ಕಲಾವಿದೆಯರ ರಂಗಪ್ರವೇಶ

ಕೊಣ್ಣೂರ ಕಂಪನಿ ಅಸ್ತಿತ್ವಕ್ಕೆ ಬರುವ ಪೂರ್ವದಲ್ಲಿ (ಸು. ೧೮೬೦) ‘ಶ್ರೀ ಕೃಷ್ಣ ಪಾರಿಜಾತ’ವು ಗೋಕಾವಿ ನಾಡಿನಲ್ಲಿ ಜನಪ್ರಿಯ ಕಲೆಯಾಗಿ ಬೆಳೆಯುತ್ತಿತ್ತು. ಕೌಜಲಗಿ ನಿಂಗವ್ವನ ಪ್ರವೇಶದಿಂದ ಆ ಕಲೆಗೆ ವಿಶೇಷ ಆಕರ್ಷಣೆ ಪ್ರಾಪ್ತವಾಗಿತ್ತು. ನಿಂಗವ್ವನ ಪಾರಿಜಾತ ಯಾವ ಊರಲ್ಲಿಯೇ ಇರಲಿ ಜನರು ಹಿಂಡು-ಹಿಂಡಾಗಿ ಬಂದು ಅವಳ ಆಟವನ್ನು ನೋಡುತ್ತಿದ್ದರು. ಶಿವಮೂರ್ತಿಸ್ವಾಮಿಗಳೂ ಅವಳ ಪಾರಿಜಾತವನ್ನು ನೋಡಿದ್ದರು. ಸ್ತ್ರೀ ರಂಗದ ಮೇಲೆ ಬಂದು ಹಾಡುವುದನ್ನು, ಅಭಿನಯಿಸುವುದನ್ನು ನೋಡಬೇಕೆನ್ನುವ ಪ್ರೇಕ್ಷಕರ ರಸಿಕತೆಯನ್ನು ಅವರು ತಿಳಿದಿದ್ದರು. ಅದಕ್ಕಾಗಿಯೇ ತಮ್ಮ ಕಂಪನಿಯ ನಾಟಕಗಳ ಆಕರ್ಷಣೆ ಹೆಚ್ಚಿಸುವುದಕ್ಕಾಗಿ ಸ್ತ್ರೀಪಾತ್ರಗಳಿಗೆ ಸ್ತ್ರೀಯರೇ ಬೇಕೆಂದು ತೀರ್ಮಾನಿಸಿದರು.

ಸು. ೧೯೦೨ರಲ್ಲಿ ಸ್ತ್ರೀಯರು ಈ ಕಂಪನಿಯಲ್ಲಿ ಪಾತ್ರಮಾಡಲು ಆರಂಭಿಸಿದರು. ಬಳ್ಳಾರಿ ಬಸಪ್ಪನ ನೆರವಿನಿಂದ ಕಂಪನಿಯನ್ನು ಪ್ರವೇಶಿಸಿದ ಲಕ್ಷ್ಮಾಸಾನಿಯೇ ಮೊದಲ ನಟಿ ಎನಿಸಿದ್ದಾಳೆ. ಈಕೆ ಸ್ಥೂಲದೇಹಿಯಾದ್ದರಿಂದ ಅವಳ ಪಾತ್ರ ಅಷ್ಟೊಂದು ರಂಜಿಸಲಿಲ್ಲ. ಅವಳನ್ನು ಪೋಷಕಪಾತ್ರಗಳಿಗೆ ಇಟ್ಟುಕೊಂಡು ಬೇರೊಬ್ಬ ನಟಿಯ ಹುಡಕಾಟಕ್ಕೆ ಮುಂದಾದರು. ೧೯೦೪ ಎಪ್ರಿಲ್‌ ೩ರ ದಿನಚರಿಯಲ್ಲಿ ‘(ನಾಟಕದ ಸಲುವಾಗಿ) ಹುಬ್ಬಳ್ಳಿಯಿಂದ ರೇಣುಸಾನಿ, ನಿಡಗುಂದಿಯಿಂದ ಸಂಗಪ್ಪ ಕೊಣ್ಣೂರಿಗೆ ಬಂದರು’ ಎಂದು ಬರೆದಿದ್ದಾರೆ. ಎಪ್ರಿಲ್‌ ೧೪ ರಂದು ‘ರೇಣುಸಾನಿಯ ತಾಯಿ ಈ ಹೊತ್ತು ೧೦೦ ರೂ. ತಕ್ಕೊಂಡು ಹುಬ್ಬಳ್ಳಿಗೆ ಹೋದಳು’ ಎಂದಿದ್ದಾರೆ. ಈ ವಿವರಗಳನ್ನು ಗಮನಿಸಿದರೆ ರೇಣುಸಾನಿ ಕಂಪನಿ ಪ್ರವೇಶಿಸಿದ ಎರಡನೆಯ ನಟಿ ಆಗಿರಬೇಕು ಇವಳಿಗೂ ನಾಯಕಿಯ ಪಾತ್ರ ಸಾಧಿಸಲಿಲ್ಲ. ನಾಯಕಿ ಪಾತ್ರದ ಶೋಧ ಮುಂದುವರಿಯಿತು. ಗುರುಲಿಂಗಪ್ಪ ಗೊಂಬಿ ಈತನ ನೆರವಿನಿಂದ ಎಲ್ಲೂಬಾಯಿ ಗುಳೇದಗುಡ್ಡ ೧೯೦೮ರಲ್ಲಿ ಕಂಪನಿಗೆ ಬಂದಳು. ಮಧುರ ಕಂಠ, ಮೋಹಕ ಮೈಮಾಟ. ಅಸ್ಖಲಿತಮಾತು ರಂಗಕ್ಕೆ ಬೇಕಾದ ಧೈರ್ಯದಿಂದ ಎಲ್ಲವ್ವ ಕಂಪನಿಯ ಹಿರೋಯಿನ್‌ ಆಗಿ ಬೆಳೆದಳು.

ಎಲ್ಲವ್ವ ಸ್ತ್ರೀ ಮತ್ತು ಪುರುಷ ಪಾತ್ರಗಳೆರಡನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಳು ‘ಬಸವೇಶ್ವರ’ದಲ್ಲಿ ಮೊದಲು ಮಾದಲಾಂಬಿಕೆಯಾಗಿ ಆಮೇಲೆ ಬಿಜ್ಜಿಳನ ಪುರುಷ ಪಾತ್ರದಲ್ಲಿ ಕಾಣುತ್ತಿದದ ಈಕೆ ಹೆಣ್ಣೆಂಬ ಅಂಶವನ್ನು ತೋರದಂತೆ ನಟಿಸುತ್ತಿದ್ದಳು. ಐತಿಹಾಸಿಕವಾಗಿ ಲಕ್ಷ್ಮಾಸಾನಿ, ರೇಣುಸಾನಿ ಈ ಕಂಪನಿಯ ಮೊದಲ ನಟಿಯರಾದರೂ ಅಭಿನಯ ಕೌಶಲ್ಯದಿಂದ ಎಲ್ಲವ್ವನಿಗೇ ಜನ ಮೆಚ್ಚುಗೆ ದೊರೆಯಿತು. ಅವಳೇ ವೃತ್ತಿರಂಘದ ಮೊದಲ ನಟಿ ಎಂದು ಅಭಿಮಾನದಿಂದ ಹೇಳಿಕೊಳ್ಳುವಂತಾಯಿತು. ಎಲ್ಲವ್ವನ ನಂತರ ಭರಮವ್ವ, ಹಣಮಂತವ್ವ ಎಂಬ ನಟಿಯರು ಕಂಪನಿ ಪ್ರವೇಶಿಸಿದರು.

