೧೩-೧೧-೧೯೦೨

‘ಹರಿಶ್ಚಂದ್ರ’ವು ಕೊಣ್ಣೂರಿನಲ್ಲಿ ವಿಜೃಂಭಣೆಯಿಂದ ಪ್ರಯೋಗವಾಯಿತು. ಉತ್ಪನ್ನ ೧೨೦/- ರೂ.

೧೪-೧೧-೧೯೦೨

ನಾಟಕ ಕಂಪನಿಯನ್ನು ಮಹಾಲಿಂಗಪುರ ಜಾತ್ರೆಗೆ ಒಯ್ಯಲು ತೀರ್ಮಾನಿಸಿತು.

೨೪-೧೧-೧೯೦೨

ಎರಡು ನಾಟಕಗಳನ್ನು ಆಡಿ ಕಂಪನಿಯು ಮಹಾಲಿಂಗಪುರದಿಂದ ಹಿಂದಿರುಗಿತು.

೦೮-೦೪-೧೯೦೩

ಬೆಳಗಾವಿಯಲ್ಲಿ ಎಲ್ಲಪ್ಪ ಕಡೇಮನಿ ಅವರಿಗೆ ೭ ಪಡದೆ ಮತ್ತು ಕೆಲವು ಸೀನಿಗಾಗಿ ೧೫೦/- ರೂ. ಎಂದು ಮಾತನಾಡಿತು.

೨೫-೦೪-೧೯೦೩

ಮ್ಯಾನೇಜರ್ ಕೇರ್ ಸಾಹೇಬರಿಗೆ ನಾಟಕ (ಹರಿಶ್ಚಂದ್ರ) ನೋಡಲಿಕ್ಕೆ ಆಮಂತ್ರಣ ಕೊಟ್ಟಿತು. ಅವರು ನಾಟಕ ನೋಡಲು ೧೦ ಗಂಟೆಗೆ ಬಂದರು. ೫ ರೂಪಾಯಿ ಇನಾಮು ಕೊಟ್ಟರು. ನಾಟಕವು ಅತಿ ಉತ್ತಮವಾಯಿತು. ೯೭ ರೂಪಾಯಿ ಕೂಡಿದವು. ಕಥಿ ಪೂರ್ಣ ಮಾಡಲು ವೇಳೆ ಸಾಲಲಿಲ್ಲ.

೧೫-೦೭-೧೯೦೩

ಸ್ತ್ರೀ ನಾಟಕ ಕಂಪನಿಯ (ಮರಾಠಿ) ‘ರಾಮರಾಜ್ಯವಿಯೋಗ’ ನೋಡಿ ರಾತ್ರಿಗಾಡಿಗೆ ಗಿರಣಿಗೆ ಬಂದೆನು. ಗುರುಲಿಂಗ, ಸಂಗಾ, ಶಿವಪ್ಪಾ, ಶಂಕರ ವಗೈರೆ ಮಂದಿ ನನ್ನ ಅಪ್ಪಣೆಯ ವಿರುದ್ಧ, ವಿಶ್ವಾಸಘಾತ ಮಾಡಿ ರಾತ್ರಿ ಗಾಡಿಗೆ ಓಡಿಹೋದರು. ಹುಬ್ಬಳ್ಳಿಗೆ ತಾರು ಮಾಡಿದೆ.

೧೬-೦೭-೧೯೦೩

ಚೆನ್ನಯ್ಯ, ಕಾಶಿನಾಥ ಇವರನ್ನು ಹುಬ್ಬಳಿಗೆ ೨೦ ರೂಪಾಯಿ ಸಹಿತ ಅವರ ಶೋಧಕ್ಕಾಗಿ ಕಳಿಸಿಕೊಟ್ಟೆ.

೨೧-೦೭-೧೯೦೩

ಬಳ್ಳಾರಿ ಬಸಪ್ಪನಿಗೆ ವ ಗುರುಬಸಪ್ಪಾ ಅಳ್ಳಿವ ಕುಬೇರಪ್ಪಾ ಮುಂತಾದವರಿಗೆ ನಾಟಕದ ಬಗ್ಗೆ ಪತ್ರ ಬರೆದಿರುವೆ.

