ಕೊಣ್ಣೂರ ಕಂಪನಿಗೆ ಇಪ್ಪತ್ತೊಂದು ವರ್ಷಗಳ ಇತಿಹಾಸವಿದೆ. ಈ ದೀರ್ಘಾವಧಿಯಲ್ಲಿ ಕಂಪನಿ ಮುಕ್ಕಾಂ ಮಾಡಿದ ಊರುಗಳು, ಆಡಿದ ನಾಟಕಗಳು, ಪ್ರೇಕ್ಷಕರ ಪ್ರತಿಕ್ರಿಯೆಗಳು – ಇವುಗಳ ಬಗೆಗಿನ ವಿವರವಾದ ಚಿತ್ರವು ಇಂದು ದೊರೆಯುವುದು ದುರ್ಲಭವಾಗಿದೆ. ನೂರು ವರ್ಷಗಳ ಹಿಂದಿದ್ದ ಕಂಪನಿಯ ಬಗ್ಗೆ ಅಷ್ಟಿಷ್ಟು ಮಾತಾಡುವ ಆಕರಗಳೆಂದರೆ ಶಿವಮೂರ್ತಿಸ್ವಾಮಿಗಳೇ ಬರೆದಿಟ್ಟ ದಿನಚರಿ ಟಿಪ್ಪಣೆಗಳು. ಕಿಸೆಯಲ್ಲಿಟ್ಟುಕೊಳ್ಳುವಂತಹ (ಪಾಕೆಜ್‌ ಸೈಜ) ಚಿಕ್ಕ ದಿನಚರಿ ಪುಸ್ತಕದ ಒಂದು ಪುಟದಲ್ಲಿ ಒಂದು ದಿನದ ಚಟುವಟಿಕೆಗಳನ್ನು ಮುಖ್ಯಾಂಶ ರೂಪದಲ್ಲಿ ಅವರು ದಾಖಲಿಸಿದ್ದಾರೆ. ಇಂತಹ ಪುಟಗಳಲ್ಲಿ ನಾಟಕ, ಕಂಪನಿಯ ಬಗ್ಗೆ ಒಂದೋ, ಎರಡೋ ವಾಕ್ಯಗಳು ಅಲ್ಲಲ್ಲಿ ಕಾಣಿಸುತ್ತವೆ. ಇವುಗಳನ್ನಾಧರಿಸಿಯೇ ಕಂಪನಿಯ ಚರಿತ್ರೆಯನ್ನು, ತಿರುಗಾಟದ ಹೆಜ್ಜೆಗಳನ್ನು ಗುರುತಿಸಬಹುದಾಗಿದೆ.

ನಾಟಕ ಕಂಪನಿಯು ೧೮೯೯ರಲ್ಲಿ ಪ್ರಾರಂಭವಾಯಿತೆಂದು ೧೯೧೧ರಲ್ಲಿ ಪ್ರಕಟವಾದ ‘ಸಂಗೀತ ಬಸವೇಶ್ವರ’ ನಾಟಕದ ಪ್ರಸ್ತಾವನೆಯಲ್ಲಿದೆ. ಇದನ್ನು ಖಚಿತಪಡಿಸುವಂಥ ಅಂಶಗಳು ಸ್ವಾಮಿಗಳು ಬರೆದಿರುವ ೧೮೯೯ರ ಡೈರಿಯಲ್ಲಿ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಆದರೆ ನಾಟಕದ ತಾಲೀಮು, ನಟರ ಸಂಘಟನೆಯ ಚಟುವಟಿಕೆಗಳು ಇದೇ ವರ್ಷ ಆರಂಭವಾಗಿದ್ದವೆನ್ನಲು ಆಧಾರಗಳಿವೆ. `We all went for practicing drama (18-5-1899) Vithu paid Rs.5- for drama (27-5-1899) Gurusidaya Stopped here for Pramila drama (5-6-1899) ದಿನಚರಿಯಲ್ಲಿಯ ಇಂಥ ವಿವರಗಳನ್ನಾಧರಿಸಿ ಕಂಪನಿಯ ಚರಿತ್ರೆಯನ್ನು ಮೂರು ಹಂತಗಳಲ್ಲಿ ವಿವರಿಸಬಹುದು.

೧೮೯೯-೧೯೦೩ ಸಂಘಟನೆಯ ಹಂತ. ೧೮೦೪-೧೯೧೦ ಬೆಳವಣಿಗೆಯ ಹಂತ. ೧೯೧೧-೧೯೨೦ ವೈಭವದ ಹಂತ. ತಿರುಗಾಟದ ದೃಷ್ಟಿಯಿಂದ ಆರಂಭದ ವರ್ಷಗಳಲ್ಲಿ ಕಂಪನಿಯ ಕೊಣ್ಣೂರನ್ನು ಕೇಂದ್ರವಾಗಿಟ್ಟುಕೊಂಡು ಸುತ್ತಲಿನ ಊರುಗಳಲ್ಲಿ ನಾಟಕಗಳನ್ನಾಡಿತು. ಮೂರ್ನಾಲ್ಕು ವರ್ಷಗಳ ನಂತರ ಕಂಪನಿಯ ಕಾರ್ಯವ್ಯಾಪ್ತಿ ವಿಸ್ತಾರವಾಯಿತು. ಆಗ ಈಗಿನ, ಬೆಳಗಾವಿ, ಧಾರವಾಡ ಪ್ರದೇಶವು ತಿರುಗಾಟದ ಮುಖ್ಯ ವರ್ತುಲವಾಗಿತ್ತು. ಬಿಜಾಪುರ ಜಿಲ್ಲೆ, ಕರ್ನಾಟಕ-ಮಹಾರಾಷ್ಟ್ರದ ಗಡಿಪ್ರದೇಶಗಳು. ತಿರುಗಾಟದ ಮಧ್ಯಮ ವರ್ತುಲವಾಗಿತ್ತು. ಮೈಸೂರು, ಬೆಂಗಳೂರು ಭಾಗದಲ್ಲಿ ಕಂಪನಿ ಮುಕ್ಕಾಂ ಮಾಡಿದ್ದರೂ ತುಂಬ ವಿರಳ.