ರಂಗಸಂಗೀತದಲ್ಲಿ ಹೊಸತನ

ಸಂಗೀತನಾಟಕಗಳ ಕಾಲವದು. ನಾಟಕ ಕಂಪನಿಗೆ ‘ಸಂಗೀತ ಮಂಡಳಿ’ ಹೆಸರಿನಿಂದಲೂ ಕರೆಯುತ್ತಿದ್ದರು. ಕೊಣ್ಣೂರ ಕಂಪನಿಯ ಆರಂಭದ ಕಾಲದಲ್ಲಿ ಕಲಾವಿದರು ಕರ್ನಾಟಕಿ ಪದ್ಧತಿಯಲ್ಲಿಯೇ ರಂಗಗೀತೆಗಳನ್ನು ಹಾಡುತ್ತಿದ್ದರು. ‘ಕಲಾವಿದ ಬಳ್ಳಾರಿ ಬಸಪ್ಪನು ಕರ್ನಾಟಕೀ ಸಂಗೀತದ ಶ್ರೇಷ್ಠ ಗಾಯಕನಾಗಿದ್ದನು. ಅವನು ಮುಖ್ಯ ಪಾತ್ರಗಳನ್ನು ಅಭಿನಯಿಸುವುದಲ್ಲದೆ ನಾಟಕಗಳನ್ನೂ ಕಲಿಸುತ್ತಿದ್ದನು. ಆರಂಭದ ಹರಿಶ್ಚಂದ್ರ, ಕೀಚಕವಧೆ ನಾಟಕಗಳು ಕರ್ನಾಟಕೀ ಶೈಲಿಯ ರಂಗಗೀತೆಗಳೊಂದಿಗೆ ಪ್ರದರ್ಶನಗೊಳ್ಳುತ್ತಿದ್ದವು’[1] ಅನಂತರದ ವರುಷಗಳಲ್ಲಿ ಹಿಂದುಸ್ಥಾನಿಶೈಲಿಯ ರಂಗಗೀತೆಗಳಿಗೆ ಆದ್ಯತೆ ದೊರೆಯಿತು. ಇದಕ್ಕೆ ಕಾರಣವೇನೆಂದರೆ ಮರಾಠಿ ರಂಗಸಂಗೀತದ ಪ್ರಭಾವ. ಆರಂಭದಲ್ಲಿ ಮರಾಠೀ ರಂಗಸಂಗೀತವಾದರೂ ಕರ್ನಾಟಕೀ ಶೈಲಿಯಿಂದಲೇ ಪ್ರೇರಿತವಾಗಿತ್ತು. ‘ವಿಷ್ಣುದಾಸ ಭಾವೆ ತನ್ನ ಆಟಗಳಿಗೆ ರಚಿಸಿದ ಪದಗಳಿಗೆ ಕರ್ನಾಟಕದ ಪಲ್ಲವಿಯಿಂದ ಪ್ರಾರಂಭಿಸಿ ಲೀಲಾಂಬರಿ ಆನಂದಭೈರವಿ, ನೀಲಾಂಬರಿ, ಮೋಹನಕಲ್ಯಾಣ ಮುಂತಾದ ಕರ್ನಾಟಕ ರಾಗಗಳನ್ನು ಬಳಕೆಯಲ್ಲಿ ತಂದಿದ್ದನು. ಕಿರ್ಲೋಸ್ಕರರ ಕಾಲದಲ್ಲಿ ಮರಾಠಿ ರಂಗಸಂಗೀತ ಹಿಂದುಸ್ಥಾನೀ ಪ್ರಭಾವಕ್ಕೊಳಗಾಗಿ ತೀವ್ರವಾಗಿ ಬೆಳೆಯಿತು.’[2] ಕಿರ್ಲೋಸ್ಕರ ಮತ್ತು ಇತರ ಕಂಪನಿಗಳು ಕರ್ನಾಟಕದಲ್ಲಿ ಸಂಚರಿಸುತ್ತ ಹೊಸ ಧಾಟಿಯಿಂದ ರಂಗಗೀತೆಗಳನ್ನು ಹಾಡುತ್ತಿದ್ದಾಗ ಇಲ್ಲಿಯ ಜನರಿಗೂ ಅವರ ಹಾಡುಗಳು ಅಪ್ಯಾಯಮಾನವೆನಿಸಿದವು. ಮರಾಠಿ ಹಾಡುಗಳನ್ನು ಕೇಳುವದೇ ನಮ್ಮ ಜನರಿಗೆ ಒಂದು ಫ್ಯಾಶನ್‌ ಆಗಿಬಿಟ್ಟಿತು.

ಮರಾಠಿ ರಂಗಸಂಗೀತದ ಮಾಧುರ್ಯವನ್ನು ಕನ್ನಡ ನಾಟಕಗಳಲ್ಲಿಯೂ ಅಳವಡಿಸಿಕೊಳ್ಳುವ ಉಪಾಯದಿಂದ ಸ್ವಾಮಿಗಳು ಅಂದಿನ ಜನಪ್ರಿಯ ಮರಾಠಿ ನಾಟಕಗಳಾದ ಸೌಭದ್ರ, ಶಾರದಾ, ತುಕಾರಾಮ, ನಾಟಕಗಳನ್ನು ಕನ್ನಡದಲ್ಲಿ ಆಡಿಸಲು ಮುಂದಾದರು. ಕೊಣ್ಣೂರು ಕಂಪನಿಯ ಎರಡನೆಯ ಹಂತದಲ್ಲಿ ಮರಾಠಿ ನಾಟಕಗಳ ಕನ್ನಡ ರೂಪಗಳು ಪ್ರಯೋಗಕ್ಕೆ ಬಂದವು. ಇವುಗಳಿಂದ ಕನ್ನಡ ರಂಗಸಂಗೀತದ ದಿಕ್ಕು ಬದಲಾಯಿತು. ಮರಾಠಿ ಧಾಟಿ ಚಾಲುಗಳಿಗೆ ಹೊಂದುವಂತಹ ಕನ್ನಡ ಹಾಡುಗಳು ರಚನೆಯಾದವು. ಅವುಗಳಿಗೆ ಸಂಗೀತ ಸಂಯೋಜಿಸಲು, ನಟರಿಗೆ ಸಂಗೀತ ಹೇಳಿಕೊಡಲು ಮಹಾರಾಷ್ಟ್ರದ ಸಾತಾರಾದಿಂದ ಗಣುಬುವಾ ಬಂದಿದ್ದರು. ಇವರ ಪ್ರಯತ್ನದಿಂದ ಕರ್ನಾಟಕೀ ಶೈಲಿಯು ಹಿಂದುಸ್ಥಾನೀ ಶೈಲಿಗೆ ಹೊರಳಿತು. ೧೯೦೯ರಲ್ಲಿ ರಚನೆಯಾದ ಸ್ವತಂತ್ರ ನಾಟಕ ‘ಸಂಗೀತ ಬಸವೇಶ್ವರ’ ದಲ್ಲಿಯ ಹಾಡುಗಳಿಗೂ ಮರಾಠಿ ಚಾಲಗಳನ್ನೇ (ಚಾಲ-ಕಿತಿ ಪ್ರೀತಿತರಿ, ಚಾಲ-ಹಾಲ ಇಕಡಚೆ ಪಹಾ ಮುಂ) ಹೆಚ್ಚಾಗಿ ನಿರ್ದೇಶಿಸಿದ್ದನ್ನು ಗಮನಿಸಿದರೆ ಮರಾಠಿ ರಂಗಸಂಗೀತದ ಪ್ರಭಾವ ಮನಗಾಣಬಹುದು. ಕೊಣ್ಣೂರ ಕಂಪನಿಯಲ್ಲಿ ಅಂದು ನಡೆದ ಈ ಪ್ರಯೋಗವನ್ನು ಅನಂತರದ ಕಂಪನಿಗಳೂ ಅನುಸರಿಸಿದವು. ನಾಟಕ ಕಂಪನಿಗಳ ಪ್ರಭಾವದಿಂದಾಗಿಯೇ ದೇಶೀಯ ರಂಗಕಲೆಯ ಮುಖವೂ ಹಿಂದುಸ್ಥಾನೀಶೈಲಿಗೆ ಹೊರಳಿತು. ಶ್ರೀಕೃಷ್ಣ ಪಾರಿಜಾತ, ಇತರ ಸಣ್ಣಾಟಗಳ ಹಾಡುಗಾರಿಕೆಯಲ್ಲಿಯೂ ಕರ್ನಾಟಕೀಶೈಲಿ ಹಿಂದೆ ಸರಿದು ಹಿಂದುಸ್ಥಾನೀಶೈಲಿ ಮುಂದೆ ಬಂದಿತು.

