[1]
“….ಕನ್ನಡಕ್ಕಾಗಿ ಕವಿಭೂಷಣ ಬೆಟಗೇರಿಯವರು ಇಷ್ಟೆಲ್ಲ ಕೆಲಸ ಮಾಡಿದ್ದರೂ, ಇನ್ನೂ ಮಾಡಬೇಕಾಗಿದ್ದ ಕೆಲಸ ಬಹಳ ಉಳಿಯಿತೆಂದು ಕೊರಗುತ್ತಿದ್ದಾರಲ್ಲದೆ, ಕಳೆದ ಐದು ವರ್ಷಕಾಲ ಪಾರ್ಶ್ವವಾಯುವಿನಿಂದ ಬಳುತ್ತಿದ್ದರೂ, ಅನಾರೋಗ್ಯದ ಬಗ್ಗೆಯಾಗಲೀ, ಅಥವಾ ಸಂಸಾರದ ತಾಪತ್ರಯದ ಬಗ್ಗೆಯಾಗಲೀ ಎಂದೂ ಚಕಾರ ಮಾತನಾಡಿದವರಲ್ಲ. ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದರೂ, ಯಾರು ಹೋದವರ ಕೂಡ ಅವರ ಕನ್ನಡ ಸಾಹಿತ್ಯ-ಸಂಸ್ಕೃತಿಗಳ ಬಗ್ಗೆ ತಮ್ಮಲ್ಲಿದ್ದ ವಿಪುಲವಾದ ಭಂಡಾರವನ್ನು ಸೂರೆಸೂರೆಯಾಗಿ ಹಂಚಿಕೊಡುತ್ತಿದ್ದಾರೆ. ಧಾರವಾಡದಲ್ಲಿ ಅವರ ೮೨ ನೆಯ ವರ್ಷದ ವರ್ಧಂತಿ ಸಮಾರಂಭವನ್ನು ಆಚರಿಸಿದಾಗ, ಅವರು ತೆಗೆದ ಉದ್ಗಾರಗಳು ಉನ್ನತವಾಗಿದ್ದಷ್ಟೇ, ಮನಸ್ಸನ್ನು ಕರಗಿಸುವಂತೆ ಇವೆ. ಆಗ ಅವರು ಹೇಳಿದರು:
“..ನನಗೆ ೮೧ ವರ್ಷಗಳು ತುಂಬಿದ ಈ ಜನ್ಮ ದಿನೋತ್ಸವದ ಸಮಾರಂಭದಲ್ಲಿ ತಾವೆಲ್ಲರೂ ಭಾಗಗೊಂಡು, ನನ್ನನ್ನು ಸಮಾಧಾನಗೊಳಿಸಿದ್ದೀರಿ. ಅದಕ್ಕಾಗಿ ತಮ್ಮೆಲ್ಲರಿಗೂ ನನ್ನ ಹಾರ್ದಿಕ ನಮಸ್ಕಾರಗಳು. ನನ್ನ ಇದುವರೆಗಿನ ಜೀವನದಲ್ಲಿ ನಾಲ್ಕು ಸಲ ಮೃತ್ಯುದೇವತೆಯೊಂದಿಗೆ ಹೋರಾಟದಲ್ಲಿ ಸಲ ಸಲಕ್ಕೂ ತ್ರಾಣಗುಂದಿ, ಈ ನಾಲ್ಕನೆಯ ಸಲವಂತೂ ನಾನು ಉಳಿದಿದ್ದೇನೆ. ನನ್ನದೆನ್ನುವುದು ಏನೂ ಉಳಿದಿಲ್ಲ. ನನ್ನ ಕಣ್ಣಿಂದ ನಾನು ನೋಡಲಾರೆ. ನನ್ನ ಕೈಯಿಂದ ಬರೆಯಲಾರೆ. ನನ್ನ ಬಾಯಿಂದ ಮಾತನಾಡಲಾರೆ. ನನ್ನ ಕಾಲಿನಿಂದ ಮುಂದುವರಿಯಲಾರೆ. ಆದರೆ, ಭದ್ರವಾದ ತಲೆಕಟ್ಟಿನ ನಡುವೆ ಹುದಗಿಕೊಂಡ ನನ್ನ ಮೆದುಳು ಮೊದಲಿನಂತೆಯೇ ಇದೆ..“ಹೀಗೆ ಹಾಸಿಗೆ ಹಿಡಿದಿದ್ದಾಗಲೂ ಸಹ ಬೆಟಗೇರಿಯವರು ಸುಮಾರು ೩೦೦೦ ಪುಟಗಳಷ್ಟು ವಿಷಯಗಳನ್ನು ಕೇಳಿ, ತಿದ್ದಿ ಜನಕ್ಕೆ ಸಹಾಯ ಮಾಡಿದ್ದಾರೆ. ಕಡೆಗೆ ದಿನಾಂಕ ೯-೧೦-೧೯೮೧ ರಿಂದಲಂತೂ ಅವರ ಮಾತನಾಡುವ ಶಕ್ತಿ ಸಹ ಪಾರ್ಶ್ವವಾಯುವಿನ ಮೂಲಕ ಹೋಗಿ ಬಿಟ್ಟಿತು. ಆದರೂ ಈ ಧೀಮಂತ ವ್ಯಕ್ತಿ ಅದಮ್ಯ ಆಶಾವಾದವನ್ನು, ಕನ್ನಡದ ಬಗೆಗಿರುವ ಅಭಿಮಾನವನ್ನು ತಿಲಮಾತ್ರವೂ ಬಿಟ್ಟು ಕೊಟ್ಟಿರಲಿಲ್ಲ. ಅವರ ಈ ಪರಾವಲಂಬಿ ಸ್ಥಿತಿಯಲ್ಲಿ ಅವರ ಪುತ್ರ ಸುರೇಶ ಹಾಗೂ ಸುರೇಶರ ಧರ್ಮಪತ್ನಿ ಶ್ರೀಮತಿ ಶಾರದಾ ಅಸದೃಶವಾಗಿ, ನಿರಸವಾಗಿ ಅವರ ಸೇವೆ ಶುಶ್ರೂಷೆಗಳನ್ನು ಮಾಡಿಕೊಂಡು ಬರುತ್ತಿದ್ದರು. ಅದು ಕನ್ನಡದ ಪುಣ್ಯ”.
ಕನ್ನಡ ನವೋದಯ ಕಾಲದ ಸಾಹಿತ್ಯದ ಒಂದು ಸಶಕ್ತ, ಅಪ್ರತಿಮಕೊಂಡಿ ಕಳಚಿದಂತೆ ಆನಂದಕಂದರು,ದಿ.೩೦-೧೦-೧೯೮೨ ರಂದು ನಮ್ಮೆಲ್ಲರನ್ನಗಲಿ ಹೋದರು.
[1] ‘ಜಯಂತಿ ಲೇಖಕರ ಸೂಚಿ’ (ಮೊದಲ ಮಾತು) ಅನಿಲ ಧಾರವಾಡಕರ, ಪುಟ iii-iv (೨೪-೨-೧೯೮೨)
Leave A Comment