ಮಳೆಗಾಲ ಜರ್… ಎಂದು ಮಳೆ ಬೀಳುತಿತ್ತು
ಸುತ್ತಲೂ ಕತ್ತಲು ಕವಿದಿದ್ದಿತು;
ಗುಡುಗುಡುಗುಡುಗುಡು ಗುಡುಗಾಡುತಿತ್ತು
ಥಳಥಳ ಮಿಂಚು ಥಳಿಸಿದ್ದಿತು!
ಭೋರೆಂದು ಬಿರುಗಾಳಿ ಬೀಸುತಲಿತ್ತು
ಒಲೆಯೊಳು ತನಿಗೆಂಡ ಕಳಕಳಿಸಿತ್ತು.


ಕೆಲಸವ ಪೂರೈಸಿ ಹೊಲದಿಂದ ಬಂದು
ಚಳಿ ಕಾಯಿಸುತ್ತ ಮಂಜಣ್ಣನು,
ಬೆಂಕಿಯ ಬಳಿಯಲ್ಲಿ ಕೂತಿದ್ದನಾಗ
ನಾವೆಲ್ಲರವನ ಮುತ್ತಿದ್ದೆವು;
ಕತೆಗಾರ ಮಂಜಣ್ಣ ಬಲುಮುದಿಯಾಳು,
ಆದರವನಾ ಬಾಳು ಕಗ್ಗಲ್ಲ ಬಾಳು!


ಅಲ್ಲಿಯೆ ಹತ್ತಿರ ಕುಳಿತಿದ್ದ ಕಿಟ್ಟು
“ಮಂಜಣ್ಣ ಒಂದು ಕತೆ ಹೇಳೆಂ”ದನು:
ಕೇಳಿದನು ಬಹುದೂರ ಕುಳಿತಿದ್ದ ಪುಟ್ಟು
ಹತ್ತಿರ ಹತ್ತಿರಕೈತಂದನು.
“ಕಟ್ಟಿದ ಕತೆ ಬೇಕೊ? ನಡೆದಿದ್ದೆ ಸಾಕೊ?
ಯಾವುದು ಎಲೆ ಕಟ್ಟು?” ಮಂಜಣ್ಣನೆಂದ.


“ಕಟ್ಟಿದ ಕತೆಯೇಕೆ ನಡೆದಿದ್ದೆ ಹೇಳು”
ಎಂದೆವು ಒಟ್ಟಿಗೆ ನಾವೆಲ್ಲರೂ.
ಮಂಜಣ್ಣ ಕತೆ ಹೇಳಲಾರಂಭಮಾಡೆ
ಎಲ್ಲರು ಹತ್ತಿರಕೈತಂದರು;
ಮಂಜಣ್ಣನೆಂದರೆ ನಮಗೆಲ್ಲ ಪ್ರಾಣ!
ಕತೆ ಹೇಳುವುದರಲ್ಲಿ ಅವನತಿಜಾಣ.


“ಆಗಿನ್ನೂ ನಾ ಹುಡುಗ, ಕಿಟ್ಟುವಷ್ಟಿದ್ದೆ
ಎಪ್ಪತ್ತು ವರ್ಷದಾಚೆಯಲಿ;”
“ಆಮೇಲೆ? ಆಮೇಲೆ? ಆಮೇಲೆ? ಹೇಳು?”
ಎಂದೆವು ಒಟ್ಟಿಗೆ ನಾವೆಲ್ಲರೂ.
“ದೇವರು ಕಳುಹಿದನೆಂದೆಂಬರಣ್ಣ
ಪಾಪಕ್ಕೆ ಶಿಕ್ಷೆಯದೆಂದೆಂಬರಣ್ಣ!”


“ದೇವರೊ ದೆವ್ವವೂ ಯಾರಾದರೇನಂತೆ?
ಬಲುಘೋರವಾಗಿದ್ದೀತಾ ತಾ ಮಳೆಯು!
ಹೊಳೆಬಂದು, ನೆರೆಯೇರಿ, ಊರೂರೆ ತೇಲಿ
ಮಕ್ಕಳ ಮರಿಗಳ ಬಲುನುಂಗಿತು”
“ಆಮೇಲೆ? ಆಮೇಲೆ? ಆಮೇಲೆ? ಮೇಲೆ?”
ಎಂದೆವು ಮತ್ತೆ ನಾವೆಲ್ಲರೂ ಕೇಳೆ.


