‘ಕನ್ನಡ ರಂಗಭೂಮಿಯ ಏಳಿಗೆಗಾಗಿ ತನ್ನ ಕಾಲವನ್ನು, ಧನವನ್ನು ದಾರಾಳವಾಗಿ ವಿನಿಯೋಗಿಸಿದುದಕ್ಕಾಗಿ ಯಾವ ವ್ಯಕ್ತಿಗಾದರೂ ಕೃತಜ್ಞತೆ ಸಲ್ಲಬೇಕಾಗಿದ್ದರೆ, ಆ ವ್ಯಕ್ತಿ ಕಣಬರ್ಗಿಮಠರೇ ವಿನಃ ಬೇರೆ ಇಲ್ಲ’ ಎಂದು ಮುದುವೀಡು ಕೃಷ್ಣರಾಯರು ಹೇಳಿದ್ದಾರೆ. ರಂಗಕಲೆ ಸ್ವಾಮಿಗಳ ಆಸಕ್ತಿಯ ಒಂದು ಕ್ಷೇತ್ರ. ಅವರ ಆಸಕ್ತಿಯ ಮತ್ತು ಸಾಧನೆ-ಸಿದ್ಧಿಗಳ ಕ್ಷೇತ್ರಗಳು ಇನ್ನೂ ಅನೇಕವಾಗಿದ್ದವು. ವ್ಯಾಯಾಮ, ಕ್ರೀಡೆ, ಅಧ್ಯಯನ, ಭಾಷಣ, ಪ್ರವಾಸ, ಕೃಷಿ, ವ್ಯಾಪಾರ, ಶಿಕ್ಷಣ ಸಮಾಜಸೇವೆ ಹೀಗೆ ಹಲವು ಚಟುವಟಿಕೆಗಳನ್ನು ಸಮೀಕರಿಸಿಕೊಂಡ ಬಹುಮುಖೀ ವ್ಯಕ್ತಿತ್ವ ಅವರದು. ದಣಿವಿಲ್ಲದ ದಿನಚರಿಗೆ ಅವರು ಬರೆದ ದಿನಚರಿ ಪುಟಗಳೇ ನಿದರ್ಶನ. ಅವರ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಹಿನ್ನೆಲೆಯಾಗಿದ್ದ ಮುಖ್ಯ ಪರಿಸರವನ್ನು ಹೀಗೆ ಗುರುತಿಸಬಹುದು.

೧. – ಇಂಗ್ಲೀಷ ಶಿಕ್ಷಣ ಮತ್ತು ಆಡಳಿತ.

೨. – ಜ್ಯೋತಿಬಾ ಫುಲೆಯವರ ಸಮಾಜ ಸುಧಾರಣೆ ಮತ್ತು ತಿಲಕರ ಸ್ವರಾಜ್ಯ ಚಳುವಳಿ.

೩. – ಸಾಂಸ್ಕೃತಿಕಲೋಕದ ನವೋದಯ ಚಟುವಟಿಕೆಗಳು.