-೪-೧೯೦೪

ಹುಬ್ಬಳ್ಳಿಯಿಂದ ರೇಣುಸಾನಿ, ನಿಡಗುಂದಿಯಿಂದ ಸಂಗಪ್ಪ ಕೊಂಣೂರಿಗೆ ಬಂದರು.

೨೦-೪-೧೯೦೪

ರಾಚಯ್ಯನನ್ನು ಕರಕೊಂಡು ಕೊಂಣೂರ ತಾಲೀಮಕ್ಕೆ ಹೋಗಿದ್ದೆನು. ತಾಲೀಮ ಉತ್ತಮವಾಯಿತು. ರಾಚಯ್ಯನಿಗೆ ೧-೨ ತಿಂಗಳಿಗೆ ಇಲ್ಲಿ ಶಿಕ್ಷಣ ದೊರೆತರೆ ಬಳ್ಳಾರಿ ಬಸಪ್ಪನನ್ನು ಕರೆಯಬೇಕಾಗಿರುವುದಿಲ್ಲ. ದೇವರ ಚಿತ್ತ.

೧೪-೬-೧೯೦೪

ಈ ಹೊತ್ತು ನಾಟಕದ ಎಲ್ಲ ಸಾಮಾನು ಕೊಣ್ಣೂರಿಂದ ಬೆಳಗಾಂವಿಗೆ ಹೋಯಿತು. ರಾಚಯ್ಯನ ಕಡಿಗೆ ೬೭ ರೂ. ಕೊಟ್ಟೆ. ಗುರುಶಿದ್ಧಯ್ಯನಿಗೆ ೨೦ರೂ. ಕೊಟ್ಟೆನು……. ನಾಟಕದ ೧೫ ಅರಿವೆ ಇಸ್ತ್ರಿಗೆ ಕೊಟ್ಟೆನು.

೧೮-೬-೧೯೦೪

ಗುಳೇದಗುಡ್ಡದಿಂದ ಜನರು ಬಂದರು. ರಂಗಪ್ಪನು ಬರಲಿಲ್ಲ. ಹುಬ್ಬಳ್ಳಿಯಿಂದ ಭೀಮಪ್ಪಾ ಸಂಶಿ ಪಿಟೀಲು ಬಾರಿಸಲಿಕ್ಕೆ ಬಂದನು. ಅವನಿಗೆ ದರ ಆಟಕ್ಕೆ ೫ ರೂಪಾಯಿ ಠರಾವು ಮಾಡಿತು.

ಈ ಹೊತ್ತು ನಿಳಬಾನ ಥೇಟರ್ ದಲ್ಲಿ (ಬೆಳಗಾವಿ) ಕೊಣ್ಣೂರಕರ ಕನ್ನಡ ಸಂಗೀತ ಹರಿಶ್ಚಂದ್ರ ನಾಟಕವುದ ಆಯಿತು. ಪ್ರಾಪ್ತಿ. ೮೦ ರೂಪಾಯಿ ರಾವಬಹದ್ದೂರ ರುದ್ರಗೌಡ, ಶಿರಸಂಗೀಕರ, ವಂಟಮುರಿಕರ, ಬಾಂದೇವಾಡಿ ಅರಸರು, ತಲ್ಲೂರಕರ ನೋಡಲಿಕ್ಕೆ ಬಂದಿದ್ದರು. ನಾಟಕ ಉತ್ತಮವಾಯಿತು.

೧೯-೬-೧೯೦೪

ನಾಟಕಕ್ಕೆ ಖರ್ಚು ಬಹಳ, ದಂಗೆ ಬಹಳ, ಆದಾಗ್ಯೂ ಆಟ ರಿಜು ಬಿತ್ತು.

.೭.೧೯೦೪

ಬೆಳಗಾವಿಯಲ್ಲಿ ಕೊಂಣೂರ ಕಂಪನಿಯವರ ‘ವಿರಾಟಪರ್ವ’ ಆಖ್ಯಾನವಿದ್ದು, ಮಳೆ ಅತಿಶಯವಿದ್ದ ಮೂಲಕ ದೇವರ ಚಿತ್ತಕ್ಕೆ ಬಂದಂತೆ ಆಗಲಿ.

