ಕೊಣ್ಣುರ ಕಂಪನಿ ಪ್ರದರ್ಶಿಸಿದ ನಾಟಕಗಳನ್ನು ವಸ್ತುವಿನ ದೃಷ್ಟಿಯಿಂದ ಮೂರು ಭಾಗಗಳಲ್ಲಿ ವಿಂಗಡಿಸಬಹುದು.

೧. ಪೌರಾಣಿಕ – ಹರಿಶ್ಚಂದ್ರ, ಕೀಚಕವಧೆ, ಪ್ರಮೀಳೆ, ಚಂದ್ರಹಾಸ, ಮದನಮೋಹನ ದಿವ್ಯಸುಂದರಿ, ಸೌಭದ್ರ, ಶನಿಪ್ರಭಾವ, ಮನೋವಿಜಯ, ಪದ್ಮಾವತಿ, ರಾಧಾಮಾಧವ, ಅನುಭವಚಂದ್ರಿಕೆ, ಭಕ್ತಮಾರ್ಕಂಡೇಯ, ಶಿವಲೀಲಾ/ಶಿವಪ್ರಭಾವ, ಬಬ್ರುವಾಹನ, ಸತೀವಿಜಯ, ರಾಜಶೇಖರ.

೨. ಶರಣರ ಜೀವನ – ತುಕಾರಮ, ಬಸವೇಶ್ವರ, ಶಿವಶರಣಲೀಲಾ.
೩. ಸಾಮಾಜಿಕ – ಶಾರದಾ, ಬಲಸಿಂಹತಾರಾ, ಮೃಚ್ಛಕಟಿಕ, ಮಾನಿನಿ.

ಹರಿಶ್ಚಂದ್ರ, ಕೀಚಕವಧೆ ನಾಟಕಗಳನ್ನು ಬರೆದವರ ಬಗ್ಗೆ ದಿನಚರಿಯಲ್ಲಿ ಪ್ರಸ್ತಾಪವಿಲ್ಲ. ಶಾಂತಕವಿ ಇಲ್ಲವೆ ಶ್ರೀನಿವಾಸಕವಿ (ವೆಂಕಣ್ಣಾಚಾರ್ಯ ಅಗಳಗಟ್ಟಿ) ಬರೆದ ಕೃತಿಗಳಾಗಿರಬೇಕು. ಕೊಣ್ಣೂರ ಕಂಪನಿಗಿಂತ ಮೊದಲು ಇವೆರಡೂ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಕೀಚಕವಧೆ ಹಲಸಿ ಕಂಪನಿಯ (೧೮೬೯) ಜನಪ್ರಿಯ ನಾಟಕವಾಗಿತ್ತು. ಹರಿಶ್ಚಂದ್ರ ಇದು ಶಾಂತಕವಿಗಳು ಬರೆದಿರುವ ನಾಟಕಗಳಲ್ಲಿ ಒಂದು. ಆರಂಭದಲ್ಲಿ ಶಿವಮೂರ್ತಿಸ್ವಾಮಿಗಳು ಇಂಥ ಯಶಸ್ವಿ ನಾಟಕಗಳನ್ನೇ ಆಯ್ದುಕೊಂಡು ಅನಂತರದಲ್ಲಿ ಹೊಸ ನಾಟಕಗಳನ್ನಾಡಿಸುವ ಹೊಣೆ ಹೊತ್ತರೆಂದು ಹೇಳಬಹುದು.

ಮೊದಲಿನ ಮೂರ್ನಾಲ್ಕು ವರ್ಷಗಳಲ್ಲಿ ‘ಹರಿಶ್ಚಂದ್ರ’ ನಾಟಕ ಅಪಾರ ಜನಪ್ರಿಯತೆ ಗಳಿಸಿತು. ಇದಕ್ಕೆ ಬಳ್ಳಾರಿ ಬಸಪ್ಪನ ಹಾಡುಗಾರಿಕೆ ಮತ್ತು ಅಭಿನಯವೇ ಕಾರಣವೆಂದು ಸ್ವಾಮಿಗಳು ದಿನಚರಿಯ ಬರಹಗಳು ತಿಳಿಸುತ್ತವೆ. ಬಸಪ್ಪನ ಹರಿಶ್ಚಂದ್ರ ಪಾತ್ರಕ್ಕೆ ಸಿದ್ಲಿಂಗಪ್ಪ ಮದನಭಾವಿ ಇವರ ಚಂದ್ರಮತಿ ಪಾತ್ರವು ತಕ್ಕ ಜೋಡಿಯೆನಿಸಿತ್ತು. ‘ಕೀಚಕವಧೆ’ಯಲ್ಲಿ ಗೋವಿಂದಪ್ಪ ದಾಬಡೆಯವರ ಕೀಚಕ ಪಾತ್ರ, ತುಕಾರಾಮಕಪ್ಪನ ರಂಭಾನ ಪಾತ್ರಗಳು ಪ್ರೇಕ್ಷಕರ ಮೇಲೆ ಮೋಡಿ ಮಾಡಿದ್ದವಂತೆ. ಇವೆರಡು ನಾಟಕಗಳ ಜೊತೆಗೆ ಪ್ರಮೀಳಾ, ಚಂದ್ರಹಾಸ, ನಾಟಕಗಳು ಆಗಾಗ ಪ್ರಯೋಗಗೊಳ್ಳುತ್ತಿದ್ದವು.

