ಬೆಂಗಳೂರಿನಿಂದ ದೂರ ದೂರ ದೂರ
ಎರಡು ನೂರು ದೂರ
ಶಿವಮೊಗ್ಗೆಗೆ ಧಾವಿಸಿತ್ತು ಕವಿಯ ಕಾರು
ಕಾಲದೇಶ ಲಗ್ಗೆಗೆ ಕ್ಷಣಕ್ಷಣಕ್ಷಣಕೆ ಮೈಲಿ ಮೈಲಿ ಮೈಲಿ
ಹಾರುತ್ತಿತ್ತು ಕವಿಯ ಕಾರು:
ತೇಲುತ್ತಿತ್ತು ಚಿಮ್ಮುತಿತ್ತು ಈಜುತಿತ್ತು ಮಿಂಚುತಿತ್ತು
ಸಿಮೆಂಟು, ಟಾರು!
ಉಬ್ಬು ತಗ್ಗು ನೇರ ಡೊಂಖು
ಕರಿಯ ರಸ್ತೆ ಹಾವು ಹರಿಯುತಿತ್ತು
ಸರ್ಪಿಸಿ!
ದೂರದೊಂದು ಭವಿಷ್ಯದಂತೆ
ಕಂಡ ಆ ದಿಗಂತವೊಡನೆ
ವರ್ತಮಾನವಾಗಿ ಕಾರಿನಡಿಯೆ ತೂರಿ
ಭೂತಕಾಲವಾಗಿ ಸ್ಮರಣಮಾತ್ರವಾದ ತೆರೆದಲಿ
ವೇಗ ವೇಗ ವೇಗ ಭರದಲಿ
ತನ್ನ ತಾ ಸಮರ್ಪಿಸಿ
ಧಾವಿಸಿತ್ತು ಕವಿಯ ಕಾರು!


ಕವಿ: ವೈಸ್ ಛಾನ್ಸಲರ್!
ಕಾರ್: ಸ್ಟುಡಿಬೇಕರ್!
ಸದ್ಯದ ಡ್ರೈವರ್: ಪೂರ್ಣಚಂದ್ರ ತೇಜಸ್ವಿ!
ಅವನ ಪಕ್ಕ ನಿಜ ಡ್ರೈವರ್!
ಜವದ ಹುಚ್ಚೆ ಹಿಡಿಯಿತೇನೊ ಪೆಟ್ರೋಲಿಗೆ!
ಅತ್ತ ಇತ್ತ ಕಾರ್ತಿಕದ
ನೆಲದ ಸಿರಿ ಹಸುರಿಸೆ
ನೀಲಿ ಬಾನು, ಮುಗಿಲ ಲೀಲೆ,
ನೆತ್ತಿ ಮೇಲೆ ಹಸರಿಸೆ….
ಅಯ್ಯೋ
ಇತ್ತ ನೋಡು…. ದೇವರೆ ಗತಿ,
ಅರುವತ್ತು! ಎಪ್ಪತ್ತು! ಎಪ್ಪತ್ತೈದು!….
ಗೂಳಿಗಣ್ಣ ಸ್ಪೀಡಾಮಿಟರ್ ಕೂಗಿ ಹೇಳುತಿತ್ತು.


“ಬೇಡ ಕಣೋ ಇಷ್ಟು ಸ್ಪೀಡು!”
“ಬಿಡಿ, ಅಣ್ಣಾ, ಸುಮ್ಮನಿರಿ,
ನನಗೆ ಗೊತ್ತಿದೆ!”
ಎಂದಿನಂತೆ ತೇಜಸ್ವಿಯ ಉಡಾಫಿ ಉತ್ತರ!
ಸರಿ, ಕಣ್ಣು ಮುಚ್ಚಿ ಕುಳಿತೆ:

ದಕ್ಷೀಣೇಶ್ವರ! ಭವತಾರಿಣಿ!
ಜಗದಂಬೆಗೆ ಚವರಿ ಬೀಸುತಿಹರು ಪರಮಹಂಸರು!
ಕೈಯ ಮುಗಿದು ನಿಂತು ನೋಡಿ ಧನ್ಯನಾಗುತ್ತಿದ್ದೆ.

ಚಕ್ರವೇಕೊ ಕೀರೆಂದಿತು:
ಒಳ್ಳೆರಸ್ತೆ, ನೇರ ರಸ್ತೆ,
ಆದರೇನು? ಗಾಲಿ ವಾಲಿ ಸದ್ದು ಮಾಡತೊದಗಿದೆ!