೨೩-೭-೧೯೦೪

ರಬಕವಿಯಲ್ಲಿ ಹರಿಶ್ಚಂದ್ರ ನಾಟಕ ಅತಿ ಸರಸವಾಯಿತು. ಜನರು ಬಹಳ ಬಂದು ಜಾಗವಿಲ್ಲದ್ದರಿಂದ ತಿರುಗಿ ಹೋದರು. ೧೩೫ ರೂಪಾಯಿ ವಸೂಲ ಆಯಿತು.

೧೦.೧೦.೧೯೦೪

ರೇಣುಸಾನಿಗೆ ೧೦ ರೂಪಾಯಿ ಕೊಟ್ಟಿತು. ಬಾಳವ್ವನಿಗೆ ರೇಣವ್ವನಿಗೆ ಒಂದೊಂದು ಕುಬಸದ ಖಣಗಳನ್ನು ಕೊಟ್ಟೆನು. ಈ ಹೊತ್ತು ಸಹ ಮಳೆಯು ಅತಿ ಉತ್ತಮವಾಗಿ ಬರಗಾಲದ ಭಯವು ಕಡಿಮೆಯಾಯಿತು. ೧೨೫ ರೂಪಾಯಿ ರಬಕವಿ ಹುಂಡಿ ಬಗೈ ಕೊಟ್ಟಿತು.

-೧-೧೯೦೭

ಗುರುಸಿದ್ಧಯ್ಯಸ್ವಾಮಿಗಳಿಗೆ ಕಂಪನಿ ತಗೊಂಡು ಸಂಕೇಶ್ವರಕ್ಕೆ ನಿಶ್ಚಯ ಮಾಡಿ…. ನಾಟಕಗಳನ್ನು ೩೦೦ ರೂ. ಕೈ ಮಕ್ತೆ ಕೊಟ್ಟಿತು.

೧೯-೧-೧೯೦೭

ಮುಂಜಾನೆ ನೇಮಗೌಡಾ ಪಾಟೀಲ, ಜಾಡರ ಶಿದ್ದು ಇವರನ್ನು ಥೇಟರ್ ವ್ಯವಸ್ಥೆಗಾಗಿ ಸಂಕೇಶ್ವರಕ್ಕೆ ಕಳಿಸಿದೆನು…… ಈ ಹೊತ್ತು ನಾಟಕ ಮಂಡಳಿ ಸಾಮಾನು ೭ ಗಾಡಿಗಳ ಮೇಲೆ ಸಂಕೇಶ್ವರಕ್ಕೆ ಎರಡೂವರೆಗೆ ಹೊರಟು ಹೋದರು.

.೨.೧೯೦೭

ಸಂಗನಬಸಪ್ಪ ಗಜೇಂದ್ರಗಡ ಈತನು ಮುಂಜಾನೆ ಬಂದು ನಾಟಕ ಕಂಪನಿಯಲ್ಲಿ ಇರಲಿಕ್ಕೆ ಒಪ್ಪಿದನು. ತಿಂಗಳಿಗೆ ಪಗಾರ ೨೫ ರೂಪಾಯಿ. ೨ ತಿಂಗಳ ನಂತರ ಪೋಟಗಿ ಬಗ್ಯೆ ೫ ರೂಪಾಯಿ ಕೊಡುವುದಕ್ಕೆ ಒಪ್ಪಿದೆವು.

.೩.೧೯೦೭

ಸಂಜಿಗಿ ಕೊಂಣೂರಿನಲ್ಲಿ ನಿಂತು ಏನಕೆ ಕಂಪನಿಯ ಬಗ್ಯೆ ಮಾತು ಕಥೆ ಮಾಡಿ ಶೀಳಿನವರ ಗಾಣಕ್ಕೆ ಕಂಪನಿಯ ಮಂಡಳಿಯನ್ನು ಕಬ್ಬಿನ ಹಾಲು, ಬೆಲ್ಲ ಕುಡಿಸಲಿಕ್ಕೆ ಒಯಿದು ಆನಂದಪಡಿಸಿದೆ.

.೩.೧೯೦೭

ಹರಿಶ್ಚಂದ್ರ ನಾಟಕ, ರಾಚಯ್ಯಸ್ವಾಮಿಗಳು ವಿಶ್ವಾಮಿತ್ರನ ಪಾರ್ಟ ಹಾಕಿದ್ದು. ಪಾಠ ನೆಟ್ಟಗಾಗದ್ದರಿಂದ ಜನರಿಗೆ ರಮ್ಯವಾಗಲಿಲ್ಲ.