೧೯೦೭ರಲ್ಲಿ ಕಂಪನಿಗಾಗಿ ಹಲವಾರು ನಾಟಕಗಳನ್ನು ಬರೆಸುವ ಪ್ರಯತ್ನ ಶಿವಮೂರ್ತಿಸ್ವಾಮಿಗಳಿಂದ ನಡೆಯಿತು. ಶಾಕುಂತಲ ನಾಟಕ ಬರೆದುಕೊಡಬೇಕೆಂದು ಹುನಗುಂದದ ಸದಾಶಿವಶಾಸ್ತ್ರಿಗಳಿಗೆ ಪತ್ರ ಬರೆದರು (೮-೨-೧೯೦೭). ಶಾಸ್ತ್ರಿಗಳು ಆ ನಾಟಕವನ್ನು ಬರೆದು ಕಳಿಸಿರಲಿಕ್ಕಿಲ್ಲ. ಕಾರಣ ಶಾಕುಂತಲವನ್ನಾಡಿದ ಬಗ್ಗೆ ಉಲ್ಲೇಖಗಳಿಲ್ಲ. ಮದನಮೋಹನ ದಿವ್ಯಸುಂದರಿ – ಈ ಕಥೆಯನ್ನು ಬಾಗಿಲುಕೋಟೆಯ ಚನ್ನಪ್ಪಾ ಕೋರಿ ಇವರಿಂದ (೬-೩-೧೯೦೭) ಅನುವಾದಿಸಿಕೊಂಡರು. ಈ ನಾಟಕ ೧೯೧೫ರವರೆಗೂ ಪ್ರಯೋಗಗೊಳ್ಳುತ್ತಿತ್ತೆಂದು ತಿಳಿಯುತ್ತದೆ.

೧೯ನೆಯ ಶತಮಾನದ ಕೊನೆಯಲ್ಲಿ ಮರಾಠಿ ರಂಗಭೂಮಿಯ ಮೇಲೆ ಹೆಸರು ಮಾಡಿದ್ದ ಮೂರು ಮಹತ್ವದ ನಾಟಕಗಳನ್ನು ಕೊಣ್ಣೂರ ಕಂಪನಿ ಕನ್ನಡಕ್ಕೆ ತಂದಿತು. ಒಂದು, ಅಣ್ಣಾಸಾಹೇಬ ಕಿರ್ಲೋಸ್ಕರರ ಸಂಗೀತ ಸೌಭದ್ರ; ಎರಡು, ಸಾಮಾಜಿಕ ವಸ್ತುವುಳ್ಳ ದೇವಳರ ಶಾರದಾ; ಮೂರನೆಯದು ಸಂತ ತುಕಾರಾಮ. ೧೯೦೭ರಿಂದ ಕಂಪನಿ ನಿಲ್ಲುವವರೆಗೂ ಈ ನಾಟಕಗಳು ಪ್ರಯೋಗಗೊಳ್ಳುತ್ತಿದ್ದವು. ‘ಸೌಭದ್ರ’ವನ್ನು ಗರುಡರು ಅನುವಾದಿಸಿಕೊಟ್ಟರು. ಮರಾಠಿ ನಾಟಕಗಳಿಗೆ ದೊರೆಯುತ್ತಿದ್ದ ಪ್ರೇಕ್ಷಕರ ಪ್ರೋತ್ಸಾಹವು ಕನ್ನಡ ನಾಟಕಗಳಿಗೂ ದೊರೆಯಬೇಕೆಂದು ಅಂಥ ನಾಟಕಗಳನ್ನೇ ಆಡುವ ತಯಾರಿ ಕೊಣ್ಣೂರ ಕಂಪನಿಯಲ್ಲಿ ನಡೆದುದು ಕಂಪನಿನಾಟಕಗಳ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ. ಶಾಂತಕವಿಗಳ ಕಾಲದಲ್ಲಿ ಈ ಕಾರ್ಯ ನಡೆದಿರಲಿಲ್ಲ. ಮರಾಠಿ ನಾಟಕಗಳಿಗೆ ಪ್ರತಿಯಾಗಿ ಕನ್ನಡ ನಾಟಕಗಳನ್ನು ಆಡುವ ತುರ್ತು ಅವರೆದುರಿಗಿತ್ತು. ಮರಾಠಿಗಿಂತ ಕನ್ನಡ ರಂಗಭೂಮಿ ಶ್ರೀಮಂತವಾದುದೆಂದು ತೋರಿಸಿಕೊಡಲು ಪಾರಂಪರಿಕ ಬಯಲಾಟಗಳಿಗೇ ನಾಟಕ ರೂಪ ಕೊಡುವ ಕಾರ್ಯ ಅವರು ಕೈಗೆತ್ತಿಕೊಂಡರು. ಕಿರ್ಲೋಸ್ಕರರ ಕಾಲದಲ್ಲಿ ಮರಾಠಿ ರಂಗಭೂಮಿ ಬೇರೆ ಬೇರೆ ಮೂಲಗಳಿಂದ ಜನಪ್ರಿಯ ಅಂಶಗಳನ್ನು ಸ್ವೀಕರಿಸಿಕೊಂಡು ಶ್ರೀಮಂತವಾಗಿ ಬೆಳೆದಿತ್ತು. ಈ ಪರಿಸ್ಥಿತಿ ಕೊಣ್ಣೂರ ಕಂಪನಿಯ ಕಾಲಕ್ಕೆ ಸವಾಲಾಗಿ ಪರಿಣಮಿಸಿತು. ಕಂಪನಿ ಎನ್ನುವುದು, ಉದ್ಯಮವಾಗಬೇಕಿತ್ತು. ನಾಡಿನ ಪ್ರೇಕ್ಷಕರನ್ನು ಕಟ್ಟಬೇಕಿತ್ತು. ಬೆಳೆಸಬೇಕಿತ್ತು. ಇಂಥ ಸಾಂಸ್ಕೃತಿಕ ಸಂದರ್ಭದ ಅಗತ್ಯಕ್ಕನುಗುಣವಾಗಿ ಶಿವಮೂರ್ತಿಸ್ವಾಮಿಗಳು ಮರಾಠಿ ನಾಟಕಗಳಿಗೆ ಕನ್ನಡ ರೂಪ ಕೊಡುವ ಕಾರ್ಯ ಕೈಗೆತ್ತಿಕೊಂಡರು.

