ಅನುಕರಿಸಿದ್ದನ್ನೂ ಕಂಢು ಆಶ್ಚರ್ಯಭರಿತನಾಗಿ ಆನಂದಿಸಿದರು.

ಶ್ರೀಕಂಠಶಾಸ್ತ್ರಿಗಳು ತಮ್ಮ ಮಗನ ಈ ಕಾರ್ಯಕ್ರಮದ ಬಗ್ಗೆ ಸಭಿಕರ ಪ್ರಶಂಸೆಗಳನ್ನು ಕೇಳಿ ತುಂಬಾ ಸಂತೋಷಗೊಂಡು ಅಂದಿನಿಂದ ಹರಿಕಥೆಗಳನ್ನು ಪೀಠಿಕಾ ಪ್ರಕರಣಗಳೊಂದಿಗೆ ಸಂಪ್ರದಾಯಬದ್ಧವಾಗಿ ಶುದ್ಧವಾಗಿ ಹೇಳಿಕೊಡಲಾರಂಭಿಸಿದರು. ಸೀತಾರಾಮಶಾಸ್ತ್ರಿಗಳು ತಮ್ಮ ಹದಿನಾಲ್ಕನೆಯ ವಯಸ್ಸಿನ ಹೊತ್ತಿಗೆ ಕೆಲವು ಹರಿಕಥೆಗಳನ್ನು ಕಂಠಪಾಠ ಮಾಡಿಕೊಂಡು, ಮೈಸೂರು ಮಹಾರಾಜರ ಸಮ್ಮುಖದಲ್ಲಿ ಹರಿಕಥೆಯನ್ನು ಮಾಡುವ ಸುಯೋಗ ಒದಗಿಬಂದು ಪ್ರಭುಗಳ ಮೆಚ್ಚುಗೆ ಗಳಿಸಿದರು.

ತಂದೆಯವರ ಮಾರ್ಗದರ್ಶನದಂತೆ ಇನ್ನೂ ಅನೇಕ ಕಥಾಭಾಗಗಳನ್ನು ಮನನ ಮಾಡಿಕೊಂಡು ನಗರದಲ್ಲಿ ಜರುಗುತ್ತಿದ್ದ ರಾಂಓತ್ಸವ, ಗಣೇಶೋತ್ಸವ ಮುಂತಾದ ಸಂಧರ್ಭದಲ್ಲಿ ಕಾರ್ಯಕ್ರಮಗಳನ್ನು ನೀಡಿ ಕಲಾಭಿಮಾನಿಗಳ ಮೆಚ್ಚುಗೆ ರೂಪದಲ್ಲಿ ಸುಮಾರು ೧೬ಕ್ಕೂ ಹೆಚ್ಚು ಪದಕಗಳನ್ನೂ, ಬಹುಮಾನಗಳನ್ನೂ ಪಡೆದರು. ತಮ್ಮ ೨೬ನೇ ವಯಸ್ಸಿನ ಹೊತ್ತಿಗೆ ಇನ್ನೂ ಕೆಲವು ಕಥಾಪ್ರಸಂಗಗಳೊಂದಿಗೆ ಕಥೆಯಲ್ಲಿ ಉಪಯೋಗಿಸಬಹುದಾದ ಭಾಮಿನಿ ಷಟ್ಪದಿ, ಕಂದಗಳು, ಹಳೆಯ ಹಾಗೂ ನವ್ಯಗೀತೆಗಳು, ಉರುಟಣೆ, ಉಯ್ಯಾಲೆ, ಬಾಗಿಲು ತಡೆವ ಹಾಡು, ಗುಂಡಪ್ಪನ ಹಾಡುಗಳು, ಸಂಸ್ಕೃತ ಶ್ಲೋಕಗಳು, ಭಗವದ್ಗೀತೆಯ ವಿಷಯಗಳು. ರಾಮಾಯಣ, ಮಹಾಭಾರತ,  ಭಾಗವತ, ಗ್ರಂಥಗಳ ಅನೇಕ ವಿಷಯಗಳಲು, ಸಂದರ್ಭಕ್ಕೆ ತಕ್ಕಂತೆ ಅನೇಕ ಉಪಕಥೆಗಳು, ಮಂತ್ರಗಳು,ಭೋಜನ ಪದಾರ್ಥದ ಹೆಸರುಗಳು, ಒಡವೆಗಳ ಹೆಸರಿನ ಮಾಲಿಕೆ, ಅನೇಕ ಸೀರೆಗಳ ಹೆಸರಿನ ಮಾಲಿಕೆ, ಅನೇಕ ಊರುಗಳ ಹೆಸರಿನ ಮಾಲಿಕೆ ಮುಂತಾದವುಗಳನ್ನು ಕಂಠಪಾಠ ಮಾಡಿಕೊಂಡು ಶ್ರೋತೃಗಳೆದರು ಲೀಲಾಜಾಲವಾಗಿ ನಿರರ್ಗಳವಾಗಿ ಹಾಡಿ ಜನಾಕರ್ಷಣೆಯನ್ನು ಮಾಡುತ್ತಾ, ರಸಿಕರನ್ನು ಮಂತ್ರ ಮುಗ್ಧರನ್ನಾಗಿ ಮಾಡುವಷ್ಟು ಚತರುರಾಗಿದ್ದರು. ೧೯೪೨ರಲ್ಲಿ ಸಂಪ್ರದಾಯ ಕುಟುಂಬಕ್ಕೆ ಸೇರಿದ ಮಧುಗಿರಿಯ ಸುಶೀಲಮ್ಮ ಎಂಬ ವಧುವೊಂದಿಗೆ ವಿವಾಹವಾಯಿತು.

