ಕೊತ್ತುಂಬರಿ ಸೊಪ್ಪು ಸುವಾಸನೆಗೆ ಹೆಸರುವಾಸಿ. ನಮ್ಮ ದೇಶದ ಎಲ್ಲಾ ಕಡೆ ಇದರ ಬಳಕೆ ಇದೆ. ಕೊತ್ತುಂಬರಿ ಬೀಜಾ ದನಿಯಾ ಮುಖ್ಯ ಸಾಂಬಾರ ವಸ್ತುವಾಗಿದ್ದು ಇದರಿಂದ ಎಣ್ಣೆಯನ್ನು ಸಹ ಉತ್ಪಾದಿಸುತ್ತಾರೆ. ಶ್ರೀಲಂಕಾ, ಮಲೇಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಅಮೆರಿಕಾಗಳಿಗೆ ಇದನ್ನು ರಫ್ತು ಮಾಡಲಾಗುತ್ತಿದೆ.

ಪೌಷ್ಟಿಕ ಗುಣಗಳು : ಕೊತ್ತುಂಬರಿ ಸೊಪ್ಪು ಸುವಾಸನೆ ಜೊತೆಗೆ ಪೌಷ್ಟಿಕ ಗುಣವನ್ನೂ ಸಹ ಹೊಂದಿದೆ. ಅದರಲ್ಲಿ ಶರೀರದ ಬೆಳವಣಿಗೆಗೆ ಅಗತ್ಯವಿರುವ ಹಲವಾರು ಪೋಷಕಾಂಶಗಳಿವೆ.

೧೦೦ ಗ್ರಾಂ ಸೊಪ್ಪಿನಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ – ೮೭.೯ ಗ್ರಾಂ
ಶರ್ಕರಪಿಷ್ಟ – ೬.೫ ಗ್ರಾಂ
ಪ್ರೊಟೀನ್ – ೩.೩ ಗ್ರಾಂ
ಕೊಬ್ಬು – ೦.೬ ಗ್ರಾಂ
ಖನಿಜ ಪದಾರ್ಥ – ೧.೭
ರಂಜಕ – ೬೮ ಮಿ.ಗ್ರಾಂ
ಕ್ಯಾಲ್ಸಿಯಂ – ೦.೧೮ ಮಿ.ಗ್ರಾಂ
ಕಬ್ಬಿಣ – ೮ ಮಿ.ಗ್ರಾಂ
ಪೊಟ್ಯಾಷ್ – ೪೮.೩ ಮಿ.ಗ್ರಾಂ
’ಎ’ ಜೀವಸತ್ವ ೧೨೬೦೦ ಐಯೂ
ಥಯಮಿನ್ – ೦.೦೫ ಮಿ.ಗ್ರಾಂ
ರೈಬೋಫ್ಲೇವಿನ್ – ೦.೧೩ ಮಿ.ಗ್ರಾಂ
ನಿಕೋಟಿನಿಕ್ ಆಮ್ಲ – ೦.೮ ಮಿ.ಗ್ರಾಂ
ಕ್ಯಾಲೋರಿಗಳು – ೪೮
ಆಕ್ಸಾಲಿಕ್ ಆಮ್ಲ – ೫ ಮಿ.ಗ್ರಾಂ
ನಯಾಸಿನ್ – ೦.೭ ಮಿ.ಗ್ರಾಂ

