ಶಿವಾನಂದ ಥೆಯೇಟರ್ ನಲ್ಲಿ ವಾಣಿವಿಲಾಸ ನಾಟಕ ಕಂಪನಿ ಕ್ಯಾಂಪ (೧೯೩೦). ಕೊಣ್ಣೂರ ನಾಟಕ ಕಂಪನಿಯ ಒಡೆಯರಾಗಿದ್ದ ರಾವ್‌ಸಾಹೇಬ ಶಿವಮೂರ್ತಿಸ್ವಾಮಿ ಕಣಬರ್ಗಿಮಠರು ಬಂದಿದ್ದರು. ಪ್ರಥಮ ಪ್ರಯೇಗದ ಸಿದ್ಧತೆ ಭರದಿಂದ ಸಾಗಿದೆ. ಗ್ರೀನ್‌ರೂಮಿನಲ್ಲಿ ಎಲ್ಲಿಲ್ಲದ ಉತ್ಸಾಹ, ಆನಂದಮಯ ವಾತಾವರಣ, ಗಣಪತಿಪೂಜೆ, ನಾಂದಿ ಹಾಡಿದ್ದಾಯಿತು. ಅಂಕಪರದೆ ಎತ್ತಬೇಕೆನ್ನುವಾಗಲೇ ಪರದೆಗೆ ಬೆಂಕಿ ಬಿದ್ದು ಧಗಧಗ ಉರಿಯತೊಡಗಿತ್ತು. ಮುಂದೆ ಹೋಗಿ ಬೆಂಕಿ ಆರಿಸುವ ಧೈರ್ಯ ಯಾರಿಗೂ ಇಲ್ಲ. ಎಲ್ಲರೂ ಮುಗಿಲು ಮುರಿದು ಬೀಳುವಂತೆ ಕೂಗಿದರು. ಪ್ರೇಕ್ಷಕರೂ ದನಿಗೂಡಿಸಿದರು. ಹಾಹಾಕರ ಪಸರಿಸಿತು. ಏನು ಮಾಡಬೇಕೆಂಬುದೇ ತಿಳಿಯುತ್ತಿರಲಿಲ್ಲ. ಕೆಲವರು ನೀರು ತರಲು ಹೋದರು. ಮುಂದಿನ ಕುರ್ಚಿಯಲ್ಲಿದ್ದ ರಾವ್‌ಸಾಹೇಬ ಕಣಬರ್ಗಿಮಠರು ಕುರ್ಚಿಯಿಂದ ಛಂಗನೆ ಜಿಗಿದು, ವಿಂಗ್‌ ಮೇಲೆ ಹತ್ತಿ ಅಂಕಪರದೆಯ ಹಗ್ಗವನ್ನು ತುಂಡರಿಸಿದರು. ಬೆಂಕಿ ಮೇಲೆ ಆವರಿಸಿಕೊಂಡಿದ್ದಿದ್ದರೆ ನಮ್ಮ ಹತೋಟಿ ಮೀರಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸುತ್ತಿತ್ತು. ಇಂಥ ಸಂದರ್ಭದಲ್ಲಿ ಕಣಬರ್ಗಿಮಠರು ತೋರಿದ ಸಾಹಸ ಅದು ಕಲೆಯ ಮೇಲಿನ ಅಭಿಮಾನದ ಸಂಕೇತ. ಬೆಂಕಿ ಪೂರ್ಣ ಆರಿಸಿದರೂ ಮನಸ್ಸಿಗೆ ಕಸಿವಿಸಿ, ಸಮಾಧಾನವಿಲ್ಲ. ಪ್ರಥಮ ಪ್ರಯೋಗಕ್ಕೆ ಅಪಶಕುನವಾದುದರಿಂದ ಮುಂದೆ ಯಾವ ಗಂಡಾಂತರ ಕಾದಿದೆಯೋ ಎಂದು ಅಂಜಿ ನಾಟಕ ನಿಲ್ಲಿಸಿ ಕ್ಯಾಂಪ ಬದಲಿಸಿಬೇಕೆಂಬ ನಿರ್ಧಾರ ಐದು ನಿಮಿಷದಲ್ಲಿ ಆಯಿತು. ಪ್ರೇಕ್ಷಕರ ಹಣ ವಾಪಸ್‌ ಕೊಡುವುದು ನಿಶ್ಚಿತವಾಯಿತು. ಆಗ ಕಣಬುರ್ಗಿಮಠರು ಮಧ್ಯೆ ಪ್ರವೇಶಿಸಿ “ಇದಕ್ಕೆಲ್ಲ ಹೇಡಿಗಂಳಂತೆ ಅಂಜುತ್ತೀರಾ? ಇದು ನಮ್ಮ ಸತ್ವಪರೀಕ್ಷೆ ಅಜಾಗರೂಕತೆಯಿಂದ ಆದ ಕೆಲಸಕ್ಕೆ ಅಪಶಕುನವೆಂದರೆ ಹೇಗೆ? ನಾಟಕ ನಿಲ್ಲಿಸಬೇಡಿ ಯಶಸ್ವಿಯಾಗುತ್ತದೆ. ಮೂಢನಂಬಿಕೆಯನ್ನು ಬಿಡಿ” ಎಂದರು. ಅವರ ಮಾತಿನಿಂದ ಮತ್ತೆ ಹೊಸ ಮೇಕಪ್‌ ಮಾಡಿಕೊಂಡು ನಾಟಕ ಆರಂಭಿಸಿದೆವು. ಅದು ನಿಜವಾಗಿಯೂ ನಮಗೆ ಯಶಸ್ಸಿನ ಕ್ಯಾಂಪ್‌ ಆಯಿತು. ಎರಡೇ ನಾಟಕಗಳು ಸತತ ಎರಡು ತಿಂಗಳು ನಡೆದುವು.