ಸಂಘಟನೆಯ ಹಂತದಲ್ಲಿ ಸ್ವಾಮಿಗಳಿಗೆ ನೆರವಾದವರು ಕೊಣ್ಣೂರಿನ ಗುರುಸಿದ್ಧಯ್ಯ ಸಾಗಾಂವಿಮಠ, ನೇಮಗೌಡ ಪಾಟೀಲ ಮತ್ತು ಜಾಡರ ಸಿದ್ಧಾ. ಇವರ ಜೊತೆ ಚರ್ಚಿಸಿ, ಇವರ ಸಹಾಯದಿಂದ ನಾಟಕದ ಪರಿಕರಗಳನ್ನು ಹೊಂದಿಸಿದ, ನಟರನ್ನು ಕೂಡಿಸಿದ, ತಾಲೀಮಿನ ವ್ಯವಸ್ಥೆ ಮಾಡಿದ ವಿವರಗಳು ದಿನಚರಿಯಲ್ಲಿವೆ. ಶಂಕರಪ್ಪ ಗುಳೇದಗುಡ್ಡ, ಗುರುಲಿಂಗಪ್ಪ ಗೊಂಬಿ, ಬಸಪ್ಪ ಗಡದ ಇವರು ಆರಂಭದ ನಟರು. ಈ ಅವಧಿಯಲ್ಲಿ ಕೀಚಕವಧೆ, ಹರಿಶ್ಚಂದ್ರ, ಪ್ರಮಿಳಾ ನಾಟಕಗಳನ್ನು ಕೊಣ್ಣೂರ, ಗೋಕಾಕ, ಸಿಂದಿಕುರಬೆಟ್ಟ ಊರುಗಳಲ್ಲಿ ಆಡಿದ್ದಾಗಿ ಗೊತ್ತಾಗುವುದು. ಮೊದಲ ವರ್ಷಗಳಲ್ಲಿ ತಿರುಗಾಡಿದ ಸ್ಥಳಗಳು ಕಡಿಮೆ, ಆಡಿದ ನಾಟಕಿಗಳ ಸಂಖ್ಯೆಯೂ ಕಡಿಮೆ. ತಾಲೀಮು ಮತ್ತು ನಟರ ಸಂಘಟನೆಗಾಗಿಯೇ ಹೆಚ್ಚು ಸಮಯ ಹಿಡಿದಿರಬೇಕು. ಒಟ್ಟಾರೆ ಈ ಅವಧಿಯಲ್ಲಿ ವ್ಯವಹಾರ ಗೌಣವಾಗಿ ಸಂಘಟನೆಯ ಕಾರ್ಯವೇ ಮುಖ್ಯವಾಗಿತ್ತು.

೧೯೦೪ ರಿಂದ ಕಂಪನಿಯು ವ್ಯವಹಾರಕೌಶಲ್ಯ ಹಾಗೂ ಪ್ರಯೋಗಶೀಲ ಗುಣಗಳನ್ನು ಮೇಳವಿಸಿಕೊಂಡಿತು. ಹೊಸ ಪಡದೆಗಳ ನಿರ್ಮಾಣ, ಹೊಸ ನಾಟಕಗಳ ಪ್ರಯೋಗ, ಸ್ತ್ರೀಪಾತ್ರಕ್ಕಾಗಿ ಸ್ತ್ರೀಯರು, ಶಿಸ್ತಿನ ಆಡಳಿತ ಹಾಗೂ ತಿರುಗಾಟದ ಮಾರ್ಗವನ್ನು ರೂಪಿಸಿದ್ದುದು ಎರಡನೆಯ ಹಂತದ ಸಾಧನೆಗಳಾಗಿವೆ. ಮಿರಜದಿಂದ ಬಂದಿದ್ದ ಸದೋಬಾ ಪೇಂಟರ್ ೨ – ೩ ತಿಂಗಳು ಕೊಣ್ಣೂರಿನಲ್ಲಿದ್ದು ಹೊಸ ಹೊಸ ಪಡದೆಗಳನ್ನು ಬರೆದುಕೊಟ್ಟರು. ಪಡದೆಯ ಮಧ್ಯದ ಚಿತ್ರಗಳ ವಿನ್ಯಾಸಕ್ಕೆ ತಕ್ಕಂಥೆ ಕಾಜಿನ ಹರಳುಗಳನ್ನು ಕೂಡಿಸಿ ಮಾಡಿದ್ದ ಒಂದು ಬಿಂಗಾದ ಪಡದೆಯ ಅಂದಿನ ಬೆಲೆ ೧೨೫. ರೂ. ಆಗಿತ್ತೆಂದು ಸ್ವಾಮಿಗಳು ಬರೆದಿದ್ದಾರೆ. ರಂಗಪರಿಕರ ಹಾಗೂ ವೇಷ-ಭೂಷಣಗಳಿಗೆ ಬೇಕಾಗುವ ಸಾಮಾನುಗಳನ್ನು ಮುಂಬಯಿ, ಪುಣೆಯಿಂದ ತರುತ್ತಿದ್ದರು.

