ಅಡಿಕೆಯಲ್ಲಿ ಗೊನೆಕೊಯ್ಲು ಎನ್ನುವುದೇ ಒಂದು ಸಂಭ್ರಮದ ಕೆಲಸ.  ಇಡೀ ವರ್ಷದ ಶ್ರಮ ಮನೆಯೊಳಗೆ ಬರುವ ಸಮಯ, ಅದಕ್ಕಾಗಿ ಗಡಿಬಿಡಿ, ಪರದಾಟ, ಪೇಚಾಟ, ಗಲಾಟೆ, ಲೆಕ್ಕಾಚಾರ, ಓಡಾಟ, ಸುದ್ದಿಸಂಗ್ರಹ, ಆತಂಕ ಏನೆಲ್ಲಾ.

ಗೊನೆಕೊಯ್ಲು ಎನ್ನುವುದು ಕೇವಲ ಯಜಮಾನನಿಂದ ಆಗುವ ಕೆಲಸ ಏನಲ್ಲ.  ಸಿಪ್ಪೆ ಸುಲಿಯಲು ಜನ ಬೇಕು.  ಸಂಸ್ಕರಿಸಿ ಸೇರಿಸಲು ಎಲ್ಲರ ಸಹಕಾರ ಅಗತ್ಯ.  ಬೆಲೆ ಏರುಪೇರು, ಸಾಗಾಣಿಕೆ, ಫಸಲಿನ ಗುಣಮಟ್ಟ ಹೀಗೆ ಎಲ್ಲಾ ಸೇರಿ ಯಜಮಾನ ಹೈರಾಣ.

ದೀಪಾವಳಿಯಿಂದಲೇ ಗೊನೆ ಕೊಯ್ಯುವ ಕೊನೆಗೌಡನ ಹುಡುಕಾಟ (ಗೊನೆ=ಅಡಿಕೆ ಗೊನೆ).  ಆತನಿಗೆ ಮುಂಗಡ ಹಣ ನೀಡಿ ಬುಕ್ಕಿಂಗ್‌ ಮಾಡಬೇಕು. ಆತನೂ ಊರಿನ, ಪರವೂರಿನವರೆಲ್ಲರ ಹಣ ಪಡೆದು, ಬರುತ್ತೇನೆನ್ನುವ ದಿನ ಕೈಕೊಡುವುದು, ಸಮಾರಂಭಗಳಿಗೆ ಹೊರಟ ದಿನ ಬಂದು ನಿಲ್ಲುವುದು ಪ್ರತಿಯೊಬ್ಬರ ಅನುಭವ.  ಇದು ಊರಗೊನೆಗೌಡನ ಕತೆ.

ಕುಮಟಾ, ಹೊನ್ನಾವರದವರು ಇದರಲ್ಲಿ ತಜ್ಞರು. ಅವರು ಬೆಳಗಿನ ಝಾವವೇ ಗಂಜಿ ಕುಡಿದು ಕೆಲಸಕ್ಕೆ ಹೊರಡುತ್ತಿದ್ದರಂತೆ. ಅದಕ್ಕಾಗಿ  ಅವರನ್ನು ಗಂಜಿಗೌಡರು ಎಂದೂ ಕರೆಯುವುದಿದೆ.  ಅಲ್ಲಿ ಗೊನೆಕೊಯ್ಲನ್ನು ಬೇಗ ಪೂರೈಸಿ ಘಟ್ಟ ಏರಿ ಬರುತ್ತಾರೆ.  ಆಗ ಸಾಗರ, ಶಿವಮೊಗ್ಗ, ಹೊಸನಗರ, ಸೊರಬ, ಸಿದ್ದಾಪುರ, ತೀರ್ಥಹಳ್ಳಿ ಮುಂತಾದ ಕಡೆ ಹಸುರು ಗೊನೆಗಳು ಹದವಾಗಿ ನಿಂತಿರುತ್ತವೆ.