ಶಾಸ್ತ್ರಿಗಳ ತಂದೆಯವರು ಸಮಯ ಸಿಕ್ಕಾಗ ಮಗನ ಕಾರ್ಯಕ್ರಮಗಳಿಗೆ ಹೋಗಿ ಹಾಜರಿದ್ದು, ಕಾರ್ಯಕ್ರಮ ಮುಗಿದು ಹಿಂದಿರುಗಿದ ನಂತರ ಅಂದಿನ ಕಾರ್ಯಕ್ರಮದ ಬಗ್ಗೆ ವಿಮರ್ಶೆ ಮಾಡಿ ಅಂದು ಮಾಡಿದ ಲೋಪ ದೋಷಗಳನ್ನು ತಿದ್ದುತ್ತಾ ಮಾರ್ಗದರ್ಶನ ಮಾಡುತ್ತಿದ್ದರು . ಇಂತಹ ಸಂದರ್ಭದಲ್ಲಿ ಶ್ರೀಕಂಠಶಾಸ್ತ್ರಿಯವರು ಹಠಾತ್‌ ಆಗಿ ನಿಧನರಾದದ್ದು ಸೀತಾರಾಮಶಾಸ್ತ್ರಿಯವರಿಗೆ ದಿಕ್ಕು ತೋಚದಾಯಿತು. ಶಾಂತಿಗಾಗಿ ಸ್ವಲ್ಪಕಾಲ ತಂದೆಯವರ ಅನೇಕ ಗ್ರಂಥಗಳನ್ನು ಅಧ್ಯಯನ ಮಾಡಿ ಅನೇಕ ವಿಷಯಗಳನ್ನು  ಸಂಗ್ರಹಿಸಿದರು.

ಸೀತಾರಾಮಶಾಸ್ತ್ರಿಯವರ ೩೩ನೇ ವಯಸ್ಸಿನಲ್ಲಿ ಮೈಸೂರಿನ ‘ನವಜ್ಯೋತಿ’ ಚಿತ್ರ ತಯಾರಿಕಾ ಸಮಸ್ಥೆಯ ಆಹ್ವಾನವನ್ನು ಮಣ್ನಿಸಿ ನಾಗಕನ್ನಿಕಾ, ಶ್ರೀಕೃಷ್ಣಲೀಲಾ, ಸತೀ ತುಳಸಿ ಮುಂತಾದ ಚಲನಚಿತ್ರಗಳಖಲ್ಲಿ ನಟಿಸಬೇಕಾಗಿಬಂತು. ಚಲನಚಿತ್ರ ಕ್ಷೇತ್ರ ಅವರಿಗೆ ಒಗ್ಗದೆ ಮತ್ತೆ ಹರಿಕಥೆಗಳನ್ನು  ಮಾಡುವುದರಲ್ಲಿಯೇ ಶಾಸ್ತ್ರಿಗಳು ತೃಪ್ತಿ ಕಂಡುಕೊಂಡರು.

