ಶಿವಮೂರ್ತಿಸ್ವಾಮಿಗಳ ಡೈರಿಗಳು ಕಳೆದು ಹೋಗಿವೆ ಎಂಬ ಸುದ್ಧಿಯನ್ನೇ ನಂಬಿದ್ದ ನನಗೆ ೧೯೯೯ – ಜೂನ್‌ ೧೬ ಸೋಜಿಗದ ಸಂಭ್ರಮದ ದಿನವಾಗಿತ್ತು. ಅಂದು ರಂಗಕಲಾವಿದ ಬಾಬುರಾವ ದೇಸಾಯಿ ಅವರೊಂದಿಗೆ ಸ್ವಾಮಿಗಳು ಬರೆದಿಟ್ಟ ಡೈರಿಗಳನ್ನು ಕಣ್ಮುಟ್ಟಿ ನೋಡುವ, ಕೈಮುಟ್ಟಿ ಹಿಡಿಯುವ, ಮನಮುಟ್ಟಿ ಓದುವ ಅವಕಾಶ ಸಿಕ್ಕಿತು. ಶಿವಮೂರ್ತಿಸ್ವಾಮಿಗಳ ಮೊಮ್ಮಗಳು ಶಾಂತಾಬಾಯಿ ಹಿರೇಮಠ (ಶಿವಲಿಂಗಯ್ಯನವರ ಮಗಳು) ಮೊಮ್ಮಗ ಬ್ರಿಗೇಡಿಯರ್ ಶಿವಮೂರ್ತಯ್ಯ (ಶಿವಶಂಕರರ ಮಗ) ಇವರಿಬ್ಬರು ಅಂದು ಡೈರಿಗಳನ್ನು ಓದಲು ಕೊಟ್ಟು ಸಹಕರಿಸಿದ್ದರು. ಅಂದಂದಿನ ಚಟುವಟಿಕೆಗಳನ್ನು ನಿಯಮತಿವಾಗಿ ಮುಖ್ಯಾಂಶ ರೂಪದಲ್ಲಿ ಬರೆದಿಡುವುದು ಶಿವಮೂರ್ತಿ ಸ್ವಾಮಿಗಳ ದಿನಚರಿಯ ಭಾಗವೇ ಆಗಿತ್ತು.