ಹೆಚ್ಚಾಗಿ ಮೂರು-ನಾಲ್ಕು ಜನರ ತಂಡಗಳಲ್ಲಿ ಇವರು ಬರುತ್ತಾರೆ.  ದೊಡ್ಡ ಹೂಡು ಇರುವವರ ಮನೆಯಲ್ಲಿ ವಾಸ.  ಅಡುಗೆ, ಊಟ ಏನೆಲ್ಲಾ ಅವರದೇ ಕೈ, ಬಾಯಿ.

ಬೆಳಗ್ಗೆ ಎಂಟಕ್ಕೆ ಗೊನೆ ಕೊಯ್ಯಲು ಸಿದ್ಧರಾಗುತ್ತಾರೆ. ಇಬ್ಬನಿ ಹೆಚ್ಚಿದ್ದರೆ, ಸ್ವಲ್ಪ ತಡ.  ಮರ ನೆನೆದು ಜಾರೀತು ಎನ್ನುವ ಎಚ್ಚರಿಕೆ.  ಎಡಭುಜದ ಮೇಲೆ ಹಗ್ಗ, ಬಲಭುಜದ ಮೇಲೆ ಉದ್ದನೆಯ ಬಿದಿರಿನ ದೋಟಿ.  ಸೊಂಟಕ್ಕೆ ಕೊಕ್ಕೆ.  ಅದರಲ್ಲೊಂದು ಹರಿತವಾದ, ಮುಟ್ಟಿದರೆ ಸಾಕು ಕೊಯ್ದು ರಕ್ತ ಸುರಿಯುವಷ್ಟು ಹರಿತವಾದ ಕತ್ತಿ.  ತಲೆಗೆ ಹಾಳೆ ಟೊಪ್ಪಿ, ಚೀಲದಲ್ಲೊಂದಿಷ್ಟು ಸಲಕರಣೆ ಇದು ಟಿಪಿಕಲ್‌ ಕೊನೆಗೌಡಾಸ್‌ ಸ್ಟೈಲು.

ನೆಲದ ಮಣ್ಣನ್ನು ಕಣ್ಣಿಗೊತ್ತಿಗೊಂಡು ಮರಗಳನ್ನು ನಮಸ್ಕರಿಸಿ ತೋಟಕ್ಕೆ ಪಾದಾರ್ಪಣೆ.  ಕಣ್ಣಲ್ಲೇ ಗಟ್ಟಿಯಾದ ತೂಗುಮರದ ಆಯ್ಕೆ.  ಕೆಲವು ಮರಗಳು ಟೊಳ್ಳು, ರೋಗಪೀಡಿತ, ಬೆಳವಣಿಗೆ ರಹಿತ ಹೀಗೆ ಏನೆಲ್ಲಾ ಕಾರಣಕ್ಕೆ ಏರಲು ಅಯೋಗ್ಯ.

ಆಯ್ದ ಮರ ಏರಿದರೆ ಅದರ ಮೇಲೇ ಕುಳಿತು ಸುತ್ತಲಿನ ಹತ್ತಾರು ಮರ ಎಳೆದು ಕೊಯ್ಯಲು ಬರುವಂತಿರಬೇಕು.  ಇದನ್ನು ಒಂದು ಹೂಡು ಎನ್ನುತ್ತಾರೆ.  ಕೊನೆಗೌಡರು ಪದೇ ಪದೇ ಮರ ಹತ್ತಿ ಇಳಿಯಲಿಕ್ಕಾಗದು.  ಅಲ್ಲಿಂದಲೇ ಮತ್ತೊಂದು ಹೂಡಿಗೆ ನೆಗೆತ.

