ಕೊಪ್ಪಳ ಕೋಟೆ:

ದೂರ 
ತಾಲೂಕಿನಿಂದ : ೫ ಕಿ.ಮೀ.
ಜಿಲ್ಲೆಯಿಂದ : ೫ ಕಿ.ಮೀ.

ಕೊಪ್ಪಳ ಕೋಟೆಯು ಅತ್ಯಂತ ಸುಭದ್ರವಾದ ಕೋಟೆಯಾಗಿದೆ. ೧೮೫೭ರ ಸ್ವಾತಂತ್ಯ ಸಂಗ್ರಾಮದ ಸಮಯದಲ್ಲಿ ದಕ್ಷಿಣ ಭಾರತ ಸ್ತಬ್ದವಿದ್ದರೆ ಕೊಪ್ಪಳದ ಈ ಕೋಟೆಯಲ್ಲಿ ಸಂಗ್ರಾಮದ ಕಿಡಿಯನ್ನು ಜಮೀನ್ದಾರ ವೀರಪ್ಪನು ಹತ್ತಿಸಿ ದಂಗೆಯನ್ನು ಪ್ರಾರಂಭಿಸಿದನು. ಕೊಪ್ಪಳವನ್ನು ವಶಪಡಿಸಿಕೊಳ್ಳಲು ಬ್ರಿಟೀಷರು ಹೈದ್ರಾಬಾದ್ ಮತ್ತು ಸಿಕಂದ್ರಾಬಾದ್ ನಿಂದ ದೊಡ್ಡದಾದ ಸೈನ್ಯವನ್ನು ತಂದು ವೀರಪ್ಪನನ್ನು ಸೋಲಿಸಬೇಕಾಯಿತು.

ಈ ದಂಗೆ ಪ್ರಾರಂಭದಿಂದ ೧೮೫೦ರ ಮೇ ತಿಂಗಳು ಮುಂಡರಗಿ ಭೀಮರಾಯ ಹಮ್ಮಗಿಯ ಕೆಂಚನಗೌಡದೇಸಾಯಿ ಬ್ರಿಟೀಷರಿಂದ ಕೊಪ್ಪಳ ಕೋಟೆಯನ್ನು ವಶಪಡಿಸಿಕೊಂಡಿದ್ದರು.

ಸ್ವತಂತ್ರವೀರರಾದ ಕೊಪ್ಪಳದ ಜನರು ಭೀಮರಾಯನ ಸೈನ್ಯವನ್ನು ಸ್ವಾಗತಿಸಿ ಅವರ ಸೈನ್ಯವನ್ನು ಸೇರಿದರು. ಕೊಪ್ಪಳ ವಶಪಡಿಸಿಕೊಳ್ಳುವದಕ್ಕೆ  ಧಾರವಾಡ ಬಳ್ಳಾರಿ ರಾಯಚೂರಿನಿಂದ ಸೈನ್ಯಗಳನ್ನು ತರಿಸಿದರೂ ಕೋಟೆಯನ್ನು ಒಡೆದು ಒಳಗೆ ಹೋಗುವದು ಅಸಾದ್ಯವಾಗಿತ್ತು. ಭೀಮರಾಯನನ್ನು ಹಿಡಿದು ಆತನ ತಲೆ ಕಡಿದು ತಂದವರಿಗೆ ೫೦೦೦ ಸಾವಿರ ರೂ ಕಾಣಿಕೆ ನೀಡುವದಾಗಿ ಘೋಷಿಸಿತ್ತು.  ಕೆಳಕೋಟೆಯ ಕಾವಲುಗಾರನ ಒಳಸಂಚಿಗೆ ಒಳಗಾಗಿ ಬಾಗಿಲು ತೆರೆದಿದ್ದರಿಂದ ಈ ಕೋಟೆ ಬ್ರಿಟೀಷರ ಕೈ ಸೇರಲು ಕಾರಣವಾಯಿತು. ಆದರೆ ಹಮ್ಮಿಗೆ ಕೆಂಚನಗೌಡ ಮತ್ತು ಮುಂಡರಗಿಯ ಭೀಮರಾಯರು ಇವರ ಕೈಗೆ ಸಿಗದೆ ತಮ್ಮಷ್ಟಕ್ಕೆ ತಾವೇ ಗುಂಡು ಹಾರಿಸಿಕೊಂಡು ವೀರಮರಣವನ್ನು ಅಪ್ಪಿದರು.

ಶಿವಾಜಿ, ಹೈದರಲಿ, ಅಂತಹವರ ವಶದಲ್ಲಿದ್ದ ಈ ಕೋಟೆಯನ್ನು ಹೈದರ ಅಲಿ ಕಾಲದ ಮಹ್ಮದುಸ್ಮಾನ ಕೋವಾರ  ಕೋಪ್ಪಳ ಕೋಟೆಯ ಎರಡನೇಯ ಬಾಗಿಲು ಮತ್ತು ಬಹದ್ದೂರಬಂಡಾ ಕೋಟೆಗಳ ಕೆಲವು ಭಾಗಗಳನ್ನು ಕಟ್ಟಿಸಿದ್ದು ಟಿಪ್ಪು ಈಸ್ಥಳವನ್ನು ಸುಲ್ತಾನಗಡ ಎಂದು ಹೆಸರಿಸಿದ್ದನು, ಕಿತ್ತೂರಿನ ಮಲ್ಲ ಸರ್ಜನನ್ನು ಇಲ್ಲಿಯೇ ಬಂಧಿಸಿ ಇಡಲಾಗಿತ್ತು ಎಂದು ನಂಬಲಾಗಿದೆ, ಇದೇ ಕೋಟೆಯ ಪಕ್ಕದಲ್ಲಿ ಹುಲಿಕೆರೆ ಹಾಗು ಮರ್ದಾನ ಅಲಿ ದರ್ಗಗಳು ಕೋಟೆಯ ಅಂದವನ್ನು ಹೆಚ್ಚಿಸಿವೆ.

 

ಶ್ರೀ ಗವಿಸಿದ್ದೇಶ್ವರ ಮಠ

ದೂರ :
ತಾಲೂಕಿನಿಂದ : ೫ ಕಿ.ಮೀ.
ಜಿಲ್ಲೆಯಿಂದ : ೫ ಕಿ.ಮೀ.

ಐತಿಹಾಸಿಕ ಹಿನ್ನಲೆ ಪಡದಿರುವ ಕೊಪ್ಪಳದ ಶ್ರೀ ಗವಿ ಮಠವು  ಈ ಭಾಗದ ಶೈಕ್ಷಣಿಕ ಪ್ರಗತಿಗೆ ಮಹತ್ತರ ಕೂಡುಗೆಯನ್ನು ನೀಡಿದೆ.  ಶ್ರೀ ಮಠವು ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಸೃತ ವೇದ,ಉಪನಿಷತ್ತು, ಅಭ್ಯಾಸ ನಿರತರಿಗೆ ಆಶ್ರಯ ತಾಣವೆನಿಸಿದೆ. ಜಗದ್ಗುರು ಮರಿಶಾಂತವೀರ  ಮಹಾಸ್ವಾಮಿಗಳ ಕಾಲದಲ್ಲಿ ಕೊಪ್ಪಳ ಕುಕನೂರಿನಲ್ಲಿ ಪ್ರಾರಂಭಗೊಂಡ ಸಂಸ್ಥೆಗಳು ಇಂದು ದ್ವಿಗುಣಗೊಂಡಿವೆ, ಪ್ರತಿ ವರ್ಷ ನೆಡೆಯುವ ಜಾತ್ರೆ ನಾಡಿನ ಪ್ರಸಿದ್ದ ಜಾತ್ರೆಗಳಲ್ಲಿ ಒಂದು ಪ್ರಾಚೀನ ಸ್ಥಳವಾದ ಇಲ್ಲಿನ ಬೆಟ್ಟಗಳ ಸಾಲಿನಲ್ಲಿ ಪ್ರಸಿದ್ದ ಚಕ್ರವರ್ತಿ ಅಶೋಕನ ಶಿಲಾ ಶಾಸನ ಇಲ್ಲಿದೆ.

ಗವಿಮಠದ ಅಶೋಕನ ಶಾಸನವನ್ನು ಎತ್ತರದ ಗೋಡೆಯ ಮೇಲೆ ಕೆತ್ತಲಾಗಿದೆ ಮತ್ತು ಇದು ಬ್ರಾಹ್ಮಿ ಲಿಪಿಯಲ್ಲಿದೆ. ಕ್ರಿ.ಪೂ. ೩ನೇ ಶತಮಾನದ್ದಾಗಿದೆ.

