ಗೋಕಾಕ ಬೆಳಗಾವಿ ಜಿಲ್ಲೆಯಲ್ಲಿರುವ ತಾಲೂಕು ಸ್ಥಳ. ಇಲ್ಲಿಂದ ವಾಯವ್ಯಕ್ಕೆ ೭ ಕಿ.ಮೀ. ಅಂತರದಲ್ಲಿ ಗೋಕಾಕಫಾಲ್ಸ್‌ ಇದೆ. ಎತ್ತರದಿಂಧ ಧುಮುಕುವ ಜಲಪಾತದಿಂದ, ತೂಗುಸೇತುವೆಯಿಂದ ಈ ಊರು ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿದೆ. ಇಲ್ಲಿಯೇ ನೆಲೆಗೊಂಡ ಹತ್ತಿನೂಲಿನ ಗಿರಣಿ ಹೆಸರುವಾಸಿಯಾದುದು. ಇಲ್ಲಿಂದ ೨ ಕಿ.ಮೀ. ಅಂತರದಲ್ಲಿ ಮರಡಿಮಠವಿದೆ. ಇಲ್ಲಿಂದ ೩ ಕಿ.ಮೀ. ಅಂತರದಲ್ಲಿ ಕೊಣ್ಣೂರು ಗ್ರಾಮವಿದೆ. ಘಟಪ್ರಭಾ ನದಿಯ ಬಲದಂಡೆಯ ಮೇಲೆ ನೆಲೆಸಿದ ಕೊಣ್ಣೂರು ಧರ್ಮಸಮನ್ವಯಕ್ಕೆ ಹೆಸರಾದ ಊರು. ಪ್ರಾಚೀನ ಕಾಲದಲ್ಲಿ ಜೈನಮುನಿಗಳು, ಶೈವಶರಣರು, ಮುಸ್ಲಿಂಸಂತರು ಈ ನೆಲದಲ್ಲಿ ತಪಸ್ಸುಗೈದುವರ ಐತಿಹ್ಯಗಳಿವೆ. ಶ್ರೀ ಕಾಡಸಿದ್ಧೇಶ್ವರ ಮಠವು ಗೋಕಾವಿ ನಾಡಿನಲ್ಲಿಯೇ ಪುಣ್ಯಕ್ಷೇತ್ರವೆನಿಸಿದೆ. ಧರ್ಮದಂತೆ ಕಲೆ ಸಾಹಿತ್ಯ ಸಂಸ್ಕೃತಿಗಳ ಶ್ರೀಮಂತ ಪರಂಪರೆಯುಳ್ಳ ಇಲ್ಲಿಯ ಪರಿಸರದಲ್ಲಿಯೇ ಕರ್ನಾಟಕ ರಂಗಭೂಮಿಯ ಚರಿತ್ರಾರ್ಹ ನಾಟಕ ಕಂಪನಿಯೊಂದು ಈ ಶತಮಾನದ ಆರಂಭದಲ್ಲಿ (೧೮೯೯) ತಲೆಯೆತ್ತಿತು. ಕಂಪನಿ ನಾಟಕಗಳ ಆರಂಭದ ಘಟ್ಟದಲ್ಲಿಯೇ ಹುಟ್ಟಿಬಂದ ಈ ಕಂಪನಿಯು ಮೈಗೂಡಿಸಿಕೊಂಡಿದ್ದ ಆಧುನಿಕತೆ ಎಂಥವರಿಗೂ ಅಚ್ಚರಿ ಹುಟ್ಟಿಸುವಂತಹದು. ಈ ಕಂಪನಿಯಲ್ಲಿದ್ದ ಕಲಾವಿದರು, ಕಂಪನಿಯು ಪ್ರದರ್ಶಿಸಿದ ನಾಟಕಗಳು, ಅಳವಡಿಸಿದ ರಂಗಪರಿಕರಗಳು, ಜಾರಿಗೆ ತಂದ ಆಡಳಿತ, ಪ್ರೇಕ್ಷಕರ ಮೇಲೆ ಮಾಡಿದ ಪ್ರಭಾವ – ಈ ಎಲ್ಲ ನೆಲೆಗಳಲ್ಲಿಯೂ ಕೊಣ್ಣೂರ ನಾಟಕ ಕಂಪನಿಯ ಸಾಧನೆಯು ಐತಿಹಾಸಿಕವಾದುದು.

ಸ್ತ್ರೀಪಾತ್ರದ ಅಭಿನಯಕ್ಕೆ ಸ್ತ್ರೀಯರಿದ್ದರೇ ಚೆಂದ ಎಂದು ನಾಟಕದ ಸ್ಟೇಜಿನ ಮೇಲೆ ಕಲಾವಿದೆಯರಿಗೇ ಪ್ರವೇಶ ನೀಡಿದ ಮೊದಲ ಕಂಪನಿ ಇದು. ಹೀಗಾಗಿ ಈ ಕಂಪನಿಯನ್ನು ಪ್ರವೇಶಿಸಿದ ನಟಿಯೇ ವೃತ್ತಿರಂಗಭೂಮಿಯ ಮೊದಲ ನಟಿ ಎನಿಸಿದ್ದಾಳೆ. ಹಾಗೆಯೇ ಡೈನಾಮೋ ವಿದ್ಯುತ್ತನ್ನು ಉಪಯೋಗಿಸಿದ, ಟ್ರಾನ್ಸಫರ್ ಸೀನರಿಗಳನ್ನು ಅಳವಡಿಸಿದ ಮೊದಲ ಕಂಪನಿಯೂ ಇದೇ. ಇಂಥ ಹಲವು ಹೆಗ್ಗಳಿಕೆಗಳಿಂದ ಹೆಸರುವಾಸಿಯಾದ ಕಂಪನಿಯನ್ನು ಕಟ್ಟಿದವರು, ಆ ಮೂಲಕ ಕನ್ನಡ ವೃತ್ತಿರಂಗಭೂಮಿಯು ಪರಂಪರೆಗೆ ಹೊಸ ದಿಕ್ಕು-ಧೋರಣೆಯನ್ನು ತೋರಿಸಿದವರೆಂದರೆ ರಾವಸಾಹೇಬ ಶಿವಮೂರ್ತಿಸ್ವಾಮಿ ಕಣಬರಗಿಮಠರು.

