ಬೆಳವಿ ರಾಚಯ್ಯಸ್ವಾಮಿ

ಇವರು ಕೊಣ್ಣೂರ ಕಂಪನಿ ಸೇರಿದ್ದು ೧೯೦೪ರಲ್ಲಿ. ಬಳ್ಳಾರಿ ಬಸಪ್ಪ ಮೇಲಿಂದ ಮೇಲೆ ಕಂಪನಿ ಬಿಟ್ಟು ತೊಂದರೆ ಕೊಡುತ್ತಿದ್ದರಿಂದ ಅವನ ಪಾತ್ರಗಳಿಗಾಗಿ ಬೇರೊಬ್ಬ ನಟನನ್ನು ಸಿದ್ಧಗೊಳಿಸಬೇಕಿತ್ತು. ಅಂತ ನಟನೊಬ್ಬನ ಶೋಧದಲ್ಲಿದ್ದಾಗ ಶಿವಮೂರ್ತಿಸ್ವಾಮಿಗಳಿಗೆ ದೊರೆತವರು ಪಾರಿಜಾತದ ಪ್ರಸಿದ್ಧ ಕಲಾವಿದ ರಾಚಯ್ಯಸ್ವಾಮಿ. ಇವರು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಳವಿಯವರು ಆಕರ್ಷಕ ದೈಹಿಕ ನಿಲವು, ಸುಮಧುರ ಕಂಠಸಿರಿಯಿಂದ ರಾಚಯ್ಯಸ್ವಾಮಿ ಭರವಸೆಯ ಕಲಾವಿದರೆನಿಸಿದ್ದರು. ‘ರಾಚಯ್ಯಸ್ವಾಮಿ ೧-೨ ತಿಂಗಳಿಗೆ ಇಲ್ಲಿ ಶಿಕ್ಷಣ ದೊರೆತರೆ ಬಳ್ಳಾರಿ ಬಸಪ್ಪನ ಕರೆಯಬೇಕಾಗಿರುವುದಿಲ್ಲ. ದೇವರ ಚಿತ್ತ’ ಎಂದು ಸ್ವಾಮಿಗಳು ೨೦ ಎಪ್ರಿಲ್‌ ೧೯೦೪ರ ದಿನಚರಿಯಲ್ಲಿ ಬರೆದಿದ್ದಾರೆ. ನಾಟಕಗಳ ತಾಲೀಮು ಸಂಗೀತ ಸಾಧನೆಯಿಂದ ರಾಚಯ್ಯಸ್ವಾಮಿ ರಾಜಾ ಪಾತ್ರಗಳಿಗೆ ಜೀವ ತುಂಬುವ ನಟರಾಗಿ ಬೆಳೆದರು. ಶನಿಪ್ರಭಾವದಲ್ಲಿಯ ಇವರ ರಾಜಾ ವಿಕ್ರಮನ ಪಾತ್ರವು ಬಹು ಜನಪ್ರಿಯವೆನಿಸಿತ್ತು. ಶನಿಯ ಕಾಡಾಟಕ್ಕೆ ಸಿಕ್ಕು ಕಾಡು ಪಾಲಾಗುವ ಮತ್ತು ದೀನನಾಗಿ ತೊಳಲಾಡುವ ವಿಕ್ರಮರಾಜನ ಪಾತ್ರದಲ್ಲಿ ರಾಚಯ್ಯಸ್ವಾಮಿ ತೋರುತ್ತಿದ್ದ ಅಭಿನಯ ಮನಕರಗಿಸುವಂತಹದೆಂದು ಪ್ರಶಂಸೆಗೆ ಪಾತ್ರವಾಗಿತ್ತು. ಅರಮನೆಯಲ್ಲಿ ರಾಜನಾಗಿದ್ದವನು. ಕ್ಷಣಾರ್ಧದಲ್ಲಿ ಕಾಡಿನಲ್ಲಿ ದೀನನಾಗಿ ನಿಲ್ಲುವ ಸನ್ನಿವೇಶಕ್ಕೆ ತಕ್ಕಂತೆ ಮೇಕಪ್ ಮಾಡಿಕೊಂಡು ಬಂದು ನಿಲ್ಲುವ ಕೌಶಲ್ಯ ಪ್ರೇಕ್ಷಕರಿಗೆ ಸೋಜಿಗವೆನಿಸುತ್ತಿತ್ತು.

ಮ್ಯಾನೇಜರ ಗುರುಸಿದ್ಧಯ್ಯನವರಿಗೆ ಸಹಾಯಕರಾಗಿ ಅವರಿಲ್ಲದಾಗ ಮ್ಯಾನೇಜರ ಆಗಿಯೂ ಇವರು ಕಂಪನಿ ನೋಡಿಕೊಳ್ಳುತ್ತಿದ್ದರು. ಶಿವಮೂರ್ತಿಸ್ವಾಮಿಗಳ ಪ್ರೀತಿ ಅಭಿಮಾನಕ್ಕೆ ಪಾತ್ರರಾಗಿದ್ದರು. ಕಂಪನಿ ನಿಲ್ಲುವುದಕ್ಕಿಂತ ಎರಡು ದಿನ ಮೊದಲು ಶನಿಪ್ರಭಾವ ನಾಟಕವನ್ನಿಟ್ಟುಕೊಂಡು, ಅದರಲ್ಲಿಯ ರಾಜಾ ಪಾತ್ರಧಾರಿ ರಾಚಯ್ಯನವರಿಗೆ ಬೆಳಗಾವಿ ನಾಗರಿಕರ ಪರವಾಗಿ ಸತ್ಕರಿಸುವ ಕಾರ್ಯಕ್ರಮವನ್ನು ಸ್ವಾಮಿಗಳು ಹಮ್ಮಿಕೊಂಡರು. ಆಗ ಗಣ್ಯನಾಗರಿಕ ಕೆ.ಬಿ. ಅದ್ರೀಶರ ಅವರ ಹಸ್ತದಿಂದ ‘ಭಾರತಗಂಧರ್ವ’ ಬಿರುದನ್ನು, ಬಂಗಾರದ ಪದಕವನ್ನು ಕೊಟ್ಟು ಗೌರವಿಸಿದರು. ಈ ಮಹಾನ್‌ ನಟ ಕಂಪನಿ ನಿಂತ ಮೇಲೆ ಬೆಳವಿಗೆ ಹೋಗಿ ನೆಲೆಸಿದರು.

ಗುಳೇದಗುಡ್ಡ ಗುರುಲಿಂಗಪ್ಪ

ಇವರು ಕಂಪನಿಗೆ ವರವಾಗಿದ್ದ ನಟರೂ ಹೌದು. ಶಾಪವಾಗಿದ್ದ ನಟರೂ ಹೌದು. ಈ ಮಾತಿಗೆ ಶಿವಮೂರ್ತಿಸ್ವಾಮಿಗಳ ದಿನಚರಿ ಪುಟಗಳೇ ಸಾಕ್ಷಿ. ಗುಳೇದಗುಡ್ಡದ ಬಹಳಷ್ಟು ಜನ ಕಲಾವಿದರನ್ನು ಕೊಣ್ಣೂರ ಕಂಪನಿಗೆ ಕರೆದುಕೊಂಡು ಬಂದವರು ಇವರೇ. ಖ್ಯಾತ ನಟಿ ಎಲ್ಲವ್ವನನ್ನು ಈ ಕಂಪನಿಗೆ ಪರಿಚಯಿಸಿದ ಶ್ರೇಯಸ್ಸು ಇವರದೇ. ಇವರ ದೊಡ್ಡ ದೌರ್ಬಲ್ಯವೆಂದರೆ ಮೇಲಿಂದ ಮೇಲೆ ಕಂಪನಿ ಬಿಟ್ಟು ಹೋಗಿ ಕಂಪನಿಯ ಭವಿಷ್ಯದೊಂದಿಗೆ ಆಟವಾಡುತ್ತಿದ್ದರು. ಈ ಗುಣದಿಂದಾಗಿ ಸ್ವಾಮಿಗಳಿಂದ ಶಿಕ್ಷೆಗೆ ಗುರಿಯಾಗುತ್ತಿದ್ದರೂ ಪಶ್ಚಾತ್ತಾಪಪಟ್ಟು ಮತ್ತೆ ಕಂಪನಿಯ ಬಾಗಿಲು ತಟ್ಟುತ್ತಿದ್ದರು. ದೌರ್ಬಲ್ಯಗಳೇನೇ ಇರಲಿ ಅಭಿನಯ ಮತ್ತು ಹಾಡುಗಾರಿಕೆಯಿಂದ ಯಾವುದೇ ಪಾತ್ರಗಳನ್ನು ಹೌದೆನ್ನುವಂತೆ ನಿರ್ವಹಿಸುವವರಾಗಿದ್ದರು. ಹರಿಶ್ಚಂದ್ರ, ಶನಿ ಪ್ರಭಾವದಲ್ಲಿ ಭಟ್ಟ, ಬಸವೇಶ್ವರದಲ್ಲಿ ಗೋವಿಂದರಾವ್‌ ಪಾತ್ರಗಳಿಂದ ಪ್ರಸಿದ್ಧಿ ಪಡೆದಿದ್ದರು.