ಸ್ವಾಮಿಗಳು ಜನಿಸಿದ್ದು (೪.೬.೧೮೭೪) ಬೆಳಗಾವಿ ಸಮೀಪದ ಕಣಬರಿಗಿಯಲ್ಲಿ. ಅವರಿಗೆ ಇಂಗ್ಲೀಷ ಸಂಸ್ಕಾರ ದೊರೆತದದು ಗೋಕಾಕ ಮಿಲ್ಲಿನಲ್ಲಿ. ಅದೊಂದು ಯೋಗಾಯೋಗ. ಮಿಲ್ಲಿಗೆ ಹೋಗಲು ಕಾರಣವಾದ ಘಟನೆಯನ್ನುಯ ಅವರ ಸಂಬಂಧಿಕರು ನೆನಪಿಸುವುದು ಹೀಗೆ: ‘ಅವರಿಗಾಗ ೧೦-೧೨ ವರ್ಷಗಳಿರಬಹುದು. ಗೆಳೆಯರೊಂದಿಗೆ ಗೋಕಾಕ ಜಲಪಾತ ನೋಡಲು ಹೋಗಿದ್ದರು. ತಿರುಗಿ ಬರುವಾಗ ಮಿಲ್ಲನ್ನು ನೋಡಬೇಕೆಂದರು. ಮಿಲ್ಲಿನ ಮ್ಯಾನೇಜರ – ಇಂಗ್ಲೀಷ ಅಧಿಕಾರಿ ವಾಯುವಿಹಾರ ಹೊರಟಿದ್ದರು. ಅವರನ್ನು ಕಂಡು ಜನ ಹೆದರಿ ದೂರ ಸರಿಯುತ್ತಿದ್ದರು. ಶಿವಮೂರ್ತಯ್ಯನ ಮುಂದಾಳ್ತನದ ಹುಡುಗರು ಹೆದರಲಿಲ್ಲ. ಹುಡುಗರ ದಿಟ್ಟತನ ಕಂಡ ಅಧಿಕಾರಿ ಕರೆದಾಗ ಶಿವಮೂರ್ತಯ್ಯ ಹೋದ. ತನ್ನ ಹೆಸರು ಹೇಳಿದ. ಹುಡುಗನ ಧೈರ್ಯ ಮೆಚ್ಚಿಕೊಂಡ ಅಧಿಕಾರಿ ಮಿಲ್ಲಿನಲ್ಲಿಯೇ ಇರಲು ಕೇಳಿದಾಗ ಶಿವಮೂರ್ತಯ್ಯ ಒಪ್ಪಿಕೊಂಡ. ತಂದೆ ತಾಯಿಗಳು, ಮಗನು ಮಾಂಸ ತಿಂದು ಕುಲಗೆಡಬಹುದೆಂದು ಹೆದರಿಕೊಂಡಾಗ ‘ನಿಮ್ಮ ಮಗನಿಗೆ ಬ್ರೆಡ್‌ ಹಣ್ಣು ಕೊಡುವೆವು’ ಎಂದು ಅಧಿಕಾರಿ ಭರವಸೆ ಕೊಟ್ಟನು”.[1] ಅಂದಿನಿಂದ ಸ್ವಾಮಿಗಳ ದಿನಚರಿಯೇ ಬದಲಾಯಿತು.

ಸಾಹೇಬರ ಸಾನಿಧ್ಯದಲ್ಲಿ ಇಂಗ್ಲೀಷ ಕಲಿತರು, ಆಡಳಿತದ ದಕ್ಷತೆ, ಅಧ್ಯಯನದ ಶಿಸ್ತನ್ನು ಅನುಸರಿಸಿದರು. ಅವರ ಜಾಣತನಕ್ಕೆ ಕ್ಲಾರ್ಕ್ ಹುದ್ದೆಯೂ ದೊರೆಯಿತು. ಕಚೇರಿ ಕೆಲಸದಲ್ಲಿ ತೋರಿಸುತ್ತಿದ್ದ ಪ್ರಾಮಾಣಿಕತೆ, ಪರಿಶ್ರಮ, ಸಮಯಪ್ರಜ್ಞೆಯಿಂದ ಮೇಲಾಧಿಕಾರಿಗಳ ಮೆಚ್ಚುಗೆ ಗಳಿಸಿದರು. ಒಮ್ಮೆ ಹತ್ತಿ ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡಾಗ ಧೈರ್ಯದಿಂದ ಮುನ್ನುಗ್ಗಿ ಅವುಗಳನ್ನು ಸುರಕ್ಷಿತ ಜಾಗಕ್ಕೆ ಸಾಗಿಸಿದರು. ಇಂಥ ಹಲವು ಪ್ರಸಂಗಗಳಿಂದ ಸ್ವಾಮಿಗಳು ಬೇಗನೆ ಟೈಮಿಂಗ್‌ ಆಫಿಸರ್ ಹುದ್ದೆಗೆ ಬಡ್ತಿಯಾದರು. ೧೯೦೨ರಲ್ಲಿ ಅವರಿಗಿದ್ದ ಸಂಬಳ ೫೦/-ರೂ.ಗಳು ಮಿಲ್ಲಿನ ಮ್ಯಾನೇಜರ್ ಕೇರ್ ಸಾಹೇಬರ ಪ್ರೀತಿ, ಪ್ರೋತ್ಸಾಹದಿಂದ ಸ್ವಾಮಿಗಳು ಹಂತ ಹಂತವಾಗಿ ಜವಾಬ್ದಾರಿಯ ಕೆಲಸಗಳನ್ನು ನಿಭಾಯಿಸುವಂತಾಯಿತು.