ದೊಡ್ಡಾಟದಿಂದ ಪ್ರೊಸೀನಿಯಂ ಥೇಟರಿಗೆ

ಶಿವಮೂರ್ತಿಸ್ವಾಮಿಗಳು ಬೆಳಗಾವಿ ಸಮೀಪದ ಕಣಬರಗಿಯಲ್ಲಿ ಹುಟ್ಟಿದ್ದರೂ ಅವರು ಇಂಗ್ಲೀಷ ಶಿಕ್ಷಣ ಪಡೆದದ್ದು, ವೃತ್ತಿಜೀವನ ಆರಂಭಿಸಿದ್ದು ಗೋಕಾಕಫಾಲ್ಸ್‌ದಲ್ಲಿರುವ ಗೋಕಾಕ ಮಿಲ್ಲಿನಲ್ಲಿ. ಅಂದಿನ ದಿನಗಳಲ್ಲಿ ಗೋಕಾಕ ಮಿಲ್ಲು ಸಣ್ಣದೊಂದು ವಸಾಹತು ಕೇಂದ್ರದಂತಿತ್ತು. ಅದಕ್ಕೆ ಕಾರಣ ಮಿಲ್ಲಿನ ಆಡಳಿತವನ್ನು ನೋಡಿಕೊಳ್ಳಲು ಬಂದಿದ್ದ ಇಂಗ್ಲೀಷ ಅಧಿಕಾರಿವರ್ಗದ ಪರಿವಾರ ಅಲ್ಲಿ ನೆಲೆಸಿತ್ತು. ಈ ಪುಟ್ಟ ವಸಾಹತು ಕೇಂದ್ರದಲ್ಲಿಯೇ ಶಿವಮೂರ್ತಯ್ಯನ ವ್ಯಕ್ತಿತ್ವ ರೂಪಗೊಂಡಿತು. ಫಾಲ್ಸ ನೋಡಲೆಂದು ಹೋಗಿ, ಅಧಿಕಾರಿಗಳ ಪ್ರೀತಿಗೆ ಪಾತ್ರರಾಗಿ, ಅವರಿಂದ ಶಿಕ್ಷಣ ಸಂಸ್ಕಾರ ಪಡೆದು, ಅವರಲ್ಲಿಯೇ ನೌಕರಿ ಹಿಡಿದ ಶಿವಮೂರ್ತಿಸ್ವಾಮಿಗಳ ಜೀವನ ಚರಿತ್ರೆ ಕುತೂಹಲಕಾರಿಯಾಗಿದೆ. ವೃತ್ತಿಯಲ್ಲಿ ಪರಿಶ್ರಮ, ಪ್ರಾಮಾಣಿಕತೆ, ದಕ್ಷತೆಗೆ ಹೆಸರಾಗಿದ್ದ ಅವರು ಬಿಡುವಿನ ಸಮಯದಲ್ಲಿ ಮನರಂಜನೆಗಾಗಿ ಸಂಗೀತ – ಬಯಲಾಟಗಳೆಂದು ಕೊಣ್ಣೂರು, ಮರಡಿಮಠ ಮುಂತಾದ ಊರುಗಳನ್ನು ಸುತ್ತುತ್ತಿದ್ದರು. ಹಾಡು ಕೇಳುವುದು, ಬಯಲಾಟ ನೋಡುವುದು ಬಾಲ್ಯದಿಂದಲೇ ಅಂಟಿಕೊಂಡು ಬಂದ ಹವ್ಯಾಸಗಳಾಗಿದ್ದವು. ಅವರ ಹವ್ಯಾಸಕ್ಕೆ ನೀರೆರೆದು ಪೋಷಿಸುವ ಶಕ್ತಿ ಆ ಗೋಕಾವಿ ಪರಿಸರದಲ್ಲಿ ಸಮೃದ್ಧವಾಗಿತ್ತು. ದೊಡ್ಡಾಟ ಶ್ರೀಕೃಷ್ಣಪಾರಿಜಾತ ಆಟಗಳು ಆ ನೆಲದಲ್ಲಿ ಮೇಲಿಂದ ಮೇಲೆ ಪ್ರಯೋಗಗೊಳ್ಳುತ್ತಿದ್ದವು. ಮರಡಿಮಠದ ಜಾತ್ರೆ ಬಂದರೆ ಬಯಲಾಟಗಳ ಉತ್ಸವವೇ ಏರ್ಪಡುತ್ತಿತ್ತು. ಅಂಥ ವಿಶೇಷ ಸಂದರ್ಭಗಳಲ್ಲಿ ಸ್ವಾಮಿಗಳು ಇಂಗ್ಲೀಷ ಅಧಿಕಾರಿಗಳ ಪರಿವಾರದೊಂದಿಗೆ ಬಯಲಾಟಗಳನ್ನು ನೋಡಲು ಹೋಗುತ್ತಿದ್ದರು. ಈ ಮಾತಿಗೆ ಸ್ವಾಮಿಗಳು ಬರೆದಿಟ್ಟ ದಿನಚರಿ ಟಿಪ್ಪಣೆಯಲ್ಲಿ ಆಧಾರವಿದೆ.

೧೮೯೫ ಸೆಪ್ಟೆಂಬರ್‌ ೨೮ರ ದಿನಚರಿಪುಟದಲ್ಲಿ ಬರೆದಿಟ್ಟ ಬರವಣಿಗೆಯ ಸಾರ ಹೀಗಿದೆ: ಅಂದು ಮರಡಿಮಠ ಜಾತ್ರೆಯಲ್ಲಿ ‘ಇಂದ್ರಜಿತವಧೆ’ ಬಯಲಾಟವಿತ್ತು. ಅದನ್ನು ನೋಡಲು ಸ್ವಾಮಿಗಳು ಮಿಲ್ಲಿನ ಅಧಿಕಾರಿಗಳನ್ನು ಕರೆದುಕೊಂಡು ಹೋಗಿದ್ದರು. (ಮೇಲಾಧಿಕಾರಿಯ ಪತ್ನಿ ಶ್ರೀಮತಿ ಕೇರ್ ಅವರು ಹಾಜರಿದ್ದರು). ಇಂದ್ರಜಿತ ಪಾತ್ರಧಾರಿ ಚೆನ್ನಾಗಿ ಅಭಿನಯಿಸಲಿಲ್ಲ. ಅದರ ಬಗೆಗೆ ಸ್ವಾಮಿಗಳು – ಅಧಿಕಾರಿಗಳಲು ಪರಸ್ಪರ ಚರ್ಚಿಸಿದರು.

– ಈ ವಿವರದಿಂದ ಗೊತ್ತಾಗುವುದೇನೆಂದರೆ, ಸ್ವಾಮಿಗಳು ಇಂಗ್ಲೀಷ ಅಧಿಕಾರಿಗಳ ಜೊತೆಗೂಡಿ ಬಯಲಾಟಗಳನ್ನು ನೋಡುತ್ತಿದ್ದರು. ಬಯಲಾಟದ ಕಥೆ-ಪಾತ್ರ-ಅಭಿನಯಗಳ ಬಗೆಗೆ, ಅವುಗಳ ಉಚಿತ-ಅನುಚಿತಗಳ ಬಗೆಗೆ ಚರ್ಚಿಸುತ್ತಿದ್ದರೆಂಬುದು. ಇದರಿಂದ ಸ್ವಾಮಿಗಳಿಗಾದ ಲಾಭವೆಂದರೆ ರಂಗಕಲೆಯ ಬಗೆಗಿನ ಇಂಗ್ಲೀಷರ ದೃಷ್ಟಿಕೋನದ ಪರಿಚಯವಾಯಿತು. ಹಾಗೂ ನಮ್ಮ ಕಲೆಗಳಲ್ಲಿ ಎದ್ದು ಕಾಣುವ ದೌರ್ಬಲ್ಯಗಳೇನು? ಅವುಗಳನ್ನು ಹೇಗೆ ಸುಧಾರಿಸಿಕೊಳ್ಳಬೇಕೆಂಬುದರ ಕಡೆಗೆ ಅವರ ದೃಷ್ಟಿ ಹರಿಯಿತು.

