ನಿರ್ಜನವಾದ ಬೀದಿಯಲ್ಲಿ ಈ ನಡುರಾತ್ರಿ
ಲಾಳ ಸವೆಸುವೆ ಯಾಕೊ, ಸಾಕು ಹೊಡೆಯೋ
ಮನೆಗೆ ನಿನ್ನ ಗಾಡಿ. ಬೀದಿಗೆ ನಿದ್ದೆ, ದೀಪಗಳಿಗೂ
ಕೂಡ ತೂಕಡಿಕೆ, ಕೆಡಿಸಬೇಡಯ್ಯ.
ಹಗಲೆಲ್ಲಾ ಗಾಡಿ ಹೊಡೆದಾಯ್ತು ; ನಿನಗಿರು-
ವಂಥ ರುಸ್ತುಂ ಕುದುರೆ ಇನ್ಯಾರಿಗುಂಟಯ್ಯ ?
ಬಾಡಿಗೆ ಕೂಡ ಚೆನ್ನಾಗಿಯೇ ಗಿಟ್ಟಿಸಿಬಿಟ್ಟೆ.
ಇನ್ನು ಸಾಕು, ಸೋತು ಹಿಗ್ಗಾಮುಗ್ಗ ಎಳೆವ
ಕುದುರೆಯ ಹೀಗೆ ಹೊಡೆದು ಸಾಯಿಸಬೇಡ.
ಈಗ ನೀ ಬಯಸಿದರೆ ಸಿಗುವಂಥ ಗಿರಾಕಿ-
ಗಳಿಗೋ ತಲೆ ನೆಟ್ಟಗಿರುವುದೂ ಸಂಶಯವೆ.
ನಿನಗು ಎಚ್ಚರ ತಪ್ಪಿ, ಕುದುರೆಯೂ ಮುಗ್ಗರಿಸಿ
ಯಾವ ಚರಂಡಿಯಲ್ಲೋ ಬೆಳಿಗ್ಗೆ ಏಳುವ ಬದಲು
ಈಗಲೇ ಗಾಡಿಬಿಡು ಮನೆಯಕಡೆ ಮೊದಲು.