ಆಟ – ನಾಟಕಗಳ ಬಗೆಗಿನ ಅವರ ಆಸಕ್ತಿಗೆ ಅವರು ಕಟ್ಟಿದ್ದ ನಾಟಕ ಕಂಪನಿಯೇ ಉತ್ತಮ ನಿದರ್ಶನ. ನಾಟಕಗಳಿಗೆ ಒಲಿಯುವ ಮೊದಲು ಪಾರಿಜಾತ ಕಲಿಯಬೇಕೆಂಬ ಉತ್ಸಾಹದಿಂದ ಬಡಕುಂದ್ರಿ ಬಸಪ್ಪನನ್ನು ಗುರುವನ್ನಾಗಿ ಸ್ವೀಕರಿಸಿದ್ದರು. ‘ಪಾರಿಜಾತದ ಹಾಡುಗಾರಿಕೆಗೆ ಸಾಧನೆ ಬೇಕು. ದಿನಾ ಮುಂಜಾನೆ ನದಿಯಲ್ಲಿ ಸ್ನಾನ ಮಾಡುತ್ತ ನಡಗುವ ಧ್ವನಿಯಿಂದ ಆಲಾಪವನ್ನು ಅಭ್ಯಾಸ ಮಾಡು’ ಎಂದು ಬಸಪ್ಪ ಹೇಳಿದ್ದನ್ನು ಕೆಲವು ತಿಂಗಳು ಶ್ರದ್ಧೆಯಿಂದ ಮಾಡಿದರಂತೆ’.[2] ಅನಂತರ ದೊಡ್ಡಾಟಗಳಲ್ಲಿ ಸಾಧನೆ ಮಾಡಿ ನಾಟಕಗಳ ಬೆನ್ನು ಹತ್ತಿದರು. ಸ್ವಾಮಿಗಳಲ್ಲಿ ಉದ್ಯೋಜಕತೆ, ಕಲಾಪ್ರತಿಭೆಗಳೆರಡೂ ಇದ್ದುದರಿಂದ ನಾಟಕವು ವೃತ್ತಿಯಾಗಿ, ಕಲೆಯಾಗಿಯೂ ಅವರ ಕೈಯಲ್ಲಿ ಯಶಸ್ಸನ್ನು ಸಾಧಿಸಿತು.

೧೯ನೆಯ ಶತಮಾನದ ಕೊನೆಯಲ್ಲಿ ಮಹಾರಾಷ್ಟ್ರದಲ್ಲಿ ತೀವ್ರ ಸ್ವರೂಪ ತಾಳಿದ ಸಮಾಜ ಸುಧಾರಣೆಯ ಚಳುವಳಿಯಿಂದ ಸ್ವಾಮಿಗಳು ಪ್ರಭಾವಿತರಾಗಿದ್ದರು. ಜ್ಯೋತಿಬಾ ಫುಲೆಯವರ ಸತ್ಯಶೋಧಕ ಸಮಾಜದ ಚಟುವಟಿಕೆಗಳನ್ನು ಮುಂದುವರೆಸಿದ್ದ ಕೊಲ್ಲಾಪುರದ ಛತ್ರಪತಿ ಶಾಹುಮಹಾರಾಜರ ಒಡನಾಟವಿತ್ತು. ಅವರ ಸಭೆ – ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಚಳುವಳಿಯ ಮುಖ್ಯ ಗುರಿ ಬ್ರಾಹ್ಮಣೇತರ ಬಹುಜನ ಸಮಾಜದ ಸಂಘಟನೆ ಮತ್ತು ಶಿಕ್ಷಣ ಪ್ರಸಾರ. ಇಂಥ ಕಾರ್ಯಕ್ರಮಗಳನ್ನು ಬೆಳಗಾವಿ ಪ್ರದೇಶದಲ್ಲಿ ಜಾರಿಗೆ ತರುವುದು ಸ್ವಾಮಿಗಳ ಕೆಲಸವಾಗಿತ್ತು. ಸತ್ಯಶೋಧಕ ಸಮಾಜದ ಧ್ಯೇಯ ಧೋರಣೇಗಳನ್ನು ಪ್ರಚಾರ ಮಾಡುವಂಥ ನಾಟಕವನ್ನು ಆಡುತ್ತಿದ್ದರೆಂಧು ಅದಕ್ಕೆ ಜನರು ‘ಬೋಳಿ ಆಟ’ ಎಂದು ಕರೆಯುತ್ತಿದ್ದರೆಂದು ಕೇಳಿದ್ದೇನೆ. ಶಿಕ್ಷಣ, ಸಂಸ್ಕೃತಿಯ ಬಗೆಗೆ ಮಹಿಳೆಯರಲ್ಲಿಯೂ ಜಾಗೃತಿ ಮೂಡಿಸಿ ಗೋಕಾಕಫಾಲ್ಸ, ಕೋಣ್ಣೂರಿನಲ್ಲಿ ಮಹಿಳಾ ಸಂಘಟನೆಗಳು ಹುಟ್ಟಿಕೊಳ್ಳುವುದಕ್ಕೂ ‘ಸ್ವಾಮಿಗಳು ಕಾರಣರಾಗಿದ್ದಾರೆ. ಬಡವರ ಸಹಾಯಾರ್ಥ ‘ಜನತಾ ಫಂಡ್‌’ ಯೋಜನೆ ರೂಪಿಸಿ ಹಣ ಸಂಗ್ರಹ ಮಾಡುತ್ತಿದ್ದರು. ಸಂಗ್ರಹವಾದ ಹಣವನ್ನು ದೀನ ದಲಿತರ ಕಲ್ಯಾಣಕ್ಕಾಗಿ ಉಪಯೋಗಿಸುತ್ತಿದ್ದರು.