ಶೃಂಗೇರಿ ಜಗದ್ಗುರುಗಳ ಅಪೇಕ್ಷೆಯಂತೆ ಶ್ರೀಮದ್ ಶಂಕರ ವಿಜಯ ಎಂಬ ಕಥಾ ಭಾಗವನ್ನು ಕೀರ್ತನ ಶೈಲಿಗೆ ಅಳವಡಿಸಿದರು. ಇದಕ್ಕಾಗಿ ಮೈಸೂರಿನ ತರ್ಕ, ವೇದಾಂತ ವಿದ್ವಾಂಸರಾದ ವೆ.ಬ್ರಂ. ಕೆ.ಪಿ. ನಂಜುಂಡಶಾಸ್ತ್ರಿಯವರ ಬಳಿ ಅಧ್ಯಯನ ಮಾಡಿದರು. ಶಾಸ್ತ್ರಿಗಳು ಅನೇಕ ಸಂಗೀತ ಗ್ರಂಥಗಳನ್ನು ಅಧ್ಯಯನ ಮಾಡಿ ಸಂಗೀತ ಶಾಸ್ತ್ರದ ಮುಖ್ಯ ವಿಷಯಗಳನ್ನು ಗ್ರಹಿಸಿ, ಅವರ ಹಿರಿಯ ಸೋದರ ಸಂಗೀತ ಭೂಷಣಂ ಕೊಣನೂರು  ವಿಶ್ವನಾಥ ಶಾಸ್ತ್ರಿಯವರಲ್ಲಿ ಸಂಗೀತದಲ್ಲಿ, ಹೆಚ್ಚಿನ ವ್ಯಾಸಂಗ ಮಾಡಿ ತಮ್ಮ ಸಂಗೀತ ಜ್ಞಾನವನ್ನು ಹೆಚ್ಚಿಸಿಕೊಂಡರು. ಇವರ ಕಂಚಿನ ಕಂಠ ಇವರ ಹಾಡುಗಾರಿಕೆಗೆ ಪೂರಕವಾಗಿತ್ತು. ಈ ಹಂತದಲ್ಲಿ ಹರಿಕಥೆಗಳಲ್ಲಿ ಸಂಗೀತಕ್ಕೂ ಸಾಹಿತ್ಯಕ್ಕೂ ಸಮಾನ ಸ್ಥಾನಗಳನ್ನು  ಕಲ್ಪಿಸಿದ ಹಿರಿಮೆ ಇವರ ಕೊಡುಗೆ ಎಂದರೆ ತಪ್ಪಾಗಲಾರದು. ಪ್ರತಿಯೊಂದು ಕಾರ್ಯಕ್ರಮದಲ್ಲೂ ಅಂದಿನ ಕಥೆಯ ಸಂದರ್ಭಾನುಸಾರ ಯಾವುದಾದರೊಂದು ಪ್ರಮುಖ ಕೃತಿಯನ್ನು  ಆಯ್ದುಕೊಂಡು, ಆ ಕೃತಿಯ ರಾಗಲಕ್ಷಣ, ಕೃತಿಯ ಸಾಹಿತ್ಯಾರ್ಥ, ಕೃತಿಯ ವಾಗ್ಗೇಯಕಾರರ ಬಗ್ಗೆ ವಿವರವಾಗಿ ತಿಳಿಸುತ್ತಿದ್ದರು. ಆ ಕೃತಿಯ ರಾಗಾಲಾಪನೆಯನ್ನು ವಿಸ್ತಾರವಾಗಿ ಹಾಡಿ, ಪಕ್ಕವಾದ್ಯದವರಿಗೂ ನುಡಿಸಲು ಅವಕಾಶ ಮಾಡಿಕೊಡುತ್ತಿದ್ದರು. ಕೃತಿಯ ಒಂದು ಭಾಗವನ್ನುಕ ನೆರವಲ್‌ ಮಾಡಿ, ಸ್ವರಕಲ್ಪನೆಯನ್ನು ಶಾಸ್ತ್ರೋಕ್ತವಾಗಿ ಮಾಡಿ, ತಾಳವಾದ್ಯದವರಿಗೆ ತನಿ ನುಡಿಸಲು ತಿಳಿಸಿ ಅವರನ್ನು ಹುರಿದುಂಬಿಸುತ್ತಾ ಸಭಿಕರಿಗೆ ತೃಪ್ತಿಯಾಗುವವರೆಗೂ” ಈ ಭಾಗ ಮುಂದುವರೆಸಿ ಮುಕ್ತಾಯವಾಗುವ ಹೊತ್ತಿಗೆ ಸುಮಾರು  ಒಂದೂವರೆ ಇಂದ ಎರಡು ಗಂಟೆಗಳು ಸಂದು ಕಲಾಭಿಮಾನಿಗಳಿಗೆ ಒಂದು ಒಳ್ಳೆಯ ಸಂಗೀತ ಕಚೇರಿ ಕೇಳಿದಷ್ಟು ಸಂತೋಷವಾಗುತ್ತಿತ್ತು.

ತ್ಯಾಗರಾಜರು, ದೀಕ್ಷಿತರು, ಶ್ಯಾಮಶಾಸ್ತ್ರಿಗಳು, ಮೈಸೂರು ಸದಾಶಿವರಾಯರು, ಪೂಚಿ ಶ್ರೀನಿವಾಸ ಅಯ್ಯಂಗಾರ್ ಇವರ ಮೆಚ್ಚಿನ ವಾಗ್ಗೇಯಕಾರರು. ಅಲ್ಲದೆ ಹರಿದಾಸರ ಬಗ್ಗೆ, ದಾಸ ಸಾಹಿತ್ಯದ ಬಗ್ಗೆ ಇವರಿಗೆ ಅಪಾರ ಗೌರವವಿತ್ತು.

ಸಾಮಾನ್ಯವಾಗಿ ಅವರು ಆಯ್ದುಕೊಳ್ಳುತ್ತಿದ್ದ ಕೆಲವು ರಾಗಗಳೆಂದರೆ, ಖರಹರಪ್ರಿಯ, ಕೇದಾರಗೌಳ, ಶಂಕರಾಭರಣ, ಸಿಂಹೇಂಧ್ರಮಧ್ಯಮ, ಮಧ್ಯಮಾವತಿ, ಆನಂದ ಭೈರವಿ, ಕಾಂಬೋಧಿ, ಕಮಾಚ್‌, ಭೈರವಿ, ತೋಢಿ, ಬಿಲಹರಿ, ಕಾಪಿ ಮುಂತಾದವುಗಳು.