ಮರಡಿಮಠ ಜಾತ್ರೆಯಲ್ಲಿ ನೋಡಿದ್ದ ‘ಇಂದ್ರಜಿತವಧೆ’ ಬಯಲಾಟವನ್ನೇ ಚೆನ್ನಾಗಿ ಪ್ರದರ್ಶಿಸಬೇಕೆನ್ನುವ, ಮೇಲಾಧಿಕಾರಿಗಳೂ ಮೆಚ್ಚುವ ಹಾಗೆ ಆ ಆಟವನ್ನು ಪರಿಷ್ಕರಿಸಿ ಆಡಬೇಕೆನ್ನುವ ಛಲ ಸ್ವಾಮಿಗಳಲ್ಲಿ ಬೆಳೆಯಿತು. ಅದರ ಫಲವಾಗಿ ಒಲವಿದ್ದ ಮಿಲ್ಲಿನ ಕಾರ್ಮಿಕರನ್ನು ಕೂಡಿಸಿಕೊಂಡು ‘ಇಂದ್ರಜಿತವಧೆ’ ಬಯಲಾಟವನ್ನಾಡುವ ಪ್ರಯತ್ನಕ್ಕಿಳಿದರು. ಅಂದು ಕೈಗೊಂಡ ಈ ಕ್ರಮವು ಮುಂದೆ ಅವರು ರಂಗಭೂಮಿಗೇ ಒಲಿದು ನಿಲ್ಲಲು ಮುಖ್ಯ ಕಾರಣವಾಯಿತೆನ್ನಬೇಕು.

‘ಇಂದ್ರಜಿತವಧೆ’ ಬಯಲಾಟದ ಕಥೆಗಾರ ವಂಟಮುರಿಯ ಚನ್ನಮಲ್ಲಪ್ಪ ಬಸಪ್ಪ ಬಸಾಪುರಿ ಬಯಲಾಟ ಕಲಿಸಲು ಬಂದರು. ಸ್ವಾಮಿಗಳು ಇಂದ್ರಜಿತನ ಪಾತ್ರವಹಿಸಿಕೊಂಡರು. ಉಳಿದ ಪಾತ್ರಗಳನ್ನು ಆಸಕ್ತಿಯುಳ್ಳ ಮಿಲ್ಲಿನ ಕೆಲಸಗಾರರಿಗೆ ಹಂಚಿದರು. ವಿಜಯದಶಮಿಯ ಶುಭದಿನದಂದು ಕೊಣ್ಣೂರಿನಲ್ಲಿಯೇ ತಾಲೀಮು ಪ್ರಾರಂಭವಾಯಿತು. ಮಿಲ್ಲಿನ ಕೆಲಸಕ್ಕೆ ವ್ಯತ್ಯಯವಾಗದಂತೆ ತಾಲೀಮಿನ ವೇಳೆಯನ್ನು ಗೊತ್ತುಮಾಡಿದ್ದರು. ಚೆನ್ನಮಲ್ಲಪ್ಪನ ಮಾರ್ಗದರ್ಶನ, ಸ್ವಾಮಿಗಳ ನಿರ್ದೇಶನದಲ್ಲಿ ಕಲಾವಿದರು ಶಿಸ್ತಿನಿಂದ, ಶ್ರದ್ಧೆಯಿಂದ ತಮ್ಮ ಪಾತ್ರಗಳನ್ನು ಮೈಗೂಡಿಸಿಕೊಂಡರು. ಪ್ರದರ್ಶನದ ದಿನವೂ ನಿಶ್ಚಯವಾಯಿತು.

೧೮೯೫, ಡಿಸೆಂಬರ ೭ ರಂದು (ದಿನಚರಿ ಆಧಾರ) ರಂಗಪರಿಕರ, ಸಕಲ ಸರಂಜಾಮಿನೊಂದಿಗೆ ಸ್ವಾಮಿಗಳು ಕೊಣ್ಣೂರಿಗೆ ಹೋಗಿ ಕುಲಕರ್ಣಿಯವರ ಮನೆಯ ಹತ್ತಿರ ಆಟದ ಅಟ್ಟವನ್ನು ಸಿದ್ಧಗೊಳಿಸಿದರು. ಮುಂಚೆಯೇ ಮಾಡಿದ ಪ್ರಚಾರದಂತೆ ಶಿವಮೂರ್ತಿಸ್ವಾಮಿಗಳು ಪಾತ್ರವಹಿಸಲಿರುವ ಸುದ್ದಿಕೇಳಿ ಜನರು ತಂಡ ತಂಡವಾಗಿ ಬಯಲಾಟ ನೋಡಲು ಬಂದರು. ಅಟ್ಟದ ಅಲಂಕರಣ, ಪಾತ್ರಗಳ ವೇಷಭೂಷಣ ನೋಡಿ ಅವರೆಲ್ಲ ಸಂತೋಷಪಟ್ಟರು. ‘ಖುದ್ದಾಗಿ ಸ್ವಾಮಿಗಳೇ ಇಂದ್ರಜಿತನಾಗಿ ಅಭಿನಯಿಸಿದ್ದರು. ಹದಿಹರೆಯದ ವಯ, ಆಕರ್ಷಕ ತುಂಬುಮುಖ, ತಕ್ಕಂತೆ ವೇಷಭೂಷಣಗಳು, ಅತ್ಯುತ್ತಮ ಮೇಕಪ್ಪು, ಅಭಿನಯ, ಸಂಗೀತಗಳಿಂದ ಕೂಡಿದ ಅಂದಿನ ಸ್ವಾಮಿಗಳ ನಟನೆಗೆ ಒಳ್ಳೆಯ ಮೆರಗು ಬಂದಿತ್ತು. ಅಂದು ಬೆಳ್ಳಂಬೆಳಗೂ ಸ್ವಾಮಿಗಳ ಅಭಿನಯದ ಪ್ರಶಂಸೆಯ ಮಾತುಗಳೇ ಮಾತುಗಳು. ಪ್ರಯೋಗಕ್ಕೆ ಆಗಮಿಸಿದ ಗಣ್ಯ-ವ್ಯಕ್ತಿಗಳಲ್ಲಿ ಶ್ರೀ ಕಾಡಸಿದ್ಧೇಶ್ವರ ಮಠದ ಶ್ರೀಗಳು, ಗೋಕಾಕ ಮಿಲ್ಲಿನ ಮ್ಯಾನೇಜರರು, ಇನ್ನಿತರ ಆಂಗ್ಲ ಅಧಿಕಾರಿಗಳು, ಅವರ ಮನೆಯವರು ಅಂದಣ ಇವರ ಪಾತ್ರಾಭಿನಯವನ್ನು ಮುಕ್ತ ಕಂಠದಿಂದ ಹೊಗಳಿ ಅನೇಕ ತರಹದ ಬಹುಮಾನ ಹಾಗೂ ಮುಯ್ಯಗಳನ್ನು(ಬಹುಮಾನ) ಮಾಡಿದರೆಂದು’.[1] ಕೊಣ್ಣೂರ ಕಂಪನಿಯಲ್ಲಿ ನಟರಾಗಿದ್ದ ತುಕಾರಾಮಬುವಾ ಗೋಕಾಕ ಅವರು ಹೇಳಿದ್ದನ್ನು ಬಾಬುರಾವ ದೇಸಾಯಿ ಉಲ್ಲೇಖಿಸಿದ್ದಾರೆ. People were very much pleased with my dress and speech ಎಂದು ತಮ್ಮ ಪಾತ್ರಕ್ಕೆ ಜನರಿಂಓದ ದೊರೆತ ಪ್ರೋತ್ಸಾಹದ ಪ್ರತಿಕ್ರಿಯೆಯನ್ನು ಶಿವಮೂರ್ತಿಸ್ವಾಮಿಗಳು ದಿನಚರಿಯಲ್ಲಿ ಹೆಮ್ಮೆಯಿಂದ ಬರೆದಿದ್ದಾರೆ.