ಈಜು, ಕುಸ್ತಿ, ಕಬಡ್ಡಿ, ಕ್ರಿಕೆಟ, ಫುಟ್‌ ಬಾಲ್‌, ವ್ಯಾಯಾಮ, ಚಟುವಟಿಕೆಗಳಲ್ಲಿಯೂ ಅವರಿಗೆ ಆಸಕ್ತಿ. ವಿಠ್ಠು ಪೈಲ್ವಾನನ ಜೊತೆಗೆ ಕುಸ್ತೀ ಆಡುತ್ತಿದ್ದ ಫೋಟೋ ಅವರ ಸಂಗ್ರಹದಲ್ಲಿದೆ. ಪರಿಣತ ವ್ಯಾಯಾಮಪಟುಗಳಿಂದ ಅಥ್ಲೆಟಿಕ್‌, ಸ್ಯಾಂಡೊ ಎಕ್ಸರಸಾಯಿಜಗಳನ್ನು ಕಲಿತಿದ್ದರು. ನಿಯಮಿತವಾಗಿ ಮಾಡುತ್ತಿದ್ದರು. ದೈಹಿಕ ಕಸರತ್ತಿನ ಜೊತೆಗೆ ಧರ್ಮ, ಶಾಸ್ತ್ರ, ಸಾಹಿತ್ಯ ಗ್ರಂಥಗಳನ್ನು, ರಾಷ್ಟ್ರ ಪುರುಷರ ಚರಿತ್ರೆಗಳನ್ನು ಓದುವ ಹವ್ಯಾಸವಿತ್ತು. ಆಪ್ತರಿಗೆ, ಕಲಾವಿದರಿಗೆ, ಸಮಾಜದ ಧುರೀಣರಿಗೆ ಪತ್ರ ಬರೆಯುವುದು ದಿನಚರಿಯ ಭಾಗವಾಗಿತ್ತು. ಮೈಸೂರ ಸ್ವಾರ್ (ಕನ್ನಡ), ಕೇಸರಿ (ಮರಾಠಿ) ಟೈಮ್ಸ (ಇಂಗ್ಲೀಷ) ಪತ್ರಿಕೆಗಳನ್ನು ತಪ್ಪದೆ ಓದುತ್ತಿದ್ದರು. ನಾಟಕ ಕಂಪನಿಯ ಸಮಾಚಾರ, ನಾಟಕಗಳ ಸಮೀಕ್ಷೆಯನ್ನು ಮೈಸೂರ ಸ್ಟಾರ್ ಪತ್ರಿಕೆಗೆ ಬರೆಯುತ್ತಿದ್ದರು. ಸ್ವಾಮಿಗಳು ಉತ್ತಮ ವಾಗ್ಮಿಗಳೂ ಆಗಿದ್ದರು. ವೀರಶೈವ ಮಹಾಸಭೆಯ ಅಧಿವೇಶನಗಳಲ್ಲಿ, ೨ನೆಯ ಮಹಾಯುದ್ಧದ ಸಂದರ್ಭದಲ್ಲಿ, ಬ್ರಾಹ್ಮಣೇತರ ಸಮಾಜದ ಸಂಘಟನೆಯ ಸಭೆಗಳಲ್ಲಿ, ಕಲಾವಿದರ ಗೌರವ ಸಮಾರಂಭಗಳಲ್ಲಿ ಅವರು ಪ್ರಭಾವೀ ಭಾಷಣ ಮಾಡುತ್ತಿದ್ದರಂತೆ.