ಅವರಿಗೆ ಇಷ್ಟವಾದ ಕೃತಿಗಳು ಸರಸೀರುಹಾಸನಪ್ರಿಯೇ, ವಾತಾಪಿಗಣಪತಿಂ, ಚಕ್ಕನಿರಾಜ, ಎವರಿಮಾಟ, ಗುರುಲೇಕ, ರಾಮಕಥಾಸುಧಾ, ನೀದು ಚರಣಮುಲೆ, ಮಾಜಾನಕೀ, ಜಾನಕೀರಮಣ, ಓರಂಗಶಾಯಿ, ನಿಧಿ ಚಾಲಸುಖಮಾ, ಪಾರ್ಥಸಾರಥೆ ಮುಂತಾದವು.

ಸಂಗೀತಮಯವಾಗಿದ್ದ ಇವರ ಕಥೆಗಳಲ್ಲಿ ಶಾಸ್ತ್ರೀಯ ಸಂಗೀತವಲ್ಲದೇ ಕಥೆಯ ಮಧ್ಯದಲ್ಲಿ ಉರುಟಣೆ, ಉಯ್ಯಾಲೆ, ಲೆಕ್ಕದ ಮೇಲಿನ ಹಾಡು, ಜನಪದ ಗೀತೆ, ರಂಗಗೀತೆ, ನವ್ಯಗೀತೆ, ಇಂಗ್ಲೀಷ್‌ ನೋಟ್‌ ಮುಂತಾದ ವಿವಿಧ ರೀತಿಯ ಹಾಡುಗಳನ್ನು ಹಾಡಿ ಪಂಡಿತ ಪಾಮರಾದಿಯಾಗಿ, ಎಳೆಯರಿಂದ ವಯೋವೃದ್ಧರವರೆಗೆ ಸಮಸ್ತ ಜನರನ್ನೂ ತಣಿಸುತ್ತಿದ್ದರು.

ಸೀತಾರಾಮಶಾಸ್ತ್ರಿಗಳ ಸಂಗೀತ ಉನ್ನತ ಮಟ್ಟದ್ದಾಗಿದ್ದು, ಅದಕ್ಕೆ ತಕ್ಕ ಪಕ್ಕವಾದ್ಯಕ್ಕೆಕ ಅತ್ಯುತ್ತಮ ಸಹ ಕಲಾವಿದರನ್ನು ತಮ್ಮೊಂದಿಗೆ ಕರೆದೊಯ್ಯುತ್ತಿದ್ದರು. ಮಡಿಕೇರಿ ಸಂಗೀತ ಅಕಾಡೆಮಿಯ ಮುಯೋಪಾಧ್ಯಾಯರಾಗಿದ್ದ ಹಿರಿಯ ವಿದ್ವಾಂಸರೂ, ಹಾರ್ಮೋನಿಯಂ ನುಡಿಸುವುದರಲ್ಲಿ ನಿಪುಣರಾಗಿದ್ದ ವೈ.ಎನ್‌.ಶ್ರೀನಿವಾಸಮೂರ್ತಿ,ಮೈಸೂರಿನಲ್ಲಿ ಅಂದು ಖ್ಯಾತ ಪಿಟೀಲು ವಿದ್ವಾಂಸರಾಗಿದ್ದ ಗಾನ ಕಲಾರತ್ನ ಎ.ಕೆ.ಮುತ್ತಣ್ಣ, ಮೈಸೂರಿನ ಪ್ರಸಿದ್ಧ ಮೃದಂಗ ವಾದಕ ತಾಳವಾದ್ಯ ಪ್ರವೀಣ ಎಮ್‌.ಎಸ್‌. ಶೇಷಪ್ಪ ಶಾಸ್ತ್ರಿಗಳ ಅಚ್ಚುಮೆಚ್ಚಿನ ಪಕ್ಕವಾದ್ಯದ ಕಲಾವಿದರಾಗಿದ್ದರು. ಈ ಸಹಕಲಾವಿದತ್ರಯರ ಅನುಕೂಲದಿನಗಳನ್ನು ತಿಳಿದು ಅವಗರ ಒಪ್ಪಿಗೆ ಪಡೆದ ನಂತರವೇ ಆ ದಿನಗಲ್ಲಿ ಶಾಸ್ತ್ರಿಯವರು ಕಾರ್ಯಕ್ರಮವನ್ನು ಒಪ್ಪಿಕೊಳ್ಳುತ್ತಿದ್ದರು. ಕಾರ್ಯಕ್ರಮಗಳನ್ನು ತಮ್ಮ ಸಿರಿಕಂಠದ ಗಾಯನದಿಂದ ಸಭಿಕರಿಂದ ಚಪ್ಪಾಳೆಯನ್ನು ಗಿಟ್ಟಿಸುತ್ತಿದ್ದ ಶಾಸ್ತ್ರಿಗಳು, ಪಕ್ಕವಾದ್ಯದ ಕಲಾವಿದರೂ ತಮ್ಮ ಸಂಪೂರ್ಣ ಪಾಂಡಿತ್ಯವನ್ನು ಪ್ರದರ್ಶಿಸುವಂತೆ ಹುರಿದುಂಬಿಸಿ, ಅವರೂ ಸಭಿಕರಕ ಮನಸ್ಸನ್ನು ಸೂರೆಗೊಂಡು ಕರತಾಡನವನ್ನು ಗಿಟ್ಟಿಸುವಂತೆ ಮಾಡುತ್ತಿದ್ದರು.