ಕೊಣ್ಣೂರ ಕಂಪನಿಗಿಂತ ಮೊದಲು ಗುರುಲಿಂಗಪ್ಪ ಗೊಂಬಿ ಹುಲ್ಲೂರ ಪರಪ್ಪನವರ ಕಂಪನಿಯಲ್ಲಿದ್ದರು. ಅಲತನೂರಿನ ದಾಸ ಮನೆತನದ ಎಲ್ಲವ್ವನನ್ನು ಹನ್ನೆರಡನೆಯ ವಯಸ್ಸಿನಲ್ಲಿ ನಾಟಕ ಕಂಪನಿಗೆ ಪರಿಚಯಿಸಿ ರಂಗಭೂಮಿಯ ಸಂಸ್ಕಾರ ಕೊಟ್ಟರು. ಇವರ ನಟನೆಯನ್ನು ನೋಡಿ ಮೆಚ್ಚಿದ ಶಿವಮೂರ್ತಿಸ್ವಾಮಿಗಳು ತಮ್ಮ ಕಂಪನಿಗೆ ಆಮಂತ್ರಿಸಿದರು. ೨೮-೫-೧೯೦೩ ರ ದಿನಚರಿಯಲ್ಲಿ ‘ಗುರುಲಿಂಗಪ್ಪ ಗೊಂಬಿ ಇವನಿಗೆ ೨ ಉಂಗುರ ತಂದು, ಧೋತರ ಕೂಡ ಕೊಟ್ಟಿರುತ್ತೇನೆ’ ಎಂದು ಸ್ವಾಮಿಗಳು ಬರೆದಿದ್ದಾರೆ. ಗುರುಲಿಂಗಪ್ಪನ ಕಲೆಯ ಬಗ್ಗೆ ಸ್ವಾಮಿಗಳಿಗೆ ಅಭಿಮಾನವಿದ್ದರೂ ಅವನ ಚಂಚಲಸ್ವಭಾವ, ಸಂಬಳದ ಬಗೆಗಿನ ತಕರಾರುಗಳಿಂದ ಬೇಸರಪಟ್ಟು ಅವನನ್ನು ಕಂಪನಿಗೆ ಸೇರಿಸಿಕೊಳ್ಳಬಾರದೆಂದು ತೀರ್ಮಾನಿಸುತ್ತಿದ್ದರು. ಆದರೆ ಪಶ್ಚಾತ್ತಾಪದ ದೀನಮುಖ ಹೊತ್ತು ಎದುರು ನಿಂತಾಗ ಮತ್ತೆ ಅವಕಾಶ ಕೊಡುತ್ತಿದ್ದರು.

ಕೊಣ್ಣೂರ ಕಂಪನಿ ನಿಂತ ಬಳಿಕ ವಾಮನರಾಯರ ‘ವಿಶ್ವಗುಣಾದರ್ಶ ಕಂಪನಿ’ ಸೇರಿದರು. ಭಕ್ತ ಪುಂಡಲೀಕದಲ್ಲಿ ಗುರುಲಿಂಗಪ್ಪ, ಎಲ್ಲೂಬಾಯಿ ತಂದೆ ತಾಯಿಯಾಗಿ ಅಭಿನಯಿಸುತ್ತಿದ್ದರು. ಸಂದೇಹ ಸಾಮ್ರಾಜ್ಯದಲ್ಲಿಯ ಗುರುಲಿಂಗಪ್ಪನ ವಿಜಯರಾಯನ ಪಾತ್ರ ನೋಡಿಯೇ ಅಭಿನಯ ಕಲಿಯಬೇಕೆಂಬುದು ಬಸವರಾಜ ಮನಸೂರರ ಅಭಿಪ್ರಾಯ. ಸಾಕುಮಗಳು ಗಾನರತ್ನ ಗಂಗೂಬಾಯಿ ಸ್ವಂತ ಕಂಪನಿ ಕಟ್ಟಲು ನೆರವಾದ ಈ ದಂಪತಿಗಳು ವಯಸ್ಸಿಗೆ ತಕ್ಕ ಪಾತ್ರಗಳನ್ನು ಮಾಡುತ್ತ ಜೀವನದುದ್ದಕ್ಕೂ ರಂಗಕಲೆಯನ್ನೇ ಆಶ್ರಯಿಸಿದ್ದರು.

ಗೋವಿಂದಪ್ಪ ದಾಬಡೆ

ಇವರು ಹುಬ್ಬಳ್ಳಿಯವರೆಂದು ತಿಳಿಯುವುದು. ಕಂಪನಿ ಬೈಲಹೊಂಗಲದಲ್ಲಿದ್ದಾಗ ಕಂಪನಿ ಸೇರಿದರು. ದೇಹಸಿರಿ, ಕಂಠಸಿರಿಗಳೆರಡರಿಂದಲೂ ಪ್ರೇಕ್ಷಕರನ್ನು ಆಕರ್ಷಿಸುವ ನಟರೆನಿಸಿದ್ದರು. ಇವರು ದೈತ್ಯಪಾತ್ರಗಳಿಂದ ರಾಜಾಪಾತ್ರಗಳವರೆಗೆ ಬೆಳೆದದ್ದು ಈ ಕಂಪನಿಯಲ್ಲಿಯೇ. ಕೀಚಕವಧೆಯಲ್ಲಿ ಕೀಚಕ, ಹರಿಶ್ಚಂದ್ರದಲ್ಲಿ ವಿಶ್ವಾಮಿತ್ರ ಪಾತ್ರಗಳನ್ನು ಪರಿಣಾಮಕಾರಿಯಾಗಿ ಅಭಿನಯಿಸುತ್ತಿದ್ದರಂತೆ. ಕೊಣ್ಣೂರ ಕಂಪನಿಯ ಮತ್ತೊಬ್ಬ ಕಲಾವಿದ ನಿಂಗಪ್ಪ ಸುಣಗಾರರ ನೆನಪಿನ ಚಿತ್ರವೊಂದು ಹೀಗಿದೆ: ಕೀಚಕನ ಪಾತ್ರದಲ್ಲಿ ಗೋವಿಂದಪ್ಪ ಇವರ ಅಭಿನಯವನ್ನು ‘ಮೊರೆಯ ಲಾಲಿಸಿ’ ಎಂಬ ಪದವನ್ನಾಗಲಿ ‘ಕೆಡಬೇಡ ಮೂಢ ಕೊಡು ಮಧುವ’ ಎಂಬ ಪದವನ್ನಾಗಲೀ ಹೇಳುತ್ತ ಸೈರಂಧ್ರಿಯ ಪಾತ್ರದಲ್ಲಿ ಜನರನ್ನು ಸೆರೆಹಿಡಿದ ಎಲ್ಲವ್ವ ಅವರ ಅಭಿನಯವನ್ನು. ಗಂಗಾಧರಪ್ಪ ಸ್ತ್ರೀಪಾತ್ರದಲ್ಲಿ ‘ಬರಲಾರೆನೆ ಸಖಿ’ ಎಂಬ ಮುಲ್ತಾನಿ ರಾಗದ ಗೀತೆ ಹೇಳುತ್ತ ತೋರಿಸಿದ ವಿರಹಾಭಿನಯಗಳನ್ನು ಬಲು ರಂಜಕವಾಗಿ ನಿರೂಪಿಸುತ್ತಿದ್ದರು. ಕಲಕೇರಿ ಈರಪ್ಪ ಎಂಬ ಕಲಾವಿದರು ಶನಿಯ ಪಾತ್ರದಲ್ಲಿ ಖ್ಯಾತಿ ಪಡೆದಿದ್ದರು ಇವರು ಹಾಡುತ್ತಿದ್ದ ‘ಹಿಡಿ ಮೂಢ ಘನಶಾಪವ, ಕೂಡಿದ ಸಭೆಯೊಳಗೆ ಮಾಡಿದವಮಾನವನು’ ಒನ್ಸಮೋರ್ ಹಾಡಾಗಿತ್ತು.

ಶನಿಪ್ರಭಾವದಲ್ಲಿ ಅರಸ, ಬಸವೇಶ್ವರಲ್ಲಿ ಮಾದರಸ, ದುರಾತ್ಮರಾವಣದಲ್ಲಿ ರಾವಣ ಪಾತ್ರಗಳು ಗೋವಿಂದಪ್ಪನವರಿಗೆ ಕೀರ್ತಿ ತಂದಿದ್ದವು. ಗುಳೇದಗುಡ್ಡದ ಹನುಮಂತವ್ವ ಕಂಪನಿ ಸೇರಿದಮೇಲೆ ಇವರ ಜೋಡಿ ಜನಪ್ರಿಯವಾಯಿತು. ಗುರುಲಿಂಗಪ್ಪ-ಎಲ್ಲವ್ವ ಆಗಾಗ ಕಂಪನಿ ಬಿಟ್ಟು ಹೋದಾಗ ಅವರ ಪಾತ್ರಗಳನ್ನು ಇವರು ತುಂಬಿಕೊಡುತ್ತಿದ್ದರು.

ಚಿಕ್ಕೋಡಿ ಶಿವಲಿಂಗಯ್ಯ

ಕಿತ್ತೂರ ಚೆನ್ನಮ್ಮ ನಾಟಕದಿಂದ ಕ್ರಾಂತಿಕಾರಿ ನಾಟಕಕಾರರೆಂದು ಖ್ಯಾತರಾದವರು ಚಿಕ್ಕೋಡಿ ಶಿವಲಿಂಗಸ್ವಾಮಿಗಳು. ಹೆಚ್ಚಾಗಿ ನಾಟಕಕಾರರೆಂದೇ ಹೆಸರಾದ ಇವರು ಪ್ರತಿಭಾವಂತ ನಟರಾಗಿದ್ದರೆಂಬುದು ಕೊಣ್ಣೂರ ಕಂಪನಿಯ ಇತಿಹಾಸದಿಂದ ಗೊತ್ತಾಗುತ್ತದೆ. ೬-೨-೧೯೦೭ ರ ಶಿವಮೂರ್ತಿಸ್ವಾಮಿಗಳ ದಿನಚರಿಯ ಬರಹವೊಂದು ಹೀಗಿದೆ : ‘ಕೀಚಕವಧೆ ನಾಟಕ ಮಂಗಳವಾರ ಸಂಕೇಶ್ವರದಲ್ಲಿ ಆಡಿದರು. ತುಕಾರಾಮ ಸೈರೇಂದ್ರಿ ಆಗಿ ಬಹಳ ಶಬಾಶಕಿ ತಗೊಂಡನಂತೆ. ಶುಕ್ರವಾರ ಹರಿಶ್ಚಂದ್ರ ಆಡುವರು. ಅದರಲ್ಲಿ ಶಿವಲಿಂಗ ಚಂದ್ರಮತಿಯಾಗುವನಂತೆ. ಧನ್ಯ ಆ ಹುಡುಗರು’ ಶಿವಲಿಂಗಯ್ಯ ರಾಣಿಪಾತ್ರಗಳನ್ನು ಅಭಿನಯಿಸುತ್ತಿದ್ದ ಕಾಲವದು. ಈ ಉಲ್ಲೇಖವನ್ನಾಧರಿಸಿದರೆ ಇವರು ೧೯೦೫ಕ್ಕಿಂತ ಮೊದಲೇ ಕೊಣ್ಣೂರ ಕಂಪನಿ ಪ್ರವೇಶಿಸಿರಬೇಕೆನಿಸುತ್ತದೆ.

ಶಿವಲಿಂಗಯ್ಯ ಹುಟ್ಟಿದ್ದು ಚಿಕ್ಕೋಢಿಯಲ್ಲಿ; ಸು. ೧೮೮೦ರಲ್ಲಿ. ತಂದೆ ಗುರುವಯ್ಯ, ಹಿರೇಸಾವಳಗಿ ಪವಾಡಪುರುಷ ಶಿವಲಿಂಗೇಶ್ವರರ ವಂಶದವರು. ಸಾವಳಗಿಯಿಂದ ಚಿಕ್ಕೋಡಿಗೆ ಬಂದು ಮಠವನ್ನು ಸ್ಥಾಪಿಸಿದ್ದರು. ಸದ್ಗುರು ಬಾಬಾಮಹಾರಜರು ನಡೆಸುತ್ತಿದ್ದ ಅಧ್ಯಾತ್ಮಗೋಷ್ಠಿಗಳಲ್ಲಿ ಇವರು ಪಾಲ್ಗೊಳ್ಳುತ್ತಿದ್ದರೆಂದು ಬಾಬಾಮಹಾರಾಜರ ಚರಿತಾಮೃತದಿಂದ ಗೊತ್ತಾಗುವುದು. ಇವರಿಗೆ ಸಾವಳಿಗಯ್ಯ, ಶಿವಲಿಂಗಯ್ಯ, ಚೆನ್ನಯ್ಯ ಎಂಬ ಮೂವರು ಪುತ್ರರು. ಗದಿಗವ್ವ ಎಂಬ ಪುತ್ರಿ ಇದ್ದರು. ಶಿವಲಿಂಗಯ್ಯ ಏಳನೆಯ ಇಯತ್ತೆವರೆಗೆ ಓದಿ ಶಿಕ್ಷಕರಾದರು. ನಾಟಕ ಪ್ರವೃತ್ತಿಯ ಸೆಳೆತ ಹೆಚ್ಚಾಗಲು ಶಿಕ್ಷಕ ವೃತ್ತಿ ಕೈಬಿಟ್ಟು ಕೊಣ್ಣೂರ ಕಂಪನಿ ಸೇರಿದರು. ಮೊದಮೊದಲು ಸ್ತ್ರೀ ಪಾತ್ರಗಳಲ್ಲಿ ಜನರನ್ನು ರಂಜಿಸಿ ಆಮೇಲೆ ನಾಯಕ, ಹಾಸ್ಯಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡರು. ಕೊಣ್ಣೂರ ಕಂಪನಿಯಲ್ಲಿದ್ದಾಗಲೇ ಮಹಾನಂದಾ, ಪದ್ಮಾವತಿ ನಾಟಕಗಳನ್ನು ಬರೆದರೆಂದು, ಮನೋವಿಜಯ ದೊಡ್ಡಾಟವನ್ನು ನಾಟಕವನ್ನಾಗಿ ರೂಪಿಸಿದರೆಂದು ಗೊತ್ತಾಗುವುದು.

ಕೊಣ್ಣೂರ ಕಂಪನಿಯಿಂದ ಹೊರಬಂದ ಬಳಿಕ ಸ್ವಾಮಿಗಳು ವಿಶೇಷವಾಗಿ ನಾಟಕಕಾರರಾಗಿಯೇ ಬೆಳೆದರು. ೧೯೨೧ರಲ್ಲಿ ಶಿವಲಿಂಗೇಶ್ವರ ನಾಟ್ಯಸಂಘವನ್ನು ಆರಂಭಿಸಿದರು. ವ್ಯವಹಾರ ಕೌಶಲ್ಯದ ಕೊರತೆಯಿಂದ ಸಂಘ ಬಹಳ ದಿನ ನಡೆಯಲಿಲ್ಲ ಇದಾದ ಬಳಿಕ ಹಲವು ಬಾರಿ ನಾಟ್ಯಸಂಘ ಕಟ್ಟಿ ನಡೆಸಿದರೂ ಆರ್ಥಿಕ ಮುಗ್ಗಟ್ಟಿನಿಂದ ಅವು ಅಲ್ಪಾಯಿಷಿಗಳಾಗಿ ಮುಚ್ಚಿದವು. ಸ್ವಾಮಿಗಳು ನಾಟಕ ಕಂಪನಿ ಮಾಲಿಕರಾಗಿ ಯಶಸ್ವಿಯಾಗಲಿಲ್ಲ ನಾಟಕಕಾರಗಾಗಿ ಯಶಸ್ವಿಯಾದರು. ಇವರು ಬರೆದ ನಾಟಕಗಳು ಅಂದಿನ ರಂಗಭೂಮಿಗೆ ಹೊಸ ಚೈತನ್ಯ ತಂದವು. ಕಿತ್ತೂರ ಚೆನ್ನಮ್ಮ ನಾಟಕದಿಂದ ಅಬ್ಬಿಗೇರಿ ಬಸವನಗೌಡರ ಕಂಪನಿಗೆ ಹಣದ ಹೊಳೆಯೇ ಹರಿದು ಬಂತು. ಗಳಿಕೆಯಲ್ಲಿ ಮಾತ್ರವಲ್ಲ ಪ್ರೇಕ್ಷಕರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಮಾಡುತ್ತಿದ್ದುದು ಸ್ವಾಮಿಗಳ ನಾಟಕಗಳ ವೈಶಿಷ್ಟ್ಯವಾಗಿತ್ತು. ರಾಷ್ಟ್ರೀಯ ಚಳುವಳಿಯ ಸಂದರ್ಭದಲ್ಲಿ ಮೂಡಿ ಬಂದ ‘ಅಸ್ಪೃಶ್ಯತಾ ನಿವಾರಣೆ’ ನಾಟಕ ನೋಡಿದ ಪ್ರೇಕ್ಷಕರು ವಿದೇಶಿ ಬಟ್ಟೆಗಳನ್ನು ಸುಟ್ಟು ಹಾಕಿ, ಊರ ದಾರಿಯಲ್ಲಿಯ ಸಿಂದಿಗಿಡಗಳನ್ನು ಕಡಿದು ಚೆಲ್ಲುತ್ತಿದ್ದರಂತೆ ‘ಕಿತ್ತೂರ ಚೆನ್ನಮ್ಮ’ ನಾಟಕದಲ್ಲಿಯ ಚೆನ್ನಮ್ಮ – ‘ನನ್ನಂಥ ಬಳೆ ತೊಟ್ಟ ಅಬಲೆ ಕೈಯಲ್ಲಿ ಖಡ್ಗ ಹಿಡಿದು ಹೋರಾಡುವಾಗತ ಗಂಡಸರೆಂಧು ಮೀಸೆ ಹೊತ್ತವರು ಸುಮ್ಮನೆ ಕೂಡುವುದು ನಾಚಿಕೆಗೇಡಿತನ’ ಎಂದು ವೀರಾವೇಶದಿಂದ ಹೇಳುವ ಮಾತು ಅಂದಿನ ಗಾಂಧೀಜಿಯವರ ಸತ್ಯಾಗ್ರಹಕ್ಕೆ ಅವ್ಹಾನವಾಗಿ ಪ್ರೇಕ್ಷಕರಿಗೆ ಕೇಳಿಸುತ್ತಿತ್ತು. ಈ ನಾಟಕ ನೋಡಿದ ಬೈಲಹೊಂಗಲ ತಾಲೂಕಿನ ನಾಗನೂರ ಗ್ರಾಮದ ರಾಚನಾಯ್ಯರ್ ಮನೆತನದ ಓರ್ವ ಮಹಿಳೆ ಕಲೆಕ್ಟರನಿಗೆ ಕೆರವಿನಿಂದ (ಚಪ್ಪಲಿ) ಹೊಡೆದಳೆಂಬುದು ಜನ ಇನ್ನೂ ಸ್ಮರಿಸುತ್ತಾರೆ.

ರಾಣಿ ರುದ್ರಮ್ಮ, ಕೆಳದಿ ಚೆನ್ನಮ್ಮಾಜಿ, ಪುರಂದರದಾಸ, ಪವಿತ್ರ ಖಾದಿ, ರಾಷ್ಟ್ರಧ್ವಜ, ದಕ್ಷಯಜ್ಞ, ಸಿರಿಪ್ರಭಾವ, ಗಜಾನನ ಜನ್ಮ, ವಿಷ್ಣು ಸುದರ್ಶನ ಲಾಭ, ಚಂದ್ರಗ್ರಹಣ, ಆಜನ್ಮಕುಮಾರಿ, ಒಂದೇ ಖಡ್ಗ, ಹ್ಯಾಮ್ಲೆಟ್‌ ಮುಂತಾದ ನಾಟಕಗಳನ್ನು ಸ್ವಾಮಿಗಳು ಬರೆದಿದ್ದು ಬೇರೆ ಬೇರೆ ನಾಟಕ ಕಂಪನಿಗಳಿಂದ ಅವು ಪ್ರದರ್ಶನಗೊಂಡಿವೆ. ನಾಟಕ ರಚನೆ, ನಟನೆ, ನಿರ್ದೇಶನ ಗುಣಗಳನ್ನು ಸಮನ್ವಯಿಸಿಕೊಂಡ ಸವ್ಯಸಾಚಿ ಕಲಾವಿದರಾಗಿದ್ದ ಶಿವಲಿಂಗಸ್ವಾಮಿಗಳು ವಚನಗಳನ್ನು ಬರೆದಿದ್ದಾರೆ. ಇಂಥ ಬಹುಮುಖ ವ್ಯಕ್ತಿತ್ವದ ಶಿವಲಿಂಗಸ್ವಾಮಿಗಳು ಏಣಗಿ ಬಾಳಪ್ಪ, ಸೂಡಿ ಹುಚ್ಚಪ್ಪನಂಥ ಹಲವಾರು ನಟರನ್ನು ಕನ್ನಡ ರಂಗಭೂಮಿಗೆ ಕೊಟ್ಟಿದ್ದು ಮರೆಯಲಾಗದು. ರಂಗಭೂಮಿಗಾಗಿಯೇ ಬದುಕಿದಂಥ ಸ್ವಾಮಿಗಳು ವೃದ್ಧಾಪ್ಯದಲ್ಲಿ ತೊಂದರೆಗಳನ್ನು ಅನುಭವಿಸುತ್ತ ೧೯೫೦ರ ಸುಮಾರು ಗೋಕಾಕದಲ್ಲಿ ಕಾಲವಶರಾದರು.