ಮರ ಹತ್ತುವ ದಿರುಸೇ ಬೇರೆ.  ಸೊಂಟಕ್ಕೊಂದು ಕಚ್ಚೆಪಂಚೆ, ಅದರ ಮೇಲಿಂದ ಅಡಿಕೆ ಹಾಳೆಯ ಅಬ್ಡಮನ್‌ ಗಾರ್ಡ್‌ (ಕನ್ನಡದಲ್ಲಿ ತರಡುಕವಚ), ಎದೆ ತರಚದಿರಲು ಅಡಿಕೆ ಹಾಳೆಯ ಎದೆಪಟ್ಟಿ, ಸೊಂಟದಲ್ಲಿ ಕೊಕ್ಕೆ, ಕೊಕ್ಕೆಯಲ್ಲಿ ಕತ್ತಿ.  ಕೊಕ್ಕೆ ಪಟ್ಟಿಗೆ ಸಿಕ್ಕಿಸಿದ ಉದ್ದನೆಯ ನೇಣುಹಗ್ಗ (ಬಾಮಿಮಿಣಿ), ತಲೆಗೆ ಹಾಳೆ ಟೊಪ್ಪಿ, ಕಾಲಿಗೆ ಮರವೇರಲು ಕಾಲ್ದೆಳೆ, ಮರವೇರಿ ಕೂರಲು ಕಡಿಕೆ ಮಣೆ.  ಬಾಯಲ್ಲೊಂದು ಭರ್ಜರಿ ತಾಂಬೂಲ.  ಇದು ಕೊನೆಗೌಡರೆಲ್ಲರ ಖಾಯಂ ಡ್ರೆಸ್ಸು.

ಪುಟು ಪುಟುನೆ ಮರವೇರಿ, ಗೊನೆಗಳ ಬುಡಕ್ಕೆ ಹೋಗಿ, ಹಲ್ಲಲ್ಲಿ ಅಡಿಕೆ ಕಚ್ಚಿ, ಸಿಪ್ಪೆ ಬಿಡಿಸಿ, ಹದ ನೋಡಿ, ಯಜಮಾನರಿಗೆ ತೋರಿಸಿ, ಒಪ್ಪಿಗೆ ಪಡೆದು, ಕತ್ತಿಯಿಂದ ಗೊನೆಯ ಬುಡಕ್ಕೆ ಕಚ್‌, ಕಚ್‌ ಎಂದು ಆಚೆ ಈಚೆ ಗೀರಿ, ಕತ್ತಿಕೊಕ್ಕೆಗೆ ಹಾಕಿ, ಕೈಯಲ್ಲಿ ಗೊನೆ ಮುರಿದು, ಕೈಯಲ್ಲೇ ಮಗುಚಿ, ಹುಸಿ (ಚಿಪ್ಪು) ಅಗಲಿಸಿ, ಸೊಂಟಕ್ಕೆ ಕಟ್ಟಿಕೊಂಡ ನೇಣುಹಗ್ಗಕ್ಕೆ ಸಿಕ್ಕಿಸಿಬಿಟ್ಟರೆ. . .  ಗೊನೆಯು ಜರ್‌ ಎಂದು ಜಾರಿ ನೇಣಿನ ಇನ್ನೊಂದು ತುದಿ ಹಿಡಿದ ಯಜಮಾನನ ಕೈಗೆ ಕ್ಯಾಚ್‌.

ನೇಣಿನ ತುದಿ ಹಿಡಿದು ಗೊನೆ ಹಿಡಿಯಲು ನ್ಯಾಕ್‌ ಬೇಕು ಎನ್ನುತ್ತಾರೆ ಹಡಿನಬಾಳದ ಕೊನೆ ಕೊಯ್ಲಿನ ಗುತ್ತಿಗೆದಾರ ಎನ್.ಟಿ. ನಾಯ್ಕ.  “ಇಲ್ಲಾಂದ್ರೆ ಗೊನೆ ಬರೋ ರಭಸಕ್ಕೆ ನೇಣು ಹಿಡಿದವ ವ್ಯತ್ಯಾಸ ಮಾಡಿದ್ರೆ ದೊಪ್ಪನೆ ಮೊಗಚಿ ಕಾದಿಗೆಗೆ ಬೀಳ್ತ್ರು.  ಕೊನೆಗೌಡನ ಸೊಂಟ ಹೋತ್ತು” ಎನ್ನುತ್ತಾರೆ.