ಇವರ ಕರ್ತೃತ್ವಶಕ್ತಿ ಕಂಡ ಹಾನಗಲ್ಲ ಕುಮಾರಸ್ವಾಮಿಗಳು ವೀರಶೈವ ಮಹಾಸಭೆಯ ಅಧಿವೇಶನಗಳನ್ನು ಸಂಘಟಿಸುವ ಹೊಣೆಯನ್ನು ವಹಿಸಿದ್ದರು. ಬಾಗಲಕೋಟೆ, ಧಾರವಾಡ, ಬೆಳಗಾವಿ, ನಿಪ್ಪಾಣಿಗಳಲ್ಲಿ ವೀರಶೈವ ಅಧಿವೇಶನಗಳನ್ನು ಸಂಘಟಿಸಿ ಯಶಸ್ವಿಗೊಳಿಸಿದ ಬಗ್ಗೆ ದಾಖಲೆಗಳಿವೆ. ಶಿರಸಂಗಿ ಲಿಂಗರಾಜರು, ವಂಟಮುರಿ ದೇಸಾಯಿ, ತಲ್ಲೂರ ದೇಸಾಯಿ, ಗದುಗಿನ ಮಾನ್ವಿ, ರಾವಬಹದ್ದೂರ ರುದ್ರಗೌಡ ಅರಟಾಳ, ಪಂಡಿತಪ್ಪ ಚಿಕ್ಕೋಡಿ ಮುಂತಾದ ವೀರಶೈವ ಸಮಾಜದ ಧುರೀಣರೊಂದಿಗೆ ಸ್ವಾಮಿಗಳ ಒಡನಾಟವಿತ್ತು. ಬಸವನಾಳ ಮತ್ತು ಹಲವಾರು ವೀರಶೈವ ತರುಣರ ಉಚ್ಚ ಶಿಕ್ಷಣಕ್ಕಾಗಿ ಇವರು ಆರ್ಥಿಕ ನೆರವು ನೀಡಿದ್ದಿದೆ. ಮುಂಬಯಿಯಲ್ಲಿ ‘ವೀರಶೈವ ಆಶ್ರಮ’ದಿಂದ ಪ್ರೇರಿತರಾಗಿ ಬೆಳಗಾವಿಯಲ್ಲಿ ಶಿಕ್ಷಣ ಸಂಸ್ಥೆಯೊಂದು ಕಟ್ಟುವ ಯೋಜನೆ ರೂಪಿಸುತ್ತಿರುವಾಗ ಪಂಡಿತಪ್ಪ ಚಿಕ್ಕೋಡಿ, ಕಟ್ಟೀಮನಿ ಮುಂತಾದವರು ‘ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ (ಇಂದಿನ ಕೆ.ಎಲ್‌.ಇ.ಸಂಸ್ಥೆ)’ ಸ್ಥಾಪಿಸುತ್ತಿರುವುದು ಗೊತ್ತಾಯಿತು. ತಮ್ಮ ಯೋಜನೆ ಅವರಿಂದ ಸಾಕಾರಗೊಳ್ಳುತ್ತಿರುವುದನ್ನು ಕಂಡು ಸಂತೋಷಪಟ್ಟು ಅವರಿಗೆ ಬೆಂಬಲವಾಗಿ ನಿಂತರು. ಹಾನಗಲ್ಲಿನ ‘ಶಿವಯೋಗ ಮಂದಿರ’ ಧಾರವಾಡದ ‘ಕೆ.ಸಿ.ಸಿ. ಬ್ಯಾಂಕ್‌’ ಗೋಕಾಕ ರೋಡ (ರೈಲು ನಿಲ್ದಾಣ) ಇವುಗಳ ನಿರ್ಮಾಣದಲ್ಲಿ ಸ್ವಾಮಿಗಳ ಪ್ರಯತ್ನದ, ಪ್ರಭಾವದ ಪಾತ್ರವಿದೆ. ಆಡಳಿತ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲಿಯ ಸಾಧನೆಯಿಂದ ಎಲ್ಲರೂ ಸ್ವಾಮಿಗಳನ್ನು ಗೌರವಭಾವದಿಂದ ನೋಡುವಂತಾಯಿತು. ಮುಂಬಯಿ ಗವರ್ನರ್ ಲಾರ್ಡ್ ವಿಲಿಂಗ್ಡನ್‌ರು ‘ರಾವಸಾಹೇಬ’ ಪದವಿಯನ್ನಿತ್ತು ಗೌರವಿಸಿದ್ದು ಅಂದಿನ ಜನಪ್ರಿಯತೆಯ ದ್ಯೋತಕವಾಗಿದೆ.