೧೯೦೪ರಲ್ಲಿ ‘ಹರಿಶ್ಚಂದ್ರ’ ನಾಟಕಕ್ಕೆ ಒಳ್ಳೆಯ ಪ್ರೋತ್ಸಾಹವಿತ್ತು. ‘ರಬಕವಿಯಲ್ಲಿ ಹರಿಶ್ಚಂದ್ರ ನಾಟಕ ಅತಿ ಸರಸವಾಯಿತು. ಜನರು ಬಹಳ ಬಂದು ಜಾಗವಿಲ್ಲದ್ದರಿಂದ ತಿರುಗಿ ಹೋದರು. ೧೩೫/- ರೂ. ವಸೂಲ ಆಯಿತು (೨೩-ಜುಲೈ-೧೯೦೪) ಎಂದು ಸ್ವಾಮಿಗಳು ಬರೆದಿದ್ದಾರೆ. ೧೯೦೪, ಜೂನ್‌ ತಿಂಗಳಲ್ಲಿ ಕಂಪನಿ ಬೆಳಗಾವಿಯ ನಿಳುಬಾನ ಥೇಟರ್ ದಲ್ಲಿ ಮುಕ್ಕಾಂ ಮಾಡಿದ್ದ ಸಂದರ್ಭ. ದಿನಾಂಕ ೮ರಂದು ರಾವಸಾಹೇಬ ರುದ್ರಗೌಡರು, ಶಿರಸಂಗೀಕರ್, ವಂಟಮುರಿಕರ್, ಬಾಂದೇವಾಡ ದೇಸಾಯರು, ತಲ್ಲೂರಕರ್ ಈ ಗಣ್ಯರೆಲ್ಲ ಹರಿಶ್ಚಂದ್ರ ನಾಟಕ ನೋಡಿ ಪ್ರಶಂಸಿಸಿದರು. ಮತ್ತು ಅಂದಿನ ಪ್ರಾಪ್ತಿ ೮೦ ರೂ.ಗಳು. ಬೆಳಗಾವಿ ಕ್ಯಾಂಪಿನಲ್ಲಿಯೇ ಕಲೆಕ್ಷನ್‌ ಕಡಿಮೆಯಾದ ಉಲ್ಲೇಖವೊಂದು ಹೀಗಿದೆ. ‘ನಾಲ್ಕು ದಿನಗಳಲ್ಲಿ ಖರ್ಚಿನದು ಅತಿಯಾಗಿದೆ. ೨೬+೬೩=೧೩೯ರೂ.ಗಳು ಖರ್ಚಾದವು. ಶಹರ ವಸ್ತಿ ಇದ್ದು ಶೋಕಿ ಜನರು ಕಡಿಮೆ. ಈ ಹೊತ್ತು ರಾತ್ರಿ ವಿರಾಟಪರ್ವ ನಾಟಕವಾಯಿತು. ಅತಿ ಉತ್ತಮವಾಯಿತು. ಪ್ರಾಪ್ತಿ ೩೮ ರೂಪಾಯಿ !!! (ಜೂನ್‌ -೨೨). ಬಳ್ಳಾರಿ ಬಸಪ್ಪನು ಹರಿಶ್ಚಂದ್ರ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದನಂತೆ. ೧೯೦೫ ನವ್ಹೆಂಬರ್ ೧, ಗೋಕಾಕ ಕ್ಯಾಂಪಿನಲ್ಲಿ ಈ ನಾಟಕಕ್ಕಾದ ಕಲೆಕ್ಷನ್‌ ೧೧೨ರೂ. ೯ ಆಣೆ. ರೂಪಾಯಿಗೆ ಹನ್ನೊಂದುವರೆ ಸೇರು ಅಕ್ಕಿ ಸಿಗುತ್ತಿದ್ದ ಕಾಲವದು. ಬಳ್ಳಾರಿ ಬಸಪ್ಪನ ಅಭಿನಯಕೌಶಲ್ಯ ಮೆಚ್ಚಿದ ಸ್ವಾಮಿಗಳು ೧೦ರೂ. ಸಂಬಳ ಹೆಚ್ಚಿಸಿದರು. ಬಳ್ಳಾರಿ ಬಸಪ್ಪನು ಕಂಪನಿ ಬಿಟ್ಟ ಮೇಲೆ ಕಲಕೇರಿ ಈರಪ್ಪನು ಹರಿಶ್ಚಂದ್ರನಾಗಿ ಅಭಿನಯಿಸುತ್ತಿದ್ದನು.