ಗಿರಿಜಾಕಲ್ಯಾಣ, ರುಕ್ಮಿಣೀ ಕಲ್ಯಾಣ, ಸೀತಾಕಲ್ಯಾಣ, ಶಶಿರೇಖಾ ಪರಿಣಯ, ಶಮಂತಕೋಪಾಖ್ಯಾನ, ದೂರ್ವಾಸಾತಿಥ್ಯ, ಕಿರಾತಾರ್ಜುನೀಯ ಮತ್ತು ಶ್ರೀ ಶಂಕರ ವಿಜಯ ಮುಂತಾದವುಗಳು ಶಾಸ್ತ್ರಿಗಳ ಮೆಚ್ಚಿನ ಕಥೆಗಳು. ಗಿರಿಜಾ ಕಲ್ಯಾಣದಲ್ಲಿ ಗಾಂಭೀರ್ಯ, ಶಶಿರೇಖಾ ಪರಿಣಯದಲ್ಲಿ ಹಾಸ್ಯ, ಹರಿಶ್ಚಂದ್ರದಲ್ಲಿ ಶೋಕ, ಚಂದ್ರಹಾಸ , ರುಕ್ಮಿಣೀ ಕಲ್ಯಾಣದಲ್ಲಿ ಭಕ್ತಿ ಹೀಗೆ ಇವರ ಕಥೆಗಳು ನವರಸಭರಿತವಾಗಿರುತ್ತಿತ್ತು. ಸೀತಾರಾಮಶಾಸ್ತ್ರಿಯವರು ಕಥೆಯ ಪ್ರಾರಂಭದಿಂದ ಕೊನೆಯವರೆಗೂ ತಮ್ಮ ಕಂಠದ ಘನತೆ, ಮಾರ್ದವತೆ, ಗುಣಮಟ್ಟವನ್ನು ಕಾಪಾಡಿಕೊಂಡು ಬರುತ್ತಿದ್ದರು. ಕಥೆಗಳಲ್ಲಿ ಬರುವ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿಕೊಂಡು ಪಾತ್ರದಲ್ಲಿ ತನ್ಮಯರಾಗಿ ಶ್ರೋತೃಗಳೂ ಪರವಶರಾಗುವಂತೆ ಮಾಡುತ್ತಿದ್ದರು. ಎಂಥಾ ಕಠಿಣ ವಿಷಯಗಳನ್ನು ತಮ್ಮ ಸಾಹಿತ್ಯ ವಿದ್ಯಾ ಸಂಪತ್ತಿನಿಂದ ಸಭಿಕರೆಲ್ಲರಿಗೂ ತಿಳಿಯುವಂತೆ ತಿಳಿಭಾಷೆಯಲ್ಲಿ ವಿವರಿಸುತ್ತಿದ್ದರು. ಪ್ರತಿ ಕಾರ್ಯಕ್ರಮಕ್ಕೂ ಮುಂಚೆ ಅಂದು ಮಾಡಲಿರುವ ಕೀರ್ತನದ ಬಗ್ಗೆ ಆಳವಾಗಿ ಯೋಚಿಸಿ, ಚಿಂತನೆ ಮಾಡಿ, ಸಭಿಕರ ಮನೋಗತವನ್ನು ಗ್ರಹಿಸಿ, ಆ ಸಂದರ್ಭಕ್ಕೆ ತಕ್ಕಂತೆ ಕಥೆಗಳನ್ನು ಅಳವಡಿಸಿಕೊಂಡು ಸಭಿಕರು ಏಕಾಗ್ರತೆಯಿಂದ ಆಲಿಸುವಂತೆ ಮಾಡುವ ಅದ್ಭುತ ಶಕ್ತಿ ಪಡೆದಿದ್ದರು.