ಹಾಡು, ಮಾತು ಕುಣಿತಗಳ ಹಿತಮಿತ ಪ್ರದರ್ಶನದಿಂದ ‘ಇಂದ್ರಜಿತವಧೆ’ ಪ್ರಯೋಗ ಯಶಸ್ವಿಯಾಯಿತು. ಸ್ವಾಮಿಗಳ ನೇತೃತ್ವದ ದೊಡ್ಡಾಟದ ತಂಡಕ್ಕೆ ಬೇರೆ ಬೇರೆ ಊರುಗಳಿಂದ ಆಮಂತ್ರಣಗಳೂ ಬಂದವು. ಮರಡಿಮಠ, ಗೋಕಾಕಪಾಲ್ಸ್‌, ಗೋಕಾಕ, ಸಿಂದಿಕುರುಬೆಟ್ಟ ಮುಂತಾದ ಊರುಗಳಲ್ಲಿ ‘ಇಂದ್ರಜಿತವಧೆ’ ಮತ್ತೆ ಮತ್ತೆ ಪ್ರದರ್ಶನಗೊಳ್ಳುವಂತಾಯಿತು.

ಇದಾದ ಮೇಲೆ ‘ಪಾಂಡುಪ್ರತಾಪ’ ಆಟವನ್ನಾಡಿದ ವಿವರಗಳು ೩೦-೩-೧೮೯೬ರ ದಿನಚರಿಯಲ್ಲಿವೆ. ಮರಡಿಮಠ ಜಾತ್ರೆಯ ನಿಮಿತ್ತ ಪ್ರಯೋಗವಾದ ಈ ಬಯಲಾಟದಲ್ಲಿ ಶಿವಮೂರ್ತಿಸ್ವಾಮಿಗಳು ಕರ್ಣ-ಕೃಷ್ಣ-ಸಂಶಪ್ತಕನ ಪಾತ್ರಗಳನ್ನು ಅತ್ಯುತ್ತಮವಾಗಿ ಅಭಿನಯಿಸಿ ಇಂಗ್ಲೀಷ ಅಧಿಕಾರಿ ಕೇರ್ ಸಾಹೇಬರಿಂದ ಬಹುಮಾನ ಪಡೆದರು. ಅಂದಿನ ಆಟದಲ್ಲಿ ಪಾತ್ರ ಮಾಡಿದ, ವಾದ್ಯಗಳನ್ನು ನುಡಿಸಿದ ಕಲಾವಿದರ ಹೆಸರುಗಳು ಇಂತಿವೆ.

ಚೆನ್ನಬಸಯ್ಯ – ಗಣಪತಿ, ವಿರುಪಾಕ್ಷಿ-ಸರಸ್ವತಿ ಸೌಭದ್ರಾ, ಸಲಬಣ್ಣ- ಧರ್ಮರಾಜ, ಗುರುಪಾದ-ಭೀಮಸೇನ, ಶಿವಲಿಂಗ – ಅರ್ಜುನ, ನರಸಪ್ಪ – ದುರ್ಯೋಧನ, ಶಿದಬಸಪ್ಪ – ಲಕ್ಷಣಕುಮಾರ, ಶಿವಮೂರ್ತಿ-ಕರ್ಣ, ಕೃಷ್ಣ, ಸಂಶಪ್ತಕ, ಸಂಗಪ್ಪ ನೂರಾನ- ದ್ರೋಣಾಚಾರ್ಯ, ಸಂಗಪ್ಪ ಇಟಗಿ – ಅಭಿಮನ್ಯು, ಯಾತಲಿಂಗ – ವಿದೂಷಕ ಮತ್ತು ಜಯದ್ರಥ, ಕಲ್ಲಯ್ಯ – ದೂತಿ, ದುಶ್ಯಾಸನ ಮತ್ತು ಉತ್ತರಾ, ಅಪ್ಪಾಜಿ ಶಾಲಾಮಾಸ್ತರ-ಸೂತ್ರಧಾರ, ಚನ್ನಮಲ್ಲಪ್ಪ – ನಾಟಕದ ಮಾಸ್ತರ ವಾದ್ಯ ನುಡಿಸಿದವರು : ಗಂಗಾಧರ ಮೃದಂಗ, ಬಾಲು ವಂಟಮುರಿ-ಪಿಟೀಲು ಊರಪ್ಪ ಬಸಾಪುರ – ಪಿಟೀಲು, ಶಿವಲಿಂಗಯ್ಯ, ಗುರುಪಾದಯ್ಯ, ಗೋವಿಂದ, ಮಲಕಣ್ಣ, ಸಿದ್ದು ಬೀರಗಡ್ಡಿ, ಹುಣಶ್ಯಾಳಿ- ಇವರೆಲ್ಲ ಪಿಟೀಲು ನುಡಿಸಿದವರು. ಪಡದೆಗಳನ್ನು ಬರೆದುಕೊಟ್ಟವರು ಬಸಣ್ಣ, ನಾನಾ ಕುರಬೆಟ್ಟ, ನಾನಾ ಸಂಬರಗಿ.

೨೩-೧೦-೧೮೯೮ ರಂದು ‘ಬಬ್ರುವಾಹನ’ ಪ್ರಯೋಗವಾಯಿತು ಅದರಲ್ಲಿ ಸ್ವಾಮಿಗಳದು ಅರ್ಜುನನ ಪಾತ್ರ. ಇದರ ಜೊತೆಗೆ ಇಪ್ಪತ್ತೆರಡು ಪಾತ್ರಗಳು, ಅಭಿನಯಿಸಿದ ಕಲಾವಿದರ ಹೆಸರುಗಳು ಅಂದಿನ ದಿನಚರಿಯಲ್ಲಿವೆ.

ಗೋಕಾವಿ ಪರಿಸರದಲ್ಲಿ ಇಂಗ್ಲೀಷ ಅಧಿಕಾರಿಗಳೂ ಮೆಚ್ಚುವಂತೆ ಅಂದು ಶಿವಮೂರ್ತಿಸ್ವಾಮಿಗಳು ಮಾಡಿದ ಪರಿಷ್ಕೃತ ದೊಡ್ಡಾಟವಾಗಲಿ; ಅದಕ್ಕಿಂತ ಪೂರ್ವದಲ್ಲಿ ಗದುಗಿನ ಪರಿಸರದಲ್ಲಿ ಮರಾಠಿ ನಾಟಕಗಳ ಅಬ್ಬರಕ್ಕೆ ಪ್ರತಿಕ್ರಿಯೆಯಾಗಿ ಶಾಂತಕವಿಗಳು ಬಯಲಾಟಗಳನ್ನೇ ಪರಿಷ್ಕರಿಸಿ ನಾಟಕ ಮಾಡಿದ್ದಾಗಲಿ ಅಂದಿನ ಸಾಂಸ್ಕೃತಿಕ ಸಂದರ್ಭದ ಮಹತ್ವದ ಘಟನೆಗಳಾಗಿವೆ. ಮೈಸೂರ ಪ್ರದೇಶಕ್ಕೂ ಈ ಮಾತು ಅನ್ವಯಿಸುತ್ತದೆ[2] ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಪಶ್ಚಿಮದ ರಂಗರೂಪಗಳು ನಮ್ಮ ನೆಲದ ರಂಗರೂಪಗಳಿಗೆ ಮುಖಾ-ಮುಖಿಯಾದಾಗ ಉಂಟಾದ ಬಿಕ್ಕಟ್ಟು-ಆತಂಕಗಳಿಗೆ ನಮ್ಮ ನಾಡಿನ ಸಂವೇದನಾಶೀಲ ಜನ ಹೇಗೆ ತಮ್ಮ ತಮ್ಮ ಮಿತಿಗಳಲ್ಲಿ ಪ್ರತಿಕ್ರಿಯಿಸಿದರೆಂಬುದು ಮತ್ತು ಅಂಥ ಪ್ರತಿಕ್ರಿಯೆಗಳ ಮೂಲಕವೇ ನಮ್ಮ ರಂಗಭೂಮಿಯು ಹೇಗೆ ಆಧುನಿಕತೆಯ ವೇಷಧರಿಸುತ್ತ ಬೇರೊಂದು ಕವಲಾಗಿ ಬೆಳೆಯಿತೆಂಬುದನ್ನು, ನಾವು ಆಧುನಿಕ ರಂಗಭೂಮಿಯ ಚರಿತ್ರೆಯ ಸಂದರ್ಭದಲ್ಲಿ ಗಮನಿಸದೆ ಹೋಗುವಂತಿಲ್ಲ.