ರಾವ್‌ಸಾಹೇಬ ಕಣಬರ್ಗಿಮಠರ ಊರು ಬೈಲಹೊಂಗಲ, ರಾವ್‌ಸಾಹೇಬರ ಪ್ರೇರಣೆಯ ಮೇರೆಗೆ ಬೈಲಹೊಂಗಲಕ್ಕೆ ಹೋಗಿ ಎರಡೇ ನಾಟಕಗಳನ್ನು ಎರಡು ತಿಂಗಳಗಳವರೆಗೆ ಅಭಿನಯಿಸಿದೆವು. ರಾವ್‌ಸಾಹೇಬರ ಉದಾರ-ಉದಾತ್ತ ಹೃದಯ ಎಂದೆಂದೂ ಮರೆಯುವಂಥದ್ದಲ್ಲ.

ರಾವ್‌ ಸಾಹೇಬ ಕಣಬರ್ಗಿಮಠರಿಗೆ ಗಂಗವ್ವ ಅಥವಾ ಯಲ್ಲವ್ವ ಗುಳೇದಗುಡ್ಡ ಅಪರಿಚಿತರಲ್ಲ. ಒಬ್ಬ ಮಹಿಳೆ ಮುಂದಾಗಿ ನಿಂತು ಕಂಪನಿ ನಡೆಸುತ್ತಿದ್ದಾಳೆಂಬ ಅಭಿಮಾನ ಬೇರೆ. ತಮ್ಮ ಕೊಣ್ಣೂರ ನಾಟಕ ಕಂಪನಿ ನಿಂತರೂ ಅವರಲ್ಲಿ ಕಲಾಭಿಮಾನದ ಬುಗ್ಗೆ ಬತ್ತಿರಲಿಲ್ಲ. ಅವರು ಉದಾರ ಹೃದಯಿಗಳು. ಕಲಾವಿದರನ್ನು ಕಂಡರೆ ಅವರಿಗೆ ತುಂಬ ಅಭಿಮಾನ, ಬೆಳಗಾಂವ್‌ದಿಂದ ನಮ್ಮನ್ನು ಬೈಲಹೊಂಗಲ (ಅವರ ಊರು) ಕ್ಕೆ ಕರೆದೊಯ್ದು ನಮ್ಮ ನಾಟಕಗಳನ್ನು ಆಡಿಸಿ, ಕಂಪನಿಯ ಹಿರಿಕಿರಿಯ ಪಾತ್ರಧಾರಿಗಳೆಲ್ಲರಿಗೂ ಮೃಷ್ಟಾನ್ನ ನೀಡಿ, ಕೈತುಂಬ ಬಹುಮಾನ ನೀಡಿ ಸತ್ಕರಿಸಿದರು. ಅಂದು ಅವರು ನಮಗೆಲ್ಲ ಬಹುಮಾನ ನೀಡಿದ ಮೊತ್ತ ಎರಡು ಸಾವಿರಕ್ಕೂ ಮೀರಿತ್ತು. ಅಂದು ಒಬ್ಬ ಕಲಾವಿದ ಮತ್ತೊಬ್ಬ ಕಲಾವಿದನ ಉತ್ಕರ್ಷ ನೋಡಿ ಕರುಬುತ್ತಿರಲಿಲ್ಲ. ಹಿಗ್ಗುತ್ತಿದ್ದ.