ಸ್ವಾಮಿಗಳು ಇಪ್ಪತ್ತೊಂದನೆಯ ವಯಸ್ಸಿನಿಂದಲೇ ಡೈರಿ ಬರೆಯುವುದನ್ನು ರೂಢಿಸಿಕೊಂಡಿರಬೇಕೆನಿಸುತ್ತದೆ. ೧೮೯೫ ರಿಂದ ೧೯೩೧ ಅಗಷ್ಟ ೩೦ರ ವರೆಗೆ (ಶಿವಮೂರ್ತಿ ಸ್ವಾಮಿಗಳು ನಿಧನರಾದದ್ದು ಅಗಷ್ಟ ೩೧) ದಿನಚರಿಯನ್ನು ಬರೆದಿದ್ದಾರೆ. ೧೯೧೮ ಮತ್ತು ೧೯೧೯ ಈ ವರ್ಷಾವಧಿಯಲ್ಲಿ ಅವರು ಜೈಲುವಾಸದಲ್ಲಿದ್ದುದರಿಂದ ದಿನಚರಿ ಬರೆದಿಲ್ಲ. ಉಳಿದಂತೆ ಎಲ್ಲ ದಿನಗಳಲ್ಲಿಯೂ ಡೈರಿ ಬರೆದಿದ್ದಾರೆ. ಮನೆಯಲ್ಲಿ ಮಿಲ್ಲಿನಲ್ಲಿ, ಸಾಮಾಜಿಕ ಬದುಕಿನಲ್ಲಿ ಎಂಥ ಪ್ರಸಂಗಗಳು ಜರುಗಿದರೂ ಅವನ್ನು ಬರೆದಿದ್ದಾರೆ. ಮನೆಯಲ್ಲಿ ಸಾವು-ನೋವಿನಂಥ ಘಟನೆಗಳು ಜರುಗಿದರೂ ದಿನಚರಿ ಬರೆಯುವುದು ಬಿಟ್ಟಿರಲಿಲ್ಲ. ಯಾವುದೇ ವಿಷಯವಿರಲಿ ಅದನ್ನು ದಾಖಲಿಸುವುದು ಅವರ ಪ್ರವೃತ್ತಿಯಾಗಿತ್ತು. ೧೯೦೦ ರಲ್ಲಿಯೇ ಅವರು ಫೋನೋಗ್ರಾಫ್‌ ಯಂತ್ರ ಖರೀದಿಸಿ ತಂದು ತಮಗೆ ಇಷ್ಟವಾದ ಪಾರಿಜಾತದ ಹಾಡುಗಳನ್ನು ಮುದ್ರಿಸಿ ಕೊಂಡಿರುವ ಸಂಗತಿಯು ಚಕಿತಗೊಳಿಸುವಂತಹದು. ಧಾರವಾಡದ ಶಿವಗಿರಿಯಲ್ಲಿದ್ದ ಮಗನ ಮನೆಯೊಳಗಿನ ದೊಡ್ಡ ಪೆಟ್ಟಿಗೆಯೊಂದರಲ್ಲಿ ಅವರು ಬರೆದಿದ್ದ ೨೬ ಡೈರಿಗಳು ಸಿಕ್ಕವು. ಅವುಗಳ ಜೊತೆಗೆ ಕಲಾವಿದರಿಗೆ, ಗೆಳೆಯರಿಗೆ, ಅಧಿಕಾರಿಗಳಿಗೆ ಬರೆದಿದ್ದ ಪತ್ರಗಳ ನಕಲು ಪ್ರತಿಳು; ಕೊರ್ಟಕೇಸಿನ ದಾಖಲೆಗಳುಳ್ಳ ಕಡತ ಮತ್ತು ಮನೆಯವರೊಂದಿಗೆ, ಕಲಾವಿದರೊಂದಿಗೆ ಸಮಾಜದ ದುರೀಣರೊಂದಿಗೆ ತೆಗೆಸಿಕೊಂಡ ಬೇರೆ ಬೇರೆ ಭಂಗಿಯ ಫೋಟೋಗಳು ಅಲ್ಲಿದ್ದವು. ಹಲವು ರಂಗಗಳಲ್ಲಿ ದುಡಿದ ಹಿರಿಯ ಜೀವವೊಂದರ ಸಾಧನೆಯ ವೈವಿಧ್ಯಮಯ ಸಾಕ್ಷಿಗಳು ಧಾರವಾಡದಂತಹ ನಗರದಲ್ಲಿದ್ದೂ ಹೀಗೇಕೆ ಇಷ್ಟು ದಿವಸ ಅಜ್ಞಾತವಾಗಿಯೇ ಉಳಿದವು? ಎಂದು ಮನಸ್ಸು ಮರುಗಿತು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಸ್ವಾಮಿಗಳ ದೊಡ್ಡಮಗ ಶಿವಲಿಂಗಯ್ಯ ಅಕಾಲಮೃತ್ಯುವನ್ನಪ್ಪಿದ ಸಣ್ಣಮಗ ಶಿವಶಂಕರ ಸೈನ್ಯಖಾತೆಯಲ್ಲಿ ಕರ್ನಲ್‌ ಹುದ್ದೆಯಲ್ಲಿದ್ದನು. ಶಿವಶಂಕರರ ಮಕ್ಕಳು ಶಿವಮೂರ್ತಯ್ಯ, ಶಶಿಧರ ಇವರೂ ಸೈನ್ಯಖಾತೆಯಲ್ಲಿದ್ದರು. ಧಾರವಾಡ ಮನೆಯಿಂದ ದೂರ ಉಳಿದ ಇವರಿಗೆ ಡೈರಿಗಳ ಮಹತ್ವ ಗೊತ್ತಾಗಲೇ ಇಲ್ಲ. ಶಿವಶಂಕರ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಶ್ರೀರಂಗರ ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದುದನ್ನು ಎನ್ಕೆ ನೆನಪಿಸುತ್ತಾರೆ ತಂದೆಯ ರಂಗಜೀವನದ ಅಭಿಮಾನಿಯಾಗಿದ್ದ ಶಿವಶಂಕರ ಎನ್ಕೆಯವರಿಗೆ ಡೈರಿಗಳನ್ನು ತೋರಿಸಿದ್ದರಂತೆ. ೧೯೭೦-೭೧ ರಲ್ಲಿ ಎನ್ಕೆಯವರು ಅವುಗಳಲ್ಲಿಯ ಕೆಲವು ಅಂಶಗಳನ್ನೆತ್ತಿಕೊಂಡು ಕರ್ಮವೀರಕ್ಕೆ ಲೇಖನಗಳನ್ನು ಬರೆದರು. ಆಮೇಲೆ ಡೈರಿಗಳು ಮತ್ತೆ ಪೆಟ್ಟಿಗೆ ಸೇರಿದವು. ಈಗ ಸಿಕ್ಕಿರುವ ಡೈರಿಗಳಲ್ಲಿ ನಾಲ್ಕನ್ನು (೧೯೦೩,೧೯೦೪,೧೯೦೭,೧೯೩೧) ಕನ್ನಡದಲ್ಲಿ ಬರೆದಿದ್ದರೆ ಉಳಿದವು ಇಂಗ್ಲೀಷಿನಲ್ಲಿವೆ. ಐದಾರು ಡೈರಿಯ ಪುಟಗಳು ಬಹಳ ಜೀರ್ಣವಾಗಿವೆ ಉಳಿದವು ಚೆನ್ನಾಗಿವೆ.

