ನಾಟಕ ಕಂಪನಿ ಅನ್ನೋದು ಭಾರತೀಯ ರಂಗಭೂಮಿ ಪರಂಪರೆಗೆ ಹೊಸದು. ಹಣಕೊಟ್ಟು ನಾಟಕ ನೋಡುವ, ಹಣ ತೆಗೆದುಕೊಂಡು ನಾಟಕ ತೋರಿಸುವ ವ್ಯವಸ್ಥೆಯನ್ನು ನಮ್ಮಲ್ಲಿ ಜಾರಿಗೆ ತಂದವರು ಪಾರ್ಸಿ ಜನರು. ಇದಕ್ಕೆ ಸುಮಾರು ಒಂದುವರೆ ಶತಮಾನದ ಇತಿಹಾಸವಿದೆ. ಇದಕ್ಕಿಂತ ಮೊದಲು ನಮ್ಮಲ್ಲಿ ರಂಗಕಲೆಯನ್ನು ಉಪಜೀವನಕ್ಕಾಗಿ ಅವಲಂಬಿಸಿದ್ದ ನಿರ್ದಿಷ್ಟ ಜಾತಿಸಮುದಾಯಗಳಿದ್ದವು. ಆದರೆ ಅವು ನಾಟಕ ಕಂಪನಿಗಳ ಸ್ವರೂಪದವಾಗಿರಲಿಲ್ಲ. ಅವು ಕಟ್ಟಿದ ರಂಗಮಂದಿರವನ್ನು ಆಶ್ರಯಿಸಿ, ಟಿಕೆಟ್ಟುಗಳನ್ನು ಮಾರಿ ನಾಟಕ ಪ್ರದರ್ಶಿಸುವ ತಂಡಗಳಾಗಿರದೆ ಊರ ಜನರು ಕೂಡಿಸಿ ಕೊಡುವ ಧನ-ಧಾನ್ಯಗಳನ್ನೇ ಪಡೆದು ಉಪಜೀವನ ನಡೆಸುವ ತಂಡಗಳಾಗಿದ್ದವು. ಜನಪದ ಮತ್ತು ಸಂಸ್ಕೃತ ನಾಟಕಗಳ ಶ್ರೀಮಂತ ಪರಂಪರೆಯುಳ್ಳ ಭಾರತದಲ್ಲಿ ರಂಗಕಲೆ ಉದ್ದಿಮೆಯ ರೂಪವನ್ನು ತಾಳಿದ್ದು ಆಧುನಿಕ ಸಂದರ್ಭದಲ್ಲಿಯೇ. ಇದರ ಮೂಲ ಬೇರನ್ನು ಈಸ್ವ ಇಂಡಿಯಾ ಕಂಪನಿಯ ಸ್ಥಾಪನೆಯಿಂದಲೇ ಗುರುತಿಸಬಹುದು. ಕಂಪನಿಯ ಆಡಳಿತವು ಸ್ಥಿರಗೊಂಡ ಬಳಿಕ ಕಲಕತ್ತೆಯಲ್ಲಿ ನೆಲೆಸಿದ್ದ ಇಂಗ್ಲೀಷ ಅಧಿಕಾರಿಗಳ ಮನರಂಜನೆಗೆ ಇಂಗ್ಲಿಷ್‌ ನಾಟಕಗಳೇ ಬೇಕಾದವು. ಅವರಿಗಾಗಿ ಕೆಲ ನಾಟಕ ತಂಡಗಳು, ರಂಗಮಂದಿರಗಳು ಅಲ್ಲಿ ಹುಟ್ಟಿಕೊಂಡವು.