ಆರಂಭದಲ್ಲಿ ನಮ್ಮ ರಂಗಭೂಮಿಯ ಆಧುನಿಕತೆ ಏನಿದ್ದರೂ ಪ್ರೊಸೀನಿಯಂ ಥೇಟರನ್ನು ಅನುಕರಿಸುವುದೇ ಆಗಿತ್ತು. ಅಂಥ ಥೇಟರಿನಲ್ಲಿ ನಡೆಯುವ ಕಥೆ, ಹಾಡು, ಮಾತುಗಳಲ್ಲಿ ಬಯಲಾಟಗಳ ದ್ರವ್ಯವೇ ತುಂಬಿತ್ತು. ಶ್ರೀರಂಗರು ಬರೆದಂತೆ ‘ಪಾಶ್ಚಾತ್ಯ ಪ್ರಭಾವವು ಹೆಚ್ಚಾಗಿ ರಂಗಭೂಮಿಯ ಬಾಹ್ಯ ಸ್ವರೂಪಕ್ಕೆಯೇ ಸಂಬಂಧಿಸಿದ್ದಿತು. ಪರಂಪರೆಯ ಜೀವಾಳ ಆಧುನಿಕ ರಂಗಭೂಮಿಯಲ್ಲಿ ಅವಿಚ್ಛಿನ್ನವಾಗಿ ನಡೆದುದು ಕಂಡು ಬರುತ್ತಿದ್ದಿತು’.[3] ಎಂಬ ಮಾತು ಉಲ್ಲೇಖನೀಯ. ಅಂದು ಬಯಲಾಟಮಯವಾಗಿದ್ದ ನಾಟಕದ ಅಂತರಂಗವು ಕಾಲಕ್ರಮದಲ್ಲಿ ನಾಟಕಮಯವಾಗಿ ಪರಿಣಮಿಸಿತು. ಈ ರೂಪಾಂತರದ ಹಂತದಲ್ಲಿ ಆದ ಮುಖ್ಯ ಬದಲಾವಣೆಗಳೆಂದರೆ ಕುಣಿವನ್ನು ಕೈಬಿಟ್ಟಿದ್ದು, ಸಂಗೀತವನ್ನು ಮಿತಗೊಳಿಸಿದ್ದು, ಸಾರಥಿ ಅಥವಾ ಭಾಗವತ ತೆರೆಯ ಹಿಂದಕ್ಕೆ ಸರಿದದ್ದು, ವೇಷ-ಭೂಷಣಗಳಲ್ಲಿಯೂ ತಕ್ಕ ಮಾರ್ಪಾಡುಗಳು ಕಾಣಿಸಿಕೊಂಡವು. ಸಾರಥಿ ಹಿಂದೆ ಸರಿದ ಪರಿಣಾಮವಾಗಿ ನಾಟಕದಲ್ಲಿ ಸ್ವಗತ ಮಾತುಗಳು ಕಾಣಿಸಿಕೊಂಡವು.[4] ಶಾಂತಕವಿಗಳ ನಾಟಕಗಳಲ್ಲಿ, ಕೊಣ್ಣೂರ ಕಂಪನಿಯ ನಾಟಕಗಳಲ್ಲಿ ಇಂಥ ಪ್ರಕ್ರಿಯೆ ಮತ್ತು ಬಯಲಾಟದ ದಟ್ಟ ಪ್ರಭಾವವಿರುವುದನ್ನು ನೋಡಬಹುದು.

ಶಿವಮೂರ್ತಿಸ್ವಾಮಿಯವರ ಕಾರ್ಯದಕ್ಷತೆ, ಸಾಹಸಪ್ರವೃತ್ತಿಯಿಂದ ಮಿಲ್ಲಿನ ಕೆಲಸದಲ್ಲಿ ಉನ್ನತ ಹುದ್ದೆಗೇರಿದರು. ಅವರ ಕಾರ್ಯಕ್ಷೇತ್ರವೂ ವಿಸ್ತಾರವಾಯಿತು. ಕೆಲಸದ ನಿಮಿತ್ತ ಧಾರವಾಡ-ಹುಬ್ಬಳ್ಳಿ, ದಾವಣಗೆರೆ, ಮುಂಬಯಿ ನಗರಗಳಿಗೆ ಹೊರಟರು. ಮುಂಬಯಿಗೆ ಹೋದಾಗ ಅವಕಾಶ ಸಿಕ್ಕರೆ ಗ್ಯ್ರಾಂಟ್‌ ಥೇಟರಿಗೆ ಭೆಟ್ಟಿಕೊಟ್ಟು ಪಾರಸಿ ನಾಟಕಗಳನ್ನು, ಮರಾಠಿ ನಾಟಕಗಳನ್ನು ನೋಡುತ್ತಿದ್ದರು. ಪಾರಸಿ ಕಂಪನಿಯಲ್ಲಿಯ ಅದ್ಭುತ ದೃಶ್ಯಾವಳಿ, ರಂಗಪರಿಕರಗಳು, ವೇಷ-ಭೂಷಣಗಳು ಅವರನ್ನಾಕರ್ಷಿಸಿದ್ದವು. ನಾಟಕ ಮುಗಿದರೂ ನಾಟಕದ ಗುಂಗಿನಿಂದ ಅವರು ಹೊರಬರುತ್ತಿರಲಿಲ್ಲ. ಅಲ್ಲಿದ್ದ ಮಾಲಿಕರನ್ನು ನಟರನ್ನು ಪರಿಚಯಿಸಿಕೊಂಡು ರಂಗತಂತ್ರದ ಬಗೆಗೆ ಕೇಳಿ ತಿಳಿಯುತ್ತಿದ್ದರು. ಅವರ ಇಂಥ ಚಟುವಟಿಕೆಗಳ ಹಿಂದೆ ತಾವೂ ಒಂದು ಕಂಪನಿ ಕಟ್ಟುವ ಬಯಕೆ ಸುಪ್ತವಾಗಿ ಮಿಡಿಯುತ್ತಿತ್ತು.