ಸಂಗೀತವು ಸೌಭದ್ರದ ಆಕರ್ಷಣೆಯಾದರೆ ಸಾಮಾಜಿಕ ಸಮಸ್ಯೆಯ ಕಥೆ ಶಾರದಾ ನಾಟಕದ ಆಕರ್ಷಣೆಯಾಗಿತ್ತು. ಕನ್ಯೆಯ ಮಾರಾಟದ ಕಥೆಯನ್ನು ಶಾರದಾ ಪರಿಣಾಮಕಾರಿಯಾಗಿ ಬಿಂಬಿಸುತ್ತಿತ್ತು. ಪಂಢರಪುರದ ವಿಠ್ಠಲನ ಭಕ್ತ ಸಂತ ತುಕಾರಾಮನ ನಾಟಕ ಭಕ್ತಿರಸಪ್ರಧಾನವಾಗಿತ್ತು. ಹೀಗೆ ಮರಾಠಿಯ ಮೂರು ನಾಟಕಗಳು ಮೂರು ವೈಶಿಷ್ಟ್ಯಗಳಿಂದ ಕೂಡಿದ್ದವು.

ಕಂಪನಿ ಬೆಳೆದು ಭದ್ರತೆ, ಜನಪ್ರಿಯತೆ ಸಾಧಿಸಿದ ಬಳಿಕ ಮತ್ತಷ್ಟು ಹೊಸ ಹೊಸ ನಾಟಕಗಳು ರಚನೆಯಾದವು. ೧೯೦೯ ರಿಂದ ೧೯೧೮ರ ಅವಧಿಯಲ್ಲಿ ಶನಿಪ್ರಭಾವ, ಬಸವೇಶ್ವರ, ಮನೋವಿಜಯ, ಬಲಸಿಂಹಾತಾರಾ, ದುರಾತ್ಮ ರಾವಣ ನಾಟಕಗಳು ಅದ್ದೂರಿಯಿಂದ ಬೆಳಕು ಕಂಡವು. ‘ಶನಿಪ್ರಭಾವ’ವನ್ನು ವೆಂಕಟರಾವ್‌ ಮಂಡಗಿ ಬರೆದಿದ್ದರು. ನಾಟಕೀಯ ಗುಣ, ಸಂಗೀತ, ದೃಶ್ಯವೈಭವ, ದೃಶ್ಯಬದಲಾವಣೆಯ ತಾಂತ್ರಿಕತೆಯಿಂದ ಇದು ಜನಪ್ರಿಯ ನಾಟಕವೆನಿಸಿತು. ‘ಒಬ್ಬ ಬ್ರಾಹ್ಮಣ ರಾಜಾ ವಿಕ್ರಮನ ಆಸ್ಥಾನಕ್ಕೆ ಬಂದು ದಕ್ಷಿಣೆ ಬೇಡುತ್ತಾನೆ. ರಾಜನು ‘ಆಗಬಹುದು’ ಎನ್ನುತ್ತಾನೆ. ರಾಜನು ಜೋತಿಷ್ಯವನ್ನು ಬಲ್ಲ ಆ ಬ್ರಾಹ್ಮಣನಿಂದ ತನಗೆ ಶನಿಯ ‘ಸಾಡೇಸಾತಿ’ ಬಿಟ್ಟಿದ್ದಲ್ಲ ಎಂದು ತಿಳಿಯುತ್ತಾನೆ. ಇಷ್ಟರಲ್ಲಿ ಶನಿಯ ಅವತಾರವಾಗುತ್ತದೆ. ಸತ್ಯಶೀಲತೆಯಿಂದ ಮೂರು ಲೋಕಗಳನ್ನು ದಂಗುಬಡಿಸಿದ ಈ ಚಾರಿತ್ರಿಕ ಪುರುಷನನ್ನು ತಾನು ಕಾಡಿ ಬೇಡಿ ಮುಕ್ಕಿಬಿಡುವೆನೆಂದು ಘೋಷಿಸುತ್ತಾನೆ. ರಾಜಾ ವಿಕ್ರಮ ಮಾಯಾಕುದುರೆಯನ್ನೇರಿ ಅದನ್ನು ಪರೀಕ್ಷಿಸುವದಾಗಿ ನಿಶ್ಚಯ ಮಾಡಿ ತೆರಳುತ್ತಾನೆ. ಅರಮನೆಯ ದೃಶ್ಯ ಒಮ್ಮಿಂದೊಮ್ಮೆಲೆ ಅರಣ್ಯ ದೃಶ್ಯವಾಗಿ ಮಾರ್ಪಡುವ ರೀತಿ ಅದ್ಭುತವಾದುದು. ಕ್ಷಣ ಹೊತ್ತು ಕತ್ತಲೆ. ಆ ಮೇಲೆ ಒಮ್ಮಿಂದೊಮ್ಮೆಲೆ ಅರಣ್ಯದ ದೃಶ್ಯ. ರಾಜಾವಿಕ್ರಮ ತೊಳಲುತ್ತ ಬಳಲುತ್ತ ದೀನನಾಗಿ ಬಿದ್ದುಕೊಂಡಿರುತ್ತಾನೆ. ಕ್ಷಣಾರ್ಧದಲ್ಲಿ ರಾಜನಾಗಿದ್ದವನು. ಹೀಘೆ ಕಾಡುಪಾಲಾಗಿ ದೈನ್ಯಾವಸ್ಥೆಯನ್ನು ತಾಳಿರುವ ದೃಶ್ಯ. ಪ್ರೇಕ್ಷಕರಲ್ಲಿ ಒಂದು ಬಗೆಯ ರೋಮಾಂಚನವನ್ನುಂಟು ಮಾಡುವಂತಹದು’.[1]