ಎರಡು ಗವಿಗಳಲ್ಲಿ ಹಿಂಭಾಗದಲ್ಲಿ ಇತ್ತಿಚಿಗೆ ಹಳದಿ ಮಿಶ್ರಿತ ಬಿಳಿಯ ಬಣ್ಣದ ಪುರಾತನ ಚಿತ್ರಗಳು ಬೆಳಕಿಗೆ ಬಂದಿವೆ. ಮನುಷ್ಯರ ಮತ್ತು ಪ್ರಾಣಿಗಳ ಚಿತ್ರಗಳ ಸಮೂಹವಿದೆ. ಪಶ್ಚಿಮಕ್ಕಿರುವ ಗವಿಗಳಲ್ಲಿ ಜೈನ ಸಮುದಾಯದ ಪ್ರತೀಕಗಳಿದ್ದು ಇದೇ ರೀತಿ ರೇಖಾ ಚಿತ್ರಗಳು, ಬಸದಿಗಳು, ಜೀನರ ವಾಸಸ್ಥಾನದ ಕ್ಷೇತ್ರವಾಗಿದೆ. ಗಂಗಾವತಿಯಲ್ಲಿನ ಹಿರೇಬೆಣಕಲ್ಲಿನಲ್ಲಿ ಮತ್ತು ನಾರಾಯಣ ಪೇಟೆಯಲ್ಲಿ ಇಂದಿಗೂ ಇದೇ ರೀತಿಯಾದ ಗುಹಾ ಚಿತ್ರಗಳನ್ನು ಕಾಣಬಹುದು.

 

ಕೊಪ್ಪಳದ ಇಂದ್ರಕೀಲ ಪರ್ವತ

ದೂರ 
ತಾಲೂಕಿನಿಂದ : ೩ ಕಿ.ಮೀ.
ಜಿಲ್ಲೆಯಿಂದ : ೩ ಕಿ.ಮೀ.

ಮಹಾಭಾರತದಲ್ಲಿ ಅರ್ಜುನ ತಪಸ್ಸು ಮಾಡಿದ ಸ್ಥಳ. ಈ ಪರ್ವತದಲ್ಲಿ ಅರ್ಜುನ ಬೆರಳುಗಳು, ಬಳಸಿದ ಖಡ್ಗ,  ತಪಸ್ಸನ್ನ ವೀಕ್ಷಿಸುತ್ತಿದ್ದ ಹಾವೊಂದು ಕಲ್ಲುಗಳಾಗಿ ನಿಂತಿವೆ ಎಂಬ ಪ್ರತೀತಿ ಇದೆ. ಈ ಪ್ರದೇಶ ಇಂದು ಮಳೆಮಲ್ಲೇಶ್ವರ ಗುಡ್ಡ ಎಂದು ಖ್ಯಾತಿಯಾಗಿದ್ದು, ಪ್ರತಿವರ್ಷ ಶ್ರಾವಣಮಾಸದ ಕೊನೆಯ ಭಾನುವಾರ ಇಲ್ಲಿ ಜಾತ್ರೆ ನಡೆಯುತ್ತದೆ. ಇಲ್ಲಿರುವ ಉದ್ಭವ ಶಿವಲಿಂಗದ ಹಿಂದೆ ಗವಿಯೊಂದಿದ್ದು ಸದಾ ಕಾಲ ನೀರು ಹರಿಯುತ್ತದೆ. ಎಂಥ ಬರಗಾಲವಿದ್ದರೂ ಬತ್ತದ ಗಂಗೆ ಈ ಜೀವಜಲ. ಸುಮಾರು ಕ್ರಿ.ಶ. 1205ರ ಶಿಕಾರಿಪುರ ಶಾಸನದ ಪ್ರಕಾರ ‘‘ಧಾರಣಿಗೆ ನೆಗ್ಣಗಳ ಕೋಪಣ’’ ಜೈನ ಬಸದಿಗಳ ಬೀಡಾಗಿ ಜೈನರ ಧಾರ್ಮಿಕ ಕೇಂದ್ರವಾಗಿತ್ತು. ಅಶೋಕನ ಶಿಲಾಶಾಸನ  ಇರುವ ‘‘ಫಲ್ಕಿಗುಂಡು’’ ಇದೇ ಸ್ಥಳದಲ್ಲಿದ್ದು, ಅಶೋಕನ ಸಾಮ್ರಾಜ್ಯ ವಿಸ್ತಾರವನ್ನು ಇದು ತಿಳಿಸುತ್ತದೆ. ಬೆಟ್ಟಗುಡ್ಡಗಳ ಮಧ್ಯದಲ್ಲಿರುವ ಇದು ಅತ್ಯಂತ ಸುಂದರವಾದ ತಾಣವಾಗಿದೆ.

 

ಕೊಪ್ಪಳದ ಅಶೋಕನ ಶಾಸನಗಳು

ದೂರ :
ತಾಲೂಕಿನಿಂದ : ೧ ಕಿ.ಮೀ.
ಜಿಲ್ಲೆಯಿಂದ : ೧ ಕಿ.ಮೀ.

ಮೌರ್ಯ  ಸಾಮ್ರಾಟ ಅಶೋಕ ಚಕ್ರವರ್ತಿಯ ಎರಡು ಧರ್ಮ ಶಾಸನಗಳು ಕೊಪ್ಪಳದ ಪ್ರಸಿದ್ದ ಶ್ರೀ ಗವಿಸಿದ್ದೇಶ್ವರ ಮಠದ ಹಾಗೂ ಇಂದ್ರಕೀಲ ಪರ್ವತದ ಹಿಂಬಾಗದಲ್ಲಿ ಇದ್ದು, ಅಶೋಕನನ್ನು ದೇವನಾಂಪ್ರಿಯನೆಂದು ವರ್ಣಿಸಿದೆ. ಈ ಶಾಸನ ಕ್ರಿ.ಪೂ. 3 ನೇ ಶತಮಾನದ್ದಾಗಿದ್ದು, ಅಶೋಕನ ಸಾಮ್ರಾಜ್ಯ ವಿಸ್ತಾರವನ್ನು ನಾವು ಇದರಿಂದ ತಿಳಿಯಬಹುದಾಗಿದೆ. ಇದು ಬ್ರಾಹ್ಮಿ ಲಿಪಿಯಲ್ಲಿದೆ.

 

ಭಾಗ್ಯನಗರ ಕೈಮಗ್ಗ

ದೂರ ;
ತಾಲೂಕಿನಿಂದ : ೩ ಕಿ.ಮೀ.
ಜಿಲ್ಲೆಯಿಂದ : ೩ ಕಿ.ಮೀ.

ಜಿಲ್ಲಾ ಕೇಂದ್ರಕ್ಕೆ  ಹೊಂದಿಕೊಂಡಿರುವ ಭಾಗ್ಯನಗರ ಕೂದಲು ಉದ್ಯಮ, ನೇಕಾರಿಕೆ ಹಾಗೂ ಭಾಗ್ಯನಗರದ ದಡಿ ಸೀರೆಗಳಿಗೆ, ಚಾದರಗಳಿಗೆ ಬೇಡಿಕೆ ಇತ್ತು. ಇತ್ತಿಚಿಗೆ ನೇಕಾರಿಕೋದ್ಯಮ ಬಹುತೇಕ ನಿಂತು ಹೋಗಿದೆ. ಈಗ ಭಾಗ್ಯನಗರದ ಕೂದಲೋದ್ಯಮ ರಾಜ್ಯದಲ್ಲಿಯೇ ಲಾಭದಾಯಕ ಉದ್ದಿಮೆಯಾಗಿದ್ದು, ನೇಕಾರೆಲ್ಲ ಇದರಲ್ಲಿ ತೊಡಗಿಕೊಂಡಿದ್ದಾರೆ. ಭಾಗ್ಯನಗರದಲ್ಲಿ ಸಂಸ್ಕರಣಗೊಂಡ ಕೂದಲುಗಳಿಗೆ ಇಂದಿಗೂ ವಿದೇಶದಲ್ಲಿ ಭಾರಿ ಬೇಡಿಕೆ ಇದೆ. ಕೂದಲು ಉದ್ಯಮ ಲಾಭದಾಯಕ ಉದ್ದಿಮೆಯಾದ್ದರಿಂದ ಭಾಗ್ಯನಗರದ ತುಂಬೆಲ್ಲಾ ಅನೇಕ ಕೂದಲು ಸಂಸ್ಕರಣಾ ಘಟಕಗಳಿವೆ.

 

ಹದ್ದೂರಬಂಡಿ ಕೋಟೆ

ದೂರ 
ತಾಲೂಕಿನಿಂದ : ೩ ಕಿ.ಮೀ.
ಜಿಲ್ಲೆಯಿಂದ : ೩ ಕಿ.ಮೀ.