ಇದೆಲ್ಲಾ ಎರಡು ನಿಮಿಷಗಳಲ್ಲಿ ಆಗುವ ಕೆಲಸ.  ಇದನ್ನು ಸುಲಭಗೊಳಿಸಲು ಗೊನೆಯ ಬುಡದಲ್ಲಿ ಮರಕ್ಕೆ ಕಡಿಕೆಮಣೆ ಕಟ್ಟಿಕೊಂಡು ಕೂರುತ್ತಾರೆ.

ಸುತ್ತಲಿನ ಮರಗಳನ್ನೆಲ್ಲಾ ದೋಟಿಯಿಂದ ಎಳೆದುಕೊಳ್ಳುತ್ತಾರೆ.  ಗೊನೆ ಸಿಗುವಂತೆ ಕೈಯಳತೆಯ ಅಂತರಕ್ಕೆ ಕುಳಿತು ಮರಕ್ಕೆ ದೋಟಿಯನ್ನು ಬಿಗಿದು ಕಟ್ಟುತ್ತಾರೆ.  ಬುಡಕ್ಕೆ ಕಚ್ಚು ಹಾಕಿ ಗೊನೆಯನ್ನು ಹಿಸಿಯುತ್ತಾರೆ.  ನೇಣಿನ ಮೂಲಕ ಕೆಳಕ್ಕೆ ಕಳಿಸುತ್ತಾರೆ.

ಮರಕ್ಕೆ ಪೆಟ್ಟಾಗುವಂತಿಲ್ಲ.  ಮುಂದಿನ ಫಸಲಿಗೆ, ಸಿಂಗಾರಕ್ಕೆ ಪೆಟ್ಟಾಗುವಂತಿಲ್ಲ.  ಮರ ಎಳೆಯುವಾಗ ಮುರಿಯುವಂತಿಲ್ಲ.  ಹೀಗೆ ಎಷ್ಟೆಲ್ಲಾ ಎಚ್ಚರಿಕೆಗಳೂ ಬೇಕು.  ತೀರ್ಥಹಳ್ಳಿ ಕಮ್ಮರಡಿ ಸೀಮೆಯ ಕೊನೆಗೌಡರು ಗೊನೆಯ ಬುಡದವರೆಗೂ ಹೋಗುವುದಿಲ್ಲ.  ಮರದ ಅರ್ಧದಲ್ಲಿ ಕುಳಿತು ದೋಟಿಯಿಂದ ಗೊನೆಯನ್ನು ಉಗಿದೆಳೆದು ಕೆಡವುತ್ತಾರೆ.  ಇದನ್ನು ನೆಲಕ್ಕೆ ಬೀಳುವ ಮೊದಲೇ ಗೋಣಿ ಹಾರಿಸಿ ಹಿಡಿಯುತ್ತಾರೆ.  ಗೋಣಿ ಹಾರಿಸುವುದೇ ಒಂದು ನ್ಯಾಕ್‌.  ಎರಡು ಗೋಣಿಚೀಲ ಸೇರಿಸಿ ಹೊಲಿಯುತ್ತಾರೆ.  ಹೊಸದಾದ ಗಟ್ಟಿ ಗೋಣಿಚೀಲಳಾಗಬೇಕು.  ಬುಡದ ಎರಡೂ ತುದಿಗಳಲ್ಲಿ ಅಡಿಕೆ ಕಟ್ಟಿ ಹಿಡಿದುಕೊಳ್ಳಲು ಗ್ರಿಪ್‌ ಮಾಡಿಕೊಳ್ಳುತ್ತಾರೆ.  ಕೊನೆಗೌಡ ಉಗಿದೆಳೆದ ಗೊನೆಯು ಕೆಳಗೆ ಬರುತ್ತಿದ್ದಂತೆ ಒಂದು ನಿರ್ದಿಷ್ಟ ಅಂತರಕ್ಕೆ ಬಂದಾಗ ಗೋಣಿಯನ್ನು ಚಕ್ಕನೆ ಬೀಸಿ ಹಾರಿಸುತ್ತಾರೆ. ಗೋಣಿಯ ಮಧ್ಯೆ ಉದುರಿದ ಅಡಿಕೆಸಹಿತ ಗೊನೆಯ ಸಿಕ್ಕಿಹಾಕಿಕೊಳ್ಳುತ್ತದೆ.  ಗೊನೆ ಮೇಲೆ ಹಾರದಂತೆ ಗೋಣಿಯ ತುದಿ ಮೇಲಿನಿಂದ ಮಡಿಸಿಕೊಳ್ಳುತ್ತದೆ.  ಎಲ್ಲವೂ ಸೇರಿ ಕೈಗೆ ಬರುತ್ತದೆ.  ಇದೆಲ್ಲಾ ಕ್ಷಣಮಾತ್ರದಲ್ಲಿ ನಡೆದುಹೋಗುತ್ತದೆ.  ಗೊನೆ ಅಡಿಕೆಗೆ ಸ್ವಲ್ಪವೂ ಪೆಟ್ಟಾಗುವುದಿಲ್ಲ.