ವೀರಶೈವ ಧರ್ಮ, ಸಮಾಜ, ಸಂಸ್ಕೃತಿಯ ಅಭಿಮಾನಿಯಾಗಿದ್ದ ಶಿವಮೂರ್ತಿಸ್ವಾಮಿಗಳು ರಾಯಚೂರು ಜಿಲ್ಲೆಯ ಲಿಂಗಸಗೂರಿನ ಅಮರಶಾಸ್ತ್ರಿ ಹಿರೇಮಠದಿಂದ ‘ಬಸವೇಶ್ವರ’ ನಾಟಕವನ್ನು ಬರೆಸಿದರು. ಈ ನಾಟಕವನ್ನು ಬರೆಯಲು ಒದಗಿದ ಪ್ರೇರಣೆಯನ್ನು ನಾಟಕಕಾರರು ಹೇಳಿಕೊಂಡಿದ್ದು ಹೀಗೆ “ವೀರಶೈವ ಸಮಾಜಕ್ಕೆ ಬಸವಪುರಾಣದಿಂದ ಆಗಬೇಕಾದಷ್ಟು ಪ್ರಯೋಗಜನವು ಇತ್ತಿತ್ತಲಾಗಿ ಆಗದಂತಾಗಿದೆ. ಈ ಸ್ಥಿತಿಯನ್ನು ಶಿವಮೂರ್ತಿಸ್ವಾಮಿಗಳು ಕಂಡು ಹತ್ತು ಸಾರೆ ಕೇಳಿದ್ದು ಒಂದು ಸಾರೆ ನೋಡಿದ್ದಕ್ಕೆ ಸರಿಯಾಗುತ್ತದೆಂಬ ಅನುಭವಸಿದ್ಧವಾದ ಸಂಗತಿಯನ್ನು ಲಕ್ಷದಲ್ಲಿ ತಂದು ಶ್ರೀ ಬಸವೇಶ್ವರನ ಚರಿತ್ರವನ್ನು ನಾಟಕರೂಪದಿಂದ ಪುನಃ ಪುನಃ ರಂಗಭೂಮಿಯ ಮೇಲೆ ಆಡಬೇಕೆಂದು ಈ ಕೃತಿಯನ್ನು ಬರೆಸಿದರು”.[2] ಬಸವಣ್ಣನವರ ಘನ ವ್ಯಕ್ತಿತ್ವ. ಶರಣರ ಜೀವದಯೆ ಮತ್ತು ಶಿವಭಕ್ತಿಯ ಹಿರಿಮೆ ಪ್ರಸಂಗಗಳು ಪವಾಡಗಳ ಒಡಲಿನಿಂದ ಮೂಡಿಬಂದಿವೆ. ಬಸವಣ್ಣ ಚಾರಿತ್ರಿಕ ವ್ಯಕ್ತಿಯಾಗಿದ್ದರೂ ಅವನ ಕುರಿತು ರಚನೆಯಾಗಿದ್ದ ಪುರಾಣವನ್ನಾಧರಿಸಿಯೇ ಈ ನಾಟಕ ರೂಪಗೊಂಡಿದ್ದರಿಂದ ಇತಿಹಾಸಪ್ರಜ್ಞೆಗಿಂತ ಪುರಾಣಶ್ರದ್ಧೆಯೇ ಇಲ್ಲಿ ಮುಖ್ಯವಾಗಿದೆ. ಒಟ್ಟಾರೆ ಬಸವಣ್ಣವರನ್ನು ರಂಗಭೂಮಿಗೆ ಮೊದಲು ಪರಿಚಯಿಸಿದ ಶ್ರೇಯಸ್ಸು ಈ ಕಂಪನಿಗೇ ಸಲ್ಲುವುದು. ಮಹಾರಾಷ್ಟ್ರದ ಸಂತ ತುಕಾರಾಮನ ಬಗ್ಗೆ ನಾಟಕವನ್ನಾಡುತ್ತಿದ್ದ ಕಂಪನಿ ಬಸವೇಶ್ವರನ ನಾಟಕವನ್ನು ಪ್ರದರ್ಶಿಸಲು ಜನರಿಂದ ಒಳ್ಳೆಯ ಪ್ರೋತ್ಸಾಹ ಸಿಕ್ಕಿತು. ಸಾಹಿತ್ಯ, ಸಂಗೀತ ಮತ್ತು ಭಕ್ತಿರಸದ ಸಮನ್ವಯದಿಂದ ನಾಟಕವೂ ರಂಜನೀಯವೆನಿಸಿತ್ತು.