“ನಡುರಾತ್ರಿಯಾಗಿತ್ತು ಮಲಗಿದ್ದವೆಲ್ಲ
ಗುಡಿಸಲು ಸುತ್ತ ನೀರೇರಿತು!
ಪಡ್ಚಾಗುತಿದ್ದೆವು ಕಿಟ್ಟು ನಾವೆಲ್ಲ
ಹಂಡ್ನಾಯಿ ನಮ್ಮ ಕಾಪಾಡಿತು.
ಬಗುಳಿತು, ಬಗುಳಿತು, ಕರೆಯಿತು ನಮ್ಮ
ಏಳಲೆ ಇಲ್ಲವು ನಮ್ಮಪ್ಪ ಅಮ್ಮ.”


“ಏಳ್ಬಾರದಾಗಿತ್ತೆ ಮಂಜಣ್ಣ ನೀನು,
ಹೋಗಲಿ ಆಮೇಲೆ ಹೇಳೆಂ”ದೆವು
“ಆಗಿನ್ನು ಸಣ್ಣವನಾಗಿದ್ದೆ ನಾನು
ನಿನ್ನಷ್ಟು, ಕಿಟ್ಟೂ, ಇರಲಿಲ್ಲವೊ.
ಕೇಳಿರಿ ಹೇಳುವೆ ಮುಂದಾದ ಕತೆಯ
ಆಮೇಲೆ ನಮಗಾದ ಬಲುದೊಡ್ಡ ವೆಥೆಯ.


“ಹಂಡ್ನಾಯಿ ಬಗುಳಿತು ಬಲುಗಟ್ಟಿಯಾಗಿ
ಮಲಗಿದ್ದರೆಲ್ಲರು ಮೈಮರೆತು;
ಕಡೆಗದು ಬಾಗಿಲಹಗ್ಗವ ಹರಿದು
ಒಳನುಗ್ಗಿ ತೆಮ್ಮ ಕರೆಕರೆದು.
ನೆರೆಯೇರಿ ನೀರುಕ್ಕಿ ಮೊರೆಮೊರೆದು ಬಂತು
ನೊರೆಯಾಗಿ ಸುಳಿಸುಳಿದು ಭೋರ್ಗರೆದು ಬಂತು!

೧೦
“ಎಬ್ಬಿಸಿತಪ್ಪನ ಕೂಗಿಕೊಂಡೆದ್ದ
ಅಮ್ಮನ ನನ್ನ ಎಬ್ಬಿಸಿದ;
ಹಂಡ್ನಾಯಿ ಬಾಲವನಾಡಿಸುತಿತ್ತು
ನೆರೆಬಂದು ಹೊಸಲಿಗೇರಿದ್ದಿತು!
“ಮಾಡುವುದೀಗೇನು? ಎಂದು ನಮ್ಮಪ್ಪ!”
“ಅಯ್ಯೊಯ್ಯೊ ಮಂಜೂ!” ಎಂದಳೆನ್ನಮ್ಮ!

೧೧
“ಹಣತೆಯ ದೀಪವ ಹೊತ್ತಿಸಿ ನೋಡೆ
ಹೊಳೆನೀರು ಭೋರೆಂದೇರುತಿತ್ತು;
ಅಪ್ಪ ನೋಡಿದ ಮೇಲೆ ಸುತ್ತಲು ತಿರುಗಿ
ಮುಖವರಳಿತವನಿಗೆ ಸಂತೋಷದಿ;
ಬಿದಿರಟ್ಟವ ಹಿರಿದು ಜೋಡಿಸಿ ಒಟ್ಟಿ
ತೆಪ್ಪವ ಮಾಡಿದನತಿ ಬೇಗ ಕಟ್ಟಿ!

೧೨
“ಏರಿತು! ಏರಿತು! ಭೋರ್ಗರೆವ ನೀರು!
ಮುಂಭಾಗದಾ ಗೋಡೆ ದೊಪ್ಪೆಂದಿತು!
ಮಳೆಯೊಳಗೆ ನೀರ್ನುಗ್ಗಿ ಮೊಳಕಾಲಿಗೇರಿ
ಹಂಡ್ನಾಯಿ ತಲೆಮಾತ್ರ ಮೇಲಿದ್ದಿತು!
ದೇವರೆ ಗತಿಯೆಂದು ತೆಪ್ಪವನೇರಿ
ಹೊರಟೆವು ಭೋರೆಂಬ ನೆರೆಯೊಳು ಹೋರಿ!