ಹಿಂದುಸ್ಥಾನೀಶೈಲಿಯ ಹಾಡುಗಾರಿಕೆ ಆರಂಭವಾದ ಮೇಲೆ ಕಂಪನಿಯಲ್ಲಿ ಹಾರ್ಮೋನಿಯಂ ವಾದ್ಯವು ಅಗತ್ಯವೆನಿಸಿತು. ಅದಕ್ಕಿಂತ ಮೊದಲು ಪಿಟೀಲು ಶ್ರುತಿವಾದ್ಯವಾಗಿ ಬಳಕೆಯಲ್ಲಿತ್ತು. ಭೀಮಪ್ಪ ಸಂಶಿ, ಅಣ್ಣಿಗೇರಿ ಅನಂತಾಚಾರ್ಯ, ಹಣಮು ಹುಬ್ಬಳ್ಳಿ ಮುಂತಾದವರು ಪಿಟೀಲು ವಾದಕರಾಗಿದ್ದರು. ಹಾರ್ಮೋನಿಯಂ ವಾದ್ಯವು ೧೯೦೧ರಲ್ಲಿಯೇ ಉಪಯೋಗಿಸಿದ ಬಗೆಗೆ ಸ್ವಾಮಿಗಳ ಡೈರಿಯಲ್ಲಿ ಆಧಾರವಿದೆ. ೨೮.೭.೧೯೦೧ರ ಪುಟದಲ್ಲಿ `I borrowed the Piana from the Desai of Kurbet lent it to Nemagouda for the opera’ ಎಂಬ ಮಾತಿದೆ. ಅನಂತರದಲ್ಲಿ ಹಾರ್ಮೋನಿಯಂ ವಾದ್ಯ ಖರೀದಿಸಿದ ಬಗ್ಗೆ ವಾದಕರನ್ನು ಮಿರಜದಿಂದ ಕರೆದುಕೊಂಡು ಬಂದುದರ ವಿವರಗಳು ದೊರೆಯುತ್ತವೆ.

ಮರಾಠಿ ರಂಗಸಂಗೀತದ ದೃಷ್ಟಿಯಿಂದ ಕನ್ನಡ ರಂಗಭೂಮಿಯ ಕೀಳರಿಮೆ ಕಡಿಮೆ ಮಾಡುವ ದಿಕ್ಕಿನಲ್ಲಿ ಸ್ವಾಮಿಗಳ ಪ್ರಯತ್ನ ನಿರಂತರವಾಗಿತ್ತು. ಗಾಯಕನಟರಿಗೆ ಮತ್ತು ವಾದ್ಯ-ವಾದಕರಿಗೆ ಕಂಪನಿಯಲ್ಲಿ ವಿಶೇಷ ಏರ್ಪಾಟು ಮಾಡಿದ್ದರು. ರಾಚಯ್ಯಸ್ವಾಮಿ ಬೆಳವಿ, ಗೋವಿಂದಪ್ಪ ದಾಬಡೆ, ಗಂಗಾಧರಪ್ಪ ಮುರಗೋಡ, ತುಕಾರಾಮಪ್ಪ ಗೋಕಾಕ, ಎಲ್ಲೂಬಾಯಿ ಗುಳೇದಗುಡ್ಡ, ಪರಪ್ಪ ಪಾಟೀಲ ಮುಂತಾದ ಗಾಯಕನಟರಿಗೆ ಗೌರವದ ಜೊತೆಗೆ ಕೈತುಂಬ ಸಂಬಳವೂ ಇತ್ತು. ೧೯೧೫ರಲ್ಲಿ ಈ ನಟರಿಗೆ ೮೦ ರಿಂದ ೧೦೦ರೂ. ಗಳವರೆಗೆ ಸಂಬಳ ಕೊಡುತ್ತಿದ್ದರೆಂಬುದು ಅಂದಿನ ಕಾಲಮಾನ ದೃಷ್ಟಿಯಿಂದ ಸಣ್ಣ ಸಂಗತಿಯಲ್ಲ. ಜೊತೆಗೆ ಕಲಾವಿದರ ಮಾನ ಸನ್ಮಾನ ಸಮಾರಂಭಗಳೂ ಏರ್ಪಾಡಾಗುತ್ತಿದ್ದವು. ರೂಪ ಮತ್ತು ಹಾಡುಗಾರಿಕೆಯಲ್ಲಿ ಮುರಗೋಡ ಗಂಗಾಧರಪ್ಪ ಮಹಾರಾಷ್ಟ್ರದ ಬಾಲಗಂಧರ್ವರನ್ನು ಹೋಲುತ್ತಿದದರಿಂದ ಅವರಿಗೆ ‘ಕರ್ನಾಟಕ ಗಂಧರ್ವ’ ಬಿರುದಿನಿಂದ ಸನ್ಮಾನಿಸಲಾಯಿತು. ೧೯೨೦ರಲ್ಲಿ ಕಂಪನಿಯ ನಾಯಕನಟ ರಾಚಯ್ಯಸ್ವಾಮಿ ಬೆಳವಿ ಅವರಿಗೆ ‘ಭಾರತಗಂಧರ್ವ’ ಬಿರುದ್ನು, ಬಂಗಾರದ ಪದಕವನ್ನು ಅರ್ಪಿಸಲಾಯಿತು. ತಬಲಾ ವಾದಕ ವಿಠ್ಠಲರಾವ ಕೊಲ್ಲಾಪುರ ಇವರಿಗೆ ಉತ್ತಮ ಸೇವೆಗಾಗಿ ಬಂಗಾರದ ಉಂಗುರವನ್ನು ಕಾಣಿಕೆಯಾಗಿ ಕೊಟ್ಟದ್ದನ್ನು ಶಿವಮೂರ್ತಿಸ್ವಾಮಿಯವರ ದಿನಚರಿ ತಿಳಿಸುತ್ತದೆ.