ಔಷಧೀಯ ಗುಣಗಳು : ಕೊತ್ತಂಬರಿ ಸೊಪ್ಪು ಮತ್ತು ಬೀಜಗಳಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇದರ ಸೊಪ್ಪಿನಲ್ಲಿ ಅಧಿಕ ಕಬ್ಬಿಣದ ಅಂಶ ಇರುವ ಕಾರಣ ರಕ್ತಹೀನತೆಯಲ್ಲಿ ನರಳುತ್ತಿರುವವರು ಇದನ್ನು ಹೆಚ್ಚು ಬಳಸಬೇಕು. ಇದರ ರಸವನ್ನು ಮುಕ್ಕಳಿಸಿದರೆ ಬಾಯಿ ಹುಣ್ಣಾಗಿದ್ದಲ್ಲಿ ಉಪಶಮನ ಸಾಧ್ಯ. ಮೂಗಿನಲ್ಲಿ ರಕ್ತ ಸುರಿಯುತ್ತಿದ್ದರೆ ಇದರ ರಸವನ್ನು ಮೂಗಿನ ಹೊಳ್ಳೆಗಳೊಳಕ್ಕೆ ಬಿಡುವುದುಂಟು. ಆಹಾರ ರುಚಿಸಲು ಕೊತ್ತಂಬರಿ ಸೊಪ್ಪು, ಕರಿಮೆಣಸು, ಪುದೀನ, ಉಪ್ಪು ದ್ರಾಕ್ಷಿ ಮತ್ತು ನಿಂಬೆ ಹಣ್ಣಿನ ರಸ ಸೇರಿಸಿ ತಯಾರಿಸಿದ ಚಟ್ನಿಯನ್ನು ತಿನ್ನಬೇಕು. ತಲೆಸುತ್ತುವಂತಿದ್ದರೆ ಇದರ ರಸದೊಂದಿಗೆ ಕಲ್ಲು ಸಕ್ಕರೆ ಬೆರೆಸಿ ಸೇವಿಸಬೇಕು. ಮಲಗುವ ಮುಂಚೆ ಇದರ ರಸ ಮತ್ತು ಜೇನುತುಪ್ಪಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ಸೇವಿಸುತ್ತಿದ್ದಲ್ಲಿ ಶುದ್ಧರಕ್ತ ಹೆಚ್ಚುತ್ತದೆ ಹಾಗೂ ಅದರಿಂದ ರೋಗ ನಿರೋಧಕ ಶಕ್ತಿ ಉಂಟಾಗುತ್ತದೆ. ಅಜೀರ್ಣದ ತೊಂದರೆಗಳು, ವಾಕರಿಕೆ, ಬಿಕ್ಕಳಿಕೆ, ಬಾಯಿ ಕಹಿ ಇದ್ದಾಗ ಇದರ ರಸ ಮತ್ತು ಮಜ್ಜಿಗೆಗಳನ್ನು ಬೆರೆಸಿ ಕುಡಿಬೇಕು. ಸೊಪ್ಪನ್ನು ಅಗಿದು ತಿನ್ನುವುದರಿಂದ ಹಲ್ಲುಗಳು ದೃಢಗೊಳ್ಳುತ್ತವೆ ಹಾಗೂ ಹುಳುಕಾಗುವುದಿಲ್ಲ. ಇದರ ಬೀಜಗಳಿಂದ ತಯಾರಿಸಿದ ಕಷಾಯವನ್ನು ಸೇವಿಸುವುದರಿಂದ ಗಂಟಲು ನೋವು, ನೆಗಡಿ, ಶೀತ, ಪಿತ್ತರಸ ಬಾಧೆಗಳಿಗೆ ಹಾಗೂ ಸಿಡುಬು ರೋಗದಿಂದ ಕಣ್ಣುಗಳ ದೃಷ್ಟಿ ರಕ್ಷಣೆಗಳಲ್ಲಿ ಹೆಚ್ಚು ಲಾಭದಾಯಕ. ಅಜೀರ್ಣದ ತೊಂದರೆಯನ್ನು ಹೋಗಲಾಡಿಸಬಲ್ಲದು. ಕೊತ್ತುಂಬರಿ ಬೀಜದಲ್ಲಿ ಕಾಮೋತ್ತೇಜಕ ಹಾಗೂ ಮೂತ್ರವರ್ಧಕ ಗುಣಗಳಿವೆ. ಬೀಜಗಳಿಂದ ತೆಗೆದ ಎಣ್ಣೆಯನ್ನು ಬಿಸ್ಕತ್ತು, ಮದ್ಯಸಾರ ಮುಂತಾಗಿ ಸುವಾಸನೆಗಾಗಿ ಬಳಸುತ್ತಾರೆ.

ಉಗಮ ಮತ್ತು ಹಂಚಿಕೆ : ಕೊತ್ತುಂಬರಿ ನಮ್ಮ ದೇಶದ್ದಲ್ಲ. ಅದರ ತವರೂರು ಪೂರ್ವ ಹಾಗೂ ದಕ್ಷಿಣ ಯೂರೋಪ್, ಏಷ್ಯಾ ಮುಂತಾಗಿ.