‘ದಯಾಳು ದೇವರು ಈ ವರ್ಷವನ್ನು ಸುಖ-ಸಂಪತ್ತು ಆಯುರಾರೋಗ್ಯಗಳಿಂದ ನಮ್ಮೆಲ್ಲರನ್ನು ಆಶೀರ್ವದಿಸಲೆಂದು ಅನನ್ಯಭಾವದಿಂದ ಬೇಡಿಕೊಳ್ಳುವೆನೆಂಬ’ ಪ್ರಾರ್ಥನೆಯಿಂದ ಪ್ರತಿಯೊಂದು ಡೈರಿಯ ಪುಟ (ಜನೇವರಿ -೧) ಆರಂಭವಾಗುತ್ತದೆ. ಮೊದಲ ಮಹತ್ವದ ಸಂಗತಿಯ ವಾಕ್ಯವಿದ್ದಲ್ಲಿ ಪಕ್ಕಕ್ಕೆ ಗುಣಾಕಾರ ಚಿಹ್ನೆ ಹಾಕಿ, ದುರಂತದ ವಿಷಯಗಳನ್ನು ಕೆಂಪು ಮಸಿಯಿಂದ ಬರೆದು ಗುರುತು ಮಾಡಿದ್ದಾರೆ. ನಸುಕಿನಲ್ಲಿ ಎದ್ವಗಳಿಗೆಯಿಂದ ರಾತ್ರಿ ಮಲಗುವವರೆಗಿನ ಮಹತ್ವದ ಘಟನೆಗಳನ್ನು ಒಂದೊಂದೆ ವಾಕ್ಯದಲ್ಲಿ ಬರೆದಿದ್ದು ಡೈರಿಗಳ ವಿಶೇಷತೆಯಾಗಿದೆ.

ತಾಯಿ-ತಂದೆ, ಮದುವೆ-ಮಡದಿ-ಮಕ್ಕಳು; ಬಂದು ಹೋಗುವ ನೆಂಟರಿಷ್ಟರು ಮುಂತಾದ, ಕುಟುಂಬ ಜೀವನದ ಕುರಿತು ಮಾತುಗಳು ಡೈರಿಯಲ್ಲಿ ಹೇರಳವಾಗಿವೆ ಮಗ ಶಿವಶಂಕರನು ಎಂದಿನಿಂದ ‘ಅವ್ವಾ’ ಅನ್ನೋ ತೊದಲು ಮಾತನ್ನು ಕಲಿತ ಎಂಬುದನ್ನು ಬರೆಯಲು ಶಿವಮೂರ್ತಿಸ್ವಾಮಿಗಳು ಮರೆತಿಲ್ಲ. ಅವರ ಆಸಕ್ತಿ-ಅಭಿರುಚಿ, ಹಿಡಿದ ಕೆಲಸ ಸಾಧಿಸುವ ಛಲ, ಕರ್ತೃತ್ವ ಶಕ್ತಿಗಳನ್ನು ಪರಿಚಯಿಸುವ ಪರಿವಿಡಿಯಂತಿವೆ ಅವರ ಡೈರಿಗಳು.

ಕನ್ನಡ ನವೋದಯ ಚಳುವಳಿಯ ಮುಖ್ಯ ಚಟುವಟಿಕೆಗಳಾದ ಭಾಷೆ ಮತ್ತು ಕಲೆಯ ಪುನರುಜ್ಜೀವನ, ಶಿಕ್ಷಣ ಪ್ರಸಾರ, ಹಾಗೂ ಜಾತಿಮತಗಳ ಹಿನ್ನೆಲೆಯಲ್ಲಿ ಜನರನ್ನು ಸಂಘಟಿಸಿ ತಮ್ಮ ಪರಂಪರೆಯ ಸಾಹಿತ್ಯ-ಸಂಸ್ಕೃತಿಯನ್ನು, ಆಗಿ ಹೋದ ಮಹಾಪುರುಷರನ್ನು ವೈಭವೀಕರಿಸುವಂಥ ಕಾರ್ಯಕ್ರಮಗಳಲ್ಲಿ ಸ್ವಾಮಿಗಳು ಪಾಲ್ಗೊಂಡು ಅವನ್ನು ಮುಂದಾಗಿ ನಿಂತು ನೆರವೇರಿಸಿದ ವಿಷಯಗಳೂ ಡೈರಿಯಲ್ಲಿವೆ. ಬ್ರಿಟಿಷ್‌ ಅಧಿಕಾರಿಗಳಿಗೆ ವಿಧೇಯರಾಗಿದ್ದುಕೊಂಡು, ಅವರನ್ನು ಮೆಚ್ಚಿಸುತ್ತಲೇ ಇತ್ತ ದೇಶ-ಭಾಷೆ, ಸ್ವರಾಜ್ಯ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದರು. ಬ್ರಿಟಿಷ್‌ ಸರಕಾರದ ಜೊತೆಗಿನ ಅಸಹಕಾರ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಊರೂರು ತಿರುಗಿ ಭಾಷಣ ಮಾಡಿದ್ದಾರೆ. ದಕ್ಷಿಣ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಬ್ರಾಹ್ಮಣೇತರ ಸಮಾಜದ ಸಂಘಟನೆ, ವೀರಶೈವ ಸಮಾಜದ ಏಳಿಗೆಯಲ್ಲಿ ಮಹತ್ವದ ಪಾತ್ರವಹಿಸಿದ್ದು ಡೈರಿಗಳಿಂದ ಗೊತ್ತಾಗುತ್ತದೆ. ವೀರಶೈವ ಮಹಾಸಭೆಯ ಅಧಿವೇಶನಗಳ ಯಶಸ್ವಿಗಾಗಿ ಅವರು ಹಗಲಿರುಳೂ ದುಡಿದಿದ್ದಾರೆ. ಬಸವಣ್ಣನವರ ಬಗೆಗೆ ನಾಟಕ ಬರೆಯಿಸಿ ಆಡಿಸುವಾಗ ಬ್ರಾಹ್ಮಣ ಸಮುದಾಯದಿಂದ ಸಾಕಷ್ಟು ವಿರೋಧ ಎದುರಾಯಿತು. ಅದರಿಂದ ಸ್ವಾಮಿಗಳು ಧೈರ್ಯಗೆಡಲಿಲ್ಲ. ಪ್ರತಿಯಾಗಿ ಛಲತೊಟ್ಟು ಹೋರಾಡಿ ಯಶಸ್ವಿಯಾದರು.