ಇಂಗ್ಲಿಷ್‌ ಅಧಿಕಾರಿಗಳು ನೋಡುತ್ತಿದ್ದ ನಾಟಕಗಳು ಬಂಗಾಳಿ ಜನರನ್ನೂ ಆಕರ್ಷಿಸಿದವು. ಆದರೆ ಅವರಿಗೆ ನೋಡಲು ಅವಕಾಶವಿರಲಿಲ್ಲ. ಮೊದಲಿಗೆ ಅಲ್ಲಿಯ ಜಮೀನ್ದಾರರು, ಶ್ರೀಮಂತರು ಹಣಕೂಡಿಸಿ ರಂಗಮಂದಿರವೊಂದನ್ನು ತಾತ್ಕಾಲಿಕವಾಗಿ ಕಟ್ಟಿಕೊಂಡು ಇಂಗ್ಲಿಷ ನಾಟಕಗಳನ್ನು ನೋಡಲು ಏರ್ಪಾಡು (ಸು. ೧೭೭೫) ಮಾಡಿ ಕೊಂಡರು. ಶ್ರೀಮಂತ ಪರಿವಾರದವರಿಗೆ ಮಾತ್ರ ಅಲ್ಲಿ ಪ್ರವೇಶವಿತ್ತು. ಆರಂಭದಲ್ಲಿ ಇಂಗ್ಲಿಷ್‌ ನಾಟಕಗಳು; ಆ ಬಳಿಕ ಇಂಗ್ಲಿಷ್‌, ಸಂಸ್ಕೃತದಿಂದ ಅನುವಾದಿಸಿದ ನಾಟಕಗಳೂ ರಂಗದ ಮೇಲೆ ಬೆಳಕು ಕಂಡವು ಇಂಥ ಚಟುವಟಿಕೆಗಳು ಕಲಕತ್ತೆಯಲ್ಲಿ ಹಂತಹಂತವಾಗಿ ವ್ಯಾಪಿಸಿ ಭಾರತದಲ್ಲಿ ಆಧುನಿಕ ರಂಗಭೂಮಿ ಬೆಳೆದು ಬರಲಿಕ್ಕೆ ವಾತಾವರಣ ಹದಗೊಂಡಿತು.

ಇಂಗ್ಲಿಷ್‌ ವಸಾಹತಿನ ಇನ್ನೊಂದು ಕೇಂದ್ರಸ್ಥಳ ಮುಂಬಯಿಯಲ್ಲಿ ಇದೇ ಮಾದರಿಯ ಚಟುವಟಿಕೆಗಳು ಆರಂಭವಾದವು ಕಾಲೇಜು ಕಲಿಯುತ್ತಿದ್ದ ಇಂಗ್ಲೀಷ ಮತ್ತು ಭಾರತೀಯ ವಿದ್ಯಾರ್ಥಿಗಳು ತಂಡ ಕಟ್ಟಿಕೊಂಡು ಇಂಗ್ಲೀಷ ನಾಟಕಗಳನ್ನಾಡಿದರು. ಹೊಸ ಬಗೆಯ ನಾಟಕಗಳನ್ನು ನೋಡಲು ಜನ ಹಿಂಡು ಹಿಂಡಾಗಿ ಬರುತ್ತಿದ್ದರು. ಕೆಲವೊಮ್ಮೆ ಜನರನ್ನು ನಿಯಂತ್ರಿಸುವುದು ಕಷ್ಟವಾಗುತ್ತಿತ್ತು. ಇದಕ್ಕೆ ಉಪಾಯವಾಗಿ ಶ್ರೀಮಂತ ಹಾಗೂ ಪ್ರತಿಷ್ಠಿತ ವರ್ಗದ ಜನರಿಗೆ ಮಾತ್ರ ರಂಗಮಂದಿರದ ಪ್ರವೇಶ ಮೀಸಲಾಯಿತು. ಇದರಿಂದ ನಗರದ ಮಧ್ಯಮ ವರ್ಗದ ಜನರು ಹೊಸ ರಂಗಭೂಮಿಯು ಕೊಡುವ ಮನರಂಜನೆಯಿಂದ ವಂಚಿತರಾದರು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದವರು ವ್ಯಾಪಾರೀ ಮನೋಭಾವದ ಪಾರ್ಸಿಗಳು. ಸಾಮಾನ್ಯರ ಮನರಂಜನೆಗಾಗಿ ನಾಟಕ ಕಲೆಯನ್ನೇ ಉದ್ಯೋಗ ಮಾಡಿಕೊಳ್ಳಬೇಕೆಂದು ಯೋಜಿಸಿ ಅವರು ಕ್ರಿಯಾಶೀಲರಾದರು. ರಂಗಪರಿಕರಗಳನ್ನು ನಿರ್ಮಿಸಿಕೊಂಡು, ಸಂಬಳಾಧಾರಿತ ಕಲಾವಿದರನ್ನು ಕೂಡಿಸಿಕೊಂಡು, ನಾಟಕಗಳನ್ನಾಡುತ್ತ ಊರಿಂದೂರಿಗೆ ತಿರುಗಾಡಲು ಮುಂದಾದರು. ಸು. ೧೮೫೦ರಲ್ಲಿ ಪಾರ್ಸಿ ನಾಟಕ ಕಂಪನಿಗಳು ಅಸ್ತಿತ್ವಕ್ಕೆ ಬಂದವು. ಖುರದೇಶಿ ಬಾಲಿವಾಲಾ ಅವರ ‘ವಿಕ್ಟೋರಿಯಾ ಥಿಯೇಟ್ರಿಕಲ್‌ ಕಂಪನಿ’ (೧೮೭೨) ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಸಂಚರಿಸಿ ದೇಶೀಯ ಭಾಷೆಗಳಲ್ಲಿಯೂ ಕಂಪನಿಗಳು ಹುಟ್ಟಿಕೊಳ್ಳಲು ಕಾರಣವಾಯಿತು. ಹೀಗೆ ಪಾರ್ಸಿಜನರ ಪ್ರಯತ್ನದಿಂದ ರಂಗಭೂಮಿಯು ಬಂಡವಾಳ ಹೂಡುವ, ಲಾಭ ಗಳಿಸುವ ಮನರಂಜನೆಯ ಉದ್ದಿಮೆಯಾಗಿ ಪರಿಣಮಿಸಿತು.

ಮುಂಬಯಿ ಪಾರ್ಸಿ ಕಂಪನಿಗಳ ಕೇಂದ್ರಸ್ಥಳವಾದ್ದರಿಂದ ಮರಾಠಿ ರಂಗಭೂಮಿ ಬೇಗನೆ ವೃತ್ತಿ ಸ್ವರೂಪಕ್ಕೆ ಹೊರಳಿತು. ಮೂಲತಃ ಕರ್ನಾಟಕ ಜನಪದ ರಂಗಭೂಮಿಯಿಂದ ಸ್ಫೂರ್ತಿ ಪಡೆದಿದ್ದ ಮರಾಠಿ ರಂಗಭೂಮಿ ತ್ರಿಲೋಕಕರ, ಕಿರ್ಲೋಸ್ಕರರ ಪ್ರಯತ್ನದಿಂದ ಕಂಪನಿ ರೂಪ ಪಡೆದುಕೊಂಡು ಬೆಳೆಯಿತು. ೧೮೮೦ರ ದಶಕದಲ್ಲಿ ಅನೇಕ ಪ್ರತಿಭಾವಂತ ನಟರಿಂದ, ಹಲವಾರು ಕಂಪನಿಗಳಿಂದ ಮರಾಠಿ ರಂಗಭೂಮಿ ಪ್ರಭಾವಶಾಲಿಯೆನಿಸಿತು. ಮರಾಠಿ ಕಂಪನಿಗಳು ಸಂಚರಿಸುತ್ತ ಉತ್ತರ ಕರ್ನಾಟಕವನ್ನು ಪ್ರವೇಶಿಸಿದವು. ಪ್ರಮುಖ ನಗರಗಳಲ್ಲಿ ಮುಕ್ಕಾಂ ಮಾಡಿ ನಾಟಕಗಳನ್ನಾಡಿದವು. ಮರಾಠಿ ಕಂಪನಿಗಳ ದೃಶ್ಯವೈಭವ, ಕಲಾವಿದರ ಗಾನಾಭಿನಯಗಳ ಮೋಡಿಗೆ ಕನ್ನಡಿಗರು ಮಾರುಹೋದರು. ಮರಾಠಿ ನಾಟಕಗಳನ್ನು ನೋಡುವುದು, ಮರಾಠಿ ಹಾಡುಗಳನ್ನು ಕೇಳುವುದು ಇಲ್ಲಿಯ ಜನರ ಶೋಕಿಯಾಗಿ ನಾಡಿನ ರಂಗಕಲೆಗಳು ಉಪೇಕ್ಷೆಗೊಳಗಾದವು.