ಪರಪ್ಪ ಪಾಟೀಲ

ಬೆಳಗಾವಿ ಜಿಲ್ಲೆಯ ಬೈಲಹೊಂಗಲದಿಂದ ೪ ಮೈಲು ಅಂತರದಲ್ಲಿರುವ ಮೂಗಬಸವ ಪರಪ್ಪನವರ ಊರು. ಹುಟ್ಟಿದ್ದು ೧೯.೦೯.೧೯೦೦ ರಲ್ಲಿ. ಓದಿದ್ದು ಬೆಳವಡಿಯ ಶಾಲೆಯಲ್ಲಿ, ೭ನೆಯ ತರಗತಿವರೆಗೆ. ಶಾಲೆಯಲ್ಲಿದ್ದಾಗ ಇವರ ಹಾಡುಗಾರಿಕೆ ಮೆಚ್ಚಿಕೊಂಡವರು ಅಂಗಡಿ ಬಸಪ್ಪ ಮಾಸ್ತರ. ಹಾಡುಗಾರಿಕೆಯಲ್ಲಿ ಆಸಕ್ತಿಯಿದ್ದ ಹುಡುಗನನ್ನು ಬಯಲಾಟಕ್ಕೆ ಕರೆತಂದು ಬಣ್ಣ ಹಚ್ಚಿದವರು ಅವರೇ. ಬಬ್ರುವಾಹನದಲ್ಲಿಯ ಕನಕಾಂಗಿ ಪಾತ್ರ ಮೂಲಕ ಪರಪ್ಪನ ರಂಗಭೂಮಿ ಪ್ರವೇಶವಾಯಿತು. ಮುಂದೆ ಸಂಗೀತ ಕಲಿಯಬೇಕೆಂದು ಪರಪ್ಪ ಅಣ್ಣ ಗೌಡಪ್ಪನನ್ನು ಕರೆದುಕೊಂಡು ಕೊಣ್ಣೂರ ಕಂಪನಿಗೆ ಬಂದದ್ದು ೧೯೧೬ರಲ್ಲಿ ಗೋಕಾಕ ತುಕಾರಮಪ್ಪ ಧ್ವನಿ ಪರೀಕ್ಷಿಸಿದರು. ಶಿವಮೂರ್ತಿಸ್ವಾಮಿಗಳು ಮೂರು ವರ್ಷ ಕಂಪನಿ ಬಿಟ್ಟು ಹೋಗಬಾರದೆಂದು ಕರಾರುಪತ್ರ ಬರೆಸಿಕೊಂಡರು. ಹೀಗೆ ಪರಪ್ಪನ ಸಂಗೀತ ಶಿಕ್ಷಣ ಪ್ರಾರಂಭವಾಯಿತು. ಇವರೊಂದಿಗೆ ಎಂಟು ಜನ ವಿದ್ಯಾರ್ಥಿಗಳಿದ್ದರು. ಇವರೆಲ್ಲ ನಾಂದಿ ಹಾಡುವುದಕ್ಕಾಗಿ ಬಣ್ಣ ಹಚ್ಚಿಕೊಂಡು ಆಮೇಲೆ ಬಣ್ಣ ತೆಗೆದು ನಾಟಕ ನೋಡುತ್ತಿದ್ದರು ಮುಂಜಾನೆ ಗುಣುಬುವಾ ಹೇಳಿಕೊಡುತ್ತಿದ್ದ ಸಂಗೀತಪಾಠದ ರಿಯಾಜ ನಡೆಯುತ್ತಿತ್ತು.

ಕೊಣ್ಣೂರ ಕಂಪನಿಯ ಸೊಲ್ಲಾಪುರ ಕ್ಯಾಂಪಿನಲ್ಲಿಯ (೧೯೧೮) ಪರಪ್ಪನಿಗೆ ರಾಣಿ ಪಾತ್ರದಲ್ಲಿ ಅಭಿನಯಿಸುವಂಥ ಪ್ರಸಂಗ ಎದುರಾಯಿತು. ರಾಣಿಪಾತ್ರದ ನಟಿ ಹಣಮಂತವ್ವ (ದುರಾತ್ಮ ರಾವಣದಲ್ಲಿ ಸೀತೆ) ಹೆಚ್ಚು ಸಂಬಳ ಕೇಳಿದಳು. ಮೇಲಿಂದ ಮೇಲೆ ಸಂಬಳದ ಸಲುವಾಗಿ ತಕರಾರು ತೆಗೆಯುತ್ತಿದ್ದ ಹಣಮಂತಿಯನ್ನು ಕಂಪನಿ ಬಿಡಿಸಬೇಕೆಂದು ಬಾಪಟ ಮ್ಯಾನೇಜರರಿಗೆ ಹೇಳಿದರು ಶಿವಮೂರ್ತಿಸ್ವಾಮಿಗಳು. ಹಣಮಂತಿ ಹೋದ ಮೇಲೆ ‘ಸೀತೆಯ ಪಾತ್ರ ಯಾರು ಮಾಡುವರು?’ ಎಂಬ ಪ್ರಶ್ನೆ ಎದ್ದಾಗ ಗೋಕಾಕ ತುಕಾರಾಮಪ್ಪನವರು ಪರಪ್ಪನ ಹೆಸರು ಸೂಚಿಸಿದರು. ತಾಲೀಮಿನಲ್ಲಿ ಪರಪ್ಪನ ಸೀತೆಯ ಪಾತ್ರವನ್ನು ನೋಡಿ ಸ್ವಾಮಿಗಳು ಖುಷಿಪಟ್ಟರು. ಅಲ್ಲದೆ ಹಣಮಂತಿಗೆ ಕೊಡುತ್ತಿದ್ದ ೫೦ ರೂಪಾಯಿ ಸಂಬಳವನ್ನು ಕೊಡುವುದಾಗಿ ಹೇಳಿದರು.

ಮುರಗೋಡ ಗಂಗಾಧರಪ್ಪನವರ ಜೊತೆಯಲ್ಲಿ ಸೀತೆಯಾಗಿ ಅಭಿನಯಿಸಿದ, ಹಾಡಿದ ಪರಪ್ಪ ಪ್ರೇಕ್ಷಕರಿಂದ ಸಹನಟರಿಂದ ಮೆಚ್ಚುಗೆ ಗಳಿಸಿದರು. ಮಹಾನಂದಾ, ಪದ್ಮಾವತಿ, ಶನಿಪ್ರಭಾವ, ಬಸವೇಶ್ವರ, ಮೃಚ್ಛಕಟಿಕ, ನಾಟಕಗಳಲ್ಲಿಯೂ ಪರಪ್ಪ ಮುಖ್ಯ ಸ್ತ್ರೀಭೂಮಿಕೆಗಳನ್ನು ನಿರ್ವಹಿಸಿದರು. ಕಂಪನಿ ನಿಂತ ಮೇಲೆ ಚಿಕ್ಕೋಡಿ ಶಿವಲಿಂಗಸ್ವಾಮಿಗಳ ಕಂಪನಿ, ಮಂಗಳೂರಿನ ‘ಮನಮೋಹನ ಸಂಗೀತ ನಾಟಕ ಮಂಡಳಿ’ಯಲ್ಲಿ ಕೆಲ ಕಾಲ ಅಭಿನಯಿಸಿದರು. ಅಲ್ಲಿಂದ ಸಂಗೀತದಲ್ಲಿಯ ಸಾಧನೆ ಸಾಲದೆಂದು ಗದುಗಿನ ಪಂಚಾಕ್ಷರಿ ಗವಾಯಿಗಳ ಆಶ್ರಮಕ್ಕೆ ಹೋದರು. ಗವಾಯಿಗಳು ಶುದ್ಧ ಶಾಸ್ತ್ರೀಯ ಸಂಗೀತ ಕಲಿಸುವಾಗ ‘ನಾನು ಶಾಸ್ತ್ರೀಯ ಸಂಗೀತ ಕಲಿಯಲು ಬಂದಿಲ್ಲ, ನಾಟಕಕ್ಕೆ ಬೇಕಾದ ಸಂಗೀತವನ್ನು ಕಲಿಸಿರಿ’ ಎಂದರು. ಆಗ ಅವರು ಬಾಲಗಂಧರ್ವರ ಮರಾಠಿ ಹಾಡುಗಳ ಪ್ಲೆ ರಿಕಾರ್ಡ್‌ಪ್ಲೇಟ್‌ ಹಾಕಿ ಕೇಳಲು ಅವಕಾಶ ಕಲ್ಪಿಸಿದರು. ಬಾಲಗಂಧರ್ವರು ಹುಬ್ಬಳ್ಳಿ ಕ್ಯಾಂಪ್‌ ಮಾಡಿದಾಗ ಗವಾಯಿಗಳ ಭೆಟ್ಟಿಗೆ ಬರುತ್ತಿದ್ದುದು ರೂಢಿ. ಒಮ್ಮೆ ಗವಾಯಿಗಳು ಪರಪ್ಪನನ್ನು ಅವರಿಗೆ ಪರಿಚಯಿಸಿದರು. ಆ ಕಾಲದಲ್ಲಿ ವೃತ್ತಿರಂಗಭೂಮಿಯ ಬಹುತೇಕ ಗಾಯಕ ನಟರು ಬಾಲಗಂಧರ್ವರನ್ನು ಅನುಸರಿಸುತ್ತಿದ್ದರು. ಪರಪ್ಪನವರಿಗೆ ಗಂಧರ್ವರ ನೇರ ಪರಿಚಯವಾದದ್ದು ಅನುಕೂಲವೇ ಆಯಿತು. ಈ ಹಂತದಲ್ಲಿ ಅವರು ಬಾಲಗಂಧರ್ವ ಮತ್ತು ಹೀರಾಬಾಯಿ ಅವರ ಹಾಡುಗಾರಿಕೆಯ ಹಾದಿಯಲ್ಲಿಯೇ ಕೆಲ ಕಾಲ ಸಾಧನೆ ಮಾಡಿದರು. ಹೀರಾಬಾಯಿ ಕರಿ ನಾಲ್ಕರ ಪಟ್ಟಿಯಲ್ಲಿ ಸಹಜವಾಗಿ ಹಾಡುವುದನ್ನು ಸಾಧಿಸಿದರು. ಗವಾಯಿಗಳ ಹತ್ತಿರ ೫ ವರ್ಷ ಇದ್ದು ಅವರ ಮಾರ್ಗದರ್ಶನದಂತೆ ಗರುಡರ ಕಂಪನಿಗೆ ಹೋದರು.