ಬೆಳಗಾವಿಯ  ಸುಬೇದಾರರು ಕೊಪ್ಪಳದ ಹತ್ತಿರವಿರುವ ಗುಂಟಾಪುರಕ್ಕೆ ಬಂದಾಗ, ಇಲ್ಲಿನ ಬೆಟ್ಟವನ್ನು ನೋಡಿ ಕೋಟೆಯನ್ನು ಕಟ್ಟಲು ಹಿಜರಿ ಶಕೆ 1076 ಕ್ರೋಧನಾಮ ಸಂವತ್ಸರ ವೈಶಾಖ ಬಹುಳ ಪಂಚಮಿ ಶನಿವಾರ ದಿವಸ ಕಿಲ್ಲೆಯನ್ನು ಕಟ್ಟಲು ಪ್ರಾರಂಭಿಸಿದರು. ಅದೇ ರೀತಿ ಕೋಟೆಯೊಳಗೆ ಮಹಾದೇವರ ಗುಡಿಯನ್ನು ಗ್ರಾಮ ರಕ್ಷಣೆಗಾಗಿ ಕಟ್ಟಿಸಲಾಗಿದೆ. ಇಲ್ಲಿನ ತಂಡದ ನಾಯಕರಾದ ರಾಜೂಜಿ ನಾಯ್ಕ, ಲಸ್ಕರಿ ನಾಯ್ಕ , ಇವರು ಗೊಸಾಯಿ ಬಾವ ಇವರನ್ನು ಕಿಲ್ಲೆಯ ಕಾವಲಿಗೆ ನೇಮಕ ಮಾಡಿದರು. ಕಿಲ್ಲೆದಾರ ಹಿಜರಿ 1114 ಕ್ಕೆ ಬಂದು ಇಳಿದರು. ಬಾಜಿರಾಯರು ತೀರಿದ ಮೇಲೆ ಸೈನವನ್ನು ಬಿಟ್ಟು ಹೋಗಿದ್ದರು. ಕಿಲ್ಲೆಯಲ್ಲಿ ಆಗ ಟಿಪ್ಪುಸುಲ್ತಾನರು ಬಾಜಿರಾಯರ ಸೈನವನ್ನು ಹೋಡೆದೋಡಿಸಿ ವಶಪಡಿಸಿಕೊಂಡರು. ಆಗ ಈ ಊರಿನ ಗುಂಟಾಪೂರಎಂಬ ಹೆಸರು ತಗೆದು ಬಹಾದ್ದೂರಬಂಡಿ ಎಂದು ತನ್ನ ಸವಿನೆನಪು ಉಳಿಯಲೆಂದು ಸುಲ್ತಾನ ಬೇಸ್‌ನು (ಅಗಸಿ)ನ್ನು ಕಟ್ಟಿಸಿದ. ರಾಣಿ ಮಹಲ್‌ನ್ನು ಕಟ್ಟಿಸಿದ ಆಗ ತಂಡದ ನಾಯಕರಾಗಿದ್ದ ರಾಜೋಜಿನಾಯ್ಕ- ಲಸ್ಕರಿನಾಯ್ಕ ಬೆಳಗಾಂವ ಬಾಜಿರಾಯರು ಇವರಿಗೆ ನಾಲ್ಕುನೂರ ಎಕರೆ ಜಮೀನನ್ನು ಇನಾಮುವಾಗಿ ಹಾಕಿ ಕೊಟ್ಟಿದ್ದ. ಪ್ರತಿ ವರ್ಷ ಈ ಬಾವಾಜಿ ಗುರುವಿನ ಕಟ್ಟೆಯ  ಮುಂದೆ ಎರಡು ಬಣ್ಣದ ಬಾವಿಯನ್ನು ತೊಡಿ ಅದರಲ್ಲಿ ಬಣ್ಣವನ್ನು ಕಲಿಸಿ ಸುತ್ತ ಹಳ್ಳಿಯಿಂದ ತಂಡ ತಂಡವಾಗಿ ಲಂಬಾಣಿ ಜನರು ದವಸಧಾನ್ಯವನ್ನು ತೆಗೆದುಕೊಂಡು ಕುದುರಿಯ ಮೇಲೆ ಎತ್ತಿನ ಮೇಲೆ ಈ ಗುರುವಿನ ಕಟ್ಟಿಗೆ ಧಾನವಾಗಿ ನೀಡುತ್ತಿದ್ದರು ಹಾಗೂ ಲಂಬಾಣಿ ಜನರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾಡಿ ಸಂತೋಷ ಪಟ್ಟು ಹೋಳಿ ಕಾಮದಹನವನ್ನು ಇಲ್ಲಿಯೇ ಬಹಾದ್ದೂರಬಂಡಿ ಸ್ಥಳದಲ್ಲಿಯೇ ಮೂಲೆಮೂಲೆಯಿಂದ ಬಂದಂತಹ ಲಂಬಾಣಿ ಜನರು ಆಚರಣೆ ಮಾಡುತ್ತಿದ್ದರು. ಈ ಬಾವಾಜಿ ಗುರುವಿನ ಕಟ್ಟಿಯಲ್ಲಿ ಹಾತಿರಾಮ ಬಾವಜಿಯವರು 41 ದಿವಸ ಉಪವಾಸ ಸತ್ಯಾಗ್ರಹವನ್ನು ಮಾಡಿ ಕೀರ್ತಿಯನ್ನು ಗಳಿಸಿ ತಿರುಪತಿಯಲ್ಲಿ  ನೆಲಸಿದರು.

 

ಗುಮ್ಮಣ್ಣನ ಗವಿ

ದೂರ ;
ತಾಲೂಕಿನಿಂದ : ೩ ಕಿ.ಮೀ.
ಜಿಲ್ಲೆಯಿಂದ : ೩ ಕಿ.ಮೀ.

ಕೊಪ್ಪಳದ ಮಳೆಮಲ್ಲೇಶ್ವರ ಗುಡ್ಡ ದಾಟಿ 3 ಕಿ. ಮೀ. ಕ್ರಮಿಸಿದರೆ ಸಿಗುವ ಪುಟ್ಟ ಗ್ರಾಮ ಮಂಗಳಾಪುರದ ಗುಮ್ಮಣ್ಣನ ಗವಿ.

ಕೊಪ್ಪಳದ ಮಳೆ ಮಲ್ಲೇಶ್ವರ ಬೆಟ್ಟದ ಪಶ್ಚಿಮಕ್ಕೆ ಈ ಗವಿ ಕಂಡು ಬರುವದು ಇದು ಉತ್ತರಾಭಿಮುಖವಾಗಿ ೬೦ ಅಡಿ ಉದ್ದ ೨೦ ಅಡಿ ಅಗಲ ಹೊಂದಿದೆ. ಇಲ್ಲಿ ಈಶ್ವರ, ನಂದಿ, ವೀರಭದ್ರ ಮೂರ್ತಿಗಳನ್ನು ಕಾಣಬಹುದು. ಹಿಂದೆ ಗವಿಯಲ್ಲಿನ ಶಿವ ಲಿಂಗವು ಮಳೆ ಮಲ್ಲೇಶ್ವರ ಶಿವಲಿಂಗಾಕಾರದಲ್ಲಿದ್ದು ಕಡಿದಾದ ಶಿಲೆಯಲ್ಲಿ ವೀರಭದ್ರ ಮೂರ್ತಿ ಇದೆ. ನಂದಿ ಇದ್ದು ಸ್ಥಾನ ಪಲ್ಲಟಗೊಂಡಿದೆ. ಸನಿಹದಲ್ಲೇ ಸಿಹಿ ನೀರಿನ ಝರಿ ಇದ್ದು ಇದನ್ನು ಶಿವಪರಿವಾರದ ಗವಿಯೆಂದು ಅರ್ಥಮಾಡಿಕೊಳ್ಳಬಹುದಾಗಿದೆ

ಈ ಭಾಗದ ಹಿರಿಯರ  ಅಭಿಪ್ರಾಯದಂತೆ  ಮಳೆಮಲ್ಲೇಶ್ವರ ದೇವಸ್ಥಾನಕ್ಕೆ  ಹೋಗುವ ಭಕ್ತರು ತಮ್ಮ ಎತ್ತು,  ಚಕ್ಕಡಿಗಳನ್ನು  ನಿಲ್ಲಿಸಿ  ಗುಮ್ಮಣ್ಣನಿಗೆ  ಪೂಜೆ  ಸಲ್ಲಿಸಿ ನಂತರ  ಮಳೆಮಲ್ಲೇಶ್ವರಕ್ಕೆ ಹೋಗುವುದು ರೂಢಿಯಲ್ಲಿತ್ತಂತೆ ಟಾರ್ ರಸ್ತೆ ಆದ ಬಳಿಕ ಈ ರೂಢಿ ಕಣ್ಮರೆಯಾಯಿತು. ಅಂತೆಯೇ ಗುಮ್ಮಣ್ಣ ಗವಿಯಿಂದಾಚೆ ಬರಲಿಲ್ಲ. ಗವಿಯ ಮುಂದೆ ಚೌಕಾಕಾರದಲ್ಲಿರುವ ಕಟ್ಟೆ, ದೊರೆಯುವ ಪಣತಿ ಮತ್ತಿತರ ವಸ್ತುಗಳು ಇಲ್ಲಿ ಹಿಂದೆ ಊರ್ಜಿತ ಸ್ಥಿತಿಯಲ್ಲಿ ಒಂದು ಪವಿತ್ರ ಸ್ಥಾನವಿತ್ತೆಂದು ಹೇಳಲಾಗುತ್ತದೆ.