ಶಾಂತಕವಿಗಳು ೧೯೧೯ರಲ್ಲಿ ರಚಿಸಿ ‘ಪ್ರಭಾತ’ ಪತ್ರಿಕೆಯಲ್ಲಿ ಪ್ರಕಟಿಸಿದ ‘ನಾಟಕ’ ಎಂಬ ಕವನವು ಮರಾಠಿ ನಾಟಕಗಳ ಪ್ರಭಾವಕ್ಕೆ ಸಿಲುಕಿದ ಉತ್ತರ ಕರ್ನಾಟಕದ ಚಿತ್ರವನ್ನು ವಿವರಿಸುತ್ತದೆ.

ಎಲ್ಲಿ ನೋಡಲು ಮರಾಠಿಯರ ನಾಟಕದಾಟ
ಎಲ್ಲಿ ನೋಡಲು ಮರಾಠಿ೬ಯರ ನಾಟಕದೂಟ
ಎಲ್ಲಿ ನೋಡಲು ಮರಾಠಿಯರ ನಾಟಕಮಯಂ ತಾನಾಯ್ತು ಕರ್ನಾಟಕಂ

ಕನ್ನಡ ನೆಲದಲ್ಲಿಯ ಈ ಮರಾಠಿ ನಾಟಕಗಳ ಉತ್ಕರ್ಷವು ನಾಡಿನ ಸಾಂಸ್ಕೃತಿಕ ದಾರಿದ್ಯ್ರವನ್ನು ಮೂದಲಿಸುವಂತಿತ್ತು. ಇಂಥ ಪರಿಸ್ಥಿತಿಯಲ್ಲಿ ನಾಡು – ನುಡಿಯ ಕಟ್ಟಾಭಿಮಾನಿಯಾಗಿದ್ದ ಶಾಂತಕವಿಗಳು ಕನ್ನಡ ರಂಗಕಲೆಯ ಪುನರುಜ್ಜೀವನಕ್ಕೆ ಮುಂದಾದರು. ಮರಾಠಿ ಕಂಪನಿ ನಾಟಕಗಳ ಪ್ರಭಾವವನ್ನು ಹಿಮ್ಮೆಟ್ಟಿಸುವದಕ್ಕಾಗಿ ಅದೇ ಮಾದರಿಯ ರಂಗಭೂಮಿ ಕರ್ನಾಟದಲ್ಲಿಯೂ ಅನಿವಾರ್ಯವೆನಿಸಿತು. ಅದಕ್ಕಾಗಿ ಶಾಂತಕವಿಗಳು ತಾವು ನೋಡಿದ ಬಯಲಾಟಗಳನ್ನೇ ಆಶ್ರಯಿಸಿ ಹೊಸ ನಾಟಕಗಳನ್ನು ರಚಿಸಿದರು. ಆಸಕ್ತಿಯುಳ್ಳ ಕಲಾವಿದರನ್ನು ಸಂಘಟಿಸಿ, ‘ಕೃತಪುರ ನಾಟಕ ಮಂಡಳಿ’ (೧೮೭೨) ಕಟ್ಟಿದರು. ಇದಕ್ಕಿಂತ ಮೊದಲು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿಯಲ್ಲಿ ಒಂದು ನಾಟಕ ಮಂಡಳಿ ಹುಟ್ಟಿದ್ದರೂ ಪ್ರಚಾರಕ್ಕೆ ಬಂದಿರಲಿಲ್ಲ. ಮುಂದೆ ಶಾಂತಿಕವಿಗಳನ್ನು ಅನುಸರಿಸಿಯೇ ಹೊಸ ಹೊಸ ಮಂಡಳಿಗಳು ಜನ್ಮ ತಾಳಿದವು. ಹೀಗೆ ಉತ್ತರ ಕರ್ನಾಟದಲ್ಲಿ ವೃತ್ತಿ ರಂಗಭೂಮಿಯ ಚಟುವಟಿಕೆಗಳು ನವಚೈತನ್ಯದಿಂದ ಆರಂಭವಾದವು. ಜನರು ಪಾರ್ಸಿ ಮತ್ತು ಮರಾಠಿ ಕಂಪನಿಗಳ ಆಕರ್ಷಣೆಯಿಂದ ಮುಕ್ತರಾಗಲು ಸಾಧ್ಯವಾಯಿತು.