೧೯೧೧ ರಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ನಾಟಕದ ಪ್ರದರ್ಶನ ರದ್ದುಗೊಳಿಸಿದರು. ಅದಕ್ಕೆ ಬ್ರಾಹ್ಮಣ ಸಮುದಾಯದವರ ಕುತಂತ್ರವೇ ಕಾರಣವೆಂದು ಪತ್ತೆ ಹಚ್ಚಿದ ಸ್ವಾಮಿಗಳು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಛಲಬಿಡದ ವಿಕ್ರಮನಂತೆ ಹೋರಾಡಿದರು ಮುಂಬಯಿ ಗವರ್ನ್‌ರ್ ರ ಮುಂದೆ ವಾದಮಾಡಿ ೧೯೧೪ರಲ್ಲಿ ಪ್ರದರ್ಶನಕ್ಕೆ ಅನುಮತಿ ಪಡೆದುಕೊಂಡು ಬಂದರು. ಅಷ್ಟಲ್ಲದೆ ಬೆಳಗಾವಿಯ ಜಿಲ್ಲಾಧಿಕಾರಿಗೆ ಆಪ್ತಸಹಾಯಕನಾಗಿದ್ದ ಬ್ರಾಹ್ಮಣ ಅಧಿಕಾರಿಯನ್ನು ವರ್ಗ ಮಾಡಿಸಿದರಂತೆ.