೧೯೦೬ ಮಾರ್ಚ ೨೩ರಂಧು ಅವರ ತಾಯಿ ತೀರಿಕೊಂಡರು. ತಂತಿ ಮೂಲಕ ಸುದ್ದಿ ತಿಳಿಯಿತು. ಸ್ವಾಮಿಗಳು ಗೂಡ್ಸ್‌ ರೈಲಿನಿಂದ ಊರಿಗೆ ಧಾವಿಸಿದರು. ಊರ ಸಮೀಪದ ಹೊಲದಲ್ಲಿ ತಾಯಿಯ ಅಂತ್ಯಸಂಸ್ಕಾರ ನಡೆಯುತ್ತಿದ್ದುದನ್ನು ನೋಡಿ, ನಡುದಾರಿಯಲ್ಲಿಯೇ ರೈಲು ನಿಲ್ಲಿಸಿ ಅಂತ್ಯಸಂಸ್ಕಾರಕ್ಕೆ ಒದಗಿದರಂತೆ. ಇದರಿಂದ ಅವರ ವರ್ಚಸ್ಸು ಎಷ್ಟಿತ್ತೆಂಬುದನ್ನು ಅರಿಯಬಹುದು. ೧೯೩೧ರಲ್ಲಿ ಗರುಡರ ನಾಟಕ ಕಂಪನಿ ಮುಂಬಯಿ ಪ್ರವಾಸಕ್ಕೆ ಹೊರಟಾಗ ಮುದವೀಡು ಕೃಷ್ಮರಾಯರ ಜೊತೆಗೆ ಶಿವಮೂರ್ತಿಸ್ವಾಮಿಗಳೂ ಆ ಕಂಪನಿಯ ನೇತೃತ್ವವಹಿಸಿದ್ದರು. ಇವರ ರಂಗಸೇವೆ ಮೆಚ್ಚಿಕೊಂಡಿದ್ದ ದೇಶಪಾಂಡೆ ಗಂಗಾಧರರಾಯರು (ಬೆಳಗಾವಿ ಪ್ರದೇಶದ ಹಿರಿಯ ಸ್ವಾತಂತ್ಯ್ರ ಹೋರಾಟಗಾರರು) ಸಾರ್ವಜನಿಕ ಸಮಾರಂಭ ಏರ್ಪಡಿಸಿ ಶಿವಮೂರ್ತಿಸ್ವಾಮಿಗಳಿಗೆ ಬಂಗಾರದ ಪದಕವನ್ನು ಕೊಟ್ಟು ಗೌರವಿಸಿದರು.

ಸ್ವಾಮಿಗಳ ಕುಟುಂಬಜೀವನ ಸುಖ ದುಃಖಗಳ ಸಮರಸವಾಗಿತ್ತು. ಕೈಹಿಡಿದ ಪತ್ನಿಯರು ಅಲ್ಪಾಯುಷಿಗಳಾಗಿ ತೀರಿಕೊಳ್ಳಲು ಐದು ಸಲ ಮದುಮಗನಾಗಿ ನಿಂತು ಪರಿಸ್ಥಿತಿಯನ್ನು ಎದುರಿಸಿದರು. ಮೊದಲ ಪತ್ನಿ (ಕಾಡಾಪುರ) ಯಿಂದ ಹುಟ್ಟಿದವನು ಶಿವಲಿಂಗಯ್ಯ, ಕೊನೆಯ ಪತ್ನಿ (ಹೋಳೆ ಆಲೂರಿನ ಹತ್ತಿರದ ಜಕನೂರ) ಯಿಂದ ಶಿವಶಂಕರ ಹುಟ್ಟಿದನು. ಮಧ್ಯದಲ್ಲಿಯ ಮೂವರು ಪತ್ನಿಯರು ಮಕ್ಕಳನ್ನು ಹೆರುವ ಮೊದಲೇ ಕಣ್ಮುಚ್ಚಿದ್ದರು.