-ಬಸವರಾಜ ಮನಸೂರ
‘ಚಿಗುರು ನೆನಪು’ ಕೃತಿಯಿಂದ

 

ಬೆಳಗಾಂವ ಜಿಲ್ಹಾ ಗೋಕಾಕ ತಾಲೂಕ ಪೈಕಿ ಗೋಕಾಕಫಾಲ್ಸದಲ್ಲಿ ಇರುವ ವೇದಮೂರ್ತಿ ಶಿವಮೂರ್ತಿಸ್ವಾಮಿ ಕಣಬರಗಿಕಮಠ ಇವರು ಹಿಂದುಳಿದ ಈ ಕರ್ನಾಟಕ ಭಾಷೆಯನ್ನು ಕೈಲಾದ ಮಟ್ಟಿಗೆ ಸಂಗೀತ ವಿದ್ಯೆಯ ರೂಪದಿಂದಲೂ ಭಾಷೆಯ ರೂಪದಿಂದಲೂ ಮುಂದಕ್ಕೆ ತರಬೇಕೆಂಬ ಕುತೂಹಲದಿಂದ ಅನೇಕ ಗಾನಕೋವಿದರನ್ನು ದೂರದೂರಿಲಿಂದ ತರಿಸಿ ಸನ್‌ ೧೮೯೯ನೇ ಇಸ್ವಿಯಲ್ಲಿ ಶ್ರೀ ಕಾಡಸಿದ್ದೇಶ್ವರ ಪ್ರಾಸಾದಿಕ ಕೊಂಣೂರ ಕರ್ನಾಟಕ ಸಂಗೀತ ಮಂಡಳಿ ಎಂಬ ಸಂಘವನ್ನು ಗೋಕಾಕಫಾಲ್ಸದ ಹತ್ತಿರಿರುವ ಕೊಂಣೂರವೆಂಬ ಗ್ರಾಮದಲ್ಲಿ ವೇದಮೂರ್ತಿ ಗುರುಶಿದ್ಧಸ್ವಾಮಿ ಸಾವಗಾಂವ ಕೊಂಣೂರಮಠ ಇವರ ಪ್ರೇರಣೆಯಿಂದ ಸ್ಥಾಪಿಸಿ ಅದನ್ನು ಸ್ಥಿರಪಡಿಸುವ ಕುರಿತು ಅನೇಕ ದೇಶಗಳಿಂದ ಸುಶಿಕ್ಷಿತ ಗಾಯಕರನ್ನು ಖರ್ಚಿನ ಕಡೆಗೆ ಲಕ್ಷಗೊಡದೆ ತರಿಸಿ ನಾಟಕ ಸಂಸ್ಥೆಯನ್ನು ಬೆಳೆಸಿದರು.