೨೧.೩.೧೯೦೭

ಕರಗಾಂವಿ ಗುಂಡ ಮುಂಜಾನೆ ಭೆಟ್ಟಿಯಾಗಿ ಪೋಟಗಿ ಹೊರ್ತು ವರ್ಷಕ್ಕೆ ೨೦೦ ರೂಪಾಯಿ ಅರಿವಿ ಇದರಂತೆ ೫ ವರ್ಷ ಕೊಟ್ಟರೆ ನಾಟಕದಲ್ಲಿ ಬರುವೆನು ಅಂತಾ ಹೇಳಿದನು. ವಿಚಾರ ಮಾಡಿ ತಿಳಿಸುವೆ ಅಂತಾ ಹೇಳಿದೆ.

೨೭.೪.೧೯೦೭

ರಾಚಯ್ಯನು ಬೆಳವಿಗೆ ಹೋಗಿದ್ದರಿಂದ ಈ ಹೊತ್ತು ಧಾರವಾಡದಲ್ಲಿ ನಾಟಕ ಆಗಲಿಲ್ಲ. ಭರತ ಕಲೋತ್ತೇಜಕ ಕಂಪನಿ ನಾಟಕವಾಯಿತಂತೆ.

.೫.೧೯೦ ೭

ಗುರುಶಿದ್ಧಯ್ಯಸ್ವಾಮಿ ಧಾರವಾಡಕ್ಕೆ ಹೋದರು. ೧೫ ರೂಪಾಯಿ ಕಳಿಸಿದರು. ಧಾರವಾಡದಲ್ಲಿ ಚಂದ್ರಹಾಸ ನಾಟಕವಾಗಿ ಅತಿ ಕೆಡಕಾಯಿತು. ರಾಚಯ್ಯನ ಸ್ವರವು ಮಂದವಾಯಿತು.

೨೪.೬.೧೯೦೭

ಸಂಜಿಗಿ ಕೊಂಣೂರಿಗೆ ಹೋಗಿ ಮಂಡಳಿಗೆ ಭೆಟ್ಟಿಯಾಗಿ ಮುಂದಿನ ಹಂಚಿಕೆ ನಾಟಕದ ಬಗ್ಯೆ ಮಾತನಾಡಿ ಗಿರಣಿಗೆ ದಾಸರಾಟ ನೋಡಲಿಕ್ಕೆ ಬಂದೆವು.

೩೦.೬.೧೯೦೭

ಮಳೆ ಇಲ್ಲದ್ದಕ್ಕೆ ಜನರು ಚಿಂತಾಕ್ರಾಂತರಾಗಿರುವರು, ದೇವರ ಚಿತ್ತವಿಉ.

೨೯.೭.೧೯೦೭

ಗುರುಶಿದ್ಧಸ್ವಾಮಿ ಮುಂಜಾನೆ ಇಲ್ಲಿಗೆ ಬಂದು ಭಾವು ಬಸ್ತಾಡ ಬಾರದ ಕಾರಣ ತಿಳಿಸಿ ನಾಟಕ ಕಂಪನಿ ಇನ್ನು ಮುಂದೆ ನಡಿಯದು ಅಂತಾ ಹೇಳಿದರು. ಸಂಜಿಗೆ ಕೊಂಣೂರಿಗೆ ಹೋದೆ. ಅಪ್ಪಾಗೌಡರು, ನೇಮಗೌಡರು ಸಹ ಕಂಪನಿ ಮುರಿಯುವುದೇ ಉತ್ತಮವೆಂದು ಹೇಳಿದ್ದರಿಂದ ಅತಿ ದುಃಖದಿಂದ ಒಡಂಬಡಬೇಕಾಯಿತು. ಹಿಡಿದ ಕೆಲ್ಸ ಸಾರ್ಥಕ ಆಗಲಿಲ್ಲ. ಹುಡುಗರ ಕಲ್ಯಾಣವಾಗಲಿಲ್ಲ, ಕಾರಣ ಬಹಳ ನೆನಪಾಗುವುದು.

೨೪.೭.೧೯೦೮

(ಬ್ರಿಟಿಷ್‌ ಸರಕಾರ) ಲೋಕಮಾನ್ಯ ತಿಲಕರಿಗೆ ೬ ವರ್ಷ ಶಿಕ್ಷೆ ೧೦೦೦/- ರೂಪಾಯಿ ದಂಡ ವಿಧಿಸಿದರು.