‘ಮನೋವಿಜಯ’ ಕಂಪ;ನಿಯ ಮತ್ತೊಂದು ಮಹತ್ವದ ನಾಟಕ. ಇದರ ವೈಶಿಷ್ಟ್ಯವೆಂದರೆ ಇಂದ್ರಿಯಗಳನ್ನು ಸಾಂಕೇತಿಸುವ ಪಾತ್ರಗಳಿಂದ ಇಲ್ಲಿಯ ಕಥೆ ಘಟಿಸುತ್ತದೆ. ಮನಸ್ಸಿನ ಮೇಲೆ ಗೆಲವು ಸಾಧಿಸಬೇಕೆಂಬುದನ್ನು ಈ ಕೃತಿ ನಿರೂಪಿಸುತ್ತದೆ. ಈ ನಾಟಕವನ್ನು ಕಂಪನಿಯಲ್ಲಿದ್ದ ಕಲಾವಿದ ಚಿಕ್ಕೋಡಿ ಶಿವಲಿಂಗಯ್ಯ (ಕಿತ್ತೂರು ಚೆನ್ನಮ್ಮ ನಾಟಕದಿಂದ ಖ್ಯಾತರಾದ ನಾಟಕಕಾರ) ಬರೆದಿದ್ದಾರೆಂಧು ಎನ್ಕೆಯವರು ಅಭಿಪ್ರಾಯ. ಆದರೆ ಇದು ಅವರು ಬರೆದ ಸ್ವತಂತ್ರ ನಾಟಕವಲ್ಲ. ಏಕೆಂದರೆ ಕೊಣ್ಣೂರು ಕಂಪನಿ ತಾತ್ಕಾಲಿಕವಾಗಿ ಮುಚ್ಚಿದ್ದ ಸಂದರ್ಭದಲ್ಲಿ (೧೯೦೮) ಈ ನಾಟಕವನ್ನು ಶಿವಮೂರ್ತಿಸ್ವಾಮಿಗಳು ಬೇರೆ ಕಂಪನಿಯಲ್ಲಿ ನೋಡಿದ ಬಗ್ಗೆ ಆಧಾರವಿದೆ. `Dr.James Gurusidaya Naik and I went by 9.30 PM’s Train to Belgaum to see Datta Halyalkar’s drama “Manovijaya” which was a grand plot (ದಿನಚರಿ ೧೩-೬-೧೯೦೮) ನಾಟಕದ ವಸ್ತುವಿನಿಂದ ಪ್ರಭಾವಿತರಾಗಿದ್ದ ಸ್ವಾಮಿಗಳು ೧೯೦೮ ಡಿಸೆಂಬರ್ ತಿಂಗಳಲ್ಲಿ ಕಂಪನಿ ಮತ್ತೆ ಸುರು ಆದಾಗ ‘ಮನೋವಿಜಯ’ವನ್ನಾಡಲು ಏರ್ಪಾಟು ಮಾಡಿದರೆನ್ನುವುದು ಸೂಕ್ತ.