ಕಂಪನಿನಾಟಕಗಳಿಗೆ ಯೋಗ್ಯವಾದ ಹೊಸಭೂಮಿಯನ್ನು ಸಿದ್ಧಗೊಳಿಸುವಲ್ಲಿ ಹದಗೊಳಿಸುವಲ್ಲಿ, ಕಲೆ ಮತ್ತು ವ್ಯವಹಾರಗಳೆರಡನ್ನು ಹೊಂದಿಸುವಲ್ಲಿ ಶಿವಮೂರ್ತಿಸ್ವಾಮಿಗಳು ತುಂಬಾ ಶ್ರಮವಹಿಸಿದ್ದಾರೆ ಕಲಾವಿದರಿಗೆ ಪತ್ರ ಬರೆಯುವುದು ಕರೆತರುವದು ತರಬೇತಿ ಕೊಡಿಸುವುದು-ಹೀಗೆ ನಾಟಕಸಂಸಾರಕ್ಕೆ ಸಂಬಂಧಿಸಿದಂತೆ ಹಲವಾರು ಬಗೆಯ ಚಟುವಟಿಕೆಗಳನ್ನು ಸ್ವತಃ ನಿರ್ವಹಿಸಿದ್ದ ವಿಷಯಗಳು ಡೈರಿಯ ಪುಟ ಪುಟಗಳಲ್ಲಿ ಎದುರಾಗುತ್ತವೆ ಒಮ್ಮೆ ಕಲಾವಿದರಿಂದ ಮತ್ತೊಮ್ಮೆ ಮ್ಯಾನೇಜರರಿಂದ ಮಗದೊಮ್ಮೆ ಪ್ರಾಕೃತಿಕ ವಿಕೋಪಗಳಿಂಧ ಕಂಪ;ನಿ ಮುರಿದು ಬಿದ್ದಾಗ ಅವರ ಹೃದಯ ಮಮ್ಮುಲನೆ ಮರಗುತ್ತಿತ್ತು. ಕಂಪನಿ-ಕಲಾವಿದರ ಬಗೆಗೆ ಅವರಿಗೆ ಅತೀವ ಅಭಿಮಾನ. ರಂಗಮೌಲ್ಯ, ಶಿಸ್ತಿನ ಬಗ್ಗೆ ನಿಷ್ಠುರರಾಗಿದ್ದರೂ ಕಲಾವಿದರ ಬಡತನಕ್ಕೆ, ಕಷ್ಟಕ್ಕೆ ಕರಗುವ ಮೃದುಹೃದಯಿಯಾಗಿದ್ದರು. ಹೀಗಾಗಿ ಮೋಸ ಮಾಡಿದ ಮ್ಯಾನೇಜರ, ಓಡಿಹೋದ ಕಲಾವಿದರಿಗೆ ಆ ಸಮಯಕ್ಕೆ ಶಿಕ್ಷೆ ವಿಧಿಸಿದರೂ ಅವರು ಮತ್ತೆ ಬಂದು ದೈನಾಸಪಟ್ಟಾಗ ಅವರನ್ನು ಕ್ಷಮಿಸಿ ಕಂಪನಿಗೆ ಸೇರಿಕೊಳ್ಳುತ್ತಿದ್ದರು. ಮುರಿದ ಕಂಪನಿ ಮತ್ತೆ ಕಟ್ಟುವಾಗ ಹೊಸ ಹೊಸ ಸೂತ್ರಗಳನ್ನು, ಸವಲತ್ತುಗಳನ್ನು ಅಳವಡಿಸಿಕೊಳ್ಳುತ್ತಿದ್ದರು. ಒಟ್ಟಾರೆ ಕರ್ನಾಟಕದ ಅಂದಿನ ಯಾವ ಮಾಲೀಕರಿಗೂ ಸಾಧ್ಯವಾಗದ ಹೊಸದೃಷ್ಟಿ, ಹೊಸಧೋರಣೆ ಮತ್ತು ಪ್ರಯೋಗಶೀಲತೆಯನ್ನು ಪ್ರಸ್ತುತಪಡಿಸುವಲ್ಲಿ ಶಿವಮೂರ್ತಿಸ್ವಾಮಿಗಳು ಯಶಸ್ವಿಯಾದರು. ೧೯೨೦ ರಲ್ಲಿ ಸ್ವಂತ ಕಂಪನಿ ಮುಚ್ಚಿದ ಮೇಲೆ ನಾಡಿನ ಇತರ ಕಂಪನಿಗಳಿಗೆ ನೆರವಿನ ಹಸ್ತ ಚಾಚಿದರು. ಶಿರಹಟ್ಟಿ ವೆಂಕೋಬರಾಯರ ಕಂಪನಿ, ವಾಮನರಾವ ಮಾಸ್ತರರ ಕಂಪನಿ, ಗುಳೇದಗುಡ್ಡ ಗಂಗೂಬಾಯಿಯವರ ಕಂಪನಿ, ಅಬ್ಬಿಗೇರಿ ಬಸನಗೌಡರ ಕಂಪನಿ, ಗರುಡ ಸದಾಶಿವರಾಯರ ಕಂಪನಿ – ಇವೆಲ್ಲ ಸ್ವಾಮಿಗಳ ಉದಾರ ನೆರನ್ನು ಪಡೆದುದನ್ನು ಮರೆಯಲಾಗದು. ಸ್ವಂತ ಕಂಪನಿ ಮತ್ತೆ ಆರಂಭಿಸಲು ಆಗಾಗ ಹವಣಿಸುತ್ತಿದ್ದರು. ತೀರಿಕೊಳ್ಳುವುದಕ್ಕಿಂತ ಹತ್ತಿಪ್ಪತ್ತು ದಿನ ಮೊದಲು [೧೨-೮-೧೯೩೧] ಮತ್ತೆ ನಾಟಕ ಕಂಪನಿ ಕಟ್ಟಬೇಕೆಂದು ಕಲಾವಿದ ಪಿ.ವ್ಹಿ. ಪಾಟೀಲರೊಂದಿಗೆ ಚರ್ಚಿಸಿದ್ದರು. ನಾಟಕ ಕಲೆಯ ಬಗ್ಗೆ ಅವರ ಪ್ರೀತಿ ಅದ್ಭುತವಾಗಿತ್ತು. ಕಲೆಯ ಬಗ್ಗೆ ಪ್ರೀತಿ, ಅಭಿಮಾನ ತುಂಬಿಕೊಂಡ ಅವರ ದಿನಚರಿ ಪುಟಗಳಿಂದ ಆಯ್ದ ಕೆಲವು ವಾಕ್ಯಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ.

೩೦.೦೩.೧೮೯೫

ಬಡಕುಂದ್ರಿ ಬಸಪ್ಪನ ಆಟ ಪಾರಿಜಾತ ನೋಡಲು ಧೂಪದಾಳಕ್ಕೆ ಹೋಗಿದ್ದೆ.

೨೮.೦೯.೧೮೯೫.

ದಸರಾ ಹಬ್ಬದ ನಿಮಿತ್ತ ‘ಇಂದ್ರಜಿತು’ ಬೈಲಾಟವಿತ್ತು. ನಾನು ನನ್ನ ಗೆಳೆಯರು, ಮಿಸೆಸ್‌ ಕೇರ್ ಅವರ ಮಗಳು, ಮತ್ತೋರ್ವ ಹೆಣ್ಣುಮಗಳು ಬೆಳ್ಳಂಬೆಳಗು ಆಟ ನೋಡಿದೆವು. ನಾನು ಅವರಿಗೆ ಟ್ರಾನ್ಸಲೇಟ ಮಾಡಿ ಹೇಳುತ್ತಿದ್ದೆ. ನಾವೆಲ್ಲ ೧೧ ರೂ ಬಹುಮಾನ ಕೊಟ್ಟೆವು. ನಟರ ಭಾಷೆ ಶುದ್ಧವಾಗಿರಲಿಲ್ಲ. ಏಕೆಂದರೆ ಅವರೆಲ್ಲ ಅಶಿಕ್ಷಿತರು.