ಆರಂಭದಲ್ಲಿ ಬೀಗರು, ಗೆಳೆಯರಿದ್ದ ಊರುಗಳಲ್ಲಿ ಮುಕ್ಕಾಂ ಮಾಡುತ್ತಿದ್ದು ಅಲ್ಲಿಯ ಅನುಭವಗಳಿಂದ ತಿರುಗಾಟದ ಮಾರ್ಗವನ್ನು ವಿಸ್ತರಿಸುತ್ತ ಹೋದರು. ಕ್ಯಾಂಪಿಗೆ ಮೊದಲು ಥೇಟರ್ ನಿರ್ಮಾಣ, ಜಾಹೀರಾತಿನ ಕೆಲಸ ಕೈಗೊಳ್ಳುತ್ತಿದ್ದರು. ಥೇಟರ್ (ಕ್ಯಾಂಪಿಗಾಗಿ) ಕಟ್ಟಲು ಅಂದು ೫೦ ರಿಂದ ೭೫ರೂ ಖರ್ಚಾಗುತ್ತಿತ್ತು. ಥೇಟರ್ ಸಿದ್ಧವಾದ ಬಳಿಕ ಸಾಮಾನುಗಳ ಸಹಿತ ಕಲಾವಿದರು ಚಕ್ಕಡಿಯಿಂದ ಅಥವಾ ರೈಲಿನಿಂದ ಕ್ಯಾಂಪಿನ ಸ್ಥಳಕ್ಕೆ ಹೋಗುತ್ತಿದ್ದರು. ಯಾರಾದರೂ ನಾಟಕಗಳ ಗುತ್ತಿಗೆ ಹಿಡಿದು ಆಡಿಸುತ್ತಿದ್ದರೆ ಅದಕ್ಕೂ ಕಂಪನಿಯಲ್ಲಿ ಅವಕಾಶವಿತ್ತು. ಎರಡನೆಯ ಹಂತದಲ್ಲಿ ಕಂಪನಿ ಸಂಚರಿಸಿದ ಸ್ಥಳಗಳೆಂದರೆ ಕೊಣ್ಣೂರ, ಗೋಕಾಕ, ಘೋಡಗೇರಿ, ಸಂಕೇಶ್ವರ, ಧಾರವಾಡ, ಬಿಜಾಪುರ, ಬೈಲಹೊಂಗಲ, ಅಥಣಿ ಮುಂತಾದವು.

೧೯೦೭ರಲ್ಲಿ ಕಂಪನಿ ಬೈಲಹೊಂಗಲ ಕ್ಯಾಂಪ ಮುಗಿಸಿ ಧಾರವಾಡಕ್ಕೆ ಬಂದಾಗ ಅಲ್ಲಿ ಮಂಡಗಿ ಎನ್ನುವವರು ೮೫೦/-ರೂ. ಗಳಿಗೆ ೯ ನಾಟಕಗಳನ್ನು ಗುತ್ತಿಗೆ ಹಿಡಿದರು. ಒಪ್ಪಂದದ ನಾಟಕಗಳು ಮುಗಿಯುವುದಕ್ಕಿಂತ ಮೊದಲು ರಾಚಯ್ಯಸ್ವಾಮಿ ಊರಿಗೆ ಹೋಗಿ ಸಕಾಲದಲ್ಲಿ ಕಂಪನಿಗೆ ಮರಳಲಿಲ್ಲ. ಅವರಿಲ್ಲದೆ ನಾಟಕಗಳನ್ನಾಡುವುದು ಕಷ್ಟವಾಯಿತು. ಮ್ಯಾನೇಜರ್ ಗುರುಸಿದ್ಧಯ್ಯನವರು ೭೦ರೂ. ಸಾಲದಲ್ಲಿ ಕಂಪನಿಯ ಸಾಮಾನುಗಳನ್ನು ಒಬ್ಬ ಶೇಡಜಿಯ ಹತ್ತಿರ ಒತ್ತೆ ಇಟ್ಟು ಕೊಣ್ಣೂರಿಗೆ ಮರಳಿದರು. ಒಂದು ವರ್ಷದ ನಂತರ ಕಲಾವಿದರೆಲ್ಲ ಸೇರಿ ಕಂಪನಿ ಆರಂಭಿಸಬೇಕೆಂದು ಒತ್ತಾಯಿಸಿದರು. ಸ್ವಾಮಿಗಳು ಅವರಿಂದ ಕರಾರುಪತ್ರ ಬರೆಸಿಕೊಂಡು ೧೯೦೮ ಡಿಸೆಂಬರ ತಿಂಗಳಲ್ಲಿ ಮತ್ತೆ ಕಂಪನಿಗೆ ಚಾಲನೆ ಕೊಟ್ಟರು.

