ಕಂಡೆ ನಾನೊಂದು ನವ ಹಿಮಾಲಯದುದಯಮಂ:

ಈಂಟಿತಾಟ್ಲಾಂಟಿಕಾಂಭೋಢಿಯಂ; ಪೀರ್ದುದಾ
ಪೆಸಿಫಿಕ್ ಮಹಾಸಾಗರದ ದೈತ್ಯಜೀವಮಂ;
ಮೂಡಿ ಮೂಡಿಯೆತ್ತಿತಾ ಬಂಗಾಳ ಕೊಲ್ಲಿಯಿಂ:
ಏರಿದುದು ಭಾರತಾಂಬೆಯ ದಕ್ಷಿಣಾಂಕಮಂ,
ಮಸ್ತಕದ ರಜತಶೀಲ ಮಹದ್ ಗೋಪುರಾಗ್ರದ
ಉಗ್ರ ಬಿಜಯಕೆ ದ್ಯುಮಂಡಳಂ ಬಿರಿಯೆ, ಸ್ವರ್ಗಾಗ್ನಿ
ಮತ್ಯು ಹೃದಯಕೆ ಸುರಿಯೆ ಚಿತ್ತಪೋಜ್ವಾಲೆಯಂ!

ನಭಶ್ಚುಂಬಿಯಾ ಗಿರಿಶಿವ ಜಟಾಜೂಟದಿಂ, ಕಾಣ್,
ಅಗ್ನಿ ಗಂಗಾ ಪ್ರವಾಹಂಗಳಿಳಿವಂತೆವೋಲ್
ದೇವರ್ಕಳೀಳಿಯುತಿಹರೀ ಪೃಥ್ವೀ ವಿಕಾಸಮಂ
ಬಯಸಿ, ರೆಪ್ಪೆಯಿಕ್ಕದ ತಮ್ಮ ನಿಶ್ಚಲ ಸುಖಕೆ
ಕಿನಿಸಿ, ಅಸ್ಥಿರ ಸ್ಥಿರೆಯಚಲಸಾಹಸಕ್ಕೆಳಸಿ!

ಮೇದಿನಿಯಾ ವೇದಿಕೆಯೊಳಮರರೊಡಗೂಡು ಬಾ
ಅಂದಾ ಸುರಾಸುರರ್ ಕಡೆದವೋಲ್ ಕೀರಾಬ್ಧಿಯಂ
ಇಂದು ನಾವೆಮ್ಮಿಳಾ ಮೃಣ್ಮಯದ ಸಂಸಾರದಿಂ
ಮಥಿಸುವಂ ಚಿಜ್ಯೋತಿಯಮೃತದಾಸಾರಮಂ,
ದಿವ್ಯ ಸಾಕ್ಷಾತ್ಕರಣ ವಿಜ್ಞಾನದವತಾರಮಂ!

ನವೆಂಬರ್ ೧೨, ೧೯೪೫
ಪಾರ್ಥಿವ ಸಂವತ್ಸರ ಕಾರ್ತಿಕ ಶುದ್ಧ ಸಪ್ತಮಿ.