ಪರಪ್ಪನನ್ನು ನೋಡಿದ ಗರುಡರು ‘ತಲೆಗೂದಲು ಕತ್ತಿರಿಸಿದ್ದೀರಿ, ಇನ್ನೊಂದು ವರುಷ ಪಾತ್ರ ಮಾಡುವಂತಿಲ್ಲ. ನೀನಾಗಿ ಕಂಪನಿ ಬಿಟ್ಟು ಹೋಗುವುದಾದರೆ ೩೦ ರೂಪಾಯಿ, ನಾನಾಗಿ ಕಳಿಸುವುದಾದರೆ ೫೦ ರೂಪಾಯಿ ಕೊಡಬೇಕೆಂದಿರುವೆ’ ಎಂದರು. ಗರುಡರು ಒಮ್ಮೆ ಆಡಿದ ಮಾತು ಹಿಂದಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ ಪರಪ್ಪ ಒಪ್ಪಿದರು. ಅಲ್ಲಿ ಒಂದು ವರ್ಷ ಇದ್ದು ‘ಶೃಂಗೇರಿ ನಾಟಕ ಕಂಪನಿ’ ಸೇರಿದರು. ಅಲ್ಲಿಂದ ನಟಭಯಂಕರ ಎಂ.ಎನ್‌ ಗಂಗಾಧರರಾಯರ ಕಂಪನಿಯಲ್ಲಿ ಕೆಲ ಕಾಲವಿದ್ದು ಎಂ.ಪೀರರ ‘ಚಂದ್ರಕಲಾ ನಾಟಕ ಮಂಡಳಿ’ಗೆ ಹೋದರು. ಎಚ್‌.ಎಲ್‌.ಎನ್‌. ಸಿಂಹ, ಬಿ.ಆರ್. ಪಂತಲು ಮುಂತಾದವರ ಸಹಯೋಗದಲ್ಲಿ ಅಭಿನಯಿಸಿದರು. ಸಿಂಹ ಅವರ ‘ಸಂಸಾರನೌಕೆ’ ನಾಟಕದ ಸುಶೀಲಾನ ಪಾತ್ರವು ಪರಪ್ಪನವರಿಗೆ ಅಪಾರ ಕೀರ್ತಿ ತಂದು ಕೊಟ್ಟಿತು.

ರಂಗಗೀತೆಗಳ ಹಾಡುಗಾರಿಕೆಯಲ್ಲಿ ಪ್ರೇಕ್ಷಕರನ್ನು ಮುಗ್ಧಗೊಳಿಸುವ ಶಕ್ತಿ ಪರಪ್ಪನವರಲ್ಲಿತ್ತು. ನಾಟಕ ಕಂಪನಿಯಿಂದ ನಿವೃತ್ತರಾದ ಮೇಲೆ ಬಿಜಾಪುರದ ದರ್ಬಾರ ಹೈಸ್ಕೂಲಿನಲ್ಲಿ ಸಂಗೀತ ಶಿಕ್ಷಕರಾದರು. ಹಳಕಟ್ಟಿಯವರ ಮಾರ್ಗದರ್ಶನದಲ್ಲಿ ಶಿವಶರಣರ ವಚನಗಳಿಗೆ ಸಂಗೀತ ಸಂಯೋಜಿಸಿ ಹಾಡಿದವರಲ್ಲಿ ಮೊದಲಿಗರಿವರು. ಇವರ ಸಾಧನೆಯನ್ನು ಗುರುತಿಸಿದ ಕರ್ನಾಟಕ ಸರಕಾರ ೧೯೭೨ ರಲ್ಲಿ ಪ್ರಶಸ್ತಿಯನ್ನಿತ್ತು ಗೌರವಿಸಿತು. ಉತ್ತರ ಕರ್ನಾಟಕ, ಮಂಗಳೂರು ಸೀಮೆ, ಮೈಸೂರು ಸೀಮೆಯ ನಾಟಕ ಕಂಪನಿಗಳಲ್ಲಿ ನಟಿಸಿ ಹೆಸರು ಗಳಿಸಿದ ಈ ಕಲಾವಿದ ಕೊಣ್ಣೂರ ಕಂಪನಿಯ ಕೊಡುಗೆ ಎಂಬುದನ್ನು ಮರೆಯಲಾಗದು.

ತುಕಾರಾಮಪ್ಪ ಗೋಕಾಕ

ಕಾಕಾನ ಮಗ ಗ್ಯಾನೋಬಾನನ್ನು ಅನುಸರಿಸಿ ತುಕಾರಾಮಪ್ಪ ಹೊಸಮನಿ ಕೊಣ್ಣೂರ ಕಂಪನಿ ಸೇರಿದ. ೧೯೦೫ ಮಾರ್ಚ ೨೪ ರಂದು ತುಕಾರಾಮ ಕಲಿಯಲಿಕ್ಕೆಂದು ಕೊಣ್ಣೂರ ಕಂಪನಿಗೆ ಬಂದನೆಂದು, ‘ಕೀಚಕವಧೆ’ಯಲ್ಲಿ ರಂಭಾನ ಪಾತ್ರವಹಿಸಿ ವಯಸ್ಸಿಗೂ ಮೀರಿದ ಅಭಿನಯಕೌಶಲ್ಯ ತೋರಿದನೆಂದು ಶಿವಮೂರ್ತಿಸ್ವಾಮಿಗಳು ದಿನಚರಿಯಲ್ಲಿ ಬರೆದಿದ್ದಾರೆ. ತುಕಾರಾಮಪ್ಪ ಗಣುಬುವಾರಿಂದ ಸಂಗೀತ ಹೇಳಿಸಿಕೊಂಡು ಕಠಿಣ ಸಾಧನೆ ಮಾಡಿದರು. ಆರಂಭದಲ್ಲಿ ಸ್ತ್ರೀಪಾತ್ರಗಳನ್ನೇ ನಿರ್ವಹಿಸಿ, ಆಮೇಲೆ ಪುರುಷ ಪಾತ್ರಗಳಿಗೆ ಬಡ್ತಿಯಾದರು. ‘ಬಸವೇಶ್ವರ’ದಲ್ಲಿಯ ವಾರಣಾಸಾನಿ ಪಾತ್ರದಿಂದಲೂ ಜನಪ್ರಿಯರಾಗಿದ್ದರು. ಹಾಡುಗಾರಿಕೆಯೇ ಇವರ ಪಾತ್ರದ ಜೀವಾಳವಾಗಿದ್ದರೂ ಅಭಿನಯಕ್ಕೆ ಕೂಡ ಕೊರತೆ ಇರಲಿಲ್ಲ.

ಗಣುಬುವಾ ಕಂಪನಿ ಬಿಟ್ಟನಂತರ ಇವರೇ ನಾಟಕಗಳ ಸಂಗೀತ ನಿರ್ದೇಶಕರಾದರು. ಕಂಪನಿಯಲ್ಲಿದ್ದ ತರುಣರಿಗೆ ಸಂಗೀತ ಹೇಳಿಕೊಟ್ಟು ತುಕಾರಾಮಬುವಾ ಎನಿಸಿದರು. ಇವರ ಹಾಡುಗಾರಿಕೆ ಮೆಚ್ಚಿದ ಪ್ರೇಕ್ಷಕರು ‘ಗಾಯನ ಚತುರನೆಂದು ಗೌರವಿಸಿದ್ದಾರೆ. ಹದಿನಾಲ್ಕು ವರುಷ ಈ ಕಂಪನಿಯಲ್ಲಿ ಸೇವೆಗೈದು ಆನಂತರ ಶಿರಹಟ್ಟಿ ಕಂಪನಿ, ಗರುಡರ ಕಂಪನಿಯಲ್ಲಿ ಕೆಲ ಕಾಲ ಸೇವೆ ಸಲ್ಲಿಸಿದರು. ಇವರಿಗಾಗಿಯೇ ಗರುಡ ಸದಾಶಿವರಾಯರು ‘ಭಕ್ತಸುದಾಮ’ ಸಂಗೀತಪ್ರಧಾನ ನಾಟಕ ಬರೆದರಂತೆ. ಮಕ್ಕಳಾದ ಬಸವರಾಜ, ಭಗವಂತಪ್ಪ ರಂಗಕಲೆಯನ್ನೇ ನೆಚ್ಚಿಕೊಳ್ಳಲು ೧೯೩೩ರಲ್ಲಿ ‘ಶ್ರೀ ಶಾರದಾ ಸಂಗೀತ ನಾಟಕ ಮಂಡಳಿ’ ಹುಟ್ಟು ಹಾಕಿದರು. ಇವರ ನಿರ್ದೇಶನದ ಜಗತ್‌ ಚಿತ್ರ, ಸೋಹಂ, ರಾಜದ್ರೋಹ ನಾಟಕಗಳು ಕಂಪನಿಗೆ ಕೀರ್ತಿ-ಸಂಪತ್ತು ತಂದುಕೊಟ್ಟವು. ರಂಗದ ಮೇಲೆಯೇ ಜೀವವನ್ನು ಸವೆಸಿದ ತುಕಾರಾಮಪ್ಪ ೧೯೩೬ ಡಿಸೆಂಬರ್ ೧೦ ರಂದು ಬೆಲ್ಲದಬಾಗೇವಾಡಿ ಕ್ಯಾಂಪಿನಲ್ಲಿ ನಿಧನರಾದರು.