ಸ್ವಾಮಿಗಳದು ದೈವಭೀರು ಮನಸ್ಸು. ಕಷ್ಟಸುಖಗಳನ್ನು ದೈವದ ಮೇಲೆ ಹೊರಸಿ ನಿರುಮ್ಮಳಾಗಿರುತ್ತಿದ್ದರು. ಹಾಗೆಂದು ಕೈಕಟ್ಟಿಕೊಂಡು ದೈವದ ಬಲಾಬಲಗಳನ್ನು ನಿರೀಕ್ಷಿಸುತ್ತ ಕೂಡವ ಹೇಡಿಗಳಾಗಿರಲಿಲ್ಲ. ತೇಲಲಿ ಮುಳಗಲಿ ಕಾರ್ಯಕ್ಷೇತ್ರಕ್ಕೆ ಮುನ್ನುಗ್ಗುತ್ತಿದ್ದರು. ಇದ್ದ ಕೆಲಸಗಳನ್ನು ಮಾಡುತ್ತ, ಹೊಸ ಕೆಲಸಗಳನ್ನು ಹುಡುಕುತ್ತ ನಿತ್ಯವೂ ಚಟುವಟಿಕೆಯಿಂದಿರುವುದು ಅವರ ಜಾಯಮಾನವಾಗಿತ್ತು. ಅಂಥ ಗಟ್ಟಿ ಧೈರ್ಯದವರಾಗಿದ್ದರಿಂದ ಪತ್ನಿಯರ ಸಾವು, ಜೇಲುಶಿಕ್ಷೆ ಅವರನ್ನು ವಿಚಲಿತಗೊಳಿಸಲಿಲ್ಲ. ಪತ್ನಿಯರ ಸಾವಿನ ಮರುದಿನವೇ ‘ದೇವರ ಚಿತ್ತ’ ಎಂದು ಕಾರ್ಯಕ್ಷೇತ್ರಕ್ಕೆ ಹೊರಡುತ್ತಿದ್ದರು.

ಸ್ವಾಮಿಗಳು ಕುಟುಂಬವತ್ಸಲರಾಗಿದ್ದರು. ಹೆಂಡತಿ – ಮಕ್ಕಳು, ಬಂಧು – ಬಳಗದವರ ಬಗೆಗಿನ ಅವರ ಪ್ರೀತಿ ಅನನ್ಯವಾಗಿತ್ತು. ಮನೆಯವರ ಬೇಕು ಬೇಡಿಕೆಗಳನ್ನು ನಿರ್ಲಕ್ಷಿಸಿದವರಲ್ಲ. ಮಕ್ಕಳ ಉಚ್ಚವ್ಯಾಸಂಗದ ಬಗ್ಗೆ ಲಂಡನ್ನಿಗೆ ಕಳಿಸುವ ಕನಸು ಕಂಡಿದ್ದರು. ಅವರ ಬುದ್ಧಿಶಕ್ತಿ, ಸಾಮಾನ್ಯ ಜ್ಞಾನದ ವಿಕಾಸಕ್ಕಾಗಿ ವಿದೇಶಗಳಿಂದ ಬೆಲೆಯುಳ್ಳ ಪುಸ್ತಕಗಳನ್ನು ತರಿಸಿದ್ದರಂತೆ. ಕ್ರೀಡೆಯಲ್ಲಿ, ಈಜು-ಟೆನಿಸ್‌ ಆಟಗಳಲ್ಲಿ ತರಬೇತಿ ಕೊಡಿಸುವ ಏರ್ಪಾಡು ಮಾಡಿದ್ದರಂತೆ. ತಂದೆಯ ಅಪೇಕ್ಷೆಯಂತೆ ಮಕ್ಕಳೂ ಓದು, ಕ್ರೀಡೆಗಳಲ್ಲಿ ಮುಂದಿದ್ದರು. ಹಿರಿಯ ಮಗ ಶಿವಲಿಂಗ ಕೇಂದ್ರ ಅಬಕಾರಿ ಖಾತೆಯಲ್ಲಿ ಇನ್‌ಸ್ಪೆಕ್ಟರ್, ಕಿರಿಯ ಮಗ ಶಿವಶಂಕರನು ಸೈನ್ಯ ಖಾತೆಯಲ್ಲಿ ಕರ್ನಲ್‌ ಆಗಿದ್ದನು.