ಉತ್ತರ ಕರ್ನಾಟಕಕ್ಕೆ ಹೋಲಿಸಿದರೆ ಮೈಸೂರು ಭಾಗದ ವೃತ್ತಿರಂಗಭೂಮಿಗೆ ಬದಗಿ ಬಂದ ಪ್ರೇರಣೆಗಳೇ ಬೇರೆ. ಮರಾಠಿ ನಾಟಕಗಳಿಂದ ಕನ್ನಡ ಭಾಷೆ – ಸಂಸ್ಕೃತಿಗೆ ಒದಗಿದ ತೊಂದರೆಯನ್ನು ಎದುರಿಸಿ ನಿಲ್ಲುವ ಅಗತ್ಯತೆಯಿಂದ ಉತ್ತರ ಕರ್ನಾಟಕದಲ್ಲಿ ವೃತ್ತಿರಂಗಭೂಮಿ ಹುಟ್ಟಿಕೊಂಡರೆ. ಮೈಸೂರು ಪ್ರದೇಶದಲ್ಲಿ ರಾಜಾಶ್ರಯದಲ್ಲಿಯೇ ಎಲ್ಲ ಕಲೆಗಳು ಪೋಷಿಸಲ್ಪಡುತ್ತಿದ್ದುದರಿಂದ ವೃತ್ತಿ ರಂಗಕಲೆಯಾದರೂ ಮಹಾರಾಜರ ಕೃಪಾಪೋಷಣೆಯಲ್ಲಿಯೇ ಹುಟ್ಟಿಬಂದಿತು. ಮರಾಠಿ ಮತ್ತು ಪಾರ್ಸಿ ಕಂಪನಿಗಳು ಉತ್ತರದಿಂದ ಮೈಸೂರು ಭಾಗಕ್ಕೆ ಹೋಗಿ ನಾಟಕಗಳನ್ನಾಡಲು ಅಲ್ಲಿಯ ಜನರೂ ಆಕರ್ಷಿತರಾಗಿ ಅವುಗಳ ಹಿಂದೆಬಿದ್ದರು. ಅನ್ಯಭಾಷೆಯ ನಾಟಕಗಳ ಪ್ರಭಾವದಿಂದ ಕನ್ನಡಿಗರು ತಮ್ಮ ರಂಗಭೂಮಿ ಮತ್ತು ಸಾಂಸ್ಕೃತಿಕ ಪರಂಪರೆಯ ಬಗೆಗಿನ ಅಭಿಮಾನವನ್ನು ಕಳೆದುಕೊಳ್ಳುತ್ತಿದ್ದ ಕಾಲದಲ್ಲಿ ಮೈಸೂರಿನ ರಾಜಾಶ್ರಯದಲ್ಲಿ ‘ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ’ (೧೮೮೧) ತಲೆಯೆತ್ತಿತು.

ಮೈಸೂರಿನಲ್ಲಿ ಜನ್ಮತಾಳಿದ ವೃತ್ತಿರಂಗಭೂಮಿಯು ಮಂಡ್ಯಂ ರಂಗಾಚಾರ್ಯ, ಚಕ್ರವರ್ತಿ ತಿರುನಾರಾಯಣ ಅಯ್ಯಂಗಾರ್‌, ಗೌರಿನರಸಿಂಹಯ್ಯ, ಗಿರಿಭಟ್ಟರ ತಮ್ಮಯ್ಯ, ಸರ್ಟನ್‌ ರಾಮಾರಾಯ, ವರದಾಚಾರ್ಯ, ಎಂ. ಪೀರ ಮುಂತಾದ ಪ್ರತಿಭಾವಂತ ನಟರ ಹಾಡುಗಾರಿಕೆ, ಅಭಿನಯ ಕೌಶಲ್ಯದಿಂದ ಭದ್ರ ನೆಲೆಯೂರಿ ಬೆಳೆಯಿತು. ಅರಮನೆ ಕಂಪನಿಯ ಸ್ಫೂರ್ತಿಯಿಂದ ಹಲವಾರು ಹೊಸ ಕಂಪನಿಗಳು ಹುಟ್ಟಿದವು. ಈ ರೀತಿ ಹತ್ತೊಂಭತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಉತ್ತರ ಕರ್ನಾಟಕ ಮತ್ತು ಮೈಸೂರು ಪ್ರದೇಶದಲ್ಲಿ ನಡೆದ ಇಂಥ ರಂಗಚಟುವಟಿಕೆಗಳಿಂದ ವೃತ್ತಿರಂಗಭೂಮಿಯ ವಿಕಾಸಕ್ಕೆ ಮಾರ್ಗ ಸಿದ್ಧವಾಯಿತು.