– ಅಮರಶಾಸ್ತ್ರಿ ಹಿರೇಮಠ ಲಿಂಗಸೂಗರ
‘ಸಂಗೀತ ಬಸವೇಶ್ವರ’ ನಾಟಕದ ಪ್ರಸ್ತಾವನೆಯಿಂದ

 

ವ್ಯವಸಾಯದ ದೃಷ್ಟಿಯಿಂದ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸುವಂತೆ ಕೆಲವು ತಂತ್ರಗಳನ್ನು ಬಳಸಿಕೊಂಡದ್ದು ಮತ್ತು ಸ್ತ್ರೀ ಪಾತ್ರಗಳಿಗಾಗಿ ನಟಿಯರನ್ನು ರಂಘದ ಮೇಲೆ ಮೊದಲ ಸಲ ತಂದದ್ದು. ಈ ಶ್ರೇಯಸ್ಸು ಅಪಾರವಾದ ಧನವನ್ನು ವಿನಿಯೋಗಿಸಿದ ಕೊಣ್ಣೂರ ಕಂಪನಿಯ ಸ್ಥಾಪಕರಾದ ಶಿವಮೂರ್ತಿಸ್ವಾಮಿ ಕಣಬರ್ಗಿಮಠ ಅವರದು. ಅಂದಿನ ಕಾಲದಲ್ಲಿ ‘ಕೊಣ್ಣೂರ ಕಂಪನಿ ನಾಟಕ, ಕಲೆಕ್ಟರ್ ದೀಪ’ ಎಂಬ ಮಾತು ಸಾಮಾನ್ಯ ಜನರಲ್ಲಿ ಗಾದೆಯ ಮಾತಿನಂತಾಗಿತ್ತು. ‘ಕಲೆಕ್ಟರ್ ದೀಪ’ ಎಂದರೆ ‘ಇಲೆಕ್ ಟ್ರಿಕ್‌ ದೀಪ’ (ಆ ಶಬ್ದ ಸಾಮಾನ್ಯರಿಗೆ ಸರಿಯಾಗಿ ಗೊತ್ತಿರಲಿಲ್ಲ). ವಿದ್ಯುದ್ದೀಪಗಳನ್ನು ಬಳಸುವಾಗ ವೇಷ ಭೂಷಣಗಳಲ್ಲಿ ಬದಲಾವಣೆ ಅನಿವಾರ್ಯವಾಯಿತು. ಜೊತೆಗೆ ಅಂದಿನ ಕಾಲದಲ್ಲಿ ಅತ್ಯಂತ ಜನಪ್ರಿಯವಾದ ‘ಟ್ರಾನ್ಸ್‌ ಫರ್ ಸೀನ್‌’ ತಂತ್ರ. ಇದರಿಂದ ಹೆಚ್ಚು ಸುಲಭವಾಯಿತಲ್ಲದೆ ಪರಿಣಾಮಕಾರಕವು ಆಯಿತು. ‘ಶನಿಪ್ರಭಾವ’ ನಾಟಕದಲ್ಲಿ ಶನಿಯು ವಿಕ್ರಮರಾಜನಿಗೆ ಶಾಪ ಕೊಟ್ಟೊಡನೆ ತಟ್ಟನೆ ದೀಪವಾರಿ ಅರಮನೆಯ ದೃಶ್ಯ ಅಡವಿಯ ದೃಶ್ಯವಾಗುವುದನ್ನು ನೋಡುವುದಕ್ಕೇ ಕೆಲ ಪ್ರೇಕ್ಷಕರು ಮತ್ತೆ ಮತ್ತೆ ನಾಟಕಕ್ಕೆ ಹೋಗುತ್ತಿದದರು. ಮರಾಠಿ ರಂಗಭೂಮಿಯ ಮೋಹವನ್ನು ಕೆಲವು ವರ್ಷಗಳವರೆಗೆ ಇಲ್ಲವಾಗಿಸಿ ಕನ್ನಡಿಗರು ತಮ್ಮ ರಂಗಭೂಮಿಗಾಗಿ ಹೆಮ್ಮೆ ಪಡುವಂತೆ ಮಾಡಲು ಇಂತಹ ತಂಥ್ರಗಳನ್ನಷ್ಟೆ ಅಲ್ಲ, ಸಂಗೀತ ಮತ್ತು ನಟನೆಗಳಲ್ಲಿ ಯೋಗ್ಯತೆ ಪಡೆದಿದ್ದ ನಟ-ನಟಿಯರೂ ಕಾರಣರಾದರು.