ನಾಟಕವಾಗಿ ಪ್ರಚಾರವಾಗುವುದಕ್ಕಿಂತ ಮೊದಲು ‘ಮನೋವಿಜಯ’ ಬಯಲಾಟವಾಗಿ ಪ್ರದರ್ಶನಗೊಳ್ಳುತ್ತಿತ್ತು. ಗುಳೇದಗುಡ್ಡದಲ್ಲಿ ದೊರೆತ ದೊಡ್ಡಾಟದ ಹಸ್ತಪ್ರತಿಯನ್ನು ಎಂ.ಟಿ. ಧೂಪದ ಅವರು ೧೯೬೮ರಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ದೇಹವೆಂಬ ಪಟ್ಟಣದಲ್ಲಿ ನಿತ್ಯ ತಿರುಗುವ ವಿಕಾರ, ವಿವೇಕಗಳೆಂಬ ಪಾತ್ರಗಳಿವೆ. ಧರ್ಮ, ದರ್ಶನಗಳ ಮಗ ಮನೋರಾಯ. ವಿವೇಕ ಅವನ ಗುರು, ಯಮ ಮಂತ್ರಿ, ನಿಯಮ ಸೇನಾಪತಿ, ಸತ್ಯ, ಸನ್ಮಾರ್ಗ, ವಿವೇಕ, ಶಮ, ದಮ, ಶಾಂತಿ, ವೈರಾಗ್ಯ, ಮನೋರಾಯನ ಮಕ್ಕಳು. ಮಹಾಮಾಯಿ ಪ್ರತಿನಾಯಕಿ. ಕ್ರೋಧ, ಲೋಭ, ಮೋಹ, ಮದ, ಮತ್ಸರ, ಮಹಾಮಯಿಯ ಮಕ್ಕಳು. ಇವರ ಹೆಂಡತಿ ಮಿಥ್ಯಾ. ಈ ಪಾತ್ರಗಳಿಂದ ಮನುಷ್ಯನ ಅಂತರಂಗ ಪ್ರಪಂಚವು ಕಲಾತ್ಮಕ ರೂಪ ತಾಳಿ ರಂಗದ ಮೇಲೆ ಪ್ರತ್ಯಕ್ಷವಾಗುತ್ತಿತ್ತು. ಮನೋವಿಕಾರ, ಮನೋನಿಗ್ರಹದ ಸಂಘರ್ಷವು ಆಟದ ಮುಖ್ಯ ಕ್ರಿಯೆಯಾಗಿತ್ತೆಂದು ಬಯಲಾಟದ ಪ್ರತಿ ತಿಳಿಸುತ್ತದೆ. ಇದನ್ನೇ ನಾಟಕವನ್ನಾಗಿ ರೂಪಿಸಿದ್ದು, ಕೊಣ್ಣೂರ ಕಂಪನಿಯಿಂದ ಮುಖ್ಯ ಕೃತಿಯಾಗಿ ಪರಿಣಮಿಸಿತು.

ನಾಟಕದಲ್ಲಿ ಕೂಡ ಮನೋರಾಯನೇ ನಾಯಕ. ಅವನಿಗೆ ಸತ್ಯ, ಸುಜ್ಞಾನ ನಿರಹಂಕಾರ, ತ್ಯಾಗ, ಸ್ನೇಹ ಎಂಬ ಸಾತ್ವಿಕ ಮಕ್ಕಳು ಮತ್ತು ಮಹಾಮಯಿಗೆ ಕಾಮ, ಕ್ರೋಧ, ಮೋಹ, ಮಮಕಾರ, ಅಹಂಕಾರ ಎಂಬ ತಾಮಾಸ ಮಕ್ಕಳಿರುವರು. ತಾಮಸ ಮಕ್ಕಳ ಉಪಟಳದಿಂದ ಮನಸ್ಸಿನ ಶಾಂತಿ ಕದಡುತ್ತದೆ. ಅವರನ್ನು ನಿಯಂತ್ರಣದಲ್ಲಿಟ್ಟು ಸಾತ್ವಿಕ ಮಕ್ಕಳನ್ನು ಬೆಳೆಸುವುದರಲ್ಲಿಯೇ ಗೆಲುವಿದೆ ಎಂಬುದು ‘ಮನೋವಿಜಯ’ ನಾಟಕದ ಸಾರಾಂಶ. ‘ಇದೊಂದು ಮನೋವೈಜ್ಞಾನಿಕ ನಾಟಕ. ಮನೋವಿಜಯವೆಂದರೆ ಮನುಷ್ಯ ತನ್ನ ಷಡ್‌ರಿಪುಗಳ ಮೇಲೆ ಸ್ಥಾಪಿಸುವ ಪ್ರಭುತ್ವ. ಇಂಥ ನಾಟಕಗಳು ಜನಮನಕ್ಕೆ ಬೋಧಕವಾಗಿಯೂ ರಂಜಕವಾಗಿಯೂ ಪರಿಣಮಿಸುತ್ತಿದ್ದವು’.[3] ಈ ನಾಟಕದಲ್ಲಿ ಸಾತ್ವಿಕ ಪಾತ್ರವನ್ನು ಮಾಡುತ್ತ ಪೀತಾಂಬರಪ್ಪ ಡೋಂಗರೆ ಎಂಬ ನಟ ಸಾತ್ವಿಕ ಜೀವನ ಸ್ವೀಕರಿಸಿದರೆಂದು ಪಾಯಸಾಗರ ಹೆಸರಿನಿಂದ ದಿಗಂಬರ ಮುನಿಗಳಾದರೆಂದು ಪ್ರತೀತಿ. ನಾಟಕವನ್ನು ನೋಡಿದ ಪ್ರೇಕ್ಷಕರಲ್ಲಿಯೂ ಕೆಲವರು ಶರಣ ಜೀವನ ಸ್ವೀಕರಿಸಿದರೆಂದು ಹೇಳುವರು. ಅಂಥ ಪರಿಣಾಮಕಾರಿ ನಾ         ಟಕವಾಗಿತ್ತು ಮನೋವಿಜಯ.