 

ಮರ್ದಾನ ಅಲಿ ದರ್ಗಾ ಕೊಪ್ಪಳ

ದೂರ 
ತಾಲೂಕಿನಿಂದ : ೧ ಕಿ.ಮೀ.
ಜಿಲ್ಲೆಯಿಂದ : ೧ ಕಿ.ಮೀ.

ದರ್ಗಾವು ಬೆಟ್ಟದಲ್ಲಿದೆ. ಇದು ಒಟ್ಟು ೨೦೬ ಮಟ್ಟಿಲುಗಳನ್ನು ಹೊಂದಿದೆ. ಮೊದಲು ಮೆಟ್ಟಿಲುಗಳು ಇರಲಿಲ್ಲ ಈಗ ಭಕ್ತರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ರಚಿಸಿದ್ದಾರೆ.

ಅಲ್ಲಿಯ ವಿಶೇಷತೆ ಮತ ಮಹಿಮೆ ಏನೆಂದರೆ ಅಲ್ಲಿ ಹರಕೆ ಹೊತ್ತರೆ ಅದು ನೆರವೇರುತ್ತದೆ. ಹರಕೆ ನೆರವೇರಿದವರು ದರ್ಗಾದಲ್ಲಿ ಊಟ ಮಾಡಿಸುತ್ತಾರೆ. ಅದು ನಿಯಾಜ್ ರೂಪದಲ್ಲಿ. ಉರಸು ಬಹಳ ಅದ್ದೂರಿಯಾಗಿ ನಡೆಯುತ್ತದೆ. ಬಹಳಷ್ಟು ಭಕ್ತರು ಬರುತ್ತಾರೆ. ವಿಶೇಷವಾಗಿ ಪ್ರತಿ ಶುಕ್ರವಾರ ನಮಾಜ್ ನಡೆಯುತ್ತದೆ. ಅದೇ ದರ್ಗಾದ ಕೆಳಗಡೆ ಬಂದಂತೆ ಒಂದು ಮದುವೆ ಮಂಟಪ ಮತ್ತು ಒಂದು ವಿಶ್ರಾಂತಿ ಧಾಮವಿದೆ. ಅಲ್ಲಿಯ ಇನ್ನೊಂದು ಸಣ್ಣ ದರ್ಗಾವಿದೆ. ಅದರ ಹೆಸರು ಹಬೊರ ಷಾ ಅಲಿ ದರ್ಗಾ ಅಲ್ಲಿ ಬಹಳ ತಂಪಾದ ವಾತಾವರಣವಿದ್ದು ಮನಸ್ಸಿಗೆ ಶಾಂತಿ, ನೆಮ್ಮದಿಯನ್ನುಂಟು ಮಾಡುತ್ತದೆ.

ವಿಶೇಷತೆ : ದರ್ಗಾದ ಪೂರ್ಣ ಹೆಸರು ಸರಕಾರ ಸೈಯದನಾ ಷಾ ಹಜರತ್ ಮರ್ದಾನೆ ಗೈಯಬ್ ದರ್ಗಾ ದರ್ಗಾದ ‘ಉರುಸು’ ಪ್ರತಿ ವರ್ಷ ಫೆಬ್ರುವರಿ ತಿಂಗಳದಲ್ಲಿ ಜರುಗುತ್ತದೆ.

 

ಶ್ರೀ ಕ್ಷೇತ್ರ ಹುಲಗಿ

ದೂರ 
ತಾಲೂಕಿನಿಂದ : ೧೯ ಕಿ.ಮೀ.
ಜಿಲ್ಲೆಯಿಂದ : ೧೯ ಕಿ.ಮೀ.

ತುಂಗಭದ್ರಾ ನದಿಯ ದಡದಲ್ಲಿ ಈ ದೇವಸ್ಥಾನವಿದ್ದು,  ಕೊಪ್ಪಳ ತಾಲೂಕಿನಲ್ಲಿ ಬರುವ ಹುಲಗಿ ಶ್ರೀ ಕ್ಷೇತ್ರದಲ್ಲಿ ಹುಲಿಗೆಮ್ಮದೇವಿಯ ಸ್ಥಾಪನೆ ಸುಮಾರು ೮೦೦ ವರ್ಷಗಳ ಹಿಂದಿನ ಇತಿಹಾಸವಿದೆ.

ಹುಲಿಗಿಯಲ್ಲಿ ಪ್ರತಿ ವರ್ಷವೂ ಆಗಿ ಹುಣ್ಣಿಮೆಯಿಂದ ಕಾರ ಹುಣ್ಣಿಮೆಯವರೆಗೆ ಜಾತ್ರೆ ನಡೆಯುತ್ತದೆ. ಮೂರು ದಿನಗಳು ಪ್ರಮುಖವಾದ ಪೂಜೆಗಳು ನಡೆಯುತ್ತವೆ. ಮೊದಲ ದಿನ ಅಕ್ಕಿಪಡಿ ಎರಡನೆಯ ದಿನ ಬಾಳಿದಂಡಿಗೆ ಮೂರನೇ ದಿನ ಅಗ್ನಕೊಂಡ, ಪಾಯಸ ಈ ರೀತಿಯಾಗಿ ಒಂದು ತಿಂಗಳವರೆಗೆ ಜಾತ್ರೆ ನಡೆಯುತ್ತದೆ.  ಇಲ್ಲಿ ಜೋಗತಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬೇರೆ ಬೇರೆ ರಾಜ್ಯಗಳಿಂದ ಇಲ್ಲಿ ಭಕ್ತಾಧಿಗಳು ಜಾತ್ರೆ ಹೊತ್ತಿಗೆ ಬಂದು ಸೇರುತ್ತಾರೆ.

 

ಕುಮಾರ ರಾಮನ ಕಮ್ಮಟದರ್ಗ

ದೂರ 
ತಾಲೂಕಿನಿಂದ :೧೯ ಕಿ.ಮೀ.
ಜಿಲ್ಲೆಯಿಂದ : ೧೯ ಕಿ.ಮೀ.

ಕೊಪ್ಪಳ ತಾಲೂಕಿನ ಪೂರ್ವಕ್ಕೆ ಜಬ್ಬಲ ಗುಡ್ಡ ಹಳೇಕುಮಟಾ ಗ್ರಾಮಗಳ ಮದ್ಯ ಭಾಗದ ಬೆಟ್ಟಗಳಲ್ಲಿಯೇ ಹಿಂದಿನ ಕಮ್ಮಟದುರ್ಗ ರಾಜ್ಯವಿದ್ದು ಕೋಟೆ ಕೊತ್ತಲಗಳು, ಮುರುಕು ಮಂಟಪಗಳು, ಹಾಳಾದ ದೇವಾಲಯಗಳು, ಅರಮನೆಯ ಗುರುತುಗಳು ವೀರಗಲ್ಲು ಶಿಲಾಶಾಸನಗಳಿವೆ.

ಕ್ರಿ.ಶ. 1280 ರಿಂದ 1330ರ ಕಾಲಾವಧಿಯಲ್ಲಿ ಕಮ್ಮಟ ದುರ್ಗದ  ಇತಿಹಾಸ ಕಂಡು ಬರುತ್ತಿದ್ದು ಕುಮಾರ ರಾಮನ ತಾತ ಸಿಂಗೇಯ ನಾಯಕ. ತಂದೆ ಕಂಪಿಲರಾಯ ತಾಯಿ ಹರಿಹರದೇವಿ. ಮನೆ ದೇವರು ಜಟ್ಟಂಗಿ ರಾಮೇಶ್ವರ ಗಂಡು ಮಗು ಜನಿಸಿದ ನಂತರ ಆತನ ಹೆಸರಿನಿಂದ ರಾಮನಾಥ ಮತ್ತು ಕುಮಾರರಾಮ ಎಂದು ಕರೆದರು. ತುಂಗಭದ್ರ ನದಿ ಕಡಲ ಮೇಲೆ ಹೊಸಮಲೆದುರ್ಗವನ್ನು ಕಟ್ಟಿಸಿ ಅದನ್ನು ರಾಜಧಾನಿಯನ್ನು ಮಾಡಿಕೊಂಡ ಕಂಪಿಲರಾಯ, ಗುತ್ತಿರಾಜ ಜಗಪತಿರಾಯ ಓರಂಗಲ್ಲಿನ ಪ್ರತಾಪರುದ್ರ. ಹೊಯ್ಸಳ ವೀರಬಲ್ಲಾಳ ನೊಂದಿಗೆ ಹೋರಾಡಿದ. ತಂದೆ ಮಕ್ಕಳಿಬ್ಬರೂ ತೊರೆಗಲ್, ಬಾದಾಮಿ ಮುದಕಲ್, ಹಾನಗಲ್, ಕದಂವಳುನಾಡು, ನಿಡುಗಲ್, ಪೆನುಗೊಂಡ ಮೊದಲಾದ ಪ್ರದೇಶಗೆದ್ದನು. ತುಂಗಬದ್ರೆಯ  ಎರಡು ದಂಡೆಯ ಮೇಲೂ ಅಧಿಪತ್ಯ ಸ್ಥಾಪಿಸಿದರು. ಕಪಿಲರಾಯ ಆನೆಗುಂದಿಯ (ಕಮ್ಮಟ ರಾಜ್ಯದ) ಎಲ್ಲ ಆಡಳಿತವನ್ನು ಕುಮಾರ ರಾಮನಿಗೆ ವಹಿಸಿದನು.