-ಡಾ. ಶ್ರೀರಂಗ
‘ಕನ್ನಡ ರಂಗಭೂಮಿ ನಡೆದು ಬಂದ ದಾರಿ’ ಕೃತಿಯಿಂದ

 

ಅಬ್ಬಿಗೇರಿ ಬಸನಗೌಡರ ‘ಕನ್ನಡ ಸಾಹಿತ್ಯ ಸೇವಾ ಸಂಗೀತ ನಾಟ್ಯಸಂಘ’ ಬೈಲಹೊಂಗಲ ಕ್ಯಾಂಪ್‌ ಮಾಡಿತ್ತು. ಕಂಪನಿಯ ಯಶಸ್ವಿ ನಾಟಕ ‘ಕಿತ್ತೂರ ಚೆನ್ನಮ್ಮ’ ಪ್ರಯೋಗವಾಗುತ್ತಿತ್ತು. ಆಗ ನಾನಿನ್ನು ಸಣ್ಣ ಪಾತ್ರಗಳನ್ನು ಮಾಡುತ್ತಿದ್ದೆ. ಹಿಂದೆ ಕೊಣ್ಣೂರ ನಾಟಕ ಕಂಪನಿಯ ಯಜಮಾನರಾಗಿದ್ದ ಶಿವಮೂರ್ತಿಸ್ವಾಮಿಗಳು ಅಲ್ಲಿ ಜಿನ್ನಿಂಗ್‌ ಮಿಲ್ಲು ನಡೆಸುತ್ತಿದ್ದರು. ಅವರು ಆಗಾಗ ನಾಟಕ ನೋಡಲು ಬರುತ್ತಿದ್ದರು. ಅವರ ಬಗ್ಗೆ ಕಲಾವಿದರಿಗೆ, ಮಾಲಿಕರಿಗೆ, ದೊಡ್ಡ ಗೌರವ. ಸ್ವಾಮಿಗಳು ಒಂದು ದಿನ ನಾಟಕ ಮಂಡಳಿಯವರನ್ನು ಊಟಕ್ಕೆ ಕರೆದಿದ್ದರು. ಊಟದ ಸಂದರ್ಭದಲ್ಲಿ ನಾಟಕದಕ ಚರ್ಚೆ ನಡೆದಿತ್ತು. ಸ್ವಾಮಿಗಳು ನಾಟಕಕಾರ ಚಿಕ್ಕೋಡಿ ಶಿವಲಿಂಗಯ್ಯನವರನ್ನು ಉದ್ದೇಶಿಸಿ ‘ಏ ಶಿವಲಿಂಗಾ, ಸ್ಟೇಜಿನ ಮ್ಯಾಲ ರಾಯಣ್ಣನ ಗೆಳೆಯ ಎಚ್ಚರ ಕುಡಿಯೋದು ಅಷ್ಟು ಸರಿಯಾಗಿ ಕಾಣುವುದಿಲ್ಲ. ಅದರಿಂದ ಜನರ ಕಣ್ಣಾಗ ರಾಯಾಭಾಳ ಸಣ್ಣವನಾಗಿ ಕಾಣ್ತಾನ. ಆ ದೃಶ್ಯ ಬದಲಿಸು.’ ಎಂದರು.