೧೯೧೧ರಲ್ಲಿ ರಂಗವನ್ನೇರಿದ ‘ಬಲಸಿಂಹತಾರಾ’ ಒಂದು ಕಾಲ್ಪನಿಕ ಸಾಮಾಜಿಕ ನಾಟಕವಾಗಿತ್ತು. ಇದನ್ನು ಗರುಡ ಸದಾಶಿವರಾಯರೇ ಬರೆದಿರಬೇಕು. ಕಾರಣ ಕೊಣ್ಣೂರು ಕಂಪನಿ ನಿಂತ ಮೇಲೆ ಗರುಡರ ಕಂಪನಿಯಿಂದಲೂ ಇದು ಪ್ರಯೋಗವಾಗುತ್ತಿತ್ತು. ‘ದುರಾತ್ಮ ರಾವಣ’ ಕೂಡ ಗರುಡರೇ ಬರೆದ ನಾಟಕ. ೧೯೧೮, ಬಿಜಾಪುರ ಕ್ಯಾಂಪಿನಲ್ಲಿ ಇದನ್ನು ಬರೆದು ನಿರ್ದೇಶಿಸಿದರು. ಇದರ ನಂತರ ಗರುಡರು ಸಂಸ್ಕೃತದಿಂದ ಅನುವಾದಿಸಿದ ‘ಮೃಚ್ಛಕಟಿಕ’ ನಾಟಕವು ಕಂಪನಿಯ ಕೊನೆಯ ಕೃತಿಯೆನಿಸಿತು. ಈ ನಾಟಕದ ಕೆಲವೇ ಪ್ರಯೋಗಗಳೊಂದಿಗೆ ಕಂಪನಿಯ ಬಾಗಿಲು ಮುಚ್ಚಿಕೊಂಡಿತು.

ಸ್ವಾಮಿಗಳ ದಿನಚರಿಯ ಬರಹಗಳಲ್ಲಿ ನಾಟಕಗಳ ಪ್ರಸ್ತಾಪವಿದ್ದರೂ ನಾಟಕಕಾರರ ಬಗ್ಗೆ ವಿವರಗಳು ತುಂಬಾ ಕಡಿಮೆ ರಾಚಪ್ಪ ಮುರಗೋಡ, ಅಂಕಲಗಿ ಮಾಸ್ತರ, ಸದಾಶಿವಶಾಸ್ತ್ರಿ ಹುನಗುಂದ, ಸಿದಗಿರಪ್ಪ. ಆರ್. ಸಬರದ ಇವರೆಲ್ಲ ನಾಟಕಕಾರರೆಂದು ಗೊತ್ತಾದರೂ ಬರೆದ ನಾಟಕಗಳ ಪ್ರಸ್ತಾಪವಿಲ್ಲ. ಶಿವಮೂರ್ತಿಸ್ವಾಮಿಗಳು ಕೂಡ ನಾಟಕ ಬರೆದಿರಬೇಕೆನ್ನಲು ಅವರ ಡೈರಿಯಲ್ಲಿ ಆಧಾರವಿದೆ. ‘ಅಂಕಲಗಿ ಮಾಸ್ತರರು ನಾನು ಮಾಡಿದ ಪ್ರೋಜನ್ನು ೨ ಅಂಕ ಸಂಗೀತ ಉತ್ತಮ ಮಾಡಿರುವರು’ ಎಂದು ಬರೆದಿರುವರು.