ಸಸ್ಯ ವರ್ಣನೆ : ಕೊತ್ತಂಬರಿ ಏಷಿಯೇಸೀ ಕುಟುಂಬಕ್ಕೆ ಸೇರಿದ ಏಕವಾರ್ಷಿಕ ಮೂಲಿಕೆ. ಒಂದೇ ಋತುವಿನಲ್ಲಿ ವೃದ್ಧಿ ಹೊಂದಿ, ಬೀಜ ಕಚ್ಚಿ ಜೀವನ ಪರಿಧಿಯನ್ನು ಮುಗಿಸುತ್ತದೆ. ಪೂರ್ಣ ಬೆಳೆದಾಗ ಗಿಡಗಳ ಎತ್ತರ ೩೦ ರಿಂದ ೯೦ ಸೆಂ.ಮೀ. ಇರುತ್ತದೆ. ಗಿಡಗಳ ನೆಟ್ಟಗೆ ಬೆಳೆದು ಕವಲೊಡೆದಿರುತ್ತವೆ. ಕಾಂಡ ಗಟ್ಟಿ ಇರುವುದಿಲ್ಲ. ಎಲೆಗಳು ಬಹಳಷ್ಟು ಪಡೆದಿರುತ್ತವೆ. ಎಲೆತೊಟ್ಟಿನ ಬುಡಭಾಗ ಅಗಲಗೊಂಡಿದ್ದು ಕಾಂಡಭಾಗಕ್ಕೆ ಆತುಕೊಂಡಿರುತ್ತದೆ. ಕಾಂಡ, ರೆಂಬೆಗಳು ಮತ್ತು ಎಲೆಗಳು ಹಸುರು ಬಣ್ಣವಿದ್ದು ಸುವಾಸನೆಯಿಂದ ಕೂಡಿರುತ್ತವೆ. ಈ ಸುವಾಸನೆಗೆ ಅವುಗಳಲ್ಲಿನ ಆರುವ ತೈಲವೇ ಕಾರಣ. ಹೂವು ಕವಲುಗಳು ತುದಿಯಲ್ಲಿ ಬಿಡುತ್ತವೆ. ಅವು ಅಧಿಕ ಸಂಖ್ಯೆಯಲ್ಲಿದ್ದು ಒತ್ತಾಗಿ ವ್ಯವಸ್ಥಿತಗೊಂಡಿರುತ್ತವೆ. ಹೂಗಳು ದ್ವಿಲಿಂಗಿಗಳಿದ್ದು ಬೆಳ್ಳಗಿರುತ್ತವೆ. ಬೀಜ ದುಂಡಗೆ ಗೋಲಾಕಾರವಿದ್ದು ಎರಡು ಹೋಳುಗಳಿಂದ ಕೂಡಿರುತ್ತವೆ. ಅವುಗಳ ಬಣ್ಣ ಮಾಸಲು ಕಂದು ಅಥವಾ ಬಿಳುಪು. ಬೇರು ಮಣ್ಣಿನಲ್ಲಿ ಆಳವಾಗಿ ಇಳಿದಿರುತ್ತದೆ.

ಹವಾಗುಣ : ಇದು ಉಷ್ಣವಲಯದ ಬೆಳೆಯಾದರೂ ಇತರ ವಲಯಗಳಲ್ಲೂ ಸಹ ಬೆಳೆಯಬಹುದು. ತಂಪು ಹವೆಯಲ್ಲಿ ಹುಲುಸಾಗಿ ಬೆಳೆಯುತ್ತದೆ. ಹೂವು ಬಿಡುವಾಗ ಮಳೆ ಅಥವಾ ಮಂಜು ಸುರಿಯುವುದು, ಮೋಡ ಮುಚ್ಚಿದ ವಾತಾವರಣಗಳಲ್ಲಿ ರೋಗಗಳ ಬಾಧೆ ಹೆಚ್ಚು; ಹೂವು ಉದುರಿ ಬಹಳಷ್ಟು ನಷ್ಟವುಂಟಾಗುತ್ತದೆ. ಬೀಜಕ್ಕೆ ಅಕ್ಟೋಬರ್‌ನಿಂದ ಫೆಬ್ರುವರಿ ಸೂಕ್ತ ಕಾಲ. ಸೊಪ್ಪಿಗೆ ವರ್ಷದ ಯಾವ ಕಾಲದಲ್ಲಾದರೂ ಬಿತ್ತಬಹುದು.