ಕಣಬರಗಿಯಲ್ಲಿದ್ದ ಸೋದರರಿಗೂ ನೆರವು ಧಾರಾಳವಿತ್ತು. ಹೊಲ, ತೋಟಗಳನ್ನು ಕೊಡಿಸಿದ್ದರು. ವ್ಯಾಪಾರದಲ್ಲಿಯು ಆಸ್ಥೆ ಬಹಳ. ೪-೭.೧೯೧೬ ರಂದು ಮಿಲ್ಲಿನ ಸೇವೆಯಿಂದ ಬಿಡುಗಡೆಯಾಗಿ ಬೈಲಹೊಂಗಲದಲ್ಲಿದ್ದ ಟಿ.ಪಿ. ಬಾಯ್ಸ್‌ ಜಿನ್ನಿಂಗ್‌ ಮಿಲ್ಲನ್ನು ಖರೀದಿಸಿದರು. ಬೈಲಹೊಂಗಲದಲ್ಲಿಯೇ ಮನೆ ಮಾಡಿ ಆಸಕ್ತಿಯ ಕೆಲಸಗಳನ್ನೆಲ್ಲ ಮುಂದುವರೆಸಿದ್ದರು. ೧೯೧೮ರಲ್ಲಿ ವ್ಯಾಪಾರದಲ್ಲಿ ಭಾರಿ ನಷ್ಟನ್ನು ಅನುಭವಿಸಿದರು. ಅದೇ ವೇಳೆಗೆ ಆರೋಪವೊಂದರಲ್ಲಿ ಸಿಕ್ಕು ೧೯ ತಿಂಗಳು ಸೆರೆಮನೆಗೆ ಹೋಗಿ ಬಂದರು. ಆ ಬಳಿಕ ಸ್ವಾಮಿಗಳು ಪ್ರತಿಕೂಲ ಪರಿಸ್ಥಿತಿಯೊಂದಿಗೇ ಹೋರಾಡಿದರು. ಪಾಲುದಾರಿಕೆ ವ್ಯವಹಾರದಲ್ಲಿಯ ಮೋಸ, ಬಾಯ್ಸ್‌ ಕಂಪನಿಯ ನಷ್ಟ ಇವುಗಳಿಂದ ಆರ್ಥಿಕ ಸ್ಥಿತಿ ಕುಗ್ಗಿತು. ಹಣಕಾಸಿನ ಸ್ಥಿತಿ ಕೆಟ್ಟರೂ ಅವರ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಚಟುವಟಿಕೆಗಳು ನಿಂತಿರಲಿಲ್ಲ. ನಾಟಕ ಕಂಪನಿ, ಕಲಾವಿದರನ್ನು ಪ್ರೋತ್ಸಾಹಿಸುತ್ತಲೇ ಇದ್ದರು. ನಾಟಕ ಅವರ ಮೆಚ್ಚಿನ, ಮಹತ್ವಾಕಾಂಕ್ಷೆಯ ಕಲೆಯಾಗಿತ್ತು. ಇಂಥ ಕಲಾಭಿಮಾನಿ, ಕಲಾಪೋಷಕ ಶಿವಮೂರ್ತಿಸ್ವಾಮಿಗಳು ೧೯೩೧, ಆಗಸ್ಟ, ೩೧ ಶ್ರಾವಣ ಸೋಮಾವಾರದಂದು ನಿಧನರಾದರು. ಸಾಯುವ ಮೊದಲ ದಿನ (೩೦ ರಂದು) ಸಹಿತ ದಿನಚರಿ ಬರೆದಿದ್ದರು.

 

[1] ಶಂಕ್ರಯ್ಯಸ್ವಾಮಿ ಹಂದಿಗೂಡಮಠ (ಶಿವಮೂರ್ತಿ ಸ್ವಾಮಿಗಳ ಎರಡನೆಯ ಹೆಂಡತಿಯ ಸೋದರ) ಸಂದರ್ಶನ ದಿನಾಂಕ ೧೫.೨.೯೨ ಸ್ಥಳ, ಬೆಳಗಾವಿ

[2] ಶಂಕ್ರಯ್ಯಸ್ವಾಮಿಗಳೊಡನೆ ಸಂದರ್ಶನ.
ಇವುಗಳ ಜೊತೆಗೆ ಕೊಣ್ಣೂರ ಕಂಪನಿಯಲ್ಲಿ ಕಲಾವಿದರಾಗಿದ್ದ ಪರಪ್ಪ (ಪಿ.ವಿ) ಪಾಟೀಲ ಮತ್ತು ಏಣಗಿ ಬಾಳಪ್ಪ, ಬಾಬುರಾವ ದೇಸಾಯಿ ಇವರ ಜೊತೆಗಿನ ಮಾತುಕತೆ ಮತ್ತು ಶಿವಮೂರ್ತಿ ಸ್ವಾಮಿಗಳ ಬರೆದ ಡೈರಿಗಳಿಗೆ ಈ ಲೇಖಕ ಆಭಾರಿಯಾಗಿದ್ದಾನೆ.