೨೭.೯.೧೯೦೮

ನಾಟಕ ಕಂಪನಿಯನ್ನು ಹೊಸ ರೀತಿಯಿಂದ ಆರಂಭಿಸಬೇಕೆಂದು ನಾನು ಗುರುಶಿದ್ಧಯ್ಯ ತೀರ್ಮಾನಿಸಿದೆವು.

೧೮.೧೦.೧೯೦೮

ಸರದೇಸಾಯಿ ವಂಟಮುರಿಯವರನ್ನು ಲೆಜಿಸ್ಲೇಟಿವ್ಹ ಕೌನ್ಸಿಲ್ಲಿನ ಸದಸ್ಯರನ್ನಾಗಿ ನೇಮಿಸಿದ್ದಕ್ಕಾಗಿ ಗೋಕಾಕದಲ್ಲಿ ಅಭಿನಂದನಾ ಸಭೆಯನ್ನು ಜರುಗಿಸಲಾಯಿತು.

೧೮.೧೨.೧೯೦೮

ಬಾಗಿಲುಕೋಟೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನವು ಆರಂಭವಾಗಿ ಶ್ರೀಮಂತ ಸರದೇಸಾಯಿ ವಂಟಮುರಿ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಅವರ ಭಾಷಣವನ್ನು ನನಗೆ ಓದಲು ಹೇಳಿದ್ದರಿಂದ ಓದಿದೆ.

೨೩.೧.೧೯೧೦

೪ ಗಂಟೆಯಿಂದ ೮ ಗಂಟೆಯವರೆಗೆ ಆಡಿದ ಮ್ಯಾಟನಿ ಶ್ಯೊ ‘ಶಾರದಾ’ (ಬಿಜಾಪುರ ಕ್ಯಾಂಪ) ನೋಡಿದೆ.

.೨.೧೯೧೦

ಕಂಪನಿ ಜನರ ಹೋಲಸು ವಿಚಾರಗಳು ಸುಧಾರಿಸುವಂತೆ ಕಾಣುವುದಿಲ್ಲ. ಬೆಳಗಾವಿಯಲ್ಲಿ ‘ಗುರು ಸಂಗೀತ ನಾಟಕ ಮಂಡಳಿಯ ‘ಕಬೀರ ಕಮಾಲ’ ನಾಟಕ ನೋಡಿವೆ.

೧೮.೮.೧೯೧೦

ಗುರುಶಿದ್ಧಯ್ಯನು ಹಾರ್ಮೋನಿಯಂ ನುಡಿಸುವರನ್ನು ಹುಡುಕಲು ಮಿರಜಕ್ಕೆ ಹೋದನು.

.೯.೧೯೧೦

ಬೆಳಗಾವಿಯ ಕಲೆಕ್ಟರರು ಶ್ರೀ ಶ್ರೀ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ಸಂಸ್ಥಾನ ಚಿತ್ರದುರ್ಗ ಇವರಿಗೆ ‘ವ್ಯಾಸನ ತೋಳು*’ದ ಮೆರವಣಿಗೆಗಾಗಿ ಅನುಮತಿ ಕೊಟ್ಟರು. ಇಂದು ವ್ಯಾಸನ ತೋಳ ಮೆರವಣಿಗೆಯನ್ನು ತಮ್ಮ ೭೨ ಕುದುರೆಗಳಿಂದ ಮಾಡಿದರು.

