ನೀ ಬರಿಯ ಹೆಸರಿಂದೆ ರತ್ನಾಕರನೆ? ಅಲ್ತು:

ತಾಯಿ ಭಾರತಿಗುದರ ನೈವೇದ್ಯಮಂ ನೀಡಿ ಹೊರೆಯುತಿಹ ಅನ್ನರತ್ನಾಕರನೆ ದಲ್! ದರ್ಶಿಸುತೆ
ನಿನ್ನ ಈ ಶಾಲಿ ಸಂಪನ್ ಮಹೀಲಕ್ಷ್ಮಿಯಂ
ಕೈಮುಗಿದೆ, ಮಣಿದೆ, ಬೆರಗಾದೆ! ನಿನ್ನಂತೆವೋಲ್
ಬೆಳೆವರಿದ್ದರೆ ಅಮ್ಮ ಭಾರತಿಗೆ ಇಂದಿರುತಿತ್ತೆ
ಅನ್ನ ಭಿಕ್ಷಾಟನೆಯ ಗೋಳ್? —

ಓಡುವನ್ನೆಗ ಚಕ್ಷು
ದಟ್ಟಯ್ಸಿ ಹಚ್ಚನೆಯ ಕಂಗೊಳಿಸುವೀ ಇಕ್ಷು
ನಾಡೆದೆಗೆ ಕೆಚ್ಚೀವ ಸಕ್ಕರೆಯ ಸಾಕ್ಷಿ! —
ಸಮರ ಸನ್ನದ್ಧ ಸೈನಿಕ ವೀರ ಭಂಗಿಯಿಂ
ಗೊನೆ ಹೊತ್ತು ನಿಂತಿರುವ ಈ ಕೌಂಗು ತರುಪಂಕ್ತಿಗಳ್
ಅರ್ಥ ರಕ್ಷೆಗೆ ದೀಕ್ಷೆವೆತ್ತಿವೆ, ಕವಾತಿನೊಲ್,
ಕೋವಿಹೆಗಲಾದಂತೆ ವಾಣಿಜ್ಯ ಸಾಮ್ರಾಜ್ಯದೊಂದು ದಂಡು:
ಒಂದೊಂದು ಅಡಕೆಯೂ ದಾರಿದ್ರ್ಯದೆದೆಗೆ ಗುರಿಯಿಟ್ಟ ಗುಂಡು!
ಚೀಣ ಪಾಕಿಸ್ತಾನಗಳಿಗೆ ಮಾರಾಂತ ಕಲಿ ಕೃಷಿಕ ಗಂಡು!

ಪತ್ರಿಕೆಗೆ ಹೆಸರೀಯೆ, ಹೆರರ ದುಡಿಮೆಯನುಂಡು,
ಬರಿದೆ ಭಾಷಣ ಬಿಗಿವ ರಾಜಕಾರಣಿ ಹಿಂಡು
ಯಾತ್ರೆ ಬಂದೀ ಕ್ಷೇತ್ರದರ್ಶನಕೆ ಕಲಿಯಲಿ ನಿನ್ನ ಕಂಡು!


* ೧೯೬೭ನೆಯ ಅಕ್ಬೋಬರ್ ೨೩ರಂದು ಸೋಮವಾರ ಶಿವಮೊಗ್ಗದಲ್ಲಿ ಶ್ರೀ ದೇ. ರಾ. ರತ್ನಾಕರ ಅವರ ಕೃಷಿಕ್ಷೇತ್ರಕ್ಕೆ ಸಂದರ್ಶನವಿತ್ತ ಸಂದರ್ಭದಲ್ಲಿ.