ಸೂಚನೆ ಇಲ್ಲದೆ ನಿರ್ಗಮಿಸುವ ನಟರಿಂದ ಮತ್ತು ಪ್ರಾಕೃತಿಕ-ವಿಕೋಪಗಳಿಂದ ಆಗಾಗ ಕಂಪನಿ ವಿರಮಿಸಿ ಮತ್ತೆ ಮುಂದಕ್ಕೆ ಹೆಜ್ಜೆಹಾಕುತ್ತಿತ್ತು. ವಿರಾಮದ ಅವಧಿಯಲ್ಲಿ ನಾಟಕಗಳಿಲ್ಲದಿದ್ದರೂ ತಾಲೀಮು ತಪ್ಪದೆ ನಡೆಯುತ್ತಿತ್ತು. ೧೯೧೦ ರಿಂದ ೧೯೨೦ ಇದು ಕಂಪನಿಯ ವೈಭವದ ಕಾಲ, ಡೈನಾಮೊ ವಿದ್ಯುತ್ತಿನ ಬಳಕೆ, ಟ್ರಾನ್ಸಫರ್ ಸೀನುಗಳ ಅಳವಡಿಕೆ, ಶನಿಪ್ರಭಾವ, ಬಸವೇಶ್ವರ ನಾಟಕಗಳ ಜನಪ್ರಿಯತೆ ಈ ಅವಧಿಯ ವೈಶಿಷ್ಟ್ಯಗಳಾಗಿವೆ. ೧೯೦೯ರಲ್ಲಿ ಮೊದಲು ಬೈಲಹೊಂಗಲ ಕ್ಯಾಂಪಿನಲ್ಲಿ ರಂಗವನ್ನಲಂಕರಿಸಿದ ಬಸವೇಶ್ವರ ನಾಟಕವು ಸ್ವಾಮಿಗಳ ಮಹತ್ವಾಕಾಂಕ್ಷೆಯ ಕೃತಿಯಾಗಿತ್ತು. ಅದರ ಯಶಸ್ವಿಗಾಗಿ ತುಂಬಾ ಶ್ರಮಪಟ್ಟಿದ್ದರು. ಪ್ರೇಕ್ಷಕರ ಪ್ರತಿಕ್ರಿಯೆಯೂ ಉತ್ಸಾಹದಾಯಕವಾಗಿತ್ತು. ಅಂದಿನ ದಿನಗಳಲ್ಲಿ ಕೊನೆಯ ಟಿಕೆಟ್ಟಿನ ದರ ೨ ಆಣೆ ಇದ್ದಾಗ ಒಂದು ದಿನದ ಕಲೆಕ್ಷನ್‌ ೬೬೨ರೂ. ಎಂಬುದು ನಾಟಕದ ಜನಪ್ರಿಯತೆಗೆ ನಿದರ್ಶನವಾಗಿದೆ. ಮುರಗೋಡ ಗಂಗಾಧರಪ್ಪ ಬಸವೇಶ್ವರನಾಗಿ ಅಭಿನಯಿಸುತ್ತಿದ್ದರೆ ಭಾವುಕ ಪ್ರೇಕ್ಷಕರು ಸಾಕ್ಷಾತ್‌ ಬಸವೇಶ್ವರನನ್ನೆ ಕಂಡಂತೆ ಭಕ್ತಿಯಿಂದ ಕಾಯಿ – ಕರ್ಪುರ ಅರ್ಪಿಸುತ್ತಿದ್ದರಂತೆ. ಬಾಗಿಲುಕೋಟೆ ಕ್ಯಾಂಪ (೧೯೧೧-ಮೇ-೨೩) ಮಾಡಿದ್ದಾಗ ಈ ನಾಟಕಕ್ಕೆ ಕೆಲವು ಜಾತಿವಾದಿಗಳಿಂದ ವಿರೋಧ ವ್ಯಕ್ತವಾಯಿತು. ಬಿಜಾಪುರ ಕಲೆಕ್ಟರನಿಗೆ ದೂರು ಸಲ್ಲಿಸಿ ನಾಟಕ ನಿಲ್ಲಿಸುವಂತೆ ಒತ್ತಾಯಿಸಿದರು ಶಿವಮೂರ್ತಿಸ್ವಾಮಿಗಳ ಪ್ರಭಾವದೆದುರು ಅವರ ಆಟ ನಡೆಯಲಿಲ್ಲ. ಬೆಳಗಾವಿ ಕ್ಯಾಂಪಿನಲ್ಲಿ (೧೯೧೧.ಡಿ. ೨೫) ಇಂಥದೇ ಪ್ರಯತ್ನ ನಡೆಯಿತು. ಕಮಿಶನರ್ ಬ್ರೇಡನ್‌ ಜಾತಿನಿಂದನೆಯ ಆರೋಪದ ಮೇಲೆ ತಡೆಯಾಜ್ಞೆ ನೀಡಿದರು. ಸ್ವಾಮಿಗಳು ಕೂಡಲೇ ಕಂಪನಿಯನ್ನು ಮೈಸೂರಿಗೆ ಕಳುಹಿಸಿ ಬಸವೇಶ್ವರ ನಾಟಕದ ಅನುಮತಿ ಪಡೆಯಲು ಕ್ರಿಯಾಶೀಲರಾದರು. ಧಾರವಾಡಕ್ಕೆ ಹೋಗಿ ವೇಲ್ಸ ಕಮೀಶನರ, ಮುಂಬಯಿ ಗವರ್ನರ್ ವಿಲಿಂಗ್ಡನ್‌ ಅವರಿಗೆ ವಾಸ್ತವಸ್ಥಿತಿಯನ್ನು ವಿವರಿಸಿ, ಅವರ ಮನವೊಲಿಸಿ ಅನುಮತಿಗಾಗಿ ಪಟ್ಟು ಹಿಡಿದರು. ಗವರ್ನರ್ ಮತ್ತು ಮೆಲ್ಸ ಅವರು ನಾಟಕದ ಹೆಸರನ್ನು ಬದಲಿಸಿ ಆಡಬೇಕೆಂದು ಸೂಚಿಸಿದರು. ಅವರ ಪ್ರಕಾರ ಬಸವೇಶ್ವರ ನಾಟಕ ‘ಬಸವ-ವಿಜಯ’ ವಾಯಿತು. ಈ ನಾಟಕದ ಅನುಮತಿಗಾಗಿ ಸ್ವಾಮಿಗಳು ಮೂರು ವರುಷ ಓಡಾಡಿದರೆಂಬುದು ಗಮನಾರ್ಹ.