ಭೂಗುಣ : ಇದಕ್ಕೆ ಎಂತಹ ಭೂಮಿಯಾದರೂ ಒಪ್ಪುತ್ತದೆ. ಆದರೆ ಮಣ್ಣು ಫಲವತ್ತಾಗಿರಬೇಕು. ನೀರು ಬಸಿಯುವ ಮರುಳು ಮಿಶ್ರಿತ ಕೆಂಪು ಮಣ್ಣು ಅತ್ಯುತ್ತಮ. ಕೆಲವೆಡೆಗಳಲ್ಲಿ ಕಪ್ಪು ಮಣ್ಣಿನಲ್ಲಿ ಸಹ ಬೆಳೆಯುತ್ತಾರೆ.

ಮುಖ್ಯ ತಳಿಗಳು : ಕೊತ್ತುಂಬರಿ ತಳಿ ಸಂಗ್ರಹಣೆ ಮತ್ತು ಸುಧಾರಣಾ ಕಾರ್ಯಗಳು ಗುಂಟೂರು, ಜಾಬ್ನರ್ ಮತ್ತು ಬೆಂಗಳೂರಿನಲ್ಲಿ ನಡೆಯುತ್ತಿದೆ. ಬೇಗ ಕೊಯ್ಲಿಗೆ ಬರುವ, ಹೆಚ್ಚು ಸುವಾಸನೆಯಿಂದ ಕೂಡಿದ ಅಧಿಕ ಇಳುವರಿ ಕೊಡುವ, ಹಿಮವನ್ನು ತಡೆದುಕೊಳ್ಳಬಲ್ಲ ಹಾಗೂ ಕೀಟ ಮತ್ತು ರೋಗ ನಿರೋಧಕ ತಳಿಗಳ ಉತ್ಪಾದನೆ ಅಗತ್ಯವಿದೆ. ಸಿಂಪೊ ಎಸ್-೩೩ ಎಂಬ ಉತ್ತಮ ತಳಿಯೊಂದನ್ನು ಸಿಮಾಪ್ (CIMAP) ಸಂಸ್ಥೆ ಇತ್ತೀಚಿಗೆ ಅಭಿವೃದ್ಧಿ ಪಡಿಸಿದೆ.

. ಸಿಂಪೊ ಎಸ್೩೩: ಇದು ಬಲ್ಗೇರಿಯಾದ ತಳಿ. ಬೆಂಗಳೂರಿನ ಕೇಂದ್ರೀಯ ಔಷಧೀಯ ಹಾಗೂ ಸುಗಂಧ ದ್ರವ್ಯ ಬೆಳೆಗಳ ಸಂಶೋಧನಾ ಸಂಸ್ಥೆ ಇದನ್ನು ತರಿಸಿಕೊಂಡು ಅಭಿವೃದ್ಧಿಪಡಿಸಿತು. ಇದು ಉತ್ತಮ ತಳಿಯಾಗಿದ್ದು ಎತ್ತರಕ್ಕೆ ಬೆಳೆಯುತ್ತವೆ. ಕವು ರೆಂಬೆಗಳು ಬಹಳಷ್ಟಿದ್ದು ಗುಂಪಾಗಿ, ಪೊದೆಯಂತೆ ಕಾಣುತ್ತದೆ. ಎಲೆಗಳು ದೊಡ್ಡವು. ಇದರಲ್ಲಿ ಸೊಪ್ಪಿನ ಪ್ರಮಾಣ ಜಾಸ್ತಿ. ವಾಸನೆ ಮತ್ತು ರುಚಿಗಳು ಅಪೇಕ್ಷಣೀಯ. ಬೀಜ

. ಕೊ: ಈ ತಳಿ ಬೇಸಾಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ಸೊಪ್ಪು ಹಾಗೂ ಬೀಜಗಳಿಗಾಗಿ ಬೆಳೆಯುತ್ತಾರೆ. ಅಧಿಕ ಇಳುವರಿ ತಳಿ.