ಸಂಘಟನೆ

ಕಂಪನಿಯ ಜನ್ಮಸ್ಥಳ ಕೊಣ್ಣೂರು. ಶಿವಮೂರ್ತಿಸ್ವಾಮಿಗಳಿದ್ದ ಗೋಕಾಕ ಫಾಲ್ಸದಿಂದ ಅತಿ ಹತ್ತಿರವಿರುವ ಊರಿದು. ಆಟ-ನಾಟಕಗಳ ಖಯಾಲಿಯುಳ್ಳ ರಸಿಕ ಜನರ ಪ್ರೋತ್ಸಾಹ, ಮಠದ ಸ್ವಾಮಿಗಳ ಸಹಕಾರ ಹಾಗೂ ಊರಿನ ಮುಖಂಡ ಗುರುಸಿದ್ಧಯ್ಯನ ದಟ್ಟ ವಹಿವಾಟು – ಈ ಅನುಕೂಲಗಳಿಂದಾಗಿಯೇ ಶಿವಮೂರ್ತಿ ಸ್ವಾಮಿಗಳು ನಾಟಕ ಕಂಪನಿಯನ್ನು ಹುಟ್ಟುಹಾಕಲು ಕೊಣ್ಣೂರನ್ನೇ ಆಯ್ದುಕೊಂಡಿರಬೇಕು. ಕಂಪನಿ ರೂಪುಗೊಳ್ಳುವ ಹಂತದಲ್ಲಿ ನಟರ ಸಂಘಟನೆ, ಪಡದೆಗಳ ನಿರ್ಮಾಣ, ತಾಲೀಮಿನ ವ್ಯವಸ್ಥೆ ಮುಂತಾದ ಚಟುವಟಿಕೆಗಳು ಶಿವಮೂರ್ತಿಸ್ವಾಮಿಗಳ ಯೋಜನೆಯಂತೆ ಕೊಣ್ಣೂರಿನಲ್ಲಿಯೇ ಆರಂಭವಾದವು. ಅವುಗಳ ಉಸ್ತುವಾರಿಯನ್ನೆಲ್ಲ ಗುರುಶಿದ್ಧಯ್ಯ ಸಾವಗಾಂವಿಮಠರು ನೋಡಿಕೊಳ್ಳುತ್ತಿದ್ದರು. ಕಂಪನಿ ಸುಸಜ್ಜಿತಗೊಂಡು ತಿರುಗಾಟಕ್ಕೆ ತೊಡಗಿದಾಗ ಇವರೇ ಮ್ಯಾನೇಜರರಾಗಿ ಮುಂದುವರಿದರು.

ಕಂಪನಿ ಕಟ್ಟುವಾಗ ಸ್ವಾಮಿಗಳು ಕೈಗೆತ್ತಿಕೊಂಡ ಮಹತ್ವದ ಕೆಲಸವೆಂದರೆ ನಟರನ್ನು ಕೂಡಿಸುವುದು. ಗೋಕಾವಿ ಪರಿಸರದಲ್ಲಿದ್ದ ಬಯಲಾಟ ಕಲಾವಿದರು ಅವರಿಗೆ ಪರಿಚಿತರಿದ್ದರು. ಆ ವೇಳೆಗಾಗಲೇ ಹುಟ್ಟಿಕೊಂಡಿದ್ದ ಕೆಲವು ಹಂಗಾಮಿ ನಾಟಕ ತಂಡಗಳಲ್ಲಿ ನಟಿಸಿದ್ದ ಕಲಾವಿದರೂ ಪರಿಚಿತರಾಗಿದ್ದರು. ಆರಂಭದಲ್ಲಿ ಅವರನ್ನು ಸಂಘಟಿಸುವುದು ಅಂಥ ಕಷ್ಟವೇನೂ ಆಗಲಿಲ್ಲ. ಆದರೆ ಅವರನ್ನು ಕಂಪನಿಯಲ್ಲಿ ಉಳಿಸಿಕೊಳ್ಳುವುದಕ್ಕಾಗಿ ಪರದಾಟಬೇಕಾಯಿತು. ನಮ್ಮಲ್ಲಿ ನಟನೆಯು ವೃತ್ತಿಯಾಗಿ ರೂಢಿಯಲ್ಲಿಲ್ಲದ ಕಾರಣ ನಟರು ನಾಟಕ ಪ್ರಯೋಗದವರೆಗೆ ಕೂಡಿದ್ದು ಆಮೇಲೆ ಮನೆಗೆ ಮರಳುವ ಸ್ವಭಾವದವರಾಗಿದ್ದರು. ಅವರ ಮನವೊಲಿಸಿ, ಸಂಬಳಕೊಟ್ಟು, ಹಿತೈಷಿಯಗಿ ನಿಂತು ಕಂಪನಿಯ ಶಿಸ್ತಿಗೆ ಒಳಪಡಿಸಲು ಸ್ವಾಮಿಗಳು ತುಂಬ ಶ್ರಮಪಡಬೇಕಾಯಿತು. ನಟರಿಗೆ ಬರೆದ ಪತ್ರಗಳು, ಅವರೊಂದಿಗೆ ಮಾಡಿಕೊಂಡ ಒಪ್ಪಂದಗಳು, ಅವರನ್ನು ಹುಡುಕಿಬಂದ ವಿವರಗಳು ಡೈರಿಯಲ್ಲಿವೆ. ಉತ್ತಮ ಕಲಾವಿದರ ಹೆಸರು ಕೇಳಿದರೆ ಸಾಕು ಅವರನ್ನು ಹುಡುಕಿ ಕರೆತರುತ್ತಿದ್ದರು.

ಸಂಘಟನೆಯ ಸಂದರ್ಭದಲ್ಲಿ ಸ್ವಾಮಿಗಳು ಹೆಚ್ಚು ಗಮನ ಕೊಟ್ಟಿದ್ದು ನಾಟಕದ ತಾಲೀಮಿಗೆ. ಗಿರಣಿ ಕೆಲಸ ಮುಗಿಸಿ ಸೈಕಲ್‌ ಹತ್ತಿ ಗೋಕಾಕ ಫಾಲ್ಸನಿಂದ ಕೊಣ್ಣೂರಿಗೆ ಹೋಗುವುದು, ತಾಲೀಮು ನೋಡಿ ಕಂಪನಿಗೆ ಬೇಕಾದ ಅಗತ್ಯಗಳನ್ನು ಪೂರೈಸಲು ವ್ಯವಸ್ಥೆ ಮಾಡುವದು ಅವರ ದಿನಚರಿಯ ಭಾಗವಾಗಿತ್ತು. ನಾಟಕವಿರಲಿ ಇಲ್ಲದಿರಲಿ, ತಾಲೀಮು ತಪ್ಪಿಸುತ್ತಿರಲಿಲ್ಲ. ‘ತಾಲೀಮು ಚೆನ್ನಾಗಿ ನಡೆದಿದೆ’ ‘ತಾಲೀಮು ಉತ್ತಮ ನಡೆದಿದೆ’ ಇಂಥ ವಾಕ್ಯಗಳು ಡೈರಿಯ ಪುಟ-ಪುಟಗಳಲ್ಲಿ ದೊರೆಯುತ್ತವೆ. ಕಂಪನಿಯ ಆರಂಭದಲ್ಲಿ ಇದ್ದವರೆಲ್ಲ ಬಯಲಾಟದ ಕಲಾವಿದರೇ ಎಂಬುದು ಗಮನಿಸುವಂತಹ ಅಂಶ. ಕುಣಿತ-ಹಾಡುಗಾರಿಕೆಯಲ್ಲಿ ಪಳಗಿದ್ದ ನಟರಿಗೆ ನಾಟಕದ ಸಂಸ್ಕಾರ ಕೊಡುವ ಅವಶ್ಯಕತೆಯಿಂದಾಗಿ ತಾಲೀಮಿಗೆ ಹೆಚ್ಚು ಮಹತ್ವ ಕೊಟ್ಟರು. ವಂಟಮುರಿ ಚನ್ನಮಲ್ಲಪ್ಪ, ಶಂಕ್ರಪ್ಪ ಗುಳೇದಗುಡ್ಡ, ಪಂಡಿತ ಮಾಸ್ತರ, ಭಾವು ಬಸ್ತವಾಡ ಮುಂತಾದವರು ತಾಲೀಮು ಕಲಿಸುತ್ತಿದ್ದರು. ಗೋಕಾಕದ ಕರೀಗಾರರು (ಹೆಸರು ಗೊತ್ತಿಲ್ಲ), ರಾಮು ದರಗಶೆಟ್ಟಿ, ಬೆಳಗಾವಿಯ ಎಲ್ಲಪ್ಪ ಕಡೇಮನಿ, ಮಿರಜದ ಸದೋಬಾ ಪೇಂಟರ ಇವರು ತಿಂಗಳು/೨ ತಿಂಗಳು ಕೊಣ್ಣೂರಿನಲ್ಲಿ ಇದ್ದು ಪಡದೆಗಳನ್ನು ಬರೆದುಕೊಟ್ಟರು.