೧೯೧೮ರಲ್ಲಿ ಕಂಪನಿ ಸೊಲ್ಲಾಪುರ ಕ್ಯಾಂಪಿನಲ್ಲಿದ್ದಾಗ ಶಿವಮೂರ್ತಿಸ್ವಾಮಿಗಳು ಮುಂಬೈಯಿಂದ ಭಾರೀ ಬೆಲೆಯ ಪ್ಯಾರೀಸ ಕಾಲ್ಪೆಟಿ (ಹಾರ್ಮೋನಿಯಂ ವಾದ್ಯ) ಯನ್ನು ಖರೀದಿಸಿ ತಂದರು. ಅದರ ಉಲ್ಲೇಖ ೩ ಆಗಸ್ಟ ೧೯೧೮ರ ದಿನಚರಿಯಲ್ಲಿದೆ: I came to sholapur this morning from Bombay. I brought the Harmonium for the Konnur Company. ಈ ಕಾಲ್ವೇಟಿಯ ಬೆಲೆ ೩೩೫ರೂ. ಅದು ಪ್ಯಾರೀಸ್‌ ಸುಪ್ರಸಿದ್ಧ ಎಂ. ಕ್ಯಾಜರೀಲ್‌ ಕಂಪನಿಯವರು ತಯಾರಿಸಿದ್ದ ವಾದ್ಯವಾಗಿತ್ತು. ಅದರಲ್ಲಿ ಅತ್ಯಂತ ಸುಶ್ರಾವ್ಯ ಸೂರುಗಳಿದ್ದವು. ಹಾರ್ಮೋನಿಯಂ ವಾದಕರಾಗಿ ಶಂಕರಬುವಾ ವಸಯಿ (ಮುಂಬಯಿ). ಬಹಳ ವರ್ಷ ಸೇವೆಯಲ್ಲಿದ್ದರು. ಕಂಪನಿ ನಿಂತಮೇಲೆ ತುಕಾರಾಮಬುವಾ ಅವರ ಕಂಪನಿಗೆ (ಶಾರದಾ ಸಂಗೀತ ನಾಟಕ ಮಂಡಳಿ, ಗೋಕಾಕ) ಈ ಕಾಲ್ವೇಟಿಯನ್ನು ಕಾಣಿಕೆಯಾಗಿ ಕೊಡಲಾಯಿತು.

ನಟರಿಗೆ – ನಟರಾಗುವವರಿಗೆ ತರಬೇತಿ

ಯಾವುದೇ ಕಲೆ ವೃತ್ತಿಯಾದರೆ ಆ ಕಲಾವಿದರು ಪರಿಣತರಿರಬೇಕು. ಕಲಾವಿದರಿಗೆ ಪರಿಣತಿ ಸಾಧಿಸಬೇಕಾದರೆ ಶಿಸ್ತಿನ ತರಬೇತಿಯನ್ನು ಪಡೆದಿರಬೇಕು. ಶಿವಮೂರ್ತಿ ಸ್ವಾಮಿಗಳು ಅಂತಹ ಶಿಸ್ತಿನ ತರಬೇತಿಯನ್ನು ಕಂಪನಿಯ ಒಂದು ಭಾಗವಾಗಿ ರೂಪಿಸಿದ್ದರು. ಕಂಪನಿಯ ಸಂಘಟನೆಯ ಹಂತದಲ್ಲಿ ಕಲಾವಿದರು ಹೇಳದೆ ಕೇಳದೆ ಹೋಗುತ್ತಿದ್ದರು. ನಟರ ಗೈರು ಹಾಜರಿಯಿಂದ ನಾಟಕಗಳ ಪ್ರದರ್ಶನ ನಿಲ್ಲಿಸಬೇಕಾಗುತ್ತಿತ್ತು. ಇಂಥ ಅನುಭವದ ಮೇಲೆಯೇ ಕಂಪನಿಯಲ್ಲಿ ನಟರಿಗೆ ಮಾತ್ರವಲ್ಲ ನಟರಾಗುವವರಿಗೂ ತರಬೇತಿ ನೀಡುವ ವ್ಯವಸ್ಥೆ ಜಾರಿಗೆ ತಂದಿದ್ದರು.

ನಾಟಕದ ತಾಲೀಮು ನಿಯಮಿತವಾಗಿ ನಡೆಯುವಂತೆ ನಾಟಕದ ಮಾಸ್ತರರನ್ನು ನೇಮಿಸಿದ್ದರು. ಪ್ರದರ್ಶನವಿದ್ದ ದಿನ ಮಧ್ಯಾಹ್ನ ಮತ್ತು ಮರುದಿನ ಮುಂಜಾನೆ ತಾಲೀಮು ಇರುತ್ತಿರಲಿಲ್ಲ. ನಾಟಕವಿಲ್ಲದ ದಿನ ಎರಡೂ ವೇಳೆ ತಪ್ಪದೆ ತಾಲೀಮು ನಡೆಯುತ್ತಿತ್ತು. ತಾಲೀಮಿನಲ್ಲಿ ಪಾತ್ರವಿದ್ದ ನಟರ ಜೊತೆಗೆ ಪಾತ್ರಗಳಿಲ್ಲದ ನಟರೂ, ಸಂಗೀತ ಕಲಿಯಲಿದ್ದ ಬಾಲಕರೂ ಹಾಜರರಿರಬೇಕೆಂಬ ನಿಯಮ ಕಡ್ಡಾಯವಿತ್ತು. ದಿನವೂ ತಾಲೀಮು ನೋಡಿ ನೋಡಿ ಬಾಲಕರು ಕಲಾವಿದರಾಗಿ ಬೆಳೆಯುವಂಥ ಪರಿಸರವು ಕಂಪನಿಯಲ್ಲಿತ್ತು. ಹಿರಿಯರು ಹೇಳುವಂತೆ ಕಂಪನಿಯಲ್ಲಿ ನಟರಿಗಿಂತ ಕಲಿಯಲು ಬಂದ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿತ್ತು. ಕಂಠ ಚೆನ್ನಾಗಿದ್ದ, ಸಂಗೀತಬಲ್ಲ ತರುಣರಿಗೆ ನಟಿಸುವ ಅವಕಾಶವಿರುತ್ತಿತ್ತು. ನಟನೆಯಲ್ಲಿ ತೋರಿದ ನೈಪುಣ್ಯತೆ ಆಧರಿಸಿ ಸಂಬಳವನ್ನು ಕೊಡುತ್ತಿದ್ದರು. ಬೆಳಗಾವಿ, ಬಿಜಾಪುರ ಜಿಲ್ಲೆಯ ಬಹಳಷ್ಟು ಕಲಾವಿದರು ರೂಪಗೊಂಡದದು ಈ ಸಂಘದಲ್ಲಿಯೇ. ಬಳ್ಳಾರಿ ಬಸಪ್ಪ, ಭಾವು ಮಾಸ್ತರ, ರಾಚಯ್ಯಸ್ವಾಮಿ ಬೆಳವಿ. ತುಕಾರಾಮಬುವಾ, ಗರುಡ ಸದಾಶಿವರಾಯರು ಮುಂತಾದವರು ಈ ಕಂಪನಿಯಲ್ಲಿ ನಾಟಕ ಶಿಕ್ಷಕರಾಗಿದ್ದರು.

ತರಬೇತಿಯಿಂದ ಕಂಪನಿಯಲ್ಲಿ ಸ್ವೆಯರ್ ನಟರ ಪಡೆಯೂ ಸಿದ್ಧವಾಗಿತ್ತು. ಮುಖ್ಯ ಪಾತ್ರವಹಿಸುವ ಇಬ್ಬರು ನಟರಾದರೂ ಕಂಪನಿಯಲ್ಲಿರಬೇಕೆಂಬುದು ಸ್ವಾಮಿಗಳ ನಿಲುವು. ಇದು ವೇಷ-ಭೂಷಣ, ರಂಗಸಲಕರಣೆಗಳಿಗೂ ಅನ್ವಯಿಸಿತ್ತು. ಇದರಿಂದ ಕಂಪನಿಯಲ್ಲಿ ನಟಿಸುವವರಿಗಿಂತ ನಟಿಸದಿರುವ ನಟರು, ಉಪಯೋಗಿಸುತ್ತಿದ್ದ ಸಲಕರಣೆಗಳಿಗಿಂತ ಉಪಯೋಗಿಸದಿರುವ ಸಲಕರಣೆಗಳೂ ಹೆಚ್ಚಿದ್ದವಂತೆ. ಕಂಪನಿ ನಿಂತ ಬಳಿಕ ಮಗ ಶಿವಶಂಕರ ಅವುಗಳನ್ನು ಬೇರೆ ಬೇರೆ ಕಂಪನಿಗಳಿಗೆ ಕೊಟ್ಟರಂತೆ.[3]