೧೯೧೪ರಲ್ಲಿ ಡೈನಾಮೊ ವಿದ್ಯುತ್‌ ಬಳಕೆಗೆ ಬಂದ ನಂತರ ನಾಟಕಗಳ ಆಕರ್ಷಣೆ ಹೆಚ್ಚಿತು. ಟ್ರಾನ್ಸ್ ಫರ್ ಸೀನುಗಳಿಂದಾಗಿ ಶನಿಪ್ರಭಾವದ ಪ್ರಭಾವವಂತೂ ಎಲ್ಲೆಡೆಗೆ ಹರಡಿತು. ವಿಕ್ರಮರಾಜನಾಗಿ ರಾಚಯ್ಯಸ್ವಾಮಿ, ಶನಿ ಪಾತ್ರದಲ್ಲಿ ಈರಪ್ಪ ಕಲಕೇರಿ, ಗಾಣಿಗನಾಗಿ ಪೀತಾಂಬರಪ್ಪ ಡೋಂಗರೆ, ಭಟ್ಟನಾಗಿ ಗುರುಲಿಂಗಪ್ಪ ಗುಳೆದಗುಡ್ಡ, ಭಟ್ಟನ ಹೆಂಡತಿಯಾಗಿ ಎಲ್ಲವ್ವ, ಗುಳೇದಗುಡ್ಡ ರಾಜಕುಮಾರಿಯಾಗಿ ಹನಮಂತವ್ವ ದಾಸರ, ವೇಶ್ಯಾಪುತ್ರಿಯಾಗಿ ಮುರಗೋಡ ಗಂಗಾಧರಪ್ಪ ಇವರ ಅಭಿನಯ ಕೌಶಲ್ಯ, ಗಾಯನ ಚಾತುರ್ಯ ಜನರ ಪ್ರಶಂಸೆಗೆ ಪಾತ್ರವಾಗಿದ್ದವು.

ಕಂಪನಿ ಮುಕ್ಕಾಂ ಮಾಡಿದ್ದ ಊರುಗಳಲ್ಲಿರುವ ಗಣ್ಯರನ್ನು, ಅಧಿಕಾರಿಗಳನ್ನು ನಾಟಕಕ್ಕೆ ಆಮಂತ್ರಿಸುವುದು, ಕಾರ್ಯಕ್ರಮಗಳನ್ನು ಹಮ್ಮಿಕೊಂಢು ಸತ್ಕರಿಸುವದು ಕಂಪನಿಯ ಸಂಪ್ರದಾಯವಾಗಿತ್ತು. ಸ್ಥಳೀಯ ಪುಂಡರ ಕಾಟವನ್ನು ತಡೆಯುವುದಕ್ಕೆ ಮತ್ತು ಕಂಪನಿಯ ಬಗ್ಗೆ ಜನರಲ್ಲಿ ಆದರಭಾವ ಮಾಡಿಸುವುದಕ್ಕೆ ಇಂಥ ಕಾರ್ಯಕ್ರಮಗಳು ನೆರವಾಗುತ್ತಿದ್ದವು. ಬಾಗಿಲುಕೋಟೆಯಲ್ಲಿ ಶಫರ್ಡರನ್ನು ಕರೆದು ಸತ್ಕರಿಸಿದ್ದರು. ಒಂದು ಸಲ ಚಿಂಚಲಿ (ಬೆಳಗಾವಿ ಜಿಲ್ಲೆ) ಜಾತ್ರೆಯಲ್ಲಿ ಗದ್ದಲವಾದುದನ್ನು ಗಮನಿಸಿದ ಸ್ವಾಮಿಗಳು ಕೊಲ್ಲಾಪುರದ ಛತ್ರಪತಿ ಶಾಹುಮಹಾರಾಜರ‍ನ್ನು ಕರೆಯಿಸಿ ತಮ್ಮ ವರ್ಚಸ್ಸನ್ನು ತೋರಿಸಿದ್ದರು. ಕಂಪನಿಯಲ್ಲಿದ್ದ ನಟರು, ನಾಟಕಕಾರರು, ವಾದ್ಯಗಾರರ ಪ್ರತಿಭೆಗೆ ತಕ್ಕಂತೆ ಮಾನ-ಸನ್ಮಾನದ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಬಂಗಾರದ ಉಂಗುರ – ಪದಕ ಅಲ್ಲದೆ ಬಿರುದುಗಳನ್ನು ಕೊಟ್ಟು ಸಂತೋಷಪಡಿಸುತ್ತಿದ್ದರು. ಇಂಥ ಚಟುವಟಿಕೆಗಳನ್ನು ಗಮನಿಸಿದರೆ ಶಿವಮೂರ್ತಿಸ್ವಾಮಿಗಳ ನಾಟಕ ಕಂಪನಿ ಒಂದು ಉದ್ಯಮ ಮಾತ್ರವಾಗಿರದೆ ನಾಡಿನ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಬದುಕನ್ನು ಪುನಶ್ಚೇತನ ಗೊಳಿಸುವ ಸಂಸ್ಥೆಯಾಗಿತ್ತೆನ್ನಬೇಕು.