ವರ್ಚಸ್ಸಿನ ವ್ಯಕ್ತಿತ್ವವುಳ್ಳ ಶಿವಮೂರ್ತಿಸ್ವಾಮಿಗಳು ಕೈಗೆತ್ತಿಕೊಂಡ ಕೆಲಸಕ್ಕೆ ಜನಬಲ ಧಾರಾಳವಾಗಿ ದೊರೆಯುತ್ತಿತ್ತು. ನಾಟಕ ಕಲೆಯ ಬಗ್ಗೆ ಕಂಪನಿಯೊಂದು ಕಟ್ಟಬೇಕೆಂದಾಗ ಎಲ್ಲರ ಸಹಕಾರವು ದೊರೆಯಿತು. ಗುರುಸಿದ್ಧಯ್ಯನವರ ಓಡಾಟ, ಗೆಳೆಯರ ಮತ್ತು ಮಿಲ್ಲಿನ ಮೇಲಾಧಿಕಾರಿ ಕೇರ್ ಸಾಹೇಬರ ಪ್ರೋತ್ಸಾಹದಿಂದ ಕೊಣ್ಣೂರ ನಾಟಕ ಕಂಪನಿ ಪ್ರಯೋಗಕ್ಕೆ ಸಜ್ಜಾಯಿತು. ಕಂಪನಿಯ ಪೂರ್ಣ ಹೆಸರು ‘ಕೊಣ್ಣೂರ ಶ್ರೀ ಕಾಡಸಿದ್ದೇಶ್ವರ ಪ್ರಾಸಾದಿಕ ಸಂಗೀತ ನಾಟಕ ಮಂಡಳಿ’ ೧೯೦೨ರ ಡೈರಿಯ ಮೇಲ್ಪುಟದಲ್ಲಿ ದುಂಡಾಕಾರದ ಸೀಲು ಇದ್ದು ಅದರೊಳಗೆ ‘ಕೊಂಣೂರ ಶ್ರೀ ಕಾಡಸಿದ್ಧೇಶ್ವರ ಪ್ರಾಸಾದಿಕ ಬಾಲ ಸಂಗೀತ ಮಂಡಳಿ’ ಎಂದಿದೆ. ರಘುವೀರ ಪೇಂಟರ ೧೯೧೫ರಲ್ಲಿ ಚಿತ್ರಿಸಿದ ರಂಗ ಪರದೆಯ ಮೇಲ್ಭಾಗದಲ್ಲಿ `KONNUR KARNATAK SANGEET DRAMATIC COMPANY’ ಎಂದು ಬರೆದಿದೆ.

ವೃತ್ತಿ ಸ್ವರೂಪದ ಮೊದಲ ಶ್ರೀಮಂತ ಕಂಪನಿ

ಕೊಣ್ಣೂರು ನಾಟಕ ಕಂಪನಿಗಿಂತ ಪೂರ್ವದಲ್ಲಿ ಕರ್ನಾಟಕದಲ್ಲಿ ಹಲವಾರು ನಾಟಕ ಕಂಪನಿಗಳಿದ್ದವು. ಉತ್ತರ ಕರ್ನಾಟಕದಲ್ಲಿ ಹಲಸಿ ನಾಟಕ ಮಂಡಳಿ (೧೮೬೯-೭೦), ಗದುಗಿನ ಕೃತಪುರ ನಾಟಕ ಮಂಡಳಿ (೧೭೭೯); ನರಗುಂದ ನಾಟಕ ಮಂಡಳಿ (೧೮೭೫), ತಂತುಪುರ ಸಂಗೀತ ನಾಟಕ ಮಂಡಳಿ (೧೮೮೬), ಗುಳೇದಗುಡ್ಡ ಬಾಲ ನಾಟಕ ಮಂಡಳಿ (೧೮೯೫); ಮೈಸೂರು ಪ್ರದೇಶದ ರಾಜಾಶ್ರಯದಲ್ಲಿದ್ದ ಅರಮನೆ ನಾಟಕ ಕಂಪನಿ (೧೮೮೨) ಮುಂತಾದವು ಮುಖ್ಯವಾಗಿವೆ. ಇವಲ್ಲದೆ ಇನ್ನೂ ಹಲವಾರು ನಾಟಕ ಕಂಪನಿಗಳು ಅಂದು ಅಲ್ಲಲ್ಲಿ ಅಸ್ತಿತ್ವದಲಿ ಇದ್ದರೂ ಅವುಗಳ ಚರಿತ್ರೆ ದಾಖಲಾಗಿಲ್ಲ. ಲಭ್ಯ ಕಂಪನಿಗಳ ಚರಿತ್ರೆಯನ್ನು ಆಧರಿಸಿ ಅವುಗಳ ಸ್ವರೂಪವನ್ನು ಗುರುತಿಸುವದಾದರೆ, ಅವು ಒಂದು ಸೀಮಿತ ಅರ್ಥದಲ್ಲಿ ನಾಟಕ ಕಂಪನಿಗಳಾಗಿದ್ದವು.