ಕೊಣ್ಣೂರ ಕಂಪನಿ ಆಡುತ್ತಿದ್ದ ಬಹುಪಾಲು ನಾಟಕಗಳು ಪ್ರಕಟವಾಗಿಲ್ಲ. ಪ್ರಕಟಿತ ನಾಟಕಗಳ ಪ್ರತಿಗಳೂ ಇಂದು ಲಭ್ಯವಿಲ್ಲ. ‘ಸಂಗೀತ ಬಸವೇಶ್ವರ’ ನಾಟಕದ ಪ್ರತಿಯು ಅಮ್ಮಣಗಿಯ ಬಾಬುರಾವ ದೇಸಾಯಿ ಅವರ ಬಳಿಯಲ್ಲಿದೆ. ಅದರ ಕೊನೆಯ ಪುಟಗಳು ಹರಿದು ಪ್ರಕ್ಷಿಪ್ತವಾಗಿದೆ. ನಾಟಕಗಳ ಹಸ್ತಪ್ರತಿಗಳನ್ನು ಶೋಧಿಸುವ ಮತ್ತು ಪ್ರಕಟಿಸುವ ಕಾರ್ಯ ಇನ್ನೂ ನಡೆಯಬೇಕಿದೆ. ಲಭ್ಯ ವಿವರಗಳನ್ನಾಧರಿಸಿ ಹೇಳುವುದಾದರೆ. ಈ ಕಂಪನಿಯ ಮೊದಲು ದಶಕದ ನಾಟಕಗಳ ರಚನಾವಿನ್ಯಾಸವು ಬಯಲಾಟದ ತಂತ್ರಕ್ಕೆ ಹತ್ತಿರವಿದ್ದು ಹಾಡುಗಳಿಗೇ ಹೆಚ್ಚಿನ ಪ್ರಾಶಸ್ತ್ಯವಿತ್ತು. ಹಾಡನ್ನು ಅನುಸರಿಸಿ ಬರುವ ಮಾತು ಹಾಡಿನ ಅರ್ಥವನ್ನು ವಿವರಿಸುವುದು. ಮುಖ್ಯ ಪಾತ್ರಗಳೆಲ್ಲ ಹಾಡಿ ಮಾತನಾಡಿದರೆ, ಸಾಮಾನ್ಯ ಪಾತ್ರಗಳು ಬರಿ ಮಾತನಾಡುತ್ತಿದ್ದವು. ಲಲಿತ ಪದಗಳಿಂದ, ಸಂವಾದಾತ್ಮಕ ಗುಣದಿಂದ ಹಾಡುಗಳು ಕೇಳಲು ಮಧುರವಾಗಿದ್ದು, ಕಥೆಯನ್ನು ಬೆಳೆಸುತ್ತಿದ್ದವು. ಬಯಲಾಟದಂತೆ ಪ್ರಾಸಯುಕ್ತ, ಸಮಸ್ತಪದಗಳಿಂಧ ಘಟಿತವಾದ ಶಿಷ್ಟಮಾತಿನ ಚಾತುರ್ಯವಿರದೆ ಹಾಡುಗಳಿಗಿಂತ ಸರಳವಾದ, ಆಡುಮಾತಿಗೆ ಸಮೀಪದ ಮಾತುಗಾರಿಕೆ ಈ ನಾಟಕಗಳಿದ್ದು.

ಎರಡನೆಯ ದಶಕದ ನಾಟಕಗಳಲ್ಲಿ ಹಾಡುಗಳ ಜೊತೆಗೆ ಮಾತುಗಳೂ ಪ್ರಧಾನವಾದವು ‘ಸಂಗೀತ ಬಸವೇಶ್ವರ’ ನಾಟಕದಲ್ಲಿ ದೀರ್ಘ ಸಂಭಾಷಣೆಗಳಿದ್ದು ಸಾಹಿತ್ಯದ ದೃಷ್ಟಿಯಿಂದಲೂ ಸತ್ವಪೂರ್ಣವಾಗಿವೆ ಭಕ್ತಿ-ನೀತಿಯ ಜೊತೆಗೆ ಮನರಂಜನೆಯನ್ನು ಮೇಳವಿಸಿಕೊಂಡಿದ್ದ ಈ ಕಂಪನಿಯ ನಾಟಕಗಳು ದೃಶ್ಯವೈಭವದಿಂದ ಬಣ್ಣ-ಬೆಳಕಿನ ಆಕರ್ಷಣೆಯಿಂದ ರಂಗದ ಮೇಲೆ ಅದ್ಭುತವನ್ನೇ ನಿರ್ಮಿಸಿದ್ದನ್ನು ಮರೆಯಲಾಗದು.

 

[1] ಎನ್ಕೆ – ಕರ್ಮವೀರ, ಏಳು ದಶಕಗಳ ಹಿಂದೆ ರಂಗವೈಭವ ಮೆರೆದ ಕೊಣ್ಣುರ ನಾಟಕ ಕಂಪನಿ ೨.೫.೧೯೭೧.

[2] ಅಮರಶಾಸ್ತ್ರಿ ಹಿರೇಮಠ – ಸಂಗೀತ ಬಸವೇಶ್ವರ (೧೯೧೧), ಪ್ರಸ್ತಾವನೆ.ಪು.೨

[3] ( – ಕರ್ಮವೀರ, ಏಳು, ದಶಕಗಳ ಹಿಂದೆ ರಂಗವೈಭವ ಮೆರೆದ ಕೊಣ್ಣೂರ ನಾಟಕ ಕಂಪನಿ. ೨.೫.೧೯೭೧.