ಇವತ್ತಿನ ನಮ್ಮ ವೃತ್ತಿರಂಗಭೂಮಿಯ ಬೆನ್ನಿನ ಹಿಂದೆ ನೂರಾಮೂವತ್ತು ವರುಷಗಳ ಸುದೀರ್ಘ ಇತಿಹಾಸವಿದೆ. ಮೊದಲಿನ ಐದು ದಶಕಗಳ ಅವಧಿಯ ರಂಗಭೂಮಿಯ ಉಚ್ಛ್ರಾಯ ಕಾಲವಾದರೆ ಅನಂತರದ್ದು ಏರಿಳಿತಗಳ ದಾರಿ. ಇಂದಿನ ಕಂಪನಿ ನಾಟಕಗಳು ಹಿಂದಿನ ಪ್ರದರ್ಶನಗಳಿಗಿಂತ ತುಂಬ ಭಿನ್ನವಾಗಿವೆ. ಅದು ಸಹಜ ಕೂಡ. ರಂಗಭೂಮಿಯು ಅತ್ಯಂತ ಸಂವೇದನಾಶೀಲ ಕಲೆ. ಆಧುನಿಕ ವಿದ್ಯುನ್ಮಾನಗಳ ಆಕ್ರಮಣಗಳಿಗೆ ತುತ್ತಾಗುತ್ತ, ತನ್ನೊಳಗಿನ ಕಲಾತ್ಮಕತೆಯನ್ನು ಕಳೆದುಕೊಳ್ಳುತ್ತ ಅಭದ್ರತೆಯ ಅಂಚಿನತ್ತ ಹೆಜ್ಜೆ ಹಾಕುತ್ತಿರುವುದೇ ಇಂದಿನ ವೃತ್ತಿ-ರಂಗಭೂಮಿಯಾಗಿದೆ. ಇಂದು ನಾಟಕಗಳ ಆಯ್ಕೆ, ಸಂಭಾಷಣೆ, ಸಂಗೀತ, ರಂಗಸಜ್ಜಿಕೆ, ಅಭಿನಯ, ಪ್ರೇಕ್ಷಕರ ಪ್ರತಿಕ್ರಿಯೆ ಯಾವುದೂ ಅವಿಭಕ್ತವಾಗಿ ಉಳಿದಿಲ್ಲ. ಇದಕ್ಕೆ ಕಾರಣ ಒಂದಲ್ಲ, ಹಲವು. ಅವುಗಳ ಲೆಕ್ಕೆ ಹಾಕುತ್ತ ದೋಷಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಿದ್ದಾಗಿದೆ. ನಾಟಕ ಕಂಪನಿಗಳ ಕರುಣಾಜನಕ ಸ್ಥಿತಿಯ ಬಗ್ಗೆ ‘ಸಾಕು’ ಅನ್ನೋಮಟ್ಟಿಗೆ ಮಾತನಾಡಿದ್ದಾಗಿದೆ. ದೌರ್ಬಲ್ಯಗಳಿದ್ದರೂ ರಂಗಭೂಮಿಯ ನಿರಂತರತೆಗೆ ವೃತ್ತಿರಂಗಭೂಮಿಯೊಂದೇ ಪರಿಹಾರ್ಯ ಮಾರ್ಗವೆಂಬ ಸತ್ಯ ಅನುಭವಕ್ಕೆ ಬಂದಿದೆ. ಈ ಸಾಂಸ್ಕೃತಿಕ ಅರಿವಿನಿಂದ ಅದರ ಕಾಯಕಲ್ಪದ ಕಾರ್ಯ ಅಂತಃಕರಣಪೂರ್ವಕವಾಗಿ ನಡೆಯಬೇಕಿದೆ. ಈ ದಿಶೆಯಲ್ಲಿ ಕೊಣ್ಣೂರ ಕಂಪನಿಯ ಚರಿತ್ರೆ ನಮ್ಮ ಮುಂದೆ ಬೆಳಕು ಚೆಲ್ಲಬಹುದು.