೧೩
“ಬಿರುಗಾಳಿ ಬೀಸಿತು; ಥಳಿಸಿತು ಮಿಂಚು,
ಸಿಡಿಲೆರಗಿ ಭೂಮಿ ನಡುಗಿದ್ದಿತು;
ಹಾರುತ್ತ ಬೀಳುತ್ತ ತೇಲಿತು ತೆಪ್ಪ,
ಜೀವಕೈಯಲಿ ಹಿಡಿದು ಕುಳಿತಿದ್ದೆವು;
ತೆಪ್ಪ ಸೇರಿತು ದಡವ ಪುಣ್ಯವಶದಿಂದ
ನಮ್ಮಪ್ಪ “ಅಯ್ಯೆಯ್ಯೊ ಹಂಡೆಲ್ಲಿ?” ಎಂದ!

೧೪
“ತೆಪ್ಪವ ಏರುವ ಗಲಿಬಿಲಿಯಲ್ಲಿ
ಹಂಡನ ಮರೆತು ಬಂದಿದ್ದೆವು!
ಅಪ್ಪನ ಕಣ್ಣಲ್ಲಿ ಸುರಿಯಿತು ನೀರು
ತುಸು ಯೋಚಿಸುತ್ತ ನಿಂತುಕೊಂಡ!
ಅಪ್ಪನ ಮನದಲ್ಲಿ ಏನೇನು ಬಂತೊ?
ತೆಪ್ಪ ಹತ್ತುತ ಗುಡಿಗೆ ಹೊರಟನು ಮತ್ತೆ!

೧೫
“ಅಯ್ಯಯ್ಯೊ ಬೇಡ” ಎಂದಳೆಮ್ಮಮ್ಮ;
ಅಪ್ಪನು ಹೊರಟನು ಇಂತೆನ್ನುತ:
“ನಮ್ಮನು ಕಾಪಾಡಿತಾ ಹಂಡನಾಯಿ
ಬಾಯಿಲ್ಲದದನು ಕೈಬಿಡುವುದೆ?”
ಅಪ್ಪ ಹೋದನು ಬೇಗ; ತೆಪ್ಪ ಮರೆಯಾಯ್ತು
ಅಪ್ಪನಿಗು ನಮಗದೆ ಕಡೆನುಡಿಯಾಯ್ತು!

೧೬
“ಅಪ್ಪ ಹೋದವ ಮತ್ತೆ ಹಿಂತಿರುಗಲಿಲ್ಲ
ಹಂಡ್ನಾಯಿ ಕೂಡ ಬರಲಿಲ್ಲವು!
ಮೂರುದಿನದ ಮೇಲೆ ಹೊಳೆಯಾಚೆಯಲ್ಲಿ
ನಾಯಿಯಪ್ಪಿದ ಹೆಣ ಸಿಕ್ಕಿತಂತೆ!
ನಾಯಿಗಾಗಪ್ಪನು ಜೀವವ ಕೊಟ್ಟ
ಉಪಕಾರಕಾಗಿಯೆ ನಮ್ಮನು ಬಿಟ್ಟ!”

೧೭
ಮುದುಕನ ಮೋರೆಯ ನೋಡುತ್ತ ನಾವು
ಬೆರಗಾಗಿ ಕುಳಿತೆವು ಮಾತಾಡದೆ;
ಎಂದೆಂದಿಗೂ ಅಳದ ಮಂಜಣ್ಣನಂದು
ಕಣ್ಣೀರ ಕರೆದನು ಕತೆ ಹೇಳುತ:
ಅವನಪ್ಪ ಸತ್ತುದಕಾಗತ್ತುದಲ್ಲ!
ಅವನಪ್ಪನಾ ನೀತಿಗಾಗತ್ತನಲ್ಲಿ!


* ಸನ್ ೧೯೨೭ನೆಯ ಇಸವಿ ಅಕ್ಟೋಬರ‍್ ೩೧ರಂದು “ಅರ್ಥಸಾಧಕ” ಪತ್ರಿಕೆಯಲ್ಲಿ ಪ್ರಕಟವಾದ ಕವನ.