ಸದಾ ಹಸನ್ಮುಖಿ, ಆಕರ್ಷಕ ಮೈಕಟ್ಟು, ಗುಂಡಾದ ತೇಜಸ್ವೀ ಮುಖಭಾವ, ಅಗಲವಾದ ಹಣೆ, ಆಕರ್ಷಕ ನೇತ್ರ, ನಾಸಿಕಗಳನ್ನು ಹೊಂದಿದ್ದಕ ಶಾಸ್ತ್ರಿಗಳ ಉಡುಪು, ಅದಕ್ಕೆ ತಕ್ಕಂತಿತ್ತು. ಕಚ್ಚೆಪಂಚೆ, ಸಿಲ್ಕ್ ಜುಬ್ಬಾ, ಕಲಾಪತ್ತಿನ ವಲ್ಲಿ, ಕಲಾಪತ್ತಿನ ಶಾಲು, ಹಣೆಯಲ್ಲಿ ವಿಭೂತಿ, ಕುಂಕುಮ, ಕತ್ತಿನಲ್ಲಿ ಚಿನ್ನದ ಸರ ಹಾಗೂ ರುದ್ರಾಕ್ಷಿ ಮಾಲೆ, ಕಿವಿಯಲ್ಲಿ ಕಡಕು, ಎಡಗೈಯಲ್ಲಿ ವಾಚು, ಬಲಗೈಯಲ್ಲಿ ಚಿನ್ನದ ಥೋಡಾ, ಬೆರಳುಗಳಲ್ಲಿ ಉಂಗುರಗಳು ಇವುಗಳನ್ನು ಧರಿಸಿದ ಶಾಸ್ತ್ರಿಗಳು ಸಭಾಭಾವನಕ್ಕೆ ಆಗಮಿಸಿದ ಕೂಡಲೆ ಅವರಿಗಾಗಿ ಕಾದಿದ್ದ ಸಭಿಕರಲ್ಲಿ ಮಿಂಚಿನ ಸಂಚಾರವಾದಂತಾಗಿ ಕರತಾಡನವಾಗುತ್ತಿತ್ತು.

ಪೀಠಿಕೆ, ಕಥಾಭಾಗ, ಉಪಕಥೆಗಳು, ಸಂಗೀತ ಭಾಗ ಇವುಗಳೆಲ್ಲ ಸೇರಿ ನಾಲ್ಕರಿಂದ ಐದು ಗಂಟೆಗಳಿಗೆ ಕಡಿಮೆ ಇಲ್ಲದೆ ಇವರ ಕಾರ್ಯಕ್ರಮಗಳು  ಮುಕ್ತಾಯವಾಗುತ್ತಿರಲಿಲ್ಲ.

ತಾವು ಹೋದ ಕಡೆಗಳಲ್ಲೆಲ್ಲಾ ಕಾರ್ಯಕ್ರಮಗಳು ತುಂಬಾ ಯಶಸ್ವಿಯಾಗಿ ನಡೆದು ಜಯಭೇರಿ ಮೊಳಗಿಸಿದರು. ನಾಡಿನ ಅನೇಕ ಸಂಘ ಸಂಸ್ಥೆಗಳು ಇವರನ್ನು ಮುಕ್ತ ಕಂಠದಿಂದ ಪ್ರಶಂಸಿಸಿ ಅನೇಕ ಬಿರುದು, ಸನ್ಮಾನ ಪ್ರಶಸ್ತಿ ಬಹುಮಾನಗಳನ್ನು ನೀಡಿದರು ಹಾಗೂ ಅನೇಕ ಮಠಾಧಿಪತಿಗಳಿಂದಲೂ ಅನುಗ್ರಹೀತರಾದರು. ಅಂದಿನ ರಾಷ್ಟ್ರಪತಿ ವಿ.ವಿ. ಗಿರಿಯವರಿಂದಲೂ ಸನ್ಮಾನಿಸಲ್ಪಟ್ಟರು. ಇವರಿಗೆ ದೊರಕಿದ ಕೆಲವು ಬಿರುದುಗಳು ಕೀರ್ತನ ರತ್ನ (೧೯೨೮), ಕೀರ್ತನ ಭೂಷಣ (೧೯೬೫), ಆಧ್ಯಾತ್ಮರತ್ನ (೧೯೫೮), ಕೀರ್ತನ ಕಲಾಕೇಸರಿ ({೧೯೨೮), ಕೀರ್ತನ ಕೇಸರಿ (೧೯೬೬) ಇವುಗಳೊಂದಿಗೆ ಅನೇಕ ಚಿನ್ನದ ಪದಕಗಳು, ಚಿನ್ನದ ಸರಗಳು, ಚಿನ್ನದ ಥೋಡಾ, ಚಿನ್ನದ ಉಂಗುರಗಳಲು, ಲೆಕ್ಕವಿಲ್ಲದಷ್ಟು ಕಲಾಪತ್ತಿನ ಶಾಲುಗಳು, ಮಗುಟಗಳು, ಪಂಚೆಗಳು, ಯೋಗ್ಯತಾ ಪತ್ರಗಳು ಮುಂತಾದವುಗಳು ಶಾಸ್ತ್ರಿಗಳನ್ನರಸಿ ಬಂದವು.