(*‘ವ್ಯಾಸನ ತೋಳು’ ಎಂಬುದು ಹರನೇ ಸರ್ವೋತ್ತಮ ಎಂದು ಸಾರಿ ಹೇಳುವಂಥ ವಿಶಿಷ್ಟ ಆಚರಣೆ. ಇದರ ಬಗ್ಗೆ ಒಂದು ಕಥೆ ಪ್ರಚಲಿತವಿದೆ. ಹರಿಯೇ ಸರ್ವೋತ್ತಮ ಎಂದು ಹಾಡಿ ಹೊಗಳುತ್ತಿದ್ದ ಮಹಾಕವಿ ವ್ಯಾಸನಿಗೆ ಶಿವಭಕ್ತರೆಲ್ಲ ಸೇರಿ ಸವಾಲು ಹಾಕಿದರಂತೆ. ಕಾಶಿಯ ವಿಶ್ವೇಶ್ವರನ ಸನ್ನಧಿಯಲ್ಲಿ ಹರಿಯೇ ಸರ್ವೋತ್ತಮ ಎಂದು ಕೈ ಎತ್ತಿ ಹೇಳಬೇಕು. ಈ ಸವಾಲು ಒಪ್ಪಿಕೊಂಡ ವ್ಯಾಸನು ವಿಶ್ವೇಶ್ವರನ ಎದುರು ಹಾಗೆಯೇ ಹೇಳಲು ಎತ್ತಿದ ಕೈ ಕತ್ತರಿ ಮೇಲಕ್ಕೆ ಹೋಯಿತಂತೆ. ಶಿವನ ಗೆಲುವಿನ ಸಂಕೇತವಾದ ಆ ಕೈಯನ್ನೇ ಶಿವಭಕ್ತರು ಧಾಮಿಕ ಉತ್ಸವ, ಸಮಾರಂಭಗಳಲ್ಲಿ ಮೆರೆಯಿಸುವ ಪದ್ಧತಿಯನ್ನು ರೂಡಿಯಲ್ಲಿ ತಂದರು. ಅದರ ಆಚರಣೆ ಇತ್ತೀಚೆಗೆ ಕಡಿಮೆಯಾಗಿದೆ.)

೧೨.೫.೧೯೧೧

ಕೊಲ್ಲಾಪುರದಲ್ಲಿ ಚಿತ್ರದುರ್ಗಸ್ವಾಮಿಗಳ ಅಡ್ಡಪಲ್ಲಕ್ಕಿ, ವ್ಯಾಸನ ತೋಳು ಮತ್ತು ಪಂಚಕಳಸ ಉತ್ಸವ ನೋಡಿದೆ.

೧೭.೫.೧೯೧೧

ಬೆಳಗಾವಿ ಜಿಲ್ಲೆಯಲ್ಲಿ ವ್ಯಾಸನತೋಳ ಮೆರವಣಿಗೆಗೆ ಮುಂಬಯಿ ಸರಕಾರ ನಿಷೇಧಾಜ್ಞೆ ಹೊರಡಿಸಿತು.

೨೦.೫.೧೯೧೧

ಬಾಗಿಲಕೋಟೆಯಲ್ಲಿ ನಡೆಯುತ್ತಿದ್ದ ‘ಬಸವೇಶ್ವರ’ ನಾಟಕಕ್ಕೆ ಬಿಜಾಪುರ ಕಲೆಕ್ಟರರು ಬಂದಿ ಹಾಕಿದರು.

೧೭.೯.೧೯೧೧

ಬೆಳಗಾವಿಲ್ಲಿ ವೀರಶೈವ ಮಹಾಸಭೆಯ ಅಧಿವೇಶನ ಜರುಗಿಸುವ ಬಗ್ಗೆ ಸಭೆ ನಡೆಯಿತು. ೨೦೦೦/- ರೂಪಾಯಿ ದೇಣಿಗೆ ೫೦೦೦/- ರೂಪಾಯಿ ಸಾಲ ಕೊಡಲು ಒಪ್ಪಿದೆ.

೨೯.೧೦.೧೯೧೧

ಮಹಾಸಭೆಯ ಅಧಿವೇಶನಕ್ಕಾಗಿ ಹೊಸಟ್ಟಿಯಲ್ಲಿ ಜಾಗ ಗೊತ್ತು ಮಾಡಿತು. ಶ್ರೀ ಅಬಾಜಿ ರಾಮಾಚಂದ್ರ ಸಾವಂತ ಬುಕ್‌ ಸೆಲರ್ ಬೆಳಗಾವಿ, ಅವರಿಗೆ ಬಸವೇಶ್ವರ ನಾಟಕ ಪ್ರಿಂಟ ಮಾಡಲು – ೨೦೦೦ ಪ್ರತಿಗಳಿಗೆ ೨೩೦/- ರೂಪಾಯಿಗೆ ಒಪ್ಪಂದವಾಯಿತು.