ನಾಟಕದ ಮೂರನೆಯ ಅಂಕಿನ ಎರಡನೆಯ ಪ್ರವೇಶದಲ್ಲಿ ಮಲ್ಲಪ್ಪಶೆಟ್ಟಿಯ ಕುತಂತ್ರದಿಂದ ಥ್ಯಾಕರೆನ ಸೈನ್ಯ ಕಿತ್ತೂರ ಕೋಟೆಯನ್ನು ಮುತ್ತಿಗೆ ಹಾಕಲು ಬರುವುದು. ಇದನ್ನು ಮೊದಲೇ ತಿಳಿದಿದ್ದ ಸಂಗೋಳ್ಳಿ ರಾಯಣ್ಣ, ಅವನ ಗೆಳೆಯ ಎಚ್ಚರ ಬ್ರಿಟಿಷರ ತಂತ್ರವನ್ನು ವಿಫಲಗೊಳಿಸುವರು. ಮಲ್ಲಪ್ಪಶೆಟ್ಟಿಯನ್ನು ಬಂಧಿಸುವರು. ಈ ಗೆಲುವಿನ ಉತ್ಸಾಹದಲ್ಲಿ ಎಚ್ಚರನು ರಾಯಣ್ಣ ಹೇಳಿದ ಬುದ್ಧಿಮಾತು ಕೇಳದೆ ರಾಯಾ ಮತ್ತು ಎಚ್ಚರ ಸೆರೆ ಕುಡಿಯುವ ಸನ್ನಿವೇಶವಿತ್ತು.’ ಶಿವಮೂರ್ತಿಸ್ವಾಮಿಗಳು ಹೇಳಿದ ಮರುದಿನದಿಂದ ಆ ದೃಶ್ಯ ಬದಲಿಸಬೇಕಾಯಿತು. ಅಂದಿನ ನಾಟಕ ರಂಗದಲ್ಲಿ ಸ್ವಾಮಿಗಳ ಮಾತಿಗೆ ಬಹಳ ಬೆಲೆ ಇತ್ತು.

-ನಾಟ್ಯಭೂಪಣ ಏಣಗಿ ಬಾಳಪ್ಪನವರ ಸಂದರ್ಶನದಿಂದ

 

ಮೊಟ್ಟಮೊದಲಿಗೆ ಡೈನಮೋ ಉಪಯೋಗಿಸಿ, ನಾಟಕರಂಗಕ್ಕೆ, ವಿದ್ಯುದ್ದೀಪವನ್ನು ತಂದವರೂ ಶಿವಮೂರ್ತಿಸ್ವಾಮಿಗಳೇ! ಅದಕ್ಕೆ ತಕ್ಕಂತೆ, ಕಣ್ಣು ಕೋರೈಸುವಂಥ ರಂಗಸಜ್ಜಿಕೆಗಳನ್ನು ನಿಯೋಜಿಸಿ ಹೆಚ್ಚಿನ ವೆಚ್ಚದಲ್ಲಿ ಪಾತ್ರಗಳ ವೇಷ ಭೂಷಣಗಳನ್ನು ಉತ್ಕೃಷ್ಟವಾಗಿ ಸಿದ್ಧಗೊಳಿಸಿದರು. ಕನ್ನಡ ರಂಗಭೂಮಿಯು ಬಡತನದ ಕೂಸು ಎನಿಸಿಕೊಂಡಿದ್ದ ಕಾಲದಲ್ಲಿ, ಅನೇಕ ಆಧುನಿಕ ವಿಧಾನಗಳನ್ನು ಅಳವಡಿಸಿ, ಅಪಾರವಾದ ವೆಚ್ಚದಲ್ಲಿ ಅದಕ್ಕೆ ಶ್ರೀಮಂತಿಕೆಯನ್ನು ತಂದು ತಮ್ಮ ಮಂಡಳಿಯನ್ನು ಯಾವುದೇ ಮರಾಠೀ ಮಂಡಳಿಯ ಆಡಂಬರಕ್ಕೆ ಕಡಿಮೆ ಇಲ್ಲವೆಂದು ಹಟತೊಟ್ಟು ಸಾಧಿಸಿ ತೋರಿಸಿ ಯಶಸ್ಸು ಶಿವಮೂರ್ತಿಸ್ವಾಮಿಗಳವರದು.