೧೯೧೮ರಲ್ಲಿಯ ಬಿಜಾಪುರ ಕ್ಯಾಂಪ್‌ ಸ್ಮರಣೀಯ. ಛತ್ರೆ ರಂಗಮಂದಿರದಲ್ಲಿ ನಾಟಕಗಳಾಗುತ್ತಿದ್ದವು. ಅದೇ ವೇಳೆಗೆ ಇನ್‌ಪ್ಲುಎಂಝೂ ಸುರು ಆಯಿತು. ಮುಳ್ಳು ಅಗಸಿಯಿಂದ ಚಕ್ಕಡಿ ತುಂಬ ಶವಗಳು ಹೋಗುತ್ತಿದ್ದವು ಇಂಥ ಭೀಕರ ಪರಿಸ್ಥಿತಿಯಲ್ಲಿ ನಾಟಕಗಳನ್ನಾಡುತ್ತಿರಲಿಲ್ಲ. ನಾಟಕಗಳಿರದಿದ್ದರೂ ಕಲಾವಿದರ ಊಟ, ವಸತಿ, ಸಂಬಳದಲ್ಲೂ ಸ್ವಾಮಿಗಳು ಏನೂ ಕೊರತೆ ಮಾಡಿರಲಿಲ್ಲ. ಇದೇ ವೇಳೆಯಲ್ಲಿ ನಾಟಕ ನಿರ್ದೇಶಕರಾಗಿದ್ದ ಗರುಡ ಸದಾಶಿವರಾಯರು ‘ದುರಾತ್ಮರಾವಣ’ ನಾಟಕ ಬರೆದು ಕೂಡಿಸಿದರು. ಮೂರು ತಿಂಗಳ ನಂತರ ನಾಟಕಗಳನ್ನಾಡಲು ಸರಕಾರ ಅನುಮತಿ ಕೊಟ್ಟರೂ ಇನ್‌ಪ್ಲುಎಂಝೂದಿಂದ ಕಂಗಾಲಾದ ಜನ ನಾಟಕಗಳಿಗೆ ಬರಲಿಲ್ಲ. ಅಲ್ಲಿಂದ ಕಂಪನಿ ಸೊಲ್ಲಾಪುರಕ್ಕೆ ಹೊರಟಿತು.

ಮೆಕ್ಯಾನಿಕಲ್‌ ಥೇಟರಿನಲ್ಲಿ ಒಂದು ದಿನ ಮರಾಠಿ ನಾಟಕ, ಮತ್ತೊಂದು ದಿನ ಕೊಣ್ಣೂರ ಕಂಪನಿಯ ಕನ್ನಡ ನಾಟಕ. ಮರಾಠಿ ನಾಟಕಗಳಿಗೆ ದೊರೆಯುತ್ತಿದ್ದ ಜನಬೆಂಬಲ ಕನ್ನಡ ನಾಟಕಗಳಿಗೂ ದೊರೆಯುತ್ತಿತ್ತು. ಮರಾಠಿ ನಟರೂ ನಾಟಕಗಳನ್ನು ನೋಡಲು ಬರುತ್ತಿದ್ದರು. ಕಲಾವಿದರ ಅಭಿನಯಕೌಶಲ್ಯ ಮೆಚ್ಚಿಕೊಂಡಿದ್ದರು. ಸೊಲ್ಲಾಪುರದಲ್ಲಿದ್ದಾಗ ಸ್ವಾಮಿಗಳು ಮುಂಬಯಿಯಿಂದ ಭಾರಿ ಬೆಲೆಯ ಹಾರ್ಮೋನಿಯಂ ಪೇಟಿಯನ್ನು ಖರೀದಿಸಿ ತಂದರು. ಇದರಿಂದ ರಂಗಸಂಗೀತಕ್ಕೆ ಮತ್ತಷ್ಟು ಮೆರಗು ಬಂದಿತು. ಬಸವೇಶ್ವರ ನಾಟಕಕ್ಕೆ ಭಾರಿ ಪ್ರೋತ್ಸಾಹ ಸಿಕ್ಕಿತು. ಒಂದು ದಿನದ ಆದಾಯವನ್ನು ಸಿದ್ಧರಾಮೇಶ್ವರ ಗುಡಿಯ ಟ್ರಸ್ಟಿಗೆ ದೇಣಿಗೆ ಕೊಟ್ಟರು. ಸೊಲ್ಲಾಪುರದಿಂದ ಅಕ್ಕಲಕೋಟ ದುಧನಿ ಅಲ್ಲಿಂದ ಸವದತ್ತಿ, ಹುಬ್ಬಳ್ಳಿ ಕ್ಯಾಂಪ್‌ ಪೂರೈಸಿಕೊಂಡು ಕಂಪನಿ ಬೈಲಹೊಂಗಲಕ್ಕೆ ಮರಳಿತು.