“ಸ್ಪೀರಿಂಗೇಕೊ ಸರಿ ಇಲ್ಲ; ಸ್ವಲ್ಪ ಎಣ್ಣೆ ಬಿಡಬೇಕಿತ್ತೊ?”
“ನಿನ್ನೆ ಅಲ್ಲ ಮೊನ್ನೆ ತಾನೆ ಲೂಬ್ರಿಕೇಷನ್ ಆಗಿದೆ”
ಎಂದ ಡ್ರೈವರ್, ಡ್ರೈವ್ ಮಾಡುತ್ತಿದ್ದ ತೇಜಸ್ವಿಗೆ.
“ಚಕ್ರವೇಕೊ ಎಡದ ಕಡೆಗೆ ವಾಲುತ್ತಿದೆ!”

ಗಾಡಿ ನಿಂತಿತು. ಪರೀಕ್ಷೆ ಸಾಗಿತು:
ಜಾಕ್ ಹೊರಗೆ ಬಂದಿತು.
ಗಾಡಿ ಮೇಲಕೆದ್ದಿತು.
ಚಕ್ರ ಬಿಚ್ಚಿದರು.
ಸ್ಪ್ಯಾನರ್-ಸ್ಕ್ರೂ ಡ್ರೈವರ್- ವೀಲ್ ಸ್ಪ್ಯಾನರ್-ಟಕ್ ಟಕ್
ಟಕ್….
ಅರ್ಧ ಗಂಟೆ ಮುಗಿದ ಮೇಲೆ ಮತ್ತೆ….
ಹೊರಟಿತು!


ಚಕ್ರ ಮತ್ತೆ ಸಮೆಯುತ್ತಿತ್ತು: ಕಿರೋ ಕಿರೋ ಕಿರೋ!
ಫಿಷ್ ಪ್ಲೇಟ್…. ಟೈರ್ ರಾಡ್ ಎಂಡ್ ….
ಮಣ್ಣು ಮಸಣ … ನನಗೆ ಅರ್ಥವಾತದಿದ್ದ ನೂರು ಹೆಸರು….

ಕಡೆಗೆ ಮತ್ತೆ ಗಾಡಿ ನಿಂತಿತು:
ಸರಿ, ಮತ್ತೆ ಇಳಿದರಿಬ್ಬರೂ.
ನಾ….ನೂ….ಇಳಿದೆ!!
ಏನುಮಾಡುವುದು?
“ಚಕ್ರ ವಾಲಿ ಹೀಗೆ ಗಾಡಿ ನಡೆದರೆ
ಬಹಳ ಕೆಟ್ಟದು” ಎಂದ ತೇಜಸ್ವಿ.
“ಹೌದು ಅಣ್ಣ” ಎಂದು ಡ್ರೈವರ್ ಪಲ್ಲವಿ!

ಮತ್ತೆ ಜಾಕು ಕೊಟ್ಟು ಕಾರು ಎದ್ದಿತು.
ಡ್ರೈವರ್ ಕಾರಿನ ಹೊಟ್ಟೆ ಅಡಿ ಅಡಗಿದ.
ದಾರವಿಟ್ಟು ಆಳೆದರು: ಏಕೊ ಏನೊ?
ಅದರ ಬದಲು ಕುಂಕುಮ ಹಚ್ಚಿದರೂ
ಆಗುತಿತ್ತೇನೊ!


ನನಗೆ ರೇಗಿತು:
“ಮೊನ್ನೆ ತಾನೆ ಲ್ಯೂಬ್ರಿಕೇಷನ್ ಮಾಡಿಸಿದೆ.
ಇಂದು ಕಾರು ದಾರಿಯಲ್ಲಿ ತೊಂದರೆ ಕೊಡುತ್ತಿದೆ.
ನಿನಗೆ ತಲೆ ನೆಟ್ಟಗಿದ್ದರೆ ಹೀಗಾಗುತಿತ್ತೆ?
ನೀನೊಬ್ಬ ಡ್ರೈವರ್…. ಕೆಲಸಕ್ಕೆ ಬಾರದವ….
ಬೆಪ್ಪು ಮುಂಡೇದು!….
ಹೀಗೆ ಸಹಸ್ರನಾಮ!…
ಇನ್ನೆಂದಿಗೂ ಈ ಡ್ರೈವರ್ ಈ ಕಾರು ನಂಬಿ
ದೂರ ಪಯಣಕ್ಕೆ ಹೊರಡುವುದಿಲ್ಲ.
ಇದೇ ಕೊಟ್ಟ ಕೊನೆ! ಇದೇ ಕೊಟ್ಟ ಕೊನೆ!”
ಹೀಗೆ ನನ್ನ ಸಿಟ್ಟು ಹರಿಯುತ್ತಿತ್ತು!
ಮತ್ತೆ ಹೇಳಿದೆ:
“ಹೊರಡಿ ಈಗ
ಹೇಗಾದರು ಅರಸಿಕೆರೆಯವರೆಗೆ ಹೋಗಿ
ವರ್ಕ್‌ಷಾಪಿನಲ್ಲಿ ತೋರಿಸಿ ಸರಿಪಡಿಸೋಣ!
ಆಗಲೆ ಎರಡು ಗಂಟೆ ಕಳೆದಿತ್ತು ರಿಪೇರಿಯಲ್ಲಿ!