. ಮೊರಕ್ಕಾನ್ : ಬೇಗ ಕೊಯ್ಲಿಗೆ ಬರುವ ತಳಿ. ಬಿತ್ತನೆ ಮಾಡಿದ ೪೦ ರಿಂದ ೬೦ ದಿನಗಳಲ್ಲಿ ಸೊಪ್ಪನ್ನು ಕಿತ್ತು ಬಳಸಬಹುದು.

. ಗ್ವಾಲಿಯರ್ಸೆಲೆಕ್ಷನ್ಸ್ : ಇದು ಬೇಗ ಕೊಯ್ಲಿಗೆ ಬರುವ ತಳಿ; ಫ್ಯುಸೇರಿಯಂ ಕೊಳೆರೋಗಕ್ಕೆ ನಿರೋಧಕವಿರುತ್ತದೆ.

. ಲ್ಯಾಮ್ಸೆಲೆಕ್ಷನ್ಸ್ : ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಲ್ಯಮ್ ಸಂಶೋಧನಾ ಕೇಂದ್ರವು ಕೆಲವೊಂದು ಅತ್ಯುತ್ತಮ ಆಯ್ಕೆಗಳನ್ನು ಮಾಡಿ ಬೇಸಾಯಕ್ಕೆ ಒದಗಿಸಿದೆ. ಬೀಜಕ್ಕಾಗಿ ಎನ್.ಪಿ.-೧೬, ಎನ್.ಪಿ.-೪೫, ಎನ.ಪಿ.-೯೨, ಎನ್.ಪಿ.-೯೫, ಎನ್.ಪಿ.-೧೯೭೨, ಎನ್.ಪಿ.-೨೧೪, ಸಿ.ಎಸ್.-೬, ಸಿ.ಎಸ್.-೬ ಮತ್ತು ಎಂ.ಎಸ್..-೩ ಬೇಗ ಕೊಯ್ಲಿಗೆ ಬರುವ ತಳಿಗಳು. ಯು.ಡಿ.ಪಿ. ಸೆಲೆಕ್ಷನ್ -೫ ಹೆಕ್ಟೇರಿಗೆ ೧೩೮೪ ಕಿ.ಗ್ರಾಂ ಬೀಜವನ್ನು ಹಾಗೂ ಅನಂತಪುರ್‌-೨೨ ಹೆಕ್ಟೇರಿಗೆ ೧೩೬೨ ಕಿ.ಗ್ರಾಂ ಹಾಗೂ ಎಸ್.ಪಿ.ಜೆ.- ೫೨೪ ಹೆಕ್ಟೇರಿಗೆ ೧೩೩೯ ಕಿ.ಗ್ರಾಂ ಬೀಜವನ್ನು ಉತ್ಪಾದಿಸಿದೆ.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ಸಮತಟ್ಟಾದ ಪಾತಿಗಳು ಇಲ್ಲವೇ ೩೦ ಸೆಂ.ಮೀ. ಅಂತರದ ಸಾಲುಗಳನ್ನು ಮಾಡಿ ಬೀಜ ಬಿತ್ತುವ ಮುಂಚೆ ಪೂರ್ಣಪ್ರಮಾಣದ ರಂಜಕ ಮತ್ತು ಪೊಟ್ಯಾಷ್ ಸತ್ವಗಳನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಬೆರೆಸಬೇಕು.

ಬಿತ್ತುವ ಮುಂಚೆ ಬೀಜವನ್ನು ಬಿಸಿಲಿನಲ್ಲಿ ಹರಡಿ ಉಜ್ಜಿದರೆ ಅವು ಎರಡು ಹೋಳಾಗಿ ಒಡೆಯುತ್ತವೆ. ಅದರಿಂದ ಬಿತ್ತನೆ ಪ್ರಮಾಣದಲ್ಲಿ ಉಳಿತಾಯ ಸಾಧ್ಯ. ಬೀಜವನ್ನು ತಣ್ಣೀರಿನಲ್ಲಿ ನೆನೆಸಿಟ್ಟು ಬಿತ್ತಿದರೆ ಬೇಗ ಮೊಳೆಯುತ್ತದೆ. ಬಿತ್ತನೆಗೆ ಮುಂಚೆ ಬೀಜೋಪಚಾರ ಮಾಡುವುದು ಒಳ್ಳೆಯದು; ಒಂದು ಕಿ.ಗ್ರಾಂ ಬೀಜಕ್ಕೆ ೨.೫ ಗ್ರಾಂ ಥೈರಂ ಔಷಧಿ ಬೆರೆಸಿದರೆ ಸಾಕು. ಪಾತಿಗಳಲ್ಲಿ ಬಿತ್ತಿದರೆ ನೀರು ಹಾಯಿಸುವುದು ಸುಲಭ. ಸಾಲುಗಳಲ್ಲಿ ಬಿತ್ತಿದರೆ ಕಳೆ ತೆಗೆಯುವುದು ಸುಲಭ. ಬೀಜ ಬಿತ್ತಲು ಮಳೆಗಾಲಕ್ಕಿಂತಲೂ ಚಳಿಗಾಲ ಮತ್ತು ಬೇಸಿಗೆ ಉತ್ತಮ. ಶುದ್ಧ ಬೆಳೆಯಾದರೆ ಹೆಕ್ಟೇರಿಗೆ ೨೦ ರಿಂದ ೨೫ ಕಿ.ಗ್ರಾಂ. ಬೀಜ ಬೇಕಾಗುತ್ತವೆ; ಮಿಶ್ರ ಬೆಳೆಯಾದರೆ ೧೦-೧೨ ಕಿ.ಗ್ರಾಂ ಬೀಜ ಸಾಕು. ಬೀಜ ಬಿತ್ತುವ ಕಾಲಕ್ಕೆ ಮಣ್ಣು ಹಸಿಯಾಗಿರಬೇಕು. ಸುಮಾರು ೮-೧೦ ದಿನಗಳಲ್ಲಿ ಮೊಳೆಯುತ್ತವೆ.

ಗೊಬ್ಬರ : ಹೆಕ್ಟೇರಿಗೆ ೨೦-೨೫ ಟನ್ ತಿಪ್ಪೆಗೊಬ್ಬರ, ೨೦ ಕಿ.ಗ್ರಾಂ ಸಾರಜನಕ, ೪೫ ಕಿ.ಗ್ರಾಂ ರಂಜಕ ಮತ್ತು ೨೦ ಕಿ.ಗ್ರಾ ಪೊಟ್ಯಾಷ್ ಸತ್ವಗಳನ್ನು ಶಿಫಾರಸು ಮಾಡಿದೆ. ಇವುಗಳ ಜೊತೆಗೆ ಶೇಕಡಾ ೦.೨ ಸತು ಮತ್ತು ೦.೦೧ ಬೋರಾನ್ ಧಾತುಗಳನ್ನು ನೀರಿನಲ್ಲಿ ಕದಡಿ ಬೆಳೆಯ ಮೇಲೆ ಸಿಂಪಡಿಸಿದರೆ ಅಧಿಕ ಸೊಪ್ಪು ದೊರೆಯುವುದಾಗಿ ತಿಳಿದುಬಂದಿದೆ.

ನೀರಾವರಿ : ಮಳೆ ಇಲ್ಲದಿದ್ದಲ್ಲಿ ೧೨-೧೫ ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಮಣ್ಣು ಯಾವಾಗಲೂ ಹಸಿಯಾಗಿರುವುದು ಬಹುಮುಖ್ಯ. ಬೆಳೆಯ ಅವಧಿಯಲ್ಲಿ ೪-೫ ನೀರು ಹಾಯಿಸಬೇಕಾಗುತ್ತದೆ.

ಮಿಶ್ರಬೆಳೆಯಾಗಿ : ಕೊತ್ತುಂಬರಿಯನ್ನು ಶುದ್ಧ ಬೆಳೆಯಾಗಿ ಇಲ್ಲವೇ ಇತರ ತರಕಾರಿ ಬೆಳೆಗಳಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಬಹುದು. ಮೆಣಸಿನಕಾಯಿ, ಈರುಳ್ಳಿ, ಕ್ಯಾರೆಟ್, ಬೀಟ್‌ರೂಟ್, ಆಲೂಗೆಡ್ಡೆ ಮುಂತಾದ ಬೆಳೆಗಳಲ್ಲಿ ಬದುಗಳ ಮೇಲೆ ಕೊತ್ತುಂಬರಿ ಬೀಜ ಬಿತ್ತಿ, ಲಾಭ ಹೊಂದಬಹುದು. ಮುಖ್ಯ ಬೆಳೆಗಳು ಕೊಯ್ಲಿಗೆ ಬರುವ ಬಹಳಷ್ಟು ಮುಂಚೆಯೇ ಕೊತ್ತುಂಬರಿಯ ಕೊಯ್ಲು ಮುಗಿದಿರುತ್ತದೆ.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಅಂತರ ಬೇಸಾಯ ಹಗುರವಾಗಿರಬೇಕು. ಕೈಗುದ್ದಲಿಯಿಂದ ಮಣ್ಣನ್ನು ಮೇಲ್ಮೇಲೆ ಸಡಿಲಿಸಿ ಕಳೆಗಳನ್ನು ಕಿತ್ತುಹಾಕಬೇಕು.