ಡೈನಾಮೋ ವಿದ್ಯುತ್ತಿನ ಬಳಕೆ

ರಂಗದ ಮೇಲಿನ ಬೆಳಕಿಗಾಗಿ ಕನ್ನಡ ರಂಗಭೂಮಿ ಆಗಿನ್ನೂ ಹೊಸ ಸುಧಾರಣೆಗಳನ್ನು ಕಂಡಿರಲಿಲ್ಲ. ಎಣ್ಣೆ ಬುಡ್ಡಿ, ಹಿಲಾಲಗಳನ್ನೇ ಉಪಯೋಗಿಸುತ್ತಿದ್ದ, ಗ್ಯಾಸ್‌ ಲೈಟ್‌ ಕೂಡ ಇನ್ನೂ ಬಳಕೆಗೆ ಬಂದಿರದ ಸ್ಥಿತಿಯಲ್ಲಿ ಡೈನಾಮೋ ವಿದ್ಯುತ್ತಿನ ಬಗೆಗೆ ಯೋಚಿಸಿ ಅದನ್ನು ರಂಗಕ್ಕೆ ಅಳವಡಿಸಿದ ಹಿರಿಮೆ ಶಿವಮೂರ್ತಿಸ್ವಾಮಿಗಳದು. ೧೯೧೪ ರಲ್ಲಿ ೫,೭೦೦/-ರೂ.ಗಳನ್ನು ಕೊಟ್ಟು ಮುಂಬಯಿಯಿಂದ ಡೈನಾಮೋ ಯಂತ್ರವನ್ನು ಖರೀದಿಸಿ ತಂದರು. ಈ ಯಂತ್ರದಿಂದ ರಂಗದ ಮೇಲೆ ಬಲ್ಬುಗಳಿಂದ ಬೆಳಕು ಚಿಮ್ಮಿತು; ನಾಟಕಗಳಿಗೆ ಹೊಸ ಕಳೆ ಕಟ್ಟಿತು. ಅಂದಿನ ಕಾಲದ ಪ್ರೇಕ್ಷಕರಿಗೆ ಇದೊಂದು ದೊಡ್ಡ ಚಮತ್ಕಾರವಾಗಿಯೇ ಕಂಡಿತು. ಬೆಳಗುವ ಬಲ್ಬುಗಳನ್ನು ನೋಡಿದ ಪ್ರೇಕ್ಷಕರು “ಏ ಸೂರ್ಯಾನ ಮರಿಗೋಳ ಕಟ್ಟಿ ಹಾಕಿದಾರೋ” ಎಂದು ಬೆರಗಿನಿಂದ ಹೇಳುತ್ತಿದ್ದರಂತೆ. ಬೆಳಗಾವಿ ಪ್ರದೇಶದಲ್ಲಿ ಪ್ರಚಲಿತದಲ್ಲಿದ್ದ ಇನ್ನೊಂದು ಮಾತೆಂದರೆ ‘ಮುಚ್ಚಿಕಟಿಗಿ ನಾಟಕ, ಕಲೆಕಟರ ದೀವಿಗಿ’ (ಮೃಚ್ಛಕಟಿಕ ನಾಟಕ, ಇಲೆಕ್ಟ್ರಿಕ್‌ ದೀಪ) ಎಂದು ಕಂಪನಿಯ ವೈಶಿಷ್ಟ್ಯವನ್ನು ಹೇಳುತ್ತಿದ್ದರು. ವಿದ್ಯುತ್‌ ಬೆಳಕಿನಲ್ಲಿ ಮೊದಲು ನಾಟಕ ನೋಡಿ ಖುಷಿಪಟ್ಟ ಸ್ವಾಮಿಗಳು ಮರುದಿನ ಕಂಪನಿಯ ಜನರಿಗೆಲ್ಲ ಹೋಳಿಗೆಯ ಊಟ ಮಾಡಿಸಿದರಂತೆ.

ಮೈಸೂರು ಪ್ರದೇಶದ ದೊಡ್ಡ ಕಂಪನಿ, ಪ್ರಯೋಗಶೀಲ ಕಂಪನಿ ಎಂದು ಹೆಸರಾದ ‘ಗುಬ್ಬಿ ಕಂಪನಿ’ಗ್ಯಾಸ್‌ ಲೈಟ್‌ ಅಳವಡಿಸಿಕೊಂಡ ಸಂದರ್ಭದಲ್ಲಿ ಕೊಣ್ಣೂರ ಕಂಪನಿ ಡೈನಾಮೋ ವಿದ್ಯುತ್ತನ್ನು ಅಳವಡಿಸಿಕೊಂಡಿತೆಂಬುದು ಗಮನಾರ್ಹ ಸಂಗತಿ. ೧೯೨೬ರಲ್ಲಿ ‘ಗುಬ್ಬಿ ಕಂಪನಿ’ ವಿದ್ಯುತ್‌ ಬೆಳಕನ್ನು ಉಪಯೋಗಿಸಲು ಆರಂಭಿಸಿತು.[4] ‘ಕನ್ನಡ ರಂಗದೇವತೆಯನ್ನು ವಿದ್ಯುತ್‌ ದೀಪದಿಂದ ಅಲಂಕರಿಸಿ ವೈವಿಧ್ಯಮಯವಾಗಿ ಪೂಜೆಗೈದ ಪರಮ ಭಕ್ತರೆಂದರೆ ಶಿವಮೂರ್ತಿಸ್ವಾಮಿಗಳು’ ಎಂದು ಗುಬ್ಬಿ ವೀರಣ್ಣನವರು ಸ್ವಾಮಿಗಳ ಸಾಧನೆಯನ್ನು ಬಣ್ಣಿಸಿದ್ದುಂಟು. ವಿದ್ಯುತ್ ಬೆಳಕಿನ ಉಪಯೋಗದಿಂದ ಪ್ರದರ್ಶನ ವ್ಯವಸ್ಥೆಗೆ ಹೊಸ ಆಯಾಮ ಲಭಿಸಿತು. ದೀಪದ ಅಥವಾ ಪೆಟ್ರೊಮ್ಯಾಕ್ಸ ಬೆಳಕಿನಲ್ಲಿ ಸ್ಪಷ್ಟವಾಗಿ ಕಾಣದಿರುವ ನಟರ ಆಂಗಿಕಾಭಿನಯದ ಸೂಕ್ಷ್ಮಗಳು ವಿದ್ಯುತ್‌ ಬೆಳಕಿನಲ್ಲಿ ಸ್ಪಷ್ಟವಾಗಿ, ಸ್ಫುಟವಗಿ ಕಾಣಿಸುವಂತಾಯಿತು. ದೃಶ್ಯಜೋಡಣೆ, ಸನ್ನಿವೇಶ ಬದಲಾವಣೆಗೂ ಇದರಿಂದ ಅನುಕೂಲವಾಯಿತು.