ಪೀತಾಂಬರಪ್ಪ ಡೋಂಗರೆ

ಗೋಕಾಕಿನ ಪೀತಾಂಬರಪ್ಪ ಡೋಂಗರೆಯವರ ಜೀವನ ಚರಿತ್ರೆ ವಿಸ್ಮಯದ ಕಥೆಯಾಗಿದೆ. ಕೊಣ್ಣೂರ ಕಂಪನಿಯಲ್ಲಿ ಪ್ರಸಿದ್ಧ ನಟನಾಗಿದ್ದವನು, ಮುಂದೆ ದಿಗಂಬರ ಜೈನಮುನಿಯಾಗಿ ಪರಿಣಮಿಸಿದ್ದುದು ಕುತೂಹಲಕರ. ಇವರು ತಾಯಿಯ ತವರೂರು ಐನಾಪುರದಲ್ಲಿ (ಅಥಣಿ ತಾಲೂಕು) ೧೮೮೬ ಮಾರ್ಚ ೧ ರಂದು ಹುಟ್ಟಿದರು.[1] ೯ನೆಯ ವಯಸ್ಸಿಯಲ್ಲಿ ತಾಯಿ-ತಂದೆಗಳನ್ನು ಕಳೆದುಕೊಂಡು ಅಜ್ಜಿ ಪದ್ಮಾವತಿಯ ಆಸರೆಯಲ್ಲಿ ಬೆಳೆದರು. ಶಾಲೆಯೊಳಗಿನ ವಿದ್ಯಾರ್ಥಿಜೀವನ ಹಿಡಿಸಲಿಲ್ಲ. ವ್ಯಾಪಾರದಂಧೆಯಾದರೂ ಕಲಿಯಲೆಂದು ಹಿರಿಯರು ಅಂಗಡಿ ತೆರೆದರು. ಅಲ್ಲಿಯೂ ಕೂಡಲಿಲ್ಲ. ಸುಳ್ಳು-ಕಳ್ಳತನಗಳಿಂದ ಅಂಗಡಿ ಬೇಗನೆ ದಿವಾಳಿಯಾಯಿತು. ಉಂಡು ತಿರುಗುವ ಈ ತರುಣನಿಗೆ ಕೊಣ್ಣೂರ ಕಂಪನಿಯಲ್ಲಿ ನಟನಾಗುವ ಅವಕಾಶ ಸಿಕ್ಕಿತು (೧೯೦೮). ಮಾತಿನಲ್ಲಿ ಚತುರನಾದ ಪೀತಾಂಬರಪ್ಪನ ಪ್ರತಿನಾಯಕ. ಹಾಸ್ಯಪಾತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದವು. ಶನಿಪ್ರಭಾವದಲ್ಲಿಯ ಗಾಣಿಗನ ಪಾತ್ರವಂತೂ ಅಪರೂಪದ ಕಲಾಕೃತಿಯೆನಿಸಿತು. ಖ್ಯಾತ ನಾಟಕಕಾರ ಶ್ರೀರಂಗರು ಗಾಣಿಗನ ಪಾತ್ರ ಮೆಚ್ಚಿಕೊಂಡು ಹೀಗೆ ಬರೆದಿದ್ದಾರೆ. “ಶನಿಪ್ರಭಾವದಂತೆ ಯಾವ ನಾಟಕವೂ ನನ್ನ ಮನಸ್ಸನ್ನು ಸೂರೆಗೊಳ್ಳಲಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಆ ನಾಟಕದಲ್ಲಿಯ ಗಾಣಿಗನ ಪಾತ್ರಧಾರಿ. ಅವನ ವೇಷ ನಡತೆ, ಮಾತುಗಾರಿಕೆ ಎಲ್ಲವೂ ಅತ್ಯಂತ ಸಹಜವಾಗಿ ನನ್ನನ್ನು ಹೊರ ಜಗತ್ತಿನಿಂದ ಮರೆಯಿಸಿಬಿಡುತ್ತಿದ್ದವು. ಮಿಕ್ಕೆ ಎಲ್ಲ ಪಾತ್ರಗಳೂ “ಪ್ರೌಢ” ಭಾಷೆಯಲ್ಲಿ ಮಾತನಾಡುತ್ತಿದ್ದವು. ಅದನ್ನು ಕೇಳುವಾಗ ಅದು ನನ್ನದಲ್ಲ, ನನಗೆ ಅದರ ಸಂಬಂಧವಿಲ್ಲ ಎಂಬ ವಿಚಾರವಿದ್ದಿತೋ ಎನೋ! ಯಾಕೆಂದರೆ ಗಾಣಿಗನ ಪಾತ್ರಗಳನ್ನು ಕೇಳುವಾಗ ಇದ್ದ ಏಕಾಗ್ರತೆ ಗ್ರಂತಸ್ಥ ಶೈಲಿಯ ಮಾತುಗಳನ್ನು ಕೇಳುವಾಗ ಇರುತ್ತಿರಲಿಲ್ಲ. ಗಾಣ ಸುತ್ತುವಾಗಲಂತೂ ಅದರ ಶಬ್ದವನ್ನು ಗಾಣಿಗ ಪಾತ್ರಧಾರಿಯು ಮಾಡುವಾಗ ಆದ ಆನಂದವು ತನ್ಮಯತೆಯ ಪರಾಕಾಷ್ಠೆ ಎಂದು ಈಗ ಹೇಳಬಲ್ಲೆ. ಆಗ ಆ ಶಬ್ದಗಳೂ ಗೊತ್ತಿರಲಿಲ್ಲ. ಎಷ್ಟೋ ಕಾಲದವರೆಗೆ ಗಾಣದ ಶಬ್ದವನ್ನು ಗಾಣಿಗನಾದವನೇ ತನ್ನ ಬಾಯಿಂದ ಹೊರಡಿಸುತ್ತಿದದನೆಂಬುದೂ ತಿಳಿದಿರಲಿಲ್ಲ”.[2]

ಪೀತಾಂಬರಪ್ಪನದು ಒಂದೆಡೆಗೆ ನಿಲ್ಲುವವರಾಗಿರಲಿಲ್ಲ. ಕಂಪನಿ ಬೇಸರವಾಯಿತು. ಗೆಳೆಯ ಲಕ್ಷ್ಮಣಸಿಂಗ್‌ನ ಜೊತೆಗೆ ಮುಂಬಯಿ ಪ್ರಯಾಣ. ಅಲ್ಲಿಯ ಫ್ಯೂಜಿ ಮಿಲ್ಲಿನಲ್ಲಿ ಕೆಲಸ. ಪೀತಾಂಬರಪ್ಪನ ನೇತೃತ್ವದಲ್ಲಿ ಕೂಲಿಕಾರರ ಯುನಿಯನ್‌ ಅಸ್ತಿತ್ವಕ್ಕೆ ಬಂತು. ಸಂಬಳಕ್ಕಾಗಿ ಮಾಲಿಕರೊಂದಿಗೆ ಜಗಳ; ಅದರಿಂದಾಗಿ ಸೆರೆ ಮನೆಯವಾಸ. ಬಿಡುಗಡೆಯ ನಂತರ ಭಸ್ಮಬಳಿದು-ರುದ್ರಾಕ್ಷಿ ಧರಿಸಿ ಕಾಶಿ ವಿಶ್ವೇಶ್ವರನ ದರ್ಶನಕ್ಕೆ ಹೊರಟರು. ಸೊಲ್ಲಾಪುರದ ಸಿದ್ಧರಾಮನ ಗುಡಿಯಲ್ಲಿ ಮೂರು ತಿಂಗಳು ನಿಂತು ಮುಂದಕ್ಕೆ ನಡೆದಾಗ ಬಾಗಿಲುಕೋಟೆಯಲ್ಲಿದ್ದ ಕೊಣ್ಣೂರು ಕಂಪನಿ ಕರೆಯಿತು. ಇವರ ಅಭಿನಯದಿಂದ ಶನಿಪ್ರಭಾವ, ಮನೋವಿಜಯ ನಾಟಕಗಳು ಮತ್ತೆ ವಿಜೃಂಭಿಸಿದವು. ಬಿಜಾಪುರ, ದಾವಣಗೆರೆ, ಭದ್ರಾವತಿ, ಮೈಸೂರು, ಬೆಂಗಳೂರು ತಿರುಗಾಟದಲ್ಲಿ ಪೀತಾಂಬರಪ್ಪನದೇ ಹಿರಿತನ, ‘ಮನೋವಿಜಯ’ದಲ್ಲಿಯ ಸಾತ್ವಿಕ ಪಾತ್ರದ ಅಭಿನಯದಿಂದ ಅವರ ಮನಸ್ಸು ವೈರಾಗ್ಯಕ್ಕೆ ಹೊರಳಿತು.

೧೯೨೩, ಆಚಾರ್ಯ ಶಾಂತಿಸಾಗರರ ಚಾತುರ್ಮಾಸ ಕಾರ್ಯಕ್ರಮ ಕೊಣ್ಣೂರಿನಲ್ಲಿತ್ತು. ಪೀತಾಂಬರಪ್ಪ, ಆಚಾರ್ಯರನ್ನು ಕಾಣಲು ಹೋಗಿ ಮುನಿ ಜೀವನಕ್ಕೆ ಶರಣಾದರು. ಬಾಳಿನ ದಾರಿಯಲ್ಲಿ ಬಿದ್ದು, ಎದ್ದು, ಗೆದ್ದು ಪೀತಾಂಬರಪ್ಪ ಡೋಂಗರೆ ಪಾಯಸಾಗರ ಮುನಿಯಾದರು. ದೇಶಸಂಚಾರದ ನಿಮಿತ್ತ ಹೊರಟಾಗ ಹಾವೇರಿಯ ಹಾದಿಯಲ್ಲಿ ಪೂರ್ವಾಶ್ರಮದ ಗೆಳತಿ, ನಾಟಕದ ನಟಿ ನಮಸ್ಕರಿದಳು. ಪರಿಚಯದ ದೃಷ್ಟಿ ಬೀರಿದಳು ಈ ಮುನಿಗಳು ಆಶೀರ್ವದಿಸಿ ಅಪರಿಚತರಂತೆ ಮುಂದೆ ಸಾಗಿದರು ಪೂರ್ವಶ್ರಮದ ಕರ್ಮಗಳನ್ನು ಕಳೆದುಕೊಂದು ಶುದ್ಧಾತ್ಮರಾಗಿದ್ದರು. ಊರೂರು ತಿರುಗಿದರು. ಪ್ರವಚನ ನೀಡಿದರು. ಅಧ್ಯಾತ್ಮರಸದ ಕಾರಂಜಿ ಅವರ ಪ್ರವಚನದೊಳಗೆ ಪುಟಿಯಿತು. ಪ್ರವಚನಗಳಿಂದ ಜನರ ಮನಸ್ಸನ್ನು ಗೆದ್ದು ‘ಪ್ರವಚನ ಪರಮೇಷ್ಠಿ’ ಎಂದು; ತಪಸ್ಸು ಮಾಡಿ ‘ಅಭಿನವ ಸಮಂತಭದ್ರ’ ಎಂದು ಭಕ್ತರ ಗೌರವಕ್ಕೆ ಪಾತ್ರರಾದರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಸಮೀಪದ ಸ್ತವನಿಧಿ ಪಾಯಸಾಗರಮುನಿಗಳ ನೆಲೆಯಾಯಿತು. ೧೯೫೮ ಅಕ್ಟೋಬರ್ ೧೨ ರಂದು ಅವರ ಸಮಾಧಿಯನ್ನು ಹೊಂದಿದರು.