೨೯-೯-೧೮೯೫

ನಾನು ಬಹಳ ಹೊತ್ತು ಮಲಗಿದ್ದೆ ಎದ್ದಾಗ ‘ಇಂದ್ರಜಿತು’ ಆಟ ಚೆನ್ನಾಗಿ ಆಡಬೇಕೆಂಬ ನಿರ್ಧಾರ ಮನಸ್ಸಿನಲ್ಲಿ ದೃಢವಾಗಿತ್ತು. ಮಲ್ಲಯ್ಯನು ಪಾತ್ರಧಾರಿಗಳನ್ನು ಸಂಘಟಿಸುವುದಾಗಿ ಹೇಳಿ ಪ್ರೋತ್ಸಾಹಿಸಿದನು.

೩೦-೯-೧೮೯೫

ಬೆಳಗಾವಿಯಿಂದ ಪಾಂಡುಪ್ರತಾಪ ಕನ್ನಡ ಪುಸ್ತಕವನ್ನು ತರಿಸಲಾಯಿತು.

೦೧.೧೦.೧೮೯೫

ರಾತ್ರಿ ೮ ಗಂಟೆಯವರೆಗೆ ಆಫೀಸಿನಲ್ಲಿದ್ದೆ. ಗೆಳೆಯರು ಕೊಣ್ಣೂರಿಗೆ ಬರಲು ಹೇಳಿದ್ದರು. ಹೋಗಲಾಗಲಿಲ್ಲ. ‘ಇಂದ್ರಜೀತು’ ಆಟದ ಸಂಭಾಷಣೆಯನ್ನು ಗುಣುಗುಣಿಸುವುದೇ ನಡೆದಿತ್ತು.

೦೯-೧೦-೧೮೯೫
ಇಂದು ತಾಲೀಮಿಗೆ ಹೋಗಲಿಲ್ಲ. ‘ಮದನಮೋಹನ’ ಕಥೆಯನ್ನು ಓದಹತ್ತಿದೆ.

೧೩-೧೦-೧೮೯೫
ವಂಟಮುರಿಯಿಂದ ಶ್ರೀ ಚೆನ್ನಮಲ್ಲಪ್ಪ. ಆಟ ಕಲಿಸಲಿಕ್ಕೆ ಬಂದರು.

೧೫-೧೦-೧೮೯೫.
ಚೆನ್ನಮಲ್ಲಪ್ಪನಿಗೆ ೧೫/- ರೂ ಮುಂಗಡ ಕೊಟ್ಟಿತು.

೦೭-೧೨-೧೮೯೫

‘ಇಂದ್ರಜಿತು’ ಆಟದ ಪ್ರಯೋಗವು ಯಶಸ್ವಿಯಾಗಿ ನೆರವೇರಿತು ನನ್ನ ವೇಷ-ಭೂಷಣ, ಮೇಕಪ್ಪು, ಮಾತುಗಾರಿಕೆಗೆ ಜನರಿಂದ ಪ್ರೋತ್ಸಾಹ ಸಿಕ್ಕಿತು. ಇದರಿಂದ ನನಗೆ ಸಂತೋಷವಾಯಿತು.

೨೫-೦೩-೧೮೯೬
ಇಂದು ನಾಟಕದ ಕೆಲವು ಆಭರಣಗಳನ್ನು ತರಲು ಶಿವಲಿಂಗ ಮತ್ತು ಶ್ಯಾಣು ಅವರನ್ನು ಕುರುಬೆಟ್ಟಕ್ಕೆ ಕಳುಹಿಸಿದೆ.

೧೯-೮-೧೮೯೬
ನಾಸಿಕ ಜಿಲ್ಲೆಯ ಸಟಾನಾದಲ್ಲಿ ಕನ್ನಡ ಕಲಿಸುವುದಕ್ಕಾಗಿ ಕಣಬರಗಿಯ ಗಣೇಶ ಶ್ಯಾಮಜಿ ಜೋಶಿ ನೇಮಕಗೊಂಡರು.

೦೭.೧೦.೧೮೯೬

ದೇಶನೂರ ನಾಟಕ ಮಂಡಳಿಯು ಬಾಗೇವಾಡಿಗೆ ಹೋಯಿತು.

-೧೦-೧೮೯೬
ಬಾಣಾಸುರ ತಾಲೀಮು ನೋಡಲಿಕ್ಕೆ ಕೊಣ್ಣೂರಿಗೆ ಹೋಗಿದ್ದೆ.

೧೫.೦೩.೧೮೯೭
ಕೊಣ್ಣೂರಿನಲ್ಲಿ ಬಸರಗಿ ‘ಕುಂಬಾರನ ಆಟವಿತ್ತು.

೦೪.೦೯.೧೮೯೭

ಗಣಪತಿಯ ಮುಂದೆ ರಾಧಾನಾಟ ಆಡಿಸಿತು.

೦೮.೦೯.೧೮೯೭

ಇಂದು ವಿಶ್ವಜನಸಂಖ್ಯೆಯು ೧೪೭೯೭೦೯೪೦೦೦ ಇದ್ದುದು ತಿಳಿಯಿತು.