ಬದಲಾಗುವ ದೃಶ್ಯಗಳು (ಟ್ರನ್ಸ್ ಫರ್ ಸೀನ್ಗಳು)

‘ಶನಿಪ್ರಭಾವ’ ಈ ಕಂಪನಿಯ ಅತ್ಯಂತ ಜನಪ್ರಿಯ ನಾಟಕ. ಈ ನಾಟಕದ ಮುಖ್ಯ ಆಕರ್ಷಣೆಗಳಲ್ಲಿ ಪೀತಾಂಬರಪ್ಪ ಡೋಂಗರೆ ಅವರ ವಾಚಿಕಾಭಿನಯ ಒಂದಾದರೆ, ದೃಶ್ಯ ಬದಲಾವಣೆಯ ತಂತ್ರ ಮತ್ತೊಂದು. ವಿದ್ಯುತ್‌ ಬೆಳಕಿನ ಸಂಯೋಜನೆಯ ನಂತರ ದೃಶ್ಯ ಬದಲಾವಣೆಯ ತಂತ್ರ ಅಳವಡಿಸಲಾಯಿತು (೧೯೧೪). ಇದರ ವಿಶೇಷತೆ ಎಂದರೆ ರಂಗದ ಮೇಲಿನ ದೀಪ ಆರಿ ಹತ್ತುವುದರೊಳಗಾಗಿ ದೃಶ್ಯ ಬದಲಾಗುತ್ತಿತ್ತು. ಆಸ್ಥಾನದ ದೃಶ್ಯವು ದಟ್ಟವಾದ ಅರಣ್ಯದೃಶ್ಯವಾಗಿ ಪರಿವರ್ತನೆಯಾಗುತ್ತಿತ್ತು. ಅರಮನೆಯ ದೃಶ್ಯವನ್ನು ಚಿತ್ರಿಸಿದ್ದ ಪಡದೆಕಂಬಗಳ ಮತ್ತೊಂದು ಬದಿಯಲ್ಲಿ ಅರಣ್ಯದ ದೃಶ್ಯವನ್ನು ಚಿತ್ರಿಸಿರುತ್ತಿದ್ದರು. ವಿದ್ಯುತ್‌ ಬಲ್ಬುಗಳು ಆರಿ ಹತ್ತುವುದರೊಳಗಾಗಿ ಅರಮೆಯ ಸೆಟ್ಟನ್ನೇ ತಿರುಗಿಸಿಟ್ಟು ಅರಣ್ಯದೃಶ್ಯವನ್ನು ತೋರಿಸುತ್ತಿದ್ದರು.

ಇದರಿಂದ ಪಡದೆ ಸುತ್ತಿಕೊಂಡು ಮೇಲೇಳುವ, ಸುರುಳಿ ಬಿಚ್ಚುತ್ತ ಕೆಳಗಿಳಿಯುವ ಇಲ್ಲವೆ ಪಕ್ಕದಿಂದ ಎಳೆದೊಯ್ಯುವ ಶ್ರಮದ ಕೆಲಸ ತಪ್ಪಿತು. ಸಮಯದ ಉಳಿತಾಯದ ಜೊತೆಗೆ ನಾಟಕದ ಕ್ರಿಯೆಗೂ ಈ ತಂತ್ರ ತುಂಬ ನೆರವಾಯಿತು. ‘ಶನಿಪ್ರಭಾವ’ದಲ್ಲಿ ರಾಜಾ ವಿಕ್ರಮನನ್ನು ಒಮ್ಮೆಲೆ ದೂರದ ಗೊಂಡಾರಣ್ಯಕ್ಕೆ ತಂದ ಮಾಯಾ ಕುದುರೆಯ ಪವಾಡವನ್ನು ಕಣ್ಣಿಗೆ ಕಟ್ಟುವಂತೆ ದೃಶ್ಯ ಬದಲಾವಣೆಯ ತಂತ್ರದಿಂದ ತೋರಿಸಲಾಗುತ್ತಿತ್ತು. ಕ್ಷಣಕಾಲ ರಂಗದ ದೀಪ ಆರಿ ಹತ್ತುವುದರೊಳಗಾಗಿ ಆಗಿ ಹೋದ ದೃಶ್ಯ ಜೋಡಣೆಯಿಂದ ಜನ ತಮ್ಮ ಕಣ್ಣನ್ನು ತಾವೇ ನಂಬದಂತೆ ಮಾಡುತ್ತಿದ್ದರು. ಶ್ರೀರಂಗರು ಹೈಸ್ಕೂಲ ವಿದ್ಯಾರ್ಥಿಯಾಗಿದ್ದಗ ಬಿಜಾಪುರದಲ್ಲಿ ಶನಿಪ್ರಭಾವ ನಾಟಕ ನೋಡಿದ್ದು, ಆ ಪ್ರಸಂಗವನ್ನು ತಮ್ಮ ಆತ್ಮಕಥೆಯಲ್ಲಿ ಸ್ಮರಿಸಿದ್ದಾರೆ. ‘ಮೂರು – ನಾಲ್ಕು ವರ್ಷ ಮರಾಠೀ ಮತ್ತು ಕನ್ನಡದ ಅನೇಕ ಕಂಪನಿ ನಾಟಕಗಳನ್ನು ನೋಡಿದೆ. ಅವುಗಳಲ್ಲಿ ಕನ್ನಡ ಶನಿಪ್ರಭಾವ ನಾಟಕ ನನಗೆ ಅತ್ಯಂತ ಮೆಚ್ಚುಗೆಯದಾಗಿತ್ತು. ಒಂದು ಟ್ರಾನ್ಸಫರ್‌ ಸೀನ್‌, ಹಳ್ಳಿಯಿಂದ ಬಂದ ನನಗೆ ಇದೊಂದು ಮಾಟ ಎನಿಸುತ್ತಿತ್ತು. ವಿಕ್ರಮನ ಅರಮನೆಯ ದೃಶ್ಯ; ಕೂಡಲೇ ‘ಢಂ’; ರಂಗಸ್ಥಲವೆಲ್ಲ ಕತ್ತಲೆಯಾಗುವುದು; ಕ್ಷಣಾರ್ಧದಲ್ಲಿ ಕಂಬಗಳು ಬದಲಾಗಿ ಗಿಡಗಳು, ಸಿಂಹಾಸನ ಬದಲಾಗಿ ಬಂಡೆಗಲ್ಲು ನಿಂತಿವೆ, ಹರಕು ಬಟ್ಟೆಗಳಲ್ಲಿ ವಿಕ್ರಮದೊರೆ ನಿಂತಿದ್ದಾನೆ, ಶನಿಯ ಶಾಪದ ಪ್ರಭಾವ ಅದು ಈ ದೃಶ್ಯವನ್ನು ನೋಡಿದಷ್ಟು ಸಲ ಬೆರಗಾಗುತ್ತಿದ್ದೆ’.[5] ಎಂದಿದ್ದಾರೆ.

ನಾಟಕವೊಂದರ ಆಕರ್ಷಣೆಯಲ್ಲಿ ರಂಗಪಡದೆಗಳ ಪಾತ್ರವು ಗಮನಾರ್ಹವೆಂದು ಅವುಗಳ ರಚನೆಗಾಗಿ ವಿಶೇಷ ಗಮನ ಕೊಡಲಾಗಿತ್ತು. ಸದೋಬಾ ಪೇಂಟರ ಮಿರಜ, ಬಳವಂತ ಪೇಂಟರ್ ಕೊಲ್ಲಾಪುರ, ರಘುವೀರ ಪೇಂಟರ ಗೋವಾ – ಈ ಪ್ರತಿಭಾವಂತ ಕಲಾವಿದರು ಕಾಲಕಾಲಕ್ಕೆ ಕಂಪನಿಯಲ್ಲಿದ್ದು ಹೊಸ ಹೊಸ ಪಡದೆಗಳನ್ನು ಬರೆದು ಕೊಟ್ಟಿದ್ದಾರೆ. ರಂಗಪರಿಕರಗಳಿಗೆ ಬೇಕಾಗುವ ಸಾಮಾನುಗಳನ್ನು, ವೇಷಭೂಷಣಗಳನ್ನು ಮುಂಬಯಿಯ ಭುಲೇಶ್ವರ ರಸ್ತೆಯಲ್ಲಿರುವ ನಾಟಕ ಸಾಮಾನುಗಳ ಅಂಗಡಿಯಿಂದ ಖರೀದಿಸಿ ತರುತ್ತಿದ್ದರು. ಭಾರಿ ಬೆಲೆಯ ಜರಿ ಪೀತಾಂಬರಗಳು ಕಂಪನಿಯ ವೈಭವವನ್ನು ಮೆರೆಸುತ್ತಿದ್ದವು. ಅಂದಿನ ಒಂದು ಪೀತಾಂಬರನ ಇಂದಿನ ಬೆಲೆ ಸಾವಿರ ರೂಪಾಯಿಗೂ ಹೆಚ್ಚಾಗಬಹುದೆಂಬುದು ಹಿರಿಯರ ಅಂಬೋಣ.

