ಕಾರ್ತಿಕದ ಕತ್ತಲಲಿ ಆಕಾಶದೀಪವಾಗಿ

ನೀ ಬಂದೆ,
ಬಟ್ಟೆಗೆಟ್ಟವರಿಗೊಂದು ದೊಂದಿ ದಿಕ್ಕಾಗಿ
ಎಂಟು ಶತಮಾನಗಳ ಹಿಂದೆ,
ಅಗ್ನಿ ಖಡ್ಗವನಾಂತ ಓ ಅಧ್ಯಾತ್ಮ ಕ್ರಾಂತಿವೀರ,
ದೇವದಯೆಯೊಂದು ಹೇ ಧೀರಾವತಾರ,
ಶ್ರೀ ಬಸವೇಶ್ವರಾ!

ಜಾತಿಪದ್ಧತಿಯ ಹೋಮಕೂಪಕ್ಕೆ
ಬಿದ್ದು, ವೈದಿಕರ ಯಜ್ಞತಾಪಕ್ಕೆ
ಬಲಿವೋದ ದಲಿತ ಜೀವರನೆತ್ತಿ ಮತಿವಿಚಾರಕ್ಕೆ
ಕಾಯಕದ ದಿವ್ಯ ತತ್ತ್ವದಾ ಸುಕ್ಷೇಮ ಧರ್ಮನಾಕಕ್ಕೆ
ನಡೆಸಿದ ಮಹಾತ್ಮನೆ ನಿನಗೆ ನಮೋನಮಃ!

ಇಂದಿಗೂ ನಾವು ನಿನ್ನೆತ್ತರಕೆ ಏಳಲಾರದೆ ಅಯ್ಯೊ
ಮತದ ಉಸುಬಿಗೆ ಸಿಲುಕಿ ತತ್ತರಿಸುತಿಹೆವಯ್ಯ!
ಬಾರಯ್ಯ ಕೈಹಿಡಿದಡತ್ತಿ ಬದುಕಿಸು ನಮ್ಮನೆಳೆದು
ವರ್ಣಾಶ್ರಮದ ಹೆಸರ ಹೊಲೆಗೆಸರ ವಂಚನೆಯ
ಹೊಂಡದಿಂದೆ!

ಭಕ್ತಿಗಂಗೆಯನೆರೆದು
ಭಾಗವತ ಶಕ್ತಿಯಂ ಕರೆದು
ಮತ ಮೌಢ್ಯದಜ್ಞಾನ ಪಂಕವನು ತೊಳೆದು
ಶುಚಿಗೊಳಿಸು ವಿಜ್ಞಾನ ವೇದಾಂತ ತೀರ್ಥದಿಂದೆ!

ಜನವರಿ, ೨೭ ೧೯೬೮