.೧೧.೧೯೧೧

ಬಸವೇಶ್ವರ ನಾಟಕವಾಯಿತು. ಉತ್ಪನ್ನು ೧೫೬/-ರೂ. ೬ ಆಣೆ. ಒಂದು ದಿನದ ಉತ್ಪನ್ನ – ಶನಿವಾರದಂದು ಧಾರವಾಡದ ವೀರಶೈವ ವಾಚನಾಲಯಕ್ಕೆ ಕೊಟ್ಟಿತು.

೨೯.೧೨.೧೯೧೧

ಮಹಾಸಭೆಯ ಅಧಿವೇಶನ ಮುಕ್ತಾಯಗೊಂಡಿತು. ಅತಿಥಿಗಳೊಂದಿಗೆ ‘ಸೌಭದ್ರ’ ನಾಟಕ ನೋಡಲು ಹೋದೆ.

.೮.೧೯೧೨

ಬೆಂಗಳೂರ ಪೇಪರಿನಲ್ಲಿ ನಮ್ಮ ಕಂಪನಿಯ ವಿಷಯಕ್ಕೆ ಒಳ್ಳೆಯ ಅಭಿಪ್ರಾಯದ ಲೇಖನವಿತ್ತು.

೨೪.೧೦.೧೯೧೨

ಬಸವೇಶ್ವರ ನಾಟಕದ ನಿಶೇಧಾಜ್ಞೆಯಿಂದ ಕಂಪನಿಗೆ ಹಾನಿ ಆಗಿದೆ, ಎಂದು ಪರಿಹಾರ ತುಂಬಿಕೊಡಲು ಕೇಸು ದಾಖಲಿಸಲಾಯಿತು.

೧೮.೧೨.೧೯೧೨

ಕಲೆಕ್ಟರ ಸಲುವಾಗಿ ಶಾರದಾ ನಾಟಕವಾಡಿ ಅವರಿಗೆ ಋಷಿಗೊಳಿಸಲಾಯಿತು.

೨೬.೧೨.೧೯೧೨

ವೀರಶೈವ ಮಹಾಸಭೆಯ ಅಧಿವೇಶನ ನಿಪ್ಪಾಣಿಯಲ್ಲಿ ವೈಭವದಿಂದ ಪ್ರಾರಂಭವಾಯಿತು.

೨೪.೪.೧೯೧೪

ಶ್ರೀ ರಾಮರಾವ್‌ ಕುಂದಗೋಳಕರ (ಸವಾಯಿ ಗಂಧರ್ವರು) ನಮ್ಮ ಕಂಪನಿಯಲ್ಲಿ ಸೇವೆ ಮಾಡಲು ಒಪ್ಪಿದರು.

.೧೧.೧೯೧೪

ಹುಬ್ಬಳ್ಳಿಯಲ್ಲಿ ‘ಶಿವಪ್ರಭಾವ’ ಉತ್ಪನ್ನು ೩೫೬/-ರೂ. ಕಂಪನಿಯ ನಿವ್ವಳ ಉತ್ಪನ್ನದಲ್ಲಿ ಶೇಕಡಾ ೧೦ ರಷ್ಟು ರಿಜರ್ವ ಫಂಡಿಗೆ ತೆಗೆದಿಡುವ ನಿರ್ಣಯ ಕೈಕೊಂಡು, ಇಂದಿನಿಂದಲೇ ಜಾರಿಗೊಳಿಸಲಾಯಿತು.

.೬.೧೯೧೮

ಜಾರ್ಜ್ ರಾಜರ ಜನ್ಮದಿನದಂದು ಶ್ರೀ ಮಹಾಂತಶೆಟ್ಟಿಯವರಿಗೆ, ಶ್ರೀ ಪಿ.ಜಿ. ಹಳಕಟ್ಟಿಯವರಿಗೆ ‘ರಾವಸಾಹೇಬ’ ಪದವಿ ಬಂದವು.

೨೫.೭.೧೯೨೦

ಹುಬ್ಬಳ್ಳಿಯಲ್ಲಿ ಬ್ರಾಹ್ಮಣೇತರ ಪಕ್ಷಸ ಸಭೆಯು ದೊಡ್ಡ ಪ್ರಮಾಣದಲ್ಲಿ ಸೇರಿತ್ತು. ಸರ್ ತ್ಯಾಗರಾಜ ಚೆಟ್ಟಿ ಅಧ್ಯಕ್ಷರಾಗಿದ್ದರು. ಅಂದಿನ ಸಭೆಗೆ ಕೊಲ್ಲಾಪುರದ ಛತ್ರಪತಿ ಶಾಹುಮಹಾರಾಜರು ಬಂದು ಭಾಷಣ ಮಾಡಿದರು.