ಕೊಯ್ಲು ಮತ್ತು ಇಳುವರಿ : ಬಿತ್ತನೆ ಮಾಡಿದ ಸುಮಾರು ೨೦-೩೦ ದಿನಗಳಲ್ಲಿ ಸೊಪ್ಪು ಕಿತ್ತು ಬಳಸಬಹುದು. ಹೂವು ಬರುವ ತನಕ ಸೊಪ್ಪನ್ನು ಕಿತ್ತು ಬಳಸಬಹುದು. ಕಾಯಿಕಚ್ಚಿದ ನಂತರ ಸೊಪ್ಪಿನ ಪ್ರಮಾಣ ಕುಸಿಯುತ್ತದೆ. ಬೆಳೆ ಸುಮಾರಾಗಿ ಫಲಿಸಿದರೂ ಸಹ ಹೆಕ್ಟೇರಿಗೆ ೧-೨ ಟನ್ ಸೊಪ್ಪು ಸಿಗುವುದರಲ್ಲಿ ಸಂದೇಹವಿಲ್ಲ. ಸಿಂಪೋ ತಳಿಯಲ್ಲಿ ಇನ್ನೂ ಹೆಚ್ಚಿನ ಇಳುವರಿ ಸಾಧ್ಯ.

ಕೀಟ ಮತ್ತು ರೋಗಗಳು : ಕೊತ್ತುಂಬರಿ ಬೆಳೆಗೆ ಹನಿಯನ್ನುಂಟು ಮಾಡುವ ಕೀಟಗಳಲ್ಲಿ ಥ್ರಿಪ್ಸ್, ಸಸ್ಯಹೇನು, ಜೇಡ ಹಾಗೂ ಎಲೆ ತಿನ್ನುವ ತಂಬಾಕು ಕತ್ತರಿ ಹುಳು ಮುಖ್ಯವಾದುವು. ರೋಗಗಳಲ್ಲಿ ಬೂದಿರೋಗ, ಬಹುಮುಖ್ಯವಾದುದು. ಕೀಟಗಳ ಹತೋಟಿಗೆ ಹೆಕ್ಟೇರಿಗೆ ಅರ್ಧ ಕಿ.ಗ್ರಾಂ.ನಂತೆ ಮಾನೊಕ್ರೊಟೊಫಾಸ್ ಅಥವಾ ಕ್ಲೋರೊಪೈರಿಫಾಸ್, ಎಂಡೋ ಸಲ್ಫಾನ್ ಇಲ್ಲವೇ ಕ್ವಿನಾಲ್‌ಫಾಸ್ ಕೀಟನಾಶಕವನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಬೂದಿರೋಗದ ಹತೋಟಿಗೆ ನೀರಿನಲ್ಲಿ ತೊಯ್ಯುವ ಗಂಧಕವನ್ನು ಸೂಕ್ತ ಪ್ರಮಾಣದಲ್ಲಿ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಬೀಜೋತ್ಪಾದನೆ : ಕೊತ್ತುಂಬರಿಯಲ್ಲಿ ಪರಕೀಯ ಪರಾಗಸ್ಪರ್ಶ ಹೆಚ್ಚು. ಶುದ್ಧ ತಳಿಯ ಬೀಜೋತ್ಪಾದನೆಗೆ ಎರಡು ತಳಿಗಳ ನಡುವೆ ೪೦೦ ಮೀಟರ್ ಅಂತರ ಅಗತ್ಯ.

* * *