೧೯೧೫ರಲ್ಲಿ ರಘುವೀರ ಪೇಂಟರ್‌ ಚಿತ್ರಿಸಿದ ಶ್ರೀರಾಮಪಟ್ಟಾಭಿಷೇಕದ ಪಡದೆಯಂತೂ ಅತ್ಯಾಕರ್ಷಕವಾಗಿತ್ತೆಂದು ಅದರ ಛಾಯಾಚಿತ್ರ ನೋಡಿ ಹೇಳಬಹುದು. ರಾಮನು ಪಟ್ಟಾಭಿಷಿಕ್ತನಾಗಿದ್ದಾನೆ. ಎಡಕ್ಕೆ ಸೀತೆ ಕುಳಿತಿದ್ದಾಳೆ. ಬಲಕ್ಕೆ ಲಕ್ಷ್ಮಣ ನಿಂತಿದ್ದಾನೆ. ಹನುಮಂತನು ಶ್ರೀರಾಮನ ಪಾದಗಳ ಹತ್ತಿರ ಭಕ್ತಿಯಿಂದ ಕೈಮುಗಿದು ಕುಳಿತಿದ್ದಾನೆ. ಸುಹಾಸಿನಿಯರು ಆರತಿ ಬೆಳಗುತ್ತಿದ್ದಾರೆ. ರಾಮ-ಸೀತೆ ಅಭಯರಕ್ಷೆ ನೀಡುತ್ತಿದ್ದಾರೆ. ಶ್ರೀರಾಮ-ಸೀತೆಯರ ಧೀಮಂತ ಮುಖಮುದ್ರೆ, ಲಕ್ಷ್ಮಣ-ಹನುಮಂತನ ಭಕ್ತಿ ತುಂಬಿದ ಮುಖಭಾವಗಳು, ಕಲಾವಿದನ ಪ್ರತಿಭೆ, ಬಣ್ಣಗಾರಿಕೆಯ ಕೌಶಲ್ಯಕ್ಕೆ ನಿದರ್ಶನಗಳಾಗಿವೆ. ಸಿಂಹಾಸನದ ಎರಡೂ ಬದಿಗೆ ಮುನಿಗಳು, ಮಂತ್ರಿಗಳು, ಪರಿವಾರದವರು ನಿಂತಿದ್ದಾರೆ, ಕುಳಿತಿದ್ದಾರೆ, ಪಡದೆಯ ಮೇಲ್ಭಾಗದ ಮಧ್ಯದಲ್ಲಿ ಮುಂಬಯಿ ಗವರ್ನರ್ ವೆಲಿಂಗ್ಡನ್‌ ರ ಚಿತ್ರವಿದೆ. ಪಡದೆಯ ಪಕ್ಕದ ಬಲಭಾಗದಲ್ಲಿ ಗದುಗಿನ ರಾವಸಾಹೇಬ ಮಾನ್ವಿಯವರ ಚಿರ, ಎಡಗಡೆಗೆ ಮಾಲೀಕರಾದ ಶಿವಮೂರ್ತಿಸ್ವಾಮಿಗಳ ಚಿತ್ರ, ಎರಡೂ ಚಿತ್ರಗಳ ಕೆಳಗೆ ಗರಿಗೆದರಿ ನರ್ತಿಸುವ ಮಯೂರಗಳಿವೆ. ರಘುವೀರ ಪೇಂಟರನ ಕಲೆಗಾರಿಕೆಯ ಕುಸುರಿಗೆಲಸ ಪಡದೆಯ ಪ್ರತಿ ಭಾಗದಲ್ಲೂ ಒಡಮೂಡಿದೆ. ಇದರ ರಚನೆಯ ಹಿಂದೆ ಶಿವಮೂರ್ತಿಸ್ವಾಮಿಗಳ ಕಲಾಪ್ರಜ್ಞೆ, ವ್ಯವಹಾರಿಕ ಜಾಣ್ಮೆ ಇರುವುದನ್ನು ಮರೆಯಲಾಗದು. ತಮ್ಮ ವೃತ್ತಿ, ಪ್ರವೃತ್ತಿಗಳೆರಡಕ್ಕೂ ಇಂಗ್ಲೀಷ ಅಧಿಕಾರಿಗಳಿಂದ ತೊಂದರೆಯಾಗಬಾರದೆಂಬ ಉದ್ದೇಶದಿಂದಾಗಿ ಪಡದೆಯ ಮೇಲೆ ಅಂದಿನ ಗವ್ಹರ್ನ್‌ರ್ ರ ಚಿತ್ರ, ಕಲೆಕ್ಟರ್ ರ ಚಿತ್ರಗಳನ್ನು ಚಿತ್ರಿಸಿದ್ದರು. ಆಗಾಗ ನಾಟಕಗಳಿಗೆ, ನಾಟಕದ ಕಾರ್ಯಕ್ರಮಗಳಿಗೆ ಅವರನ್ನು ಅತಿಥಿಗಳನ್ನಾಗಿ ಆಮಂತ್ರಿಸುವ ಪದ್ಧತಿಯನ್ನೂ ಇಟ್ಟುಕೊಂಡಿದ್ದರು. ಕಂಪನಿ ನಿಂತ ಮೇಲೆ ರಘುವೀರ ಪೇಂಟರ ತೆಗೆದ ಈ ಭವ್ಯದೃಶ್ಯಾವಳಿಗಳ ಪಡದೆಯನ್ನು ಗರುಡರ ಕಂಪನಿಗೆ ಕೊಟ್ಟ ಬಗ್ಗೆ ದಿನಚರಿಯಲ್ಲಿ ಬರೆದಿರುವರು.

ಆಡಳಿತ

ಮುಂದುವರೆದ ಇವತ್ತಿನ ನಾಟಕ ಮಂಡಳಿಗಳು ಯೋಜಿಸದ, ಅಳವಡಿಸದ ಸುಸಜ್ಜಿತ, ಶಿಸತಿನ ಆಡಳಿತವನ್ನು ಕೊಣ್ಣೂರ ಕಂಪನಿ ಆಚರಣೆಗೆ ತಂದಿತ್ತು. ಇದಕ್ಕೆ ಶಿವಮೂರ್ತಿಸ್ವಾಮಿಗಳ ವ್ಯಕ್ತಿತ್ವವೇ ಕಾರಣವಾಗಿತ್ತು. ಆಂಗ್ಲ ಅಧಿಕಾರಿಗಳ ಕೈಯಲ್ಲಿ ಪಳಗಿದ್ದ ಅವರು ಕಂಪನಿಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ರೂಪಿಸಿದ್ದರು. ಅವುಗಳನ್ನು ಕೆಳಗಿನಂತೆ ಸಂಗ್ರಹಿಸಬಹುದು.

– ಸಮಯಕ್ಕೆ ಸರಿಯಾಗಿ ನಾಟಕಗಳ ಪ್ರದರ್ಶನ.

– ನಾಟಕವಿದ್ದ ದಿನ ಮಧ್ಯಾಹ್ನ ಮತ್ತು ನಾಟಕವಾಡಿದ ಮರುದಿನ ಮುಂಜಾನೆ ತಾಲೀಮ ಇರುತ್ತಿರಲಿಲ್ಲ. ನಾಟಕವಿಲ್ಲದ ದಿನ ಎರಡೂ ವೇಳೆ ತಪ್ಪದೆ ತಾಲೀಮು ನಡೆಯಬೇಕು.

– ಕಲಾವಿದರು ಭಕ್ತಿ, ಶ್ರದ್ಧೆಯಿಂದ ಪಾತ್ರಗಳನ್ನು ನಿರ್ವಹಿಸಬೇಕು.