ಮುರಗೋಡ ಗಂಗಾಧರಪ್ಪ

ಬೆಳಗಾವಿ ಜಿಲ್ಲೆ ಮುರಗೋಡ ಗ್ರಾಮದ ಕೆಲಗೇರಿ ಮನೆತನದ ಗಂಗಾಧರಪ್ಪನ ಬಣ್ಣದ ಬದುಕು ರೂಪಗೊಂಡದ್ದು ಕೊಣ್ಣೂರ ಕಂಪನಿಯಲ್ಲಿಯೇ. ಗಣುಬುವಾ ಇವರ ಸಂಗೀತಗುರುಗಳು. ಸುರೇಲಕಂಠ, ಸ್ತ್ರೀಪಾತ್ರಕ್ಕೊಪ್ಪುವ ಮೈಮಾಟದಿಂದ ಆರಂಭದಲ್ಲಿ ಸ್ತ್ರೀಪಾತ್ರಗಳನ್ನೇ ಅಭಿನಯಿಸುತ್ತಿದ್ದರು. ಬೆಳವಿ ರಾಚಯ್ಯನವರು ರಾಜಾ ಪಾತ್ರದಲ್ಲಿದ್ದರೆ ಇವರು ರಾಣಿ ಪಾತ್ರದಲ್ಲಿ ಗಾಯನ ಪ್ರತಿಭೆಯನ್ನು ತೋರುತ್ತಿದ್ದರು. ‘ಶನಿಪ್ರಭಾವ’ದ ಅಲೋರಿಕೆ ಪಾತ್ರದಲ್ಲಿ ‘ನೋಡೆ ಚತುರೆ ಸಖಿ’ ಎಂದು ಹಾಡುತ್ತಿದ್ದರೆ ಪ್ರೇಕ್ಷಕರು ಶ್ರೋತೃಗಳಾಗಿ ಹಾಡನ್ನು ಸವಿಯುತ್ತಿದ್ದರಂತೆ, ‘ಬಸವೇಶ್ವರ’ದಲ್ಲಿ ಪ್ರೌಢ-ಬಸವೇಶ್ವರನಾಗಿ ‘ತೋರಿಸುವೆನು ಧನವನೀಗ | ಧಾರುಣಿಶಗೆ | ಬಾರಿ ಬಾರಿಗೀಶ ಪದವನು’ ಎಂದು ಹಾಡುತ್ತಿದ್ದರೆ, ಜನ ಒನ್ಸ್‌ ಮೋರ್ ಕೂಗುತ್ತಿದ್ದರು. ಇವರು ಮಹಾರಾಷ್ಟ್ರದ ಬಾಲಗಂಧರ್ವರನ್ನು ಹೋಲುತ್ತಿದ್ದುದರಿಂದ ಮತ್ತು ಕನ್ನಡ ರಂಗಭೂಮಿಯಲ್ಲಿಯೂ ಗಂಧರ್ವರಿದ್ದಾರೆಂದು ತೋರಿಸಿಕೊಡುವ ಉದ್ದೇಶದಿಂದ ಶಿವಮೂರ್ತಿಸ್ವಾಮಿಗಳು ಇವರಿಗೆ ‘ಕರ್ನಾಟಕ ಗಂಧರ್ವ’ ಬಿರುದು ಕೊಟ್ಟು ಸನ್ಮಾನಿಸಿದರು. ಈ ಪ್ರಸಂಗದಿಂದ ಅವರು ‘ಕರ್ನಾಟಕ ಗಂಧರ್ವ’ ಎಂದೇ ಪರಿಚಿತರಾದರು.

ಕೊಣ್ಣೂರು ಕಂಪನಿ ನಿಂತ ಮೇಲೆ ಗರುಡರ ಕಂಪನಿ ಸೇರಿದರು. ‘ಪಾದುಕಾ ಪಟ್ಟಾಭಿಷೇಕ’ದಲ್ಲಿ ಇವರದು ಕೈಕೇಯಿ ಪಾತ್ರ. ‘ನೀಡು ಭರತನಿಗೆ ರಾಜ್ಯವಾ’ ಎಂದು ಹಾಡುತ್ತಿದ್ದರೆ. ಕೈಕೇಯಿಯ ಕುಟಿಲತನಕ್ಕೆ ಶಪಿಸಬೇಕಾಗಿದ್ದ ಪ್ರೇಕ್ಷಕರು ಹಾಡಿನ ಗುಂಗಿನಲ್ಲಿ ಮೈಮರೆತು ಚಪ್ಪಾಳೆ ತಟ್ಟುತ್ತಿದ್ದರಂತೆ. ಇವರ ಅಭಿನಯಕ್ಕೆ ಹೊಂದುವಂತೆ ಗರುಡರು ರಾಮ-ದಶರಥರ ಸಂವಾದ ತಿದ್ದಿದರೆಂದು ಹುಕ್ಕೇರಿ ಬಾಳಪ್ಪನವರು ಹೇಳುತ್ತಿದ್ದರು. ಗರುಡರ ಕಂಪನಿಯ ಬಳಿಕ ವಿದ್ಯಾರಣ್ಯ ಸಂಗೀತ ನಾಟಕ ಮಂಡಳಿ, ಮೆಣೆಧಾಳ ನಾಟಕ ಮಂಡಳಿ, ಅಬ್ಬಿಗೇರಿ ಕಂಪನಿ, ಗೋಕಾಕ ಕಂಪನಿಗಳಲ್ಲಿ ಸೇವೆ ಸಲ್ಲಿಸಿದರು.

ಮದನಭಾವಿ ಸಿದ್ಲಿಂಗಪ್ಪ

ಇವರು ಬೈಲಹೊಂಗಲ ತಾಲೂಕಿನ ಮರಕಟ್ಟಿ ಗ್ರಾಮದವರು. ಐದನೆಯ ಇಯತ್ತೆ ಒದಿ ಸಂಗೀತ ಕಲಿಯಬೇಕೆಂಬ ಆಸಕ್ತಿಯಿಂದ ನಾಟಕ ಕಂಪನಿ ಸೇರಿದರು. ಸಾತಾರಾದ ಗಣುಬುವಾರಿಂದ ಸಂಗೀತದ ಶಾಸ್ತ್ರೀಯ ಜ್ಞಾನ ಲಭಿಸಿತು. ಸುಂದರ ದುಂಡುಮುಖ, ಮಧ್ಯಮ ನಿಲವು, ಭಾವಪೂರ್ಣ ಕಣ್ಣುಗಳುಳ್ಳ ಸಿದ್ಲಿಂಗಪ್ಪ ಬೇಗನೆ ಸ್ತ್ರೀಪಾತ್ರಕ್ಕೆ ಆಯ್ಕೆಯಾದರು ‘ರಾಜಾ ಹರಿಶ್ಚಂದ್ರ’ದಲ್ಲಿ ಬಳ್ಳಾರಿ ಬಸಪ್ಪ ಹರಿಶ್ಚಂದ್ರನಾದರೆ ತರುಣ ಸಿದ್ಲಿಂಗಪ್ಪ ಚಂದ್ರಮತಿ ಈ ಪಾತ್ರವನ್ನು ನೋಡಿದ ಶಿವಮೂರ್ತಿಸ್ವಾಮಿಗಳು “ಆ ಹುಡುಗ ಧನ್ಯ” ಎಂದು ಅಭಿಮಾನದಿಂದ ದಿನಚರಿಯಲ್ಲಿ ಬರೆದಿದ್ದಾರೆ. ‘ಬಸವೇಶ್ವರ’ದಲ್ಲಿಯ ಗಂಗಾಂಬಿಕೆ ಪಾತ್ರ ಕೂಡ ಅಷ್ಟೇ ಪರಿಣಾಮಕಾರಿಯಾಗಿರುತ್ತಿತ್ತು.

ಕೊಣ್ಣೂರ ಕಂಪನಿ ನಿಂತ ಬಳಿಕ ೧೯೨೪ರಲ್ಲಿ ತುಕಾರಾಮಪ್ಪ ಗೋಕಾಕ ಮತ್ತು ಲೋಬಾಜಿರಾವ ಮದನಭಾವಿಯವರ ಜೊತೆಗೂಡಿ ‘ವಿದ್ಯಾದರ್ಶಕ ನಾಟಕ ಮಂಡಳಿ’ಯನ್ನು ನೇಸರಗಿಯಲ್ಲಿ ಆರಂಭಿಸಿದರು. ಇದನ್ನು ಮುನ್ನಡೆಸುವ ಛಲದಿಂದ ಸಿದ್ಲಿಂಗಪ್ಪ ಮೂರು ಎಕರೆ ಜಮೀನು ಕಳೆದುಕೊಂಡರಂತೆ. ಗರುಡರ ಕಂಪನಿಯಲ್ಲಿಯೂ ಕೆಲ ಕಾಲವಿದ್ದು ವಿಷಮ ವಿವಾಹ, ಭಕ್ತಕಬೀರ, ದಾಮಾಜಿಪಂತ, ನಾಟಕಗಳಲ್ಲಿ ಅಭಿನಯಿಸಿದರು. ೧೯೨೮ರಲ್ಲಿ ಸಂಪಗಾವಿ ಕಂಪನಿ ಹುಟ್ಟಲು ಪ್ರೇರಣೆಯಾಗಿ ನಿಂತರು. ಈ ಕಂಪನಿಯ ‘ವಿಷಮ ವಿವಾಹ’ದಲ್ಲಿ ಶರಾವತಿಯಾಗಿ, ‘ಮಹಾನಂದಾ’ದಲ್ಲಿ ಇಂದ್ರನಾಗಿ ಪ್ರೇಕ್ಷಕರ ನೆನಪಿನಲ್ಲಿ ನಿಲ್ಲುವಂತೆ ಅಭಿನಯಿಸಿದರು. ‘ಸಂಗೊಳ್ಳಿರಾಯಣ್ಣ’ದಲ್ಲಿ ಶಾಂತಾನಂದ ಗುರುವಾಗಿ ಅಭಿನಯಿಸುತ್ತಿದ್ದರು. ಸಂಪಗಾವಿ ಕಂಪನಿ ನಿಂತ ಬಳಿಕ ಗೋಕಾಕ ಮಿಲ್ಲಿನಲ್ಲಿ ಕ್ಲಾರ್ಕ್ ಆಗಿ ಕೆಲಸ ಮಾಡಿದರು. ನಿವೃತ್ತಿಯ ನಂತರ ವಿಶ್ರಾಂತಿ ಜೀವನವನ್ನು ಮದನಭಾವಿಯಲ್ಲಿ ಕಳೆದರು.