ಶಿವಮೂರ್ತಿಸ್ವಾಮಿಗಳು ಹಾಗೂ ವೆಂಕೋಬರಾಯರು ಗಳಿಸಿದ ಯಶಸ್ಸು ಅನೇಕ ಉತ್ಸಾಹೀ ತರುಣರನ್ನು ನಾಟಕರಂಗದ ಕಡೆಗೆ ತಿರುಗಿಸಿತು. ಸ್ತ್ರೀಯರಿಗೂ ರಂಗಮಂಟಪದ ಬಾಗಿಲು ತೆರೆದಂತಾಗಿ, ಹಾಡು ಕಲಿತವರೆಲ್ಲ ಪಾರ್ಟು ಮಾಡಲು ಮುಂದಾದರು. ನಾಟಕದಿಂದ ಧನ ಮಾನಗಣಳು ಸುಲಭವಾಗಿ ಸಿಕ್ಕುತ್ತವೆಂದು ನಂಬಿದ ಓದು ಬರಹವಷ್ಟೇ ಬಂದ ಯುವಜನೋತ್ಸಾಹಿಗಳು ‘ಸುಲಭವಾದ’ ರಂಗಕಲೆಯನ್ನೇ ವೃತ್ತಿಯಾಗಿ ಅವಲಂಬಿಸಲು ಮುಂದಾದರು. ಹೀಗೆ ಯುವಕರಿಗೆ ನಟರಾಗುವ ಹುಚ್ಚು. ನಾಲ್ಕುರು ವರುಷ ರಂಗದ ಮೇಲೆ ದುಡಿದ ನಟರಿಗೆ, ಮಂಡಳಿ ಕಟ್ಟಿ ಮಾಲಕರಾಗುವ ಹುಚ್ಚು. ಅಂತೂ ಒಮ್ಮೆ ನಾಟಕರಂಗವು ಎಲ್ಲರಿಗೂ ತುಂಬ ಆಕರ್ಷಣೀಯವೂ ಲಾಭದಾಯಕವೂ ಆದ ವೃತ್ತಿಯಾಗಿ ಕಂಡಿತು. ಅದರಿಂದಾಗಿ ೧೯೦೫ರ ನಂತರ ವೃತ್ತಿನಾಟಕ ಮಂಡಳಿಗಳ ಹುಲುಸಾದ ಬೆಳೆಯೇ ಬಂದಿತೆನ್ನಬೇಕು.

-ಡಾ. ಎಚ್‌.ಕೆ. ರಂಗನಾಥ
‘ಕರ್ನಾಟಕ ರಂಗಭೂಮಿ’ ಕೃತಿಯಿಂದ

 

ಕೊಣ್ಣೂರ ಕಂಪನಿಯು ಕನ್ನಡ ರಂಗದೇವತೆಯ ಮುಕುಟಪ್ರಾಯವಾಗಿ ಪ್ರಕಾಶಿಸಿದ್ದರೆ ಅದರ ಶ್ರೇಯಸ್ಸು ಯಾರದು? ನಟ ನಟಿಯರದೆ? ಕಣ್ಣು ಕುಕ್ಕಿಸುವಂತಹ ವಿದ್ಯುದ್ದೀಪಗಳದೆ? ಭವ್ಯ ಅಂಕಪಡದೆ, ಸೀನು ಸೀನರಿಗಳು, ಜರತಾರಿ ವೇಷ ಭೂಷಣಗಳದೆ? ರಸವತ್ತಾದ ಕಥಾನಕಗಳದೆ? ಸಂಗೀತ ಸಾಹಿತ್ಯಗಳದೆ? ನಿಜ, ಈ ಎಲ್ಲಾ ಮುಖ್ಯಾಂಶಗಳ ಸಮುದಾಯವೂ ಕೊಣ್ಣೂರ ಕಂಪನಿಯ ಹೆಗ್ಗುರುತುಗಳಾಗಿದ್ದವು. ಆದರೆ ಈ ಎಲ್ಲವನ್ನು ಬಂದೆಡೆ ಸೇರಿಸಿರುವಂತಹ ಯೋಜಕನೊಬ್ಬನಿಲ್ಲದಿದ್ದರೆ? ರಾವ್‌ಸಾಹೇಬ ಶಿವಮೂರ್ತಿಸ್ವಾಮಿ ಕಣಬರ್ಗಿಮಠ ಅವರು ಇಂತಹ ಯೋಜಕರಾಗಿದ್ದರು.

-ಎನ್ಕೆ
ಕರ್ಮವೀರ (೧೬-೫-೧೯೭೧)ರ ಸಂಚಿಕೆಯಿಂದ