– ನಟನು ತನ್ನ ಪಾತ್ರ ಅತ್ಯುತ್ತಮವಾಗಿ ನಿರ್ವಹಿಸಿದರೆ ಸಂಬಳದಲ್ಲಿ ಬಡ್ತಿ. ನಿರ್ಲಕ್ಷ್ಯ ತೋರಿದರೆ ಹಿಂಬಡ್ತಿ. ಈ ಕ್ರಮವನ್ನು ಪ್ರದರ್ಶನದ ತರುವಾಯ ಕೂಡಲೇ ಜಾರಿಗೆ ತರಲಾಗುತ್ತಿತ್ತು.

– ಅನಾರೋಗ್ಯ ಹಾಗೂ ಅನಿವಾರ್ಯ ಕಾರಣಗಳಿಂದ ನಟನು ಗೈರುಹಾಜರಿ ಇದ್ದರೆ ಆ ಪಾತ್ರವನ್ನು ಅಭಿನಯಿಸಬಲ್ಲ ಸ್ವೆಯರ್ ನಟರು ಇರಬೇಕು.

– ಕಂಪನಿಯ ಮುಖ್ಯ ಚಟುವಟಿಕೆಗಳನ್ನು ಜನರಲ್‌ ಮ್ಯಾನೇಜರ್ ನು ಮಾಲೀಕರ ಗಮನಕ್ಕೆ ತರುತ್ತಿರಬೇಕು. ಬೆಳಗಾವಿಯಿಂದ ದೂರದ ಊರುಗಳಲ್ಲಿ ಮುಕ್ಕಾಂ ಮಾಡಿದ್ದರೆ ನಾಟಕದ ಮರುದಿನ ಬೆಳಿಗ್ಗೆ ಅಂಚೆ ಅಥವಾ ತಂತಿಯ ಮೂಲಕ ಹಿಂದಿನ ದಿನದ ವಿವರಗಳನ್ನು ಕಳಿಸಬೇಕು.

– ಆಡಿದ ನಾಟಕ, ಉತ್ಪನ್ನ, ನಾಟಕದ ಪರಿಣಾಮ, ಉತ್ಪನ್ನ ಕಡಿಮೆ-ಹೆಚ್ಚಾದ ಬಗ್ಗೆ ವಿವರಣೆ, ಕಲಾವಿದರ ಪಾತ್ರವಿವರಣೆ, ಕಲಾವಿದರು ಊರಿಗೆ ಹೋದಲ್ಲಿ ಕಾರಣ-ಮರಳಿ ಬರುವ ದಿನ-ಅದಕ್ಕಾಗಿ ಮಾಡಿರುವ ಪರ್ಯಾಯ ವ್ಯವಸ್ಥೆ, ಕ್ಯಾಂಪ್‌ ಬದಲಿಸುವ ಬಗೆಗಿನ ವಿಚಾರಗಳು ಈ ವಿಷಯಗಳಿಗೆ ಸಂಬಂಧಿಸಿದ ವಿವರಗಳು ಸ್ವಾಮಿಗಳಿಗೆ ಗೊತ್ತಾಗಬೇಕು.

– ರೂಪಾಯಿಗೆ ೧೧ ೨/೧ ಸೇರು ಜೋಳ ಮತ್ತು ೮ ಸೇರು ಅಕ್ಕಿ ದೊರಕುತ್ತಿದ್ದ ಕಾಲವದು. ಅಡಿಗೆಯವನನ್ನು ಇಟ್ಟು ನಟ-ನೌಕರ ವರ್ಗಕ್ಕೆಲ್ಲ ಸಮೀಚಿನ ಭೋಜನದ ಏರ್ಪಾಡು ಇತ್ತು. ಹಬ್ಬ ಹುಣ್ಣಿಮೆಗಳಂದು ಹೋಳಿಗೆಯ ಊಟ ಸಾಮಾನ್ಯ. ಹೊಸ ನಾಟಕ ಆಡಿದರೆ, ಕಲೆಕ್ಯನ್‌ ಹೆಚ್ಚಾದರೆ ಹೋಳಿಗೆ ಊಟದ ವ್ಯವಸ್ಥೆಯಾಗುತ್ತಿತ್ತು.

– ಕಲಾವಿದರು ಮನೆ ತೊರೆದು ಕಂಪನಿಯ ಜೊತೆ ಇರುತ್ತಿದ್ದುದರಿಂದ ಅವರ ಮನೆಯ ಯೋಗಕ್ಷೇಮದ ಬಗ್ಗೆ ಮುತುವರ್ಜಿವಹಿಸುವುದು ಕಂಪನಿಯ ಹೊಣೆಯಾಗಿತ್ತು.

– ಬಿಟ್ಟು ಬಿಡದೆ ಕಂಪನಿ ಐದಾರು ತಿಂಗಳು ತಿರುಗಾಟದಲ್ಲಿದ್ದಾಗೆ ಕಲಾವಿದರಿಗೆ ವಿಶ್ರಾಂತಿ ಎಂದು ಹದಿನೈದು ಅಥವ ಒಂದು ತಿಂಗಳು ರಜೆ ಕೊಡಲಾಗುತ್ತಿತ್ತು.

– ತಾಲೀಮು, ಭೋಜನ, ರಂಗಸಜ್ಜಿಕೆ, ಹೀಗೆ ಒಂದೊಂದು ವಿಭಾಗಕ್ಕೂ ಒಬ್ಬೊಬ್ಬರು ಸಹಾಯಕ ಮ್ಯಾನೇಜರ್ರಿದ್ದರು. ಇವರೆಲ್ಲರ ಮೇಲೆ ಗುರುಸಿದ್ಧಯ್ಯಸ್ವಾಮಿ ಜನರಲ್‌ ಮ್ಯಾನೇಜರ್ ಸ್ಥಾನದಲ್ಲಿದ್ದರು. ಧಾರವಡದ ಎ.ಬಿ. ಮಂಡಗಿ, ಕೊಲ್ಲಾಪುರದ ಬಾಪಟ ಮ್ಯಾನೇಜರ್ ಗುರುಸಿದ್ಧಯ್ಯನವರಿಗೆ ಸಹಾಯಕರಾಗಿದ್ದರು.

 

[1] ಪ್ರಲ್ಹಾದ ಮುದ್ಗಲ್‌ – ಸಾಧನೆ ೬ : ೪, ಮರಾಠಿ ಶ್ರೀಕೃಷ್ಣ ಪಾರಿಜಾತ ಮತ್ತು ನಮ್ಮ ನಾಟ್ಯಪರಂಪರೆ ಪು. ೧೩೭ – ೩೮.

[2] ಪ್ರಲ್ಹಾದ ಮುದಗಲ್‌ – ಕನ್ನಡ ರಂಗಪರಂಪರೆ (೧೯೯೫) ಪು. ೮೫.

[3] ಶಾಂತಾಬಾಯಿ ಹಿರೇಮಠ – (ಶಿವಮೂರ್ತಿ ಸ್ವಾಮಿಗಳ ಹಿರಿಯ ಮಗ – ಶಿವಲಿಂಗಯ್ಯನವರ ಮಗಳು) ಅವರು ಹೇಳಿದ್ದು. ದಿನಾಂಕ, ೧೬.೬.೯೯ ಸ್ಥಳ, ಧಾರವಾಡ.

[4] ಸಿಂಧುವಳ್ಳಿ ಅನಂತಮೂರ್ತಿ – ಗುಬ್ಬಿ ಕಂಪನಿ (೧೯೭೯) ಪು. ೧೮೯

[5] ಶ್ರೀರಂಗ – ಸಾಹಿತಿಯ ಆತ್ಮಜಿಜ್ಞಾಸೆ (೧೯೭೩) ಪು. ೧೫೯