೨೬.೭.೧೯೨೦

ಇಂದು ಸೇರಿದ್ದ ಬ್ರಾಹ್ಮಣೇತರ ಸಮಾಜದ ಸಭೆಯಲ್ಲಿ ಸರಕಾರಕ್ಕೆ ಅಸಹಕಾರ ತೋರಿಸುವ ಬಗ್ಗೆ ಕರೆ ಕೊಡಲಾಯಿತು.

(ನವೆಂಬರ್, ಡಿಸೆಂಬರ ತಿಂಗಳಲ್ಲಿ ಊರೂರು ತಿರುಗಾಡಿ ಅಸಹಕಾರ ಚಳುವಳಿ ಬಗ್ಗೆ ಭಾಷಣ ಮಾಡಿದ ವಿವರಗಳಿವೆ)

.೧೦.೧೯೨೨

ಅಥಣಿಯಲ್ಲಿ ‘ವ್ಯಾಸನತೋಳ’ ಮೆರವಣಿಗೆ ನಡೆಯಿತು. ೨೦,೦೦೦ ಜನರು ಸೇರಿದ್ದರು.

೩೧.೫.೧೯೨೪

ಬೆಳಗಾವಿಯ ಸರ್ದಾರ ಹೈಸ್ಕೂಲಿನಲ್ಲಿ ಸೇರಿದ ಬ್ರಾಹ್ಮಣೇತರ ಸಮಾಜದ ಸಭೆಯಲ್ಲಿ ಭಾಗವಹಿಸಿದ್ದೆ. ಶ್ರೀ ಪಿ.ಆರ್. ಚಿಕ್ಕೋಡಿಯವರು ಸದಸ್ಯರೆಲ್ಲ ಅಖಿಲ ಭಾರತ ಕಾಂಗ್ರೆಸ್ಸಿನಲ್ಲಿ ಸೇರಬೇಕೆಂಬ ಗೊತ್ತುವಳಿಯನ್ನು ವಿರೋಧಿಸಿದರು.

.೬.೧೯೨೪

ಮತ್ತೆ ಸಭೆ ಜರುಗಿತು. ಸದಸ್ಯನಾಗಲು ಒಪ್ಪಿ ೫೧/- ರೂ. ವಂತಿಗೆ ಒಪ್ಪಿಸಿದೆ.

.೬.೧೯೨೪

ಐದನೆಯ ಜಾರ್ಜ್‌ರ ಜನ್ಮದಿನ ಆಚರಿಸಲಾಯಿತು. ಶ್ರೀ ಎ.ಬಿ. ಲಠ್ಠೆ ಅವರಿಗೆ ರಾವಬಹದ್ದೂರ ಪದವಿ ಸಿಕ್ಕಿತು.

.೭.೧೯೨೬

ಎಸ್‌.ಎನ್‌. ಅಂಗಡಿಯವರಿಗೆ ರಾವಬಹದ್ದೂರ ಪದವಿ ಸಿಕ್ಕಿತು.

೧೨.೪.೧೯೩೧

ಹರ್ಡೇಕರ ಮಂಜಪ್ಪನವರ ಜೊತೆಗೆ ರೈತ ಸಂಘದ ಸಭೆಯಲ್ಲಿ ಹಾಜರಿದ್ದೆ.

೧೨.೮.೧೯೩೧

ಹೊಸ ನಾಟಕ ಕಂಪನಿ ಕಟ್ಟುವ ಬಗ್ಗೆ ಮೂಗಬಸವದ ಪರಪ್ಪ ಪಾಟೀಲರೊಂದಿಗೆ (ನಟ) ಚರ್ಚಿಸಲಾಯಿತು.

೮ ಮತ್ತು ೯-೧೧-೧೯೨೦

ಬೆಳಗಾವಿಯಲ್ಲಿ ಸೇರಿದ್ದ ಮಹಾತ್ಮಾಗಾಂಧಿ ಮತ್ತು ಶೌಕತ ಅಲಿಯವರ ಸಭೆಗೆ ಹಾಜರಾಗಿ ಭಾಷಣ ಮಾಡಿದೆ.