ಕುಮಾರ ರಾಮನು ಚಿಕ್ಕಮ್ಮ ರತ್ನಾಜಿ ಇವನ ಮೇಲೆ ಮೋಹ ಗೊಂಡಿದ್ದಳು. ಇವರ ಪ್ರಭಾವಕ್ಕೆ ಒಳಪಡುವ ಘಟನಾವಳಿಯಿಂದ ಬೈಚಪ್ಪನಾಯಕನಿಂದ ರಕ್ಷಣೆಗೆ ಒಳಗಾಗಿ ಬದುಕಿದನು. ಮಹ್ಮದಬೀನ್ ತೊಗಲಕ್ ದೆಹಲಿಸುಲ್ತಾನನ ಆಸ್ಥಾನಲ್ಲಿದ್ದ ಬಹದ್ದೂರ್ ಖಾನನಿಗೆ ರಾಜಕೀಯ ಆಶ್ರಯನೀಡಿ, ಸುಲ್ತಾನನನ್ನು ಎದುರುಹಾಕಿಕೊಂಡು ಸುಲ್ತಾನನೊಂದಿಗೆ ಹೋರಾಡಿದ ಕುಮಾರರಾಮನು ರಣಧೀರ ನಾಗಿ ಯುದ್ಧದಲ್ಲಿ ಸುಲ್ತಾನನ ಸೇನೆ ಹಿಮ್ಮೆಟ್ಟಿಸಿದನು. ಗಂಡರ ಗಂಡ, ಗರ್ವಿತರಾಯ, ಶುಂಭಭೇರುಂಡ, ಛಲದಂಕಮಲ್ಲ, ಚೆಲ್ವರಗಂಡ, ಕಹಿರಿಪುಡು, ಏಲಿಯಾ ಮಾತರಂಡ ಮೊದಲಾದ ಬಿರುದುಗಳನ್ನು ಗಳಿಸಿದನು. ಈ ಬಿರುದುಗಳು ದೆಹಲಿ ಸುಲ್ತಾನನಿಗೆ ತಲುಪಿ ಎರಡನೇ ಸಲ ನೇಮಿಸಿ ಮಲ್ಲುಕನನ್ನು ಕಮ್ಮಟದುರ್ಗ ವಿರುದ್ಧ ಕಳಿಸಿದನು. 2 ನೇ ಸಲವೂ ಸೋಲು ಅನುಭವಿಸಬೇಕಾಯಿತು. ಹಠಬಿಡದ ಸುಲ್ತಾನ ಮಾತಂಗಿಎಂಬ ವೀರ ಸ್ತ್ರೀಯ ಅಧೀನದಲ್ಲಿ ಬಂದ ಸೇನೆಯಲ್ಲಿ ಕಾಟಣ್ಣ, ಸಂಗಮದೇವ, ಬಹದ್ದೂರ ಖಾನ, ಕುಮಾರರ ರಾಮರು ಅಸ್ತಂಗತರಾಗುತ್ತಾರೆ. ನಂಜುಂಡ ಕವಿಯು ಕುಮಾರ ರಾಮ ಸಾಂಗತ್ಯದಲ್ಲಿ ವೀರ ಕಾವ್ಯದಲ್ಲಿ ಮೂಡಿ ಬಂದದ್ದು ಐತಿಹಾಸಿಕ ಕೃತಿಯಾಗಿದೆ.

ವೈಶಾಖ ಬಹುಳ ಅಷ್ಟಮಿಯ ದಿನ ಅ ಜಾತ್ರನೆಡೆಯುತ್ತದೆ. ಇಂದರಗಿಯಲ್ಲಿ ಆರು ಕಟ್ಟಿಗೆಯ ರುಂಡಗಳನ್ನು, ಆನೆಗಳೊಂದಿಗೆ ಮಲ್ಲಾಪುರದಿಂದ ೨ ಹಿತ್ತಾಳೆಯ ರುಂಡಗಳನ್ನು ಜಬ್ಬಲಗುಡ್ಡದಿಂದ ೪ ಕಟ್ಟಿಗೆಯ ರುಂಡಗಳನ್ನು ಜನ ಜಾತ್ರಗಳಿಗೆ ತರುವರು. ಇವುಗಳಿಗೆ ರಾಮಸ್ವಾಮಿ, ಕಂಪಿಲ ರಾಯ ರಾಜಣ್ಣ, ಸಂಗಮದೇವ.ಓಲಿಕೆ ರಾಮಣ್ನ. ಬೈಚಪ್ಪ.ಗಳೆಂದು ಕರೆಯುತ್ತಾರೆ ಕಮ್ಮಟ ದುರ್ಗದಲ್ಲಿನ ಪ್ರಸಿದ್ದ ವ್ಯಕ್ತಿಯಾದ ರಾಮನಾಥನ ಮದುವೆ ಜಾತ್ರಯಲ್ಲಿ ನೆಡೆಯುವದು ಅಲ್ಲಿ ಮದುವೆ ಬಲಿದಾನ ವಿದಿವಿಧಾನ ಮಾಡುವದರ ಜೊತೆಗೆಪ್ರಾಣಿ ಬಲಿಯ ರಕ್ತ ಜೋಳದ ನುಚ್ಚಿನಲ್ಲಿ ಕಲಿಸಿ ವೀರಗೂಳೆಂದು ಹಂಚಲಾಗುವದು ಗ್ರಾಮಸ್ಥರು ಈ ವೀರಗೂಳನ್ನು ತಮ್ಮ ಊರಿಗೆ ಒಯ್ದು ತಮ್ಮ ಹೊಲಗಳಲ್ಲಿ ಭೂಮಿಗೆ ಅರ್ಪಿಸುವರು.

ಜಾತ್ರೆ ಮರುದಿನ ಕಮ್ಮಟದುರ್ಗದಿಂದ ಅಕ್ಕಿಯ ಪಡಿ ಹುಲಿಗಿಗೆ ಕೊಂಡ್ಯೊಯ್ದು ಅರ್ಪಿಸುವರು. ಇಂದಿಗೂ ಹುಲಗಿಯಲ್ಲಿ ನಾಗಜೋಗತಿ, ಬಸವ ಜೋಗಿಯರು ಮಾತಂಗಿ ನಿನ್ನಾಲ್ಕುದೋ ಎಂದು ಹಾಡಿ ಹೊಗಳುತ್ತಿರುವದು ಊಹಿಸಿದರೆ ಕುಮಾರರಾಮನ ಅಂತ್ಯಕ್ಕೆ ಕಾರಣಳಾದ ಮಾತಂಗಿ ಹುಲಿಗಿಯಾಗಿದ್ದಾಳೆಂದು ಊಹಿಸಬಹುದಾಗಿದೆ. ಇದು ಅಧ್ಯಯನಕ್ಕೆ ಒಳಪಡಬೇಕಾದ ವಿಷಯವಾಗಿದೆ.

ಕಮ್ಮಟ ದುರ್ಗವು ಮುಂದೆ ವಿಜಯನಗರ ಸ್ಥಾಪನೆಗೆ ತಳಹದಿ ಯಾಯಿತು. ಹರಿಹರ ಬುಕ್ಕರಾಯರು ಇವರ ಸೇನೆಯಲ್ಲಿ ಕೋಶಾಧಿಕಾರಿ ಗಳಾಗಿದ್ದು  ಮುಂದೆ ಅವರು ಕುಮಾರರಾಮನ ಪತನಾನಂತರ ವಿಜಯ ನಗರ ಸ್ಥಾಪನೆಗೆ ಕಾರಣರಾದರು. ವೀರ ಪರಂಪರೆಯಿಂದು ಪಕ್ಕದಲ್ಲಿಯೇ  ಕುರುಹುಗಳು  ಇದ್ದು ಬಾಳಿ ಹೋದುದರ ಬಗ್ಗೆ ಇಂದಿಗೂ ಅವಶೇಷಗಳಿವೆ. ವೀರಮರಣವನ್ನಪ್ಪಿದ ನಂತರ ದೈವತ್ವಕ್ಕೆ ಏರಿದ ಕುಮಾರರಾಮನ ರುಂಡದ ಪ್ರತಿರೂಪವನ್ನು ಆಶ್ವಾರೂಢ ಭರ್ಚಿ ಹಿಡಿದು ಹೋರಾಡುವ ಪ್ರತಿಮೆಯನ್ನು ಬಳ್ಳಾರಿ ಹತ್ತಿರದ ಬಟ್ಟರ ಹಳ್ಳಿ ಲಕ್ಷ್ಮಿಪುರ, ಸಂಡೂರು, ಕಾಕಬಾಳು, ಕಮ್ಮಟ ದುರ್ಗ, ಮುಕ್ಕುಂಪಿ, ಕುಂದರಗಿ, ಚಿತ್ರದುರ್ಗ, ಮೊಳಕಾಲ್ಮೂರಿನ ರಾಮಪುರ, ಹಾವೇರಿಯ ಕುಳೆನೂರು, ಮಾಟೂರು, ಮಲ್ಲಂದ್ರ, ಸಿರೂಡ, ಶಂಕ್ರೇಕೊಪ್ಪ, ತುಮಕೂರು ಜಿಲ್ಲೆಯ ದೊಡ್ಡ ಪಾಲನ ಹಳ್ಳಿ, ಬೇಡಕರ್ಣಿಗಳಲ್ಲಿ ಇಂದಿಗೂ ಪೂಜಿಸುತ್ತಾರೆ.