ಮತ್ತೆ ಕಾರು ಹೊರಟಿತು:
ಕಡಿಮೆ ವೇಗದಲ್ಲೆ ಹೊರಟಿತು!
ಮತ್ತೆ ಅದೇ ಸದ್ದು ! ಅದೇ ವಾಲಿಕೆ….

ಅದೇ ಹೊತ್ತಿನಲ್ಲಿ
ದೂರ ಮೈಸೂರಿನಲಿ, ಮನೆ ‘ಉದಯರವಿ’ ಯಲ್ಲಿ,
ಮಗಳು ತಾರಿಣಿ ಗುಡಿಸಿ, ದೇವರ ಮನೆಯ ತೊಳೆದು,
ಹೂ ಮುಡಿಸಿ, ಸೊಡರ ಹೊತ್ತಿಸಿ, ಊದುಕಡ್ಡಿಯಿಟ್ಟು
ಒಂದು ವಾರದ ವರೆಗೆ ದೂರ ಪಯಣಕೆ ಹೋದ
ತಂದೆಯನು ನೆನೆದು
“ಸುಗಮವಾಗಲಿ ದೇವ, ಅಣ್ಣನಿಗೆ ಪಯಣ!
ಕ್ಷೇಮವಾಗಿಯೆ ಅಣ್ಣ ತಿರುಗಿ ಬರಲಿ!”
ಎಂದು ಪ್ರಾರ್ಥನೆ ಮಾಡುತಿರೆ ಭಕ್ತಿ ತುಂಬಿ:

ಡ್ರೈವರನ ತಲೆಗೇನೊ ತೆಕ್ಕನೆಯೆ ಹೊಳೆದಂತಾಯ್ತು:
“ಟೈರ್ ರಾಡ್ ಎಂಡ್ ಅಲೈನ್ ಮೆಂಟ್ ನೋಡಬೇಕಿತ್ತಣ್ಣಾ….”
“ನಿನ ತಲೆ! ನಿನ್ನ ಬೆಪ್ಪು ತಕ್ಕಡಿತನ ಮುಚ್ಚುಕೊಳ್ಳೋಕೆ
ಬಾಯಿಗೆ ಬಂದದ್ದು ಬೊಗಳ್ತೀಯಾ!”
ಎಂದು ಸ್ವಲ್ಪ ದೂರ ಹೋಗಿ ಚಕ್ರ ಕೀರುವ ಸದ್ದಿಗೆ ಕಿನಿಸಿ ತೇಜಸ್ವಿ:
“ಇಲ್ಲ, ಅಣ್ಣಾ, ಕಾರು ಹಾಳಾಗುತ್ತದೆ
ಹೀಗೇ ನಾವು ಮುಂದುವರಿದರೆ.
ಟೈರ್ ರಾಡ್ ಎಂಡ್ ಅಲೈನ್ ಮೆಂಟ್ ನೋಡಿದರೆ
ಸರಿಹೋಗಬಹುದೇನೋ!”
ರಸ್ತೆ ಎಡಕೆ ಕಾರು ನಿಂತಿತು. ಕೆಳಗೆ ಇಳಿದೆವು ಮತ್ತೆ:


ಗಡ್ಡ ಬಿಳಲಿದ ಹಸುರಿನ ದಟ್ಟ ಹೇರಾಲಗಳ ಹಂತಿ
ಸಾಲು ಸಾಲಾಗಿ ನಿಂತು ರಸ್ತೆಯಿಕ್ಕೆಲದಲ್ಲಿ
ನಮಗೆ ಗೌರವ ರಕ್ಷೆ ನೀಡಿದುವು.
ಕಾರ್ತಿಕದ ಹಿತ ಬಿಸಿಲು ಹಸುರು ಹೊಲಗಳ ಮೇಲೆ
ಹುಲುಸಾಗಿ ಹಸರಿಸಿತ್ತು.