ತಮಗೆ ಬರುತ್ತಿದ್ದ ಆಹ್ವಾನಗಳನ್ನು ಸ್ವೀಕರಿಸುವುದೇ ಅವರಿಗೆ ಕಷ್ಟವಾಗುತ್ತಿತ್ತು. ಅವರಿಗೆ ಪ್ರಿಯರಾದ ಪಕ್ಕವಾದ್ಯದವರೊಂದಿಗೆ ಒಂದು ಊರಿಗೆ ಅಥವಾ ಒಂದು ಸ್ಥಳಕ್ಕೆಕ ೩ ವರ್ಷಕ್ಕೆ ಒಂದು ಬಾರಿ ಮಾತ್ರ ಒಪ್ಪಿಕೊಳ್ಳುತ್ತಿದ್ದು ಇವರ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದ ವ್ಯವಸ್ಥಾಪಕರು, ಸಭಿಕರು ಶಾಸ್ತ್ರಿಗಳು ತಮ್ಮಲ್ಲಿಗೆ ಯಾವಾಗ ಬರುತ್ತಾರೋ ಎಂದು ಕಾತುರರಾಗಿರುವಂತೆ ತಮ್ಮ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುತ್ತಿದ್ದರು.

ದೊಡ್ಡ ಕಡೆಗಳಲ್ಲಿ ರಾಮೋತ್ಸವ, ಗಣೇಶೋತ್ಸವ ಮುಂತಾದ ಸಂದರ್ಭಗಳಲ್ಲಿ ದಕ್ಷಿಣ ದೇಶದ ಪ್ರಸಿದ್ಧ ಸಂಗೀತ ವಿದ್ವಾಂಸರ ಕಾರ್ಯಕ್ರಮಗಳ  ನಡುವೆ ಇವರದೂ ಒಂದು ಪ್ರಧಾನ ಕಾರ್ಯಕ್ರಮವಾಗಿರುತ್ತಿತ್ತು. ಒಂದು ಭಾಗದಲ್ಲಿ ಒಂದು ಪ್ರಧಾನ ಕಾರ್ಯಕ್ರಮವಾಗಿರುತ್ತಿತ್ತು. ಒಂದು ಭಾಗದಲ್ಲಿ ಒಂದು ಕಾರ್ಯಕ್ರಮಕ್ಕಿಂತಲೂ ಹೆಚ್ಚು ಕಾರ್ಯಕ್ರಮಗಳನ್ನು ಅವರು ಒಪ್ಪಿಕೊಳ್ಳುತ್ತಿರಲಿಲ್ಲ. ಸೀತಾರಾಮಶಾಸ್ತ್ರಿಗಳ ಕಾರ್ಯಕ್ರಮಕ್ಕೆ ಒಂದು ಗಂಟೆ ಮೊದಲೇ ಸಭಾಭವನ ಕಿಕ್ಕಿರಿದು ತುಂಬಿರುತ್ತಿತ್ತು. ಕೆಲವು ಸಂದರ್ಭಗಳಲ್ಲಿ ಒಳಗೆ ಸ್ಥಳವಿಲ್ಲದೆ ಹೊರಗೆ ಗಂಟೆಗಟ್ಟಲೆ ನಿಂತು ಅಥವಾ ಪಕ್ಕದ ಮನೆಯ ಕಾಂಪೌಂಡ್‌ ಮೇಲೋ ಕುಳಿತು, ಇನ್ನು ಕೆಲವು ಸಂದರ್ಭಗಳಲ್ಲಿ ಹತ್ತಿರ ಇರುತ್ತಿದ್ದ ಮರಗಳ ಕೊಂಬೆಗಳ ಮೇಲೆ ಕುಳಿತು ಶಾಸ್ತ್ರಿಗಳ ಕೀರ್ತನೆಗಳನ್ನು ಶ್ರವಣ ಮಾಡುತ್ತಿದ್ದುದೂ ಉಂಟು. ತಟ್ಟೆ ಕಾಸಿನಿಂದ ಅಂದಿನ ಜನಸಂದಣೆಯನ್ನು ಅಳೆಯುತ್ತಿದ್ದ ಆ ಕಾಲದಲ್ಲಿ ಶಾಸ್ತ್ರಿಗಳ ಕಾರ್ಯಕ್ರಮದಲ್ಲಿ ಸುಮರು ೭೦ ರೂ.ಗೂ ಅಧಿಕವಾಗಿ ತಟ್ಟೆಕಾಸು ಸಂಗ್ರಹವಾಗುತ್ತಿತ್ತು. ಇಷ್ಟು ಜನಸಂದಣಿ ಇದ್ದರೂ ಜನತೆಯನ್ನು ಆನಂದಪಡಿಸುತ್ತಾ ಸ್ವಲ್ಪವೂ ಗಲಾಟೆ ಇಲ್ಲದೆ, ಶಾಂತಚಿತ್ತರಾಗಿ ಹರಿಕಥಾಶ್ರವಣವನ್ನು ಮಾಡುವಂತೆ ಆ ಜನಸ್ತೋಮವನ್ನು ತಮ್ಮ ಹತೋಟಿಯಲ್ಲಿಕೊಳ್ಳುವಂತೆ ಮಾಡುವ ಅಸಾಧಾರಣ ಸಾಮರ್ಥ್ಯವನ್ನು ಶಾಸ್ತ್ರಿಯವರು ಪಡದಿದ್ದರು.