ಕುಮಾರರಾಮ ಶೂರನಾಗಿದ್ದು ಇತನ ಕಲಿತನ ಬಲಿದಾನದಿಂದ ಮಹಾನ್ ವಿಜಯನಗರ ಸಾಮ್ರಾಜ್ಯದ ಉದಯಕ್ಕೆ ಕಾರಣವಾಗಿದೆ ನಂಜುಂಡ ಕವಿಯು ರಾಮನಾಥ ಚರಿತದಲ್ಲಿ ಕುಮಾರರಾಮನನ್ನು ಅರ್ಜುನ ಅವತಾರವೆಂದು ವರ್ಣಿಸಲಾಗಿದೆ. ಕಮ್ಮಟ ದುರ್ಗದಲ್ಲಿ ೫ ಶಾಸನಗಳು ಇದ್ದು ಈತನನ್ನು ಪರನಾರಿ ಸಹೋದರನಾಗಿಯೇ ಚಿರಸ್ಥಾಯಿಯಾಗಿ ಉಳಿದ ಕುಮಾರ ರಾಮ ಎಂದು ಇತಿಹಾಸದಲ್ಲಿ ವರ್ಣಿಸಲಾಗಿದೆ. ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಿದ್ದು ಈ ರಾಜ್ಯದ ಹರಿಯಲಾದೇವಿ ಕಂಪಿಲರಾಯ, ಮುಮ್ಮಡಿ ಸಿಂಘನಾಯಕ, ಅಜಿಮಾದ ನಾಯಕಿ, ಮಂತ್ರಿ ಬೈಚಪ್ಪ ನಾಯಕ. ರತ್ನಾಜಿ. ಈ ರಾಜ್ಯ ಪ್ರಮುಖರು.

ಇಲ್ಲಿ ಜಿನಗಾರರ ಗುಡಿಗಳೆಂದು ಕರೆಸಿಕೊಳ್ಳುವ ಜೈನರ ಬಸದಿಗಳಿದ್ದು ಇಂದಿಗೂ ಜಿನಮೂರ್ತಿ ಏಕಾಂಗಿಯಾಗಿ ನಿಂತಿವೆ. ಈ ದೇವಾಲಯ ಅಕ್ಕಪಕ್ಕದಲ್ಲಿ 2 ದೇಗುಲಗಳಿದ್ದು ಮೂರ್ತಿಗಳಿಲ್ಲ. ಹೆಸರಿಗೆ ತಕ್ಕಂತೆ ಅಖಂಡ ಗುಮ್ಮಟದಿಂದ ಬಲಿಷ್ಠ ರಾಜ್ಯವಾದ  ಇದು ಎತ್ತರ ಸ್ಥಾನದಲ್ಲಿದೆ.

 

ಕಿನ್ನಾಳದ ಕರಕುಶಲ ಕಲೆಗಳು

ದೂರ 
ತಾಲೂಕಿನಿಂದ :೧೧ ಕಿ.ಮೀ.
ಜಿಲ್ಲೆಯಿಂದ : ೧೧ ಕಿ.ಮೀ.

ವಿಜಯನಗರ ಹಾಗೂ ಮೈಸೂರು ಅರಸರ ಆಳ್ವಿಕೆಯಲ್ಲಿ ರಾಜಾಶ್ರಯ ಪಡೆದನಂತರ ಈ ಭಾಗದ ಪ್ರದೇಶ ಸಾಲಾರ್ ಜಂಗ್. ನವಾಬನ ಆಡಳಿತಕ್ಕೆ ಒಳಪಟ್ಟ ತರುವಾಯವೂ ಕಲೆಗಳನ್ನು ಪೋಷಿಸುತ್ತಾ ಬರಲಾಗಿದೆ ಸಾಂಪ್ರದಾಯಿಕ ಕರಕುಶಲ ಕಲೆಗಳು ವಿಜಯನಗರ ಅರಸರ ಕಾಲದಲ್ಲಿ ಉಚ್ರಾಯ ಸ್ಥಿತಿಯಲ್ಲಿತ್ತು ವಿಜಯ ನಗರ ಸಾಮ್ರಾಜ್ಯದ ಪತನದ ನಂತರ ಕಲಾಕಾರರು ಹೊಟ್ಟೆ ಪಾಡಿಗಾಗಿ ಕನಕಗಿರಿ ಮತ್ತು ಕಿನ್ನಾಳಗೆ ಬಂದು ನೆಲೆ ನಿಂತು ಕಲೆಯನ್ನು ಮುಂದುವರೆಸಿದರು. ಹಂಪಿಯ ವಿರುಪಾಕ್ಷ ಮಂದಿರದಲ್ಲಿ ಚಿತ್ರಿಸಿರುವ ಚಿತ್ರಕಲೆಯು ಕಿನ್ನಾಳ ಚಿತ್ರಗಾರರ ಚಿತ್ರಕಲೆ ಎಂದು ಸಂಶೋಧನೆಗಾರರ ಅಭಿಪ್ರಾಯವಾಗಿದೆ. ೮೫ ಸಾವಿರ ಜನ ಸಂಖ್ಯೆ ಇರುವ ಈ ಗ್ರಾಮ ಕೊಪ್ಪಳದಿಂದ ಸು,೧೧ ಕಿ. ಮೀ ದೂರದಲ್ಲಿದೆ ಈ ಗ್ರಾಮ ರಾಜ್ಯ ರಾಷ್ಟದಲ್ಲಿ ಮತ್ತು ವಿದೇಶಗಳಲ್ಲಿ ಕೂಡಾ ಮನ್ನಣೆಯನ್ನು ಗಳಿಸಿದೆ. ಕಟ್ಟಿಗೆಗಳಿಂದ ಗೊಂಬೆ ಚೌಕಿಗಳನ್ನು ತಯಾರಿಸಿ ಚಿತ್ರಗಳನ್ನು ಬರೆದು ತಾವೆ ತಯಾರಿಸಿದ ಬಣ್ಣ ಹಚ್ಚುವದರಲ್ಲಿ ಇವರು ನಿಪುಣರು. ಹತ್ತು ಇಪ್ಪತ್ತೈದು ಮನೆಗಳ ಚಿತ್ರಗಾರರ ವಂಶಗಳು ಇರುವ  ಕುಟುಂಬಗಳಿದ್ದು ಕಿತ್ತು ತಿನ್ನುವ ಬಡತನ ಬಂದರೂ ಕಲೆಯನ್ನು ಮುಂದುವರೆಸಿಕೊಂಡು ಬಂದಿರುವದು ಶ್ಲಾಘನೀಯವಾಗಿದೆ.ಇವರು ವಿಶೇಷವಾಗಿ ಶಿವ, ಪಾರ್ವತಿ, ಗಣ ಪತಿ ರುದ್ರ ವೀರಭದ್ರ, ನಂದಿ, ಆಕಳು, ಹುಲಿ, ಸಿಂಹ, ಒಂಟೆ, ಆನೆ, ನರಿ, ಬೆಕ್ಕು, ಮೊಲ, ಬಸವಣ್ಣ ಕುದುರೆ, ಗಿಳಿ, ಗುಬ್ಬಿ ಕೋಗಿಲೆ ನವಿಲು, ಹಕ್ಕಿ ಮುಂತಾದ ಪ್ರಕೃತಿ ಸೊಬಗಿನ ವಸ್ತುಗಳನ್ನೆ ಇವರು ಸೃಷ್ಟಿಸುತ್ತಾರೆ ಗೌರಿ ಹುಣ್ಣಿಮೆಯಲ್ಲಿ ನಂದಿ ಗೌರಿ ಗಜಗೌರಿ, ಕೀಲ ಗೌರಿ ದುರ್ಗಾದೇವಿ ದೇವತೆಗಳು. ಆಂದ್ರ ಪ್ರದೇಶಗಳಿಗೆ ರವಾನೆಯಾಗುತ್ತವೆ ವಿಶೇಷವಾಗಿ ಇವರು ಚೌಕಿಗಳು ಷಟ್ಬುಜದಿಂದ ಅಷ್ಟಭುಜದವರೆಗೂ ವೃತ್ತಾಕಾರದಲ್ಲೂ ನಕ್ಷತ್ರಾಕಾರ ದಲ್ಲೂ ತಯಾರಿಸುವರು. ಕಟ್ಟಿಗೆಯಲ್ಲೆ ಇಡೀ ಪ್ರಕೃತಿಯನ್ನೆ ಸೆರೆ ಹಿಡಿದು ಬ್ರಹ್ಮಸೃಷ್ಟಿಯ ಕಲೆಯನ್ನು ಈ ನಾಡಿಗೆ ನೀಡಿರುವ ಅದ್ಬುತ ಕಲಾ ಪರಂಪರೆ ಕಿನ್ನಾಳದಲ್ಲಿದೆ.

