(ವಾಲ್ಟ್‌ ವಿಟ್‌ಮನ್‌ ಕವಿಯ ವಚನ ಕವನದ ಅನುವಾದ)

ಪಶುಗಳೊಡನೆ ಪಶುವಾಗಿಯಾದರೂ ಬದುಕಲೇ? ಅವಕ್ಕೆನಿತು ಶಾಂತಿ, ಎನಿತು ತೃಪ್ತಿ!

ನೋಡುತ್ತಾ ನಿಂತೆನೆಂದರೆ ಘಂಟೆಘಂಟೆ ಹರಿದರೂ ಹೊತ್ತು ಗೊತ್ತಾಗುವುದಿಲ್ಲ.

ತಮ್ಮ ಇರವಿಗೆ ಮರುಗಿ ಅವು ಕದಿಯುವುದಿಲ್ಲ, ಬಾಯಿ ಬಡಿದುಕೊಳ್ಳುವುದಿಲ್ಲ,
ಪರದಾಡುವುದಿಲ್ಲ.

ಇರುಳೆಲ್ಲಾ ನಿದ್ದೆಗೆಟ್ಟು ಪಾಪಗಳಿಗಾಗಿ ಪಶ್ಚಾತ್ತಾಪಪಡುವುದಿಲ್ಲ.

ದೇವರು ಧರ್ಮಗಳನ್ನು ಕುರಿತು ಜಿಜ್ಞಾಸೆ ಮಾಡುತ್ತಾ ನನಗೆ ರೇಜಿಗೆ ಹಿಡಿಸುವುದಿಲ್ಲ.

ಅವುಗಳಲ್ಲಿ ಯಾವೊಂದಕ್ಕೂ ಅತ್ಯಾಸೆಯಿಲ್ಲ, ಯಾವೊಂದೂ ವಸ್ತುಗಳಿಗೆ
ಒಡೆಯನಾಗಬೇಕೆಂದು ತಲೆಕೆಡಿಸಿಕೊಂಡಿಲ್ಲ.

ಒಂದಾದರೂ ಮತ್ತೊಂದಕ್ಕೆ ಮೊಣಕಾಲು ಮಣಿಯುವುದಿಲ್ಲ, ಕಾಲಿಗೆ ಬೀಳುವುದಿಲ್ಲ,
ಜೊತೆ ಇರುವವಕ್ಕಾಗಲಿ, ಶತಮಾನಗಳಿಗೆ ಹಿಂದೆ ಬದುಕಿದ್ದವುಗಳಿಗಾಗಲಿ.

ಯಾವೊಂದೂ ಶ್ರೀ ಶ್ರೀ ಶ್ರೀಯಾಗಿಲ್ಲ; ಹುಡುಕಿದರೂ ಮತ್ಸರದ ಅಸುಖ
ದೊರೆಯುವುದಿಲ್ಲ.

ಯಾವೊಂದೂ ಬಿರುದುವೊತ್ತು ಗೌರವಪದವಿಗೇರಿಲ್ಲ.