೧೯೦೯ರಂದು ಸ್ವಾಮಿಗಳು ಕೋರ್ಟಿನ ಕೇಸು, ಶಿಕ್ಷೆ ಮುಂತಾದ ತೊಂದರೆಗಳಿಗೆ ಸಿಕ್ಕು ೧೯ ತಿಂಗಳು ಕಂಪನಿಯಿಂದ ದೂರ ಉಳಿದರು. ಆಗ ಗುರುಸಿದ್ಧಯ್ಯನವರು ಎಲ್ಲ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಈ ಅವಧಿಯಲ್ಲಿ ನಟರಲ್ಲಿ ಚಟಗಳು ಬೆಳೆದವು. ಮ್ಯಾನೇಜರರು ಸ್ವಾರ್ಥಸಾಧಕರಾದರು. ೧೯೨೦ರಲ್ಲಿ ಸ್ವಾಮಿಗಳು ಸಾಬರಮತಿಯಿಂದ ಬರುವಷ್ಟರಲ್ಲಿ ಕಂಪನಿಯು ಅವರ ವಿಶ್ವಾಸಕ್ಕೆ, ತಕ್ಕಂತೆ ಇದ್ದಿರಲಿಲ್ಲ. ‘ನಟರ ಚಟಗಳು ನೋಡಿ ಕೆಡಕೆನಿಸುತ್ತಿದೆ’ ಎಂದು ಬೇಸರದಿಂದ ದಿನಚರಿಯಲ್ಲಿ ಬರೆದಿದ್ದಾರೆ.

೨೧ ಮೇ ೧೯೨೦ ರಂದು ಬೈಲಹೊಂಗಲದಲ್ಲಿ ಕ್ಯಾಂಪ್‌. ಬಸವ ವಿಜಯ, ಮೃಚ್ಛಕಟಿಕ, ಶನಿಪ್ರಭಾವಗಳು ಎಂದಿನಂತೆ ಪ್ರದರ್ಶನಗೊಂಡವು. ಸ್ವಾಮಿಗಳು ಕಂಪನಿ ಮುಚ್ಚುವ ಬಗ್ಗೆ ಒಳಗೊಳಗೆ ತೀರ್ಮಾನಿಸಿದ್ದರು. ಕಂಪನಿಗೆ ನಿಷ್ಠೆಯಿಂದ ಸೇವೆ ಸಲ್ಲಿಸಿದವರನ್ನು ನೆನೆಯಬೇಕೆಂದು ಜುಲೈ ೧೬ರಂದು ಖ್ಯಾತ ತಬಲಾವಾದಕ ವಿಠ್ಠಲರಾವ ಕೊಲ್ಲಾಪುರ ಅವರಿಗೆ ಬಂಗಾರದ ಉಂಗುರ ತೊಡಿಸಿದರು.

೧೮-ಜುಲೈ-೧೯೨೯೦ ರಂದು ಕಂಪನಿ ಬೆಳಗಾವಿಗೆ ಬಂದಿತು. ಶಿವಾನಂಧ ಥೇಟರ್ ದಲ್ಲಿ ಶನಿಪ್ರಭಾವ, ಬಸವವಿಜಯ, ಮನೋವಿಜಯ ನಾಟಕಗಳಾದವು. ಆಗಸ್ಟ ೯ ರಂದು ಸ್ವಾಮಿಗಳು ಕಂಪನಿ ಮುಚ್ಚುವ ವಿಚಾರವನ್ನು ಪ್ರಸ್ತಾಪಿಸಿದರು. ಆಗಸ್ಟ ೧೪ ರಂದು ಹಿರಿಯ ನಟ ರಾಚಯ್ಯಸ್ವಾಮಿ ಬೆಳವಿ ಅವರ ಸನ್ಮಾನ ಸಮಾರಂಭ ಇಟ್ಟುಕೊಂಡು ‘ಭಾರತಗಂಧರ್ವ’ ಬಿರುದಿನ ಜೊತೆಗೆ ಬಂಗಾರದ ಪದಕವನ್ನು ಅರ್ಪಿಸಿದರು. ದಿನಾಂಕ ೧೬ ರಂದು ಮೃಚ್ಛಕಟಿಕ ನಾಟಕ ನಡೆದಿತ್ತು. ಕೊನೆಯ ಸನ್ನಿವೇಶಕ್ಕೆ ಮೊದಲು ಸ್ವಾಮಿಗಳು, ವೇದಿಕೆಗೆ ಹೋಘಿ ‘ಇಲ್ಲಿಗೆ ಕಂಪನಿಯ ರಂಗಸೇವೆ ನಿಂತಿತು’ ಎಂದು ಹೇಳಿ, ಕಂಪನಿಗೆ ನಾಡಿನ ಜನರು ಕೊಟ್ಟ ಸಹಕಾರವನ್ನು ಸ್ಮರಿಸಿ, ಕೃತಜ್ಞತೆಗಳನ್ನು ಅರ್ಪಿಸಿದರು. ದಿನಾಂಕ ೧೭ರಂದು ಕಲಾವಿದರಿಗೆ ಕೊಡಬೇಕಾಗಿರುವ ಸಂಬಳ, ಇತರ ಬಾಕಿ ಹಣವನ್ನು ಕೊಟ್ಟು ಶಿವಮೂರ್ತಿಸ್ವಾಮಿಗಳು ಭಾರವಾದ ಹೃದಯದಿಂದ ಬೀಳ್ಕೊಂಡರು.