ಸೀತಾರಾಮಶಾಸ್ತ್ರಿಯವರು ಆಕಾಶವಾಣಿಯಲ್ಲಿ ಪ್ರಥಮ ಶ್ರೇಣಿ ಕಲಾವಿದರಾಗಿದ್ದು ಅನೇಕ ವರ್ಷಗಳು  ಅವರ ಅನೇಕ ಕಾರ್ಯಕ್ರಮಗಳು ಬಿತ್ತರಗೊಂಡಿತು. ಆಗ ಧ್ವನಿ ಮುದ್ರಣ ಸುರುಳಿಗಳು ಇನ್ನು ಹೆಚ್ಚು ಪ್ರಚಾರದಲ್ಲಿದ್ದುದ್ದರಿಂದ ಅವರ ಕಾರ್ಯಕ್ರಮಗಳನ್ನು ಧ್ವನಿಮುದ್ರಿಸಿ ಸಂರಕ್ಷಿಸಿಟ್ಟಿಲ್ಲದೆ ಇರುವುದು ಇಂದಿನ ಪೀಳಿಗೆಯ ದೌರ್ಭಾಗ್ಯ.

ಶಾಸ್ತ್ರಿಗಳು ಬಿಡುವಿನ ವೇಳೆಯಲ್ಲಿ ಗ್ರಂಥಾವಲೋಕನ ಮಾಡುತ್ತಿದ್ದು ರಾಮಾಯಣ, ತ್ಯಾಗರಾಜರ ಕೃತಿಗಳನ್ನಾಧರಿಸಿದ ಶ್ರೀ ತ್ಯಾಗರಾಜರಾಮಾಯಣ, ಹರಿಶ್ಚಂದ್ರ, ರಾಮಾಯಣ ಕಥೆಗಳ ತೌಲನಿಕ ವಿಮರ್ಶೆ ಮೊದಲಾದ ಕೃತಿಗಳನ್ನು ರಚಿಸಿದರು . ಶಾಸ್ತ್ರಿಗಳಿಗೆ ಮರದಲ್ಲಿ ಬಳಪದ ಕಲ್ಲಿನಲ್ಲಿ ವಿಗ್ರಹಗಳನ್ನು ಕಡೆಯುವ ವಿಶೇಷ ಆಸಕ್ತಿ ಇದ್ದು, ಅನೇಕ ದೇವತಾ ವಿಗ್ರಹಗಳನ್ನು ಕೆತ್ತಿದ್ದಾರೆ.

ಶಾಸ್ತ್ರಿಗಲು ಸದಾ ಕಲಾಚಿಂತನೆಯಲ್ಲೇ ಕಾಲ ಕಳೆಯುತ್ತಿದ್ದು ಸಾಂಸಾರಿಕ ತಾಪತ್ರಯಗಳನ್ನು ಲೆಕ್ಕಿಸದೇ ರಾಮಧ್ಯಾನಾಸಕ್ತರಾಗಿದ್ದು ನೆಮ್ಮದಿಯಿಂದ ತೃಪ್ತ ಜೀವನ ನಡೆಸಿ ಐದು ಜನ ಗಂಡು ಮಕ್ಕಳು ಹಾಗೂ ಒಬ್ಬ ಪುತ್ರಿಯನ್ನು ಪಡೆದು ಜೀವನ ಸಾರ್ಥಕಗೊಳಿಸಿದರು.

ಅವರೇ ರಚಿಸಿದ ‘ಶ್ರೀ ತ್ಯಾಗರಾಜರಾಮಾಯಣ’ದ ಕಥಾ ಕಲಾಕ್ಷೇಪವನ್ನು ಮಾಡಲು ತಯಾರಿ ನಡೆಸುತ್ತಿದ್ದಾಗ ಅವರಿಗೆ ಒಂದು ಆಘಾತ ಕಾದು ಕುಳಿತಿತ್ತು. ಗುಣಪಡಿಸಲಾಗದ ಅರ್ಬುದ ರೋಗವು ಅವರನ್ನು ಹಠಾತ್ತಾಗಿ ಕಾಡಿ ೨೮.೫.೧೯೭೦ ಗುರುವಾರ ಅವರ ಆತ್ಮವನ್ನು ಶ್ರೀ ರಾಮನ ಪದತಲಕ್ಕೆ ಕೊಂಡೊಯ್ದಿತು.

(ವಿ.ಶ್ರೀ ಎ.ಕೆ. ಮುತ್ತಣ್ಣನವರು ಶ್ರೀ ಕೊಣನೂರು ಸೀತಾರಾಮ ಶಾಸ್ತ್ರಿಯವರ ಬಗ್ಗೆ ಬರೆದಿಟ್ಟಿದ್ದ ಸುದೀರ್ಘ ಜೀವನ ಚರಿತ್ರೆಯಿಂಧ ಸಂಗ್ರಹಿಸಿದ ರೂಪ).