ಗುಳೇದಗುಡ್ಡ ಎಲ್ಲವ್ವ

ಎಲ್ಲವ್ವ ಕಂಪನಿ ನಾಟಕಗಳ ಮೊದಲು ಶ್ರೇಷ್ಠ ನಟಿ. ಕೊಣ್ಣೂರ ಕಂಪನಿ ಸ್ತ್ರೀಪಾತ್ರಗಳಿಗೆ ಸ್ತ್ರೀಯರೇ ಬೇಕೆಂದು ನಟಿಯರ ಹುಡುಕಾಟದಲ್ಲಿದ್ದಾಗ ಇವಳು ೧೯೦೮ರಲ್ಲಿ ಕಂಪನಿಗೆ ಬಂದಳು. ಈಕೆಯ ಸುಂದರ ರೂಪ, ಸುಮಧುರ ಕಂಠ ದೇವರ ದೇಣಿಗೆಯಾಗಿತ್ತು ಇವಳ ಆಗಮನದಿಂದ ನಾಟಕಗಳ ಆಕರ್ಷಣೆ ಹೆಚ್ಚಿತು. ಇದಕ್ಕಿಂತ ಮೊದಲು ನಾಟಕಗಳಲ್ಲಿ ನಟಿಯರು ಅಭಿನಯಿಸುತ್ತಿದ್ದರೂ ಎಲ್ಲವ್ವನಿಗಿರುವ ಧೈರ್ಯ, ರೂಪ, ಹಾಡುವ ಸಾಮರ್ಥ್ಯ ಅವರಿಗಿರಲಿಲ್ಲ. ಹೀಗಾಗಿ ಎಲ್ಲವ್ವ ಬೇಗನೆ ಜನಪ್ರಿಯ ನಟಿ ಎನಿಸಿದಳು. ಸ್ತ್ರೀಪಾತ್ರಗಳ ಜೊತೆಗೆ ಪುರುಷ ಪಾತ್ರದಲ್ಲಿಯೂ ಕಾಣಿಸಿಕೊಂಡು ಅದ್ಭುತವಾಗಿ ಅಭಿನಯಿಸುತ್ತಿದ್ದಳು. ‘ಬಸವೇಶ್ವರ’ದಲ್ಲಿ ಮೊದಲು ಮಾದಲಾಂಬಿಕೆಯಾಗಿ ನಂತರ ಬಿಜ್ಜಳನ ಪಾತ್ರವಹಿಸಿ ಎಲ್ಲವ್ವ ವೀರಾಸನದಲ್ಲಿ ಕುಳಿತುಕೊಳ್ಳುವ ಭಂಗಿ ಕುತೂಹಲಕರವಾಗಿತ್ತೆಂದು ಶಿವಮೂರ್ತಿಸ್ವಾಮಿಗಳು ಬರೆದಿದ್ದಾರೆ. ಗುರುಲಿಂಗಪ್ಪ ಗಂಗಣ್ಣವರ ಮತ್ತು ಎಲ್ಲವ್ವ ಕೊಣ್ಣೂರ ಕಂಪನಿಯ ಜನಪ್ರಿಯ ಜೋಡಿ ಎನಿಸಿದ್ದರು. ಕಂಪನಿ ನಿಂತ ಮೇಲೆ ವಾಮನರಾಯರ ಕಂಪನಿ ಸೇರಿದರು.

‘ಭಕ್ತ ಪುಂಡಲೀಕ’ದಲ್ಲಿ ಪುಂಡಲೀಕನ ತಾಯಿ-ತಂದೆಗಳಾಗಿ ಅಭಿನಯಿಸುತ್ತಿದ್ದರು. ‘ಸಾಧ್ವಿ ಸಖೂಬಾಯಿ’ಯ ಚಂಡಿಕಾಬಾಯಿ ಪಾತ್ರದಲ್ಲಿ ಎಲ್ಲೂಬಾಯಿ ತೋರುತ್ತಿದ್ದ ದರ್ಪದ ಹಾವ-ಭಾವ ನೋಡುವವರನ್ನು ದಂಗುಬಡಿಸುತ್ತಿತ್ತು. ಗುರುಲಿಂಗಪ್ಪನ ‘ಸಂದೇಹ ಸಾಮ್ರಾಜ್ಯ’ದ ವಿಜಯರಾಯನ ಪಾತ್ರ ನೋಡಿಯೇ ಅಭಿನಯ ಕಲಿಯಬೇಕೆಂಬುದು ಬಸವರಾಜ ಮನಸೂರರ ಉದ್ಗಾರ. ಗಾನರತ್ನ ಬಿರುದಿನಿಂದ ಭೂಷಿತಳಾಗಿದ್ದ ಗಂಗೂಬಾಯಿಯನ್ನು ರಂಗಭೂಮಿಗೆ ಅರ್ಪಿಸಿದ ಹಿರಿಮೆಯೂ ಎಲ್ಲವ್ವನದು. ಮಗಳಲ್ಲಿರುವ ಪ್ರತಿಭೆಗೆ ತಕ್ಕಂಥೆ ಶಿಕ್ಷಣ ಕೊಡಿಸಿ ಶ್ರೇಷ್ಠ ನಟಿಯನ್ನಾಗಿ ರೂಪಿಸಿದಳು. ವಾಮನ್‌ರಾವರ ಕಂಪನಿಯಲ್ಲಿ ಗಂಗೂಬಾಯಿಯೇ ನಾಯಕಿ. ಮುಂದೆ ಮಗಳು ಸ್ವಂತ ಕಂಪನಿ ಕಟ್ಟುವುದಕ್ಕೆ ಈ ಕಲಾವಿದೆ ನೆರವಾಗಿ ನಿಂತಳು. ವಯಸ್ಸಿಗೆ ತಕ್ಕ ಪಾತ್ರಗಳನ್ನು ಮಾಡಿದಳು. ಬಾಳಸಂಜೆಯಲ್ಲಿ ಕೊಣ್ಣೂರ ಕಂಪನಿಯ ವೈಭವವನ್ನು ಸ್ಮರಿಸುತ್ತ ಈ ಶತಾಯುಷಿ ಧಾರವಾಡದಲ್ಲಿ ಕೊನೆಯ ದಿನಗಳನ್ನು ಕಳೆದಳು.

ಇತರ ನಟ – ನಟಿಯರು

ಬಳ್ಳಾರಿ ಬಸಪ್ಪ, ಗುಳೇದಗುಡ್ಡ ಶಂಕ್ರಪ್ಪ, ಗುಳೇದಗುಡ್ಡ ರಂಗಪ್ಪ, ಕಲಕೇರಿ ಈರಪ್ಪ, ಗಡದ ಬಸಪ್ಪ, ಹುಣಶಿಕಟ್ಟಿ ಮಹಾರುದ್ರಯ್ಯ, ಶಿವಳ್ಳಿ ಶಿವಪ್ಪ, ಕರಗಾವಿ ದುಂಡಪ್ಪ, ಭೀಮಪ್ಪ ಹೂಗಾರ, ಶಂಕ್ರಪ್ಪ ಹೂಗಾರ, ನಿಂಗಪ್ಪ ಸುಣಗಾರ, ಮುರಗೋಡ ಮಲಕಾಜಪ್ಪ, ಗೋಕಾಕಾ ಗ್ಯಾನೋಬಾ, ಕಲ್ಲೋಳಿ ಶ್ಯಾಮಭಟ್ಟ, ಮಾರೀಹಾಳ ಗುರಪ್ಪ, ಮದನಭಾವಿ ಬಸವಂತಪ್ಪ, ಸಾತಪ್ಪ ಮಲ್ಲಪ್ಪ ಕರಕನ್ನವರ, ಸಂಗಪ್ಪ ಮುದ್ದೇಬಿಹಾಳ, ಮಹಾಲಿಂಗಪ್ಪ, ಕುಬೇರಪ್ಪ, ಕೆಂಭಾವಿ ಚೆನ್ನಮಲ್ಲಪ್ಪ, ಸಿಂಪಿಗೇರ ದತ್ತು, ಬಸಪ್ಪ, ಸುಂಕದ, ಗಜೇಂದ್ರಗಡ ಸಂಗನಬಸಪ್ಪ, ಬಳ್ಳಾರಿ ಹುಚ್ಚಪ್ಪ, ಸಿದ್ದಪ್ಪ ಕುರುಬರ, ಶಿವಲಿಂಗ ಅಮ್ಮಣಗಿ, ರಾಚಯ್ಯ ಪೂಜಾರಿ ಅಮ್ಮಣಗಿ, ಕಲಾದಗಿ ಮೋದಿನಸಾಬ, ಫಕರು ಕುರಬೆಟ್ಟ, ಸಿದ್ಧಪ್ಪ, ಸಾರಾಪುರ, ಬಸಪ್ಪ, ಅಮ್ಮಿನಭಾವಿ, ಲಕ್ಷ್ಮಾಸಾನಿ ಬಳ್ಳಾರಿ, ರೇಣುಸಾನಿ ಹುಬ್ಬಳ್ಳಿ, ಹಣಮಂತವ್ ಗುಳೇದಗುಡ್ಡ.

 

[1] ಮಿರ್ಜಿ ಅಣ್ಣಾರಾಯ – ಮಹಾಮುನಿ (೧೯೨೧) ಪು. ೨೦.

[2] ಶ್ರೀರಂಗ – ಸಾಹಿತಿಯ ಆತ್ಮಜಿಜ್ಞಾಸೆ (೧೯೭೩) ಪು. ೧೫೯