೨೫.೧೦.೧೮೯೭

ಬರುವ ಕಾರ್ತೀಕೋತ್ಸದಂದು ಮರಡಿಮಠದಲ್ಲಿ ನಮ್ಮ ‘ಇಂದ್ರಜಿತು’ ಆಟವಾಡುವುದು ನಿಶ್ಚಯವಾಯಿತು.

೨೬.೧೦.೧೮೯೭

ಇಂದು ಹೊಸ ಆಟ ‘ಹರಿಕೇಶವ’ದ ಪೂಜೆ ಮಾಡಿದೆವು.

೨೬-೦೩-೧೮೯೮

ಕೊಣ್ಣೂರಿನಲ್ಲಿ ಬಡಕುಂದ್ರಿ ಬಸಪ್ಪನ ಪಾರಿಜಾತ ಆಟದ ಪ್ರಯೋಗವಾಯಿತು.

೨೭-೦೭-೧೮೯೮

ಹುಕ್ಕೇರಿ ಸಿದ್ಧರಾಮನಿಗೆ ನಿನ್ನೆಯ ಆಟಕ್ಕಾಗಿ ೩೩=೮ ಅಣೆ ಕೊಟ್ಟಿತು.

೨೭-೭-೧೮೯೯

ಲಗಮ್ಯಾನ ರಾಧಾನಾಟ ಗಿರಣಿಯ ಆವರಣದಲ್ಲಿ ನಡೆಯಿತು.

೧೦-೦೯-೧೮೯೮

‘ಪ್ರಮೀಳಾ’ ಆಟದ ಬಗ್ಗೆ ನಮ್ಮಲ್ಲಿ ಚರ್ಚೆ ಆಯಿತು.

೧೪-೦೯-೧೮೯೮

ನಾನು ಬಬ್ರುವಾಹನ ಆಟದ ಬಗ್ಗೆ ವಿಚಾರಿಸುತ್ತಿರುವೆ.

೨೭-೯-೧೮೯೮

ಎಲ್ಲರೂ ‘ಬಬ್ರುವಾಹನ’ ಆಟದ ತಾಲೀಮಿಎ ಹೋದೆವು

೨೩-೧೦-೧೮೯೮

ಕೊಣ್ಣರಿನಲ್ಲಿ ‘ಬಬ್ರುವಾಹನ ಪ್ರಯೋಗವಾಯಿತು. (ಶಿವಮೂರ್ತಿಸ್ವಾಮಿಗಳು ಅರ್ಜುನನಾಗಿ ಅಭಿನಯಿಸಿದ್ದರು)

೨೯-೧೦-೧೮೯೮

ಮಧ್ಯಾಹ್ನ ನಾನು ಚೆನ್ನಗುಡಗುಡ(ಕಬ್ಬಡ್ಡಿ) ಆಡಲಿಕ್ಕೆ ಹೋದೆ.

೧೮-೦೧-೧೮೯೯

ಬಿಬ್ಬೀಸಾಹೇಬರ ಜೊತೆಗೆ ಮಗನ ಅಭ್ಯಾಸವನ್ನು ಇಂಗ್ಲೆಂಡಿನಲ್ಲಿ ಮಾಡಿಸುವ ಬಗ್ಗೆ ಮಾತನಾಡಿದೆ.

೦೫-೨-೧೮೯೯

ಗೆಳೆಯರೊಂದಿಗೆ ಹಲಕರ್ಣಿಗೆ ಹೋಗಿ ರಾಚಯ್ಯನು ಕಲಿಸುತ್ತಿದ್ದ ‘ಪಾರಿಜಾತ’ದ ತಾಲೀಮು ನೋಡಿದೆವು.

-೯-೧೮೯೯

ಕೊಣ್ಣೂರಿನಲ್ಲಿ ಹಲಕರ್ಣಿ ಮೇಳದ ‘ಪಾರಿಜಾತ’ವನ್ನು ಬೆಳ್ಳಂಬೆಳಗು ನೋಡಿದೆ.

೧೪-೧೦-೧೮೯೯

ಕಲ್ಲಪ್ಪ ಅಗಸರ ಈತನ ‘ರಾಧಾಹರಣ’ ಆಟವು ಗಣಪತಿಯ ಎದುರು ಪ್ರದರ್ಶನವಾಯಿತು.

೧೦-೦೬-೧೯೦೦

ರಾಚಯ್ಯ ಬೆಳವಿ ನನ್ನ ಹತ್ತಿರ ಇದ್ದ. ಅವನ ಎರಡು ಹಾಡುಗಳನ್ನು ಫೋನೊಗ್ರಾ‌ಫ್‌ ದಲ್ಲಿ ಮುದ್ರಿಸಿಕೊಂಡೆ.

೧೬-೦೬-೧೯೦೦

ರಾಚಯ್ಯ ಬಂದನು. ಗುರುಶಿದ್ಧ, ಕಾಡೇಶಿ, ಪಾವಾಡಿ, ಗುರುಪಾದ ಎಲ್ಲರೂ ಫೋನೋಗ್ರಾಫ್‌ ನೋಡಿದರು.

೨೭-೭-೧೯೦೧

ಮುನೋಳಿ ಕಂಪನಿಯ ನಾಟಕ ನೋಡಲು ಗೋಕಾಕಕ್ಕೆ ಹೋಗಿದ್ದೆ.