೧. ಹಂಗಾಮಿ ಕಂಪನಿಗಳು (ಸೀಜನಲ್‌ ಕಂಪನಿಗಳು)
೨. ಆಮಂತ್ರಿತ ಸ್ಥಳಗಳಿಗೆ ಸಂಚಾರ
೩. ವ್ಯವಹಾರ ಗೌಣ; ಕಲಾಸೇವೆಯೇ ಮುಖ್ಯ
೪. ವೃತ್ತಿಧರ್ಮಕ್ಕೆ ಬದ್ಧರಾಗದ ಹವ್ಯಾಸಿ ಕಲಾವಿದರು
೫. ಬಯಲಾಟದ ಸುಧಾರಿತ ರೂಪಗಳಂತಿದ್ದ ನಾಟಕಗಳು

ಇವು ಆರಂಭದ ನಾಟಕ ಕಂಪನಿಗಳ ಪ್ರಮುಖ ಲಕ್ಷಣವಾಗಿದ್ದವು. ಈ ಸ್ವರೂಪಕ್ಕೆ ಅಂದಿನ ನಮ್ಮ ನಾಡಿನ ಸಾಂಸ್ಕೃತಿಕ ಸಂದರ್ಭವೇ ಮುಖ್ಯ ಕಾರಣವಾಗಿತ್ತು. ಶಾಂತಕವಿಗಳ ಕಾಲದ ನಾಟಕ ಕಂಪನಿಗಳು ಭಾಷಾಭಿಮಾನದಿಂದ ಪ್ರೇರಿತವಾಗಿದ್ದವು. ‘ಭಾಷಾಭಿಮಾನ’ದ ಕಾರಣಕ್ಕಾಗಿಯೇ ಅವು ವೃತ್ತಿಸ್ವರೂಪವನ್ನು ಪೂರ್ಣ ಪ್ರಮಾಣದಲ್ಲಿ ಮೈಗೂಡಿಸಿಕೊಳ್ಳಲಾಗಲಿಲ್ಲ. ತನ್ನ ತಾಯಿನುಡಿಗಾಗಿ ದುಡಿಯುವ ಅಭಿನಯಿಸುವ ಪ್ರವೃತ್ತಿಗೆ ಲಾಭ-ಹಾನಿಗಳ ಲೆಕ್ಕಾಚಾರ ತುಂಬ ಸಣ್ಣದಾಗಿ, ಸ್ವಾರ್ಥವಾಗಿ ಕಾಣುತ್ತದೆ. ಕೊಣ್ಣೂರ ಕಂಪನಿಯ ಕಾಲಕ್ಕೆ ಈ ಪರಿಸ್ಥಿತಿ ಬೇರೆಯಾಗಿತ್ತು ಕನ್ನಡ ನಾಟಕಗಳು ಪ್ರಯೋಗಗೊಳ್ಳುತ್ತಿದ್ದವು. ಆದರೆ ರಂಗಾಲಂಕರಣದ ಕಾರ್ಯ ನಡೆಯಬೇಕಿತ್ತು. ಒಟ್ಟಾರೆ ಆ ಕಾಲದ ನಮ್ಮ ಕಂಪನಿನಾಟಕ ಚಟುವಟಿಕೆಗಳು ದೇಸೀಯ ರಂಗಕಲೆಗೆ ಪಾಶ್ಚಾತ್ಯ ರಂಗಕಲೆಯ ಉಡುಗೆ-ತೊಡುಗೆ ತೊಡಿಸುವಂಥ ಪ್ರಯತ್ನಗಳಾಗಿದ್ದವು.

ನಾಟಕ ಕಂಪನಿ ಅನ್ನೋದು ನಮ್ಮಲ್ಲಿ ಉದ್ದಿಮೆಯ ಸ್ವರೂಪ ತಾಳಿದದು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ. ನಾಟಕಕಲೆಯನ್ನು ಉದ್ಯೋಗ ಮಾಡಿಕೊಳ್ಳುವ ಹಂತದಲ್ಲಿ ಮಾಲಿಕನೊಬ್ಬನ ನೇತೃತ್ವದಲ್ಲಿ ರೂಪ ತಾಳುವ ನಾಟಕ ಕಂಪನಿಯು ಸಂಘನಟೆಯ ಹಂತದಲ್ಲಿ ತನ್ನ ಅಗತ್ಯಕ್ಕೆ ತಕ್ಕಂತೆ ರಂಗಪರಿಕರಗಳು, ನಾಟಕ ನಟ-ನಟಿಯರು, ನೇಪಥ್ಯಕಲಾವಿದರು, ಮ್ಯಾನೇಜರ-ಹೀಗೆ ಹಲವು ಘಟಕಗಳನ್ನೊಳಗೊಳ್ಳುವಂಥ ಮತ್ತು ಪ್ರೇಕ್ಷಕರಿಂದ ಹಣ ಪಡೆದುಕೊಂಡು ನಾಟಕಗಳನ್ನಾಡುತ್ತ ಸಂಚರಿಸುವಂ ಸಂಸ್ಥೆಯಾಗಿದೆ. ಉತ್ತರ ಕರ್ನಾಟಕದ ಮಟ್ಟಿಗೆ ಇಂಥ ಮೊದಲ ಸಂಸ್ಥೆಯೇ ಕೊಣ್ಣೂರು ನಾಟಕ ಕಂಪನಿ. ನಾಟಕಗಳ ಸತತ ಪ್ರದರ್ಶನ, ವೃತ್ತಿಪರ ಕಲಾವಿದರು, ಕಲೆಯ ಜೊತೆಗೆ ವ್ಯವಹಾರಕ್ಕೂ ಪ್ರಾಶಸ್ತ್ಯ, ಪ್ರಚಾರ ಮತ್ತು ಪ್ರಯೋಗಗಳಿಂದ ಕ್ಯಾಂಪನ್ನು ಯಶಸ್ವಿಗೊಳಿಸುವುದು, ಪ್ರೇಕ್ಷಕರ ಅಭಿರುಚಿಗನುಗುಣವಾಗಿ ನಾಟಕಗಳಲ್ಲಿ ಹೊಸ ಹೊಸ ಅಂಶಗಳನ್ನಳವಡಿಸಿಕೊಳ್ಳುವುದು – ಇಂಥ ವೃತ್ತಿಪರ ಅಂಶಗಳೆಲ್ಲವೂ ಕೊಣ್ಣೂರ ಕಂಪನಿಯಿಂದಲೇ ನಮ್ಮಲ್ಲಿ ಜಾರಿಗೆ ಬಂದವು. ಮುಂದೆ ಬಂದ ಕಂಪನಿಗಳು ಇದೇ ಹಾದಿಯನ್ನು ತುಳಿದವು. ಹೀಗಾಗಿ ಕನ್ನಡ ವೃತ್ತಿರಂಗಭೂಮಿ ಪರಂಪರೆಗೆ ಆಸ್ತಿಭಾರ ಹಾಕಿದ ಶ್ರೇಯಸ್ಸು ಕೊಣ್ಣೂರು ಕಂಪನಿಗೇ ಸಲ್ಲುವುದು.

 

[1] ಬಾಬುರಾವ ದೇಸಾಯಿ – ರಾವಸಾಹೇಬ ಶಿವಮೂರ್ತಿಸ್ವಾಮಿ ಕಣಬರ್ಗಿಮಠರು (೧೯೮೯) ಪು. ೧೮.

[2] ಬಿ. ಪುಟ್ಟಸ್ವಾಮಯ್ಯ – ಕನ್ನಡ ರಂಗಭೂಮಿ ನಡೆದು ಬಂದ ದಾರಿ (೧೯೮ ೭) ಪು. ೧೯.

[3] ಡಾ. ಶ್ರೀರಂಗ – ಕನ್ನಡ ರಂಗಭೂಮಿಯ ಪುರೋಭಿವೃದ್ಧಿ (೧೯೬೮) ಪು. ೧೬

[4] ರಾ. ಕ. ನಾಯಕರೊಂದಿಗೆ – ಚರ್ಚೆ, ದಿನಾಂಕ ೧.೬.೯೯ ಸ್ಥಳ, ಕಾಕತಿ.