 

ತುಂಗಭದ್ರಾ ನದಿ ಯೋಜನೆ, ಪಂಪಾವನ

ದೂರ 
ತಾಲೂಕಿನಿಂದ : ೨೦ ಕಿ.ಮೀ.
ಜಿಲ್ಲೆಯಿಂದ : ೨೦೧ ಕಿ.ಮೀ

ಸ್ಥಾಪನೆ  :           ೧೯೫೨

ಸ್ಥಳ       :           ಕೊಪ್ಪಳ ಜಿಲ್ಲೆಯ ಮುನಿರಾಬಾದ(ಮಲ್ಲಾಪುರ)ದಲ್ಲಿ ತುಂಗಭದ್ರಾ ನದಿಗೆ ಆಣೆಕಟ್ಟು ಕಟ್ಟಲಾಗಿದೆ.

ಉದ್ದೇಶ :           ತುಂಗಭದ್ರಾ ನದಿ ಯೋಜನೆಯ ಮುಖ್ಯ ಉದ್ದೇಶವೇನೆಂದರೆ ನೀರಾವರಿ ಮತ್ತು ಜಲ ವಿದ್ಯುಚ್ಛಕ್ತಿ ಉತ್ಪಾದೆನೆ.

ಉಪಯೋಗ / ಸೌಲಭ್ಯಗಳು :

ಇದು ಕರ್ನಾಟಕ ಮತ್ತು ಆಂಧ್ರ ಪ್ರದೇಶದ ೫.೫ ಲಕ್ಷ ಹೆಕ್ಟರ್ ಭೂಮಿಗೆ ನೀರಾವರಿ ಮತ್ತು ವಿದ್ಯುಚ್ಚಕ್ತಿಯನ್ನು ಒದಗಿಸುತ್ತದೆ.

ತುಂಗಭದ್ರಾ ನದಿಯ ಯೋಜನೆಯ ಎಡದಂಡೆ ಕಾಲುವೆ:

ಸುಮಾರು ೨೨೭ ಕಿ.ಮೀ. ಉದ್ದವನ್ನು ಹೊಂದಿದೆ. ಇದರಿಂದ ನೀರಾವರಿ ಕ್ಷೇತ್ರಕ್ಕೆ ಬಹಳ ಅನುಕೂಲವಾಗಿದೆ. ಈ ಪ್ರದೇಶದಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ಭತ್ತ, ತೋಟಗಾರಿಕೆ, ಖಾರೀಪ್ ಮುಂಗಾರಿ, ಹತ್ತಿ ಮುಂತಾದವು. ಈ ನೀರಾವರಿಯು ಸುಮಾರು ಒಟ್ಟು ೨,೪೩,೯೦೦:೧೯ ಹೆಕ್ಟೇರು ಪ್ರದೇಶಕ್ಕೆ ನೀರನ್ನು ಒದಗಿಸುತ್ತದೆ.

ತುಂಗಭದ್ರಾ ಆಣಿಕಟ್ಟಿನ ಪಕ್ಕದಲ್ಲಿ ಸುಂದರವಾದ ಈಜು ಕೊಳವನ್ನು ನಿರ್ಮಿಸಲಾಗಿದೆ. ಮತ್ತು ಅಶೋಕ ವನ, ಕೈಲಾಸ ಮಂಟಪ, ಸುತ್ತ-ಮುತ್ತ ಇನ್ನು ಮುಂತಾದ ಪ್ರವಾಸಿ ತಾಣಗಳಿವೆ.

 

ಪಂಪಾವನ

ದೂರ 
ತಾಲೂಕಿನಿಂದ : ೨೦ ಕಿ.ಮೀ.
ಜಿಲ್ಲೆಯಿಂದ : ೨೦ ಕಿ.ಮೀ

 • ಉದ್ಯಾನವನದ ಹೆಸರು : ಪಂಪಾವನ, ಮುನಿರಾಬಾದ.
 • ತಾಲೂಕು ಮತ್ತು ಜಿಲ್ಲೆ : ಕೊಪ್ಪಳ
 • ಸ್ಥಾಪನೆಯಾದ ವರ್ಷ : ೧೯೭೧
 • ಭೌಗೋಳಿಕ ಲಕ್ಷಣಗಳು : ತಗ್ಗು ದಿನ್ನೆಗಳಿಂದ, ಕಲ್ಲು ಗುಡ್ಡಗಳಿಂದ ಕೂಡಿದ ಜಂಬಿಟ್ಟಗೆ ಮಣ್ಣು
 • ಒಟ್ಟು ವಿಸ್ತೀರ್ಣ : ೬೬ ಎಕರೆ
 • ಅಭಿವೃದ್ಧಿ ಹೊಂದಿದ ವಿಸ್ತೀರ್ಣ: ೩೦ ಎಕರೆ
 • ಸಸ್ಯ ಸಂಪತ್ತು : ೧೦೦ ಜಾತಿಯ ಮರಗಳು, ೧೦೦-೧೫೦ ಜಾತಿಯ ಪೊದೆಗಳು ೨೦೦-೨೫೦ ಜಾತಿಯ ಅಲಂಕಾರಿಕ ಗಿಡಗಳು & ಹುಲ್ಲು ಹಾಸು ಇತ್ಯಾದಿ.
 • ನೀರಿನ ಸೌಕರ್ಯಗಳು
 • ಉದ್ಯಾನವನಕ್ಕೆ ಡ್ಯಾಂನಿಂದ ಬರುವ  ಬಸಿನೀರು ಸರೋವರದಲ್ಲಿ ತುಂಬಿ ಈ ನೀರು ಮುಖ್ಯ ನೀರಿನ ಮೂಲವಾಗಿದೆ.
 • ೫ ಎಚ್.ಪಿ ಬೋರವೆಲ್‌ಗಳು.
 • ಹುಲ್ಲು ಹಾಸುಗಳಿಗೆ ಸ್ಪ್ರಿಂಕ್ಲರ ಮೂಲಕ ನೀರಾವರಿ ಮಾಡಲಾಗುತ್ತಿದೆ.
 • ಉದ್ಯಾನವನದ ಪರಿಮಿತಿ

ಪೂರ್ವಕ್ಕೆ           : ಹೊಸಪೇಟೆ ಕೊಪ್ಪಳ ರಸ್ತೆ

ಪಶ್ಚಿಮಕ್ಕೆ           : ತುಂಗಭದ್ರಾ ಡ್ಯಾಂ

ಉತ್ತರಕ್ಕೆ           : ಇಂದ್ರಭವನಕ್ಕೆ ಹೋಗುವ ರಸ್ತೆ

ದಕ್ಷಿಣಕ್ಕೆ : ನೀರಾವರಿ ಇಲಾಖೆಯ ಕಛೇರಿಗಳಿಗೆ ಹೋಗುವ ರಸ್ತೆ

 

ಭೋರೂಕಾ ವಿದ್ಯುತ್ ನಿಗಮ ನಿಯಮಿತ

ದೂರ 
ತಾಲೂಕಿನಿಂದ : ೨೭ ಕಿ.ಮೀ.
ಜಿಲ್ಲೆಯಿಂದ : ೨೭ ಕಿ.ಮೀ

೧993 ರಲ್ಲಿ ಸ್ಥಾಪನೆಗೊಂಡಿರುವ ಭೋರೂಕಾ ವಿದ್ಯುತ್ ನಿಗಮ ನಿಯಮಿತ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತದೆ. ಇಲ್ಲಿನ ವಿದ್ಯುತ್ ಮುನಿರಾಬಾದ್‌ಗೆ ವಿತರಣೆಯಾಗುತ್ತದೆ. ತುಂಗಭದ್ರ ನದಿ ಕಾಲುವೆಗೆ ಅಡ್ಡಲಾಗಿ ಕಟ್ಟಲಾಗಿರುವ  ವಿದ್ಯುತ್ ಉತ್ಪಾದನಾ ಕೇಂದ್ರ ಬಂಡಿ ಹರ್ಲಾಪೂರದ ಹತ್ತಿರ ಸಿಗುತ್ತದೆ. ಪ್ರಶಾಂತ ವಾತಾವರಣವಿದ್ದು ಮುಂದೆ ಸಾಣಾಪುರದಲ್ಲಿ ಸರಕಾರಿ ಪ್ರವಾಸಿ ಮಂದಿರ ತುಂಗಭದ್ರಾ ನದಿಯ ಮೇಲೆ ಇದ್ದು ಮಕ್ಕಳು ಉಪಹಾರಕ್ಕಾಗಿ ವಿಶ್ರಮಿಸಲು  ಅವಕಾಶವಿದೆ.