೨೮-೦೭-೧೯೦೧

ಕುರುಬೆಟ್ಟ ದೇಸಾಯಿ ಅವರಿಂದ ಪಿಯಾನೊ ಪೆಟ್ಟಿಗೆ ಪಡೆದು ನೇಮಗೌಡನ ಮೂಲಕ ಕೊಣ್ಣೂರಿನ ತಾಲೀಮುಮನೆಗೆ ಕಳುಹಿಸಿದೆ.

೩೧-೦೭-೧೯೦೧

ಮುನೋಳಿ ಕಂಪನಿಯ ಕೆಲ ನಟರು ಮಿಲ್ಲು ನೋಡಲು ಬಂದಿದ್ದರು. ಅವರಿಂದ ಒಂದು ಹಾಡನ್ನು ರಿಕಾರ್ಡ್ ಮಾಡಲಾಯಿತು. ಪಾಚ್ಛಾಪುರದಿಂದ ಬಂದ ನಟರನ್ನು ‘ಬಾಣಾಸುರ’ ತಾಲೀಮಿಗಾಗಿ ಕೊಣ್ಣೂರಿಗೆ ಕಳುಹಿಸಲಾಯಿತು.

೩೧-೦೮-೧೯೦೧

‘ಬಾಣಾಸುರ’ ನಾಟಕವು ಕೊಣ್ಣೂರಿನ ಕಾಡಸಿದ್ಧೇಶ್ವರ ಮಠದಲ್ಲಿ ಪ್ರಯೋಗವಾಯಿತು. ಜಾಗ ಸಿಗದಿರುವುದರಿಂದ ಬಹಳ ಜನರು ತಿರುಗಿ ಹೋದರು. ನಾಟಕ ಒಳ್ಳೆ ಕಳೆಕಟ್ಟಿತು. ಉತ್ಪನ್ನ ೫೯ ರೂ. ೧೧ ಆಣೆ.

೧೦-೦೯-೧೯೦೧

ಹಣಮಂತ ಕಲ್ಯಾಣಿಯನ್ನು ನಾಟಕದ ಸಾಮಾನು ತರಲು ಪುಣೆಗೆ ಕಳಿಸಲಾಯಿತು.

೨೧-೦೯-೧೯೦೧

ಹೊಸ ನಾಟಕ ‘ಅನುಭವಚಂದ್ರಿಕೆ’ ಬರೆಯಲು ಆರಂಭಿಸಿದೆ.

೨೨-೧೦-೧೯೦೧

‘ಹರಿಶ್ಚಂದ್ರ’ ನಾಟಕ ಕಲಿಸಲು ಗುಳೇದಗುಡ್ಡದಿಂದ ಶಂಕ್ರಪ್ಪನು ಕೊಣ್ಣೂರಿಗೆ ಬಂದನು.

೦೪-೧೧-೧೯೦೧

ಹುಕ್ಕೇರಿಯ ಸಿದ್ರಾಮಪ್ಪ ಮತ್ತು ಬಡಕುಂದ್ರಿ ಬಸಪ್ಪನ (ಪಾರಿಜಾತದ ಶ್ರೇಷ್ಠ ಕಲಾವಿದರು) ಹಾಡುಗಳನ್ನು ರಾತ್ರಿ ೧೨ ಗಂಟೆಯವರೆಗೆ ಕೇಳಿದೆವು.

೨೮-೧೧-೧೯೦೧

ಶ್ರೀಮಂತ ವಂಟಮುರಿ ದೇಸಾಯಿ, ಅವರ ಪತ್ನಿ, ಮಗಳು ಗಿರಣಿ ನೋಡಲಿಕ್ಕೆ ಮೇಣೆಯಲ್ಲಿ (ಪಲ್ಲಕ್ಕಿ) ಕುಳಿತು ಬಂದಿದ್ದರು.

೨೧-೦೩-೧೯೦೨

‘ಅನುಭವಚಂದ್ರಿಕೆ’ ನಾಟಕದ ತಾಲೀಮಿಗೆ ಹಾಜರಿದ್ದು ಸಲಹೆ ನೀಡಿದೆ.

-೮-೧೯೦೨

ಏಳನೆಯ ಎಡ್ವರ್ಡ್ ಬ್ರಿಟನ್ನಿನ ಸಿಂಹಾಸನ ಏರಿದರು.

೧೯-೧೦-೧೯೦೨

ಅಪ್ಪಾ ಪಾಟೀಲ, ನೇಮಗೌಡ ಗುರುಶಿದ್ಧಯ್ಯ ಮುಂತಾದವರು ನಾಟಕ, ಉದ್ಯೋಗದಲ್ಲಿ ಪಾಲುದಾರರಾಗಲು ಒಪ್ಪಿದರು.

೨೭-೧೦-೧೯೦೨

ಕೊಣ್ಣೂರಿನಲ್ಲಿ ಪ್ಲೇಗು ಸುರು ಆಗಿದ್ದರಿಂದ ಕಂಪನಿಯ ನಟರು ತಮ್ಮ ಊರುಗಳಿಗೆ ಹೋದರು.