ಕೊನೆಗೌಡನ ಒಂದು ದಿನದ ಕೊಯ್ಯುವ ಸಾಮರ್ಥ್ಯ ೧೫೦ ಗೊನೆಗಳಿಂದ ೧೦೦೦ ಗೊನೆಗಳವರೆಗೆ.  ಅಳು ಲೆಕ್ಕವಾದರೆ ಕಡಿಮೆ.  ಗೊನೆ ಲೆಕ್ಕವಾದರೆ ಹೆಚ್ಚು ಕೊಯ್ಲು.  ದುಡ್ಡಿನೊಂದಿಗೆ ಅಕ್ಕಿ, ಅಡಿಕೆ ನೀಡುವುದು ಸಂಪ್ರದಾಯ.   ಕೊನೆಯ ದಿನದ ಕೊಯ್ಲನ್ನು ಹುಲಿಕೆ ಹಬ್ಬವೆಂದು ಆಚರಣೆ ಮಾಡುತ್ತಾರೆ.  ಎಲ್ಲರಿಗೂ ಸಿಹಿ, ಖಾರ.  ಕೊನೆಗೌಡನಿಗೊಂಡು ಹಣ್ಣಡಿಕೆ ಗೊನೆ.  ಬೇಯಿಸಿದ ಒಲೆಗೆ, ತೋಟಕ್ಕೆ, ಅಡಿಕೆಗೆ ಪೂಜೆ.  ಸುಲಿದವರಿಗೂ, ಪಡಿಚಾಕರಿ ಮಾಡಿದವರಿಗೂ, ಎಲ್ಲರಿಗೂ ಸಿಹಿ, ಖಾರ ಹಂಚಿಕೆ.

ಕೊನೆಗೌಡರು ಗಿಡ್ಡಕ್ಕೆ, ಸದೃಢವಾಗಿ ಕಡಿಮೆ ತೂಕದವರಾಗಿ ಇರಬೇಕು.  ಆಗ ಎಂತಹ ಮರಗಳನ್ನಾದರೂ, ಎಂತಹ ಸಮಯದಲ್ಲೂ ಲೀಲಾಜಾಲವಾಗಿ ಹತ್ತಬಲ್ಲರು.

ಆರೋಗ್ಯದಲ್ಲಿ ಏರುಪೇರಾದರೆ, ಕಣ್ಣು ಕಾಣಿಸದಿದ್ದರೆ ಮರವೇರುವುದಿಲ್ಲ.  ಹುಣ್ಣಿಮೆ, ಅಮಾವಾಸ್ಯೆ, ಸಂಕ್ರಾಂತಿಗಳಂದು ಮರವೇರುವುದಿಲ್ಲ.

ಕೊನೆಗೌಡರಿಗೆ ಮರವೇರಿ ಗೊನೆ ಕೊಯ್ಯುವಾಗ ಬಿದ್ದು ಪೆಟ್ಟಾದರೆ, ಮರಣ ಹೊಂದಿದರೆ ಇತ್ತೀಚೆಗೆ ವಿಮಾ ಸೌಲಭ್ಯ ಕೂಡ ನೀಡಲಾಗುತ್ತಿದೆ.  ಇದು ಸಹಕಾರ ಸಂಘಗಳ ಪ್ರಯತ್ನ.