 

ಕೈಗಾರಿಕೆಗಳು

ದೂರ 
ತಾಲೂಕಿನಿಂದ : ೧೪ ಕಿ.ಮೀ.
ಜಿಲ್ಲೆಯಿಂದ : ೧೪ ಕಿ.ಮೀ

ಕೊಪ್ಪಳದಿಂದ ಹೊಸಪೇಟೆ ಮಾರ್ಗದುದ್ದಕ್ಕೂ ಕೈಗಾರಿಕಾ ಕೇಂದ್ರಗಳು ಬೆಳೆದಿದ್ದು ಇವು ರಾಷ್ಟ್ರಮಟ್ಟದ ಮನ್ನಣೆಯನ್ನು ಪಡೆದಿವೆ. ಕೊಪ್ಪಳ ಜಿಲ್ಲೆಯ ಜನತೆಗೆ ಉದ್ಯೋಗ ನೀಡಿದ್ದಲ್ಲದೇ ರಷ್ಯಾ, ಚೀನಾ, ಜಪಾನ, ಜರ್ಮನಿ ದೇಶಗಳಿಗೆ ಸರಕುಗಳನ್ನು ರಫ್ತು  ಮಾಡುವರು.  ಈ ಕಾರ್ಖಾನೆಯಲ್ಲಿ ತಯಾರಾಗುವ ವಸ್ತುಗಳೆಂದರೆ ಹೆಚ್ಚಾಗಿ ಕಬ್ಬಿಣ, ಉಕ್ಕಿನ ಸಾಮಾನುಗಳು.  ಇಂತಹ ಕೈಗಾರಿಕೆಗಳಲ್ಲಿ  ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಈ ಕಾರ್ಮಿಕರಿಗೆ ಹಲವಾರು ಸೌಲಭ್ಯಗಳನ್ನು ಕಂಪನಿಗಳು ಒದಗಿಸಿದೆ. ಪ್ರಮುಖವಾಗಿ ಕಲ್ಯಾಣಿ, ಎವ್.ಎಸ್.ಪಿ.ಎಲ್. ಬಿರ್ಲಾ, ಬೆಲ್ಡೊಟಾ, ಕೊಕಾ-ಕೊಲಾ  ಮುಂತಾದವುಗಳು.

ಉದಾಹರಣೆಗೆ ಕಿರ್ಲೋಸ್ಕರ ಕಂಪನಿಯ 1920 ರಲ್ಲಿ  ಲಕ್ಷ್ಮಣರಾವ್‌ರವರು ಸ್ಥಾಪನೆ ಮಾಡಿದರು. ದೇಶದ ಆರ್ಥಿಕ ಅಭಿವೃದ್ಧಿಗಾಗಿ ತಮ್ಮ ಸೇವೆಯನ್ನು ಸಲ್ಲಿಸಲು ಉತ್ಪನ್ನ ಪೂರಕವಾದ ಕೆಲಸವನ್ನು ಕೈಗೊಂಡರು ಹಲವು ಕಂಪನಿಗಳು ಹಾಗೂ ಸಂಸ್ಥೆಗಳು  ಅವರಿಗೆ ಗೌರವವನ್ನು ಅರ್ಪಿಸಿದವು ಭಾರತದಲ್ಲಿ ಇಂಜನಿಯರಿಂಗ್ ಉತ್ಪಾದನೆಯಲ್ಲಿ ಅಸಮಾನ್ಯವಾದ ಕೊಡುಗೆಯನ್ನು ನೀಡಿದ್ದಕ್ಕಾಗಿ 1968 ರಲ್ಲಿ  ಸರ್ ವಾಲಟರ್ ಫ್ರೈಜ್ ದೊರೆಯಿತು. ಅಲ್ಲದೆ ಭಾರತ ಸರಕಾರವು 1965 ರಲ್ಲಿ ಪದ್ಮಭೂಷಣ ಪದವಿಯನ್ನು ನೀಡಿಗೌರವಿಸಿದೆ. ಭಾರತದ ರಾಷ್ಟ್ರಪತಿಗಳಾದ ಎ.ಪಿ.ಜಿ.ಅಬ್ದುಲ್ ಕಲಾಂ ಅವರು ಎಸ್.ಎಲ್.ಕೆ. ಅವರ ಜನ್ಮ ಶತಮಾನೋತ್ಸವದ ನಿಮಿತ್ಯ 28 ಮೇ 2003 ರಂದು ಪುಣೆಯಲ್ಲಿ ಕಿರ್ಲೋಸ್ಕರ ಗುಂಪಿನ ಕಲ್ಪ ಕಲೆಯ 3 ಹೊಸ ಔದ್ಯಮಿಕ ಉತ್ಪನಗಳನ್ನು ದೇಶಕ್ಕೆ ಸಮರ್ಪಿಸಿದರು. ಈ ಉತ್ಪನಗಳೆಂದರೆ 1) ಎಸ್.ಎ.ಟಿ. 650  2) ಸೆಂಟ್ರಿ ಫ್ಯೂಗಲ್ ವಿಶೇಷ ಮಾದರಿಯ ಪಂಪು  3) ಕಿಲೋಸ್ಕರ ಗ್ರೀನ್ ಎಂಬ ಪರಿಸರ ಸ್ನೇಹಿತ ಜನರೇಟರ್ ಹೆಚ್ಚು ಪ್ರಚಲಿತ.

 

ಹಿರೇಹಳ್ಳ ನೀರಾವರಿ ಯೋಜನೆ

ದೂರ ;
ತಾಲೂಕಿನಿಂದ : ೧೩ ಕಿ.ಮೀ.
ಜಿಲ್ಲೆಯಿಂದ : ೧೩ ಕಿ.ಮೀ.

ವೀರಾಪೂರ ಮತ್ತು ಹಿರೇಹ ನಡುವೆ ೩.೬ ಕಿ.ಮಿ ವಿಸ್ತಾರವಿರುವ ೧೫ ಮೀ ಎತ್ತರವಿರುವ ಇದರ ಸಾಮರ್ಥ್ಯ ೪೨.೨೩ ಇದ್ದು ೨೦೫೮೩ ಎಕ್ಕರೆ ಜಮೀನಿಗೆ ನೀರುಣಿಸುತ್ತಿದೆ ೨೩.೩೦ ಕಿಮಿ ಉದ್ದದ ಎಡ ದಂಡೆ ೨೩ ಕಿ.ಮೀ ಉದ್ದದ ಬಲದಂಡೆ ಕಾಲುವೆ ಅರಕೇರಿ, ಮುದ್ಲಾಪೂರ, ಕಿನ್ನಾಳ, ದೇವಲಾಪೂರ,  ಚಿಲವಾಡಗಿ, ಓಜನಹಳ್ಳಿ, ಕೊಪ್ಪಳ, ಬಹದ್ದೂರ ಬಂಡಿ, ಹೂವಿನಹಾಳ, ಹೊಸಳ್ಳಿ. ಮುದ್ದಾಬಳ್ಳಿ ಗೊಂಡಬಾಳ. ಹಂದ್ರಾಳ, ಹಲಿಗೇರಿ ಇತರ ೨೮ ಹಳ್ಳಿಗಳಿಗೆ ನೀರುಣಿಸುತ್ತಿದೆ.

 

ಜಿಲ್ಲಾಡಳಿತ ಭವನ

ಕೊಪ್ಪಳ ಜಿಲ್ಲೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪ್ರಾರಂಭ ಮಾಡಿ 11 ವರ್ಷ ಗತಿಸಿದೆ. ಜಿಲ್ಲಾಡಳಿತ ನಿರ್ವಹಣೆಗಾಗಿ ಜಿಲ್ಲಾಡಳಿತ ಭವನವನ್ನು ನಿರ್ಮಾಣಗೊಂಡಿದ್ದು, ಇದರಲ್ಲಿ ಜಿಲ್ಲಾಪಂಚಾಯತ್, ಜಿಲ್ಲಾಧಿಕಾರಿಗಳ ಕಛೇರಿಗಳನ್ನೊಳಗೊಂಡ ಅನೇಕ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಕಟ್ಟಡದ ಸುತ್ತಲು ವನ ನಿರ್ಮಾಣಗೊಂಡಿದ್ದು ನೋಡುಗರಿಗೆ ಆನಂದವನ್ನುಂಟು ಮಾಡುತ್ತದೆ.