ಹಣ್ಣು ತುಂಬಿದ ಆಲ ಹಕ್ಕಿಗಳನೌತಣಕೆ ಕರೆದಿತ್ತು:
ಲಕ್ಷ ಪಕ್ಷಿಯ ಕೊರಲು ಕಿವಿಗಿಂಪ ಸುರಿದಿತ್ತು.
ದಾರಿ ಬದಿ ಕಲ್ಲಬೋರ್ಡಿನೊಳಿತ್ತು ಬರೆಹ:
“ಸಿಡ್ಲಿಹಳ್ಳಿ!”
ಅಲ್ಲೆಲ್ಲಿಯೂ ಹಳ್ಳಿ ಕಣ್ಗೆ ಕಾಣಿಸಲಿಲ್ಲ.
ಹೆದ್ದಾರಿಯಿಂದ ಮೊದಲಾಗಿ ಹೊಲಗಳ ನಡುವೆ ಹಾದಿ
ಬೋರೆಯನಿಳಿದು ಕಣ್ಗೆ ಮರೆಯಾಗಿತ್ತು.
ಏಳೆಂಟು ವರುಷಗಳ ಹೈದನೊಬ್ಬನು ಕಾರು ನೋಡಲು ಬಂದು
ಹಳ್ಳಿಯ ಕುತೂಹಲವ ಪ್ರತಿನಿಧಿಸಿ ನಿಂತಿದ್ದನಲ್ಲಿ.
ಜಾಕ್-ಟೈರ್ ಲಿವರ್-ಸ್ಪಾನರ್ -ಚಕ್ರಕ್ಕೆ ಕಲ್ಲಾಪು.
ಟೈರ್ ರಾಡ್ ಎಂಡ್ ಅಲೈನ್ ಮೆಂಟ್ ನೋಡಲಿಕ್ಕೆ
ಕಾರಿನಡಿ ಹೊಟ್ಟೆ ಮೇಲಾಗಿ ಮಲಗಿದನು ಡ್ರೈವರ್.
“ಓ ಹೋ ಹೋ ಹೋ — ಅಣ್ಣಾ!”
“ಏನೋ?” ಕೇಳಿದನು ತೇಜಸ್ವಿ.
“ಟೈರ್ ರಾಡ್ ಎಂಡ್ ಅಲೈನ್ ಮೆಂಟ್ ಅಲ್ಲ…..”
“ಮತ್ತೇನೋ?”
“ಫ್ರಂಟ್ ವೀಲ್ ಮೆಯ್ನ್ ಸ್ಪ್ರಿಂಗ್ ಸ್ಕ್ರೂ ಬಿದ್ದುಹೋಗಿದೆ!”
“ಛೆ ಛೆ ಛೆ! ಏನಪಾಯವಾಗುತ್ತಿತ್ತು!!….”

‘ಉದಯರವಿ’ದೇವರ ಮನೆಯಲ್ಲಿ
ಪ್ರಾರ್ಥಿಸುತ್ತಿದ್ದ ತಾರಿಣಿಯ ಕೈ ಮುಗಿಯುತಿತ್ತು.
ಆಗಳಾಗಳೆ ಮುಗಿಯುತಿತ್ತು
ಪ್ರಾರ್ಥನೆಯೂ:
“ಸುಗಮವಾಗಲಿ, ದೇವ, ಅಣ್ಣನಿಗೆ ಪಯಣ!
ಕ್ಷೇಮವಾಗಿಯೆ ಅಣ್ಣ ಹೋಗಿಬರಲಿ!”

ನವೆಂಬರ್ ೨೬, ೧೯೫೬

(೧೮-೧೧-೧೯೫೬ ರಂದು ಶಿಮೊಗ್ಗೆಗೆ ಬೆಳಗ್ಗೆ ಕಾರಿನಲ್ಲಿ ಹೊರಟಿದ್ದೇವು. ಮಧ್ಯೆ ದಾರಿಯಲ್ಲಿ ನಡೆದ ಘಟನೆಯಿಂದ ಪ್ರೇರಿತವಾದದ್ದು.)